ಕನ್ನಡ ಸಾಹಿತ್ಯ

ನನ್ನ ಇಬ್ಬರು ಗುರುಗಳು : ಎಸ ವಿ ಪಿ ಮತ್ತು ಹಾ ಮಾ ನಾ

Posted on ಸೆಪ್ಟೆಂಬರ್ 5, 2013. Filed under: ಕನ್ನಡ ಸಾಹಿತ್ಯ, ಜಾನಪದ, ನನ್ನ ಗುರುಗಳು, Ha.Ma.Nayaka, Kannada Literature, S.V.Parameshwara Bhatta |

ಮತ್ತೆ ಶಿಕ್ಷಕರ ದಿನಾಚರಣೆ ಬಂದಿದೆ . ಎಂದಿನಂತೆ ಒಂದು ದಿನ ಶಿಕ್ಷಕರ ಗುಣಗಾನ ನಡೆಯುತ್ತದೆ . ಎಲ್ಲರ ಬದುಕಿನಲ್ಲೂ ತುಂಬಾ ಪ್ರಭಾವ ಬೀರಿದ ಕೆಲವರಾದರೂ ಶಿಕ್ಷಕರು ಇರುತ್ತಾರೆ . ಗುರು ಪರಂಪರೆ ಎಂಬುದು ಮನೆಯಲ್ಲಿ ಅಮ್ಮ ಅಪ್ಪನಿಂದ ತೊಡಗಿ ಪ್ರಾಥಮಿಕ ಶಾಲೆಯಿಂದ ಮುಂದಕ್ಕೆ ಸಾಗುತ್ತಾ ಹೋಗುತ್ತದೆ . ನನ್ನ ಬದುಕಿನಲ್ಲೂ ಅಂತಹ ಅನೇಕ ಶಿಕ್ಷಕರು ಬೇರೆ ಬೇರೆ ರೀತಿಯಲ್ಲಿ ಪ್ರಭಾವ ಬೀರಿದ್ದಾರೆ . ಅಂತಹ ಇಬ್ಬರು ಶಿಕ್ಷಕರು -ಪ್ರಾಧ್ಯಾಪಕರು ,ಈಗ ನಮ್ಮ ನಡುವೆ ಇಲ್ಲದಿರುವ ನನ್ನ ಇಬ್ಬರು ಗುರುಗಳು ಪ್ರೊ . ಎಸ . ವಿ ಪರಮೇಶ್ವರ ಭಟ್ಟರು ಮತ್ತು ಡಾ. ಹಾ ಮಾ ನಾಯಕರು ಇವರನ್ನು ಕುರಿತು ನನ್ನ ಬ್ಲಾಗಿನಲ್ಲಿ ಹಿಂದೆ ಪ್ರತ್ಯೇಕವಾಗಿ ಬರೆದ ಎರಡು ಬರಹಗಳನ್ನು ಇಲ್ಲಿ ಒಟ್ಟಿಗೆ ಕೊಟ್ಟಿದ್ದೇನೆ .

ಎಸ.ವಿ .ಪಿ. ಅವರನ್ನು  ಕುರಿತ ಲೇಖನ ೭ .೨ .೨೦೧೨ರಂದು , ಹಾ ಮಾ ನಾ ಬಗೆಗಿನ  ಬರಹ ೨೯ .೯ .೨೦೧೧ರಂದು ನನ್ನ ಬ್ಲಾಗ್ ನಲ್ಲಿ ಪ್ರಕಟವಾಗಿದೆ .

೨೦೧೪ : ಎಸ . ವಿ . ಪರಮೇಶ್ವರ ಭಟ್ಟರ ಜನ್ಮ ಶತಮಾನೋತ್ಸವದ ವರ್ಷ .

++

ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ.ವಿ.ಪರಮೇಶ್ವರ ಭಟ್ಟರು

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಲೆನಾಡಿನಲ್ಲಿ ಹುಟ್ಟಿ ,ನಿಸರ್ಗದ ನಡುವೆ ಬೆಳೆದ ಪರಮೇಶ್ವರ ಭಟ್ಟರು ಸಹಜ ಕವಿಯಾಗಿ ಬೆಳೆದವರು.’ರಾಗಿಣಿ’ ಕವನ ಸಂಕಲನ ಅವರ ಮೊದಲ ಕೃತಿ.ಅವರ ಎಲ್ಲ ಸಾಹಿತ್ಯಸಾಧನೆಗಳ ವಿಸ್ತಾರದ ನಡುವೆಯೂ ಅವರೊಬ್ಬ ಅಪ್ಪಟ ಕವಿ ಮತ್ತು ಕವಿಹೃದಯದ ಸಹೃದಯ. ಕನ್ನಡದ ಪ್ರಾಚೀನ ಕಾವ್ಯ ಪ್ರಕಾರಗಳನ್ನು ಮತ್ತು ಛಂದೋಪ್ರಭೇದಗಳನ್ನು ಅವರು ಹೊಸಗನ್ನಡ ಕಾವ್ಯರೂಪದಲ್ಲಿ ಪುನರುಜ್ಜೀವನ ಮಾಡಿದರು.ಸಾಂಗತ್ಯ ,ತ್ರಿಪದಿ,ಏಳೆ, ವಚನ ಪ್ರಕಾರಗಳು ಅವರ ಕಾವ್ಯಪ್ರಯೋಗದ ಮೂಲಕ ಹೊಸ ಅರ್ಥವನ್ನು ಪಡೆದವು.ಇಂದ್ರಚಾಪ, ಚಂದ್ರವೀಧಿಯಂತಹ ಸಾಂಗತ್ಯ ಕೃತಿಗಳು; ಉಪ್ಪುಕಡಲು ,ಪಾಮರದಂತಹ ವಚನಸಂಕಲನಗಳು ;ಸುರಗಿ ಸುರಹೊನ್ನೆಯಂತಹ ತ್ರಿಪದಿ ಮುಕ್ತಕಗಳು ;ಇಂದ್ರಗೋಪದಂತಹ ಏಳೆ ರಚನೆಗಳು -ಇವು ಪ್ರಯೋಗಗಳೂ ಹೌದು ,ಕನ್ನಡ ದೇಸಿಯ ಅನನ್ಯತೆಯನ್ನು ಉಳಿಸಿದ ಸಾಹಸಗಳೂ ಹೌದು.ಜನಪದ ಸಾಹಿತ್ಯದ ಜನಪ್ರಿಯ ಪ್ರಕಾರಗಳಾದ ಗಾದೆ ಮತ್ತು ಒಗಟುಗಳನ್ನು ಆಧುನಿಕ ಕಾಲದಲ್ಲಿ ಕಾವ್ಯಸೃಷ್ಟಿಯ ರೂಪದಲ್ಲಿ ಸ್ವತಂತ್ರ ರಚನೆಗಳನ್ನಾಗಿ ಎಸ ವಿ ಪಿ ನಿರ್ಮಿಸಿ ,ಜನಪದ ಸಾಹಿತ್ಯಕ್ಕೆ ಆಧುನಿಕ ಕಾವ್ಯದ ಜೊತೆಗೆ ಮನ್ನಣೆ ತಂದುಕೊಟ್ಟರು.’ಮಂಥಾನ’ ಅವರ ಸ್ವತಂತ್ರ ಗಾದೆಗಳ ಸಂಕಲನ ;’ಕಣ್ಣುಮುಚ್ಚಾಲೆ’ ಸ್ವತಂತ್ರ ಒಗಟುಗಳ ರಚನೆ.

28-a-s-v-parameshwara-bhatta-em2

ವಿದ್ವತ್ತಿನ ವಲಯದಲ್ಲಿ ಪ್ರೊ.ಪರಮೇಶ್ವರ ಭಟ್ಟರದ್ದು ಸಂಸ್ಕೃತದ ಕ್ಲಾಸಿಕ್ ಗಳನ್ನು ಕನ್ನಡಕ್ಕೆ ತಂದುಕೊಟ್ಟ ಭೂಮ ಪ್ರತಿಭೆ . ಹಾಲನ ‘ಗಾಥಾ ಸಪ್ತಶತಿ ‘ ಯನ್ನು ಮೊದಲ ಬಾರಿ ಕನ್ನಡದಲ್ಲಿ ಸರಸರೂಪದಲ್ಲಿ ತಂದ ಎಸ ವಿ ಪಿ ,ಬಳಿಕ ಕಾಳಿದಾಸ ,ಭಾಸ, ಹರ್ಷ,ಭವಭೂತಿ ,ಭರ್ತೃಹರಿ -ಹೀಗೆ ಇವರ ಎಲ್ಲರ ಕಾವ್ಯ ನಾಟಕಗಳ ಅನುವಾದಗಳ ಸಮಗ್ರ ಸಂಪುಟಗಳನ್ನು ತಂದರು.ಸಂಸ್ಕೃತ ,ಕನ್ನಡಗಳ ಜೊತೆಗೆ ಇಂಗ್ಲಿಶ್ ನಲ್ಲೂ ಒಳ್ಳೆಯ ಪ್ರಭುತ್ವ ಇದ್ದ ಅವರು ‘ಇಂಗ್ಲಿಶ್ ಪ್ರಬಂಧಗಳು ‘ ಎಂಬ ಇಂಗ್ಲಿಷ್ ಎಸ್ಸೆ ಗಳ ಕನ್ನಡ ಅನುವಾದದ ಗ್ರಂಥವನ್ನು ಪ್ರಕಟಿಸಿದರು.ಇದರಲ್ಲಿ ಪ್ರಬಂಧ ಪ್ರಕಾರದ ಸರಿಯಾದ ಪ್ರವೇಶ ಇದೆ.ವಿಮರ್ಶೆಯ ಕ್ಷೇತ್ರದಲ್ಲಿ ಎಸ ವಿ ಪಿ ಅವರದ್ದು ಪೌಖಿಕ ಪರಂಪರೆಯ ಮಾದರಿ.ಅವರ ಭಾಷಣಗಳಿಗೂ ಬರಹಕ್ಕೂ ಬಹಳ ವ್ಯತ್ಯಾಸ ಇಲ್ಲ.ಅವರಿಗೆ ಇಷ್ಟವಾದ ಭಾರತೀಯ ಕಾವ್ಯಮೀಮಾಸೆಯ ಒಂದು ಉಕ್ತಿ :’ರೀತಿಯೇ ಕಾವ್ಯದ ಆತ್ಮ’. ಹಾಗಾಗಿ ಭಾಷೆಗೆ ಭಾವದ ಆಲಿಂಗನ ಅವರ ಎಲ್ಲ ಬರಹಗಳಲ್ಲೂ ವಿಶೇಷವಾಗಿ ಕಾಣಿಸುತ್ತದೆ.ಅವರ ಭಾಷಣಗಳು,ಮುನ್ನುಡಿಗಳು,ಪ್ರಬಂಧಗಳು -ಎಲ್ಲವೂ ವಿಮರ್ಶೆಗಳೇ.ಮುದ್ದಣ ಕವಿ ಅವರ ಮೆಚ್ಚಿನ ಕವಿ.ಮುದ್ದಣನ ಕೃತಿಗಳನ್ನು ರಾಮಪಟ್ಟಾಭಿಷೇಕ ,ಅದ್ಭುತರಾಮಾಯಣಗಳನ್ನು ಸಂಪಾದನೆ ಮಾಡುವುದರ ಜೊತೆಗೆ ಕರಾವಳಿಯ ಅಲಕ್ಷಿತ ಕವಿ ಮುದ್ದಣನಿಗೆ ಕರ್ನಾಟಕದ ವ್ಯಾಪ್ತಿಯಲ್ಲಿ ಹೆಸರು ತಂದುಕೊಟ್ಟವರಲ್ಲಿ ಎಸ ವಿಪಿ ಪ್ರಮುಖರು. ನಾನು ಪದವಿ ತರಗತಿಯಲ್ಲಿ ಇದ್ದಾಗ ೧೯೬೫ರಲ್ಲಿ ಅವರ ವಿಮರ್ಶಾಲೇಖನಗಳ ಸಂಕಲನ ‘ಸೀಳುನೋಟ ‘ ನಮಗೆ ಅಧ್ಯಯನಕ್ಕೆ ದೊರಕಿತ್ತು. ನನಗೆ ಆಗ ಏನೂ ಗೊತ್ತಿಲ್ಲದ ಕನ್ನಡ ಸಾಹಿತ್ಯದ ಜಗತ್ತನ್ನು ತೆರದು ತೋರಿಸಿದ್ದವು ಅದರಲ್ಲಿನ ಲೇಖನಗಳು.ಆ ಸಂಕಲನದ ’ಪಂಪನು ಬೆಳಗಿದ ಲೌಕಿಕದ ಒಂದು ಚಿತ್ರ’ ಎಂಬ ಲೇಖನ ನನ್ನ ಬಹಳ ಮೆಚ್ಚಿನದ್ದು. ಕಳೆದ ಎರಡು ವರ್ಷಗಳಿಂದ ಬ್ಲಾಗ್ ಬರಹಗಳನ್ನು ಬರೆಯುತ್ತಿರುವ ನನಗೆ ಈಗ ಎಸ ವಿಪಿ ಅವರ ಕನ್ನಡ ಪದಸಂಪತ್ತು ಮತ್ತು ಬರಹದ ಶಕ್ತಿಯ ಮಹತ್ವ ಹೆಚ್ಚು ಅರ್ಥವಾಗುತ್ತಿದೆ.

ಗುರುಗಳ ಬಗ್ಗೆ ಹಿರಿಯ ಸಾಹಿತಿಗಳ ಬಗ್ಗೆ ಎಸ್ವಿಪಿ ಅವರಿಗೆ ಅಪಾರ ಗೌರವ.ತಮ್ಮ ತೀರ್ಥಹಳ್ಳಿಯ ಗುರುಗಳಾದ ಕಮಕೋಡು ನರಸಿಂಹ ಶಾಸ್ತ್ರಿಗಳ ಬದುಕು ಬರಹದ ಬಗ್ಗೆ ಒಂದು ಒಳ್ಳೆಯ ಅಭಿನಂದನಾ ಗ್ರಂಥವನ್ನು ಅವರು ಸಂಪಾದಿಸಿ ಪ್ರಕಟಿಸಿದರು.ಅದಕ್ಕೆ ನನ್ನಿಂದಲೂ ಒಂದು ಲೇಖನ ಬರೆಸಿದರು.ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮ ತೀರ್ಥಹಳ್ಳಿಯಲ್ಲಿ ನಡೆಯಿತು.ಅದಕ್ಕೆ ನನ್ನನ್ನೂ ಕರೆದುಕೊಂಡು ಹೋಗಿದ್ದರು.ನರಸಿಂಹ ಶಾಸ್ತ್ರಿಗಳನ್ನು ನಾನು ಅಲ್ಲೇ ಮೊದಲು ನೋಡಿದ್ದು.ಯು.ಆರ್.ಅನಂತಮೂರ್ತಿ ಅವರ ಸಹಿತ ತೀರ್ಥಹಳ್ಳಿ ಪರಿಸರದ ಆ ಕಾಲದ ಸಾಹಿತಿಗಳನ್ನು ಸಮಾಜವಾದಿ ಚಿಂತಕರನ್ನು ಒಟ್ಟಿಗೆ ನಾನು ನೋಡಿದ್ದು ಆ ಕಾರ್ಯಕ್ರಮದಲ್ಲಿ.ಎಸ್ವಿಪಿ ಅವರು ತಮ್ಮ ತರಗತಿಗಳಲ್ಲಿ ಸ್ವಲ್ಪ ಸಮಯವನ್ನು ತಮ್ಮ ಗುರುಗಳ ನೆನಪುಗಳ ಮೂಲಕ ಅವರ ವಿಚಾರಗಳ ವೈಶಿಷ್ಯಗಳನ್ನು ತಿಳಿಸಲು ಬಳಸುತ್ತಿದ್ದರು.ಟಿ ಎಸ ವೆಂಕಣ್ಣಯ್ಯ, ಕುವೆಂಪು ,ಡಿ ಎಲ್ ನರಸಿಂಹಾಚಾರ್ ,ತೀ ನಂ ಶ್ರೀ ಇವರೆಲ್ಲಾ ಅವರ ಕೃತಿಗಳ ಆಚೆಗೂ ನನಗೆ ಮಾನಸಿಕ ಗುರುಗಳಾಗಿ ದಕ್ಕಿದ್ದು ಎಸ್ವಿಪಿ ಅವರ ಪಾಠಗಳಿಂದ .

೧೯೬೮ರ ಜುಲೈ :ಹನಿ ಕಡಿಯದೆ ಸುರಿಯುತ್ತಿದ್ದ ಧಾರಾಕಾರ ಮಳೆಗೆ, ಬಂಟ್ವಾಳದ ನೆರೆಗೆ ಅಂಜದೆ , ಮೈಸೂರಿನಿಂದ ಘಟ್ಟ ಇಳಿದು ಬಂದ ಎಸ. ವಿ. ಪರಮೇಶ್ವರ ಭಟ್ಟರು ಕೇವಲ ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ,ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮುಖ್ಯಸ್ಥರಾಗಿ ೧೯೭೪ ಮಾರ್ಚ್ ನಲ್ಲಿ ನಿವೃತ್ತ ರಾಗಲಿಲ್ಲ. ಸುಮಾರು ಆರು ವರ್ಷಗಳ ಕಾಲ ಅವರು ಮಂಗಳೂರನ್ನು ಸಾಹಿತ್ಯ ಸಂಸ್ಕೃತಿಗಳ ಕೇಂದ್ರವಾಗಿ ಮಾಡಿಕೊಂಡು , ಕರಾವಳಿಯ ಉದ್ದಕ್ಕೂ ದಿಗ್ವಿಜಯ ಸಾಧಿಸಿದರು. ಅಲ್ಲಿ ಯುದ್ಧವಿಲ್ಲ , ಸಾವು ನೋವುಗಳಿಲ್ಲ .ಅದೊಂದು ಬುದ್ಧನ ಶಾಂತಿ ಯಾತ್ರೆಯಂತೆ. ಅಲ್ಲಿನ ಮಂತ್ರ ಕನ್ನಡ , ಮಾತು ಸಾಹಿತ್ಯ , ಬದುಕು ಸಂಸ್ಕೃತಿ.

ಎಸ.ವಿ.ಪಿ. ೧೯೬೮ರ ಜುಲೈ ಯಲ್ಲಿ ಮಂಗಳೂರು ಸ್ನಾತಕೋತ್ತರ ಕೇಂದ್ರಕ್ಕೆ ಕನ್ನಡ ಪ್ರೊಫೆಸ್ಸರ್ ಆಗಿ ಬಂದಾಗ ,ಅಲ್ಲಿ ಕಚೇರಿ ಇರಲಿಲ್ಲ ;ಸಿಬ್ಬಂದಿ ಇರಲಿಲ್ಲ ;ಗ್ರಂಥಾಲಯ ಇರಲಿಲ್ಲ .ತಾವೊಬ್ಬರೇ ಕಚೇರಿಯಾಗಿ ಸಿಬ್ಬಂದಿಯಾಗಿ ನಡೆದಾಡುವ ಗ್ರಂಥಾಲಯವಾಗಿ ಕನ್ನಡ ವಿಭಾಗವನ್ನು , ಸ್ನಾತಕೋತ್ತರ ಕೇಂದ್ರವನ್ನು ತಮ್ಮ ಮಾಂತ್ರಿಕ ಶಕ್ತಿಯಿಂದ ನಿರ್ಮಾಣ ಮಾಡಿದರು. ವಿಜ್ಞಾನದ ಪದವೀಧರನಾಗಿದ್ದ ನಾನು , ಆಗಿನ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಕನ್ನಡ ದಿನಪತ್ರಿಕೆ ‘ನವಭಾರತ ‘ ದಲ್ಲಿ ಕನ್ನಡ ಎಂ.ಎ.ಗೆ ಅರ್ಜಿ ಸಲ್ಲಿಸುವ ಅವಕಾಶದ ಬಗ್ಗೆ ಓದಿ ತಿಳಿದು ಅರ್ಜಿ ಸಲ್ಲಿಸಿದೆ. ಒಂದು ದಿನ ಅಂಚೆ ಕಾರ್ಡಿನಲ್ಲಿ ಎಸ್ವಿಪಿಯವರದೇ ಹಸ್ತಾಕ್ಷರದಲ್ಲಿ ಎಂ.ಎ. ಪ್ರವೇಶಕ್ಕೆ ಆಯ್ಕೆಯಾದ ಸೂಚನೆ ಬಂದಾಗ ನನಗೆ ದಿಗಿಲು ಮತ್ತು ಬೆರಗು.ಮಂಗಳೂರಿಗೆ ಸಾಕಷ್ಟು ಹೊಸಬನಾದ ನಾನು ದಾರಿ ಹುಡುಕುತ್ತಾ ಸೈಂಟ್ ಅಲೋಶಿಯಸ್ ಕಾಲೇಜಿನ ತಳ ಅಂತಸ್ತಿನ ಒಂದು ಕೊಠಡಿಯ ಒಳಹೊಕ್ಕು ಎಸ್ವಿಪಿಯವರನ್ನು ವಿಚಾರಿಸಿದೆ.ಆಗ ಬೆಳ್ಳಿ ಕೂದಲ , ಕುಳ್ಳ ದೇಹದ ನಗುಮುಖದವರೊಬ್ಬರು , ‘ಬನ್ನಿ , ಬನ್ನಿ ‘ ಎಂದು ಒಳ ಕರೆದು ತಮ್ಮೆದುರಿನ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದರು. ನನಗೆ ಮತ್ತಷ್ಟು ಗಾಬರಿ. ಅಳುಕುತ್ತಾ ಮೈ ಆಲಸಿಯಾದಂತೆ ಕುಳಿತುಕೊಂಡೆ. ಅಕ್ಕರೆಯಿಂದ ವಿಚಾರಿಸಿಕೊಂಡು , ಕನ್ನಡದ ಬಗ್ಗೆ ಪ್ರೀತಿ ಮೊಳೆಯುವಂತಹ ಮಾತುಗಳನ್ನು ಆಡಿ, ಬೆನ್ನು ತಟ್ಟುವ ಸಂಭ್ರಮವನ್ನು ಕಂಡ ನನಗೆ ಹೊಸತೊಂದು ಲೋಕದ ಅನುಭವವಾಯಿತು.

ಮುಂದೆ ೧೯೬೮ರಿನ್ದ ೧೯೭೦ರ ವರೆಗೆ ಎರಡು ವರ್ಷಗಳ ಕಾಲ ಎಂ.ಎ.ತರಗತಿಯಲ್ಲಿ ಅವರ ವಿದ್ಯಾರ್ಥಿಯಾಗಿ , ಹದಿನಾರು ಮಂದಿ ಶಿಷ್ಯರಲ್ಲಿ ಒಬ್ಬನಾಗಿ ನಾನು ಕಂಡ ಕೇಳಿದ ಅನುಭವಿಸಿದ ವಿಷಯಗಳು ಸಂಗತಿಗಳು ನೂರಾರು.ಅವರ ಪಾಠ ಅದೊಂದು ರಸಲೋಕದ ಯಾತ್ರೆಯಂತೆ. ಹದಿನಾರು ಮಂದಿಯ ತರಗತಿಯಾಗಲಿ , ಸಾವಿರ ಮಂದಿಯ ಸಭೆಯಾಗಲಿ , ಆ ಮಾತಿನ ರೀತಿ , ರೂಪಕಗಳ ಸರಮಾಲೆ , ತಮ್ಮ ಗುರು ಪರಂಪರೆಯ ಸಂಬಂಧದ ಅನುಭವಗಳನ್ನು ಬಿಚ್ಚುತ್ತಿದ್ದ ವೈಖರಿ , ವಿಷಯದ ಮಂಡನೆಯೊಂದಿಗೆ ಜೋಡಣೆಗೊಳ್ಳುತ್ತಿದ್ದ ನೂರಾರು ಅನುಭವದ ತುಣುಕುಗಳು – ಹೀಗೆ ಒಂದು ಗಂಟೆ ಮುಗಿಯುವುದರೊಳಗೆ ಒಂದು ರಸ ವಿಶ್ವಕೋಶದ ಒಳಗಡೆ ತಿರುಗಾಟದ ಸುಖ ದೊರೆಯುತ್ತಿತ್ತು.ಪಂಪನ ಆದಿಪುರಾಣ ದಂತಹ ಕಾವ್ಯವಾಗಲಿ ,ಭಾರತೀಯ ಕಾವ್ಯಮೀಮಾಂಸೆ ಯಂತಹ ಶಾಸ್ತ್ರವಾಗಲಿ , ಅಕ್ಕಮಹಾದೇವಿಯ ವಚನಗಳಾಗಲಿ ,ಇಂಗ್ಲಿಶ್ ಲಲಿತ ಪ್ರಬಂಧಗಳ ಅನುವಾದವಾಗಲಿ – ಎಸ್ವಿಪಿ ಅವರ ಪಾಠ ಅವರ ಅನುಭವ ಲೋಕದ ಮೂಲಕವೇ ನಮಗೆ ಭಾವಗಮ್ಯ ಆಗುತ್ತಿತ್ತು.

ತರಗತಿಯ ಒಳಗಿನ ಪಾಠ ಪ್ರವಚನಗಳ ಸೊಗಸು ಒಂದು ಕಡೆಯಾದರೆ , ಕನ್ನಡವನ್ನು ಪ್ರೀತಿಸಲು ಎಸ್ವಿಪಿ ನಮಗೆ ತೋರಿಸಿಕೊಟ್ಟ ರಹದಾರಿಗಳು ನೂರಾರು. ಕನ್ನಡ ಕವಿಗಳ ಸಾಹಿತಿಗಳ ವಿದ್ವಾಂಸರ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದುದು ಅಂತಹ ಒಂದು ಅಪೂರ್ವ ಅವಕಾಶ. ಬೇಂದ್ರೆ ,ಕಾರಂತ ,ಮಾಸ್ತಿ ,ರಾಜರತ್ನಂ, ಅಡಿಗ ,ಅನಂತಮೂರ್ತಿ ,ನಿಸ್ಸಾರ್ ,ದೇಜಗೌ , ಹಾಮಾನಾ, ಹಂಪನಾ -ಹೀಗೆ ಹಿರಿಯ ಕಿರಿಯ ಎಲ್ಲ ಸಾಹಿತಿಗಳನ್ನು ಸೆಳೆದು ತಂದು ನಮ್ಮ ಕನ್ನಡ ವಿಭಾಗದಲ್ಲಿ ಉಪನ್ಯಾಸ ಕೊಡಿಸುತ್ತಿದ್ದರು.ಉಳಿದ ವಿಭಾಗಗಳ ವಿದ್ಯಾರ್ಥಿಗಳು ನಮ್ಮ ಕನ್ನಡ ವಿಭಾಗದ ಬಗ್ಗೆ ಆಗ ಮಾಡುತ್ತಿದ್ದ ತಮಾಷೆಯೆಂದರೆ – ಮಂಗಳೂರು ಹಂಪನಕಟ್ಟೆಯ ಬಸ್ ನಿಲ್ದಾಣದಲ್ಲಿ ಇಳಿಯುವ ಯಾವುದೇ ಸಾಹಿತಿಯನ್ನು ನಾವು ಅಪಹರಿಸಿ ಎಳೆದುತಂದು ನಮ್ಮ ವಿಭಾಗದಲ್ಲಿ ಕಾರ್ಯಕ್ರಮ ಏರ್ಪಡಿಸುತ್ತಿದ್ದೆವು ಎಂದು.ನನಗೆ ನೆನಪಿರುವ ಹಾಗೆ ೧೯೬೮ರಿನ್ದ ೧೯೭೪ರ ಅವಧಿಯಲ್ಲಿ ಕುವೆಂಪು ಒಬ್ಬರನ್ನು ಬಿಟ್ಟರೆ ನಮ್ಮ ಕನ್ನಡ ವಿಭಾಗಕ್ಕೆ ಬಾರದ ಮಾತನಾಡದ ಆ ಕಾಲದ ಮುಖ್ಯ ಸಾಹಿತಿ ಯಾರೂ ಇಲ್ಲ.

ಪ್ರೊಫೆಸರ್ ಎಸ್ವಿಪಿ ಅವರ ಕನ್ನಡ ಪ್ರೀತಿಯ ಇನ್ನೊಂದು ಗೀಳೆಂದರೆ ,ಪುಸ್ತಕ ಪ್ರಕಟಣೆ. ಬಹಳ ಬಾರಿ ಸಾಲ ಮಾಡಿ ,ಮನೆ ತುಂಬಾ ರಾಶಿ ರಾಶಿಯಾಗಿ ಪೇರಿಸಿಟ್ಟ ಪುಸ್ತಕಗಳ ನಡುವೆ ಅವರು ಸಿಕ್ಕಿಹಾಕಿಕೊಂಡಿದ್ದಾರೋ ಎನ್ನುವಷ್ಟು ಸಂಖ್ಯೆಯಲ್ಲಿ ಕನ್ನಡ ಗ್ರಂಥಗಳನ್ನು ಅವರು ಪ್ರಕಟಿಸಿದರು. ಸಹೋದ್ಯೋಗಿಗಳ , ಶಿಷ್ಯರ , ತಮ್ಮ ಸಂಪರ್ಕಕ್ಕೆ ಬಂದ ಅಭಿಮಾನಿಗಳ ಪುಸ್ತಕಗಳನ್ನು ಪ್ರಕಟಿಸಲು ಉತ್ತೇಜನ ಕೊಟ್ಟರು. ಅದಕ್ಕಾಗಿ ಅಕ್ಷರಶಃ ತಮ್ಮ ತನು-ಮನ-ಧನಗಳನ್ನು ವಿನಿಯೋಗಿಸಿದರು. ಹಾಗಾಗಿ ಗ್ರಂಥ ಪ್ರಕಟಣೆ ಮತ್ತು ಗ್ರಂಥ ಬಿಡುಗಡೆ ಅವರ ಕಾಲದಲ್ಲಿ ನಿತ್ಯೋತ್ಸವ ಆಯಿತು. ನಾವು ಎಂ.ಎ. ವಿದ್ಯಾರ್ಥಿಗಳು ಬರೆದ ಕವನಗಳ ಸಂಕಲನ ‘ಮಂಗಳ ಗಂಗೆ ‘ ಯನ್ನು ನಮ್ಮ ಈ ಪ್ರೀತಿಯ ಗುರುಗಳಿಗೆ ಅರ್ಪಿಸಿದೆವು.ನನ್ನ ಮೊದಲ ಕವನ ‘ಸತ್ಯವತಿ ‘ ಪ್ರಕಟ ಆದದ್ದು ೧೯೭೦ರಲ್ಲಿ ಈ ಸಂಕಲನದಲ್ಲಿ.

೧೯೭೦ರಲ್ಲಿ ನಾನು ಕನ್ನಡ ಎಂ.ಎ. ಮುಗಿಸಿ, ಕಲಿತ ಕನ್ನಡ ವಿಭಾಗದಲ್ಲೇ ಉಪನ್ಯಾಸಕನಾಗಿ ಸೇರುವಲ್ಲಿ ಗುರುಗಳ ಆಶೀರ್ವಾದ ಮುಖ್ಯವಾಗಿತ್ತು.ಕೆಲವು ತಿಂಗಳ ಹಿಂದಿನ ಶಿಷ್ಯನನ್ನು ಸಹೋದ್ಯೋಗಿಯೆಂದು ಪ್ರೀತಿಯಿಂದ ಬರಮಾಡಿಕೊಂಡು ಅಧ್ಯಾಪನದ ದೀಕ್ಷೆಯನ್ನು ಕೊಟ್ಟ ಪ್ರೊಫೆಸರ್ , ಸಾಹಿತ್ಯದ ಓದಿನಿಂದ ತೊಡಗಿ ಕನ್ನಡದ ಕೆಲಸಗಳನ್ನು ಮೈತುಂಬಾ ಹಚ್ಚಿಕೊಂಡು ,ಒತ್ತಡಗಳ ನಡುವೆಯೇ ಸುಖವನ್ನು ಕಾಣುವ ದಾರಿಯನ್ನು ನಮಗೆ ತೋರಿಸಿಕೊಟ್ಟರು. ಆಗ ಕನ್ನಡ ವಿಭಾಗದಲ್ಲಿ ಇದ್ದ ನಾವು ನಾಲ್ವರು ಅಧ್ಯಾಪಕರೇ ನಮ್ಮ ಹೆಸರಿನ ಮೊದಲ ಅಕ್ಷರಗಳನ್ನು ಜೋಡಿಸಿ, ‘ ಪಲಚಂವಿ ‘ ಪ್ರಕಾಶನವನ್ನು ( ಪರಮೇಶ್ವರ ಭಟ್ಟ , ಲಕ್ಕಪ್ಪ ಗೌಡ ,ಚಂದ್ರಶೇಖರ ಐತಾಳ , ವಿವೇಕ ರೈ ) ಆರಂಭಿಸಿ ,ಪುಸ್ತಕಗಳನ್ನು ಪ್ರಕಟಿಸಿದೆವು. ಕನ್ನಡ ಪುಸ್ತಕಗಳ ಬಗ್ಗೆ ಮಂಗಳೂರು ಪರಿಸರದಲ್ಲಿ ಆಸಕ್ತಿ ತೀರಾ ಕಡಮೆ ಇದ್ದ ಆ ದಿನಗಳಲ್ಲಿ ‘ ಮನೆ ಮನೆಗೆ ಸರಸ್ವತಿ ‘ಎಂಬ ಪುಸ್ತಕ ಮಾರಾಟ ಅಭಿಯಾನವನ್ನು ಆರಂಭಿಸಿದೆವು. ಎಸ್ವಿಪಿ ಅವರು ಸಹೋದ್ಯೋಗಿಗಳ ಮತ್ತು ವಿದ್ಯಾರ್ಥಿಗಳ ಜೊತೆಗೆ ಹೆಗಲಿಗೆ ಚೀಲ ಹಾಕಿಕೊಂಡು ಪುಸ್ತಕಗಳನ್ನು ತುಂಬಿಕೊಂಡು ಬಿಸಿಲಿನಲ್ಲಿ ನಡೆದಾಡುತ್ತಾ ಎಲ್ಲರಲ್ಲೂ ತಮ್ಮ ನಗೆ ಮಾತುಗಳಿಂದ ಉತ್ಸಾಹವನ್ನು ತುಂಬುತ್ತಾ ,ಮನೆಯಿಂದ ಮನೆಗೆ , ಅಂಗಡಿಯಿಂದ ಅಂಗಡಿಗೆ ಅಲೆಯುತ್ತಾ ಕನ್ನಡ ಪುಸ್ತಕ ಮಾರಾಟ ಮಾಡುವ ಕಾಯಕವನ್ನು ಕೈಕೊಂಡರು.

ಯಕ್ಷಗಾನದ ಮಾತುಗಾರಿಕೆ ಮತ್ತು ಪ್ರದರ್ಶನದಿಂದ ವಿಶೇಷ ಪ್ರಭಾವಿತರಾಗಿದ್ದ ಪ್ರೊಫೆಸರ್ , ಅನೇಕ ತಾಳಮದ್ದಲೆಗಳನ್ನು ಏರ್ಪಡಿಸಿದರು. ಆಗ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ವಸ್ತು ಪ್ರದರ್ಶನದ ಟೆಂಟಿನ ಒಳಗಡೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಬಯಲಾಟ ಸ್ಪರ್ಧೆಯನ್ನು ಏರ್ಪಡಿಸಿದರು. ವಿದ್ಯಾರ್ಥಿಗಳಾಗಿದ್ದ ನಾವು , ವಸ್ತು ಪ್ರದರ್ಶನದೊಳಗಡೆ ಕನ್ನಡ ಪುಸ್ತಕಗಳ ಸ್ಟಾಲ್ ತೆರೆದು ಪುಸ್ತಕ ಮಾರಾಟ ಮಾಡಿದ್ದು ,ರಾತ್ರಿಯಿಡೀ ಯಕ್ಷಗಾನ ಬಯಲಾಟ ಏರ್ಪಾಡು ಮಾಡಿದ್ದು – ಇವೆಲ್ಲ ರೋಮಾಂಚಕ ಅನುಭವಗಳು.ತರಗತಿಯಲ್ಲಿ ಕಾವ್ಯವನ್ನು ತುಸು ಲಂಬಿಸಿ ವ್ಯಾಖ್ಯಾನ ಮಾಡುವುದಕ್ಕೆ ಎಸ್ವಿಪಿ ಹೇಳುತ್ತಿದ್ದ ಪರಿಭಾಷೆ ಎಂದರೆ ‘ ತಾಳಮದ್ದಲೆ ಮಾಡುವುದು’.

ಮಂಗಳೂರಿನ ಸ್ನಾತಕೋತ್ತರ ಕೇಂದ್ರ (೧೯೮೦ರ ಬಳಿಕ ಮಂಗಳೂರು ವಿವಿ ) ಕ್ಕೆ ‘ ಮಂಗಳಗಂಗೋತ್ರಿ ‘ ಎಂದು ನಾಮಕರಣ ಮಾಡಿದವರು ಪ್ರೊಫೆಸರ್ ಎಸ್ವಿಪಿ.ಒಂದು ದಿನ ಪ್ರೊಫೆಸರ್ ಜೊತೆಗೆ ನಾನು ಮತ್ತು ನನ್ನ ಸಹಪಾಟಿ ಗೆಳೆಯ ಎನ್.ಕೆ.ಚನ್ನಕೇಶವ ನಡೆದುಕೊಂಡು ಬರುತ್ತಿದ್ದಾಗ ಆ ಕೇಂದ್ರಕ್ಕೆ ಹೆಸರು ಇಡುವ ಮಾತು ಬಂತು.ಮೈಸೂರಿನ ‘ಮಾನಸಗಂಗೋತ್ರಿ’ ಎಂಬ ಹೆಸರಿನ ಪ್ರೇರಣೆಯಿಂದ ‘ ಮಂಗಳಗಂಗೋತ್ರಿ’ ಹೆಸರನ್ನು ಆ ದಿನ ಸೂಚಿಸಿದವರು ಎಸ್ವಿಪಿ.ಮುಂದೆ ಅದು ಮೈಸೂರು ವಿವಿಯಿಂದ ಅಧಿಕೃತ ಅಂಗೀಕಾರ ಮುದ್ರೆ ಪಡೆಯಿತು.

ಗುರುಗಳೊಂದಿಗೆ ಅನೇಕ ಬಾರಿ ಅವರ ಭಾಷಣದ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ.ಎಸ ವಿ ಪಿ ಅವರು , ಕರೆದಲ್ಲಿಗೆಲ್ಲ, ಎಷ್ಟೇ ಕಷ್ಟವಾದರೂ ,ಸರಿಯಾದ ವಾಹನವಿರಲಿ ಇಲ್ಲದಿರಲಿ ಹೋಗಿ, ಎಲ್ಲಾ ಆಯಾಸಗಳನ್ನು ಮರೆತು ,ಸ್ಪೂರ್ತಿದಾಯಕ ಭಾಷಣ ಮಾಡುತ್ತಿದ್ದರು. ಹೋದ ಊರಿನ ಹೆಸರಿನ ಮೆಚ್ಚುಗೆಯ ವಿವರಣೆಯಿಂದ , ತಮ್ಮ ಸಮ್ಮೋಹಿನಿ ವಿದ್ಯೆ ಯಿಂದ ಜನರನ್ನು ಸೆಳೆಯುತ್ತಿದ್ದ ಅವರ ಕಡಲ ಮೊರೆತದ ಭಾಷಣದ ವೈಖರಿಯನ್ನು ಅನೇಕ ಬಾರಿ ಅವರ ಜೊತೆಗೆ ಕೇಳಿದ ಕಂಡ ನೆನಪುಗಳು ಒಂದು ಕನಸಿನ ಜಗತ್ತನ್ನು ಕಟ್ಟಿಕೊಡುತ್ತವೆ.

ನಾವೆಲ್ಲಾ ಕಂಡಿರದ ಕೇಳಿರದ ಊರುಗಳಿಗೆ ಅವರು ಹೋದವರು , ಕಂಡವರು ಮತ್ತು ಜನರ ಹೃದಯಗಳನ್ನು ಗೆದ್ದವರು. ಇಂದಿಗೂ ಆ ಕಾಲದ ಜನರು ಎಸ್ವಿಪಿ ಮಾತುಗಳ

ಧ್ವನಿ ಅನುರಣನವನ್ನು ತಮ್ಮ ಮನೋಭೂಮಿಕೆಯಲ್ಲಿ ಕೇಳಬಲ್ಲವರಾಗಿದ್ದಾರೆ .ಪರಂಪರೆಯ ಬಗ್ಗೆ ಅಪಾರವಾದ ಗೌರವ ,ಹಿರಿಯರ ಬಗ್ಗೆ ಗುರುಗಳ ಬಗ್ಗೆ ಅವರ ಒಳ್ಳೆಯ ಗುಣಗಳ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದ ಎಸ್ವಿಪಿ ಒಬ್ಬ ಅಜಾತ ಶತ್ರು. ಹಸಿದ ಹೊಟ್ಟೆಯಲ್ಲೇ ಪಾಠ ಮಾಡಬಲ್ಲ , ಶ್ರೀಮತಿಯವರ ಕಾಯಿಲೆಯ ವೇಳೆಗೂ ಸರಸ ಭಾಷಣ ಮಾಡಬಲ್ಲ , ಮಗನ ಅಪಘಾತದ ಸುದ್ದಿ ಬಂದಾಗಲೂ ನಡೆಯುತ್ತಿದ್ದ ಸಭೆಯಲ್ಲಿ ಜನ ನಕ್ಕು ನಲಿಯುವಂತೆ ಮಾತಾಡಿ ,ಮತ್ತೆ ಮೈಸೂರಿಗೆ ಮಗನನ್ನು ನೋಡಲು ತೆರಳಿದ , ನೂರು ನೋವುಗಳ ನಡುವೆಯೂ ಸಾವಿರ ಬಗೆಯ ನಗೆ ಚೆಲ್ಲಿದ ಪ್ರೊಫೆಸರ್ ಅವರ ವಿದ್ವತ್ತು ಸಾಧನೆಗಳು , ಅವರ ಸಜ್ಜನಿಕೆಯ ಸರಸತೆಯ ಅತಿ ಉದಾರತೆಯ ಗುಣಗಳ ನಡುವೆ ಬಹಳ ಮಂದಿಗೆ ಕಾಣದೆ ಹೋದದ್ದು ಕನ್ನಡ ಸಾಹಿತ್ಯ ಚರಿತ್ರೆಯ ಒಂದು ವ್ಯಂಗ್ಯ.

ತಾನು ನಗುವುದರೊಂದಿಗೆ ಇತರರನ್ನೂ ನಗಿಸುವ ಪ್ರೊಫೆಸರ್ ಅವರಿಗೆ ಇದ್ದ ಮುಖ್ಯ ಕಾಳಜಿ ಎಂದರೆ ನಿರ್ಮಲ ಪರಿಸರ , ಶುದ್ಧ ನಡವಳಿಕೆ , ಪ್ರೀತಿಯ ಆವರಣ. ಇಂತಹ ಪರಿಸರಕ್ಕೆ ಒಮ್ಮೆ ಹೊಕ್ಕವರು ಮತ್ತೆ ಆ ಸುಖವನ್ನು ಎಂದಿಗೂ ಮರೆಯಲಾರರು.ಅಧಿಕಾರ , ಪ್ರಶಸ್ತಿ , ಬಹುಮಾನ ಇವುಗಳ ಆಸೆ ಎಳ್ಳಷ್ಟೂ ಎಸ್ವಿಪಿ ಅವರಿಗೆ ಇರಲಿಲ್ಲ .ಆದರೆ ಯಾವುದೇ ಪ್ರಶಸ್ತಿ ಬಂದಾಗಲೂ – ತಮಗಾಗಲೀ ಇತರರಿಗಾಗಲೀ – ಅವರು ಹೆಮ್ಮೆ ಪಡುತ್ತಿದ್ದರು. ತಮ್ಮೊಡನೆ ಇರುವವರನ್ನೆಲ್ಲ ಸಂತೋಷ ಪಡುವಂತೆ ಮಾಡುತ್ತಿದ್ದರು.ಹಾಗೆ ನೋಡಿದರೆ ಅವರಿಗೆ ದೊರೆತಿರುವ ಪ್ರಶಸ್ತಿಗಳು ಬಹಳವೇನೂ ಇಲ್ಲ.ಸಣ್ಣ ಸಣ್ಣ ಊರುಗಳಲ್ಲಿ ತಮಗೆ ಮಾಡಿದ ಸನ್ಮಾನಗಳನ್ನು ಅವರು ಸಂಭ್ರಮದಿಂದ ಹೇಳಿಕೊಳ್ಳುತ್ತಿದ್ದರು. ಜನರ ಪ್ರೀತಿಯನ್ನು ಬಹಳ ದೊಡ್ಡ ಗೌರವ ಎಂದು ಭಾವಿಸುತ್ತಿದ್ದರು.ಈ ಅರ್ಥದಲ್ಲೂ ಎಸ್ವಿಪಿ ಕನ್ನಡದ ಅಪೂರ್ವ ಸಾಹಿತಿ.

ಮಂಗಳೂರಿನ ಕಡಲು , ಪ್ರೊಫೆಸರ್ ಪರಮೇಶ್ವರ ಭಟ್ಟರ ಭಾವಕೋಶದ ಬಹಳ ಪ್ರೀತಿಯ ಭಾಗ. ಅದು ಅವರ ಬದುಕಿನ ರೂಪಕ. ಅವರ ’ಉಪ್ಪು ಕಡಲು ‘ ವಚನ ಸಂಕಲನದಲ್ಲಿ ತಾವು ಕಂಡ ತಾವು ಉಂಡ ಉಪ್ಪನ್ನು ಉಪ್ಪಿನ ಋಣದ ಕಲ್ಪನೆಯನ್ನು ಬಗೆ ಬಗೆಯಾಗಿ ಹೇಳಿಕೊಂಡಿದ್ದಾರೆ. ಕಡಲು ಮತ್ತು ಒಡಲು- ಈ ಕುರಿತು ಎಸ್ವಿಪಿ ಬರೆದ ಈ ವಚನ , ಒಡಲನ್ನು ನೀಗಿಕೊಂಡು ಬಹಳ ಕಾಲದ ಬಳಿಕ ಈಗಲೂ ಅವರ ಸಮಗ್ರ ವ್ಯಕ್ತಿತ್ವವನ್ನು ಕಣ್ಣಿಗೆ ಕಟ್ಟಿ ಕೊಡುವ ಮತ್ತು ಮನಕ್ಕೆ ಮುಟ್ಟಿಸುವ ಮುತ್ತಿನಂತಹ ಮಾತು :

ನಿನ್ನ ಕಡಲು ಉಪ್ಪಾದರೂ ಅದರೊಳಗೆ

ನಿನ್ನದೆಂಬ ಮುತ್ತುಂಟು ರತ್ನವುಂಟು

ನನ್ನ ಈ ಒಡಲು ಮುಪ್ಪಾದರೂ

ಇದರೊಳಗೆ ನೀನೆಂಬ ಮುತ್ತುಂಟು ರತ್ನವುಂಟು

ಇದು ಕಾರಣ ಆ ಕಡಲೂ ಭವ್ಯ ಈ ಒಡಲೂ ಭವ್ಯ ಸದಾಶಿವ ಗುರು.

++

ಕನ್ನಡದ ಮಾನ ಎತ್ತರಿಸಿದ ಹಾಮಾನಾ

ಮೊನ್ನೆ ಭಾನುವಾರ (ಸಪ್ಟಂಬರ ೨೫) ಬೆಂಗಳೂರಿನ ‘ಸಿರಿಸಂಪಿಗೆ’ಯಲ್ಲಿ ಚಂದ್ರಶೇಖರ ಕಂಬಾರರನ್ನು ಕಾಣಲು ಹೋದಾಗ ಅಲ್ಲಿ ಗೆಳೆಯ ಬರಗೂರು ರಾಮಚಂದ್ರಪ್ಪ ,ಹಿರಿಯ ಜಾನಪದ ಜೀವಿ ಗೊ.ರು.ಚನ್ನಬಸಪ್ಪ ಸಿಕ್ಕಿದರು.ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ಇಡೀ ಕನ್ನಡ ನಾಡಿನ ಜನರು ಸಂಭ್ರಮಿಸಿದ ಬಗೆಯ ಬಗ್ಗೆ ಮಾತಾಡಿಕೊಂಡೆವು.ಸೈದ್ಧಾಂತಿಕ ಮತ್ತು ವ್ಯಕ್ತಿಗತ ಭಿನ್ನತೆಗಳನ್ನು ಒಂದು ಕ್ಷಣ ಬದಿಗಿಟ್ಟು ಕನ್ನಡದ ಸಾಹಿತಿಗಳು ಮತ್ತು ಎಲ್ಲ ವರ್ಗದ ಕನ್ನಡಿಗರು ಸಂತೋಷ ಪ್ರಕಟಿಸಿದ ,ಮಾಧ್ಯಮಗಳು ವಿಭಿನ್ನ ಕಾರ್ಯಕ್ರಮಗಳ ಮೂಲಕ ಗೌರವ ಸೂಚಿಸಿದ ಸನ್ನಿವೇಶ ಕರ್ನಾಟಕದ ಸಾಂಸ್ಕೃತಿಕ ಜಗತ್ತಿನಲ್ಲಿ ಒಂದು ಆರೋಗ್ಯಕರ ಬೆಳವಣಿಗೆ.ಇದಕ್ಕೆ ಕಂಬಾರರ ಸಾಹಿತ್ಯ ಸಾಧನೆಗಳಷ್ಟೇ ಕನ್ನಡಿಗರ ಕನ್ನಡಪರ ಅಭಿಮಾನ ಮತ್ತು ಔದಾರ್ಯವೂ ಕಾರಣ.

scan0059

ಕನ್ನಡಕ್ಕೆ ಎಂಟನೆಯ ಜ್ಞಾನಪೀಠ ಪ್ರಶಸ್ತಿ ಬಂದಿದೆ.ಇಂತಹ ಪ್ರಶಸ್ತಿ ಬರಬಹುದಾಗಿದ್ದ ಅನೇಕ ಸಾಹಿತಿಗಳು ನಮ್ಮನ್ನು ಅಗಲಿಹೋಗಿದ್ದಾರೆ.ಅರ್ಹರಾದ ಇನ್ನಷ್ಟು ಮಂದಿ ನಮ್ಮ ನಡುವೆ ಇದ್ದಾರೆ.ಆದರೆ ಇಂತಹ ರಾಷ್ಟ್ರೀಯ ಪ್ರಶಸ್ತಿ ಕನ್ನಡಕ್ಕೆ ದೊರೆಯಲು ಸಾಧ್ಯವಾಗುವ ವಾತಾವರಣ ನಿರ್ಮಾಣದ ದೃಷ್ಟಿಯಿಂದ ನಮ್ಮ ಕನ್ನಡ ಕೃತಿಗಳು ಎಷ್ಟು ಪ್ರಮಾಣದಲ್ಲಿ ಇಂಗ್ಲಿಷಿಗೆ ಭಾಷಾಂತರ ಆಗಿವೆ ಎನ್ನುವ ಪ್ರಶ್ನೆಗೆ ,ಎಷ್ಟು ಹೊರನಾಡಿನ ಸಾಹಿತಿಗಳ ವಿಮರ್ಶಕರ ಗಮನವನ್ನು ಸೆಳೆದಿವೆ ಎನ್ನುವ ಪ್ರಶ್ನೆಗೆ ನಿರಾಶಾದಾಯಕ ಉತ್ತರ ದೊರೆಯುತ್ತದೆ.ಕೇವಲ ಕನ್ನಡದ ಬಗೆಗಿನ ಉತ್ಸಾಹ ಅಭಿಮಾನಗಳಿಂದಲೇ ಇದು ಸಾಧ್ಯ ಆಗುವುದಿಲ್ಲ.ರಾಷ್ಟ್ರೀಯ ಮಟ್ಟದಲ್ಲಿ ಸಮರ್ಪಕ ಅನುವಾದಗಳ ಮೂಲಕ ಬೇರೆ ಭಾಷೆಗಳ ವಿಮರ್ಶಕರ ಗಮನ ಸೆಳೆಯುವ ಕೆಲಸವನ್ನು ಮಾಡುವುದು ಬಹಳ ಮುಖ್ಯವಾದ ಕೆಲಸ.ಈ ದೃಷ್ಟಿಯಲ್ಲಿ ನೋಡಿದರೆ ಭಾರತದ ಅತಿ ಶ್ರೇಷ್ಠ ಲೇಖಕರಾದ ಕನ್ನಡದ ಕುವೆಂಪು,ಬೇಂದ್ರೆ,ಕಾರಂತ ಮತ್ತು ಮಾಸ್ತಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದದ್ದರ ಹಿಂದೆ ನಡೆದಿರಬಹುದಾದ ಕನ್ನಡಪರ ಪರಿಶ್ರಮ ಬೆರಗು ಹುಟ್ಟಿಸುತ್ತದೆ.ಈ ಮಹಾನ್ ಸಾಹಿತಿಗಳು ಎಲ್ಲರೂ ಇಂಗ್ಲಿಶ್ ಜ್ಞಾನ ಇದ್ದರೂ ಕನ್ನಡಲ್ಲೇ ಬರೆದು ಕನ್ನಡದ ಅನನ್ಯತೆಯನ್ನು ಸಾಧಿಸಿದವರು.ಆ ಕಾಲಕ್ಕೆ ಇವರ ಕೃತಿಗಳು ವಿಶೇಷವಾಗಿ ಇಂಗ್ಲಿಷಿಗೆ ಅನುವಾದ ಆಗಿರಲಿಲ್ಲ.ಇಂತಹ ವೇಳೆಯಲ್ಲಿ ನಿಜವಾದ ಶ್ರೇಷ್ಠ ಕನ್ನಡ ಸಾಹಿತಿಗಳ ಪರವಾಗಿ ಅವರಿಗೆ ಗೊತ್ತಿಲ್ಲದೆಯೇ ರಾಷ್ಟ್ರ ಮಟ್ಟದಲ್ಲಿ ಸಕಾರಾತ್ಮಕ’ ಲಾಬಿ’ ಮಾಡಬೇಕಾಗುತ್ತದೆ.ಇಂತಹ ಸಾಹಿತಿಗಳ ವ್ಯಕ್ತಿ ವಿವರ ಮತ್ತು ಕೆಲವು ಮಹತ್ವದ ಕೃತಿಗಳ ಆಯ್ದ ಭಾಗಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿಸುವುದು,ಸಮಿತಿಯಲ್ಲಿ ಇರುವ ಇತರ ಭಾಷೆಯ ಸಾಹಿತಿಗಳ ಗಮನಕ್ಕೆ ತರುವುದು,ಅವರಿಗೆ ಮನವರಿಕೆ ಮಾಡಿಕೊಡುವುದು,ಕೊನೆಗೆ ಒಮ್ಮತ ಅಭಿಪ್ರಾಯಕ್ಕೆ ಪ್ರಯತ್ನಿಸುವುದು,ಆ ಭಾಷೆಯ ಉತ್ತಮ ಸಾಹಿತಿಗಳ ಅವಕಾಶಗಳು ಬಂದಾಗ ಅವರಿಗೆ ಬೆಂಬಲ ಕೊಡುವುದು-ಇವೆಲ್ಲವನ್ನೂ ಶೈಕ್ಷಣಿಕ ನೆಲೆಯಲ್ಲಿ ಮಾಡಿದಾಗ ಮಾತ್ರ ಎಲ್ಲ ಅರ್ಹತೆಗಳು ಇದ್ದಾಗಲೂ ಇಂತಹ ಪ್ರಶಸ್ತಿಗಳು ಕನ್ನಡಕ್ಕೆ ದೊರೆಯಲು ಸಾಧ್ಯ ಆಗುತ್ತದೆ.

995101_622703204421504_2114742462_n

ಕನ್ನಡಕ್ಕೆ ದೊರೆತ ಆರಂಭದ ಜ್ಞಾನಪೀಠ ಪ್ರಶಸ್ತಿಗಳು -ಕುವೆಂಪು,ಬೇಂದ್ರೆ,ಕಾರಂತ,ಮಾಸ್ತಿ,ಗೋಕಾಕರದ್ದು.ಅನುಭಾವಿಗಳ ಹಾಗೆ ಬದುಕಿದ ಮತ್ತು ಬರೆದ ಇವರಿಗೆ ಜ್ಞಾನಪೀಠದಂತಹ ರಾಷ್ಟ್ರೀಯ ಪ್ರಶಸ್ತಿ ದೊರೆಯಲು ಪರಿಶ್ರಮ ಪಟ್ಟವರು ಮತ್ತು ಬಹುತೇಕ ಕಾರಣರಾದವರಲ್ಲಿ ಡಾ.ಹಾ.ಮಾ.ನಾಯಕರು ಅಗ್ರಗಣ್ಯರು.ಹಾ.ಮಾ.ನಾಯಕ (೧೨ ಸಪ್ಟಂಬರ ೧೯೩೧-೧೦ ನವಂಬರ ೨೦೦೦) ಅವರು ಬದುಕಿದ್ದರೆ ಈ ತಿಂಗಳಿಗೆ ಅವರಿಗೆ ಎಂಬತ್ತು ವರ್ಷ ಆಗುತ್ತಿತ್ತು.ಹಾಮಾನಾ ೧೯೭೪-೧೯೮೩ರ ಅವಧಿಯಲ್ಲಿ ಭಾರತೀಯ ಜ್ಞಾನಪೀಠ ಕನ್ನಡ ಸಲಹಾ ಸಮಿತಿಯ ಸದಸ್ಯ ಮತ್ತು ಸಂಚಾಲಕರಾಗಿದ್ದರು.ಅವರು ೧೯೮೪-೮೬ರ ಅವಧಿಯಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.ಬೇಂದ್ರೆ ,ಕಾರಂತ ಮತ್ತು ಮಾಸ್ತಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದದ್ದು ಈ ಅವಧಿಗಳಲ್ಲಿ.ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಭಾಷಾವಿಜ್ಞಾನದಲ್ಲಿ ಎಂ.ಎ.ಪದವಿ (೧೯೫೮),ಅಮೇರಿಕಾದ ಇಂಡಿಯಾನಾ ವಿಶ್ವವಿದ್ಯಾಲಯದಿಂದ ಭಾಷಾವಿಜ್ನಾನದಲ್ಲಿ ಪಿಎಚ್.ಡಿ.ಪದವಿ (೧೯೬೪) ಪಡೆದಿದ್ದ ಹಾಮಾನಾ ಅವರಿಗೆ ಬೆಂಗಾಲಿ ಲೇಖಕರ ಸಹಿತ ಭಾರತದ ಅನೇಕ ಭಾಷೆಗಳ ಹಿರಿಯ ಸಾಹಿತಿಗಳ ನೇರ ಸಂಪರ್ಕ ಇದ್ದಕಾರಣ ಆರಂಭದ ಜ್ಞಾನಪೀಠ ಪ್ರಶಸ್ತಿಗಳನ್ನು ಕನ್ನಡದ ಹಿರಿಯ ಸಾಧಕ ಸಾಹಿತಿಗಳು ಪಡೆಯಲು ಸಾಧ್ಯವಾಯಿತು.ಹೀಗೆ ಕನ್ನಡದ ಮಾನವನ್ನು ಎತ್ತರಿಸುವ ಕೆಲಸವನ್ನು ತಮ್ಮ ಕಾಯಕ ಮತ್ತು ಬರಹಗಳಿಂದ ನಿರಂತರವಾಗಿ ಮಾಡಿದವರು ಹಾಮಾನಾ.

ಹಾಮಾನಾ ಅವರು ಕನ್ನಡದ ಪತ್ರಿಕೆಗಳಲ್ಲಿ ನಿರಂತರವಾಗಿ ಅಂಕಣಗಳನ್ನು ಬರೆದು ಕನ್ನಡ ,ಕರ್ನಾಟಕ ಮತ್ತು ಕನ್ನಡ ಸಂಸ್ಕೃತಿಯ ಬಗ್ಗೆ ಕನ್ನಡಿಗರಿಗೆ ಸಮರ್ಪಕ ಮಾಹಿತಿ ಮತ್ತು ಜ್ಞಾನವನ್ನು ಏಕಕಾಲಕ್ಕೆ ಕೊಡುತ್ತಲೇ ಸಾಂಸ್ಕೃತಿಕ ಕರ್ನಾಟಕವನ್ನು ಕಟ್ಟಲು ನೆರವಾದರು.’ಸ’ಕಾರದಿಂದ ಆರಂಭವಾಗುವ ಅವರ ಹೆಚ್ಚಿನ ಅಂಕಣಬರಹಗಳು ಶ್ರೀಸಾಮಾನ್ಯ ಕನ್ನಡಿಗರಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಪ್ರೀತಿಯನ್ನು ಬೆಳಸಿದವು.ಅಮೇರಿಕಾದ ಇಂಡಿಯಾನಾ ಮತ್ತು ಪೆನ್ಸಿಲ್ ವೇನಿಯಾ ವಿವಿಗಳಿಂದ ಭಾಷಾವಿಜ್ಞಾನ ಮತ್ತು ಜಾನಪದ ವಿಜ್ಞಾನ ತರಬೇತಿ ಪಡೆದ ಹಾಮಾನಾ ,ಆ ತಿಳುವಳಿಕೆಯನ್ನು ಕನ್ನಡ ಭಾಷೆ ಮತ್ತು ಜಾನಪದಗಳ ವೈಜ್ಞಾನಿಕ ಅಧ್ಯಯನಕ್ಕೆ ಧಾರೆ ಎರೆದರು.ಅವರ ‘ಜಾನಪದ ಸ್ವರೂಪ’ ಕಿರುಗ್ರಂಥ ಕನ್ನಡದಲ್ಲಿ ಜಾನಪದ ಅಧ್ಯಯನದ ಹೊಸ ದಿಕ್ಕಿನ ಬಾಗಿಲು ತೆರೆಯಿತು.ಈರೀತಿ ಕನ್ನಡದ ಮಾನವನ್ನು ಎತ್ತರಿಸಿದ ಮತ್ತು ಕನ್ನಡದ ಅಭಿಮಾನವನ್ನು ತಮ್ಮ ಬರಹಗಳ ಮೂಲಕ ಬೆಳೆಸಿದ ಹಾಮಾನಾ ಅವರ ಅಂಕಣ ಬರಹಗಳ ಸಂಕಲನ ‘ಸಂಪ್ರತಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ೧೯೮೯ರಲ್ಲಿ ಬಂದಾಗ ಕನ್ನಡ ಸಾಹಿತಿಗಳ ಒಂದು ಗುಂಪು ನಡೆಸಿದ ಅಸೂಯೆಯ ಸಾಹಿತ್ಯಕ ರಾಜಕೀಯ ಈಗ ಇತಿಹಾಸಕ್ಕೆ ಸೇರಿದ್ದು.ಸಾಹಿತ್ಯದ ಶ್ರೇಷ್ಟತೆಯ ಕುರಿತು ಕನ್ನಡದ ಸಾಹಿತಿಗಳು ಮತ್ತು ವಿಮರ್ಶಕರು ಅನ್ನಿಸಿಕೊಂಡವರು ಕೆಲವರು ಅಂದು ನಡೆಸಿದ ಚರ್ಚೆಯು ಸಾಹಿತ್ಯೇತರ ಉದ್ದೇಶಗಳನ್ನು ಹೊಂದಿತ್ತು ಎನ್ನುವುದು ಆ ಬಳಿಕ ಎಲ್ಲರಿಗೂ ಗೊತ್ತಾದ ಬಹಿರಂಗ ಸತ್ಯ.ಆ ಚರ್ಚೆಯಲ್ಲಿ ಪಾಲುಗೊಂಡ ಕೆಲವರು ಇಂದು ನಮ್ಮೊಂದಿಗಿಲ್ಲ.ಉಳಿದವರು ಸಾಕಷ್ಟು ಮಾಗಿದ್ದಾರೆ.ಇಂತಹ ಸಂದರ್ಭದಲ್ಲಿ ಗೆಳೆತನಕ್ಕಿಂತ ಹೆಚ್ಚಾಗಿ ತನ್ನ ನಿಲುವಿನ ಬದ್ಧತೆಯನ್ನು ತೋರಿ ಕೆ.ವಿ.ಸುಬ್ಬಣ್ಣ ಅವರು ಬರೆದ ‘ಶ್ರೇಷ್ಟತೆಯ ವ್ಯಸನ’ ಇಂದಿಗೂ ಒಂದು ಮಹತ್ವದ ಚಿಂತನೆಯ ಲೇಖನವಾಗಿ ಉಳಿಯುತ್ತದೆ.ಆ ಬಳಿಕ ಕಾವೇರಿ ತುಂಗಭದ್ರಾ ಕೃಷ್ಣಾಗಳಲ್ಲಿ ಸಾಕಷ್ಟು ನೀರು ಹರಿದುಹೋಗಿದೆ.ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳನ್ನು ಅಂಕಣ ಬರಹಗಳ ಸಹಿತ ಚಿಂತನೆಯ ಲೇಖನಗಳಿಗೆ ನಮ್ಮ ಕನ್ನಡದ ಸಾಹಿತಿಗಳು ಪಡೆದುಕೊಂಡಿದ್ದಾರೆ.ಇಂತಹ ಕಾಲಘಟ್ಟದಲ್ಲಿ ನಮ್ಮೊಡನಿಲ್ಲದ ಹಾಮಾನಾ ನಮಗೆ ಮತ್ತೆ ಮತ್ತೆ ನೆನಪಾಗುತ್ತಾರೆ.

hamana1-e1317172642598

ಹಾಮಾನಾ ನನ್ನ ಪಿಎಚ್.ಡಿ.ಸಂಶೋಧನೆಯ ಮಾರ್ಗದರ್ಶಕರಾಗಿದ್ದರು: ‘ತುಳು ಜನಪದ ಸಾಹಿತ್ಯ’ -ಮೈಸೂರು ಬಿಶ್ವವಿದ್ಯಾನಿಲಯ .೧೯೮೧.ನನ್ನ ಥೀಸಿಸ್ ನ ಪ್ರಕಟಿತ ಗ್ರಂಥದ (ಕನ್ನಡ ಸಾಹಿತ್ಯ ಪರಿಷತ್ತು ,೧೯೮೫ ) ನನ್ನ ಮಾತಿನಲ್ಲಿ ಬರೆದ ಈ ಸಾಲುಗಳು ಈಗಲೂ ನನ್ನ ಪಾಲಿಗೆ ಜೀವಂತವಾಗಿವೆ :’ಯಾವ ಅಧಿಕಾರದಲ್ಲಿದ್ದರೂ ಮಾನವೀಯ ಸಂಬಂಧಗಳಿಗೆ ಎಳ್ಳಷ್ಟೂ ಕುಂದಾಗದಂತೆ ನಡೆದುಕೊಳ್ಳುವ ಡಾ.ಹಾ.ಮಾ.ನಾಯಕರ ವಿಶ್ವಾಸದ ಸುಖವನ್ನು ಬಹಳ ಅಮೂಲ್ಯವಾದುದೆಂದು ನಾನು ಎಲ್ಲ ಕಾಲಕ್ಕ್ಕೂ ತಿಳಿದಿದ್ದೇನೆ.ಬದುಕಿನ ಶಿಸ್ತು,ಅಚ್ಚುಕಟ್ಟು,ಮೌಲ್ಯಗಳ ಬಗೆಗಿನ ಪ್ರಾಮಾಣಿಕ ಕಾಳಜಿ ,ಒಳ್ಳೆಯ ಉದ್ದೇಶಕ್ಕಾಗಿ ಎಲ್ಲಾ ಅಡ್ಡಿಗಳನ್ನು ಎದುರಿಸುವ ಎದೆಗಾರಿಕೆ -ಇಂತಹ ಅನೇಕ ಅಂಶಗಳಲ್ಲಿ ಡಾ.ನಾಯಕರನ್ನು ಈ ನಿಬಂಧದ ವ್ಯಾಪ್ತಿಯ ಹೊರಗೂ ನನ್ನ ಮಾರ್ಗದರ್ಶಕರೆಂದು ನಾನು ತಿಳಿದಿದ್ದೇನೆ.”

ಹಾಮಾನಾ ಅವರನ್ನು ನಾನು ಮೊದಲು ನೋಡಿದ್ದು ೧೯೬೮ರಲ್ಲಿ ಮಂಗಳೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ನಾನು ಕನ್ನಡ ಎಂ ಎ ವಿದ್ಯಾರ್ಥಿಯಾಗಿದ್ದಾಗ.ನನ್ನ ಗುರುಗಳಾದ ಪ್ರೊ.ಎಸ.ವಿ.ಪರಮೇಶ್ವರ ಭಟ್ಟರು ಅವರನ್ನು ನಮ್ಮ ವಿಭಾಗಕ್ಕೆ ಮೊದಲ ಬಾರಿ ಕರೆಸಿದಾಗ.ಆಗ ಅವರು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದರು.ನಡೆನುಡಿಯಲ್ಲಿ ಹಿತಮಿತ ಗುಣ,ಸ್ಪಷ್ಟತೆ ,ಗಾಂಭೀರ್ಯ -ಅದು ಅವರ ಬಗೆಗಿನ ಆಕರ್ಷಣೆಯೂ ಹೌದು , ಭಯವೂ ಹೌದು.೧೯೬೯ರಲ್ಲಿ ಮಂಗಳೂರಿನಲ್ಲಿ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ನಡೆಯಿತು.ಆಗ ನಾನು ಎರಡನೆಯ ವರ್ಷದ ಎಂ ಎ ವಿದ್ಯಾರ್ಥಿ.ಸಿಂಪಿ ಲಿಂಗಣ್ಣ ಸಮ್ಮೇಳನಾಧ್ಯಕ್ಷರು.ಎಚ್.ಎಲ್.ನಾಗೇಗೌಡರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆಗಿ ಸಮ್ಮೇಳನದ ಜವಾಬ್ದಾರಿ ಹೊತ್ತವರು.ದೇಜಗೌ ,ಹಾಮಾನಾ,ಜೀಶಂಪ ಮೊದಲಾಗಿ ಕರ್ನಾಟಕದ ಜಾನಪದ ವಿದ್ವಾಂಸರೆಲ್ಲ ಒಟ್ಟು ಸೇರಿದ ಮಹಾಸಮ್ಮೇಳನ.ಗೊರು ಚನ್ನಬಸಪ್ಪ ಮತ್ತು ತರೀಕೆರೆಯ ಕೆ.ಆರ್.ಲಿಂಗಪ್ಪ ಕಾರ್ಯದರ್ಶಿಗಳು.ಇಡೀ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಲು ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.ಮೈಸೂರು ಕೇಂದ್ರದಿಂದ ತೀ ನಂ ಶಂಕರನಾರಾಯಣ ಮತ್ತು ಮಂಗಳೂರು ಕೇಂದ್ರದಿಂದ ನಾನು ಆಯ್ಕೆ ಆಗಿದ್ದೆವು.ನನ್ನ ಪ್ರಬಂಧದ ವಿಷಯ ‘ದಕ್ಷಿಣ ಕನ್ನಡದ ಕಲಾತ್ಮಕ ವಿನೋದಗಳು’.ನನ್ನ ಬದುಕಿನ ಮೊದಲನೆಯ ರಾಜ್ಯ ಮಟ್ಟದ ಸಮ್ಮೇಳನದ ಭಾಗವಹಿಸುವಿಕೆ ಅದು.ನನ್ನ ಪ್ರಬಂಧ ಮಂಡನೆಯ ಬಳಿಕ ಅನೇಕ ಹಿರಿಯರು ನನ್ನ ಬೆನ್ನು ತಟ್ಟಿದರು.ಹಾಮಾನಾ ನನ್ನಲ್ಲಿ ಬಂದು ಮೆಚ್ಚುಗೆಯ ಎರಡು ಮಾತು ಹೇಳಿದಾಗ ಪ್ರತಿಕ್ರಿಯೆ ಹೇಳಲು ನನಗೆ ಮಾತುಗಳು ಬರಲಿಲ್ಲ.

೧೯೭೦ ಎಪ್ರಿಲ್ .ನನ್ನ ಕನ್ನಡ ಎಂ ಎ ಅಂತಿಮ ಪರೀಕ್ಷೆಯ ಬಳಿಕ ಮೌಖಿಕ ಪರೀಕ್ಷೆ.ನಮ್ಮ ಪ್ರೊಫೆಸರ್ ಎಸ ವಿ ಪಿ ಅವರಲ್ಲದೆ ಹೊರಗಿನಿಂದ ನಾಲ್ಕು ಮಂದಿ ಪ್ರಾಧ್ಯಾಪಕರು ಪರೀಕ್ಷಕರಾಗಿ ಬಂದಿದ್ದರು.ಮೈಸೂರಿನಿಂದ ಹಾಮಾನಾ ಮತ್ತು ಎಚ್.ತಿಪ್ಪೇರುದ್ರ ಸ್ವಾಮಿ ,ಧಾರವಾಡದಿಂದ ಆರ್.ಸಿ.ಹಿರೇಮಠ,ಮದ್ರಾಸಿನಿಂದ ಎಂ.ಮರಿಯಪ್ಪ ಭಟ್ಟರು.(ಈಗ ಈ ಐದೂ ಮಂದಿ ಪ್ರಾಧ್ಯಾಪಕ ವಿದ್ವಾಂಸರು ನಮ್ಮ ನಡುವೆ ಇಲ್ಲ ಎನ್ನುವುದು ವಿಷಾದದ ಸಂಗತಿ.)ನನ್ನ ಸರದಿ ಬಂದಾಗ ಹಾಮಾನಾ ನನ್ನಲ್ಲಿ ಕೇಳಿದ ಒಂದು ಪ್ರಶ್ನೆ :’ರೈ ಪದದ ನಿಷ್ಪತ್ತಿ.’ ನನ್ನ ಪಾಠಗಳ ಬಗ್ಗೆ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದ ನನಗೆ ಈ ಪ್ರಶ್ನೆ ಅನಿರೀಕ್ಷಿತವಾಗಿತ್ತು.ಆದರೆ ಸಮಯ ಸ್ಪೂರ್ತಿಯಿಂದ ‘ರಾಯ ಪದದಿಂದ ರೈ ಬಂದಿರಬಹುದು.ವಿಜಯನಗರ ಅರಸರು ತುಳುವ ವಂಶದವರಾಗಿದ್ದರು ,ಅವರು ತುಳುನಾಡನ್ನು ಆಳಿರುವುದಕ್ಕೆ ಇತಿಹಾಸದಲ್ಲಿ ದಾಖಲೆಗಳಿವೆ.ಅವರ ಹೆಸರುಗಳ ಕೊನೆಯಲ್ಲಿ ರಾಯ ಇದೆ.ಕೃಷ್ಣದೇವರಾಯ ಇತ್ಯಾದಿ ’ಎಂದೆ.’ಪ್ರತ್ಯೇಕ ತುಳುನಾಡು ಬೇಕು ಎನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?’-ಹಾಮಾನಾ ಅವರ ಮರುಪ್ರಶ್ನೆ.’ಕರ್ನಾಟಕದಿಂದ ಪ್ರತ್ಯೇಕಗೊಳ್ಳುವ ತುಳುನಾಡು ಬೇಕಾಗಿಲ್ಲ.ಆದರೆ ತುಳು ಭಾಷೆ ಮತ್ತು ಸಾಹಿತ್ಯ ವಿಶಿಷ್ಟವಾಗಿ ಬೆಳೆಯಬೇಕು’-ನನ್ನ ಉತ್ತರ.ಎಲ್ಲರೂ ಒಪ್ಪಿಕೊಂಡಂತೆ ಭಾಸವಾಯಿತು.ನಾಯಕರೊಂದಿಗೆ ಎದುರಿನಲ್ಲಿ ಕುಳಿತು ಸ್ವಲ್ಪ ಧೈರ್ಯದಿಂದ ಮೊದಲು ಮಾತಾಡಿದ್ದು ಆಗಲೇ.

೧೯೭೦ ಜುಲೈ.ನನ್ನ ಕನ್ನಡ ಎಂ ಎ ಫಲಿತಾಂಶ ಪ್ರಕಟವಾಯಿತು.ಮಂಗಳೂರು ಕೇಂದ್ರಕ್ಕೆ ಮೊದಲನೆಯವನಾಗಿ ,ಮಂಗಳೂರು ಮತ್ತು ಮೈಸೂರು ಕೇಂದ್ರಗಳು ಸೇರಿ ಎರಡನೆಯವನಾಗಿ ಮೊದಲ ದರ್ಜೆಯಲ್ಲಿ ಉನ್ನತ ಶ್ರೇಣಿಯಲ್ಲಿ ನಾನು ಪಾಸಾಗಿದ್ದೆ.ಮುಂದೆ ಏನು ಮಾಡಬೇಕು ಎನ್ನುವ ಕಲ್ಪನೆ ಇರಲಿಲ್ಲ.ಕಾಲೇಜು ,ವಿಶ್ವವಿದ್ಯಾಲಯ ಸಂಸ್ಕೃತಿಗಳ ಹೊರಗೆ ಹಳ್ಳಿಯಲ್ಲಿ ಇದ್ದ ಕಾರಣ ಉದ್ಯೋಗದ ಅವಕಾಶಗಳು ಕ್ರಮಗಳು ಗೊತ್ತಿರಲಿಲ್ಲ.ಪುತ್ತೂರಿನ ಒಂದು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಹುದ್ದೆ ಖಾಲಿ ಇದೆ ಎಂದು ಕೇಳಿ,ಅರ್ಜಿ ಹಾಕಿಕೊಂಡು ಸಂದರ್ಶನಕ್ಕೆ ಹೋದೆ.ಆದರೆ ಆಯ್ಕೆ ಆಗಲಿಲ್ಲ.ಎಂ ಎ ಯಲ್ಲಿ ಉತ್ತಮ ಶ್ರೇಣಿ ಇರುವ ಕಾರಣ ,ಕಾಲೇಜು ಉಪನ್ಯಾಸಕ ಹುದ್ದೆಗೆ ಅರ್ಹತೆ ಜಾಸ್ತಿ ಆಯಿತು ಎಂದು ಹೇಳಿದರು ಎಂದು ಆ ಮೇಲೆ ತಿಳಿಯಿತು.ಆವೇಳೆಗೆ ಮೈಸೂರು ವಿವಿಗೆ ಪ್ರೊ.ದೇ ಜವರೇ ಗೌಡರು ಕುಲಪತಿಗಳಾಗಿ ಬಂದಿದ್ದರು.ಹಾ ಮಾ ನಾಯಕರು ಅಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದರು.ಒಂದು ದಿನ ಆಕಸ್ಮಿಕವಾಗಿ ನನಗೆ ಒಂದು ಸಂದೇಶ ಬಂತು .ನಾನು ಮೈಸೂರಿನಲ್ಲಿ ಹಾ ಮಾ ನಾಯಕರನ್ನು ಹೋಗಿ ಕಾಣಬೇಕೆಂದು.ಯಾವುದಾದರೂ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಅಧ್ಯಾಪಕ ಕೆಲಸ ದೊರೆಯಬಹುದೇ ಎಂಬ ಆಸೆಯಿಂದ ನಾನು ಮೈಸೂರಿಗೆ ಹೊರಟೆ.ಇದು ೧೯೭೦ರ ಆಗಸ್ಟ್ ಆರಂಭದಲ್ಲಿ.ಆ ವೇಳೆಗೆ ಮೈಸೂರು ನನಗೆ ಅಪರಿಚಿತ ಊರು.ಎರಡು ಬಾರಿ ಮಾತ್ರ ಮೈಸೂರು ನೋಡಿದ್ದೆ.ನಾನು ಮಂಗಳೂರಲ್ಲಿ ಎಂ ಎ ವಿದ್ಯಾರ್ಥಿ ಆಗಿದ್ದಾಗ ೧೯೬೮ರಲ್ಲಿ ನಾಲ್ಕು ತಿಂಗಳ ಕಾಲ ನನ್ನ ಅಧ್ಯಾಪಕರಾಗಿದ್ದ ರಾಮೇಗೌಡ (ರಾಗೌ ) ಅವರ ಮನೆಗೆ ಹೋದೆ.ಅಲ್ಲೇ ಉಳಿದುಕೊಂಡು ,ಮರುದಿನ ಬೆಳಗ್ಗೆ ರಾಗೌ ಜೊತೆಗೆ ಜಯಲಕ್ಷ್ಮಿಪುರಂನಲ್ಲಿ ಇರುವ ಹಾಮಾನಾ ಮನೆ ‘ಗೋಧೂಳಿ’ಗೆ ಹೋದೆ.ಹಾಮಾನಾ ನೇರವಾಗಿ ವಿಷಯ ಪ್ರಸ್ತಾವಿಸಿದರು.’ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಉಪನ್ಯಾಸಕ ಹುದ್ದೆಯೊಂದನ್ನು ಸೃಜಿಸುತ್ತಿದ್ದೇವೆ.ಈ ಕುರಿತು ಕುಲಪತಿ ದೇಜಗೌ ಜೊತೆ ಸಮಾಲೋಚಿಸಿದ್ದೇನೆ.ಆ ಪ್ರದೇಶದವರನ್ನೇ ಅಲ್ಲಿಗೆ ನೇಮಕಮಾಡಬೇಕು ಎನ್ನುವುದು ನಮ್ಮ ನಿಲುವು.ನೀವು ಅಲ್ಲಿನ ಮೊದಲ ತಂಡದಲ್ಲಿ ಮೊದಲ ಸ್ಥಾನ ಪಡೆದವರಾದ ಕಾರಣ ನಿಮ್ಮನ್ನು ಈಗ ಅಲ್ಲಿ ತಾತ್ಕಾಲಿಕ ನೆಲೆಯಲ್ಲಿ ಉಪನ್ಯಾಸಕರಾಗಿ ನೇಮಿಸುತ್ತೇವೆ.ಕುಲಪತಿಗಳು ಈ ಅಭಿಪ್ರಾಯವನ್ನು ಕೊಟ್ಟಿದ್ದಾರೆ.ಮುಂದೆ ನಿಮ್ಮ ಕೆಲಸದ ಪ್ರಗತಿ ನೋಡಿಕೊಂಡು ಖಾಯಂ ನೇಮಕಾತಿ ಮಾಡಿಕೊಳ್ಳಬಹುದು.ಆದರೆ ಖಾಯಂ ಆಗುತ್ತದೆ ಎನ್ನುವ ಭರವಸೆ ಇಲ್ಲ.’ ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ.ಅವರೇ ಒಂದು ಬಿಳಿಯ ಹಾಳೆ ಕೊಟ್ಟರು.ಅರ್ಜಿ ಹೇಗೆ ಬರೆಯಬೇಕು ಎಂದು ತಿಳಿಸಿದರು .ಅವರ ಎದುರೇ ಅರ್ಜಿ ಬರೆದು ಸಹಿ ಹಾಕಿ ,ಅಂಕ ಪಟ್ಟಿ ಸೇರಿಸಿ ,ಅವರ ಕೈಗೆ ಕೊಟ್ಟೆ.ಊರಿಗೆ ಹಿಂದಿರುಗಿದೆ.ಎರಡು ವಾರಗಳ ಬಳಿಕ ನೇಮಕಾತಿಯ ಆದೇಶ ಬಂತು.ಈಗ ನೆನಪಿಸಿಕೊಂಡರೂ ಕನಸಿನಂತೆ ಕಾಣುವ ಘಟನೆ.ಯಾವ ಸಂಪರ್ಕ ,ಕೋರಿಕೆ ,ಪ್ರಭಾವ ಇಲ್ಲದೆ ವಿಶ್ವವಿದ್ಯಾಲಯದಲ್ಲಿ ಕರೆದು ಕೆಲಸ ಕೊಟ್ಟ ಈ ಘಟನೆ ನನ್ನ ಮುಂದಿನ ಬದುಕಿನ ಗತಿಯನ್ನು ನಿರ್ಧರಿಸಿತು.ಜೊತೆಗೆ ನಾನು ಹೇಗೆ ಕೆಲಸಮಾಡಬೇಕು ಎನ್ನುವ ಪಾಠವನ್ನು ಕಲಿಸಿತು.

೧೯೭೦ರಿನ್ದ ಮಂಗಳೂರು ವಿಶ್ವವಿದ್ಯಾನಿಲಯ ಸ್ಥಾಪನೆ ಆದ ೧೯೮೦ರ ವರೆಗೆ ನಮ್ಮ ಸ್ನಾತಕೋತ್ತರ ಕನ್ನಡ ವಿಭಾಗ ಮೈಸೂರು ವಿವಿಯ ನೇರ ಆಡಳಿತದಲ್ಲಿದ್ದ ಕಾರಣ ,ಆ ಅವಧಿಯಲ್ಲಿ ಡಾ.ಹಾ ಮಾ ನಾಯಕರು ನಮ್ಮ ನಿರ್ದೇಶಕರು,ಅಧ್ಯಯನ ಮಂಡಳಿಯ ಅಧ್ಯಕ್ಷರು.೧೯೭೫ರಲ್ಲಿ ಒಮ್ಮೆ ಮೈಸೂರಿಗೆ ನನ್ನನ್ನು ಬರಹೇಳಿ ,’ ಮಂಗಳೂರಿನ ಕನ್ನಡ ವಿಭಾಗದಲ್ಲಿ ತುಳು ಭಾಷೆ ,ಸಾಹಿತ್ಯ,ಇತಿಹಾಸವನ್ನು ಐಚ್ಚಿಕವಾಗಿ ಆರಂಭಿಸೋಣ,ಅದರ ಪಾಠಪಟ್ಟಿ ಸಿದ್ಧಪಡಿಸಿ ಕೊಡಿ ಎಂದರು .ಅದನ್ನು ಸಿದ್ಧಪಡಿಸಿ ಕೊಟ್ಟೆ.ತುಳುನಾಡಿನ ಇತಿಹಾಸ,ತುಳು ಭಾಷೆ ಸಾಹಿತ್ಯ ಮತ್ತು ಯಕ್ಷಗಾನ ಎನ್ನುವ ಮೂರು ಪತ್ರಿಕೆಗಳ ಪಾಠಪಟ್ಟಿ ಸಿದ್ಧಪಡಿಸಿ ಕೊಟ್ಟೆ.ಅದಕ್ಕೆ ಮೈಸೂರು ವಿವಿಯ ಅಧ್ಯಯನ ಮಂಡಳಿ ಮತ್ತು ಅಕಾಡೆಮಿಕ್ ಕೌನ್ಸಿಲ್ ಗಳಿಂದ ಅನುಮೋದನೆ ಮಾಡಿಸಿಕೊಂಡರು.ಹೀಗೆ ವಿಶ್ವವಿದ್ಯಾಲಯದ ಎಂ ಎ ಪಾಠಪಟ್ಟಿಯಲ್ಲಿ ತುಳು ಭಾಷೆ ಸಾಹಿತ್ಯ ಜಾನಪದ ಮೊದಲ ಬಾರಿ ಸೇರ್ಪಡೆಯಾದದ್ದು ಹಾಮಾನಾ ಅವರ ಆಲೋಚನೆ ಮತ್ತು ಕಾರ್ಯಶಕ್ತಿಯಿಂದ ೧೯೭೫ರಲ್ಲಿ.ಇದರಿಂದಾಗಿ ಮುಂದೆ ಅನೇಕ ಮಂದಿ ಸಂಶೋಧಕರು ಈ ವಿಷಯಗಳಲ್ಲಿ ಹೆಚ್ಚಿನ ಅಧ್ಯಯನ ನಡೆಸಲು ಅವಕಾಶ ಆಯಿತು.

hamana1-e1317172642598 (1)

ನಾನು ‘ತುಳು ಜನಪದ ಸಾಹಿತ್ಯ’ವನ್ನು ಕುರಿತು ಪಿಎಚ್.ಡಿ.ಪದವಿಗಾಗಿ ಸಂಶೋದನೆ ನಡೆಸಲು ಸೂಚಿಸಿದವರು ಹಾಮಾನಾ. ಈ ವಿಷಯಕ್ಕೆ ಅವರೇ ನನಗೆ ಮಾರ್ಗದರ್ಶಕರಾಗಬೇಕು ಎಂದು ನಾನು ಕೇಳಿಕೊಂಡಾಗ ಮೊದಲು ಒಪ್ಪಿಕೊಳ್ಳಲಿಲ್ಲ.ತುಳು ತನಗೆ ಗೊತ್ತಿಲ್ಲ ಎನ್ನುವ ಕಾರಣ ಹೇಳಿದರು.ಆದರೆ ಜಾನಪದದಲ್ಲಿ ಹೊಸ ಅಧ್ಯಯನ ವಿಧಾನಗಳನ್ನು ತಿಳಿದುಕೊಂಡಿದ್ದ ಕಾರಣ ನನ್ನ ಒತ್ತಾಸೆಗೆ ಕೊನೆಗೂ ಒಪ್ಪಿಕೊಂಡರು.ಓದಬೇಕಾದ ಇಂಗ್ಲಿಶ್ ಪುಸ್ತಕಗಳ ವಿವರ ಕೊಟ್ಟರು.ಕೆಲವನ್ನು ಅವರೇ ತರಿಸಿಕೊಟ್ಟರು.ವೈಯಕ್ತಿಕ ಕಾರಣಗಳಿಂದ ನನ್ನ ಸಂಶೋಧನೆಯ ಕೆಲಸ ನಿಧಾನವಾದಾಗ ನೋಂದಣಿ ರದ್ದು ಮಾಡುವ ನೋಟಿಸು ಕಳುಹಿಸಿದರು.ಮತ್ತೆ ಪ್ರತೀ ಅಧ್ಯಾಯವನ್ನು ಓದಿ,ಟಿಪ್ಪಣಿಗಳನ್ನು ಬರೆದು ,ಕೆಲವೆಡೆ ಹಸ್ತಪ್ರತಿಯಲ್ಲೇ ಮೆಚ್ಚುಗೆಯ ಮಾತುಗಳನ್ನು ಬರೆದರು.

೧೯೮೪ರಲ್ಲಿ ನಾನು ಕನ್ನಡ ವಿಭಾಗದ ಮುಖ್ಯಸ್ಥ ಆದ ಬಳಿಕ ಕರೆದಾಗಲೆಲ್ಲ ನಮ್ಮಲ್ಲಿಗೆ ಬಂದಿದ್ದಾರೆ.’ಕಡೆಂಗೋಡ್ಲು ಸಾಹಿತ್ಯ’ ಗ್ರಂಥದ ಬಿಡುಗಡೆಯನ್ನು ಮಾಡಿ (೧೯೮೭) ಹಿರಿಯ ತಲೆಮಾರಿನ ಕನ್ನಡ ಸಾಹಿತಿಗಳನ್ನು ನಾವು ಗೌರವದಿಂದ ನೆನೆಯಬೇಕಾದ ಪಾಠವನ್ನು ನನಗೆ ಕಲಿಸಿಕೊಟ್ಟಿದ್ದಾರೆ.ನಾನು ಪ್ರಸಾರಾಂಗದ ನಿರ್ದೇಶಕನಾಗಿ ಪ್ರಕಟಿಸಿದ ‘ಶಿವರಾಮ ಕಾರಂತರ ಲೇಖನಗಳು -ಸಂಪುಟ ೫ ಮತ್ತು ೬’-ಇದನ್ನು ಕಾರಂತರ ಸಮ್ಮುಖದಲ್ಲಿ ೧೯೯೫ರಲ್ಲಿ ಬಿಡುಗಡೆ ಮಾಡಿದ ಕಾರ್ಯಕ್ರಮದ ಫೋಟೋಗಳನ್ನು ಕೆಳಗೆ ಬಲಗಡೆ ಕೊಟ್ಟಿದ್ದೇನೆ.ಅನೇಕ ಬಾರಿ ಮೈಸೂರಿನಿಂದ ಕಾರಿನಲ್ಲಿ ಮಂಗಳೂರು ವಿವಿಗೆ ಕಾರ್ಯಕ್ರಮಗಳಿಗೆ ಬಂದಾಗ ,ವಿವಿಯ ನಿಯಮಾನುಸಾರ ಕಿಲೋಮೀಟರ್ ಲೆಕ್ಕದಲ್ಲಿ ಪ್ರಯಾಣ ಭತ್ಯ ಕೊಡುವಾಗ ಅವರು ಬಾಡಿಗೆ ಕಾರಿನವನಿಗೆ ಕೊಡಬೇಕಾದಷ್ಟು ಹಣ ಸಿಗದ ಸಂದರ್ಭಗಳು ನನಗೆ ನೆನಪಾಗುತ್ತವೆ.ಅಂತಹ ಸಂದರ್ಭಗಳಲ್ಲಿ ನಾನು ಮುಜುಗರ ಮತ್ತು ಅಸಹಾಯಕತೆಯನ್ನು ಅನುಭವಿಸುತ್ತಿದ್ದಾಗ ಹಾಮಾನಾ ನನಗೆ ಸಮಾಧಾನ ಮಾಡುತ್ತಿದ್ದರು ;’ಇರಲಿ ಸ್ವಾಮಿ,ಕನ್ನಡದ ಕೆಲಸಕ್ಕಾಗಿ ನಾವು ಅಷ್ಟೂ ಖರ್ಚು ಮಾಡದಿದ್ದರೆ ಹೇಗೆ ?’ ನೈತಿಕತೆಯ ಅನೇಕ ಪಾಠಗಳನ್ನು ಆವರಿಂದ ನಾನು ಕಲಿತಿದ್ದೇನೆ.

ಹಾಮಾನಾ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿಯಾಗಿ ಎರಡು ವರ್ಷ ಕೆಲಸಮಾಡಿ,ತಾತ್ವಿಕ ಕಾರಣಗಳಿಗಾಗಿ ಆ ಹುದ್ದೆಗೆ ರಾಜೀನಾಮೆ ಕೊಟ್ಟರು.ಅನೈತಿಕ ರಾಜಕಾರಣಿಗಳ ಆಳುವವರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಅವರ ಆತ್ಮಸಾಕ್ಷಿ ಒಪ್ಪಲಿಲ್ಲ.ಆದರೆ ತಮ್ಮ ರಾಜೀನಾಮೆಯನ್ನು ಅವರು ತಮ್ಮ ಇಮೇಜ್ ಹೆಚ್ಚಿಕೊಳ್ಳಲು ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ.ಸಾರ್ವಜನಿಕವಾಗಿ ಅದನ್ನು ಚರ್ಚಿಸಲಿಲ್ಲ.ಆದರೆ ಒಂದು ನೈತಿಕ ದಿಟ್ಟ ನಿಲುವಿನ ಸಂದೇಶವನ್ನು ಆಳುವವರಿಗೆ ಮುಟ್ಟಿಸಿದರು.ಅವರ ಬದುಕಿನ ನಿಲುವುಗಳೆಲ್ಲವೂ ತಮ್ಮ ವ್ಯಕ್ತಿತ್ವದ ನೈತಿಕತೆಯ ಗಟ್ಟಿತನಕ್ಕೆ ಬಳಕೆಯಾದುವೆ ಹೊರತು ,ಪ್ರದರ್ಶನಕ್ಕೆ ಪ್ರಚಾರಕ್ಕೆ ಆಹಾರವಾಗಲೀಲ್ಲ.ದೇವರು ಧರ್ಮದ ಬಗೆಗಿನ ಅವರ ನಿರ್ಲಿಪ್ತ ಧೋರಣೆ,ಜಾತಿ ಸಂಘಟನೆಗಳಿಂದ ಸಂಪೂರ್ಣವಾಗಿ ದೂರ ಉಳಿಯುವ ನಿಲುವು- ಇಂತಹ ಹಲವು ವೈಚಾರಿಕ ಸ್ಪಷ್ಟತೆಗಳು ಹಾಮಾನಾರಲ್ಲಿ ಇದ್ದವು.ಆದರೆ ಅದನ್ನು ಪ್ರಚಾರಕ್ಕೆ ತಮ್ಮ ವೈಭವೀಕರಣಕ್ಕೆ ಅವರು ಬಳಸಿಕೊಳ್ಳಲಿಲ್ಲ.

ಹಾಗಾಗಿಯೇ ಹಾಮಾನಾ ಅವರು ಮೈಸೂರು ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದಾಗ ನಡೆಸಿದ ಅನೇಕ ಯೋಜನೆಗಳು ಯಶಸ್ವಿಯಾಗಲು ಅವರು ಜಾತಿ ಪಂಥ ಪ್ರದೇಶಗಳ ಭೇದವಿಲ್ಲದೆ ,ಪ್ರಭಾವಗಳ ಮಾಲಿನ್ಯವಿಲ್ಲದೆ ಸಮರ್ಪಕವಾಗಿ ಪ್ರಾಮಾಣಿಕವಾಗಿ ಕೆಲಸಮಾಡುವವರನ್ನು ಶೋಧಿಸಿ ಆಯ್ಕೆಮಾಡಿ ಸರಿಯಾಗಿ ಬಳಸಿಕೊಂಡದ್ದು ಮುಖ್ಯ ಕಾರಣ.ಕನ್ನಡ ವಿಶ್ವಕೋಶ,ವಿಷಯ ವಿಶ್ವಕೋಶ,ಕನ್ನಡ ಸಾಹಿತ್ಯ ಚರಿತ್ರೆ,ಕನ್ನಡ ಛಂದಸ್ಸಿನ ಚರಿತ್ರೆ,ಶಾಸನ ಸಂಪುಟಗಳು,ಜಾನಪದ ವಸ್ತುಸಂಗ್ರಹಾಲಯ -ಹೀಗೆ ಹಲವಾರು ಯೋಜನೆಗಳು ಅಲ್ಲಿ ಕಾರ್ಯರೂಪಕ್ಕೆ ಬಂದವು.ಸಾಮೂಹಿಕ ನಾಯಕತ್ವದಲ್ಲಿ ಅವರಿಗೆ ವಿಶ್ವಾಸ ಇತ್ತು.ಅವರು ಕಾಯಕದ ಕರ್ಣಧಾರ ಆಗಿದ್ದರು.

ಹಾಮಾನಾ ಅವರನ್ನು ನಾನು ಆಹ್ವಾನಿಸಿದ ಒಂದು ಕಾರ್ಯಕ್ರಮ ‘ಕುಶಿ ಹರಿದಾಸ ಭಟ್ಟ ಅವರ ಸಂಸ್ಮರಣ’ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಕ್ಕೆ.ಅದು ನಡೆದದ್ದು ೧೩ ಅಕ್ಟೋಬರ ೨೦೦೦ ದಂದು.ನಮ್ಮೆಲ್ಲರ ಹಿತೈಷಿ ಹಿರಿಯರು ಕುಶಿಯವರು ಹಾಮಾನಾ ಅವರ ಆಪ್ತ ಸ್ನೇಹಿತರು.ಅದೊಂದು ಸಂತಾಪದ ಮತ್ತು ಮರುನೆನಕೆಯ ಕಾರ್ಯಕ್ರಮ.ಹಿರಿಯ ಸಾಹಿತಿ ಅಮೃತ ಸೋಮೇಶ್ವರ ಮತ್ತು ಉಡುಪಿಯ ಹೇರಂಜೆ ಕೃಷ್ಣ ಭಟ್ ಅತಿಥಿಗಳಾಗಿ ವೇದಿಕೆಯಲ್ಲಿ ಇದ್ದರು.ನಾಯಕರು ಕುಶಿ ಜೊತೆಗಿನ ತಮ್ಮ ಸುದೀರ್ಘ ಸ್ನೇಹದ ಅನೇಕ ಅಪೂರ್ವ ಸಂಗತಿಗಳನ್ನು ತೆರೆಯುತ್ತಾ ಆರ್ದ್ರರಾದರು.ಸಾವಿನ ಬಗ್ಗೆ ಮಾತಾಡಿದರು.ಎಂದಿನಂತೆಯ ಹಾಮಾನಾ ಅವರ ಲವಲವಿಕೆ ,ನಗು ಉತ್ಸಾಹ ಆ ದಿನ ಇರಲಿಲ್ಲ.ಕುಶಿ ಅವರಿಗೆ ಗೌರವ ಡಾಕ್ಟರೇಟ್ ಕೊಡದೆ ಮಂಗಳೂರು ವಿವಿ ತಪ್ಪುಮಾಡಿದೆ ಎನ್ನುವುದನ್ನು ಕಟುವಾಗಿ ಹೇಳಿದರು.

ಇದು ನಮ್ಮ ಪಾಲಿಗೆ ಹಾಮಾನಾ ಅವರ ಕೊನೆಯ ದರ್ಶನ ಮತ್ತು ಕೊನೆಯ ಕಾರ್ಯಕ್ರಮ ಆಗುತ್ತದೆ ಎಂದು ನಾನು ಭಾವಿಸಿರಲಿಲ್ಲ.ಈ ಕಾರ್ಯಕ್ರಮ ನಡೆದು (೧೩ ಅಕ್ಟೋಬರ ೨೦೦0 ) ಒಂದು ತಿಂಗಳ ಒಳಗೆ ,೧೦ ನವಂಬರ ೨೦೦೦ ರಂದು ಅವರು ನಮ್ಮನ್ನು ಅಗಲಿದರು.ಕೆಳಗೆ ಎಡಗಡೆಯಲ್ಲಿ ಇರುವ ಫೋಟೋ -ಕುಶಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹಾಮಾನಾ ಮಾತಾಡುತ್ತಿರುವ ಒಂದು ಅಪೂರ್ವ ,ಆದರೆ ನಮಗೆ ವಿಷಾದದ ದಾಖಲೆಯ ಚಿತ್ರ.

ಹಾಮಾನಾ ಅವರಿಗೆ ಅರುವತ್ತು ವರ್ಷ ತುಂಬಿದಾಗ ಅವರ ಸ್ನೇಹಿತರು ಅಭಿಮಾನಿಗಳು ಹೊರತಂದ ಅಭಿನಂದನಗ್ರಂಥ -’ಮಾನ’ :ಸಂ .ಎಸ.ಎಲ್.ಭೈರಪ್ಪ,ಜೆ.ಆರ್.ಲಕ್ಷ್ಮಣ ರಾವ್ ,ಪ್ರಧಾನ ಗುರುದತ್ತ-೧೯೯೨.ಅದರಲ್ಲಿ ಶಿವರಾಮ ಕಾರಂತರು ಬರೆದ ಕೆಲವು ಮಾತುಗಳು ಇಲ್ಲಿವೆ :

“ವಿಶಾಲ ಪರಿಶೀಲನೆಯಿಂದ ,ಆಗಾಗ ತಿಳಿದು ಬಂದುದನ್ನು ನಿರ್ದಾಕ್ಷಿಣ್ಯವಾಗಿ ಹೇಳುತ್ತಾ ಬಂದವರು ಡಾ.ಹಾ.ಮಾ.ನಾಯಕರು.ಅವರ ತಾಳ್ಮೆಯೂ ವಿಶೇಷ ,ಅಭಿರುಚಿಯೂ ವಿಶೇಷ; ಅವುಗಳ ಪ್ರಕಟಣೆಯೂ ಧಾರಾಳ…ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ -ಕನ್ನಡದಲ್ಲಿ -ಏನಾಗಿದೆ ,ಆಗುತ್ತಿದೆ ಎಂದು ಹೇಳಬಲ್ಲವರು ಇರುವುದಾದರೆ ಅದು ಹಾ.ಮಾ.ನಾಯಕರು.”-ಶಿವರಾಮ ಕಾರಂತ.

‘ಮಾನ’ ಅಭಿನಂದನ ಗ್ರಂಥದಲ್ಲಿ ಚಂದ್ರಶೇಖರ ಕಂಬಾರರು ಹಾಮಾನಾ ಬಗ್ಗೆ ಬರೆದ ಮಾತುಗಳು ,ಇಪ್ಪತ್ತು ವರ್ಷಗಳ ಹಿಂದಿನವು. ಆದರೆ ಅವು ಕವಿ ನಾಟಕಕಾರ ಕಂಬಾರರ ಒಳನೋಟದ ವಿಮರ್ಶಾಸೂಕ್ಷ್ಮವನ್ನು ಅನಾವರಣ ಮಾಡುತ್ತವೆ :

“ಕನ್ನಡಿಗರ ಬದುಕಿನ ಒಳಿತಿಗೆ ,ಮೌಲಿಕತೆಗೆ,ಸೃಜನಶೀಲತೆಗೆ ,ಅಭಿಮಾನಕ್ಕೆ ಯಾವೆಲ್ಲ ತಿಳುವಳಿಕೆ ಅಗತ್ಯವೆಂದು ,ಉಪಯುಕ್ತವೆಂದು ಅವರಂದುಕೊಂಡರೋ ಅದೆಲ್ಲದರ ಬಗ್ಗೆ ಬರೆದಿದ್ದಾರೆ , ಬರೆಯುತ್ತ ಇದ್ದಾರೆ .ಈ ಎಲ್ಲ ಬರೆಹಗಳ ಹಿಂದೆ ಪ್ರಜ್ಞಾಪೂರ್ವಕವಾದ ,ಸುಸಂಸ್ಕೃತ ಮನಸ್ಸೊಂದು ಕಾಳಜಿಪೂರ್ವಕ ಆಯ್ಕೆಮಾಡುವುದನ್ನು,

ಜವಾಬ್ದಾರಿಯಿಂದ ನಿರೂಪಣೆಮಾಡುವುದನ್ನು ಕಾಣಬಹುದು. ..ಸಾಹಿತ್ಯ ನಮ್ಮ ಸಾಂಸ್ಕೃತಿಕ ಬದುಕಿನ ಒಂದು ಭಾಗ.ಅದನ್ನು ಬಿಟ್ಟರೆ ಅದಕ್ಕೆ ಪ್ರತ್ಯೇಕ ಅಸ್ತಿತ್ವ ಇರಬಾರದು ಎನ್ನುವ ಒಂದು ವಿವೇಕ ಮತ್ತು ನಂಬಿಕೆ ಈ ಬರಹಗಳ ಹಿನ್ನೆಲೆಗಿದೆ.ಅಂದರೆ ಹಾಮಾನಾ ಬದುಕು-ಬರೆಹಗಳ ನಡುವೆ ಬಿರುಕಿಲ್ಲ.ಅವರು ಬರೆದದ್ದನ್ನು ಬದುಕುತ್ತಾರೆ,ಬದುಕಿದ್ದನ್ನು ಬರೆಯುತ್ತಾರೆ .ಆದ್ದರಿಂದ ಅವರ ವ್ಯಕ್ತಿತ್ವವೇ ನಮಗೊಂದು ದೊಡ್ಡ ಮೌಲ್ಯವಾಗುತ್ತದೆ.”-ಚಂದ್ರಶೇಖರ ಕಂಬಾರ.

Read Full Post | Make a Comment ( None so far )

ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ.ವಿ.ಪರಮೇಶ್ವರ ಭಟ್ಟರು

Posted on ಫೆಬ್ರವರಿ 7, 2012. Filed under: ಕನ್ನಡ ಸಾಹಿತ್ಯ, ನನ್ನ ಗುರುಗಳು, Kannada Literature | ಟ್ಯಾಗ್ ಗಳು:, , , , , , , , |

ನಾಳೆ ,ಫೆಬ್ರವರಿ ಎಂಟು, ಪ್ರೊ.ಎಸ.ವಿ .ಪರಮೇಶ್ವರ ಭಟ್ಟರ ಜನುಮದಿನ ( ೧೯೧೪-೨೦೦೦ ). ಮಂಗಳೂರಿನಲ್ಲಿ ಅವರ ಹೆಸರಿನಲ್ಲಿ ೨೦೦೨ ರಿಂದ ಒಂದು ಪ್ರಶಸ್ತಿ ಪ್ರದಾನ ಮತ್ತು ವಿದ್ಯಾರ್ಥಿಗಳಿಗೆ ಸಾಹಿತ್ಯ ಅಭಿರುಚಿ  ಶಿಬಿರವನ್ನು ‘ಎಸ ವಿ ಪಿ ಸಂಸ್ಮರಣ ಸಮಿತಿ’ ಯವರು ನಡೆಸುತ್ತಾ ಬಂದಿದ್ದಾರೆ.ಏರ್ಯ ಲಕ್ಸ್ಮಿನಾರಾಯಣ  ಆಳ್ವರ ಅಧ್ಯಕ್ಷತೆಯ ಆ ಸಮಿತಿಯ ಚಾಲಕ ಶಕ್ತಿ ಆಗಿದ್ದ ಪ್ರೊ.ನಾಗರಾಜ ರಾವ್ ಜವಳಿ ಈ ವರ್ಷ ನಮ್ಮನ್ನು ಅಗಲಿದ್ದಾರೆ.ಜವಳಿ ತಮ್ಮ ಗುರುಗಳಾದ ಎಸ ವಿ ಪಿ ಅವರ ಬಗ್ಗೆ ತಾಳಿದ್ದ ಅಪಾರ ಪ್ರೀತಿ ಅಭಿಮಾನ ಈ ಎಲ್ಲ ನೆನಪಿನ ಕಾರ್ಯಕ್ರಮಗಳ ಜೀವಾಳವಾಗಿತ್ತು.ಜವಳಿ ಇಲ್ಲದ ಎಸ ವಿ ಪಿ ಕಾರ್ಯಕ್ರಮವನ್ನು ಕಲ್ಪಿಸಿಕೊಳ್ಳುವುದು ಬಹಳ ನೋವಿನ ಕೆಲಸ.

ಎಸ ವಿ ಪಿ ಅವರ ಬಗ್ಗೆ ನಾನು ಹಿಂದೆ ಬರೆದಿದ್ದ ಒಂದು ಬರಹವನ್ನು ಬಹುಮಟ್ಟಿಗೆ ಹಾಗೆಯೇ ಇಲ್ಲಿ ಕೊಟ್ಟಿದ್ದೇನೆ.ಅದಕ್ಕೆ ಹಿನ್ನೆಲೆಯಾಗಿ ಕೆಲವು ಮಾತುಗಳನ್ನು ಆರಂಭದಲ್ಲಿ ಇಲ್ಲಿ ಸೇರಿಸಿದ್ದೇನೆ .ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಲೆನಾಡಿನಲ್ಲಿ ಹುಟ್ಟಿ ,ನಿಸರ್ಗದ ನಡುವೆ ಬೆಳೆದ ಪರಮೇಶ್ವರ ಭಟ್ಟರು ಸಹಜ ಕವಿಯಾಗಿ ಬೆಳೆದವರು.’ರಾಗಿಣಿ’ ಕವನ ಸಂಕಲನ ಅವರ ಮೊದಲ ಕೃತಿ.ಅವರ ಎಲ್ಲ ಸಾಹಿತ್ಯಸಾಧನೆಗಳ ವಿಸ್ತಾರದ ನಡುವೆಯೂ ಅವರೊಬ್ಬ ಅಪ್ಪಟ ಕವಿ ಮತ್ತು ಕವಿಹೃದಯದ ಸಹೃದಯ. ಕನ್ನಡದ ಪ್ರಾಚೀನ ಕಾವ್ಯ ಪ್ರಕಾರಗಳನ್ನು ಮತ್ತು ಛಂದೋಪ್ರಭೇದಗಳನ್ನು ಅವರು ಹೊಸಗನ್ನಡ ಕಾವ್ಯರೂಪದಲ್ಲಿ ಪುನರುಜ್ಜೀವನ ಮಾಡಿದರು.ಸಾಂಗತ್ಯ ,ತ್ರಿಪದಿ,ಏಳೆ, ವಚನ ಪ್ರಕಾರಗಳು ಅವರ ಕಾವ್ಯಪ್ರಯೋಗದ ಮೂಲಕ ಹೊಸ ಅರ್ಥವನ್ನು ಪಡೆದವು.ಇಂದ್ರಚಾಪ, ಚಂದ್ರವೀಧಿಯಂತಹ ಸಾಂಗತ್ಯ ಕೃತಿಗಳು; ಉಪ್ಪುಕಡಲು ,ಪಾಮರದಂತಹ ವಚನಸಂಕಲನಗಳು ;ಸುರಗಿ ಸುರಹೊನ್ನೆಯಂತಹ ತ್ರಿಪದಿ ಮುಕ್ತಕಗಳು  ;ಇಂದ್ರಗೋಪದಂತಹ ಏಳೆ ರಚನೆಗಳು -ಇವು ಪ್ರಯೋಗಗಳೂ ಹೌದು ,ಕನ್ನಡ ದೇಸಿಯ ಅನನ್ಯತೆಯನ್ನು ಉಳಿಸಿದ ಸಾಹಸಗಳೂ  ಹೌದು.ಜನಪದ ಸಾಹಿತ್ಯದ ಜನಪ್ರಿಯ ಪ್ರಕಾರಗಳಾದ ಗಾದೆ ಮತ್ತು ಒಗಟುಗಳನ್ನು ಆಧುನಿಕ ಕಾಲದಲ್ಲಿ ಕಾವ್ಯಸೃಷ್ಟಿಯ ರೂಪದಲ್ಲಿ ಸ್ವತಂತ್ರ ರಚನೆಗಳನ್ನಾಗಿ ಎಸ ವಿ ಪಿ ನಿರ್ಮಿಸಿ ,ಜನಪದ ಸಾಹಿತ್ಯಕ್ಕೆ ಆಧುನಿಕ ಕಾವ್ಯದ ಜೊತೆಗೆ ಮನ್ನಣೆ ತಂದುಕೊಟ್ಟರು.’ಮಂಥಾನ’ ಅವರ ಸ್ವತಂತ್ರ ಗಾದೆಗಳ ಸಂಕಲನ ;’ಕಣ್ಣುಮುಚ್ಚಾಲೆ’ ಸ್ವತಂತ್ರ ಒಗಟುಗಳ ರಚನೆ.

ವಿದ್ವತ್ತಿನ ವಲಯದಲ್ಲಿ ಪ್ರೊ.ಪರಮೇಶ್ವರ ಭಟ್ಟರದ್ದು ಸಂಸ್ಕೃತದ ಕ್ಲಾಸಿಕ್ ಗಳನ್ನು ಕನ್ನಡಕ್ಕೆ ತಂದುಕೊಟ್ಟ ಭೂಮ ಪ್ರತಿಭೆ . ಹಾಲನ ‘ಗಾಥಾ ಸಪ್ತಶತಿ ‘ ಯನ್ನು ಮೊದಲ ಬಾರಿ ಕನ್ನಡದಲ್ಲಿ ಸರಸರೂಪದಲ್ಲಿ ತಂದ ಎಸ ವಿ ಪಿ ,ಬಳಿಕ ಕಾಳಿದಾಸ ,ಭಾಸ, ಹರ್ಷ,ಭವಭೂತಿ ,ಭರ್ತೃಹರಿ -ಹೀಗೆ ಇವರ ಎಲ್ಲರ ಕಾವ್ಯ ನಾಟಕಗಳ ಅನುವಾದಗಳ ಸಮಗ್ರ ಸಂಪುಟಗಳನ್ನು ತಂದರು.ಸಂಸ್ಕೃತ ,ಕನ್ನಡಗಳ ಜೊತೆಗೆ ಇಂಗ್ಲಿಶ್ ನಲ್ಲೂ ಒಳ್ಳೆಯ ಪ್ರಭುತ್ವ ಇದ್ದ ಅವರು ‘ಇಂಗ್ಲಿಶ್ ಪ್ರಬಂಧಗಳು ‘ ಎಂಬ ಇಂಗ್ಲಿಷ್ ಎಸ್ಸೆ ಗಳ ಕನ್ನಡ ಅನುವಾದದ ಗ್ರಂಥವನ್ನು ಪ್ರಕಟಿಸಿದರು.ಇದರಲ್ಲಿ ಪ್ರಬಂಧ ಪ್ರಕಾರದ ಸರಿಯಾದ ಪ್ರವೇಶ ಇದೆ.ವಿಮರ್ಶೆಯ ಕ್ಷೇತ್ರದಲ್ಲಿ ಎಸ ವಿ ಪಿ ಅವರದ್ದು ಪೌಖಿಕ ಪರಂಪರೆಯ ಮಾದರಿ.ಅವರ ಭಾಷಣಗಳಿಗೂ ಬರಹಕ್ಕೂ ಬಹಳ ವ್ಯತ್ಯಾಸ ಇಲ್ಲ.ಅವರಿಗೆ ಇಷ್ಟವಾದ ಭಾರತೀಯ ಕಾವ್ಯಮೀಮಾಸೆಯ ಒಂದು ಉಕ್ತಿ :’ರೀತಿಯೇ ಕಾವ್ಯದ ಆತ್ಮ’. ಹಾಗಾಗಿ ಭಾಷೆಗೆ ಭಾವದ ಆಲಿಂಗನ ಅವರ ಎಲ್ಲ ಬರಹಗಳಲ್ಲೂ ವಿಶೇಷವಾಗಿ ಕಾಣಿಸುತ್ತದೆ.ಅವರ ಭಾಷಣಗಳು,ಮುನ್ನುಡಿಗಳು,ಪ್ರಬಂಧಗಳು -ಎಲ್ಲವೂ ವಿಮರ್ಶೆಗಳೇ.ಮುದ್ದಣ ಕವಿ ಅವರ ಮೆಚ್ಚಿನ ಕವಿ.ಮುದ್ದಣನ ಕೃತಿಗಳನ್ನು ರಾಮಪಟ್ಟಾಭಿಷೇಕ ,ಅದ್ಭುತರಾಮಾಯಣಗಳನ್ನು ಸಂಪಾದನೆ ಮಾಡುವುದರ ಜೊತೆಗೆ ಕರಾವಳಿಯ ಅಲಕ್ಷಿತ ಕವಿ ಮುದ್ದಣನಿಗೆ   ಕರ್ನಾಟಕದ ವ್ಯಾಪ್ತಿಯಲ್ಲಿ ಹೆಸರು ತಂದುಕೊಟ್ಟವರಲ್ಲಿ  ಎಸ ವಿಪಿ ಪ್ರಮುಖರು. ನಾನು ಪದವಿ ತರಗತಿಯಲ್ಲಿ ಇದ್ದಾಗ ೧೯೬೫ರಲ್ಲಿ ಅವರ ವಿಮರ್ಶಾಲೇಖನಗಳ ಸಂಕಲನ ‘ಸೀಳುನೋಟ ‘ ನಮಗೆ ಅಧ್ಯಯನಕ್ಕೆ ದೊರಕಿತ್ತು. ನನಗೆ ಆಗ ಏನೂ ಗೊತ್ತಿಲ್ಲದ ಕನ್ನಡ ಸಾಹಿತ್ಯದ ಜಗತ್ತನ್ನು ತೆರದು ತೋರಿಸಿದ್ದವು ಅದರಲ್ಲಿನ ಲೇಖನಗಳು.ಆ ಸಂಕಲನದ ‘ಪಂಪನು ಬೆಳಗಿದ ಲೌಕಿಕದ ಒಂದು ಚಿತ್ರ’ ಎಂಬ ಲೇಖನ ನನ್ನ ಬಹಳ ಮೆಚ್ಚಿನದ್ದು.  ಕಳೆದ ಎರಡು ವರ್ಷಗಳಿಂದ ಬ್ಲಾಗ್ ಬರಹಗಳನ್ನು ಬರೆಯುತ್ತಿರುವ ನನಗೆ ಈಗ ಎಸ ವಿಪಿ ಅವರ ಕನ್ನಡ ಪದಸಂಪತ್ತು ಮತ್ತು  ಬರಹದ ಶಕ್ತಿಯ ಮಹತ್ವ  ಹೆಚ್ಚು ಅರ್ಥವಾಗುತ್ತಿದೆ.

ಈಗ ಕಳೆದ ಒಂದು ವಾರದಿಂದ ಇಲ್ಲಿ ಜರ್ಮನಿಯಲ್ಲಿ ಮರಗಟ್ಟುವ ಚಳಿ.ಮೈನಸ್ ಹತ್ತರಿಂದ ಮೈನಸ್ ಇಪ್ಪತ್ತು ಡಿಗ್ರಿಯವರೆಗೆ ಹವೆ ನಡುಗುತ್ತಿದೆ.ಹೊರಗೆ ನಾಲ್ಕು ಹೆಜ್ಜೆ ನಡೆದಾಗ ,ಗಾಳಿಗೆ ತೆರೆದುಕೊಂಡಿರುವ ಮುಖದ ಯಾವುದೇ ಅಂಗಗಳು ನಿಜವಾಗಿ  ಇವೆಯೇ ಎಂದು ಸ್ಪರ್ಶಕ್ಕೆ ಸಿಗುತ್ತಿಲ್ಲ.ಮೂಗು ತುಟಿ ಬಾಯಿ ಮುಖ ಸ್ಪರ್ಶದ ಸ್ಪಂದನಕ್ಕೆ ಸಿಗುತ್ತಿಲ್ಲ.ಇಂತಹ ಕೋರೈಸುವ ಚಳಿಯಲ್ಲಿ ಈಗ ಬೆಳಗ್ಗೆ ಎಂಟು ಗಂಟೆಗೆ ಗುರುಗಳಾದ ಪ್ರೊ.ಎಸ.ವಿ ಪರಮೇಶ್ವರ ಭಟ್ಟರ ನೆನಪು ಬೆಚ್ಚನೆಯ ಸುಖವನ್ನು ಕೊಡುತ್ತಿದೆ. ಎಸ ವಿಪಿ ಅವರ ಬಗ್ಗೆ ಹಿಂದೆ ಬರೆದ ಲೇಖನವನ್ನು ಮತ್ತೆ ಹಾಗೆಯೇ ಮುಂದೆ ಕೊಟ್ಟಿದ್ದೇನೆ.

ಗುರುಗಳ ಬಗ್ಗೆ ಹಿರಿಯ ಸಾಹಿತಿಗಳ ಬಗ್ಗೆ ಎಸ್ವಿಪಿ ಅವರಿಗೆ ಅಪಾರ ಗೌರವ.ತಮ್ಮ ತೀರ್ಥಹಳ್ಳಿಯ ಗುರುಗಳಾದ ಕಮಕೋಡು ನರಸಿಂಹ ಶಾಸ್ತ್ರಿಗಳ ಬದುಕು ಬರಹದ ಬಗ್ಗೆ ಒಂದು ಒಳ್ಳೆಯ ಅಭಿನಂದನಾ ಗ್ರಂಥವನ್ನು ಅವರು ಸಂಪಾದಿಸಿ ಪ್ರಕಟಿಸಿದರು.ಅದಕ್ಕೆ ನನ್ನಿಂದಲೂ ಒಂದು ಲೇಖನ ಬರೆಸಿದರು.ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮ ತೀರ್ಥಹಳ್ಳಿಯಲ್ಲಿ ನಡೆಯಿತು.ಅದಕ್ಕೆ ನನ್ನನ್ನೂ ಕರೆದುಕೊಂಡು ಹೋಗಿದ್ದರು.ನರಸಿಂಹ ಶಾಸ್ತ್ರಿಗಳನ್ನು ನಾನು ಅಲ್ಲೇ ಮೊದಲು ನೋಡಿದ್ದು.ಯು.ಆರ್.ಅನಂತಮೂರ್ತಿ  ಅವರ ಸಹಿತ ತೀರ್ಥಹಳ್ಳಿ ಪರಿಸರದ ಆ ಕಾಲದ ಸಾಹಿತಿಗಳನ್ನು ಸಮಾಜವಾದಿ ಚಿಂತಕರನ್ನು ಒಟ್ಟಿಗೆ ನಾನು ನೋಡಿದ್ದು ಆ ಕಾರ್ಯಕ್ರಮದಲ್ಲಿ.ಎಸ್ವಿಪಿ ಅವರು ತಮ್ಮ ತರಗತಿಗಳಲ್ಲಿ ಸ್ವಲ್ಪ ಸಮಯವನ್ನು ತಮ್ಮ ಗುರುಗಳ ನೆನಪುಗಳ ಮೂಲಕ ಅವರ ವಿಚಾರಗಳ ವೈಶಿಷ್ಯಗಳನ್ನು ತಿಳಿಸಲು ಬಳಸುತ್ತಿದ್ದರು.ಟಿ ಎಸ ವೆಂಕಣ್ಣಯ್ಯ, ಕುವೆಂಪು ,ಡಿ ಎಲ್ ನರಸಿಂಹಾಚಾರ್ ,ತೀ ನಂ ಶ್ರೀ ಇವರೆಲ್ಲಾ ಅವರ ಕೃತಿಗಳ ಆಚೆಗೂ  ನನಗೆ ಮಾನಸಿಕ ಗುರುಗಳಾಗಿ ದಕ್ಕಿದ್ದು ಎಸ್ವಿಪಿ ಅವರ ಪಾಠಗಳಿಂದ .

೧೯೬೮ರ ಜುಲೈ :ಹನಿ ಕಡಿಯದೆ ಸುರಿಯುತ್ತಿದ್ದ ಧಾರಾಕಾರ ಮಳೆಗೆ, ಬಂಟ್ವಾಳದ ನೆರೆಗೆ ಅಂಜದೆ , ಮೈಸೂರಿನಿಂದ ಘಟ್ಟ ಇಳಿದು ಬಂದ ಎಸ. ವಿ. ಪರಮೇಶ್ವರ ಭಟ್ಟರು ಕೇವಲ ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ,ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮುಖ್ಯಸ್ಥರಾಗಿ ೧೯೭೪ ಮಾರ್ಚ್ ನಲ್ಲಿ  ನಿವೃತ್ತ ರಾಗಲಿಲ್ಲ.  ಸುಮಾರು ಆರು ವರ್ಷಗಳ ಕಾಲ ಅವರು ಮಂಗಳೂರನ್ನು ಸಾಹಿತ್ಯ ಸಂಸ್ಕೃತಿಗಳ ಕೇಂದ್ರವಾಗಿ ಮಾಡಿಕೊಂಡು , ಕರಾವಳಿಯ ಉದ್ದಕ್ಕೂ ದಿಗ್ವಿಜಯ ಸಾಧಿಸಿದರು. ಅಲ್ಲಿ ಯುದ್ಧವಿಲ್ಲ , ಸಾವು ನೋವುಗಳಿಲ್ಲ .ಅದೊಂದು ಬುದ್ಧನ ಶಾಂತಿ ಯಾತ್ರೆಯಂತೆ. ಅಲ್ಲಿನ ಮಂತ್ರ ಕನ್ನಡ , ಮಾತು  ಸಾಹಿತ್ಯ , ಬದುಕು ಸಂಸ್ಕೃತಿ.

ಎಸ.ವಿ.ಪಿ. ೧೯೬೮ರ ಜುಲೈ ಯಲ್ಲಿ ಮಂಗಳೂರು ಸ್ನಾತಕೋತ್ತರ ಕೇಂದ್ರಕ್ಕೆ ಕನ್ನಡ ಪ್ರೊಫೆಸ್ಸರ್ ಆಗಿ ಬಂದಾಗ ,ಅಲ್ಲಿ ಕಚೇರಿ ಇರಲಿಲ್ಲ ;ಸಿಬ್ಬಂದಿ ಇರಲಿಲ್ಲ ;ಗ್ರಂಥಾಲಯ ಇರಲಿಲ್ಲ .ತಾವೊಬ್ಬರೇ ಕಚೇರಿಯಾಗಿ  ಸಿಬ್ಬಂದಿಯಾಗಿ ನಡೆದಾಡುವ ಗ್ರಂಥಾಲಯವಾಗಿ  ಕನ್ನಡ ವಿಭಾಗವನ್ನು , ಸ್ನಾತಕೋತ್ತರ ಕೇಂದ್ರವನ್ನು ತಮ್ಮ ಮಾಂತ್ರಿಕ ಶಕ್ತಿಯಿಂದ ನಿರ್ಮಾಣ ಮಾಡಿದರು. ವಿಜ್ಞಾನದ ಪದವೀಧರನಾಗಿದ್ದ ನಾನು , ಆಗಿನ ದಕ್ಷಿಣ ಕನ್ನಡ ಜಿಲ್ಲೆಯ  ಏಕೈಕ ಕನ್ನಡ ದಿನಪತ್ರಿಕೆ ‘ನವಭಾರತ ‘ ದಲ್ಲಿ ಕನ್ನಡ ಎಂ.ಎ.ಗೆ ಅರ್ಜಿ ಸಲ್ಲಿಸುವ ಅವಕಾಶದ ಬಗ್ಗೆ ಓದಿ ತಿಳಿದು ಅರ್ಜಿ ಸಲ್ಲಿಸಿದೆ. ಒಂದು ದಿನ ಅಂಚೆ ಕಾರ್ಡಿನಲ್ಲಿ ಎಸ್ವಿಪಿಯವರದೇ ಹಸ್ತಾಕ್ಷರದಲ್ಲಿ ಎಂ.ಎ. ಪ್ರವೇಶಕ್ಕೆ ಆಯ್ಕೆಯಾದ ಸೂಚನೆ ಬಂದಾಗ ನನಗೆ ದಿಗಿಲು ಮತ್ತು ಬೆರಗು.ಮಂಗಳೂರಿಗೆ ಸಾಕಷ್ಟು ಹೊಸಬನಾದ ನಾನು ದಾರಿ ಹುಡುಕುತ್ತಾ ಸೈಂಟ್ ಅಲೋಶಿಯಸ್ ಕಾಲೇಜಿನ ತಳ ಅಂತಸ್ತಿನ ಒಂದು ಕೊಠಡಿಯ ಒಳಹೊಕ್ಕು ಎಸ್ವಿಪಿಯವರನ್ನು ವಿಚಾರಿಸಿದೆ.ಆಗ ಬೆಳ್ಳಿ ಕೂದಲ , ಕುಳ್ಳ ದೇಹದ ನಗುಮುಖದವರೊಬ್ಬರು  , ‘ಬನ್ನಿ , ಬನ್ನಿ ‘ ಎಂದು ಒಳ ಕರೆದು ತಮ್ಮೆದುರಿನ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದರು. ನನಗೆ ಮತ್ತಷ್ಟು ಗಾಬರಿ. ಅಳುಕುತ್ತಾ ಮೈ ಆಲಸಿಯಾದಂತೆ ಕುಳಿತುಕೊಂಡೆ.  ಅಕ್ಕರೆಯಿಂದ ವಿಚಾರಿಸಿಕೊಂಡು , ಕನ್ನಡದ ಬಗ್ಗೆ ಪ್ರೀತಿ ಮೊಳೆಯುವಂತಹ ಮಾತುಗಳನ್ನು ಆಡಿ, ಬೆನ್ನು ತಟ್ಟುವ ಸಂಭ್ರಮವನ್ನು ಕಂಡ ನನಗೆ ಹೊಸತೊಂದು ಲೋಕದ ಅನುಭವವಾಯಿತು.

ಮುಂದೆ ೧೯೬೮ರಿನ್ದ ೧೯೭೦ರ ವರೆಗೆ ಎರಡು ವರ್ಷಗಳ ಕಾಲ ಎಂ.ಎ.ತರಗತಿಯಲ್ಲಿ ಅವರ ವಿದ್ಯಾರ್ಥಿಯಾಗಿ , ಹದಿನಾರು ಮಂದಿ ಶಿಷ್ಯರಲ್ಲಿ ಒಬ್ಬನಾಗಿ ನಾನು ಕಂಡ  ಕೇಳಿದ ಅನುಭವಿಸಿದ ವಿಷಯಗಳು ಸಂಗತಿಗಳು ನೂರಾರು.ಅವರ ಪಾಠ ಅದೊಂದು ರಸಲೋಕದ ಯಾತ್ರೆಯಂತೆ. ಹದಿನಾರು ಮಂದಿಯ ತರಗತಿಯಾಗಲಿ , ಸಾವಿರ ಮಂದಿಯ ಸಭೆಯಾಗಲಿ , ಆ ಮಾತಿನ ರೀತಿ , ರೂಪಕಗಳ ಸರಮಾಲೆ , ತಮ್ಮ ಗುರು ಪರಂಪರೆಯ ಸಂಬಂಧದ ಅನುಭವಗಳನ್ನು ಬಿಚ್ಚುತ್ತಿದ್ದ ವೈಖರಿ , ವಿಷಯದ ಮಂಡನೆಯೊಂದಿಗೆ ಜೋಡಣೆಗೊಳ್ಳುತ್ತಿದ್ದ ನೂರಾರು ಅನುಭವದ ತುಣುಕುಗಳು – ಹೀಗೆ ಒಂದು ಗಂಟೆ ಮುಗಿಯುವುದರೊಳಗೆ ಒಂದು ರಸ ವಿಶ್ವಕೋಶದ  ಒಳಗಡೆ ತಿರುಗಾಟದ ಸುಖ ದೊರೆಯುತ್ತಿತ್ತು.ಪಂಪನ ಆದಿಪುರಾಣ ದಂತಹ ಕಾವ್ಯವಾಗಲಿ ,ಭಾರತೀಯ ಕಾವ್ಯಮೀಮಾಂಸೆ ಯಂತಹ ಶಾಸ್ತ್ರವಾಗಲಿ , ಅಕ್ಕಮಹಾದೇವಿಯ ವಚನಗಳಾಗಲಿ ,ಇಂಗ್ಲಿಶ್ ಲಲಿತ ಪ್ರಬಂಧಗಳ ಅನುವಾದವಾಗಲಿ – ಎಸ್ವಿಪಿ ಅವರ ಪಾಠ ಅವರ ಅನುಭವ ಲೋಕದ ಮೂಲಕವೇ ನಮಗೆ ಭಾವಗಮ್ಯ ಆಗುತ್ತಿತ್ತು.

ತರಗತಿಯ ಒಳಗಿನ ಪಾಠ ಪ್ರವಚನಗಳ ಸೊಗಸು ಒಂದು ಕಡೆಯಾದರೆ , ಕನ್ನಡವನ್ನು ಪ್ರೀತಿಸಲು ಎಸ್ವಿಪಿ ನಮಗೆ ತೋರಿಸಿಕೊಟ್ಟ ರಹದಾರಿಗಳು ನೂರಾರು. ಕನ್ನಡ ಕವಿಗಳ ಸಾಹಿತಿಗಳ ವಿದ್ವಾಂಸರ  ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದುದು ಅಂತಹ ಒಂದು ಅಪೂರ್ವ ಅವಕಾಶ. ಬೇಂದ್ರೆ ,ಕಾರಂತ ,ಮಾಸ್ತಿ ,ರಾಜರತ್ನಂ, ಅಡಿಗ ,ಅನಂತಮೂರ್ತಿ ,ನಿಸ್ಸಾರ್ ,ದೇಜಗೌ , ಹಾಮಾನಾ, ಹಂಪನಾ -ಹೀಗೆ ಹಿರಿಯ ಕಿರಿಯ ಎಲ್ಲ ಸಾಹಿತಿಗಳನ್ನು ಸೆಳೆದು ತಂದು ನಮ್ಮ ಕನ್ನಡ ವಿಭಾಗದಲ್ಲಿ ಉಪನ್ಯಾಸ ಕೊಡಿಸುತ್ತಿದ್ದರು.ಉಳಿದ ವಿಭಾಗಗಳ ವಿದ್ಯಾರ್ಥಿಗಳು ನಮ್ಮ ಕನ್ನಡ ವಿಭಾಗದ ಬಗ್ಗೆ ಆಗ ಮಾಡುತ್ತಿದ್ದ ತಮಾಷೆಯೆಂದರೆ – ಮಂಗಳೂರು ಹಂಪನಕಟ್ಟೆಯ ಬಸ್ ನಿಲ್ದಾಣದಲ್ಲಿ ಇಳಿಯುವ ಯಾವುದೇ ಸಾಹಿತಿಯನ್ನು ನಾವು ಅಪಹರಿಸಿ ಎಳೆದುತಂದು ನಮ್ಮ ವಿಭಾಗದಲ್ಲಿ ಕಾರ್ಯಕ್ರಮ ಏರ್ಪಡಿಸುತ್ತಿದ್ದೆವು ಎಂದು.ನನಗೆ ನೆನಪಿರುವ ಹಾಗೆ ೧೯೬೮ರಿನ್ದ ೧೯೭೪ರ ಅವಧಿಯಲ್ಲಿ ಕುವೆಂಪು ಒಬ್ಬರನ್ನು ಬಿಟ್ಟರೆ ನಮ್ಮ ಕನ್ನಡ ವಿಭಾಗಕ್ಕೆ ಬಾರದ ಮಾತನಾಡದ ಆ ಕಾಲದ ಮುಖ್ಯ ಸಾಹಿತಿ ಯಾರೂ ಇಲ್ಲ.

ಪ್ರೊಫೆಸರ್ ಎಸ್ವಿಪಿ ಅವರ ಕನ್ನಡ ಪ್ರೀತಿಯ ಇನ್ನೊಂದು ಗೀಳೆಂದರೆ ,ಪುಸ್ತಕ ಪ್ರಕಟಣೆ. ಬಹಳ ಬಾರಿ ಸಾಲ ಮಾಡಿ ,ಮನೆ ತುಂಬಾ ರಾಶಿ ರಾಶಿಯಾಗಿ ಪೇರಿಸಿಟ್ಟ ಪುಸ್ತಕಗಳ ನಡುವೆ ಅವರು ಸಿಕ್ಕಿಹಾಕಿಕೊಂಡಿದ್ದಾರೋ ಎನ್ನುವಷ್ಟು ಸಂಖ್ಯೆಯಲ್ಲಿ ಕನ್ನಡ ಗ್ರಂಥಗಳನ್ನು ಅವರು ಪ್ರಕಟಿಸಿದರು. ಸಹೋದ್ಯೋಗಿಗಳ , ಶಿಷ್ಯರ , ತಮ್ಮ ಸಂಪರ್ಕಕ್ಕೆ ಬಂದ ಅಭಿಮಾನಿಗಳ ಪುಸ್ತಕಗಳನ್ನು ಪ್ರಕಟಿಸಲು ಉತ್ತೇಜನ ಕೊಟ್ಟರು. ಅದಕ್ಕಾಗಿ  ಅಕ್ಷರಶಃ  ತಮ್ಮ ತನು-ಮನ-ಧನಗಳನ್ನು ವಿನಿಯೋಗಿಸಿದರು. ಹಾಗಾಗಿ ಗ್ರಂಥ ಪ್ರಕಟಣೆ ಮತ್ತು ಗ್ರಂಥ ಬಿಡುಗಡೆ ಅವರ ಕಾಲದಲ್ಲಿ ನಿತ್ಯೋತ್ಸವ ಆಯಿತು. ನಾವು ಎಂ.ಎ. ವಿದ್ಯಾರ್ಥಿಗಳು ಬರೆದ ಕವನಗಳ ಸಂಕಲನ ‘ಮಂಗಳ ಗಂಗೆ ‘ ಯನ್ನು ನಮ್ಮ ಈ ಪ್ರೀತಿಯ ಗುರುಗಳಿಗೆ ಅರ್ಪಿಸಿದೆವು.ನನ್ನ ಮೊದಲ ಕವನ ‘ಸತ್ಯವತಿ ‘ ಪ್ರಕಟ  ಆದದ್ದು ೧೯೭೦ರಲ್ಲಿ ಈ ಸಂಕಲನದಲ್ಲಿ.

೧೯೭೦ರಲ್ಲಿ ನಾನು ಕನ್ನಡ ಎಂ.ಎ. ಮುಗಿಸಿ, ಕಲಿತ ಕನ್ನಡ ವಿಭಾಗದಲ್ಲೇ  ಉಪನ್ಯಾಸಕನಾಗಿ ಸೇರುವಲ್ಲಿ ಗುರುಗಳ ಆಶೀರ್ವಾದ ಮುಖ್ಯವಾಗಿತ್ತು.ಕೆಲವು ತಿಂಗಳ ಹಿಂದಿನ ಶಿಷ್ಯನನ್ನು ಸಹೋದ್ಯೋಗಿಯೆಂದು ಪ್ರೀತಿಯಿಂದ ಬರಮಾಡಿಕೊಂಡು ಅಧ್ಯಾಪನದ ದೀಕ್ಷೆಯನ್ನು ಕೊಟ್ಟ ಪ್ರೊಫೆಸರ್ , ಸಾಹಿತ್ಯದ ಓದಿನಿಂದ ತೊಡಗಿ ಕನ್ನಡದ ಕೆಲಸಗಳನ್ನು ಮೈತುಂಬಾ ಹಚ್ಚಿಕೊಂಡು ,ಒತ್ತಡಗಳ ನಡುವೆಯೇ ಸುಖವನ್ನು ಕಾಣುವ ದಾರಿಯನ್ನು ನಮಗೆ ತೋರಿಸಿಕೊಟ್ಟರು. ಆಗ ಕನ್ನಡ ವಿಭಾಗದಲ್ಲಿ ಇದ್ದ ನಾವು ನಾಲ್ವರು ಅಧ್ಯಾಪಕರೇ ನಮ್ಮ ಹೆಸರಿನ ಮೊದಲ ಅಕ್ಷರಗಳನ್ನು ಜೋಡಿಸಿ, ‘ ಪಲಚಂವಿ ‘ ಪ್ರಕಾಶನವನ್ನು ( ಪರಮೇಶ್ವರ ಭಟ್ಟ , ಲಕ್ಕಪ್ಪ ಗೌಡ ,ಚಂದ್ರಶೇಖರ ಐತಾಳ , ವಿವೇಕ ರೈ ) ಆರಂಭಿಸಿ ,ಪುಸ್ತಕಗಳನ್ನು ಪ್ರಕಟಿಸಿದೆವು. ಕನ್ನಡ ಪುಸ್ತಕಗಳ ಬಗ್ಗೆ ಮಂಗಳೂರು ಪರಿಸರದಲ್ಲಿ ಆಸಕ್ತಿ ತೀರಾ ಕಡಮೆ ಇದ್ದ ಆ ದಿನಗಳಲ್ಲಿ ‘ ಮನೆ ಮನೆಗೆ ಸರಸ್ವತಿ ‘ಎಂಬ ಪುಸ್ತಕ ಮಾರಾಟ ಅಭಿಯಾನವನ್ನು ಆರಂಭಿಸಿದೆವು. ಎಸ್ವಿಪಿ ಅವರು ಸಹೋದ್ಯೋಗಿಗಳ ಮತ್ತು ವಿದ್ಯಾರ್ಥಿಗಳ ಜೊತೆಗೆ ಹೆಗಲಿಗೆ ಚೀಲ ಹಾಕಿಕೊಂಡು ಪುಸ್ತಕಗಳನ್ನು ತುಂಬಿಕೊಂಡು ಬಿಸಿಲಿನಲ್ಲಿ ನಡೆದಾಡುತ್ತಾ ಎಲ್ಲರಲ್ಲೂ ತಮ್ಮ ನಗೆ ಮಾತುಗಳಿಂದ ಉತ್ಸಾಹವನ್ನು ತುಂಬುತ್ತಾ ,ಮನೆಯಿಂದ ಮನೆಗೆ , ಅಂಗಡಿಯಿಂದ ಅಂಗಡಿಗೆ ಅಲೆಯುತ್ತಾ ಕನ್ನಡ ಪುಸ್ತಕ ಮಾರಾಟ ಮಾಡುವ ಕಾಯಕವನ್ನು ಕೈಕೊಂಡರು.

ಯಕ್ಷಗಾನದ ಮಾತುಗಾರಿಕೆ ಮತ್ತು ಪ್ರದರ್ಶನದಿಂದ ವಿಶೇಷ ಪ್ರಭಾವಿತರಾಗಿದ್ದ ಪ್ರೊಫೆಸರ್ , ಅನೇಕ ತಾಳಮದ್ದಲೆಗಳನ್ನು ಏರ್ಪಡಿಸಿದರು. ಆಗ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ವಸ್ತು ಪ್ರದರ್ಶನದ ಟೆಂಟಿನ ಒಳಗಡೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಬಯಲಾಟ ಸ್ಪರ್ಧೆಯನ್ನು ಏರ್ಪಡಿಸಿದರು. ವಿದ್ಯಾರ್ಥಿಗಳಾಗಿದ್ದ ನಾವು , ವಸ್ತು ಪ್ರದರ್ಶನದೊಳಗಡೆ ಕನ್ನಡ ಪುಸ್ತಕಗಳ ಸ್ಟಾಲ್ ತೆರೆದು ಪುಸ್ತಕ ಮಾರಾಟ ಮಾಡಿದ್ದು ,ರಾತ್ರಿಯಿಡೀ ಯಕ್ಷಗಾನ ಬಯಲಾಟ ಏರ್ಪಾಡು ಮಾಡಿದ್ದು – ಇವೆಲ್ಲ ರೋಮಾಂಚಕ ಅನುಭವಗಳು.ತರಗತಿಯಲ್ಲಿ ಕಾವ್ಯವನ್ನು ತುಸು ಲಂಬಿಸಿ ವ್ಯಾಖ್ಯಾನ ಮಾಡುವುದಕ್ಕೆ ಎಸ್ವಿಪಿ ಹೇಳುತ್ತಿದ್ದ ಪರಿಭಾಷೆ ಎಂದರೆ ‘ ತಾಳಮದ್ದಲೆ ಮಾಡುವುದು’.

ಮಂಗಳೂರಿನ ಸ್ನಾತಕೋತ್ತರ ಕೇಂದ್ರ (೧೯೮೦ರ ಬಳಿಕ ಮಂಗಳೂರು ವಿವಿ ) ಕ್ಕೆ ‘ ಮಂಗಳಗಂಗೋತ್ರಿ ‘ ಎಂದು ನಾಮಕರಣ ಮಾಡಿದವರು ಪ್ರೊಫೆಸರ್ ಎಸ್ವಿಪಿ.ಒಂದು ದಿನ ಪ್ರೊಫೆಸರ್ ಜೊತೆಗೆ ನಾನು ಮತ್ತು ನನ್ನ ಸಹಪಾಟಿ ಗೆಳೆಯ   ಎನ್.ಕೆ.ಚನ್ನಕೇಶವ ನಡೆದುಕೊಂಡು ಬರುತ್ತಿದ್ದಾಗ ಆ ಕೇಂದ್ರಕ್ಕೆ ಹೆಸರು ಇಡುವ ಮಾತು ಬಂತು.ಮೈಸೂರಿನ ‘ಮಾನಸಗಂಗೋತ್ರಿ’ ಎಂಬ ಹೆಸರಿನ ಪ್ರೇರಣೆಯಿಂದ ‘ ಮಂಗಳಗಂಗೋತ್ರಿ’ ಹೆಸರನ್ನು ಆ ದಿನ ಸೂಚಿಸಿದವರು ಎಸ್ವಿಪಿ.ಮುಂದೆ ಅದು ಮೈಸೂರು ವಿವಿಯಿಂದ ಅಧಿಕೃತ ಅಂಗೀಕಾರ ಮುದ್ರೆ ಪಡೆಯಿತು.

ಗುರುಗಳೊಂದಿಗೆ ಅನೇಕ ಬಾರಿ ಅವರ ಭಾಷಣದ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ.ಎಸ ವಿ ಪಿ ಅವರು , ಕರೆದಲ್ಲಿಗೆಲ್ಲ, ಎಷ್ಟೇ ಕಷ್ಟವಾದರೂ ,ಸರಿಯಾದ ವಾಹನವಿರಲಿ ಇಲ್ಲದಿರಲಿ ಹೋಗಿ, ಎಲ್ಲಾ ಆಯಾಸಗಳನ್ನು ಮರೆತು ,ಸ್ಪೂರ್ತಿದಾಯಕ ಭಾಷಣ ಮಾಡುತ್ತಿದ್ದರು. ಹೋದ ಊರಿನ ಹೆಸರಿನ ಮೆಚ್ಚುಗೆಯ ವಿವರಣೆಯಿಂದ , ತಮ್ಮ ಸಮ್ಮೋಹಿನಿ ವಿದ್ಯೆ ಯಿಂದ ಜನರನ್ನು ಸೆಳೆಯುತ್ತಿದ್ದ ಅವರ ಕಡಲ ಮೊರೆತದ ಭಾಷಣದ ವೈಖರಿಯನ್ನು ಅನೇಕ ಬಾರಿ ಅವರ ಜೊತೆಗೆ ಕೇಳಿದ ಕಂಡ ನೆನಪುಗಳು  ಒಂದು ಕನಸಿನ ಜಗತ್ತನ್ನು ಕಟ್ಟಿಕೊಡುತ್ತವೆ.

ನಾವೆಲ್ಲಾ ಕಂಡಿರದ ಕೇಳಿರದ ಊರುಗಳಿಗೆ ಅವರು ಹೋದವರು , ಕಂಡವರು ಮತ್ತು ಜನರ ಹೃದಯಗಳನ್ನು ಗೆದ್ದವರು. ಇಂದಿಗೂ ಆ ಕಾಲದ ಜನರು  ಎಸ್ವಿಪಿ ಮಾತುಗಳ

ಧ್ವನಿ ಅನುರಣನವನ್ನು ತಮ್ಮ ಮನೋಭೂಮಿಕೆಯಲ್ಲಿ ಕೇಳಬಲ್ಲವರಾಗಿದ್ದಾರೆ .ಪರಂಪರೆಯ ಬಗ್ಗೆ ಅಪಾರವಾದ ಗೌರವ ,ಹಿರಿಯರ ಬಗ್ಗೆ ಗುರುಗಳ ಬಗ್ಗೆ ಅವರ ಒಳ್ಳೆಯ ಗುಣಗಳ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದ ಎಸ್ವಿಪಿ ಒಬ್ಬ ಅಜಾತ ಶತ್ರು. ಹಸಿದ ಹೊಟ್ಟೆಯಲ್ಲೇ ಪಾಠ ಮಾಡಬಲ್ಲ , ಶ್ರೀಮತಿಯವರ ಕಾಯಿಲೆಯ ವೇಳೆಗೂ ಸರಸ ಭಾಷಣ ಮಾಡಬಲ್ಲ , ಮಗನ ಅಪಘಾತದ ಸುದ್ದಿ ಬಂದಾಗಲೂ ನಡೆಯುತ್ತಿದ್ದ ಸಭೆಯಲ್ಲಿ ಜನ ನಕ್ಕು ನಲಿಯುವಂತೆ ಮಾತಾಡಿ ,ಮತ್ತೆ ಮೈಸೂರಿಗೆ ಮಗನನ್ನು ನೋಡಲು ತೆರಳಿದ , ನೂರು ನೋವುಗಳ ನಡುವೆಯೂ ಸಾವಿರ ಬಗೆಯ  ನಗೆ ಚೆಲ್ಲಿದ ಪ್ರೊಫೆಸರ್ ಅವರ ವಿದ್ವತ್ತು ಸಾಧನೆಗಳು , ಅವರ ಸಜ್ಜನಿಕೆಯ ಸರಸತೆಯ ಅತಿ ಉದಾರತೆಯ ಗುಣಗಳ ನಡುವೆ ಬಹಳ ಮಂದಿಗೆ ಕಾಣದೆ ಹೋದದ್ದು ಕನ್ನಡ ಸಾಹಿತ್ಯ ಚರಿತ್ರೆಯ  ಒಂದು ವ್ಯಂಗ್ಯ.

ತಾನು ನಗುವುದರೊಂದಿಗೆ ಇತರರನ್ನೂ ನಗಿಸುವ ಪ್ರೊಫೆಸರ್ ಅವರಿಗೆ ಇದ್ದ ಮುಖ್ಯ ಕಾಳಜಿ ಎಂದರೆ ನಿರ್ಮಲ ಪರಿಸರ , ಶುದ್ಧ ನಡವಳಿಕೆ , ಪ್ರೀತಿಯ ಆವರಣ. ಇಂತಹ ಪರಿಸರಕ್ಕೆ ಒಮ್ಮೆ ಹೊಕ್ಕವರು ಮತ್ತೆ ಆ ಸುಖವನ್ನು ಎಂದಿಗೂ ಮರೆಯಲಾರರು.ಅಧಿಕಾರ , ಪ್ರಶಸ್ತಿ , ಬಹುಮಾನ ಇವುಗಳ ಆಸೆ ಎಳ್ಳಷ್ಟೂ ಎಸ್ವಿಪಿ ಅವರಿಗೆ ಇರಲಿಲ್ಲ .ಆದರೆ ಯಾವುದೇ ಪ್ರಶಸ್ತಿ ಬಂದಾಗಲೂ – ತಮಗಾಗಲೀ ಇತರರಿಗಾಗಲೀ – ಅವರು ಹೆಮ್ಮೆ ಪಡುತ್ತಿದ್ದರು. ತಮ್ಮೊಡನೆ ಇರುವವರನ್ನೆಲ್ಲ ಸಂತೋಷ ಪಡುವಂತೆ ಮಾಡುತ್ತಿದ್ದರು.ಹಾಗೆ ನೋಡಿದರೆ ಅವರಿಗೆ ದೊರೆತಿರುವ ಪ್ರಶಸ್ತಿಗಳು ಬಹಳವೇನೂ ಇಲ್ಲ.ಸಣ್ಣ ಸಣ್ಣ ಊರುಗಳಲ್ಲಿ ತಮಗೆ ಮಾಡಿದ ಸನ್ಮಾನಗಳನ್ನು ಅವರು ಸಂಭ್ರಮದಿಂದ ಹೇಳಿಕೊಳ್ಳುತ್ತಿದ್ದರು. ಜನರ ಪ್ರೀತಿಯನ್ನು ಬಹಳ ದೊಡ್ಡ ಗೌರವ ಎಂದು ಭಾವಿಸುತ್ತಿದ್ದರು.ಈ ಅರ್ಥದಲ್ಲೂ ಎಸ್ವಿಪಿ ಕನ್ನಡದ ಅಪೂರ್ವ ಸಾಹಿತಿ.

ಮಂಗಳೂರಿನ ಕಡಲು , ಪ್ರೊಫೆಸರ್ ಪರಮೇಶ್ವರ ಭಟ್ಟರ ಭಾವಕೋಶದ ಬಹಳ ಪ್ರೀತಿಯ ಭಾಗ. ಅದು ಅವರ ಬದುಕಿನ ರೂಪಕ. ಅವರ  ‘ಉಪ್ಪು ಕಡಲು ‘ ವಚನ ಸಂಕಲನದಲ್ಲಿ ತಾವು ಕಂಡ ತಾವು ಉಂಡ ಉಪ್ಪನ್ನು ಉಪ್ಪಿನ ಋಣದ ಕಲ್ಪನೆಯನ್ನು ಬಗೆ ಬಗೆಯಾಗಿ ಹೇಳಿಕೊಂಡಿದ್ದಾರೆ. ಕಡಲು ಮತ್ತು ಒಡಲು- ಈ ಕುರಿತು ಎಸ್ವಿಪಿ ಬರೆದ ಈ ವಚನ , ಒಡಲನ್ನು ನೀಗಿಕೊಂಡು ಬಹಳ ಕಾಲದ ಬಳಿಕ ಈಗಲೂ ಅವರ ಸಮಗ್ರ ವ್ಯಕ್ತಿತ್ವವನ್ನು ಕಣ್ಣಿಗೆ ಕಟ್ಟಿ ಕೊಡುವ  ಮತ್ತು ಮನಕ್ಕೆ ಮುಟ್ಟಿಸುವ ಮುತ್ತಿನಂತಹ ಮಾತು :

ನಿನ್ನ ಕಡಲು ಉಪ್ಪಾದರೂ ಅದರೊಳಗೆ

ನಿನ್ನದೆಂಬ ಮುತ್ತುಂಟು  ರತ್ನವುಂಟು

ನನ್ನ ಈ ಒಡಲು ಮುಪ್ಪಾದರೂ

ಇದರೊಳಗೆ ನೀನೆಂಬ ಮುತ್ತುಂಟು ರತ್ನವುಂಟು

ಇದು ಕಾರಣ ಆ ಕಡಲೂ ಭವ್ಯ   ಈ ಒಡಲೂ  ಭವ್ಯ    ಸದಾಶಿವ ಗುರು.

Read Full Post | Make a Comment ( 7 so far )

ಕುವೆಂಪು ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ

Posted on ಡಿಸೆಂಬರ್ 29, 2011. Filed under: ಕನ್ನಡ ಸಾಹಿತ್ಯ, ಕುವೆಂಪು, Kannada Literature | ಟ್ಯಾಗ್ ಗಳು:, , , , , , |

ಕುವೆಂಪು (೨೯ ದಶಂಬರ ೧೯೦೪-೧೧ ನವಂಬರ ೧೯೯೪ ) ಅವರ ಮಹಾಕಾವ್ಯ ‘ಶ್ರೀರಾಮಾಯಣ ದರ್ಶನಂ ‘ನಲ್ಲಿ ಊರ್ಮಿಳೆ ಹೇಳುವ ಮಾತು ‘ಕಡಲ್ಗಿದಿರ್ ಪನಿಗೇಂ  ಪ್ರದರ್ಶನಂ ?’ ಗಂಡನಿಗಾಗಿ ತಾನು ತಪಸ್ವಿನಿಯಂತೆ ಬದುಕಿದ್ದು ಪ್ರದರ್ಶನಕ್ಕಲ್ಲ ಎನ್ನುವ ಊರ್ಮಿಳೆಯ ಪಾತ್ರಸೃಷ್ಟಿ -ಕುವೆಂಪು ಅವರ ಬದುಕಿನ ಪೂರ್ಣದೃಷ್ಟಿ . ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ‘ ಎನ್ನುವ ಲೇಖನದಲ್ಲಿ  ಕುವೆಂಪು ಹೇಳುವ ಈ ಮಾತು ಈ  ಆಶಯಕ್ಕೆ ಪೂರಕವಾಗಿದೆ :” ಸದ್ಯ ,ಫಲಾಪೇಕ್ಷೆಗಿಂತಲೂ ಕೀರ್ತಿಮೋಹದಿಂದ  ಹೆಚ್ಚು ಅನಾಹುತವಾಗುತ್ತದೆ. ..ಮಂದಿಯ ಕೈಚಪ್ಪಾಳೆ, ವೃತ್ತಪತ್ರಿಕೆಗಳ ಅಗ್ಗದ ಸ್ತುತಿ, ಬಿರುದು ಬಾವಲಿಗಳ ವ್ಯಾಮೋಹ ಇವುಗಳಿಗೆ ವಶನಾಗದೆ , ತಾನು ಹಿಡಿದ ಕೆಲಸವನ್ನು ಪಟ್ಟು ಹಿಡಿದು ನಿಶ್ಶಬ್ದವಾಗಿ ಮಾಡುವಾತನೇ  ನಿಜವಾದ ಕರ್ಮಯೋಗಿ.”

” ಆತ್ಮಶ್ರೀಗಾಗಿ  ನಿರಂಕುಶಮತಿಗಳಾಗಿ ‘ – ಇದು ಕುವೆಂಪು ಅವರು ಶ್ರೀರಂಗಪಟ್ಟಣದಲ್ಲಿ ಯುವಜನ ಸಮ್ಮೇಳನದಲ್ಲಿ ೧೯೩೫ ರಲ್ಲಿ ಮಾಡಿದ ಭಾಷಣ. ” ಮತೀಯ ಮತ್ತು ಸಾಮಾಜಿಕ ಅಂಧಶ್ರದ್ಧೆ ಮತ್ತು ಅಂಧಾಚಾರಗಳಿಂದ ನಾವು ಪಾರಾಗದಿದ್ದರೆ ನಮಗೆ ಉದ್ಧಾರವಿಲ್ಲ.” ನಮ್ಮ ದೇಶ ಸ್ವಾತಂತ್ರ್ಯವನ್ನು ಪಡೆಯುವ ಮೊದಲು ಎಲ್ಲಕಡೆ ವ್ಯಾಪಿಸಿದ್ದ  ವರ್ಣಾಶ್ರಮ ,ಜಾತಿ ಪದ್ಧತಿ ,ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನ್ಯಾಯಗಳು ಸ್ವಾತಂತ್ರ್ಯದ ಬಳಿಕ ನಿರ್ನಾಮವಾಗುತ್ತವೆ ಎಂದು ಯುವಜನರು ಭಾವಿಸಿದ್ದರು.ಆದರೆ ಅಂತಹ ಯಾವ ಪವಾಡವೂ ನಡೆಯಲಿಲ್ಲ. ಇದಕ್ಕೆ ಕುವೆಂಪು ಕೊಡುವ ಕಾರಣ -ಮತಾಂಧತೆ ,ಮತಭ್ರಾಂತಿ, ಮತದ್ವೇಷ ಮತ್ತು ಮತ ಸ್ವಾರ್ಥತೆ ಇವು ‘ವಿಚಾರವಾದ’ ಮತ್ತು ‘ವೈಜ್ಞಾನಿಕ ದೃಷ್ಟಿ’ ಗಳಿಗೆ ಕೊಟ್ಟ ಕೊಡಲಿಪೆಟ್ಟು. ನಮ್ಮಲ್ಲಿ ಸಂಸ್ಕೃತಿಯ ಹೆಸರಿನಲ್ಲಿ  , ಮತದ ಹೆಸರಿನಲ್ಲಿ , ಧರ್ಮದ ಸೋಗಿನಲ್ಲಿ , ಪೂರ್ವಿಕರ ಪ್ರಾಚೀನ ವೈಭವಗಳ ಕರ್ಮಕಾಂಡವನ್ನು ಮತ್ತೆ ಜೀರ್ಣೋದ್ಧಾರ ಮಾಡಿ ಪ್ರತಿಷ್ಠಾಪಿಸುವ ಸ್ವಾರ್ಥತಾ ಮೂಲವಾದ ಕುಂಟುನೆಪದಲ್ಲಿ ,ಅವಿವೇಕದ ಮೌಡ್ಯಗಳಿಗೆ ವೈಜ್ಞಾನಿಕತೆಯ ಮತ್ತು ವಿಚಾರದ ನಕಲಿ ಮುಲಾಮು ಹಚ್ಚಿ , ಜನರನ್ನು ದಿಕ್ಕು ತಪ್ಪಿಸಿ ವಂಚಿಸುವುದನ್ನು ಕುವೆಂಪು ಬೆಟ್ಟುಮಾಡಿ ತೋರಿಸುತ್ತಾರೆ.

ಕುವೆಂಪು ಅವರ ಈ ಭಾಷಣದ ಬಗ್ಗೆ ಆ ಕಾಲದಲ್ಲಿ ಜಾತಿವಾದಿಗಳು ಪತ್ರಿಕೆಗಳಲ್ಲಿ ಉಗ್ರಟೀಕೆಗಳನ್ನು ಮಾಡಿ,ಕನ್ನಡ ಉಪನ್ಯಾಸಕರಾಗಿದ್ದ ಕುವೆಂಪು ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲು ಸರಕಾರ ಮತ್ತು ಮೈಸೂರು ವಿಶ್ವವಿದ್ಯಾನಿಲಯವನ್ನು ಒತ್ತಾಯಿಸಿದರು. ಸರಕಾರವು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಈ ಕುರಿತು ತನಿಖೆ ಮಾಡಿ ವರದಿ ಒಪ್ಪಿಸುವಂತೆ ಕೇಳಿತಂತೆ.ವಿಚಾರಣೆಯ ಕರ್ತವ್ಯ ಆಗ ಅಲ್ಲಿ  ಕನ್ನಡ  ಪ್ರಾಧ್ಯಾಪಕರಾಗಿದ್ದ ಟಿ.ಎಸ.ವೆಂಕಣ್ಣಯ್ಯ ಅವರ ಮೇಲೆ ಬಿತ್ತು. ಈ ಪ್ರಸಂಗದ ಕುರಿತು ಕುವೆಂಪು ಈರೀತಿ ಬರೆದಿದ್ದಾರೆ: ” ಒಂದು ದಿನ ವೆಂಕಣ್ಣಯ್ಯನವರು  ನನ್ನನ್ನು ಕೇಳಿದರು ತಮಗೆ ಬಂದಿದ್ದ ಆಜ್ಞೆಯ ವಿಚಾರ ಏನನ್ನೂ ತಿಳಿಸದೆ, ಲೋಕಾಭಿರಾಮವಾಗಿ ಎಂಬಂತೆ , ‘ಅದೇನಯ್ಯ ನೀನು  ಭಾಷಣ ಮಾಡಿದಿಯಂತೆ ಶ್ರೀರಂಗಪಟ್ಟಣದಲ್ಲಿ ? ತಂದುಕೊಡುತ್ತೀಯೇ  ನನಗೆ ? ‘ ಅಚ್ಚಾಗಿದ್ದ ಕೆಲವು ಪ್ರತಿಗಳು ನನ್ನಲ್ಲಿ ಇದ್ದುವು. ಅವರಿಗೆ ಒಂದನ್ನು ಕೊಟ್ಟೆ.ಅವರು ನನಗೆ ಮುಂದೆ ಯಾವ ವಿಚಾರವನ್ನೂ ಹೇಳಲಿಲ್ಲ. ಆಮೇಲೆ ತಿಳಿದುದನ್ನು ಬರೆಯುತ್ತಿದ್ದೇನೆ.ನನ್ನ ಭಾಷಣವನ್ನು ಓದಿದ ಅವರು ವಿಶ್ವವಿದ್ಯಾನಿಲಯಕ್ಕೆ ಬರೆದ ಕಾಗದದಲ್ಲಿ  ‘ ನಾನು ನನ್ನ ಮಗನಿಗೆ ಬುದ್ಧಿ ಹೇಳಬೇಕಾಗಿ ಬಂದರೆ ಇದಕ್ಕಿಂತಲೂ ವಿಚಾರಪೂರ್ವಕವಾಗಿ ಸೊಗಸಾಗಿ ಸಮರ್ಥವಾಗಿ ಹೇಳಲಾರೆ ‘ ಎಂದು ಬರೆದಿದ್ದರಂತೆ.”

‘ಮಲೆನಾಡಿನ ಯುವಕರಲ್ಲಿ’ ಎಂಬ ಭಾಷಣ ಲೇಖನದಲ್ಲಿ ಕುವೆಂಪು ದೇವರುಗಳ ಆರಾಧನೆಯಲ್ಲಿರುವ ಮೌಡ್ಯ,ಮದ್ಯಪಾನದ ಕೆಡುಕು ,ಕೋರ್ಟು ವ್ಯವಹಾರಗಳಿಂದ ಮನೆ ಹಾಳಾಗುವುದು -ಇವನ್ನು ವಿವರಿಸಿ ತಿಳಿಸುತ್ತಾರೆ. “ಪರೀಕ್ಷೆ ,ವಿಮರ್ಶೆ ,ವಿಚಾರ -ಇವೆಲ್ಲವೂ ನಮ್ಮ ಹುಟ್ಟು ಹಕ್ಕುಗಳು “.ಇದು ಕುವೆಂಪು ಮಂತ್ರ.ದುಂದುವೆಚ್ಚದ ಬಗ್ಗೆ ಕುವೆಂಪು ಕಿವಿಮಾತು : ” ನಿಮ್ಮ ಕನ್ಯೆಯರಿಗೆ ಸೇರು ಬಂಗಾರದ ಕೊರಳಹಾರಕ್ಕಿಂತಲೂ ಮುದ್ದಾದ ಕನ್ನಡ ಅಕ್ಷರಮಾಲೆಯು ರಮಣೀಯತರವಾದ ಅಲಂಕಾರ.'” ವಿದ್ಯಾರ್ಥಿಗಳಿಗೆ ಮತಿ ಗೌರವ ಬೇಕು ಎನ್ನುವ ಕುವೆಂಪು ಅದು ಸಾಧಿತವಾಗುವ ಬಗೆಯನ್ನು ಹೀಗೆ ತಿಳಿಸುತ್ತಾರೆ :  ” ಗ್ರಾಮಸೇವೆ,ಭಾಷಾ ಸೇವೆ,ಜ್ಞಾನಪ್ರಸಾರ,ಸಾಹಿತ್ಯ ಪ್ರಚಾರ,ವೈದ್ಯ ಸಹಾಯ,ರೋಗ ಶುಶ್ರೂಷೆ  ಇತ್ಯಾದಿ ಅಲಘು ಕಾರ್ಯಗಳಲ್ಲಿ ಪಾಲುಗೊಳ್ಳುವ  ವಿದ್ಯಾರ್ಥಿಯ ಮತಿ ಸಜೀವವೂ ಸುಸ್ಪಷ್ಟವೂ ಆಗುತ್ತದೆ. ”  “ವಿದ್ಯೆಯ ಲೋಕದಲ್ಲಿ ಧನಿಕರಾಗಲು ಸುಲಭೋಪಾಯಗಳಿಲ್ಲ.ಅಲ್ಲಿ ಯಾರೂ ವಂಚನೆಯಿಂದ ಸಂಪತ್ತು ಗಳಿಸಲಾರರು . ಅಲ್ಲಿ ದುಡಿಮೆಯಂತೆ ಪಡಿ.”

‘ ವಿದ್ಯಾರ್ಥಿಗಳಿಗೇಕೆ  ಆತ್ಮಶ್ರೀ ‘ ಎಂಬ ಕುವೆಂಪು ಉಪನ್ಯಾಸ ಲೇಖನವು ಆಧ್ಯಾತ್ಮಿಕ ಪರಿಕಲ್ಪನೆಯನ್ನು ಮನೋವೈಜ್ನಾನಿಕವಾಗಿ ವಿವರಿಸುತ್ತದೆ.ಧ್ಯಾನ ,ಚಿಂತನೆಗಳಿಂದ ನಮ್ಮ ಮನಸ್ಸು ಹರಿತವಾಗುತ್ತದೆ ,ಗಟ್ಟಿಯಾಗುತ್ತದೆ ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ. ” ತುಂಬು ಬಾಳಿಗೆ ಬಹಿರ್ಮುಖತೆಯಷ್ಟೇ ಆವಶ್ಯಕ  ಅಂತರ್ಮುಖತೆ. ಬದುಕನ್ನು ಕುರಿತು ಜಾನಿಸುವುದೂ ಚೆನ್ನಾಗಿ ಬದುಕುವುದಕ್ಕೆ ನೆರವಾಗುತ್ತದೆ ” ಎನ್ನುವುದು ಕುವೆಂಪು ಸೂತ್ರ. ಅದಕ್ಕಾಗಿಯೇ ಅವರು ಹೇಳುತ್ತಾರೆ :  ” ಪುಸ್ತಕಗಳಿಂದಲೂ ವ್ಯಕ್ತಿಗಳಿಂದಲೂ ಜೀವನವ್ಯಾಪಾರಗಳಿಂದಲೂ ನಾವು ಪಡೆಯುವ ತಿಳಿವು ನಮ್ಮ ಅನುಭವಕ್ಕೆ ಹಿಡಿಯಬೇಕಾದರೆ ,ಅದರಿಂದ ನಮ್ಮ ಆತ್ಮಶ್ರೀ ಆವಿರ್ಭವಿಸಬೇಕಾದರೆ , ಏಕಾಂತವೂ ಮೌನವೂ ಧ್ಯಾನವೂ ಅತ್ಯಗತ್ಯ. ದಿನದ ದೀರ್ಘ ಜೀವನದಲ್ಲಿ ಸ್ವಲ್ಪ ಕಾಲವನ್ನಾದರೂ ಅದಕ್ಕೆ ಮೀಸಲಾಗಿಸುವುದರಿಂದಲೇ ಬಾಳು ಪರಿಪೂರ್ಣವೂ ಸುಂದರವೂ ಆಗಲು ಸಾಧ್ಯ. ” ತಪಸ್ಸಿನ ಬಗ್ಗೆ ಇನ್ನೊಂದು ಕಡೆ ಕುವೆಂಪು ಕೊಡುವ ವಿವರಣೆ ಧರ್ಮನಿರಪೇಕ್ಷವಾದದ್ದು :  “ನಾವು ಯಾವ ಕೆಲಸ ಉದ್ಯೋಗಗಳನ್ನು ಕೈಕೊಂಡಿದ್ದರೂ  ಅವುಗಳನ್ನು ಶ್ರದ್ಧೆಯಿಂದ ,ಭಕ್ತಿಯಿಂದ ,ನಿಷ್ಠೆಯಿಂದ ,ಗುರಿ ಸಾರುವ ತನಕ ಸಾಧಿಸುವುದೇ ತಪಸ್ಸು. ”

ಇಂದು ಕುವೆಂಪು ಹುಟ್ಟಿದ ದಿನ.ತೊಂಬತ್ತು ವರ್ಷಗಳ ಕಾಲ ಕರ್ನಾಟಕದಲ್ಲೇ  ಇದ್ದು ,ಸಾರ್ಥಕ ಬಾಳನ್ನು ಬದುಕಿ,ಇಡೀ ಇಪ್ಪತ್ತನೆಯ ಶತಮಾನವನ್ನು ತಮ್ಮ ಮೇರು ಬದುಕು ಬರಹಗಳಿಂದ ರೂಪಿಸಿದ ಕುವೆಂಪು ಎಂಬ ‘ ಕಡಲು ‘ ಈಗ ಇಲ್ಲ. ಈ ಕಡಲಿನ ಹೆಸರಿನಲ್ಲಿ ಈಗ ನಡೆಯುತ್ತಿರುವ ‘ ಪನಿ ‘ಗಳ ಪ್ರದರ್ಶನ ಅದು ನಿಜವಾದ ಕುವೆಂಪು ಚಿಂತನೆಯ ಪನಿಗಳಾದರೂ ಆಗಿವೆಯೇ ಎನ್ನುವ ಪ್ರಶ್ನೆಗೆ ಸಕಾರಾತ್ಮಕ ಉತ್ತರ ದೊರೆಯುವುದು ಕಷ್ಟ. ಪ್ರದರ್ಶನ,ಅಗ್ಗದ ಪ್ರಚಾರ ,ಬಿರುದುಬಾವಲಿಗಳು -ಇವುಗಳ ಅಬ್ಬರದಲ್ಲಿ ಕುವೆಂಪು ಹೆಸರು ಒಂದು ಬ್ಯಾನರ್ ಮಾತ್ರ ಆಗುತ್ತಿದೆಯೇ ? ಸತ್ಯಾಗ್ರಹವೂ ಒಂದು ಈವೆಂಟ್ ಮ್ಯಾನೆಜ್ ಮೆಂಟ್ ನ ಭಾಗವಾಗುತ್ತಿರುವ ದಿನಗಳಲ್ಲಿ ,’ಆತ್ಮಶ್ರೀ ‘ ಎಷ್ಟು ಪ್ರಮಾಣದಲ್ಲಿ ಉಳಿದಿದೆ ? ಕುವೆಂಪು ಅವರ ಶ್ರೀರಂಗಪಟ್ಟಣದ  ವೈಚಾರಿಕ  ಭಾಷಣದ ರೀತಿಯ ಭಾಷಣವನ್ನು ಕರ್ನಾಟಕದ  ಯಾವುದೇ ವಿಶ್ವವಿದ್ಯಾನಿಲಯದ ಅಧ್ಯಾಪಕರು ಇವತ್ತು ಮಾಡಿದರೆ ಅವರ ವಿಚಾರಣೆ ನಡೆಸಿ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳುವ ಬೆದರಿಕೆ ಇಲ್ಲವೇ ?ಮತ ಮತ್ತು ಅಧ್ಯಾತ್ಮ ಇವು ಕಲಸುಮೇಲೋಗರ ಆಗಿರುವ ಇಂದಿನ ಸನ್ನಿವೇಶದಲ್ಲಿ ಕುವೆಂಪು ಅವರ ಅಧ್ಯಾತ್ಮ ತತ್ವ ಮತ್ತು ಸೂತ್ರಗಳನ್ನು ಅಸೂಕ್ಸ್ಮ ಮನಸ್ಸುಗಳು ಹೇಗೆ ಗ್ರಹಿಸಬಲ್ಲವು ? ಜಯಚಾಮರಾಜ ಒಡೆಯರಿಗೆ ಖಾಸಗಿ ಟ್ಯೂಶನ್ ಕೊಡಲು ನಿರಾಕರಿಸಿದರು ಕುವೆಂಪು. ನಾವು ಇಂದು ಒಡೆಯರಿಗೆ ಹಾಕುವ ಸಲಾಂ ಯಾವ ಬಗೆಯದು ? ಕುವೆಂಪು ನಿಧನರಾದಾಗ ೧೯೯೪ರಲ್ಲಿ ಕರ್ನಾಟಕದಲ್ಲಿ ಚುನಾವಣೆಯ ಕಾವು ಏರಿತ್ತು.ಒಂದು ಕಡೆ ಕುವೆಂಪು ಅಗಲಿಕೆಯ ಶೋಕಪ್ರದರ್ಶನದಲ್ಲಿ  ‘ವಿಶ್ವಮಾನವ ಸಂದೇಶ ‘ದ ಭಜನೆ ಮಾಡುತ್ತಲೇ , ರಾಜಕೀಯ ಪಕ್ಷಗಳು ತಮ್ಮ ಮತಗಳನ್ನು ‘ಮತ’ ಗಳ ಮೂಲಕ ಜಾತಿಗಳ ಮೂಲಕ ಒಡೆದು ಬಾಚುವ ಕೆಲಸ ಮಾಡಿದವು. ಈ ಪ್ರವೃತ್ತಿಯು  ಈಗ ಕರ್ನಾಟಕದಲ್ಲಿ ‘ಸಾರ್ವಜನಿಕ ನಾಚಿಕೆ’ಯನ್ನು ಮೀರಿ ,ಗೌರವದ ಪಟ್ಟವನ್ನು ಏರಿದೆ.

ಮಲೆನಾಡು ಮಾತ್ರ ಅಲ್ಲ ,ಇಡೀ ಕರುನಾಡಿನಲ್ಲೇ ಕನ್ನಡ ಅಕ್ಷರಮಾಲೆಯನ್ನು ಕೊರಳಿಂದ ಕಿತ್ತೆಸೆದು ,ಇಂಗ್ಲಿಶ್ ಆಲ್ಪಾಬೆಟ್ ನ ನೆಕ್ಲೀಸ್ ನ್ನು ಮಕ್ಕಳಿಗೆ ತೊಡಿಸಲಾಗುತ್ತಿದೆ.ಕುವೆಂಪು ಹೇಳುವ ಮೌನ,ಧ್ಯಾನ ,ಚಿಂತನೆ ಮಾಡುವ ವ್ಯವಧಾನ ,ಮನಸ್ಸು ,ಅವಕಾಶ ಇಲ್ಲದೆ ಕನ್ನಡಿಗರ ಬದುಕು ಉದ್ವೇಗ ,ಆಕ್ರೋಶ , ,ದ್ವೇಷ ,ಜಗಳ,ಪ್ರದರ್ಶನಗಳ ಅಬ್ಬರಸಂತೆಯಲ್ಲಿ  ನಲುಗುತ್ತಿದೆಯೇ ?

ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ‘ಹುಲಿಕಲ್ಲು ನೆತ್ತಿ ‘ ಒಂದು ಮಹತ್ವದ ಪ್ರತಿಮೆ.ಅನೇಕ ಮಂದಿ ತಮ್ಮ ಸಾಧ್ಯತೆಗಳ ಆತ್ಮವಿಶ್ವಾಸ ಹೊಂದುವುದು ಹುಲಿಕಲ್ಲುನೆತ್ತಿಯನ್ನು  ಏರುವ ಮೂಲಕ ,ದಾಟುವ ಮೂಲಕ.ಈ ಕಾದಂಬರಿಯ ಸುಬ್ಬಣ್ಣ  ಹೆಗ್ಗಡೆಯ ಪಾತ್ರ  ಒಂದು ಬಗೆಯ  ಆದರ್ಶ ಮತ್ತು ವಾಸ್ತವ.ಕೋಳಿ ಕುರಿ ಹಂದಿಗಳ ಪ್ರಾಕೃತಿಕ ಪರಿಸರದಲ್ಲಿ ಬೆಳೆದ ಸುಬ್ಬಣ್ಣ ಹೆಗ್ಗಡೆ ಎಲ್ಲ ಆಸೆಗಳನ್ನು ಹೊತ್ತುಕೊಂಡು ಹುಲಿಕಲ್ಲು ನೆತ್ತಿಯನ್ನು ಏರುವುದು ಒಂದು ಸಾಹಸ.ಗುತ್ತಿಯೂ ಹುಲಿಕಲ್ಲು ನೆತ್ತಿಯನ್ನು ಏರಿ ಹೋಗುತ್ತಾನೆ.

ಹುಲಿಕಲ್ಲು ನೆತ್ತಿಯಲ್ಲಿ ಒಂದು ಕಲ್ಲು , ಕುವೆಂಪು ಕಡಲಿನಲ್ಲಿ ಒಂದು ಹನಿ -ಇಷ್ಟಾದರೂ ಆಗುವ ನಮ್ಮ ನಿರ್ಧಾರ : ಕುವೆಂಪು ಹುಟ್ಟುದಿನದ ಆಚರಣೆ -ನಮ್ಮ ಮತಿ ಮತಿಯಲ್ಲಿ .

Read Full Post | Make a Comment ( None so far )

ಹೆಸರು ಪಡೆದ ಮತ್ತು ಹೆಸರು ತಂದುಕೊಟ್ಟ ಕಾರಂತರ ನೆನಪಿನ ನನ್ನ ಮೊದಲ ಜನ್ಮದ ಕತೆ

Posted on ಡಿಸೆಂಬರ್ 9, 2011. Filed under: ಕನ್ನಡ ಸಾಹಿತ್ಯ, ನನ್ನ ಅಪ್ಪ.., ಶಿವರಾಮ ಕಾರಂತ | ಟ್ಯಾಗ್ ಗಳು:, , , , , , , , |

ನನ್ನ ಅಪ್ಪ ಅಗ್ರಾಳ ಪುರಂದರ ರೈ (೩೧ ಆಗಸ್ಟ್ ೧೯೧೬- ೫ ಮೇ  ೨೦೦೧ ) ಅವರ ಬದುಕು ಮತ್ತು ಬರಹಗಳನ್ನು ಕುರಿತು ನನ್ನ ಈ ಬ್ಲಾಗಿನ ೨೪.೧೦.೨೦೧೦ ರ ಲೇಖನದಿಂದ ತೊಡಗಿ ಕಂತುಗಳ ರೂಪದಲ್ಲಿ ಕಥನವನ್ನು  ಕೊಟ್ಟಿದ್ದೇನೆ.ದಕ್ಷಿಣ ಕನ್ನಡ ಜಿಲ್ಲೆಯ ಆಗಿನ ಪುತ್ತೂರು ತಾಲೂಕಿನ ಪುಣಚಾ ಗ್ರಾಮದ ಅಗ್ರಾಳ ಎಂಬ ತಮ್ಮ ಹಿರಿಯರ ಕುಟುಂಬದ ಮನೆಯಲ್ಲಿ ಇದ್ದ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ ಬದುಕಿನ ಕೊನೆಯವರೆಗೂ ಅಪ್ಪಟ ಗಾಂಧಿವಾದಿಯಾಗಿ ಬದುಕಿದವರು.ಸಣ್ಣ ಕೃಷಿಕರಾಗಿ ,ಸಾಹಿತ್ಯದ ಗೀಳು ಹಚ್ಚಿಕೊಂಡು ,ಬರಹ ,ಪತ್ರಿಕಾ ವರದಿ ,ಸಮಾಜಸೇವೆ ಮಾಡುತ್ತಾ ಜೀವನ ಸಾಗಿಸಿದವರು.ಅವರು ೧೯೩೧ರಲ್ಲಿ ಪುತ್ತೂರಿನ ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ವಿದ್ಯಾರ್ಥಿಯಾಗಿ ಸೇರಿ ,ಬಳಿಕ ೧೯೩೩ರಿನ್ದ ೧೯೩೫ರವರೆಗೆ ಅಲ್ಲಿನ ಬೋರ್ಡ್ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದರು.ಇದೇ ಅವಧಿ ಡಾ.ಶಿವರಾಮ ಕಾರಂತರು ಕೋಟದಿಂದ ಪುತ್ತೂರಿಗೆ ಬಂದು ತಮ್ಮ ಸಾರ್ವಜನಿಕ ಚಟುವಟಿಕೆಗಳನ್ನು ಆರಂಭಿಸಿದ ಕಾಲ.

ಕಾರಂತರು ಮೊಳಹಳ್ಳಿ ಶಿವರಾಯರ ಪ್ರೇರಣೆಯಿಂದ ಪುತ್ತೂರನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಆರಿಸಿಕೊಂಡು ಸುರುಮಾಡಿದ ಕಾರ್ಯಕ್ರಮಗಳಲ್ಲಿ ಮುಖ್ಯವಾದುದು ಒಂದು- ಅವರು ೧೯೩೦ರಲ್ಲಿ ಆರಂಭಿಸಿದ ‘ಮಕ್ಕಳ ಕೂಟ’. ಪುತ್ತೂರು  ಹೈಯರ್ ಎಲಿಮೆಂಟರಿ ಶಾಲೆ -ಕಾರಂತರ ‘ಮಕ್ಕಳಕೂಟ’ ಪ್ರಯೋಗದ ತರಬೇತಿಯ ಮುಖ್ಯ ಕೇಂದ್ರ ಆಗಿತ್ತು.ಆಗ ಅಲ್ಲಿ ವಿದ್ಯಾರ್ಥಿ ಆಗಿದ್ದ ನನ್ನ ಅಪ್ಪ ೧೯೩೧ರಲ್ಲೆ ಕಾರಂತರ ‘ಮಕ್ಕಳ ಕೂಟ’ದ ಸದಸ್ಯ ಆದರು.ಕಾರಂತರ ಪ್ರಯೋಗದ ಅಂತಹ ಒಂದು ನಾಟಕದಲ್ಲಿ ತಾನು ನಾನಾ ಫಡ್ನನೀಸನ ಪಾತ್ರ ಮಾಡಿದ್ದನ್ನು ಅಪ್ಪ ಅವರ ಆತ್ಮಕಥನದಲ್ಲಿ ಬರೆದಿದ್ದಾರೆ.ಹೀಗೆ ವಿದ್ಯಾರ್ಥಿ ಆಗಿ ಆರಂಭ ಆದ ಕಾರಂತರ ಬಗೆಗಿನ ಅಭಿಮಾನ ,ಭಕ್ತಿ ,ಗೌರವ ಬೆಳೆಯುತ್ತಾ ಬಂದಹಾಗೆಲ್ಲ ಅಪ್ಪ -ಕಾರಂತರ ಸಾಹಿತ್ಯದ ಓದು ಮತ್ತು ಬದುಕಿನ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಲು ತೊಡಗಿದರು.ಮುಂದೆ ಅವರು ಕಾರಂತರ ಅಭಿಮಾನಿಯಾಗಿ ,ಆಪ್ತ ಬಳಗದ ಒಬ್ಬ ಆತ್ಮೀಯ ಸದಸ್ಯ ಆದರು.ಅಪ್ಪ ಜೀವಂತ ಇದ್ದಾಗ ,ಕಾರಂತರ ಜೊತೆಗಿನ ಅವರ ಒಡನಾಟದ ಅನೇಕ ಸಂಗತಿಗಳನ್ನು ಮಕ್ಕಳಾದ ನಮ್ಮೊಡನೆ ಹಂಚಿಕೊಳ್ಳುತ್ತಿದ್ದರು.ಅವೆಲ್ಲವನ್ನು ದಾಖಲಿಸಿ ಇಡಲಾಗಲಿಲ್ಲ ಎನ್ನುವ ಕೊರಗು ಈಗ ಕಾಡುತ್ತಿದೆ.ಅವುಗಳಲ್ಲಿ ಕೆಲವು ಈಗಲೂ ನನ್ನ ನೆನಪಿನಲ್ಲಿ  ಜೀವಂತವಾಗಿವೆ.

ಅಪ್ಪನ ಮೂಲಕ ನನ್ನ ಅಮ್ಮ ಯಮುನಾ  (೧೯೨೧-೨೦೧೦ ) ಕೂಡಾ ಕಾರಂತರ ಕುಟುಂಬಕ್ಕೆ ತುಂಬಾ ಆತ್ಮೀಯರಾಗಿದ್ದರು.ಕಾರಂತರ ಶ್ರೀಮತಿ ಲೀಲಾ ಕಾರಂತರು ಮತ್ತು ನನ್ನ ಅಮ್ಮ ಬಹಳ ಆಪ್ತ ಸಂಬಂಧವನ್ನು ಹೊಂದಿದ್ದರು.ನನ್ನ ಅಮ್ಮನಿಗೆ ಬಹಳ ರುಚಿಕರವಾದ ತರಕಾರಿ ಅಡುಗೆಗಳನ್ನು ಕಲಿಸಿದ್ದು ಲೀಲಾ ಕಾರಂತರು  ಮತ್ತು ಲೀಲಾ ಕಾರಂತರಿಗೆ  ಅದನ್ನು  ಕಲಿಸಿದ್ದು ಶಿವರಾಮ ಕಾರಂತರು ಎಂದು ಅಮ್ಮ  ಹೇಳುತ್ತಿದ್ದರು.ಅಪ್ಪ ಮತ್ತು ಅಮ್ಮ ಹೇಳುತ್ತಿದ್ದ ಸಂಗತಿಗಳನ್ನು ಸೇರಿಸಿಕೊಂಡು ಈ ಕಥನವನ್ನು ಬರೆಯುತ್ತಿದ್ದೇನೆ.

ನಮ್ಮ ಕುಟುಂಬದಲ್ಲಿ ನನಗಿಂತ ಮೊದಲು ಹುಟ್ಟಿದವರು ನನ್ನ ಇಬ್ಬರು ಅಕ್ಕಂದಿರು- ಜೀವನಲತಾ ಮತ್ತು ಆಶಾಲತಾ .ಮೊದಲ ಮಗ ಹುಟ್ಟಿದಾಗ  ಏನು ಹೆಸರು ಇಡುವುದು ಎಂದು ಕೇಳಲು ಅಪ್ಪ  ಅಗ್ರಾಳದ ಮನೆಯಿಂದ ಪುತ್ತೂರಿನ ಬಾಲವನಕ್ಕೆ ಆರು ಮೈಲು ನಡೆದುಕೊಂಡುಹೋದರು.ಕಾರಂತರಲ್ಲಿ ಮಗನಿಗೆ ಹೆಸರು ಏನು ಇಡುವುದೆಂದು ಕೇಳಿದರು .ಕಾರಂತರು ಹೆಸರು ಸೂಚಿಸಿದರು-‘ ವಿವೇಕ ..’.ಅಪ್ಪನಿಗೆ ಸ್ಪಷ್ಟವಾಗಿ ಕೇಳಿಸಲಿಲ್ಲ .”ವಿವೇಕಾನಂದ ಎಂದೇ ?” ಅಪ್ಪನ ಮರುಪ್ರಶ್ನೆ. “ಆನಂದ ಗೀನಂದ ಏನೂ ಬೇಡ .ವಿವೇಕ ಇದ್ದರೆ ಆನಂದ ತಾನಾಗಿಯೇ ಬರುತ್ತದೆ.ಬರೇ  ‘ವಿವೇಕ’ ಸಾಕು.”  ಈ ಪ್ರಸಂಗವನ್ನು ಅಪ್ಪ ಅನೇಕ ಬಾರಿ ನನ್ನಲ್ಲಿ ಹೇಳಿದ್ದರು.ಒಂದು ಬಾರಿ ಕಾರಂತರು ಮಂಗಳೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಬಂದಾಗ ಸ್ವಾಗತ ಭಾಷಣ ಮಾಡುತ್ತಾ ಈ ಪ್ರಸಂಗವನ್ನು ನಾನು  ಉಲ್ಲೇಖಮಾಡಿದ್ದೆ.ಕಾರಂತರು  ಹೊಟ್ಟೆ ತುಂಬಾ ನಕ್ಕಿದ್ದರು..ಈಗಾಗಲೇ ಇದನ್ನು ಬೇರೊಂದು ಕಡೆ ಲೇಖನದಲ್ಲಿ  ದಾಖಲೆ ಮಾಡಿದ್ದೇನೆ.ಹೀಗೆ ಪ್ರಯತ್ನ ಇಲ್ಲದೆಯೇ ಕಾರಂತರಿಂದ ನಾನು ‘ಹೆಸರು’ ಪಡೆದದ್ದು ಸರಿಯಾಗಿ ಅರುವತ್ತೈದು ವರ್ಷಗಳ ಹಿಂದಿನ ಕತೆ.

ನಮ್ಮ ಅಗ್ರಾಳದ ಮನೆಯ ಹೆಸರು ‘ಜೀವನಕುಟಿ’ .ಜೀವನಕ್ಕನ ಹೆಸರಿನ , ಮುಳಿಹುಲ್ಲು ಹೊದಿಸಿದ ಒಂದು  ಗುಡಿಸಲು.ಅದರ ಪಕ್ಕದಲ್ಲೇ ಅಪ್ಪ ಅವರ ಓದುಬರಹಕ್ಕೆಂದು ಒಂದು ಕೊಟ್ಯ (ಕೊಟ್ಟಿಗೆ ) ಕಟ್ಟಿಸಿದ್ದರು.ಅದರ ಹೆಸರು ‘ಉದ್ಯೋಗ ಮಂದಿರ ‘. ಅದರಲ್ಲಿ ಊರಿನ ಮಕ್ಕಳನ್ನೆಲ್ಲ ಕೂಡಿಹಾಕಿ ನಾಟಕ,ಹಾಡು,ಕುಣಿತ ಇತ್ಯಾದಿ ಚಟುವಟಿಕೆಗಳನ್ನು ಅಪ್ಪ ಮತ್ತು ಅಮ್ಮ ನಡೆಸುತ್ತಿದ್ದರು.ಅಮ್ಮ ತುಂಬಾ ಚೆನ್ನಾಗಿ ಹಾಡುತ್ತಿದ್ದರು.ಕುಮಾರವ್ಯಾಸ ಭಾರತ ಮತ್ತು ಜೈಮಿನಿ ಭಾರತದ ಸಂಧಿಗಳನ್ನು ಗ್ರಂಥಗಳನ್ನು ನೋಡದೆಯೇ ಪರಂಪರೆಯ  ಧಾಟಿಯಲ್ಲಿ ಹಾಡುತ್ತಿದ್ದರು.ಹಾಗಾಗಿ ಮಕ್ಕಳ ವಾರ್ಷಿಕ ಕಾರ್ಯಕ್ರಮ ನಮ್ಮ ಮನೆಯ ಅಂಗಳದಲ್ಲಿ ಸಂಭ್ರಮದಿಂದ  ನಡೆಯುತ್ತಿತ್ತು.ಲೀಲಾ ಕಾರಂತರು ಕೆಲವು  ಬಾರಿ ಈ ಕಾರ್ಯಕ್ರಮಕ್ಕಾಗಿ ನಮ್ಮ ಅಗ್ರಾಳ ಮನೆಗೆ ಬಂದು ಅಮ್ಮನ ಜೊತೆಗೆ ಇದ್ದು ,ಮಕ್ಕಳ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡುತ್ತಿದ್ದರು.ಲೀಲಾ ಕಾರಂತರಿಂದ ಕಲಿತು ಅಮ್ಮ ಅದ್ಭುತವಾಗಿ ಹಾಡುತ್ತಿದ್ದದ್ದು  ಕಾರಂತರ ಗೀತ ನಾಟಕಗಳ ಗೀತಗಳನ್ನು.ಕಿಸಾ ಗೋತಮಿ,ಸೋಮಿಯ ಸೌಭಾಗ್ಯ,ಯಾರೋ ಅಂದರು,ಬುದ್ಧೋದಯ -ಇವೆಲ್ಲಾ ನಾನು ಕೇಳಿದ್ದು ನನ್ನ ಬಾಲ್ಯದ ಆರಂಭದ ದಿನಗಳಲ್ಲಿ ನಮ್ಮ ಮನೆಯ ಅಂಗಳದಲ್ಲಿ.

ಅಪ್ಪ ಮತ್ತು ಅಮ್ಮನ ಕಾರಣವಾಗಿ  ನಮಗೆ ಮಕ್ಕಳಿಗೆ ಕಾರಂತ  ಕುಟುಂಬದ ಸಂಪರ್ಕ ದೊರಕಿತ್ತು.ಇದರ ಹೆಚ್ಚಿನ ಪ್ರಯೋಜನ ಸಿಕ್ಕಿದ್ದು ನನ್ನ ದೊಡ್ಡ ಅಕ್ಕ ಜೀವನಕ್ಕ ನಿಗೆ.ಕಾರಂತರ ದೊಡ್ಡ ಮಗಳು ಮಾಳವಿಕಾ ಮತ್ತು ಜೀವನಕ್ಕ ಒಂದೇ ವಯಸ್ಸಿನವರು.ಹಾಗಾಗಿ ಅವರು ನಮ್ಮ ಮನೆಗೆ ಬಂದುಹೋಗುತ್ತ ಬಹಳ ಆಪ್ತ ಸ್ನೇಹಿತರಾದರು.ಮಾಳವಿಕಾ ನಮ್ಮ ಅಗ್ರಾಳ ಮನೆಯಲ್ಲಿ ಬಂದು ಕೆಲವು ದಿನ  ಇದ್ದು ಜೀವನಕ್ಕನ ಜೊತೆಗೆ ಗುಡ್ಡ ತೋಟ ಸುತ್ತಿದ್ದು,ಬಗೆ ಬಗೆಯ ಹಣ್ಣು ಕಾಯಿ ತಿಂದದ್ದು ,ನಮ್ಮ ತೋಟದ ಕೆರೆಯಲ್ಲಿ ಈಜಿದ್ದು ಎಲ್ಲವನ್ನೂ ಅಕ್ಕ ಹೇಳುತ್ತಿರುತ್ತಾರೆ.ಒಮ್ಮೆ ಮಾಳವಿಕಾ ಜೊತೆಗೆ ಕಾರಂತರ ಉಳಿದ ಇಬ್ಬರು ಮಕ್ಕಳು ಉಲ್ಲಾಸ ಮತ್ತು ಕ್ಷಮಾ ಬಂದು ನಮ್ಮಲ್ಲಿ ಇದ್ದದ್ದು ,ಅಕ್ಕ ಮತ್ತು ಮಾಳವಿಕಾ ಕೆರೆಯಲ್ಲಿ ಈಜುತ್ತಿದ್ದಾಗ ಚಿಕ್ಕ ಹುಡುಗ ಉಲ್ಲಾಸ್  ಕೂಡಾ ಕೆರೆಗೆ ಹಾರಿದ್ದು,ಇವರಿಬ್ಬರೂ ಅವನನ್ನು  ಮೇಲಕ್ಕೆ ಎತ್ತಿದ್ದು ,ಅದನ್ನು ಅಮ್ಮ ಮತ್ತು ಲೀಲಾ  ಕಾರಂತರಿಗೆ  ಹೇಳಲು ಹೆದರಿ ,ಅಡಗಿಕೊಂಡು ಮನೆಯಲ್ಲಿ ಅವಿತುಕೊಂಡದ್ದು  -ಇಂತಹ ಅನೇಕ  ಸ್ವಾರಸ್ಯ ಕತೆಗಳು ಅಕ್ಕನ ನೆನಪಲ್ಲಿ ಈಗಲೂ ಇವೆ.ನಾನು ಆ ಕಾಲದಲ್ಲಿ ಲೀಲಾ ಕಾರಂತರನ್ನು ಕಂಡದ್ದು ,ನನ್ನನ್ನು  ಮಗನಂತೆ ಅವರು  ನೋಡಿಕೊಳ್ಳುತ್ತಿದ್ದ ಮಸುಕು ನೆನಪು ಮಾತ್ರ ನನ್ನಲ್ಲಿ  ಈಗ ಉಳಿದಿರುವುದು.ನನ್ನ ತಮ್ಮನಿಗೆ ‘ಉಲ್ಲಾಸ ‘ಎಂದು ಹೆಸರು ಇಟ್ಟದ್ದು ಕಾರಂತರ ಮಗನ ಹೆಸರಿನ ಪ್ರೇರಣೆಯಿಂದ.ನನ್ನ ತಮ್ಮ ಉಲ್ಲಾಸ್ ,ಕಾರಂತರ ಮಗ ಉಲ್ಲಾಸ್ ಗಿಂತ ಒಂದು ವರ್ಷ ಚಿಕ್ಕವನು.

ಪುತ್ತೂರಿನ ಬಾಲವನದಲ್ಲಿ  ಇದ್ದ ಕಾರಂತರ  ಮನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಹೊರಗಿನ ಸಾಹಿತಿಗಳು ಬಂದು ಅನೇಕ ದಿನ ಅಲ್ಲಿ ಇದ್ದಾಗ ಅಪ್ಪನಿಗೆ ಅಲ್ಲಿಗೆ ಬರಲು ಕರೆ ಬರುತ್ತಿತ್ತು.ಅಪ್ಪ ,ಕೆಲವೊಮ್ಮೆ ಅಮ್ಮ ಕೂಡಾ ಬಾಲವನಕ್ಕೆ ಹೋಗಿ ಅಲ್ಲಿ ಕೆಲವು ದಿನ ಇದ್ದು ಬರುತ್ತಿದ್ದರು.ಮನೆಗೆ ಬಂದ ಬಳಿಕ ಅಲ್ಲಿನ ಅನುಭವಗಳನ್ನು ನಮಗೆ  ಮಕ್ಕಳಿಗೆ ಹೇಳುತ್ತಿದ್ದರು.ನಮಗೆ ಅದೊಂದು ರೀತಿಯ ಶಿಕ್ಷಣ ಇದ್ದಹಾಗೆ.ಕಾರಂತರ  ಮನಗೆ ಆಗ ಬರುತ್ತಿದ್ದ ಅನೇಕ ಸಾಹಿತಿಗಳಲ್ಲಿ ಕೆಲವರು ಪ್ರಮುಖರು -ವಿ.ಸೀತಾರಾಮಯ್ಯ,ಜಿ.ಪಿ.ರಾಜರತ್ನಂ,ನಾ.ಕಸ್ತೂರಿ.ಈ ಸಾಹಿತಿಗಳೊಡನೆ  ಪಟ್ಟಾಂಗ -ಸುಖಸಂಕಥಾವಿನೋದ -ಕ್ಕಾಗಿ ಅಪ್ಪ ಅಮ್ಮನ ಹಾಗೆ ಪುತ್ತೂರಿನಿಂದ ಕಾರಂತರ ಮೆಚ್ಚುಗೆಯ ಆಪ್ತರನ್ನು ಕರೆಸುತ್ತಿದ್ದರು.ವೀ ಸೀತಾರಾಮಯ್ಯ ಅವರ ‘ವಿಶ್ವಾಸ  ‘ ಕವನ -ಅಪ್ಪನಿಗೆ ಬಹಳ ಇಷ್ಟವಾದದ್ದು  ,ಅದರ ವೈಚಾರಿಕ  ಧಾಟಿಗಾಗಿ :’ ಮಾನವನೆತ್ತರ ಆಗಸದೇರಿಗೆ….’ಅಪ್ಪನಿಗೆ ಹಾಡುವಿಕೆಯ ಕಲೆಗಾರಿಕೆ ಎಂದೂ ಇರಲಿಲ್ಲ.ಆದರೆ ಆತ್ಮತೃಪ್ತಿಗಾಗಿ ಅನೇಕ ಬಾರಿ ಒಬ್ಬರೇ ಇದ್ದಾಗಲೂ ‘ವಿಶ್ವಾಸ’ ಕವನವನ್ನು  ಅವರು ಹಾಡುತ್ತಿದ್ದರು.ಇದು ಕಾರಂತರಿಗೂ  ಬಹಳ ಇಷ್ಟವಾದ ಕವನ ಎಂದು ಅಪ್ಪ ಹೇಳುತ್ತಿದ್ದರು.

ಇಂತಹ ಬಾಲವನ ಭೇಟಿಯ ಬಳಿಕ ಕಾರಂತರ  ಬದುಕಿನ ಆದರ್ಶ ಮತ್ತು ವಾಸ್ತವಗಳ ಸಮೀಕರಣದ ಸಂಗತಿಗಳನ್ನು  ಅಪ್ಪ ಮತ್ತು ಅಮ್ಮ ಮನೆಗೆ ಬಂದ ಮೇಲೆ ನಮಗೆ ವಿವರಿಸುತ್ತಿದ್ದರು.ಅಮ್ಮ ಹೇಳುತ್ತಿದ್ದ ಒಂದು ವಿಷಯ: ಕಾರಂತರು  ವಾರದಲ್ಲಿ , ಆ ಕಾಲಕ್ಕೆ ಭಾನುವಾರ – ಒಂದು ದಿನ ತಾವೇ ಅಡುಗೆ ಮಾಡುತ್ತಿದ್ದರಂತೆ.ಗಾಂಧೀಜಿಯವರ ದೃಷ್ಟಿಯಲ್ಲಿ ಎಲ್ಲರೂ ಮೊದಲು ಕಲಿಯಬೇಕಾದ ಪಾಠಗಳಲ್ಲಿ ಮುಖ್ಯವಾದದ್ದು ಅಡುಗೆಮಾಡುವುದು ಎಂದು ಹೇಳುತ್ತಿದ್ದರಂತೆ.ಗಂಡುಸರು ಅಡುಗೆ ಕಲಿಯಬೇಕು ಎಂದು ಹೇಳುತ್ತಿದ್ದರಂತೆ.( ನನಗೆ ಇದು ಅರ್ಥವಾದದ್ದು ಬಹಳ ತಡವಾಗಿ.ವಿದೇಶಗಳಲ್ಲಿ ಬಹಳ ಕಾಲ ಒಬ್ಬನೇ ಇದ್ದಾಗ, ಅಡುಗೆಯ ಪಾಠಗಳನ್ನು ಮೊದಲೇ ಚೆನ್ನಾಗಿ ಕಲಿತಿದ್ದರೆ ಎಷ್ಟು ಅನುಕೂಲ ಆಗುತ್ತಿತ್ತು ಎಂದು ಈಗ  ಅನ್ನಿಸುತ್ತಿದೆ.ಜರ್ಮನಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ ಸವಾಲಿನದು ನನ್ನ ಅಪಾರ್ಟ್ ಮೆಂಟ್ ನಲ್ಲಿ ನಾನೇ  ಅಡುಗೆ ಮಾಡಿಕೊಳ್ಳುವುದು! )ಹೀಗೆ  ಒಳ್ಳೆಯ ಸಸ್ಯಾಹಾರಿ ಅಡುಗೆಯನ್ನು ಶಿವರಾಮ ಕಾರಂತರು  ಲೀಲಾ ಕಾರಂತರಿಗೆ  ಕಲಿಸಿದ್ದು,ಲೀಲಾ ಕಾರಂತರಿಂದ ಅಮ್ಮ  ಕಲಿತದ್ದು .

ಕಾರಂತರ ಸೂಕ್ಸ್ಮ ದೃಷ್ಟಿಯ ಒಂದು ಪ್ರಸಂಗವನ್ನು  ಅಮ್ಮ ಯಾವಾಗಲೂ ಹೇಳುತ್ತಿದ್ದರು.ಸಾಹಿತಿ ವೀ.ಸೀತಾರಾಮಯ್ಯ ಅವರು ಬಾಲವನಕ್ಕೆ ಬಂದಿದ್ದಾಗ ಅಪ್ಪ ಅಮ್ಮ ಅಲ್ಲಿಗೆ ಹೋಗಿದ್ದರು.ಕಾರಂತರು ,ವೀಸೀ ,ಅಪ್ಪ,ಅಮ್ಮ ಊಟಕ್ಕೆ ಕುಳಿತಿದ್ದರು .ಲೀಲಾ  ಕಾರಂತರು ಬಡಿಸುತ್ತಿದ್ದರು .ಅಮ್ಮ ಊಟದ ಪಂಕ್ತಿಯ ಒಂದು ತುದಿಯಲ್ಲಿ ಕುಳಿತಿದ್ದರು .ಕಾರಂತರು  ತಲೆಬಗ್ಗಿಸಿ ಊಟ ಮಾಡುತ್ತಿದ್ದವರೇ,ಅಮ್ಮನ ಎಲೆಯನ್ನು ತೋರಿಸಿ,’ಲೀಲಾ,ನೋಡು ಆ ಎಲೆಗೆ ಚಟ್ನಿ ಬರಲಿಲ್ಲ ‘ ಎಂದರಂತೆ.ಕಾರಂತರ ಈ  ಸೂಕ್ಷ್ಮ ಅವಲೋಕನ ಮತ್ತು ಗ್ರಹಣ ಶಕ್ತಿಯನ್ನು ಮುಂದೆ ಅನೇಕ ಬಾರಿ ನಾನು ಕಂಡಿದ್ದೇನೆ.ಕಾರ್ಯಕ್ರಮಗಳಲ್ಲಿ ತಲೆ  ಬಗ್ಗಿಸಿ ,ಒಂದು ಕೈಯನ್ನು ತಲೆಗೆ ಅಥವಾ ಗಲ್ಲಕ್ಕೆ ಆನಿಸಿ ಕುಳಿತುಕೊಂಡು,ಬೇರೆಯವರು ಹೇಳುವುದನ್ನು ಆಲಿಸುತ್ತಾ,ಸುತ್ತಲೂ ನಡೆಯುತ್ತಿರುವುದನ್ನು ಅವಲೋಕಿಸುತ್ತ ಗ್ರಹಿಸುತ್ತಾ ಇರುತ್ತಾರೆ.ಮಕ್ಕಳನ್ನು,ನಿಸರ್ಗವನ್ನು ,ಕಲೆಗಳನ್ನು ಸಂವೇದನೆಯ ಭಾಗವಾಗಿ ಕಾರಂತರು ಮಾಡಿಕೊಂಡದ್ದು ಈ ಶಕ್ತಿಯಿಂದಲೇ .

ಕಾರಂತರ ಮಾತಿನ ಮೊನಚು ,ವ್ಯಂಗ್ಯ ,ವಿಡಂಬನೆಯ ಶಕ್ತಿಯ ಅನೇಕ ಪ್ರಸಂಗಗಳನ್ನು ಅಪ್ಪ ನಮಗೆ ಹೇಳುತ್ತಿದ್ದರು.ಅಂತಹ ಒಂದು ಘಟನೆ : ಕಾರಂತರು  ಒಮ್ಮೆ ಅಸ್ಸಾಮಿಗೆ ಪ್ರವಾಸ ಹೋಗಿದ್ದರಂತೆ.ಅಸ್ಸಾಮಿನಲ್ಲಿ  ಆಗ ಲೀಲಾ ಕಾರಂತರ  ಸಹೋದರಿ ವಾಸಿಸುತ್ತಿದ್ದರು.ಕಾರಂತರು  ಅವರನ್ನು ಅಲ್ಲಿ ಕಂಡು ಬಂದರು.ಪುತ್ತೂರಿಗೆ ಹಿಂದಿರುಗಿ ಬಂದಾಗ ,ಬಾಲವನದಲ್ಲಿ ಲೀಲಾ ಕಾರಂತರ ತಾಯಿ ಇದ್ದರು.ಅಸ್ಸಾಮಿನಲ್ಲಿ ಇರುವ ತನ್ನ ಮಗಳು ಹೇಗೆ ಇದ್ದಾಳೆ ಎಂದು ಅವರು ಅಲ್ಲಿಗೆ ಹೋಗಿ ಬಂದ ಕಾರಂತರಲ್ಲಿ  ವಿಚಾರಿಸಿದರು.ತಾಯಿ ತುಳುವಿನವರು.ತುಳು ತಾಯಂದಿರಿಗೆ  ತಮ್ಮ ಹೆಣ್ಣುಮಕ್ಕಳು ಚಂದ ಕಾಣುವುದೆಂದರೆ ‘ದಪ್ಪ’ ಆಗುವುದು, ಮೈತುಂಬ ಮಾಂಸ ತುಂಬಿಕೊಳ್ಳುವುದು.ದಕ್ಷಿಣಕನ್ನಡದ ಕನ್ನಡದಲ್ಲಿ ‘ತೋರ’ ಆಗುವುದು. ಇದಕ್ಕೆ ತುಳುವಿನಲ್ಲಿ ‘ಮಾಸೊ ಬರ್ಪುನೆ ‘( ಮಾಂಸ ಬರುವುದು ) ಎನ್ನುವ ನುಡಿಗಟ್ಟು ಬಳಕೆಯಲ್ಲಿ ಇದೆ.’ಮಾಂಸ ಬರುವುದು’ಎಂದರೆ ‘ತೋರ (ದಪ್ಪ) ಆಗುವುದು ‘.ಲೀಲಾ ಕಾರಂತರ ತಾಯಿ ಕಾರಂತರಲ್ಲಿ ತಮ್ಮ ಅಸ್ಸಾಮಿನ ಮಗಳ ಬಗ್ಗೆ ಕೇಳಿದರು: “ಆಳೆಗ್ ಮಾಸೊ ಬತ್ತುನ್ಡೋ  ?(ಅವಳಿಗೆ ಮಾಂಸ ಬಂದಿದೆಯೋ ?)” ಅದಕ್ಕೆ ಕಾರಂತರ ಉತ್ತರ :”  ಬಂದಿತ್ತು.ಜಿಂಕೆಯದ್ದು”. ಅಸ್ಸಾಂನಲ್ಲಿ ಬೇಟೆಯಾಡಿದ ಜಿಂಕೆಯ ಮಾಂಸವನ್ನು ತಿನ್ನಲು ಮನೆಗೆ  ತರುತ್ತಾರೆ !

ಇದು ೧೯೪೬ರಿನ್ದ ೧೯೫೯ರ ವರೆಗಿನ ನನ್ನ ಮೊದಲ ಜನ್ಮದ ಕೆಲವು ನೆನಪುಗಳು .ಶಿವರಾಮ ಕಾರಂತರು ನಮ್ಮನ್ನು  ಅಗಲಿದ ದಿನ ಇವತ್ತು .ಒಂಬತ್ತು ದಶಂಬರ ೧೯೯೭ರನ್ದು ನಾನು ಇಡೀ ದಿನ ಕೋಟದಲ್ಲಿ ಅದರ ಪರಿಸರದಲ್ಲಿ ಇದ್ದೆ.ಶಾಲೆಯಲ್ಲಿ ಮಲಗಿಸಿದ ಕಾರಂತರು,ಸಾವಿರಾರು ಮಂದಿ ಕಣ್ಣೀರು  ಸುರಿಸುತ್ತಿದ್ದ ದೃಶ್ಯ ,ಮತ್ತೆ ಬೆಂಕಿಯಲ್ಲಿ ಲೀನವಾದ ನೋಟ  -ಎಲ್ಲವೂ ಇವತ್ತು ನನ್ನ ಕಣ್ಣ ಮುಂದೆ ಇವೆ.ಈದಿನ ಮತ್ತೆ ವ್ಯೂತ್ಸ್ ಬುರ್ಗ್ ನಲ್ಲಿ ಹನಿ ಹನಿ ಮಳೆ.ದಟ್ಟವಾದ ಮೋಡಗಳು ಕವಿದಿದೆ.ಇದು ವಿಷಾದವೂ ಹೌದು ,ಶಾಂತಿಯೂ ಹೌದು.

ನಾನು ೧೯೬೦ರಲ್ಲಿ ನಮ್ಮ ಹಳ್ಳಿಯ ಮನೆ ಆಗ್ರಾಳದಿಂದ  ಪುತ್ತೂರಿಗೆ ವಿದ್ಯಾಭ್ಯಾಸಕ್ಕೆ ಬಂದೆ .೧೯೬೦ರಿನ್ದ ೧೯೬೩ರವರೆಗೆ ಪುತ್ತೂರು ಬೋರ್ಡ್ ಹೈಸ್ಕೂಲ್ ನಲ್ಲಿ ವಿದ್ಯಾರ್ಥಿ ಆಗಿದ್ದೆ.೧೯೬೪ರಿನ್ದ ೧೯೬೭ರವರೆಗೆ ಪುತ್ತೂರು ಫಿಲೋಮಿನಾ ಕಾಲೇಜಿನಲ್ಲಿ  ಪಿಯುಸಿ ಮತ್ತು ಬಿ.ಎಸ್ಸಿ .ವಿದ್ಯಾರ್ಥಿಯಾಗಿ ಶಿಕ್ಷಣ ಪಡೆದೆ.೧೯೬೭-೧೯೬೮ ರಲ್ಲಿ ನಾನು ಕಲಿತ ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ  ವಿಜ್ಞಾನ ಮಾಸ್ತರು ಆಗಿ ಪಾಠ ಮಾಡಿದೆ.ಈ ಅವಧಿಯಲ್ಲಿ ಕಾರಂತರನ್ನು ಕಂಡದ್ದು,ಅವರ ಮಾತುಗಳನ್ನು ಕೇಳಿದ್ದು,ಅವರ ಯಕ್ಷ ರಂಗದ ಮೊದಲ ಪ್ರಯೋಗವನ್ನು ಕಂಡದ್ದು  -ನನ್ನ ಎರಡನೆಯ ಜನ್ಮ.

ಮತ್ತೆ ೧೯೬೮ಕ್ಕೆ ಮಂಗಳೂರಿಗೆ ಬಂದ ಮೇಲೆ ,೧೯೭೦ರಲ್ಲಿ ಮಂಗಳೂರಲ್ಲಿ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ  ವಿಭಾಗದಲ್ಲಿ ಅಧ್ಯಾಪಕ ಆಗಿ ಸೇರಿದ ಬಳಿಕ, ೧೯೮೦ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಆದ ಬಳಿಕ ,ಅಲ್ಲಿನ ಕನ್ನಡ ವಿಭಾಗದಲ್ಲಿ ೧೯೮೪ರಿನ್ದ ಮುಖ್ಯಸ್ಥನಾಗಿ ,ಪ್ರಸಾರಾಂಗದ ನಿರ್ದೇಶಕ ಆಗಿ ,ಶಿವರಾಮ ಕಾರಂತ ಪೀಠವನ್ನು ಸ್ಥಾಪಿಸಿ ,ಕಾರಂತರ ಬಿಡಿಬರಹಗಳನ್ನು ಎಂಟು ಸಂಪುಟಗಳಲ್ಲಿ ಪ್ರಕಟಿಸಿ ,ಕನ್ನಡ  ವಿಭಾಗದ ಕರ್ಣಧಾರತ್ವದ ನನ್ನ ಹದಿನೆಂಟು ವರ್ಷಗಳ ಅವಧಿಯಲ್ಲಿ ಸುಮಾರು ಐವತ್ತು ಬಾರಿ ,ಅವರನ್ನು ಕರೆಸಿ ಮಾತನಾಡಿಸಿ ,ಅವರಿಂದ ಅವರ ಗೀತ ನಾಟಕಗಳನ್ನು ಹಾಡಿಸಿ,ಅವರ ಯಕ್ಷರಂಗದ ಪ್ರಾತ್ಯಕ್ಷಿತೆಯ ದಾಖಲಾತಿಗಾಗಿ ಅವರಿಂದ ಕುಣಿಸಿ, ಅವರ ಬದುಕು ಬರಹಗಳಿಂದ ವೈಚಾರಿಕವಾಗಿ ನನ್ನ ಬದುಕನ್ನು ಕಟ್ಟಿಕೊಂಡ ಕೆಲವು ಜನ್ಮಗಳು ಇವೆ.ಅವನ್ನೆಲ್ಲ ಮುಂದೆ ತೋಡಿಕೊಳ್ಳುವ ಬಯಕೆ ಇದೆ.

Read Full Post | Make a Comment ( 10 so far )

ಕನ್ನಡ ಜೈನ ಕವಿಗಳಲ್ಲಿ ಲೌಕಿಕದ ಬಹುರೂಪಗಳು :ಪಂಪನಿಂದ ಜನ್ನನವರೆಗೆ

Posted on ನವೆಂಬರ್ 27, 2011. Filed under: ಕನ್ನಡ ಸಾಹಿತ್ಯ, Jaina literature, Kannada classical poetry | ಟ್ಯಾಗ್ ಗಳು:, , , , , , |

ಈ ಬಾರಿ  ಚಳಿಗಾಲದ ಸೆಮೆಸ್ಟರ್ ನಲ್ಲಿ  ವ್ಯೂರ್ತ್ಸ್ ಬುರ್ಗ್  ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದಲ್ಲಿ ನಾನು ಹೊಸದಾಗಿ ಕಲಿಸುವ ಒಂದು ವಿಷಯ -‘ಕರ್ನಾಟಕದ ಧಾರ್ಮಿಕ ಪರಂಪರೆಗಳು’ .ಜೈನ ಧರ್ಮ ಕರ್ನಾಟಕಕ್ಕೆ ಉತ್ತರಭಾರತದಿಂದ ಬಂದದ್ದು ,ಶ್ರವಣಬೆಳಗೊಳದಲ್ಲಿ ನೆಲೆವೂರಿದ್ದು ,ಅದು ಕರ್ನಾಟಕದಲ್ಲಿ ತಾಳಿದ ಸ್ಥಳೀಯ ಮಾದರಿಗಳ ಬಗ್ಗೆ ಆರಂಭದ ಪಾಠಗಳಲ್ಲಿ ವಿವರಗಳನ್ನು ಕೊಟ್ಟೆ. ಕರ್ನಾಟಕದ ಯಾವುದೇ ಒಂದು ಧಾರ್ಮಿಕ ಪರಂಪರೆಯ ಬಗ್ಗೆ ಚರ್ಚಿಸುವಾಗ ನಮಗೆ ಮುಖ್ಯವಾಗುವುದು ಅದು ಎಲ್ಲಿ ಹುಟ್ಟಿತು ,ಕರ್ನಾಟಕದ ಒಳಗಿನದೇ ಹೊರಗಿನದೇ ಎನ್ನುವುದಲ್ಲ.ಹಾಗೆ ನೋಡಿದರೆ ವೀರಶೈವ ಮತ್ತು ವೈದಿಕದಲ್ಲಿ ದ್ವೈತ ಪಂಥ  ಬಿಟ್ಟರೆ ,ಕರ್ನಾಟಕದ ಉಳಿದ ಎಲ್ಲಾ ಧರ್ಮ ಹಾಗೂ ಸಿದ್ಧಾಂತಗಳು ಹೊರಗಿನಿಂದಲೇ  ಬಂದವು.ಕರ್ನಾಟಕದ್ದೇ ಆದ ಜಾನಪದ ಪರಂಪರೆಯ ಧರ್ಮಗಳು ಸಾಕಷ್ಟು ಇವೆ. ಇವೇ   ಅವುಗಳ ಅರ್ಹತೆಯ ತರತಮಗಳ ಮಾನದಂಡ ಅಲ್ಲ.ಈ ಧರ್ಮಗಳು ,ಪಂಥಗಳು,ತತ್ವಗಳು ಕರ್ನಾಟಕದ ಸನ್ನಿವೇಶದಲ್ಲಿ ಮಾಡಿಕೊಂಡ ಅಳವಡಿಕೆಗಳು ಮತ್ತು ಸ್ವೀಕರಣಗಳು ಯಾವುವು ಹಾಗೂ ಅವು ಇಲ್ಲಿನ ಬದುಕಿನ ಚಿಂತನಾಕ್ರಮಗಳಿಗೆ ತೋರಿಸಿದ ಹೊಸದಾರಿಗಳು ಯಾವುವು ,ಅವುಗಳ ಪರಿಣಾಮ ಜನರ ಬದುಕಿನಲ್ಲಿ ಯಾವ ರೀತಿಗಳಲ್ಲಿ ಆಗಿದೆ -ಇಂತಹ ಪರಿಶೀಲನೆ ಬಹಳ ಮುಖ್ಯ.

ಜೈನ ಧರ್ಮ ಕರ್ನಾಟಕದಲ್ಲಿ ಅನುಸರಿಸಿದ ಅಳವಡಿಕೆಗಳಲ್ಲಿ ರಾಜರ ಪ್ರಭುಗಳ ನೇರ ಮಾರ್ಗದರ್ಶನದಲ್ಲಿ ರಚನೆಯಾದ ಶಿಲ್ಪಕಲೆಯ ನಿರ್ಮಾಣಗಳು ಒಂದು ಬಗೆ.ಶ್ರವಣಬೆಳಗೊಳದಲ್ಲಿ ಸ್ಥಾಪನೆಯಾದ ಗೊಮ್ಮಟನ ಆದರ್ಶ ಮಾದರಿ ಕರ್ನಾಟಕದ ಬೇರೆ ಬೇರೆ ಜೈನ ಕೇಂದ್ರಗಳಲ್ಲಿ ಪುನಾರವರ್ತನೆಗೊಂಡಿತು.ಗಾತ್ರದಲ್ಲಿ ವ್ಯತ್ಯಾಸವೇ ಹೊರತು ಕಲ್ಪನೆ ಆಶಯ ಅದೇನೇ.ಧರ್ಮದ ಆಚರಣೆಯಲ್ಲಿ ಪುನರಾವರ್ತನೆ ಒಂದು ಅನಿವಾರ್ಯ ಪ್ರಕ್ರಿಯೆ.ಆದರೆ ಬದುಕಿನಲ್ಲಿ  ಪುನರಾರ್ವತೆ ಎನ್ನುವುದು ಅದೊಂದು ಉಲ್ಲಾಸದ ಸಂಗತಿ ಅಲ್ಲ.ಬಸದಿಗಳ ರಚನೆಗಳು ಇದೇ ಮಾದರಿಯ ಇನ್ನೊಂದು ನಿರ್ಮಾಣ.ಎಲ್ಲ ಧರ್ಮಗಳೂ ಸ್ಥಾವರ ಮತ್ತು ಜಂಗಮದ ಕಲ್ಪನೆಯನ್ನು ತಮ್ಮದೇ ರೀತಿಯಲ್ಲಿ ಗ್ರಹಿಸುತ್ತಾ ರೂಪಿಸುತ್ತಾ ಬಂದಿವೆ. ಜೈನಧರ್ಮದ ಬಸದಿಗಳು ,ಮಠಗಳು -ಸ್ಥಾವರ ವರ್ಗಕ್ಕೆ ಸೇರುತ್ತವೆ.ಜೈನ ಧರ್ಮದಲ್ಲಿ ಮಠಗಳ ಸ್ಥಾಪನೆ ಬಳಿಕದ ಬೆಳವಣಿಗೆ.ಮೂಡಬಿದಿರೆಯ ಸಾವಿರಕಂಬದ ಬಸದಿ ಇಂತಹ ರಚನೆಗಳು  ಭಿನ್ನತೆಯ ಕಾರಣಕ್ಕಾಗಿ ಗಮನ ಸೆಳೆಯುತ್ತವೆ .

ಕರ್ನಾಟಕದಲ್ಲಿ ಜೈನಧರ್ಮ ನಡೆಸಿದ ಮಹತ್ವದ ಪ್ರಯೋಗ -ಕನ್ನಡದಲ್ಲಿ ಕಾವ್ಯಗಳ ಪುರಾಣಗಳ ರಚನೆ.ಕರ್ನಾಟಕದಲ್ಲಿ ಇವತ್ತು ಜೈನರ ಒಟ್ಟು  ಜನಸಂಖ್ಯೆಯ ಪ್ರಮಾಣ ಶೇಕಡಾ ಒಂದಕ್ಕಿಂತ ಕಡಮೆ ಇರಬಹುದು.ಆದರೆ ಪ್ರಾಚೀನ ಕನ್ನಡ ಸಾಹಿತ್ಯದ ಆರಂಭದಿಂದ ತೊಡಗಿ ನಡುಗನ್ನಡವನ್ನೂ ಸೇರಿಸಿಕೊಂಡರೆ ಅದು ಸಂಖ್ಯೆಯಲ್ಲಿ ಮಾತ್ರ  ಅಲ್ಲ ,ಗುಣಮಟ್ಟದಲ್ಲೂ ಕನ್ನಡ ಸಾಹಿತ್ಯದ ಅರ್ಧಭಾಗವನ್ನು ಗಾಢವಾಗಿ ಆವರಿಸುತ್ತದೆ.ಒಂದು ಅಂದಾಜಿನ ಪ್ರಕಾರ ಸುಮಾರು ೪೫೦ ಜೈನ ಕವಿಗಳು ೫೨೦ ಕ್ಕೂ ಹೆಚ್ಚಿನ ಕನ್ನಡ ಕೃತಿಗಳನ್ನು ರಚಿಸಿದ್ದಾರೆ.ಪುರಾಣ,ಮಹಾಕಾವ್ಯ,ಜನಪದ ಕಥೆ,ಕಾವ್ಯಶಾಸ್ತ್ರ,ಛಂದಸ್ಸು,ವ್ಯಾಕರಣ,ಸೂಪಶಾಸ್ತ್ರ,ಗಣಿತಶಾಸ್ತ್ರ ,ಚಂಪೂ,ಗದ್ಯ,ಸಾಂಗತ್ಯ,ಮುಕ್ತಕ -ಹೀಗೆ ಹಲವು  ಪ್ರಕಾರಗಳಲ್ಲಿ ಹಲವು ಪ್ರಬೇಧಗಳಲ್ಲಿ ಕನ್ನಡ ಜೈನಸಾಹಿತ್ಯದ ಹರಹು ಚಾಚಿಕೊಂಡಿದೆ.

ಕನ್ನಡದ ಮೊದಲ ಕವಿ ,ಎಲ್ಲ ಕಾಲದ ಮಹತ್ವದ ಮಹಾಕವಿ ಪಂಪನು ಕನ್ನಡ ಜೈನಕಾವ್ಯಗಳ ರಚನೆಯ ಒಂದು ವಿಶಿಷ್ಟ ಪರಿಕಲ್ಪನೆಯನ್ನು ಪ್ರಸ್ತಾವಿಸಿದ ಮತ್ತು ಪ್ರಾರಂಭಿಸಿದ.ಅದು ‘ಲೌಕಿಕ ‘ ಮತ್ತು ‘ಆಗಮಿಕ’ ಎಂಬ ಪರಿಕಲ್ಪನೆಗಳ ಮೂಲಕ ಕಾವ್ಯಗಳನ್ನು ನಿರ್ಮಿಸುವುದು ಮತ್ತು ಆ ಮೂಲಕ ಅಂತಹ ಬದುಕಿನ ಪ್ರಭೇದಗಳನ್ನು ಪರಿಕಲ್ಪಿಸಿಕೊಳ್ಳುವುದು. ಪಂಪ ತನ್ನ ‘ವಿಕ್ರಮಾರ್ಜುನ ವಿಜಯ ‘ ಕಾವ್ಯದ ೧೪ನೆಯ ಆಶ್ವಾಸದ ೬೦ನೆಯ ಪದ್ಯದಲ್ಲಿ ಹೇಳಿದ ಮಾತು “ಬೆಳಗುವೆನಿಲ್ಲಿ ಲೌಕಿಕಮನ್ ,ಅಲ್ಲಿ ಜಿನಾಗಮಮಂ ” .ಪಂಪನ ಈ ಮಾತನ್ನು ಕನ್ನಡ ವಿದ್ವತ್ ಲೋಕ ಮತ್ತು ವಿಮರ್ಶಕ ಪ್ರಪಂಚ ,ಕನ್ನಡ ಸಾಹಿತ್ಯ ಚರಿತ್ರೆಯನ್ನು ವ್ಯಾಖ್ಯಾನ ಮಾಡುವುದಕ್ಕೆ ಬಳಸಿಕೊಂಡಿದೆ.ಲೌಕಿಕವನ್ನು ಹೇಳುವುದಕ್ಕೆ ‘ವಿಕ್ರಮಾರ್ಜುನ ವಿಜಯ’ ,ಜಿನಾಗಮವನ್ನು ಹೇಳುವುದಕ್ಕೆ ‘ಆದಿಪುರಾಣ’ ಎನ್ನುವ ಮಾದರಿಯನ್ನು ಪ್ರಾಚೀನ ಜೈನ ಕಾವ್ಯಗಳ ದ್ವಂದ್ವಮಾನ ವಿಭಜನೆಗೆ ಸೂತ್ರವನ್ನಾಗಿ ಇಟ್ಟುಕೊಳ್ಳಲಾಗಿದೆ.ಇದರ ಪರಿಣಾಮವಾಗಿ ಕನ್ನಡ ಪ್ರಾಚೀನ ಕಾವ್ಯಗಳನ್ನು ಲೌಕಿಕ ಮತ್ತು ಆಗಮಿಕ ಎಂದು ಸೀಳಿ ನೋಡುವ ಪ್ರವೃತ್ತಿ ಆರಂಭ ಆಯಿತು.ಈ ರೀತಿಯ ಅನ್ವಯಕ್ಕೆ ಕೂಡಲೇ ಸಿಕ್ಕಿದವರು ಪಂಪನ ಬೆನ್ನಿಗೇ ಬಂದ ಇಬ್ಬರು ಜೈನ ಕವಿಗಳು-ಪೊನ್ನ ( ‘ಭುವನೈಕ  ರಾಮಾಭ್ಯುದಯ ‘ ಮತ್ತು ‘ ಶಾಂತಿಪುರಾಣ’ ) ಮತ್ತು ರನ್ನ ( ‘ಸಾಹಸ ಭೀಮವಿಜಯ’ ಮತ್ತು ‘ಅಜಿತ ತೀರ್ಥಂಕರ ಪುರಾಣ’).

ಆದರೆ ಪಂಪನು ಸಾರಿಕೊಂಡ ಹೇಳಿಕೆಯ ಆಚೆಗೆ ಆತನ ಕಾವ್ಯಗಳನ್ನು ಪರಿಶೀಲಿಸಿದಾಗ ಆತನ ‘ಲೌಕಿಕ’ ಎನ್ನುವ ಪರಿಕಲ್ಪನೆಗೆ ಬೇರೆ ಅರ್ಥಗಳೂ ಹೊಳೆಯುತ್ತವೆ. ವೈದಿಕ ಧರ್ಮವನ್ನು ಬಿಟ್ಟು ಜೈನಧರ್ಮವನ್ನು ಸ್ವೀಕರಿಸಿದ ತನ್ನ ತಂದೆ ಭೀಮಪ್ಪಯ್ಯನಿಂದ ಜೈನ ಸಂಸ್ಕಾರ ಪಡೆದ ಪಂಪ ‘ಆದಿಪುರಾಣ’ ವನ್ನು ‘ಆಗಮಿಕ ಕಾವ್ಯ’ವನ್ನಾಗಿ ರಚಿಸಿದ. ಜೈನಧರ್ಮಕ್ಕೆ ಹೊರತಾದ ರಾಜರುಗಳ ಚರಿತೆಯ ಭಾರತದ ಕತೆಯ ಕಾವ್ಯ ಅವನ ಪಾಲಿಗೆ ‘ಲೌಕಿಕ ‘ ಆಯಿತು. ಅದು ಜಿನಾಗಮ ಅಲ್ಲದ ಕೃತಿ ಎನ್ನುವುದು ‘ಲೌಕಿಕ’ ದ  ಒಂದು ಅರ್ಥ. ಇದರ ಜೊತೆಗೆ, ‘ವಿಕ್ರಮಾರ್ಜುನ ವಿಜಯ’ ಕಾವ್ಯವು  ಒಬ್ಬ ಲೌಕಿಕ ರಾಜನ ಆಶ್ರಯದಲ್ಲಿ ಬರೆದದ್ದು.ತನ್ನ ಆಶ್ರಯದಾತ ಅರಿಕೇಸರಿಯನ್ನು ಭಾರತದ ಕತೆಯ ಅರ್ಜುನನೊಡನೆ ಸಮೀಕರಿಸಿ ಬರೆದ ‘ಸಮಸ್ತ ಭಾರತ’ ಅದು.ತಾನು ದಿನನಿತ್ಯ ಕಾಣಬಹುದಾದ ,ಮಾತಾಡಿಸಬಹುದಾದ, ಉಡುಗೊರೆ ಉಂಬಳಿ ಪ್ರಶಸ್ತಿ ಪಡೆಯಬಹುದಾದ ,ಜೈನನಲ್ಲದ ಒಬ್ಬ ರಾಜನು ಕವಿ ಪಂಪನ ಪಾಲಿಗೆ ಖಂಡಿತ ಲೌಕಿಕದವನು. ಅವನ ಪ್ರೀತ್ಯರ್ಥವಾಗಿ, ನೆನಪಿಗಾಗಿ ಒಂದು ಕಾವ್ಯವನ್ನು ಬರೆಯುವುದು ಕೂಡಾ ಲೌಕಿಕದ ಒಂದು ಮಾದರಿ.

ಲೌಕಿಕದ ಮೂರನೆಯ ಮಾದರಿಯೊಂದು ಬಹಳ ಮುಖ್ಯ ಎಂದು ನನಗೆ ಅನ್ನಿಸುತ್ತದೆ.ಪಂಪನ ‘ಆದಿಪುರಾಣ’ವು  ಜೈನಧರ್ಮದ ಎಲ್ಲ ಅಪೇಕ್ಷೆಗಳನ್ನು ಈಡೇರಿಸುವ ಕಾವ್ಯ.ಅದರ ಒಳಗಡೆ ಚಕ್ರವರ್ತಿಗಳು  ಬರುತ್ತಾರೆ ,ಸಾಮಾನ್ಯ ಮನುಷ್ಯರೂ ಬರುತ್ತಾರೆ,ಯುದ್ಧಗಳು ನಡೆಯುತ್ತವೆ ,ಸಂಘರ್ಷಗಳು ಸಂಭವಿಸುತ್ತವೆ.ಕಾಮ,ಭೋಗ ,ಆಸೆ,ಲೋಭ,ವಂಚನೆ ,ಅಸೂಯೆ -ಇವು ಎಲ್ಲವೂ ಅಲ್ಲಿ ಇರುತ್ತವೆ.ಅಲ್ಲಿನ ಪಾತ್ರಗಳ ವ್ಯವಹಾರಗಳು ಲೌಕಿಕವಾಗಿರುತ್ತವೆ.ಆದರೆ ಜೈನ ಧರ್ಮದ ಚೌಕಟ್ಟಿನ ಒಳಗೆ ನೋಡುವವರು ಅದನ್ನು ಪುರಾಣ ಎಂದು ನೋಡಿದರೇ ಹೊರತು ,ಕಾವ್ಯ ಎಂದು ಪರಿಗಣಿಸಲಿಲ್ಲ.ಹಾಗಾಗಿ ಅಲ್ಲಿ ಲೌಕಿಕವನ್ನು ಕಾಣಲು ಆಗ ಅವಕಾಶ ದೊರೆಯಲಿಲ್ಲ. ನಮ್ಮ ವಿಮರ್ಶೆ ಕೂಡಾ  ಆದಿಪುರಾಣ ,ಶಾಂತಿಪುರಾಣ ,ಅಜಿತಪುರಾಣಗಳನ್ನು ಜಿನಾಗಮದ ಕಾವ್ಯಗಳೆಂದೇ ಪರಿಭಾವಿಸಿದವು. ಈ ಎಲ್ಲ ಜೈನಕವಿಗಳು ತಮ್ಮ ಹುಟ್ಟುಧರ್ಮದ ಹೊರಗಡೆ ಲೌಕಿಕ ಬದುಕಿನಲ್ಲಿ ಕ್ರಿಯಾಶೀಲರಾಗಿ  ಜೀವಿಸಿದವರು.ಪಂಪ ಕವಿ ‘ಕದಳೀಗರ್ಭ  ಶ್ಯಾಮಂ ,ಮೃದುಕುಟಿಲ ಶಿರೋರುಹಂ ,ಸರೋರುಹ ವದನಂ ,ಮೃಧುಮಧ್ಯಮ ತನು, ಹಿತಮಿತ ಮೃದು ವಚನಂ ,ಲಲಿತ ಮಧುರ ಸುಂದರ ವೇಷಂ ‘ ಎಂದು ತನ್ನ  ದೇಹದ ಸೌಂದರ್ಯವನ್ನು ಬಣ್ಣಿಸಿಕೊಂಡದ್ದು ,’ವನಿತಾ ಕಟಾಕ್ಷ ಕುವಲಯ ವನಚಂದ್ರಂ ‘ಎಂದು ಆರಂಭಿಸಿ ಕೇರಳ ಮಲಯ ಆಂಧ್ರದ ಹೆಣ್ಣುಗಳ ಸಂಬಂಧವನ್ನು ಹೆಮ್ಮೆಯಿಂದ ಹೇಳಿಕೊಂಡದ್ದು -ಆಗಮಿಕ ಕಾವ್ಯ ‘ಆದಿಪುರಾಣ’ದಲ್ಲಿ, ಲೌಕಿಕ ಕಾವ್ಯ ‘ವಿಕ್ರಮಾರ್ಜುನವಿಜಯ’ದಲ್ಲಿ ಅಲ್ಲ.ಲೌಕಿಕದಲ್ಲಿ ಕ್ರಿಯಾಶೀಲವಾಗಿ ಇದ್ದುಕೊಂಡೇ ಲೌಕಿಕದ ಒಳಗೆಯೇ ಆಗಮಿಕದ ಜಗತ್ತೊಂದನ್ನು ಕಟ್ಟುವ ಮಾದರಿ ಇದು.

ಪಂಪ ತನ್ನ ಲೌಕಿಕ ಕಾವ್ಯ ‘ವಿಕ್ರಮಾರ್ಜುನವಿಜಯ’ದಲ್ಲಿ ಲೌಕಿಕವನ್ನು ಮೀರುವ ಆಶಯವನ್ನು ತರುತ್ತಾನೆ.ಈ ದೃಷ್ಟಿಯಿಂದ ಆ ಕಾವ್ಯದ ೧೩ನೆಯ ಆಶ್ವಾಸದ ೬೧ನೆಯ ಪದ್ಯ ಮುಖ್ಯವಾಗುತ್ತದೆ.ದುರ್ಯೋಧನನು ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ತನ್ನ ಆಪ್ತ ಗೆಳೆಯ ಕರ್ಣನ ಕಳೇವರವನ್ನು ನೋಡಿ ತೀವ್ರ ಶೋಕವನ್ನು ಪ್ರಕಟಿಸುತ್ತಾ  ಆತನಿಗೆ ಯೋಗ್ಯವಾದ ಸಂಸ್ಕಾರವನ್ನು ತನಗೆ ಮಾಡಲಾಗಲಿಲ್ಲ ಎಂದು ಪ್ರಲಾಪಿಸಿದಾಗ ಆತನಿಗೆ ಸಂಜಯ ಹೇಳುವ ಮಾತು : ” ಕೊಟ್ಟೈ ಕಿರ್ಚನ್ ಉದಗ್ರ ಶೋಕ ಶಿಖಿಯಿಂ ,ಕಣ್ಣೀರ್ಗಳಿಂದ ಎಯ್ದೆ ನೀರ್ಗೊಟ್ಟೆ ಸೂರ್ಯಸುತಂಗೆ , ಲೌಕಿಕಮನ್ ಏನ್ ಇಂ  ದಾ0ಟಿದೈ ” . ‘ ದುರ್ಯೋಧನ , ನೀನು ಲೌಕಿಕವನ್ನು ಮೀರಿದೆ.’ ಲೌಕಿಕವನ್ನು ಮೀರುವುದೆಂದರೆ- ‘ ಸಾಮಾನ್ಯ ಭಾವಾತಿರೇಕದ ಜನರಂತೆ ವರ್ತಿಸದೆ  ,ಅದಕ್ಕೆ ಅತೀತವಾಗಿ ನಮ್ಮ ಭಾವನೆಗಳನ್ನು ನಿಯಂತ್ರಿಸಿಕೊಂಡು ವರ್ತಿಸುವುದು. ಭಾವನೆಗಳ ಅನಿಯಂತ್ರಿತ  ಸ್ಫೋಟದ ಬದಲು ಸಂಯಮದಿಂದ ನಡೆದುಕೊಳ್ಳುವುದು.’ ಇಂತಹ ಪ್ರವೃತ್ತಿಗಳನ್ನೇ ‘ಅಲೌಕಿಕ’ ಎಂದು ಹೇಳುವುದಾದರೆ ,ಇವು ನಮ್ಮ ಲೌಕಿಕದ ಒಳಗಡೆಯೇ ನಿರಂತರ ಸಂಭವಿಸಬೇಕಾದವು.

ಪಂಪನಿಂದ ಮೊದಲಾದ ತೋರಿಕೆಯ ಲೌಕಿಕ- ಆಗಮಿಕ ವಿಭಜನೆಯ ಮಾದರಿಯನ್ನು ಮೊದಲು ಒಡೆದವನು ಜೈನ ಕವಿ ನಾಗಚಂದ್ರ.ಆತ ‘ಮಲ್ಲಿನಾಥ ಪುರಾಣ ‘ ಮತ್ತು ‘ರಾಮಚಂದ್ರ ಚರಿತ ಪುರಾಣ’ ಎಂಬ ಎರಡು ಕಾವ್ಯಗಳನ್ನು ರಚಿಸಿದ .ಆತನ ‘ರಾಮಚಂದ್ರ ಚರಿತ ಪುರಾಣ ‘( ಪಂಪ ರಾಮಾಯಣ ) – ಜೈನ ಪರಂಪರೆಯ ಒಂದು ರಾಮಾಯಣ.ಅದು ಆಗಮಿಕ ಕಾವ್ಯಗಳ ಮಾದರಿಯ ‘ಪುರಾಣ’ವಾಗಿಯೂ ಬರಲಿಲ್ಲ, ಲೌಕಿಕ ಕಾವ್ಯಗಳ ಮಾದರಿಯ ‘ವಿಜಯ’ ವಾಗಿಯೂ ಬರಲಿಲ್ಲ.(ವಿಕ್ರಮಾರ್ಜುನ ವಿಜಯ,ಸಾಹಸಭೀಮ ವಿಜಯ ).ಅದು ಒಂದು ‘ಚರಿತ’ ವಾಯಿತು.ಆದರೆ ಅದರ ಜೊತೆಗೆ ‘ಪುರಾಣ’ವನ್ನೂ ಕೈಬಿಡಲಿಲ್ಲ.ಹಾಗಾಗಿ ಅದು ‘ಚರಿತ’ ಮತ್ತು ‘ಪುರಾಣ’ ಎರಡೂ ಆಯಿತು. ಪುರಾಣಗಳನ್ನು ಕಾವ್ಯಗಳಾಗಿ ಓದುವ ದೃಷ್ಟಿಯಿಂದ ಈ ‘ಚರಿತ ಪುರಾಣ’ ಎನ್ನುವ ಕಲ್ಪನೆ ಹೊಸ ನೋಟವನ್ನು ಕೊಡಬಲ್ಲುದು.ಜಿನಸೇನಾಚಾರ್ಯರು ಸಂಸ್ಕೃತದಲ್ಲಿ ಬರೆಯಲು ಉದ್ದೇಶಿಸಿದ್ದು ಪುರಾಣವನ್ನು ಅಲ್ಲ, ತ್ರಿಷಷ್ಠಿ ಶಲಾಕಾ ಪುರುಷರ ಚರಿತ್ರೆಯನ್ನು.ಅದನ್ನು ಅವರು ಪೂರ್ಣಗೊಳಿಸಲಿಲ್ಲ. ಅದನ್ನು ಪೂರ್ತಿ ಮಾಡಿದ್ದು ಹೇಮಚಂದ್ರ. ‘ತ್ರಿಷಷ್ಠಿ ಶಲಾಕಾ ಚರಿತ’ದಲ್ಲಿನ ಪುರುಷರು ತೀರ್ಥಂಕರರಲ್ಲ; ಅದು ಪುರಾಣವೂ ಅಲ್ಲ.ಅದು’ ಚರಿತ’ , ಇತಿವೃತ್ತ.ಈ ಮಾದರಿಯನ್ನು ಮೊದಲು ಆಯ್ಕೆ ಮಾಡಿಕೊಂಡದ್ದು ನಾಗಚಂದ್ರ. ಆತನ ‘ರಾಮಚಂದ್ರ ಚರಿತ ಪುರಾಣ’ವನ್ನು ಸಾಮಾನ್ಯವಾಗಿ ಕನ್ನಡ ಜೈನರಾಮಾಯಣ ಎಂದು ಕರೆಯಲಾಗುತ್ತದೆ. ಸಂಸ್ಕೃತದಲ್ಲಿ ವಿಮಲಸೂರಿ ಮತ್ತು ರವಿಷೇಣ ಅವರ ರಾಮಾಯಣಗಳನ್ನು ಅನುಸರಿಸಿ ನಾಗಚಂದ್ರ ತನ್ನ ರಾಮಾಯಣವನ್ನು ಬರೆದ ಎನ್ನುವುದು ಈ ಅಭಿಪ್ರಾಯಕ್ಕೆ  ಪ್ರಮುಖ ಕಾರಣ.ನಾಗಚಂದ್ರನು ವೈದಿಕ ರಾಮಾಯಣವನ್ನು ಒಡೆದು ಜೈನ ರಾಮಾಯಣ ನಿರ್ಮಾಣಮಾಡಿದ  ಎನ್ನುವ ಅಭಿಪ್ರಾಯಗಳು ಸಾಮಾನ್ಯವಾಗಿ ಪ್ರಚಲಿತವಾಗಿವೆ.ಆದರೆ ಹೀಗೆಯೇ ನೋಡಬೇಕಾಗಿಲ್ಲ.’ಅಳವಡಿಕೆ’ ಅಥವಾ ‘ರೂಪಾಂತರ ‘ದ ಪ್ರಕ್ರಿಯೆಗೆ ತಾತ್ವಿಕ ಕಾರಣಗಳೂ ಇರುತ್ತವೆ.ಕೇವಲ ‘ಮೂಲ ರೂಪ’ ಒಂದು ಇರುತ್ತದೆ ,ಬಳಿಕ ಬಂದವು ಎಲ್ಲವೂ ಅದರ ‘ಭಂಜನ’ ಗಳು ಎಂದು ನೋಡುತ್ತಾ ಹೋದರೆ ,ಬದುಕಿನ ಆಲೋಚನಾ ವಿನ್ಯಾಸಗಳೇ ಬೆಳೆಯುತ್ತಿರಲಿಲ್ಲ.ನಾಗಚಂದ್ರ ಕನ್ನಡಕ್ಕೆ ಹೊಸ ರಾಮಾಯಣ ವೊಂದನ್ನು ಕೊಟ್ಟ.ಅದನ್ನು ಒಂದು ಅರ್ಥದಲ್ಲಿ ಲೌಕಿಕ ರಾಮಾಯಣವಾಗಿಯೂ ನೋಡಬಹುದು, ಜೈನ ಮತ್ತು ವೈದಿಕ  ಧರ್ಮಗಳ ಸ್ಥಾವರ ಚೌಕಟ್ಟುಗಳನ್ನು ಕಳಚಿದರೆ.

ಶಾಂತಿನಾಥನ ‘ಸುಕುಮಾರ ಚರಿತೆ’  -ಜೈನ ಕಥಾ ಪರಂಪರೆಯನ್ನು ಇಟ್ಟುಕೊಂಡು , ತೀರ್ಥಂಕರರ ಚರಿತೆಗೆ ಪ್ರತಿಯಾಗಿ ಬಂದ  ಮೊದಲ ಕೃತಿ.’ವೊಡ್ದಾರಾಧನೆ  ಕಥಾಕೋಶದ ಬಳಿಕ , ಶಾಂತಿನಾಥನು  ಕತೆಗಳ ಮಾದರಿಯಲ್ಲಿ ತೀರ್ಥಂಕರರ  ಬದಲು ಚಕ್ರವರ್ತಿಗಳ ಕತೆಯನ್ನು ಚರಿತ ಕಾವ್ಯವನ್ನಾಗಿ ನಿರ್ಮಿಸಿ ,ಜೈನ ಪುರಾಣಗಳ ಸ್ಥಾನದಲ್ಲಿ  ಲೌಕಿಕ ಕಾವ್ಯವನ್ನು ಸ್ಥಾಪಿಸಿದ.ಇದನ್ನು ಅದ್ಭುತವಾಗಿ ಬೆಳೆಸಿ ,ಲೌಕಿಕ -ಆಗಮಿಕ ಜೋಡಣೆಗೆ ಹೊಸ ರೂಪ ಮತ್ತು ಅರ್ಥವನ್ನು ಕೊಟ್ಟವನು  ಕವಿ ಜನ್ನ.

ಜನ್ನನ ಎರಡು ಜನಪ್ರಿಯ ಕಾವ್ಯಗಳು :ಅನಂತನಾಥ ಪುರಾಣ ಮತ್ತು ಯಶೋಧರ ಚರಿತ. ಹೆಸರೇ ಹೇಳುವಂತೆ ‘ಅನಂತನಾಥ ಪುರಾಣ ‘ ಒಂದು ಪುರಾಣ ಕಾವ್ಯ ; ಸರಳ ಮಾದರಿಯಲ್ಲಿ ಆಗಮಿಕ ಕೃತಿ. ಈಗ ‘ಯಶೋಧರ ಚರಿತ’ ವನ್ನು ಏನೆಂದು ಕರೆಯಬೇಕು ,ಹೇಗೆ ಪರಿಭಾವಿಸಬೇಕು ಎನ್ನುವ ಪ್ರಶ್ನೆ ಎದುರಾಗುತ್ತದೆ.ಅವನು ಹೊಯ್ಸಳ ವೀರ ಬಲ್ಲಾಳ ಮತ್ತು ಅವನ ಮಗ ನರಸಿಂಹ ಬಲ್ಲಾಳನ ಆಸ್ಥಾನದಲ್ಲಿ ಕವಿಯಾಗಿದ್ದ ಎಂದು ಉಲ್ಲೇಖ ಇದೆ.ಆದರೆ ಪಂಪ ರನ್ನರಂತೆ ಆತ ತನ್ನ ಆಶ್ರಯದಾತರ ನೆನಪಿನಲ್ಲಿ ಲೌಕಿಕ ಕಾವ್ಯ ಬರೆಯಲಿಲ್ಲ. ‘ಯಶೋಧರ ಚರಿತೆ’ಗೆ ಹಿನ್ನೆಲೆಯಾಗಿ ಮುಖ್ಯವಾಗಿ ಎರಡು ಧಾರೆಗಳಿವೆ.ಒಂದು-ಜನಪದ ಕತೆಗಳಿಂದ ಬಂದು ,ಆ ಮೇಲೆ ಒಂದು ಪ್ರಣಯಕತೆಯಾಗಿ ಬೆಳೆದದ್ದು.ಹೆಣ್ಣಿನ ಪ್ರೀತಿ ಚಂಚಲ ಎಂಬ ಗಂಡಿನ ಮನೋಧರ್ಮವನ್ನು ಬಿಂಬಿಸುವ ಮೌಖಿಕ ಪರಂಪರೆಯ ಕತೆಗಳ ಮಾದರಿ.ಇನ್ನೊಂದು -ಇಂತಹ ಜನಪದ ಕತೆಗಳ ಮೂಲವನ್ನು ಇಟ್ಟುಕೊಂಡು ಲಿಖಿತ ಪರಂಪರೆಯಲ್ಲಿ ಬಂದ ಕಥಾನಕಗಳು.ಹರಿಭದ್ರಸೂರಿಯ ‘ಸಮರಾಯಿಚ್ಚ ಕಹಾ ‘, ಹರಿಷೇಣನ ‘ಬೃಹತ್ಕಥಾ ಕೋಶ’ ,ಸೋಮದೇವನ ‘ಯಶಸ್ತಿಲಕ  ಚಂಪು’ ,ಪುಷ್ಪದಂತನ ‘ಜಸಹರ ಚರಿಉ ‘ ,ವಾದಿರಾಜನ ‘ಯಶೋಧರ ಚರಿತ’ -ಇವು ಜನ್ನನ ಪೂರ್ವದ ಕೃತಿಗಳು.

‘ಯಶೋಧರ ಚರಿತ’ ದಲ್ಲಿ ಜೈನಧರ್ಮದ ಆಶಯವನ್ನು  ಪೂರ್ವದ ಎಲ್ಲ ಕವಿಗಳಂತೆ ಜನ್ನನೂ ತಂದಿದ್ದಾನೆ.ಅದು ಹಿಂಸೆಯಿಂದ ಅಹಿಂಸಾ ಮಾರ್ಗದ ಕಡೆಗೆ ,ಭೋಗದಿಂದ ವೈರಾಗ್ಯದ ಕಡೆಗೆ ಬರುವ ಧಾರ್ಮಿಕ ತಿರುವು.ಕವಿಯೂ ತನ್ನ ಕಾವ್ಯದ ‘ಅವತಾರ’ಗಳ ಕೊನೆಯಲ್ಲಿ ಇದನ್ನು ನೇರವಾಗಿ ಸಾರಿಕೊಂಡಿದ್ದಾನೆ :” ಅಭಯರುಚಿ ಕುಮಾರಂ ಮಾರಿದತ್ತಂಗೆ ಹಿಂಸಾ ರಭಸಮತಿಗೆ ಸಯ್ಪಂ ಪೇಳ್ದು ಧರ್ಮಕ್ಕೆ ತಂದ ಈ ಶುಭಕಥನಂ ” . ಜನ್ನನ ಕಾವ್ಯದ ಇನ್ನೊಂದು ಆಕರ -ಮೌಖಿಕ ಪರಂಪರೆಯಲ್ಲಿ ಪ್ರಚಲಿತವಾಗಿದ್ದು ಮುಂದೆ ಲಿಖಿತ ರೂಪಕ್ಕೆ ಬಂದ ‘ಜೀವದಯಾಷ್ಟಮಿಯ ನೋಂಪಿಯ ಕತೆ.’ ಇಂತಹ ನೋಂಪಿಯ  ಕತೆಗಳನ್ನು ಹೇಳಿಸುವವರೆಲ್ಲ ವೈರಾಗ್ಯಪರರಲ್ಲ, ಲೌಕಿಕರೇ .

ಈ ಕಾವ್ಯದ ಕವಚವನ್ನು ಒಡೆದು  ಒಳಗಿನ ತಿರುಳನ್ನು ನೋಡಿದರೆ ,ಇಲ್ಲಿ ಕಾಣುವುದು ಹಿಂಸೆ ಮತ್ತು ಕಾಮ.ಮಾರಿಗುಡಿಯ ವರ್ಣನೆ ,ಪ್ರಾಣಿಬಲಿ,ಮೂಕಜೀವಿಗಳ ಆಕ್ರಂದನ ,ಆತ್ಮಬಲಿಯ ಪ್ರಕಾರಗಳು -ಒಂದು ಕಡೆ.ಗಂಡು-ಹೆಣ್ಣಿನ ಸಂಬಂಧ ,ಅದು ತಾಳುವ ಉತ್ಕಟತೆಯ ರೂಪಗಳು -ಇನ್ನೊದು ಕಡೆ.ಯಶೋಧರ  -ಅಮೃತಮತಿಯರ  ಸಮಾಗಮ ಮತ್ತು ಅಷ್ಟಾವಂಕ -ಅಮೃತಮತಿಯರ  ಸಮಾಗಮದ ಎರಡು ಮಾದರಿಗಳು ಇಲ್ಲಿ ಮುಖಾಮುಖಿ ಆಗುತ್ತವೆ.ದಾಂಪತ್ಯದ ಒಳಗಿನ ಮತ್ತು ಹೊರಗಿನ ಗಂಡು ಹೆಣ್ಣು ಸಂಬಂಧಗಳು ಲೌಕಿಕ ಬದುಕಿನ ಮುಖ್ಯ ಸಂಗತಿಗಳು.ಇಲ್ಲಿ ಹಿಂಸೆ ಮತ್ತು ಭೋಗ -ಪ್ರತ್ಯೇಕವಾಗಿ ಉಳಿಯುವುದಿಲ್ಲ್ಲ.ಜನ್ನ ‘ಅನುಭವ ಮುಕುರ’ಎಂಬ ಕಾಮಶಾಸ್ತ್ರ ಗ್ರಂಥವನ್ನೂ ರಚಿಸಿದ್ದಾನೆ.ಹಾಗಾಗಿಯೇ ಕಾಮದ ಅಭಿವ್ಯಕ್ತಿಗಳನ್ನು ಕಥನದ ಒಳಗೆ ತಂದು ಚರ್ಚಿಸುವುದು ಅವನಿಗೆ ಲೌಕಿಕದ ಗ್ರಹಿಕೆಗೆ ಅಗತ್ಯವಾಗಿತ್ತು.’ಹಿಂಸಾರತಿ’ ಎನ್ನುವುದು ಲೈಂಗಿಕ ನೆಲೆಯಲ್ಲಿ ,ಪ್ರಾಣಿಬಲಿಯ ಸನ್ನಿವೇಶದಲ್ಲಿ  ಅಥವಾ ಮನಸ್ಸಿಗೆ ಚುಚ್ಚಿ ನೋವು ಉಂಟುಮಾಡುವ ಕ್ರಿಯೆಯಲ್ಲಿ ಇರಬಹುದು.

ಹಿಟ್ಟಿನ ಕೋಳಿಯನ್ನು ಬಲಿಕೊಡುವ ಪ್ರಸಂಗದಲ್ಲಿ  ‘ಸಂಕಲ್ಪ ಹಿಂಸೆ’ ಎನ್ನುವ ಪರಿಭಾಷೆಯೊಂದು ರೂಪಿತವಾಗಿದೆ.ಇದು ನಮ್ಮ ಲೌಕಿಕ ಬದುಕಿನ ಹಿಂಸೆಯ ಒಂದು ಮುಖ್ಯ ಮಾದರಿ.ಮೊದಲು ಸಂಕಲ್ಪ ಹಿಂಸೆ ,ಮತ್ತೆ ಅದರ ಅನುಷ್ಠಾನ ಮಾಡುವ  ಕ್ರೌರ್ಯ.ಲೌಕಿಕ ಜಗತ್ತಿನಲ್ಲೇ ನಾವು ಕಟ್ಟಿಕೊಳ್ಳುವ ಸಂಕಲ್ಪಗಳು ಎಂಥವು, ಅವುಗಳಿಂದ ಮುಂದೆ ಒದಗುವ ಅನಾಹುತಗಳು ಯಾವ ಬಗೆಯವು ,ಅವನ್ನು ನಿವಾರಿಸಿಕೊಳ್ಳಲು ನಾವು ನಡೆಸುವ ಕಾರ್ಯತಂತ್ರಗಳು ,ವಂಚನೆಗಳು ,ಒದ್ದಾಟಗಳು-  ‘ಯಶೋಧರ ಚರಿತ’ ಕಾವ್ಯದಲ್ಲಿನ ಭವಾವಳಿಗಳಂತೆ  ಇವೆಲ್ಲ ಲೌಕಿಕ ಬದುಕಿನಲ್ಲಿ  ಅನೇಕ ಜನ್ಮಗಳನ್ನು ತಾಳುತ್ತವೆ  .ಆದರೆ ಈ ಎಲ್ಲ ಭವಾವಳಿಗಳನ್ನು ಒಂದೇ ಜನ್ಮದಲ್ಲಿ ಅನುಭವಿಸಬೇಕಾಗಿರುವುದು ನಮ್ಮ ಸಂಕಷ್ಟ .ಜನ್ನನ ಕಾವ್ಯದಲ್ಲಿ ೩ನೆಯ ಅವತಾರದ ೧೧ನೆಯ ಪದ್ಯದಲ್ಲಿ ಬರುವ ಒಂದು ಹೇಳಿಕೆ : ” ವಂಚನೆ ಎಲ್ಲಿಯುಂ ಒಳ್ಪು ಮಾಡಲಾರದು ಕಡೆಯೊಳ್ ” .ಲೌಕಿಕ ಜಗತ್ತಿನ ಒಳಗೆ ನಾವು ಕಟ್ಟಿಕೊಳ್ಳುತ್ತಿರುವ ಸ್ವರ್ಗ ನರಕಗಳು ಯಾವ ರೀತಿಯವು ,ನಾವು ರೂಪಿಸುವ ಮಾನಸಿಕ ಜಗತ್ತುಗಳು ಹೇಗೆ ಇರಬೇಕು ಎನ್ನುವ ಹೊಳಹೇ ಇಂತಹ ಕಾವ್ಯಗಳ ಒಳನೋಟ.

‘ಯಶೋಧರ ಚರಿತ’ದ ಮೂರನೆಯ ಅವತಾರದಲ್ಲಿ ‘ಜೀವಶ್ರಾದ್ಧ’ ಎನ್ನುವ ಒಂದು ಪರಿಕಲ್ಪನೆ ಪ್ರಸ್ತಾವಗೊಂಡಿದೆ.ಒಂದು ಜೀವಂತ ಮೀನಿನ ಅರ್ಧ ಕಡಿಯನ್ನು ಬೇಯಿಸಿ ,ಉಳಿದ ಅರ್ಧ ಕಡಿಯನ್ನು ನೀರಿನಲ್ಲಿ ಇರಿಸಿ ಮಾಡುವ ಶ್ರಾದ್ಧ -‘ಜೀವಶ್ರಾದ್ಧ’. ಇದು ಒಂದು ಅದ್ಭುತ ರೂಪಕ.ಈ ‘ಜೀವಶ್ರಾದ್ಧ’ದ  ರೂಪಕವನ್ನು ನಮ್ಮ ಆಧುನಿಕ ಲೌಕಿಕ ಬದುಕಿಗೆ ಅನ್ವಯಿಸಬಹುದು.ಅರ್ಧ ಬದುಕು ಜೀವಂತವಿದೆ,ಇನ್ನರ್ಧ ಬದುಕು ಸತ್ತುಹೋಗಿದೆ. ಒಂದು ಅರ್ಥದಲ್ಲಿ ಆಗಮಿಕ -ಲೌಕಿಕ ಎಂಬ ವಿಭಜನೆಯೇ ಅರ್ಧ ಮೀನನ್ನು ಬೇಯಿಸಿ ,ಉಳಿದ ಅರ್ಧ ಮೀನನ್ನು ನೀರಿನಲ್ಲಿ ಜೀವಂತವಾಗಿ ಇರಿಸಿ ಮಾಡುವ ‘ಜೀವಶ್ರಾದ್ಧ’  ಆಚರಣೆಯ ವಸ್ತುಪ್ರತಿರೂಪದ ಹಾಗೆ.

Read Full Post | Make a Comment ( 4 so far )

« Previous Entries

Liked it here?
Why not try sites on the blogroll...