ಮೈನಸ್ ಹತ್ತು ಡಿಗ್ರಿಯ ಚಳಿಯಲ್ಲಿ ಬೆಳಗುವ ಸೂರ್ಯನ ಜೊತೆಗೆ ಪಯಣ

Posted on ಫೆಬ್ರವರಿ 2, 2012. Filed under: ಜರ್ಮನಿ, ವ್ಯೂರ್ತ್ಸ್ ಬುರ್ಗ್, Main river, Wurzburg | ಟ್ಯಾಗ್ ಗಳು:, , , , |


ಜರ್ಮನಿಯಲ್ಲಿ ನಿಜವಾದ ಚಳಿಗಾಲ  ಈ ಬಾರಿ ಬಹಳ ತಡವಾಗಿ ಈಗತಾನೇ ಆರಂಭವಾಗಿದೆ.ಕಳೆದ ಎರಡು ಚಳಿಗಾಲಗಳನ್ನು ಹಿಮಗಾಲಗಳನ್ನಾಗಿ  ವ್ಯೂರ್ತ್ಸ್ ಬುರ್ಗ್ ನಲ್ಲಿ ಕಳೆದ ನನಗೆ ಎಲ್ಲೋ ಎರಡು ದಿನ ಮುಖ ತೋರಿಸಿ ಕಾಣದಂತೆ ಮಾಯವಾದ ಹಿಮದ ಆಸೆ ಹಿಮದಂತೆಯೇ ಕರಗಿ ಹೋಗಿದೆ.ಹಿಮದಲ್ಲಿ ಮುಳುಗಿ ‘ವೈಟ್ ಕ್ರಿಸ್ಮಸ್ ‘ ಆಚರಿಸುತ್ತಿದ್ದವರಿಗೆ ಆ ಸಂಭ್ರಮ ಈ ವರ್ಷ ಇರಲಿಲ್ಲ.ಕೇವಲ ಸೊನ್ನೆಯಿಂದ ಎಂಟು ಹತ್ತು ಡಿಗ್ರಿಯ ನಡುವೆ ತೊನೆದಾಡುತ್ತಿದ್ದ ಹವಾಮಾನ ಈ ವಾರ ಸರ್ರನೆ ಕೆಳಕ್ಕೆ ಜಾರುತ್ತಾ ,ನಿನ್ನೆ – ಬುಧವಾರ ಫೆಬ್ರವರಿ ಒಂದರಂದು ಮೈನಸ್ ಹತ್ತು ಡಿಗ್ರಿ ಗೆ ಇಳಿದಾಗ ಇಲ್ಲಿನ ಅನೇಕರಿಗೆ ಕೊನೆಗೂ ಸಮಾಧಾನವಾಯಿತು- ಕೊನೆಗೂ ಎರಡು ತಿಂಗಳು ತಡವಾಗಿಯಾದರೂ ನಿಜವಾದ ಚಳಿಗಾಲ ಬಂತಲ್ಲಾ ಎಂದು.ಚಳಿಗಾಲಕ್ಕಾಗಿ  ಅವರು ಕೊಂಡುಕೊಂಡಿದ್ದ ,ಅಡಿಯಿಂದ ಮುಡಿಯವರೆಗಿನ ಸಮಸ್ತ ವೇಷಭೂಷಣಗಳನ್ನು ಧರಿಸಲು ಕೊನೆಗೂ ಒಂದು ಸದವಕಾಶ  ದೊರೆಯಿತಲ್ಲಾ ಎನ್ನುವ ಸಂತೃಪ್ತಿ ಇಲ್ಲಿನವರಿಗೆ.

ನಾನು ನಿನ್ನೆ ಬೆಳಗ್ಗೆ ಎದ್ದು  ಸೂರ್ಯನು ಎಂದಿನಂತೆ ತಡವಾಗಿ ಏಳುವವರೆಗೆ  ಕಾದು, ನನ್ನ ಅತಿಥಿ ಗೃಹದ ಒಂಬತ್ತನೆಯ ಮಹಡಿಯ ಕಿಟಿಕಿಯಿಂದ ಹೊರಗೆ ನೋಡಿದರೆ ಆಶ್ಚರ್ಯ -ಪ್ರಜ್ವಲವಾಗಿ ಫಳಫಳನೆ ಹೊಳೆಯುವ ಸೂರ್ಯ.ಮತ್ತೊಮ್ಮೆ ಇಂಟರ್ನೆಟ್ ನಲ್ಲಿ ಇಲ್ಲಿನ ಸದ್ಯದ ಹವಾಮಾನ ನೋಡಿದರೆ ಮೈನಸ್ ಹತ್ತು ಡಿಗ್ರಿ ತೋರಿಸುತ್ತಿದೆ.ಯಾರನ್ನು ನಂಬುವುದು ಎನ್ನುವ ಗೊಂದಲ ನನಗೆ.ನಮ್ಮ ಊರಲ್ಲಿ ಹೀಗೆ ಸೂರ್ಯ ಉರಿಯುತ್ತಿದ್ದರೆ ಮೂವತ್ತು ಡಿಗ್ರಿ ಎಂದು ಯಾವುದೇ ಬೇರೆ ಪ್ರಮಾಣವಿಲ್ಲದೆ ಹೇಳುತ್ತಿದ್ದೆ.ಆದರೆ ಇಲ್ಲಿ , ಯುರೋಪಿನಲ್ಲಿ ಎಲ್ಲೇ ಆದರೂ ಹವಾಮಾನದ ಬಗ್ಗೆ ಏನನ್ನೂ ಖಚಿತವಾಗಿ ಹೇಳುವಂತಿಲ್ಲ. ‘ಯೂರೋಪಿನ ಹವಾಮಾನವನ್ನು ಮತ್ತು ಭಾರತದ ರಾಜಕೀಯವನ್ನು ಹೀಗೆಯೇ ಆಗುತ್ತದೆ ಎಂದು ಭವಿಷ್ಯ ಹೇಳುವ ಹಾಗಿಲ್ಲ’ ಎನ್ನುವ ಹೇಳಿಕೆ /ಜೋಕ್ ಕೇಳಿದ್ದೆ.ಅವು ಎರಡೂ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತವೆ ಎನ್ನುವುದು ಈಗ ನಾವು ಕಾಣುತ್ತಿರುವ ,ಅನುಭವಿಸುತ್ತಿರುವ ಸತ್ಯಸ್ಯ ಸತ್ಯ.

ನಿನ್ನೆ ದಿನ ಬೆಳಗ್ಗೆ ಎಂಟೂವರೆಗೆ ವಿಶ್ವವಿದ್ಯಾನಿಲಯಕ್ಕೆ ಹೋಗುವ ಮೊದಲು ನನ್ನ ವಾಸದ ಒಂಬತ್ತನೆಯ ಮಹಡಿಯ ಕಿಟಿಕಿಯಿಂದ  ಬೆಳಗುವ ಸೂರ್ಯನ ಕೆಲವು ಚಿತ್ರಗಳನ್ನು ಸೆರೆಹಿಡಿದೆ.ಅಂತಹ ಒಂದು ಚಿತ್ರ ಮೇಲಿನ  ಚಿತ್ರಸರಣಿಯಲ್ಲಿ ಮೊದಲನೆಯದು.ಮತ್ತೆ ಉಳಿದ ಎಲ್ಲ ಹದಿನೇಳು ಫೋಟೋಗಳು ನಿನ್ನೆ ಸಂಜೆ ನಾಲ್ಕರಿಂದ ಐದೂವರೆಯ ನಡುವೆ ಮಾಯಿನ್ ನದಿಯ ಸುತ್ತಮುತ್ತ ತೆಗೆದವು.ಮೊದಲನೆಯ ಸಾಲಿನ ಎರಡು ಮತ್ತು ಮೂರನೆಯ ಚಿತ್ರಗಳು ಆಗಲುತ್ತಿರುವ  ಸೂರ್ಯನ ಬಿಂಬಗಳು.ಎರಡನೆಯ ಸಾಲಿನ ಮೂರು ಚಿತ್ರಗಳು ಸೂರ್ಯ ನಿರ್ಗಮನದ ಮರುಕ್ಷಣದವು. ಮಾಯಿನ್ ನದಿಯ ಭೋರ್ಗರೆತದ  ಒಂದು ದೃಶ್ಯ ಕೂಡಾ ಇದೆ.ಮೂರನೆಯ ಸಾಲಿನ ಮೂರು ಚಿತ್ರಗಳು -ಮಾಯಿನ್ ನದಿಯ ನಡುವೆ ಇರುವ ಕಲ್ಲಿನ ದಂಡೆಯಲ್ಲಿ ಜುಳುಜುಳು ನೀರಿನ ನಡುವೆ ವಲಸೆ ಬಂದು ಕುಳಿತುಕೊಳ್ಳುವ ಹಕ್ಕಿಗಳ ಸಂಭ್ರಮದ್ದು. ಅವುಗಳಿಗೆ ಚಳಿಯ ಗೊಡವೆ ಇದ್ದಂತಿಲ್ಲ.ನಾಲ್ಕನೆಯ ಸಾಲಿನ ಮೂರು ಚಿತ್ರಗಳು- ಮಾಯಿನ್ ನದಿಯ ಇನ್ನೊಂದು ದಂಡೆಯಲ್ಲಿ ಇನ್ನೊಂದು ಗುಂಪಿನ ಹಕ್ಕಿಗಳ ಹಾರಾಟ ಮತ್ತು ತೇಲಾಟ.ಆದರೆ ಈ ಗುಂಪಿಗೆ ಸೇರದ ಮತ್ತೊಂದು  ಜಾತಿಯ ಹಕ್ಕಿ ತನ್ನ ಪಾಡಿಗೆ ,ಚಳಿ ಗಿಳಿಗಳ ಹಂಗು ಇಲ್ಲದೆ ಕೊರೆವ ತಣ್ಣನೆಯ ನೀರಿನ ಸುಖವನ್ನು ಅನುಭವಿಸುತ್ತಿರುವ ಚಿತ್ರ ಆ ಸಾಲಿನ ಕೊನೆಯದು.ಐದನೆಯ ಸಾಲಿನ ಮೂರು ಚಿತ್ರಗಳು- ಅರ್ಧಚಂದ್ರನ  ಶುಭ್ರ ನೋಟ.ನನಗೆ ಅನಿರೀಕ್ಷಿತವಾಗಿ ಕಂಡ ದೃಶ್ಯ ಅದು.ಸೂರ್ಯ ಕಣ್ಮರೆಯಾಗುತ್ತಿದ್ದಂತೆಯೇ  ಅತಿ ಶುಭ್ರ ಆಕಾಶದಲ್ಲಿ ಕಾಣಿಸಿಕೊಂಡ ಬಾಲಚಂದ್ರನನ್ನು ಏಕಾಂಗಿಯಾಗಿ ಮತ್ತು ಮರದ ರೆಂಬೆ ಕೊಂಬೆಗಳ ಬಲೆಯ ಒಳಗೆ  ಹಿಡಿದಿಟ್ಟ ಚಿತ್ರಗಳು ನನಗೆ ಹೆಚ್ಚು ತೃಪ್ತಿ ಕೊಟ್ಟವು.ಕೊನೆಯ ಸಾಲಿನ ಮೂರು ಫೋಟೋಗಳು ಸುಮಾರು ಐದೂವರೆ ಗಂಟೆಗೆ ನಮ್ಮಲ್ಲಿ ಕತ್ತಲು ಆವರಿಸುತ್ತಿದ್ದಂತೆ ,ಸೂರ್ಯ ಪಯಣದ ಮಂಗಳ ಗೀತದ ದಾಖಲೆಗಳು.

ಮೈನಸ್ ಹತ್ತು ಡಿಗ್ರಿಯ ಹವೆ ಇಲ್ಲಿ ವಿಶೇಷವಾದುದು ಏನೂ ಅಲ್ಲ.ಇವತ್ತು ಮೈನಸ್ ಹದಿನಾಲ್ಕು ಎಂದು ಮುನ್ಸೂಚನೆ ಇದೆ.ಈ ವಾರ ಅದು ಮೈನಸ್  ಇಪ್ಪತ್ತವರೆಗೆ ಹೋಗಬಹುದು.ಆದರೆ ನನಗೆ ಸಮಸ್ಯೆ ಇರುವುದು ಚಳಿಯಲ್ಲಿ ಮಾಯಿನ್ ನದಿಯ ದಂಡೆಯಲ್ಲಿ ಓಡಾಡುವುದರ ಬಗ್ಗೆ ಅಲ್ಲ, ನನ್ನ ಕಷ್ಟವೆಂದರೆ  ನನ್ನ ಕ್ಯಾಮರಾವನ್ನು ಹೊರತೆಗೆದು ಕೆಲವು ನಿಮಿಷಗಳವರೆಗೆ ಹೊರ ಚಳಿಗೆ ತೆರೆದುಕೊಳ್ಳುವುದರ  ಬಗ್ಗೆ.ಹಿಮ ಮೈ ಮೇಲೆ ಸುರಿಯುತ್ತಿರುವಾಗಲೂ ನಾನು ಸಾಕಷ್ಟು ಫೋಟೋ ಇಲ್ಲಿ ತೆಗೆದಿದ್ದೇನೆ.ಆದರೆ ಆಗ ಉಷ್ಣತೆ ಸೊನ್ನೆಯ ಸುತ್ತಮುತ್ತ ಇರುತ್ತದೆ.ಒಂದು ಬಾರಿ ಮೈನಸ್ ಕೆಳಕ್ಕೆ ಇಳಿದರೆ ಅಲ್ಲಿ ಮತ್ತೆ ಹಿಮ ಇರುವುದಿಲ್ಲ.ಆದರೆ ಈಗಿನ ಇಂತಹ ‘ಪಾತಾಳಚಳಿ’ಯಲ್ಲಿ ಕೈಯ ಗ್ಲೌಸ್ ಗಳನ್ನೂ ಕಳಚದೆ ಕ್ಯಾಮರಾವನ್ನು ಸರಿಯಾಗಿ ಹಿಡಿದುಕೊಂಡು, ನಿಟ್ಟಿಸಿ ಕ್ಲಿಕ್ ಮಾಡಲು ಆಗುವುದಿಲ್ಲ.ತೆಳ್ಳನೆಯ ಗ್ಲೌಸ್ ಹಾಕಿಕೊಂಡರೆ ಚಳಿ ತಡೆಯಲು ಸಾಕಾಗುವುದಿಲ್ಲ.ದಪ್ಪನೆಯ ಗ್ಲೌಸ್ ಹಾಕಿಕೊಂಡರೆ ಅದನ್ನು ಕಳಚಿ ,ಕ್ಯಾಮರಾ ತೆಗೆದು ತೆರೆದು ಕಣ್ಣಾಡಿಸಿ ಕ್ಲಿಕ್ ಮಾಡುವ ಹೊತ್ತಿಗೆ ಬೆರಳುಗಳು  ಮರಗಟ್ಟಿ ಹೋಗಿರುತ್ತವೆ.’ಅಗ್ನಿದಿವ್ಯ ‘ಎನ್ನುವ ಪದವನ್ನು ಸಾಕಷ್ಟು ಕೇಳಿದ್ದೆ  ಮತ್ತು ಬಳಸಿದ್ದೆ.ಆದರೆ ಇದು ‘ಶೈತ್ಯದಿವ್ಯ’. ಇದು ಇಲ್ಲಿ  ಒಂದೊಂದು ಕ್ಷಣದ  ಪರೀಷಹ. ಹಾಗಾಗಿ ಇಲ್ಲಿನ ಈ ಚಿತ್ರಗಳ ಬಗೆಗೆ ನನಗೆ ಹೆಚ್ಚು ಪ್ರೀತಿ.ಜೊತೆಗೆ ಇಷ್ಟು ದೇದೀಪ್ಯಮಾನ ಸೂರ್ಯ ಮತ್ತೆ ಈ ಚಳಿಗಾಲದಲ್ಲಿ ಇಡೀ ದಿನ  ಕಾಣಿಸಿಕೊಳ್ಳುವ  ಕಾಲಜ್ಞಾನವನ್ನು  ಯಾರೂ ಹೇಳಲಾರರು.

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

4 Responses to “ಮೈನಸ್ ಹತ್ತು ಡಿಗ್ರಿಯ ಚಳಿಯಲ್ಲಿ ಬೆಳಗುವ ಸೂರ್ಯನ ಜೊತೆಗೆ ಪಯಣ”

RSS Feed for ಬಿ ಎ ವಿವೇಕ ರೈ Comments RSS Feed

ಆಹಾ! ಎಂಥಹ ಅನುಭವ ಪಡೆಯುತ್ತಿರುವಿರಿ ತಾವು! ಮಾಯಿನ್ ನದಿಯನ್ನು ಹಾಗೂ ನಿನ್ನೆ (ಬುಧವಾರ, ೦೧ ಫೆಬ್ರವರಿ ೨೦೧೨) ಮುಂಜಾನೆಯ ಸೂರ್ಯೋದಯವನ್ನು ಕೊರೆಯುವ ಚಳಿ ( -೧೦ ಡಿಗ್ರಿ ಸೆಲ್ಸಿಯಸ್) ಯಲ್ಲಿ ಪ್ರಯಾಸದಿಂದ ಸೆರೆಹಿಡಿದ ಪ್ರತಿಯೊಂದು ಚಿತ್ರಗಳು ಒಂದೊಂದು ಕಥೆ ಹೇಳುವಂತಿವೆ. ಚಳಿಯಲ್ಲಿ, ಮಂಜು ಬೀಳುವಾಗ, ಸೂರ್ಯನ ನೆರಳು-ಬೆಳಕಿನಾಟ, ಕಣ್ಣಾ ಮುಚ್ಚಾಲೆಯಾಟವನ್ನು ತಸ್ವೀರಿನಲ್ಲಿ ಸೆರೆಹಿಡಿಯುವ ತ್ರಾಸು ಅನುಭವಿಸಿದವರಿಗೆ ಗೊತ್ತು. ನಾನೂ ಹೈಸ್ಕೂಲಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ, ನಮ್ಮ ಶಾಲೆ( ಅ. ರಾ. ಹಿರೇಮಠ ಮಾಧ್ಯಮಿಕ ಶಾಲೆ, ಕೆರೂರು,ಬಾದಾಮಿ ತಾಲ್ಲೂಕು.ಬಾಗಲಕೋಟೆ ಜಿಲ್ಲೆ (ಆಗಿನ ಬಿಜಾಪುರ ಜಿಲ್ಲೆ)) ಯ ಕನ್ನಡ ಶಿಕ್ಷಕಿ ಶ್ರೀಮತಿ ಶಾಂತಾ ಬಲರಾಮ್ ನಾಯಕ ಅವರಿಂದ ಚಿಕ್ಕ ಕ್ಯಾಮೆರಾವನ್ನು ಕಡ ಪಡೆದುಕೊಂಡು ಮಳೆಯಲ್ಲಿ , ಚಳಿಯಲ್ಲಿ, ಬಿಸಿಲಲ್ಲಿ ದೃಶ್ಯಗಳನ್ನು ಸೆರೆಹಿಡಿಯಲು ಪ್ರಯಾಸಪಡುತ್ತಿದ್ದ ದಿನಗಳು ನೆನಪಾದವು. ಇಂಥ ಚಿತ್ರಗಳನ್ನು ಸಂದರ್ಭ ಸಹಿತ ವಿವರಿಸಿ,ನನ್ನಂತಹ ಯುವಕರ ಜೊತೆ ತಮ್ಮ ಅನುಭವ ಹಂಚಿಕೊಂಡಿರುವುದಕ್ಕೆ ಅಭಿನಂದನೆಗಳು.

ಪ್ರಿಯ ಡಾ.ಬಂಗಾರಿ,ನಿಮ್ಮ ಆಸಕ್ತಿ ಅಭಿರುಚಿ ಉತ್ಸಾಹ ನೋಡಿ ಸಂತೋಷ ಆಯಿತು.ಬದುಕಿನಲ್ಲಿ ಯಾವ ಅನುಭವವೂ ಅಮುಖ್ಯ ಅಲ್ಲ.ಸಣ್ಣ ನೋಟವೊಂದು ಬದುಕಿಗೆ ಹೊಸ ನೋಟವನ್ನು ಕೊಡಬಲ್ಲುದು..ನಮಸ್ಕಾರ .

‘ಮೈನಸ್ ೧೦ ಡಿಗ್ರಿಯಲ್ಲಿ ಬೆಳಗುವ ಸೂರ್ಯನ ಜೊತೆಗೆ ಪಯಣ’ ಬೆಳೆಸಿದ ನಿಮ್ಮ ಈ ಅನುಭವವನ್ನು ತಿಂಗಳ ಹಿಂದೆ ‘ಮೊನ್ನೆ ಬೆಳಗಿದ ಸೂರ್ಯ ಇಂದು ಸುರಿದ ಮಳೆ’ಯ ನಿಮ್ಮ ಆ ಅನುಭವದೊಡನೆ ಹೋಲಿಸಿನೋಡಿದರೆ ಅಲ್ಲೆಲ್ಲ ಇಂಥಾ ಚಳಿಗೆ ನಿಮಗೆ ಸೂರ್ಯನೇ ಹೆಚ್ಚು ಹತ್ತಿರವಾದಂತೆ ಕಾಣುತ್ತಿದೆ.
-ನಂದಾವರ .

ಪ್ರಿಯ ನಂದಾವರರಿಗೆ ನಮಸ್ಕಾರ.ದಿನಾಲೂ ಕಾಣಿಸಿಕೊಂಡು ಸಸಾರ ಆಗಿರುವ ಸೂರ್ಯನಿಗಿಂತ ಅಪರೂಪಕ್ಕೆ ಅತಿಥಿಯಂತೆ ಬರುವ ಸೂರ್ಯ ಹೆಚ್ಚು ಇಷ್ಟ ಆಗುತ್ತಾನೆ. ‘ಲೋಕದ ಚೇಷ್ಟೆಗೆ ರವಿ ಬೀಜವಾದಂತೆ’ ಎಂದು ಅಕ್ಕಮಹಾದೇವಿ ಹೇಳಿದಂತೆ ,ನಮ್ಮ ಎಲ್ಲ ಚಟುವಟಿಕೆಗಳಿಗೆ ಅವನು ತೀರಾ ಅಗತ್ಯ.ಚಳಿಯ ಲೋಕದಲ್ಲಿ ಅವನನ್ನು ಕಾಣುವುದೇ ಸುಖ .ಪಾಪ ಅವನೇನು ಮಾಡುತ್ತಾನೆ ,ಇಲ್ಲಿನ ಚಳಿಗಾಲವು ಅವನಿಗೂ ಚಳಿ ಹಿಡಿಸಿದರೆ.ಮಂಗಳೂರಲ್ಲಿ ಉರಿ ಉರ್ದಲದ ಸೂರ್ಯನನ್ನು ಕಂಡ ನಮಗೆ ,ತಣ್ಣನೆಯ ಸೂರ್ಯನನ್ನು ಕಂಡರೆ ಅನುಕಂಪ ಮತ್ತು ಪ್ರೀತಿ.


Where's The Comment Form?

Liked it here?
Why not try sites on the blogroll...

%d bloggers like this: