ಜರ್ಮನಿಯಲ್ಲಿ ನಮ್ಮ ದೀಪಾವಳಿ :ಜ್ಞಾನದ ಬೆಳಕಿನ ಮನೆಯಲ್ಲಿ ಬೆಸೆಯುವ ಬೆಳಕಿನ ಹಬ್ಬ

Posted on ಅಕ್ಟೋಬರ್ 29, 2011. Filed under: ಜರ್ಮನಿ | ಟ್ಯಾಗ್ ಗಳು:, , , , |


ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ನಮ್ಮ ಇಂಡಾಲಜಿ ವಿಭಾಗದಲ್ಲಿ ಮೊನ್ನೆ ಅಕ್ಟೋಬರ ೨೭ ಗುರುವಾರ ರಾತ್ರಿ ದೀಪಾವಳಿ ಹಬ್ಬದ ಸಡಗರ. ಕಳೆದ ಎರಡು ವರ್ಷಗಳಲ್ಲಿ ವಿಭಾಗದ ದೀಪಾವಳಿಯಲ್ಲಿ ಪಾಲುಗೊಂಡಿದ್ದೆ. ಆದರೆ ಈ ವರ್ಷದ್ದು ಎಲ್ಲ ರೀತಿಯಲ್ಲೂ ತುಂಬಾ ಸಂಭ್ರಮದ ದೊಡ್ಡ ಹಬ್ಬ. ನಮ್ಮ ನಿರೀಕ್ಷೆಯನ್ನು ಮೀರಿ ನೂರ ಐವತ್ತರಷ್ಟು ಜನರು ಬಂದಿದ್ದರು.ನಮ್ಮ ವಿಭಾಗದ  ಕಾರಿಡಾರಿನಲ್ಲಿ ಮುಖ್ಯ ಕಾರ್ಯಕ್ರಮ ನಡೆಯಿತು.ಅಲ್ಲ್ಲಿ ಕಾಲಿಡಲು ತೆರಪು ಇರಲಿಲ್ಲ.ನಮ್ಮ ಇಂಡಾಲಜಿ ವಿಭಾಗದ ವಿದ್ಯಾರ್ಥಿಗಳು ಈ ದೀಪಾವಳಿ ಕಾರ್ಯಕ್ರಮದ ಪೂರ್ಣ ಜವಾಬ್ದಾರಿ ವಹಿಸಿಕೊಂಡು ಅಚ್ಚುಕಟ್ಟಾಗಿ ದೀಪಾವಳಿ ಆಚರಿಸಿದರು.ಪ್ರಾಧ್ಯಾಪಕರಾದ ಬ್ರೂಕ್ನರ್ ಮತ್ತು ಬಾರ್ಬರ ಲಾತ್ಜ್ ಅವರ ಮಾರ್ಗದರ್ಶನದಲ್ಲಿ ನಮ್ಮ ವಿಭಾಗದ ಕಚೇರಿ ಸಹಾಯಕಿ ಶ್ರೀಮತಿ ಉಲ್ರಿಕೆ ಎಂಗೆಲ್  ಅವರು ವಿದ್ಯಾರ್ಥಿನಿಯರಾದ ಕತ್ರಿನ್ ಹಾಲ್ಜ್ ,ಲಲಿತ ದೀಕರ್ಸ್, ಲೀಸಾ ,ಅನ್ನೆತ್ತೆ , ಆಕಿ -ಸಹಿತ ಹುಡುಗಿಯರ ಒಂದು ಸಮರ್ಥ ಪಡೆಯನ್ನೇ ಸಿದ್ಧಮಾಡಿದ್ದರು.

ವ್ಯೂರ್ತ್ಸ್ ಬುರ್ಗ್ ನ ಇಂಡೋ ಜರ್ಮನ್ ಸಂಘದ ಅಧ್ಯಕ್ಷೆ ಪ್ರೊ.ಬ್ರೂಕ್ನರ್ ,ಉಪಾಧ್ಯಕ್ಷ ಪ್ರೊ.ಕ್ರೆಫ್ತ್, ವಿವಿ ಗ್ರಾಜುಯೇಟ್ ಸ್ಕೂಲ್ ನಿರ್ದೇಶಕ ಪ್ರೊ.ಶ್ರೋದೆರ್ ಕೊಯೇಹ್ನೆ,ಜರ್ಮನಿಯ ಹಿರಿಯ ಜೈನ ವಿದ್ವಾಂಸ ವಯೋವೃದ್ಧ ಪ್ರೊ.ಬೌಲಿ ದಂಪತಿಗಳು, ಈ ವಿವಿಯಲ್ಲಿ ಅಧ್ಯಯನ  ನಡೆಸುತ್ತಿರುವ ಬೇರೆ ಬೇರೆ ವಿಭಾಗಗಳ ಭಾರತೀಯ ವಿದ್ಯಾರ್ಥಿಗಳು,ಅವರ ಕುಟುಂಬದವರು,ಮೀನಾಕ್ಷಿ -ಪ್ರೊ.ಸ್ಟೆಫಾನ್ ಮಾದರಿಯ ಕೆಲವು  ಜರ್ಮನ್-ಭಾರತೀಯ ದಾಂಪತ್ಯದ ಜೋಡಿಗಳು ,ಇಂಡಾಲಜಿ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ,ಅವರ ಜರ್ಮನ್ ಹಾಗೂ ಭಾರತೀಯ ಸ್ನೇಹಿತರು ,ಜೊತೆಗೆ ತಮ್ಮ ಉತ್ಸಾಹದಿಂದ ಸಮಾರಂಭಕ್ಕೆ ಕಳೆ ತಂದ ಕೆಲವು ಮಕ್ಕಳು  – ಹೀಗೆ ಎಲ್ಲಿ ನೋಡಿದರೂ ಜನ ಸಂದಣಿ.ಕಾರಿಡಾರಿನಲ್ಲಿ ಆರಂಭದಲ್ಲಿ ನಡೆದ ಪೂಜೆ ಮತ್ತು ಕಲಾ ಕಾರ್ಯಕ್ರಮಗಳನ್ನು ಬಹಳ ಮಂದಿ ನಿಂತುಕೊಂಡೇ ಆನಂದಿಸಿದರು.

ದೀಪಾವಳಿಯ ಪೂಜೆಯ ಕೈಂಕರ್ಯದ ಹಿರಿಯರಾದ ನೀಲು ಸಿನ್ಹ ಮಧ್ಯಾಹ್ನವೇ ತಮ್ಮ ಜರ್ಮನ್ ಹೆಂಡತಿ ಬಾರ್ಬರಾ ಅವರ ಜೊತೆಗೆ ಬಂದಿದ್ದರು.( ನೀಲು ಸಿನ್ಹ ಭಾರತದಿಂದ

ಸುಮಾರು ನಲುವತ್ತೈದು ವರ್ಷಗಳ ಹಿಂದೆ ಇಂಜಿನಿಯರ್ ಆಗಿ ಜರ್ಮನಿಗೆ ಬಂದು ,ಇಲ್ಲಿ  ಬಾರ್ಬರಾ ಅವರನ್ನು ಮದುವೆಯಾಗಿ  ಲೋಹ್ರ್ ನಲ್ಲಿ ವಾಸವಾಗಿರುವ ಸಂಗತಿಯನ್ನು ನನ್ನ ಬ್ಲಾಗ್ ಬರಹದಲ್ಲಿ ಕೊಟ್ಟಿದ್ದೇನೆ . ನೋಡಿ : ‘ ಹಿಮಗಿರಿಯ ನೆನಪಿನಲ್ಲಿ ಕಾಡಿನ ನಡುವಿನ ಲೋಹ್ರ್ ನಲ್ಲಿ ಒಂದು ದಿನ’. ೨೦.೦೭.೨೦೧೧ ).ವಿಭಾಗದಲ್ಲಿ ನನ್ನ ಕೊಠಡಿಯಲ್ಲಿ ತಮ್ಮ ಚಳಿಯ ಸೂಟು ಬೂಟು ಕಳಚಿ ಭಾರತೀಯ ವೇಷ ಧರಿಸಿ ,ದೀಪಾವಳಿ ಪೂಜೆಗೆ ಸಿದ್ಧರಾದರು.ಅಲ್ಲಿ ನೆರೆದಿದ್ದ ಬಹುಮಂದಿಗೆ ಜರ್ಮನ್ ಭಾಷೆ ಬರುತ್ತಿದ್ದ ಕಾರಣ ಅವರ ವಿವರಣೆ ಮತ್ತು ಕಾರ್ಯಕ್ರಮ ಬಹುಮಟ್ಟಿಗೆ ಜರ್ಮನ್ ಭಾಷೆಯಲ್ಲೇ ನಡೆಯಿತು.ಭಾರತೀಯ ವಿದ್ಯಾರ್ಥಿಗಳೆಲ್ಲ ಹೆಚ್ಚಾಗಿ ಹಿಂದಿ ಮಾತಾಡುವವರು ಆದರೂ ಇಲ್ಲಿ ಬಂದು ಜರ್ಮನ್ ಕಲಿತಿದ್ದಾರೆ.ಸಿನ್ಹ ಅವರು ಇಂಟರ್ ನೆಟ್ ಮೂಲಕ ಭಾರತದ ಭೂಪಟ ತೋರಿಸಿ ,ಎಲ್ಲ ರಾಜ್ಯಗಳನ್ನು ಗುರುತಿಸಿ ,ಆಯಾ ರಾಜ್ಯಗಳ ಭಾಷೆ ಮತ್ತು ಅಲ್ಲಿನ ದೀಪಾವಳಿ ಆಚರಣೆಗಳ ವೈವಿಧ್ಯವನ್ನು ಸಂಕ್ಷಿಪ್ತವಾಗಿ ವಿವರಿಸಿದರು.ಬಳಿಕ ಗಣಪತಿಯಿಂದ ತೊಡಗಿ ಎಲ್ಲ ದೇವರುಗಳ ಚಿತ್ರಗಳನ್ನು ತೋರಿಸಿ,ಲಕ್ಷ್ಮಿ ಪೂಜೆಯ ಸಹಿತ ಪೂಜೆಗಳ ವಿವರಣೆ ಕೊಟ್ಟರು.ಕೆಲವು ದೇವರುಗಳ ಫೋಟೋಗಳನ್ನು ಅವರೇ ತಂದು ಅಲಂಕರಿಸಿ ಇಟ್ಟಿದ್ದರು.ಅವರು ಆರತಿ ಮಾಡುತ್ತಿದ್ದಾಗ ಅವರ ಇಬ್ಬರು ಜರ್ಮನ್ ಸಂಜಾತ ಮೊಮ್ಮಕ್ಕಳು ಹುಡುಗಿಯರು ಗಂಟಾಮಣಿಗಳನ್ನು ಆಡಿಸುತ್ತಿದ್ದರು.ಜರ್ಮನ್ ಹೆಂಡತಿ ಬಾರ್ಬರ ಗಂಡನಿಗೆ ಪೂಜೆಯಲ್ಲಿ ಸಹಕರಿಸುತಿದ್ದರು.ಆರತಿ ಆಗಿ ,ಸಿಹಿ ಪ್ರಸಾದ ವಿತರಣೆ ಆಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲು ಡಾ.ಅರುಣಾ ಭಟ್ ಅವರಿಂದ ದೇವರನಾಮದ ಹಾಡುವಿಕೆ.ಮೂಲತಃ  ವಿಟ್ಲದ ಬಳಿಯ ಕುಟುಂಬದ  ,ಬೆಂಗಳೂರಲ್ಲಿ ಬೆಳೆದ ಅರುಣಾ ಅವರು  ಬಿಡಿಎಸ್ ಪದವಿ ಪಡೆದು, ಜರ್ಮನಿಯಲ್ಲಿ ವೂರ್ತ್ಸ್ ಬುರ್ಗ್ ನಲ್ಲಿ ಜರ್ಮನ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿರುವ ಆದರ್ಶ ಕಾಂಚನ ಅವರನ್ನುಮದುವೆಯಾಗಿ  ಒಂದು ವರ್ಷದಿಂದ ಜರ್ಮನಿಯಲ್ಲಿ ಇದ್ದಾರೆ.ಶಾಸ್ತ್ರೀಯ ಸಂಗೀತವನ್ನು ಚೆನ್ನಾಗಿ ಅಭ್ಯಾಸ ಮಾಡಿರುವ ಅರುಣಾ ನಮ್ಮ ವಿಭಾಗದ ಕಾರ್ಯಕ್ರಮಗಳಲ್ಲಿ ಪ್ರೀತಿಯಿಂದ ಭಾಗವಹಿಸುತ್ತಿದ್ದಾರೆ.ಮೊನ್ನೆ ಕಾರ್ಯಕ್ರಮಕ್ಕೆ ಆದರ್ಶ ಮತ್ತು ಅರುಣಾ ಬಂದಿದ್ದರು.

ಬಳಿಕ ಜರ್ಮನ್ ಹುಡುಗಿ ಕತ್ರಿನ್ ಬಿಂದರ್ ಅವರಿಂದ ಕಥಕ್ ನೃತ್ಯ.ಕತ್ರಿನ್ ಬಗ್ಗೆ ಹಿಂದೆ ನನ್ನ ಬ್ಲಾಗ್ ನಲ್ಲಿ ಮೊಗ್ಲಿಂಗ್ -೨೦೦ ಕಾರ್ಯಕ್ರಮ ಸ್ತುತ್ ಗಾರ್ತ್ ನಲ್ಲಿ ನಡೆದಾಗ ವಿವರಗಳನ್ನು ಕೊಟ್ಟಿದ್ದೇನೆ .( ನೋಡಿ : ‘ ಮೊಗ್ಲಿಂಗ್ ೨೦೦-ನೋಡಿ  ನಿರ್ಮಲ ಜಲ ಸಮೀಪದಿ ಮಾಡಿಕೊಂಡರು ಪರ್ಣಶಾಲೆಯ ‘ ೩೧.೦೫.೨೦೧೧ ).ಸಾಮಾನ್ಯವಾಗಿ  ಯಕ್ಷಗಾನ ಪ್ರದರ್ಶನ ಮಾಡುವ ಕತ್ರಿನ್  ಈಬಾರಿ ತಾವು ಇತ್ತೀಚಿಗೆ ಕಲಿತು ,ಇಂಗ್ಲೆಂಡಿನಲ್ಲಿ ಪ್ರದರ್ಶನ ಕೊಡುತ್ತಿರುವ ಕಥಕ್ ನ್ನು ತುಂಬಾ ಪರಿಣಾಮಕಾರಿಯಾಗಿ ಪ್ರದರ್ಶಿಸಿದರು.ಬಳಿಕ ನಮ್ಮ ವಿಭಾಗದ ಈವರ್ಷದ ಹೊಸ ವಿದ್ಯಾರ್ಥಿನಿ ಒಬ್ಬಳ ಯೋಗ ಪ್ರದರ್ಶನ ಬಹಳ ಮೆಚ್ಚುಗೆ ಪಡೆಯಿತು.ಈ ಜರ್ಮನ್ ವಿದ್ಯಾರ್ಥಿನಿ ಯೋಗ ಕಲಿಸುವ ಶಕ್ತಿ ಹೊಂದಿದ್ದಾಳೆ ಎಂದು ಆ ಮೇಲೆ ಗೊತ್ತಾಯಿತು.ಜರ್ಮನಿಯಲ್ಲಿ ಯೋಗ ಶಿಕ್ಷಣ ಬಹಳ ಜನಪ್ರಿಯ ಆಗುತ್ತಿದೆ.ಅನೇಕ ಜರ್ಮನರು ಯೋಗ ತರಗತಿಗಳನ್ನು ನಡೆಸುತ್ತಿದ್ದಾರೆ.

ಬಳಿಕ ಊಟಕ್ಕೆ ಏಳಬೇಕೆಂಬ ಘೋಷಣೆ ಆಯಿತು.ಇಲ್ಲಿನ ದೀಪಾವಳಿಯಲ್ಲಿ ಭಾರತೀಯ ಊಟಕ್ಕೆ ಬಹಳ ಮಹತ್ವ ಇದೆ.ಮೊನ್ನೆ ದಿನ  ದೀಪಾವಳಿಯ ಸುಮಾರು  ನೂರ ಐವತ್ತು ಮಂದಿಯ ಊಟಕ್ಕೆ ಯಾವುದೇ  ಉಪಾಹಾರ ಗೃಹಕ್ಕಾಗಲೀ ಕೇಟರಿಂಗ್ ಗಾಗಲೀ ಆರ್ಡರ್ ಕೊಟ್ಟಿರಲಿಲ್ಲ. ಇಲ್ಲಿನ ಸಂಪ್ರದಾಯದಂತೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಕನಿಷ್ಠ  ಒಂದು ಬಗೆಯ ಭಾರತೀಯ ಆಹಾರವನ್ನು ಸಿದ್ಧಮಾಡಿ ತರಬೇಕು.ಅದು ಏನು ಆಹಾರ ಎನ್ನುವುದನ್ನು ಮುಂಚಿತವಾಗಿ ವಿಭಾಗದ ನೋಟಿಸ್  ಬೋರ್ಡಿನಲ್ಲಿ ಬರೆಯಬೇಕು.ಹಾಗಾಗಿ ನಮಗೆ ದೀಪಾವಳಿಗೆ ಮೊದಲೇ ಊಟದಲ್ಲಿ ಏನೇನು ಇದೆ ಎನ್ನುವ ಮಾಹಿತಿ ಬಹುಮಟ್ಟಿಗೆ ಸಿಗುತ್ತಿತ್ತು.ಮೊನ್ನೆ ಬಹಳ ಮಂದಿ ಬರುವಾಗ ಒಂದೊಂದು ಪಾತ್ರೆಯನ್ನು ಎತ್ತಿಕೊಂಡು ಬರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.ಆದರೆ ಮೊನ್ನೆಯ ದೀಪಾವಳಿಯ ಊಟತಿಂಡಿಯ ವೈವಿಧ್ಯ ವಿಪರೀತವಾಗಿತ್ತು.ಸುಮಾರು ಇಪ್ಪತೈದು ಬಗೆಯ ಆಹಾರ ಪದಾರ್ಥಗಳು ಸಾಲುಗಟ್ಟಿ ನಮ್ಮನ್ನು ಕಾಯುತ್ತಿದ್ದುವು.ಅನ್ನದ ಬಹುರೂಪಗಳು,ತರಕಾರಿಯ ಬಹುಬಗೆಯ ಪಲ್ಯಗಳು,ಪದಾರ್ಥಗಳು ,ಸಿಹಿತಿಂಡಿಗಳು,ಖಾರದ ತಿಂಡಿಗಳು ಇದ್ದುವು.ಇಲ್ಲಿನ ದೀಪಾವಳಿಯ ಊಟದಲ್ಲಿ ಮದ್ಯಮಾಂಸಗಳಿಗೆ ಪ್ರವೇಶವಿಲ್ಲ ಎನ್ನುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ.

ಊಟದ ಸಮಯವೇ ಇಲ್ಲಿ ಮಾತುಕತೆಯ ಅವಕಾಶದ ಕಾಲ.ಹೀಗಾಗಿ ತಟ್ಟೆಯನ್ನು ಹಿಡಿದುಕೊಂಡು ಸುತ್ತಾಡುತ್ತಾ ,ಯೋಗಕ್ಷೇಮ ವಿಚಾರಿಸುತ್ತಾ ,ಒಡನಾಡಲು ಈ ದೀಪಾವಳಿ ಬಹಳ ಸಹಕಾರಿ.ಇಷ್ಟೆಲ್ಲಾ ಜನರು ಒಟ್ಟಿಗೆ ಕಲೆಯುವುದು ನಮ್ಮಲ್ಲಿನ ಈ ದೀಪಾವಳಿಯಲ್ಲಿ ಮಾತ್ರ.ಮಾತು ,ನಗು,ಹರಟೆ,ಪ್ರೀತಿ,ಹಾಸ್ಯ ,ಮೆಚ್ಚುಗೆ ,ಕೆಲಸದ ಕತೆಗಳು,ನಾಳೆ ಎಲ್ಲಿಗೆ ,ಕ್ರಿಸ್ ಮಸ್ ರಜೆಯಲ್ಲಿ ಏನು ಮಾಡುವುದು,ಓದಿದ್ದು ಬರೆದದ್ದು ಏನು ,ಮಕ್ಕಳ ಶಾಲೆ,ಅವರ ತುಂಟಾಟ -ಹೀಗೆ ಹೀಗೆ …ನಗೆ ಚಟಾಕಿ ,ಮಾತಿನ ಪಟಾಕಿ ಸಿಡಿಯುತ್ತಿರುತ್ತದೆ.  ಏಕೆಂದರೆ ಇಲ್ಲಿ ನಮ್ಮ ಊರಿನಂತೆ ಕಟ್ಟಡದ  ಒಳಗೆ ಪಟಾಕಿ ಉರಿಸುವುದಿಲ್ಲ.

ಮತ್ತೆ ಹಾಡು ಕುಣಿತ ಆರಂಭ.ಬಾಲಿವುಡ್ ನ ಹಿಂದಿ ಹಾಡುಗಳನ್ನು ಹಾಡುವುದು,ಅದಕ್ಕೆ ನಮ್ಮ ಜರ್ಮನ್ ಹುಡುಗಿಯರು ಹೆಜ್ಜೆ ಹಾಕಿ ಕುಣಿಯಲು ಆರಂಭ .ಅರುಣಾ ಹಿಂದಿ ಹಾಡುಗಳನ್ನು ಚೆನ್ನಾಗಿ ಹಾಡಿದರು .ನವುರಾದ ಮಧುರವಾದ ಹಾಡು ಮತ್ತು ಕುಣಿತ.ಚಳಿ ತಾರಕಕ್ಕೇರುವ ಮೊದಲೇ ನನ್ನ  ವಸತಿಯನ್ನು  ಸೇರಿಕೊಳ್ಳಲು  ಹೊರಗೆ ಬಂದೆ.ವಿಭಾಗದ ಹೊರಗೆ ಮೆಟ್ಟಲುಗಳ ಬಳಿ ಹಣತೆಗಳು ಇನ್ನೂ ಉರಿಯುತ್ತಿದ್ದುವು.ಈಗಾಗಲೇ ನಾನು  ತೆಗೆದ ಫೋಟೋಗಳ ಮಾಲೆಗೆ  ಕೊನೆಯ ಕೊಂಡಿ ಎಂದು ಅದರದ್ದೂ ಒಂದು ಬೆಳಕನ್ನು ಒಳಗೆ ಕರೆದುಕೊಂಡೆ.

ಕೊರೆಯುವ ಚಳಿಯಲ್ಲಿ ನಿದಾನವಾಗಿ  ಹೆಜ್ಜೆ ಹಾಕತೊಡಗಿದೆ .ಹೊರಗೆ ಗಾಢ ಕತ್ತಲೆ, ಒಳಗೆ ಬೆಸೆಯುವ ಬೆಳಕಿನ ಬೀಜಗಳು.

ದೀಪಾವಳಿಯ ಭಿನ್ನ ನೋಟಗಳ ನನ್ನ ಫೋಟೋಗಳು  ಇಲ್ಲಿ ಇವೆ.ಅವುಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿರಿ.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: