ಮಿನ್ನಿಯ ಕನೇರಿ ಹಕ್ಕಿಯ ಕತ್ತು ಹಿಸುಕಿದ್ದು ಯಾರು ?

Posted on ಮಾರ್ಚ್ 8, 2012. Filed under: ಜಾನಪದ, ಹೆಣ್ಣು ಮತ್ತು ಸಂಸ್ಕೃತಿ, Feminism and Folklore | ಟ್ಯಾಗ್ ಗಳು:, , , , , |


Susan Glaspell ಅವಳ ‘A Jury of Her Peers'(1973) ಕತೆಯಲ್ಲಿ ಇಬ್ಬರು ಹೆಂಗುಸರು ಮೂರನೆಯ ಹೆಣ್ಣೊಬ್ಬಳ ಅಡುಗೆಮನೆಯನ್ನು ‘ಓದುತ್ತಾರೆ’.ಆ ಮನೆಯಲ್ಲಿ ಒಂದು ಕೊಲೆ ಆಗಿರುತ್ತದೆ.ಜಾನ್ ರೈಟ್ ಎಂಬ ಒಬ್ಬ ಲೋಭಿ ಮನುಷ್ಯನನ್ನು ಆತನು ನಿದ್ರಿಸಿದ್ದಾಗ ಹಗ್ಗದಿಂದ ಅವನ ಕುತ್ತಿಗೆಯನ್ನು ಬಿಗಿದು ಕೊಲೆಮಾಡಲಾಗಿರುತ್ತದೆ.ಅವನ ಹೆಂಡತಿ ಮಿನ್ನಿಯನ್ನು ಕೊಲೆ ಆಪಾದನೆಯ ಮೇಲೆ ಬಂಧಿಸುತ್ತಾರೆ.ಕೊಲೆಯ ಉದ್ದೇಶ ಏನೆಂದು ಗೊತ್ತಾಗುವುದಿಲ್ಲ. ತಾನು ಗಂಡನ ಜೊತೆಗೆ ಹಾಸಿಗೆಯಲ್ಲಿ ನಿದ್ರಿಸಿದ್ದೆ ಮಾತ್ರ, ಗಂಡನ ಕೊಲೆಯ ವಿಷಯ ತನಗೆ ಗೊತ್ತೇ ಇಲ್ಲ ಎನ್ನುವ ಮಿನ್ನಿಯ ವಿವರಣೆಯನ್ನು ಯಾರೂ ನಂಬುವುದಿಲ್ಲ.ನ್ಯಾಯ ವಿಚಾರಣೆಗೆ ಶರೀಪ ಮತ್ತು ಅವನ ಸಂಗಡಿಗರು ಬಂದಾಗ ಅವರ ಜೊತೆಗೆ ಅವರ ಹೆಂಡಂದಿರು ಕೂಡಾ ಕೊಲೆಯಾದ ಸ್ಥಳಕ್ಕೆ ಬರುತ್ತಾರೆ.ಗಂಡುಸರು ಕೊಲೆಯ ಸುಳುಹುಗಳಿಗಾಗಿ ಮೇಲೆ ಕೆಳಗೆ ,ಸುತ್ತಮುತ್ತ ವ್ಯರ್ಥವಾಗಿ ಶೋಧಿಸುತ್ತಾ ಇದ್ದಾಗ ,ಅವರ ಹೆಂಡತಿಯರು ಆಪಾದನೆಗೆ ಒಳಗಾದ ಹೆಣ್ಣು ಮಿನ್ನಿಯ ಅಡುಗೆಯ ಕೋಣೆಯಲ್ಲಿ ಕುಳಿತಿರುತ್ತಾರೆ.ಆ ಹೆಂಗುಸರು ಅಲ್ಲಿ ಕೆಲವು ಅವ್ಯವಸ್ಥಿತ ವಿವರಗಳನ್ನು ಗಮನಿಸುತ್ತಾರೆ.ಕೊಳೆಯಾದ ಕರವಸ್ತ್ರ ,ನೀರಿನ ತೊಟ್ಟಿಯಲ್ಲಿ ಮುಳುಗಿದ ಕೊಳಕಾದ ತಟ್ಟೆಗಳು ,ಬಾಯಿ ತೆರೆದುಕೊಂಡಿದ್ದ ಸಕ್ಕರೆಯ ಭರಣಿ,ಮುರಿದ ಬಾಗಿಲಿನ ಖಾಲಿಯಾದ ಹಕ್ಕಿಗೂಡು -ಈ ವಸ್ತುಗಳನ್ನು ಅವಲೋಕಿಸಿದ ಗಂಡುಸರು ‘ಮಿನ್ನಿಗೆ ಮನೆಯನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವ ಪ್ರವೃತ್ತಿ ಇಲ್ಲ ‘ ಎಂದು ಹೀಯಾಳಿಸುತ್ತಾರೆ.ಆದರೆ ಅವರ ಹೆಂಗುಸರ ದೃಷ್ಟಿಕೋನ ಬೇರೆಯೇ ಆಗಿರುತ್ತದೆ.ಅವರು ಅಡುಗೆಮನೆಯಲ್ಲಿ ಕಾಣುವುದು ಮಿನ್ನಿಯ ಅಸಡ್ಡೆಯ ಹವ್ಯಾಸಗಳನ್ನು ಅಲ್ಲ;ಹೆಣ್ಣೊಬ್ಬಳ ಒಂಟಿತನದ ನಿರಾಶೆ ಮತ್ತು ಯಾತನೆಯನ್ನು ಹೊರಗೆಡಹುವ ವಿಷಮಸ್ಥಿತಿಯನ್ನು.ಆ ಹೆಂಗುಸರು ಮಿನ್ನಿಯ ಹೊಲಿಗೆಯ ಕೆಲಸಗಳನ್ನು ಗಮನಿಸುತ್ತಾರೆ.ಅವಳು ಸುಂದರವಾದ ಮೆತ್ತೆಗಳ ಬಟ್ಟೆಗಳನ್ನು ಚೂರುಚೂರು ಮಾಡಿದ್ದಳು.ಪ್ರೀತಿಯಿಲ್ಲದ ಲೋಭಿ ಗಂಡನ ಜೊತೆಗಿನ ದೀರ್ಘಕಾಲದ ಅವಳ ದಾರುಣ ಬದುಕನ್ನು ಅರ್ಥ ಮಾಡಿಕೊಳ್ಳಲು ತೊಡಗಿದಾಗ ,ಆ ಹೆಂಗುಸರಿಗೆ ಮಿನ್ನಿಯ ಹುಚ್ಚು ಹುಚ್ಚಾದ ಹೊಲಿಗೆಯ ಹಿಂದಿನ ನೋವುಗಳು ಕಾಣಿಸಿದವು.ಆ ಹೆಂಗುಸರಿಗೆ ದೊರೆತ ಇನ್ನೊಂದು ಮಹತ್ವದ ಸುಳಿವು ಎಂದರೆ ,ಮಿನ್ನಿಯ ಹಾಡು ಹಕ್ಕಿ ಕನೇರಿ ಕತ್ತು ಹಿಸುಕಲ್ಪಟ್ಟು ಅವಳ ಕ್ರೂರ ಗಂಡನ ಬಳಿ ಸತ್ತು ಬಿದ್ದದ್ದು.ಇದನ್ನು ಕಂಡಾಗ ಆ ಹೆಂಗುಸರಿಗೆ ತಮ್ಮದೇ ವಿವಾಹ ಜೀವನದಲ್ಲಿ ತಾವು ಒಳಗಾಗುತ್ತಿರುವ ಹಿಂಸೆ ದಬ್ಬಾಳಿಕೆಗಳ ನೆನಪಾಯಿತು.’ಹೆಂಗುಸರು ಕ್ಷುಲ್ಲಕ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುತ್ತಾರೆ ‘ ಎಂಬ ತೀರ್ಮಾನಕ್ಕೆ ಬರುವ ಪುರುಷ ಜಗತ್ತಿನ ವಿರುದ್ಧ ಮಿನ್ನಿಯನ್ನು ಸಂರಕ್ಷಿಸುವ ಒಡನಾಡಿಗಳಾಗಿ ಆ ಹೆಂಗುಸರು ಜಾಗೃತರಾದರು.ಅವರು ತಮಗೆ ದೊರೆತ ಸಾಕ್ಷ್ಯಗಳನ್ನು ಮರೆಮಾಚಿದರು.ಕೊಲೆಗಾರರ ಶೋಧಕ್ಕಾಗಿ ಬಂದ ಗಂಡುಸರು ಯಾವುದೇ ಸುಳುಹು ಸಿಗದೆ ಹಿಂದಿರುಗಿದರು.ಕೊಲೆಗಾರರ ಶೋಧದ ಗಂಭೀರ ಸಂದರ್ಭದಲ್ಲಿ ಬಟ್ಟೆ ಚಿಂದಿಯ ಹೊಲಿಗೆಗಳನ್ನು ಸರಿಮಾದುತ್ತಿದ್ದ ಕ್ಷುದ್ರ ಕೆಲಸಗಳನ್ನು ಮಾಡುತ್ತಿದ್ದ ತಮ್ಮ ಹೆಂಡತಿಯರನ್ನು ಅವರು ತಮಾಷೆ ಮಾಡಿದರು.
ಈ ಕತೆಯು ಹೆಣ್ಣಿಗೆ ಸಂಬಂಧಿಸಿದ ಸಂಸ್ಕೃತಿಯ ಕೆಲವು ಪ್ರಮುಖ ವೈಶಿಷ್ಟ್ಯಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ.ಹೆಣ್ಣಿನ ಅನುಭವದಲ್ಲಿ ಸಾಮಾನ್ಯವಾಗಿರುವ ಸಂಕೇತಗಳು ಒಂದು ‘ಸಂಕೀರ್ಣ ಪಾಠ’ವನ್ನು ನಿರ್ಮಿಸಬಲ್ಲುವು.ಇದು ಅನೇಕ ರೀತಿಯ ‘ಓದುವಿಕೆ’ಗೆ ಅವಕಾಶ ಕಲ್ಪಿಸಿಕೊಡುತ್ತದೆ.ಗಂಡುಸರಿಗೆ ಸುಲಭವಾಗಿ ದಕ್ಕದ ರಹಸ್ಯ ಸಂದೇಶಗಳನ್ನು ಹೆಂಗುಸರು ಇಂತಹ ‘ಪಾಠ ‘ಗಳಲ್ಲಿ ಓದಬಲ್ಲರು.ಗಂಡುಸರನ್ನು ಕುರಿತು ಹೆಂಗುಸರು ವ್ಯಕ್ತಪಡಿಸುವ ಪ್ರತಿಕ್ರಿಯೆಗಳನ್ನು ಒಳಗೊಂಡ ,ನೇರವಾಗಿ ಅಭಿವ್ಯಕ್ತಿಸುವುದು ಸುರಕ್ಷಿತವಲ್ಲ ಎಂದು ತಿಳಿಯಲಾದ ಸಂದೇಶಗಳು -ಇಂತಹ ಸಂಕೀರ್ಣ ಪಾಠಗಳಲ್ಲಿ ಅಡಗಿರುತ್ತವೆ.’ A Jury of her Peers’ಕತೆಯಲ್ಲಿ ನಾವು ಕಾಣುವುದು ,ಮಹಿಳೆಯರ ಸಂಸ್ಕೃತಿಯಲ್ಲಿ ಹುದುಗಿರುವ ಸಂದೇಶಗಳನ್ನು ಬಿಚ್ಚಲು ,ಅದನ್ನು ಸೂಕ್ಷ್ಮವಾಗಿ ಓದುವ ಸಕ್ರಿಯ ಓದುಗರಾದ ಹೆಣ್ಣುಗಳನ್ನು.ಮಿನ್ನಿಯ ಅಡುಗೆಕೋಣೆಯನ್ನು ಹೆಣ್ಣಿನ ಸಂಸ್ಕೃತಿಯ ಒಂದು ಸಂಕೇತವಾಗಿ ಆ ಹೆಂಗುಸರು ಓದಲು ಸಾಧ್ಯವಾದದ್ದು -ಅದು ಅವರದ್ದೇ ಬದುಕಿನ ಒಂದು ವ್ಯಾಖ್ಯಾನದಂತೆ ಅವರಿಗೆ ಕಂಡದ್ದರಿಂದ.
ಮಹಿಳೆಯರ ಸಂಸ್ಕೃತಿಯಲ್ಲಿ ಅರ್ಥಗಳನ್ನು ರಹಸ್ಯವಾಗಿ ಇಟ್ಟುಕೊಂಡು ಅವನ್ನು ಸಂಕೇತಗಳ ಮೂಲಕ ಪ್ರಕಟಿಸುವುದು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.ಕೆಲವು ಸಂದೇಶಗಳನ್ನು ನೇರವಾಗಿ ಹೇಳುವುದರಿಂದ ಆಗುವ ಪರಿಣಾಮಗಳು ಅಪಾಯಕಾರಿ ಆಗಿರುವುದರಿಂದ ,ಹೇಳುವವರ ಆತ್ಮರಕ್ಷಣೆಯ ದೃಷ್ಟಿಯಿಂದ ಸಂಕೇತಗಳನ್ನು ಬಳಸಲಾಗುತ್ತದೆ.ಹೀಗಾಗಿ ಸಂಕೇತಗಳ ಕಾರಣವಾಗಿ ಸಂಕೀರ್ಣ ಅಥವಾ ಅಸ್ಪಷ್ಟ ಪಾಠವೊಂದು ನಿರ್ಮಾಣವಾಗುತ್ತದೆ.ಈ ರೀತಿ ಸಂಕೇತಗೊಳಿಸುವ ಕ್ರಿಯೆಯು ‘ಕೋಡಿಂಗ್ ‘ ಹೆಣ್ಣಿನ ಅನುಭವಗಳ ಅಭಿವ್ಯಕ್ತಿಯಲ್ಲಿ ಅನೇಕ ರೀತಿಗಳಲ್ಲಿ ಕಾಣಿಸಿಕೊಳ್ಳುತ್ತದೆ.ಸಾಹಿತ್ಯದಲ್ಲಾಗಲೀ ಜಾನಪದದಲ್ಲಾಗಲೀ ಈರೀತಿ ಕಾಣಿಸಿಕೊಳ್ಳುವ ಸಂಕೇತಾರ್ಥ ಬಿಡಿಸುವ ಕಾರ್ಯತಂತ್ರಗಳು ಹೆಚ್ಚು ಮುಖ್ಯವಾಗುತ್ತವೆ.
ಗೊಣಗುಟ್ಟುವಿಕೆ,ಗದ್ದಲ, ಚಂಡಿತನ,ಮೂಕ /ಮೌನ ,ನಿರ್ಲಕ್ಷ್ಯ ,ಮೈಮೇಲೆ ಬರುವುದು -ಇವುಗಳ ಒಳಗೆ ಬಿಡುಗಡೆಯ ತೊಳಲಾಟವಿರುತ್ತದೆ.ನಿರಾಕರಿಸುವುದು,ಅದುಮುವುದು,ರೂಪಾಂತರಿಸುವುದು,ಸಾಂಪ್ರದಾಯಿಕ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ವರ್ತಿಸುವುದು-ಇವೆಲ್ಲವೂ ಪುರುಷ ಪ್ರಭುತ್ವವನ್ನು ಎದುರಿಸುವ ಶಕ್ತಿಯನ್ನು ಹೊಂದಿರುತ್ತವೆ.ಹೆಣ್ಣಿನ ಸಂಸ್ಕೃತಿಯ ರಹಸ್ಯದ ಅರ್ಥಗಳನ್ನು ಅನಾವರಣ ಮಾಡುವುದು ಎಂದರೆ ,ರಹಸ್ಯ ಬಂಧನಗಳಿಂದ ಅವಳನ್ನು ಬಿಡುಗಡೆ ಮಾಡಿದಂತೆ, ಅವಳಿಗೆ ಬಿಡುಗಡೆಯ ಹಾದಿಯನ್ನು ತೋರಿಸಿದಂತೆ.
********************
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಕುಂದಾಪುರ ಬಳಿಯ ಮರವಂತೆಯಲ್ಲಿ ಕರ್ನಾಟಕದ ಲೇಖಕಿಯರಿಗಾಗಿ ನಾನು ನಡೆಸಿದ .ಜಾನಪದ ಮತ್ತು ಸ್ತ್ರೀವಾದ ‘ಎಂಬ ಕಮ್ಮಟಕ್ಕಾಗಿ ಸಿದ್ಧಪಡಿಸಿದ ನನ್ನ ಟಿಪ್ಪಣಿಯ ಕೆಲವು ಭಾಗಗಳು.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಮಿನ್ನಿಯ ಕನೇರಿ ಹಕ್ಕಿಯ ಕತ್ತು ಹಿಸುಕಿದ್ದು ಯಾರು ?”

RSS Feed for ಬಿ ಎ ವಿವೇಕ ರೈ Comments RSS Feed

ನಿಮ್ಮ ಲೇಖನ ಇಂದಿನ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಕೊನೆಗೊಳಿಸಿತು. ಆ ಬಗೆಯ ಓದನ್ನು ಒಳಗೊಳ್ಳಲಾಗದ ನನ್ನ ಬಗ್ಗೆ ನನಗೇ ನಾಚಿಕೆಯಾಗುತ್ತಿದೆ

ಮಹಿಳಾ ದನಾಚರಣೆ ದಿನ ಮಹಿಳಾ ಒಳನೋಟದ ಕಥೆ ಓದಿದಂತಾಯಿತು ಉತ್ತಮ ಕಥೆ.ಉತ್ತಮ ವಿಮರ್ಶೆ.


Where's The Comment Form?

Liked it here?
Why not try sites on the blogroll...

%d bloggers like this: