ಕಳೆದುಹೋದ ಗಾಂಧಿ ,ಮಾನೋಮಿಯ ಅರ್ಚನೆ ,ಕುಕ್ಕೂಕೂ ಎಂದು ಉಲಿವ ಹಿಟ್ಟಿನ ಕೋಳಿ

Posted on ಅಕ್ಟೋಬರ್ 3, 2011. Filed under: ಹಿಂಸೆ | ಟ್ಯಾಗ್ ಗಳು:, , , , , |

ಮತ್ತೊಂದು ‘ಗಾಂಧಿ ಜಯಂತಿ ‘ ಆಚರಣೆ ನಿನ್ನೆ ತಾನೇ  ಕಳೆದುಹೋಯಿತು. ಹಿಂಸೆಯ ಬಹಿರಂಗ ರೂಪವಾದ ಪ್ರಾಣಿಬಲಿ ನಿಷೇಧ  ಒಂದು ದಿನದ ಮಟ್ಟಿಗೆ  ತೋರಿಕೆಯ ಆದೇಶವಾಗಿ ಮಾತ್ರ ಪಾಲನೆಯಾಯಿತು. ಈ ಬಾರಿ ಗಾಂಧಿ ಜಯಂತಿಯು  ಮಾನೋಮಿ ಹಬ್ಬದ ನಡುವೆಯೇ ಬಂದು ಹೋಯಿತು.ದುರ್ಗೆಯ ಪೂಜೆಯಲ್ಲಿ ಹಿಂದಿನಂತೆ ಬಹಿರಂಗವಾಗಿ ಪ್ರಾಣಿ ಬಲಿ ನಡೆಯುತ್ತಿಲ್ಲ. ಅಂದರೆ ‘ಮಾರಿ’ ಯು ‘ದುರ್ಗೆ ‘ ಯಾಗಿ ,’ಚಾಮುಂಡಿ’ ಯು ‘ದೇವಿ’ಯಾಗಿ ,’ಮಂಗಳಾದೇವಿ’ಯಾಗಿ ಒಟ್ಟು ಆಚರಣೆಗಳೆಲ್ಲ ‘ಹಿಂಸೆ’ಯಿಂದ ‘ಅಹಿಂಸೆ’ಯೆಡೆಗೆ ಸಾಗುತ್ತಾ ಬಂದಿವೆ ಎನ್ನುವ ಘೋಷಣೆಯು  ಬಹಿರಂಗದ ಆಚರಣೆಗಳಲ್ಲಿ ಭಾಸವಾಗುತ್ತಿದೆ. ಆದರೆ ನಮ್ಮ ಪರಿಸರದಲ್ಲಿ ಹಿಂಸೆ ಕಡಮೆಯಾಗಿದೆಯೇ ?’ ಅಹಿಂಸೆ ‘ ನಿಜವಾಗಿದೆಯೇ ಎನ್ನುವ ಪ್ರಶ್ನೆಗಳಿಗೆ ನಮ್ಮ ಒಳಗಿನಿಂದಲೇ ಉತ್ತರಗಳನ್ನು ಕಂಡುಕೊಳ್ಳಬೇಕು.

ಕನ್ನಡ ಕವಿ ಜನ್ನನ ‘ಯಶೋಧರ ಚರಿತ’ ಈ ಸಂದರ್ಭದಲ್ಲಿ ನಮ್ಮನ್ನು ಮತ್ತೆ ಮತ್ತೆ ಕಾಡುತ್ತದೆ -ಆ ಕಾವ್ಯದಲ್ಲಿ ಹಿಟ್ಟಿನ ಕೋಳಿಯನ್ನು ಚಂಡಿಕೆಯ ಪೂಜೆಗೆ ಯಶೋಧರ ಬಲಿ ಕೊಟ್ಟಾಗ ,ಆ ಹಿಟ್ಟಿನ ಕೋಳಿಯ ‘ಕುಕ್ಕೂಕೂ ‘ ಎಂಬ ಉಲಿಯು ಈಗಲೂ ನಮ್ಮ ನಡುವೆ ಮಾರ್ದನಿಗೊಡುತ್ತದೆ. ಕಳೆದುಹೋದ ಗಾಂಧಿಯ ನೋವಿನ ಧ್ವನಿಯಾಗಿ ಬೆಂತರದಂತೆ ಅದು  ನಮ್ಮನ್ನು ಅಣಕಿಸುತ್ತದೆ.’ ಸಂಕಲ್ಪ ಹಿಂಸೆ ‘ ಯಿಂದಾಗಿ ಯಶೋಧರ ಮತ್ತು ಅವನ ತಾಯಿ ಚಂದ್ರಮತಿ ಅನೇಕ ಜನ್ಮಗಳನ್ನು ಎತ್ತಿ ,ಎಲ್ಲ ಜನ್ಮಗಳಲ್ಲೂ ಬಗೆಬಗೆಯ ಹಿಂಸೆಯ ಅನುಭವಗಳನ್ನು ದಾರುಣವಾಗಿ ಪಡೆದು, ಕೊನೆಗೆ ಜೀವದಯೆಯ ಪಾಠವನ್ನು ಕಲಿಯುತ್ತಾರೆ.’ ಸಂಕಲ್ಪ ಹಿಂಸೆ’ ಎನ್ನುವ ಒಂದು ವಿಶಿಷ್ಟ ಪರಿಕಲ್ಪನೆಯನ್ನು ಜನ್ನ ಕೊಡುತ್ತಾನೆ.’ಸಂಕಲ್ಪ ಹಿಂಸೆಯೊಂದರೊಳ್ ಅಂ ಕಂಡೆಮ್ ಭವದ ದುಃಖಂ ಉಂಡೆಂ ‘ ಎಂದು ಅಭಯರುಚಿಕುಮಾರನು ಮಾರಿದತ್ತನಿಗೆ ಹೇಳುವ ಮಾತು ನಮ್ಮ ಕಾಲದ ಆಧುನಿಕ ಮಾರಿದತ್ತರಿಗೆ ಅರ್ಥವಾಗುವುದು ಯಾವಾಗ ?ಅಧಿಕಾರ ಮತ್ತು ಸಂಪತ್ತಿನ ಕ್ರೋಡೀಕರಣ -ಇವು ಹಿಂಸೆಯ ಬಹುರೂಪಗಳಲ್ಲಿ ಅವತಾರ ಎತ್ತುತ್ತವೆ.ಹಾವು,ಮೊಸಳೆ,ಹೋತ,ಕೋಣಗಳು ಕೇವಲ ಜನ್ಮಾಂತರದ  ಪ್ರಾಣಿಗಳಲ್ಲ. ಮಾರಿದತ್ತರು ನಮ್ಮ ನಡುವೆ ಅನೇಕ ಆಕಾರಗಳಲ್ಲಿ ಈಗಲೂ ತಮ್ಮ ಬಲಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಜನ್ನನ ‘ಯಶೋಧರ ಚರಿತ’ದಲ್ಲಿ ‘ಜೀವಶ್ರಾದ್ಧ ‘ ಎನ್ನುವ ಒಂದು ಅದ್ಭುತ ಪರಿಕಲ್ಪನೆ ಉಲ್ಲೇಖಗೊಂಡಿದೆ.ಮಗ ಯಶೋಧರ ಮತ್ತು ತಾಯಿ ಚಂದ್ರಮತಿ ಇವರು ಸಂಕಲ್ಪ ಹಿಂಸೆಯ ಫಲವಾಗಿ ಬೇರೆಬೇರೆ ಪ್ರಾಣಿಗಳ ಜನ್ಮಗಳಲ್ಲಿ ಬಗೆಬಗೆಯ ಹಿಂಸೆಗಳನ್ನು ಅನುಭವಿಸುತ್ತಾರೆ.ಒಂದು ಜನ್ಮದಲ್ಲಿ ಯಶೋಧರನು ಮೀನು ಆಗಿ ಸಿಂಪಾನದಿಯಲ್ಲಿ ಹುಟ್ಟುತ್ತಾನೆ.ಅರಸ ಯಶೋಮತಿಯು  ಆ ಮೀನನ್ನು ಬಲೆಯಲ್ಲಿ ಹಿಡಿಸಿ ,ಅದು ಯಶೋಧರನ ಶ್ರಾದ್ಧಕ್ಕೆ ಉತ್ತಮವಾದುದು ಎಂದು ಹೇಳಿ,ಅದರ ಒಂದು ಕಡಿಯನ್ನು ಜೀವಂತವಾಗಿ ಬೇಯಿಸಿದನು.ಆ ಮೀನಿನ ಇನ್ನೊಂದು ಕಡಿಯು ಜೀವವು ಏರುತ್ತಾ ಇಳಿಯುತ್ತಾ ಇರಲು ‘ಜೀವ ಶ್ರಾದ್ಧ’ವನ್ನು ಮಾಡಿದರು.ಆಗ ಮೀನಾಗಿ ಇದ್ದು ಅರ್ಧ ಬೇಯುತ್ತಿದ್ದ ,ಅರ್ಧ ನರಳುತ್ತಿದ್ದ ಯಶೋಧರ ತನ್ನಲ್ಲೇ ಮರುಗುತ್ತಾನೆ :”ನಾನು ಇಲ್ಲಿ ಮೀನಾಗಿ ಸಾಯುತ್ತಿದ್ದೇನೆ.ಆದರೆ ,ಈ ಬ್ರಾಹ್ಮಣರು ‘ಯಶೋಧರ ಸ್ವರ್ಗದಲ್ಲಿ ಇದ್ದಾನೆ’ ಎಂದು ಹೇಳುತ್ತಿದ್ದಾರೆ.ನೃಪನು ಇದನ್ನು ನಂಬಿದ್ದಾನೆ.ಅಕ್ಕಟ ವಿಧಿಯೇ “.

‘ಜೀವ ಶ್ರಾದ್ಧ’ ನಮ್ಮ ಬದುಕಿಗೆ ಒಂದು ರೂಪಕವಾಗಿದೆ.ಇವತ್ತಿನ ನಮ್ಮ ಬದುಕೇ ಒಂದು ‘ಜೀವಶ್ರಾದ್ಧ’ದಂತೆ ಇದೆ.ಅರ್ಧ ಬದುಕು ಜೀವ ಹಿಡಿದಿದೆ ;ಇನ್ನರ್ಧ ಬದುಕು ಸತ್ತುಹೋಗಿದೆ.ನಮ್ಮ ಅರ್ಧ ಬದುಕಿಗಾಗಿ ನಾವು ದಿನನಿತ್ಯ ಶ್ರಾದ್ಧ ಮಾಡುತ್ತಿದ್ದೇವೆ. ತೋರಿಕೆಯ ನಮ್ಮ ಆಚರಣೆಗಳು ,ಪ್ರದರ್ಶನದ ನಮ್ಮ ಅರ್ಚನೆಗಳು -ಎಲ್ಲವೂ ಒಂದಲ್ಲ ಒಂದು ಬಗೆಯ ಜೀವಶ್ರಾದ್ಧಗಳು.

ಹಿಟ್ಟಿನ ಕೋಳಿಯ ಕುಕ್ಕೂಕೂ -ಕೊಂದು ಕೂಗುತ್ತದೆ ನರರನ್ನು ,ನಮ್ಮನ್ನು.

Read Full Post | Make a Comment ( 2 so far )

Liked it here?
Why not try sites on the blogroll...