ಹೆಸರು ಪಡೆದ ಮತ್ತು ಹೆಸರು ತಂದುಕೊಟ್ಟ ಕಾರಂತರ ನೆನಪಿನ ನನ್ನ ಮೊದಲ ಜನ್ಮದ ಕತೆ

Posted on ಡಿಸೆಂಬರ್ 9, 2011. Filed under: ಕನ್ನಡ ಸಾಹಿತ್ಯ, ನನ್ನ ಅಪ್ಪ.., ಶಿವರಾಮ ಕಾರಂತ | ಟ್ಯಾಗ್ ಗಳು:, , , , , , , , |


ನನ್ನ ಅಪ್ಪ ಅಗ್ರಾಳ ಪುರಂದರ ರೈ (೩೧ ಆಗಸ್ಟ್ ೧೯೧೬- ೫ ಮೇ  ೨೦೦೧ ) ಅವರ ಬದುಕು ಮತ್ತು ಬರಹಗಳನ್ನು ಕುರಿತು ನನ್ನ ಈ ಬ್ಲಾಗಿನ ೨೪.೧೦.೨೦೧೦ ರ ಲೇಖನದಿಂದ ತೊಡಗಿ ಕಂತುಗಳ ರೂಪದಲ್ಲಿ ಕಥನವನ್ನು  ಕೊಟ್ಟಿದ್ದೇನೆ.ದಕ್ಷಿಣ ಕನ್ನಡ ಜಿಲ್ಲೆಯ ಆಗಿನ ಪುತ್ತೂರು ತಾಲೂಕಿನ ಪುಣಚಾ ಗ್ರಾಮದ ಅಗ್ರಾಳ ಎಂಬ ತಮ್ಮ ಹಿರಿಯರ ಕುಟುಂಬದ ಮನೆಯಲ್ಲಿ ಇದ್ದ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ ಬದುಕಿನ ಕೊನೆಯವರೆಗೂ ಅಪ್ಪಟ ಗಾಂಧಿವಾದಿಯಾಗಿ ಬದುಕಿದವರು.ಸಣ್ಣ ಕೃಷಿಕರಾಗಿ ,ಸಾಹಿತ್ಯದ ಗೀಳು ಹಚ್ಚಿಕೊಂಡು ,ಬರಹ ,ಪತ್ರಿಕಾ ವರದಿ ,ಸಮಾಜಸೇವೆ ಮಾಡುತ್ತಾ ಜೀವನ ಸಾಗಿಸಿದವರು.ಅವರು ೧೯೩೧ರಲ್ಲಿ ಪುತ್ತೂರಿನ ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ವಿದ್ಯಾರ್ಥಿಯಾಗಿ ಸೇರಿ ,ಬಳಿಕ ೧೯೩೩ರಿನ್ದ ೧೯೩೫ರವರೆಗೆ ಅಲ್ಲಿನ ಬೋರ್ಡ್ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದರು.ಇದೇ ಅವಧಿ ಡಾ.ಶಿವರಾಮ ಕಾರಂತರು ಕೋಟದಿಂದ ಪುತ್ತೂರಿಗೆ ಬಂದು ತಮ್ಮ ಸಾರ್ವಜನಿಕ ಚಟುವಟಿಕೆಗಳನ್ನು ಆರಂಭಿಸಿದ ಕಾಲ.

ಕಾರಂತರು ಮೊಳಹಳ್ಳಿ ಶಿವರಾಯರ ಪ್ರೇರಣೆಯಿಂದ ಪುತ್ತೂರನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಆರಿಸಿಕೊಂಡು ಸುರುಮಾಡಿದ ಕಾರ್ಯಕ್ರಮಗಳಲ್ಲಿ ಮುಖ್ಯವಾದುದು ಒಂದು- ಅವರು ೧೯೩೦ರಲ್ಲಿ ಆರಂಭಿಸಿದ ‘ಮಕ್ಕಳ ಕೂಟ’. ಪುತ್ತೂರು  ಹೈಯರ್ ಎಲಿಮೆಂಟರಿ ಶಾಲೆ -ಕಾರಂತರ ‘ಮಕ್ಕಳಕೂಟ’ ಪ್ರಯೋಗದ ತರಬೇತಿಯ ಮುಖ್ಯ ಕೇಂದ್ರ ಆಗಿತ್ತು.ಆಗ ಅಲ್ಲಿ ವಿದ್ಯಾರ್ಥಿ ಆಗಿದ್ದ ನನ್ನ ಅಪ್ಪ ೧೯೩೧ರಲ್ಲೆ ಕಾರಂತರ ‘ಮಕ್ಕಳ ಕೂಟ’ದ ಸದಸ್ಯ ಆದರು.ಕಾರಂತರ ಪ್ರಯೋಗದ ಅಂತಹ ಒಂದು ನಾಟಕದಲ್ಲಿ ತಾನು ನಾನಾ ಫಡ್ನನೀಸನ ಪಾತ್ರ ಮಾಡಿದ್ದನ್ನು ಅಪ್ಪ ಅವರ ಆತ್ಮಕಥನದಲ್ಲಿ ಬರೆದಿದ್ದಾರೆ.ಹೀಗೆ ವಿದ್ಯಾರ್ಥಿ ಆಗಿ ಆರಂಭ ಆದ ಕಾರಂತರ ಬಗೆಗಿನ ಅಭಿಮಾನ ,ಭಕ್ತಿ ,ಗೌರವ ಬೆಳೆಯುತ್ತಾ ಬಂದಹಾಗೆಲ್ಲ ಅಪ್ಪ -ಕಾರಂತರ ಸಾಹಿತ್ಯದ ಓದು ಮತ್ತು ಬದುಕಿನ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಲು ತೊಡಗಿದರು.ಮುಂದೆ ಅವರು ಕಾರಂತರ ಅಭಿಮಾನಿಯಾಗಿ ,ಆಪ್ತ ಬಳಗದ ಒಬ್ಬ ಆತ್ಮೀಯ ಸದಸ್ಯ ಆದರು.ಅಪ್ಪ ಜೀವಂತ ಇದ್ದಾಗ ,ಕಾರಂತರ ಜೊತೆಗಿನ ಅವರ ಒಡನಾಟದ ಅನೇಕ ಸಂಗತಿಗಳನ್ನು ಮಕ್ಕಳಾದ ನಮ್ಮೊಡನೆ ಹಂಚಿಕೊಳ್ಳುತ್ತಿದ್ದರು.ಅವೆಲ್ಲವನ್ನು ದಾಖಲಿಸಿ ಇಡಲಾಗಲಿಲ್ಲ ಎನ್ನುವ ಕೊರಗು ಈಗ ಕಾಡುತ್ತಿದೆ.ಅವುಗಳಲ್ಲಿ ಕೆಲವು ಈಗಲೂ ನನ್ನ ನೆನಪಿನಲ್ಲಿ  ಜೀವಂತವಾಗಿವೆ.

ಅಪ್ಪನ ಮೂಲಕ ನನ್ನ ಅಮ್ಮ ಯಮುನಾ  (೧೯೨೧-೨೦೧೦ ) ಕೂಡಾ ಕಾರಂತರ ಕುಟುಂಬಕ್ಕೆ ತುಂಬಾ ಆತ್ಮೀಯರಾಗಿದ್ದರು.ಕಾರಂತರ ಶ್ರೀಮತಿ ಲೀಲಾ ಕಾರಂತರು ಮತ್ತು ನನ್ನ ಅಮ್ಮ ಬಹಳ ಆಪ್ತ ಸಂಬಂಧವನ್ನು ಹೊಂದಿದ್ದರು.ನನ್ನ ಅಮ್ಮನಿಗೆ ಬಹಳ ರುಚಿಕರವಾದ ತರಕಾರಿ ಅಡುಗೆಗಳನ್ನು ಕಲಿಸಿದ್ದು ಲೀಲಾ ಕಾರಂತರು  ಮತ್ತು ಲೀಲಾ ಕಾರಂತರಿಗೆ  ಅದನ್ನು  ಕಲಿಸಿದ್ದು ಶಿವರಾಮ ಕಾರಂತರು ಎಂದು ಅಮ್ಮ  ಹೇಳುತ್ತಿದ್ದರು.ಅಪ್ಪ ಮತ್ತು ಅಮ್ಮ ಹೇಳುತ್ತಿದ್ದ ಸಂಗತಿಗಳನ್ನು ಸೇರಿಸಿಕೊಂಡು ಈ ಕಥನವನ್ನು ಬರೆಯುತ್ತಿದ್ದೇನೆ.

ನಮ್ಮ ಕುಟುಂಬದಲ್ಲಿ ನನಗಿಂತ ಮೊದಲು ಹುಟ್ಟಿದವರು ನನ್ನ ಇಬ್ಬರು ಅಕ್ಕಂದಿರು- ಜೀವನಲತಾ ಮತ್ತು ಆಶಾಲತಾ .ಮೊದಲ ಮಗ ಹುಟ್ಟಿದಾಗ  ಏನು ಹೆಸರು ಇಡುವುದು ಎಂದು ಕೇಳಲು ಅಪ್ಪ  ಅಗ್ರಾಳದ ಮನೆಯಿಂದ ಪುತ್ತೂರಿನ ಬಾಲವನಕ್ಕೆ ಆರು ಮೈಲು ನಡೆದುಕೊಂಡುಹೋದರು.ಕಾರಂತರಲ್ಲಿ ಮಗನಿಗೆ ಹೆಸರು ಏನು ಇಡುವುದೆಂದು ಕೇಳಿದರು .ಕಾರಂತರು ಹೆಸರು ಸೂಚಿಸಿದರು-‘ ವಿವೇಕ ..’.ಅಪ್ಪನಿಗೆ ಸ್ಪಷ್ಟವಾಗಿ ಕೇಳಿಸಲಿಲ್ಲ .”ವಿವೇಕಾನಂದ ಎಂದೇ ?” ಅಪ್ಪನ ಮರುಪ್ರಶ್ನೆ. “ಆನಂದ ಗೀನಂದ ಏನೂ ಬೇಡ .ವಿವೇಕ ಇದ್ದರೆ ಆನಂದ ತಾನಾಗಿಯೇ ಬರುತ್ತದೆ.ಬರೇ  ‘ವಿವೇಕ’ ಸಾಕು.”  ಈ ಪ್ರಸಂಗವನ್ನು ಅಪ್ಪ ಅನೇಕ ಬಾರಿ ನನ್ನಲ್ಲಿ ಹೇಳಿದ್ದರು.ಒಂದು ಬಾರಿ ಕಾರಂತರು ಮಂಗಳೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಬಂದಾಗ ಸ್ವಾಗತ ಭಾಷಣ ಮಾಡುತ್ತಾ ಈ ಪ್ರಸಂಗವನ್ನು ನಾನು  ಉಲ್ಲೇಖಮಾಡಿದ್ದೆ.ಕಾರಂತರು  ಹೊಟ್ಟೆ ತುಂಬಾ ನಕ್ಕಿದ್ದರು..ಈಗಾಗಲೇ ಇದನ್ನು ಬೇರೊಂದು ಕಡೆ ಲೇಖನದಲ್ಲಿ  ದಾಖಲೆ ಮಾಡಿದ್ದೇನೆ.ಹೀಗೆ ಪ್ರಯತ್ನ ಇಲ್ಲದೆಯೇ ಕಾರಂತರಿಂದ ನಾನು ‘ಹೆಸರು’ ಪಡೆದದ್ದು ಸರಿಯಾಗಿ ಅರುವತ್ತೈದು ವರ್ಷಗಳ ಹಿಂದಿನ ಕತೆ.

ನಮ್ಮ ಅಗ್ರಾಳದ ಮನೆಯ ಹೆಸರು ‘ಜೀವನಕುಟಿ’ .ಜೀವನಕ್ಕನ ಹೆಸರಿನ , ಮುಳಿಹುಲ್ಲು ಹೊದಿಸಿದ ಒಂದು  ಗುಡಿಸಲು.ಅದರ ಪಕ್ಕದಲ್ಲೇ ಅಪ್ಪ ಅವರ ಓದುಬರಹಕ್ಕೆಂದು ಒಂದು ಕೊಟ್ಯ (ಕೊಟ್ಟಿಗೆ ) ಕಟ್ಟಿಸಿದ್ದರು.ಅದರ ಹೆಸರು ‘ಉದ್ಯೋಗ ಮಂದಿರ ‘. ಅದರಲ್ಲಿ ಊರಿನ ಮಕ್ಕಳನ್ನೆಲ್ಲ ಕೂಡಿಹಾಕಿ ನಾಟಕ,ಹಾಡು,ಕುಣಿತ ಇತ್ಯಾದಿ ಚಟುವಟಿಕೆಗಳನ್ನು ಅಪ್ಪ ಮತ್ತು ಅಮ್ಮ ನಡೆಸುತ್ತಿದ್ದರು.ಅಮ್ಮ ತುಂಬಾ ಚೆನ್ನಾಗಿ ಹಾಡುತ್ತಿದ್ದರು.ಕುಮಾರವ್ಯಾಸ ಭಾರತ ಮತ್ತು ಜೈಮಿನಿ ಭಾರತದ ಸಂಧಿಗಳನ್ನು ಗ್ರಂಥಗಳನ್ನು ನೋಡದೆಯೇ ಪರಂಪರೆಯ  ಧಾಟಿಯಲ್ಲಿ ಹಾಡುತ್ತಿದ್ದರು.ಹಾಗಾಗಿ ಮಕ್ಕಳ ವಾರ್ಷಿಕ ಕಾರ್ಯಕ್ರಮ ನಮ್ಮ ಮನೆಯ ಅಂಗಳದಲ್ಲಿ ಸಂಭ್ರಮದಿಂದ  ನಡೆಯುತ್ತಿತ್ತು.ಲೀಲಾ ಕಾರಂತರು ಕೆಲವು  ಬಾರಿ ಈ ಕಾರ್ಯಕ್ರಮಕ್ಕಾಗಿ ನಮ್ಮ ಅಗ್ರಾಳ ಮನೆಗೆ ಬಂದು ಅಮ್ಮನ ಜೊತೆಗೆ ಇದ್ದು ,ಮಕ್ಕಳ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡುತ್ತಿದ್ದರು.ಲೀಲಾ ಕಾರಂತರಿಂದ ಕಲಿತು ಅಮ್ಮ ಅದ್ಭುತವಾಗಿ ಹಾಡುತ್ತಿದ್ದದ್ದು  ಕಾರಂತರ ಗೀತ ನಾಟಕಗಳ ಗೀತಗಳನ್ನು.ಕಿಸಾ ಗೋತಮಿ,ಸೋಮಿಯ ಸೌಭಾಗ್ಯ,ಯಾರೋ ಅಂದರು,ಬುದ್ಧೋದಯ -ಇವೆಲ್ಲಾ ನಾನು ಕೇಳಿದ್ದು ನನ್ನ ಬಾಲ್ಯದ ಆರಂಭದ ದಿನಗಳಲ್ಲಿ ನಮ್ಮ ಮನೆಯ ಅಂಗಳದಲ್ಲಿ.

ಅಪ್ಪ ಮತ್ತು ಅಮ್ಮನ ಕಾರಣವಾಗಿ  ನಮಗೆ ಮಕ್ಕಳಿಗೆ ಕಾರಂತ  ಕುಟುಂಬದ ಸಂಪರ್ಕ ದೊರಕಿತ್ತು.ಇದರ ಹೆಚ್ಚಿನ ಪ್ರಯೋಜನ ಸಿಕ್ಕಿದ್ದು ನನ್ನ ದೊಡ್ಡ ಅಕ್ಕ ಜೀವನಕ್ಕ ನಿಗೆ.ಕಾರಂತರ ದೊಡ್ಡ ಮಗಳು ಮಾಳವಿಕಾ ಮತ್ತು ಜೀವನಕ್ಕ ಒಂದೇ ವಯಸ್ಸಿನವರು.ಹಾಗಾಗಿ ಅವರು ನಮ್ಮ ಮನೆಗೆ ಬಂದುಹೋಗುತ್ತ ಬಹಳ ಆಪ್ತ ಸ್ನೇಹಿತರಾದರು.ಮಾಳವಿಕಾ ನಮ್ಮ ಅಗ್ರಾಳ ಮನೆಯಲ್ಲಿ ಬಂದು ಕೆಲವು ದಿನ  ಇದ್ದು ಜೀವನಕ್ಕನ ಜೊತೆಗೆ ಗುಡ್ಡ ತೋಟ ಸುತ್ತಿದ್ದು,ಬಗೆ ಬಗೆಯ ಹಣ್ಣು ಕಾಯಿ ತಿಂದದ್ದು ,ನಮ್ಮ ತೋಟದ ಕೆರೆಯಲ್ಲಿ ಈಜಿದ್ದು ಎಲ್ಲವನ್ನೂ ಅಕ್ಕ ಹೇಳುತ್ತಿರುತ್ತಾರೆ.ಒಮ್ಮೆ ಮಾಳವಿಕಾ ಜೊತೆಗೆ ಕಾರಂತರ ಉಳಿದ ಇಬ್ಬರು ಮಕ್ಕಳು ಉಲ್ಲಾಸ ಮತ್ತು ಕ್ಷಮಾ ಬಂದು ನಮ್ಮಲ್ಲಿ ಇದ್ದದ್ದು ,ಅಕ್ಕ ಮತ್ತು ಮಾಳವಿಕಾ ಕೆರೆಯಲ್ಲಿ ಈಜುತ್ತಿದ್ದಾಗ ಚಿಕ್ಕ ಹುಡುಗ ಉಲ್ಲಾಸ್  ಕೂಡಾ ಕೆರೆಗೆ ಹಾರಿದ್ದು,ಇವರಿಬ್ಬರೂ ಅವನನ್ನು  ಮೇಲಕ್ಕೆ ಎತ್ತಿದ್ದು ,ಅದನ್ನು ಅಮ್ಮ ಮತ್ತು ಲೀಲಾ  ಕಾರಂತರಿಗೆ  ಹೇಳಲು ಹೆದರಿ ,ಅಡಗಿಕೊಂಡು ಮನೆಯಲ್ಲಿ ಅವಿತುಕೊಂಡದ್ದು  -ಇಂತಹ ಅನೇಕ  ಸ್ವಾರಸ್ಯ ಕತೆಗಳು ಅಕ್ಕನ ನೆನಪಲ್ಲಿ ಈಗಲೂ ಇವೆ.ನಾನು ಆ ಕಾಲದಲ್ಲಿ ಲೀಲಾ ಕಾರಂತರನ್ನು ಕಂಡದ್ದು ,ನನ್ನನ್ನು  ಮಗನಂತೆ ಅವರು  ನೋಡಿಕೊಳ್ಳುತ್ತಿದ್ದ ಮಸುಕು ನೆನಪು ಮಾತ್ರ ನನ್ನಲ್ಲಿ  ಈಗ ಉಳಿದಿರುವುದು.ನನ್ನ ತಮ್ಮನಿಗೆ ‘ಉಲ್ಲಾಸ ‘ಎಂದು ಹೆಸರು ಇಟ್ಟದ್ದು ಕಾರಂತರ ಮಗನ ಹೆಸರಿನ ಪ್ರೇರಣೆಯಿಂದ.ನನ್ನ ತಮ್ಮ ಉಲ್ಲಾಸ್ ,ಕಾರಂತರ ಮಗ ಉಲ್ಲಾಸ್ ಗಿಂತ ಒಂದು ವರ್ಷ ಚಿಕ್ಕವನು.

ಪುತ್ತೂರಿನ ಬಾಲವನದಲ್ಲಿ  ಇದ್ದ ಕಾರಂತರ  ಮನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಹೊರಗಿನ ಸಾಹಿತಿಗಳು ಬಂದು ಅನೇಕ ದಿನ ಅಲ್ಲಿ ಇದ್ದಾಗ ಅಪ್ಪನಿಗೆ ಅಲ್ಲಿಗೆ ಬರಲು ಕರೆ ಬರುತ್ತಿತ್ತು.ಅಪ್ಪ ,ಕೆಲವೊಮ್ಮೆ ಅಮ್ಮ ಕೂಡಾ ಬಾಲವನಕ್ಕೆ ಹೋಗಿ ಅಲ್ಲಿ ಕೆಲವು ದಿನ ಇದ್ದು ಬರುತ್ತಿದ್ದರು.ಮನೆಗೆ ಬಂದ ಬಳಿಕ ಅಲ್ಲಿನ ಅನುಭವಗಳನ್ನು ನಮಗೆ  ಮಕ್ಕಳಿಗೆ ಹೇಳುತ್ತಿದ್ದರು.ನಮಗೆ ಅದೊಂದು ರೀತಿಯ ಶಿಕ್ಷಣ ಇದ್ದಹಾಗೆ.ಕಾರಂತರ  ಮನಗೆ ಆಗ ಬರುತ್ತಿದ್ದ ಅನೇಕ ಸಾಹಿತಿಗಳಲ್ಲಿ ಕೆಲವರು ಪ್ರಮುಖರು -ವಿ.ಸೀತಾರಾಮಯ್ಯ,ಜಿ.ಪಿ.ರಾಜರತ್ನಂ,ನಾ.ಕಸ್ತೂರಿ.ಈ ಸಾಹಿತಿಗಳೊಡನೆ  ಪಟ್ಟಾಂಗ -ಸುಖಸಂಕಥಾವಿನೋದ -ಕ್ಕಾಗಿ ಅಪ್ಪ ಅಮ್ಮನ ಹಾಗೆ ಪುತ್ತೂರಿನಿಂದ ಕಾರಂತರ ಮೆಚ್ಚುಗೆಯ ಆಪ್ತರನ್ನು ಕರೆಸುತ್ತಿದ್ದರು.ವೀ ಸೀತಾರಾಮಯ್ಯ ಅವರ ‘ವಿಶ್ವಾಸ  ‘ ಕವನ -ಅಪ್ಪನಿಗೆ ಬಹಳ ಇಷ್ಟವಾದದ್ದು  ,ಅದರ ವೈಚಾರಿಕ  ಧಾಟಿಗಾಗಿ :’ ಮಾನವನೆತ್ತರ ಆಗಸದೇರಿಗೆ….’ಅಪ್ಪನಿಗೆ ಹಾಡುವಿಕೆಯ ಕಲೆಗಾರಿಕೆ ಎಂದೂ ಇರಲಿಲ್ಲ.ಆದರೆ ಆತ್ಮತೃಪ್ತಿಗಾಗಿ ಅನೇಕ ಬಾರಿ ಒಬ್ಬರೇ ಇದ್ದಾಗಲೂ ‘ವಿಶ್ವಾಸ’ ಕವನವನ್ನು  ಅವರು ಹಾಡುತ್ತಿದ್ದರು.ಇದು ಕಾರಂತರಿಗೂ  ಬಹಳ ಇಷ್ಟವಾದ ಕವನ ಎಂದು ಅಪ್ಪ ಹೇಳುತ್ತಿದ್ದರು.

ಇಂತಹ ಬಾಲವನ ಭೇಟಿಯ ಬಳಿಕ ಕಾರಂತರ  ಬದುಕಿನ ಆದರ್ಶ ಮತ್ತು ವಾಸ್ತವಗಳ ಸಮೀಕರಣದ ಸಂಗತಿಗಳನ್ನು  ಅಪ್ಪ ಮತ್ತು ಅಮ್ಮ ಮನೆಗೆ ಬಂದ ಮೇಲೆ ನಮಗೆ ವಿವರಿಸುತ್ತಿದ್ದರು.ಅಮ್ಮ ಹೇಳುತ್ತಿದ್ದ ಒಂದು ವಿಷಯ: ಕಾರಂತರು  ವಾರದಲ್ಲಿ , ಆ ಕಾಲಕ್ಕೆ ಭಾನುವಾರ – ಒಂದು ದಿನ ತಾವೇ ಅಡುಗೆ ಮಾಡುತ್ತಿದ್ದರಂತೆ.ಗಾಂಧೀಜಿಯವರ ದೃಷ್ಟಿಯಲ್ಲಿ ಎಲ್ಲರೂ ಮೊದಲು ಕಲಿಯಬೇಕಾದ ಪಾಠಗಳಲ್ಲಿ ಮುಖ್ಯವಾದದ್ದು ಅಡುಗೆಮಾಡುವುದು ಎಂದು ಹೇಳುತ್ತಿದ್ದರಂತೆ.ಗಂಡುಸರು ಅಡುಗೆ ಕಲಿಯಬೇಕು ಎಂದು ಹೇಳುತ್ತಿದ್ದರಂತೆ.( ನನಗೆ ಇದು ಅರ್ಥವಾದದ್ದು ಬಹಳ ತಡವಾಗಿ.ವಿದೇಶಗಳಲ್ಲಿ ಬಹಳ ಕಾಲ ಒಬ್ಬನೇ ಇದ್ದಾಗ, ಅಡುಗೆಯ ಪಾಠಗಳನ್ನು ಮೊದಲೇ ಚೆನ್ನಾಗಿ ಕಲಿತಿದ್ದರೆ ಎಷ್ಟು ಅನುಕೂಲ ಆಗುತ್ತಿತ್ತು ಎಂದು ಈಗ  ಅನ್ನಿಸುತ್ತಿದೆ.ಜರ್ಮನಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ ಸವಾಲಿನದು ನನ್ನ ಅಪಾರ್ಟ್ ಮೆಂಟ್ ನಲ್ಲಿ ನಾನೇ  ಅಡುಗೆ ಮಾಡಿಕೊಳ್ಳುವುದು! )ಹೀಗೆ  ಒಳ್ಳೆಯ ಸಸ್ಯಾಹಾರಿ ಅಡುಗೆಯನ್ನು ಶಿವರಾಮ ಕಾರಂತರು  ಲೀಲಾ ಕಾರಂತರಿಗೆ  ಕಲಿಸಿದ್ದು,ಲೀಲಾ ಕಾರಂತರಿಂದ ಅಮ್ಮ  ಕಲಿತದ್ದು .

ಕಾರಂತರ ಸೂಕ್ಸ್ಮ ದೃಷ್ಟಿಯ ಒಂದು ಪ್ರಸಂಗವನ್ನು  ಅಮ್ಮ ಯಾವಾಗಲೂ ಹೇಳುತ್ತಿದ್ದರು.ಸಾಹಿತಿ ವೀ.ಸೀತಾರಾಮಯ್ಯ ಅವರು ಬಾಲವನಕ್ಕೆ ಬಂದಿದ್ದಾಗ ಅಪ್ಪ ಅಮ್ಮ ಅಲ್ಲಿಗೆ ಹೋಗಿದ್ದರು.ಕಾರಂತರು ,ವೀಸೀ ,ಅಪ್ಪ,ಅಮ್ಮ ಊಟಕ್ಕೆ ಕುಳಿತಿದ್ದರು .ಲೀಲಾ  ಕಾರಂತರು ಬಡಿಸುತ್ತಿದ್ದರು .ಅಮ್ಮ ಊಟದ ಪಂಕ್ತಿಯ ಒಂದು ತುದಿಯಲ್ಲಿ ಕುಳಿತಿದ್ದರು .ಕಾರಂತರು  ತಲೆಬಗ್ಗಿಸಿ ಊಟ ಮಾಡುತ್ತಿದ್ದವರೇ,ಅಮ್ಮನ ಎಲೆಯನ್ನು ತೋರಿಸಿ,’ಲೀಲಾ,ನೋಡು ಆ ಎಲೆಗೆ ಚಟ್ನಿ ಬರಲಿಲ್ಲ ‘ ಎಂದರಂತೆ.ಕಾರಂತರ ಈ  ಸೂಕ್ಷ್ಮ ಅವಲೋಕನ ಮತ್ತು ಗ್ರಹಣ ಶಕ್ತಿಯನ್ನು ಮುಂದೆ ಅನೇಕ ಬಾರಿ ನಾನು ಕಂಡಿದ್ದೇನೆ.ಕಾರ್ಯಕ್ರಮಗಳಲ್ಲಿ ತಲೆ  ಬಗ್ಗಿಸಿ ,ಒಂದು ಕೈಯನ್ನು ತಲೆಗೆ ಅಥವಾ ಗಲ್ಲಕ್ಕೆ ಆನಿಸಿ ಕುಳಿತುಕೊಂಡು,ಬೇರೆಯವರು ಹೇಳುವುದನ್ನು ಆಲಿಸುತ್ತಾ,ಸುತ್ತಲೂ ನಡೆಯುತ್ತಿರುವುದನ್ನು ಅವಲೋಕಿಸುತ್ತ ಗ್ರಹಿಸುತ್ತಾ ಇರುತ್ತಾರೆ.ಮಕ್ಕಳನ್ನು,ನಿಸರ್ಗವನ್ನು ,ಕಲೆಗಳನ್ನು ಸಂವೇದನೆಯ ಭಾಗವಾಗಿ ಕಾರಂತರು ಮಾಡಿಕೊಂಡದ್ದು ಈ ಶಕ್ತಿಯಿಂದಲೇ .

ಕಾರಂತರ ಮಾತಿನ ಮೊನಚು ,ವ್ಯಂಗ್ಯ ,ವಿಡಂಬನೆಯ ಶಕ್ತಿಯ ಅನೇಕ ಪ್ರಸಂಗಗಳನ್ನು ಅಪ್ಪ ನಮಗೆ ಹೇಳುತ್ತಿದ್ದರು.ಅಂತಹ ಒಂದು ಘಟನೆ : ಕಾರಂತರು  ಒಮ್ಮೆ ಅಸ್ಸಾಮಿಗೆ ಪ್ರವಾಸ ಹೋಗಿದ್ದರಂತೆ.ಅಸ್ಸಾಮಿನಲ್ಲಿ  ಆಗ ಲೀಲಾ ಕಾರಂತರ  ಸಹೋದರಿ ವಾಸಿಸುತ್ತಿದ್ದರು.ಕಾರಂತರು  ಅವರನ್ನು ಅಲ್ಲಿ ಕಂಡು ಬಂದರು.ಪುತ್ತೂರಿಗೆ ಹಿಂದಿರುಗಿ ಬಂದಾಗ ,ಬಾಲವನದಲ್ಲಿ ಲೀಲಾ ಕಾರಂತರ ತಾಯಿ ಇದ್ದರು.ಅಸ್ಸಾಮಿನಲ್ಲಿ ಇರುವ ತನ್ನ ಮಗಳು ಹೇಗೆ ಇದ್ದಾಳೆ ಎಂದು ಅವರು ಅಲ್ಲಿಗೆ ಹೋಗಿ ಬಂದ ಕಾರಂತರಲ್ಲಿ  ವಿಚಾರಿಸಿದರು.ತಾಯಿ ತುಳುವಿನವರು.ತುಳು ತಾಯಂದಿರಿಗೆ  ತಮ್ಮ ಹೆಣ್ಣುಮಕ್ಕಳು ಚಂದ ಕಾಣುವುದೆಂದರೆ ‘ದಪ್ಪ’ ಆಗುವುದು, ಮೈತುಂಬ ಮಾಂಸ ತುಂಬಿಕೊಳ್ಳುವುದು.ದಕ್ಷಿಣಕನ್ನಡದ ಕನ್ನಡದಲ್ಲಿ ‘ತೋರ’ ಆಗುವುದು. ಇದಕ್ಕೆ ತುಳುವಿನಲ್ಲಿ ‘ಮಾಸೊ ಬರ್ಪುನೆ ‘( ಮಾಂಸ ಬರುವುದು ) ಎನ್ನುವ ನುಡಿಗಟ್ಟು ಬಳಕೆಯಲ್ಲಿ ಇದೆ.’ಮಾಂಸ ಬರುವುದು’ಎಂದರೆ ‘ತೋರ (ದಪ್ಪ) ಆಗುವುದು ‘.ಲೀಲಾ ಕಾರಂತರ ತಾಯಿ ಕಾರಂತರಲ್ಲಿ ತಮ್ಮ ಅಸ್ಸಾಮಿನ ಮಗಳ ಬಗ್ಗೆ ಕೇಳಿದರು: “ಆಳೆಗ್ ಮಾಸೊ ಬತ್ತುನ್ಡೋ  ?(ಅವಳಿಗೆ ಮಾಂಸ ಬಂದಿದೆಯೋ ?)” ಅದಕ್ಕೆ ಕಾರಂತರ ಉತ್ತರ :”  ಬಂದಿತ್ತು.ಜಿಂಕೆಯದ್ದು”. ಅಸ್ಸಾಂನಲ್ಲಿ ಬೇಟೆಯಾಡಿದ ಜಿಂಕೆಯ ಮಾಂಸವನ್ನು ತಿನ್ನಲು ಮನೆಗೆ  ತರುತ್ತಾರೆ !

ಇದು ೧೯೪೬ರಿನ್ದ ೧೯೫೯ರ ವರೆಗಿನ ನನ್ನ ಮೊದಲ ಜನ್ಮದ ಕೆಲವು ನೆನಪುಗಳು .ಶಿವರಾಮ ಕಾರಂತರು ನಮ್ಮನ್ನು  ಅಗಲಿದ ದಿನ ಇವತ್ತು .ಒಂಬತ್ತು ದಶಂಬರ ೧೯೯೭ರನ್ದು ನಾನು ಇಡೀ ದಿನ ಕೋಟದಲ್ಲಿ ಅದರ ಪರಿಸರದಲ್ಲಿ ಇದ್ದೆ.ಶಾಲೆಯಲ್ಲಿ ಮಲಗಿಸಿದ ಕಾರಂತರು,ಸಾವಿರಾರು ಮಂದಿ ಕಣ್ಣೀರು  ಸುರಿಸುತ್ತಿದ್ದ ದೃಶ್ಯ ,ಮತ್ತೆ ಬೆಂಕಿಯಲ್ಲಿ ಲೀನವಾದ ನೋಟ  -ಎಲ್ಲವೂ ಇವತ್ತು ನನ್ನ ಕಣ್ಣ ಮುಂದೆ ಇವೆ.ಈದಿನ ಮತ್ತೆ ವ್ಯೂತ್ಸ್ ಬುರ್ಗ್ ನಲ್ಲಿ ಹನಿ ಹನಿ ಮಳೆ.ದಟ್ಟವಾದ ಮೋಡಗಳು ಕವಿದಿದೆ.ಇದು ವಿಷಾದವೂ ಹೌದು ,ಶಾಂತಿಯೂ ಹೌದು.

ನಾನು ೧೯೬೦ರಲ್ಲಿ ನಮ್ಮ ಹಳ್ಳಿಯ ಮನೆ ಆಗ್ರಾಳದಿಂದ  ಪುತ್ತೂರಿಗೆ ವಿದ್ಯಾಭ್ಯಾಸಕ್ಕೆ ಬಂದೆ .೧೯೬೦ರಿನ್ದ ೧೯೬೩ರವರೆಗೆ ಪುತ್ತೂರು ಬೋರ್ಡ್ ಹೈಸ್ಕೂಲ್ ನಲ್ಲಿ ವಿದ್ಯಾರ್ಥಿ ಆಗಿದ್ದೆ.೧೯೬೪ರಿನ್ದ ೧೯೬೭ರವರೆಗೆ ಪುತ್ತೂರು ಫಿಲೋಮಿನಾ ಕಾಲೇಜಿನಲ್ಲಿ  ಪಿಯುಸಿ ಮತ್ತು ಬಿ.ಎಸ್ಸಿ .ವಿದ್ಯಾರ್ಥಿಯಾಗಿ ಶಿಕ್ಷಣ ಪಡೆದೆ.೧೯೬೭-೧೯೬೮ ರಲ್ಲಿ ನಾನು ಕಲಿತ ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ  ವಿಜ್ಞಾನ ಮಾಸ್ತರು ಆಗಿ ಪಾಠ ಮಾಡಿದೆ.ಈ ಅವಧಿಯಲ್ಲಿ ಕಾರಂತರನ್ನು ಕಂಡದ್ದು,ಅವರ ಮಾತುಗಳನ್ನು ಕೇಳಿದ್ದು,ಅವರ ಯಕ್ಷ ರಂಗದ ಮೊದಲ ಪ್ರಯೋಗವನ್ನು ಕಂಡದ್ದು  -ನನ್ನ ಎರಡನೆಯ ಜನ್ಮ.

ಮತ್ತೆ ೧೯೬೮ಕ್ಕೆ ಮಂಗಳೂರಿಗೆ ಬಂದ ಮೇಲೆ ,೧೯೭೦ರಲ್ಲಿ ಮಂಗಳೂರಲ್ಲಿ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ  ವಿಭಾಗದಲ್ಲಿ ಅಧ್ಯಾಪಕ ಆಗಿ ಸೇರಿದ ಬಳಿಕ, ೧೯೮೦ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಆದ ಬಳಿಕ ,ಅಲ್ಲಿನ ಕನ್ನಡ ವಿಭಾಗದಲ್ಲಿ ೧೯೮೪ರಿನ್ದ ಮುಖ್ಯಸ್ಥನಾಗಿ ,ಪ್ರಸಾರಾಂಗದ ನಿರ್ದೇಶಕ ಆಗಿ ,ಶಿವರಾಮ ಕಾರಂತ ಪೀಠವನ್ನು ಸ್ಥಾಪಿಸಿ ,ಕಾರಂತರ ಬಿಡಿಬರಹಗಳನ್ನು ಎಂಟು ಸಂಪುಟಗಳಲ್ಲಿ ಪ್ರಕಟಿಸಿ ,ಕನ್ನಡ  ವಿಭಾಗದ ಕರ್ಣಧಾರತ್ವದ ನನ್ನ ಹದಿನೆಂಟು ವರ್ಷಗಳ ಅವಧಿಯಲ್ಲಿ ಸುಮಾರು ಐವತ್ತು ಬಾರಿ ,ಅವರನ್ನು ಕರೆಸಿ ಮಾತನಾಡಿಸಿ ,ಅವರಿಂದ ಅವರ ಗೀತ ನಾಟಕಗಳನ್ನು ಹಾಡಿಸಿ,ಅವರ ಯಕ್ಷರಂಗದ ಪ್ರಾತ್ಯಕ್ಷಿತೆಯ ದಾಖಲಾತಿಗಾಗಿ ಅವರಿಂದ ಕುಣಿಸಿ, ಅವರ ಬದುಕು ಬರಹಗಳಿಂದ ವೈಚಾರಿಕವಾಗಿ ನನ್ನ ಬದುಕನ್ನು ಕಟ್ಟಿಕೊಂಡ ಕೆಲವು ಜನ್ಮಗಳು ಇವೆ.ಅವನ್ನೆಲ್ಲ ಮುಂದೆ ತೋಡಿಕೊಳ್ಳುವ ಬಯಕೆ ಇದೆ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

10 Responses to “ಹೆಸರು ಪಡೆದ ಮತ್ತು ಹೆಸರು ತಂದುಕೊಟ್ಟ ಕಾರಂತರ ನೆನಪಿನ ನನ್ನ ಮೊದಲ ಜನ್ಮದ ಕತೆ”

RSS Feed for ಬಿ ಎ ವಿವೇಕ ರೈ Comments RSS Feed

Very Nice write up sir.
Looking forward for more.
Swarna

Swarna,
I appreciate your concern.
Thanks.

ಪರ್ವತದ೦ತಾ ಕಾರ೦ತ…
ನಮ್ಮ ಮಮ್ಮದೆಯಾದರೋ ತು೦ಬ ವಿವೇಕಿ…
ಹಾಗಾಗಿಯೇ ಇರಬೇಕು ನಿಮಗೂ ಭೂಮ ಧೇಕಿ!!

ನೆನಪು ಹನಿ ಹನಿದು.. ಬರಲಿ ಎಲ್ಲ ಬಾಕಿ!!

ಒಲವಿ೦ದ ,

ಕಳ್ಳಿಗೆ ದಯಾಸಾಗರ್ ಚೌಟ
ಮು೦ಬಯಿ.

ಚೌಟರಿಗೆ ನಮಸ್ಕಾರ
ಒಲವಿನ ಹನಿಗಳ ಸಿಂಚನ ಹಿತವೆನಿಸಿತು.
ವಿವೇಕ ರೈ

ಕಾರಂತರನ್ನು ನೆನಪಿಸಿಕೊಳ್ಳುತ್ತಲೆ ನಿಮ್ಮ ಬದುಕಿನ ಅಂಟಿನ-ನಂಟಿನ ಸಂಗತಿಗಳನ್ನು ಹೇಳುತ್ತಿರುವುದು ನಿಜಕ್ಕೂ ಆಪ್ತವೆನಿಸುತ್ತದೆ. ಹಂಪಿಯಲ್ಲಿ ನೀವು ಕುಲಪತಿಗಳಾಗಿದ್ದಾಗ ಒಮ್ಮೆ ನಾನು ನಿಮ್ಮನ್ನು ಭೇಟಿಯಾಗಿದ್ದೆ. ಜತೆಗೆ ನನ್ನ ವಿದ್ಯಾರ್ಥಿ ಮಿತ್ರರಿದ್ದರು. ಆನಂತರ ಆಗಾಗ ವಿಚಾರಸಂಕಿರಣ, ಸಮ್ಮೇಳನಗಳಲ್ಲಿ ಕೆಲವು ಸಲ ನಿಮ್ಮನ್ನು ಕಂಡು ಮಾತನಾಡಿಸಿದ್ದಿದೆ. ಆಗೆಲ್ಲ ತಮ್ಮ ಮಾತಿನ ಮೋಡಿ ನನ್ನನ್ನು ಸೆಳೆದಿದೆ. ಆದರೆ ಹೆಚ್ಚು ಪರಿಚಯ ಮಾಡಿಕೊಳ್ಳದೇ ಇರುವುದಕ್ಕೆ ನನ್ನ ಸಂಕುಚಿತ ಮನಸ್ಸು ಕಾರಣವಾಗಿರಬಹುದು.

ಡಾ.ಸಿದ್ರಾಮ್ ಕರಣಿಕ್ ,ನಿಮ್ಮ ಬರಹಗಳನ್ನು ಓದುತ್ತಿದ್ದೇನೆ.ಹಂಪಿಯ ಹಳೆಯ ನೆನಪುಗಳು ಮತ್ತೆ ಹಳೆಯ ಜನ್ಮವನ್ನು ನೆನಪಿಸಿದವು.ಆಗ ಕೆಲಸಗಳ ಒತ್ತಡದಲ್ಲಿ ನಾನೇ ನಿಮ್ಮನ್ನು ಮಾತಾಡಿಸಿಲ್ಲ ಅನ್ನಿಸುತ್ತದೆ.ಮತ್ತೆ ನಿಮ್ಮನು ಇಲ್ಲಿ ಭೇಟಿ ಆದದ್ದು ತುಂಬಾ ಸಂತೋಷ.ನಮಸ್ಕಾರ

ಶಿವರಾಮ ಕಾರಂತರು ತಮಗೆ ಹೆಸರಿಟ್ಟಿದ್ದೆಂದು ತಿಳಿದು ಸಂತಸವಾಯಿತು. ಅವರು ‘ವಿವೇಕ’ ಹೆಸರೊಂದೇ ಸಾಕು, ‘ವಿವೇಕಾನಂದ’ ಏನೂ ಬೇಡ. ವಿವೇಕವಿದ್ದರೆ ಆನಂದ ತಾನೇ ತಾನಾಗಿ ಬರುತ್ತದೆ ಎಂದು ಹೇಳುವ ಮೂಲಕ ಅಲ್ಲಿಯೂ ತಮ್ಮ “ವೈಚಾರಿಕತೆ”ಯನ್ನು ಮೆರೆದಿದ್ದಾರೆ. ನನಗೆ ಈ ಪ್ರಸಂಗವನ್ನು ಓದುವಾಗ ರವೀಂದ್ರರು ‘ಅಮರ್ತ್ಯ’ ಎನ್ನುವ ಹೆಸರು ಸೂಚಿಸಿದ್ದು ಮುಂದೆ ಅದೇ ‘ಅಮರ್ತ್ಯ’ ಸೇನರು ರವೀಂದ್ರರ ಹಾಗೆಯೇ ನೊಬೆಲ್ ಪ್ರಶಸ್ತಿ ಪಡೆದಿದ್ದು ಇಂದು ಇತಿಹಾಸ. ಮಹಾಪುರುಶರು ಹೆಸರು ಸೂಚಿಸಿದವರೆಲ್ಲರೂ ಮಹಾನ್ ಕೆಲಸಗಳನ್ನೇ ಮಾಡಿರುವುದು ಆಸಕ್ತಿಕರ ಸಂಗತಿ! ತಾವೀಗ ವಿದೇಶದ ನೆಲದಲ್ಲಿ ಕನ್ನಡದ ಕಂಪನ್ನು ಹರಡುತ್ತಿದ್ದೀರಿ. ತಾವಿನ್ನೂ ಎತ್ತರೆತ್ತರಕ್ಕೆ ಏರುತ್ತಾ ಹೋಗಲಿ, “ಕನ್ನಡ ಬಾವುಟ” ಬೇರೆ ನೆಲಗಳಲ್ಲೂ ಹಾರಾಡಲಿ ಎಂಬುದು ನನ್ನ ಹಾರೈಕೆ.

ಕಾರಂತರು ನಮ್ಮನ್ನಗಲಿ ಹೋದ ದಿನದಂದು ನಮಗೆ ತಿಳಿಯದೇ ಇದ್ದ ಆದರೂ ಚರಿತ್ರೆಯ ಭಾಗವಾಗಿ ಹೋದ ಸಂಗತಿಗಳನ್ನು ಕಣ್ಣಿಗೆ ಕಟ್ಟಿದ ಹಾಗೆ ಬರೆದಿದ್ದೀರಿ. ನನಗಂತೂ ಕಾರಂತರು ಅಂದರೆ ಥಟ್ಟನೆ ನೆನಪಾಗುವುದು “ಬಾಲವನದಲ್ಲಿ ಕಾರಂತಜ್ಜ.” ನಾನು ಚಿಕ್ಕವನಾಗಿದ್ದಾಗ ತಪ್ಪದೇ ಓದುತ್ತಿದ ಅಂಕಣ ಅದು. ಆನಂತರ, ಬೆಳೆದು ದೊಡ್ಡವನಾದ ಮೇಲೆ ಅವರ ವೈಚಾರಿಕತೆ, ವ್ಯಕ್ತಿತ್ವ ಎಲ್ಲವೂ ಆಕರ್ಶಿಸಿತು. ವಿಶ್ವವಿದ್ಯಾಲಯದಲ್ಲಿ ಓದದೇ ಇದ್ದರೂ ತಾವೇ ಒಂದು ವಿಶ್ವವಿದ್ಯಾಲಯವಾಗಿ ಬೆಳೆದ ಕಾರಂತರ ವ್ಯಕ್ತಿತ್ವ ತೇಜಸ್ವಿಯಂತ ಬರೆಹಗಾರರನ್ನೊಳಗೊಂಡಂತೆ ಬಹಳಶ್ಟು ಕನ್ನಡ ಮನಸ್ಸುಗಳನ್ನು ಬೆಳೆಸಿದೆ. ಅವರ “ಸರಸಮ್ಮನ ಸಮಾಧಿ” ಕೃತಿಯನ್ನು ನಾನು ಸಂಪನ್ಮೂಲ ವ್ಯಕ್ತಿಯಾಗಿ ಕೆಲಸಮಾಡುತ್ತಿದ್ದ “ಕಥಾಭಾರತಿ” .ಯೋಜನೆಯಡಿ ಇಂಗ್ಲಿಶ್ ಗೆ ಅನುವಾದಿಸಲಾಗಿತ್ತು.

“ಕಥಾಭಾರತಿ” .ಯೋಜನೆಯಡಿ ಇಂಗ್ಲಿಶ್ ಗೆ ಅನುವಾದಿಸಲಾಗಿತ್ತು.

ಪ್ರಿಯ ಶಶಿಕುಮಾರ್ ,ಕಾರಂತರ ಬದುಕು ಬರಹ -ಸಮಾನ ಮನಸ್ಕರನ್ನು ಒಂದುಗೂದಿಸುತ್ತವೆ.’ಸರಸಮ್ಮನ ಸಮಾಧಿ’ಯ ಇಂಗ್ಲಿಶ್ ಅನುವಾದ ಎಲ್ಲಿ ಸಿಗುತ್ತದೆ ?
ನನ್ನ ಬಗೆಗಿನ ನಿಮ್ಮ ವಿಶ್ವಾಸ ನಿಮ್ಮ ಸಂಸ್ಕೃತಿ ಪ್ರೀತಿ ಮತ್ತು ವೈಚಾರಿಕ ಗಟ್ಟಿತನದಿಂದ ಬಂದದ್ದು.ಕಾರಂತರ ಪ್ರೇರಣೆ ಬಹುರೂಪಿಯಾದುದು.

ಮನದಾಳದ ಮಾತುಗಳು ನೆನಪಿನ ದೋಣಿಯಲ್ಲಿ ಓದಿ ಸಂತೋಷವಾಯ್ತು.

ಪ್ರಿಯ ಜೈ ಕುಮಾರ್,ತುಂಬಾ ಸಂತೋಷ -ನಿಮ್ಮ ಪ್ರೀತಿಯ ಓದಿಗಾಗಿ.


Where's The Comment Form?

Liked it here?
Why not try sites on the blogroll...

%d bloggers like this: