‘ಸ್ವರ್ಗ ,ನರಕ ಮತ್ತು ಬದುಕುವ ಆಸೆ ‘ : ಒಂದು ವಿಭಿನ್ನ ರಂಗಪ್ರಯೋಗ

Posted on ಡಿಸೆಂಬರ್ 15, 2011. Filed under: ಜರ್ಮನಿ, ರಂಗಭೂಮಿ, ವ್ಯೂರ್ತ್ಸ್ ಬುರ್ಗ್ | ಟ್ಯಾಗ್ ಗಳು:, , , , , |


ಬದುಕಿನ ಗಡಿಯಾರದ ಟಿಕ್ ಟಿಕ್ ಟಿಕ್ ಸದ್ದು ಕೇಳಿಸುತ್ತಿದೆ.ಬದುಕಿನ ಚಕ್ರ ತಿರುಗುತ್ತಿದೆ.ವೀರ್ಯ,ಭ್ರೂಣ,ಮಗು,ಮನುಷ್ಯ ,ಗಂಡು,ಹೆಣ್ಣು,ಪ್ರೇಮ,ಸ್ವರ್ಗ,ನರಕ -ಈ ಸುತ್ತುವಿಕೆಯಲ್ಲಿ ಎಲ್ಲಿ ಗಡಿಯಾರದ ಮುಳ್ಳು ನಿಂತುಬಿಡುತ್ತದೆ ?ಅದು ತಾನಾಗಿ ನಿಲ್ಲುತ್ತದೆಯೋ  ಅಥವಾ ನಿಲ್ಲಿಸಲಾಗುತ್ತದೆಯೋ ?ವೀರ್ಯದ ಕಣಗಳ ಅಥವಾ ಭ್ರೂಣಗಳ ಓಟದಲ್ಲಿ ಯಾರು ಗೆಲ್ಲುತ್ತಾರೆ ?ಯಾರು ಹಿಂದೆ ಬೀಳುತ್ತಾರೆ ?ಹಿಂದೆ ಬಿದ್ದವರು ಎಲ್ಲಿಗೆ ಹೋಗಬೇಕು ?ಸ್ವರ್ಗಕ್ಕೋ  ನರಕಕ್ಕೋ ? ಸ್ವರ್ಗ ಅಥವಾ ನರಕದ ರೆಜಿಸ್ಟರ್ ನಲ್ಲಿ ಇವರ ಹೆಸರು ದಾಖಲಾಗಿರುತ್ತದೆಯೋ ?ಇಲ್ಲವಾದರೆ ಇವರನ್ನು ಎಲ್ಲಿಗೆ ಹಿಂದಕ್ಕೆ ಕಳುಹಿಸುವುದು ? ಇವರಿಗೂ ಬದುಕುವ ಆಸೆ ಇಲ್ಲವೇ ?ಈ ಭೂಮಿಗೆ ಬರುವ ಭ್ರೂಣಗಳನ್ನು ತಡೆದಾಗ ಏನಾಗುತ್ತದೆ ?

ಈ ಭೂಮಿಯಲ್ಲಿ ಬದುಕಲು  ಮುಕ್ತವಾದ ಅವಕಾಶ ಇದೆ.ಇಬ್ಬರು ಪ್ರೇಮಿಗಳು ಬೆಚ್ಚಗಿನ ರಾತ್ರಿಯಲ್ಲಿ  ಗಾಢವಾದ ಪ್ರೇಮದಲ್ಲಿ ಮಗ್ನರಾಗಿದ್ದಾರೆ . ಭ್ರೂಣ ಟಿಮ್ ಗೆ ಜನಿಸುವ ಒತ್ತಡ. ಆದರೆ ಜನಿಸಲು ಭ್ರೂಣ ಟಿಮ್ ಸಿದ್ಧತೆ ಮಾಡುತ್ತಿರುವಾಗಲೇ ,ಅವನ ಬದುಕು ಆಕಸ್ಮಿಕವಾಗಿ ಕೊನೆಯಾಗುತ್ತದೆ.ಟಿಮ್ ಸ್ವರ್ಗಕ್ಕೆ ಬಂದಾಗ ,ಅಲ್ಲಿ ಪೀಟರ್ ನನ್ನು ಭೇಟಿ ಆಗುತ್ತಾನೆ.ಪೀಟರ್ ಹವಾಮಾನ ರೂಪಿಸುವುದರಲ್ಲಿ ಮಗ್ನನಾಗಿರುತ್ತಾನೆ.ಹೊಸಬನಾಗಿ ಬಂದ ಟಿಮ್ ನಿಗೆ ಸ್ವರ್ಗದಲ್ಲಿ ಅವಕಾಶ ಕಲ್ಪಿಸುವುದರ ಬದಲು ,ಪೀಟರ್ ಆತನ ಹುಟ್ಟಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳುತ್ತಾನೆ.ಅದಕ್ಕಾಗಿ ಸ್ವರ್ಗದ ತನ್ನ ಕಚೇರಿಯಲ್ಲಿ ಇರುವ ಎಲ್ಲಾ ರಿಜಿಸ್ಟರ್ ಗಳನ್ನು ತಿರುವಿಹಾಕುತ್ತಾನೆ.ಒಬ್ಬ ಪಕ್ಕಾ ಬ್ಯೂರಿಯಾಕ್ರೆಟ್ ನಂತೆ ದಾಖಲೆಗಳ ರಾಶಿಯ ತಡಕಾಟದಲ್ಲಿ ಮುಳುಗಿಹೋಗುತ್ತಾನೆ ಪೀಟರ್.ಇದೇ ಸುಸಮಯ ಎಂದು ತಿಳಿದು ಟಿಮ್ ಸ್ವರ್ಗದಿಂದ ತಪ್ಪಿಸಿಕೊಳ್ಳುತ್ತಾನೆ.ಸ್ವರ್ಗದಿಂದ ಪಲಾಯನ ಮಾಡಿದ ಟಿಮ್ ನರಕಕ್ಕೆ ಬರುತ್ತಾನೆ.

ಬದುಕುವ ಆಸೆಯ ಭ್ರೂಣ ಟಿಮ್ ಮತ್ತೆ ತನ್ನ ಬದುಕನ್ನು ಮರಳಿ ಪಡೆದನೇ ?

ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇದೆಯೇ ? ರಂಗದ ಮೇಲೆ ನೋಡಿರಿ.

ಜರ್ಮನಿಯ ವ್ಯೂರ್ತ್ಸ್ ಬುರ್ಗ್ ನಗರದ ಹೊರವಲಯದ ಕೈಗಾರಿಕಾ ಪ್ರದೇಶ ಲೆಂಗ್ ಫೆಲ್ಡ್ ಬಳಿ ಇರುವ ಒಂದು ಸಣ್ಣ ಮತ್ತು ಭಿನ್ನ ಥಿಯೇಟರ್ AugenBlick. ಜರ್ಮನ್ ಭಾಷೆಯ ಈ ರಂಗಮಂದಿರ /ರಂಗತಂಡದ ಹೆಸರನ್ನು ಕನ್ನಡಕ್ಕೆ ಅನುವಾದಿಸಿದರೆ ‘ಕ್ಷಣದ ರಂಗಭೂಮಿ ‘ ಎಂದು ಕರೆಯಬಹುದು.ಇದೊಂದು ವಿಶಿಷ್ಟ ರಂಗ ಪ್ರಯೋಗ.ರಂಗಭೂಮಿಯನ್ನು ಅದರ ಸಾಂಪ್ರದಾಯಿಕ ಚೌಕಟ್ಟಿನಿಂದ ಬಿಡಿಸಿ ನೋಡುವ ದೃಷ್ಟಿಕೋನ ಇಲ್ಲಿದೆ.ರಂಗಭೂಮಿಯನ್ನು  ಅಂಗವಿಕಲರ ಕ್ರಿಯಾತ್ಮಕ ಚಟುವಟಿಕೆಗಳ ಕಮ್ಮಟವನ್ನಾಗಿ ಸಶಕ್ತವಾಗಿ ಬಳಸಿಕೊಳ್ಳುವ ಉದ್ದೇಶ ಇಲ್ಲಿ ಮುಖ್ಯವಾಗಿದೆ .ಈ ಥಿಯೇಟರ್ ನಲ್ಲಿ ಎಂಟು ಮಂದಿ ಅಂಗವಿಕಲ ವಯಸ್ಕರು ನಟ ನಟಿಯರಾಗಿ ಖಾಯಂ ಆಗಿ ಅಭಿನಯಿಸುವ ಉದ್ಯೋಗ ಪಡೆದಿದ್ದಾರೆ.ಇವರನ್ನು ಬಳಸಿಕೊಂಡು ಪ್ರತೀವರ್ಷವೂ ಹೊಸ ಹೊಸ ನಾಟಕಗಳನ್ನು ತರಬೇತಿ ಕೊಟ್ಟು ಸಿದ್ಧಪಡಿಸಿ ಪ್ರದರ್ಶಿಸುತ್ತಾರೆ.ಈವರೆಗೆ ಈ ಥಿಯೇಟರ್ ನಲ್ಲಿ ಸುಮಾರು ಮೂವತ್ತು ಸಾವಿರ ಮಂದಿ ಪ್ರೇಕ್ಷಕರು ಬೇರೆ ಬೇರೆ ನಾಟಕಗಳನ್ನು ನೋಡಿದ್ದಾರೆ.ಈ ಚಿಕ್ಕ  ರಂಗಮಂದಿರದಲ್ಲಿ ಒಮ್ಮೆಗೆ ಸುಮಾರು ನೂರ ಐವತ್ತರಷ್ಟು ಜನರು ಕುಳಿತುಕೊಳ್ಳಲು ಅವಕಾಶ ಇದೆ.ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಸಾಮಾನ್ಯ ಕುರ್ಚಿಗಳು ಮತ್ತು ಸರಳವಾದ ಸಣ್ಣ ರಂಗಸ್ಥಳದ ವ್ಯವಸ್ಥೆ ಇದೆ .ಟಿಕೆಟ್ ದರ ಐದರಿಂದ ಹತ್ತು ಯೂರೋ ಮಾತ್ರ.( ನಗರದ  ದೊಡ್ಡ ಥಿಯೇಟರ್ ನಲ್ಲಿ ಟಿಕೆಟ್ ದರ ೩೦ ಯೂರೋವರೆಗೆ  ಇದೆ.) ಟಿಕೆಟ್ ನಿಂದ ಸಂಗ್ರಹವಾದ ಹಣ ಮತ್ತು ಸಣ್ಣ ಪ್ರಮಾಣದಲ್ಲಿ ತಿಂಡಿ ಪಾನೀಯಗಳ ಮಾರಾಟದಿಂದ ಬಂದ ಹಣದಿಂದ  ಈ ರಂಗತಂಡದ ಅಂಗವಿಕಲ ಕಲಾವಿದರಿಗೆ ವೇತನವನ್ನು ಕೊಡುತ್ತಾರೆ.

ಕಳೆದ ಶನಿವಾರ ,ದಶಂಬರ ಹತ್ತರಂದು ಸಂಜೆ Theater AugenBlick ನಲ್ಲಿ ನಾನು ನೋಡಿದ ಜರ್ಮನ್  ನಾಟಕ Himmel ,Holle Und Die Am Leben  (ಸ್ವರ್ಗ ,ನರಕ ಮತ್ತು ಬದುಕುವ ಆಸೆ ).ನಮ್ಮ ವ್ಯೂರ್ತ್ಸ್ ಬುರ್ಗ್ ವಿದೇಶಿ ವಿಜ್ಞಾನಿಗಳ ಕೂಟದ ಅಂಗೆಲಿಕಾ , ಡೋರಿಸ್, ಡಾ.ಹೆಲಿ, ಲೋತ್ತೆ -ಅತಿಥಿಗೃಹದಲ್ಲಿ ಇರುವ ನಮಗೆ  ಈ ನಾಟಕ ನೋಡುವ ವ್ಯವಸ್ಥೆ ಮಾಡಿದ್ದರು. ಇದು ಸುಮಾರು ಎಂಬತ್ತು ನಿಮಿಷಗಳ ಅವಧಿಯ ನಾಟಕ.ಪ್ರೇಕ್ಷಕರಲ್ಲೂ ಕೆಲವು ಮಂದಿ  ಅಂಗವಿಕಲರು ಇದ್ದರು.ಕೆಲವು ಮಂದಿಯನ್ನು ತಳ್ಳುಗಾಡಿಯಲ್ಲಿ ತಂದು ಕುಳ್ಳಿರಿಸಿದರು. ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಒಬ್ಬ ತರುಣ ನಾಟಕದ ಪ್ರತಿಯೊಂದು ಮಾತಿಗೂ ಗಟ್ಟಿ ದ್ವನಿಯಲ್ಲಿ ನಗುತ್ತಾ ಪ್ರತಿಕ್ರಿಯೆ ಕೊಡುತ್ತಿದ್ದ.ಮೊದಲಬಾರಿ ಆತನನ್ನು ಕೆಲವರು ಆಶ್ಚರ್ಯದಿಂದ ನೋಡಿದರು. ದೈಹಿಕ ಮತ್ತು  ಮಾನಸಿಕವಾಗಿ  ಆತನಿಗೆ ಸಮಸ್ಯೆ ಇದೆ ಎಂದು ಗೊತ್ತಾದ ಕೂಡಲೇ ಯಾರೂ ಆತನ ನಡವಳಿಕೆಯನ್ನು ವಿಚಿತ್ರ ಎಂದು ಭಾವಿಸಲಿಲ್ಲ.ಪ್ರೇಕ್ಷಕರಲ್ಲಿ ಅಂತಹ ಇನ್ನೂ ಕೆಲವು ಮಂದಿ ಇದ್ದರು.ಇದು ಆ ರಂಗಭೂಮಿಯ ಭಿನ್ನತೆಯೂ ಹೌದು.

‘ಸ್ವರ್ಗ ,ನರಕ ಮತ್ತು ಬದುಕುವ ಆಸೆ ‘ ಒಂದು ಕಾಮೆಡಿ. ವಿಡಂಬನೆಯನ್ನು ಸಂಭಾಷಣೆ,ನಟನೆ ,ವಸ್ತ್ರವಿನ್ಯಾಸ ,ರಂಗಪರಿಕರಗಳ ಮೂಲಕ ತುಂಬಾ ಪರಿಣಾಮಕಾರಿಯಾಗಿ ತಂದಿದ್ದರು.ಜರ್ಮನ್ ಭಾಷೆಯ ಸಂಭಾಷಣೆಗಳಿಗೆ ಪ್ರೇಕ್ಷಕರು ತಮ್ಮ ಬಗೆಬಗೆಯ ನಗೆಗಳ ಮೂಲಕ ತೋರಿಸುತ್ತಿದ್ದ ಪ್ರತಿಕ್ರಿಯೆ ,ನಾಟಕವನ್ನು ಪ್ರದರ್ಶನದುದ್ದಕ್ಕೂ ಲವಲವಿಕೆಯಿಂದ ಇರಿಸಿತ್ತು.ಆದರೆ ಈ ಕಾಮೆಡಿಯು ಬದುಕಿನ ಅನೇಕ ಸೂಕ್ಸ್ಮ ಸಂಗತಿಗಳನ್ನು ಅನಾವರಣ ಮಾಡುವ ದಾರ್ಶನಿಕ ವ್ಯಂಗ್ಯದ ಶಕ್ತಿಯನ್ನು ಹೊಂದಿತ್ತು.

ದೃಶ್ಯ ೧ : ಬದುಕಿನ ಚಕ್ರ ತಿರುಗುತ್ತಿದೆ.ವೀರ್ಯದ ಕಣಗಳು ಸುತ್ತಲೂ ಓಡುತ್ತಿವೆ.ನೇತುಹಾಕಿದ ಗಡಿಯಾರಗಳು ಟಿಕ್ ಟಿಕ್ ಎಂದು ಸದ್ದುಮಾದುತ್ತಿವೆ.ಕಾಲದ ಚಕ್ರ ಮತ್ತು ಬದುಕಿನ ಚಕ್ರಗಳ ಸುತ್ತಾಟ.

ದೃಶ್ಯ ೨: ಎರಡು ಹೆಣ್ಣುಗಳು ಪರಸ್ಪರ ಮಾತಾಡುತ್ತಿದ್ದಾರೆ.

ಕಣ್ಣಿನ ಪಾಪೆಯನ್ನು ಪರೀಕ್ಷಿಸಿ ನೋಡುವುದು.

‘ಅವಳು ಚೆನ್ನಾಗಿದ್ದಾಳೆಯೇ ?’

‘ಅವಳ ಬಾಯಿ ನಿನಗೆ ಇಷ್ಟ ಆಯಿತೇ? ‘

‘ಅವಳು ನಮ್ಮನ್ನು ನೋಡಿ ನಗುತ್ತಿದ್ದಾಳಾ ?’

‘ಇನ್ನೂ ತುಂಬಾ ಅವಳಲ್ಲಿ  ಇದೆಯಾ ?’

‘ಅವಳ ಉ ..ಉ.. ಉಬ್ಬುಗಳು ಹೇಗೆ ಕಾಣಿಸುತ್ತವೆ ? ನಾನು ಹೇಳುವುದು ಆ…ಅವಳ ಕುತ್ತಿಗೆಯ ಕೆಳಗೆ…’

‘ನೀನು ಹೇಳುವುದು ಅವಳ ಎದೆಯನ್ನೋ ?’

‘ ಶ್ಶ್ , ಬೇಡ ,ಸ್ವಲ್ಪ ಮೆತ್ತಗೆ ಹೇಳು.’

‘ಓ ,ಅವಳು ಬಲ ತೋಳನ್ನು ಅಗೋ  ಮುಟ್ಟಿದಳಾ ? ಅವಳು ಇನ್ನೂ ಹತ್ತಿರ ಬರುತ್ತಿದ್ದಾಳಾ ?! ನಾವು ಅಲಾರಂ ಬಾರಿಸೋಣವೇ ?’

‘ಹೌದು,ನಾವು ಎಚ್ಚರಿಸಬೇಕು .’

ವೀರ್ಯದ ಕಣಗಳೆಲ್ಲ ಸರದಿಗಾಗಿ  ಕಾಯುತ್ತಿವೆ.

ದೃಶ್ಯ ೩ : ವೀರ್ಯದ ಕಣಗಳ ಕುಣಿತ .

ಕಣ್ಣಿನ ಪಾಪೆ ಹೇಳುತ್ತದೆ ಕಣ್ಣಿಗೆ :’ ನಾವು ಸುರು ಮಾಡೋಣವೇ ?’

ಕಣ್ಣು :’ಸರಿ’.

ದೃಶ್ಯ ೪: ವೀರ್ಯದ ಕಣಗಳ ಓಟ. ಒಂದು ಗೆಲ್ಲುತ್ತದೆ.ಅದನ್ನು ರಂಗದಿಂದ ಹೊರಕ್ಕೆ ಎಳೆದುಕೊಂಡು ಹೋಗಲಾಗುತ್ತದೆ.

ದೃಶ್ಯ ೫: ಒಂದು ಕಣ ಗೆದ್ದದ್ದಕ್ಕಾಗಿ ಬದುಕಿನ ಒಂದು ಗಡಿಯಾರವನ್ನು ನೇತುಹಾಕಲಾಗುತ್ತದೆ.

ದೃಶ್ಯ ೬ : ಭ್ರೂಣ ಬೆಳೆಯುತ್ತಿರುತ್ತದೆ.ಹೊರಗಿನಿಂದ ಜನರು ಅದರ ಬೆಳವಣಿಗೆಯನ್ನು ಪರೀಕ್ಷಿಸುತ್ತಿರುತ್ತಾರೆ.ಅವರಲ್ಲಿ ಒಬ್ಬ ಡಾಕ್ಟರ್ ,ಇನ್ನೊಬ್ಬರು ಆರೈಕೆ ಪಡೆಯುವವರು.

‘ಮುಂದಿನವರು ಬನ್ನಿ.’ ಎ  ‘ ನಿರ್ಗಮನ.

ಮುಂದಿನವರು ಬನ್ನಿ.’ಬಿ’ ನಿರ್ಗಮನ ‘

ದೃಶ್ಯ ೭: ಡಾಕ್ಟರ್ ರು ಭ್ರೂಣವನ್ನು ಪರೀಕ್ಷಿಸುತ್ತಾರೆ.

ದೃಶ್ಯ ೮: ಸ್ವರ್ಗದಲ್ಲಿ. ಇಬ್ಬರು ದೇವದೂತಿಯರು  ಮಾತಾಡುತ್ತಿರುತ್ತಾರೆ :

ದೇವದೂತಿ ‘ ಎವಿ ‘ ಯು ದೇವದೂತಿ ‘ಲೀಸಾ ‘ಳಿಗೆ ತನ್ನ ವಾರಾಂತ್ಯದ ಕಾರ್ಯಕ್ರಮದ ಬಗ್ಗೆ ಮತ್ತು ತನ್ನ ಗೆಳೆಯನನ್ನು ತಾನು ಗುಟ್ಟಾಗಿ ಮುದ್ದಿಸಿದ್ದನ್ನು ಹೇಳುತ್ತಾಳೆ.ಲೀಸಾ ಸಿಟ್ಟಿನಿಂದ ಹೇಳುತ್ತಾಳೆ : ‘ಪ್ರೇಮಿಸಿದರೆ ಪರವಾ ಇಲ್ಲ.ಆದರೆ ಮುತ್ತು ಕೊಟ್ಟರೆ ,ಅದು ಸೆಕ್ಸ್ ಆಗುತ್ತದೆ.ಇದಕ್ಕೆ ಸ್ವರ್ಗದಲ್ಲಿ ಅವಕಾಶ ಇಲ್ಲ.ಈರೀತಿ ಮುತ್ತು ಕೊಡುವಾಗ ನೀನು ಸಿಕ್ಕಿಬಿದ್ದರೆ ,ಇನ್ನೊಂದು  ಒಂದು ದಿನ ಹೆಚ್ಚಾಗಿ ನರಕದಲ್ಲಿ ಕಳೆಯಬೇಕಾಗುತ್ತದೆ.’

ಎವಿ :’ಅದಕ್ಕೆಲ್ಲ ನಾನು ಹೆದರುವುದಿಲ್ಲ. ಅದಂತೂ  ತುಂಬಾ ಚೆನ್ನಾಗಿತ್ತು! ‘

ಲೀಸಾ :’ಎವಿ,…….ಮುತ್ತು ಕೊಡುವುದೆಂದರೆ ಹೇಗೇನೇ ?’

ದೃಶ್ಯ ೯: ಸೈಂಟ್ ಪೀಟರ್ ನ ಪ್ರವೇಶ .

ದೇವದೂತಿ ಲೀಸಾ :’ನಮಸ್ಕಾರ ,ಸೈಂಟ್ ಪೀಟರ್, ನಾನು ನಿನಗೆ ಹವಾಮಾನದ ವರದಿ ಕೊಡುತ್ತೇನೆ.’

ಸೈಂಟ್ ಪೀಟರ್ , ಜರ್ಮನ್ ಸಂಗೀತಗಾರ ಮೊಜಾರ್ತ್( ೧೭೫೬-೧೭೯೧) ಬಗ್ಗೆ ಉತ್ಸಾಹದಿಂದ ಮಾತಾಡುತ್ತಾನೆ.ಅಲ್ಲಿ ಮೊಜಾರ್ತ್ ಸಂಗೀತದ ಅಭ್ಯಾಸ ಮಾಡುತ್ತಿರುತ್ತಾನೆ. ಅಲ್ಲಿ ಇನ್ನೊಂದೆಡೆ ಇನ್ನೊಬ್ಬ ಜರ್ಮನ್ ಸಂಗೀತಗಾರ ಬಾಶ್ ( ೧೬೮೫-೧೭೫೦) ಇರುತ್ತಾನೆ .

ಸೈಂಟ್ ಪೀಟರ್ : ‘ಇಬ್ಬರು ಪ್ರಸಿದ್ಧ ಸಂಗೀತಗಾರರು ಒಟ್ಟಿಗೆ  ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.ಇಂತಹ ಅಪೂರ್ವ ದೃಶ್ಯವನ್ನು ನಾವು ಈವರೆಗೆ ನೋಡಿಲ್ಲ.’

ಒಬ್ಬ ಆಗಂತುಕ ಸೈಂಟ್ ಪೀಟರ್ ಬಳಿಗೆ ಬರುತ್ತಾನೆ.ಅವನಿಗೆ ಪೀಟರ್ ನ ಪ್ರಶ್ನೆಗಳು :

‘ನೀನು ಏನು ಒಳ್ಳೆಯ ಕೆಲಸ ಮಾಡಿದ್ದೀಯಾ ?ನೀನು ಏನು ಕೆಟ್ಟ ಕೆಲಸ ಮಾಡಿದ್ದೀಯಾ ?

ಇಲ್ಲಿ ಇವೆ ನಿನ್ನ ಬೀಗದ ಕೈಗಳು.ನಿನ್ನ ರೆಕ್ಕೆಗಳನು ಕಟ್ಟಿಕೋ .ನಿನ್ನ ವಿಚಾರಣೆ ಆ ಮೇಲೆ ಮಾಡೋಣ.’

ಅಷ್ಟರಲ್ಲಿ ಈಗತಾನೇ ಜೀವ ಕೊನೆಗೊಂಡ ಭ್ರೂಣದ  ಪ್ರವೇಶ.

ಸೈಂಟ್ ಪೀಟರ್ :’ನಿನ್ನ ಹೆಸರು ?’  (ಭ್ರೂಣ ತನ್ನ ಭುಜಗಳನ್ನು ಎಗರಿಸುತ್ತದೆ.)

ಸೈಂಟ್ ಪೀಟರ್ : ‘ನಿನ್ನ ಹೆಸರು ? ಹೆಸರು ?”

ಭ್ರೂಣ:’ ನಾನು ಇಲ್ಲಿ ಇರಲಾರೆ.ನನಗೆ ಬದುಕಬೇಕು.’

ಸೈಂಟ್ ಪೀಟರ್ :’ಏನಂದೆ ?’

ಭ್ರೂಣ :’ನನಗೆ  ಬದುಕಬೇಕು .’

ದೃಶ್ಯ ೧೦ : ಆಡಳಿತಾಧಿಕಾರಿ ದೇವದೂತನ ಟೆಲಿಫೋನ್ ಸಂಭಾಷಣೆ.

‘ಸರಿ.ನಾನು ಅದನ್ನು ನೋಡಿಕೊಳ್ಳುತ್ತೇನೆ.ಸರಿ ಸರಿ.’

ಆಡಳಿತಾಧಿಕಾರಿಯು ಆ ಭ್ರೂಣದ ಮಾಹಿತಿ ಕಾರ್ಡ್ ನಲ್ಲಿ ಅದರ ಹೆಸರನ್ನು ಹುಡುಕುತ್ತಾನೆ; ಅದು ಇನ್ನೂ ಯಾಕೆ ಹುಟ್ಟಿಲ್ಲ ಎನ್ನುವ ಕಾರಣವನ್ನು ಶೋಧಿಸಲು ತೊಡಗುತ್ತಾನೆ.ಅದರಲ್ಲೂ ಸ್ವರ್ಗಕ್ಕೆ ಬರುವವರ ಮಾಹಿತಿ ಕಾರ್ಡ್ ಗಳಲ್ಲಿ ಇರುವ ಗೊಂದಲದ ಬಗ್ಗೆ ಬಹಳ ಸಿಟ್ಟುಗೊಳ್ಳುತ್ತಾನೆ. ದೇವದೂತಿ ಅಂಗೆಲಿನಾ ಆ ಕಾರ್ಡ್ ನ್ನು ಹುಡುಕಿ ತೆಗೆಯುತ್ತಾಳೆ.ಆ ಭ್ರೂಣದ ಹೆಸರು ಟಿಮ್ ಜೈಗ್ಲೆರ್ .

ಸೈಂಟ್ ಪೀಟರ್ ಗಲಿಬಿಲಿಗೊಂಡಿದ್ದಾನೆ :  ‘ಕೆಳಗೆ ಭೂಲೋಕದಲ್ಲಿ ಏನೋ ತಪ್ಪು ಆಗಿದೆ.ನನಗಂತೂ ಸ್ವರ್ಗದ ಈ ಕೆಲಸ ಸಾಕಾಗಿ ಹೋಗಿದೆ.’

ಅಷ್ಟರಲ್ಲಿ ಭ್ರೂಣ ಟಿಮ್ ಅಲ್ಲಿಂದ ತಪ್ಪಿಸಿಕೊಳ್ಳುತ್ತದೆ.

ಸೈಂಟ್ ಪೀಟರ್ :’ ಅವನು ಎಲ್ಲಿ ಹೋದ ?’

ದೃಶ್ಯ ೧೧: ಸ್ವರ್ಗದಲ್ಲಿ ವಾದ್ಯಮೇಳ. ಪ್ರಸಿದ್ಧರಾದ ಇಬ್ಬರು ಜರ್ಮನ್ ಸಂಗೀತಗಾರರು ಮೊಜಾರ್ತ್ ಮತ್ತು ಬಾಶ್ -ಸಂಗೀತ ಅಭ್ಯಾಸ ಮಾಡಿಸುತ್ತಿದ್ದಾರೆ.

ಅಲ್ಲಿಗೆ ಭ್ರೂಣ ಟಿಮ್ ನ ಪ್ರವೇಶ.

ಮೊಜಾರ್ತ್ :’ ಓ ,ಇಲ್ಲ.ನೋಡಿದಿಯಾ ಅಲ್ಲಿ ನನಗೆ ಏನು ಕಾಣಿಸುತ್ತಿದೆ ಎಂದು ?’

ಬಾಶ್ :’ ಹೊಕ್ಕುಳಬಳ್ಳಿ ?!’

ಮೊಜಾರ್ತ್ :’ ನಾವು ಶಿಶುಗಳನ್ನು ನೋಡಿಕೊಳ್ಳುವುದಿಲ್ಲ . ನಡೆ ಹೊರಗೆ !’

ಟಿಮ್ :’ ನನ್ನನ್ನು ನೋಡಿಕೊಳ್ಳುವುದು ಬೇಡ.ನನಗೆ ಬದುಕಬೇಕು.’

ದೃಶ್ಯ ೧೩: ಸತ್ಕರಿಸುವುದು :

ಮೂರನೆಯ ಜಗತ್ತಿನಲ್ಲಿ : ದೇವದೂತಿ ಎವಿ ,ಮೂರು ದಿನ ನರಕದಲ್ಲಿ.ಮತ್ತೆ ದೇವದೂತಿ ರಾಫೆಲ ಜೊತೆಗೆ.

ದೃಶ್ಯ ೧೩ : ನರಕ .

ದೆವ್ವ ಅಡುಗೆ ಮಾಡುತ್ತಿರುತ್ತದೆ,ದೊಡ್ಡ ಹಂಡೆಯಲ್ಲಿ ಮನುಷ್ಯ ದೇಹದ ಅಂಗಗಳನ್ನು ಹಾಕಿ ಕುದಿಸಿ,ಸೂಪ್ ಕಲಡಿಸುತ್ತಿರುತ್ತದೆ.

ನರಕವಾಸಿಗಳು ತಮ್ಮ ಘೋರ ಶಿಕ್ಷೆಗಳನ್ನು ಅನುಭವಿಸುತ್ತಿರುತ್ತಾರೆ.

ದೆವ್ವ -ಸೂಪನ್ನು ತರುತ್ತದೆ.’ ಸೂಪ್ ಕುಡಿಯಲು ಬನ್ನಿ ‘

ಅಷ್ಟರಲ್ಲಿ ದೆವ್ವವು ಟಿಮ್ ನ್ನು ನೋಡುತ್ತದೆ:’ಯಾರೋ ಹೊಸಬರು ಬಂದಿದ್ದಾರೆ.’ ಟಿಮ್ ನ ಹೊಕ್ಕುಳಬಳ್ಳಿ ಯನ್ನು ನೋಡುತ್ತದೆ : ‘ ಓ, ನಿನಗೆ ಈವರೆಗೆ ನಿನ್ನ ಬದುಕಿನಲ್ಲಿ ಏನನ್ನೂ ಕೆಟ್ಟದ್ದನ್ನು ಮಾಡಲು ಅವಕಾಶವೇ ದೊರಕಿಲ್ಲ.ಹಾಗಾಗಿ ನಾನು ನಿನಗೆ ನಾನು ಏನೂ ಶಿಕ್ಷೆ ಕೊಡಲಾರೆ.ನಡೆ ಹೊರಗೆ!’

ಟಿಮ್ ಸಿಟ್ಟಿನಿಂದ ಅಲ್ಲಿ ಇದ್ದ ಹೂದಾನಿಗಳನ್ನು ,ಗೋಡೆಯಲ್ಲಿ ತೂಗುಹಾಕಿದ್ದ ಚಿತ್ರಗಳನ್ನು ಹರಿದು ಬಿಸಾಕುತ್ತದೆ(ತ್ತಾನೆ).

ಟಿಮ್ ನನ್ನು ನರಕದಿಂದ ಹೊರಕ್ಕೆ ಎಸೆಯಲು ದೆವ್ವವು ಆತನನ್ನು ಮುಟ್ಟಿ ಸುಟ್ಟುಹಾಕಲು ಪ್ರಯತ್ನಿಸುತ್ತದೆ.ಆದರೆ ಅದು ವಿಫಲ ಆಗುತ್ತದೆ.ಯಾಕೆಂದರೆ ಟಿಮ್ ಅತಿ ಮುಗ್ಧ .ಆದ್ದರಿಂದ ದೆವ್ವಕ್ಕೆ ಟಿಮ್ ನನ್ನು ಮುಟ್ಟಲು ಆಗುವುದಿಲ್ಲ.

ಟಿಮ್ ನನ್ನು ನರಕದಿಂದ ಹೊರಗೆ ಅಟ್ಟಲು ದೆವ್ವವು ಅನೇಕ ತಂತ್ರಗಳನ್ನು ಬಳಸುತ್ತದೆ-ಅದು ಬಹಳ ವಿನಯದಿಂದ ವರ್ತಿಸುತ್ತದೆ, ಕಾಮಚೇಷ್ಟೆಗಳನ್ನು  ಮಾಡುತ್ತದೆ.

ದೆವ್ವ :’ ಈಗ ನಾನು ಮೇಲಿನ ಲೋಕದಲ್ಲಿ ಹುಟ್ಟಿಕೊಂಡ ಸಮಸ್ಯೆಗಳನ್ನು ಪರಿಹರಿಸಬೇಕು.ಇದೊಂದು ಬೇವರ್ಸಿ ಕೆಲಸ.ತಡೆ ! ನಿನಗೆ ಬದುಕಬೇಕು ಎಂಬ ಬಯಕೆ ತಾನೇ ? ನೋಡೋಣ.ಈಗ ನನಗೊಂದು ಉಪಾಯ ಹೊಳೆದಿದೆ.ನಿನಗೆ ಮತ್ತೆ ಹೇಗೆ ಜೀವ ಕೊಡುವುದು ಎಂದು ನನಗೆ  ಈಗ ತಿಳಿಯಿತು.’

ದೃಶ್ಯ ೧೪: ದೆವ್ವ ಮತ್ತು ಟಿಮ್ ಯಾರಿಗೂ ಗೊತ್ತಾಗದಂತೆ ಸ್ವರ್ಗಕ್ಕೆ ಬರುತ್ತಾರೆ.

ಬದುಕಿನ ಚಕ್ರದ ಗಡಿಯಾರಗಳ ಆಡಳಿತಾಧಿಕಾರಿ ಸೈಂಟ್ ಮೈಕೆಲ್ ಕುಡಿಯುವ ಪಾನೀಯಕ್ಕೆ ಅವನಿಗೆ ಗೊತ್ತಾಗದಂತೆ  ಆ ದೆವ್ವವು ನಿದ್ರೆಯ ಮಾತ್ರೆಗಳನ್ನು ಬೆರಸುತ್ತದೆ.ಆತ ನಿದ್ರೆ ಹೋದಾಗ ಬದುಕಿನ ಗಡಿಯಾರವನ್ನು ನೇತುಹಾಕಿ , ಭ್ರೂಣ ಟಿಮ್ ಗೆ ಮತ್ತೆ ಜೀವ ಕೊಡುತ್ತದೆ .

ನಾಟಕ ಮುಗಿದೊಡನೆಯೇ ನಟನಟಿಯರು ರಂಗದ ಮೇಲೆ ಬಂದು ,ಪ್ರೇಕ್ಷಕರ ದೀರ್ಘ ಚಪ್ಪಾಳೆಯ ಮೆಚ್ಚುಗೆಯನ್ನು ಸ್ವೀಕರಿಸಿ ಖುಷಿ ಪಟ್ಟರು.ನಾಟಕ ನಿರ್ದೇಶಕ  ಸ್ಟೆಫಾನ್ ಮೆರ್ಕ್ ಮತ್ತು ಸಹಾಯಕ ನಿರ್ದೇಶಕಿ ಅಂಗೆಲಿಕಾ ಶೈದಿಗ್  ಕಲಾವಿದರನ್ನು ಕೂಡಿಕೊಂಡರು.

ರಂಗಮಂದಿರದ ಹೊರಗೆ ಕಾರಿಡಾರಿಗೆ ನಾವು ಬರುವಷ್ಟರಲ್ಲಿ ಕೆಲವು ನಟನಟಿಯರು ಆಗಾಗಲೇ ಅಲ್ಲಿ ಬಂದು ನಮ್ಮ ಜೊತೆಗೆ ಸೇರಿಕೊಂಡರು.ಈಗ ನನಗೆ ನಿಜವಾಗಿ ಅನುಮಾನ ಸುರುವಾಯಿತು.ರಂಗದ ಒಳಗಿನವರು ಯಾರು ,ಹೊರಗಿನವರು ಯಾರು, ಭ್ರೂಣ ಅವಸ್ಥೆಯಲ್ಲೇ ಉಳಿದವರು ಯಾರು,ಸ್ವರ್ಗ -ನರಕಗಳ ನಡುವಿನ ಲೋಕದಲ್ಲಿ ಅಂಡಲೆಯುತ್ತಿರುವವರು  ಯಾರು, ನಮ್ಮ ವಿಕಲತೆಯ ಮುಂದೆ ಆ ಕಲಾವಿದರು ಪರಿಪೂರ್ಣರಾಗಿ ಅಭಿನಯಿಸಿದ್ದು ಹೇಗೆ ,ಬದುಕುವ ಆಸೆಯನ್ನು ಕೊಲ್ಲುತ್ತಿರುವವರು ಯಾರು ? ನಾನು ನನ್ನ ಕ್ಯಾಮರಾ ಹೊರತೆಗೆದು ಪ್ರೇಕ್ಷಕರ ನೂಕುನುಗ್ಗಲಿನ ನಡುವೆಯೇ ಆ ನಾಟಕದ ಕೆಲವು ಕಲಾವಿದರ ಮೂರು ಫೋಟೋಗಳನ್ನು ಕ್ಲಿಕ್ಕಿಸಿದೆ.ರಂಗದ ಹೊರಗೂ ಲವಲವಿಕೆಯ ,ಬದುಕುವ ಆಸೆಯ ಅವರ ಚಿತ್ರಗಳನ್ನು ಇಲ್ಲಿ ಕೊಟ್ಟಿದ್ದೇನೆ.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: