ಜರ್ಮನ್ ಕುಟುಂಬದೊಡನೆ ಒಂದು ಕ್ರಿಸ್ಮಸ್ ಸಂಜೆ :ಮೂವರು ಹೆಣ್ಣುಮಕ್ಕಳ ಗೋದಲಿಯಲ್ಲಿ

Posted on ಡಿಸೆಂಬರ್ 27, 2011. Filed under: ಕ್ರಿಸ್ಮಸ್, ಜರ್ಮನಿ | ಟ್ಯಾಗ್ ಗಳು:, , , , , , |


ಮೇಜಿನ ಉದ್ದಕ್ಕೆ ಮೂರು ಮಡಕೆಗಳು.ಅವುಗಳ ಕೆಳಗೆ ಉರಿಯುವ ಸ್ಪಿರಿಟ್ ದೀಪಗಳು.ಮಡಕೆಯ ಒಳಗೆ ಕರಗಿ ನೀರಾಗಿ ಬೆಚ್ಚನೆ ಕುದಿಯುತ್ತಿರುವ ಚೀಸ್.ಉದ್ದನೆಯ ಮುಳ್ಳಿನ ಮೊನೆ ಉಳ್ಳ ಲೋಹದ ಕಡ್ಡಿಗಳ ಮೊನಚು ಮುಳ್ಳಿಗೆ ಬ್ರೆಡ್,ಕ್ಯಾರೆಟ್,ತರಕಾರಿ ತುಂಡುಗಳು,ಮಾಂಸದ ಚೂರುಗಳು-ಇವನ್ನು ಸಿಕ್ಕಿಸಿ ,ಕುದಿಯುವ ಚೀಸ್ ಮಡಕೆಯ ಒಳಗೆ  ಕಡ್ಡಿಗಳನ್ನು  ಮುಳುಗಿಸಿ ಬಿಡುವುದು.ನಾಲ್ಕೈದು ನಿಮಿಷ ಕಳೆದ ಬಳಿಕ  ,ಕಡ್ಡಿಗಳನ್ನು ಹೊರಕ್ಕೆ ತೆಗೆದು ,ಅದರ ಮೊನೆಯಲ್ಲಿ ಸಿಕ್ಕಿಸಿದ್ದ ವ್ಯಂಜನಗಳನ್ನು -ಬ್ರೆಡ್,ತರಕಾರಿ ತುಂಡು,ಮಾಂಸದ ಚೂರು- ಬೆಂದು ಹೊರಬಂದವನ್ನು ,ಮೇಜಿನ ಮೇಲೆ ಹರಡಿದ್ದ ಬಗೆ ಬಗೆಯ ಸಾಸ್ ಗಳಲ್ಲಿ ಅದ್ದಿ ತಿನ್ನುವುದು.ನಾವು ಹನ್ನೊಂದು ಮಂದಿ ಮೂರು ಮಡಕೆಗಳ ಸುತ್ತ  ಚುಚ್ಚುವ ,ಅದ್ದುವ ,ಬೇಯಿಸುವ ,ಹೊರತೆಗೆಯುವ,ಲೇಪಿಸುವ ,ರುಚಿ ನೋಡುವ ಮತ್ತು ಈ ಎಲ್ಲ ಷಟ್ ಸ್ಥಲಗಳ ನಡುವೆ ಹರಟುವ ನೆನಪುಗಳನ್ನು ಹಂಚಿಕೊಳ್ಳುವ ನಗೆಯಾಡುವ ಮೂರು ಲೋಕಗಳಲ್ಲಿ ಒಟ್ಟಿಗೇ ಸಂಚರಿಸುತ್ತಿದ್ದೆವು.

ಈ ‘ ಫೋನ್ ದ್ಯು ‘ (Fondue ) ಊಟದ ಆಟ ನಡೆದದ್ದು ಮೊನ್ನೆ ಕ್ರಿಸ್ಮಸ್ ರಾತ್ರಿಯಲ್ಲಿ ,ದಶಂಬರ ೨೪ ರಂದು ಜರ್ಮನಿಯ ವೈನ್ ಗಾರ್ತೆನ್ -ಬಾದೆನ್   (Weingarten-Baden )ಬಳಿಯ ಹಳ್ಳಿಯ ಆಲ್ಬೇರ್ತ್ ರೈಷೆರ್ತ್ (Albert Reichert ) ಅವರ ಮನೆಯಲ್ಲಿ.ಊಟದ ಮೇಜಿನ ಎರಡು ಪಕ್ಕಗಳಲ್ಲಿ ಕುಳಿತವರು -ಮನೆಯ ಒಡೆಯ ಸುಮಾರು ೬೮ ವರ್ಷ ವಯಸ್ಸಿನ ಆಲ್ಬೇರ್ತ್ ( ಇಂಗ್ಲಿಶ್ ನಲ್ಲಿ ಆಲ್ಬರ್ಟ್ ,ಜರ್ಮನ್ ಭಾಷೆಯಲ್ಲಿ ಆಲ್ಬೇರ್ತ್ ),ಆಲ್ಬೇರ್ತ್ ಹೆಂಡತಿ ಎರ್ಮ ,ಆಲ್ಬೇರ್ತ್ ರ ಮೂವರು ಹೆಣ್ಣುಮಕ್ಕಳು -ಹೈಕೆ, ಕಾರಿನ್, ಊತ್ತೆ. ಹೈಕೆಯ ಗಂಡ ಥಾಮಸ್ ,ಕಾರಿನ್ ಗಂಡ ಆಂದ್ರೆ ,ಊತ್ತೆಯ ಗಂಡ ಥಾಮಸ್ ( ಇಬ್ಬರು ಥಾಮಸ್ ಇದ್ದ ಕಾರಣ ಆಲ್ಬೇರ್ತ್ ಅವರಿಗೆ ಬೇರೆ ಬೇರೆ ಸಂಖ್ಯೆ ಕೊಟ್ಟಿದ್ದರು) ,ಪ್ರೊ.ಹೈದ್ರೂನ್ ಬ್ರೂಕ್ನರ್, ಬ್ರೂಕ್ನರ್  ಅವರ  ತಾಯಿ ಜೆನ್ತಾ ಮತ್ತು ನಾನು. ಆಲ್ಬೇರ್ತ್ ಅವರ ಮಗಳು ಊತ್ತೆಯ ಗಂಡ ಥಾಮಸ್ -ಬ್ರೂಕ್ನರ್ ಅವರ ತಮ್ಮ. ಹೀಗಾಗಿ ಬ್ರೂಕ್ನರ್ ಅವರ ತಮ್ಮನ ಮಾವನ ಮನೆಯಲ್ಲಿ ಈ ವರ್ಷ ಇಡೀ ಕುಟುಂಬದವರು ಕ್ರಿಸ್ಮಸ್ ಆಚರಿಸಿದ್ದರು. ನಾನು ಒಬ್ಬ ಮಾತ್ರ ಆ ದಿನದ ಕೂಟದಲ್ಲಿ ಅತಿಥಿ.ಆದರೆ ಇಡೀ ಆಲ್ಬೇರ್ತ್ ಕುಟುಂಬ ನನ್ನನ್ನು ಅವರ ಮನೆಯ ಅವರ ಕುಟುಂಬದ ಆತ್ಮೀಯ ಬಂಧುವಿನಂತೆ  ನೋಡಿಕೊಂಡರು.

ಜರ್ಮನಿಯ ನೈಋತ್ಯ ದಿಕ್ಕಿನಲ್ಲಿ ಇರುವ ‘ಬಾದೆನ್ ವ್ಯೂರ್ತೆಮ್ ಬೆರ್ಗ್’ ಪ್ರಾಂತ್ಯದ ಒಂದು ಸಣ್ಣ  ಪೇಟೆ ‘ ವೈನ್ ಗಾರ್ತೆನ್ ‘. ಜರ್ಮನ್ ಭಾಷೆಯ ‘ವೈನ್ ಗಾರ್ತೆನ್ ‘ ಅಂದರೆ ‘ವೈನ್ ತೋಟ ‘. ಈ ಊರಿನ  ಸುತ್ತುಮುತ್ತಲೂ ದ್ರಾಕ್ಷಿ ತೋಟಗಳು ವಿಸ್ತಾರವಾಗಿ ಹರಡಿಕೊಂಡಿರುವುದರಿಂದ ಈ ಹೆಸರು ಬಂದಿದೆ. ಮುನಿಸಿಪಾಲಿಟಿ ಆಗಿರುವ ವೈನ್ ಗಾರ್ತೆನ್ ನ ಜನಸಂಖ್ಯೆ ಹತ್ತುಸಾವಿರದ ಒಳಗೆ.ಇಲ್ಲಿನ ಜನರಲ್ಲಿ ಸುಮಾರು ಮೂರನೇ ಎರಡರಷ್ಟು ಪ್ರೊಟೆಸ್ಟೆಂಟರು ಮತ್ತು ಮೂರನೇ ಒಂದರಷ್ಟು ಕ್ಯಾಥೋಲಿಕರು .ಹಾಗಾಗಿ ಎರಡೂ ಚರ್ಚುಗಳು ಅಕ್ಕಪಕ್ಕ ಇವೆ.ಕಾರ್ಲ್ ಸ್ರೂಹೆ ಜಿಲ್ಲಾ ಕೇಂದ್ರ. ವೈನ್ ಗಾರ್ತೆನ್ ನಲ್ಲಿ ಒಂದು ಪ್ರಾಥಮಿಕ ಮತ್ತು ಒಂದು  ಮಾಧ್ಯಮಿಕ ಶಾಲೆ ಇದೆ.ವೈನ್ ಮತ್ತು ಹಣ್ಣುಗಳ ರಸಗಳ ಉತ್ಪಾದನೆ,ಮರದ ಮತ್ತು ಲೋಹದ ಕೆಲವು ಸಣ್ಣ ಕಾರ್ಖಾನೆಗಳು, ಭೋಜನ ಕಲೆಯ ಕೇಂದ್ರ ,ಆಟದ ಬಯಲುಗಳ ಜೊತೆಗೆ ಪಕ್ಕದಲ್ಲೇ ‘ಕಾದಿಟ್ಟ ಅರಣ್ಯ’ ಕೂಡಾ ಇದೆ.ಒಂದು ಹಳೆಯ ಸಣ್ಣ ಕಾಸಲ್ (ಕೋಟೆ ) ಪೇಟೆಯ ಒಂದು ತುದಿಯಲ್ಲಿ ಎತ್ತರದಲ್ಲಿ ಕಾಣಿಸುತ್ತದೆ.

ದಶಂಬರ ೨೫ ರಂದು ಬೆಳಗ್ಗೆ ವೈನ್ ಗಾರ್ತೆನ್ ನ ನಿರ್ಜನ ಬೀದಿಗಳಲ್ಲಿ ಅಡ್ಡಾಡಿ ತಣ್ಣನೆಯ ಕ್ರಿಸ್ಮಸ್ ಮುಂಜಾನೆ ನಾನು ತೆಗೆದ ಕೆಲವು ಫೋಟೋಗಳನ್ನು ಇಲ್ಲಿ ಕೊಟ್ಟಿದ್ದೇನೆ.

ವೈನ್ ಗಾರ್ತೆನ್ ನಿಂದ ಸುಮಾರು ನಾಲ್ಕು  ಕಿಲೋ ಮೀಟರ್  ದೂರದ ಹಳ್ಳಿಯಲ್ಲಿ ಆಲ್ಬೇರ್ತ್ ಅವರ ಮನೆ.ಇಂಜಿನಿಯರ್ ಆಗಿ ಕೆಲಸಮಾಡಿ ಈಗ ನಿವೃತ್ತ ಆಗಿರುವ ಆಲ್ಬೇರ್ತ್ ಈಗಲೂ ಆ ಕಂಪೆನಿಯಲ್ಲಿ  ಸಮಾಲೋಚಕ ಆಗಿ ಇದ್ದಾರೆ.ಅಗತ್ಯ ಬಿದ್ದಾಗ ಇವರ ಅನುಭವವನ್ನು ಕಂಪೆನಿ ಬಳಸಿಕೊಳ್ಳುತ್ತದೆ.ಆಲ್ಬೇರ್ತ್ ಅವರಿಗೆ ಮೂವರು ಹೆಣ್ಣುಮಕ್ಕಳು- ಹೈಕೆ,ಕಾರಿನ್  ಮತ್ತು ಊತ್ತೆ. ಆಲ್ಬ್ರೆತ್ ಅವರ ಹೆಂಡತಿ  ಮೂರು ಮಕ್ಕಳು ಸಣ್ಣವರಿರುವಾಗಲೇ ಕ್ಯಾನ್ಸರ್ ನಿಂದ ತೀರಿಕೊಂಡರಂತೆ. ಬಳಿಕ ಏಕಾಂಗಿಯಾಗಿ ಈ ಮೂರು ಹೆಣ್ಣುಗಳನ್ನು ಸಾಕಿ ಬೆಳೆಸಿದ್ದು ,ಅವರಿಗೆ ಶಿಕ್ಷಣ ಕೊಡಿಸಿದ್ದು ಅಪ್ಪನಾಗಿ  ಆಲ್ಬೇರ್ತ್. ಅವರು ಆ ಕೂಡಲೇ ಬೇರೆ ಮದುವೆ ಆಗಲಿಲ್ಲ. ಮೂರು ಹೆಣ್ಣುಮಕ್ಕಳು ಮದುವೆಯಾಗಿ ಬೇರೆ ಬೇರೆ  ಕಡೆ ವಾಸಮಾಡಿ ಸಂಸಾರ ಮಾಡುವವರು, ಬಿಡುವಾದಾಗಲೆಲ್ಲ ಅಪ್ಪನನ್ನು ಬಂದು ಕಾಣುತ್ತಿದ್ದರು. ಕ್ರಿಸ್ಮಸ್ ದಿನ ಅವರೆಲ್ಲರೂ ಒಟ್ಟು ಸೇರುವ  ಒಂದು ಸಂಭ್ರಮದ ಕೂಟ.ಅಪ್ಪ ನಿವೃತ್ತಿ ಹೊಂದಿದ ಮೇಲೆ ಒಬ್ಬರೇ ಇರುತ್ತಾರೆ ಎನ್ನುವ ಕಾರಣಕ್ಕೆ ಮೂವರು ಹೆಣ್ಣು ಮಕ್ಕಳು ಒತ್ತಾಯ ಮಾಡಿ ಆಲ್ಬೇರ್ತ್ ಗೆ ಪರಿಚಯ ಇದ್ದ ಎರ್ಮಾ ಅವರನ್ನು ಅಪ್ಪನ ಹೆಂಡತಿಯಾಗಿ ಒಪ್ಪಿಸಿ ,ಸಂಗಾತಿಯಾಗಿ  ಮನೆಯಲ್ಲಿ ಇರುವಂತೆ ಮಾಡಿದ್ದಾರೆ.ಅಪ್ಪ ಆಲ್ಬೇರ್ತ್ ಮತ್ತು ಮೂವರು ಹೆಣ್ಣು ಮಕ್ಕಳು ಹೈಕೆ,ಕಾರಿನ್ ,ಊತ್ತೆ ಅವರ ನಡುವಿನ ಪ್ರೀತಿಯ ಸ್ಪರ್ಶದ ಹೊಳಹುಗಳನ್ನು ಮೊನ್ನೆಯ ಕ್ರಿಸ್ಮಸ್ ರಾತ್ರಿಯ ಕ್ಷಣ ಕ್ಷಣವೂ ನಾನು ಗಮನಿಸುತ್ತಿದ್ದೆ.ಮೂವರು ಹೆಣ್ಣುಮಕ್ಕಳು ಪ್ರತಿಯೊಬ್ಬರೂ ತಾವು ಬರುವಾಗ ತಮ್ಮ ತಮ್ಮ ಮನೆಗಳಲ್ಲಿ ಕ್ರಿಸ್ಮಸ್ ಊಟದ ಅನೇಕ ಪದಾರ್ಥಗಳನ್ನು ಸಿದ್ಧಮಾಡಿಕೊಂಡು ತಂದಿದ್ದರು.

ಕ್ರಿಸ್ಮಸ್ ಎಂದರೆ ಅಡುಗೆ ಮಾಡುವುದು,ತಿನ್ನುವುದು,,ಕುಡಿಯುವುದು,ಹಾಡುವುದು, ಕುಣಿಯುವುದು, ಕ್ರಿಸ್ಮಸ್ ಮರ ಅಲಂಕರಿಸುವುದು,ಪ್ರಾರ್ಥನೆ ಮಾಡುವುದು -ಇವೆಲ್ಲಾ ಆಚರಣೆಗಳು .ಆದರೆ ಇವೆಲ್ಲಕ್ಕಿಂತ ಬಹಳ ಮಹತ್ವದ್ದು ಎಂದು ನನಗೆ ಕಾಣಿಸಿದ್ದು -ಮೊನ್ನೆ ಆಲ್ಬೇರ್ತ್ ಮನೆಯ ಕ್ರಿಸ್ಮಸ್ ನಲ್ಲಿ ‘ಮನೆ’ಯೊಂದು ‘ಕುಟುಂಬ’ ಆಗಿ, ಮತ್ತೆ ಮತ್ತೆ ಮರವಾಗಿ ಚಿಗುರುವುದು ,ಬೆಳಕಿನ ಚುಕ್ಕಿಗಳಾಗಿ ಹೊಳೆಯುವುದು,ಅದರ ಆಶ್ರಯದಲ್ಲಿ ಗೋದಲಿಯಲ್ಲಿ ಮಲಗಿದ ಮಗು ಯೇಸುವಿನಂತೆ ಅಪ್ಪ,ಅಮ್ಮ,ಮಕ್ಕಳು ಎಲ್ಲ ಮತ್ತೆ ಮಗುವಿನಂತೆ ಬಾಲ್ಯದ ತಮ್ಮ  ಗೋದಲಿಯಲ್ಲಿ ಮಲಗುವುದು.

ಆಲ್ಬೇರ್ತ್ ಮನೆಯಿಂದ ಪ್ರೀತಿಯ ಬೀಳ್ಕೊಡುಗೆ ಪಡೆದು ಹೊರಬಂದಾಗ  ಹೊರಗಿನ ಕತ್ತಲಿನಲ್ಲಿ ಅಲ್ಲಲ್ಲಿ ಕ್ರಿಸ್ಮಸ್ ಬೆಳಕಿನ ಬೀಜಗಳು ಮೊಳಕೆ ಒಡೆಯುತ್ತಿದ್ದವು. ಆಗ  ನೆನಪಾದದ್ದು ಎರಡು ದಿನಗಳ ಕೆಳಗೆ ನಾನು ಓದಿದ ಟೀನಾ ಶಶಿಕಾಂತ್ ಅವರ ಬ್ಲಾಗ್ ಬರಹ ‘ ಒಂದು ಕ್ರಿಸ್ಮಸ್ ಮರ’ ಮತ್ತು ದೂರದ ಇಂಗ್ಲೆಂಡಿನಲ್ಲಿ ಕ್ರಿಸ್ಮಸ್  ಆಚರಿಸುತ್ತಿರುವ ನನ್ನ ಮಗಳು ಸೊಲ್ಮೆ ಮತ್ತು ಅವಳ ತುಂಟ ಮಗ ನಿವೇನ್. ಗೋದಲಿಯಲ್ಲಿ ಮಲಗುವುದು ಮಗು ಏಸು ಒಬ್ಬನೇ ಅಲ್ಲ ಮತ್ತು  ಕ್ರಿಸ್ಮಸ್ ಮರ ಎಂದೂ ಒಂಟಿಯಲ್ಲ ಎನ್ನುವ ಸತ್ಯದ ಬೆಳಕನ್ನು ಕಂಡದ್ದು ಆಲ್ಬೇರ್ತ್ ಮನೆಯಲ್ಲಿ.

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

5 Responses to “ಜರ್ಮನ್ ಕುಟುಂಬದೊಡನೆ ಒಂದು ಕ್ರಿಸ್ಮಸ್ ಸಂಜೆ :ಮೂವರು ಹೆಣ್ಣುಮಕ್ಕಳ ಗೋದಲಿಯಲ್ಲಿ”

RSS Feed for ಬಿ ಎ ವಿವೇಕ ರೈ Comments RSS Feed

Thumba channgide Rai gale,hige Germany ya photo galannu kalisi.

It is very good pictures.Thank you Sri,Vivek Rai gale.

ನಂಜುಂಡಯ್ಯ ,ನೀವು ಚಿತ್ರಗಳನ್ನು ನೋಡಿ ಸಂತೋಷಪಟ್ಟದ್ದು ತೃಪ್ತಿ ಕೊಟ್ಟಿತು.

Respected sir,I,am very greatfull to you ,please contune the same,I want Europe tour next may or june,Thank you Sir.

ನಂಜುಂಡಯ್ಯ ,ನಮಸ್ಕಾರ.ಸಂತೋಷ.


Where's The Comment Form?

Liked it here?
Why not try sites on the blogroll...

%d bloggers like this: