ಪ್ರೇಮದ ಸುಂಟರಗಾಳಿಯಲ್ಲಿ ಸಿಕ್ಕಿಕೊಂಡು ದಿಕ್ಕು ತಪ್ಪಿದ ಹಡಗು :ವಾಸ್ಕೋ ದ ಗಾಮ

Posted on ನವೆಂಬರ್ 30, 2011. Filed under: ಜರ್ಮನ್ ಕತೆ, ರಂಗಭೂಮಿ, ವ್ಯೂರ್ತ್ಸ್ ಬುರ್ಗ್ | ಟ್ಯಾಗ್ ಗಳು:, , , , , , |


ಕಳೆದ ಶನಿವಾರ ,ನವಂಬರ ೨೬ರನ್ದು ವ್ಯೂರ್ತ್ಸ್ ಬುರ್ಗಿನ ಮಾಯಿನ್ ಫ್ರಾಂಕೆನ್ ಥಿಯೇಟರ್ ನಲ್ಲಿ ನಾನು ನೋಡಿದ ಒಪೆರ -‘L’Africaine ( Die Afrikanerin-Vasco de Gama). ಜರ್ಮನಿಯ ಪ್ರಸಿದ್ಧ ಒಪೆರ ಸಂಯೋಜಕ  Giacomo Meyerbeer (1791-1864) ರಚಿಸಿದ ಕೊನೆಯ ಒಪೆರ ಇದು.ಒಂದು ಕಾಲಕ್ಕೆ  ರಂಗಭೂಮಿಯಲ್ಲಿ ಬಹಳ ಪ್ರಸಿದ್ಧವಾಗಿದ್ದ ಮೆಯೇರ್ ಬೆಯೇರ್ ನ ಒಪೆರಗಳು ಕಳೆದ ಕೆಲವು ದಶಕಗಳಿಂದ ರಂಗದಲ್ಲಿ ಕಾಣಿಸಿಕೊಂಡದ್ದು ಬಹಳ ಕಡಮೆ.ಇಂತಹ ಸಂದರ್ಭದಲ್ಲಿ ಮಾಯಿನ್ ಫ್ರಾಂಕೆನ್ ಥಿಯೇಟರ್ ತಂಡದವರು ಪರಿಶ್ರಮ ಮತ್ತು ಉತ್ತಮ ತರಬೇತಿಯಿಂದ ಈ ಒಪೆರವನ್ನು ಮತ್ತೆ ರಂಗದ ಮೇಲೆ ತರುವ ಒಳ್ಳೆಯ ಪ್ರಯತ್ನ ಮಾಡಿದ್ದರು.

ಮೆಯೇರ್ ಬೆಯೇರ್ ನ L’Africaine -Vasco da Gama ಒಪೆರವು ಪೋರ್ಚುಗಲ್ ನ ಪ್ರಸಿದ್ಧ ಭೂಖಂಡ ಶೋಧಕ ವಾಸ್ಕೋ ದ ಗಾಮ ಎಂಬ ಐತಿಹಾಸಿಕ ವ್ಯಕ್ತಿಯ ಬದುಕಿಗೆ ಕಾಲ್ಪನಿಕ ಘಟನೆಗಳನ್ನು ಜೋಡಿಸಿದ ನಿರ್ಮಾಣ. ಇಬ್ಬರು ಹೆಣ್ಣುಗಳ ಪ್ರೇಮದ ಸುಳಿಯಲ್ಲಿ ದಿಕ್ಕು ಬದಲಿಸಿ ಪ್ರಯಾಣ ಮಾಡಿದ ವಾಸ್ಕೋ ದ ಗಾಮನ ಕಾಲ್ಪನಿಕ ಬದುಕು ಈ ಒಪೆರದಲ್ಲಿ ಮೆಲೋದ್ರಾಮದ ರೂಪದಲ್ಲಿ ಅನಾವರಣಗೊಂಡಿದೆ.ಪೋರ್ಚುಗಲ್ ನ ಅಡ್ಮಿರಲ್ ನ ಮಗಳು ಇನೆಸ್ ಎಂಬವಳು  ವಾಸ್ಕೋ ದ ಗಾಮನನ್ನು ಪ್ರೇಮಿಸುವುದು, ಆತನು  ಹಡಗಿನಲ್ಲಿ ಸಮುದ್ರಗಳನ್ನು ದಾಟುತ್ತಾ ಹೊಸ ದ್ವೀಪವೊಂದನ್ನು ಶೋಧಿಸುವುದು,ಅಲ್ಲಿನ ರಾಣಿ ಶೆಲಿಕಾ ಅವನನ್ನು ಪ್ರೇಮಿಸುವುದು ,ಅವನ ಹಿಂದಿನ ಪ್ರೇಯಸಿ ಇದರಿಂದ ಹತಾಶಳಾಗುವುದು,ದ್ವೀಪದ ರಾಣಿಯ ಆತ್ಮಹತ್ಯೆ -ಹೀಗೆ ಪ್ರೇಮದ ಕತೆಗಳ ಸುಳಿಯಲ್ಲಿ ವಾಸ್ಕೋ ದ ಗಾಮನ ಬದುಕಿನ ಹಡಗು ಸುತ್ತಿ ಸುಳಿದು ದಿಕ್ಕಾಪಾಲಾದ ರೋಚಕ ಕತೆ.

ಐದು ಅಂಕಗಳು ಇರುವ ಈ ಒಪೆರಾ ಸಂಜೆ ಏಳೂವರೆಗೆ ಆರಂಭವಾಗಿ ಒಂದು ವಿರಾಮದ ಸಹಿತ ರಾತ್ರಿ ಹನ್ನೊಂದೂವರೆಗೆ ಮುಕ್ತಾಯವಾಯಿತು.ಇಷ್ಟು ದೀರ್ಘ ಅವಧಿಯ ಪ್ರದರ್ಶನವನ್ನು ಥಿಯೇಟರ್ ಪೂರ್ಣ ತುಂಬಿದ್ದ ಪ್ರೇಕ್ಷಕರು ಏಕಾಗ್ರತೆಯಿಂದ  ನೋಡಿ ಬಹಳವಾಗಿ ಆನಂದಿಸಿ ಸಂಭ್ರಮಪಟ್ಟರು.ಒಪೆರಾದ ಈ ಪ್ರದರ್ಶನದ ಸಂಗೀತ ನಿರ್ದೇಶಕ -Enrico Calesso, ನಿರ್ಮಾಣ-  Gregor Horres, ರಂಗ ಸಜ್ಜಿಕೆ ಮತ್ತು ವಸ್ತ್ರ ವಿನ್ಯಾಸ – Jan Bammes,  ಕೋರಸ್ –  Markus Popp,ನಾಟಕ ರೂಪಾಂತರ-Christoph Blitt.

ಈ ಎಲ್ಲ ರಂಗಗಳಲ್ಲಿ ಪರಿಪೂರ್ಣತೆ ಹೊಂದಿದ್ದ ಮೊನ್ನೆಯ ಪ್ರದರ್ಶನ ನನಗೆ ಅತ್ಯದ್ಬುತ ಅನ್ನಿಸಿದ್ದು ರಂಗಸಜ್ಜಿಕೆ ಮತ್ತು ವಸ್ತುವಿನ್ಯಾಸದಲ್ಲಿ.ಐದು ಅಂಕಗಳಲ್ಲಿ ಒಂದನೆಯದು -ಪೋರ್ಚುಗಲ್ ನ ಲಿಸ್ಬನ್ ನಗರದ ಅಡ್ಮಿರಲ್ ಗಳ ಆಸ್ಥಾನದ ದೃಶ್ಯ.ಎರಡನೆಯದು -ಜೈಲಿನ ದೃಶ್ಯ.ಮೂರನೆಯದು -ಸಮುದ್ರದಲ್ಲಿ ಹಡಗಿನ ಒಳಗಿನ ನೋಟ.ನಾಲ್ಕನೆಯದು-ಹಿಂದೂ ಮಹಾಸಾಗರದ ಒಂದು ದ್ವೀಪದ ದೃಶ್ಯ.ಕೊನೆಯದು-ಆ ದ್ವೀಪದಲ್ಲಿ ಸಾವಿನ ಮರದ ಸುತ್ತಲಿನ ಆವರಣ.ಒಂದೇ ಸ್ಟೇಜನ್ನು ಕೆಲವೇ ನಿಮಿಷಗಳಲ್ಲಿ ಹೊಸಲೋಕವನ್ನಾಗಿ ರೂಪಾಂತರಿಸುತ್ತಿದ್ದ ಮೋಡಿ,ಪ್ರತೀ ದೃಶ್ಯದಲ್ಲಿಯೇ ರಂಗದೊಳಗೆ ಕ್ಷಣಕ್ಷಣಕ್ಕೆ ಆಗುತ್ತಿದ್ದ ಚಲನೆಗಳು ಸಿನೆಮಾದಲ್ಲಿ ಕಾಣುತ್ತಿದ್ದ ಭ್ರಮೆಯ ಚಿತ್ರಗಳಿಗಿಂತ ಹೆಚ್ಚು ಪರಿಣಾಮಕಾರಿ ಆಗಿದ್ದವು.ಇಡೀ ರಂಗಭೂಮಿಯನ್ನು ಒಂದು ಆಟಿಕೆಯಂತೆ ಚಲಿಸುವಂತೆ ಮಾಡುತ್ತಾ ,ಅದರ ಒಳಗೆ ವಾಸ್ತವದ ಭ್ರಮೆಯನ್ನು ಉಂಟುಮಾಡಿದ ವಿನ್ಯಾಸ ಬಹಳ ಮೆಚ್ಚುಗೆ ಪಡೆಯಿತು.ಜೈಲು , ಹಡಗು ಮತ್ತು ದ್ವೀಪ ದ ದೃಶ್ಯಗಳಲ್ಲಿ ಸುಮಾರು ಐವತ್ತಕ್ಕಿಂತ  ಹೆಚ್ಚುಮಂದಿ ನಟನಟಿಯರು ಮೇಲಿಂದ ಕೆಳಗಿನಿಂದ ಪಕ್ಕಗಳಿಂದ ಒಳಗಿನಿದ ಬರುವ ಹೋಗುವ ಚಲಿಸುವ ಕಾಣದಾಗುವ ವೇಗ ವಿಶಿಷ್ಟವಾಗಿತ್ತು .ಬೆಳಕಿನ ವಿನ್ಯಾಸವನ್ನು ಇದಕ್ಕೆ ಅನುಗುಣವಾಗಿ ಬದಲಾಯಿಸ ಲಾಗುತ್ತಿತ್ತು .ವಸ್ತ್ರವಿನ್ಯಾಸವನ್ನು ಪಾತ್ರಗಳ ಬದಲಾಗುತ್ತಿದ್ದ ಮೂಡ್ ಗಳಿಗೆ ಅನುಸಾರವಾಗಿ ಬದಲಾವಣೆ ಮಾಡುತ್ತಿದ್ದ  ಕ್ರಮದಿಂದಾಗಿ ಆ ಪಾತ್ರಗಳೇ ಬೇರೆಯೋ ಎನ್ನುವ ಭ್ರಮೆಯನ್ನು ಉಂಟುಮಾಡುತ್ತಿತ್ತು.ದ್ವೀಪದ ರಾಣಿ ಶೆಲಿಕಾ ಮೊದಲು ಗುಲಾಮಳಂತೆ ಕಾಣಿಸಿಕೊಂಡರೆ ಮುಂದಿನ ದೃಶ್ಯದಲ್ಲಿ  ಗುಡ್ಡಗಾಡು ರಾಣಿಯಂತೆ ಕಾಣುತ್ತಿದ್ದಳು.ವಾಸ್ಕೋ ದ ಗಾಮ ಆರಂಭದ ದೃಶ್ಯಗಳಲ್ಲಿ ಸಾಹಸಿಯಂತೆ ವೀರನಂತೆ ಕಾಣಿಸುತ್ತಿದ್ದರೆ ಕೊನೆಕೊನೆಗೆ ಅಸಹಾಯಕನಾಗಿ ಗುಲಾಮನಂತೆ ಭಾಸವಾಗುತ್ತಿದ್ದನು.ಪಾತ್ರಗಳ ಬದಲಾದ ಸ್ಥಿತಿ ಮತ್ತು ಮೂಡ್ ಗಳಿಗೆ ಅನುಗುಣವಾಗಿ ವಸ್ತ್ರವಿನ್ಯಾಸ ಮತ್ತು ಸಂಗೀತದ ಬದಲಾವಣೆ -ಈ ಒಪೆರದಲ್ಲಿ ನಾನು ಬಹಳ ಮೆಚ್ಚಿಕೊಂಡ ಅಂಶ.ಹಾಗೆಯೇ ರಂಗವಿನ್ಯಾಸದಲ್ಲಿ  ಒಂದೇ ದೃಶ್ಯದಲ್ಲಿ ಸನ್ನಿವೇಶದ ಬದಲಾವಣೆಗೆ ಹೊಂದಿಕೊಂಡು ನಾವು ನೋಡುನೋಡುತ್ತಿದ್ದಂತೆಯೇ  ಕ್ಷಣಕ್ಷಣ ಬದಲಾಗುತಿದ್ದ ಪವಾಡದಂತಹ ರೂಪಾಂತರ ಸಂಭವಿಸುತ್ತಿತ್ತು.ಸಂಗೀತವೇ ಜೀವಾಳವಾಗಿರುವ ಒಪೆರಾಗಳಲ್ಲಿ ರಂಗವಿನ್ಯಾಸ ಮತ್ತು ವಸ್ತ್ರವಿನ್ಯಾಸಗಳನ್ನೂ ರಸಗಳ ಸ್ಥಿತ್ಯಂತರಗಳ ಜೊತೆಗೆ ಪೂರ್ಣಪ್ರಮಾಣದಲ್ಲಿ ಜೋಡಿಸಿಕೊಂಡದ್ದು  ಈ ಒಪೆರಾ ಪ್ರದರ್ಶನದ ದೊಡ್ಡ ಆಕರ್ಷಣೆ.ಶೃಂಗಾರ,ಕರುಣ,ವೀರ ,ರೌದ್ರ,ಅದ್ಭುತ ,ಭಯಾನಕ ರಸಗಳೇ ಪ್ರಧಾನವಾಗಿದ್ದ ಈ ಒಪೆರಾದಲ್ಲಿ ಪಾತ್ರಗಳ ಅವಸ್ಥೆಗಳೇ ಹಾಸ್ಯದ ವಸ್ತುಗಳಾಗಿದ್ದವು.

ಅಂಕ ೧ : ಪೋರ್ಚುಗಲ್ ನ ಲಿಸ್ಬನ್  ನಗರದ ಕೌನ್ಸಿಲ್ .

ಪೋರ್ಚುಗಲ್ ನ ಕೌನ್ಸಿಲ್ ನ ಅಡ್ಮಿರಲ್ ಡಾನ್ ಡಿಯೇಗೋ   ತನ್ನ ಮಗಳು ಇನೆಸ್ , ಕೌನ್ಸಿಲ್ ನ ಅಧ್ಯಕ್ಷ ಡಾನ್ ಪೆದ್ರೊ ನನ್ನು ಮದುವೆಯಾಗಬೇಕು ಎಂದು ಒತ್ತಾಯಿಸುತ್ತಾನೆ.ಆದರೆ ಇನೆಸ್ , ಸಾಹಸಿ  ನಾವಿಕ ,ಭೂಖಂಡಗಳ ಅನ್ವೇಷಕ ವಾಸ್ಕೋ ದ ಗಾಮಾನನ್ನು ಪ್ರೀತಿಸುತ್ತಿರುತಾಳೆ ಮತ್ತು ಅವನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿಯುತ್ತಾಳೆ. ಅನ್ವೇಷಣೆಯ ಪ್ರಯಾಣವೊಂದರಲ್ಲಿ  ಸತ್ತುಹೋಗಿದ್ದಾನೆ ಎಂದು ಭಾವಿಸಲಾಗಿದ್ದ ಗಾಮಾ ,ಜನರಲ್  ಕೌನ್ಸಿಲ್ ಮುಂದೆ ಕಾಣಿಸಿಕೊಳ್ಳುತ್ತಾನೆ.ತಾನು ಹೊಸ ದೇಶವೊಂದನ್ನು ಕಂಡುಹಿಡಿದಿದ್ದೇನೆ ಎಂದು ಕೌನ್ಸಿಲ್ ನಲ್ಲಿ ಘೋಷಿಸಿ ,ತಾನು ಸೆರೆಹಿಡಿದು  ತಂದ ಇಬ್ಬರು ಗುಲಾಮರನ್ನು -ಶೆಲಿಕಾ   ಮತ್ತು ನೆಲುಸ್ಕೋ ರನ್ನು ಅಲ್ಲಿ ಹಾಜರುಪಡಿಸುತ್ತಾನೆ.ಇವರು ಹೊಸ ಒಂದು ಬುಡಕಟ್ಟಿಗೆ ಸೇರಿದವರು ಎಂದು ತಿಳಿಸುತ್ತಾನೆ.ತನ್ನ ಭೂ ಅನ್ವೇಷಣೆಗೆ ಕೌನ್ಸಿಲ್ ನ ಸಹಾಯ ಕೇಳುತ್ತಾನೆ.ಆದರೆ ಅದಕ್ಕೆ ಅನುಮತಿ ದೊರೆಯುವುದಿಲ್ಲ.ವಾಸ್ಕೋ ದ ಗಾಮಾನನ್ನು ಜೈಲಿಗೆ ಹಾಕುತ್ತಾರೆ.

ಅಂಕ ೨ : ಜೈಲಿನ ದೃಶ್ಯ .

ಶೆಲಿಕಾ ನಿಜವಾಗಿ ಒಂದು ಅಪರಿಚಿತ ದ್ವೀಪದ ರಾಣಿ.ಅವಳು ವಾಸ್ಕೋ ದ ಗಾಮಾನನ್ನು ಪ್ರೀತಿಸುತ್ತಿರುತ್ತಾಳೆ.ಅವಳ ಸಹಚರ ನೆಲುಸ್ಕೋ ಅವಳನ್ನು ಮದುವೆಯಾಗಲು ಬಯಸಿರುತ್ತಾನೆ.ಅದಕ್ಕಾಗಿ ಆತ ಜೈಲಿನಲ್ಲಿ ಗಾಮಾನನ್ನು ಕೊಳ್ಳಲು ಪ್ರಯತ್ನಿಸುತ್ತಾನೆ.ಆದರೆ ಶೆಲಿಕಾ ಇದನ್ನು ತಪ್ಪಿಸುತ್ತಾಳೆ.ಇನ್ನೊಂದು ಕಡೆ ಇನೆಸ್ ತಾನು ಡಾನ್ ಪೆದ್ರೋನನ್ನು ಮದುವೆಯಾಗಬೇಕಾದರೆ ಗಾಮಾನನ್ನು ಜೈಲಿನಿಂದ ಬಿಡುಗಡೆಮಾಡಬೇಕು ಎಂದು ತಂದೆಯನ್ನು ಒತ್ತಾಯಿಸುತ್ತಾಳೆ.ಗಾಮಾನ ಬಿಡುಗಡೆ ಆಗುತ್ತದೆ.

ಅಂಕ ೩:ಡಾನ್ ಪೆದ್ರೊ ನ ಹಡಗಿನಲ್ಲಿ.

ಯುರೋಪಿಯನ್ನರು ತುಂಬಿರುವ ಒಂದು ಹಡಗನ್ನು ನೆಲುಸ್ಕೋ  ನಡೆಸುತ್ತಿರುತ್ತಾನೆ.ಆ ಹಡಗಿನಲ್ಲಿ ಇರುವ ಎಲ್ಲ ಯುರೋಪಿಯನ್ನರನ್ನು ಸಮುದ್ರದಲ್ಲಿ ಮುಳುಗಿಸಿ ಸಾಯಿಸಲು ಆತ ಸಂಚುಹೂಡುತ್ತಾನೆ.ಆತನು ಸಮುದ್ರದಲ್ಲಿ ತೂಫಾನು ಎಬ್ಬಿಸಿ ಹಡಗನ್ನು ಮುಳುಗಿಸುವ ಕಡಲ ದೈತ್ಯನ ಐತಿಹ್ಯದ ಕಥನವನ್ನು ಹಾಡುತ್ತಾನೆ.ಬಿರುಗಾಳಿಗೆ ನೇರವಾಗಿ  ಒಡ್ಡಿಕೊಳ್ಳುವಂತೆ ನೆಲುಸ್ಕೋ ಹಡಗನ್ನು ಮುಂದಕ್ಕೆ ಕೊಂಡೊಯ್ಯುತ್ತಾನೆ. ವಾಸ್ಕೋ ದ ಗಾಮಾ ನು ಇನ್ನೊಂದು ಹಡಗಿನಲ್ಲಿ ಅವರನ್ನು ಹಿಂಬಾಲಿಸುತ್ತಾನೆ.ಅವನ ಹಡಗಿನಲ್ಲಿ ಇದ್ದ ಡಾನ್ ಪೆದ್ರೊ , ಆ ಹಡಗನ್ನು ಅಪಾಯಕ್ಕೆ ಸಿಲುಕಿಸಿ ಗಾಮಾನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ.ಗಾಮಾನ ಎಚ್ಚರಿಕೆಯನ್ನು ಲೆಕ್ಕಿಸದೆ ಅನಾಹುತದ  ಕಡೆಗೆ ಹಡಗನ್ನು ನಡೆಸುತ್ತಾನೆ.ಅಲ್ಲಿಯೇ ಗಾಮಾನನ್ನು ಸೆರೆಹಿಡಿಯುತ್ತಾನೆ.ಬಿರುಗಾಳಿ ಜೋರಾಗಿ ಬೀಸಿ ಅನಾಹುತ ಸಂಭವಿಸುತ್ತದೆ.ನೆಲುಸ್ಕೋ ಸ್ಥಳೀಯ ಜನರ ನೆರವಿನಿಂದ ಹಡಗಿನಲ್ಲಿ ಇದ್ದ ಎಲ್ಲ ಯುರೋಪಿಯನ್ನರನ್ನು ಕೊಲ್ಲುತ್ತಾನೆ.ವಾಸ್ಕೋ ದ ಗಾಮಾನನ್ನು ಒಬ್ಬನನ್ನು ಮಾತ್ರ ಜೀವಂತ ಉಳಿಸುತ್ತಾನೆ.

ಅಂಕ ೫ : ಹಿಂದೂ ಮಹಾಸಾಗರದಲ್ಲಿ ಒಂದು  ದ್ವೀಪ.

ಅದು ಹಿಂದೂ ಮಹಾಸಾಗರದಲ್ಲಿ ಇರುವ  ಒಂದು ಅಪರಿಚಿತ ದ್ವೀಪ.ಅದರ ರಾಣಿ  ಶೆಲಿಕಾ.ಶೆಲಿಕಾ ತನ್ನ ದ್ವೀಪಕ್ಕೆ ಬಂದಾಗ ಅವಳಿಗೆ ಭವ್ಯ ಸ್ವಾಗತ ಸಿಗುತ್ತದೆ.ಅವಳು ತನ್ನ ನೆಲದ ಕಾನೂನುಗಳನ್ನು ಎತ್ತಿಹಿಡಿಯುವ ಪ್ರತಿಜ್ಞೆ ಮಾಡುತ್ತಾಳೆ.ಅಂತಹ  ಒಂದು ಕಾನೂನು ಎಂದರೆ -ವಿದೇಶಿಯರನ್ನು ಕೊಲ್ಲುವುದು.ಆ ದ್ವೀಪದ  ದೈವ ‘ಬ್ರಹ್ಮ’. ಭಾರತೀಯ ಪುರಾಣದ ‘ಬ್ರಹ್ಮ’ನನ್ನು ಒಪೆರಾದ ಈ ಕಾಲ್ಪನಿಕ ಕತೆಯಲ್ಲಿ ಭಾರತಕ್ಕೆ ಸಮೀಪದ  ಒಂದು ಕಾಲ್ಪನಿಕ  ದ್ವೀಪದ ದೇವರು ಎಂದು ಚಿತ್ರಿಸಿದ್ದು ವಿಶೇಷವಾಗಿತ್ತು.ಮೊನ್ನೆಯ ಒಪೆರಾ ಥಿಯೇಟರ್ ನ ಪ್ರದರ್ಶನದ   ಪ್ರೇಕ್ಷಕರಲ್ಲಿ ನಾನು ಒಬ್ಬನೇ ಭಾರತೀಯ ಇದ್ದದ್ದು- ವಾಸ್ಕೋ ದ ಗಾಮ  ಒಪೆರಾದ ಕಾಲ್ಪನಿಕ ದ್ವೀಪದಲ್ಲಿ ಭಾರತದ ‘ಬ್ರಹ್ಮ’ಇದ್ದ ಹಾಗೆ !

ಬ್ರಹ್ಮನ ಪೂಜಾರಿಗಳು ವಾಸ್ಕೋ ದ ಗಾಮಾನನ್ನು ಬಂಧಿಸಿ ,ಬಲಿಕೊಡಲು ಯೋಚಿಸುತ್ತಾರೆ.ಗಾಮಾ ಆ ದ್ವೀಪದ ಅದ್ಭುತಗಳನ್ನು ಕಂಡು ಆಶ್ಚರ್ಯಗೊಳ್ಳುತ್ತಾನೆ.ಅಲ್ಲಿನ ಸೊಬಗನ್ನು ಕಂಡು ಭಾವಾತಿರೇಕದಿಂದ ‘ಓ  ಸ್ವರ್ಗವೇ ‘ ಎಂಬ ಒಪೆರಾ ಹಾಡನ್ನು ಹಾಡುತ್ತಾನೆ.ಶೆಲಿಕಾ -ಗಾಮಾನನ್ನು ತನ್ನ ಗಂಡ ಎಂದು ಹೇಳಿ ,ಆತನ ಪ್ರಾಣ ಉಳಿಸುತ್ತಾಳೆ.ಅದು ನಿಜ ಎಂದು ನೆಲುಸ್ಕೋ ನಿಂದ ಪ್ರಮಾಣ ಮಾಡಿಸುತ್ತಾಳೆ.ಬಳಿಕ ಶೆಲಿಕಾ ಆ ದ್ವೀಪದ ಒಂದು ಮರದ ಹೂವಿನ ರಸವನ್ನು ಗಾಮಾನಿಗೆ ಕುಡಿಯಲು ಕೊಡುತ್ತಾಳೆ.ಆ ಪ್ರೇಮ ವಶೀಕರಣದ ರಸವನ್ನು  ಕುಡಿದ ಕೂಡಲೇ ಶೆಲಿಕಾಳಲ್ಲಿ  ಮೋಹಪರವಶನಾದ ಗಾಮಾ ಅವಳೊಂದಿಗೆ ಕೂಡುತ್ತಾನೆ.ಆಗ ಅಮಲಿನಲ್ಲಿ ಇರುವಾಗ ಅಲ್ಲಿ ವನಿಗೆ ಇನೆಸ್ ಳ ಧ್ವನಿ ಕೇಳಿಸುತ್ತದೆ.ಇನೆಸ್ ಅಲ್ಲಿಗೆ ಗಾಮಾನನ್ನು ಹುಡುಕಿಕೊಂಡು ಬರುತ್ತಾಳೆ.

ಅಂಕ ೫: ದ್ವೀಪದಲ್ಲಿ .

ವಾಸ್ಕೋ ದ ಗಾಮ ಮತ್ತು ಇನೆಸ್ ಅವರ ಸಮಾಗಮದ ಸನ್ನಿವೇಶವು ಶೆಲಿಕಾ ಳಲ್ಲಿ ತಾನು ಮೋಸಹೋದೆ ಎನ್ನುವ ಅರಿವನ್ನು  ಉಂಟುಮಾಡುತ್ತದೆ.ಇಬ್ಬರು  ಪ್ರೇಯಸಿಯರ ಒತ್ತಡಗಳ ನಡುವೆ ವಾಸ್ಕೋ ದ ಗಾಮ ಈಗ ನಿಸ್ಸಹಾಯಕನಾಗಿ ಗುಲಾಮನಂತೆ ನಿಂತುಬಿಡುತ್ತಾನೆ.ಸಾಹಸಿ ,ಭೂಖಂಡಗಳ ಅನ್ವೇಷಕ,ನಾವಿಕ ಗಾಮಾ ಈಗ ಒಬ್ಬ ಅಧೀರ ಅಸಹಾಯಕ ಕೋಡಂಗಿಯಂತೆ  ಕಾಣಿಸುತ್ತಾನೆ.ಈಗ ಕಾಣಿಸುವ ಬಿಕ್ಕಟ್ಟು ಇಬ್ಬರು ಹೆಣ್ಣುಗಳಲ್ಲಿ ಯಾರು ತ್ಯಾಗ ಮಾಡಬೇಕು ಎನ್ನುವುದು .ಕೊನೆಗೂ ತನ್ನ ಪ್ರೇಮವನ್ನು ತ್ಯಾಗಮಾಡುವವಳು ಅಪರಿಚಿತ ದ್ವೀಪವಾಸಿ , ಬುಡಕಟ್ಟು ಜನಾಂಗದ ಹೆಣ್ಣು ಶೆಲಿಕಾ.ಆಕೆ ಗಾಮಾನನ್ನು ಇನೆಸ್ ಜೊತೆಗೆ ಹಡಗಿನಲ್ಲಿ ಕಳುಹಿಸುವ ವ್ಯವಸ್ಥೆ ಮಾಡುತ್ತಾಳೆ.ಇದಕ್ಕಾಗಿ ನೆಲುಸ್ಕೊನನ್ನು ಅವರಿಬ್ಬರನ್ನು  ಹಡಗು ಹತ್ತಿಸಿ ಕಳುಹಿಸಲು ಅಜ್ನಾಪಿಸುತ್ತಾಳೆ.ಮತ್ತೆ ಈಕಡೆಯಲ್ಲಿ ಶೆಲಿಕಾ ವಿಷದ ಹೂಗಳನ್ನು ಬಿಡುವ ಮರದ ಹೂಗಳ ಪರಿಮಳವನ್ನು ಮೂಸುತ್ತಾ ಮೂಸುತ್ತಾ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇವಳ ಸಾವನ್ನು ಕಂಡ ನೆಲುಸ್ಕೋ ತಾನು ಸಾವನ್ನು ಅಪ್ಪಿಕೊಳ್ಳುತ್ತಾನೆ.

ವಾಸ್ಕೋ ದ ಗಾಮಾನನ್ನು ಇತಿಹಾಸಕಾರರು ಅನೇಕ ರೀತಿಯಲ್ಲಿ ಚಿತ್ರಿಸಿದ್ದಾರೆ.ಅವನು ಕ್ರೂರಿಯಾಗಿದ್ದ ,ಅವನು ಭಾರತಕ್ಕೆ ಮೂರು ಬಾರಿ ಬಂದ ಸಂದರ್ಭಗಳಲ್ಲಿ ಕಲ್ಲಿಕೋಟೆಯಲ್ಲಿ ಅನೇಕ ಮಂದಿಯನ್ನು ಕೊಂದ ಎನ್ನುವ ಬಗ್ಗೆ ಇತಿಹಾಸದ ಬರಹಗಳಲ್ಲಿ ವಿವರಗಳು ದೊರೆಯುತ್ತವೆ.ಈ ಒಪೆರಾ ಚರ್ಚಿಸುವ ಒಂದು ಮುಖ್ಯ ಆಶಯ -ಸ್ಥಳೀಯ ಮತ್ತು ಹೊರಗಿನ ಎನ್ನುವ ಪರಿಕಲ್ಪನೆ.ಯುರೋಪಿಯನ್ನರಿಗೆ ಹೊರಗಿನ ನಾಡವರ ಬಗ್ಗೆ ಈರೀತಿಯ ಪೂರ್ವಗ್ರಹ ಇತ್ತು ಎನ್ನುವ ಅಂಶ ಇಲ್ಲಿ ಧ್ವನಿಪೂರ್ಣವಾಗಿ ಪ್ರಸ್ತಾವವಾಗಿದೆ.ವಾಸ್ಕೋ ದ ಗಾಮ ತಾನು ಕಂಡ ಅಪರಿಚಿತ ದ್ವೀಪಕ್ಕೆ ಬಂದಾಗ ಮೊದಲು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಂಡು ಭಾವಪರವಶಗೊಳ್ಳುತ್ತಾನೆ.ಆದರೆ ಅವನ ತಂಡದವರು -ಯುರೋಪಿಯನ್ನರು -ಆ ದ್ವೀಪವನ್ನು ವಶಪಡಿಸಿಕೊಳ್ಳಲು ಬಯಸುತ್ತಾರೆ,ದ್ವೀಪದ ನಿವಾಸಿಗಳನ್ನು ಗುಲಾಮರನ್ನಾಗಿ ಮಾಡಿಕೊಳ್ಳುತ್ತಾರೆ ಇಲ್ಲವೇ ಕೊಲ್ಲುತ್ತಾರೆ.ವಸಾಹತೀಕರಣದ ಪ್ರಕ್ರಿಯೆಯನ್ನು ಇಲ್ಲಿ ಸಾಂಕೇತಿಕವಾಗಿ ಸೂಚಿಸಲಾಗಿದೆ.ಅಧಿಕಾರ ಮತ್ತು ಪ್ರೇಮದ ಮುಖಾಮುಖಿ -ಇಲ್ಲಿ ಚರ್ಚಿತವಾದ ಇನ್ನೊಂದು ಪರಿಕಲ್ಪನೆ. ವಾಸ್ಕೋ ದ ಗಾಮಾನ ,ಯುರೋಪಿಯನ್ನರ ಅಧಿಕಾರ -ಅಪರಿಚಿತ ದ್ವೀಪದಲ್ಲಿ ನಿಷ್ಪ್ರಯೋಜಕ ಆಗುತ್ತದೆ.ಅಧಿಕಾರಸ್ಥರು ಜೈಲಿನಲ್ಲಿ ಅಸಹಾಯಕರು ಆಗುತ್ತಾರೆ.ಕೊನೆಗೂ ಗಾಮಾನನ್ನು ಜೈಲಿನಿಂದ ಬಿಡಿಸುವುದು ಶೆಲಿಕಾ ಅವಳ ಪ್ರೇಮವೇ ಹೊರತು ,ಗಾಮಾನ ಅಧಿಕಾರ ಅಲ್ಲ.ಮತ್ತೆ ಶೆಲಿಕಾ ಮತ್ತು ಇನೆಸ್ ಇವರ ನಡುವಿನ ಪ್ರೇಮದ ಬಿಕ್ಕಟ್ಟಿನಲ್ಲಿ ಗಾಮಾನನ್ನು ಪಾರುಮಾಡುವುದು ಶೆಲಿಕಾ ಅವಳ ಪ್ರೇಮತ್ಯಾಗವೇ ಹೊರತು ಗಾಮಾನ ಅಧಿಕಾರವೂ ಅಲ್ಲ, ಯುರೋಪಿಯನ್ ಹೆಣ್ಣು ಇನೆಸ್ ಳ ಅಪ್ಪನ ಅಧಿಕಾರವೂ ಅಲ್ಲ.

ನಮ್ಮ ಎಲ್ಲರ ಬದುಕು ಕೂಡಾ ಒಂದು ನಿರ್ದಿಷ್ಟ  ಗುರಿ ಗೊತ್ತು ಇಲ್ಲದ , ಅನ್ವೇಷಣೆಯ ಸಮುದ್ರ ಪ್ರಯಾಣ.ಇಂತಹ ಸಾಹಸದ ಯಾನದಲ್ಲಿ ಬಿರುಗಾಳಿಗಳು ಏಳುತ್ತವೆ ,ಕೆಲವರು ಪ್ರಯತ್ನಪೂರ್ವಕ ತೂಫಾನು ಎಬ್ಬಿಸಬಹುದು.ದಾರಿಯಲ್ಲಿ ಅಪರಿಚಿತ ದ್ವೀಪಗಳು ಕಾಣಸಿಗಬಹುದು.ಅಲ್ಲಿನ ನಿವಾಸಿಗಳು ನಮಗಿಂತ ಬೇರೆಯಾಗಿ ಬದುಕುವವರು  ಇರಬಹುದು ,ಅವರನ್ನು ಅನಾಗರಿಕರು ಎನ್ನುವುದು ನಮ್ಮ ಪೂರ್ವಗ್ರಹ.ನಮ್ಮ ಅಧಿಕಾರ ,ಸಂಪತ್ತು ಎಂಬ  ಕಟ್ಟಿಕೊಂಡ ಭ್ರಮೆಯ ಹಡಗುಗಳು ನುಚ್ಚುನೂರಾದಾಗ ನಮ್ಮನ್ನು ಕಾಪಾಡುವವರು ಶೆಲಿಕಾ ಅವಳಂತಹ ಹೆಣ್ಣುಗಳು,ಕತ್ತಲ ಖಂಡದ ಗುಡ್ಡಗಾಡು ಜನರು.ಇದು ವಸಾಹತುಗಳನ್ನು ಕಟ್ಟಿಕೊಂಡ  ಹಿಂದಿನ ಯುರೋಪಿಯನ್ನರಿಗೆ ಮಾತ್ರ ಅಲ್ಲ, ನವವಸಾಹತುಗಳನ್ನು ಜಾತಿ ಧರ್ಮ ಹಣ ಅಧಿಕಾರ ಅಂತಸ್ತುಗಳೆಂಬ  ಹಡಗುಗಳ ರೂಪದಲ್ಲಿ  ಕಟ್ಟಿಕೊಂಡು  ಪ್ರಯಾಣಿಸುವ ನಮ್ಮ   ನಾಡುಗಳ ಎಲ್ಲ ಜನರಿಗೂ ಅನ್ವಯಿಸುತ್ತದೆ.

Photo courtesy :Mainfranken Theater,Wurzburg-Newsletter.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: