ಕನ್ನಡ ಬೇಸಗೆ ಶಿಬಿರದ ನಡುವೆ ಕತ್ರಿನ್ ಯಕ್ಷಗಾನ

Posted on ಸೆಪ್ಟೆಂಬರ್ 12, 2013. Filed under: ಕರ್ನಾಟಕ, ಜರ್ಮನಿ, ರಂಗಭೂಮಿ, Kannada Summer School, Karnataka, Katrin Binder, Yakshagana Theater |


ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ಇಂಡಾಲಜಿ ಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಎರಡು ವಾರಗಳ ‘ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ‘ ಸಪ್ಟಂಬರ ೨ ರಂದು ಆರಂಭವಾಗಿ ನಾಡದು ಶನಿವಾರ ಮುಕ್ತಾಯವಾಗುತ್ತದೆ . ಇದರಲ್ಲಿ ಅಧ್ಯಾಪಕರಾಗಿ ನಾನು ಮತ್ತು ಡಾ . ಕತ್ರಿನ್ ಬಿಂದರ್ ಕಾರ್ಯನಿರ್ವಹಿಸುತ್ತಿದ್ದೇವೆ . ಪೂರಕ ವ್ಯಾಸಂಗ ಹಾಗೂ ಕನ್ನಡ ಬರವಣಿಗೆಯ ಅಭ್ಯಾಸವನ್ನು ಸಾರಾ ಮೆರ್ಕ್ಲೆ , ಕರ್ನಾಟಕದ ಇತಿಹಾಸ ಕಲೆ ಸಂಸ್ಕೃತಿ ಸಾಹಿತ್ಯದ ಬಗ್ಗೆ ಉಪನ್ಯಾಸಗಳನ್ನು ಪ್ರೊ . ಹೈದ್ರೂನ್ ಬ್ರೂಕ್ನರ್ ಮಾಡುತ್ತಿದ್ದಾರೆ . ಕನ್ನಡ ಪಾಠಗಳ ನಡುವೆಯೇ ನಿನ್ನೆ ಡಾ . ಕತ್ರಿನ್ ಬಿಂದರ್ ತಮ್ಮ ನೆಚ್ಚಿನ ಕಲೆ ಯಕ್ಷಗಾನದ ಪ್ರಾತ್ಯಕ್ಷಿಕತೆಯನ್ನು ವೇಷಭೂಷಣ ಧರಿಸಿಯೇ ಸಮರ್ಥವಾಗಿ ಮಾಡಿತೋರಿಸಿದರು . ಅದನ್ನು ಕೇವಲ ಕನ್ನಡ ಶಿಬಿರದ ತರಗತಿಯ ವಿದ್ಯಾರ್ಥಿಗಳಿಗಾಗಿಯೇ ಪ್ರದರ್ಶಿಸಲಾಯಿತು .
ಜರ್ಮನಿಯಲ್ಲಿ ಹುಟ್ಟಿ ಬೆಳೆದು ,ಅಲ್ಲಿನ ತ್ಯೂಬಿಂಗನ್ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದಲ್ಲಿ ಎಂ ಎ ಮಾಡುವಾಗಲೇ ಕತ್ರಿನ್ ಯಕ್ಷಗಾನವನ್ನು ತಮ್ಮ ಮಾಸ್ಟರ್ಸ್ ಥೀಸಿಸ್ ಗೆ ಆಯ್ಕೆಮಾಡಿಕೊಂಡರು . ಇದಕ್ಕಾಗಿ ಅವರು ಕರ್ನಾಟಕಕ್ಕೆ ಬಂದು ಉಡುಪಿಯಲ್ಲಿ ಗುರು ಸಂಜೀವ ಸುವರ್ಣ ರಿಂದ ಯಕ್ಷಗಾನದ ಪರಂಪರೆಯ ಕುಣಿತ ಮತ್ತು ಅಭಿನಯದಲ್ಲಿ ವಿಶೇಷವಾದ ತರಬೇತಿಯನ್ನು ಪಡೆದರು . ಯಕ್ಷಗಾನದ ಕಲಾವಿದರನ್ನು ಮತ್ತು ವಿದ್ವಾಂಸರನ್ನು ಸಂದರ್ಶಿಸಿದರು . ಕನ್ನಡವನ್ನು ಮಾತಾಡಲು ಓದಲು ಮತ್ತು ಬರೆಯಲು ಚೆನ್ನಾಗಿ ಅಭ್ಯಾಸ ಮಾಡಿದರು . ಈ ಎಲ್ಲ ಪರಿಶ್ರಮದ ಫಲವಾಗಿ ಯಕ್ಷಗಾನದ ಬಗ್ಗೆ ತಮ್ಮ ಮಾಸ್ಟರ್ಸ್ ಥೀಸಿಸ್ ನ್ನು ಜರ್ಮನ್ ಭಾಷೆಯಲ್ಲಿ ಸಿದ್ಧಪಡಿಸಿ ೧೯೯೩ ರಲ್ಲಿ ಎಂ ಎ ಪದವಿ ಪಡೆದರು . ಈ ಥೀಸಿಸ್ ನಲ್ಲಿ ‘ ಅಭಿಮನ್ಯು ಕಾಳಗ ‘ ಪ್ರಸಂಗವನ್ನು ಕನ್ನಡದಿಂದ ಜರ್ಮನ್ ಭಾಷೆಗೆ ಅನುವಾದ ಮಾಡಿದ್ದಾರೆ . ಈ ಥೀಸಿಸ್ ೧೯೯೪ರಲ್ಲಿ ಜರ್ಮನಿಯಲ್ಲಿ ಪ್ರಕಟವಾಗಿದೆ . ಬಳಿಕ ಕತ್ರಿನ್ ಅನೇಕ ಬಾರಿ ಕರ್ನಾಟಕದ ಕರಾವಳಿಗೆ ಬಂದು ಯಕ್ಷಗಾನದ ಹೆಚ್ಚಿನ ಅಧ್ಯಯನ ನಡೆಸುವುದರ ಜೊತೆಗೆ , ಯಕ್ಷಗಾನ ಕಲಾವಿದೆಯಾಗಿ ಬಹು ಬಗೆಯ ತರಬೇತಿಯ ಮೂಲಕ ಪರಿಣತಿಯನ್ನು ಹೊಂದಿದರು . ಅವರು ಪಿ . ಹೆಚ್ ಡಿ . ಪದವಿಗಾಗಿ’ ಯಕ್ಷಗಾನ ರಂಗಭೂಮಿ ‘ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡು ಪ್ರೊ . ಬ್ರೂಕ್ನರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ತ್ಯೂಬಿಂಗನ್ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದರು . ಅವರ ಸಂಶೋಧನಾ ಮಹಾಪ್ರಬಂಧ ಇಂಗ್ಲಿಷಿನಲ್ಲಿ ಅದು ೨೦೧೩ರಲ್ಲಿ ಜರ್ಮನಿಯಲ್ಲಿ ಪ್ರಕಟವಾಗಿದೆ . ಡಾ . ಕತ್ರಿನ್ ಬಿಂದರ್ ಭಾರತದಲ್ಲಿ ಉಡುಪಿ ದೆಹಲಿ ಸಹಿತ ಅನೇಕ ಕಡೆ ತಮ್ಮ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನವನ್ನು ಮಾಡಿದ್ದಾರೆ . ಜರ್ಮನಿ , ಸ್ವಿಜರ್ ಲೆಂಡ್ , ಇಂಗ್ಲೆಂಡ್ ಸಹಿತ ಯೂರೋಪಿನ ದೇಶಗಳಲ್ಲಿ ತಮ್ಮ ಯಕ್ಷಗಾನ ಅಭಿನಯ ಪ್ರತಿಭೆಯನ್ನು ಪ್ರಕಟಿಸಿದ್ದಾರೆ .
ಕನ್ನಡವನ್ನು ಚೆನ್ನಾಗಿ ಕಲಿತಿರುವ ಕತ್ರಿನ್ ಜೊತೆಗೆ ‘ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ‘ ದಲ್ಲಿ ನಾನು ಅಧ್ಯಾಪಕನಾಗಿ ಪಾಲುಗೊಳ್ಳು ತ್ತಿರುವುದು ಇದು ಮೂರನೆಯ ಬಾರಿ . ನಾವು ಜೊತೆಯಾಗಿ ಹೊಸಗನ್ನಡದ ಆಯ್ದ ಕವನಗಳನ್ನು ಕನ್ನಡದಿಂದ ಜರ್ಮನ್ ಭಾಷೆಗೆ ನೇರವಾಗಿ ಅನುವಾದ ಮಾಡುವ ಕೆಲಸದಲ್ಲಿ ಸಾಕಷ್ಟು ಮುಂದೆ ಸಾಗಿದ್ದೇವೆ .
ನಿನ್ನೆಯ ದಿನ ನಮ್ಮ ಕನ್ನಡ ತರಗತಿಯಲ್ಲಿ ಡಾ . ಕತ್ರಿನ್ ಬಿಂದರ್ ಯಕ್ಷಗಾನದ ಸಭಾಲಕ್ಷಣ ಭಾಗದ ಸ್ತ್ರೀ ವೇಷದ ಕುಣಿತದ ವೈವಿಧ್ಯಗಳನ್ನು ಸೊಗಸಾಗಿ ಕುಣಿದು ಅಭಿನಯಿಸಿ ತೋರಿಸಿದರು ಕತ್ರಿನ್ ಅವರು ಅಭಿನಯಿಸಿದ್ದು ‘ಆಡ ಪೋಗುವ ರಂಗಾ ಆಡ ಪೋಗುವಾ …… ‘ ಮತ್ತು ‘ ರಂಗನ್ಯಾತಕೆ ಬಾರನೇ ಅಂಗನಾಮಣಿ …… ‘ ಪದ್ಯಗಳಿಗೆ . .
ಅದರ ಕೆಲವು ಚಿತ್ರಗಳು ಇಲ್ಲಿವೆ . ಅವುಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ .

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Liked it here?
Why not try sites on the blogroll...

%d bloggers like this: