ಫಿನ್ ಲೆಂಡಿನಲ್ಲಿ ಲೌರಿ ಹಾಂಕೊ ನೆನಪಿನ ಜಾನಪದ ಸಮ್ಮೇಳನ ,ಆಗಸ್ಟ್ ೨೦೧೩

Posted on ಆಗಷ್ಟ್ 27, 2013. Filed under: Finland, Lauri Honko | ಟ್ಯಾಗ್ ಗಳು:, , , , , , , , |


 

ಪ್ರೊ .ಲೌರಿ ಹಾಂಕೊ (1932 -2002 ) ಫಿನ್ ಲೆಂಡ್ ದೇಶದ ತುರ್ಕು ವಿಶ್ವವಿದ್ಯಾಲಯದಲ್ಲಿ ಜಾನಪದ ವಿಜ್ಞಾನ ಮತ್ತು ತೌಲನಿಕ ಧರ್ಮ ದ ಪ್ರಾಧ್ಯಾಪಕರಾಗಿ ಜಾಗತಿಕ ಜಾನಪದ ವಿದ್ವಾಂಸರ ಸಾಲಿನಲ್ಲಿ ಮೊದಲನೆಯ ಸ್ಥಾನದಲ್ಲಿ ಇದ್ದವರು . ಜನಪದ ನಂಬಿಕೆಗಳು,ಜನಪದ ವೈದ್ಯ , ಶೋಕ ಗೀತೆಗಳಿಂದ ತೊಡಗಿ ಸಂಸ್ಕೃತಿ ,ಅನನ್ಯತೆ ಮತ್ತು ಜಾನಪದದ ಅರ್ಥದಂತಹ ಸೈದ್ಧಾಂತಿಕ ವಿಷಯಗಳಲ್ಲಿ ಮಹತ್ವದ ಕೊಡುಗೆ ಕೊಟ್ಟವರು . ಅವರು ಫಿನ್ ಲೆಂಡ್ ದೇಶದ ಜನಪದ ಮಹಾಕಾವ್ಯ ‘ಕಲೆವಾಲ ‘ ವನ್ನು ಹೊಸತಾಗಿ ಅಧ್ಯಯನ ಮಾಡಿದಂತೆಯೇ ಕರೆಲಿಯ ,ತಾಂಜಾನಿಯ ದೇಶಗಳ ಜನಪದ ಚಿಕಿತ್ಸೆಗಳ ಬಗ್ಗೆ ಕೂಡಾ ವಿಶೇಷ ಕೆಲಸ ಮಾಡಿದವರು . ಚೀನ,ಬಾಂಗ್ಲಾದೇಶ ಮತ್ತು ಭಾರತದ ಕರ್ನಾಟಕದಲ್ಲಿ ಯುವ ಸಂಶೋಧಕರಿಗೆ ಜಾನಪದ ಅಧ್ಯಯನ ಮತ್ತು ಕ್ಷೇತ್ರಕಾರ್ಯದ ಬಗ್ಗೆ ಆಯಾ ದೇಶಗಳಿಗೆ ಹೋಗಿ ತರಬೇತಿ ಕೊಟ್ಟವರು . ತುಳುವಿನ ಜನಪ್ರಿಯ ಸಂದಿ ‘ಸಿರಿ’ ಯನ್ನು ಬಹು ಮಾಧ್ಯಮಗಳ ಮೂಲಕ ಸಮಗ್ರವಾಗಿ ದಾಖಲಾತಿ ಮಾಡಿ ,ತುಳುವಿಗೆ ಅಂತಾರಾಷ್ಟ್ರೀಯ ಮನ್ನಣೆ ಸಿಗಲು ಕಾರಣರಾದವರು . ತುಳುನಾಡಿನ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿಯ ಮಾಚಾರಿನ ಗೋಪಾಲ ನಾಯ್ಕ ಅವರಿಂದ ಸಮಗ್ರ ಸಿರಿ ಸಂದಿಯನ್ನು ಸಂಗ್ರಹಿಸಿ ಅದನ್ನು ಇಂಗ್ಲಿಷಿಗೆ ಅನುವಾದ ಮಾಡಿ ,ಅದನ್ನು ಎರಡು ಸಂಪುಟಗಳಲ್ಲಿ ಫಿನ್ ಲೆಂಡಿನ ಪ್ರಸಿದ್ಧ ಪ್ರಕಾಶನ ಸಂಸ್ಥೆಯಿಂದ ಪ್ರಕಟಿಸಿದವರು . ಅವರ ಈ ಯೋಜನೆಯಲ್ಲಿ ನಾನು ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದೆ .ನನ್ನ ಜೊತೆಗೆ ನನ್ನ ಸಹೋದ್ಯೋಗಿ ಆಗಿದ್ದ ಡಾ . ಚಿನ್ನಪ್ಪ ಗೌಡರು ಇದ್ದರು . ಹಾಂಕೊ ಅವರ ಜೊತೆಗೆ ಅವರ ಪತ್ನಿ ಅನೇಲಿ ಅವರು ಈ ಯೋಜನೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು . ಈ ಯೋಜನೆಯು 1 9 9 0 ರಿಂದ 1 9 9 8 ರ ವರೆಗೆ ನಿರಂತರ ನಡೆಯಿತು. ಆ ಅವಧಿಯಲ್ಲಿ ಹಾಂಕೊ ದಂಪತಿ ತುಳುನಾಡಿಗೆ ಪ್ರತೀ ವರ್ಷ ಬಂದು ಅಧ್ಯಯನ ನಡೆಸುತ್ತಿದ್ದರು . ನಾನು ಈ ಅವಧಿಯಲ್ಲಿ ಒಟ್ಟು ಎಂಟು ಬಾರಿ ಫಿನ್ ಲೆಂಡ್ ಗೆ ಹೋಗಿ ,ಸಿರಿ ಕಾವ್ಯದ ಲಿಪ್ಯಂತರ ,ಅನುವಾದ ಮತ್ತು ಅಧ್ಯಯನದ ಕೆಲಸಮಾಡಿದೆ . . ಅನೇಕ ಬಾರಿ ಚಿನ್ನಪ್ಪ ಗೌಡರು ನನ್ನ ಜೊತೆಗೆ ಇರುತ್ತಿದ್ದರು .
2002 ಜುಲೈ 15 : ಹಾಂಕೊ ಬೆಳಗ್ಗೆ ಜಾನಪದ ಬೇಸಗೆ ಶಿಬಿರದಲ್ಲಿನ ತನ್ನ ಉಪನ್ಯಾಸದ ಬರವಣಿಗೆ ಸಿದ್ಧಪಡಿಸಿ ,ವಾಕಿಂಗ್ ಹೋದವರು ಅಲ್ಲೇ ಹೃದಯಾಘಾತದಿಂದ ಕುಸಿದುಬಿದ್ದು ತನ್ನ ಕೊನೆಯುಸಿರೆಳೆದರು .
ಅವರು ನಿಧನ ಆದ ಹತ್ತನೇ ವರ್ಷದ ನೆನಪಿಗೆ ಅವರು ಕೆಲಸ ಮಾಡಿದ ಸಂಸ್ಥೆ -ತುರ್ಕು ವಿಶ್ವವಿದ್ಯಾನಿಲಯದ ಜಾನಪದ ವಿಜ್ಞಾನ ಮತ್ತು ತೌಲನಿಕ ಧರ್ಮ ವಿಭಾಗದವರು ಅಲ್ಲಿನ ಅಬೊ ಅಕಾಡೆಮಿಯವರ ಸಹಯೋಗದಲ್ಲಿ ಕಳೆದ ವಾರ -ಆಗಸ್ಟ್ 21 -23 ರಂದು ‘ಹಾಂಕೊ ಸಮ್ಮೇಳನ ‘ ವನ್ನು ಆಯೋಜಿಸಿದ್ದರು . ಸಮ್ಮೇಳನದ ಆಶಯ ವಿಷಯ :’ಜಾನಪದ ವಿಜ್ಞಾನ ಮತ್ತು ತೌಲನಿಕ ಧರ್ಮ ದಲ್ಲಿ ಸಿದ್ಧಾಂತದ ಪಾತ್ರ ‘ . ವಿಶೇಷ ಉಪನ್ಯಾಸ ಕೊಡಲು ಬೇರೆ ಬೇರೆ ದೇಶಗಳಿಂದ ಆರು ಮಂದಿ ಹಿರಿಯ ವಿದ್ವಾಂಸರನ್ನು ಆಹ್ವಾನಿಸಿದ್ದರು. ಅವರಲ್ಲಿ ನಾನು ಒಬ್ಬನಾಗಿದ್ದೆ ಎನ್ನುವುದು ನನಗೆ ಅಭಿಮಾನದ ಸಂಗತಿ .ಭಾರತದ ಪ್ರತಿನಿಧಿಯಾಗಿ ನಾನು ಒಬ್ಬನೇ ಇದ್ದೆ . ನಾನು ‘ಕನ್ನಡ ಮತ್ತು ತುಳು ಜನಪದ ಮಹಾಕಾವ್ಯಗಳ ಪಟ್ಯ ,ಸಂದರ್ಭ ಮತ್ತು ಪ್ರದರ್ಶನಗಳ ಸಂಕೀರ್ಣತೆಯ ಬಗ್ಗೆ ದೃಶ್ಯ ದಾಖಲೆಗಳ ಸಹಿತ ವಿಷಯ ಮಂಡಿಸಿದೆ . ಒಟ್ಟು ಹದಿನಾರು ದೃಶ್ಯ ತುಣುಕುಗಳನ್ನು ಬಳಸಿಕೊಂಡೆ . ತುಳುವಿನ ಸಿರಿ ,ಕೋಟಿ ಚೆನ್ನಯ ಮತ್ತು ಭೂತಗಳ ಸಂದಿಗಳು ,ಕನ್ನಡದ ಮಲೆ ಮಾದೇಶ್ವರ ,ಮಂಟೇಸ್ವಾಮಿ ,ಜುಂಜಪ್ಪ ಜನಪದ ಮಹಾಕಾವ್ಯಗಳು ,ಕುಂದಾಪುರ ಪರಿಸರದ ಪಾಣಾರಾಟ , ಯೆಲ್ಲಾಪುರದ ಸಿದ್ದಿಗಳ ಬಯಲಾಟ -ಇವನ್ನು ದೃಶ್ಯ ದಾಖಾಲಾತಿಗಳ ಮೂಲಕ ವಿವರಿಸಿದೆ ಜ಼ೊತೆಗೆ ಹಾಂಕೊ ಅವರ ಜೊತೆಗಿನ ನನ್ನ ಒಡನಾಟದ ವಿವರಗಳನ್ನು ಹಂಚಿಕೊಂಡೆ . ಹಾಂಕೊ ಅವರು ತಾವು ನಿಧನ ಆಗುವ ಸುಮಾರು ಐದು ತಿಂಗಳ ಮೊದಲು ತುಳುನಾಡಿಗೆ ಬಂದಿದ್ದರು .ಸಿರಿಯ ಬದುಕಿಗೆ ಸಂಬಂಧಿಸಿದಂತೆ ಜನರು ಗುರುತಿಸುವ ದೈಲೊಟ್ಟು .ಸೊನ್ನೆ ಗುರಿ ಗಳಿಗೆ ಹೋಗಿ ಮಾಹಿತಿ ಸಂಗ್ರಹಿಸಿ ದಾಖಲಾತಿ ಮಾಡಿಕೊಂಡಿದ್ದರು . ಅದರ ದೃಶ್ಯಗಳನ್ನೂ ಅಲ್ಲಿ ತೋರಿಸಿದಾಗ ಇಡೀ ಸಭೆ ಭಾವುಕವಾಯಿತು . ಅಳಿದ ಮೇಲೆ ಉಳಿಯುವುದು ನಾವು ಮಾಡಿದ ಅಪೂರ್ವ ಸಾಧನೆಯ ಕೆಲಸಗಳು ಮಾತ್ರ . ಹದಿನಾಲ್ಕು ವರ್ಷಗಳ ಬಳಿಕ ಹಾಂಕೊ ಇಲ್ಲದ ಆ ಕಾರ್ಯಕ್ರಮದ ಮೂರು ದಿನವೂ ಹಾಂಕೊ ಹೆಸರಿನ ಪ್ರಾಣವಾಯು ಅಲ್ಲೆಲ್ಲ ಸುತ್ತು ಸುಳಿಯುತ್ತಿತ್ತು .
ಹಾಂಕೊ ಸಮ್ಮೇಳನದ ಕೆಲವು ಚಿತ್ರಗಳು ಇಲ್ಲಿವೆ .

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಫಿನ್ ಲೆಂಡಿನಲ್ಲಿ ಲೌರಿ ಹಾಂಕೊ ನೆನಪಿನ ಜಾನಪದ ಸಮ್ಮೇಳನ ,ಆಗಸ್ಟ್ ೨೦೧೩”

RSS Feed for ಬಿ ಎ ವಿವೇಕ ರೈ Comments RSS Feed

ಪ್ರೊ ಲೌರಿ ಹಾನ್ಕೋ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ತುಳು ಜನ ಪದ ಮಹಾಕಾವ್ಯಗಳ ಸತ್ವ- ಸೊಗಸನ್ನು ಹೊರ ಜಗತ್ತಿನಲ್ಲಿ ಪಸರಿಸಿದ ನಿಮಗೆ ಅಭಿನಂದನೆಗಳು ಸರ್


Where's The Comment Form?

Liked it here?
Why not try sites on the blogroll...

%d bloggers like this: