ಜರ್ಮನಿಯಲ್ಲಿ ಕನ್ನಡ ಬೇಸಗೆ ಶಿಬಿರ ೨೦೧೩ :ಕನ್ನಡ ಕಲಿಕೆಯ ನೋಟಗಳು

Posted on ಸೆಪ್ಟೆಂಬರ್ 18, 2013. Filed under: ಕನ್ನಡ ಭಾಷೆ.Kannada Language, ಕರ್ನಾಟಕ, ಜರ್ಮನಿ, ವ್ಯೂರ್ತ್ಸ್ ಬುರ್ಗ್, Kannada Summer School, Wurzburg |


ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದ ಆಶ್ರಯದಲ್ಲಿ ‘ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ‘ ಸಪ್ಟಂಬರ ೨ ರಿಂದ ೧೪ರ ವರೆಗೆ ನಡೆಯಿತು . ಕನ್ನಡದ ಯಾವುದೇ ಪರಿಜ್ಞಾನ ಇಲ್ಲದ ಯುರೋಪಿಯನ್ನರಿಗೆ ಪ್ರಾಥಮಿಕ ಹಂತದಲ್ಲಿ ಕನ್ನಡವನ್ನು ಮಾತನಾಡಲು , ಓದಲು ಮತ್ತು ಬರೆಯಲು ಕಲಿಸುವ ಎರಡು ವಾರಗಳ ತೀವ್ರ ಕಲಿಕೆಯ ಈ ಶಿಬಿರದಲ್ಲಿ ನಾನು ಮತ್ತು ಡಾ . ಕತ್ರಿನ್ ಬಿಂದರ್ ಅಧ್ಯಾಪಕರಾಗಿ ಕೆಲಸಮಾಡಿದೆವು . ಸಾರಾ ಮೆರ್ಕ್ಲೆ ಶಿಬಿರಾರ್ಥಿಗಳಿಗೆ ಕನ್ನಡದ ಅಕ್ಷರಾಭ್ಯಾಸದ ಜೊತೆಗೆ , ನಾವು ಮಾಡಿದ ಪಾಠಗಳಿಗೆ ಸಂಬಂಧಿಸಿದಂತೆ ಪೂರಕ ವ್ಯಾಸಂಗದ ಅಭ್ಯಾಸಮಾಡಿಸಿದರು . ಪ್ರೊ . ಹೈದ್ರೂನ್ ಬ್ರೂಕ್ನರ್ ಅವರು ಕರ್ನಾಟಕದ ಇತಿಹಾಸ , ಸಂಸ್ಕೃತಿ , ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಜರ್ಮನ್ ಭಾಷೆಯಲ್ಲಿ ಉಪನ್ಯಾಸಗಳನ್ನು ಕೊಟ್ಟರು .
ಕನ್ನಡವನ್ನು ಕನ್ನಡೇತರರಿಗೆ ಕಲಿಸಲು ಕನ್ನಡ ಮತ್ತು ಇಂಗ್ಲಿಶ್ ನಲ್ಲಿ ಸಾಕಷ್ಟು ಪುಸ್ತಕಗಳು ಇದ್ದರೂ ಪ್ರಾಯೋಗಿಕವಾಗಿ ಇಂತಹ ಎರಡು ವಾರಗಳ ತೀವ್ರ ಕಲಿಕೆಗೆ ಅವು ಸಹಕಾರಿ ಆಗಿಲ್ಲ. ಹಾಗಾಗಿ ನಾವೇ ಒಂದು ಪ್ರತ್ಯೇಕ ಕೈಪಿಡಿಯನ್ನು ಸಿದ್ಧಪಡಿಸಿ , ಕಳೆದ ಎರಡು ಶಿಬಿರಗಳಿಂದ ಬಳಸುತ್ತಿದ್ದೇವೆ . ಇದರಲ್ಲಿ ಪರಸ್ಪರ ಭೇಟಿಯ ಮೊದಲ ಮಾತುಗಳಿಂದ ತೊಡಗಿ , ಸೌಜನ್ಯದ ನುಡಿಗಳ ಪರಿಚಯ ಮಾಡಿಕೊಟ್ಟು , ಬಳಿಕ ದಿನಬಳಕೆಯ ಪದಗಳ ವಿಷಯಾನುಸಾರ ಪಟ್ಟಿಗಳ ಮೂಲಕ ಕನ್ನಡ ಪದಬಳಕೆಯ ಅಭ್ಯಾಸಮಾಡಿಸುತ್ತೇವೆ .

ಕನ್ನಡದ ಧ್ವನಿಮಾಗಳ ಪರಿಚಯ ಮಾಡಿಸಿ  ಉಚ್ಚಾರಣೆಯ ಅಭ್ಯಾಸದ ತರಬೇತಿಯನ್ನು ನಾನು ಕೊಡಿಸುತ್ತೇನೆ . ಸಾಮಾನ್ಯವಾಗಿ ಯುರೋಪಿಯನ್ನರಿಗೆ ಹೆಚ್ಚು ತೊಡಕಾಗುವುದು ಮೂರ್ಧನ್ಯ ಧ್ವನಿಮಾಗಳ ಉಚ್ಚಾರಣೆ .; ಟ ,ಡ , ಣ , ಳ ‘- ಇವುಗಳ ಉಚ್ಚಾರಣೆಯನ್ನು ದಂತ್ಯ ಧ್ವನಿಮಾಗಳಾದ ‘ತ ,ದ , ನ , ಲ ‘ ಗಳ ಜೊತೆಗೆ ಹೋಲಿಸಿ  ಅಭ್ಯಾಸಮಾಡಿಸಲಾಗುತ್ತದೆ . ಇದಕ್ಕಾಗಿ ಭಿನ್ನ ಅರ್ಥದ ಪದಗಳ ಜೋಡಿಗಳನ್ನು ಉದಾಹರಿಸಲಾಗುತ್ತದೆ : ಅಣ್ಣ ಮತ್ತು ಅನ್ನ .

ಕ್ರಿಯಾಪದಗಳ ಪಟ್ಟಿ ಒಂದು ಕಡೆ ಇರುತ್ತದೆ . ವಿಭಕ್ತಿ ಪ್ರತ್ಯಯಗಳ ಪ್ರಯೋಗಗಳ ಯಾದಿ ಜೊತೆಗೆ ಇರುತ್ತದೆ . ಹೀಗೆ ಪದಗಳ ಪರಿಚಯ , ವಿಭಕ್ತಿ ಪ್ರತ್ಯಯಗಳ ಬಳಕೆಯ ಕ್ರಮಗಳನ್ನು ಅರಿತುಕೊಂಡು , ಸರಳ ವಾಕ್ಯಗಳನ್ನು ರಚಿಸಿ ಬಳಸಲು ಅಭ್ಯಾಸಮಾಡುತ್ತೇವೆ . ಬೇಕು , ಬೇಡ , ಸಾಕು , ಸಾಲಲ್ಲ, ಇಷ್ಟ , ಇಷ್ಟ ಇಲ್ಲ , ಗೊತ್ತು ಗೊತ್ತಿಲ್ಲ – ಇವುಗಳ ಬಳಕೆಯ ಮೂಲಕ ಕನ್ನಡವನ್ನು ಸರಳವಾಗಿ ಬಳಸಲು ಅಭ್ಯಾಸಮಾಡಿಸಲಾಗುತ್ತದೆ .ವಿಭಕ್ತಿ ಪ್ರತ್ಯಯಗಳನ್ನು  ಷಷ್ಠೀ , ಚತುರ್ಥಿ , ದ್ವಿತೀಯಾ , ಸಪ್ತಮಿ ಮತ್ತು ತೃತೀಯ ಹಾಗೂ ಪಂಚಮೀ – ಈ ಅನುಕ್ರಮಣಿಕೆಯಲ್ಲಿ ಹಂತಹಂತವಾಗಿ ಪರಿಚಯ ಮಾಡಿಕೊಡುವ ಮೂಲಕ ಯಾವುದೇ ರೀತಿಯ ವಾಕ್ಯಗಳನ್ನು ರಚಿಸಲು ಸಾಧ್ಯವಾಗುವ ತರಬೇತಿ ಕೊಡಲಾಗುತ್ತದೆ . ಮುಂದೆ ವಿಧ್ಯರ್ಥಕ , ಉತ್ತೇಜಕ ಮತ್ತು ಅನುಮೋದನೆಯ ವಾಕ್ಯಗಳ ರಚನೆಯ ಪ್ರಯೋಗ ನಡೆಯುತ್ತದೆ . ಬಳಿಕದ ಹಂತ -ವರ್ತಮಾನ ಕಾಲದ ‘ ಇರ್ ‘ ಮತ್ತು ‘ ಇದ್ ‘ ಗಳ ಪ್ರಯೋಗ . ಮುಂದೆ ವರ್ತಮಾನ ಕಾಲ, ಭವಿಷ್ಯತ್ ಕಾಲ ಮತ್ತು ಭೂತಕಾಲಗಳ ರಚನೆ ಮತ್ತು ಪ್ರಯೋಗವನ್ನು ಬಹತೇಕ ಎಲ್ಲ ದಿನಬಳಕೆಯ ಕ್ರಿಯಾ ಧಾತುಗಳನ್ನು ಬಳಸಿ ಪ್ರಯೋಗಿಸಲು ಅಭ್ಯಾಸಮಾಡಿಸಲಾಗುತ್ತದೆ . ಕೊನೆಗೆ ಭೂತ ಕೃದಂತದ ಪ್ರಯೋಗವನ್ನೂ ಕಲಿಸಲಾಗುತ್ತದೆ .
ಎರಡು ವಾರಗಳ ( ಭಾನುವಾರಗಳನ್ನು ಹೊರತು ಪಡಿಸಿ ) ಈ ಶಿಬಿರದ ಆರಂಭದ ದಿನದಿಂದಲೇ ಕನ್ನಡ ವರ್ಣಮಾಲೆಯ ಪರಿಚಯ ಮತ್ತು ಬಳಕೆಯ ಕ್ರಮಗಳನ್ನು ಬೇರೆ ಬೇರೆ ರೀತಿಗಳಲ್ಲಿ ಹೇಳಿಕೊಡಲಾಗುತ್ತದೆ . ಆದ್ದರಿಂದ ಕನ್ನಡ ವ್ಯಾಕರಣ ,ಪದಕೋಶ , ವಾಕ್ಯರಚನೆ ಮತ್ತು ಆಡು ಮಾತು – ಈ ಎಲ್ಲವನ್ನೂ ಜೊತೆ ಜೊತೆಗೆ ಕಲಿಸಲಾಗುತ್ತದೆ . ಹಾಗಾಗಿ ನಮ್ಮ ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳು ಕನ್ನಡವನ್ನು ಮಾತಾಡಲು ಓದಲು ಮತ್ತು ಬರೆಯಲು ಕಲಿತುಕೊಳ್ಳುತ್ತಾರೆ .

ನಮ್ಮ ಕನ್ನಡ ಶಿಬಿರದಲ್ಲಿ ವಿದ್ಯಾರ್ಥಿಗಳ ಕಲಿಯುವಿಕೆಯನ್ನು ಸೂಕ್ಷ್ಮಗೊಳಿಸಲು ಮತ್ತು ಅದನ್ನು ನಿರಂತರವಾಗಿ ಗ್ರಹಿಸಿಕೊಂಡು  ನಮ್ಮ ಕಲಿಸುವಿಕೆಯ ಕ್ರಮಗಳನ್ನು ದಿನದಿನ ರೂಪಿಸಿಕೊಳ್ಳಲು ನಾವು ನಮ್ಮದೇ ಆದ ಒಂದು ವಿಧಾನವನ್ನು  ಅನುಸರಿಸುತ್ತಿದ್ದೇವೆ . ಪ್ರತೀ ದಿನ ನಾವು ಮೂವರು ಅಧ್ಯಾಪಕರು ನಮ್ಮ ನಮ್ಮ  ತರಗತಿಗಳಲ್ಲಿ  ನಾವು  ಕಲಿಸಿದ್ದು ಮತ್ತು ಅದನ್ನು ವಿದ್ಯಾರ್ಥಿಗಳು ಗ್ರಹಿಸಿದ್ದು -ಇವನ್ನು ಕುರಿತು ಅಭಿಪ್ರಾಯಗಳನ್ನು  ನಮ್ಮ ತರಗತಿಗಳ ಬಳಿಕದ ಬಿಡುವಿನ ಹದಿನೈದು ನಿಮಿಷಗಳ ಸಮಯದಲ್ಲಿ ಒಟ್ಟಿಗೆ ಸೇರಿ ಹಂಚಿಕೊಳ್ಳುತ್ತೇವೆ  ಮತ್ತು ಅದಕ್ಕೆ ಅನುಗುಣವಾಗಿ ಮುಂದಿನ ನಮ್ಮ ತರಗತಿಯ ವಿಷಯ ಹಾಗೂ ಅಭ್ಯಾಸದ ಕ್ರಮವನ್ನು ಹೊಸತಾಗಿಯೇ ರೂಪಿಸಿಕೊಳ್ಳುತ್ತೇವೆ . ಹೀಗೆ ಪ್ರತೀದಿನ ಮೂರು ಬಾರಿ ನಾವು ಒಟ್ಟಾಗಿ ಸಮಾಲೋಚನೆ ನಡೆಸುತ್ತೇವೆ . ಹಾಗೆಯೇ ಹಿಂದಿನ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಕೊಟ್ಟ ಪ್ರತಿಕ್ರಿಯೆಗಳನ್ನು ಗಮನಿಸಿಕೊಂಡು ನಮ್ಮ ಕಲಿಸುವುಕೆಯ ಕ್ರಮಗಳನ್ನು ಬದಲಾಯಿಸಿಕೊಳ್ಳುತ್ತೇವೆ .
ಎರಡನೆಯ ವಾರದ ಕೊನೆಯಲ್ಲಿ ಅಭ್ಯರ್ಥಿಗಳ ಕನ್ನಡ ಕಲಿಕೆಯ ಮಟ್ಟವನ್ನು ಲವಲವಿಕೆಯ ಸರಳ ವಿಧಾನಗಳಿಂದ ಅಳೆಯಲಾಗುತ್ತದೆ . ಇಬ್ಬರು ವಿಧ್ಯಾರ್ಥಿಗಳು ಸಂತೆಯಲ್ಲಿ ,ಅಂಗಡಿಯಲ್ಲಿ , ಹೋಟೆಲಿನಲ್ಲಿ ವ್ಯಾವಹಾರಿಕ ರೂಪದಲ್ಲಿ ಮಾತುಕತೆ ಆಡುವ ಸ್ವಾರಸ್ಯಕರ ಪ್ರಸಂಗಗಳನ್ನು ಅವರೇ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ . ಅವರ ಓದುವ ಅಭ್ಯಾಸದ ಮೌಲ್ಯಮಾಪನಕ್ಕೆ ಒಂದು ಚಿಕ್ಕ ಕತೆಯನ್ನು ಕೊಟ್ಟು ,ಅದನ್ನು ಓದಿ ಅದರ ಅರ್ಥ ವಿವರಿಸಲು ಹೇಳಲಾಗುತ್ತದೆ . ಬರವಣಿಗೆಯ ಕೌಶಲವನ್ನು ಪರಿಶೀಲಿಸಲು , ಅವರು ಕರಿಹಲಗೆಯಲ್ಲಿ ಕನ್ನಡ ಪದಗಳನ್ನು ಮತ್ತು ಬೇರೆ ಬೇರೆ ಕಾಲಸೂಚಕ ಕನ್ನಡ ವಾಕ್ಯಗಳನ್ನು ಬರೆದು ತೋರಿಸಲು ಸೂಚಿಸಲಾಗುತ್ತದೆ . ತುಂಬಾ ಉತ್ಸಾಹ ಮತ್ತು ಲವಲವಿಕೆಯಿಂದ ನಮ್ಮ ವಿದ್ಯಾರ್ಥಿಗಳು ಈ ಎಲ್ಲ ಪರೀಕ್ಷೆಗಳನ್ನು ಚೆನ್ನಾಗಿ ನಿರ್ವಹಿಸಿದರು .
ಅಂತಹ ಕನ್ನಡ ಕಲಿಕೆಯ ತರಗತಿಯ ಒಳಗಿನ ಬಹುಬಗೆಯ ಚಿತ್ರಗಳು ಇಲ್ಲಿವೆ .
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ .

Make a Comment

ನಿಮ್ಮ ಟಿಪ್ಪಣಿ ಬರೆಯಿರಿ

Liked it here?
Why not try sites on the blogroll...