ಜರ್ಮನಿಯಲ್ಲಿ ಕ್ರಿಸ್ಮಸ್ ಸಂತೆ :ದೇಸಿ ಸೊಗಡಿನ ಲೋಕದಲ್ಲಿ ಒಂದು ಸುತ್ತು

Posted on ಡಿಸೆಂಬರ್ 24, 2011. Filed under: ಜರ್ಮನಿ, ವ್ಯೂರ್ತ್ಸ್ ಬುರ್ಗ್, Christmas Market | ಟ್ಯಾಗ್ ಗಳು:, , , , , |


ಜರ್ಮನಿಯಲ್ಲಿ  ಕ್ರಿಸ್ಮಸ್  -ನವಂಬರದಲ್ಲೇ ಆರಂಭ ಆಗುತ್ತದೆ. ಇಲ್ಲಿ ಕ್ರಿಸ್ಮಸ್ ನ ಒಂದು ಮುಖ್ಯ ಆಕರ್ಷಣೆ ‘ಕ್ರಿಸ್ ಮಸ್ ಮಾರ್ಕೆಟ್ ‘ (ಕ್ರಿಸ್ಮಸ್ ಸಂತೆ ).ಸಾಮಾನ್ಯವಾಗಿ ನವಂಬರ ಕೊನೆಯ ವಾರದಿಂದ ದಶಂಬರ ೨೩/೨೪ ರ ವರೆಗೆ ಜರ್ಮನಿಯ ಕೆಲವು ನಗರ ,ಪಟ್ಟಣ ,ಹಳ್ಳಿಗಳಲ್ಲಿ ಪರಂಪರಾಗತ ಶೈಲಿಯಲ್ಲಿ  ವೈವಿಧ್ಯಮಯವಾಗಿ  ‘ಕ್ರಿಸ್ಮಸ್ ಸಂತೆ’ ನಡೆಯುತ್ತದೆ.ಜರ್ಮನಿಯಲ್ಲಿ ಈಗ ಒಟ್ಟು ಸುಮಾರು ಎಪ್ಪತ್ತೈದು ಸ್ಥಳಗಳಲ್ಲಿ ಇಂತಹ ಕ್ರಿಸ್ಮಸ್ ಸಂತೆಗಳನ್ನು ನೋಡಬಹುದು.ನ್ಯೂರೆಮ್ ಬೆರ್ಗ್ ನ ‘ಕ್ರಿಸ್ಮಸ್ ಸಂತೆ ‘ ಜರ್ಮನಿಯಲ್ಲಿ ಅತಿ ಜನಪ್ರಿಯವಾದುದು. ಸುಮಾರು ಒಂದು ತಿಂಗಳ ಕಾಲ  ಬೇರೆ ಬೇರೆ ಊರುಗಳಲ್ಲಿ ನಡೆಯುವ ಕ್ರಿಸ್ಮಸ್ ಸಂತೆಯನ್ನು ನೋಡಲು ಜನರು ಊರಿಂದ ಊರಿಗೆ ಸುತ್ತಾಡುತ್ತಿರುತ್ತಾರೆ.

‘ಕ್ರಿಸ್ಮಸ್ ಸಂತೆ’-  ಈಗ ಯೂರೋಪಿನ ಹೆಚ್ಚಿನ ದೇಶಗಳಲ್ಲಿ ,ಪಶ್ಚಿಮದ ನಾಡುಗಳಲ್ಲಿ ಹೆಚ್ಚು ಪ್ರಚಾರಕ್ಕೆ ಬಂದಿದೆ.ಆದರೆ ಇಂತಹ ‘ಚಳಿಗಾಲದ ಸಂತೆಗಳು ‘ ಮೊದಲು ಆರಂಭ ಆದದ್ದು ಜರ್ಮನಿಯಲ್ಲಿ ಎಂದು ಹೇಳಲಾಗಿದೆ.ಬಳಿಕ ಅದು ಯೂರೋಪಿನ ಬಹುತೇಕ ದೇಶಗಳಿಗೆ ಹರಡಿಕೊಂಡಿದೆ.ಜರ್ಮನಿಯ ಮೂಲರೂಪದ ಪರಂಪರಾಗತ ಕ್ರಿಸ್ಮಸ್ ಸಂತೆಯ ಸ್ವರೂಪವನ್ನು ಈಗ ಕೂಡಾ ಅನೇಕ ಕಡೆಗಳಲ್ಲಿ ಕಾಣಬಹುದು.

ಇಂತಹ ಪರಂಪರಾಗತ ರಮ್ಯ ‘ಕ್ರಿಸ್ಮಸ್ ಸಂತೆ’ ಯಲ್ಲಿ ಕಟ್ಟುವ ಮಳಿಗೆಗಳದ್ದೇ ಬಹುರೂಪಿ ಸೊಬಗು.  ಪಟ್ಟಣದ ಕೇಂದ್ರದ ಬಯಲು ಸ್ಥಳದಲ್ಲಿ ಮರದ ಹಲಗೆ ಮತ್ತು ತುಂಡುಗಳಿಂದ ಕಟ್ಟಿಕೊಳ್ಳುವ ಸಣ್ಣ ಪುಟ್ಟ ಮಳಿಗೆಗಳ ನಿರ್ಮಾಣ ಮತ್ತು ಅಲಂಕರಣವೇ ನೋಡಲು ಕಣ್ಣುಗಳಿಗೆ ಹಬ್ಬ.ಪ್ರತಿಯೊಂದು ಮಳಿಗೆಯವರೂ ತಮ್ಮ ತಮ್ಮ ಮಳಿಗೆಗಳನ್ನು ಸೃಜನಶೀಲವಾಗಿ ಕಲಾತ್ಮಕವಾಗಿ ಅಲಂಕರಿಸಿರುತ್ತಾರೆ.ಮಳಿಗೆಯ ಮಾಡಿನ ಮೇಲೆ ಪ್ರಾಣಿಗಳ -ಕುರಿಮರಿ  ಇತ್ಯಾದಿ -ಆಕೃತಿಗಳಿಂದ ತೊಡಗಿ, ಮಳಿಗೆಯ  ಮುಂಭಾಗ ಮತ್ತು ಒಳಭಾಗವನ್ನು ಸಹಜ ಎಲೆ, ಹೂವು ಮತ್ತು ತಮ್ಮದೇ ವಸ್ತುಗಳಿಂದ ಮೋಹಕವಾಗಿ ಸಿಂಗರಿಸುತ್ತಾರೆ.ರಾತ್ರಿ ಹೊತ್ತು ಚಿಕ್ಕ ಚಿಕ್ಕ ಬಲ್ಬುಗಳಿಂದ ಮಿನುಗುವ ಮಂದ ಬೆಳಕಿನ ನೋಟ ಚೇತೋಹಾರಿಯಾಗಿ ಇರುತ್ತದೆ.ನಮ್ಮ ದೇಶದ ವಿದ್ಯುತ್  ದೀಪಾಲಂಕಾರದಂತೆ ಜಗಜಗಿಸುವ ಕಣ್ಣು ಕೋರೈಸುವ ದೀಪಾಲಂಕಾರ ಇರುವುದಿಲ್ಲ.ಜರ್ಮನ್ ಕ್ರಿಸ್ಮಸ್ ಸಂತೆಯ ಮಳಿಗೆಗಳ ಒಳಗೆ ಮತ್ತು ಮುಂಭಾಗದಲ್ಲಿ ಅಲ್ಲಿ ಮಾರುವ ವಸ್ತುಗಳನ್ನು ಜೋಡಿಸಿಟ್ಟ  ವಿನ್ಯಾಸಗಳೇ ತುಂಬಾ ಆಲಂಕಾರಿಕ ಮತ್ತು ಸೌಂದರ್ಯಾತ್ಮಕ .ಈರೀತಿಯ ಮಳಿಗೆಗಳ ಅಲಂಕಾರ ,ಜೋಡಣೆಗಳನ್ನು ಪರಿಶೀಲಿಸಿ ಅವುಗಳಿಗೆ ಸಂತೆಯ ಕೊನೆಯ ದಿನ ಬಹುಮಾನ ಕೊಡುವ ಪ್ರೋತ್ಸಾಹದ ಪರಿಕ್ರಮ ಜರ್ಮನಿಯ ಅನೇಕ ನಗರಗಲ್ಲಿ ಇದೆ.ನ್ಯೂರೆಮ್ ಬೆರ್ಗ್ ನಲ್ಲಿ ಅಲ್ಲಿನ ಕ್ರಿಸ್ಮಸ್ ಸಂತೆಯ ಮಳಿಗೆಗಳ ವಿನ್ಯಾಸಕ್ಕೆ ಚಿನ್ನ,ಬೆಳ್ಳಿ ಮತ್ತು ಕಂಚಿನ ವಾರ್ಷಿಕ ಬಹುಮಾನಗಳನ್ನು ಕೊಡುವ ಪದ್ಧತಿ ಇದೆ.

ಇಲ್ಲಿನ  ಮಳಿಗೆಗಳಲ್ಲಿ ಮಾರಾಟ ಆಗುವವು’ ಸರಕುಗಳು’ ಅಲ್ಲ. ತಿನ್ನುವ ಕುಡಿಯುವ ತಿಂಡಿಗಳು ಮತ್ತು ಪಾನೀಯಗಳು ಎಲ್ಲವೂ ಬೇರೆ ಕಡೆ ರೆಸ್ಟೋರೆಂಟ್ ಗಳಲ್ಲಿ ಸಾಮಾನ್ಯವಾಗಿ ಸಿಗುವವು ಅಲ್ಲ.ಇವೆಲ್ಲ ಕ್ರಿಸ್ಮಸ್ ಗಾಗಿಯೇ ಮನೆಗಳಲ್ಲಿ ತಯಾರಿಸಿದ ದೇಸಿ ತಿಂಡಿತಿನಿಸುಗಳು.ಇವುಗಳಲ್ಲಿ ಬಹಳ ಜನಪ್ರಿಯವಾದ ಒಂದು ತಿನಿಸು ‘ಶುಂಟಿಯ ಬ್ರೆಡ್ ‘( Lebkuchen).ಸುಟ್ಟು ಬೇಯಿಸಿದ  ಸಾಸೆಜ್ ,ಹೊಗೆಯಾಡುತ್ತಿರುವ  ಕರಿದ ಸಾಸೆಜ್ ,ಹುರಿದ  ಬಾದಾಮಿ ಮತ್ತು ಇತರ ಸ್ಥಳೀಯ ಕಾಳುಗಳು, ಹುರಿದ ಜೋಳದ ಕಾಳು,ಬೇಯಿಸಿ ಒಣಗಿಸಿದ ಹಣ್ಣುಗಳು-ಸೇಬು  ,ಪ್ಲಂ,ಪಿಯರ್ ,ಸ್ಟೋನ್ ಆಪಲ್ ಮುಂತಾದವು. ಇವು ಎಲ್ಲವೂ ಮನೆಗಳಲ್ಲಿ  ಕೈಯಿಂದಲೇ ಮಾಡಿದವು.ಹಣ್ಣುಗಳನ್ನು ಒಣಗಿಸಿ ಕತ್ತರಿಸಿ ,ಅದನ್ನು ತಿಂಡಿಯಂತೆ ಬಳಸುವುದು ಇಲ್ಲಿ ಬಹಳ ವಿಶೇಷವಾಗಿದೆ .ಹಾಗೆಯೇ ಅನೇಕ ಬಗೆಯ ಸಿಹಿತಿಂಡಿಗಳನ್ನು ಮನೆಗಳಲ್ಲಿ ಮಾಡಿಕೊಂಡು ಸಂತೆಗೆ ತಂದು ಮಾರುತ್ತಾರೆ.ಈ ಸಂತೆಯಲ್ಲಿ ಮಾರುವ ಎಲ್ಲ ತಿಂಡಿ ತಿನಿಸುಗಳು ಮನೆಮನೆಗಳಲ್ಲಿ ಪ್ರೀತಿ ಸಂಭ್ರಮದಿಂದ ತಯಾರಿಸಿದ ಅಪ್ಪಟ ದೇಸಿ ರುಚಿಯವು.ಒಂದು ಕಾಲಕ್ಕೆ ನಮ್ಮ ಊರುಗಳಲ್ಲಿ ಎಲ್ಲ ಹಬ್ಬಗಳಿಗೂ ಮನೆಯಲ್ಲೇ ಬಗೆ ಬಗೆಯ ತಿಂಡಿ ಮಾಡುತ್ತಿದ್ದರು.ಚೌತಿ (ಗಣೇಶನ ಹಬ್ಬ ) ,ದೀಪಾವಳಿಯಲ್ಲಿ ಮನೆಗಳಲ್ಲಿ ಮಾಡುತ್ತಿದ್ದ  ದೇಸಿ ತಿನಿಸುಗಳು ಈಗ ಬಹುತೇಕ ಕಣ್ಮರೆಯಾಗಿವೆ.

ಜರ್ಮನಿಯ ‘ಕ್ರಿಸ್ಮಸ್ ಸಂತೆ’ಯ ಇನ್ನೊಂದು ಆಕರ್ಷಣೆ -‘ಬಿಸಿ ಮಸಾಲೆ ವೈನ್ ‘ ( ಜರ್ಮನ್ ಭಾಷೆಯಲ್ಲಿ  Gluehwein , ಇಂಗ್ಲಿಶ್ ನಲ್ಲಿ Mulled Wine ).ಸಾಮಾನ್ಯವಾಗಿ ವೈನ್ ಎಂದರೆ ಅದು ತಣ್ಣಗೆ ಇರುತ್ತದೆ.ಆದರೆ ಕ್ರಿಸ್ಮಸ್ ಸಂತೆಯಲ್ಲಿ ದೊರೆಯುವ ಈ ‘ಬಿಸಿ ಮಸಾಲೆ ವೈನ್’ ಇಲ್ಲಿ ಚಳಿಗಾಲದಲ್ಲಿ ಕ್ರಿಸ್ಮಸ್ ಸಮಯದಲ್ಲಿ ಮಾತ್ರ ವಿಶೇಷವಾದದ್ದು.ನೀರು,ಸಕ್ಕರೆ,ದಾಲ್ಚೀನಿ ಕಡ್ಡಿಗಳು ,ಲವಂಗ,ಕಿತ್ತಳೆ ಅಥವಾ ನಿಂಬೆ ರಸ ,ಕೆಂಪು ವೈನ್ ,ಕೆಲವೊಮ್ಮೆ ವನಿಲ್ಲಾ ಸಿಪ್ಪೆ -ಇಷ್ಟನ್ನು ಚೆನ್ನಾಗಿ ಬಿಸಿಮಾಡಿದಾಗ  ‘ಬಿಸಿ ಮಸಾಲೆ ವೈನ್ ‘ಸಿದ್ಧವಾಗುತ್ತದೆ.ಮಿಶ್ರಣ ಮಾಡಿದ ದ್ರವವನ್ನು  ಹೆಚ್ಚು ಕುದಿಸಬಾರದು,ಚೆನ್ನಾಗಿ ಬಿಸಿ ಮಾಡಿದರೆ ಸಾಕು.ಈ ಬಿಸಿ ವೈನನ್ನು ಗ್ಲಾಸ್ ಗಳಲ್ಲಿ ಹಾಕಿದರೆ ಗ್ಲಾಸ್ ಒಡೆಯುತ್ತದೆ.ಅದಕ್ಕಾಗಿ ಮಗ್ ಗಳಲ್ಲಿ ಹಾಕಿ ಕೊಡುತ್ತಾರೆ.ಈ ಬಿಸಿ ಮಸಾಲೆ ವೈನ್ ಬಹಳ ಬೇಗನೆ ತಲೆಗೆ ಏರುತ್ತದೆ.ಹಾಗಾಗಿ ಇದನ್ನು ‘ಕ್ರಿಸ್ಮಸ್ ಸಂತೆ’ಯಲ್ಲಿ ಎಲ್ಲ ತಿರುಗಾಟ ಮತ್ತು ವ್ಯಾಪಾರ ಮುಗಿದ ಬಳಿಕ ಕುಡಿಯುತ್ತಾರೆ.ನಡುಗುವ ಚಳಿಯಲ್ಲಿ ಹೊರಗೆ ನಿಂತುಕೊಂಡು ಬಿಸಿ ವೈನ್ ಕುಡಿಯುವುದರಿಂದ ಅಷ್ಟು ಮಟ್ಟಿಗೆ ಚಳಿಯ ತೀವ್ರತೆಯ ಅನುಭವ ಕಡಮೆ ಆಗುತ್ತದೆ.  ಜರ್ಮನ್ ಭಾಷೆಯಲ್ಲಿ’ Glueh’ (=glow) ಎಂದರೆ ‘ಉರಿಯುವುದು’  ಅಥವಾ’ ಹೊಳೆಯುವುದು ‘ಎಂದು ಅರ್ಥ.ಈ ಬಿಸಿ ಮಸಾಲೆ ವೈನ್ ಕುಡಿಯುವುದರಿಂದ ಹೊಟ್ಟೆಯಲ್ಲಿ ಬಿಸಿಯ’ ಉರಿಯ’ ಅನುಭವ ,ತಲೆಯಲ್ಲಿ ಹೊಸತು ‘ಹೊಳೆಯುವ ‘ಅನುಭವ ಆಗುವ ಕಾರಣ ಅದರ ಹೆಸರು ಸಾರ್ಥಕ ಆಗುತ್ತದೆ!

ಕ್ರಿಸ್ಮಸ್ ಸಂತೆಯ ಹೆಚ್ಚಿನ ಸಂಖ್ಯೆಯ ಮಳಿಗೆಗಳು ಉಡುಗೊರೆಯ ವಸ್ತುಗಳು .ಅವೆಲ್ಲಾ ಕರಕುಶಲ ಸಾಮಗ್ರಿಗಳು.ಮರದಿಂದ ಮತ್ತು ಪಿಂಗಾಣಿಯಿಂದ  ತಯಾರಿಸಿದ ಬಗೆಬಗೆಯ ಗೊಂಬೆಗಳು,ಆಟಿಕೆಗಳು,ಗೋದಲಿಗಳು ,ಬೇರೆ ಬೇರೆ ಮಾದರಿಯ ಮರದ ಕೆತ್ತನೆಗಳು ,ಕಸೂತಿಯ ವಸ್ತುಗಳು,ಮಣಿಸರಕಿನ ಸಾಮಗ್ರಿಗಳು,ನೂಲಿನಿಂದ ಮಾಡಿದ ಬೊಂಬೆಗಳು,ಕ್ಯಾಂಡಲ್ ಗಳು,ಚಿಕ್ಕ ಚಿಕ್ಕ ಆಕೃತಿಗಳು,ಆಭರಣಗಳು,ಕರಕುಶಲ ವಸ್ತುಗಳು ಇತ್ಯಾದಿ.ಕ್ರಿಸ್ಮಸ್ ಮರದ ಅಲಂಕಾರದ ವಸ್ತುಗಳು ,ತೂಗುಹಾಕುವ ಚರ್ಮದ ಬೂಟ್ಸ್ ಗಳು -ಹೀಗೆ ನಾನಾ ಬಗೆಯವು ಅಲ್ಲಿ ಮಳಿಗೆಗಳಲ್ಲಿ ದೊರೆಯುತ್ತವೆ.ಮಳಿಗೆಯಲ್ಲಿಯೇ ಗಾಜನ್ನು ಬೆಂಕಿಯಲ್ಲಿ ಕರಗಿಸಿ ,ಅಲ್ಲೇ ಗಾಜಿನ ವಸ್ತುಗಳನ್ನು ಸಿದ್ಧಪಡಿಸಿ ಕೊಡುವ ಸೌಲಭ್ಯ ಇದೆ.

ಈರೀತಿ ‘ಕ್ರಿಸ್ಮಸ್ ಮಳಿಗೆ’ಗಳಲ್ಲಿ ದೊರೆಯುವ ಎಲ್ಲ ವಸ್ತುಗಳೂ ಕೈಕಸುಬಿನ ಮೂಲಕ ಮನೆಗಳಲ್ಲಿಯೇ ಪರಂಪರಾಗತ ರೀತಿಯಲ್ಲಿ ಸಿದ್ಧವಾದವು.ಬೃಹತ್ ಪ್ರಮಾಣದಲ್ಲಿ ಕಾರ್ಖಾನೆಗಳಲ್ಲಿ ನಿರ್ಮಾಣವಾಗುವ ಯಾವುದೇ ವಸ್ತುಗಳನ್ನು ಇಂತಹ ‘ಕ್ರಿಸ್ಮಸ್ ಸಂತೆ’ಯಲ್ಲಿ ಮಾರಾಟ ಮಾಡಲು ಅವಕಾಶ ಇರುವುದಿಲ್ಲ.ಪ್ಲಾಸ್ಟಿಕ್ ನಿಂದ ತಯಾರಾದ ವಸ್ತುಗಳನ್ನು,ಪ್ರಾಣಿಗಳ ತುಪ್ಪಳದ ಹಾರಗಳನ್ನು ,ಬೃಹತ್ ಪ್ರಮಾಣದಲ್ಲಿ ಸಿದ್ಧಪಡಿಸಿದ ಆಟಿಕೆಗಳನ್ನು ,ಆಧುನಿಕ ಯಂತ್ರ ನಿರ್ಮಿತ ವಸ್ತುಗಳನ್ನು ‘ಕ್ರಿಸ್ಮಸ್ ಸಂತೆ’ಗಳಲ್ಲಿ ನಿಷೇಧಿಸಲಾಗಿದೆ.ಹಾಗಾಗಿ ಇಲ್ಲಿ ಬರುವವರು ಗ್ರಾಮೀಣ ಕೈಕಸುಬಿನ ದುಡಿಮೆಯ ಫಲಗಳನ್ನು ಮಾತ್ರ ಕೊಳ್ಳುತ್ತಾರೆ, ಮನೆಗಳಲ್ಲಿ ತಯಾರಿಸಿದ ತಿಂಡಿ ತಿನಿಸುಗಳನ್ನು ಮಾತ್ರ ತಿನ್ನುತ್ತಾರೆ . ದುಡಿಯುವವರ ಸ್ವರ್ಗದ ಕನಸನ್ನು ಈ ಲೋಕದಲ್ಲೇ ನಿಜಮಾಡುತ್ತವೆ – ಬಡವರ ಬಗೆಗಿನ ಕರುಣೆಯ ಸಂದೇಶ ಸಾರಿದ ಏಸುವಿನ ಹೆಸರಿನ ಹಬ್ಬದ ಈ ‘ಕ್ರಿಸ್ಮಸ್ ಸಂತೆಗಳು.’

ಮೊನ್ನೆ ಗುರುವಾರ ,ದಶಂಬರ ೨೨ ರಂದು ನಮ್ಮ ವ್ಯೂರ್ತ್ ಬುರ್ಗ್  ನಗರದ ಕೇಂದ್ರವಾದ  ಮಾರ್ಕೆಟ್ ಸ್ಥಳದಲ್ಲಿ , ಕಳೆದ ತಿಂಗಳು ನವಂಬರ ೨೫ ರಿಂದ ನಡೆಯುತ್ತಿರುವ ‘ಕ್ರಿಸ್ಮಸ್ ಸಂತೆ’ಯಲ್ಲಿ , ಮಳಿಗೆಯಿಂದ ಮಳಿಗೆಗೆ ಸುತ್ತು ಹಾಕಿ ,ಹನಿ ಹನಿ ಮಳೆಯಲ್ಲಿ ತಣ್ಣನೆ ತೋಯುತ್ತಾ ನಾನು ತೆಗೆದ ಫೋಟೋಗಳು ಇಲ್ಲಿ ಇವೆ.ಅವುಗಳನ್ನು ದೊಡ್ಡದಾಗಿ  ನೋಡಲು  ಅವುಗಳ  ಮೇಲೆ ಕ್ಲಿಕ್ ಮಾಡಿರಿ.

ಈದಿನ ಶನಿವಾರ  ,ದಶಂಬರ ೨೪ , ಗ್ರಾಮೀಣ ಜರ್ಮನಿಯ ಕ್ರಿಸ್ಮಸ್ ಆಚರಣೆ ನೋಡಲು ಮತ್ತು ಪಾಲುಗೊಳ್ಳಲು ಪ್ರೊ.ಹೈದ್ರೂನ್ ಬ್ರೂಕ್ನರ್ ಅವರ ಆಹ್ವಾನದಂತೆ ಅವರ ಜೊತೆಗೆ ,ಬಾದೆನ್-ವ್ಯೂರ್ತೆಮ್ ಬೆರ್ಗ್ ಪ್ರಾಂತ್ಯದ ‘ವೈನ್ ಗಾರ್ತೆನ್’ ಎಂಬ ಊರಿಗೆ ಹೋಗುತ್ತಿದ್ದೇನೆ.ಸೋಮವಾರ ಸಂಜೆ ಮತ್ತೆ ವ್ಯೂರ್ತ್ಸ್ ಬುರ್ಗಿಗೆ.  ಇದು ಈಬಾರಿ ಕ್ರಿಸ್ಮಸ್ ರಜೆಯ ಮೊದಲ ಸುತ್ತಾಟ. ಲ್ಯಾಪ್ ಟಾಪ್ ಎಂಬ ನನ್ನ ಶಿಲುಬೆಯನ್ನು ಇಲ್ಲೇ ಬಿಟ್ಟು ಹೊರಟಿರುವುದು ಈಗ ದಕ್ಷಿಣಾಪಥಕ್ಕೆ.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಜರ್ಮನಿಯಲ್ಲಿ ಕ್ರಿಸ್ಮಸ್ ಸಂತೆ :ದೇಸಿ ಸೊಗಡಿನ ಲೋಕದಲ್ಲಿ ಒಂದು ಸುತ್ತು”

RSS Feed for ಬಿ ಎ ವಿವೇಕ ರೈ Comments RSS Feed

ಸರ್, ಎಷ್ಟು ಚೆಂದದ ಸಂತೆಯಿದು!! ಚಿತ್ರಗಳನ್ನು ನೋಡಿಯೇಉಲ್ಲಾಸವೆನಿಸಿಬಿಟ್ಟಿತು. ನಿಮ್ಮಿಂದಾಗಿ ಜರ್ಮನ್ ಕ್ರಿಸ್ಮಸಿನ ಬಗ್ಗೆ ಹಿಂದೆಂದೂ ಕೇಳಿರದ ವಿಚಾರಗಳು ತಿಳಿಯುವಂತಾಯಿತು!! Gluehwein ಬಗ್ಗೆ ಓದಿಯೇ ಹೊಟ್ಟೆ ಮನಸ್ಸು ಎರಡೂ ಬೆಚ್ಚಗಾದವು. fröhliches Weihnachtsfest!!

ಟೀನಾ, ನೀವು ಓದಿದ್ದು ತುಂಬಾ ಸಂತೋಷ ಆಯಿತು.ನಿಮ್ಮ ಬ್ಲಾಗಿನ ಬರಹ ‘ಒಂದು ಕ್ರಿಸ್ಮಸ್ ಮರ’ ಆಪ್ತ ಹಾಗೂ ಬೆಚ್ಚಗಿನ ಅನುಭವದ್ದು.Vielen Dank! Frohes Neus Jahr!


Where's The Comment Form?

Liked it here?
Why not try sites on the blogroll...

%d bloggers like this: