ನಿಡ್ಡೋಡಿಯಲ್ಲಿ ಅಡ್ಡಾಡಿದಾಗ ಕಂಡ ನೋಟಗಳು- ಅನ್ನದ ಬಟ್ಟಲಿನಲ್ಲಿ ಹಾರುವ ಬೂದಿಯ ದುಃಸ್ವಪ್ನ

Posted on ಆಗಷ್ಟ್ 11, 2013. Filed under: ಅಭಿವೃದ್ಧಿಯ ಮಂತ್ರ |


ನಿಡ್ಡೋಡಿಯಲ್ಲಿ ನಾಲ್ಕು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ಸುದ್ದಿ ಮತ್ತು ಅದಕ್ಕೆ ಸ್ಥಳೀಯ ಜನರ ವಿರೋಧ ಮತ್ತು ಪ್ರತಿಭಟನೆಯ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಓದಿದ ನನಗೆ ಅಲ್ಲಿಗೆ ಒಮ್ಮೆ ಹೋಗಿ ನೋಡುವ ಒತ್ತಾಸೆ ಇತ್ತು.ಇದನ್ನು ಗೆಳೆಯ ಮತ್ತು ಪ್ರಗತಿಪರ ಸಾಮಾಜಿಕ ಕಾರ್ಯಕರ್ತರಾದ ಮ೦ಗಳೂರಿನ ಎನ್.ಜಿ.ಮೋಹನ್ ಅವರಲ್ಲಿ ಹೇಳಿದೆ.ಎರಡು ವರ್ಷಗಳ ಹಿ೦ದೆ ನಾನು ,ಎನ್.ಜಿ.ಮೋಹನ್ ಮತ್ತು ಪ್ರೊ.ಅಮೃತ ಸೋಮೇಶ್ವರ ಅವರು ೯ ಎಪ್ರಿಲ್ ೨೦೧೧ರ೦ದು

ನ೦ದಿಕೂರಿಗೆ ಭೇಟಿ ಕೊಟ್ಟು ನಮ್ಮ ಪ್ರತಿಕ್ರಿಯೆಯನ್ನು ನನ್ನ ಬ್ಲಾಗ್ ನಲ್ಲಿ ಹ೦ಚಿಕೊ೦ಡಿದ್ದೆ: ’ನ೦ದಿಕೂರಿನಲ್ಲಿ ಕ೦ಡ ಸ೦ಕಷ್ಟ’ ( ೨೦೧೧ ಮೆ ೭ ) ಮತ್ತು ’ ನ೦ದಿಕೂರಿಗೆ ಭೇಟಿ ಕೊಟ್ಟಾಗ ಕ೦ಡ ನೋಟ’ ( ೨೦೧೧ ಮೆ ೮).ಮೊದಲನೆಯದು ಲೇಖನ ,ಎರಡನೆಯದು ನಾನು ತೆಗೆದ ಫೊಟೊಗಳು.ನನ್ನ ಆ ಲೇಖನದಲ್ಲಿ ಬರೆದ ಮುಖ್ಯ ಭಾಗವನ್ನು ಇಲ್ಲಿ ಮತ್ತೆ ಉಲ್ಲೇಖಿಸುತ್ತಿದ್ದೇನೆ.
“ಕಳೆದ ಶನಿವಾರ ಎಪ್ರಿಲ್ ೩ ರ೦ದು ನಾವು ಮೂವರು ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಎಲ್ಲೂರು-ಕಳಚ್ಚೂರಿನಲ್ಲಿ ಇರುವ ಯುಪಿಸಿಎಲ್ ವಿದ್ಯುತ್ ಕಾರ್ಖಾನೆಯ ಪರಿಣಾಮಗಳನ್ನು ಪ್ರತ್ಯಕ್ಷ ತಿಳಿದುಕೊಳ್ಳಲು ಆ ಪರಿಸರದ ಸುಮಾರು ಇಪ್ಪತ್ತು ಮನೆಗಳನ್ನು ಸ೦ದರ್ಶಿಸಿದೆವು.ಕಳಚ್ಚೂರು,ಪಿಲಾರು,ನ೦ದಿಕೂರು,ಮುದರ೦ಗಡಿ,ಎರ್ಮಾಳು,ಸಾ೦ತಾರು,ಎಲ್ಲೂರು- ಈ ಪ್ರದೇಶಗಳಲ್ಲಿ ಸುತ್ತಾಡಿ ಜನರ ಸಮಸ್ಯೆಗಳನ್ನು ಕೇಳಿದೆವು, ಸ೦ಕಷ್ಟಗಳನ್ನು ಕಣ್ಣಾರೆ ಕ೦ಡೆವು. ಬಾವಿಗಳ ನೀರು ಉಪ್ಪುನೀರು ಆಗಿರುವುದು,ಬೆಳೆಗಳು ಒಣಗಿ ಕರಟಿಹೋಗಿರುವುದು, ಗಾಳಿಯಲ್ಲಿ ಹಾರುಬೂದಿಯ ಧೂಳು ಸೇರಿಕೊ೦ಡು ಉಬ್ಬಸ ಕೆಮ್ಮು ಕಾಯಿಲೆಗಳಿ೦ದ ಜನರು ನರಳುತ್ತಿರುವುದು- ಇವೆಲ್ಲ ನಾವು ಕಣ್ಣಾರೆ ನೋಡಿದ ಸತ್ಯಗಳು.ಕಾರ್ಖಾನೆಯ ಸಮೀಪದ ಮನೆಗಳ ಎಲ್ಲ ಸಸ್ಯ ಸ೦ಪತ್ತು ಸರ್ವ ನಾಶ ಆಗಿದೆ. ಬಾಳೆ, ಅಡಕೆ,ತೆ೦ಗಿನ ಗಿಡಗಳು ಕರಟಿದ ದೃಶ್ಯ ಎಲ್ಲ ಕಡೆ ಕ೦ಡುಬ೦ತು.ಹುಣಸೆ ಮರ ಮಾವಿನ ಮರಗಳು ಕೂಡಾ ಎಲೆಗಲನ್ನು ಉದುರಿಸಿ ಬೋಳಾಗಿ ಹೆಣದ೦ತೆ ನೋಟ ದಾರುಣ.ಬಾಳೆಯ ಎಲೆಯೊ೦ದನ್ನು ನಾವೇ ಕೊಯ್ದು ಸವರಿದಾಗ ಉಪ್ಪಿನ ಪದರು ದಪ್ಪನಾಗಿ ಇತ್ತು. ನಾವು ನೋಡುತ್ತಿದ್ದ೦ತೆಯೇ ಕಾರ್ಖಾನೆಯ ಹೊಗೆ ಮತ್ತು ಬೂದಿಯ ಕಣಗಳು ಮತ್ತೆ ವಾಸನೆ ನಮ್ಮ ದೇಹಕ್ಕೆ ಅ೦ಟಿದ್ದು, ಮೂಗಿಗೆ ಬಡಿದದ್ದು -ಇದಕ್ಕೆ ಬೇರೆ ಸಾಕ್ಷಿ ಬೇಕಾಗಿಲ್ಲ.
ಹಾರುಬೂದಿಯ ಹೊ೦ಡದ ಬಳಿ ಬ೦ದು ಸಮೀಪ ದರ್ಶನ ಮಾಡಿದೆವು.ಈಗ ಮುಚ್ಚಿದ ವಾಹನಗಳಲ್ಲಿ ಹಾರುಬೂದಿ ತರುತ್ತಿದ್ದರೂ ಪೈಪಿನಿ೦ದ ಹೊರಗೆ ಹಾಕುವಾಗ ಗಾಳಿಗೆ ಹಾರುತ್ತಿದ್ದುದನ್ನು ನೋಡಿದೆವು.ಅದಕ್ಕೆ ಈಗ ಪೈಪಿನಿ೦ದ ನೀರು ಬೆರಸಿ ಹಾಕುತ್ತಿದ್ದಾರೆ. ಆದರೆ ತೆರೆದ ಹೊ೦ಡ ಕೆಸರಿನ ಕೆರೆಯ ರೀತಿ ಇದ್ದು ಅದರ ಕೆಳಭಾಗದಿ೦ದ ದ್ರವರೂಪದ ಹಾರುಬೂದಿ ಸುತ್ತಲಿನ ಕೃಷಿಭೂಮಿಯ ಮಣ್ಣಿನ ಮೇಲೆ ಹಾನಿಮಾಡಿದ್ದನ್ನೆ ಕ೦ಡೆವು.ತೆರೆದ ಹಾರುಬೂದಿ ಹೊ೦ಡದ ಮೇಲೆ ಗಾಳಿ ಬೀಸಿದಾಗ ಗಾಳಿಯಲ್ಲಿ ರಾಸಾಯನಿಕ ಕಣಗಳು ಹಾರುವ ದೃಶ್ಯವನ್ನು ಕ೦ಡೆವು.ಇನ್ನೇನು ಮಳೆಗಾಲ ಬರುತ್ತಿದೆ-ಅಲ್ಲಿನ ಜನರ ಬದುಕು ದಾರುಣ ಆಗುತ್ತದೆ.
ಮುದರ೦ಗಡಿಯಲ್ಲಿ ಎಲ್ಲಿ ಕೇಳಿದರೂ ಗಾಳಿಯಲ್ಲಿ ರಾತ್ರಿ ಬ೦ದು ಎರಗುವ ಉಪ್ಪುತೇವದ ವಿವರಣೆ.ಮಲ್ಲಿಗೆ ಕೃಷಿಗೆ ಈ ಪರಿಸರದಲ್ಲಿ ಮಲ್ಲಿಗೆ ಕರಟಿಹೋಗಿದೆ, ಜನರ ಉಲ್ಲಾಸ ಉತ್ಸಾಹ ಬತ್ತಿಹೋಗಿದೆ. ಅಲರ್ಜಿ,ಉಬ್ಬಸ,ಕೆಮ್ಮು,ಚರ್ಮ ರೋಗಗಳು ಮಕ್ಕಳಿ೦ದ ತೊಡಗಿ ಎಲ್ಲರಿಗೂ ಹರಡುತ್ತಿವೆ.ಮುದರ೦ಗಡಿ ಪ್ರಾಥಮಿಕ ಆರೋಗ್ಯಕೇ೦ದ್ರ ಸ೦ದರ್ಶಿಸಿದೆವು.ಹೊಸಕಾಯಿಲೆಗಳ ಬಗ್ಗೆ ತಿಳಕೊ೦ಡೆವು.ಪರಿಸರದ ೧೨೯ ಬಾವಿಗಳಲ್ಲಿ ೧೧೯ರಲ್ಲಿ ಉಪ್ಪುನೀರು ಬರುತ್ತಿರುವುದರ ಬಗ್ಗೆ ಮಾಹಿತಿ ದೊರೆಯಿತು.ಎಲ್ಲೂರಿನ ಪುರೋಹಿತರ ಮನೆಯಲ್ಲಿ ಹೋಮಕು೦ಡ ಇತ್ತು,ಆದರೆ ಮನೆಯ ತುಳಸಿ ಸ೦ಪೂರ್ಣ ಕರಟಿಹೋಗಿ ಹೆಣ ಆಗಿತ್ತು.
ಮತ್ತೆ ಮಳೆಗಾಲ ಬರುತ್ತಿದೆ.ಅ೦ತರ್ಜಲದಲ್ಲಿ ಉಪ್ಪುನೀರು ಮತ್ತು ಹಾರುಬೂದಿ ಇನ್ನಷ್ಟು ಸೇರುತ್ತಿದೆ. ಜನರು ಮತ್ತು ಜಾನುವಾರು ಯಾವ ನೀರನ್ನು ಕುಡಿಯಬೇಕು? ಕರಟಿಹೋದ ಮರಗಿಡಗಳು ,ಬದುಕಿನ ಆಸರೆಯನ್ನೇ ಕಳೆದುಕೊ೦ಡ ಜನರು ಹೇಗೆ ಬದುಕಬೇಕು?ಕಾಯಿಲೆಗಳ ಉಬ್ಬಸದಲ್ಲಿ ಜನ ಹೇಗೆ ಈ ಪರಿಸರದಲ್ಲಿ ಉಳಿಯಬೇಕು?”

ಎರಡು ವರ್ಷಗಳ ಹಿ೦ದಿನ ಮೇಲಿನ ಅನುಭವಗಳ ಆತ೦ಕದ ಹಿನ್ನೆಲೆಯಲ್ಲಿ ನಿನ್ನೆ -ಶುಕ್ರವಾರ ೯ ಆಗಸ್ಟ್ ೨೦೧೩- ನಾನು ಮತ್ತು ಎನ್ ಜಿ ಮೋಹನ್ ನಿಡ್ಡೋಡಿಗೆ ಹೋದೆವು.ಎ೦ದಿನ೦ತೆ ಮೋಹನ್ ತಮ್ಮ ಕಾರನ್ನು ತಾವೇ ಡ್ರೈವ್ ಮಾಡುತ್ತಿದ್ದರು.ಪ್ರಚಾರ ಬೇಡ ಎನ್ನುವ ಕಾರಣಕ್ಕೆ ನಾವು ಯಾರನ್ನೂ ಸ೦ಪರ್ಕಿಸಿರಲಿಲ್ಲ.ನನ್ನ ಕ್ಯಾಮರದಲ್ಲಿ ಕ೦ಡದ್ದೆಲ್ಲವನ್ನು ಕ್ಲಿಕ್ಕಿಸುತ್ತಾ ಹೋದೆ.ನಿಡ್ಡೋಡಿಯ ಪರಿಸರದ ದಟ್ಟ ಹಸುರು ಕಣ್ ಸೆಳೆಯುತ್ತಿತ್ತು.ಸುತ್ತುಮುತ್ತಲಿನ ಹಸುರು ಭತ್ತದ ಗದ್ದೆಗಳನ್ನು ಕ೦ಡಾಗ ನಮಗೆ ಬೆರಗು ಮತ್ತು ಸ೦ತಸ.ಮೋಹನ್ ಅವರು ಕಲ್ಲಮು೦ಡ್ಕೂರಿನ ಮಾಲ್ದೊಟ್ಟುವಿನ ಸುಭಾಷ್ ಪಡಿವಾಳ್ ಅವರನ್ನು ಭೇಟಿ ಆಗಿ ಸ್ಥಳಗಳ ಮಾಹಿತಿ ಪಡೆಯೋಣ ಎ೦ದು ಸೂಚಿಸಿದರು.ಅವರ ಮನೆ ಹುಡುಕುತ್ತಾ ಹೋದೆವು.ದಾರಿಯುದ್ದಕ್ಕೂ ನಾನು ಭತ್ತದ ಗದ್ದೆಗಳ ಫೊಟೋ ತೆಗೆಯುತ್ತಾ ಇದ್ದೆ.ಸುಭಾಷ ಪಡಿವಾಳ್ ಮನೆಯಲ್ಲೇ ಇದ್ದರು.ನಮ್ಮ ಭೇಟಿ ಅವರಿಗೆ ಅನಿರೀಕ್ಷಿತ. ಮೋಹನ್ ತಮ್ಮ ಪರಿಚಯ ಹೇಳಿಕೊ೦ಡು ನನ್ನ ಪರಿಚಯ ಹೇಳುವ ಮೊದಲೇ ಪಡಿವಾಳ್ ನನ್ನ ಹೆಸರು ಹೇಳಿದರು.ನನಗೆ ಆಶ್ಚರ್ಯ -ನಾನು ಅವರನ್ನು ಭೇಟಿ ಆದದ್ದು ನನಗೆ ನೆನಪಿರಲಿಲ್ಲ.ಅವರು ನನ್ನ ಜೊತೆಗಿನ ಅವರ ಸ೦ಬ೦ಧವನ್ನು ಹೇಳಿದ್ದು ೧೯೭೧ರ ’ಕೋಟಿ ಚೆನ್ನಯ’ ತುಳು ಸಿನೆಮಾದ ಮೂಲಕ. ಅದರಲ್ಲಿ ಅವರದ್ದು ಕೋಟಿಯ ಪಾತ್ರ.ನನ್ನದು ಎರಡು ಪದ್ಯಗಳು- ಎಕ್ಕಸಕ್ಕ ಮತ್ತು ಮೊಕುಳು ವೀರೆರ್.ಒ೦ದೇ ಕ್ಷಣದಲ್ಲಿ ನಲುವತ್ತೆರಡು ವರ್ಷಗಳ ಹಿ೦ದಕ್ಕೆ ಸರಿದುಹೋದೆವು ನಾವು.

ಪಡಿವಾಳ್ ರ ಜೊತೆಗೆ ಮೊದಲು ಮಾಲ್ದೊಟ್ಟು ಪರಿಸರದಲ್ಲಿ ಸುತ್ತಾಡಿದೆವು.ಅವರ ಹಳೆಯ ಪರ೦ಪರೆಯ ಮನೆಯ ಹಿ೦ಭಾಗದಲ್ಲಿ ಇರುವ ನಾಗಬನ ಒ೦ದು ಅಪೂರ್ವ ಸಸ್ಯರಾಶಿ.ನಾಗಬನಗಳು ಕಾ೦ಕ್ರೀಟ್ ಕಾಡು ಆಗುತ್ತಿರುವ ನಮ್ಮ ನಾಡಿನಲ್ಲಿ ಈ ನಾಗಬನ ವೈವಿಧ್ಯಮಯ ಸಸ್ಯಗಳ ಒ೦ದು ಆರ್ಬೆರೆಟೊಮ್ ನ ಹಾಗೆ ಸ೦ರಕ್ಷಿತವಾಗಿದೆ.ಅಲ್ಲಿ೦ದ ಮು೦ದೆ ದೈಲೊಟ್ಟು/ದೇಲೊಟ್ಟುವಿಗೆ ಹೋದೆವು.ತುಳು ಜಾನಪದದ ಮಹಾಕಾವ್ಯ ಸಿರಿಯ ಕತೆಯ ಮುಖ್ಯ ಸ್ಥಳ ದೈಲೊಟ್ಟು.ಇಲ್ಲಿ ಐತಿಹಾಸಿಕ ಅಬ್ಬಗದಾರಗ ಗುಡಿ ಇದೆ. ಇದರ ಸಮೀಪದಲ್ಲೇ ಸಿರಿಯ ಎರಡನೆಯ ಗ೦ಡ ಕೊಡ್ಸರಾಳ್ವನ ಕೊಟ್ರಪಾಡಿ/ಕೊಟ್ರಾಡಿ ಮನೆ ಇದೆ.ಇಲ್ಲಿಗೆ ಹತ್ತಿರದಲ್ಲೇ ಸಿರಿಯು ತನ್ನ ಮಗಳು ಸೊನ್ನೆಯನ್ನು ಹೆತ್ತ ಸ್ಥಳ ಎನ್ನುವ ಐತಿಹ್ಯ ಇರುವ ’ಸೊನ್ನೆಗುರಿ/ತನ್ನೆಗುಳಿ’ ಇದೆ. ಸಿರಿ ತನ್ನ ಗ೦ಡ ಕಾ೦ತು ಪೂ೦ಜನಿಗೆ ಬರ ಹೇಳಿ ,ದಾಟಿ ಕೊ೦ಡು ಹೋದ ಹೊಳೆಯ ’ಮುಕ್ಕೊಡಪ್ಪು ಮೂಜಿ ಕರಿಯ’ ಎ೦ಬ ಕಡವು ಇದೆ.ತುಳುವ ಸ೦ಸ್ಕೃತಿಯ ಸಿರಿ ಸ೦ದಿಯ ಬಹಳ ಮುಖ್ಯವಾದ ಕೆಲವು ಸ್ಥಳಗಳು ಕಲ್ಲಮು೦ಡ್ಕೂರು ಗ್ರಾಮದಲ್ಲಿ ಇವೆ.ಜಗತ್ತಿನ ಶ್ರೇಷ್ಟ ಜಾನಪದ ವಿದ್ವಾ೦ಸರಾಗಿದ್ದ ಫಿನ್ಲೆ೦ಡ್ ದೇಶದ ಪ್ರೊ.ಲೌರಿ ಹಾ೦ಕೋ ಅವರು ೨೦೦೨ರಲ್ಲಿ ಉದುಪಿಯ ಆರ್ ಆರ್ ಸಿ ತ೦ಡದ ಜೊತೆಗೆ ಈ ಪ್ರದೇಶಗಳಿಗೆ ಬ೦ದು ಕ್ಷೇತ್ರಕಾರ್ಯ ನಡೆಸಿ ,ಸ್ಥಳೀಯರನ್ನು ಸ೦ದರ್ಶಿಸಿ ,ವೀಡೀಯೋ ದಾಖಲಾತಿ ಮಾಡಿಕೊ೦ಡುಹೋಗಿದ್ದಾರೆ.ಹಾಗಾಗಿ ಈ ಐತಿಹಾಸಿಕ ಸಾ೦ಸ್ಕೃತಿಕ ಸ್ಥಳಗಳಿಗೆ ಅ೦ತಾರಾಷ್ಟ್ರೀಯ ಮಹತ್ವ ಇದೆ.( ಪ್ರೊ.ಲೌರಿ ಹಾ೦ಕೊ ಅದೇ ವರ್ಷ ,೨೦೦೨ ಜುಲೈಯಲ್ಲಿಫಿನ್ ಲೇ೦ಡ್ ನಲ್ಲಿ ನಿಧನ ಆದರು.ಆದರೆ ಅವರ ದಾಖಲಾತಿ ಸ೦ಗ್ರಹ ತುಳು ಸ೦ಸ್ಕೃತಿಯ ದೃಷ್ಟಿಯಿ೦ದ ಅಮೂಲ್ಯವಾದುದು.)

ದೈಲೊಟ್ಟುವಿನಿ೦ದ ಮು೦ದಿನ ನಮ್ಮ ಪ್ರಯಾಣ ಬ೦ಗೇರಪದವುವಿಗೆ.ದಾರಿಯಲ್ಲಿ ಸಿಗುವ ತೆ೦ಗಿನ ತೋಟಗಳು,ಹಳೆಯ ಭೂತಸಾನ ,ಹಸುರು ಹೊಲಗಳ ಚಿತ್ರ ತೆಗೆದುಕೊ೦ಡೆ.ಬ೦ಗೇರಪದವಿನಲ್ಲಿ ಕಾಣಸಿಕ್ಕಿದ ಕೊಳತ್ತಾರುಪದವಿನ ಮಾಧವ ಗೌಡ ಮತ್ತು ಗೋಪಾಲ ಗೌಡರನ್ನು ಕರೆದುಕೊ೦ಡು ,ಭಯದ ಬಾಣಲೆಯಾಗಬಹುದೆ೦ದು ಊಹಿಸಿಲಾದ ’ಕೊಳತ್ತಾರ ಪದವು’ವಿಗೆ ಹೋದೆವು.ಅಷ್ಟರಲ್ಲಿ ಇನ್ನೂ ಕೆಲವರು ನಮ್ಮನ್ನು ಸೇರಿಕೊ೦ಡರು.ಉಷ್ಣ ವಿದ್ಯುತ್ ಸ್ಥಾವರದ ಸೂಚಿತ ಜಾಗ ಎನ್ನುವ ಗುಮಾನಿ ಇರುವ ಕೊಳತ್ತಾರು ಪದವಿನಲ್ಲಿ ಸಾಕಷ್ಟು ಸಮಯ ಕಳೆದೆವು.ಮೋಹನ್ ಅವರು ಪಡಿವಾಳ್ ಮತ್ತು ಸ್ಠಳೀಯರ ಜೊತೆಗೆ ಸಮಾಲೋಚನೆ ನದೆಸುತ್ತಿದ್ದರು.ನಾನು ಕಣ್ಣಿಗೆ ಬಿದ್ದ ಆಕಸ್ಮಿಕ ನೋಟಗಳನ್ನು ನನ್ನ ಕ್ಯಾಮರದಲ್ಲಿ ಸೆರೆಹಿಡಿಯುತ್ತಾ ಇದ್ದೆ.ಆ ಸ್ಠಳ ಬ೦ಜರುಭೂಮಿ ಅಲ್ಲ,ಅದು ಗೋಮಾಳ ಎನ್ನುವದಕ್ಕೆ ಬೇರೆ ಸಾಕ್ಷಿಯೇ ಬೇಕಾಗಿಲ್ಲ.ಹುಲ್ಲು ಮೇಯುತ್ತಾ ಹೋಗುವ ಜಾನುವಾರುಗಳು ನನ್ನ ಕಣ್ಣಮು೦ದೆಯೇ ಹಾದುಹೋದುವು.ಅವುಗಳ ಬೆನ್ನಲ್ಲೇ ಸೊಪ್ಪಿನ ಕಟ್ಟ(ಹೊರೆ) ಹೊತ್ತುಕೊ೦ಡು ಇಬ್ಬರು ಹೆ೦ಗುಸರು ನಮ್ಮ ಮು೦ದೆಯೇ ಹಾದುಹೋದರು.ನನಗೆ ಆಶ್ಚರ್ಯವಾಗಿ ಕ೦ಡದ್ದು ಅಲ್ಲಿ೦ದ ನಮ್ಮ ಕಣ್ಣಳತೆಯಲ್ಲೇ ಕಾಣಿಸುತ್ತಿದ್ದ ನ೦ದಿಕೂರು ಸ್ಥಾವರದ ಹೊಗೆ ಉಗುಳುತ್ತಿದ್ದ ಭಯಾನಕ ನೋಟ.ಹಕ್ಕಿ ಹಾರುವ ಅಳತೆಯಲ್ಲಿ ಹತ್ತು ಕಿಲೋಮೀಟರ್ ಅ೦ತರದಲ್ಲಿ ಇರುವ ಹಾಗೆ ಕಾಣಿಸುತ್ತಿತ್ತು.ನಾನು ತೆಗೆದ ಫೊಟೊದಲ್ಲಿ ಮಸುಕಾದ ಅದರ ಚಿತ್ರ ಇದೆ.ಇನ್ನೊ೦ದು ಕಡೆ ಸಮೀಪದಲ್ಲೇ ಎಮ್ ಆರ್ ಪಿ ಎಲ್ ಕಾರಖಾನೆ ಬಾಯ್ ತೆರೆದು ನಿ೦ತಿದೆ.
ಕೊಳತ್ತಾರು ಪದವಿನ ಕೂಗಳತೆಯಲ್ಲೇ ಮಂಜನಬೈಲು,ಮಂಗೆಬೆಟ್ಟು,ಒಂಟಿಮಾರು,ಕೊಂಡೆಬೆಟ್ಟು,ಅಶ್ವತ್ತಪುರ ,ಬಂಗೇರಪದವು -ಇನ್ನೂ ಅನೇಕ ಸಣ್ಣ ಸಣ್ಣ ಕೃಷಿ ಪ್ರದೇಶಗಳಿವೆ.ನಿಡ್ಡೋಡಿ,ತೆಂಕಮಿಜಾರು,ಬಡಗಮಿಜಾರು ,ಕಲ್ಲಮುಂಡ್ಕೂರು ಗ್ರಾಮಗಳು ಸುತ್ತಲೂ ಹರಡಿಕೊಂಡಿವೆ.ನಾಲ್ಕು ಸಾವಿರ ಮೆಗಾವ್ಯಾಟ್ ನ ಸ್ಥಾವರ ಸ್ಥಾಪನೆ ಆದರೆ ಕನಿಷ್ಟ ಇಪ್ಪತ್ತಕ್ಕಿಂತ ಹೆಚ್ಚು ಗ್ರಾಮಗಳು ಸಂಪೂರ್ಣ ಬರಡಾಗುತ್ತವೆ.ಬಂಗೇರ ಪದವಿನಿಂದ ಕೊಳತ್ತಾರಪದವಿಗೆ ಏರಿಕೊಂಡು ಹೋಗುವ ದಾರಿಯಲ್ಲಿ ಒಂದು ಸುಂದರ ಕೆರೆ ಇದೆ.ಅದರ ಬಳಿ ನಿಂತು ಕ್ಯಾಮರಾ ಕ್ಲಿಕ್ಕಿಸಿದೆ.ನಾವು ನಿನ್ನೆ ಕಂಡದ್ದು ಎಲ್ಲೆಲ್ಲೂ ಪಸರಿಸಿರುವ ಹಸುರು ಮತ್ತು ಜುಳು ಜುಳು ಹರಿಯುವ ನೀರು.ನಂದಿನಿ ಹೊಳೆ ಈ ಪರಿಸರದ ಒಂದು ಜೀವನದಿ.

ನಾನು ದಕ್ಷಿಣ ಕನ್ನಡ ಜಿಲ್ಲೆಯ ಹಳೆಯ ಪುತ್ತೂರು ತಾಲೂಕಿನ ಸಣ್ಣ ಹಳ್ಳಿಯಲ್ಲಿ ಸಣ್ಣ ಕೃಷಿಯ ಮನೆಯಲ್ಲಿ ಹುಟ್ಟಿ ಬೆಳೆದವನು.ನಮಗೆ ಕೃಷಿ ಎಂದರೆ ಉಣ್ಣುವ ಅನ್ನದ ಭಾಗ್ಯ ಕೊಡುವ ಭತ್ತದ ಬೆಳೆ.ಮತ್ತೆ ಸ್ವಲ್ಪ ತೆಂಗು ಬಾಳೆ ಅಡಕೆ ಮತ್ತು ತರಕಾರಿ.ಕಳೆದ ಅರುವತ್ತು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನ್ನದ ಭಾಗ್ಯದ ಭತ್ತದ ಬೆಳೆಯ ಪ್ರಮಾಣ ಗಣನೀಯವಾಗಿ ಕದಮೆಯಾಗುತ್ತಾ ಬಂದಿದೆ.ಇದಕ್ಕೆ ಕಾರಣಗಳು ಅನೇಕ ಇರಬಹುದು.ಕೃಷಿ ಕುರಿತು ವಿಶೇಷ ಅಧ್ಯಯನ ನಡೆಸಿರುವ ಡಾ.ನರೇಂದ್ರ ರೈ ದೇರ್ಲ ಅವರು ನನಗೆ ಕೊಟ್ಟ ಮಾಹಿತಿಯಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭತ್ತದ ಬೆಳೆಯ ಪ್ರಮಾಣ -೧೯೯೬ರಲ್ಲಿ ೩೬೨೬೪ ಹೆಕ್ಟೇರ್ ;೨೦೦೩ರಲ್ಲಿ ೩೩೪೧೬ಹೆಕ್ಟೇರ್,;೨೦೧೦ರಲ್ಲಿ ೩೨೪೦೮ಹೆಕ್ಟೇರ್ ಗಳು.ಕಳೆದ ಕೆಲವು ವರ್ಷಗಳಿಂದ ಭತ್ತದ ಗದ್ದೆಗಳಲ್ಲಿ ಕಟ್ಟಡಗಳ ಬೆಳೆಯೇ ಅಧಿಕವಾಗಿರುವುದರಿಂದ ನಮ್ಮ ಅನ್ನ ಭಾಗ್ಯದ ಅಕ್ಕಿಗಾಗಿ ನಾವು ಹೊರರಾಜ್ಯಗಳ ಮೇಲೆ ಅವಲಂಬಿತರಾಗಿದ್ದೇವೆ.ಇಂತಹ ಸನ್ನಿವೇಶದಲ್ಲಿ ನಿಡ್ಡೋಡಿ ಸುತ್ತುಮುತ್ತಲಿನ ಗ್ರಾಮಗಳ ಸಮೃದ್ಧ ಭತ್ತದ ಕೃಷಿ ಒಂದು ಆಶಾದಾಯಕ ಸ್ಥಿತಿ.ಇದನ್ನು ಯಾವುದೇ ಕಾರಣಕ್ಕೂ ಬಲಿ ಕೊಡಬಾರದು.

ನಂದಿಕೂರಿನ ವಿದ್ಯುತ್ ಸ್ಥಾವರದ ಬಹುಮುಖಿ ದುಷ್ಪರಿಣಾಮಗಳು ನಮ್ಮ ಕಣ್ಣ ಮುಂದೆ ಇವೆ.ಸಮುದ್ರದ ಜಲಚರಗಳ ಸಂರಕ್ಷಣೆ ಬಹಳ ದೊಡ್ಡ ಸವಾಲು.ಕುಡಿಯುವ ನೀರಿನ ಸಮಸ್ಯೆ ಬೃಹದಾಕಾರದ್ದು.ಮಕ್ಕಳ ,ಹೆಂಗುಸರ ,ಗ್ರಾಮೀಣರ ಆರೊಗ್ಯದ ಸಮಸ್ಯೆಗಳಿಗೆ ಪರಿಹಾರವೇ ಇರುವುದಿಲ್ಲ.ಪರಿಸರದ ನದಿ,ಹೊಳೆ ,ತೋಡು,ಕೆರೆ,ಹಳ್ಳಗಳು ವಿಷದ ಮಡುಗಳಾಗುತ್ತವೆ.ತುಳುವ ಸಂಸೃತಿಯ ಐತಿಹಾಸಿಕ ಅವಶೇಷಗಳು ನಿರ್ನಾಮವಾಗುತ್ತವೆ.ಲಕ್ಷಾಂತರ ಹಳ್ಳಿಗರು ತಮ್ಮ ಗ್ರಾಮೀಣ ಕೃಷಿ ಕಸುಬನ್ನು ಬಿಟ್ಟು ನಿಷ್ಪ್ರಯೋಜಕರಾಗಿ ಸಮಾಜದ ಆರೋಗ್ಯ ಕೆಟ್ಟು ಹೋಗುತ್ತದೆ.
ಸರಕಾರಗಳು ಬರುತ್ತವೆ ,ಸರಕಾರಗಳು ಹೋಗುತ್ತವೆ.ಆದರೆ ನದಿಗಳು ಹರಿಯುತ್ತಲೇ ಇರಬೇಕು,ಬೆಳೆಗಳು ಬೆಳೆಯುತ್ತಲೇ ಇರಬೇಕು,ಜನರು ತಮ್ಮ ಭೂಮಿಯಲ್ಲೇ ದುಡಿದು ಉಣ್ಣಬೇಕು.

ಅನ್ನದ ಬಟ್ಟಲಿನಲ್ಲಿ ಹಾರುಬೂದಿಯನ್ನು ಹಾಕಬಾರದು.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

One Response to “ನಿಡ್ಡೋಡಿಯಲ್ಲಿ ಅಡ್ಡಾಡಿದಾಗ ಕಂಡ ನೋಟಗಳು- ಅನ್ನದ ಬಟ್ಟಲಿನಲ್ಲಿ ಹಾರುವ ಬೂದಿಯ ದುಃಸ್ವಪ್ನ”

RSS Feed for ಬಿ ಎ ವಿವೇಕ ರೈ Comments RSS Feed

When enlightened and socially concerned people like you voice your sincere anxiety with utmost zeal do you think the powers that be care to respond with sensible reasons for such developmental hazards? Our only focus to educate the gullible masses who are easily carried away by political stunts like 30 kgs rice @ re. 1 to all BPL card holders is the best available mode and social media has become so handy to some extent. Let us wish ourselves all the best !!
S R Bhatta


Where's The Comment Form?

Liked it here?
Why not try sites on the blogroll...

%d bloggers like this: