ವ್ಯೂರ್ತ್ಸ್ ಬುರ್ಗ್

ಜರ್ಮನಿಯಲ್ಲಿ ಕನ್ನಡ ಬೇಸಗೆ ಶಿಬಿರ ೨೦೧೩ :ಕನ್ನಡ ಕಲಿಕೆಯ ನೋಟಗಳು

Posted on ಸೆಪ್ಟೆಂಬರ್ 18, 2013. Filed under: ಕನ್ನಡ ಭಾಷೆ.Kannada Language, ಕರ್ನಾಟಕ, ಜರ್ಮನಿ, ವ್ಯೂರ್ತ್ಸ್ ಬುರ್ಗ್, Kannada Summer School, Wurzburg |

ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದ ಆಶ್ರಯದಲ್ಲಿ ‘ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ‘ ಸಪ್ಟಂಬರ ೨ ರಿಂದ ೧೪ರ ವರೆಗೆ ನಡೆಯಿತು . ಕನ್ನಡದ ಯಾವುದೇ ಪರಿಜ್ಞಾನ ಇಲ್ಲದ ಯುರೋಪಿಯನ್ನರಿಗೆ ಪ್ರಾಥಮಿಕ ಹಂತದಲ್ಲಿ ಕನ್ನಡವನ್ನು ಮಾತನಾಡಲು , ಓದಲು ಮತ್ತು ಬರೆಯಲು ಕಲಿಸುವ ಎರಡು ವಾರಗಳ ತೀವ್ರ ಕಲಿಕೆಯ ಈ ಶಿಬಿರದಲ್ಲಿ ನಾನು ಮತ್ತು ಡಾ . ಕತ್ರಿನ್ ಬಿಂದರ್ ಅಧ್ಯಾಪಕರಾಗಿ ಕೆಲಸಮಾಡಿದೆವು . ಸಾರಾ ಮೆರ್ಕ್ಲೆ ಶಿಬಿರಾರ್ಥಿಗಳಿಗೆ ಕನ್ನಡದ ಅಕ್ಷರಾಭ್ಯಾಸದ ಜೊತೆಗೆ , ನಾವು ಮಾಡಿದ ಪಾಠಗಳಿಗೆ ಸಂಬಂಧಿಸಿದಂತೆ ಪೂರಕ ವ್ಯಾಸಂಗದ ಅಭ್ಯಾಸಮಾಡಿಸಿದರು . ಪ್ರೊ . ಹೈದ್ರೂನ್ ಬ್ರೂಕ್ನರ್ ಅವರು ಕರ್ನಾಟಕದ ಇತಿಹಾಸ , ಸಂಸ್ಕೃತಿ , ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಜರ್ಮನ್ ಭಾಷೆಯಲ್ಲಿ ಉಪನ್ಯಾಸಗಳನ್ನು ಕೊಟ್ಟರು .
ಕನ್ನಡವನ್ನು ಕನ್ನಡೇತರರಿಗೆ ಕಲಿಸಲು ಕನ್ನಡ ಮತ್ತು ಇಂಗ್ಲಿಶ್ ನಲ್ಲಿ ಸಾಕಷ್ಟು ಪುಸ್ತಕಗಳು ಇದ್ದರೂ ಪ್ರಾಯೋಗಿಕವಾಗಿ ಇಂತಹ ಎರಡು ವಾರಗಳ ತೀವ್ರ ಕಲಿಕೆಗೆ ಅವು ಸಹಕಾರಿ ಆಗಿಲ್ಲ. ಹಾಗಾಗಿ ನಾವೇ ಒಂದು ಪ್ರತ್ಯೇಕ ಕೈಪಿಡಿಯನ್ನು ಸಿದ್ಧಪಡಿಸಿ , ಕಳೆದ ಎರಡು ಶಿಬಿರಗಳಿಂದ ಬಳಸುತ್ತಿದ್ದೇವೆ . ಇದರಲ್ಲಿ ಪರಸ್ಪರ ಭೇಟಿಯ ಮೊದಲ ಮಾತುಗಳಿಂದ ತೊಡಗಿ , ಸೌಜನ್ಯದ ನುಡಿಗಳ ಪರಿಚಯ ಮಾಡಿಕೊಟ್ಟು , ಬಳಿಕ ದಿನಬಳಕೆಯ ಪದಗಳ ವಿಷಯಾನುಸಾರ ಪಟ್ಟಿಗಳ ಮೂಲಕ ಕನ್ನಡ ಪದಬಳಕೆಯ ಅಭ್ಯಾಸಮಾಡಿಸುತ್ತೇವೆ .

ಕನ್ನಡದ ಧ್ವನಿಮಾಗಳ ಪರಿಚಯ ಮಾಡಿಸಿ  ಉಚ್ಚಾರಣೆಯ ಅಭ್ಯಾಸದ ತರಬೇತಿಯನ್ನು ನಾನು ಕೊಡಿಸುತ್ತೇನೆ . ಸಾಮಾನ್ಯವಾಗಿ ಯುರೋಪಿಯನ್ನರಿಗೆ ಹೆಚ್ಚು ತೊಡಕಾಗುವುದು ಮೂರ್ಧನ್ಯ ಧ್ವನಿಮಾಗಳ ಉಚ್ಚಾರಣೆ .; ಟ ,ಡ , ಣ , ಳ ‘- ಇವುಗಳ ಉಚ್ಚಾರಣೆಯನ್ನು ದಂತ್ಯ ಧ್ವನಿಮಾಗಳಾದ ‘ತ ,ದ , ನ , ಲ ‘ ಗಳ ಜೊತೆಗೆ ಹೋಲಿಸಿ  ಅಭ್ಯಾಸಮಾಡಿಸಲಾಗುತ್ತದೆ . ಇದಕ್ಕಾಗಿ ಭಿನ್ನ ಅರ್ಥದ ಪದಗಳ ಜೋಡಿಗಳನ್ನು ಉದಾಹರಿಸಲಾಗುತ್ತದೆ : ಅಣ್ಣ ಮತ್ತು ಅನ್ನ .

ಕ್ರಿಯಾಪದಗಳ ಪಟ್ಟಿ ಒಂದು ಕಡೆ ಇರುತ್ತದೆ . ವಿಭಕ್ತಿ ಪ್ರತ್ಯಯಗಳ ಪ್ರಯೋಗಗಳ ಯಾದಿ ಜೊತೆಗೆ ಇರುತ್ತದೆ . ಹೀಗೆ ಪದಗಳ ಪರಿಚಯ , ವಿಭಕ್ತಿ ಪ್ರತ್ಯಯಗಳ ಬಳಕೆಯ ಕ್ರಮಗಳನ್ನು ಅರಿತುಕೊಂಡು , ಸರಳ ವಾಕ್ಯಗಳನ್ನು ರಚಿಸಿ ಬಳಸಲು ಅಭ್ಯಾಸಮಾಡುತ್ತೇವೆ . ಬೇಕು , ಬೇಡ , ಸಾಕು , ಸಾಲಲ್ಲ, ಇಷ್ಟ , ಇಷ್ಟ ಇಲ್ಲ , ಗೊತ್ತು ಗೊತ್ತಿಲ್ಲ – ಇವುಗಳ ಬಳಕೆಯ ಮೂಲಕ ಕನ್ನಡವನ್ನು ಸರಳವಾಗಿ ಬಳಸಲು ಅಭ್ಯಾಸಮಾಡಿಸಲಾಗುತ್ತದೆ .ವಿಭಕ್ತಿ ಪ್ರತ್ಯಯಗಳನ್ನು  ಷಷ್ಠೀ , ಚತುರ್ಥಿ , ದ್ವಿತೀಯಾ , ಸಪ್ತಮಿ ಮತ್ತು ತೃತೀಯ ಹಾಗೂ ಪಂಚಮೀ – ಈ ಅನುಕ್ರಮಣಿಕೆಯಲ್ಲಿ ಹಂತಹಂತವಾಗಿ ಪರಿಚಯ ಮಾಡಿಕೊಡುವ ಮೂಲಕ ಯಾವುದೇ ರೀತಿಯ ವಾಕ್ಯಗಳನ್ನು ರಚಿಸಲು ಸಾಧ್ಯವಾಗುವ ತರಬೇತಿ ಕೊಡಲಾಗುತ್ತದೆ . ಮುಂದೆ ವಿಧ್ಯರ್ಥಕ , ಉತ್ತೇಜಕ ಮತ್ತು ಅನುಮೋದನೆಯ ವಾಕ್ಯಗಳ ರಚನೆಯ ಪ್ರಯೋಗ ನಡೆಯುತ್ತದೆ . ಬಳಿಕದ ಹಂತ -ವರ್ತಮಾನ ಕಾಲದ ‘ ಇರ್ ‘ ಮತ್ತು ‘ ಇದ್ ‘ ಗಳ ಪ್ರಯೋಗ . ಮುಂದೆ ವರ್ತಮಾನ ಕಾಲ, ಭವಿಷ್ಯತ್ ಕಾಲ ಮತ್ತು ಭೂತಕಾಲಗಳ ರಚನೆ ಮತ್ತು ಪ್ರಯೋಗವನ್ನು ಬಹತೇಕ ಎಲ್ಲ ದಿನಬಳಕೆಯ ಕ್ರಿಯಾ ಧಾತುಗಳನ್ನು ಬಳಸಿ ಪ್ರಯೋಗಿಸಲು ಅಭ್ಯಾಸಮಾಡಿಸಲಾಗುತ್ತದೆ . ಕೊನೆಗೆ ಭೂತ ಕೃದಂತದ ಪ್ರಯೋಗವನ್ನೂ ಕಲಿಸಲಾಗುತ್ತದೆ .
ಎರಡು ವಾರಗಳ ( ಭಾನುವಾರಗಳನ್ನು ಹೊರತು ಪಡಿಸಿ ) ಈ ಶಿಬಿರದ ಆರಂಭದ ದಿನದಿಂದಲೇ ಕನ್ನಡ ವರ್ಣಮಾಲೆಯ ಪರಿಚಯ ಮತ್ತು ಬಳಕೆಯ ಕ್ರಮಗಳನ್ನು ಬೇರೆ ಬೇರೆ ರೀತಿಗಳಲ್ಲಿ ಹೇಳಿಕೊಡಲಾಗುತ್ತದೆ . ಆದ್ದರಿಂದ ಕನ್ನಡ ವ್ಯಾಕರಣ ,ಪದಕೋಶ , ವಾಕ್ಯರಚನೆ ಮತ್ತು ಆಡು ಮಾತು – ಈ ಎಲ್ಲವನ್ನೂ ಜೊತೆ ಜೊತೆಗೆ ಕಲಿಸಲಾಗುತ್ತದೆ . ಹಾಗಾಗಿ ನಮ್ಮ ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳು ಕನ್ನಡವನ್ನು ಮಾತಾಡಲು ಓದಲು ಮತ್ತು ಬರೆಯಲು ಕಲಿತುಕೊಳ್ಳುತ್ತಾರೆ .

ನಮ್ಮ ಕನ್ನಡ ಶಿಬಿರದಲ್ಲಿ ವಿದ್ಯಾರ್ಥಿಗಳ ಕಲಿಯುವಿಕೆಯನ್ನು ಸೂಕ್ಷ್ಮಗೊಳಿಸಲು ಮತ್ತು ಅದನ್ನು ನಿರಂತರವಾಗಿ ಗ್ರಹಿಸಿಕೊಂಡು  ನಮ್ಮ ಕಲಿಸುವಿಕೆಯ ಕ್ರಮಗಳನ್ನು ದಿನದಿನ ರೂಪಿಸಿಕೊಳ್ಳಲು ನಾವು ನಮ್ಮದೇ ಆದ ಒಂದು ವಿಧಾನವನ್ನು  ಅನುಸರಿಸುತ್ತಿದ್ದೇವೆ . ಪ್ರತೀ ದಿನ ನಾವು ಮೂವರು ಅಧ್ಯಾಪಕರು ನಮ್ಮ ನಮ್ಮ  ತರಗತಿಗಳಲ್ಲಿ  ನಾವು  ಕಲಿಸಿದ್ದು ಮತ್ತು ಅದನ್ನು ವಿದ್ಯಾರ್ಥಿಗಳು ಗ್ರಹಿಸಿದ್ದು -ಇವನ್ನು ಕುರಿತು ಅಭಿಪ್ರಾಯಗಳನ್ನು  ನಮ್ಮ ತರಗತಿಗಳ ಬಳಿಕದ ಬಿಡುವಿನ ಹದಿನೈದು ನಿಮಿಷಗಳ ಸಮಯದಲ್ಲಿ ಒಟ್ಟಿಗೆ ಸೇರಿ ಹಂಚಿಕೊಳ್ಳುತ್ತೇವೆ  ಮತ್ತು ಅದಕ್ಕೆ ಅನುಗುಣವಾಗಿ ಮುಂದಿನ ನಮ್ಮ ತರಗತಿಯ ವಿಷಯ ಹಾಗೂ ಅಭ್ಯಾಸದ ಕ್ರಮವನ್ನು ಹೊಸತಾಗಿಯೇ ರೂಪಿಸಿಕೊಳ್ಳುತ್ತೇವೆ . ಹೀಗೆ ಪ್ರತೀದಿನ ಮೂರು ಬಾರಿ ನಾವು ಒಟ್ಟಾಗಿ ಸಮಾಲೋಚನೆ ನಡೆಸುತ್ತೇವೆ . ಹಾಗೆಯೇ ಹಿಂದಿನ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಕೊಟ್ಟ ಪ್ರತಿಕ್ರಿಯೆಗಳನ್ನು ಗಮನಿಸಿಕೊಂಡು ನಮ್ಮ ಕಲಿಸುವುಕೆಯ ಕ್ರಮಗಳನ್ನು ಬದಲಾಯಿಸಿಕೊಳ್ಳುತ್ತೇವೆ .
ಎರಡನೆಯ ವಾರದ ಕೊನೆಯಲ್ಲಿ ಅಭ್ಯರ್ಥಿಗಳ ಕನ್ನಡ ಕಲಿಕೆಯ ಮಟ್ಟವನ್ನು ಲವಲವಿಕೆಯ ಸರಳ ವಿಧಾನಗಳಿಂದ ಅಳೆಯಲಾಗುತ್ತದೆ . ಇಬ್ಬರು ವಿಧ್ಯಾರ್ಥಿಗಳು ಸಂತೆಯಲ್ಲಿ ,ಅಂಗಡಿಯಲ್ಲಿ , ಹೋಟೆಲಿನಲ್ಲಿ ವ್ಯಾವಹಾರಿಕ ರೂಪದಲ್ಲಿ ಮಾತುಕತೆ ಆಡುವ ಸ್ವಾರಸ್ಯಕರ ಪ್ರಸಂಗಗಳನ್ನು ಅವರೇ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ . ಅವರ ಓದುವ ಅಭ್ಯಾಸದ ಮೌಲ್ಯಮಾಪನಕ್ಕೆ ಒಂದು ಚಿಕ್ಕ ಕತೆಯನ್ನು ಕೊಟ್ಟು ,ಅದನ್ನು ಓದಿ ಅದರ ಅರ್ಥ ವಿವರಿಸಲು ಹೇಳಲಾಗುತ್ತದೆ . ಬರವಣಿಗೆಯ ಕೌಶಲವನ್ನು ಪರಿಶೀಲಿಸಲು , ಅವರು ಕರಿಹಲಗೆಯಲ್ಲಿ ಕನ್ನಡ ಪದಗಳನ್ನು ಮತ್ತು ಬೇರೆ ಬೇರೆ ಕಾಲಸೂಚಕ ಕನ್ನಡ ವಾಕ್ಯಗಳನ್ನು ಬರೆದು ತೋರಿಸಲು ಸೂಚಿಸಲಾಗುತ್ತದೆ . ತುಂಬಾ ಉತ್ಸಾಹ ಮತ್ತು ಲವಲವಿಕೆಯಿಂದ ನಮ್ಮ ವಿದ್ಯಾರ್ಥಿಗಳು ಈ ಎಲ್ಲ ಪರೀಕ್ಷೆಗಳನ್ನು ಚೆನ್ನಾಗಿ ನಿರ್ವಹಿಸಿದರು .
ಅಂತಹ ಕನ್ನಡ ಕಲಿಕೆಯ ತರಗತಿಯ ಒಳಗಿನ ಬಹುಬಗೆಯ ಚಿತ್ರಗಳು ಇಲ್ಲಿವೆ .
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ .

Read Full Post | Make a Comment ( None so far )

STRAMU Wurzburg ಬೀದಿ ಬೀದಿಗಳಲ್ಲಿ ಹಾಡು ,ಆಟ , ಕುಣಿತ ,ಕತೆ ,ಇಂದ್ರಜಾಲ

Posted on ಸೆಪ್ಟೆಂಬರ್ 8, 2013. Filed under: ಜರ್ಮನಿ, ರಂಗಭೂಮಿ, ವ್ಯೂರ್ತ್ಸ್ ಬುರ್ಗ್, Street Arts, Street Music, Wurzburg |

ಜರ್ಮನಿಯ ವ್ಯೂರ್ತ್ಸ್ ಬುರ್ಗ್ ನಗರದಲ್ಲಿ ಕಳೆದ ಮೂರು ದಿನಗಳಿಂದ ( ಸಪ್ಟಂಬರ ೬ , ೭ , ೮ -೨೦೧೩ ) ಬೀದಿ ಬೀದಿಗಳಲ್ಲಿ ಓಣಿ ಓಣಿಗಳಲ್ಲಿ ಜಾತ್ರೆಯ ಸಡಗರ . ಎಲ್ಲಿ ನೋಡಿದರೂ ಹಾಡು ,ಮ್ಯಾಜಿಕ್ , ಬೆಂಕಿಯ ಆಟ , ಕತ್ತಿ ಕಾಳಗ , ಕುಣಿತ , ಕತೆ ಹೇಳುವುದು -ಹೀಗೆ ಬಗೆ ಬಗೆಯ ಬೀದಿ ಸಂಗೀತ ಮತ್ತು ಬೀದಿ ಕಲೆಗಳ ಪ್ರದರ್ಶನ . ಎಲ್ಲಿ ಒಳ ನುಗ್ಗಲು ನೋಡಿದರೂ ಕಾಲಿಡಲು ತೆರಪಿಲ್ಲ . ಅದು ಸ್ತ್ರಾಮು :ಅಂತಾರಾಷ್ಟ್ರೀಯ ವಾರ್ಷಿಕ ಬೀದಿ ಉತ್ಸವ .
ವ್ಯೂರ್ತ್ಸ್ ಬುರ್ಗ್ ನ ಈ ಅಂತಾರಾಷ್ಟ್ರೀಯ ಬೀದಿ ಕಲಾ ಉತ್ಸವಕ್ಕೆ ಈಗ ದಶಮಾನೋತ್ಸವದ ಸಂಭ್ರಮ . ಹಾಗಾಗಿ ಈ ವರ್ಷ ಕಲಾವಿದರೂ ಜಾಸ್ತಿ ,ಪ್ರೇಕ್ಷಕರು ಅಪರಿಮಿತ . ೨೦೦೪ ರಲ್ಲಿ ಆರಂಭವಾದ ಈ ಬೀದಿ ಕಲೋತ್ಸವ ಈಗ ಯುರೋಪಿನಲ್ಲೇ ಅತ್ಯಂತ ಬೃಹತ್ ಪ್ರಮಾಣದ್ದು ಎಂದು ಜನಪ್ರಿಯ ಆಗಿದೆ . ಕಳೆದ ವರ್ಷದ ದಾಖಲೆಯಂತೆ ಎಂಬತ್ತು ಸಾವಿರಕ್ಕೂ ಹೆಚ್ಚು ಜನರು ಈ ಉತ್ಸವವನ್ನು ಕಾಣಲು ಯೂರೋಪಿನ ಬೇರೆ ಬೇರೆ ಭಾಗಗಳಿಂದ ಬಂದಿದ್ದಾರೆ . ಇಪ್ಪತ್ತೆರಡು ಸ್ಥಳಗಳಲ್ಲಿ ನಾಲ್ಕು ನೂರು ಕಲಾವಿದರು ಮೂರು ದಿನಗಳ ಕಾಲ ಕಲಾ ಪ್ರದರ್ಶನಗಳನ್ನು ಕೊಡುತ್ತಾರೆ .
ಆದರೆ ಈ ಯಾವುದೇ ಪ್ರದರ್ಶನಕ್ಕೂ ಸ್ಟೇಜ್ ಇರುವುದಿಲ್ಲ . ಪ್ರದರ್ಶನಗಳು ಮುಖ್ಯ ಬೀದಿಗಳಲ್ಲಿ ಆಗಲೀ ,ವಿಶಾಲ ಬಯಲುಗಳಲ್ಲಿ ಆಗಲೀ ನಡೆಯುವುದಿಲ್ಲ . ಈ ಎಲ್ಲ ಪ್ರದರ್ಶನಗಳು ನಡೆಯುವುದು ಅಗಲ ಕಿರಿದಾದ ಓಣಿಗಳಲ್ಲಿ ,ಗಲ್ಲಿಗಳಲ್ಲಿ ಮತ್ತು ಬೀದಿ ಬದಿಯ ಸಣ್ಣ ಖಾಲಿ ಜಾಗಗಳಲ್ಲಿ . ಎಲ್ಲ ಬಗೆಯ ಸಂಗೀತಗಳು ಹಾಡುಗಳು , ಕುಣಿತಗಳು , ಕತ್ತಿ ಕಾಳಗ , ಬೆಂಕಿಯ ಜೊತೆಗೆ ಸಾಹಸ ಪ್ರದರ್ಶನ , ಬಗೆ ಬಗೆಯ ಮ್ಯಾಜಿಕ್ , ಸಾರ್ವಜನಿಕವಾಗಿ ಕತೆ ಹೇಳುವುದು , ಬೀದಿ ನಾಟಕಗಳು – ಹೀಗೆ ಬೀದಿ ಕಲೆಗಳ ಪುನರುಜ್ಜೀವನಕ್ಕೆ ಈ ಉತ್ಸವ ಚಾಲನೆಯನ್ನು ಕೊಟ್ಟಿದೆ . ಕೇಳುಗರು ಮತ್ತು ನೋಡುಗರು ಗುಂಪಿನಲ್ಲಿ ಗಂಟೆಗಟ್ಟಲೆ ಹೊತ್ತು ನಿಂತುಕೊಂಡೇ ಪ್ರದರ್ಶನಗಳನ್ನು ನೋಡಿ ಕೇಳಿ ಆನಂದಿಸುತ್ತಾರೆ . ಯಾವುದೇ ಟಿಕೆಟ್ ,ಶುಲ್ಕ ಇಲ್ಲ. ಎಲ್ಲವೂ ಉಚಿತ . ನಗರದ ಪುರಸಭೆಯು ಈ ಬೀದಿ ಉತ್ಸವದ ನಿರ್ವಹಣೆಯ ಜವಾಬ್ದಾರಿಯನ್ನು ಸಮರ್ಥವಾಗಿ ನೋಡಿಕೊಳ್ಳುತ್ತದೆ .
ನಿನ್ನೆಯ ದಿನ – ಸಪ್ಟಂಬರ ೭ – ನಾನು ನಾಲ್ಕು ಗಂಟೆಗಳ ಈ ಬೀದಿ ಉತ್ಸವದಲ್ಲಿ ಸುತ್ತಾಡಿ , ನನಗೆ ಸಾಧ್ಯವಾದಷ್ಟು ತೆಗೆದ ಫೋಟೋಗಳನ್ನು ಇಲ್ಲಿ ಕೊಟ್ಟಿದ್ದೇನೆ .

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ .

Read Full Post | Make a Comment ( None so far )

ರಾತ್ಸ್ ಕೆಲ್ಲರ್ ರೆಸ್ಟೋರೆಂಟ್ ,ವ್ಯೂರ್ತ್ಸ್ ಬುರ್ಗ್ -ಕಲೆಯ ಬಲೆಯ ನಡುವೆ

Posted on ಫೆಬ್ರವರಿ 16, 2012. Filed under: ಜರ್ಮನಿ, ವ್ಯೂರ್ತ್ಸ್ ಬುರ್ಗ್, Wurzburg | ಟ್ಯಾಗ್ ಗಳು:, , |

ಜರ್ಮನಿಯ ವ್ಯೂರ್ತ್ಸ್ ಬುರ್ಗ್ ನಗರದ ರಾತ್ಸ್ ಕೆಲ್ಲರ್ ರೆಸ್ಟೋರೆಂಟ್ ಗೆ ಒಂದು ಪರಂಪರೆ ಇದೆ.ನಗರಸಭೆಯ ಗಣ್ಯರು ಸಭೆಗಳ ಬಳಿಕ ಭೋಜನಕ್ಕೆ ತೆರಳುತ್ತಿದ್ದ ನಗರಸಭೆಯ ಕಟ್ಟಡದಲ್ಲಿನ ಆಹಾರದ ಮನೆ ಇದು.ಈಗ ಇದನ್ನು ಮತ್ತೆ ನಗರದ ಪರಂಪರೆಗೆ ಅನುಗುಣವಾಗಿ ಸುಸಜ್ಜಿತಗೊಳಿಸಲಾಗಿದೆ.ಈ ರೆಸ್ಟೋರೆಂಟ್ ನ ಗೋಡೆಗಳು ಈಗ ನಗರದ ಹೆಮ್ಮೆಯ ಜನರಿಂದ ಜೀವ ತಳೆದಿವೆ.ಈ ಪಟ್ಟಣದಲ್ಲಿ ಜನಿಸಿದ, ವಾಸವಾಗಿದ್ದ ಕವಿಗಳು ,ಸಾಹಿತಿಗಳು, ಕಲಾವಿದರು.,ವಿಜ್ಞಾನಿಗಳು,ವಾಸ್ತುಶಿಲ್ಪಿಗಳು ಇವರ ರೇಖಾಚಿತ್ರಗಳನ್ನು ಮತ್ತು ಅವರ ಕಾಲ ಹಾಗೂ ಸಾಧನೆಗಳ ಪರಿಚಯಗಳನ್ನು ಗೋಡೆಗಳಲ್ಲಿ ಬರೆಯಲಾಗಿದೆ.ರಾಜಕಾರಣಿಗಳು ಮತ್ತು ಧಾರ್ಮಿಕ ವ್ಯಕ್ತಿಗಳು ಇಲ್ಲಿ ಅವಕಾಶ ಪಡೆದಿಲ್ಲ.ಊಟ ಮಾಡಲು ಬರುವ ನಾಗರಿಕರಿಗೆ ,ಹೊರ ಊರಿನವರಿಗೆ ಈ ಪುಟ್ಟ ನಗರದ ಹಿರಿಯರ ಸಾಧನೆಗಳು ಗೋಡೆಗಳಲ್ಲಿ ತೆರೆದುಕೊಳ್ಳುತ್ತವೆ.
ನಾನು ಕಳೆದ ವಾರ ಫೆಬ್ರವರಿ ಆರರಂದು ರಾತ್ಸ್ ಕೆಲ್ಲರ್ ಗೆ ಭೇಟಿ ಕೊಟ್ಟಾಗ ತೆಗೆದ ಕೆಲವು ಚಿತ್ರಗಳು ಇಲ್ಲಿವೆ.ಅವುಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.

Read Full Post | Make a Comment ( 1 so far )

ಮಾಯಿನ್ ನದಿಯ ತೀರದಲ್ಲಿ ಬಾಟಲಿ ಹೆಕ್ಕುವ ಎಮ್ಲಿನ್

Posted on ಫೆಬ್ರವರಿ 5, 2012. Filed under: ಜರ್ಮನಿ, ವ್ಯೂರ್ತ್ಸ್ ಬುರ್ಗ್, Main river, Wurzburg | ಟ್ಯಾಗ್ ಗಳು:, , , , |

ವ್ಯೂರ್ತ್ಸ್ ಬುರ್ಗ್ ನಗರದ ನಡುವೆ ಹರಿಯುವ ಮಾಯಿನ್ ನದಿಯ ದಂಡೆಯಲ್ಲಿ ವಿಹಾರಕ್ಕೆ ನಡೆದಾಡುವುದು ಕಳೆದ ಸುಮಾರು ಎರಡು ವರ್ಷಗಳಿಂದ ನನಗೆ ನೆಚ್ಚಿನ ಹವ್ಯಾಸ. ಹವೆ ಚೆನ್ನಾಗಿದ್ದರೆ ಸಂಜೆ ಆಯಿತೆಂದರೆ ಮಕ್ಕಳಿಂದ ತೊಡಗಿ  ಮುದುಕರ ವರೆಗೆ ಎಲ್ಲ ವಯಸ್ಸು ವರ್ಗ ಅಭಿರುಚಿಯವರು ಅಲ್ಲಿ ಸುತ್ತಾಡುತ್ತಾರೆ. ಮಾಯಿನ್ ನದಿಗೆ ಅಡ್ಡಲಾಗಿ ಇರುವ ,ನಗರದ ಎರಡು ಪಕ್ಕಗಳನ್ನು ಜೋಡಿಸುವ ಐದು ಸೇತುವೆಗಳು ಇವೆ  . ಇವುಗಳಲ್ಲಿ ಅತಿ ಹಳೆಯದು ಮತ್ತು ಪ್ರವಾಸಿಗಳ ಆಕರ್ಷಣೆಯದ್ದು -‘ ಹಳೆಯ ಮಾಯಿನ್ ಸೇತುವೆ’ ( Alte Main Brucke ).  ಅದರ ಬಳಿಕ  ಮುಂದೆ ಇರುವ ಇನ್ನೊಂದು ಸೇತುವೆ -‘ ಶಾಂತಿ  ಸೇತುವೆ ‘ ( Friedensbrucke ).  ಈ ‘ಹಳೆ ಮಾಯಿನ್ ಸೇತುವೆ ‘ ಮತ್ತು ‘ಶಾಂತಿ ಸೇತುವೆ’ಗಳ ನಡುವಿನ ಮಾಯಿನ್ ನದಿ ದಂಡೆಯ ಪ್ರದೇಶ ,ಅಗಲ ಕಿರಿದಾದ ಮತ್ತು ಸಣ್ಣ  ಪಾರ್ಕ್ ರೀತಿಯ ವಿಹಾರ ತಾಣ. ಇದರಲ್ಲಿ’ Mainkai ‘ ಮತ್ತು  ‘Kranenkai’ ಸೇರಿವೆ. ಜರ್ಮನ್ ಭಾಷೆಯಲ್ಲಿ  ‘Kai’ ಅಂದರೆ ನದಿಯ ಬದಿಯಲ್ಲಿ ಕಲ್ಲಿನಿಂದ ನಿರ್ಮಿಸಿದ ದಂಡೆ.  ‘ Kranen’ ಅಂದರೆ ‘ಕ್ರೇನ್’. ಇಲ್ಲಿ ವಿಹಾರದ ಸಣ್ಣ ಹಡಗುಗಳು ಬಂದು ತಂಗುತ್ತವೆ .ಇದರ ಪಕ್ಕದಲ್ಲಿ ಹಳೆಯ ಕ್ರೇನ್ ಒಂದರ ಅವಶೇಷ ಇದೆ. ಈ ದಂಡೆಯನ್ನು ‘ಮಾಯಿನ್ -ಕ್ರೇನ್ ದಂಡೆ’ಎಂದು ಕರೆಯಬಹುದು.

ಈ ಮಾಯಿನ್-ಕ್ರೇನ್ ದಂಡೆಯ ಬದಿಯಲ್ಲಿ ಕುಳಿತುಕೊಳ್ಳಲು  ಕೆಲವು ಬೆಂಚುಗಳು ಇವೆ. ಸಂಜೆಯ ವೇಳೆಗೆ ಇಲ್ಲಿಗೆ ಬರುವವರಲ್ಲಿ ಯುವಕ ಯುವತಿಯರ ಸಂಖ್ಯೆ ಜಾಸ್ತಿ. ಕೆಲವು ಮುದುಕರು ಮಧ್ಯ ವಯಸ್ಕರು ಏಕಾಂಗಿಗಳು ಬಂದು ಕುಳಿತು ಕೊಳ್ಳುವುದುಂಟು. ಇಲ್ಲಿಗೆ ಬರುವ ಬಹಳ ಮಂದಿ ವಿರಾಮವಾಗಿ ಕುಳಿತುಕೊಂಡು ಬಾಟಲಿಗಳಿಂದ ಬೀರ್ ಕುಡಿಯುತ್ತಾರೆ. ಬೀರ್ ಬಾಟಲಿಗಳ ದೊಡ್ಡ ಕೇಸ್ ಗಳನ್ನು ಹೊತ್ತುಕೊಂಡು ತಂದು ಬೀರ್ ಕುಡಿಯುತ್ತಾ ಹೊತ್ತು ಕಳೆಯುತ್ತಾರೆ. ಮೋಜಿಗಾಗಿ,ಚಟಕ್ಕಾಗಿ ,ನೋವು ಮರೆಯಲು,ಏಕಾಂಗಿಯಾಗಿ ಧ್ಯಾನಿಸಲು- ಹೀಗೆ ಹತ್ತು ಹಲವು ಬಗೆಯ ಪ್ರವೃತ್ತಿಯವರು ಇಲ್ಲಿ ಸೇರಿದಾಗ ಬೀರ್ ಬಾಟಲಿಗಳ ಕಣಕಣ ಸದ್ದು ಅತ್ತಲಿಂದ ಇತ್ತಲಿಂದ ರಿಂಗಣಿಸುತ್ತಿರುತ್ತದೆ  .ಇಲ್ಲಿಗೆ ಬರುವ ಇನ್ನೊಂದು ವರ್ಗವೆಂದರೆ -ಈ ಬೀರ್ ಬಾಟಲಿಗಳನ್ನು ಹೆಕ್ಕುವವರು. ಹರಕು ಬಟ್ಟೆಯ ,ಮಾಸಿದ ದೇಹದ ,ಜೋಳಿಗೆ ಚೀಲ ಹೊತ್ತ ನಡುವಯಸ್ಸಿನ ಮತ್ತು ವಯಸ್ಸು ಮೀರಿದ ಜನ – ಅವರೇ ಬಾಟಲಿ ಹೆಕ್ಕುವ ಮಂದಿ.

ಬಹಳ ದಿನಗಳಿಂದ ಇಲ್ಲಿ ನಾನು ಕಾಣುತ್ತಿರುವ ಒಬ್ಬಳು ಹೆಂಗಸು ಎಮ್ಲಿನ್.  ಅವಳ ಪೂರ್ಣ ಹೆಸರು ಎಮ್ಮಲಿನ್ . ಅವಳಿಗೆ ಸುಮಾರು ಎಪ್ಪತ್ತು ವರ್ಷ ದಾಟಿರಬಹುದು.ಮುಖದ ಮೇಲಿನ ನೆರಿಗೆಗಳು ,ಎಳೆದುಕೊಂಡು ಹೋಗುವ ಕಾಲುಗಳು,ಬಾಗಿದ ಬೆನ್ನು -ಹೇಳುತ್ತಿವೆ  ವಯಸ್ಸು ಇನ್ನೂ ಸ್ವಲ್ಪ ಜಾಸ್ತಿ ಆಗಿರಬಹುದು ಎಂದು. ಎಮ್ಲಿನ್ ಆಸೆಗಣ್ಣುಗಳಿಂದ ನೋಡುವುದು ಬಾಟಲಿಗಳನ್ನು ಎತ್ತಿ ಎತ್ತಿ  ಬೀರ್ ಕುಡಿಯುವ ಬೀರ್ ಬಲರನ್ನು. ಆದರೆ ಬೀರ್ ಕುಡಿಯುವ ಆಸೆ ಅವಳಿಗೆ ಇಲ್ಲವೇ ಇಲ್ಲ.  ಅವಳದ್ದು ಬೀರಿನ ಖಾಲಿ ಬಾಟಲಿ ಪಡೆಯುವ ಕಾತರ. ತನ್ನ ಹಾಗೆ ಖಾಲಿ ಬಾಟಲಿ ಹೆಕ್ಕುವ ಬೇರೆ ಮಂದಿ ಬರುವ ಮೊದಲೇ ಅದನ್ನು ಬಾಚಿಕೊಳ್ಳುವ  ತವಕ ತಲ್ಲಣ. ಎಮ್ಲಿನ್  ತರುಣ ತರುಣಿಯರ ಒಂದು ಗುಂಪಿನ ಬಳಿ ಹೋಗಿ ನಿಲ್ಲುತ್ತಾಳೆ. ಅವರ ಮಾತು ನಗು ಕೇಕೆ ಎಲ್ಲ  ಮಾಯಿನ್ ನದಿಯ ಅಲೆಗಳ ಜೊತೆಗೆ ತೇಲುತ್ತಿರುತ್ತದೆ. ‘ಕುಡಿದು ಆಯಿತೇ? ಬಾಟಲಿ ಇದೆಯೇ ? -‘ಎಮ್ಲಿನ್ ಳದು ಗಂಟಲಿನ ಒಳಗಿನಿಂದ ಹೊರಡುವ  ದೈನ್ಯದ ಕ್ಷೀಣ ದ್ವನಿ. ಅವರಲ್ಲಿ ಯಾವಳೋ ಒಬ್ಬಳು ಕೇಳಿಸಿಕೊಳ್ಳುತ್ತಾಳೆ. ನಾಲ್ಕೋ ಐದೋ ಬಾಟಲಿ ಕೆಳಗೆ ಬಿದ್ದಿವೆ.ಅದನ್ನು ತೋರಿಸಿ ‘ಯಾ ‘ಎನ್ನುತ್ತಾಳೆ. ಎಮ್ಲಿನ್ ಳ ಕಣ್ಣಲ್ಲಿ ಸಂಜೆಯ ಸೂರ್ಯನ ಕಿರಣದ ಹೊಳಪು. ಬಾಗಿ ಕುಳಿತುಕೊಂಡು ಆ ಖಾಲಿ ಬಾಟಲಿಗಳನ್ನು ಆತುರ ಆತುರವಾಗಿ ಹೆಕ್ಕಿಕೊಂಡು ತನ್ನ ಗೋಣಿ ಚೀಲದಲ್ಲಿ ತುಂಬಿಸುತ್ತಾಳೆ. ಅಲ್ಲಿಂದ ಮುಂದೆ ಹೋದರೆ ಅಲ್ಲಿ ಬೆಂಚಿನಲ್ಲಿ ಒಬ್ಬನೇ  ಕುಳಿತುಕೊಂಡವನೊಬ್ಬ ಬೀರ್ ಬಾಟಲಿಗಳ ರಾಶಿ ಹಾಕಿಕೊಂಡು ,ಕಿವಿಗೆ ಇಯರ್ ಫೋನ್ ಅಂಟಿಸಿಕೊಂಡು ,ತಲೆ ಅಲ್ಲಾಡಿಸುತ್ತಾ   ಬೀರ್ ಬಾಟಲಿಯನ್ನು ಮೇಲೆತ್ತಿಕೊಂಡು  ಕುಡಿಯುತ್ತಿದ್ದಾನೆ.ಎಮ್ಲಿನ್ ಅವನ ಹತ್ತಿರ ಹೋಗಿ ಖಾಲಿ ಬಾಟಲಿ ಇದೆಯೇ ಎಂದು ಕೇಳಿದರೆ ಅವನಿಗೆ ಕೇಳಿಸುವುದು ಅವನದ್ದೇ ಮಾಯಾ ಜಗತ್ತಿನ ಸಂಗೀತ.ಅಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಬಾಟಲಿಗಳನ್ನು ಹೆಕ್ಕೋಣವೆಂದರೆ ಆತ ಬಾಟಲಿಗಳಲ್ಲಿ ಅರ್ಧ ಕುಡಿದು,ಹಾಗೆಯೇ ಬಿಟ್ಟು ಮತ್ತೆ ಬೇರೆ ಬಾಟಲಿ ತೆರೆದು ,ಕುಡಿಯುತ್ತಿದ್ದ.ಅರ್ಧ ಕುಡಿದು  ಚೆಲ್ಲಿದ  ಬಾಟಲಿಗಳೇ  ಅಲ್ಲಿ ಸಾಕಷ್ಟು ಇದ್ದುವು. ಅವನ್ನು ಹೇಗೆ ಹೆಕ್ಕುವುದು? ಅವನನ್ನು ಕೇಳದೆ ಅವನ್ನು  ಮುಟ್ಟುವಂತಿಲ್ಲ.ಅವನೋ ಎಲ್ಲ ರೀತಿಯಲ್ಲೂ ಅರೆಪ್ರಜ್ಞಾವಸ್ಥೆಯಲ್ಲೇ  ಇದ್ದಾನೆ. ಕೊನೆಗೂ  ಎಮ್ಲಿನ್ ಳನ್ನು ನೋಡಿ ,ಬಾಟಲಿ ತೆಗೆದುಕೊಳ್ಳಲು ಹೇಳಿದ ; ಮತ್ತೆ ತನ್ನ ಕುಡಿತ ಮತ್ತು ಹಾಡಿನ ಗುಂಗಿನಲ್ಲಿ  ಮುಳುಗಿದ. ಎಮ್ಲಿನ್ ಅ ಬಾಟಲಿಗಳನ್ನು ಎತ್ತಿಕೊಂಡಳು.ಅವಳು ಕುಡಿತ ಬಿಟ್ಟು ವರ್ಷಗಳೇ ಸಂದಿವೆ. ಬಾಟಲಿಗಳಲ್ಲಿ ಅರ್ಧ ತುಂಬಿದ್ದ ಬೀರನ್ನು ಪಕ್ಕದಲ್ಲಿದ್ದ ಕಸದ ತೊಟ್ಟಿಗೆ ಚೆಲ್ಲಿದಳು. ಖಾಲಿ ಬಾಟಲಿಗಳನ್ನು ತನ್ನ ಗೋಣಿ ಚೀಲಕ್ಕೆ ತುಂಬಿದಳು.

ಅಷ್ಟರಲ್ಲಿ ಮೂವರು ಸುಂದರ ಯುವತಿಯರು  ಅಲ್ಲಿ ಕಾಣಿಸಿಕೊಂಡರು. ಎಲ್ಲರದ್ದು ಯುನಿಫಾರ್ಮ್ ಡ್ರೆಸ್. ಬಿಳಿ ಪ್ಯಾಂಟ್ ಮತ್ತು ಬಿಳಿ ಬನಿಯನ್. ಬನಿಯನಿನ ಎದೆಯಲ್ಲಿ JIM BEAM ಎಂಬ ಮುದ್ರೆಯ ಅಚ್ಚು ಇತ್ತು. ಎಲ್ಲರ ಹೆಗಲಿನಲ್ಲಿ ಕೆಂಪು ಬಣ್ಣದ ಒಂದೊಂದು  ಸಣ್ಣ ಬ್ಯಾಗ್ . ಎಮ್ಲಿನ್ ಳ ಮುಖ ಅರಳಿತು.ಈ ಯುವತಿಯರಿಂದ   ಕೆಲವಾದರೂ ಬಾಟಲಿ ಸಿಗಬಹುದು ಎನ್ನುವ ಬಯಕೆ ಅವಳದ್ದು. ಆ ಮೂವರು ಮಹಾಶ್ವೇತೆಯರು ಅಲ್ಲಿ ಕುಳಿತವರ ಬಳಿ ಹೋಗಿ ಏನೋ ಪಿಸುಗುಟ್ಟಿದರು. ಕೆಲವು ತರುಣರು ತಲೆ ಅಲ್ಲಾಡಿಸಿದರು. ಆಗ ಈ ತರುಣಿಯರು ತಮ್ಮ ಕೆಂಪು ಬ್ಯಾಗ್ ತೆರೆದು ಅದರಿಂದ ಬೀರ್ ನ  ಟಿನ್ ಗಳನ್ನು ತೆಗೆದುಕೊಟ್ಟರು. ಅವರಿಂದ ಹಣ ಪಡೆದರು.ಅವರು  ಟಿನ್  ಬೀರ್ ಕಂಪೆನಿಯ ಮಾರಾಟದ ಹುಡುಗಿಯರು. ಎಮ್ಲಿನ್ ನೋಡುತ್ತಾಳೆ – ಅವೆಲ್ಲ  ಬೀರ್ ನ ಟಿನ್ ಗಳು. ಅಲ್ಲಿ ಬಾಟಲಿ ಇಲ್ಲ . ಅವರು ಎಷ್ಟು ಬೀರ್ ಕುಡಿದರೂ ಅವಳಿಗೆ ಖಾಲಿ ಬಾಟಲಿ ಸಿಗುವುದಿಲ್ಲ. ಕಂಪೆನಿಯವರಿಗೆ ಭರ್ಜರಿ ವ್ಯಾಪಾರ .ಎಮ್ಲಿನ್ ಮುಖ ಕಂದಿತು. ಮಾಯಿನ್ ನದಿಯ ನೀರಿನಲ್ಲಿ ಬಾತುಕೋಳಿಯೊಂದು   ಒಂಟಿಯಾಗಿ ತೇಲುತ್ತಾ ಮುಳುಗುತ್ತಾ ಇತ್ತು. ಸೂರ್ಯ ಆಯಾಸಗೊಂಡು ಮನೆಗೆ ತೆರಳಿದ ಎನ್ನುವುದಕ್ಕೆ  ಸಾಕ್ಷಿಯಾಗಿ  ಮಾಯಿನ್ ನದಿಯ ಅಲೆಗಳು ಕೆಂಬಣ್ಣದ ತೆರೆ ಎಳೆದವು. ಎಮ್ಲಿನ್ ನಿದಾನವಾಗಿ ಬಾಟಲಿ ಹೊರೆ ಹೊರುತ್ತಾ ಅಲ್ಲಿಂದ ಹೊರಟಳು.ನಾನೂ ಅಲ್ಲಿಂದ ಹೊರಟೆ.

ಅತಿಥಿಗೃಹಕ್ಕೆ ಹೋಗುವ ಮೊದಲು ಕುಡಿಯುವ ನೀರು ಕೊಳ್ಳಲೆಂದು ನನ್ನ ಎಂದಿನ  ಸೂಪರ್ ಮಾರ್ಕೆಟ್ ‘ತೆಗುತ್ ‘ಗೆ ಹೋದರೆ, ಅಲ್ಲಿ  ಮತ್ತೆ ಎಮ್ಲಿನ್ ಇದ್ದಾಳೆ. ಖಾಲಿ ಬಾಟಲಿಗಳ ಗೋಣಿ ಚೀಲದ ಹೊರೆ ಹೊತ್ತುಕೊಂಡು ,ಖಾಲಿ ಬಾಟಲಿಗಳನ್ನು ತುಂಬಿಸುವ ಯಂತ್ರದ ಬಳಿಗೆ ಸಾಗುತಿದ್ದಾಳೆ.ಈ ದಿನದ ಅವಳ ಸಂಪಾದನೆಯ ಎಲ್ಲ ಖಾಲಿ ಬಾಟಲಿಗಳಿಗೆ ಎಷ್ಟು ಸಿಗಬಹುದು ಎಂದು ಲೆಕ್ಕಹಾಕುತ್ತಿದ್ದಾಳೆ.ಬಾಯಿಯಲ್ಲಿ ಮಣಮಣ ಕೇಳಿಸುತ್ತಿದೆ.ಬೀರಿನ ಒಂದು ಚಿಕ್ಕ ಬಾಟಲಿಗೆ ಹತ್ತು  ಸೆಂಟ್ಸ್ ಆದರೆ ,ಈ ದಿನ ಒಟ್ಟು ಎಷ್ಟು ಯೂರೋ ಎಷ್ಟು ಸೆಂಟ್ಸ್  ಸಿಗಬಹುದು ? ಆ  ಯಂತ್ರವನ್ನೇ ಕೇಳಬೇಕು. ಅವಳ ಪಾಲಿಗೆ ಅದೊಂದು ಕಾಮಧೇನು .  ಬಾಟಲಿ ನುಂಗುವ ಆ ಕಾಮಧೇನುವಿನ ಬಳಿಗೆ ಹೋದವಳೇ ಎಮ್ಲಿನ್ ,ಗೋಣಿಚೀಲದಿಂದ ಒಂದು ಬಾಟಲಿ ತೆಗೆದು ,ಅದರ ಬಾಯಿಯೊಳಗೆ ತುರುಕಿಸಿದಳು. ಅದಕ್ಕೆ ಅದು ಪಥ್ಯವಾಗಲಿಲ್ಲವೋ ಏನೋ ಹಾಗೆಯೇ   ಹೊರಕ್ಕೆ ಬಂತು.ಅವಳು ಆ ಬಾಟಲಿಯನ್ನು  ಮತ್ತೆ ಮತ್ತೆ ಒಳಕ್ಕೆ ತೂರಿದಳು . ಅದು ಮತ್ತೆ ಮತ್ತೆ ಹೊರಕ್ಕೆ ತಳ್ಳುತಿತ್ತು. ಅವಳು ಆತಂಕ ಉದ್ವೇಗದಿಂದ ತಲೆ ಎತ್ತಿ ಮೇಲೆ ನೋಡಿದರೆ ,ರಟ್ಟಿನ ತುಂಡಿನಲ್ಲಿ ಒಂದು ಬರಹ ನೇತಾಡುತ್ತಿತ್ತು-‘ ಈ ಯಂತ್ರ ಹಾಳಾಗಿದೆ.ನಾಳೆ ಬನ್ನಿ.’  ಆಗ ರಾತ್ರಿ ಗಂಟೆ ಎಂಟು. ಇಲ್ಲಿ ಎಲ್ಲ ಸೂಪರ್ ಮಾರ್ಕೆಟ್ ಗಳು ಮುಚ್ಚುವುದು ರಾತ್ರಿ ಎಂಟು ಗಂಟೆಗೆ.ಹಾಗಾಗಿ ಎಮ್ಲಿನ್ ಆ ಖಾಲಿ ಬಾಟಲಿಗಳ ಹೊರೆ ಹೊತ್ತುಕೊಂಡು ಬೇರೆ  ಸೂಪರ್ ಮಾರ್ಕೆಟ್ ಗಳಿಗೆ ಈಗ ಹೋಗುವ ಹಾಗಿಲ್ಲ.                                                          ಅಂದ ಹಾಗೆ ‘ ಎಮ್ಲಿನ್ ‘ ಅಥವಾ ‘ಎಮ್ಮಲಿನ್ ‘ ಎನ್ನವ ಹೆಸರಿಗೆ  ಜರ್ಮನ್ ಭಾಷೆಯಲ್ಲಿ ‘ಕೆಲಸ ‘ ಎಂದು ಅರ್ಥ.

Read Full Post | Make a Comment ( 1 so far )

ಮೈನಸ್ ಹತ್ತು ಡಿಗ್ರಿಯ ಚಳಿಯಲ್ಲಿ ಬೆಳಗುವ ಸೂರ್ಯನ ಜೊತೆಗೆ ಪಯಣ

Posted on ಫೆಬ್ರವರಿ 2, 2012. Filed under: ಜರ್ಮನಿ, ವ್ಯೂರ್ತ್ಸ್ ಬುರ್ಗ್, Main river, Wurzburg | ಟ್ಯಾಗ್ ಗಳು:, , , , |

ಜರ್ಮನಿಯಲ್ಲಿ ನಿಜವಾದ ಚಳಿಗಾಲ  ಈ ಬಾರಿ ಬಹಳ ತಡವಾಗಿ ಈಗತಾನೇ ಆರಂಭವಾಗಿದೆ.ಕಳೆದ ಎರಡು ಚಳಿಗಾಲಗಳನ್ನು ಹಿಮಗಾಲಗಳನ್ನಾಗಿ  ವ್ಯೂರ್ತ್ಸ್ ಬುರ್ಗ್ ನಲ್ಲಿ ಕಳೆದ ನನಗೆ ಎಲ್ಲೋ ಎರಡು ದಿನ ಮುಖ ತೋರಿಸಿ ಕಾಣದಂತೆ ಮಾಯವಾದ ಹಿಮದ ಆಸೆ ಹಿಮದಂತೆಯೇ ಕರಗಿ ಹೋಗಿದೆ.ಹಿಮದಲ್ಲಿ ಮುಳುಗಿ ‘ವೈಟ್ ಕ್ರಿಸ್ಮಸ್ ‘ ಆಚರಿಸುತ್ತಿದ್ದವರಿಗೆ ಆ ಸಂಭ್ರಮ ಈ ವರ್ಷ ಇರಲಿಲ್ಲ.ಕೇವಲ ಸೊನ್ನೆಯಿಂದ ಎಂಟು ಹತ್ತು ಡಿಗ್ರಿಯ ನಡುವೆ ತೊನೆದಾಡುತ್ತಿದ್ದ ಹವಾಮಾನ ಈ ವಾರ ಸರ್ರನೆ ಕೆಳಕ್ಕೆ ಜಾರುತ್ತಾ ,ನಿನ್ನೆ – ಬುಧವಾರ ಫೆಬ್ರವರಿ ಒಂದರಂದು ಮೈನಸ್ ಹತ್ತು ಡಿಗ್ರಿ ಗೆ ಇಳಿದಾಗ ಇಲ್ಲಿನ ಅನೇಕರಿಗೆ ಕೊನೆಗೂ ಸಮಾಧಾನವಾಯಿತು- ಕೊನೆಗೂ ಎರಡು ತಿಂಗಳು ತಡವಾಗಿಯಾದರೂ ನಿಜವಾದ ಚಳಿಗಾಲ ಬಂತಲ್ಲಾ ಎಂದು.ಚಳಿಗಾಲಕ್ಕಾಗಿ  ಅವರು ಕೊಂಡುಕೊಂಡಿದ್ದ ,ಅಡಿಯಿಂದ ಮುಡಿಯವರೆಗಿನ ಸಮಸ್ತ ವೇಷಭೂಷಣಗಳನ್ನು ಧರಿಸಲು ಕೊನೆಗೂ ಒಂದು ಸದವಕಾಶ  ದೊರೆಯಿತಲ್ಲಾ ಎನ್ನುವ ಸಂತೃಪ್ತಿ ಇಲ್ಲಿನವರಿಗೆ.

ನಾನು ನಿನ್ನೆ ಬೆಳಗ್ಗೆ ಎದ್ದು  ಸೂರ್ಯನು ಎಂದಿನಂತೆ ತಡವಾಗಿ ಏಳುವವರೆಗೆ  ಕಾದು, ನನ್ನ ಅತಿಥಿ ಗೃಹದ ಒಂಬತ್ತನೆಯ ಮಹಡಿಯ ಕಿಟಿಕಿಯಿಂದ ಹೊರಗೆ ನೋಡಿದರೆ ಆಶ್ಚರ್ಯ -ಪ್ರಜ್ವಲವಾಗಿ ಫಳಫಳನೆ ಹೊಳೆಯುವ ಸೂರ್ಯ.ಮತ್ತೊಮ್ಮೆ ಇಂಟರ್ನೆಟ್ ನಲ್ಲಿ ಇಲ್ಲಿನ ಸದ್ಯದ ಹವಾಮಾನ ನೋಡಿದರೆ ಮೈನಸ್ ಹತ್ತು ಡಿಗ್ರಿ ತೋರಿಸುತ್ತಿದೆ.ಯಾರನ್ನು ನಂಬುವುದು ಎನ್ನುವ ಗೊಂದಲ ನನಗೆ.ನಮ್ಮ ಊರಲ್ಲಿ ಹೀಗೆ ಸೂರ್ಯ ಉರಿಯುತ್ತಿದ್ದರೆ ಮೂವತ್ತು ಡಿಗ್ರಿ ಎಂದು ಯಾವುದೇ ಬೇರೆ ಪ್ರಮಾಣವಿಲ್ಲದೆ ಹೇಳುತ್ತಿದ್ದೆ.ಆದರೆ ಇಲ್ಲಿ , ಯುರೋಪಿನಲ್ಲಿ ಎಲ್ಲೇ ಆದರೂ ಹವಾಮಾನದ ಬಗ್ಗೆ ಏನನ್ನೂ ಖಚಿತವಾಗಿ ಹೇಳುವಂತಿಲ್ಲ. ‘ಯೂರೋಪಿನ ಹವಾಮಾನವನ್ನು ಮತ್ತು ಭಾರತದ ರಾಜಕೀಯವನ್ನು ಹೀಗೆಯೇ ಆಗುತ್ತದೆ ಎಂದು ಭವಿಷ್ಯ ಹೇಳುವ ಹಾಗಿಲ್ಲ’ ಎನ್ನುವ ಹೇಳಿಕೆ /ಜೋಕ್ ಕೇಳಿದ್ದೆ.ಅವು ಎರಡೂ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತವೆ ಎನ್ನುವುದು ಈಗ ನಾವು ಕಾಣುತ್ತಿರುವ ,ಅನುಭವಿಸುತ್ತಿರುವ ಸತ್ಯಸ್ಯ ಸತ್ಯ.

ನಿನ್ನೆ ದಿನ ಬೆಳಗ್ಗೆ ಎಂಟೂವರೆಗೆ ವಿಶ್ವವಿದ್ಯಾನಿಲಯಕ್ಕೆ ಹೋಗುವ ಮೊದಲು ನನ್ನ ವಾಸದ ಒಂಬತ್ತನೆಯ ಮಹಡಿಯ ಕಿಟಿಕಿಯಿಂದ  ಬೆಳಗುವ ಸೂರ್ಯನ ಕೆಲವು ಚಿತ್ರಗಳನ್ನು ಸೆರೆಹಿಡಿದೆ.ಅಂತಹ ಒಂದು ಚಿತ್ರ ಮೇಲಿನ  ಚಿತ್ರಸರಣಿಯಲ್ಲಿ ಮೊದಲನೆಯದು.ಮತ್ತೆ ಉಳಿದ ಎಲ್ಲ ಹದಿನೇಳು ಫೋಟೋಗಳು ನಿನ್ನೆ ಸಂಜೆ ನಾಲ್ಕರಿಂದ ಐದೂವರೆಯ ನಡುವೆ ಮಾಯಿನ್ ನದಿಯ ಸುತ್ತಮುತ್ತ ತೆಗೆದವು.ಮೊದಲನೆಯ ಸಾಲಿನ ಎರಡು ಮತ್ತು ಮೂರನೆಯ ಚಿತ್ರಗಳು ಆಗಲುತ್ತಿರುವ  ಸೂರ್ಯನ ಬಿಂಬಗಳು.ಎರಡನೆಯ ಸಾಲಿನ ಮೂರು ಚಿತ್ರಗಳು ಸೂರ್ಯ ನಿರ್ಗಮನದ ಮರುಕ್ಷಣದವು. ಮಾಯಿನ್ ನದಿಯ ಭೋರ್ಗರೆತದ  ಒಂದು ದೃಶ್ಯ ಕೂಡಾ ಇದೆ.ಮೂರನೆಯ ಸಾಲಿನ ಮೂರು ಚಿತ್ರಗಳು -ಮಾಯಿನ್ ನದಿಯ ನಡುವೆ ಇರುವ ಕಲ್ಲಿನ ದಂಡೆಯಲ್ಲಿ ಜುಳುಜುಳು ನೀರಿನ ನಡುವೆ ವಲಸೆ ಬಂದು ಕುಳಿತುಕೊಳ್ಳುವ ಹಕ್ಕಿಗಳ ಸಂಭ್ರಮದ್ದು. ಅವುಗಳಿಗೆ ಚಳಿಯ ಗೊಡವೆ ಇದ್ದಂತಿಲ್ಲ.ನಾಲ್ಕನೆಯ ಸಾಲಿನ ಮೂರು ಚಿತ್ರಗಳು- ಮಾಯಿನ್ ನದಿಯ ಇನ್ನೊಂದು ದಂಡೆಯಲ್ಲಿ ಇನ್ನೊಂದು ಗುಂಪಿನ ಹಕ್ಕಿಗಳ ಹಾರಾಟ ಮತ್ತು ತೇಲಾಟ.ಆದರೆ ಈ ಗುಂಪಿಗೆ ಸೇರದ ಮತ್ತೊಂದು  ಜಾತಿಯ ಹಕ್ಕಿ ತನ್ನ ಪಾಡಿಗೆ ,ಚಳಿ ಗಿಳಿಗಳ ಹಂಗು ಇಲ್ಲದೆ ಕೊರೆವ ತಣ್ಣನೆಯ ನೀರಿನ ಸುಖವನ್ನು ಅನುಭವಿಸುತ್ತಿರುವ ಚಿತ್ರ ಆ ಸಾಲಿನ ಕೊನೆಯದು.ಐದನೆಯ ಸಾಲಿನ ಮೂರು ಚಿತ್ರಗಳು- ಅರ್ಧಚಂದ್ರನ  ಶುಭ್ರ ನೋಟ.ನನಗೆ ಅನಿರೀಕ್ಷಿತವಾಗಿ ಕಂಡ ದೃಶ್ಯ ಅದು.ಸೂರ್ಯ ಕಣ್ಮರೆಯಾಗುತ್ತಿದ್ದಂತೆಯೇ  ಅತಿ ಶುಭ್ರ ಆಕಾಶದಲ್ಲಿ ಕಾಣಿಸಿಕೊಂಡ ಬಾಲಚಂದ್ರನನ್ನು ಏಕಾಂಗಿಯಾಗಿ ಮತ್ತು ಮರದ ರೆಂಬೆ ಕೊಂಬೆಗಳ ಬಲೆಯ ಒಳಗೆ  ಹಿಡಿದಿಟ್ಟ ಚಿತ್ರಗಳು ನನಗೆ ಹೆಚ್ಚು ತೃಪ್ತಿ ಕೊಟ್ಟವು.ಕೊನೆಯ ಸಾಲಿನ ಮೂರು ಫೋಟೋಗಳು ಸುಮಾರು ಐದೂವರೆ ಗಂಟೆಗೆ ನಮ್ಮಲ್ಲಿ ಕತ್ತಲು ಆವರಿಸುತ್ತಿದ್ದಂತೆ ,ಸೂರ್ಯ ಪಯಣದ ಮಂಗಳ ಗೀತದ ದಾಖಲೆಗಳು.

ಮೈನಸ್ ಹತ್ತು ಡಿಗ್ರಿಯ ಹವೆ ಇಲ್ಲಿ ವಿಶೇಷವಾದುದು ಏನೂ ಅಲ್ಲ.ಇವತ್ತು ಮೈನಸ್ ಹದಿನಾಲ್ಕು ಎಂದು ಮುನ್ಸೂಚನೆ ಇದೆ.ಈ ವಾರ ಅದು ಮೈನಸ್  ಇಪ್ಪತ್ತವರೆಗೆ ಹೋಗಬಹುದು.ಆದರೆ ನನಗೆ ಸಮಸ್ಯೆ ಇರುವುದು ಚಳಿಯಲ್ಲಿ ಮಾಯಿನ್ ನದಿಯ ದಂಡೆಯಲ್ಲಿ ಓಡಾಡುವುದರ ಬಗ್ಗೆ ಅಲ್ಲ, ನನ್ನ ಕಷ್ಟವೆಂದರೆ  ನನ್ನ ಕ್ಯಾಮರಾವನ್ನು ಹೊರತೆಗೆದು ಕೆಲವು ನಿಮಿಷಗಳವರೆಗೆ ಹೊರ ಚಳಿಗೆ ತೆರೆದುಕೊಳ್ಳುವುದರ  ಬಗ್ಗೆ.ಹಿಮ ಮೈ ಮೇಲೆ ಸುರಿಯುತ್ತಿರುವಾಗಲೂ ನಾನು ಸಾಕಷ್ಟು ಫೋಟೋ ಇಲ್ಲಿ ತೆಗೆದಿದ್ದೇನೆ.ಆದರೆ ಆಗ ಉಷ್ಣತೆ ಸೊನ್ನೆಯ ಸುತ್ತಮುತ್ತ ಇರುತ್ತದೆ.ಒಂದು ಬಾರಿ ಮೈನಸ್ ಕೆಳಕ್ಕೆ ಇಳಿದರೆ ಅಲ್ಲಿ ಮತ್ತೆ ಹಿಮ ಇರುವುದಿಲ್ಲ.ಆದರೆ ಈಗಿನ ಇಂತಹ ‘ಪಾತಾಳಚಳಿ’ಯಲ್ಲಿ ಕೈಯ ಗ್ಲೌಸ್ ಗಳನ್ನೂ ಕಳಚದೆ ಕ್ಯಾಮರಾವನ್ನು ಸರಿಯಾಗಿ ಹಿಡಿದುಕೊಂಡು, ನಿಟ್ಟಿಸಿ ಕ್ಲಿಕ್ ಮಾಡಲು ಆಗುವುದಿಲ್ಲ.ತೆಳ್ಳನೆಯ ಗ್ಲೌಸ್ ಹಾಕಿಕೊಂಡರೆ ಚಳಿ ತಡೆಯಲು ಸಾಕಾಗುವುದಿಲ್ಲ.ದಪ್ಪನೆಯ ಗ್ಲೌಸ್ ಹಾಕಿಕೊಂಡರೆ ಅದನ್ನು ಕಳಚಿ ,ಕ್ಯಾಮರಾ ತೆಗೆದು ತೆರೆದು ಕಣ್ಣಾಡಿಸಿ ಕ್ಲಿಕ್ ಮಾಡುವ ಹೊತ್ತಿಗೆ ಬೆರಳುಗಳು  ಮರಗಟ್ಟಿ ಹೋಗಿರುತ್ತವೆ.’ಅಗ್ನಿದಿವ್ಯ ‘ಎನ್ನುವ ಪದವನ್ನು ಸಾಕಷ್ಟು ಕೇಳಿದ್ದೆ  ಮತ್ತು ಬಳಸಿದ್ದೆ.ಆದರೆ ಇದು ‘ಶೈತ್ಯದಿವ್ಯ’. ಇದು ಇಲ್ಲಿ  ಒಂದೊಂದು ಕ್ಷಣದ  ಪರೀಷಹ. ಹಾಗಾಗಿ ಇಲ್ಲಿನ ಈ ಚಿತ್ರಗಳ ಬಗೆಗೆ ನನಗೆ ಹೆಚ್ಚು ಪ್ರೀತಿ.ಜೊತೆಗೆ ಇಷ್ಟು ದೇದೀಪ್ಯಮಾನ ಸೂರ್ಯ ಮತ್ತೆ ಈ ಚಳಿಗಾಲದಲ್ಲಿ ಇಡೀ ದಿನ  ಕಾಣಿಸಿಕೊಳ್ಳುವ  ಕಾಲಜ್ಞಾನವನ್ನು  ಯಾರೂ ಹೇಳಲಾರರು.

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.

Read Full Post | Make a Comment ( 4 so far )

« Previous Entries

Liked it here?
Why not try sites on the blogroll...