ಮೂವರು ಕಾಲಜ್ಞಾನಿ -ರಾಜರ ಮೆರವಣಿಗೆಯಲ್ಲಿ :ಐತಿಹ್ಯ ಪುರಾಣ ಆಚರಣೆ ರಂಗಭೂಮಿಗಳ ಪಯಣ

Posted on ಜನವರಿ 10, 2012. Filed under: ಜರ್ಮನಿ, ಮೂವರು ರಾಜರು, Three Kings, Wurzburg | ಟ್ಯಾಗ್ ಗಳು:, , , , , , , , , , |


ಜನವರಿ  ಆರು -ಜರ್ಮನಿಯ ಬವೇರಿಯಾ ಪ್ರಾಂತ್ಯದಲ್ಲಿ ಸಾರ್ವಜನಿಕ ರಜೆ. ಇಲ್ಲಿ ರಜೆ ಎಂದರೆ ಕಚೇರಿ ,ಸಂಸ್ಥೆಗಳಷ್ಟೇ ಅಲ್ಲ. ಅಂಗಡಿ ,ಮಳಿಗೆ ಯಾವುದೂ ಬಾಗಿಲು ತೆರೆಯುವುದಿಲ್ಲ. ಅದು ‘ಮೂವರು ರಾಜರ ದಿನ’. ( Dreikoenigstag ).  ಆ ದಿನ ನಮ್ಮಲ್ಲಿ ವ್ಯೂರ್ತ್ಸ್ ಬುರ್ಗ್ ನಲ್ಲಿ ‘ರೆಸಿಡೆನ್ಜ್ ‘ ( ಐತಿಹಾಸಿಕ ಅರಮನೆ ) ನಿಂದ  ಕುದುರೆಗಳ ಮೇಲೆ ಮೂವರು ರಾಜರ ಮೆರವಣಿಗೆಯು ನಗರದಲ್ಲಿ ಸಾಗಿಬಂದು , ಡೊಮ್ ಬಳಿಯಲ್ಲಿ ಮಗು ಏಸುವಿಗೆ ತಾವು ಹೊತ್ತುತಂದ ಕಾಣಿಕೆಗಳನ್ನು ಸಮರ್ಪಿಸುವ ಪ್ರದರ್ಶನ ಇರುತ್ತದೆ ಎಂದು ಇಲ್ಲಿನ ಜರ್ಮನ್ ಸ್ನೇಹಿತರು ಹೇಳಿದರು.ಕಳೆದ ವರ್ಷ ಹಿಮಪಾತದ ಕಾರಣ ಆ  ಕಾರ್ಯಕ್ರಮ ನಡೆಯಲಿಲ್ಲ ಅಂತೆ.ಇಲ್ಲೇ ಬಹಳ ವರ್ಷಗಳಿಂದ ವಾಸವಾಗಿರುವ ಅನೇಕ ಮಂದಿ ಈ ಮೆರವಣಿಗೆ ಮತ್ತು ಪ್ರದರ್ಶನವನ್ನು ನೋಡಿಲ್ಲ ಎಂದು ಹೇಳಿದರು.ಕಳೆದ ಮೂರು ವರ್ಷಗಳ ಇಲ್ಲಿನ ನನ್ನ ವಾಸ್ತವ್ಯದಲ್ಲಿ ಮೊದಲ ಬಾರಿ ಜನವರಿ ಆರರಂದು ನಾನು ಇಲ್ಲಿ ಇರುವ ಕಾರಣ,ಈ ವರ್ಷ  ಆ ಕಾರ್ಯಕ್ರಮ ಇರುವುದಾದರೆ ಅದನ್ನು ನೋಡಲೇಬೇಕೆಂದು  ತೀರ್ಮಾನಿಸಿದೆ. ಆದರೆ ಕಳೆದ  ವಾರ  ಜನವರಿ ಆರರ ಶುಕ್ರವಾರ ಬೆಳಗ್ಗಿನಿಂದಲೇ ಮಳೆ.ಹಾಗಾಗಿ ಕಾರ್ಯಕ್ರಮ ರದ್ದಾಗಬಹುದು ಎನ್ನುವ ಆತಂಕ ಇತ್ತು. ಮೆರವಣಿಗೆ  ಸಂಜೆ ಐದು ಗಂಟೆಗೆ ಆರಂಭ ಎಂಬ ಮಾಹಿತಿ ಮಾತ್ರ ದೊರೆಯಿತು.

ನಮ್ಮ ಇಂಡಾಲಜಿ ವಿಭಾಗದಲ್ಲಿ ಪ್ರಾಧ್ಯಾಪಕಿ ಆಗಿರುವ ಕರಿನ್ ಸ್ತೈನರ್ ನನ್ನನ್ನು ಆ ದಿನ ಸಂಜೆ ತಮ್ಮ ಮನೆಗೆ ಚಹಾಕ್ಕೆ ಕರೆದಿದ್ದರು. ಅವರ ಮನೆ ಇರುವುದು  ನಗರದಿಂದ ಸುಮಾರು ಹನ್ನೆರಡು ಕಿಲೋಮೀಟರ್ ದೂರದ ತ್ಯುಂಗರ್ ಸೈಮ್ ನಲ್ಲಿ. ಸಂಜೆ ಮೂರೂವರೆಗೆ ಅಲ್ಲಿಗೆ ಹೋದವನು ‘ಮೂವರು ರಾಜರ ದಿನ’ದ ಮಹತ್ವ ಮತ್ತು ಸ್ಥಳೀಯ ಆಚರಣೆಗಳ  ಬಗ್ಗೆ ವಿಚಾರಿಸಿದೆ.

ಏಸುಕ್ರಿಸ್ತನ ಜನನದ ಬಳಿಕದ ಒಂದು ಕಥಾನಕ ಮೌಖಿಕ ಪರಂಪರೆಯಿಂದ ಬೈಬಲಿನ ಲಿಖಿತ ಪರಂಪರೆಗೆ ಹೋಗಿ,ಮತ್ತೆ ಅದು ಐತಿಹ್ಯದಿಂದ ಪುರಾಣವಾಗಿ, ಮತ್ತೆ ಅದು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಸಂಸ್ಕೃತಿಗಳಲ್ಲಿ ,ಕಾಲಘಟ್ಟಗಳಲ್ಲಿ  ಹೊಸ ವ್ಯಾಖ್ಯಾನಗಳಿಗೆ ಬದಲಾವಣೆಗಳಿಗೆ ಒಳಗಾಗಿ, ಅನೇಕ ಭಿನ್ನ ಪಾಠಗಳನ್ನು ಪಡೆದು,.ಆಚರಣೆಯ ಭಾಗವಾಗಿ ,ರಂಗಭೂಮಿಯ ಲಕ್ಷಣಗಳನ್ನು ಕೂಡಾ  ಸೇರಿಸಿಕೊಂಡು ,ಪ್ರದರ್ಶನದ ರೂಪಗಳನ್ನು ತಾಳಿದ ರೋಚಕ ಸಂಗತಿಗಳನ್ನು ಕರೀನ್ ಸ್ತೈನರ್ ವಿವರಿಸಿದರು.

ಬೈಬಲ್ ನ ‘ಹೊಸ ಒಡಂಬಡಿಕೆ ‘ಆವೃತ್ತಿಯ ಮತ್ತಾಯನ (ಮ್ಯಾಥ್ಯೂ ) ಸುವಾರ್ತೆಯಲ್ಲಿ ಈ ಮೂವರು ರಾಜರ ಪ್ರಸಂಗ ಬರುತ್ತದೆ.ಯೇಸು ಜೆರುಸಲೆಂನಲ್ಲಿ ಜನಿಸಿದಾಗ ಪೂರ್ವದ ಕಡೆಯಿಂದ ಮೂವರು ಕಾಲಜ್ಞಾನಿಗಳು ಅಲ್ಲಿಗೆ ಬರುತ್ತಾರೆ. ” ಜೆರುಸಲೆಂನಲ್ಲಿ  ಜನಿಸಿದ ಯಹೂದ್ಯರ ರಾಜ ಎಲ್ಲಿದ್ದಾನೆ ? ನಾವು ಪೂರ್ವದಲ್ಲಿ ಕಾಣಿಸಿಕೊಂಡ  ಆತನ ಜನನ ಸೂಚಕದ ನಕ್ಷತ್ರವನ್ನು ನೋಡಿದೆವು.ಆತನನ್ನು ಪೂಜೆಮಾಡಲು  ನಾವು ಬಂದಿದ್ದೇವೆ.” ಎಂದು ಅವರು  ಹೇಳುತ್ತಾರೆ.ಇವರ ಕಾಲಜ್ಞಾನದ ನುಡಿಗಳಿಂದ ಏಸು ಜನಿಸಿದ ಸುದ್ದಿಯು  ರಾಜ ಹೆರೋದನಿಗೆ ಮತ್ತು ಅಲ್ಲಿನ ಜನರಿಗೆ ಗೊತ್ತಾಗುತ್ತದೆ.ಪೂರ್ವದಿಂದ ಬಂದ ಈ ಮೂವರು ಕಾಲಜ್ಞಾನಿಗಳು ತಾಯಿ ಮೇರಿಯ ಬಳಿ ಮಲಗಿದ್ದ ಶಿಶು ಯೇಸುವನ್ನು ಕಾಣುತ್ತಾರೆ.ಆತನಿಗೆ ನಮಸ್ಕರಿಸುತ್ತಾರೆ ,ಪೂಜಿಸುತ್ತಾರೆ.ಇವರು ತಾವು ತಂದ ಅಪೂರ್ವ ಉಡುಗೊರೆಗಳನ್ನು ಮಗು ಏಸುವಿಗೆ ಸಮರ್ಪಿಸುತ್ತಾರೆ.ಈ ಮೂವರು ಹೊತ್ತುತಂದ ಮೂರು ಬಗೆಯ ಉಡುಗೊರೆಗಳು ಎಂದರೆ – ಬಂಗಾರ ,ಧೂಪ ಮತ್ತು ಸುಗಂಧದ ತೈಲ.

ಬೈಬಲ್ ನ ಈ ಉಪಾಖ್ಯಾನವು ಮಧ್ಯಯುಗೀನ ಕಾಲದಲ್ಲಿ ಮೌಖಿಕ  ಪರಂಪರೆಯಲ್ಲಿ ಅನೇಕ ಬದಲಾವಣೆಗಳಿಗೆ ಒಳಗಾಯಿತು. ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಪರಂಪರೆಗಳಲ್ಲಿ  ಸ್ಥಳೀಯ ಪಾಠಗಳು ಕಾಣಿಸಿಕೊಂಡವು. ಮೂವರು ಕಾಲಜ್ಞಾನಿಗಳು ಎನ್ನುವ ಪಾಠದ  ಬದಲಾಗಿ ,ಮೂವರು ರಾಜರು ಎಂದಾಯಿತು.ಯಹೂದ್ಯರ ರಾಜ ಎಂದು ಗೌರವದಿಂದ ಸಂಬೋಧಿಸಲ್ಪಟ್ಟ ಏಸುವಿಗೆ ಕಾಣಿಕೆ ಕೊಟ್ಟವರು ಕೂಡಾ ‘ಮೂವರು ರಾಜರು ‘ ಎನ್ನುವ ವಿವರಣೆ ಕೊಡಲಾಯಿತು.ಪೂರ್ವದಿಂದ ಬಂದ ಈ ಮೂವರು ರಾಜರ ಹೆಸರುಗಳು ಕೂಡಾ ವ್ಯತ್ಯಯವನ್ನು ಕಂಡವು.Caspar, Melchior ,Balthasar   :ಇದು ಆ ಮೂವರು ಕಾಲಜ್ಞಾನಿಗಳ/ರಾಜರ ಹೆಸರು. ಇವರು ಯಾರು ,ಯಾವ ದೇಶದವರು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ,ಊಹೆಗಳು ನಡೆದಿವೆ. ಪೂರ್ವದ ದೇಶಗಳು ಯಾವುವು ಎನ್ನುವುದರ  ಕುರಿತು ಕೂಡಾ ಅನೇಕ ಅಭಿಪ್ರಾಯಗಳು ಇವೆ. Melchior ಒಬ್ಬ ಬೆಬಿಲೋನಿಯನ್ ವಿದ್ವಾಂಸ , Balthasar ಒಬ್ಬ ಅರಬ್ ವಿದ್ವಾಂಸ ಮತ್ತು Caspar  ಒಬ್ಬ ಪರ್ಸಿಯನ್ ವಿದ್ವಾಂಸ ಎಂಬ ಅಭಿಪ್ರಾಯ ಜನಪ್ರಿಯ ಆಗಿದೆ.ಒಂದು ಮೂಲದ ಪ್ರಕಾರ Caspar  ಭಾರತ ದೇಶದವನು ಎನ್ನುವ ಅಭಿಪ್ರಾಯ ಇದೆ.ಈಗಿನ ಅಫಘಾನಿಸ್ಥಾನದ ಕಂದಹಾರ್ ನಿಂದ ಅವನು  ಬಂದವನು ಎಂದು ಹೇಳಲಾಗಿದೆ.ಆತನನ್ನು Gondophernes ಎಂಬ ಹೆಸರಿನ  ಇಂಡೋ ಪಾರ್ಥಿಯನ್ ರಾಜ ,ಆತನು ಕ್ರಿಸ್ತ ಶಕ ಒಂದರಲ್ಲಿ  ತಕ್ಷಶಿಲವನ್ನು ಆಳುತ್ತಿದ್ದವನು ಎಂದು ಉಲ್ಲೇಖಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಒಂದು ಸ್ವಾರಸ್ಯಕರ ಐತಿಹ್ಯದ ಪ್ರಕಾರ ,ಯೇಸುಕ್ರಿಸ್ತನು ಭಾರತಕ್ಕೆ ಬಂದು Caspar ರಾಜನನ್ನು ಸಂದರ್ಶಿಸಿ ,ಕೆಲವು ಕಾಲ ಅಲ್ಲಿ ಇದ್ದ ಎನ್ನುವ ಒಂದು ಇತಿವೃತ್ತ  ಇದೆ. ಒಂದು ಪಾಠದಲ್ಲಿ  Caspar ನನ್ನು  ಆಫ್ರಿಕದವನು ಎಂದು ಹೇಳಲಾಗಿದೆ.ಮೂವರು ರಾಜರಿಗೆ ವೇಷ ಹಾಕುವಾಗ ಒಬ್ಬ ರಾಜನಿಗೆ ಕಪ್ಪುಬಣ್ಣವನ್ನು ಹಚ್ಚಲಾಗುತ್ತಿದೆ.

ಕರೀನ್ ಸ್ತೈನರ್ ಮೂವರು ಕಾಲಜ್ಞಾನಿ -ರಾಜರ ಕತೆ ಹೇಳುತ್ತಿದ್ದಂತೆಯೇ ಅವರ ಮನೆಯ ಕರೆಗಂಟೆ ಬಾರಿಸಿತು . ‘ಮೂವರು ರಾಜರು ಬಂದಿರಬೇಕು’ ಎನ್ನುತ್ತಾ ಅವರು  ಬಾಗಿಲ ಬಳಿ ಹೊರಟರು.ನಾನು ಅವರನ್ನು ಹಿಂಬಾಲಿಸಿದೆ. ಹೌದು ,  ಮೂವರು ಹುಡುಗಿ /ಹುಡುಗರು  ರಾಜರ ವೇಷದಲ್ಲಿ  ಬಾಗಿಲ ಬಳಿ ನಿಂತಿದ್ದಾರೆ.ಆ ಮೂವರ ಜೊತೆಗೆ ನಾಲ್ಕನೆಯವಳು ಒಬ್ಬಳು ನಕ್ಷತ್ರ ಹಿಡಿದುಕೊಂಡವಳು.ಮಕ್ಕಳು ,ಸಾಮಾನ್ಯವಾಗಿ ಸಣ್ಣ ವಯಸ್ಸಿನ ಹುಡುಗಿ ಹುಡುಗರು ಮೂವರು ರಾಜರ ವೇಷ ಹಾಕಿ ಆ ದಿನ ಮನೆ ಮನೆಗೆ ಹೋಗುವ ಸಂಪ್ರದಾಯ. ಆ ಮೂವರು ಮಕ್ಕಳು ಮೂವರು ರಾಜರಿಗೆ ಸಂಬಂಧಪಟ್ಟ ಹಾಡುಗಳನ್ನು ಹಾಡಿದರು.ಬಳಿಕ ಬಾಗಿಲಿನ ದಾಲವಂದದ ಮೇಲ್ಭಾಗದಲ್ಲಿ ಒಂದು ಸ್ಟಿಕರ್ ಅಂಟಿಸಿದರು.ಅದರಲ್ಲಿ ಹೀಗೆ ಬರೆದಿತ್ತು : 20* +M+B+C+12. ( Christus Mansionem Benedicat) .ಇದು ಲ್ಯಾಟಿನ್ ನುಡಿಗಟ್ಟು.’ಕ್ರಿಸ್ತನು ಈ ಮನೆಯನ್ನು ಪವಿತ್ರಗೊಳಿಸಲಿ’ ಎನ್ನುವ ಅರ್ಥದಲ್ಲಿ.12- ಇದು 2012 ನೆಯ  ವರ್ಷಕ್ಕೆ ಎಂದು ಅರ್ಥ.  ಹಿಂದೆ ಈ ಸಂಕೇತಗಳನ್ನು ಚಾಕ್ ನಿಂದ ಕೈಯಲ್ಲಿ ಬರೆಯುತ್ತಿದ್ದರಂತೆ.ಈಗ ಸಿದ್ಧಮಾಡಿದ ಸ್ಟಿಕರ್ ಅಂಟಿಸುತ್ತಾರೆ.ಕರೀನ್ ಆ ಮಕ್ಕಳು-ರಾಜರಿಗೆ  ಹಣ ಕೊಟ್ಟರು.ಅದನ್ನು ಅವರು  ತಮ್ಮ ವಂತಿಗೆ ಡಬ್ಬಿಯಲ್ಲಿ ಹಾಕಿಕೊಂಡು ಪಕ್ಕದ ಮನೆಗೆ ಹೋದರು.ಈರೀತಿ ಸಂಗ್ರಹಿಸಿದ ಹಣವನ್ನು ಒಂದು ನಿಧಿ ಮಾಡಿ,ಸ್ಥಳೀಯ ಚರ್ಚ್ ಅಥವಾ ಸ್ವಯಂಸೇವಾ ಸಂಸ್ಥೆಯ ಮೂಲಕ ಬಡಮಕ್ಕಳ ನೆರವಿಗೆ ಬಳಸುತ್ತಾರೆ ಎಂದು ಕರಿನ್ ತಿಳಿಸಿದರು.ವೇಷ ಹಾಕಿ ಮನೆಮನೆಗೆ ಹೋಗುವ ಈ ಸಂಪ್ರದಾಯ ನಮ್ಮ ಕಡೆಯಲ್ಲಿ  ಹಿಂದೆ ಮನೆಮನೆಗೆ ಬರುತ್ತಿದ್ದ ಸ್ತ್ರೀ ವೇಷ -ಕೃಷ್ಣನ ವೇಷದ ಸಹಿತ-ವನ್ನು ನೆನಪಿಸುತ್ತಿತ್ತು.

ಮೊನ್ನೆ ಕರೀನ್  ಅವರ ಮನೆಯಲ್ಲಿ ನಾನು ತೆಗೆದ ರಾಜರ ವೇಷದ ಮಕ್ಕಳ ಫೋಟೋವನ್ನು ಕೆಳಗೆ ಕೊಟ್ಟಿದ್ದೇನೆ-ಅದು ಮೊದಲನೆಯ ಸಾಲಿನ ಮೊದಲನೆಯ ಫೋಟೋ.

ವ್ಯೂರ್ತ್ಸ್ ಬುರ್ಗ್ ನಗರದಲ್ಲಿ ನಡೆಯುವ ಮೂವರು ರಾಜರ ಮೆರವಣಿಗೆ ನೋಡಲೇಬೇಕೆಂಬ ಹಂಬಲದಿಂದ ಕರೀನ್ ಅವರ ಮನೆಯಿಂದ ಸಂಜೆ ನಾಲ್ಕುವರೆ ಗಂಟೆಗೆ ಹೊರಟೆ.ಕರೀನ್ ಅವರ  ಗಂಡ ಆಂದ್ರೆಯಸ್  ತಮ್ಮ ಕಾರಿನಲ್ಲಿ ನನ್ನನ್ನು ನಗರದ ನಡುವೆ ಹಳೆಯ ಸೇತುವೆ ಬಳಿ ತಂದು ಬಿಟ್ಟರು.ಸಣ್ಣಗೆ ಮಳೆ ಬೀಳುತ್ತಿತ್ತು.ಮೈ ಕೊರೆಯುವ ಚಳಿ.ಬಹುಶಃ ರಾಜರ ಮೆರವಣಿಗೆ ರದ್ದಾಗಿರಬಹುದು ಕಳೆದ ವರ್ಷದಂತೆಯೇ ಎಂದು ಅನುಮಾನಿಸುತ್ತಾ ರೆಸಿಡೆನ್ಜ್ ಕಡೆಗೆ  ಮಳೆಯಲ್ಲೇ ದಾಪುಗಾಲು ಹಾಕಿದೆ.ಅಲ್ಲಿಗೆ ತಲಪುವಾಗ ಸರಿಯಾಗಿ ರಾತ್ರಿ ಐದು ಗಂಟೆ.ನಮ್ಮಲ್ಲಿ ಆದರೆ ಸಂಜೆ ಐದು ಗಂಟೆ ಎಂದು ಹೇಳುತ್ತಿದ್ದೆ.ಆದರೆ ಇಲ್ಲಿ ರಾತ್ರಿಯ ಐದು ಗಂಟೆ ಎನ್ನುವ ವಿಚಿತ್ರ ಪ್ರಯೋಗ ಮಾಡಬೇಕಾಗಿದೆ.ಏಕೆಂದರೆ ಆಗಲೇ ಪೂರ್ಣ ಕತ್ತಲೆ ಆವರಿಸಿತ್ತು. ಆಶ್ಚರ್ಯ ಎಂದರೆ ರೆಸಿಡೆನ್ಜ್ ಮುಂಭಾಗದ ರಸ್ತೆಯಲ್ಲಿ ಮೂವರು ರಾಜರು ಕುದುರೆಗಳ ಮೇಲೆ ಏರಿ ಮೆರವಣಿಗೆಗೆ ಹೊರಡುತ್ತಿದ್ದಾರೆ.ನಾನು ಅವರನ್ನು ಸೇರಿಕೊಂಡೆ.ಮುಂದುಗಡೆ ನಕ್ಸತ್ರ ಹಿಡಿದವರು .ಜೊತೆಗೆ ನಮ್ಮ ಹಳ್ಳಿಯ ಜಾತ್ರೆಗಳ ರೀತಿಯ ಬೆಂಕಿಯ ದೊಂದಿ (ದೀವಟಿಗೆ ) ಎತ್ತಿಕೊಂಡ ಮಕ್ಕಳು . ಕುದುರೆಗಳ ಮುಂದುಗಡೆ ಪರಿವಾರ  ,ಮಕ್ಕಳು ,ಕೆಲವು ಉತ್ಸಾಹಿ ಜನರು -ಹೀಗೆ ಸಣ್ಣ ಹನಿ ಮಳೆಯಲ್ಲೇ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತಿತ್ತು.ನಾನು ಮೆರವಣಿಗೆಯ ಪಕ್ಕದಲ್ಲಿ ,ಮುಂದುಗಡೆಯಲ್ಲಿ , ಜನಸಂದಣಿಯಲ್ಲಿ  ಬೀಸುಗಾಲು ಹಾಕುತ್ತಾ ಕೆಲವೊಮ್ಮೆ ಓಡುತ್ತಾ ನನ್ನ ಕ್ಯಾಮರಾದಲ್ಲಿ ಫೋಟೋಗಳನ್ನು ಕ್ಲಿಕ್ಕಿಸುತ್ತಾ  ಹೋದೆ. ಆಗ ನನಗೆ ನಮ್ಮ ಮಾದ್ಯಮದ ಫೋಟೋಗ್ರಾಫರ್ ಗಳ ಸವಾಲು ಮತ್ತು ಕಷ್ಟ  ಸ್ವಲ್ಪ ಅರ್ಥವಾಯಿತು.ಮಳೆ ಬೇರೆ ಕಾಟ ಕೊಡುತ್ತಿತ್ತು.ಕೆಲವು ಸಣ್ಣ ಬೀದಿಗಳಲ್ಲಿ ಕತ್ತಲೆಯಲ್ಲಿ ಏನೂ ಕಾಣಿಸುತ್ತಿರಲಿಲ್ಲ.

ಕೊನೆಗೂ ಮೆರವಣಿಗೆ ಬಂದು ಸೇರಿದ್ದು ನಗರ ಮಧ್ಯದ ಡೊಮ್ ಮುಂಭಾಗದಲ್ಲಿ. ಅಲ್ಲಿ ಆಗಲೇ ಮೇರಿ ಪಾತ್ರಧಾರಿ ,ಗೋದಲಿಯಲ್ಲಿ ಬಾಲ ಯೇಸುವನ್ನು ಮಲಗಿಸಿ ಕುಳಿತಿದ್ದಳು.ರಾಜ ಹೆರೋದನ ಮಾತುಗಳು ನಡೆದವು.ಮೂವರು ರಾಜರು ತಮ್ಮ ಕುದುರೆಗಳಿಂದ ಇಳಿದು ತಾವು ತಂದ ಕಾಣಿಕೆಗಳನ್ನು ಬಾಲ ಏಸುವಿಗೆ ಅರ್ಪಿಸಿದರು.ಬಳಿಕ ಭಕ್ತಿಯ ಹಾಡುಗಳನ್ನು ಎಲ್ಲರೂ ಒಟ್ಟಿಗೆ ಹಾಡಿದರು.ನೋಡಲು ಬಂದವರೆಲ್ಲ  ಹೊರಗಿನ ಸಣ್ಣ ಅಂಗಣದಲ್ಲಿ  ನಿಂತುಕೊಂಡು ಕಾರ್ಯಕ್ರಮ ನೋಡಿದರು.ಒಟ್ಟು ಕಾರ್ಯಕ್ರಮ ಅರ್ಧ ಗಂಟೆಯಲ್ಲಿ  ಮುಗಿಯಿತು.ಈಗ ಅಲ್ಲಿ ನೆರೆದಿದ್ದ ಮಕ್ಕಳಿಗೆ ರಾಜರಿಗಿಂತ ಕುದುರೆಗಳದ್ದೇ  ವಿಶೇಷ ಆಕರ್ಷಣೆ.ಆ ಮೂರು ಕುದುರೆಗಳನ್ನು ಮುತ್ತಿಕೊಂಡು ಆನಂದ ಪಡುವ ಸಂಭ್ರಮ ಆ ಪುಟಾಣಿಗಳದ್ದು .ಇಬ್ಬರು ಹೆಣ್ಣುಮಕ್ಕಳು ಬೆಂಕಿಯ ದೀವಟಿಗೆಗಳನ್ನುಮೆರವಣಿಗೆಯಲ್ಲಿ ಹೊತ್ತುಕೊಂಡು ತಂದವರು  ಕೊನೆಯವರೆಗೂ ಅವುಗಳನ್ನು ತಾದಾತ್ಮ್ಯದಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಕೊನೆಗೂ ಕುದುರೆಗಳ ನಿಜವಾದ ಒಡೆಯರು ,ಅವುಗಳನ್ನು ಸಾಕುವವರು ಅವನ್ನು ತಮ್ಮ ವಶಕ್ಕೆ  ತೆಗೆದುಕೊಂಡರು. ಅವರಲ್ಲಿ ಒಬ್ಬಳು ಹೆಣ್ಣುಮಗಳಂತೂ  ಧೈರ್ಯ ಮತ್ತು ಆತ್ಮವಿಶ್ವಾಸದಲ್ಲಿ ರಾಜರಿಗಿಂತ ಹೆಚ್ಚು ಗಟ್ಟಿಯಾಗಿ ಕಾಣಿಸುತ್ತಿದ್ದಳು  .ಅವಳು ಕುದುರೆಯೊಂದಿಗೆ  ಇರುವ ಒಂದು ಫೋಟೋ  ಕೂಡಾ ಇಲ್ಲಿ ಇದೆ.

ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಕುದುರೆಗಳ ಮೇಲೆ ರಾರಾಜಿಸುತ್ತಾ ಬಂದ  ಮೂವರು ರಾಜ ವೇಷಧಾರಿಗಳು ಸಾಮಾನ್ಯರಂತೆ ಕಾಲ್ನಡಿಗೆಯಲ್ಲಿ  ಅಲ್ಲಿಂದ ಹೊರಟರು. ನಾನು  ಓಡಿಕೊಂಡು  ಹೋಗಿ ಅವರ ಫೋಟೋ ತೆಗೆದೆ.ಅವರಿಗಂತೂ ಬಹಳ  ಖುಷಿ. ಕುದುರೆಯಿಂದ ಇಳಿದ ಬಳಿಕವೂ ,ವೈಭವ ಇಲ್ಲದಾಗಲೂ , ಎಲ್ಲವನ್ನು ಕಳೆದುಕೊಂಡಾಗಲೂ ನಮ್ಮನ್ನು ಯಾರಾದರೂ ಗುರುತಿಸುತ್ತಾರಲ್ಲ ಎಂಬ ಸಂತೃಪ್ತಿ.ಕುದುರೆಗಳನ್ನು  ಏರಿ ಇಳಿದವರಿಗೆ ತಾನೇ ಗೊತ್ತು  ಏರಿದವರ ಸಂಕಷ್ಟಗಳು ! ಐತಿಹ್ಯ ,ಪುರಾಣ,ಆಚರಣೆಗಳು ಒಂದು ರಂಗಭೂಮಿಯ ರೂಪ ತಾಳಿದಾಗ,ಅದೊಂದು ಸಾರ್ವಜನಿಕ ಪ್ರದರ್ಶನವಾದಾಗ ಕೊನೆಗೂ  ಅದಕ್ಕೆ ಒಂದು ತೆರೆ ಬೀಳಲೇಬೇಕು.  ಕುದುರೆಯ ಮೇಲೆ ಇದ್ದವರು ಈಗ ಎಲ್ಲರಂತೆ  ಬೀದಿಯಲ್ಲಿ ಮನೆಯ ಕಡೆಗೆ  ,ಕುದುರೆಯ  ಜೊತೆಗಿದ್ದವರು ಅದನ್ನು ಸಾಕುವವರು  ತಮ್ಮದೇ ಕುದುರೆಯ ಮೇಲೆ ಕುಳಿತುಕೊಂಡು ಅವುಗಳ ಲಾಯದ ಕಡೆಗೆ  -ರಂಗಭೂಮಿಯ ಕಾಲಜ್ಞಾನ ಹೇಳುವುದು ಅದನ್ನೇ . ಬಾಡಿಗೆಯ ಕುದುರೆ ಏರುವವನು ಧೀರನೂ ಅಹುದು ಶೂರನೂ ಅಹುದು -ರಂಗದ ಮೇಲೆ.

ಮೊನ್ನೆ ಶುಕ್ರವಾರ ನಾನು ತೆಗೆದ ಫೋಟೋಗಳು ಇಲ್ಲಿ ಇವೆ.ಅವುಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.

ಇಲ್ಲಿನ ಅನೇಕ ಜರ್ಮನ್ ಸ್ನೇಹಿತರು ನನ್ನ ಈ ಫೋಟೋಗಳನ್ನು ನೋಡಲು ಉತ್ಸುಕರಾಗಿದ್ದಾರೆ.ಅವರಲ್ಲಿ ಬಹಳ ಮಂದಿ ಈ ಅಪೂರ್ವ ದೃಶ್ಯಗಳನ್ನು ಕಂಡಿಲ್ಲ ಮತ್ತು ಅವುಗಳ ಫೋಟೋಗಳನ್ನು ನೋಡಿಲ್ಲ.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

4 Responses to “ಮೂವರು ಕಾಲಜ್ಞಾನಿ -ರಾಜರ ಮೆರವಣಿಗೆಯಲ್ಲಿ :ಐತಿಹ್ಯ ಪುರಾಣ ಆಚರಣೆ ರಂಗಭೂಮಿಗಳ ಪಯಣ”

RSS Feed for ಬಿ ಎ ವಿವೇಕ ರೈ Comments RSS Feed

Thank you sir for giving us an opportunity to view the photos of a unique celebration of Germans.

RameshMegaravalli.

ರಮೇಶ್,ತುಂಬಾ ಸಂತೋಷ ನಿಮಗೆ ಇಷ್ಟವಾದುದಕ್ಕೆ.

athapurna kala gyana. sundaravagi nammellara kannige kattikottiddiri.naave jarmaniyalli idda anubhava ayithu
– AYYANAGOUDAR

ಅಯ್ಯನಗೌಡರ್ ರಿಗೆ ,ಸಂತೋಷ ನಿಮ್ಮ ಆಸಕ್ತಿಗಾಗಿ.


Where's The Comment Form?

Liked it here?
Why not try sites on the blogroll...

%d bloggers like this: