ಜರ್ಮನಿಯಿಂದ ಮಕ್ಕಳಿಗಾಗಿ ಕೆಲವು ಚಿತ್ರಗಳು

Posted on ನವೆಂಬರ್ 14, 2011. Filed under: ಜರ್ಮನಿ | ಟ್ಯಾಗ್ ಗಳು:, , , , |


ಮೊನ್ನೆ ಶನಿವಾರ -ನವಂಬರ ೧೨ರನ್ದು-ನಮ್ಮ ವ್ಯೂರ್ತ್ಸ್ ಬುರ್ಗ್ ವಿಶ್ಯವಿದ್ಯಾಲಯದ ವಿದೇಶಿ ವಿಜ್ಞಾನಿಗಳ ಪ್ರವಾಸ ತಂಡದ ಜೊತೆಗೆ ಫ್ರಾಂಕ್ ಫರ್ತ್ ನ ಸೇನ್ಕೆನ್ ಬೆರ್ಗ್ ಜೈವಿಕ ಇತಿಹಾಸ ದ ಮ್ಯೂಸಿಯಂ ಗೆ  ಹೋಗಿದ್ದಾಗ ,ನಾನು ತೆಗೆದ ಚಿತ್ರಗಳು ಇಲ್ಲಿ ಇವೆ .ಇವು  ನಮ್ಮ ಎಲ್ಲ ಮಕ್ಕಳಿಗಾಗಿ. Senckenberg -World of Biodiversity ,Museum of Natural History -ಯೂರೋಪಿನ ಅತಿ ದೊಡ್ಡ ಜೈವಿಕ ಇತಿಹಾಸದ ವಸ್ತುಸಂಗ್ರಹಾಲಯಗಳಲ್ಲಿ  ಒಂದು.೫೦೦೦ಕ್ಕಿನ್ತ ಹೆಚ್ಚಿನ ಸಂಖ್ಯೆಯ  ,ವೈವಿಧ್ಯಮಯ ,ಜಗತ್ತಿನ ಬೇರೆ ಬೇರೆ ದೇಶಗಳ ಪಳೆಯುಳಿಕೆಗಳು ,ಮಾದರಿಗಳು,ವೈಜ್ಞಾನಿಕ ವಿವರಗಳು ಇಲ್ಲಿ ಇವೆ.

ಕೆಳಗಿನ ಚಿತ್ರಗಳಲ್ಲಿ ಇರುವ ಡಯೋನಿಸರ್ ಗಳಲ್ಲಿ ಒಂದು- ಜಗತ್ತಿನ ಅತಿ ಹಳೆಯ ಡಯೋನಿಸರ್ ಒಂದರ ನಿಜವಾದ ಪಳಿಯುಳಿಕೆ, ಪ್ರದರ್ಶನದ ಮಾದರಿ ಅಲ್ಲ.ಹಾಗೆಯೇ ಈಜಿಪ್ಟಿನ ಎರಡು ಮಕ್ಕಳ ‘ಮಮ್ಮಿ’ ಕೂಡಾ ಈಜಿಪ್ಟಿನಿಂದಲೇ ತಂದ ಅಪೂರ್ವ ಸಂಗ್ರಹ. ಇನ್ನೊಂದು ,ಈ ಚಿತ್ರದಲ್ಲಿ ಕಾಣುವ ಜೀವಂತ ನಿದರ್ಶನ -ಕುದುರೆಗಳು ಮಿಲಿಯಗಟ್ಟಲೆ ವರ್ಷಗಳ ಹಿಂದೆ ಹೇಗೆ ಇದ್ದುವು ಎಂಬ ಪಳಿಯುಳಿಕೆ.ಚಿಕ್ಕದಾಗಿ ,ಕುರಿಗಳ ಆಕಾರದಲ್ಲಿ ಇರುವ ಅತಿ ಪ್ರಾಚೀನ ಕುದುರೆಗಳ ಪಳೆಯುಳಿಕೆ ಇದು.

ಇಲ್ಲಿನ ಚಿತ್ರಗಳಲ್ಲಿ ಕೊನೆಯ ಸಾಲಿನ ಹಕ್ಕಿಗಳ ಚಿತ್ರಗಳು ಮ್ಯೂಸಿಯಂ ನವು ಅಲ್ಲ.ಮ್ಯೂಸಿಯಂ ನ ಹೊರಗಡೆ ನಾನು ಮತ್ತು  ಈಜಿಪ್ಟಿನ ನನ್ನ ಸ್ನೇಹಿತ ಜೈವಿಕ ವಿಜ್ಞಾನಿ ಅಹಮ್ಮದ್  ಸುತ್ತಾಡಿದಾಗ ಸಣ್ಣ ಕೊಳದ ಬಳಿ ಕಣ್ಣಿಗೆ ಬಿದ್ದ ಹಕ್ಕಿಗಳನ್ನು ನನ್ನ ಕ್ಯಾಮೆರಾದಲ್ಲಿ  ಸೆರೆ ಹಿಡಿದದ್ದು.

ಮಮ್ಮಿಗಳು ಒಳಗೆ ಮಲಗಿವೆ.ಡಯಾನಿಸರ್ ಗಳ ಅಸ್ಥಿಪಂಜರಗಳು ಒಳಗೆ ನೇತಾಡುತ್ತಿವೆ.ಕುದುರೆಗಳ ಪೂರ್ವಜರ ಆಕಾರಗಳು  ಕುರಿಗಳ ಹಾಗೆ ಒಳಗೆ ನೆಗೆಯುತ್ತಿವೆ.ಹಾವು,ಮೀನು,ಹಕ್ಕಿ,ಆನೆ,ಮೊಸಳೆ ಗಳ ಅಸ್ಥಿಪಂಜರಗಳು  ಗಾಜಿನ ಕಪಾಟುಗಳ ಒಳಗೆ  ಇವೆ.

ಹೊರಗೆ ಹಕ್ಕಿಗಳು ನೀರಲ್ಲಿ ಸ್ವಚ್ಚಂದವಾಗಿ ಈಜಾಡುತ್ತಿವೆ,ಜರ್ಮನಿಯ ಚಳಿಗೆ ಮುದುಡಿಕೊಂಡು ನಸು ಬಿಸಿಲಿನಲ್ಲಿ ಚಳಿ ಕಾಯಿಸುತ್ತಿವೆ.ನಾಳೆ ತಾವೂ ಪಳೆಯುಳಿಕೆ ಗಳಾಗುತ್ತೇವೆ, ಗಾಜಿನ ಕಪಾಟಿನಲ್ಲಿ ಅಸ್ಥಿಪಂಜರ ಆಗುತ್ತೇವೆ ಎಂಬ ಚಿಂತೆ ಅವುಗಳಿಗೆ ಇಲ್ಲ.

‘ತಟ್ಟು ಚಪ್ಪಾಳೆ ಪುಟ್ಟ ಮಗು’ -ಕನ್ನಡದ ಒಳ್ಳೆಯ ಕತೆಗಾರ ಬೊಳುವಾರು ಅವರು ಸಂಪಾದಿಸಿರುವ ಕನ್ನಡ ಮಕ್ಕಳ ಪದ್ಯಗಳ ಅದ್ಭುತ ಸಂಕಲನ.’ಮಕ್ಕಳ ದಿನಾಚರಣೆ ‘ಯ ಹೆಸರಿನಲ್ಲಿ ಆ ಪುಸ್ತಕದ ಕವನಗಳನ್ನು ಓದಿ,ಹಾಡಿ,ಕುಣಿಯಿರಿ. ನೀವೂ  ಹಕ್ಕಿಗಳಂತೆ ನಿಸರ್ಗದ ನಡುವೆ ಸಂತಸಪಡಬಹುದು.

Make a Comment

ನಿಮ್ಮ ಟಿಪ್ಪಣಿ ಬರೆಯಿರಿ

Liked it here?
Why not try sites on the blogroll...