ಕಾರ್ಲ್ ಮೈ :ಜೈಲು ಸೇರಿ ಜನಪ್ರಿಯ ಸಾಹಿತಿಯಾದ ಜರ್ಮನ್ ಕಥನ-ಸಾಹಸಿ

Posted on ನವೆಂಬರ್ 20, 2011. Filed under: ಜರ್ಮನಿ, ಜರ್ಮನ್ ಸಾಹಿತ್ಯ | ಟ್ಯಾಗ್ ಗಳು:, , , , , , , , |


ನಿನ್ನೆ ಶನಿವಾರ -ನವಂಬರ ೧೯ ರಂದು -ನಮ್ಮ ವ್ಯೂರ್ತ್ಸ್ ಬುರ್ಗ್ ವಿವಿ  ವಿದೇಶಿ ವಿಜ್ಞಾನಿಗಳ ಕೂಟದ ಪ್ರವಾಸದಲ್ಲಿ ‘ಇಪೋಫೇನ್ ‘ಗೆ ಹೋಗಿದ್ದೆವು. ವ್ಯೂರ್ತ್ಸ್ ಬುರ್ಗ್ ನಿಂದ ೨೮ ಕಿಲೋಮೀಟರ್ ದೂರದಲ್ಲಿ ಪಕ್ಕದ ಕಿತ್ಸಿನ್ಗನ್  ಜಿಲ್ಲೆಯಲ್ಲಿ ಇರುವ ಒಂದು ಹಳೆಯ ಹಳ್ಳಿ -‘ಇಪೋಫೇನ್.’ ( Iphofen ) ಅಲ್ಲಿನ ಮುಖ್ಯ ಆಕರ್ಷಣೆ ಅಲ್ಲಿ ಇರುವ ‘ಕ್ನೌವುಫ್  (Knauf )ಮ್ಯೂಸಿಯಂ .’ ಖಾಸಗಿ ಕುಟುಂಬದವರು ನಡೆಸುವ ಕ್ನೌ ವುಫ್  ಮ್ಯೂಸಿಯಂ ನಲ್ಲಿ ಈಗ ನಡೆಯುತ್ತಿರುವ ( ೬ ನವಂಬರ ೨೦೧೧-೨೨ ಜನವರಿ ೨೦೧೨ ) ‘ಕಾರ್ಲ್ ಮೈ ‘ ಪ್ರದರ್ಶನವನ್ನು ನೋಡುವುದು ನಮ್ಮ ಪ್ರಧಾನ ಉದ್ದೇಶ ಆಗಿತ್ತು.ಸುಮಾರು ನಾಲ್ಕು ಗಂಟೆಗಳ ಕಾಲ ಅಲ್ಲಿ ಕಾರ್ಲ್ ಮೈ ಗೆ ಸಂಬಂಧಿಸಿದ  ಫೋಟೋಗಳು,ಪೇಂಟಿಂಗ್ ಗಳು, ಅವನ ಕಾದಂಬರಿ   ಕತೆ ಪುಸ್ತಕಗಳ ಮುಖಪುಟಗಳು,ಅವನ ಸಾಹಿತ್ಯ ಕೃತಿಗಳಲ್ಲಿ ಉಲ್ಲೇಖಗೊಂಡ ಆಯುಧಗಳು ವೇಷಭೂಷಣಗಳು,ಅವನ ಕೈಬರಹದ ದಾಖಲೆಗಳು,ಅವನು ಬಳಸುತ್ತಿದ್ದ ವಸ್ತುಗಳು,ಅವನ ಪುಸ್ತಕಗಳ ಹಳೆಯ ಮಾದರಿಗಳು, ಅವನ ಕಾದಂಬರಿ ಪ್ರವಾಸ ಸಾಹಿತ್ಯ ಆಧರಿಸಿದ ಸಿನೆಮಾಗಳು- ಹೀಗೆ ನೋಡಿದಷ್ಟೂ ಮುಗಿಯದ ಸಾಹಸ ಗಾಥೆಯ ಅದ್ಭುತ ಲೋಕದಲ್ಲಿ ನಾವೂ ರೋಚಕ ಪ್ರಯಾಣ ಮಾಡಿದೆವು.

ಕಾರ್ಲ್ ಮೈ (೧೮೪೨-೧೯೧೨) ಆಧುನಿಕ  ಜನಪ್ರಿಯ ಸಾಹಿತ್ಯದ ಜರ್ಮನ್ ಲೇಖಕರಲ್ಲಿ ಅಗ್ರಗಣ್ಯನು. ನಿನ್ನೆ ನಮ್ಮ ಪ್ರವಾಸದ ನೇತೃತ್ವ ವಹಿಸಿದ ತಂಡದ ನಾಲ್ವರು  ಜರ್ಮನ್  ಮಹಿಳೆಯರ  ಜೊತೆಗೆ ಕಾರ್ಲ್ ಮೈ ಸಾಹಿತ್ಯದ ಬಗ್ಗೆ  ನಾನು ಮಾತುಕತೆ ನಡೆಸಿದೆ.ಅಂಗೆಲಿಕ , ಡೋರಿಸ್, ಲೋತ್ತೆ ಮತ್ತು ಉರ್ಸುಲ -ಎಲ್ಲರೂ ಐವತ್ತರಿಂದ ಅರುವತ್ತೈದರ ನಡುವಿನ ವಯಸ್ಸಿನವರು.ಅವರೆಲ್ಲರೂ ತಮ್ಮ ಹದಿವಯಸ್ಸಿನಲ್ಲಿ ಕಾರ್ಲ್ ಮೈ ಯ ಕತೆ ಕಾದಂಬರಿ ಪ್ರವಾಸ ಸಾಹಿತ್ಯ ಕೃತಿಗಳನ್ನು ಓದಿ ಬಹಳವಾಗಿ ಮೆಚ್ಚಿಕೊಂಡವರೆಂದು ಹೇಳುತ್ತಾ ತಮ್ಮ ಹಳೆಯ ನೆನಪುಗಳನ್ನು ಮೆಲುಕುಹಾಕಿದರು. ಆದರೆ ಈಗಿನ ಮಕ್ಕಳು ಬಹಳ ಮಂದಿ ಕಾರ್ಲ್ ಮೈ ಕೃತಿಗಳನ್ನು ಓದುತ್ತಿಲ್ಲ ಎಂದು ತಿಳಿಸಿದರು.ಒಂದು ದಾಖಲೆಯ ಪ್ರಕಾರ ಕಾರ್ಲ್ ಮೈಯ ಪುಸ್ತಕಗಳ ಸುಮಾರು ಇಪ್ಪತ್ತು ಕೋಟಿಯಷ್ಟು  ಸಂಖ್ಯೆಯ ಪ್ರತಿಗಳು ಮಾರಾಟ ಆಗಿವೆ.ಆತನ ಅನೇಕ ಕೃತಿಗಳು ಸಿನೆಮಾ ಆಗಿವೆ, ರಂಗಭೂಮಿಯಲ್ಲಿ ಪ್ರದರ್ಶನಗೊಂಡಿವೆ, ಶ್ರವ್ಯ ನಾಟಕಗಳಾಗಿ ರೂಪಾಂತರಗೊಂಡಿವೆ , ಕಾಮಿಕ್ಸ್ ರೂಪದಲ್ಲಿ ಜನಪ್ರಿಯವಾಗಿವೆ.

ಕಾರ್ಲ್ ಮೈ ಹುಟ್ಟಿದ್ದು ೧೮೪೨ ಫೆಬ್ರವರಿ ೨೫ರನ್ದು ಜರ್ಮನಿಯ ಏರ್ನ್ಸ್ತತ್  ಹಲ್ ನಲ್ಲಿ , ಒಂದು ಬಡ ನೇಕಾರರ ಕುಟುಂಬದಲ್ಲಿ.ಮಗುವಾಗಿದ್ದಾಗಲೇ ಆತನಿಗೆ ಕಣ್ಣಿನ ತೊಂದರೆ ಆಗಿ ,ದೃಷ್ಟಿ ದೋಷದ ಸಮಸ್ಯೆ ಆಗಿ ,ಬಳಿಕ ಗುಣವಾಯಿತು.ವಿದ್ಯಾರ್ಥಿ ದೆಸೆಯಲ್ಲಿಯೇ ಕಾರ್ಲ್ ಮೇ , ಕೆಲವು ಸಮಸ್ಯೆಗಳಲ್ಲಿ  ಸಿಕ್ಕುಹಾಕಿಕೊಂಡ.ಅವನು ಶಿಕ್ಷಕ ತರಬೇತಿ ಪಡೆಯುತ್ತಿದ್ದಾಗ ತನ್ನ ರೂಮ್ ಮೇಟ್ ನ ಕಿಸೆಗಡಿಯಾರ ಕದ್ದ ಎಂಬ ಆಪಾದನೆಗೆ ಒಳಗಾಗಿ ,ಆರು ವಾರಗಳ ಕಾಲ ಜೈಲು ಶಿಕ್ಷೆಗೆ ಗುರಿಯಾದ .ಶಿಕ್ಷಕನಾಗುವ ಅವನ ಲೈಸನ್ಸ್ ನ್ನು ಶಾಶ್ವತವಾಗಿ ರದ್ದುಪಡಿಸಲಾಯಿತು. ಬಳಿಕ ಅವನು ಖಾಸಗಿಯಾಗಿ ಮನೆಪಾಠ ಕೊಟ್ಟು, ಕತೆ ಬರೆದು  ಜೀವನ ಸಾಗಿಸಲು ಪ್ರಯತ್ನ ಪಟ್ಟ.ಆದರೆ ಬದುಕಲು ಸಾಕಾಗಲಿಲ್ಲ.ಮತ್ತೆ ಕಾರ್ಲ್ ಮೈ -ಕಳ್ಳತನ ಮತ್ತು ವಂಚನೆಯ ಕೆಲಸಗಳಿಗೆ  ಸುರುಮಾಡಿದ. ಈ ಅಪರಾಧಗಳಿಗಾಗಿ ಆತನಿಗೆ ಮತ್ತೆ ಜೈಲು ಶಿಕ್ಷೆ ವಿಧಿಸಲಾಯಿತು.೧೮೬೫ರಿನ್ದ ೧೮೬೯ರ ವರೆಗೆ ನಾಲ್ಕು ವರ್ಷಗಳ ಕಾಲ ತ್ಸ್ವಿಕೌ ನ  ಓಸ್ತೆರ್ ಸ್ಟೈನ್ ಕಾಸಲ್ ನಲ್ಲಿ ಅವನು ಜೈಲು ವಾಸ ಅನುಭವಿಸಿದ. ಜೈಲಿನಲ್ಲಿ ಅವನ ಸನ್ನಡತೆಯ ಕಾರಣಕ್ಕಾಗಿ ಜೈಲಿನ ಗ್ರಂಥಾಲಯವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅವನಿಗೆ ಒಪ್ಪಿಸಲಾಯಿತು.ಈ  ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕಾರ್ಲ್ ಮೈ , ಜೈಲಿನ ಆ ಗ್ರಂಥಾಲಯದಲ್ಲಿ ಇದ್ದ ಪುಸ್ತಕಗಳನ್ನು ,ಮುಖ್ಯವಾಗಿ ಪ್ರವಾಸಸಾಹಿತ್ಯ ಪುಸ್ತಕಗಳನ್ನು ಎಡೆಬಿಡದೆ ಓದಿದ. ಆಗ ತಾನೂ ಒಬ್ಬ ಲೇಖಕನಾಗಬೇಕು ಎನ್ನುವ ಯೋಚನೆ ಅವನಿಗೆ ಹೊಳೆಯಿತು.ಜೈಲಿನಿಂದ ಬಿಡುಗಡೆ ಆದ ಬಳಿಕವೂ ಒಳ್ಳೆಯ ಬದುಕನ್ನು ನಡೆಸಲು ಅವನಿಗೆ ಸಾಧ್ಯವಾಗಲಿಲ್ಲ.ಆತ ಮತ್ತೆ ಕಳ್ಳತನ ವಂಚನೆಗಳ ಹಳೆಯ ಚಾಳಿಯನ್ನು ಮುಂದುವರೆಸಿದ.ಮತ್ತೆ ಅವನನ್ನು  ಜೈಲಿಗೆ ಹಾಕಲಾಯಿತು.೧೮೭೦ರಿನ್ದ ೧೮೭೪ರವರೆಗೆ ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿ ಇದ್ದ ಅವಧಿಯಲ್ಲಿ ಕಾರ್ಲ್ ಮೈ ಭೇಟಿ ಆದ  ಕೆಥೋಲಿಕ್ ಜೈಲಿನ ಸಂವಾದ ಭೋದಕ ಯೋಹನ್ನೆಸ್ ಕೊಶ್ತ ಎಂಬವನ ಪ್ರಭಾವಕ್ಕೆ ಒಳಗಾದ .ಅದು ಅವನ ಬದುಕಿನ ದಾರಿಯನ್ನು ಬದಲಾಯಿಸಿತು.

ಮತ್ತೆ ಜೈಲಿನಿಂದ ಬಿಡುಗಡೆ ಆದ ಬಳಿಕ ,ಕಾರ್ಲ್ ಮೈ ೧೮೭೪ರಲ್ಲಿ ತನ್ನ ಬರವಣಿಗೆಯನ್ನು ಆರಂಭಿಸಿದ.೧೮೭೪ರಲ್ಲಿ ಪ್ರಕಟವಾದ ಅವನ ಮೊದಲ ಕೃತಿ -Die Rose von Emsthal. ಆ ಕಾಲಘಟ್ಟದಲ್ಲಿ ಜರ್ಮನಿಯಲ್ಲಿ ಕೈಗಾರಿಕೀಕರಣದ ಫಲವಾಗಿ ಪ್ರಕಾಶನ ಸಂಸ್ಥೆಗಳು ಚಲಾವಣೆಗೆ ಬರುತ್ತಿದ್ದವು.ಸಾಕ್ಷರತೆ  ಮತ್ತು ಆರ್ಥಿಕ ಸ್ವಾತಂತ್ರ್ಯದ ಕಾರಣವಾಗಿ ಜರ್ಮನಿಯಲ್ಲಿ ಪ್ರಕಾಶನ ಸಂಸ್ಥೆಗಳು ಪ್ರವರ್ಧಮಾನವಾಗುತ್ತಿದ್ದ ನವೋದಯದ ಕಾಲ ಅದು.ಈ ವಾತಾವರಣದಿಂದಾಗಿ ಕಾರ್ಲ್ ಮೈ ಯ ಬರವಣಿಗೆಗೆ ಅವಕಾಶ ಸಾಕಷ್ಟು ಪ್ರಾಪ್ತವಾಯಿತು.ಲೇಖಕನಾಗಿ ಹಣ ಕೈಸೇರಿತು, ಅವನ ಬದುಕಿಗೆ ಒಂದು ಆಸರೆ ದೊರೆಯಿತು.ಆತ ಅನೇಕ ಮನೋರಂಜನ ಪತ್ರಿಕೆಗಳ ಸಂಪಾದಕತ್ವದ ಜವಾಬ್ದಾರಿ ವಹಿಸಿಕೊಂಡ ; ಅನೇಕ ಲೇಖನಗಳನ್ನು ಬರೆದ ,ಸಂಪಾದಿಸಿದ ಮತ್ತು ಅವನ್ನು  ಪತ್ರಿಕೆಗಳಲ್ಲಿ ಪ್ರಕಟಿಸಿದ. ಅವನು ತನ್ನ ನಿಜ ಹೆಸರಿನಲ್ಲಿ ,ಕಾಲ್ಪನಿಕ ಹೆಸರಿನಲ್ಲಿ , ಕೆಲವೊಮ್ಮೆ ಅನಾಮಧೇಯನಾಗಿ ಲೇಖನಗಳನ್ನು ಬರೆದು ತನ್ನ ಬದುಕಿನ ನೆಲೆಯನ್ನು ಕಂಡುಕೊಂಡ.

ಕಾರ್ಲ್ ಮೈ ಯ ಕಥನಸಾಹಿತ್ಯದಲ್ಲಿ ಕಾದಂಬರಿಗಳು ಮತ್ತು ಪ್ರವಾಸ ಸಾಹಿತ್ಯ ಕೃತಿಗಳು ಮುಖ್ಯವಾದುವು.ಅವನ ಬರವಣಿಗೆಯ ದೊಡ್ಡ ಶಕ್ತಿ ಎಂದರೆ ‘ಫ್ಯಾಂಟಸಿ.’ ಕಲ್ಪನೆ ಮತ್ತು ವಾಸ್ತವಗಳನ್ನು ಅದ್ಭುತವಾಗಿ ಒಟ್ಟುಸೇರಿಸಿ ,ನಿಜವಾಗಿ  ನಡೆದ ಸಂಗತಿಗಳೇ ಎನ್ನುವ ಭ್ರಮೆಯನ್ನು ತನ್ನ ಬರಹಗಳ ಮೂಲಕ ಸೃಷ್ಟಿಸಿದ ಕಾರ್ಲ್ ಮೈ -ವಾಸ್ತವವನ್ನು ಫ್ಯಾಂಟಸಿಯ ಮೂಲಕ ಪಡೆಯುವ ರೋಮಾಂಟಿಕ್ ಮನಸ್ಸುಗಳಿಗೆ ಲಗ್ಗೆಹಾಕಿದ.’ ಸಾಹಸ ‘ ‘ ಅದ್ಭುತ’ ಎನ್ನುವ ಪರಿಕಲ್ಪನೆಗಳಿಗೆ ತನ್ನ ಸಾಹಿತ್ಯದ ಮೂಲಕ ರಕ್ತಮಾಂಸ ತುಂಬಿದ. ಇದಕ್ಕಾಗಿ ಆತ ಆಯ್ಕೆ ಮಾಡಿಕೊಂಡ ಭೂಪ್ರದೇಶಗಳು ಕೂಡಾ ಜರ್ಮನ್ ಓದುಗರಿಗೆ ಅಪರಿಚಿತ ಅಗೋಚರ ಜಗತ್ತುಗಳಾಗಿದ್ದವು. ‘ಹಳೆಯ ಪಶ್ಚಿಮ ಅಮೇರಿಕ’,’ದಕ್ಷಿಣ ಅಮೇರಿಕ’, ‘ಚೀನಾ’ ,’ಮಧ್ಯ ಪ್ರಾಚ್ಯ’-ಹೀಗೆ ತಾನು ಜೀವಮಾನದಲ್ಲಿ ಒಮ್ಮೆಯೂ ಕಾಣದ ಭೂಖಂಡಗಳಲ್ಲಿ ತನ್ನ ಪಾತ್ರಗಳನ್ನೂ ಸೃಷ್ಟಿಸಿ ,ಸಾಹಸದ ಅದ್ಭುತ ಕಥನಗಳನ್ನು ಹೆಣೆದ.ಅಮೇರಿಕನ್ ಇಂಡಿಯನ್ ಜನಾಂಗದ ಪಾತ್ರಗಳು ಅವನ ಕಾದಂಬರಿಗಳ ಬಹಳ ಜನಪ್ರಿಯ ಪಾತ್ರಗಳಾಗಿ ಜರ್ಮನ್ ಯುವಜನಾಂಗದ ಹೀರೋ ಗಳಾಗಿ ಪರಿಣಮಿಸಿದವು. Winnetou  ಮತ್ತು Old Shatterhand  ಅಂತಹ ಎರಡು ಜನಪ್ರಿಯ ಪಾತ್ರಗಳು. ಇವು ಎರಡೂ ಅವನ ಕಾದಂಬರಿಗಳ ಕಾಲ್ಪನಿಕ ನಾಯಕ ಪಾತ್ರಗಳು .Kara Ben Nemsi ಮತ್ತು   Hadschi Halef Omar ಅಂತಹ ಇನ್ನೆರಡು ಕಾಲ್ಪನಿಕ ಜನಪ್ರಿಯ ಪಾತ್ರಗಳು.

ಫ್ಯಾಂಟಸಿಯನ್ನು ತನ್ನ ಕಥನದ ಮೂಲದ್ರವ್ಯವನ್ನಾಗಿ ಸಾಹಿತ್ಯ ರಚಿಸಿದ ಕಾರ್ಲ್ ಮೈ ,ತಾನು ಅಂತಹ ಅನುಭವವನ್ನು ಪಡೆದಿದ್ದೆ ಎಂದು ಹೇಳಿಕೊಳ್ಳುತ್ತಿದ್ದ.ಆದರೆ ಅವನು ಆ ಜಗತ್ತುಗಳಲ್ಲಿ ಭೌತಿಕವಾಗಿ ಪ್ರಯಾಣ ಮಾಡಿಯೇ ಇರಲಿಲ್ಲ.ಆತ ೧೮೯೯-೧೯೦೦ರಲ್ಲಿ ಈಜಿಪ್ಟ್ ಮತ್ತು ಸುಮಾತ್ರಗಳಲ್ಲಿ  ಪ್ರವಾಸಮಾಡಿದ. ಆಮೇಲೆ ಅವನ ಬರವಣಿಗೆಯಲ್ಲಿ ಹೊಸ ತಿರುವು ಕಾಣಿಸಿಕೊಂಡಿತು.ಅವನು ಸಂಕೀರ್ಣ ಮತ್ತು ಅನ್ಯೋಕ್ತಿ ರೂಪದ ಸಾಹಿತ್ಯ ನಿರ್ಮಾಣ ಮಾಡಲು ತೊಡಗಿದ.’ಮಾನವಕುಲದ ಪ್ರಶ್ನೆ’ ಯನ್ನು ಎತ್ತಿಕೊಂಡು ಆತ ಕೆಡುಕಿನಿಂದ ಒಳಿತಿನ ಕಡೆಗೆ ಮನುಷ್ಯರು ಏರುವ ವಿಷಯವನ್ನು ಕೇಂದ್ರೀಕರಿಸಿ ಪುಸ್ತಕಗಳನ್ನು ಬರೆದ.ಯುದ್ಧ ಹೋರಾಟಗಳ ಕಥನ ಬರೆಯುತ್ತಿದ್ದ ಕಾರ್ಲ್ ಮೈಯ ಬರವಣಿಗೆಯು  ಶಾಂತಿಯೆಡೆಗೆ  ಮನುಷ್ಯರ ಪ್ರಯಾಣದ ದಿಕ್ಕಿನಲ್ಲಿ ಚಲಿಸಿತು.

ಕಾರ್ಲ್ ಮೈಯ ಕಥನ ಸಾಹಿತ್ಯದಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿದ್ದ ‘ಅನಾಮಧೇಯ  ನಾನು ‘ಎನ್ನುವ ನಿರೂಪಕನ ಸ್ಥಾನಕ್ಕೆ  ‘ವೀಕ್ಷಕ ‘ಮತ್ತು ‘ವರದಿಗಾರ’ರ  ಪ್ರವೇಶ ಆಯಿತು.’ಪ್ರಯಾಣ ‘ ಮತ್ತು ‘ಸಾಹಸ ‘ ಇವು ನಮ್ಮ ಹೊರಗಿನ ,ಅಪರಿಚಿತ ಲೋಕದ ಫ್ಯಾಂಟಸಿಗಳೇ  ,ಇಲ್ಲವೇ ನಮ್ಮ  ಒಳಗೆಯೇ ನಾವು ಪ್ರಯಾಣ ಮಾಡಿ ಕಂಡುಕೊಳ್ಳಬೇಕಾದ ಅದ್ಭುತ ಸತ್ಯಗಳೇ ? ಕಣ್ಣಿನ ದೋಷದ ಮಗು ಕಾರ್ಲ್ ಮೈ -ಸಾಗಿದ ಪ್ರಯಾಣ ,ಮಾಡಿದ ಸಾಹಸಗಳು, ಬಡತನ, ಕಳ್ಳತನ,ವಂಚನೆ ,ಮತ್ತೆ ಮತ್ತೆ ಜೈಲು ,ಬರವಣಿಗೆಯೇ ದುಡಿಮೆ,ಬದುಕಲು ಸಾಹಿತ್ಯ ನಿರ್ಮಾಣ ,ಹಣ ಮತ್ತು ಜನಪ್ರಿಯತೆ – ಮುಂದೇನು ?

ಇಪೋಫೇನ್ ನ ಕೌಫ್ ಮ್ಯೂಸಿಯಂನ ಒಂದು ಕೋಣೆಯಲ್ಲಿ ಭಾರತದ ಬುದ್ಧ ಕುಳಿತಿದ್ದ. ಪದ್ಮಾಸನದಲ್ಲಿ ಕುಳಿತುಕೊಂಡು ಧ್ಯಾನಮುದ್ರೆಯಲ್ಲಿ ಇದ್ದ ಗಾಂಧಾರ ಶೈಲಿಯ ಬುದ್ಧ.

ಬುದ್ಧ ನಗುತ್ತಿದ್ದ.

ನಾನು ನಿನ್ನೆ ಮ್ಯೂಸಿಯಂ ನಲ್ಲಿ ತೆಗೆದ ಫೋಟೋಗಳು ಇಲ್ಲಿ ಇವೆ.ಅವನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ  ಕ್ಲಿಕ್ ಮಾಡಿರಿ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

2 Responses to “ಕಾರ್ಲ್ ಮೈ :ಜೈಲು ಸೇರಿ ಜನಪ್ರಿಯ ಸಾಹಿತಿಯಾದ ಜರ್ಮನ್ ಕಥನ-ಸಾಹಸಿ”

RSS Feed for ಬಿ ಎ ವಿವೇಕ ರೈ Comments RSS Feed

Sir,
I have not read Karl May, but after reading your post & the character sketch of the writer i am all curious.
Your posts are always enriching. Thank you.

Thank you for the reading and comments.


Where's The Comment Form?

Liked it here?
Why not try sites on the blogroll...

%d bloggers like this: