ಹೈಡಲ್ ಬೆರ್ಗ್ :ತತ್ತ್ವಜ್ಞಾನಿಗಳ ದಾರಿಯಲ್ಲಿ -ಇನ್ನೊಂದು ದಿನ

Posted on ಡಿಸೆಂಬರ್ 19, 2011. Filed under: ಜರ್ಮನಿ, ಜರ್ಮನ್ ಸಾಹಿತ್ಯ, ಹೈಡಲ್ ಬೆರ್ಗ್ ವಿವಿ., German Literature | ಟ್ಯಾಗ್ ಗಳು:, , , , |


ಜರ್ಮನಿಯ ನೈಋತ್ಯ ದಿಕ್ಕಿನಲ್ಲಿ ಇರುವ ನಗರ ಹೈಡಲ್ ಬೆರ್ಗ್ ನೈಸರ್ಗಿಕ ಮತ್ತು ಬೌದ್ಧಿಕ ಕೇಂದ್ರವಾಗಿ ಯುರೋಪಿನಲ್ಲಿ ಪ್ರಸಿದ್ಧ.ಹೈಡಲ್ ಬೆರ್ಗ್ ವಿಶ್ವವಿದ್ಯಾನಿಲಯ ೧೩೮೬ರಲ್ಲಿ ಸ್ಥಾಪನೆಯಾಗಿದ್ದು,ಅದು ಇಂದಿಗೂ ಯೂರೋಪಿನ ಅತಿ ಪ್ರಾಚೀನ ಬೌದ್ಧಿಕ ಸಂಸ್ಥೆಯಾಗಿ ಜಗತ್ ಪ್ರಸಿದ್ಧವಾಗಿದೆ.ತತ್ವಜ್ಞಾನಿಗಳು,ಸಾಹಿತಿಗಳು,ಕಲಾವಿದರು -ಬಹಳ ಪ್ರಮುಖರು ಜೀವಿಸಿದ್ದ ಹೈಡಲ್ ಬೆರ್ಗ್ ತನ್ನ ನೈಸರ್ಗಿಕ ಸೊಬಗಿನಿಂದಲೂ ಎಲ್ಲ ವರ್ಗದ ಜನರ ಮೆಚ್ಚಿನ ಪ್ರವಾಸಿ ತಾಣವಾಗಿದೆ.ನಗರದ ಉತ್ತರ ಭಾಗದಲ್ಲಿ ಹರಿಯುತ್ತಿರುವ ನೆಕ್ಕರ್ ನದಿ,ಅದರ ಉತ್ತರಕ್ಕೆ ಎತ್ತರದಲ್ಲಿ ಬೆಳೆದುನಿಂತ ಹಸುರು ಕಾಡು,ನದಿಯ ದಂಡೆಯಲ್ಲಿ ಹರಡಿಕೊಂಡಿರುವ ಹಳೆಯ ಪಟ್ಟಣ,ಅದರ ಮೇಲ್ಗಡೆ ತಲೆ ಎತ್ತಿ ನಿಂತಿರುವ  ಐತಿಹಾಸಿಕ ಕೋಟೆ -ಹೀಗೆ ಹೈಡಲ್ ಬೆರ್ಗ್ ಕಾಲುಗಳಿಂದ ತೊಡಗಿ ಕಣ್ಣುಗಳ ಮೂಲಕ ಹರಿದು ತಲೆಯ ಒಳಗೆ ಆಹ್ಲಾದದ ಬೆರಗಿನ ಸಂತೃಪ್ತಿಯ ಸುಖವನ್ನು ಕೊಡುತ್ತದೆ.

ಹೈಡಲ್ ಬೆರ್ಗ್ ಜೊತೆಗೆ ನನಗೆ ಒಂದು ಭಾವನಾತ್ಮಕ ಸಂಬಂಧ ಇದೆ.ನಾನು ಯುರೋಪನ್ನು ,ಜರ್ಮನಿಯನ್ನು ಮೊದಲು ಕಂಡದ್ದು ಹೈಡಲ್ ಬೆರ್ಗ್ ನಲ್ಲಿ ೧೯೮೯ರ ಮೇ ಯಲ್ಲಿ.ಇಲ್ಲಿನ  ದಕ್ಷಿಣ ಏಷ್ಯ ಸಂಸ್ಥೆಯಲ್ಲಿ ಎರಡು ಉಪನ್ಯಾಸಗಳನ್ನು ಕೊಡಲು ೧೯೮೯ರಲ್ಲಿ ಇಲ್ಲಿಗೆ ನಾನು  ಬಂದಾಗ ಹಳ್ಳಿಯ ಹುಡುಗನೊಬ್ಬ ಮೊದಲಬಾರಿ ದೊಡ್ಡ ನಗರವನ್ನು  ಹೊಕ್ಕಾಗ ಆಗುವಂತೆ ಸಂಭ್ರಮ ಮತ್ತು ಗಲಿಬಿಲಿಗಳ ಪಾಕದಲ್ಲಿ ಮುಳುಗಿ ಹೊರಬಂದಿದ್ದೆ.’ಚಂದದ ಪಟ್ಟಣ’ ಎನ್ನುವ ವಿಶೇಷಣವನ್ನು ಪೂರ್ಣ ಅರ್ಥದಲ್ಲಿ ಹೇಳಬಹುದಾದ ಕೆಲವು ಊರುಗಳಲ್ಲಿ ಹೈಡಲ್ ಬೆರ್ಗ್ ಖಂಡಿತ ಸೇರುತ್ತದೆ.ಮುಂದೆ ಜರ್ಮನಿಗೆ ಬಂದಾಗಲೆಲ್ಲ ,ಅವಕಾಶ ದೊರೆತಾಗಲೆಲ್ಲ ಹೈಡಲ್ ಬೆರ್ಗ್ ನ್ನು ಕಂಡು ಮೊದಲ ಸಮಾಗಮದ ನೆನಪುಗಳನ್ನು  ಮೆಲುಕುಹಾಕುತ್ತಿದ್ದೆ.ಈಗ ನಾನು ಇರುವ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಮಾನವವಿಜ್ನಾನದ ಪ್ರಾಧ್ಯಾಪಕಿ ಆಗಿರುವ ಪ್ರೊ.ಎಲಿಜಬೆತ್ ಶಂಬೂಕೆರ್ ಅವರ ವಾಸ ಹೈಡಲ್ ಬೆರ್ಗ್ ನಲ್ಲಿ. ಅವರ ಆಹ್ವಾನದಂತೆ ಮತ್ತೊಮ್ಮೆ ಕಳೆದ  ಭಾನುವಾರ ,ದಶಂಬರ ಹತ್ತರಂದು ಹೈಡಲ್ ಬರ್ಗ್ ಸುತ್ತಾಡುವ ಅವಕಾಶ ದೊರೆಯಿತು.

ಪ್ರೊ.ಎಲಿಜಬೆತ್ ಮತ್ತು ಅವರ ಡಾಕ್ಟರ್ ಗಂಡ ಕ್ಲೌಸ್  ನಮ್ಮನ್ನು ಮೊದಲು ಕರೆದುಕೊಂಡು ಹೋದದ್ದು  ಸವಾಲಿನ -ಸಂತೃಪ್ತಿಯ ಕಾಲ್ನಡಿಗೆಯ ನಡೆದಾಟಕ್ಕೆ -ಹೈಡಲ್ ಬೆರ್ಗಿನ ಜನಪ್ರಿಯ ‘ತತ್ತ್ವಜ್ಞಾನಿಗಳ ದಾರಿ’ ಯಲ್ಲಿ.ನೆಕ್ಕರ್ ನದಿಯ ಉತ್ತರ ಭಾಗದಲ್ಲಿ ಎತ್ತರದಲ್ಲಿ ಕಾಡಿನ ತಪ್ಪಲಿನಲ್ಲಿ ಹಳೆಯ ಪಟ್ಟಣಕ್ಕೆ ಸಮಾನಾಂತರವಾಗಿ ಸಾಗುವ ಕಾಲುದಾರಿಯೇ ‘ತತ್ತ್ವಜ್ಞಾನಿಗಳ ದಾರಿ ‘. ಜರ್ಮನ್ ಭಾಷೆಯಲ್ಲಿ ಇದನ್ನು’ Philosophenweg  ‘ ಎಂದೂ ಇಂಗ್ಲಿಷಿನಲ್ಲಿ ‘ Philosophers’ Walk/Way ಎಂದೂ ಕರೆಯುತ್ತಾರೆ.ಹೈಡೆಲ್ ಬೆರ್ಗಿನ ಪ್ರಸಿದ್ಧ ತತ್ತ್ವಜ್ಞಾನಿಗಳು,ಕವಿಗಳು,ಪ್ರೊಫೆಸರ್ ಗಳು ,ಚಿಂತಕರು ನಡೆದಾಡಲು ಬಳಸುತ್ತಿದ ದಾರಿ ಇದು.ಅನೇಕ ಮಂದಿ ಇಲ್ಲಿ ಜೊತೆಯಾಗಿ ನಡೆದಾಡುತ್ತ ,ತಮ್ಮ ಬೌದ್ಧಿಕ ವಿಚಾರಗಳನ್ನು ಹಂಚಿಕೊಳ್ಳುತ್ತಾ , ನಡೆ-ನುಡಿ ( walk and talk  ) ಮಾಡುತ್ತಿದ್ದ ಬುದ್ಧಿ ಭಾವಗಳ ನಡಿಗೆಯ ಐತಿಹಾಸಿಕ ಪಥವಾಗಿಯೂ ಇದಕ್ಕೆ ಮಹತ್ವ ಇದೆ.

ಜಗತ್ತಿನ ಬಹುಮುಖ್ಯ ತತ್ತ್ವಜ್ಞಾನಿ ಹೆಗೆಲ್ ( ೧೭೭೦-೧೮೩೧ ) ೧೮೧೬-೧೭ರ ಅವಧಿಯಲ್ಲಿ ಹೈಡಲ್ ಬೆರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಆಗಿದ್ದ.ಅವನು ಅಲ್ಲಿ ತನ್ನ ವಿದ್ಯಾರ್ಥಿಗಳಿಗೆ ಕೊಟ್ಟ ಉಪನ್ಯಾಸಗಳ ಆಧಾರದಲ್ಲಿ ರಚಿಸಿದ ಅವನ  ಮುಖ್ಯ ಗ್ರಂಥ ‘ The Encyclopedia of the Philosophical sciences in Outline ‘ಪ್ರಕಟವಾದದ್ದು ಹೈಡೆಲ್ ಬೆರ್ಗ್ ನಲ್ಲಿ  ೧೮೧೬ -೧೭ರಲ್ಲಿ .ಕಾರ್ಲ್ ಮಾರ್ಕ್ಸ್ ಸಹಿತ ಅನೇಕ ಸಾಮಾಜಿಕ ಚಿಂತಕರಿಗೆ ಹೊಸ ರೀತಿಯಲ್ಲಿ ಆಲೋಚನೆ ಮಾಡಲು ಪ್ರೇರಣೆ ಕೊಟ್ಟದ್ದು ಹೆಗೆಲ್ ಚಿಂತನೆಗಳು. ಹಬೆರ್ ಮಸ್ ಕೂಡಾ ಹೈಡಲ್ ಬೆರ್ಗ್ ನಲ್ಲಿ ಇದ್ದ ಇನ್ನೊಬ್ಬ ತತ್ತ್ವಜ್ಞಾನಿ.

ಹೈಡಲ್ ಬೆರ್ಗ್ ರೊಮ್ಯಾಂಟಿಕ್ ಕಾವ್ಯದ  ತವರು.ಐಶೆನ್ ದೊರ್ಫ್ ,ಗೋರ್ರೆಸ್,ಅರ್ನಿಂ,ಕ್ಲೆಮೆನ್ಸ್  ಬ್ರೆಂತನೋ -ಇಂತಹ ಅನೇಕ ಕವಿಗಳು ೧೮-೧೯ನೆ ಶತಮಾನದಲ್ಲಿ ಹೈಡಲ್ ಬೆರ್ಗಿನಲ್ಲಿ ಕವಿಗಳ ಕೂಟ ಕಟ್ಟಿಕೊಂಡು ರೊಮ್ಯಾಂಟಿಕ್  ಕಾವ್ಯಪರಂಪರೆಯನ್ನು ರೂಪಿಸಿದವರು,ಜನಪ್ರಿಯಗೊಳಿಸಿದವರು. ಸಾಹಿತ್ಯದ ಕ್ಲಾಸಿಕಲ್ ಮತ್ತು ವಾಸ್ತವವಾದಿ ಸಿದ್ಧಾಂತಕ್ಕೆ ವಿರುದ್ಧವಾಗಿ ,ನಿಸರ್ಗ,ಪ್ರೇಮ,ಜನಪದ ಕಲೆ  ಮತ್ತು ನಿಸರ್ಗ ಆಧಾರಿತ ತಿಳುವಳಿಕೆಯನ್ನು ತಮ್ಮ ಕಾವ್ಯದ ಮೂಲಧಾತುವಾಗಿ ಸ್ಥಾಪಿಸಿ ,ರೊಮ್ಯಾಂಟಿಕ್ ಎಂಬ ಕಾವ್ಯ ಪರಂಪರೆಯನ್ನು ಕಟ್ಟಿಕೊಟ್ಟವರು.ಮನುಷ್ಯರ ಚಟುವಟಿಕೆಗಳು ಭಾಷೆ ,ಸಂಸ್ಕೃತಿ ಮತ್ತು ಸಾಹಿತ್ಯದ ರೂಪದಲ್ಲಿ ನಿಸರ್ಗದ ನಿಯಂತ್ರಣಕ್ಕೆ ಒಳಗಾಗಿ ರೂಪು ತಾಳುತ್ತವೆ ಎನ್ನುವುದು ಇವರ ತಾತ್ವಿಕತೆ.

ನಾವು ಮೊನ್ನೆ ನಡೆದಾಡಿದ ‘ತತ್ತ್ವಜ್ಞಾನಿಗಳ ದಾರಿ’ಯ ನಡುವಿನಲ್ಲಿ ಎತ್ತರದ ಒಂದು ಕಡೆಯಲ್ಲಿ ಒಂದು ವಿಶಿಷ್ಟವಾದ ಸಸ್ಯೋದ್ಯಾನ ಇದೆ.ಇದನ್ನು ‘ತತ್ತ್ವಜ್ಞಾನಿಗಳ ತೋಟ ‘ಎನ್ನುತ್ತಾರೆ.ಆ ತೋಟದಲ್ಲಿ ಕವಿ ಐಸೆನ್ ದೊರ್ಫ್ ನ  ದೇಹದ ಮೇಲ್ಭಾಗದ ಪ್ರತಿಮೆ ಇದೆ.ಅದರಲ್ಲಿ ಆತನ ಕವನದ ಕೆಲವು ಸಾಲುಗಳನ್ನು ಕೆತ್ತಲಾಗಿದೆ.( ಈ ಪ್ರತಿಮೆಯ ಫೋಟೋ ,ನಾನು ತೆಗೆದದ್ದು ಕೆಳಗೆ ಕೊಟ್ಟಿದ್ದೇನೆ.) ಐಸೆನ್ ದೊರ್ಫ್ ನ ಒಂದು ಜರ್ಮನ್ ಕವನವನ್ನು ಕನ್ನಡಕ್ಕೆ ಅನುವಾದಿಸಿ ಇಲ್ಲಿ ಕೊಟ್ಟಿದ್ದೇನೆ :

ಚಂದ್ರನ  ರಾತ್ರಿ

ಬಾನು ಬುವಿಯನು ಮೆತ್ತಗೆ

ಮುತ್ತಿಕ್ಕಿದಂತೆ ,ಅದರಿಂದ

ಹೂವುಗಳು ಮಿರಮಿರನೆ ಮಿರುಗಿದಂತೆ

ಭೂಮಿಗೆ ಆಕಾಶದ್ದೇ  ಕನಸು.

ಗಾಳಿ ಹಾರಾಡಿದಾಗ ಹೊಲದ ಮೇಲೆಲ್ಲ

ಬಾಗಿ ತೊನೆದಾಡಿದಾಗ ಜೋಳದ ತೆನೆಗಳೆಲ್ಲ

ಮರಗಳು ಲಾಸ್ಯವಾಡಿದವು ಮಧುರವಾಗಿ

ರಾತ್ರಿಯಲಿ ನಕ್ಷತ್ರಗಳು ಸ್ಫಟಿಕವಾಗಿ.

ಚಾಚಿಕೊಂಡಿತು ತನ್ನ ರೆಕ್ಕೆಗಳನು

ನನ್ನ ಜೀವ ಜಗದಗಲವಾಗಿ

ನೀರವದ ನಾಡಿನಲಿ  ಹಾರಾಡುತಿತ್ತು ನನ್ನ ಜೀವ

ಮತ್ತೆ ನನ್ನ ಮನೆ ಸೇರುವುದೋ ಎಂಬ ಭಾವ.

‘ತತ್ತ್ವಜ್ಞಾನಿಗಳ ದಾರಿ’ ಯ ಆರಂಭದ ಕೆಳಭಾಗದ  ಅರ್ಧದಷ್ಟು ಭಾಗ ಬಹಳ ಏರುಮೇರು ಆಗಿದ್ದು ಏದುಸಿರು ಬಿಡುತ್ತಲೇ ಮುಂದೆ ಸಾಗಬೇಕಾಗಿದೆ.ಸುರುಳಿಯಾಕಾರದ ಏರು ದಾರಿಯಲ್ಲಿ ಮೊದಲಲ್ಲಿ ಸಿಕ್ಕುವ ತಿರುವಿನಲ್ಲಿ ಹೈಡಲ್ ಬೆರ್ಗ್ ವಿವಿಯ ಫಿಸಿಕಲ್ ಇನ್ಸ್ಟಿಟ್ಯೂಟ್ ಇದೆ.ಅದರ ಬಳಿ  ಕಾಣಿಸುವ ದೊಡ್ಡ ಕಟ್ಟಡ ವಿಶ್ವವಿದ್ಯಾಲಯದ ಭೌತ ವಿಜ್ಞಾನದ್ದು. ಮುಂದಕ್ಕೆ ಏರುತ್ತಾ ದೇಹವನ್ನು ಮುಂದಕ್ಕೆ ಎಳೆಯುತ್ತಾ ಹೆಜ್ಜೆ ಇಡುತ್ತಾ ಹೋದರೆ ಏರು ದಾರಿ ಮುಗಿಯುತ್ತದೆ.ಅಲ್ಲೇ  ಸಿಗುವುದು- ‘ತತ್ತ್ವಜ್ಞಾನಿಗಳ ತೋಟ’.ಇಲ್ಲಿಂದ ನಿಂತು ಕೆಳಗೆ ನೋಡಿದರೆ ಹರಿಯುವ ನೆಕ್ಕರ್ ನದಿಯ ಸುಂದರ ನೋಟ.ದೂರಕ್ಕೆ ಕಣ್ಣು ಹಾಯಿಸಿದರೆ ಆ ಕಡೆಯಲ್ಲಿ ಹರಡಿಕೊಂಡಿರುವ ಹಳೆಯ ಪಟ್ಟಣದ ಹೆಂಚಿನ ಮಾಡಿನ ಸಾಲು ಸಾಲು ಮನೆಗಳು .ಇನ್ನೂ ಮುಂದಕ್ಕೆ ಮೇಲಕ್ಕೆ ಕಣ್ಣು ಹಾಯಿಸಿದರೆ ಬೆಟ್ಟದ ಮೇಲೆ ತಲೆ ಎತ್ತಿ ನಿಂತಿರುವ ಕೋಟೆ .ಆ ತೋಟವೂ ವಿಶಿಷ್ಟ ,ವಿಚಿತ್ರ.ಸುತ್ತುಮುತ್ತಲೆಲ್ಲ ಕೊರೆಯುವ ತಣ್ಣನೆಯ ಚಳಿ ಇದ್ದರೆ, ಆ ತೋಟದ ಬಳಿಯ ಪ್ರದೇಶ ತುಂಬಾ ಬೆಚ್ಚಗಿದೆ.ಹಾಗಾಗಿಯೇ ಅಲ್ಲಿ ಉಷ್ಣ ವಲಯದ ಅನೇಕ ಸಸ್ಯಗಳನ್ನು ನೆಟ್ಟು ಬೆಳೆಸಿದ್ದಾರೆ. ಚಳಿಯ ಬೆಟ್ಟದ ಮೇಲೆ ಬೆಚ್ಚನೆಯ ಮಗುವಿನಂತೆ ಈ ತೋಟ ಹಾಯಾಗಿದೆ.

ದಾರಿಯಲ್ಲಿ ಇನ್ನೂ ಮುಂದಕ್ಕೆ ಹೋದಾಗ ಒಂದು ಕಡೆ ಕವಿ ಹೊಲ್ದರ್ಲಿನ್ ಹೆಸರಿನ ಒಂದು ತೋಟ ಇದೆ. ಅಲ್ಲಿ ಒಂದು ಫಲಕದಲ್ಲಿ ಆತನು ಹೈಡಲ್ ಬೆರ್ಗ್ ಬಗ್ಗೆ ಬರೆದ ಕವನದ ಕೆಲವು ಸಾಲುಗಳನ್ನು ಬರೆಯಲಾಗಿದೆ. ಹೊಲ್ದರ್ಲಿನ್ (೧೭೭೦-೧೮೪೩) ರೊಮ್ಯಾಂಟಿಕ್ ಚಿಂತನೆಯ ಪ್ರಮುಖ ಜರ್ಮನ್ ಕವಿ.ನೀತ್ಶ್ಚೆ ಯ ಮೇಲೆ ಪ್ರಭಾವ ಬೀರಿದವನು.ಹೊಲ್ದರ್ಲಿನ್ ಆಗಾಗ ಹೈಡಲ್ ಬೆರ್ಗಿಗೆ ಬರುತ್ತಿದ್ದ  ಮತ್ತು ಹೈಡಲ್ ಬೆರ್ಗ್ ಬಗ್ಗೆ ಮೆಚ್ಚುಗೆಯ ಒಂದು ಕವನವನ್ನೂ ಬರೆದಿದ್ದ.(ಹೊಲ್ದರ್ಲಿನ್ ಬಗ್ಗೆ ಮುಂದೆ ಪ್ರತ್ಯೇಕವಾಗಿ ಬ್ಲಾಗಿನಲ್ಲಿ ಬರೆಯುತ್ತೇನೆ.ನಾನು ತ್ಯೂಬಿಂಗನ್ ವಿಶ್ವವಿದ್ಯಾಲಯದಲ್ಲಿ  ೧೯೯೩ರಲ್ಲಿ ಮೂರು ತಿಂಗಳ ಕಾಲ ಇದ್ದಾಗ ಆತನ ಬಗ್ಗೆ ಸಾಕಷ್ಟು ಓದಿಕೊಂಡಿದ್ದೇನೆ.)

ಹೊಲ್ದರ್ಲಿನ್ ನ ಒಂದು ಜರ್ಮನ್ ಕವನವನ್ನು ‘ಇನ್ನೊಂದು ದಿನ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿ ,ಅದರ ಮೊದಲ ಪ್ಯಾರವನ್ನು ಅಷ್ಟೇ ಇಲ್ಲಿ ಕೊಡುತ್ತಿದ್ದೇನೆ:

“ಇನ್ನೊಂದು ದಿನ, ಇನ್ನೊಂದು ದಾರಿಯಲಿ  ನಡೆಯುತ್ತೇನೆ  ನಾನು

ಒಳಹೊಗುತ್ತೇನೆ  ಎಲೆಮುಚ್ಚಿದ ಕಾಡಿನೊಳಗೆ , ಸಂಧಿಸುತ್ತೇನೆ  ವಸಂತನನ್ನು

ಅರಳುವ ಗುಲಾಬಿಗಳ ನಡುವಿನ ಬಂಡೆಗಳ ಸಂದಿಯಲಿ

ಹುಡುಕುತೇನೆ  ನಿನ್ನನು, ಎಲ್ಲಿಯೂ ಇಲ್ಲ ನೀನು .”

‘ತತ್ತ್ವಜ್ಞಾನಿಗಳ ದಾರಿ’ಯಿಂದ ಮತ್ತೆ ಕೆಳಕ್ಕೆ ಇಳಿದು ,ಹಳೆಯ ಸೇತುವೆ ಸೇರುವುದು -ಕಣ್ಣಳತೆಯಲ್ಲಿ ಹತ್ತಿರವೆಂದೇ ಭಾಸವಾಗುತ್ತದೆ.ಈಗ ಮೇಲಿನಿಂದ ಕೆಳಕ್ಕೆ ಇಳಿಯಲು ‘ಸರ್ಪಸುತ್ತಿನ ದಾರಿ.’ ಸುತ್ತು ಸುತ್ತು ಇಳಿದಷ್ಟೂ ಮುಗಿಯದ ಇಳಿಜಾರು .ಮುಗಿಯಿತು ಎನ್ನುವಷ್ಟರಲ್ಲಿ ಮತ್ತೊಂದು ತಿರುವು.ಯಾರೇ ಆದರೂ ತತ್ವಜ್ನಾನಿಯಾಗುವುದಕ್ಕೆ ಈ ‘ಸರ್ಪಸುತ್ತಿನ ದಾರಿ’ ಒಂದೇ ಸಾಕು.ಬದುಕಿನಲ್ಲಿ ಮೇಲೆ ಏರುವುದಷ್ಟೇ  ಕಷ್ಟ ಅಲ್ಲ ,ಇಳಿಯುವುದೂ ಬಹಳ ಕಷ್ಟದ ದಾರಿ ಎನ್ನುವ ಬೋಧಿಜ್ಞಾನ ಇಲ್ಲಿ ಹೊಳೆಯುತ್ತದೆ.

ಹಳೆಯ ಸೇತುವೆಯ ಒಂದು ತುದಿಯಲ್ಲಿ ಒಂದು ಮಂಗ ತನ್ನ ಕೈಯಲ್ಲಿ ಕನ್ನಡಿ ಹಿಡಿದುಕೊಂಡ  ಕಲ್ಲಿನ ಪ್ರತಿಮೆ ಇದೆ.ಅದರ ಬಗ್ಗೆ ಅಲ್ಲಿನವರು ಹೇಳುವ ಕತೆ ಇದೆ.ಮಂಗ ಹೇಳುತ್ತದಂತೆ :” ಈ ಪಟ್ಟಣಕ್ಕೆ ಬರುವ ನೀವು ನನ್ನನ್ನು ಏನು ನೋಡುತ್ತೀರಿ? ಮೊದಲು ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಿ.”

ಏರು,ತಿರುವು,ತಂಪು,ಬಿಸಿ,ಇಳಿಜಾರು,ಸರ್ಪಸುತ್ತು ,ಸೇತುವೆ -ಈ ಎಲ್ಲ ಬಗೆಯ ಘಟ್ಟಗಳು ನಮ್ಮ ಬದುಕಿನ ಕಾಲ್ನಡಿಗೆಯ ದಾರಿಯಲ್ಲಿ ಸಂಧಿಸಿದಾಗ ಮಾತ್ರ ‘ಅರಳುತ್ತವೆ ಕಲ್ಲುಬಂಡೆಗಳ ಸಂದಿಯಲಿ  ಗುಲಾಬಿಯ ಹೂಗಳು’.

‘ ತತ್ವಜ್ಞಾನಿಗಳ ದಾರಿ ‘ಯನ್ನು ಮತ್ತು ದಾರಿಯಿಂದ ನಾನು ಕ್ಯಾಮರಾದಲ್ಲಿ ತುಂಬಿಸಿದ ಚಿತ್ರಗಳು ಇಲ್ಲಿ ಇವೆ.ಇವನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿರಿ.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: