ಕನ್ನಡ ಜೈನ ಕವಿಗಳಲ್ಲಿ ಲೌಕಿಕದ ಬಹುರೂಪಗಳು :ಪಂಪನಿಂದ ಜನ್ನನವರೆಗೆ

Posted on ನವೆಂಬರ್ 27, 2011. Filed under: ಕನ್ನಡ ಸಾಹಿತ್ಯ, Jaina literature, Kannada classical poetry | ಟ್ಯಾಗ್ ಗಳು:, , , , , , |


ಈ ಬಾರಿ  ಚಳಿಗಾಲದ ಸೆಮೆಸ್ಟರ್ ನಲ್ಲಿ  ವ್ಯೂರ್ತ್ಸ್ ಬುರ್ಗ್  ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದಲ್ಲಿ ನಾನು ಹೊಸದಾಗಿ ಕಲಿಸುವ ಒಂದು ವಿಷಯ -‘ಕರ್ನಾಟಕದ ಧಾರ್ಮಿಕ ಪರಂಪರೆಗಳು’ .ಜೈನ ಧರ್ಮ ಕರ್ನಾಟಕಕ್ಕೆ ಉತ್ತರಭಾರತದಿಂದ ಬಂದದ್ದು ,ಶ್ರವಣಬೆಳಗೊಳದಲ್ಲಿ ನೆಲೆವೂರಿದ್ದು ,ಅದು ಕರ್ನಾಟಕದಲ್ಲಿ ತಾಳಿದ ಸ್ಥಳೀಯ ಮಾದರಿಗಳ ಬಗ್ಗೆ ಆರಂಭದ ಪಾಠಗಳಲ್ಲಿ ವಿವರಗಳನ್ನು ಕೊಟ್ಟೆ. ಕರ್ನಾಟಕದ ಯಾವುದೇ ಒಂದು ಧಾರ್ಮಿಕ ಪರಂಪರೆಯ ಬಗ್ಗೆ ಚರ್ಚಿಸುವಾಗ ನಮಗೆ ಮುಖ್ಯವಾಗುವುದು ಅದು ಎಲ್ಲಿ ಹುಟ್ಟಿತು ,ಕರ್ನಾಟಕದ ಒಳಗಿನದೇ ಹೊರಗಿನದೇ ಎನ್ನುವುದಲ್ಲ.ಹಾಗೆ ನೋಡಿದರೆ ವೀರಶೈವ ಮತ್ತು ವೈದಿಕದಲ್ಲಿ ದ್ವೈತ ಪಂಥ  ಬಿಟ್ಟರೆ ,ಕರ್ನಾಟಕದ ಉಳಿದ ಎಲ್ಲಾ ಧರ್ಮ ಹಾಗೂ ಸಿದ್ಧಾಂತಗಳು ಹೊರಗಿನಿಂದಲೇ  ಬಂದವು.ಕರ್ನಾಟಕದ್ದೇ ಆದ ಜಾನಪದ ಪರಂಪರೆಯ ಧರ್ಮಗಳು ಸಾಕಷ್ಟು ಇವೆ. ಇವೇ   ಅವುಗಳ ಅರ್ಹತೆಯ ತರತಮಗಳ ಮಾನದಂಡ ಅಲ್ಲ.ಈ ಧರ್ಮಗಳು ,ಪಂಥಗಳು,ತತ್ವಗಳು ಕರ್ನಾಟಕದ ಸನ್ನಿವೇಶದಲ್ಲಿ ಮಾಡಿಕೊಂಡ ಅಳವಡಿಕೆಗಳು ಮತ್ತು ಸ್ವೀಕರಣಗಳು ಯಾವುವು ಹಾಗೂ ಅವು ಇಲ್ಲಿನ ಬದುಕಿನ ಚಿಂತನಾಕ್ರಮಗಳಿಗೆ ತೋರಿಸಿದ ಹೊಸದಾರಿಗಳು ಯಾವುವು ,ಅವುಗಳ ಪರಿಣಾಮ ಜನರ ಬದುಕಿನಲ್ಲಿ ಯಾವ ರೀತಿಗಳಲ್ಲಿ ಆಗಿದೆ -ಇಂತಹ ಪರಿಶೀಲನೆ ಬಹಳ ಮುಖ್ಯ.

ಜೈನ ಧರ್ಮ ಕರ್ನಾಟಕದಲ್ಲಿ ಅನುಸರಿಸಿದ ಅಳವಡಿಕೆಗಳಲ್ಲಿ ರಾಜರ ಪ್ರಭುಗಳ ನೇರ ಮಾರ್ಗದರ್ಶನದಲ್ಲಿ ರಚನೆಯಾದ ಶಿಲ್ಪಕಲೆಯ ನಿರ್ಮಾಣಗಳು ಒಂದು ಬಗೆ.ಶ್ರವಣಬೆಳಗೊಳದಲ್ಲಿ ಸ್ಥಾಪನೆಯಾದ ಗೊಮ್ಮಟನ ಆದರ್ಶ ಮಾದರಿ ಕರ್ನಾಟಕದ ಬೇರೆ ಬೇರೆ ಜೈನ ಕೇಂದ್ರಗಳಲ್ಲಿ ಪುನಾರವರ್ತನೆಗೊಂಡಿತು.ಗಾತ್ರದಲ್ಲಿ ವ್ಯತ್ಯಾಸವೇ ಹೊರತು ಕಲ್ಪನೆ ಆಶಯ ಅದೇನೇ.ಧರ್ಮದ ಆಚರಣೆಯಲ್ಲಿ ಪುನರಾವರ್ತನೆ ಒಂದು ಅನಿವಾರ್ಯ ಪ್ರಕ್ರಿಯೆ.ಆದರೆ ಬದುಕಿನಲ್ಲಿ  ಪುನರಾರ್ವತೆ ಎನ್ನುವುದು ಅದೊಂದು ಉಲ್ಲಾಸದ ಸಂಗತಿ ಅಲ್ಲ.ಬಸದಿಗಳ ರಚನೆಗಳು ಇದೇ ಮಾದರಿಯ ಇನ್ನೊಂದು ನಿರ್ಮಾಣ.ಎಲ್ಲ ಧರ್ಮಗಳೂ ಸ್ಥಾವರ ಮತ್ತು ಜಂಗಮದ ಕಲ್ಪನೆಯನ್ನು ತಮ್ಮದೇ ರೀತಿಯಲ್ಲಿ ಗ್ರಹಿಸುತ್ತಾ ರೂಪಿಸುತ್ತಾ ಬಂದಿವೆ. ಜೈನಧರ್ಮದ ಬಸದಿಗಳು ,ಮಠಗಳು -ಸ್ಥಾವರ ವರ್ಗಕ್ಕೆ ಸೇರುತ್ತವೆ.ಜೈನ ಧರ್ಮದಲ್ಲಿ ಮಠಗಳ ಸ್ಥಾಪನೆ ಬಳಿಕದ ಬೆಳವಣಿಗೆ.ಮೂಡಬಿದಿರೆಯ ಸಾವಿರಕಂಬದ ಬಸದಿ ಇಂತಹ ರಚನೆಗಳು  ಭಿನ್ನತೆಯ ಕಾರಣಕ್ಕಾಗಿ ಗಮನ ಸೆಳೆಯುತ್ತವೆ .

ಕರ್ನಾಟಕದಲ್ಲಿ ಜೈನಧರ್ಮ ನಡೆಸಿದ ಮಹತ್ವದ ಪ್ರಯೋಗ -ಕನ್ನಡದಲ್ಲಿ ಕಾವ್ಯಗಳ ಪುರಾಣಗಳ ರಚನೆ.ಕರ್ನಾಟಕದಲ್ಲಿ ಇವತ್ತು ಜೈನರ ಒಟ್ಟು  ಜನಸಂಖ್ಯೆಯ ಪ್ರಮಾಣ ಶೇಕಡಾ ಒಂದಕ್ಕಿಂತ ಕಡಮೆ ಇರಬಹುದು.ಆದರೆ ಪ್ರಾಚೀನ ಕನ್ನಡ ಸಾಹಿತ್ಯದ ಆರಂಭದಿಂದ ತೊಡಗಿ ನಡುಗನ್ನಡವನ್ನೂ ಸೇರಿಸಿಕೊಂಡರೆ ಅದು ಸಂಖ್ಯೆಯಲ್ಲಿ ಮಾತ್ರ  ಅಲ್ಲ ,ಗುಣಮಟ್ಟದಲ್ಲೂ ಕನ್ನಡ ಸಾಹಿತ್ಯದ ಅರ್ಧಭಾಗವನ್ನು ಗಾಢವಾಗಿ ಆವರಿಸುತ್ತದೆ.ಒಂದು ಅಂದಾಜಿನ ಪ್ರಕಾರ ಸುಮಾರು ೪೫೦ ಜೈನ ಕವಿಗಳು ೫೨೦ ಕ್ಕೂ ಹೆಚ್ಚಿನ ಕನ್ನಡ ಕೃತಿಗಳನ್ನು ರಚಿಸಿದ್ದಾರೆ.ಪುರಾಣ,ಮಹಾಕಾವ್ಯ,ಜನಪದ ಕಥೆ,ಕಾವ್ಯಶಾಸ್ತ್ರ,ಛಂದಸ್ಸು,ವ್ಯಾಕರಣ,ಸೂಪಶಾಸ್ತ್ರ,ಗಣಿತಶಾಸ್ತ್ರ ,ಚಂಪೂ,ಗದ್ಯ,ಸಾಂಗತ್ಯ,ಮುಕ್ತಕ -ಹೀಗೆ ಹಲವು  ಪ್ರಕಾರಗಳಲ್ಲಿ ಹಲವು ಪ್ರಬೇಧಗಳಲ್ಲಿ ಕನ್ನಡ ಜೈನಸಾಹಿತ್ಯದ ಹರಹು ಚಾಚಿಕೊಂಡಿದೆ.

ಕನ್ನಡದ ಮೊದಲ ಕವಿ ,ಎಲ್ಲ ಕಾಲದ ಮಹತ್ವದ ಮಹಾಕವಿ ಪಂಪನು ಕನ್ನಡ ಜೈನಕಾವ್ಯಗಳ ರಚನೆಯ ಒಂದು ವಿಶಿಷ್ಟ ಪರಿಕಲ್ಪನೆಯನ್ನು ಪ್ರಸ್ತಾವಿಸಿದ ಮತ್ತು ಪ್ರಾರಂಭಿಸಿದ.ಅದು ‘ಲೌಕಿಕ ‘ ಮತ್ತು ‘ಆಗಮಿಕ’ ಎಂಬ ಪರಿಕಲ್ಪನೆಗಳ ಮೂಲಕ ಕಾವ್ಯಗಳನ್ನು ನಿರ್ಮಿಸುವುದು ಮತ್ತು ಆ ಮೂಲಕ ಅಂತಹ ಬದುಕಿನ ಪ್ರಭೇದಗಳನ್ನು ಪರಿಕಲ್ಪಿಸಿಕೊಳ್ಳುವುದು. ಪಂಪ ತನ್ನ ‘ವಿಕ್ರಮಾರ್ಜುನ ವಿಜಯ ‘ ಕಾವ್ಯದ ೧೪ನೆಯ ಆಶ್ವಾಸದ ೬೦ನೆಯ ಪದ್ಯದಲ್ಲಿ ಹೇಳಿದ ಮಾತು “ಬೆಳಗುವೆನಿಲ್ಲಿ ಲೌಕಿಕಮನ್ ,ಅಲ್ಲಿ ಜಿನಾಗಮಮಂ ” .ಪಂಪನ ಈ ಮಾತನ್ನು ಕನ್ನಡ ವಿದ್ವತ್ ಲೋಕ ಮತ್ತು ವಿಮರ್ಶಕ ಪ್ರಪಂಚ ,ಕನ್ನಡ ಸಾಹಿತ್ಯ ಚರಿತ್ರೆಯನ್ನು ವ್ಯಾಖ್ಯಾನ ಮಾಡುವುದಕ್ಕೆ ಬಳಸಿಕೊಂಡಿದೆ.ಲೌಕಿಕವನ್ನು ಹೇಳುವುದಕ್ಕೆ ‘ವಿಕ್ರಮಾರ್ಜುನ ವಿಜಯ’ ,ಜಿನಾಗಮವನ್ನು ಹೇಳುವುದಕ್ಕೆ ‘ಆದಿಪುರಾಣ’ ಎನ್ನುವ ಮಾದರಿಯನ್ನು ಪ್ರಾಚೀನ ಜೈನ ಕಾವ್ಯಗಳ ದ್ವಂದ್ವಮಾನ ವಿಭಜನೆಗೆ ಸೂತ್ರವನ್ನಾಗಿ ಇಟ್ಟುಕೊಳ್ಳಲಾಗಿದೆ.ಇದರ ಪರಿಣಾಮವಾಗಿ ಕನ್ನಡ ಪ್ರಾಚೀನ ಕಾವ್ಯಗಳನ್ನು ಲೌಕಿಕ ಮತ್ತು ಆಗಮಿಕ ಎಂದು ಸೀಳಿ ನೋಡುವ ಪ್ರವೃತ್ತಿ ಆರಂಭ ಆಯಿತು.ಈ ರೀತಿಯ ಅನ್ವಯಕ್ಕೆ ಕೂಡಲೇ ಸಿಕ್ಕಿದವರು ಪಂಪನ ಬೆನ್ನಿಗೇ ಬಂದ ಇಬ್ಬರು ಜೈನ ಕವಿಗಳು-ಪೊನ್ನ ( ‘ಭುವನೈಕ  ರಾಮಾಭ್ಯುದಯ ‘ ಮತ್ತು ‘ ಶಾಂತಿಪುರಾಣ’ ) ಮತ್ತು ರನ್ನ ( ‘ಸಾಹಸ ಭೀಮವಿಜಯ’ ಮತ್ತು ‘ಅಜಿತ ತೀರ್ಥಂಕರ ಪುರಾಣ’).

ಆದರೆ ಪಂಪನು ಸಾರಿಕೊಂಡ ಹೇಳಿಕೆಯ ಆಚೆಗೆ ಆತನ ಕಾವ್ಯಗಳನ್ನು ಪರಿಶೀಲಿಸಿದಾಗ ಆತನ ‘ಲೌಕಿಕ’ ಎನ್ನುವ ಪರಿಕಲ್ಪನೆಗೆ ಬೇರೆ ಅರ್ಥಗಳೂ ಹೊಳೆಯುತ್ತವೆ. ವೈದಿಕ ಧರ್ಮವನ್ನು ಬಿಟ್ಟು ಜೈನಧರ್ಮವನ್ನು ಸ್ವೀಕರಿಸಿದ ತನ್ನ ತಂದೆ ಭೀಮಪ್ಪಯ್ಯನಿಂದ ಜೈನ ಸಂಸ್ಕಾರ ಪಡೆದ ಪಂಪ ‘ಆದಿಪುರಾಣ’ ವನ್ನು ‘ಆಗಮಿಕ ಕಾವ್ಯ’ವನ್ನಾಗಿ ರಚಿಸಿದ. ಜೈನಧರ್ಮಕ್ಕೆ ಹೊರತಾದ ರಾಜರುಗಳ ಚರಿತೆಯ ಭಾರತದ ಕತೆಯ ಕಾವ್ಯ ಅವನ ಪಾಲಿಗೆ ‘ಲೌಕಿಕ ‘ ಆಯಿತು. ಅದು ಜಿನಾಗಮ ಅಲ್ಲದ ಕೃತಿ ಎನ್ನುವುದು ‘ಲೌಕಿಕ’ ದ  ಒಂದು ಅರ್ಥ. ಇದರ ಜೊತೆಗೆ, ‘ವಿಕ್ರಮಾರ್ಜುನ ವಿಜಯ’ ಕಾವ್ಯವು  ಒಬ್ಬ ಲೌಕಿಕ ರಾಜನ ಆಶ್ರಯದಲ್ಲಿ ಬರೆದದ್ದು.ತನ್ನ ಆಶ್ರಯದಾತ ಅರಿಕೇಸರಿಯನ್ನು ಭಾರತದ ಕತೆಯ ಅರ್ಜುನನೊಡನೆ ಸಮೀಕರಿಸಿ ಬರೆದ ‘ಸಮಸ್ತ ಭಾರತ’ ಅದು.ತಾನು ದಿನನಿತ್ಯ ಕಾಣಬಹುದಾದ ,ಮಾತಾಡಿಸಬಹುದಾದ, ಉಡುಗೊರೆ ಉಂಬಳಿ ಪ್ರಶಸ್ತಿ ಪಡೆಯಬಹುದಾದ ,ಜೈನನಲ್ಲದ ಒಬ್ಬ ರಾಜನು ಕವಿ ಪಂಪನ ಪಾಲಿಗೆ ಖಂಡಿತ ಲೌಕಿಕದವನು. ಅವನ ಪ್ರೀತ್ಯರ್ಥವಾಗಿ, ನೆನಪಿಗಾಗಿ ಒಂದು ಕಾವ್ಯವನ್ನು ಬರೆಯುವುದು ಕೂಡಾ ಲೌಕಿಕದ ಒಂದು ಮಾದರಿ.

ಲೌಕಿಕದ ಮೂರನೆಯ ಮಾದರಿಯೊಂದು ಬಹಳ ಮುಖ್ಯ ಎಂದು ನನಗೆ ಅನ್ನಿಸುತ್ತದೆ.ಪಂಪನ ‘ಆದಿಪುರಾಣ’ವು  ಜೈನಧರ್ಮದ ಎಲ್ಲ ಅಪೇಕ್ಷೆಗಳನ್ನು ಈಡೇರಿಸುವ ಕಾವ್ಯ.ಅದರ ಒಳಗಡೆ ಚಕ್ರವರ್ತಿಗಳು  ಬರುತ್ತಾರೆ ,ಸಾಮಾನ್ಯ ಮನುಷ್ಯರೂ ಬರುತ್ತಾರೆ,ಯುದ್ಧಗಳು ನಡೆಯುತ್ತವೆ ,ಸಂಘರ್ಷಗಳು ಸಂಭವಿಸುತ್ತವೆ.ಕಾಮ,ಭೋಗ ,ಆಸೆ,ಲೋಭ,ವಂಚನೆ ,ಅಸೂಯೆ -ಇವು ಎಲ್ಲವೂ ಅಲ್ಲಿ ಇರುತ್ತವೆ.ಅಲ್ಲಿನ ಪಾತ್ರಗಳ ವ್ಯವಹಾರಗಳು ಲೌಕಿಕವಾಗಿರುತ್ತವೆ.ಆದರೆ ಜೈನ ಧರ್ಮದ ಚೌಕಟ್ಟಿನ ಒಳಗೆ ನೋಡುವವರು ಅದನ್ನು ಪುರಾಣ ಎಂದು ನೋಡಿದರೇ ಹೊರತು ,ಕಾವ್ಯ ಎಂದು ಪರಿಗಣಿಸಲಿಲ್ಲ.ಹಾಗಾಗಿ ಅಲ್ಲಿ ಲೌಕಿಕವನ್ನು ಕಾಣಲು ಆಗ ಅವಕಾಶ ದೊರೆಯಲಿಲ್ಲ. ನಮ್ಮ ವಿಮರ್ಶೆ ಕೂಡಾ  ಆದಿಪುರಾಣ ,ಶಾಂತಿಪುರಾಣ ,ಅಜಿತಪುರಾಣಗಳನ್ನು ಜಿನಾಗಮದ ಕಾವ್ಯಗಳೆಂದೇ ಪರಿಭಾವಿಸಿದವು. ಈ ಎಲ್ಲ ಜೈನಕವಿಗಳು ತಮ್ಮ ಹುಟ್ಟುಧರ್ಮದ ಹೊರಗಡೆ ಲೌಕಿಕ ಬದುಕಿನಲ್ಲಿ ಕ್ರಿಯಾಶೀಲರಾಗಿ  ಜೀವಿಸಿದವರು.ಪಂಪ ಕವಿ ‘ಕದಳೀಗರ್ಭ  ಶ್ಯಾಮಂ ,ಮೃದುಕುಟಿಲ ಶಿರೋರುಹಂ ,ಸರೋರುಹ ವದನಂ ,ಮೃಧುಮಧ್ಯಮ ತನು, ಹಿತಮಿತ ಮೃದು ವಚನಂ ,ಲಲಿತ ಮಧುರ ಸುಂದರ ವೇಷಂ ‘ ಎಂದು ತನ್ನ  ದೇಹದ ಸೌಂದರ್ಯವನ್ನು ಬಣ್ಣಿಸಿಕೊಂಡದ್ದು ,’ವನಿತಾ ಕಟಾಕ್ಷ ಕುವಲಯ ವನಚಂದ್ರಂ ‘ಎಂದು ಆರಂಭಿಸಿ ಕೇರಳ ಮಲಯ ಆಂಧ್ರದ ಹೆಣ್ಣುಗಳ ಸಂಬಂಧವನ್ನು ಹೆಮ್ಮೆಯಿಂದ ಹೇಳಿಕೊಂಡದ್ದು -ಆಗಮಿಕ ಕಾವ್ಯ ‘ಆದಿಪುರಾಣ’ದಲ್ಲಿ, ಲೌಕಿಕ ಕಾವ್ಯ ‘ವಿಕ್ರಮಾರ್ಜುನವಿಜಯ’ದಲ್ಲಿ ಅಲ್ಲ.ಲೌಕಿಕದಲ್ಲಿ ಕ್ರಿಯಾಶೀಲವಾಗಿ ಇದ್ದುಕೊಂಡೇ ಲೌಕಿಕದ ಒಳಗೆಯೇ ಆಗಮಿಕದ ಜಗತ್ತೊಂದನ್ನು ಕಟ್ಟುವ ಮಾದರಿ ಇದು.

ಪಂಪ ತನ್ನ ಲೌಕಿಕ ಕಾವ್ಯ ‘ವಿಕ್ರಮಾರ್ಜುನವಿಜಯ’ದಲ್ಲಿ ಲೌಕಿಕವನ್ನು ಮೀರುವ ಆಶಯವನ್ನು ತರುತ್ತಾನೆ.ಈ ದೃಷ್ಟಿಯಿಂದ ಆ ಕಾವ್ಯದ ೧೩ನೆಯ ಆಶ್ವಾಸದ ೬೧ನೆಯ ಪದ್ಯ ಮುಖ್ಯವಾಗುತ್ತದೆ.ದುರ್ಯೋಧನನು ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ತನ್ನ ಆಪ್ತ ಗೆಳೆಯ ಕರ್ಣನ ಕಳೇವರವನ್ನು ನೋಡಿ ತೀವ್ರ ಶೋಕವನ್ನು ಪ್ರಕಟಿಸುತ್ತಾ  ಆತನಿಗೆ ಯೋಗ್ಯವಾದ ಸಂಸ್ಕಾರವನ್ನು ತನಗೆ ಮಾಡಲಾಗಲಿಲ್ಲ ಎಂದು ಪ್ರಲಾಪಿಸಿದಾಗ ಆತನಿಗೆ ಸಂಜಯ ಹೇಳುವ ಮಾತು : ” ಕೊಟ್ಟೈ ಕಿರ್ಚನ್ ಉದಗ್ರ ಶೋಕ ಶಿಖಿಯಿಂ ,ಕಣ್ಣೀರ್ಗಳಿಂದ ಎಯ್ದೆ ನೀರ್ಗೊಟ್ಟೆ ಸೂರ್ಯಸುತಂಗೆ , ಲೌಕಿಕಮನ್ ಏನ್ ಇಂ  ದಾ0ಟಿದೈ ” . ‘ ದುರ್ಯೋಧನ , ನೀನು ಲೌಕಿಕವನ್ನು ಮೀರಿದೆ.’ ಲೌಕಿಕವನ್ನು ಮೀರುವುದೆಂದರೆ- ‘ ಸಾಮಾನ್ಯ ಭಾವಾತಿರೇಕದ ಜನರಂತೆ ವರ್ತಿಸದೆ  ,ಅದಕ್ಕೆ ಅತೀತವಾಗಿ ನಮ್ಮ ಭಾವನೆಗಳನ್ನು ನಿಯಂತ್ರಿಸಿಕೊಂಡು ವರ್ತಿಸುವುದು. ಭಾವನೆಗಳ ಅನಿಯಂತ್ರಿತ  ಸ್ಫೋಟದ ಬದಲು ಸಂಯಮದಿಂದ ನಡೆದುಕೊಳ್ಳುವುದು.’ ಇಂತಹ ಪ್ರವೃತ್ತಿಗಳನ್ನೇ ‘ಅಲೌಕಿಕ’ ಎಂದು ಹೇಳುವುದಾದರೆ ,ಇವು ನಮ್ಮ ಲೌಕಿಕದ ಒಳಗಡೆಯೇ ನಿರಂತರ ಸಂಭವಿಸಬೇಕಾದವು.

ಪಂಪನಿಂದ ಮೊದಲಾದ ತೋರಿಕೆಯ ಲೌಕಿಕ- ಆಗಮಿಕ ವಿಭಜನೆಯ ಮಾದರಿಯನ್ನು ಮೊದಲು ಒಡೆದವನು ಜೈನ ಕವಿ ನಾಗಚಂದ್ರ.ಆತ ‘ಮಲ್ಲಿನಾಥ ಪುರಾಣ ‘ ಮತ್ತು ‘ರಾಮಚಂದ್ರ ಚರಿತ ಪುರಾಣ’ ಎಂಬ ಎರಡು ಕಾವ್ಯಗಳನ್ನು ರಚಿಸಿದ .ಆತನ ‘ರಾಮಚಂದ್ರ ಚರಿತ ಪುರಾಣ ‘( ಪಂಪ ರಾಮಾಯಣ ) – ಜೈನ ಪರಂಪರೆಯ ಒಂದು ರಾಮಾಯಣ.ಅದು ಆಗಮಿಕ ಕಾವ್ಯಗಳ ಮಾದರಿಯ ‘ಪುರಾಣ’ವಾಗಿಯೂ ಬರಲಿಲ್ಲ, ಲೌಕಿಕ ಕಾವ್ಯಗಳ ಮಾದರಿಯ ‘ವಿಜಯ’ ವಾಗಿಯೂ ಬರಲಿಲ್ಲ.(ವಿಕ್ರಮಾರ್ಜುನ ವಿಜಯ,ಸಾಹಸಭೀಮ ವಿಜಯ ).ಅದು ಒಂದು ‘ಚರಿತ’ ವಾಯಿತು.ಆದರೆ ಅದರ ಜೊತೆಗೆ ‘ಪುರಾಣ’ವನ್ನೂ ಕೈಬಿಡಲಿಲ್ಲ.ಹಾಗಾಗಿ ಅದು ‘ಚರಿತ’ ಮತ್ತು ‘ಪುರಾಣ’ ಎರಡೂ ಆಯಿತು. ಪುರಾಣಗಳನ್ನು ಕಾವ್ಯಗಳಾಗಿ ಓದುವ ದೃಷ್ಟಿಯಿಂದ ಈ ‘ಚರಿತ ಪುರಾಣ’ ಎನ್ನುವ ಕಲ್ಪನೆ ಹೊಸ ನೋಟವನ್ನು ಕೊಡಬಲ್ಲುದು.ಜಿನಸೇನಾಚಾರ್ಯರು ಸಂಸ್ಕೃತದಲ್ಲಿ ಬರೆಯಲು ಉದ್ದೇಶಿಸಿದ್ದು ಪುರಾಣವನ್ನು ಅಲ್ಲ, ತ್ರಿಷಷ್ಠಿ ಶಲಾಕಾ ಪುರುಷರ ಚರಿತ್ರೆಯನ್ನು.ಅದನ್ನು ಅವರು ಪೂರ್ಣಗೊಳಿಸಲಿಲ್ಲ. ಅದನ್ನು ಪೂರ್ತಿ ಮಾಡಿದ್ದು ಹೇಮಚಂದ್ರ. ‘ತ್ರಿಷಷ್ಠಿ ಶಲಾಕಾ ಚರಿತ’ದಲ್ಲಿನ ಪುರುಷರು ತೀರ್ಥಂಕರರಲ್ಲ; ಅದು ಪುರಾಣವೂ ಅಲ್ಲ.ಅದು’ ಚರಿತ’ , ಇತಿವೃತ್ತ.ಈ ಮಾದರಿಯನ್ನು ಮೊದಲು ಆಯ್ಕೆ ಮಾಡಿಕೊಂಡದ್ದು ನಾಗಚಂದ್ರ. ಆತನ ‘ರಾಮಚಂದ್ರ ಚರಿತ ಪುರಾಣ’ವನ್ನು ಸಾಮಾನ್ಯವಾಗಿ ಕನ್ನಡ ಜೈನರಾಮಾಯಣ ಎಂದು ಕರೆಯಲಾಗುತ್ತದೆ. ಸಂಸ್ಕೃತದಲ್ಲಿ ವಿಮಲಸೂರಿ ಮತ್ತು ರವಿಷೇಣ ಅವರ ರಾಮಾಯಣಗಳನ್ನು ಅನುಸರಿಸಿ ನಾಗಚಂದ್ರ ತನ್ನ ರಾಮಾಯಣವನ್ನು ಬರೆದ ಎನ್ನುವುದು ಈ ಅಭಿಪ್ರಾಯಕ್ಕೆ  ಪ್ರಮುಖ ಕಾರಣ.ನಾಗಚಂದ್ರನು ವೈದಿಕ ರಾಮಾಯಣವನ್ನು ಒಡೆದು ಜೈನ ರಾಮಾಯಣ ನಿರ್ಮಾಣಮಾಡಿದ  ಎನ್ನುವ ಅಭಿಪ್ರಾಯಗಳು ಸಾಮಾನ್ಯವಾಗಿ ಪ್ರಚಲಿತವಾಗಿವೆ.ಆದರೆ ಹೀಗೆಯೇ ನೋಡಬೇಕಾಗಿಲ್ಲ.’ಅಳವಡಿಕೆ’ ಅಥವಾ ‘ರೂಪಾಂತರ ‘ದ ಪ್ರಕ್ರಿಯೆಗೆ ತಾತ್ವಿಕ ಕಾರಣಗಳೂ ಇರುತ್ತವೆ.ಕೇವಲ ‘ಮೂಲ ರೂಪ’ ಒಂದು ಇರುತ್ತದೆ ,ಬಳಿಕ ಬಂದವು ಎಲ್ಲವೂ ಅದರ ‘ಭಂಜನ’ ಗಳು ಎಂದು ನೋಡುತ್ತಾ ಹೋದರೆ ,ಬದುಕಿನ ಆಲೋಚನಾ ವಿನ್ಯಾಸಗಳೇ ಬೆಳೆಯುತ್ತಿರಲಿಲ್ಲ.ನಾಗಚಂದ್ರ ಕನ್ನಡಕ್ಕೆ ಹೊಸ ರಾಮಾಯಣ ವೊಂದನ್ನು ಕೊಟ್ಟ.ಅದನ್ನು ಒಂದು ಅರ್ಥದಲ್ಲಿ ಲೌಕಿಕ ರಾಮಾಯಣವಾಗಿಯೂ ನೋಡಬಹುದು, ಜೈನ ಮತ್ತು ವೈದಿಕ  ಧರ್ಮಗಳ ಸ್ಥಾವರ ಚೌಕಟ್ಟುಗಳನ್ನು ಕಳಚಿದರೆ.

ಶಾಂತಿನಾಥನ ‘ಸುಕುಮಾರ ಚರಿತೆ’  -ಜೈನ ಕಥಾ ಪರಂಪರೆಯನ್ನು ಇಟ್ಟುಕೊಂಡು , ತೀರ್ಥಂಕರರ ಚರಿತೆಗೆ ಪ್ರತಿಯಾಗಿ ಬಂದ  ಮೊದಲ ಕೃತಿ.’ವೊಡ್ದಾರಾಧನೆ  ಕಥಾಕೋಶದ ಬಳಿಕ , ಶಾಂತಿನಾಥನು  ಕತೆಗಳ ಮಾದರಿಯಲ್ಲಿ ತೀರ್ಥಂಕರರ  ಬದಲು ಚಕ್ರವರ್ತಿಗಳ ಕತೆಯನ್ನು ಚರಿತ ಕಾವ್ಯವನ್ನಾಗಿ ನಿರ್ಮಿಸಿ ,ಜೈನ ಪುರಾಣಗಳ ಸ್ಥಾನದಲ್ಲಿ  ಲೌಕಿಕ ಕಾವ್ಯವನ್ನು ಸ್ಥಾಪಿಸಿದ.ಇದನ್ನು ಅದ್ಭುತವಾಗಿ ಬೆಳೆಸಿ ,ಲೌಕಿಕ -ಆಗಮಿಕ ಜೋಡಣೆಗೆ ಹೊಸ ರೂಪ ಮತ್ತು ಅರ್ಥವನ್ನು ಕೊಟ್ಟವನು  ಕವಿ ಜನ್ನ.

ಜನ್ನನ ಎರಡು ಜನಪ್ರಿಯ ಕಾವ್ಯಗಳು :ಅನಂತನಾಥ ಪುರಾಣ ಮತ್ತು ಯಶೋಧರ ಚರಿತ. ಹೆಸರೇ ಹೇಳುವಂತೆ ‘ಅನಂತನಾಥ ಪುರಾಣ ‘ ಒಂದು ಪುರಾಣ ಕಾವ್ಯ ; ಸರಳ ಮಾದರಿಯಲ್ಲಿ ಆಗಮಿಕ ಕೃತಿ. ಈಗ ‘ಯಶೋಧರ ಚರಿತ’ ವನ್ನು ಏನೆಂದು ಕರೆಯಬೇಕು ,ಹೇಗೆ ಪರಿಭಾವಿಸಬೇಕು ಎನ್ನುವ ಪ್ರಶ್ನೆ ಎದುರಾಗುತ್ತದೆ.ಅವನು ಹೊಯ್ಸಳ ವೀರ ಬಲ್ಲಾಳ ಮತ್ತು ಅವನ ಮಗ ನರಸಿಂಹ ಬಲ್ಲಾಳನ ಆಸ್ಥಾನದಲ್ಲಿ ಕವಿಯಾಗಿದ್ದ ಎಂದು ಉಲ್ಲೇಖ ಇದೆ.ಆದರೆ ಪಂಪ ರನ್ನರಂತೆ ಆತ ತನ್ನ ಆಶ್ರಯದಾತರ ನೆನಪಿನಲ್ಲಿ ಲೌಕಿಕ ಕಾವ್ಯ ಬರೆಯಲಿಲ್ಲ. ‘ಯಶೋಧರ ಚರಿತೆ’ಗೆ ಹಿನ್ನೆಲೆಯಾಗಿ ಮುಖ್ಯವಾಗಿ ಎರಡು ಧಾರೆಗಳಿವೆ.ಒಂದು-ಜನಪದ ಕತೆಗಳಿಂದ ಬಂದು ,ಆ ಮೇಲೆ ಒಂದು ಪ್ರಣಯಕತೆಯಾಗಿ ಬೆಳೆದದ್ದು.ಹೆಣ್ಣಿನ ಪ್ರೀತಿ ಚಂಚಲ ಎಂಬ ಗಂಡಿನ ಮನೋಧರ್ಮವನ್ನು ಬಿಂಬಿಸುವ ಮೌಖಿಕ ಪರಂಪರೆಯ ಕತೆಗಳ ಮಾದರಿ.ಇನ್ನೊಂದು -ಇಂತಹ ಜನಪದ ಕತೆಗಳ ಮೂಲವನ್ನು ಇಟ್ಟುಕೊಂಡು ಲಿಖಿತ ಪರಂಪರೆಯಲ್ಲಿ ಬಂದ ಕಥಾನಕಗಳು.ಹರಿಭದ್ರಸೂರಿಯ ‘ಸಮರಾಯಿಚ್ಚ ಕಹಾ ‘, ಹರಿಷೇಣನ ‘ಬೃಹತ್ಕಥಾ ಕೋಶ’ ,ಸೋಮದೇವನ ‘ಯಶಸ್ತಿಲಕ  ಚಂಪು’ ,ಪುಷ್ಪದಂತನ ‘ಜಸಹರ ಚರಿಉ ‘ ,ವಾದಿರಾಜನ ‘ಯಶೋಧರ ಚರಿತ’ -ಇವು ಜನ್ನನ ಪೂರ್ವದ ಕೃತಿಗಳು.

‘ಯಶೋಧರ ಚರಿತ’ ದಲ್ಲಿ ಜೈನಧರ್ಮದ ಆಶಯವನ್ನು  ಪೂರ್ವದ ಎಲ್ಲ ಕವಿಗಳಂತೆ ಜನ್ನನೂ ತಂದಿದ್ದಾನೆ.ಅದು ಹಿಂಸೆಯಿಂದ ಅಹಿಂಸಾ ಮಾರ್ಗದ ಕಡೆಗೆ ,ಭೋಗದಿಂದ ವೈರಾಗ್ಯದ ಕಡೆಗೆ ಬರುವ ಧಾರ್ಮಿಕ ತಿರುವು.ಕವಿಯೂ ತನ್ನ ಕಾವ್ಯದ ‘ಅವತಾರ’ಗಳ ಕೊನೆಯಲ್ಲಿ ಇದನ್ನು ನೇರವಾಗಿ ಸಾರಿಕೊಂಡಿದ್ದಾನೆ :” ಅಭಯರುಚಿ ಕುಮಾರಂ ಮಾರಿದತ್ತಂಗೆ ಹಿಂಸಾ ರಭಸಮತಿಗೆ ಸಯ್ಪಂ ಪೇಳ್ದು ಧರ್ಮಕ್ಕೆ ತಂದ ಈ ಶುಭಕಥನಂ ” . ಜನ್ನನ ಕಾವ್ಯದ ಇನ್ನೊಂದು ಆಕರ -ಮೌಖಿಕ ಪರಂಪರೆಯಲ್ಲಿ ಪ್ರಚಲಿತವಾಗಿದ್ದು ಮುಂದೆ ಲಿಖಿತ ರೂಪಕ್ಕೆ ಬಂದ ‘ಜೀವದಯಾಷ್ಟಮಿಯ ನೋಂಪಿಯ ಕತೆ.’ ಇಂತಹ ನೋಂಪಿಯ  ಕತೆಗಳನ್ನು ಹೇಳಿಸುವವರೆಲ್ಲ ವೈರಾಗ್ಯಪರರಲ್ಲ, ಲೌಕಿಕರೇ .

ಈ ಕಾವ್ಯದ ಕವಚವನ್ನು ಒಡೆದು  ಒಳಗಿನ ತಿರುಳನ್ನು ನೋಡಿದರೆ ,ಇಲ್ಲಿ ಕಾಣುವುದು ಹಿಂಸೆ ಮತ್ತು ಕಾಮ.ಮಾರಿಗುಡಿಯ ವರ್ಣನೆ ,ಪ್ರಾಣಿಬಲಿ,ಮೂಕಜೀವಿಗಳ ಆಕ್ರಂದನ ,ಆತ್ಮಬಲಿಯ ಪ್ರಕಾರಗಳು -ಒಂದು ಕಡೆ.ಗಂಡು-ಹೆಣ್ಣಿನ ಸಂಬಂಧ ,ಅದು ತಾಳುವ ಉತ್ಕಟತೆಯ ರೂಪಗಳು -ಇನ್ನೊದು ಕಡೆ.ಯಶೋಧರ  -ಅಮೃತಮತಿಯರ  ಸಮಾಗಮ ಮತ್ತು ಅಷ್ಟಾವಂಕ -ಅಮೃತಮತಿಯರ  ಸಮಾಗಮದ ಎರಡು ಮಾದರಿಗಳು ಇಲ್ಲಿ ಮುಖಾಮುಖಿ ಆಗುತ್ತವೆ.ದಾಂಪತ್ಯದ ಒಳಗಿನ ಮತ್ತು ಹೊರಗಿನ ಗಂಡು ಹೆಣ್ಣು ಸಂಬಂಧಗಳು ಲೌಕಿಕ ಬದುಕಿನ ಮುಖ್ಯ ಸಂಗತಿಗಳು.ಇಲ್ಲಿ ಹಿಂಸೆ ಮತ್ತು ಭೋಗ -ಪ್ರತ್ಯೇಕವಾಗಿ ಉಳಿಯುವುದಿಲ್ಲ್ಲ.ಜನ್ನ ‘ಅನುಭವ ಮುಕುರ’ಎಂಬ ಕಾಮಶಾಸ್ತ್ರ ಗ್ರಂಥವನ್ನೂ ರಚಿಸಿದ್ದಾನೆ.ಹಾಗಾಗಿಯೇ ಕಾಮದ ಅಭಿವ್ಯಕ್ತಿಗಳನ್ನು ಕಥನದ ಒಳಗೆ ತಂದು ಚರ್ಚಿಸುವುದು ಅವನಿಗೆ ಲೌಕಿಕದ ಗ್ರಹಿಕೆಗೆ ಅಗತ್ಯವಾಗಿತ್ತು.’ಹಿಂಸಾರತಿ’ ಎನ್ನುವುದು ಲೈಂಗಿಕ ನೆಲೆಯಲ್ಲಿ ,ಪ್ರಾಣಿಬಲಿಯ ಸನ್ನಿವೇಶದಲ್ಲಿ  ಅಥವಾ ಮನಸ್ಸಿಗೆ ಚುಚ್ಚಿ ನೋವು ಉಂಟುಮಾಡುವ ಕ್ರಿಯೆಯಲ್ಲಿ ಇರಬಹುದು.

ಹಿಟ್ಟಿನ ಕೋಳಿಯನ್ನು ಬಲಿಕೊಡುವ ಪ್ರಸಂಗದಲ್ಲಿ  ‘ಸಂಕಲ್ಪ ಹಿಂಸೆ’ ಎನ್ನುವ ಪರಿಭಾಷೆಯೊಂದು ರೂಪಿತವಾಗಿದೆ.ಇದು ನಮ್ಮ ಲೌಕಿಕ ಬದುಕಿನ ಹಿಂಸೆಯ ಒಂದು ಮುಖ್ಯ ಮಾದರಿ.ಮೊದಲು ಸಂಕಲ್ಪ ಹಿಂಸೆ ,ಮತ್ತೆ ಅದರ ಅನುಷ್ಠಾನ ಮಾಡುವ  ಕ್ರೌರ್ಯ.ಲೌಕಿಕ ಜಗತ್ತಿನಲ್ಲೇ ನಾವು ಕಟ್ಟಿಕೊಳ್ಳುವ ಸಂಕಲ್ಪಗಳು ಎಂಥವು, ಅವುಗಳಿಂದ ಮುಂದೆ ಒದಗುವ ಅನಾಹುತಗಳು ಯಾವ ಬಗೆಯವು ,ಅವನ್ನು ನಿವಾರಿಸಿಕೊಳ್ಳಲು ನಾವು ನಡೆಸುವ ಕಾರ್ಯತಂತ್ರಗಳು ,ವಂಚನೆಗಳು ,ಒದ್ದಾಟಗಳು-  ‘ಯಶೋಧರ ಚರಿತ’ ಕಾವ್ಯದಲ್ಲಿನ ಭವಾವಳಿಗಳಂತೆ  ಇವೆಲ್ಲ ಲೌಕಿಕ ಬದುಕಿನಲ್ಲಿ  ಅನೇಕ ಜನ್ಮಗಳನ್ನು ತಾಳುತ್ತವೆ  .ಆದರೆ ಈ ಎಲ್ಲ ಭವಾವಳಿಗಳನ್ನು ಒಂದೇ ಜನ್ಮದಲ್ಲಿ ಅನುಭವಿಸಬೇಕಾಗಿರುವುದು ನಮ್ಮ ಸಂಕಷ್ಟ .ಜನ್ನನ ಕಾವ್ಯದಲ್ಲಿ ೩ನೆಯ ಅವತಾರದ ೧೧ನೆಯ ಪದ್ಯದಲ್ಲಿ ಬರುವ ಒಂದು ಹೇಳಿಕೆ : ” ವಂಚನೆ ಎಲ್ಲಿಯುಂ ಒಳ್ಪು ಮಾಡಲಾರದು ಕಡೆಯೊಳ್ ” .ಲೌಕಿಕ ಜಗತ್ತಿನ ಒಳಗೆ ನಾವು ಕಟ್ಟಿಕೊಳ್ಳುತ್ತಿರುವ ಸ್ವರ್ಗ ನರಕಗಳು ಯಾವ ರೀತಿಯವು ,ನಾವು ರೂಪಿಸುವ ಮಾನಸಿಕ ಜಗತ್ತುಗಳು ಹೇಗೆ ಇರಬೇಕು ಎನ್ನುವ ಹೊಳಹೇ ಇಂತಹ ಕಾವ್ಯಗಳ ಒಳನೋಟ.

‘ಯಶೋಧರ ಚರಿತ’ದ ಮೂರನೆಯ ಅವತಾರದಲ್ಲಿ ‘ಜೀವಶ್ರಾದ್ಧ’ ಎನ್ನುವ ಒಂದು ಪರಿಕಲ್ಪನೆ ಪ್ರಸ್ತಾವಗೊಂಡಿದೆ.ಒಂದು ಜೀವಂತ ಮೀನಿನ ಅರ್ಧ ಕಡಿಯನ್ನು ಬೇಯಿಸಿ ,ಉಳಿದ ಅರ್ಧ ಕಡಿಯನ್ನು ನೀರಿನಲ್ಲಿ ಇರಿಸಿ ಮಾಡುವ ಶ್ರಾದ್ಧ -‘ಜೀವಶ್ರಾದ್ಧ’. ಇದು ಒಂದು ಅದ್ಭುತ ರೂಪಕ.ಈ ‘ಜೀವಶ್ರಾದ್ಧ’ದ  ರೂಪಕವನ್ನು ನಮ್ಮ ಆಧುನಿಕ ಲೌಕಿಕ ಬದುಕಿಗೆ ಅನ್ವಯಿಸಬಹುದು.ಅರ್ಧ ಬದುಕು ಜೀವಂತವಿದೆ,ಇನ್ನರ್ಧ ಬದುಕು ಸತ್ತುಹೋಗಿದೆ. ಒಂದು ಅರ್ಥದಲ್ಲಿ ಆಗಮಿಕ -ಲೌಕಿಕ ಎಂಬ ವಿಭಜನೆಯೇ ಅರ್ಧ ಮೀನನ್ನು ಬೇಯಿಸಿ ,ಉಳಿದ ಅರ್ಧ ಮೀನನ್ನು ನೀರಿನಲ್ಲಿ ಜೀವಂತವಾಗಿ ಇರಿಸಿ ಮಾಡುವ ‘ಜೀವಶ್ರಾದ್ಧ’  ಆಚರಣೆಯ ವಸ್ತುಪ್ರತಿರೂಪದ ಹಾಗೆ.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

4 Responses to “ಕನ್ನಡ ಜೈನ ಕವಿಗಳಲ್ಲಿ ಲೌಕಿಕದ ಬಹುರೂಪಗಳು :ಪಂಪನಿಂದ ಜನ್ನನವರೆಗೆ”

RSS Feed for ಬಿ ಎ ವಿವೇಕ ರೈ Comments RSS Feed

ಸರ್ ನಿಮ್ಮ ಲೇಖನ ರೋಚಕವಾಗಿದೆ. ಕವಿಗಳು ತಾವು ಕಟ್ಟಿಕೊಂಡ ಕೋಟೆಗಳನ್ನು ತಾವೇ ಮುರಿದುಕೊಂಡು ಮುಂದೆ ಹೋಗುವುದರಿಂದಲೇ ನಮಗೆಲ್ಲ ಮುಖ್ಯರಾಗುತ್ತಾರೆ. ನಿಮ್ಮ ಬರಹ ಮತ್ತೆ ಜೈನ ಕಾವ್ಯಗಳನ್ನು ಓದಲು ಒತ್ತಾಯಿಸುತ್ತವೆ. ವಡ್ಡಾರಾಧನೆ ಕೂಡ ಲೌಕಿಕವನ್ನು ಮೀರಿ ಅಲೌಕಿಕದ ಕಡೆಗೆ, ಅಲೌಕಿಕವನ್ನು ಮೀರಿ ಲೌಕಿಕದ ಕಡೆ ಓಡಾಡುವ ಪರಿ ಸೊಗಸಾದುದು. ಈಗ ಮತ್ತೊಂದು ಸಾಹಿತ್ಯ ಚರಿತ್ರೆಯ ಅಗತ್ಯವಿದೆ .
ವಂದನೆಗಳು

ಪುರುಷೋತ್ತಮ್,ನಮ್ಮ ಕವಿಗಳು ಸಾರಿಕೊಂಡ ಮತ್ತು ತಮ್ಮ ಕಾವ್ಯಗಳಲ್ಲಿ ಶೋಧಿಸಿದ ಸಂಗತಿಗಳು ಅನೇಕ ಬಾರಿ ಬೇರೆಬೇರೆ ಆಗಿವೆ.ಕಾವ್ಯದ ಪ್ರವೇಶವನ್ನು ಸಾಂಪ್ರದಾಯಿಕವಾಗಿ ಆರಂಭದಿಂದ ಮಾಡದೆ ಒಳಗಿನ ಬಿಕ್ಕಟ್ಟುಗಳು ಮತ್ತು ಅವುಗಳ ನಿರ್ವಹಣೆಯ ಮೂಲಕ ಮಾಡಿದರೆ ,ಕನ್ನಡದ ಕ್ಲಾಸಿಕ್ ಕಾವ್ಯಗಳು ಜಾಗತಿಕ ಚಿಂತನೆಗೆ ಹೊಸಧ್ವನಿಗಳನ್ನು ಕೊಡಬಲ್ಲ ಜಾಗತಿಕ ಕಾವ್ಯಗಳು ಆಗಬಲ್ಲವು.’ಕನ್ನಡ ಶಾಸ್ತ್ರೀಯ ಭಾಷೆ’ ಎಂಬ ಬ್ಯಾನರ್ ಬರೆಯಲು ಕೋಟಿ ಕೋಟಿ ರೂಪಾಯಿಗಳನ್ನು ಖರ್ಚುಮಾಡುವ ಬದಲು ,ಇಂತಹ ಅಧ್ಯಯನಗಳಿಗೆ ಚಾಲನೆ ಕೊಡುವುದು ಒಳ್ಳೆಯದು.

ಕನ್ನಡ ಕಾವ್ಯ ಪರಂಪರೆಯ ಬಗ್ಗೆ ಪರಿಚಯಾತ್ಮಕವಾಗಿಯಾದರೂ ಅದನ್ನು ವಿಮರ್ಶಾತ್ಮಕ ಎಚ್ಚರದಿಂದ ಕಲಿಸುವಿಕೆ ನಿಮ್ಮ ಬರಹದಲ್ಲಿ ಕಾಣುತ್ತದೆ. ಅದು ಅನ್ಯ ಭಾಷೆ, ಅನ್ಯ ಸಂಸ್ಕೃತಿಯ ವಿದ್ಯಾರ್ಥಿಗಳಿಗೆ ಕಲಿಸುವ ಈ ಮಾದರಿ ನಿಜಕ್ಕೂ ಅನುಕರಣೀಯ. ಕಾರಣ ನಮ್ಮಲ್ಲೆ ನಮ್ಮದೇ ನೆಲದ ವಿದ್ಯಾರ್ಥಿಗಳಿಗೆ ಕಲಿಸುವ ಅಧ್ಯಾಪಕರು ಒಂದೋ ಅತಿಯಾದ ಅಭಿಮಾನದಿಂದಲೋ..ಇಲ್ಲವೇ ಹಳೆಕಾಲದ ಓದಿನಿಂದ ಬಿಡುಗಡೆಗೊಳ್ಳದೆಯೋ ಮಾತನಾಡುತ್ತಿರುತ್ತಾರೆ. ಸಾಹುತ್ಯ ಪರಂಪರೆಗಳ ಕೊಡುಕೊಳೆ, ಸಂಕರ ಶೀಲತೆ, ಅಭಿಮಾನದ ಆಚೆಯೂ ನಣ್ಣ ಸಂಶಯದ ನೋಡುವಿಕೆ ಇವುಗಳೆಲ್ಲಾ ಸಾಧ್ಯವಾಗಬೇಕು. ಸಾರ್ ದೂರದ ದೇಶದಲ್ಲಿ ಕನ್ನಡ ಡಿಂಡಿಮ ಬಾರಿಸುತ್ತಿರುವ ನಿಮಗೆ ಧನ್ಯವಾದಗಳು.

ಅರುಣ್ ,ನಮ್ಮ ಪ್ರಾಚೀನ ಕನ್ನಡ ಕಾವ್ಯಗಳನ್ನು ಓದುವ ಮತ್ತು ಆ ಮೂಲಕ ಹೊಸ ಚಿಂತನಾ ವಿನ್ಯಾಸಗಳನ್ನು ಅವುಗಳಿಂದ ಪಡೆಯುವ ಕೆಲಸ ಮಾಡದಿದ್ದರೆ ,ಈ ಕಾವ್ಯಗಳೆಲ್ಲ ಸಾಹಿತ್ಯಚರಿತ್ರೆಯ ಗ್ರಂಥಸೂಚಿಯಲ್ಲಿ ಮಾತ್ರ ಉಳಿಯುತ್ತವೆ.ಜಗತ್ತಿನ ನೂರಾರು ಭಾಷೆಗಳ ಸಮುದ್ರದಲ್ಲಿ ಕನ್ನಡ ಭಾಷೆಯ ಸಾಹಿತ್ಯ ಉಳಿಯಬೇಕಾದರೆ ಅವುಗಳ ವೈಚಾರಿಕ ಕೊಡುಗೆಗಳನ್ನು ನಾವು ಹುಡುಕಿ ಹೇಳಲೇಬೇಕು.ಇದು ಸಂಶಯ ಎಂದಲ್ಲ,ಸಂಕೀರ್ಣ ಮನಸ್ಸೊಂದು ಎಷ್ಟು ಬಗೆಗಳಲ್ಲಿ ಬದುಕಿನ ದಾರಿಗಳನ್ನು ಕಂಡುಕೊಳ್ಳಬಹುದು ಎನ್ನುವ ಕುತೂಹಲ.ನಿಮ್ಮಂತಹ ಸೃಜನಶೀಲ ಮನಸ್ಸುಗಳು ಇವನ್ನು ಮಾಡುವ ಶಕ್ತಿ ಹೊಂದಿವೆ.ನಮಸ್ಕಾರ.


Where's The Comment Form?

Liked it here?
Why not try sites on the blogroll...

%d bloggers like this: