ಶರತ್ಕಾಲದ ಚಿತ್ರಗಳು :ಒಣಗುವ ಮರಗಿಡಗಳು ,ಬೀಳುವ ಎಲೆಗಳು,ಮುಳುಗುವ ಸೂರ್ಯ

Posted on ನವೆಂಬರ್ 7, 2011. Filed under: ಜರ್ಮನಿ, ನಿಸರ್ಗ, ವ್ಯೂರ್ತ್ಸ್ ಬುರ್ಗ್ | ಟ್ಯಾಗ್ ಗಳು:, , , |


ಹಸುರು ಎಲೆಗಳು ಬಣ್ಣ ಬದಲಿಸುತ್ತವೆ

ಹಳದಿ  ಕೆಂಪು ಕಂದು .

ಗಾಳಿ ಬೀಸುತ್ತದೆ  ಸಿಳ್ಳೆ ಹಾಕುತ್ತಾ

ಎಲೆಗಳೆಲ್ಲ

ಸಾಗುತ್ತವೆ

ತೇಲುತ್ತಾ

ಕೆಳಕ್ಕೆ.

ಶರತ್ಕಾಲದ ಬಗ್ಗೆ ಇರುವ ಒಂದು ಜನಪ್ರಿಯ ಇಂಗ್ಲಿಶ್ ಕವನದ ಕನ್ನಡ ಅನುವಾದ ಇದು.

ಜರ್ಮನಿಯ ಸಹಿತ ಯುರೋಪ್ ಮತ್ತು ಪಶ್ಚಿಮದ ದೇಶಗಳಲ್ಲಿ ಋತುಗಳ ಕಲ್ಪನೆಯಲ್ಲಿ ಶರತ್ಕಾಲ (Autumn) ಕ್ಕೆ ಒಂದು ವಿಶಿಷ್ಟ ಸ್ಥಾನ ಇದೆ.ಜರ್ಮನಿಯಲ್ಲಿ  ಸಪ್ಟಂಬರ ,ಅಕ್ಟೋಬರ ,ನವಂಬರ -ಈ ಮೂರು ತಿಂಗಳು ಸೇರಿದರೆ ಶರತ್ಕಾಲ.ಅದರ ಹಿಂದಿನ ಮೂರು ತಿಂಗಳ ಅವಧಿ (ಜೂನ್,ಜುಲೈ,ಆಗಸ್ಟ್ ) -ಬೇಸಿಗೆಕಾಲ ( Summer).ಶರತ್ಕಾಲದ ಬಳಿಕದ ಮೂರು ತಿಂಗಳ( ದಶಂಬರ ,ಜನವರಿ,ಫೆಬ್ರವರಿ ) ಋತು- ‘ಚಳಿಗಾಲ'(Winter ).ಅದು ಕಳೆದ ಬಳಿಕ ಮುಂದಿನ ಮೂರು ತಿಂಗಳು -ಮಾರ್ಚ್,ಎಪ್ರಿಲ್,ಮೇ -ವಸಂತ ಕಾಲ(Spring).Autumn (ಶರತ್ಕಾಲ ) ಇದನ್ನು   Fall ಎಂದೂ ಕರೆಯುತ್ತಾರೆ.( ಜರ್ಮನ್ ಭಾಷೆಯಲ್ಲಿ  Herbst ). ಈ ಋತುವಿನಲ್ಲಿ ಮರಗಿಡಗಳ ಎಲೆಗಳೆಲ್ಲ ಹಳದಿ,ಕೆಂಪು ,ಕಂದು ಬಣ್ಣಕ್ಕೆ ತಿರುಗಿ,ಒಣಗಿ ,ತರಗೆಲೆಗಳಾಗಿ ಒಂದೊಂದಾಗಿ ಕೆಳಕ್ಕೆ ಉದುರುವ ‘ಬೀಳುಗಾಲ’ ಇದು. ಎಲೆಗಳು ಒಣಗುವ ಕಾಲ ಆದ್ದರಿಂದ ‘ಒಣಗಾಲ ‘ ಎನ್ನಬಹುದೇನೋ .

೨೦೦೯ರ ಅಕ್ಟೋಬರದಲ್ಲಿ ನಾನು ಜರ್ಮನಿಯ ವ್ಯೂರ್ತ್ಸ್ ಬುರ್ಗ್ ಗೆ ಬಂದಾಗ ಇಲ್ಲಿ ಶರತ್ಕಾಲ ಆಗಲೇ ಆರಂಭ ಆಗಿತ್ತು.ಆಗ ಚಳಿಯೂ ಸಾಕಷ್ಟು ಇತ್ತು.ಶರತ್ಕಾಲ ಮತ್ತು ಚಳಿಗಾಲಗಳ ವ್ಯತ್ಯಾಸ ಆಗ ನವಂಬರ ವೇಳೆಗೆ ನನಗೆ ಹೆಚ್ಚು ಗೊತ್ತಾಗಲಿಲ್ಲ.ಮರಗಿಡಗಳು ಎಲೆಗಳನ್ನು ಕಳಕೊಳ್ಳುವುದನ್ನು ಕಂಡು ವಿಷಾಧವಾಯಿತು .ಆದರೆ ಅವೆಲ್ಲ ಮತ್ತೆ ವಸಂತಕಾಲದಲ್ಲಿ ಚಿಗುರುತ್ತವೆ ಎಂದು ತಿಳಿದು ಸಮಾಧಾನ ಆಯಿತು.ಆಗ ನಾನು ಬರೆದ ಕವನ ‘ಎತ್ತಣ ಚಳಿ ,ಎತ್ತಣ ನಾಚಿಕೆ’ .ಅದು  ಮೊದಲು ನನ್ನ ಬ್ಲಾಗಿನಲ್ಲಿ ಪ್ರಕಟವಾಯಿತು.( ನವಂಬರ ೨೨,೨೦೦೯) .ಮತ್ತೆ ಅದನ್ನು ‘ಉದಯವಾಣಿ ಸಾಪ್ತಾಹಿಕ’ ದಲ್ಲಿ ಪ್ರಕಟಿಸಿದರು. ಎರಡು ವರ್ಷದ ಹಿಂದಿನ ನೆನಪಿಗಾಗಿ ಆ ಕವನವನ್ನು ಮತ್ತೆ ಇಲ್ಲಿ ಕೊಡುತ್ತಿದ್ದೇನೆ.

ಎತ್ತಣ ಚಳಿ   ಎತ್ತಣ  ನಾಚಿಕೆ

ಏಕೆ ಉದುರಿಸುವಿರಿ ಬಟ್ಟೆಗಳನು ಹೀಗೆ

ತರುಗಳೇ  ನಿಮಗಿದು ತರವೇ ?

ಮರಗಟ್ಟುವ ಚಳಿಯಲಿ  ಮರನಾಮಧಾರಿಗಳು ನೀವು

ಮರೆಯಿಲ್ಲದಿರುವುದು ಸರಿಯೇ ?

ತರುಣ ತರುಣಿಯರು

ಸದಾ  ಕಳಚುವ ಧ್ಯಾನಿಗಳು

ಬಟ್ಟೆಗಳ ಬೆಟ್ಟ ಕಟ್ಟಿಕೊಂಡು ಬಟ್ಟೆಗಾಣದೆ

ಜಂಗಮರಾಗಿಯೂ  ಗುಹೆ ಸೇರುತ್ತಿರುವಾಗ

ತರುಸ್ಥಾವರರು  ನೀವು

ದಿಗಂಬರರಾಗುವುದು ಸರಿಯೇ ?

ಚಳಿಯ ನಾಚಿಕೆಯೇ   ನಾಚಿಕೆಯ ಚಳಿಯೇ

ಪಿಸುಗುಟ್ಟುತಿವೆ ಏನನು ನೀವು ಚೆಲ್ಲಿದ ಪತ್ರಗಳು ?

ಒಂದೊಂದು ಪತ್ರಕ್ಕೂ ಒಂದೊಂದು ಕತೆಯುಂಟು

ಕತೆ ಮಾಡಿದವರು ಎಲ್ಲೋ  ಕತೆ ಕಟ್ಟಿದವರು ಎಲ್ಲೋ  ಕಾಣೆ.

ಒಂದು ಭವವ ಕಳೆದು ಇನ್ನೊಂದು ಹೊಸಭವಕೆ

ಸಾಗುವ ಸಡಗರದ ನಡುವಿನ ಅಂತರಧ್ಯಾನ ನಿಮ್ಮದು .

ಭವ ಪರಿಭವದ ಗೊಡವೆ ಇಲ್ಲದೆ ಬೇಕೆನಿಸಿದಾಗ

ಹಾಸುವ ಹೊದ್ದುವ ಹೊಸೆಯುವ ಹೊಸಕುವ

ಅವಸರದ ಮಂದಿ ನಮಗೆ

ಎತ್ತಣ ಚಳಿ  ಎತ್ತಣ ನಾಚಿಕೆ ?

Rainer Maria Rilke (1875-1926) ಜರ್ಮನ್ ಭಾಷೆಯಲ್ಲಿ ಕವನ ಬರೆದ ಜೆಕ್ ರಿಪಬ್ಲಿಕ್ ದೇಶದ ಕವಿ. ಈ ಶರತ್ಕಾಲದ ಇಲ್ಲಿನ ನೆನಪಿಗಾಗಿ ರೈನರ್ ಮರಿಯಾ ರಿಲ್ಕೆ ಯು  ‘ಶರತ್ಕಾಲ ‘ದ ಬಗ್ಗೆ ಬರೆದ  ಒಂದು ಕವನವನ್ನು ಕನ್ನಡಕ್ಕೆ ಭಾಷಾಂತರಿಸಿ ಇಲ್ಲಿ ಕೊಡುತ್ತಿದ್ದೇನೆ :

ಉದುರುತ್ತಿವೆ ಎಲೆಗಳು ಎಲ್ಲೋ  ದೂರದಿಂದ ಎಂಬಂತೆ

ಸತ್ತು ಉದುರುತ್ತಿವೆಯೋ  ಆರ್ಕಿಡ್ ಗಳು ಬಾನಿನಂಚಿನಿಂದ  ಎಂಬಂತೆ

ಎಲೆ ಎಲೆಯೂ ಉದುರುತಿದೆ ಜೀವಕಳೆ ಇಲ್ಲ ಎಂಬಂತೆ

ಭಾರವಾದ ಭೂಮಿಯೂ ಕೆಳಕ್ಕೆ ಉರುಳುತ್ತಿದೆ ಇಂದು ರಾತ್ರಿ

ಎಲ್ಲ ತಾರೆಗಳನು  ಬಿಟ್ಟು ಏಕಾಂಗಿಯಾಗಿ .

ಬೀಳುತ್ತಿದ್ದೇವೆ ನಾವೆಲ್ಲಾ

ಕೆಳಕ್ಕೆ ಬೀಳುತ್ತಿದೆ ಈ ಕೈ

ನೋಡಿ ಇನ್ನೊಂದರ ಕಡೆಗೆ -ಅದೂ ಸೇರಿಕೊಂಡಿದೆ ಎಲ್ಲದರ ಜೊತೆಗೆ .

ಆದರೂ ಆದರೂ ಅಲ್ಲೊಬ್ಬರು ಇರುತ್ತಾರೆ

ಅವರ ಕೈಗಳೋ  ಸದಾ ಶಾಂತ

ಬೀಳುವುದೆಲ್ಲವನು  ಅವು ಹಿಡಿದೆತ್ತಿ ಕೊಳ್ಳುತ್ತವೆ , ಅದು ಅನಂತ !

ಈ ದಿನ ಭಾನುವಾರ ,ನವಂಬರ ಆರು, ಇಲ್ಲಿ ವ್ಯೂರ್ತ್ಸ್ ಬುರ್ಗ್ ನಲ್ಲಿ ಸೂರ್ಯ ಮಿರಮಿರನೆ ಮಿಂಚುತ್ತಿದ್ದ.ಹೇಳಿಕೊಳ್ಳುವಂತಹ ಚಳಿ ಇರಲಿಲ್ಲ.ಮಧ್ಯಾಹ್ನ ಸುಮಾರು ಎರಡು ಗಂಟೆಯ ಕಾಲ ಮರಗಿಡಗಳ ಬುಡಗಳಲ್ಲಿ,ಸಣ್ಣ ಬೆಟ್ಟಗಳ ಬಳಿಯಲ್ಲಿ ,ಮಾಯಿನ್ ನದಿಯ ದಂಡೆಯಲ್ಲಿ ಸುಮ್ಮನೆ ಸುತ್ತಾಡಿದೆ -ಶರತ್ಕಾಲದ ಕವನಗಳ ಓದಿನ ಗುಂಗಿನಲ್ಲಿ ಏಕಾಂಗಿಯಾಗಿ.ಜೊತೆಗಿದ್ದ ಕೆಮರಾದಲ್ಲಿ ಮಿಟುಕಿಸಿದ ಚಿತ್ರಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ.ಅವುಗಳಿಗೆ ವಿವರಣೆ ಅಗತ್ಯವಿಲ್ಲ.ಮರಗಳ ಅಡಿಯಲ್ಲಿ ನಿಂತುಕೊಂಡು ಆಕಾಶಕ್ಕೆ ಮುಖಮಾಡಿ ತೆಗೆದ ಕೆಲವು ಚಿತ್ರಗಳು ನನಗೆ ಇಷ್ಟ ಆದುವು.ಹಾಗೆಯೇ ಬಹಳ ದೂರದಲ್ಲಿ ಹಕ್ಕಿಗಳು ಮಾಯಿನ್ ಹೊಳೆಯಲ್ಲಿ ಈಜುವ ನೋಟ ಕೂಡಾ.ಇಲ್ಲಿ ಈಗ ಸಂಜೆ ಸುಮಾರು ನಾಲ್ಕು -ನಾಲ್ಕೂವರೆಗೆ ಕತ್ತಲೆ ಆವರಿಸುತ್ತದೆ.ಹಾಗಾಗಿ ಸೂರ್ಯ ಮುಳುಗುವ ಮತ್ತು ಮುಳುಗಿದ ತತ್ಕ್ಷಣದ ಚಿತ್ರಗಳನ್ನು ಕೂಡಾ ಇಲ್ಲಿ ಕೊನೆಯಲ್ಲಿ ಹಾಕಿದ್ದೇನೆ.’ಉದುರುವ’ ‘ಬೀಳುವ’  ‘ ಕೆಳಕ್ಕೆ ಸರಿಯುವ’  ಕಾಲದ ನಿರ್ಗಮನದ ರಂಗಸ್ಥಳದಲ್ಲಿ ಎಲ್ಲರೂ ಪಾತ್ರಧಾರಿಗಳು .ಯಕ್ಷಗಾನದ ಪರಿಭಾಷೆಯಲ್ಲಿ ಹೇಳುವುದಾದರೆ ಇದು ‘ಮಂಗಳ ಪದ  ‘ಹಾಡುವುದು.

ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Liked it here?
Why not try sites on the blogroll...

%d bloggers like this: