ರಂಗಭೂಮಿ

ಕನ್ನಡ ಬೇಸಗೆ ಶಿಬಿರದ ನಡುವೆ ಕತ್ರಿನ್ ಯಕ್ಷಗಾನ

Posted on ಸೆಪ್ಟೆಂಬರ್ 12, 2013. Filed under: ಕರ್ನಾಟಕ, ಜರ್ಮನಿ, ರಂಗಭೂಮಿ, Kannada Summer School, Karnataka, Katrin Binder, Yakshagana Theater |

ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ಇಂಡಾಲಜಿ ಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಎರಡು ವಾರಗಳ ‘ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ‘ ಸಪ್ಟಂಬರ ೨ ರಂದು ಆರಂಭವಾಗಿ ನಾಡದು ಶನಿವಾರ ಮುಕ್ತಾಯವಾಗುತ್ತದೆ . ಇದರಲ್ಲಿ ಅಧ್ಯಾಪಕರಾಗಿ ನಾನು ಮತ್ತು ಡಾ . ಕತ್ರಿನ್ ಬಿಂದರ್ ಕಾರ್ಯನಿರ್ವಹಿಸುತ್ತಿದ್ದೇವೆ . ಪೂರಕ ವ್ಯಾಸಂಗ ಹಾಗೂ ಕನ್ನಡ ಬರವಣಿಗೆಯ ಅಭ್ಯಾಸವನ್ನು ಸಾರಾ ಮೆರ್ಕ್ಲೆ , ಕರ್ನಾಟಕದ ಇತಿಹಾಸ ಕಲೆ ಸಂಸ್ಕೃತಿ ಸಾಹಿತ್ಯದ ಬಗ್ಗೆ ಉಪನ್ಯಾಸಗಳನ್ನು ಪ್ರೊ . ಹೈದ್ರೂನ್ ಬ್ರೂಕ್ನರ್ ಮಾಡುತ್ತಿದ್ದಾರೆ . ಕನ್ನಡ ಪಾಠಗಳ ನಡುವೆಯೇ ನಿನ್ನೆ ಡಾ . ಕತ್ರಿನ್ ಬಿಂದರ್ ತಮ್ಮ ನೆಚ್ಚಿನ ಕಲೆ ಯಕ್ಷಗಾನದ ಪ್ರಾತ್ಯಕ್ಷಿಕತೆಯನ್ನು ವೇಷಭೂಷಣ ಧರಿಸಿಯೇ ಸಮರ್ಥವಾಗಿ ಮಾಡಿತೋರಿಸಿದರು . ಅದನ್ನು ಕೇವಲ ಕನ್ನಡ ಶಿಬಿರದ ತರಗತಿಯ ವಿದ್ಯಾರ್ಥಿಗಳಿಗಾಗಿಯೇ ಪ್ರದರ್ಶಿಸಲಾಯಿತು .
ಜರ್ಮನಿಯಲ್ಲಿ ಹುಟ್ಟಿ ಬೆಳೆದು ,ಅಲ್ಲಿನ ತ್ಯೂಬಿಂಗನ್ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದಲ್ಲಿ ಎಂ ಎ ಮಾಡುವಾಗಲೇ ಕತ್ರಿನ್ ಯಕ್ಷಗಾನವನ್ನು ತಮ್ಮ ಮಾಸ್ಟರ್ಸ್ ಥೀಸಿಸ್ ಗೆ ಆಯ್ಕೆಮಾಡಿಕೊಂಡರು . ಇದಕ್ಕಾಗಿ ಅವರು ಕರ್ನಾಟಕಕ್ಕೆ ಬಂದು ಉಡುಪಿಯಲ್ಲಿ ಗುರು ಸಂಜೀವ ಸುವರ್ಣ ರಿಂದ ಯಕ್ಷಗಾನದ ಪರಂಪರೆಯ ಕುಣಿತ ಮತ್ತು ಅಭಿನಯದಲ್ಲಿ ವಿಶೇಷವಾದ ತರಬೇತಿಯನ್ನು ಪಡೆದರು . ಯಕ್ಷಗಾನದ ಕಲಾವಿದರನ್ನು ಮತ್ತು ವಿದ್ವಾಂಸರನ್ನು ಸಂದರ್ಶಿಸಿದರು . ಕನ್ನಡವನ್ನು ಮಾತಾಡಲು ಓದಲು ಮತ್ತು ಬರೆಯಲು ಚೆನ್ನಾಗಿ ಅಭ್ಯಾಸ ಮಾಡಿದರು . ಈ ಎಲ್ಲ ಪರಿಶ್ರಮದ ಫಲವಾಗಿ ಯಕ್ಷಗಾನದ ಬಗ್ಗೆ ತಮ್ಮ ಮಾಸ್ಟರ್ಸ್ ಥೀಸಿಸ್ ನ್ನು ಜರ್ಮನ್ ಭಾಷೆಯಲ್ಲಿ ಸಿದ್ಧಪಡಿಸಿ ೧೯೯೩ ರಲ್ಲಿ ಎಂ ಎ ಪದವಿ ಪಡೆದರು . ಈ ಥೀಸಿಸ್ ನಲ್ಲಿ ‘ ಅಭಿಮನ್ಯು ಕಾಳಗ ‘ ಪ್ರಸಂಗವನ್ನು ಕನ್ನಡದಿಂದ ಜರ್ಮನ್ ಭಾಷೆಗೆ ಅನುವಾದ ಮಾಡಿದ್ದಾರೆ . ಈ ಥೀಸಿಸ್ ೧೯೯೪ರಲ್ಲಿ ಜರ್ಮನಿಯಲ್ಲಿ ಪ್ರಕಟವಾಗಿದೆ . ಬಳಿಕ ಕತ್ರಿನ್ ಅನೇಕ ಬಾರಿ ಕರ್ನಾಟಕದ ಕರಾವಳಿಗೆ ಬಂದು ಯಕ್ಷಗಾನದ ಹೆಚ್ಚಿನ ಅಧ್ಯಯನ ನಡೆಸುವುದರ ಜೊತೆಗೆ , ಯಕ್ಷಗಾನ ಕಲಾವಿದೆಯಾಗಿ ಬಹು ಬಗೆಯ ತರಬೇತಿಯ ಮೂಲಕ ಪರಿಣತಿಯನ್ನು ಹೊಂದಿದರು . ಅವರು ಪಿ . ಹೆಚ್ ಡಿ . ಪದವಿಗಾಗಿ’ ಯಕ್ಷಗಾನ ರಂಗಭೂಮಿ ‘ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡು ಪ್ರೊ . ಬ್ರೂಕ್ನರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ತ್ಯೂಬಿಂಗನ್ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದರು . ಅವರ ಸಂಶೋಧನಾ ಮಹಾಪ್ರಬಂಧ ಇಂಗ್ಲಿಷಿನಲ್ಲಿ ಅದು ೨೦೧೩ರಲ್ಲಿ ಜರ್ಮನಿಯಲ್ಲಿ ಪ್ರಕಟವಾಗಿದೆ . ಡಾ . ಕತ್ರಿನ್ ಬಿಂದರ್ ಭಾರತದಲ್ಲಿ ಉಡುಪಿ ದೆಹಲಿ ಸಹಿತ ಅನೇಕ ಕಡೆ ತಮ್ಮ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನವನ್ನು ಮಾಡಿದ್ದಾರೆ . ಜರ್ಮನಿ , ಸ್ವಿಜರ್ ಲೆಂಡ್ , ಇಂಗ್ಲೆಂಡ್ ಸಹಿತ ಯೂರೋಪಿನ ದೇಶಗಳಲ್ಲಿ ತಮ್ಮ ಯಕ್ಷಗಾನ ಅಭಿನಯ ಪ್ರತಿಭೆಯನ್ನು ಪ್ರಕಟಿಸಿದ್ದಾರೆ .
ಕನ್ನಡವನ್ನು ಚೆನ್ನಾಗಿ ಕಲಿತಿರುವ ಕತ್ರಿನ್ ಜೊತೆಗೆ ‘ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ‘ ದಲ್ಲಿ ನಾನು ಅಧ್ಯಾಪಕನಾಗಿ ಪಾಲುಗೊಳ್ಳು ತ್ತಿರುವುದು ಇದು ಮೂರನೆಯ ಬಾರಿ . ನಾವು ಜೊತೆಯಾಗಿ ಹೊಸಗನ್ನಡದ ಆಯ್ದ ಕವನಗಳನ್ನು ಕನ್ನಡದಿಂದ ಜರ್ಮನ್ ಭಾಷೆಗೆ ನೇರವಾಗಿ ಅನುವಾದ ಮಾಡುವ ಕೆಲಸದಲ್ಲಿ ಸಾಕಷ್ಟು ಮುಂದೆ ಸಾಗಿದ್ದೇವೆ .
ನಿನ್ನೆಯ ದಿನ ನಮ್ಮ ಕನ್ನಡ ತರಗತಿಯಲ್ಲಿ ಡಾ . ಕತ್ರಿನ್ ಬಿಂದರ್ ಯಕ್ಷಗಾನದ ಸಭಾಲಕ್ಷಣ ಭಾಗದ ಸ್ತ್ರೀ ವೇಷದ ಕುಣಿತದ ವೈವಿಧ್ಯಗಳನ್ನು ಸೊಗಸಾಗಿ ಕುಣಿದು ಅಭಿನಯಿಸಿ ತೋರಿಸಿದರು ಕತ್ರಿನ್ ಅವರು ಅಭಿನಯಿಸಿದ್ದು ‘ಆಡ ಪೋಗುವ ರಂಗಾ ಆಡ ಪೋಗುವಾ …… ‘ ಮತ್ತು ‘ ರಂಗನ್ಯಾತಕೆ ಬಾರನೇ ಅಂಗನಾಮಣಿ …… ‘ ಪದ್ಯಗಳಿಗೆ . .
ಅದರ ಕೆಲವು ಚಿತ್ರಗಳು ಇಲ್ಲಿವೆ . ಅವುಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ .

Read Full Post | Make a Comment ( None so far )

STRAMU Wurzburg ಬೀದಿ ಬೀದಿಗಳಲ್ಲಿ ಹಾಡು ,ಆಟ , ಕುಣಿತ ,ಕತೆ ,ಇಂದ್ರಜಾಲ

Posted on ಸೆಪ್ಟೆಂಬರ್ 8, 2013. Filed under: ಜರ್ಮನಿ, ರಂಗಭೂಮಿ, ವ್ಯೂರ್ತ್ಸ್ ಬುರ್ಗ್, Street Arts, Street Music, Wurzburg |

ಜರ್ಮನಿಯ ವ್ಯೂರ್ತ್ಸ್ ಬುರ್ಗ್ ನಗರದಲ್ಲಿ ಕಳೆದ ಮೂರು ದಿನಗಳಿಂದ ( ಸಪ್ಟಂಬರ ೬ , ೭ , ೮ -೨೦೧೩ ) ಬೀದಿ ಬೀದಿಗಳಲ್ಲಿ ಓಣಿ ಓಣಿಗಳಲ್ಲಿ ಜಾತ್ರೆಯ ಸಡಗರ . ಎಲ್ಲಿ ನೋಡಿದರೂ ಹಾಡು ,ಮ್ಯಾಜಿಕ್ , ಬೆಂಕಿಯ ಆಟ , ಕತ್ತಿ ಕಾಳಗ , ಕುಣಿತ , ಕತೆ ಹೇಳುವುದು -ಹೀಗೆ ಬಗೆ ಬಗೆಯ ಬೀದಿ ಸಂಗೀತ ಮತ್ತು ಬೀದಿ ಕಲೆಗಳ ಪ್ರದರ್ಶನ . ಎಲ್ಲಿ ಒಳ ನುಗ್ಗಲು ನೋಡಿದರೂ ಕಾಲಿಡಲು ತೆರಪಿಲ್ಲ . ಅದು ಸ್ತ್ರಾಮು :ಅಂತಾರಾಷ್ಟ್ರೀಯ ವಾರ್ಷಿಕ ಬೀದಿ ಉತ್ಸವ .
ವ್ಯೂರ್ತ್ಸ್ ಬುರ್ಗ್ ನ ಈ ಅಂತಾರಾಷ್ಟ್ರೀಯ ಬೀದಿ ಕಲಾ ಉತ್ಸವಕ್ಕೆ ಈಗ ದಶಮಾನೋತ್ಸವದ ಸಂಭ್ರಮ . ಹಾಗಾಗಿ ಈ ವರ್ಷ ಕಲಾವಿದರೂ ಜಾಸ್ತಿ ,ಪ್ರೇಕ್ಷಕರು ಅಪರಿಮಿತ . ೨೦೦೪ ರಲ್ಲಿ ಆರಂಭವಾದ ಈ ಬೀದಿ ಕಲೋತ್ಸವ ಈಗ ಯುರೋಪಿನಲ್ಲೇ ಅತ್ಯಂತ ಬೃಹತ್ ಪ್ರಮಾಣದ್ದು ಎಂದು ಜನಪ್ರಿಯ ಆಗಿದೆ . ಕಳೆದ ವರ್ಷದ ದಾಖಲೆಯಂತೆ ಎಂಬತ್ತು ಸಾವಿರಕ್ಕೂ ಹೆಚ್ಚು ಜನರು ಈ ಉತ್ಸವವನ್ನು ಕಾಣಲು ಯೂರೋಪಿನ ಬೇರೆ ಬೇರೆ ಭಾಗಗಳಿಂದ ಬಂದಿದ್ದಾರೆ . ಇಪ್ಪತ್ತೆರಡು ಸ್ಥಳಗಳಲ್ಲಿ ನಾಲ್ಕು ನೂರು ಕಲಾವಿದರು ಮೂರು ದಿನಗಳ ಕಾಲ ಕಲಾ ಪ್ರದರ್ಶನಗಳನ್ನು ಕೊಡುತ್ತಾರೆ .
ಆದರೆ ಈ ಯಾವುದೇ ಪ್ರದರ್ಶನಕ್ಕೂ ಸ್ಟೇಜ್ ಇರುವುದಿಲ್ಲ . ಪ್ರದರ್ಶನಗಳು ಮುಖ್ಯ ಬೀದಿಗಳಲ್ಲಿ ಆಗಲೀ ,ವಿಶಾಲ ಬಯಲುಗಳಲ್ಲಿ ಆಗಲೀ ನಡೆಯುವುದಿಲ್ಲ . ಈ ಎಲ್ಲ ಪ್ರದರ್ಶನಗಳು ನಡೆಯುವುದು ಅಗಲ ಕಿರಿದಾದ ಓಣಿಗಳಲ್ಲಿ ,ಗಲ್ಲಿಗಳಲ್ಲಿ ಮತ್ತು ಬೀದಿ ಬದಿಯ ಸಣ್ಣ ಖಾಲಿ ಜಾಗಗಳಲ್ಲಿ . ಎಲ್ಲ ಬಗೆಯ ಸಂಗೀತಗಳು ಹಾಡುಗಳು , ಕುಣಿತಗಳು , ಕತ್ತಿ ಕಾಳಗ , ಬೆಂಕಿಯ ಜೊತೆಗೆ ಸಾಹಸ ಪ್ರದರ್ಶನ , ಬಗೆ ಬಗೆಯ ಮ್ಯಾಜಿಕ್ , ಸಾರ್ವಜನಿಕವಾಗಿ ಕತೆ ಹೇಳುವುದು , ಬೀದಿ ನಾಟಕಗಳು – ಹೀಗೆ ಬೀದಿ ಕಲೆಗಳ ಪುನರುಜ್ಜೀವನಕ್ಕೆ ಈ ಉತ್ಸವ ಚಾಲನೆಯನ್ನು ಕೊಟ್ಟಿದೆ . ಕೇಳುಗರು ಮತ್ತು ನೋಡುಗರು ಗುಂಪಿನಲ್ಲಿ ಗಂಟೆಗಟ್ಟಲೆ ಹೊತ್ತು ನಿಂತುಕೊಂಡೇ ಪ್ರದರ್ಶನಗಳನ್ನು ನೋಡಿ ಕೇಳಿ ಆನಂದಿಸುತ್ತಾರೆ . ಯಾವುದೇ ಟಿಕೆಟ್ ,ಶುಲ್ಕ ಇಲ್ಲ. ಎಲ್ಲವೂ ಉಚಿತ . ನಗರದ ಪುರಸಭೆಯು ಈ ಬೀದಿ ಉತ್ಸವದ ನಿರ್ವಹಣೆಯ ಜವಾಬ್ದಾರಿಯನ್ನು ಸಮರ್ಥವಾಗಿ ನೋಡಿಕೊಳ್ಳುತ್ತದೆ .
ನಿನ್ನೆಯ ದಿನ – ಸಪ್ಟಂಬರ ೭ – ನಾನು ನಾಲ್ಕು ಗಂಟೆಗಳ ಈ ಬೀದಿ ಉತ್ಸವದಲ್ಲಿ ಸುತ್ತಾಡಿ , ನನಗೆ ಸಾಧ್ಯವಾದಷ್ಟು ತೆಗೆದ ಫೋಟೋಗಳನ್ನು ಇಲ್ಲಿ ಕೊಟ್ಟಿದ್ದೇನೆ .

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ .

Read Full Post | Make a Comment ( None so far )

‘ಸ್ವರ್ಗ ,ನರಕ ಮತ್ತು ಬದುಕುವ ಆಸೆ ‘ : ಒಂದು ವಿಭಿನ್ನ ರಂಗಪ್ರಯೋಗ

Posted on ಡಿಸೆಂಬರ್ 15, 2011. Filed under: ಜರ್ಮನಿ, ರಂಗಭೂಮಿ, ವ್ಯೂರ್ತ್ಸ್ ಬುರ್ಗ್ | ಟ್ಯಾಗ್ ಗಳು:, , , , , |

ಬದುಕಿನ ಗಡಿಯಾರದ ಟಿಕ್ ಟಿಕ್ ಟಿಕ್ ಸದ್ದು ಕೇಳಿಸುತ್ತಿದೆ.ಬದುಕಿನ ಚಕ್ರ ತಿರುಗುತ್ತಿದೆ.ವೀರ್ಯ,ಭ್ರೂಣ,ಮಗು,ಮನುಷ್ಯ ,ಗಂಡು,ಹೆಣ್ಣು,ಪ್ರೇಮ,ಸ್ವರ್ಗ,ನರಕ -ಈ ಸುತ್ತುವಿಕೆಯಲ್ಲಿ ಎಲ್ಲಿ ಗಡಿಯಾರದ ಮುಳ್ಳು ನಿಂತುಬಿಡುತ್ತದೆ ?ಅದು ತಾನಾಗಿ ನಿಲ್ಲುತ್ತದೆಯೋ  ಅಥವಾ ನಿಲ್ಲಿಸಲಾಗುತ್ತದೆಯೋ ?ವೀರ್ಯದ ಕಣಗಳ ಅಥವಾ ಭ್ರೂಣಗಳ ಓಟದಲ್ಲಿ ಯಾರು ಗೆಲ್ಲುತ್ತಾರೆ ?ಯಾರು ಹಿಂದೆ ಬೀಳುತ್ತಾರೆ ?ಹಿಂದೆ ಬಿದ್ದವರು ಎಲ್ಲಿಗೆ ಹೋಗಬೇಕು ?ಸ್ವರ್ಗಕ್ಕೋ  ನರಕಕ್ಕೋ ? ಸ್ವರ್ಗ ಅಥವಾ ನರಕದ ರೆಜಿಸ್ಟರ್ ನಲ್ಲಿ ಇವರ ಹೆಸರು ದಾಖಲಾಗಿರುತ್ತದೆಯೋ ?ಇಲ್ಲವಾದರೆ ಇವರನ್ನು ಎಲ್ಲಿಗೆ ಹಿಂದಕ್ಕೆ ಕಳುಹಿಸುವುದು ? ಇವರಿಗೂ ಬದುಕುವ ಆಸೆ ಇಲ್ಲವೇ ?ಈ ಭೂಮಿಗೆ ಬರುವ ಭ್ರೂಣಗಳನ್ನು ತಡೆದಾಗ ಏನಾಗುತ್ತದೆ ?

ಈ ಭೂಮಿಯಲ್ಲಿ ಬದುಕಲು  ಮುಕ್ತವಾದ ಅವಕಾಶ ಇದೆ.ಇಬ್ಬರು ಪ್ರೇಮಿಗಳು ಬೆಚ್ಚಗಿನ ರಾತ್ರಿಯಲ್ಲಿ  ಗಾಢವಾದ ಪ್ರೇಮದಲ್ಲಿ ಮಗ್ನರಾಗಿದ್ದಾರೆ . ಭ್ರೂಣ ಟಿಮ್ ಗೆ ಜನಿಸುವ ಒತ್ತಡ. ಆದರೆ ಜನಿಸಲು ಭ್ರೂಣ ಟಿಮ್ ಸಿದ್ಧತೆ ಮಾಡುತ್ತಿರುವಾಗಲೇ ,ಅವನ ಬದುಕು ಆಕಸ್ಮಿಕವಾಗಿ ಕೊನೆಯಾಗುತ್ತದೆ.ಟಿಮ್ ಸ್ವರ್ಗಕ್ಕೆ ಬಂದಾಗ ,ಅಲ್ಲಿ ಪೀಟರ್ ನನ್ನು ಭೇಟಿ ಆಗುತ್ತಾನೆ.ಪೀಟರ್ ಹವಾಮಾನ ರೂಪಿಸುವುದರಲ್ಲಿ ಮಗ್ನನಾಗಿರುತ್ತಾನೆ.ಹೊಸಬನಾಗಿ ಬಂದ ಟಿಮ್ ನಿಗೆ ಸ್ವರ್ಗದಲ್ಲಿ ಅವಕಾಶ ಕಲ್ಪಿಸುವುದರ ಬದಲು ,ಪೀಟರ್ ಆತನ ಹುಟ್ಟಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳುತ್ತಾನೆ.ಅದಕ್ಕಾಗಿ ಸ್ವರ್ಗದ ತನ್ನ ಕಚೇರಿಯಲ್ಲಿ ಇರುವ ಎಲ್ಲಾ ರಿಜಿಸ್ಟರ್ ಗಳನ್ನು ತಿರುವಿಹಾಕುತ್ತಾನೆ.ಒಬ್ಬ ಪಕ್ಕಾ ಬ್ಯೂರಿಯಾಕ್ರೆಟ್ ನಂತೆ ದಾಖಲೆಗಳ ರಾಶಿಯ ತಡಕಾಟದಲ್ಲಿ ಮುಳುಗಿಹೋಗುತ್ತಾನೆ ಪೀಟರ್.ಇದೇ ಸುಸಮಯ ಎಂದು ತಿಳಿದು ಟಿಮ್ ಸ್ವರ್ಗದಿಂದ ತಪ್ಪಿಸಿಕೊಳ್ಳುತ್ತಾನೆ.ಸ್ವರ್ಗದಿಂದ ಪಲಾಯನ ಮಾಡಿದ ಟಿಮ್ ನರಕಕ್ಕೆ ಬರುತ್ತಾನೆ.

ಬದುಕುವ ಆಸೆಯ ಭ್ರೂಣ ಟಿಮ್ ಮತ್ತೆ ತನ್ನ ಬದುಕನ್ನು ಮರಳಿ ಪಡೆದನೇ ?

ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇದೆಯೇ ? ರಂಗದ ಮೇಲೆ ನೋಡಿರಿ.

ಜರ್ಮನಿಯ ವ್ಯೂರ್ತ್ಸ್ ಬುರ್ಗ್ ನಗರದ ಹೊರವಲಯದ ಕೈಗಾರಿಕಾ ಪ್ರದೇಶ ಲೆಂಗ್ ಫೆಲ್ಡ್ ಬಳಿ ಇರುವ ಒಂದು ಸಣ್ಣ ಮತ್ತು ಭಿನ್ನ ಥಿಯೇಟರ್ AugenBlick. ಜರ್ಮನ್ ಭಾಷೆಯ ಈ ರಂಗಮಂದಿರ /ರಂಗತಂಡದ ಹೆಸರನ್ನು ಕನ್ನಡಕ್ಕೆ ಅನುವಾದಿಸಿದರೆ ‘ಕ್ಷಣದ ರಂಗಭೂಮಿ ‘ ಎಂದು ಕರೆಯಬಹುದು.ಇದೊಂದು ವಿಶಿಷ್ಟ ರಂಗ ಪ್ರಯೋಗ.ರಂಗಭೂಮಿಯನ್ನು ಅದರ ಸಾಂಪ್ರದಾಯಿಕ ಚೌಕಟ್ಟಿನಿಂದ ಬಿಡಿಸಿ ನೋಡುವ ದೃಷ್ಟಿಕೋನ ಇಲ್ಲಿದೆ.ರಂಗಭೂಮಿಯನ್ನು  ಅಂಗವಿಕಲರ ಕ್ರಿಯಾತ್ಮಕ ಚಟುವಟಿಕೆಗಳ ಕಮ್ಮಟವನ್ನಾಗಿ ಸಶಕ್ತವಾಗಿ ಬಳಸಿಕೊಳ್ಳುವ ಉದ್ದೇಶ ಇಲ್ಲಿ ಮುಖ್ಯವಾಗಿದೆ .ಈ ಥಿಯೇಟರ್ ನಲ್ಲಿ ಎಂಟು ಮಂದಿ ಅಂಗವಿಕಲ ವಯಸ್ಕರು ನಟ ನಟಿಯರಾಗಿ ಖಾಯಂ ಆಗಿ ಅಭಿನಯಿಸುವ ಉದ್ಯೋಗ ಪಡೆದಿದ್ದಾರೆ.ಇವರನ್ನು ಬಳಸಿಕೊಂಡು ಪ್ರತೀವರ್ಷವೂ ಹೊಸ ಹೊಸ ನಾಟಕಗಳನ್ನು ತರಬೇತಿ ಕೊಟ್ಟು ಸಿದ್ಧಪಡಿಸಿ ಪ್ರದರ್ಶಿಸುತ್ತಾರೆ.ಈವರೆಗೆ ಈ ಥಿಯೇಟರ್ ನಲ್ಲಿ ಸುಮಾರು ಮೂವತ್ತು ಸಾವಿರ ಮಂದಿ ಪ್ರೇಕ್ಷಕರು ಬೇರೆ ಬೇರೆ ನಾಟಕಗಳನ್ನು ನೋಡಿದ್ದಾರೆ.ಈ ಚಿಕ್ಕ  ರಂಗಮಂದಿರದಲ್ಲಿ ಒಮ್ಮೆಗೆ ಸುಮಾರು ನೂರ ಐವತ್ತರಷ್ಟು ಜನರು ಕುಳಿತುಕೊಳ್ಳಲು ಅವಕಾಶ ಇದೆ.ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಸಾಮಾನ್ಯ ಕುರ್ಚಿಗಳು ಮತ್ತು ಸರಳವಾದ ಸಣ್ಣ ರಂಗಸ್ಥಳದ ವ್ಯವಸ್ಥೆ ಇದೆ .ಟಿಕೆಟ್ ದರ ಐದರಿಂದ ಹತ್ತು ಯೂರೋ ಮಾತ್ರ.( ನಗರದ  ದೊಡ್ಡ ಥಿಯೇಟರ್ ನಲ್ಲಿ ಟಿಕೆಟ್ ದರ ೩೦ ಯೂರೋವರೆಗೆ  ಇದೆ.) ಟಿಕೆಟ್ ನಿಂದ ಸಂಗ್ರಹವಾದ ಹಣ ಮತ್ತು ಸಣ್ಣ ಪ್ರಮಾಣದಲ್ಲಿ ತಿಂಡಿ ಪಾನೀಯಗಳ ಮಾರಾಟದಿಂದ ಬಂದ ಹಣದಿಂದ  ಈ ರಂಗತಂಡದ ಅಂಗವಿಕಲ ಕಲಾವಿದರಿಗೆ ವೇತನವನ್ನು ಕೊಡುತ್ತಾರೆ.

ಕಳೆದ ಶನಿವಾರ ,ದಶಂಬರ ಹತ್ತರಂದು ಸಂಜೆ Theater AugenBlick ನಲ್ಲಿ ನಾನು ನೋಡಿದ ಜರ್ಮನ್  ನಾಟಕ Himmel ,Holle Und Die Am Leben  (ಸ್ವರ್ಗ ,ನರಕ ಮತ್ತು ಬದುಕುವ ಆಸೆ ).ನಮ್ಮ ವ್ಯೂರ್ತ್ಸ್ ಬುರ್ಗ್ ವಿದೇಶಿ ವಿಜ್ಞಾನಿಗಳ ಕೂಟದ ಅಂಗೆಲಿಕಾ , ಡೋರಿಸ್, ಡಾ.ಹೆಲಿ, ಲೋತ್ತೆ -ಅತಿಥಿಗೃಹದಲ್ಲಿ ಇರುವ ನಮಗೆ  ಈ ನಾಟಕ ನೋಡುವ ವ್ಯವಸ್ಥೆ ಮಾಡಿದ್ದರು. ಇದು ಸುಮಾರು ಎಂಬತ್ತು ನಿಮಿಷಗಳ ಅವಧಿಯ ನಾಟಕ.ಪ್ರೇಕ್ಷಕರಲ್ಲೂ ಕೆಲವು ಮಂದಿ  ಅಂಗವಿಕಲರು ಇದ್ದರು.ಕೆಲವು ಮಂದಿಯನ್ನು ತಳ್ಳುಗಾಡಿಯಲ್ಲಿ ತಂದು ಕುಳ್ಳಿರಿಸಿದರು. ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಒಬ್ಬ ತರುಣ ನಾಟಕದ ಪ್ರತಿಯೊಂದು ಮಾತಿಗೂ ಗಟ್ಟಿ ದ್ವನಿಯಲ್ಲಿ ನಗುತ್ತಾ ಪ್ರತಿಕ್ರಿಯೆ ಕೊಡುತ್ತಿದ್ದ.ಮೊದಲಬಾರಿ ಆತನನ್ನು ಕೆಲವರು ಆಶ್ಚರ್ಯದಿಂದ ನೋಡಿದರು. ದೈಹಿಕ ಮತ್ತು  ಮಾನಸಿಕವಾಗಿ  ಆತನಿಗೆ ಸಮಸ್ಯೆ ಇದೆ ಎಂದು ಗೊತ್ತಾದ ಕೂಡಲೇ ಯಾರೂ ಆತನ ನಡವಳಿಕೆಯನ್ನು ವಿಚಿತ್ರ ಎಂದು ಭಾವಿಸಲಿಲ್ಲ.ಪ್ರೇಕ್ಷಕರಲ್ಲಿ ಅಂತಹ ಇನ್ನೂ ಕೆಲವು ಮಂದಿ ಇದ್ದರು.ಇದು ಆ ರಂಗಭೂಮಿಯ ಭಿನ್ನತೆಯೂ ಹೌದು.

‘ಸ್ವರ್ಗ ,ನರಕ ಮತ್ತು ಬದುಕುವ ಆಸೆ ‘ ಒಂದು ಕಾಮೆಡಿ. ವಿಡಂಬನೆಯನ್ನು ಸಂಭಾಷಣೆ,ನಟನೆ ,ವಸ್ತ್ರವಿನ್ಯಾಸ ,ರಂಗಪರಿಕರಗಳ ಮೂಲಕ ತುಂಬಾ ಪರಿಣಾಮಕಾರಿಯಾಗಿ ತಂದಿದ್ದರು.ಜರ್ಮನ್ ಭಾಷೆಯ ಸಂಭಾಷಣೆಗಳಿಗೆ ಪ್ರೇಕ್ಷಕರು ತಮ್ಮ ಬಗೆಬಗೆಯ ನಗೆಗಳ ಮೂಲಕ ತೋರಿಸುತ್ತಿದ್ದ ಪ್ರತಿಕ್ರಿಯೆ ,ನಾಟಕವನ್ನು ಪ್ರದರ್ಶನದುದ್ದಕ್ಕೂ ಲವಲವಿಕೆಯಿಂದ ಇರಿಸಿತ್ತು.ಆದರೆ ಈ ಕಾಮೆಡಿಯು ಬದುಕಿನ ಅನೇಕ ಸೂಕ್ಸ್ಮ ಸಂಗತಿಗಳನ್ನು ಅನಾವರಣ ಮಾಡುವ ದಾರ್ಶನಿಕ ವ್ಯಂಗ್ಯದ ಶಕ್ತಿಯನ್ನು ಹೊಂದಿತ್ತು.

ದೃಶ್ಯ ೧ : ಬದುಕಿನ ಚಕ್ರ ತಿರುಗುತ್ತಿದೆ.ವೀರ್ಯದ ಕಣಗಳು ಸುತ್ತಲೂ ಓಡುತ್ತಿವೆ.ನೇತುಹಾಕಿದ ಗಡಿಯಾರಗಳು ಟಿಕ್ ಟಿಕ್ ಎಂದು ಸದ್ದುಮಾದುತ್ತಿವೆ.ಕಾಲದ ಚಕ್ರ ಮತ್ತು ಬದುಕಿನ ಚಕ್ರಗಳ ಸುತ್ತಾಟ.

ದೃಶ್ಯ ೨: ಎರಡು ಹೆಣ್ಣುಗಳು ಪರಸ್ಪರ ಮಾತಾಡುತ್ತಿದ್ದಾರೆ.

ಕಣ್ಣಿನ ಪಾಪೆಯನ್ನು ಪರೀಕ್ಷಿಸಿ ನೋಡುವುದು.

‘ಅವಳು ಚೆನ್ನಾಗಿದ್ದಾಳೆಯೇ ?’

‘ಅವಳ ಬಾಯಿ ನಿನಗೆ ಇಷ್ಟ ಆಯಿತೇ? ‘

‘ಅವಳು ನಮ್ಮನ್ನು ನೋಡಿ ನಗುತ್ತಿದ್ದಾಳಾ ?’

‘ಇನ್ನೂ ತುಂಬಾ ಅವಳಲ್ಲಿ  ಇದೆಯಾ ?’

‘ಅವಳ ಉ ..ಉ.. ಉಬ್ಬುಗಳು ಹೇಗೆ ಕಾಣಿಸುತ್ತವೆ ? ನಾನು ಹೇಳುವುದು ಆ…ಅವಳ ಕುತ್ತಿಗೆಯ ಕೆಳಗೆ…’

‘ನೀನು ಹೇಳುವುದು ಅವಳ ಎದೆಯನ್ನೋ ?’

‘ ಶ್ಶ್ , ಬೇಡ ,ಸ್ವಲ್ಪ ಮೆತ್ತಗೆ ಹೇಳು.’

‘ಓ ,ಅವಳು ಬಲ ತೋಳನ್ನು ಅಗೋ  ಮುಟ್ಟಿದಳಾ ? ಅವಳು ಇನ್ನೂ ಹತ್ತಿರ ಬರುತ್ತಿದ್ದಾಳಾ ?! ನಾವು ಅಲಾರಂ ಬಾರಿಸೋಣವೇ ?’

‘ಹೌದು,ನಾವು ಎಚ್ಚರಿಸಬೇಕು .’

ವೀರ್ಯದ ಕಣಗಳೆಲ್ಲ ಸರದಿಗಾಗಿ  ಕಾಯುತ್ತಿವೆ.

ದೃಶ್ಯ ೩ : ವೀರ್ಯದ ಕಣಗಳ ಕುಣಿತ .

ಕಣ್ಣಿನ ಪಾಪೆ ಹೇಳುತ್ತದೆ ಕಣ್ಣಿಗೆ :’ ನಾವು ಸುರು ಮಾಡೋಣವೇ ?’

ಕಣ್ಣು :’ಸರಿ’.

ದೃಶ್ಯ ೪: ವೀರ್ಯದ ಕಣಗಳ ಓಟ. ಒಂದು ಗೆಲ್ಲುತ್ತದೆ.ಅದನ್ನು ರಂಗದಿಂದ ಹೊರಕ್ಕೆ ಎಳೆದುಕೊಂಡು ಹೋಗಲಾಗುತ್ತದೆ.

ದೃಶ್ಯ ೫: ಒಂದು ಕಣ ಗೆದ್ದದ್ದಕ್ಕಾಗಿ ಬದುಕಿನ ಒಂದು ಗಡಿಯಾರವನ್ನು ನೇತುಹಾಕಲಾಗುತ್ತದೆ.

ದೃಶ್ಯ ೬ : ಭ್ರೂಣ ಬೆಳೆಯುತ್ತಿರುತ್ತದೆ.ಹೊರಗಿನಿಂದ ಜನರು ಅದರ ಬೆಳವಣಿಗೆಯನ್ನು ಪರೀಕ್ಷಿಸುತ್ತಿರುತ್ತಾರೆ.ಅವರಲ್ಲಿ ಒಬ್ಬ ಡಾಕ್ಟರ್ ,ಇನ್ನೊಬ್ಬರು ಆರೈಕೆ ಪಡೆಯುವವರು.

‘ಮುಂದಿನವರು ಬನ್ನಿ.’ ಎ  ‘ ನಿರ್ಗಮನ.

ಮುಂದಿನವರು ಬನ್ನಿ.’ಬಿ’ ನಿರ್ಗಮನ ‘

ದೃಶ್ಯ ೭: ಡಾಕ್ಟರ್ ರು ಭ್ರೂಣವನ್ನು ಪರೀಕ್ಷಿಸುತ್ತಾರೆ.

ದೃಶ್ಯ ೮: ಸ್ವರ್ಗದಲ್ಲಿ. ಇಬ್ಬರು ದೇವದೂತಿಯರು  ಮಾತಾಡುತ್ತಿರುತ್ತಾರೆ :

ದೇವದೂತಿ ‘ ಎವಿ ‘ ಯು ದೇವದೂತಿ ‘ಲೀಸಾ ‘ಳಿಗೆ ತನ್ನ ವಾರಾಂತ್ಯದ ಕಾರ್ಯಕ್ರಮದ ಬಗ್ಗೆ ಮತ್ತು ತನ್ನ ಗೆಳೆಯನನ್ನು ತಾನು ಗುಟ್ಟಾಗಿ ಮುದ್ದಿಸಿದ್ದನ್ನು ಹೇಳುತ್ತಾಳೆ.ಲೀಸಾ ಸಿಟ್ಟಿನಿಂದ ಹೇಳುತ್ತಾಳೆ : ‘ಪ್ರೇಮಿಸಿದರೆ ಪರವಾ ಇಲ್ಲ.ಆದರೆ ಮುತ್ತು ಕೊಟ್ಟರೆ ,ಅದು ಸೆಕ್ಸ್ ಆಗುತ್ತದೆ.ಇದಕ್ಕೆ ಸ್ವರ್ಗದಲ್ಲಿ ಅವಕಾಶ ಇಲ್ಲ.ಈರೀತಿ ಮುತ್ತು ಕೊಡುವಾಗ ನೀನು ಸಿಕ್ಕಿಬಿದ್ದರೆ ,ಇನ್ನೊಂದು  ಒಂದು ದಿನ ಹೆಚ್ಚಾಗಿ ನರಕದಲ್ಲಿ ಕಳೆಯಬೇಕಾಗುತ್ತದೆ.’

ಎವಿ :’ಅದಕ್ಕೆಲ್ಲ ನಾನು ಹೆದರುವುದಿಲ್ಲ. ಅದಂತೂ  ತುಂಬಾ ಚೆನ್ನಾಗಿತ್ತು! ‘

ಲೀಸಾ :’ಎವಿ,…….ಮುತ್ತು ಕೊಡುವುದೆಂದರೆ ಹೇಗೇನೇ ?’

ದೃಶ್ಯ ೯: ಸೈಂಟ್ ಪೀಟರ್ ನ ಪ್ರವೇಶ .

ದೇವದೂತಿ ಲೀಸಾ :’ನಮಸ್ಕಾರ ,ಸೈಂಟ್ ಪೀಟರ್, ನಾನು ನಿನಗೆ ಹವಾಮಾನದ ವರದಿ ಕೊಡುತ್ತೇನೆ.’

ಸೈಂಟ್ ಪೀಟರ್ , ಜರ್ಮನ್ ಸಂಗೀತಗಾರ ಮೊಜಾರ್ತ್( ೧೭೫೬-೧೭೯೧) ಬಗ್ಗೆ ಉತ್ಸಾಹದಿಂದ ಮಾತಾಡುತ್ತಾನೆ.ಅಲ್ಲಿ ಮೊಜಾರ್ತ್ ಸಂಗೀತದ ಅಭ್ಯಾಸ ಮಾಡುತ್ತಿರುತ್ತಾನೆ. ಅಲ್ಲಿ ಇನ್ನೊಂದೆಡೆ ಇನ್ನೊಬ್ಬ ಜರ್ಮನ್ ಸಂಗೀತಗಾರ ಬಾಶ್ ( ೧೬೮೫-೧೭೫೦) ಇರುತ್ತಾನೆ .

ಸೈಂಟ್ ಪೀಟರ್ : ‘ಇಬ್ಬರು ಪ್ರಸಿದ್ಧ ಸಂಗೀತಗಾರರು ಒಟ್ಟಿಗೆ  ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.ಇಂತಹ ಅಪೂರ್ವ ದೃಶ್ಯವನ್ನು ನಾವು ಈವರೆಗೆ ನೋಡಿಲ್ಲ.’

ಒಬ್ಬ ಆಗಂತುಕ ಸೈಂಟ್ ಪೀಟರ್ ಬಳಿಗೆ ಬರುತ್ತಾನೆ.ಅವನಿಗೆ ಪೀಟರ್ ನ ಪ್ರಶ್ನೆಗಳು :

‘ನೀನು ಏನು ಒಳ್ಳೆಯ ಕೆಲಸ ಮಾಡಿದ್ದೀಯಾ ?ನೀನು ಏನು ಕೆಟ್ಟ ಕೆಲಸ ಮಾಡಿದ್ದೀಯಾ ?

ಇಲ್ಲಿ ಇವೆ ನಿನ್ನ ಬೀಗದ ಕೈಗಳು.ನಿನ್ನ ರೆಕ್ಕೆಗಳನು ಕಟ್ಟಿಕೋ .ನಿನ್ನ ವಿಚಾರಣೆ ಆ ಮೇಲೆ ಮಾಡೋಣ.’

ಅಷ್ಟರಲ್ಲಿ ಈಗತಾನೇ ಜೀವ ಕೊನೆಗೊಂಡ ಭ್ರೂಣದ  ಪ್ರವೇಶ.

ಸೈಂಟ್ ಪೀಟರ್ :’ನಿನ್ನ ಹೆಸರು ?’  (ಭ್ರೂಣ ತನ್ನ ಭುಜಗಳನ್ನು ಎಗರಿಸುತ್ತದೆ.)

ಸೈಂಟ್ ಪೀಟರ್ : ‘ನಿನ್ನ ಹೆಸರು ? ಹೆಸರು ?”

ಭ್ರೂಣ:’ ನಾನು ಇಲ್ಲಿ ಇರಲಾರೆ.ನನಗೆ ಬದುಕಬೇಕು.’

ಸೈಂಟ್ ಪೀಟರ್ :’ಏನಂದೆ ?’

ಭ್ರೂಣ :’ನನಗೆ  ಬದುಕಬೇಕು .’

ದೃಶ್ಯ ೧೦ : ಆಡಳಿತಾಧಿಕಾರಿ ದೇವದೂತನ ಟೆಲಿಫೋನ್ ಸಂಭಾಷಣೆ.

‘ಸರಿ.ನಾನು ಅದನ್ನು ನೋಡಿಕೊಳ್ಳುತ್ತೇನೆ.ಸರಿ ಸರಿ.’

ಆಡಳಿತಾಧಿಕಾರಿಯು ಆ ಭ್ರೂಣದ ಮಾಹಿತಿ ಕಾರ್ಡ್ ನಲ್ಲಿ ಅದರ ಹೆಸರನ್ನು ಹುಡುಕುತ್ತಾನೆ; ಅದು ಇನ್ನೂ ಯಾಕೆ ಹುಟ್ಟಿಲ್ಲ ಎನ್ನುವ ಕಾರಣವನ್ನು ಶೋಧಿಸಲು ತೊಡಗುತ್ತಾನೆ.ಅದರಲ್ಲೂ ಸ್ವರ್ಗಕ್ಕೆ ಬರುವವರ ಮಾಹಿತಿ ಕಾರ್ಡ್ ಗಳಲ್ಲಿ ಇರುವ ಗೊಂದಲದ ಬಗ್ಗೆ ಬಹಳ ಸಿಟ್ಟುಗೊಳ್ಳುತ್ತಾನೆ. ದೇವದೂತಿ ಅಂಗೆಲಿನಾ ಆ ಕಾರ್ಡ್ ನ್ನು ಹುಡುಕಿ ತೆಗೆಯುತ್ತಾಳೆ.ಆ ಭ್ರೂಣದ ಹೆಸರು ಟಿಮ್ ಜೈಗ್ಲೆರ್ .

ಸೈಂಟ್ ಪೀಟರ್ ಗಲಿಬಿಲಿಗೊಂಡಿದ್ದಾನೆ :  ‘ಕೆಳಗೆ ಭೂಲೋಕದಲ್ಲಿ ಏನೋ ತಪ್ಪು ಆಗಿದೆ.ನನಗಂತೂ ಸ್ವರ್ಗದ ಈ ಕೆಲಸ ಸಾಕಾಗಿ ಹೋಗಿದೆ.’

ಅಷ್ಟರಲ್ಲಿ ಭ್ರೂಣ ಟಿಮ್ ಅಲ್ಲಿಂದ ತಪ್ಪಿಸಿಕೊಳ್ಳುತ್ತದೆ.

ಸೈಂಟ್ ಪೀಟರ್ :’ ಅವನು ಎಲ್ಲಿ ಹೋದ ?’

ದೃಶ್ಯ ೧೧: ಸ್ವರ್ಗದಲ್ಲಿ ವಾದ್ಯಮೇಳ. ಪ್ರಸಿದ್ಧರಾದ ಇಬ್ಬರು ಜರ್ಮನ್ ಸಂಗೀತಗಾರರು ಮೊಜಾರ್ತ್ ಮತ್ತು ಬಾಶ್ -ಸಂಗೀತ ಅಭ್ಯಾಸ ಮಾಡಿಸುತ್ತಿದ್ದಾರೆ.

ಅಲ್ಲಿಗೆ ಭ್ರೂಣ ಟಿಮ್ ನ ಪ್ರವೇಶ.

ಮೊಜಾರ್ತ್ :’ ಓ ,ಇಲ್ಲ.ನೋಡಿದಿಯಾ ಅಲ್ಲಿ ನನಗೆ ಏನು ಕಾಣಿಸುತ್ತಿದೆ ಎಂದು ?’

ಬಾಶ್ :’ ಹೊಕ್ಕುಳಬಳ್ಳಿ ?!’

ಮೊಜಾರ್ತ್ :’ ನಾವು ಶಿಶುಗಳನ್ನು ನೋಡಿಕೊಳ್ಳುವುದಿಲ್ಲ . ನಡೆ ಹೊರಗೆ !’

ಟಿಮ್ :’ ನನ್ನನ್ನು ನೋಡಿಕೊಳ್ಳುವುದು ಬೇಡ.ನನಗೆ ಬದುಕಬೇಕು.’

ದೃಶ್ಯ ೧೩: ಸತ್ಕರಿಸುವುದು :

ಮೂರನೆಯ ಜಗತ್ತಿನಲ್ಲಿ : ದೇವದೂತಿ ಎವಿ ,ಮೂರು ದಿನ ನರಕದಲ್ಲಿ.ಮತ್ತೆ ದೇವದೂತಿ ರಾಫೆಲ ಜೊತೆಗೆ.

ದೃಶ್ಯ ೧೩ : ನರಕ .

ದೆವ್ವ ಅಡುಗೆ ಮಾಡುತ್ತಿರುತ್ತದೆ,ದೊಡ್ಡ ಹಂಡೆಯಲ್ಲಿ ಮನುಷ್ಯ ದೇಹದ ಅಂಗಗಳನ್ನು ಹಾಕಿ ಕುದಿಸಿ,ಸೂಪ್ ಕಲಡಿಸುತ್ತಿರುತ್ತದೆ.

ನರಕವಾಸಿಗಳು ತಮ್ಮ ಘೋರ ಶಿಕ್ಷೆಗಳನ್ನು ಅನುಭವಿಸುತ್ತಿರುತ್ತಾರೆ.

ದೆವ್ವ -ಸೂಪನ್ನು ತರುತ್ತದೆ.’ ಸೂಪ್ ಕುಡಿಯಲು ಬನ್ನಿ ‘

ಅಷ್ಟರಲ್ಲಿ ದೆವ್ವವು ಟಿಮ್ ನ್ನು ನೋಡುತ್ತದೆ:’ಯಾರೋ ಹೊಸಬರು ಬಂದಿದ್ದಾರೆ.’ ಟಿಮ್ ನ ಹೊಕ್ಕುಳಬಳ್ಳಿ ಯನ್ನು ನೋಡುತ್ತದೆ : ‘ ಓ, ನಿನಗೆ ಈವರೆಗೆ ನಿನ್ನ ಬದುಕಿನಲ್ಲಿ ಏನನ್ನೂ ಕೆಟ್ಟದ್ದನ್ನು ಮಾಡಲು ಅವಕಾಶವೇ ದೊರಕಿಲ್ಲ.ಹಾಗಾಗಿ ನಾನು ನಿನಗೆ ನಾನು ಏನೂ ಶಿಕ್ಷೆ ಕೊಡಲಾರೆ.ನಡೆ ಹೊರಗೆ!’

ಟಿಮ್ ಸಿಟ್ಟಿನಿಂದ ಅಲ್ಲಿ ಇದ್ದ ಹೂದಾನಿಗಳನ್ನು ,ಗೋಡೆಯಲ್ಲಿ ತೂಗುಹಾಕಿದ್ದ ಚಿತ್ರಗಳನ್ನು ಹರಿದು ಬಿಸಾಕುತ್ತದೆ(ತ್ತಾನೆ).

ಟಿಮ್ ನನ್ನು ನರಕದಿಂದ ಹೊರಕ್ಕೆ ಎಸೆಯಲು ದೆವ್ವವು ಆತನನ್ನು ಮುಟ್ಟಿ ಸುಟ್ಟುಹಾಕಲು ಪ್ರಯತ್ನಿಸುತ್ತದೆ.ಆದರೆ ಅದು ವಿಫಲ ಆಗುತ್ತದೆ.ಯಾಕೆಂದರೆ ಟಿಮ್ ಅತಿ ಮುಗ್ಧ .ಆದ್ದರಿಂದ ದೆವ್ವಕ್ಕೆ ಟಿಮ್ ನನ್ನು ಮುಟ್ಟಲು ಆಗುವುದಿಲ್ಲ.

ಟಿಮ್ ನನ್ನು ನರಕದಿಂದ ಹೊರಗೆ ಅಟ್ಟಲು ದೆವ್ವವು ಅನೇಕ ತಂತ್ರಗಳನ್ನು ಬಳಸುತ್ತದೆ-ಅದು ಬಹಳ ವಿನಯದಿಂದ ವರ್ತಿಸುತ್ತದೆ, ಕಾಮಚೇಷ್ಟೆಗಳನ್ನು  ಮಾಡುತ್ತದೆ.

ದೆವ್ವ :’ ಈಗ ನಾನು ಮೇಲಿನ ಲೋಕದಲ್ಲಿ ಹುಟ್ಟಿಕೊಂಡ ಸಮಸ್ಯೆಗಳನ್ನು ಪರಿಹರಿಸಬೇಕು.ಇದೊಂದು ಬೇವರ್ಸಿ ಕೆಲಸ.ತಡೆ ! ನಿನಗೆ ಬದುಕಬೇಕು ಎಂಬ ಬಯಕೆ ತಾನೇ ? ನೋಡೋಣ.ಈಗ ನನಗೊಂದು ಉಪಾಯ ಹೊಳೆದಿದೆ.ನಿನಗೆ ಮತ್ತೆ ಹೇಗೆ ಜೀವ ಕೊಡುವುದು ಎಂದು ನನಗೆ  ಈಗ ತಿಳಿಯಿತು.’

ದೃಶ್ಯ ೧೪: ದೆವ್ವ ಮತ್ತು ಟಿಮ್ ಯಾರಿಗೂ ಗೊತ್ತಾಗದಂತೆ ಸ್ವರ್ಗಕ್ಕೆ ಬರುತ್ತಾರೆ.

ಬದುಕಿನ ಚಕ್ರದ ಗಡಿಯಾರಗಳ ಆಡಳಿತಾಧಿಕಾರಿ ಸೈಂಟ್ ಮೈಕೆಲ್ ಕುಡಿಯುವ ಪಾನೀಯಕ್ಕೆ ಅವನಿಗೆ ಗೊತ್ತಾಗದಂತೆ  ಆ ದೆವ್ವವು ನಿದ್ರೆಯ ಮಾತ್ರೆಗಳನ್ನು ಬೆರಸುತ್ತದೆ.ಆತ ನಿದ್ರೆ ಹೋದಾಗ ಬದುಕಿನ ಗಡಿಯಾರವನ್ನು ನೇತುಹಾಕಿ , ಭ್ರೂಣ ಟಿಮ್ ಗೆ ಮತ್ತೆ ಜೀವ ಕೊಡುತ್ತದೆ .

ನಾಟಕ ಮುಗಿದೊಡನೆಯೇ ನಟನಟಿಯರು ರಂಗದ ಮೇಲೆ ಬಂದು ,ಪ್ರೇಕ್ಷಕರ ದೀರ್ಘ ಚಪ್ಪಾಳೆಯ ಮೆಚ್ಚುಗೆಯನ್ನು ಸ್ವೀಕರಿಸಿ ಖುಷಿ ಪಟ್ಟರು.ನಾಟಕ ನಿರ್ದೇಶಕ  ಸ್ಟೆಫಾನ್ ಮೆರ್ಕ್ ಮತ್ತು ಸಹಾಯಕ ನಿರ್ದೇಶಕಿ ಅಂಗೆಲಿಕಾ ಶೈದಿಗ್  ಕಲಾವಿದರನ್ನು ಕೂಡಿಕೊಂಡರು.

ರಂಗಮಂದಿರದ ಹೊರಗೆ ಕಾರಿಡಾರಿಗೆ ನಾವು ಬರುವಷ್ಟರಲ್ಲಿ ಕೆಲವು ನಟನಟಿಯರು ಆಗಾಗಲೇ ಅಲ್ಲಿ ಬಂದು ನಮ್ಮ ಜೊತೆಗೆ ಸೇರಿಕೊಂಡರು.ಈಗ ನನಗೆ ನಿಜವಾಗಿ ಅನುಮಾನ ಸುರುವಾಯಿತು.ರಂಗದ ಒಳಗಿನವರು ಯಾರು ,ಹೊರಗಿನವರು ಯಾರು, ಭ್ರೂಣ ಅವಸ್ಥೆಯಲ್ಲೇ ಉಳಿದವರು ಯಾರು,ಸ್ವರ್ಗ -ನರಕಗಳ ನಡುವಿನ ಲೋಕದಲ್ಲಿ ಅಂಡಲೆಯುತ್ತಿರುವವರು  ಯಾರು, ನಮ್ಮ ವಿಕಲತೆಯ ಮುಂದೆ ಆ ಕಲಾವಿದರು ಪರಿಪೂರ್ಣರಾಗಿ ಅಭಿನಯಿಸಿದ್ದು ಹೇಗೆ ,ಬದುಕುವ ಆಸೆಯನ್ನು ಕೊಲ್ಲುತ್ತಿರುವವರು ಯಾರು ? ನಾನು ನನ್ನ ಕ್ಯಾಮರಾ ಹೊರತೆಗೆದು ಪ್ರೇಕ್ಷಕರ ನೂಕುನುಗ್ಗಲಿನ ನಡುವೆಯೇ ಆ ನಾಟಕದ ಕೆಲವು ಕಲಾವಿದರ ಮೂರು ಫೋಟೋಗಳನ್ನು ಕ್ಲಿಕ್ಕಿಸಿದೆ.ರಂಗದ ಹೊರಗೂ ಲವಲವಿಕೆಯ ,ಬದುಕುವ ಆಸೆಯ ಅವರ ಚಿತ್ರಗಳನ್ನು ಇಲ್ಲಿ ಕೊಟ್ಟಿದ್ದೇನೆ.

Read Full Post | Make a Comment ( None so far )

ಪ್ರೇಮದ ಸುಂಟರಗಾಳಿಯಲ್ಲಿ ಸಿಕ್ಕಿಕೊಂಡು ದಿಕ್ಕು ತಪ್ಪಿದ ಹಡಗು :ವಾಸ್ಕೋ ದ ಗಾಮ

Posted on ನವೆಂಬರ್ 30, 2011. Filed under: ಜರ್ಮನ್ ಕತೆ, ರಂಗಭೂಮಿ, ವ್ಯೂರ್ತ್ಸ್ ಬುರ್ಗ್ | ಟ್ಯಾಗ್ ಗಳು:, , , , , , |

ಕಳೆದ ಶನಿವಾರ ,ನವಂಬರ ೨೬ರನ್ದು ವ್ಯೂರ್ತ್ಸ್ ಬುರ್ಗಿನ ಮಾಯಿನ್ ಫ್ರಾಂಕೆನ್ ಥಿಯೇಟರ್ ನಲ್ಲಿ ನಾನು ನೋಡಿದ ಒಪೆರ -‘L’Africaine ( Die Afrikanerin-Vasco de Gama). ಜರ್ಮನಿಯ ಪ್ರಸಿದ್ಧ ಒಪೆರ ಸಂಯೋಜಕ  Giacomo Meyerbeer (1791-1864) ರಚಿಸಿದ ಕೊನೆಯ ಒಪೆರ ಇದು.ಒಂದು ಕಾಲಕ್ಕೆ  ರಂಗಭೂಮಿಯಲ್ಲಿ ಬಹಳ ಪ್ರಸಿದ್ಧವಾಗಿದ್ದ ಮೆಯೇರ್ ಬೆಯೇರ್ ನ ಒಪೆರಗಳು ಕಳೆದ ಕೆಲವು ದಶಕಗಳಿಂದ ರಂಗದಲ್ಲಿ ಕಾಣಿಸಿಕೊಂಡದ್ದು ಬಹಳ ಕಡಮೆ.ಇಂತಹ ಸಂದರ್ಭದಲ್ಲಿ ಮಾಯಿನ್ ಫ್ರಾಂಕೆನ್ ಥಿಯೇಟರ್ ತಂಡದವರು ಪರಿಶ್ರಮ ಮತ್ತು ಉತ್ತಮ ತರಬೇತಿಯಿಂದ ಈ ಒಪೆರವನ್ನು ಮತ್ತೆ ರಂಗದ ಮೇಲೆ ತರುವ ಒಳ್ಳೆಯ ಪ್ರಯತ್ನ ಮಾಡಿದ್ದರು.

ಮೆಯೇರ್ ಬೆಯೇರ್ ನ L’Africaine -Vasco da Gama ಒಪೆರವು ಪೋರ್ಚುಗಲ್ ನ ಪ್ರಸಿದ್ಧ ಭೂಖಂಡ ಶೋಧಕ ವಾಸ್ಕೋ ದ ಗಾಮ ಎಂಬ ಐತಿಹಾಸಿಕ ವ್ಯಕ್ತಿಯ ಬದುಕಿಗೆ ಕಾಲ್ಪನಿಕ ಘಟನೆಗಳನ್ನು ಜೋಡಿಸಿದ ನಿರ್ಮಾಣ. ಇಬ್ಬರು ಹೆಣ್ಣುಗಳ ಪ್ರೇಮದ ಸುಳಿಯಲ್ಲಿ ದಿಕ್ಕು ಬದಲಿಸಿ ಪ್ರಯಾಣ ಮಾಡಿದ ವಾಸ್ಕೋ ದ ಗಾಮನ ಕಾಲ್ಪನಿಕ ಬದುಕು ಈ ಒಪೆರದಲ್ಲಿ ಮೆಲೋದ್ರಾಮದ ರೂಪದಲ್ಲಿ ಅನಾವರಣಗೊಂಡಿದೆ.ಪೋರ್ಚುಗಲ್ ನ ಅಡ್ಮಿರಲ್ ನ ಮಗಳು ಇನೆಸ್ ಎಂಬವಳು  ವಾಸ್ಕೋ ದ ಗಾಮನನ್ನು ಪ್ರೇಮಿಸುವುದು, ಆತನು  ಹಡಗಿನಲ್ಲಿ ಸಮುದ್ರಗಳನ್ನು ದಾಟುತ್ತಾ ಹೊಸ ದ್ವೀಪವೊಂದನ್ನು ಶೋಧಿಸುವುದು,ಅಲ್ಲಿನ ರಾಣಿ ಶೆಲಿಕಾ ಅವನನ್ನು ಪ್ರೇಮಿಸುವುದು ,ಅವನ ಹಿಂದಿನ ಪ್ರೇಯಸಿ ಇದರಿಂದ ಹತಾಶಳಾಗುವುದು,ದ್ವೀಪದ ರಾಣಿಯ ಆತ್ಮಹತ್ಯೆ -ಹೀಗೆ ಪ್ರೇಮದ ಕತೆಗಳ ಸುಳಿಯಲ್ಲಿ ವಾಸ್ಕೋ ದ ಗಾಮನ ಬದುಕಿನ ಹಡಗು ಸುತ್ತಿ ಸುಳಿದು ದಿಕ್ಕಾಪಾಲಾದ ರೋಚಕ ಕತೆ.

ಐದು ಅಂಕಗಳು ಇರುವ ಈ ಒಪೆರಾ ಸಂಜೆ ಏಳೂವರೆಗೆ ಆರಂಭವಾಗಿ ಒಂದು ವಿರಾಮದ ಸಹಿತ ರಾತ್ರಿ ಹನ್ನೊಂದೂವರೆಗೆ ಮುಕ್ತಾಯವಾಯಿತು.ಇಷ್ಟು ದೀರ್ಘ ಅವಧಿಯ ಪ್ರದರ್ಶನವನ್ನು ಥಿಯೇಟರ್ ಪೂರ್ಣ ತುಂಬಿದ್ದ ಪ್ರೇಕ್ಷಕರು ಏಕಾಗ್ರತೆಯಿಂದ  ನೋಡಿ ಬಹಳವಾಗಿ ಆನಂದಿಸಿ ಸಂಭ್ರಮಪಟ್ಟರು.ಒಪೆರಾದ ಈ ಪ್ರದರ್ಶನದ ಸಂಗೀತ ನಿರ್ದೇಶಕ -Enrico Calesso, ನಿರ್ಮಾಣ-  Gregor Horres, ರಂಗ ಸಜ್ಜಿಕೆ ಮತ್ತು ವಸ್ತ್ರ ವಿನ್ಯಾಸ – Jan Bammes,  ಕೋರಸ್ –  Markus Popp,ನಾಟಕ ರೂಪಾಂತರ-Christoph Blitt.

ಈ ಎಲ್ಲ ರಂಗಗಳಲ್ಲಿ ಪರಿಪೂರ್ಣತೆ ಹೊಂದಿದ್ದ ಮೊನ್ನೆಯ ಪ್ರದರ್ಶನ ನನಗೆ ಅತ್ಯದ್ಬುತ ಅನ್ನಿಸಿದ್ದು ರಂಗಸಜ್ಜಿಕೆ ಮತ್ತು ವಸ್ತುವಿನ್ಯಾಸದಲ್ಲಿ.ಐದು ಅಂಕಗಳಲ್ಲಿ ಒಂದನೆಯದು -ಪೋರ್ಚುಗಲ್ ನ ಲಿಸ್ಬನ್ ನಗರದ ಅಡ್ಮಿರಲ್ ಗಳ ಆಸ್ಥಾನದ ದೃಶ್ಯ.ಎರಡನೆಯದು -ಜೈಲಿನ ದೃಶ್ಯ.ಮೂರನೆಯದು -ಸಮುದ್ರದಲ್ಲಿ ಹಡಗಿನ ಒಳಗಿನ ನೋಟ.ನಾಲ್ಕನೆಯದು-ಹಿಂದೂ ಮಹಾಸಾಗರದ ಒಂದು ದ್ವೀಪದ ದೃಶ್ಯ.ಕೊನೆಯದು-ಆ ದ್ವೀಪದಲ್ಲಿ ಸಾವಿನ ಮರದ ಸುತ್ತಲಿನ ಆವರಣ.ಒಂದೇ ಸ್ಟೇಜನ್ನು ಕೆಲವೇ ನಿಮಿಷಗಳಲ್ಲಿ ಹೊಸಲೋಕವನ್ನಾಗಿ ರೂಪಾಂತರಿಸುತ್ತಿದ್ದ ಮೋಡಿ,ಪ್ರತೀ ದೃಶ್ಯದಲ್ಲಿಯೇ ರಂಗದೊಳಗೆ ಕ್ಷಣಕ್ಷಣಕ್ಕೆ ಆಗುತ್ತಿದ್ದ ಚಲನೆಗಳು ಸಿನೆಮಾದಲ್ಲಿ ಕಾಣುತ್ತಿದ್ದ ಭ್ರಮೆಯ ಚಿತ್ರಗಳಿಗಿಂತ ಹೆಚ್ಚು ಪರಿಣಾಮಕಾರಿ ಆಗಿದ್ದವು.ಇಡೀ ರಂಗಭೂಮಿಯನ್ನು ಒಂದು ಆಟಿಕೆಯಂತೆ ಚಲಿಸುವಂತೆ ಮಾಡುತ್ತಾ ,ಅದರ ಒಳಗೆ ವಾಸ್ತವದ ಭ್ರಮೆಯನ್ನು ಉಂಟುಮಾಡಿದ ವಿನ್ಯಾಸ ಬಹಳ ಮೆಚ್ಚುಗೆ ಪಡೆಯಿತು.ಜೈಲು , ಹಡಗು ಮತ್ತು ದ್ವೀಪ ದ ದೃಶ್ಯಗಳಲ್ಲಿ ಸುಮಾರು ಐವತ್ತಕ್ಕಿಂತ  ಹೆಚ್ಚುಮಂದಿ ನಟನಟಿಯರು ಮೇಲಿಂದ ಕೆಳಗಿನಿಂದ ಪಕ್ಕಗಳಿಂದ ಒಳಗಿನಿದ ಬರುವ ಹೋಗುವ ಚಲಿಸುವ ಕಾಣದಾಗುವ ವೇಗ ವಿಶಿಷ್ಟವಾಗಿತ್ತು .ಬೆಳಕಿನ ವಿನ್ಯಾಸವನ್ನು ಇದಕ್ಕೆ ಅನುಗುಣವಾಗಿ ಬದಲಾಯಿಸ ಲಾಗುತ್ತಿತ್ತು .ವಸ್ತ್ರವಿನ್ಯಾಸವನ್ನು ಪಾತ್ರಗಳ ಬದಲಾಗುತ್ತಿದ್ದ ಮೂಡ್ ಗಳಿಗೆ ಅನುಸಾರವಾಗಿ ಬದಲಾವಣೆ ಮಾಡುತ್ತಿದ್ದ  ಕ್ರಮದಿಂದಾಗಿ ಆ ಪಾತ್ರಗಳೇ ಬೇರೆಯೋ ಎನ್ನುವ ಭ್ರಮೆಯನ್ನು ಉಂಟುಮಾಡುತ್ತಿತ್ತು.ದ್ವೀಪದ ರಾಣಿ ಶೆಲಿಕಾ ಮೊದಲು ಗುಲಾಮಳಂತೆ ಕಾಣಿಸಿಕೊಂಡರೆ ಮುಂದಿನ ದೃಶ್ಯದಲ್ಲಿ  ಗುಡ್ಡಗಾಡು ರಾಣಿಯಂತೆ ಕಾಣುತ್ತಿದ್ದಳು.ವಾಸ್ಕೋ ದ ಗಾಮ ಆರಂಭದ ದೃಶ್ಯಗಳಲ್ಲಿ ಸಾಹಸಿಯಂತೆ ವೀರನಂತೆ ಕಾಣಿಸುತ್ತಿದ್ದರೆ ಕೊನೆಕೊನೆಗೆ ಅಸಹಾಯಕನಾಗಿ ಗುಲಾಮನಂತೆ ಭಾಸವಾಗುತ್ತಿದ್ದನು.ಪಾತ್ರಗಳ ಬದಲಾದ ಸ್ಥಿತಿ ಮತ್ತು ಮೂಡ್ ಗಳಿಗೆ ಅನುಗುಣವಾಗಿ ವಸ್ತ್ರವಿನ್ಯಾಸ ಮತ್ತು ಸಂಗೀತದ ಬದಲಾವಣೆ -ಈ ಒಪೆರದಲ್ಲಿ ನಾನು ಬಹಳ ಮೆಚ್ಚಿಕೊಂಡ ಅಂಶ.ಹಾಗೆಯೇ ರಂಗವಿನ್ಯಾಸದಲ್ಲಿ  ಒಂದೇ ದೃಶ್ಯದಲ್ಲಿ ಸನ್ನಿವೇಶದ ಬದಲಾವಣೆಗೆ ಹೊಂದಿಕೊಂಡು ನಾವು ನೋಡುನೋಡುತ್ತಿದ್ದಂತೆಯೇ  ಕ್ಷಣಕ್ಷಣ ಬದಲಾಗುತಿದ್ದ ಪವಾಡದಂತಹ ರೂಪಾಂತರ ಸಂಭವಿಸುತ್ತಿತ್ತು.ಸಂಗೀತವೇ ಜೀವಾಳವಾಗಿರುವ ಒಪೆರಾಗಳಲ್ಲಿ ರಂಗವಿನ್ಯಾಸ ಮತ್ತು ವಸ್ತ್ರವಿನ್ಯಾಸಗಳನ್ನೂ ರಸಗಳ ಸ್ಥಿತ್ಯಂತರಗಳ ಜೊತೆಗೆ ಪೂರ್ಣಪ್ರಮಾಣದಲ್ಲಿ ಜೋಡಿಸಿಕೊಂಡದ್ದು  ಈ ಒಪೆರಾ ಪ್ರದರ್ಶನದ ದೊಡ್ಡ ಆಕರ್ಷಣೆ.ಶೃಂಗಾರ,ಕರುಣ,ವೀರ ,ರೌದ್ರ,ಅದ್ಭುತ ,ಭಯಾನಕ ರಸಗಳೇ ಪ್ರಧಾನವಾಗಿದ್ದ ಈ ಒಪೆರಾದಲ್ಲಿ ಪಾತ್ರಗಳ ಅವಸ್ಥೆಗಳೇ ಹಾಸ್ಯದ ವಸ್ತುಗಳಾಗಿದ್ದವು.

ಅಂಕ ೧ : ಪೋರ್ಚುಗಲ್ ನ ಲಿಸ್ಬನ್  ನಗರದ ಕೌನ್ಸಿಲ್ .

ಪೋರ್ಚುಗಲ್ ನ ಕೌನ್ಸಿಲ್ ನ ಅಡ್ಮಿರಲ್ ಡಾನ್ ಡಿಯೇಗೋ   ತನ್ನ ಮಗಳು ಇನೆಸ್ , ಕೌನ್ಸಿಲ್ ನ ಅಧ್ಯಕ್ಷ ಡಾನ್ ಪೆದ್ರೊ ನನ್ನು ಮದುವೆಯಾಗಬೇಕು ಎಂದು ಒತ್ತಾಯಿಸುತ್ತಾನೆ.ಆದರೆ ಇನೆಸ್ , ಸಾಹಸಿ  ನಾವಿಕ ,ಭೂಖಂಡಗಳ ಅನ್ವೇಷಕ ವಾಸ್ಕೋ ದ ಗಾಮಾನನ್ನು ಪ್ರೀತಿಸುತ್ತಿರುತಾಳೆ ಮತ್ತು ಅವನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿಯುತ್ತಾಳೆ. ಅನ್ವೇಷಣೆಯ ಪ್ರಯಾಣವೊಂದರಲ್ಲಿ  ಸತ್ತುಹೋಗಿದ್ದಾನೆ ಎಂದು ಭಾವಿಸಲಾಗಿದ್ದ ಗಾಮಾ ,ಜನರಲ್  ಕೌನ್ಸಿಲ್ ಮುಂದೆ ಕಾಣಿಸಿಕೊಳ್ಳುತ್ತಾನೆ.ತಾನು ಹೊಸ ದೇಶವೊಂದನ್ನು ಕಂಡುಹಿಡಿದಿದ್ದೇನೆ ಎಂದು ಕೌನ್ಸಿಲ್ ನಲ್ಲಿ ಘೋಷಿಸಿ ,ತಾನು ಸೆರೆಹಿಡಿದು  ತಂದ ಇಬ್ಬರು ಗುಲಾಮರನ್ನು -ಶೆಲಿಕಾ   ಮತ್ತು ನೆಲುಸ್ಕೋ ರನ್ನು ಅಲ್ಲಿ ಹಾಜರುಪಡಿಸುತ್ತಾನೆ.ಇವರು ಹೊಸ ಒಂದು ಬುಡಕಟ್ಟಿಗೆ ಸೇರಿದವರು ಎಂದು ತಿಳಿಸುತ್ತಾನೆ.ತನ್ನ ಭೂ ಅನ್ವೇಷಣೆಗೆ ಕೌನ್ಸಿಲ್ ನ ಸಹಾಯ ಕೇಳುತ್ತಾನೆ.ಆದರೆ ಅದಕ್ಕೆ ಅನುಮತಿ ದೊರೆಯುವುದಿಲ್ಲ.ವಾಸ್ಕೋ ದ ಗಾಮಾನನ್ನು ಜೈಲಿಗೆ ಹಾಕುತ್ತಾರೆ.

ಅಂಕ ೨ : ಜೈಲಿನ ದೃಶ್ಯ .

ಶೆಲಿಕಾ ನಿಜವಾಗಿ ಒಂದು ಅಪರಿಚಿತ ದ್ವೀಪದ ರಾಣಿ.ಅವಳು ವಾಸ್ಕೋ ದ ಗಾಮಾನನ್ನು ಪ್ರೀತಿಸುತ್ತಿರುತ್ತಾಳೆ.ಅವಳ ಸಹಚರ ನೆಲುಸ್ಕೋ ಅವಳನ್ನು ಮದುವೆಯಾಗಲು ಬಯಸಿರುತ್ತಾನೆ.ಅದಕ್ಕಾಗಿ ಆತ ಜೈಲಿನಲ್ಲಿ ಗಾಮಾನನ್ನು ಕೊಳ್ಳಲು ಪ್ರಯತ್ನಿಸುತ್ತಾನೆ.ಆದರೆ ಶೆಲಿಕಾ ಇದನ್ನು ತಪ್ಪಿಸುತ್ತಾಳೆ.ಇನ್ನೊಂದು ಕಡೆ ಇನೆಸ್ ತಾನು ಡಾನ್ ಪೆದ್ರೋನನ್ನು ಮದುವೆಯಾಗಬೇಕಾದರೆ ಗಾಮಾನನ್ನು ಜೈಲಿನಿಂದ ಬಿಡುಗಡೆಮಾಡಬೇಕು ಎಂದು ತಂದೆಯನ್ನು ಒತ್ತಾಯಿಸುತ್ತಾಳೆ.ಗಾಮಾನ ಬಿಡುಗಡೆ ಆಗುತ್ತದೆ.

ಅಂಕ ೩:ಡಾನ್ ಪೆದ್ರೊ ನ ಹಡಗಿನಲ್ಲಿ.

ಯುರೋಪಿಯನ್ನರು ತುಂಬಿರುವ ಒಂದು ಹಡಗನ್ನು ನೆಲುಸ್ಕೋ  ನಡೆಸುತ್ತಿರುತ್ತಾನೆ.ಆ ಹಡಗಿನಲ್ಲಿ ಇರುವ ಎಲ್ಲ ಯುರೋಪಿಯನ್ನರನ್ನು ಸಮುದ್ರದಲ್ಲಿ ಮುಳುಗಿಸಿ ಸಾಯಿಸಲು ಆತ ಸಂಚುಹೂಡುತ್ತಾನೆ.ಆತನು ಸಮುದ್ರದಲ್ಲಿ ತೂಫಾನು ಎಬ್ಬಿಸಿ ಹಡಗನ್ನು ಮುಳುಗಿಸುವ ಕಡಲ ದೈತ್ಯನ ಐತಿಹ್ಯದ ಕಥನವನ್ನು ಹಾಡುತ್ತಾನೆ.ಬಿರುಗಾಳಿಗೆ ನೇರವಾಗಿ  ಒಡ್ಡಿಕೊಳ್ಳುವಂತೆ ನೆಲುಸ್ಕೋ ಹಡಗನ್ನು ಮುಂದಕ್ಕೆ ಕೊಂಡೊಯ್ಯುತ್ತಾನೆ. ವಾಸ್ಕೋ ದ ಗಾಮಾ ನು ಇನ್ನೊಂದು ಹಡಗಿನಲ್ಲಿ ಅವರನ್ನು ಹಿಂಬಾಲಿಸುತ್ತಾನೆ.ಅವನ ಹಡಗಿನಲ್ಲಿ ಇದ್ದ ಡಾನ್ ಪೆದ್ರೊ , ಆ ಹಡಗನ್ನು ಅಪಾಯಕ್ಕೆ ಸಿಲುಕಿಸಿ ಗಾಮಾನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ.ಗಾಮಾನ ಎಚ್ಚರಿಕೆಯನ್ನು ಲೆಕ್ಕಿಸದೆ ಅನಾಹುತದ  ಕಡೆಗೆ ಹಡಗನ್ನು ನಡೆಸುತ್ತಾನೆ.ಅಲ್ಲಿಯೇ ಗಾಮಾನನ್ನು ಸೆರೆಹಿಡಿಯುತ್ತಾನೆ.ಬಿರುಗಾಳಿ ಜೋರಾಗಿ ಬೀಸಿ ಅನಾಹುತ ಸಂಭವಿಸುತ್ತದೆ.ನೆಲುಸ್ಕೋ ಸ್ಥಳೀಯ ಜನರ ನೆರವಿನಿಂದ ಹಡಗಿನಲ್ಲಿ ಇದ್ದ ಎಲ್ಲ ಯುರೋಪಿಯನ್ನರನ್ನು ಕೊಲ್ಲುತ್ತಾನೆ.ವಾಸ್ಕೋ ದ ಗಾಮಾನನ್ನು ಒಬ್ಬನನ್ನು ಮಾತ್ರ ಜೀವಂತ ಉಳಿಸುತ್ತಾನೆ.

ಅಂಕ ೫ : ಹಿಂದೂ ಮಹಾಸಾಗರದಲ್ಲಿ ಒಂದು  ದ್ವೀಪ.

ಅದು ಹಿಂದೂ ಮಹಾಸಾಗರದಲ್ಲಿ ಇರುವ  ಒಂದು ಅಪರಿಚಿತ ದ್ವೀಪ.ಅದರ ರಾಣಿ  ಶೆಲಿಕಾ.ಶೆಲಿಕಾ ತನ್ನ ದ್ವೀಪಕ್ಕೆ ಬಂದಾಗ ಅವಳಿಗೆ ಭವ್ಯ ಸ್ವಾಗತ ಸಿಗುತ್ತದೆ.ಅವಳು ತನ್ನ ನೆಲದ ಕಾನೂನುಗಳನ್ನು ಎತ್ತಿಹಿಡಿಯುವ ಪ್ರತಿಜ್ಞೆ ಮಾಡುತ್ತಾಳೆ.ಅಂತಹ  ಒಂದು ಕಾನೂನು ಎಂದರೆ -ವಿದೇಶಿಯರನ್ನು ಕೊಲ್ಲುವುದು.ಆ ದ್ವೀಪದ  ದೈವ ‘ಬ್ರಹ್ಮ’. ಭಾರತೀಯ ಪುರಾಣದ ‘ಬ್ರಹ್ಮ’ನನ್ನು ಒಪೆರಾದ ಈ ಕಾಲ್ಪನಿಕ ಕತೆಯಲ್ಲಿ ಭಾರತಕ್ಕೆ ಸಮೀಪದ  ಒಂದು ಕಾಲ್ಪನಿಕ  ದ್ವೀಪದ ದೇವರು ಎಂದು ಚಿತ್ರಿಸಿದ್ದು ವಿಶೇಷವಾಗಿತ್ತು.ಮೊನ್ನೆಯ ಒಪೆರಾ ಥಿಯೇಟರ್ ನ ಪ್ರದರ್ಶನದ   ಪ್ರೇಕ್ಷಕರಲ್ಲಿ ನಾನು ಒಬ್ಬನೇ ಭಾರತೀಯ ಇದ್ದದ್ದು- ವಾಸ್ಕೋ ದ ಗಾಮ  ಒಪೆರಾದ ಕಾಲ್ಪನಿಕ ದ್ವೀಪದಲ್ಲಿ ಭಾರತದ ‘ಬ್ರಹ್ಮ’ಇದ್ದ ಹಾಗೆ !

ಬ್ರಹ್ಮನ ಪೂಜಾರಿಗಳು ವಾಸ್ಕೋ ದ ಗಾಮಾನನ್ನು ಬಂಧಿಸಿ ,ಬಲಿಕೊಡಲು ಯೋಚಿಸುತ್ತಾರೆ.ಗಾಮಾ ಆ ದ್ವೀಪದ ಅದ್ಭುತಗಳನ್ನು ಕಂಡು ಆಶ್ಚರ್ಯಗೊಳ್ಳುತ್ತಾನೆ.ಅಲ್ಲಿನ ಸೊಬಗನ್ನು ಕಂಡು ಭಾವಾತಿರೇಕದಿಂದ ‘ಓ  ಸ್ವರ್ಗವೇ ‘ ಎಂಬ ಒಪೆರಾ ಹಾಡನ್ನು ಹಾಡುತ್ತಾನೆ.ಶೆಲಿಕಾ -ಗಾಮಾನನ್ನು ತನ್ನ ಗಂಡ ಎಂದು ಹೇಳಿ ,ಆತನ ಪ್ರಾಣ ಉಳಿಸುತ್ತಾಳೆ.ಅದು ನಿಜ ಎಂದು ನೆಲುಸ್ಕೋ ನಿಂದ ಪ್ರಮಾಣ ಮಾಡಿಸುತ್ತಾಳೆ.ಬಳಿಕ ಶೆಲಿಕಾ ಆ ದ್ವೀಪದ ಒಂದು ಮರದ ಹೂವಿನ ರಸವನ್ನು ಗಾಮಾನಿಗೆ ಕುಡಿಯಲು ಕೊಡುತ್ತಾಳೆ.ಆ ಪ್ರೇಮ ವಶೀಕರಣದ ರಸವನ್ನು  ಕುಡಿದ ಕೂಡಲೇ ಶೆಲಿಕಾಳಲ್ಲಿ  ಮೋಹಪರವಶನಾದ ಗಾಮಾ ಅವಳೊಂದಿಗೆ ಕೂಡುತ್ತಾನೆ.ಆಗ ಅಮಲಿನಲ್ಲಿ ಇರುವಾಗ ಅಲ್ಲಿ ವನಿಗೆ ಇನೆಸ್ ಳ ಧ್ವನಿ ಕೇಳಿಸುತ್ತದೆ.ಇನೆಸ್ ಅಲ್ಲಿಗೆ ಗಾಮಾನನ್ನು ಹುಡುಕಿಕೊಂಡು ಬರುತ್ತಾಳೆ.

ಅಂಕ ೫: ದ್ವೀಪದಲ್ಲಿ .

ವಾಸ್ಕೋ ದ ಗಾಮ ಮತ್ತು ಇನೆಸ್ ಅವರ ಸಮಾಗಮದ ಸನ್ನಿವೇಶವು ಶೆಲಿಕಾ ಳಲ್ಲಿ ತಾನು ಮೋಸಹೋದೆ ಎನ್ನುವ ಅರಿವನ್ನು  ಉಂಟುಮಾಡುತ್ತದೆ.ಇಬ್ಬರು  ಪ್ರೇಯಸಿಯರ ಒತ್ತಡಗಳ ನಡುವೆ ವಾಸ್ಕೋ ದ ಗಾಮ ಈಗ ನಿಸ್ಸಹಾಯಕನಾಗಿ ಗುಲಾಮನಂತೆ ನಿಂತುಬಿಡುತ್ತಾನೆ.ಸಾಹಸಿ ,ಭೂಖಂಡಗಳ ಅನ್ವೇಷಕ,ನಾವಿಕ ಗಾಮಾ ಈಗ ಒಬ್ಬ ಅಧೀರ ಅಸಹಾಯಕ ಕೋಡಂಗಿಯಂತೆ  ಕಾಣಿಸುತ್ತಾನೆ.ಈಗ ಕಾಣಿಸುವ ಬಿಕ್ಕಟ್ಟು ಇಬ್ಬರು ಹೆಣ್ಣುಗಳಲ್ಲಿ ಯಾರು ತ್ಯಾಗ ಮಾಡಬೇಕು ಎನ್ನುವುದು .ಕೊನೆಗೂ ತನ್ನ ಪ್ರೇಮವನ್ನು ತ್ಯಾಗಮಾಡುವವಳು ಅಪರಿಚಿತ ದ್ವೀಪವಾಸಿ , ಬುಡಕಟ್ಟು ಜನಾಂಗದ ಹೆಣ್ಣು ಶೆಲಿಕಾ.ಆಕೆ ಗಾಮಾನನ್ನು ಇನೆಸ್ ಜೊತೆಗೆ ಹಡಗಿನಲ್ಲಿ ಕಳುಹಿಸುವ ವ್ಯವಸ್ಥೆ ಮಾಡುತ್ತಾಳೆ.ಇದಕ್ಕಾಗಿ ನೆಲುಸ್ಕೊನನ್ನು ಅವರಿಬ್ಬರನ್ನು  ಹಡಗು ಹತ್ತಿಸಿ ಕಳುಹಿಸಲು ಅಜ್ನಾಪಿಸುತ್ತಾಳೆ.ಮತ್ತೆ ಈಕಡೆಯಲ್ಲಿ ಶೆಲಿಕಾ ವಿಷದ ಹೂಗಳನ್ನು ಬಿಡುವ ಮರದ ಹೂಗಳ ಪರಿಮಳವನ್ನು ಮೂಸುತ್ತಾ ಮೂಸುತ್ತಾ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇವಳ ಸಾವನ್ನು ಕಂಡ ನೆಲುಸ್ಕೋ ತಾನು ಸಾವನ್ನು ಅಪ್ಪಿಕೊಳ್ಳುತ್ತಾನೆ.

ವಾಸ್ಕೋ ದ ಗಾಮಾನನ್ನು ಇತಿಹಾಸಕಾರರು ಅನೇಕ ರೀತಿಯಲ್ಲಿ ಚಿತ್ರಿಸಿದ್ದಾರೆ.ಅವನು ಕ್ರೂರಿಯಾಗಿದ್ದ ,ಅವನು ಭಾರತಕ್ಕೆ ಮೂರು ಬಾರಿ ಬಂದ ಸಂದರ್ಭಗಳಲ್ಲಿ ಕಲ್ಲಿಕೋಟೆಯಲ್ಲಿ ಅನೇಕ ಮಂದಿಯನ್ನು ಕೊಂದ ಎನ್ನುವ ಬಗ್ಗೆ ಇತಿಹಾಸದ ಬರಹಗಳಲ್ಲಿ ವಿವರಗಳು ದೊರೆಯುತ್ತವೆ.ಈ ಒಪೆರಾ ಚರ್ಚಿಸುವ ಒಂದು ಮುಖ್ಯ ಆಶಯ -ಸ್ಥಳೀಯ ಮತ್ತು ಹೊರಗಿನ ಎನ್ನುವ ಪರಿಕಲ್ಪನೆ.ಯುರೋಪಿಯನ್ನರಿಗೆ ಹೊರಗಿನ ನಾಡವರ ಬಗ್ಗೆ ಈರೀತಿಯ ಪೂರ್ವಗ್ರಹ ಇತ್ತು ಎನ್ನುವ ಅಂಶ ಇಲ್ಲಿ ಧ್ವನಿಪೂರ್ಣವಾಗಿ ಪ್ರಸ್ತಾವವಾಗಿದೆ.ವಾಸ್ಕೋ ದ ಗಾಮ ತಾನು ಕಂಡ ಅಪರಿಚಿತ ದ್ವೀಪಕ್ಕೆ ಬಂದಾಗ ಮೊದಲು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಂಡು ಭಾವಪರವಶಗೊಳ್ಳುತ್ತಾನೆ.ಆದರೆ ಅವನ ತಂಡದವರು -ಯುರೋಪಿಯನ್ನರು -ಆ ದ್ವೀಪವನ್ನು ವಶಪಡಿಸಿಕೊಳ್ಳಲು ಬಯಸುತ್ತಾರೆ,ದ್ವೀಪದ ನಿವಾಸಿಗಳನ್ನು ಗುಲಾಮರನ್ನಾಗಿ ಮಾಡಿಕೊಳ್ಳುತ್ತಾರೆ ಇಲ್ಲವೇ ಕೊಲ್ಲುತ್ತಾರೆ.ವಸಾಹತೀಕರಣದ ಪ್ರಕ್ರಿಯೆಯನ್ನು ಇಲ್ಲಿ ಸಾಂಕೇತಿಕವಾಗಿ ಸೂಚಿಸಲಾಗಿದೆ.ಅಧಿಕಾರ ಮತ್ತು ಪ್ರೇಮದ ಮುಖಾಮುಖಿ -ಇಲ್ಲಿ ಚರ್ಚಿತವಾದ ಇನ್ನೊಂದು ಪರಿಕಲ್ಪನೆ. ವಾಸ್ಕೋ ದ ಗಾಮಾನ ,ಯುರೋಪಿಯನ್ನರ ಅಧಿಕಾರ -ಅಪರಿಚಿತ ದ್ವೀಪದಲ್ಲಿ ನಿಷ್ಪ್ರಯೋಜಕ ಆಗುತ್ತದೆ.ಅಧಿಕಾರಸ್ಥರು ಜೈಲಿನಲ್ಲಿ ಅಸಹಾಯಕರು ಆಗುತ್ತಾರೆ.ಕೊನೆಗೂ ಗಾಮಾನನ್ನು ಜೈಲಿನಿಂದ ಬಿಡಿಸುವುದು ಶೆಲಿಕಾ ಅವಳ ಪ್ರೇಮವೇ ಹೊರತು ,ಗಾಮಾನ ಅಧಿಕಾರ ಅಲ್ಲ.ಮತ್ತೆ ಶೆಲಿಕಾ ಮತ್ತು ಇನೆಸ್ ಇವರ ನಡುವಿನ ಪ್ರೇಮದ ಬಿಕ್ಕಟ್ಟಿನಲ್ಲಿ ಗಾಮಾನನ್ನು ಪಾರುಮಾಡುವುದು ಶೆಲಿಕಾ ಅವಳ ಪ್ರೇಮತ್ಯಾಗವೇ ಹೊರತು ಗಾಮಾನ ಅಧಿಕಾರವೂ ಅಲ್ಲ, ಯುರೋಪಿಯನ್ ಹೆಣ್ಣು ಇನೆಸ್ ಳ ಅಪ್ಪನ ಅಧಿಕಾರವೂ ಅಲ್ಲ.

ನಮ್ಮ ಎಲ್ಲರ ಬದುಕು ಕೂಡಾ ಒಂದು ನಿರ್ದಿಷ್ಟ  ಗುರಿ ಗೊತ್ತು ಇಲ್ಲದ , ಅನ್ವೇಷಣೆಯ ಸಮುದ್ರ ಪ್ರಯಾಣ.ಇಂತಹ ಸಾಹಸದ ಯಾನದಲ್ಲಿ ಬಿರುಗಾಳಿಗಳು ಏಳುತ್ತವೆ ,ಕೆಲವರು ಪ್ರಯತ್ನಪೂರ್ವಕ ತೂಫಾನು ಎಬ್ಬಿಸಬಹುದು.ದಾರಿಯಲ್ಲಿ ಅಪರಿಚಿತ ದ್ವೀಪಗಳು ಕಾಣಸಿಗಬಹುದು.ಅಲ್ಲಿನ ನಿವಾಸಿಗಳು ನಮಗಿಂತ ಬೇರೆಯಾಗಿ ಬದುಕುವವರು  ಇರಬಹುದು ,ಅವರನ್ನು ಅನಾಗರಿಕರು ಎನ್ನುವುದು ನಮ್ಮ ಪೂರ್ವಗ್ರಹ.ನಮ್ಮ ಅಧಿಕಾರ ,ಸಂಪತ್ತು ಎಂಬ  ಕಟ್ಟಿಕೊಂಡ ಭ್ರಮೆಯ ಹಡಗುಗಳು ನುಚ್ಚುನೂರಾದಾಗ ನಮ್ಮನ್ನು ಕಾಪಾಡುವವರು ಶೆಲಿಕಾ ಅವಳಂತಹ ಹೆಣ್ಣುಗಳು,ಕತ್ತಲ ಖಂಡದ ಗುಡ್ಡಗಾಡು ಜನರು.ಇದು ವಸಾಹತುಗಳನ್ನು ಕಟ್ಟಿಕೊಂಡ  ಹಿಂದಿನ ಯುರೋಪಿಯನ್ನರಿಗೆ ಮಾತ್ರ ಅಲ್ಲ, ನವವಸಾಹತುಗಳನ್ನು ಜಾತಿ ಧರ್ಮ ಹಣ ಅಧಿಕಾರ ಅಂತಸ್ತುಗಳೆಂಬ  ಹಡಗುಗಳ ರೂಪದಲ್ಲಿ  ಕಟ್ಟಿಕೊಂಡು  ಪ್ರಯಾಣಿಸುವ ನಮ್ಮ   ನಾಡುಗಳ ಎಲ್ಲ ಜನರಿಗೂ ಅನ್ವಯಿಸುತ್ತದೆ.

Photo courtesy :Mainfranken Theater,Wurzburg-Newsletter.

Read Full Post | Make a Comment ( None so far )

ಪ್ರೀತಿಯ ಮಳೆ ಇಲ್ಲದ ಮರುಭೂಮಿ :ಜರ್ಮನ್ ಆಫ್ರಿಕನ್ ಮುಖಾಮುಖಿಯ ಒಂದು ನಾಟಕ

Posted on ನವೆಂಬರ್ 9, 2011. Filed under: ಜರ್ಮನಿ, ರಂಗಭೂಮಿ, ವ್ಯೂರ್ತ್ಸ್ ಬುರ್ಗ್ | ಟ್ಯಾಗ್ ಗಳು:, , , , , , , |

ಆಫ್ರಿಕಾದ ಒಂದು ದೇಶ ‘ಬುರ್ಕಿನ ಫಾಸೊ ‘.ಅಲ್ಲಿನ ಒಂದು ಪಬ್ .ಅಲ್ಲಿ ಆಫ್ರಿಕನ್ ಹಾಡು ಕುಣಿತ ಕುಡಿತ ಜೋರಾಗಿ ನಡೆಯುತ್ತಿರುತ್ತದೆ.ಅಲ್ಲಿಗೆ ಏಳು ಜನ ಯುರೋಪಿಯನ್ನರು /ಜರ್ಮನರು -ಗಂಡು ಹೆಣ್ಣು ಸೇರಿ -ಬರುತ್ತಾರೆ.ಕರಿಯ ಗಂಡು ಹೆಣ್ಣುಗಳು ಮತ್ತು ಬಿಳಿಯ ಗಂಡು ಹೆಣ್ಣುಗಳು ಅಲ್ಲಿ ಮುಖಾಮುಖಿ ಆಗುತ್ತಾರೆ.ಮೊದಮೊದಲಿಗೆ ಗದ್ದಲದಂತೆ ಕಂಡ ಆಫ್ರಿಕನ್ ಸಂಗೀತವನ್ನು ನಿದಾನವಾಗಿ ಇಷ್ಟಪಡುತ್ತಾರೆ ಯುರೋಪಿಯನ್ ಆಗಂತುಕರು ಆ ಪಬ್ ನಲ್ಲಿ.ಆರಂಭದ ಅಂತರದ ಬಳಿಕ ಕರಿಯರ ಮತ್ತು ಬಿಳಿಯರ ನಡುವೆ ಸಣ್ಣ ಸಣ್ಣ ಮಾತುಗಳ ವಿನಿಮಯ ಮೊದಲಾಗುತ್ತದೆ.ಅದು ಮುಂದೆ ಚರ್ಚೆಯ ರೂಪಕ್ಕೆ ತಿರುಗುತ್ತದೆ.’ಆಫ್ರಿಕಾಕ್ಕೆ ಹೇಗೆ ಸಹಾಯ ಮಾಡಬಹುದು ‘ಎನ್ನುವುದು ಒಂದು ಪ್ರಶ್ನೆ.’ಯುರೋಪಿಗೆ ಹೇಗೆ ಸಹಾಯ ಮಾಡಬಹುದು ?’ ಅದಕ್ಕೆ ಮರುಪ್ರಶ್ನೆ.’ನಿಜವಾಗಿಯೂ ಆಫ್ರಿಕ ಅಥವಾ ಯುರೋಪಿಗೆ ಬೇರೆಯವರು  ಸಹಾಯ ಮಾಡಬೇಕೆ ?’ -ಮುಂದಿನ ದೊಡ್ಡ ಪ್ರಶ್ನೆ.

ಯುರೋಪಿಯನ್ ಒಬ್ಬ ಆಫ್ರಿಕಾದ ವಿಪರೀತ ಸೆಕೆಗೆ ಒಂದೇ ಸವನೆ ಬೆವರುತ್ತಾ ಸೊಳ್ಳೆಗಳ ಕಾಟ ತಡೆಯಲಾರದೆ ಅಲ್ಲಿನ ಪರಿಸರದ ಬಗ್ಗೆ ಟೀಕೆ ಮಾಡುತ್ತಾನೆ.ಮತ್ತೆ ಯುರೋಪಿಯನ್ ಆಗಂತುಕರು ಆಫ್ರಿಕನ್ ಬಟ್ಟೆಗಳನ್ನು ಧರಿಸಿದಾಗ ತಮಾಷೆಯಾಗಿ ಕಾಣಿಸುತ್ತಾರೆ.ಮೊದಮೊದಲು ತಮಾಷೆ ಅನ್ನಿಸಿದ್ದು ,ಕ್ರಮೇಣ ಹಾಸ್ಯಾಸ್ಪದವಾಗಿ ಕಾಣಿಸುತ್ತವೆ.ಬುರ್ಕಿನ ಫಾಸೊ ದ ಆಫ್ರಿಕನ್ ಯುವಕ ಯುವತಿಯರು ತಮ್ಮ ದೇಶದ ರಾಜಕೀಯ ಭ್ರಷ್ಟತೆಯ ಬಗ್ಗೆ ತಮ್ಮ ಆಕ್ರೋಶವನ್ನು ಪ್ರಕಟಿಸುತ್ತಾರೆ.ಅವರ ದೇಶದ ಅಧ್ಯಕ್ಷನ ಭ್ರಷ್ಟಾಚಾರದ ಚರ್ಚೆ ಮಾಡುತ್ತಾರೆ .ಆತ ಹಣವನ್ನು ದುಂದುವೆಚ್ಚ ಮಾಡುತ್ತಿದ್ದಾನೆ ,ಬಡಜನರಿಗೆ ಸಹಾಯ ಮಾಡುತ್ತಿಲ್ಲ ಎನ್ನುವುದು ಆಫ್ರಿಕನ್ ಯುವಕರ ಸಿಟ್ಟು. ಆ ದೇಶದಲ್ಲಿ ಕಸ ಗುಡಿಸಿ ಜೀವನ ಸಾಗಿಸುತ್ತಿದ್ದ ಬಡ ಹೆಣ್ಣೊಬ್ಬಳನ್ನು ಆ ದೇಶದ ಸೈನಿಕರು ಅತ್ಯಾಚಾರ ಮಾಡಿ ಕೊಂದ ಬರ್ಬರ ಸಂಗತಿಯನ್ನು ಆಫ್ರಿಕನ್ ಯುವತಿಯೊಬ್ಬಳು  ರೋಷದಿಂದ ಹೇಳುತ್ತಾಳೆ.ಇವಳೇ  ಅತ್ಯಾಚಾರದಿಂದ ಸತ್ತ ಆ ಹೆಂಗುಸಿನ ಮಗಳು.ಈಗ ಈ ಯುವತಿ ಮಹಿಳಾಪರ ಹೋರಾಟದ ನಾಯಕಿಯಾಗಿದ್ದಾಳೆ.ದೇಶದೊಳಗೆ ನಾಗರಿಕ ಹೋರಾಟ ಆಗಬೇಕು ಎನ್ನುವುದು ಅವಳ ಛಲ.

ಕಳೆದ ಶನಿವಾರ ,ನವಂಬರ ಏಳರಂದು ವ್ಯೂರ್ತ್ಸ್ ಬುರ್ಗಿನ Mainfranken Theater ನಲ್ಲಿ ಸಂಜೆ ನಾನು ನೋಡಿದ Les Funerailles du Desert ( Die Stadt der Einsamen) ನಾಟಕದ ಆರಂಭದ ದೃಶ್ಯಗಳು ಇವು. ಫ್ರೆಂಚ್ ಭಾಷೆಯ ಶೀರ್ಷಿಕೆ ಮತ್ತು ಜರ್ಮನ್ ಭಾಷೆಯ ಉಪಶೀರ್ಷಿಕೆ ಇದ್ದ ನಾಟಕದಲ್ಲಿ ನಟನಟಿಯರು ಮೂರು ಭಾಷೆಗಳಲ್ಲಿ ಸಂಭಾಷಣೆ  ನಡೆಸಿದರು.ಫ್ರೆಂಚ್, ಜರ್ಮನ್ ಮತ್ತು ಆಫ್ರಿಕಾದ ಬುರ್ಕಿನ ಫಾಸೋ ದೇಶದ ಜನಭಾಷೆ ‘ಮೊರೆ’ -ಇವು ಮೂರು ಭಾಷೆಗಳು ಜರ್ಮನ್ ಮತ್ತು ಆಫ್ರಿಕನ್ ಕಲಾವಿದರ ಮಾತುಗಳಲ್ಲಿ ನಿರ್ದಿಷ್ಟ ಉದ್ದೇಶಗಳಿಗೆ ಬಳಕೆ ಆದುವು.

ಈ ನಾಟಕದ ನಿರ್ಮಾಣವೇ ಒಂದು ಸಾಂಸ್ಕೃತಿಕ ಮುಖಾಮುಖಿಯ ವಿಶಿಷ್ಟ ಪ್ರಯೋಗ.ಈ ನಾಟಕದಲ್ಲಿ ಅಭಿನಯಿಸಿದವರಲ್ಲಿ  ಏಳು ಮಂದಿ ಜರ್ಮನರು  ,ಏಳು ಮಂದಿ ಆಫ್ರಿಕನರು.ಜರ್ಮನಿಯ ವ್ಯೂರ್ತ್ಸ್ ಬುರ್ಗ್ ನ Mainfranken Theaters ಮತ್ತು ಆಫ್ರಿಕಾದ ಬುರ್ಕಿನ ಫಾಸೋ ದೇಶದ  Carrefour International De Theatre De Ouagadougou(C.I.T.O.)-ಈ ಎರಡು ರಂಗಬೂಮಿ ತಂಡಗಳು ಜೊತೆಯಾಗಿ ಎರಡು ಭಿನ್ನ ಸಂಸ್ಕೃತಿಗಳ ಮುಖಾಮುಖಿಯ ಈ ನಾಟಕವನ್ನು ನಿರ್ಮಾಣ ಮಾಡಿವೆ ಮತ್ತು ರಂಗದ ಮೇಲೆ ಪ್ರಯೋಗಮಾಡಿವೆ.  ಈ ನಾಟಕದ ರಚನೆ -Lilith Jordan,Bernhard Stengele  ಮತ್ತು  Paul Zoungrana. ನಾಟಕದ ನಿರ್ದೇಶನ –  Bernhard Stengele.ಎರಡು ವರ್ಷಗಳ ಕಾಲ , ಎರಡು ದೇಶಗಳ ನಡುವಿನ ಪರಸ್ಪರ ಭೇಟಿ ,ವಾಸ್ತವ್ಯ ,ಸ್ಥಳೀಯ ಭಾಷೆಗಳ ಅಭ್ಯಾಸ -ಹೀಗೆ ನಿಜವಾದ ಅನುಭವಗಳನ್ನು ಪಡೆದುಕೊಂಡು ಈ ನಾಟಕಕ್ಕೆ ಸಹಜತೆಯನ್ನು ತರುವ ಪ್ರಯತ್ನ ಮಾಡಲಾಗಿದೆ.  ವ್ಯೂರ್ತ್ಸ್ ಬುರ್ಗ್ ನ ನಟ ನಟಿಯರು ಮತ್ತು ನಿರ್ದೇಶಕರು ಆಫ್ರಿಕಾದ ಬುರ್ಕಿನ ಫಾಸೋ ದೇಶದಲ್ಲಿ ವಾಸಮಾಡಿ ಅಲ್ಲಿನ ಬದುಕು ಮತ್ತು ಭಾಷೆಗಳನ್ನು ಅರ್ಥಮಾಡಿಕೊಂಡು ತರಬೇತಿ ಪಡೆದ ಬಳಿಕವೇ ಈ ನಾಟಕವನ್ನು ರಂಗದ ಮೇಲೆ ತರಲಾಗಿದೆ.

ಪಶ್ಚಿಮ ಆಫ್ರಿಕಾದಲ್ಲಿನ ಒಂದು ದೇಶ -ಬುರ್ಕಿನ ಫಾಸೋ.ಕರಿಯರ ಈ ನಾಡು ಬಹಳ ಕಾಲ ಫ್ರೆಂಚರ ಆಳ್ವಿಕೆಯಲ್ಲಿ ಇತ್ತು-೧೮೯೬ ರಿಂದ ೧೯೬೦ರವರೆಗೆ.ಹಾಗಾಗಿ ಈ ದೇಶದ ಅಧಿಕೃತ ಭಾಷೆ ಈಗಲೂ ಫ್ರೆಂಚ್.ಇತರ ಸ್ಥಳೀಯ ಭಾಷೆಗಳು -ಮೊರೆ ಮತ್ತು ದಿವೊಉಲ .ಹಾಗಾಗಿ ಎಲ್ಲರೂ ಫ್ರೆಂಚ್ ಭಾಷೆ ಮಾತಾಡುತ್ತಾರೆ.ಆದರೆ ತಮ್ಮ ಭಾಷೆ ‘ಮೊರೆ’ಯಲ್ಲಿ ಮಾತಾಡಲು ಹೆಮ್ಮೆಪಡುತ್ತಾರೆ.ಈ ದೇಶದ ರಾಜಧಾನಿ Ouagadougou   .ಅಲ್ಲಿನ ರಂಗಭೂಮಿ ತಂಡವೇ ಈ ನಾಟಕದ ನಿರ್ಮಾಣದಲ್ಲಿ ವಿಶೇಷ ಆಸಕ್ತಿಯಿಂದ ಕೆಲಸಮಾಡಿದ್ದು.ಈ ದೇಶದಲ್ಲಿ ನೈಸರ್ಗಿಕ ಸಂಪತ್ತು ,ಜಾನಪದ ಪರಂಪರೆ ಅಪಾರವಾಗಿ ಇದೆ.ಆದರೆ ಬಡತನ ಬಹಳವಾಗಿದೆ.ಯುರೋಪಿಯನ್ ಯೂನಿಯನ್, ಫ್ರಾನ್ಸ್ ,ಜರ್ಮನಿಯಂತಹ ದೇಶಗಳು ಹಣ ಮತ್ತು ವಸ್ತುಗಳ ರೂಪದ ಸಹಾಯವನ್ನು ಮಾಡುತ್ತಿವೆ.ಅದರ ದುರುಪಯೋಗದ ಕುರಿತೂ ನಾಟಕದಲ್ಲಿ ವಿಡಂಬನೆ  ಇತ್ತು.

ನಾಟಕದಲ್ಲಿ ಜರ್ಮನ್ ಹುಡುಗಿಯೊಬ್ಬಳು ಆಫ್ರಿಕನ್ ಸ್ವಯಂಸೇವಾಸಂಸ್ಥೆಯೊಂದಕ್ಕೆ ಅಭಿವೃದ್ದಿಯ ಯೋಜನೆಯೊಂದಕ್ಕೆ  ಎಂದು ಹಣ ಕೊಡುತ್ತಾಳೆ.ಅದು ಆ ಎನ್ ಜಿ ಓ ಮುಖ್ಯಸ್ಥನ ಕೈಗೆ ತಲಪುವ ಮೊದಲೇ ಅನೇಕರು ಅದರಿಂದ ಕೆಲವು ನೋಟುಗಳನ್ನು ಒಳಗೆ ಹಾಕಿರುತ್ತಾರೆ.ಭ್ರಷ್ಟಾಚಾರದ ಮುಖಗಳನ್ನು ನಾಟಕದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಬಯಲುಮಾಡಲಾಗಿದೆ.

ಈ ನಾಟಕದಲ್ಲಿ  ಆಫ್ರಿಕನ್ ಮತ್ತು ಯುರೋಪಿಯನ್ ಗಂಡು ಹೆಣ್ಣುಗಳ ನಡುವಿನ  ಕೆಲವು ಪ್ರೇಮ ಪ್ರಕರಣಗಳು ನಡೆಯುತ್ತವೆ.ಯುರೋಪಿಯನ್ ಗಂಡು ಮತ್ತು ಆಫ್ರಿಕನ್ ಹೆಣ್ಣು -ಒಂದು ಜೋಡಿ.ಆಫ್ರಿಕನ್ ಗಂಡು ಮತ್ತು ಯುರೋಪಿಯನ್ ಹೆಣ್ಣು -ಇನ್ನೊಂದು ಜೋಡಿ.ಇಂತಹ ಗಂಡು ಹೆಣ್ಣುಗಳ ಪ್ರೇಮದ ಸನ್ನಿವೇಶಗಳಲ್ಲಿ ಎರಡು ಭಿನ್ನ ಸಂಸ್ಕೃತಿಗಳು ಮುಖಾಮುಖಿ ಆಗುತ್ತವೆ.ಆಫ್ರಿಕನ್ ಮತ್ತು ಯುರೋಪಿಯನ್ ಸಂಸ್ಕೃತಿಗಳ ಮನೋಧರ್ಮ ಮತ್ತು ಲೋಕದೃಷ್ಟಿಗಳು ಸಂಘರ್ಷ ಮತ್ತು ಸಮನ್ವಯದ ಎರಡು ದಾರಿಗಳಲ್ಲಿ  ತೆರೆದುಕೊಳ್ಳುತ್ತವೆ.ಒಂದು ದೃಶ್ಯ :ಜರ್ಮನ್ ಗಂಡು ಮತ್ತು ಆಫ್ರಿಕನ್ ಹೆಣ್ಣು ಪರಸ್ಪರ ಪ್ರೀತಿಸುತ್ತಾರೆ.ಅವರು ಮದುವೆ ಆಗುವಾಗ ಎರಡು  ಮಾದರಿಗಳು ಅಲ್ಲಿ ಕಾಣಿಸುತ್ತವೆ.ಒಂದು -ಇಂತಹ ಸಂಬಂಧವನ್ನುತಮ್ಮ ಸಂಸ್ಕೃತಿಯ ಪೂರ್ವಗ್ರಹದಿಂದಲೇ ನೋಡಿ ವಿರೋಧಿಸುವುದು.ಇನ್ನೊಂದು  ಎರಡು  ಸಂಸ್ಕೃತಿಗಳ ಸೇರುವಿಕೆಯ ಮೂಲಕದ ಹೊಸ ಸಂಸ್ಕೃತಿಯಾಗಿ ನೋಡುವುದು ಮತ್ತು ಒಪ್ಪಿಕೊಳ್ಳುವುದು.ಇಂತಹ ಎರಡು ಸಾಧ್ಯತೆಗಳ ದೃಶ್ಯಗಳು ರಂಗದಲ್ಲಿ  ಕಾಣಿಸಿದವು.ಇನ್ನೊಂದು ದೃಶ್ಯ :ಜರ್ಮನ್ ಹುಡುಗಿ ಮತ್ತು ಆಫ್ರಿಕನ್ ಹುಡುಗ ಪ್ರೇಮಿಸಿ ಮದುವೆ ಆಗುವುದು.ಬಳಿಕ ಅವರು ಯುರೋಪಿನಲ್ಲಿ ನೆಲಸುವುದು.ಜರ್ಮನ್ ಹೆಂಡತಿ ಬಸುರಿ ಆಗಿ ಮಗುವನ್ನು ಹೆರುವುದು.ಆಗ ಅವಳ ಆಫ್ರಿಕನ್ ಅತ್ತೆ ಆಫ್ರಿಕಾದಿಂದ ಮೊಮ್ಮಗುವಿನ ಆರೈಕೆಗಾಗಿ ಗಿಡಮೂಲಿಕೆಗಳ ಕಟ್ಟುಗಳನ್ನು ಹೊತ್ತುಕೊಂಡು ಅವರ ಮನೆಗೆ ಬರುವುದು.ಮಗುವಿಗೆ ಯಾವ ಯಾವ ಸೊಪ್ಪಿನಿಂದ ಯಾವ ಯಾವ ಕಷಾಯ ಮಾಡಿ ಕುಡಿಸಬೇಕು ಹಚ್ಚಬೇಕು ಮೀಯಿಸಬೇಕು ಎಂದು ಆಫ್ರಿಕನ್ ಅತ್ತೆ ಹೇಳಿಕೊಡುವಾಗ ,ಜರ್ಮನ್ ಸೊಸೆ ಅದನ್ನು ತಿರಸ್ಕರಿಸುವುದು.ಅವೆಲ್ಲ ಅನಾಗರಿಕ ಪದ್ಧತಿ ಎಂದು ನಿರಾಕರಿಸುವುದು.ಆಫ್ರಿಕನ್ ಅತ್ತೆ ಮತ್ತು ಜರ್ಮನ್ ಸೊಸೆ ನಡುವಿನ ಜಗಳ.ಆಫ್ರಿಕನ್ ಮಗ -ಹೆಂಡತಿ ಮತ್ತು ತಾಯಿಯರ ಜಗಳದ ನಡುವೆ ಅಸಹಾಯಕನಾಗುವುದು.

‘ಕುಟುಂಬ’ ಎನ್ನುವ ಪರಿಕಲ್ಪನೆ ಭಿನ್ನವಾದಾಗ ಉಂಟಾಗುವ ಸಾಂಸ್ಕೃತಿಕ ಸಂಘರ್ಷ ಮುಂದೆ ದೇಶ ದೇಶಗಳ ನಡುವೆ ಬೃಹದಾಕಾರವನ್ನು ತಾಳುತ್ತದೆ.ಯುರೋಪಿಯನ್ ಕಲ್ಪನೆಯಲ್ಲಿ ‘ಕುಟುಂಬ’ಎಂದರೆ ಗಂಡ ಮತ್ತು ಹೆಂಡತಿ ಮಾತ್ರ. ಆಫ್ರಿಕನ್ ಸಂಸ್ಕೃತಿಯಲ್ಲಿ ‘ಕುಟುಂಬ  ‘ಎಂದರೆ ಅಲ್ಲಿ ಗಂಡ ಹೆಂಡತಿಯರ ಜೊತೆಗೆ ಅವರ ಎಲ್ಲ ಬಂಧುಗಳು ಸೇರಿಕೊಂಡು ಅದೊಂದು ಅವಿಭಕ್ತ ಸಂಸಾರ ಆಗಿರುತ್ತದೆ.’ಮನೆ’ ಮತ್ತು ‘ಕುಟುಂಬ’ ಎನ್ನುವ ಪರಿಕಲ್ಪನೆಗಳೇ ದೇಶ ಮತ್ತು ಸಂಸ್ಕೃತಿಗಳ ಆಕಾರವನ್ನು ತಾಳುತ್ತವೆ.ಭಿನ್ನತೆಯನ್ನು ವಿರೋಧ ಎಂದು ಗ್ರಹಿಸುವ ಯೋಚನೆಗಳೇ ಸಂಘರ್ಷ ಮತ್ತು ಸಮಸ್ಯೆಗಳನ್ನು ಸೃಷ್ಟಿಮಾಡುತ್ತವೆ .ಇದನ್ನು ಈ ನಾಟಕ ಒಂದು ಕೇಂದ್ರ ತತ್ವವನ್ನಾಗಿ ಮಂಡಿಸಲು ಪ್ರಯತ್ನಿಸಿದೆ.ಖಾಸಗಿ ಬದುಕು ಹೇಗೆ ಸಮಸ್ಯಾತ್ಮಕವಾಗಿದೆ ಎನ್ನುವ ನೋಟದ ಮೂಲಕ ,ಕುಟುಂಬದ ಒಳಗಿನ ನಿರಾಶಾದಾಯಕ ಕ್ಷಣಗಳು ,ಆಫ್ರಿಕ ಮತ್ತು ಯುರೋಪ್ ಗಳನ್ನೂ ಒಳಗೊಂಡಂತೆ  ಜಾಗತಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಹೇಗೆ ಸಹಕಾರಿ ಎನ್ನುವ ಒಳನೋಟ ಈ ನಾಟಕದ ದೃಶ್ಯಗಳಿಂದ ದೊರೆಯುತ್ತದೆ.ಹವಾಮಾನದ ಬದಲಾವಣೆ ಮತ್ತು ಪರಿಸರ ಮಾಲಿನ್ಯ – ಹಾಗೂ ಇದರಿಂದ ಭೂಖಂಡಕ್ಕೆ ಇರುವ ಬೆದರಿಕೆ –  ಇದರ ಕುರಿತು ಆಫ್ರಿಕನ್ ದೃಷ್ಟಿಕೋನ ಏನು ?

ಯುರೋಪಿಯನ್ ಸಮಾಜದ ಕಡೆಗೆ ಯಾಕೆ ಅಂತಹ ಆಕರ್ಷಣೆ ಇದೆ ?ಏಕಾಂಗಿತನ ಮತ್ತು ಅವಸರವನ್ನು ಮೈಗೂಡಿಸಿಕೊಂಡಿರುವ ಪಶ್ಚಿಮದ ಬದುಕು  ಒಂದು ಮಾದರಿ ಆಗುವ ಅಗತ್ಯ ಏನು ?ಈ ನಾಟಕದ ಒಂದು ದೃಶ್ಯದಲ್ಲಿ ಪಶ್ಚಿಮದ ಜಗತ್ತಿನ ಸಮಯಪಾಲನೆಯ ಬಗ್ಗೆ ವ್ಯಂಗ್ಯದ ಸನ್ನಿವೇಶ ಬರುತ್ತದೆ.೦೬.೦೩ ಗಂಟೆಗೆ ಏಳುವುದು ಮತ್ತು ಇಡೀ ದಿನದ ಎಲ್ಲ ಚಟುವಟಿಕೆಗಳಿಗೆ ನಿಮಿಷ ನಿಮಿಷದ ಲೆಕ್ಕಾಚಾರ ಹಾಕುವುದು.ಅದು ಕೆಲಸಕ್ಕೆ ಮಾತ್ರ ಅಲ್ಲ ;ಆಟಕ್ಕೆ ಮತ್ತು ಕಾಫಿ ಕುಡಿಯಲು ೧೭ ನಿಮಿಷ ಇತ್ಯಾದಿ.ರಂಗದಲ್ಲಿ ಎಲ್ಲ ನಟರು ಈರೀತಿಯ ವೇಳಾಪಟ್ಟಿಯನ್ನು ಪುನರಾವರ್ತಿಸುವ ಕೆಲಸದಲ್ಲಿ ತೊಡಗಿಸಿಕೊಂಡು ,ಎಷ್ಟು ಮಟ್ಟಿಗೆ ಅದನ್ನು ಚಾಚೂ ತಪ್ಪದೆ ಪಾಲಿಸಲು ವಿಧೇಯರಾಗಿ ಇದ್ದರೆಂದರೆ ,ಅದೇ ಅವರಿಗೆ ಭಯಾನಕ ಅನ್ನಿಸತೊಡಗಿತು ,ತಾವು ಪೂರ್ವನಿಗದಿತ ಯೋಜನೆಗಳ ಗುಲಾಮರಾಗುತ್ತಿದ್ದೇವೆ ಎಂದು ಅವರಿಗೆ ಅನ್ನಿಸತೊಡಗಿತು.

ನಾಟಕದ ಸಂಗೀತದಲ್ಲಿ ಕೂಡಾ ಆಫ್ರಿಕನ್ ಮತ್ತು ಜರ್ಮನ್ ಸಂಗೀತಗಳ ನಡುವಿನ ಸ್ಥಿತ್ಯಂತರದ ಪ್ರಯೋಗ ಮಹತ್ವದ್ದಾಗಿದೆ.ಆಫ್ರಿಕನ್ ಜನಪದ ಸಂಗೀತ ಮತ್ತು ಜರ್ಮನ್ ಶಾಸ್ತ್ರೀಯ ಸಂಗೀತಗಳನ್ನು ಮುಖಾಮುಖಿ ಮಾಡಲಾಗಿದೆ.ವಾಗ್ನರ್ ಒಪೆರಾದ ಸಂಗೀತ ‘ಇಸೊಲ್ದ’ ದ ಪಲುಕುಗಳನ್ನು ವಿಡಂಬನೆಯ  ರೂಪದಲ್ಲಿ  ಕೂಡಾ ಬಳಸಲಾಗಿದೆ.

ನಾಟಕದ ಕೊನೆಯಲ್ಲಿ ಎಲ್ಲರೂ ಸಾಮೂಹಿಕವಾಗಿ ‘ಲೋಕದ ಶೋಕಗೀತ ‘ಒಂದನ್ನು ಹಾಡುತ್ತಾರೆ.ಅದು ಮರುಭೂಮಿಯ ಕುದುರೆಯ ನಾಗಾಲೋಟದ ದೃಶ್ಯದ ವರ್ಣನೆಯ ಹಾಡು.ಅದು  ಸುಂದರ ಭೂಮಿಯು  ಮರುಭೂಮಿ ಆಗುವ ಹಾಡು.ಅಲ್ಲಿ ಹೃದಯ ಬಡಬಡಿಸುತ್ತದೆ ,ಭೂಮಿಯು ರಕ್ತವಾಗುತ್ತದೆ.ಅಲ್ಲಿ ಮಳೆ ಇಲ್ಲ.ಅಲ್ಲಿ ನೀರು ಇಲ್ಲ.ಎಲ್ಲವೂ ಬರಡು, ಎಲ್ಲವೂ ಮರುಭೂಮಿ . ಆಕಾಶದಿಂದ ಧೂಳಿನ ಮಳೆ ಸುರಿಯುತ್ತದೆ.

ಅಲ್ಲಿನ ಪ್ರೇಮದ ಕತೆ ಇಲ್ಲ ,ಅಲ್ಲಿ ಮರುಭೂಮಿಯೇ ಎಲ್ಲ.

Photo courtesy :Mainfranken Theater,Wurzburg,Germany-Newsletter.

Read Full Post | Make a Comment ( None so far )

« Previous Entries

Liked it here?
Why not try sites on the blogroll...