ಮೂರು ಜರ್ಮನ್ ಕವನಗಳು -ಬ್ರೆಕ್ಟ್ ನವು ಎರಡು ಮತ್ತು ಬ್ರೆಕ್ಟ್ ಕುರಿತು ಒಂದು .

Posted on ಜನವರಿ 2, 2012. Filed under: ಜರ್ಮನಿ, ಜರ್ಮನ್ ಕವಿ, German Literature | ಟ್ಯಾಗ್ ಗಳು:, , , , , |


ಎಲ್ಲ ಸ್ನೇಹಿತರಿಗೆ ಹೊಸ ವರ್ಷದ ಶುಭಾಶಯಗಳು !

Frohes Neues  Jahr !

ನಿನ್ನೆ ದಿನ ೨೦೧೨ ರ ಮೊದಲ ದಿನ .ಭಾನುವಾರ ಕೂಡಾ. ಜರ್ಮನ್ ಕವನಗಳನ್ನು ಓದುತ್ತಾ ,ಹೊರಗೆ ಹನಿ ಹನಿ ಬೀಳುತ್ತಿದ್ದ ಮಳೆಯ ಕಣ್ಣುಮುಚ್ಚಾಲೆ ಆಟ ನೋಡುತ್ತಾ ,ಹಿಂದಿನ ದಿನ ನಡುರಾತ್ರಿಯಲ್ಲಿ ಇಲ್ಲಿ ವ್ಯೂರ್ತ್ಸ್ ಬುರ್ಗ್ ನಗರದಲ್ಲಿ ಆಕಾಶದಲ್ಲಿ ಸಿಡಿದ ಚಿಮ್ಮಿದ ಬಣ್ಣ ಬಣ್ಣದ ಸಿಡಿಮದ್ದು ಬಾಣ ಬಿರುಸುಗಳನ್ನು ನೆನೆದುಕೊಳ್ಳುತ್ತಾ ೨೦೧೨ರ ಮೊದಲ ದಿನವನ್ನು ಆಚರಿಸಿದೆ. ಬ್ರೆಕ್ಟ್ ಕವನಗಳನ್ನು ಕೆಲವನ್ನು ಕನ್ನಡಕ್ಕೆ ಅನುವಾದಿಸಿದೆ.ಹರ್ಮನ್ ಮುಲ್ಲರ್ ನ ಒಂದು ಕವನವನ್ನು ಕೂಡ.

ಜರ್ಮನ್ ಕವಿ ನಾಟಕಕಾರ ವಿಮರ್ಶಕ ಬೆರ್ತೊಲ್ತ್  ಬ್ರೆಹ್ತ್ ( ಕನ್ನಡದಲ್ಲಿ  ‘ಬ್ರೆಕ್ಟ್ ‘ ಎಂಬ ಪದ ಬಳಕೆಯಾಗಿದೆ ) (  Bertolt  Brecht ,1898-1956 ) ಕವನಗಳಲ್ಲಿ ಎರಡನ್ನು ಕನ್ನಡಕ್ಕೆ ಅನುವಾದಿಸಿದೆ.ಜರ್ಮನ್ ಕವಿ,ನಾಟಕಕಾರ ,ರಂಗ ನಿರ್ದೇಶಕ ಹೈನೆರ್ ಮುಲ್ಲರ್  (  Heiner Muller ,1929-1995 ) ಬ್ರೆಕ್ಟ್  ಕುರಿತು ಬರೆದ ಒಂದು ಕಿರುಕವನವನ್ನು ಕೂಡಾ ಕನ್ನಡಕ್ಕೆ ತಂದಿದ್ದೇನೆ. ಈ ಕವನಗಳು ಅರುವತ್ತು ವರ್ಷಗಳಿಗಿಂತ ಹಿಂದಿನವು .ಆದರೆ ಇವತ್ತಿಗೂ ಈಗ ಬಂದಿರುವ ಹೊಸ ವರ್ಷಕ್ಕೂ ಸಲ್ಲುತ್ತವೆ.

ಬ್ರೆಕ್ಟ್ ನ ಕವನಗಳು : ‘ನೀರು ಚಿಮುಕಿಸು ತೋಟಕ್ಕೆ ‘ ಮತ್ತು  ‘ ಹಾಲಿವುಡ್  ಶೋಕಗೀತೆ ‘. ಹರ್ಮನ್ ಮುಲ್ಲರ್ ಕವನ : ‘ಬ್ರೆಕ್ಟ್ ‘.

*ನೀರು ಚಿಮುಕಿಸು  ತೋಟಕ್ಕೆ ! *

ನೀರು ಚಿಮುಕಿಸುವುದು ತೋಟಕ್ಕೆ  ,ಜೀವ ಕೊಡುವುದು ಹಸುರಿಗೆ !

ನೀರು ಕುಡಿಸುವುದು  ಬಾಯಾರಿದ ಮರಗಳಿಗೆ .

ಕುಡಿಸು ನೀರನ್ನು ಹೊಟ್ಟೆ ಬಿರಿಯುವಷ್ಟು ,

ಆದರೆ ಮರೆಯಬೇಡ  ಪೊದೆಗಳನು ಅಷ್ಟು

ಕಾಯಿ ಬಿಡದವುಗಳನು ,

ಬಸವಳಿದ ಕರಿಯ ಕೋಲುಗಳನು  ಕೂಡಾ .

ಮರೆಯಬೇಡ ಹೂಗಿಡಗಳ ನಡುವೆ ಮೊಳೆತ ಕಳೆಗಿಡಗಳನು

ಪಾಪ ,ಅವೂ ಬಾಯಾರಿವೆ ನೋಡು .

ನೀರು ಕೇವಲ ಹಸುರುಹುಲ್ಲಿಗೆ   ಕೇವಲ ಬಾಡಿದವುಗಳಿಗೆ ಮಾತ್ರ ಅಲ್ಲ .

ಕುಡಿಸು ನೀರನು ಬಂಜರು ಭೂಮಿಗೆ ಕೂಡಾ

ತಣ್ಣಗಾಗಲಿ ಅದರ ಹೊಟ್ಟೆಯೂ  ನೋಡಾ .

*****************************************************************************************************

*ಹಾಲಿವುಡ್ ನ ಶೋಕಗೀತೆ *

ಹಾಲಿವುಡ್ ಗ್ರಾಮವನ್ನು ರೂಪಿಸಿದವರು ಅದನ್ನು ಕಲ್ಪಿಸಿದ್ದು

ಅದು ಸ್ವರ್ಗವಾಗಿ ಇರಬೇಕು ಎಂದು.

ಅವರ ಗಟ್ಟಿ ತೀರ್ಮಾನವೆಂದರೆ :

ಸ್ವರ್ಗ ಮತ್ತು ನರಕ ಎಂಬ ಎರಡು ಲೋಕಗಳನು

ದೇವರು ಸೃಷ್ಟಿಸುವ ಅಗತ್ಯ ಇರಲಿಲ್ಲ .

ಒಂದೇ ಸಾಕು ,ಹಾಲಿವುಡ್ ನಂತೆ : ಅದು ಸ್ವರ್ಗ .

ಅದರ ಒಳಗೆಯೇ ಇದೆ ದಾರಿದ್ರ್ಯ ನಿರಾಶೆ

ನರಕದಲಿ ಇರುವಂತೆ !

*****************************************************************************************************

*ಬ್ರೆಕ್ಟ್ *

ಹೌದು , ಆತ ಬದುಕಿದ್ದು ಕತ್ತಲೆಯ ದಿನಗಳಲ್ಲಿ .

ಈಗ ದಿನಗಳು ಬೆಳಕು ಕಂಡಿವೆ.

ಈಗ ದಿನಗಳು ಕತ್ತಲೆಯಲ್ಲೇ ಇವೆ.

ಬೆಳಕು ಹೇಳುತ್ತಿದೆ , ‘ ನಾನು ಕತ್ತಲೆ’ ಎಂದು ,

ಹೌದು, ಅದು ಸತ್ಯ ಹೇಳುತ್ತಿದೆ !

ಕತ್ತಲೆ ಹೇಳುತ್ತಿದೆ , ‘ ನಾನು ಬೆಳಕು ‘ಎಂದು,

ಹೌದು, ಅದು ಸುಳ್ಳು ಹೇಳುತ್ತಿಲ್ಲ !

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

5 Responses to “ಮೂರು ಜರ್ಮನ್ ಕವನಗಳು -ಬ್ರೆಕ್ಟ್ ನವು ಎರಡು ಮತ್ತು ಬ್ರೆಕ್ಟ್ ಕುರಿತು ಒಂದು .”

RSS Feed for ಬಿ ಎ ವಿವೇಕ ರೈ Comments RSS Feed

ಸರ್,

ನಮಸ್ಕಾರ.

ಹೊಸ ವರ್ಶದ ಶುಭಾಶಯಗಳು!!!

ಬ್ರೆಕ್ಟ್ನ ಕವನಗಳು ಒಂದು ರೀತಿಯ ಮುದ ಕೊಡುತ್ತವೆ. ಅನಂತಮೂರ್ತಿಯವರು ಕೂಡ ಇತ್ತೀಚೆಗೆ ಬ್ರೆಕ್ಟ್ನ ಕವನಗಳನ್ನು ಕನ್ನಡಕ್ಕೆ ಪರಿಚಯಿಸಿದರು, ಈಗ ನೀವು ಕೂಡ ಮಾಡಿದ್ದೀರಿ. ನಿಮಗಿಬ್ಬರಿಗೂ ವಂದನೆಗಳು.

ಬ್ರೆಕ್ಟ್ನ ಕ್ರುತಿಗಳಲ್ಲಿ ಸಾಮಾನ್ಯವಾಗಿ ಕಾಣುವಂತೆ, “ನೀರು ಚಿಮುಕಿಸು ತೋಟಕ್ಕೆ” ಕವನದಲ್ಲೂ “ಮಾನವೀಯ” ತುಡಿತವನ್ನು ಕಾಣಬಹುದು.

ಈ ಮೂರೂ ಪದ್ಯಗಳಲ್ಲಿ ನನಗೆ ಹರ್ಮನ್ ಮುಲ್ಲರ್ನ ‘ಬ್ರೆಕ್ಟ್‘ ಕವನವೇ ಹೆಚ್ಚು ಇಶ್ಟವಾಯಿತು.

ನಂಬುಗೆಯ,
ಶಶಿಕುಮಾರ್

ಪ್ರಿಯ ಶಶಿಕುಮಾರ್,
ನಮಸ್ಕಾರ.
ಅನಂತಮೂರ್ತಿ ಅವರ ಬ್ರೆಕ್ಟ್ ಕವನಗಳ ಅನುವಾದ ಅನುವಾದ ಓದಿದ್ದೇನೆ. ತುಂಬ ಚೆನ್ನಾಗಿವೆ.
ಬ್ರೆಕ್ಟ್ ಕೃತಿಗಳು ಎಲ್ಲ ಕಾಲಕ್ಕ್ಕೂ ಸಲ್ಲುತ್ತವೆ.ಸಾಮ್ರಾಜ್ಯಶಾಹಿ ಜಗತ್ತಿಗೆ ಹೆಚ್ಚು ಅನ್ವಯ ಆಗುತ್ತವೆ.
ನಿಮ್ಮ ಓದು ಸಂತೃಪ್ತಿ ತಂದಿತು.

ಸರ್, ಬ್ರೆಹ್ತ್(ಬ್ರೆಕ್ಟ್)ನ ಕುರಿತ ಕವನವಂತೂ ತುಂಬಾ ಇಷ್ಟವಾಯ್ತು.
ಹಾಗೆಯೇ ಮೊದಲ ಕವನದ
“ನೀರು ಕೇವಲ ಹಸುರುಹುಲ್ಲಿಗೆ ಕೇವಲ ಬಾಡಿದವುಗಳಿಗೆ ಮಾತ್ರ ಅಲ್ಲ .
ಕುಡಿಸು ನೀರನು ಬಂಜರು ಭೂಮಿಗೆ ಕೂಡಾ
ತಣ್ಣಗಾಗಲಿ ಅದರ ಹೊಟ್ಟೆಯೂ ನೋಡಾ.”
ಈ ಸಾಲುಗಳು ಸಹ!
ಹೊಸ ವರ್ಷವನ್ನು ನೀವು ಸ್ವಾಗತಿಸಿದ ಈ ರೀತಿ ಅನುಕರಣೀಯ.
ಮತ್ತೊಮ್ಮೆ ಹೊಸ ವರ್ಷದ ಶುಭಾಶಯ ಸರ್.

ಜಯಲಕ್ಷ್ಮಿ ,ಕಲಾವಿದೆಯಾಗಿ ನಿಮ್ಮ ಒಳನೋಟದ ಪ್ರತಿಕ್ರಿಯೆ ಇಷ್ಟವಾಯಿತು.
‘ಮುಗುಳ್ನಗೆ’ಯಲ್ಲಿ ನಾದ ,ಗಾನ ಗುಂಗಿನ ಹೊಸ ವರ್ಷದ ಸ್ವಾಗತದ ಚಿತ್ರಗಳನ್ನು ನೋಡಿ ಸಂತೋಷ ಆಯಿತು.
ಹಳೆಯದನ್ನೇ ಹೊಸತಾಗಿ ಅನುಭವಿಸುವುದು -ಕೆ ಎಸ ನರಸಿಂಹ ಸ್ವಾಮಿ ಅವರು ‘ಮನೆಯಿಂದ ಮನೆಗೆ ‘ ಕವನದಲ್ಲಿ ಹೇಳುವಂತೆ.

ನಮಸ್ಕಾರ ಸರ್
ಬ್ರೆಕ್ಟ್ ನ ಕವಿತೆಗಳನ್ನು ಹುಡುಕಾಡ್ತಾ ಇದ್ದಾಗ ನಿಮ್ಮ ಅನುವಾದ ಕವಿತೆಗಳು ದೊರೆತವು ಯಾಕೊ ಗೊತ್ತಿಲ್ಲ ಬ್ರೆಕ್ಟ ನಮ್ಮಂತಹವರನ್ನ ತುಂಬಾಕಾಡ್ತಿದ್ದಾನೆ ಅವನ ಬರವಣಿಗೆಯ ಓದುವಿಕೆಗೆ ನಮ್ಮ ಮನಸ್ಸುಗಳು ಹಾತೊರೆಯುತ್ತಿವೆ ಜೀವಪರ ಚಿಂತನೆಗಳು ನೊಂದವರ, ಹತಾಶಗೊಂಡವರ, ಪ್ರಭುತ್ವದ ಚಾಯೆಯಲ್ಲಿ ನರಳಾಡುವವರ ಮತ್ತು ಅವರೊಳಗಿನ ವಿವೇಚನಾಯುಕ್ತವಾದ ಹೋರಾಟದ ಹಂಬಲ ಎಲ್ಲವೂ ಅಡಗಿವೆ. ಅಂದ ಹಾಗೆ ನಾವು ಬ್ರೆಕ್ಟ್ ನ ಕಕೇಷಿಯನ ಚಾಕ್ ಸರ್ಕಲ್ ನಾಟಕವನ್ನು ನಮ್ಮ ರಂಗತರಬೇತಿ ಶಿಬಿರದಲ್ಲಿ ಪ್ರಯೋಗಿಸಿದ್ದೆವು. ಸಮಕಾಲೀನ ರಾಜಕಾರಣದ ಅರಾಜಕತೆಗಳ ಬಹಳ ಸೂಕ್ಷ್ಮವಾಗಿ ಈ ನಾಟಕ ಬೆಳಕು ಚೆಲ್ಲುತ್ತದೆ.

ಸಾರ್ ನಾವು ಬೆಂಗಳೂರಲ್ಲಿ ತುಳು ನಾಟಕ ಮೂರು ಹೆಜ್ಜೆ ಮೂರು ಲೋಕ (ಬಹುಶ ನಾಟಕದ ಹೆಸರು ಅದೇ ಇರಬೇಕು) ನಾಟಕದ ಪ್ರದರ್ಶನ ದವೇಳೆ ಭೇಟಿಯಾಗಿದ್ದೆವು, ತಮ್ಮ ಆರೋಗ್ಯ ಹೇಗಿದೆ
ನಮ್ಮಲ್ಲಿ ನಮ್ಮ ಪೀರ್ ಭಾಷಾ ಮತ್ತಿತರರು ಹುಟ್ಟು ಹಾಕಿರುವ ಸಮಾಜ ವಿಜ್ಞಾನಗಳ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಅಡಿಯಲ್ಲಿ
ಸಂಶೋಧನ ಸಂಗತಿಗಳ ಬಗ್ಗೆ ಕಮ್ಮಟಗಳನ್ನು ಆಯೋಜಿಸಲು ಆರಂಭಿಸಲಾಗಿದೆ. ಮೊದಲ ಕಮ್ಮಟದಲ್ಲಿ ರಹಮತ್ ತರಿಕೆರೆ ಹಾಗೂ ವಿಕ್ರಂ ವಿಸಾಜೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ನಮ್ಮ ಕಮ್ಮಟಗಳು ಹೈದ್ರಾಬಾದ್ ಕರ್ನಾಟಕ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು, ಬರಹಗಾರರು, ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವವರು, ಪಿ.ಯು.ಸಿ. ಪದವಿ. ವಿದ್ಯಾರ್ಥಿಗಳೆಲ್ಲರೂ ಭಾಗವಹಿಸುತ್ತಿದ್ದಾರೆ.

ಸೋಮೇಶ್ ಉಪ್ಪಾರ ಕನ್ನಡ ಉಪನ್ಯಾಸಕ
ಮರಿಯಮ್ಮನಹಳ್ಳಿ
09482053489


Where's The Comment Form?

Liked it here?
Why not try sites on the blogroll...

%d bloggers like this: