ಜರ್ಮನ್ ಭಾಷೆಯಲ್ಲಿ ಒಂದು ಕನ್ನಡ ವ್ಯಾಕರಣ ಗ್ರಂಥ

Posted on ನವೆಂಬರ್ 16, 2011. Filed under: ಕನ್ನಡ ಭಾಷೆ.Kannada Language, ಜರ್ಮನಿ | ಟ್ಯಾಗ್ ಗಳು:, , , , , |

ಕನ್ನಡ ಭಾಷೆಯ ವ್ಯಾಕರಣವನ್ನು ವಿವರಿಸುವ ಇಂಗ್ಲಿಷ್ ಗ್ರಂಥಗಳು ಸಾಕಷ್ಟು ಸಂಖ್ಯೆಯಲ್ಲಿ ರಚನೆಯಾಗಿವೆ.ಕನ್ನಡದ ವಿದ್ವಾಂಸರಲ್ಲದೆ ಕೆಲವು ವಿದೇಶಿ ವಿದ್ವಾಂಸರು ಬೇರೆ ಬೇರೆ ದೃಷ್ಟಿಕೋನಗಳಿಂದ ಕನ್ನಡ ವ್ಯಾಕರಣ ಗ್ರಂಥಗಳನ್ನು ಬರೆದಿದ್ದಾರೆ.

ಆದರೆ ಕನ್ನಡ ವ್ಯಾಕರಣವನ್ನು ಕುರಿತು ಜರ್ಮನ್ ಭಾಷೆಯಲ್ಲಿ ರಚನೆಯಾದ ಗ್ರಂಥ ,ನನ್ನ ಗಮನಕ್ಕೆ ಬಂದ ಹಾಗೆ ಒಂದು ಮಾತ್ರ.ಅದು HANS  JENSEN ಅವರ  ‘GRAMMATIK  DER  KANARESISCHEN SCHRIFTSPRACHE ‘ : Publication-VEB VERLAG ENZYKLOPADIE  ,LEIPZIG ,1969.( ಕನ್ನಡ ಸಾಹಿತ್ಯ ಭಾಷೆಯ ವ್ಯಾಕರಣ ). ಹನ್ಸ್ ಯೆನ್ಸೇನ್ ( Hans Jensen) ಹಿಂದಿನ ಪೂರ್ವ ಜರ್ಮನಿಯಲ್ಲಿ ವಾಸವಾಗಿದ್ದ ಒಬ್ಬ ಪ್ರಸಿದ್ಧ ಜರ್ಮನ್  ಭಾಷಾವಿಜ್ಞಾನಿ .( ೨೮ ಆಗಸ್ಟ್ ೧೮೮೪-೪ ಆಗಸ್ಟ್ ೧೯೭೩ ).ಕೀಲ್ (Kiel ) ನಲ್ಲಿ ೧೯೨೭ರಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಯೆನ್ಸೇನ್ ತಮ್ಮ ಬದುಕಿನ ಬಹುಪಾಲು ವೃತ್ತಿ ಜೀವನವನ್ನು ಕಳೆದದ್ದು ಪೂರ್ವಜರ್ಮನಿಯ ರೋಸ್ಟಾಕ್ ( Rostock ) ನಲ್ಲಿ.ಅವರು ೧೯೪೩ರಿನ್ದ ೧೯೫೭ರವರೆಗೆ ರೋಸ್ಟಾಕ್ ನ ‘ತೌಲನಿಕ ಭಾಷಾವಿಜ್ಞಾನ ‘ದ ವಿಭಾಗ /ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು.ಅಧ್ಯಾಪನ ಮತ್ತು ಸಂಶೋಧನೆಯ ಕ್ಷೇತ್ರಗಳಾಗಿ ಪ್ರೊಫೆಸರ್ ಯೆನ್ಸೇನ್ ಅವರು ಪ್ರಾವೀಣ್ಯವನ್ನು ಹೊಂದಿದ್ದ ಭಾಷಾವಿಜ್ಞಾನದ  ಅಧ್ಯಯನ ವಿಷಯಗಳು-ಇಂಡೋ ಯುರೋಪಿಯನ್ ; ಮಧ್ಯ ಪೂರ್ವ; ಪಾಲಿನೆಸಿಯನ್ ; ಆಫ್ರಿಕನ್ ; ಏಷಿಯಾದ ಭಾಷೆಗಳು;ಸಂಶೋಧನೆಯ ಬರವಣಿಗೆ.

ಯೆನ್ಸೇನ್ ಅವರು ಜರ್ಮನ್ ಭಾಷೆಯಲ್ಲಿ ಬರೆದ ಕನ್ನಡ ವ್ಯಾಕರಣ ಗ್ರಂಥವು ಆಧುನಿಕ ಕನ್ನಡದ ಸಾಹಿತ್ಯ (ಲಿಖಿತ ) ಭಾಷೆಯ ವ್ಯಾಕರಣದ ವಿವರಗಳನ್ನು ಕೊಡುವ ಗ್ರಂಥ ಎಂದು ಆ ಗ್ರಂಥದ ಮೊದಲ ಮಾತುಗಳಲ್ಲಿ ಅವರು ಹೇಳಿಕೊಂಡಿದ್ದಾರೆ.ಈ ಗ್ರಂಥದ ಅಧ್ಯಾಯಗಳು ಈರೀತಿ ಇವೆ :

೧.ಪ್ರಸ್ತಾವನೆ ( Einleitung ) ೨.ಬರವಣಿಗೆಯ ಪಾಠ /ಅಕ್ಷರಗಳ ಪರಿಚಯ ( Schriftlehre ) ೩.ಧ್ವನಿಮಾ ಶಾಸ್ತ್ರ /ಉಚ್ಚಾರಣೆಯ ಪಾಠ ( Lautlehre)  ೪.ಆಕೃತಿಮಾ ಶಾಸ್ತ್ರ ( Morphologie ) ೫.ವಾಕ್ಯ ರಚನೆ ( Syntax ).

ಗ್ರಂಥದ ಕೊನೆಯಲ್ಲಿ ಮೂರು ಕನ್ನಡ ಪಾಠಗಳನ್ನು ಕೊಟ್ಟು ,ಅವುಗಳಿಗೆ ಜರ್ಮನ್ ಭಾಷೆಯಲ್ಲಿ ಟಿಪ್ಪಣಿಗಳನ್ನು ಕೊಡಲಾಗಿದೆ.ಬಳಿಕ ‘ಪದ ಮತ್ತು ವಿಷಯ ಸೂಚಿ’ (Wort- Und Sachregister)  ಯನ್ನು ವಿಸ್ತಾರವಾಗಿ ಒಟ್ಟು ಹದಿಮೂರು ಪುಟಗಳಷ್ಟು ವ್ಯಾಪ್ತಿಯಲ್ಲಿ ಪಟ್ಟಿಮಾಡಲಾಗಿದೆ.ವ್ಯಾಕರಣದ ಪರಿಭಾಷೆಗಳ ಜೊತೆಗೆ ,ಕನ್ನಡ ಪದಗಳನ್ನು ರೋಮನ್ ಲಿಪಿಯಲ್ಲಿ ಕೊಟ್ಟು, ಅವುಗಳಿಗೆ ಜರ್ಮನ್ ಭಾಷೆಯಲ್ಲಿ ಅರ್ಥಗಳನ್ನು ಸೂಚಿಸಲಾಗಿದೆ.ಇದು ಒಂದು ಅರ್ಥದಲ್ಲಿ ಸಣ್ಣ ಪ್ರಮಾಣದ ‘ಕನ್ನಡ-ಜರ್ಮನ್’ ಅರ್ಥಕೋಶದಂತೆ ಇದೆ.

ಲೇಖಕನ ಮಾತಿನ ಮುನ್ನುಡಿ (Vorwort) ಯಲ್ಲಿ ಯೆನ್ಸೇನ್ ಹೇಳಿಕೊಂಡ ಕೆಲವು ಅಭಿಪ್ರಾಯಗಳು ಈ ರೀತಿ ಇವೆ :”ಕನ್ನಡ ಭಾಷೆಯ ವ್ಯಾಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಬಂದಿರುವ ಹೆಚ್ಚಿನ ಗ್ರಂಥಗಳು ಹಳಗನ್ನಡ ಭಾಷೆಯ ವ್ಯಾಕರಣಕ್ಕೆ ಮಾತ್ರ ಮಹತ್ವ ನೀಡಿವೆ.ಕನ್ನಡ ವಾಕ್ಯರಚನೆಯ ಕುರಿತು ಈ ಗ್ರಂಥಗಳು ಗಮನ ಹರಿಸಿಲ್ಲ.ಆದ್ದರಿಂದ ನಾನು ಹೊಸಗನ್ನಡದಲ್ಲಿ ಸಾಹಿತ್ಯಕ ಕನ್ನಡವನ್ನು ಮೂಲವಾಗಿ ಇಟ್ಟುಕೊಂಡು ,ಆಧುನಿಕ ಸಾಹಿತ್ಯಕ ಕನ್ನಡ ಭಾಷೆಯ ವ್ಯಾಕರಣ ಗ್ರಂಥವನ್ನು ರಚನೆಮಾಡುವ ಕೆಲಸವನ್ನು ಇಲ್ಲಿ ಮಾಡಿದ್ದೇನೆ.ನನ್ನ ಹೆಚ್ಚಿನ ಉದಾಹರಣೆಗಳನ್ನು ಬೈಬಲ್ ನ ಕನ್ನಡ ಅನುವಾದದ ೧೯೫೯ರ ಮುದ್ರಣದ ಆವೃತ್ತಿಯಿಂದ ತೆಗೆದುಕೊಂಡಿದ್ದೇನೆ.’ನ್ಯೂ ಟೆಸ್ಟಮೆಂಟ್ ‘ನ ೧೮೬೧ರ ಕನ್ನಡ ಅನುವಾದದ ಗ್ರಂಥದಿಂದಲೂ ನಿದರ್ಶನಗಳನ್ನು ಬಳಸಿಕೊಂಡಿದ್ದೇನೆ.”

ಜರ್ಮನ್ ಭಾಷಾವಿಜ್ಞಾನಿ ಹನ್ಸ್ ಯೆನ್ಸೇನ್ ಅವರು ಕನ್ನಡನಾಡಿಗೆ ಬಂದದ್ದಾಗಲೀ,ಕನ್ನಡ ವಿದ್ವಾಂಸರ ಸಂಪರ್ಕ ಪಡೆದದ್ದಾಗಲೀ -ಇಂತಹ ಯಾವ ಉಲ್ಲೇಖವೂ ಇಲ್ಲ.ಅವರು ಆ ಕಾಲದ ವಿದ್ವತ್ ಪರಂಪರೆಯಂತೆ ,ಬಹುಭಾಷೆಗಳ ಅಧ್ಯಯನವನ್ನು ಗ್ರಂಥಗಳ ಮೂಲಕವೇ ಮಾಡುತ್ತಿದ್ದರು.ಜರ್ಮನ್ ಮಿಶನರಿಗಳು ಆ ವೇಳೆಗಾಗಲೇ ಮಂಗಳೂರಿನಲ್ಲಿ ಬಾಸೆಲ್ ಮಿಶನ್ ಪ್ರೆಸ್ ನಲ್ಲಿ ಪ್ರಕಟಿಸಿದ್ದ ಬೈಬಲಿನ ಕನ್ನಡ ಅನುವಾದಗಳ ಆಧಾರದ ಮೇಲೆ ಮತ್ತು ತನಗೆ ಆ ಕಾಲಕ್ಕೆ ದೊರೆತ ಕನ್ನಡ ಹಾಗೂ ದ್ರಾವಿಡ ಭಾಷೆಗಳ ಅಧ್ಯಯನದ ಕೆಲವು ಮುಖ್ಯ ಗ್ರಂಥಗಳ ಅಧ್ಯಯನವನ್ನು ಅವಲಂಬಿಸಿಕೊಂಡು ಈ ಕನ್ನಡ ವ್ಯಾಕರಣ ಗ್ರಂಥವನ್ನು ರಚಿಸಿದಂತೆ ಕಾಣಿಸುತ್ತದೆ.ಅವರು ಇದ್ದ ಆಗಿನ ಪೂರ್ವ ಜರ್ಮನಿಯಲ್ಲಿ ಕನ್ನಡ ಭಾಷೆಯಲ್ಲಿ ಕಲಿಯುವ ಅಥವಾ ಕಲಿಸುವ ಅವಕಾಶ ಇರಲಿಲ್ಲ.ಹಾಗಾಗಿ ಇದೊಂದು ಸ್ವಾಂತ ತೃಪ್ತಿಯ ವಿದ್ವತ್ತಿನ ಕೆಲಸ ಎಂದೇ ಪರಿಗಣಿಸಬೇಕು.

ಯೆನ್ಸೇನ್ ತಾವು ಸಮಾಲೋಚಿಸಿದ ಗ್ರಂಥಗಳ ಯಾದಿಯನ್ನು ಗ್ರಂಥದ ಆರಂಭದಲ್ಲೇ ಕೊಟ್ಟಿದ್ದಾರೆ.M.S.Andronov ,Jules Bloch,William Bright,R.Caldwell,B.Graeter,Thomas Hodson,F. Kittel,Harold Spencer,F.Ziegler,Krishnamacharya,R.C.Hiremath  ಇವರ ವ್ಯಾಕರಣಗ್ರಂಥಗಳು ಮತ್ತುKittel,Ziegler,Ranga Rao,T.Burrw-M.B.Emeneau,J.Bucher  ,Reeve-Sanderson  ಇವರ ನಿಘಂಟುಗಳು ಈ ಗ್ರಂಥಸೂಚಿಯಲ್ಲಿ ಸೇರಿವೆ.

ಹನ್ಸ್ ಯೆನ್ಸೇನ್ ಅವರ ಈ ಜರ್ಮನ್ ಗ್ರಂಥದ ಶೀರ್ಷಿಕೆಯ ಪುಟ,ಪರಿವಿಡಿಯ ನಾಲ್ಕು ಪುಟಗಳು (7,8,9,10 ),ಕನ್ನಡ ವರ್ಣಮಾಲೆ ಅಭ್ಯಾಸದ ಎರಡು ಪುಟಗಳು( ಪುಟ 16ಮತ್ತು17 ) ,ಕನ್ನಡ ಪಾಠದ ಕತೆಯ ಒಂದು ಪುಟ ( 173  ),ಪದ ಮತ್ತು ವಿಷಯಸೂಚಿಯ ಮೊದಲ ಪುಟಗಳು(175,176,177) -ಇವನ್ನು ಸ್ಕೇನ್ ಮಾಡಿ ಇಲ್ಲಿ ಮೇಲೆ  ಕೊಟ್ಟಿದ್ದೇನೆ.( ಅವುಗಳ ಮೇಲೆ ಕ್ಲಿಕ್ ಮಾಡಿದರೆ ಅವನ್ನು ದೊಡ್ಡದಾಗಿ ನೋಡಬಹುದು.) ಹನ್ಸ್ ಯೆನ್ಸೇನ್  ಅವರ ಚಿತ್ರ ಆರಂಭದಲ್ಲಿ ಇದೆ.

ಈಗ ಕನ್ನಡ ಭಾಷೆಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಸಾಕಷ್ಟು ಪುಸ್ತಕಗಳು ಬಂದಿವೆ.೧೯೯೩ರಲ್ಲಿ ನಾನು  ಜರ್ಮನಿಯ ತ್ಯೂಬಿಂಗನ್ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದಲ್ಲಿ ಜರ್ಮನ್ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಕಾಯಕವನ್ನು ಆರಂಭಿಸಿದೆ.ಮತ್ತೆ ಕಳೆದ ಮೂರು ವರ್ಷಗಳಿಂದ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ  ಇಂಡಾಲಜಿ ವಿಭಾಗದಲ್ಲಿ ಜರ್ಮನ್ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ, ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಂಸ್ಕೃತಿಯನ್ನು ಬೋಧನೆ ಮಾಡುತ್ತಿದ್ದೇನೆ.ಸಾಮಾನ್ಯವಾಗಿ ಇಂಗ್ಲಿಷ್ ಮೂಲಕ ಅವರಿಗೆ ಕನ್ನಡ ಕಲಿಸುವಾಗ ,ನಾನು ಕಂಡುಕೊಂಡ ಒಂದು ವಾಸ್ತವ ಏನೆಂದರೆ ,  ನೇರವಾಗಿ ಜರ್ಮನ್ ಭಾಷೆಯ ಮೂಲಕ ಅವರಿಗೆ ಕನ್ನಡವನ್ನು ಕಲಿಸುವುದು ಹೆಚ್ಚು ಪರಿಣಾಮಕಾರಿ ಎನ್ನುವುದು.ಅನೇಕ ಬಾರಿ ಕನ್ನಡ ಪದಗಳಿಗೆ ನೇರವಾಗಿ ಜರ್ಮನ್ ಶಬ್ದಗಳನ್ನೇ ಕೊಟ್ಟಾಗ ಅವರಿಗೆ ಅದು ಸರಿಯಾಗಿ ಬೇಗನೆ ಸಂವಹನ ಆಗುವುದನ್ನು ಗಮನಿಸಿದ್ದೇನೆ.ಈ ದೃಷ್ಟಿಯಿಂದ ಕನ್ನಡವನ್ನು ನೇರವಾಗಿ ಜರ್ಮನ್ ಭಾಷೆಯ ಮೂಲಕವೇ ಕಲಿಸುವ ಒಂದು ಆಧುನಿಕ ಗ್ರಂಥದ  ಅವಶ್ಯಕತೆ ಇದೆ.ಕನ್ನಡ ಭಾಷೆಯ ಆಧುನಿಕ ರೂಪದ ಸಮಗ್ರ ಅವಲೋಕನ ಮಾಡುವ ಒಂದು ಅಧಿಕೃತ ಜರ್ಮನ್ ಗ್ರಂಥದ ರಚನೆಯು -೧೯೬೮ರ ವೇಳೆಗೆ ಸ್ವಪ್ರಯತ್ನದಿಂದಲೇ ತನ್ನ ಮಿತಿಯಲ್ಲಿ ಹೊಸಗನ್ನಡ ವ್ಯಾಕರಣ ಗ್ರಂಥವನ್ನು ಸಿದ್ಧಪಡಿಸಿದ ಹನ್ಸ್ ಯೆನ್ಸೇನ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಆಗುತ್ತದೆ.ಈ ಕನಸನ್ನುನಾವು  ನೆರವೇರಿಸಬೇಕು ಎನ್ನುವ ನನ್ನ ಹಂಬಲವನ್ನು ಇಲ್ಲಿನ ನನ್ನ ಜರ್ಮನ್ ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದೇನೆ.ಇದು ಮುಂದಿನ ವರ್ಷದೊಳಗೆ ನನಸಾದರೆ ,ಜರ್ಮನಿಯಲ್ಲಿ ಶೈಕ್ಷಣಿಕವಾಗಿ  ಕನ್ನಡ ಮುಂದೆಯೂ ಉಳಿಯುತ್ತದೆ.

Advertisements
Read Full Post | Make a Comment ( 6 so far )

Liked it here?
Why not try sites on the blogroll...