ಮೂಡುವನು ರವಿ ಮೂಡುವನು ,ಮೋಡಗಳೊಡನೆ ಆಟವಾಡುವನು :೨೦೧೧ರ ಕೊನೆಯ ಚಿತ್ರಗಳು

Posted on ಡಿಸೆಂಬರ್ 31, 2011. Filed under: ಜರ್ಮನಿ, ವ್ಯೂರ್ತ್ಸ್ ಬುರ್ಗ್, ಹೊಸ ವರ್ಷ | ಟ್ಯಾಗ್ ಗಳು:, , , , , , , |


ಕನ್ನಡದ ಆದಿಕವಿ ಪಂಪ ತನ್ನ ‘ಆದಿಪುರಾಣ’ ಕಾವ್ಯದಲ್ಲಿ ಕವಿತ್ವವನ್ನು ಸಮುದ್ರಕ್ಕೆ ಹೋಲಿಸುತ್ತಾನೆ: ‘ ಇದು ನಿಚ್ಚಂ ಪೊಸತು ಅರ್ಣವoಬೊಲ್ ಅತಿ ಗಂಭೀರಂ ಕವಿತ್ವಂ ‘ . ಕಾವ್ಯವು ಸಮುದ್ರದಂತೆಯೇ ಎಲ್ಲ ಕಾಲಕ್ಕೂ ಹೊಸದಾಗಿಯೇ ಇರುತ್ತದೆ ಎನ್ನುವುದು ಕವಿಯಾಗಿ ಪಂಪನ ನಿಲುವು. ಆಕಾಶ ,ಸೂರ್ಯ ,ನೀರು -ಇವೆಲ್ಲ ವರ್ಷ ಬದಲಾದರೂ ನವನವೋನ್ಮೇಷವಾಗಿಯೇ ಇರುತ್ತವೆ.ನಮ್ಮ ನೋಡುವ ಕಣ್ಣುಗಳು ,ಗ್ರಹಿಸುವ ಮನಸ್ಸುಗಳು ನಿಮಿಷ ,ಗಂಟೆ ,ದಿನ,ತಿಂಗಳು,ವರ್ಷಗಳ ವಿಭಜನೆ ಮಾಡುತ್ತಾ ,ಹೊಸದನ್ನು ಕಾಣಲು ಬಯಸುತ್ತವೆ.

ಜರ್ಮನಿಯ ವ್ಯೂರ್ತ್ಸ್ ಬುರ್ಗ್ ನಗರದ ಒಳಗೆಯೇ ಹರಿಯುವ ಮಾಯಿನ್ ನದಿ ಇಲ್ಲಿನ ಜನರ ಜೀವನದಿ.ನಿನ್ನೆ ಶುಕ್ರವಾರ ,ದಶಂಬರ ಮೂವತ್ತು -೨೦೧೧ ಮುಗಿಯಲು ಇನ್ನೇನು ಒಂದು ದಿನ ಬಾಕಿ ಇದೆ ಎನ್ನುವಾಗ ಇಲ್ಲಿನ ಚಳಿಗಾಲದಲ್ಲಿ ಆಕಸ್ಮಿಕವಾಗಿ ಬಹಳ ದಿನಗಳ ಬಳಿಕ ರವಿ ಕಾಣಿಸಿಕೊಂಡ.ಈಬಾರಿಯ ದಶಂಬರದ ಇಲ್ಲಿನ ಚಳಿಗಾಲ ಬಹಳ ಆಕರ್ಷಕ ಆಗಿರಲಿಲ್ಲ.ಕಳೆದ ವರ್ಷ ದಶಂಬರದಲ್ಲಿ ಸಾಕಷ್ಟು ಹಿಮ ಬಿದ್ದು ‘ಬಿಳಿಯ ಕ್ರಿಸ್ಮಸ್ ‘ ಆಚರಿಸಿದ ಸಂಭ್ರಮ ಇತ್ತು.ಈಬಾರಿ ಒಂದು ದಿನ ಸ್ವಲ್ಪಬಿಳಿಯ ಧೂಳು  ಬಿದ್ದದ್ದರ ಹೊರತಾಗಿ,ಉಳಿದ ದಿನಗಳಲ್ಲಿ ಹಿಮದ ಪತ್ತೆ ಇಲ್ಲ, ರವಿಯ ಸುಳಿವು ಇಲ್ಲ.ಸದಾ ಕಾರ್ಮೋಡಗಳ ಒಡ್ಡೋಲಗ.ನಡುನಡುವೆ ಜಿಟಿಜಿಟಿ ಮಳೆ ಕೆಲವೊಮ್ಮೆ. ಬೆಳಕು  ಹರಿಯುವುದು ಎಂಟೂವರೆಗೆ,ಸಂಜೆ ನಾಲ್ಕು ಗಂಟೆಯ ವೇಳೆಗೆ ರಾತ್ರಿಯ ತೆರೆ ಬೀಳುತ್ತದೆ.ಹಾಗಾಗಿ ಕೊನೆಗೂ ಈವರ್ಷದ ಬೀಳ್ಕೊಡುಗೆಗಾದರೂ ರವಿ ಬಂದನಲ್ಲಾ ಎನ್ನುವ ಸಂತೃಪ್ತಿಯಿಂದ ಮಾಯಿನ್ ನದಿಯ  ದಂಡೆಯಲ್ಲಿ ,ಅದರ ಮೇಲಿನ ಹಳೆಯ ಸೇತುವೆಯ ಮೇಲಿಂದ ನಾನು ನಿನ್ನೆ  ತೆಗೆದ ಕೆಲವು  ಚಿತ್ರಗಳು ಇಲ್ಲಿವೆ.

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.

ಇಲ್ಲಿನ ಚಿತ್ರಗಳು ಅವುಗಳದ್ದೇ ಅರ್ಥಗಳನ್ನು ಕೊಡಬಲ್ಲವು.ಕಾಲ ಓಡುವುದಿಲ್ಲ ,ಓಡುವವರು ನಾವೆಲ್ಲ.

ಮಾಯಿನ್ ನದಿಯ ಸೇತುವೆಯ ಮೇಲೆ ಟ್ರಾಮ್ ಓಡುತ್ತಿದೆ -ಕಾಲ ಕಾಯುವುದಿಲ್ಲ ಎಂದು ಅದಕ್ಕೆ ಗೊತ್ತು.

ರವಿ ಬೆಳಗುತ್ತಿದ್ದಾನೆ -ಈವರ್ಷ ಇನ್ನೆಲ್ಲಿ ಅವಕಾಶ ಎನ್ನುವ ಅವಸರ ಅವನಿಗೆ.

ಮೋಡಗಳು ಇಲ್ಲದ ಶುಭ್ರ ಆಕಾಶ ಒಂದು ಕಡೆ.ಶುದ್ಧ ನೀರು,ಹಸುರು ಕಾಡು .ಕಾಲನದಿಯನ್ನು ದಾಟಲು ಒಂದು ಸೇತುವೆ.

ಕಳೆದುಹೋದ ಯೌವನವನ್ನು ಮರಳಿ ಪಡೆದೇ ತೀರುತ್ತೇವೆ ಎಂದು ಕಾಯುತ್ತಿರುವ ಅಮರ ಮರಗಳು.ಆಕಾಶದಲ್ಲಿ  ಚಲಿಸುವ ಮೋಡಗಳತ್ತ ಅವುಗಳ ಆಸೆಯ ನೋಟ.

ಮೋಡ ಕನ್ನೆಯರ ಜೊತೆಗೆ ಸರಸ  ಆಟವಾಡುವ ರವಿ. ಜುಳುಜುಳು ಸರಸವಾಡುವ ಮಾಯಿನ್ ಕುಡಿನೋಟ ಬೀರಿದ್ದಾಳೆ ರವಿಯ ಕಡೆಗೆ.

ಕಟ್ಟೆ ಜಿಗಿದು ಚಿಮ್ಮುತ್ತಾಳೆ ಮಾಯಿನ್, ಜೀವನಕ್ಕೆ ಕಟ್ಟು ಹಾಕಬಹುದೇ ಏನು ?

ಹಳೆಯ ಸೇತುವೆ (ಆಲ್ತೆ ಮಾಯಿನ್ ಬ್ರೂಕೆ),ಹಳೆಯ ನದಿ ( ಮಾಯಿನ್ ) ,ಹಳೆಯ ಬಾನು -ಹೊಸತು ಯಾವುದಿದೆ ಅದೇ ಅದೇ ಏನು ?

ಹೊಸ ವರ್ಷದ ಪ್ರಯಾಣಕ್ಕೆ ಕ್ಷಣ ಗಣನೆ – ನೀರ ಮೇಲೆ ತೇಲಬೇಕು ಹಡಗು . ಹಡಗು ತುಂಬಿಸಲು ಹೋದವರು ಬಂದಿದ್ದಾರೆ,ಆದರೆ ಹೊಟ್ಟೆ ತುಂಬಿಸಲು ಹೋದವರು ಇನ್ನೂ ಬಂದಿಲ್ಲ.

ಬೇಗನೆ ಬರಲಿ ಹೊಸ ‘ವರ್ಷ’ ( ಮಳೆ ), ಚಿಗುರಲಿ ಮತ್ತೆ ನಮ್ಮ ತಳಿರುಗಳ ಹರ್ಷ.

ಹಳೆ ಬೇರು ,ಹೊಸ ಚಿಗುರು. ಚಳಿಗೆ ನಾವಿನ್ನೂ ಮರಗಟ್ಟಿಲ್ಲ. ನಾವು ಅಮರರು.

ಇದು ನಿಚ್ಚಂ ಪೊಸತು ಮಾಯಿನ್ ನದಿ  .ಇದಕೆ ಗಡಿಯಾರ ಕ್ಯಾಲೆಂಡರ್ ಗಳ ಹಂಗಿಲ್ಲ.

ಬಣ್ಣಬಣ್ಣದ ಬೆಲೂನು  ಮೇಲಕ್ಕೆ ಹಾರಬಿಡಿ , ಬದುಕ ಬೆಲೂನಿಗೆ ಸೂಜಿಮೊನೆ ಚುಚ್ಚಬೇಡಿ.

ನಿಂತಲ್ಲೇ ತಿರುಗುತ್ತಿದೆ ನೀರ ಚಕ್ರ  ; ನಿಂತಲ್ಲೇ   ತಿರುಗಿದರೆ  ನೀರು -ಅದು ಚಕ್ರವ್ಯೂಹ.

ಬೆಳ್ಳಗಿನ ನೊರೆ ನೊರೆ  ಉಕ್ಕಿ ಹರಿಯುತ್ತಿದೆ ಪಾತ್ರವನು , ಹೊಸವರ್ಷದ ಆಚರಣೆ ಆಗಲೇ  ಸುರುವಾಯಿತೇ ಏನು ?

ನೀ  ಹೊಂಟಿರುವುದು ಈಗ ಎಲ್ಲಿಗಾ  ,ನದಿಯ ದಂಡ್ಯಾಗ ಯಾರ ಕಾಣಕಾ ?

ಬಾನು ಭೂಮಿ ಅಪ್ಪಿದಲ್ಲಿ , ಏನು ರಮ್ಯ ನೀರಿನಲ್ಲಿ !

ನೀಲ -ಮೇಘ -ಶ್ಯಾಮ : ಪ್ರೀತಿಯೋ ಜಗಳವೋ !

ಮುಳುಗುವನು ರವಿ ಮುಳುಗುವನು  ಈಗ – ಮೂಡುವನು  ನೀಲಿ ಬಾನ ಬಟ್ಟೆ ತೊಟ್ಟು ಬೇಗ !

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

One Response to “ಮೂಡುವನು ರವಿ ಮೂಡುವನು ,ಮೋಡಗಳೊಡನೆ ಆಟವಾಡುವನು :೨೦೧೧ರ ಕೊನೆಯ ಚಿತ್ರಗಳು”

RSS Feed for ಬಿ ಎ ವಿವೇಕ ರೈ Comments RSS Feed


Where's The Comment Form?

Liked it here?
Why not try sites on the blogroll...

%d bloggers like this: