ಕಪ್ಪುಲೋಕದ ಎರಡು ಚಿತ್ರಗಳು :ಕತ್ತೈಕೂತ್ತುವಿನ ಕುಣಿಯುವ ಮಕ್ಕಳು ಮತ್ತು ಕಚ್ಚಾತೈಲದಿಂದ ಕರಗುವ ಮಿದುಳುಗಳು

Posted on October 27, 2011. Filed under: ವ್ಯೂರ್ತ್ಸ್ ಬುರ್ಗ್ | Tags: , , , , , , |


ಕಳೆದ ಎರಡು ದಿನಗಳಲ್ಲಿ ವ್ಯೂರ್ತ್ಸ್ ಬುರ್ಗಿನ ತಣ್ಣನೆಯ ಹವೆಯಲ್ಲಿ ಎರಡು ಕಾರ್ಯಕ್ರಮಗಳಲ್ಲಿ  ಪಾಲುಗೊಂಡೆ.ಮೊನ್ನೆ ಅಕ್ಟೋಬರ ೨೫ ರನ್ದು ಮಂಗಳವಾರ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ನಮ್ಮ ಇಂಡಾಲಜಿ ವಿಭಾಗದಲ್ಲಿ ಡಾ.ಹನ್ನೆ ದಿ ಬ್ರೂಯಿನ್ ಅವರ ಎರಡು ಉಪನ್ಯಾಸಗಳು ಇದ್ದುವು :ತಮಿಳುನಾಡಿನ ಕಾಂಚೀಪುರಂನಲ್ಲಿ ಇರುವ ‘ಕತ್ತೈಕೂತ್ತು  ಸಂಘಂ ‘ ಮತ್ತು ಅದರ ಚಟುವಟಿಕೆಗಳ ಬಗ್ಗೆ ;ಮತ್ತೆ ಆ ಸಂಘಂ ವತಿಯಿಂದ ನಡೆಸುವ ಮಕ್ಕಳ ತರಬೇತಿ ಶಾಲೆ ‘ಗುರುಕುಲಂ’ ಬಗ್ಗೆ. ಹನ್ನೆ ಅವರು ಹಾಲೆಂಡ್ ನವರು.ಇಂಡಾಲಜಿಯಲ್ಲಿ ಎಂ ಎ ಮತ್ತು ಪಿ ಎಚ್ ಡಿ ಮಾಡಿ ,ಬಳಿಕ ಅಕಾಡೆಮಿಕ್ ಕ್ಷೇತ್ರ ಬಿಟ್ಟು ,ತಮಿಳುನಾಡಿಗೆ ಬಂದು ,ಅಲ್ಲಿ ತೆರುಕೂತ್ತು ಮಾದರಿಯ ಕತ್ತೈಕೂತ್ತು ಜನಪದ ರಂಗಭೂಮಿಯ ಪ್ರಸಿದ್ಧ ಕಲಾವಿದ ರಾಜಗೋಪಾಲ್ ರನ್ನು ಮದುವೆಯಾಗಿ ,ನಶಿಸಿಹೊಗಿದ್ದ ಆ ರಂಗಭೂಮಿಯ ಕಲೆಗೆ ಪುನರುಜ್ಜೀವ ಕೊಡಲು ,’ಕತ್ತೈಕೂತ್ತು ಸಂಘಂ ‘ನ್ನು ೧೯೯೦ರಲ್ಲಿ ಸ್ಥಾಪಿಸಿ ,ಅಲ್ಲಿನ ಹಳ್ಳಿಯಲ್ಲಿ ವಾಸಿಸಿ ಕೆಲಸಮಾಡುತ್ತಿರುವವರು.  ‘ಕತ್ತೈಕೂತ್ತು’ ಎಂಬ ಜನಪದ ರಂಗಭೂಮಿ ಪ್ರಕಾರವೇ ಉಳಿದಿಲ್ಲ ಎಂದು ತಮಿಳುನಾಡಿನ ಜಾನಪದ ವಿದ್ವಾಂಸರು ಹೇಳುತ್ತಿದ್ದಾಗ ,ರಾಜಗೋಪಾಲ್  ತಮ್ಮ ಪರಂಪರೆಯ ತಿಳುವಳಿಕೆಯನ್ನು ಮಕ್ಕಳಿಗೆ ಕಲಿಸುತ್ತಾ ಅದಕ್ಕೆ ಗ್ರಾಮೀಣ ಪರಿಸರದಲ್ಲಿ ಜನಪ್ರಿಯತೆ ಮತ್ತು ಗೌರವವನ್ನು  ತಂದುಕೊಡುವಲ್ಲಿ ಅವರ ಡಚ್ ಹೆಂಡತಿ ಹನ್ನೆ ಅವರ ತ್ಯಾಗ ಮತ್ತು ಸಾಧನೆ ಅಪಾರವಾಗಿದೆ.ತಮಿಳುನಾಡಿನ ಪುಂಜಾರಸಂತಂಕಲ್ ಎಂಬ ಕುಗ್ರಾಮದಲ್ಲಿ ತಮ್ಮ ಸಂಸ್ಥೆಯನ್ನು ಸ್ಥಾಪಿಸಿ ,ಪರಂಪರೆ ಮತ್ತು ಪರಿಷ್ಕರಣಗಳ ಮೂಲಕ ಈ ಜನಪದ ರಂಗಭೂಮಿಯ ಕಲಾವಿದರಿಗೆ ಸಾಮಾಜಿಕ ಮತ್ತು ಅರ್ಥಿಕ ನೆಲೆಯನ್ನು ಗಟ್ಟಿಗೊಳಿಸಲಾಗಿದೆ.ಇದರ ಜೊತೆಗೆ ರಾಜಗೋಪಾಲ್ -ಹನ್ನೆ ದಂಪತಿಗಳು ೨೦೦೨ರಲ್ಲಿ ಆರಂಭಿಸಿದ ಒಂದು ಹೊಸ ಪ್ರಯೋಗ ‘ಗುರುಕುಲಂ’. ಇದರಲ್ಲಿ ಗ್ರಾಮೀಣ ಮಕ್ಕಳಿಗೆ ಮತ್ತು ಯುವಕ ಯುವತಿಯರಿಗೆ ಪರಂಪರಾಗತ ಜನಪದ ಕಲೆಗಳಲ್ಲಿ ತರಬೇತಿ ಕೊಡುವುದರೊಂದಿಗೆ ,ನಿಗದಿತ ಪಾಠ ಪಟ್ಟಿಯ ಶಾಲಾ ಶಿಕ್ಷಣವನ್ನೂ ಕೊಡಲಾಗುತ್ತಿದೆ.ತಮಿಳುನಾಡಿನಲ್ಲಿ ಒಂದರಿಂದ ಹತ್ತನೆಯ ತರಗತಿಯ ವರೆಗಿನ ಈ ಬಗೆಯ ವಿಶೇಷ ಶಾಲೆಗೆ  ‘ಪರ್ಯಾಯ ಶಿಕ್ಷಣ’ ದ ಶಾಲೆ ಎಂದು ಮಾನ್ಯತೆಯನ್ನು ಕೊಡಲಾಗಿದೆ  .ತಮಿಳು ಮಾಧ್ಯಮದಲ್ಲಿ ನಡೆಯುವ ಈ ಶಾಲೆಯಲ್ಲಿ ಪಾಠ ಪಟ್ಟಿ ಪ್ರತ್ಯೇಕವಾಗಿ ಇದೆ.ಅದರಲ್ಲಿ ಕತ್ತೈಕೂತ್ತು ಸಹಿತ ಜನಪದ ರಂಗಪ್ರಕಾರಗಳ ಜೊತೆಗೆ ,ನಾಟಕ ,ಸಂಗೀತ ,ಚಿತ್ರದಂತಹ ಕಲಾ ಕ್ಷೇತ್ರಗಳ ಶಿಕ್ಷಣವನ್ನೂ ಕೊಡಲಾಗುತ್ತಿದೆ.ಇಂಗ್ಲಿಷನ್ನು ಒಂದು ಭಾಷೆಯಾಗಿ ಮತ್ತು ಕಂಪ್ಯೂಟರನ್ನು ಒಂದು ತಂತ್ರಜ್ನಾನವನ್ನ್ನಾಗಿ ಕಲಿಸಿಕೊಡುತ್ತಾರೆ.ಅನಕ್ಷರಸ್ಥ  ಹಳ್ಳಿಗರ ಮಕ್ಕಳು ಉಚಿತವಾಗಿ ಇಲ್ಲಿ ಶಿಕ್ಷಣ ಪಡೆಯುವುದರ ಜೊತೆಗೆ ,ಉಚಿತವಾಗಿ ಊಟ ಮತ್ತು ವಸತಿಯ ಸೌಲಭ್ಯವನ್ನು ಪಡೆಯುತ್ತಾರೆ.ಸರಕಾರದ ಸಹಾಯಧನ ಇಲ್ಲದೆ ,ದಾನಿಗಳ ನೆರವಿನಿಂದಲೇ ಈ ಶಾಲೆ ನಡೆಸಬೇಕಾಗಿರುವುದರಿಂದ ,ಹಣಸಂಗ್ರಹ ನಿರಂತರದ ಸಮಸ್ಯೆಯಾಗಿದೆ ಎಂದು ಹನ್ನೆ  ಹೇಳುತ್ತಾರೆ.ಆದರೆ ಹಳ್ಳಿಯ ಬಡ ಕಪ್ಪು ಮಕ್ಕಳು ಸಂತಸ ಸಂಭ್ರಮದಿಂದ ಹಾಡಿ ಕುಣಿಯುವಾಗ , ಸಂಸ್ಥೆ ಶಾಲೆ ನಡೆಸುವ ನೋವೆಲ್ಲ ಮರೆಯಾಗುತ್ತದೆ ಎನ್ನಲು ಅವರು  ಮರೆಯುವುದಿಲ್ಲ.

‘ಕತ್ತೈಕೂತ್ತು ಸಂಘಂ ‘ ಮಾಹಿತಿಯನ್ನು ಅದರ ಅಂತರ್ಜಾಲ ತಾಣದಲ್ಲಿ ನೋಡಬಹುದು: http://www.kattaikkuttu.org

ನಿನ್ನೆ ರಾತ್ರಿ ,ಅಕ್ಟೋಬರ ೨೬ರನ್ದು ನಮ್ಮ ವಿಶ್ವವಿದ್ಯಾಲಯದ  ಅತಿಥಿಗೃಹದಲ್ಲಿ ಈಬಾರಿಯ ಚಳಿಗಾಲದ ಸೆಮೆಸ್ಟರ್ ನ ಒಂದು ಸಮ್ಮಿಲನದ ಕೂಟ ಏರ್ಪಾಡಾಗಿತ್ತು .ಕೂಟದ ಸಂಘಟನೆಯ ಅಂಗೆಲಿಕಾ,ಡೋರಿಸ್ ,ಊತ್ತೆ ಯವರಂತಹ ಹಿರಿಯ ಹೆಂಗುಸರು ತುಂಬಾ ಉತ್ಸಾಹದಿಂದ ನಮ್ಮನ್ನೆಲ್ಲ ಬರಮಾಡಿಕೊಂಡರು.ಹೆಚ್ಚಿನವರು ಪರಿಚಿತರು.ಜಪಾನ್ ,ರೊಮಾನಿಯ ,ಇರಾನ್, ನಾರ್ವೆ,ಈಜಿಪ್ಟ್,ನೈಜೀರಿಯ,ಜರ್ಮನಿ  ಮತ್ತು ಭಾರತದಿಂದ ನಾನೊಬ್ಬ.ನಿನ್ನೆಯದು ಮುಕ್ತ ಸಭೆಯಾದುದರಿಂದ ಪ್ರತ್ಯೇಕ ಕಾರ್ಯಸೂಚಿ ಇರಲಿಲ್ಲ.ಪ್ರತಿಯೊಬ್ಬರೂ ತಮ್ಮ ಪಕ್ಕ ಕುಳಿತವರಿಗೆ ಅಸಾಂಪ್ರದಾಯಿಕ ಪ್ರಶ್ನೆ  ಕೇಳುವುದು ಮತ್ತು ಅದಕ್ಕೆ ಉತ್ತರಿಸುವುದು -ಇದೊಂದು  ಸರಪಣಿಯಂತೆ ಸಾಗಿತು.ಅನೇಕ ಬದುಕಿನ ವೈಯಕ್ತಿಕ ವಿಷಯಗಳು ಮುಜುಗರವಿಲ್ಲದೆ ಹೊರಬಂದುವು.ಈಗ ಗಂಡ ಹೆಂಡತಿಯರಾಗಿ ಇರುವವರು ಮೊದಲು ಕಂಡದ್ದು ಪ್ರೀತಿಸಿದ್ದು ಮೊದಲಾಗಿ ಆರಂಭವಾಗಿ ,ಗಂಡನನ್ನು ಬಿಡಬೇಕಾಗಿ ಬಂದ ಅನಿವಾರ್ಯತೆಗಳ ಬಗ್ಗೆ ಹೆಂಗುಸರು ನೇರವಾಗಿ ಮನ ಬಿಚ್ಚಿ ಮಾತಾಡಿದರು.ನನಗೆ ಭಾರತದ ಬಹುಭಾಷೆಗಳ ಬಗ್ಗೆ ಅಂಗೆಲಿಕ ಪ್ರಶ್ನೆ ಕೇಳಿದ ಕಾರಣ ,ಅನುಭವ ಮತ್ತು ಅಕಾಡೆಮಿಕ್ ಸೇರಿಸಿ ಉತ್ತರಿಸಿದೆ.ಮುಜುಗರದ ಪ್ರಶ್ನೆ  ಇರಲಿಲ್ಲ.

ನೈಜೀರಿಯದ  ಡಾಕ್ಟರ್ ಜೇಮ್ಸ್ ಒಲೋಪದೆ ತಮ್ಮ ಮೂರು ವರ್ಷಗಳ ಹುಮ್ಬೋಲ್ತ್ ಸಂಶೋಧನೆ ಮುಗಿಸಿ ,ಬರುವ ಭಾನುವಾರ ತಮ್ಮ ದೇಶ ನೈಜೀರಿಯಕ್ಕೆ ಹಿಂದಿರುಗುತ್ತಿರುವ ವಿಷಯ ತಿಳಿಸಿದರು.ಎಲ್ಲರೂ ಅವರಿಗೆ  ಶುಭವಿದಾಯ ಕೋರಿದೆವು .ಜೇಮ್ಸ್ ಒಲೋಪದೆ ಅವರು ತಮ್ಮ ದೇಶ ನೈಜೀರಿಯದ ಬಗ್ಗೆ ನಮ್ಮ ಗೆಸ್ಟ್ ಹೌಸ್ ಕೂಟದಲ್ಲಿ  ಹಿಂದೊಮ್ಮೆ ಮಾತಾಡಿದ್ದನ್ನು ನನ್ನ ಬ್ಲಾಗಿನಲ್ಲಿ ಹಿಂದೆ ಕೊಟ್ಟಿದ್ದೆ.ಮೇ ೯,೨೦೧೧ ರ ದಿನದ ಬರಹ :’ ಡಾ.ಜೇಮ್ಸ್ ಒಲೋಪದೆ ತೋರಿಸಿದ ನೈಜೀರಿಯ’.

ಒಲೋಪದೆ ಅವರು ಇಲ್ಲಿ  ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿವಿಯಲ್ಲಿ ನಡೆಸಿದ ಸಂಶೋಧನೆಯ ವಿವರ ಮತ್ತು ಫಲಿತದ  ಬಗ್ಗೆ ನಾನು ಅವರಲ್ಲಿ ಪ್ರಶ್ನೆ ಕೇಳಿದೆ.ಒಲೋಪದೆ ಅವರ ಉತ್ತರ ಕತ್ತಲೆಯ ಲೋಕಕ್ಕೆ ನಮ್ಮನ್ನು ಕೊಂಡೊಯ್ಯಿತು.” ನೈಜೀರಿಯ  ದೇಶದ ಮುಖ್ಯ ಆರ್ಥಿಕ ಸಂಪನ್ಮೂಲ ಕಚ್ಚಾತೈಲ.ಆದರೆ ಅದರಿಂದ ಪರಿಸರದ ಮೇಲೆ ,ಮನುಷ್ಯರ ಮೇಲೆ ಆಗುವ ಪರಿಣಾಮಗಳ ಅಧ್ಯಯನ ಹೆಚ್ಚು ನಡೆದಿಲ್ಲ. ಒಂದು ಸೂಕ್ಷ್ಮ ವಿಷಯ ‘ಕಚ್ಚಾತೈಲದ ನೇರ ಮತ್ತು ಪರೋಕ್ಷ ಸಂಪರ್ಕದಿಂದ ಮನುಷ್ಯರ ಮಿದುಳಿನ ಮೇಲೆ ಆಗುವ ಪರಿಣಾಮಗಳು’. ನೈಜೀರಿಯದಲ್ಲಿ ಕಚ್ಚಾತೈಲವನ್ನು ಸಾಗಿಸುವ ಕೊಳವೆಗಳ ಗುಣಮಟ್ಟ ಕಳಪೆ ಆಗಿರುವುದರಿಂದ ಕಚ್ಚಾತೈಲದ ಸೋರುವಿಕೆ ತೀರಾ ಸಾಮಾನ್ಯ ವಿಷಯ.ಇದರ ಫಲವಾಗಿ  ಮನುಷ್ಯರ ಮಿದುಳಿನ ಮೇಲೆ ಬಹಳ ಕೆಟ್ಟ ಪರಿಣಾಮಗಳು ಆಗುತ್ತವೆ ಎನ್ನುವುದು ಅವರ ಸಂಶೋಧನೆಯಿಂದ ಸಾಬೀತಾಗಿದೆ  :ನೆನಪಿನ ಶಕ್ತಿ ಕುಂದುವುದು,ಮಿದುಳಿನ ಸಂಜ್ಞೆಯ ಗುಣಗಳು ವ್ಯತ್ಯಯ ಆಗುವ ನರಸಂಬಂಧಿ ಕಾಯಿಲೆಗಳು,ದೇಹದ ಅಂಗಗಳ ಚಲವಲನಗಳ ಶಕ್ತಿ ಕುಂದುವುದು -ಇವು ಮೂರು ಮುಖ್ಯ ದುಷ್ಪರಿಣಾಮಗಳು.ನನ್ನ ದೇಶ ನೈಜೀರಿಯಕ್ಕೆ ಹೋಗಿ ನನ್ನದೇ ಒಂದು ಪ್ರಯೋಗಶಾಲೆ ಸಿದ್ಧಪಡಿಸಿ ,ನನ್ನ ಸಂಶೋಧನೆಯ ಫಲಿತಗಳನ್ನು ಸಾರ್ವಜನಿಕರ ಗಮನಕ್ಕೆ ತರುವ ಕೆಲಸವನ್ನು ಮಾಡುವ ಉದ್ದೇಶವಿದೆ.ತೈಲ ಕಂಪೆನಿಗಳು ಸಂಶೋಧನೆಗೆ ಹಣಸಹಾಯ ಮಾಡಲು ತುದಿಗಾಲ ಮೇಲೆ ನಿಂತಿವೆ.ಅವುಗಳ ಹಣಕ್ಕೆ ಕೈಚಾಚಿದರೆ , ಆ ಕಂಪೆನಿಗಳಿಂದ ಆಗುವ ಹಾನಿಯ ಸತ್ಯವನ್ನು ಹೇಳಲು ಆಗುವುದಿಲ್ಲ.ಹಾಗಾಗಿ ನನ್ನ ಸಂಪಾದನೆಯಿಂದಲೇ  ಈ ಕೆಲಸ ಮುಂದುವರಿಸುತ್ತೇನೆ ” .ಇದು ನೈಜೀರಿಯದ ವಿಶ್ವವಿದ್ಯಾಲಯದಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಡಾಕ್ಟರ್ ಮತ್ತು ಪ್ರಾಧ್ಯಾಪಕ ಆಗಿರುವ ಜೇಮ್ಸ್ ಒಲೋಪದೆ ಅವರು ನಿನ್ನೆ ಹೇಳಿದ  ಮಾತುಗಳು.

ಕಾರ್ಯಕ್ರಮ ಮುಗಿಸಿ ವಸತಿಮನೆಗೆ ಬಂದು ಮಲಗಿದರೆ ,ಮೊದಲು ಕಾಣಿಸಿದವರು ಕತ್ತೈಕೂತ್ತುವಿನ  ಕುಣಿಯುವ ತಮಿಳುನಾಡಿನ  ಹಳ್ಳಿಯ  ಹುಡುಗ ಹುಡುಗಿಯರು.ಕಪ್ಪು ಮಕ್ಕಳು ಸ್ವಚ್ಚಂದವಾಗಿ ಹಾಡುತ್ತಾ ಕುಣಿಯುತ್ತಾ ಬಯಲಾಟ ಆಡುತ್ತಾ ಕತೆಹೇಳುತ್ತಾ ತಮಿಳಿನೊಂದಿಗೆ ಇಂಗ್ಲಿಷ್ ಕಲಿಯುತ್ತಾ ಕಂಪ್ಯೂಟರಿನಲ್ಲಿ ತಮ್ಮದೇ ತರಬೇತಿಯ ದೃಶ್ಯಗಳ ಸಿಡಿಗಳನ್ನು ನೋಡುತ್ತಾ ಬೆಳೆಯುತ್ತಾ ಬೆಳೆಯುತ್ತಾ ಮುಂದೆ ಸಾಗುವ ನೋಟಗಳು.ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಾನಪದ ಪ್ರಾಧ್ಯಾಪಕರಾಗಿದ್ದ ಜೀ.ಶಂ.ಪರಮಶಿವಯ್ಯ ಅವರು ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ ಕಲೆಯಾದ ‘ಮೂಡಲಪಾಯ’ ದ ಪುನರುಜ್ಜೀವನಕ್ಕಾಗಿ ತುಮಕೂರು ಜಿಲ್ಲೆಯ ಕೊನೆಹಳ್ಳಿಯಲ್ಲಿ ಸ್ಥಾಪಿಸಿದ ‘ಮೂಡಲಪಾಯ ಟ್ರಸ್ಟ್’ಸಂಸ್ಥೆ ,ಅದಕ್ಕಾಗಿ ಕೊನೆಹಳ್ಳಿಯಲ್ಲಿ ನಡೆಸಿದ ತರಬೇತಿ ಶಿಬಿರಗಳು, ಕಮ್ಮಟಗಳು ,ಅಲ್ಲಿ ಹತ್ತು ದಿನಗಳ ಕಾಲ ನಡೆದ ಭಾಗವತಿಕೆಯ ಕಮ್ಮಟದಲ್ಲಿ ಭಾಗವಹಿಸಿ ,ನೆಲದಲ್ಲಿ ಜಮಖಾನೆಯಲ್ಲಿ ಮಲಗಿ ನಾನು  ಪಡೆದ ಸಂಭ್ರಮದ ಇಪ್ಪತ್ತೈದು ವರ್ಷಗಳ ಹಿಂದಿನ ನೆನಪು  -ಎಲ್ಲವೂ ಮಿದುಳಿನ ಪರದೆಯ ಮೇಲೆ ಕುಣಿದಾಡಿದವು.

ಮತ್ತೆ ಕಂಡ ಚಿತ್ರಗಳು ಭಯಾನಕ .ನೈಜೀರಿಯದ ಕಚ್ಚಾತೈಲದ ಸೋರುವಿಕೆ ಅಲ್ಲಿನ ಜನರ ಮಿದುಳುಗಳನ್ನು  ಕರಗಿಸುತ್ತಿರುವ ದೃಶ್ಯಗಳು.ನಮ್ಮದೇಶದಲ್ಲಿ ಭೋಪಾಲ್ ಸ್ಪೋಟ ಕಣ್ಣು ತೆರೆಸಲಿಲ್ಲ.ಸಣ್ಣ ಉದಾಹರಣೆ -ಕರಾವಳಿ ಕರ್ನಾಟಕದ ಪಡುಬಿದ್ರಿ ಬಳಿಯ ಯು ಪಿ ಸಿ ಎಲ್  ವಿದ್ಯುತ್ ಸ್ಥಾವರ.ನಾನು ಕಳೆದ ಎಪ್ರಿಲ್ ನಲ್ಲಿ ಅಮೃತ ಸೋಮೇಶ್ವರ ಮತ್ತು ಎನ್.ಜಿ.ಮೋಹನ್ ಜೊತೆಗೆ ಹೋಗಿ ಕಂಡ ದಾರುಣ ದೃಶ್ಯಗಳು ,ವಿಷಮಿಶ್ರಿತ ನೀರು ತೆರದ ಹೊಂಡದಲ್ಲಿ ಬೂದಿಯೊಂದಿಗೆ ಹೊರಚೆಲ್ಲುತ್ತಿದ್ದ ,ನಾನು ಕೆಮರಾದಲ್ಲಿ ಸೆರೆಹಿಡಿದ ಉಸಿರುಗಟ್ಟಿಸುವ ಚಿತ್ರಗಳು,ಚಿತ್ರಗಳ ಸಹಿತ ನಾನು ಬರೆದ ಬ್ಲಾಗ್ ಬರಹ,ಈಗತಾನೆ ಈದಿನದ  ‘ಉದಯವಾಣಿ ‘ಪತ್ರಿಕೆಯಲ್ಲಿ ಓದಿದ ಸುದ್ದಿ-ಯು ಪಿ ಸಿ ಎಲ್ ವಿಷಭರಿತ ನೀರು ಸಮುದ್ರ ಸೇರಿ ಮೀನುಗಳು ಸರ್ವನಾಶ ಆಗುತ್ತಿರುವುದು ,ಮೀನುಗಾರರ ಗೋಳಾಟ  -ಎಲ್ಲವೂ ಸಾಲು ಸಾಲಾಗಿ ಮಿದುಳಿನ ಪರದೆಯ ಮೇಲೆ ವೇಗವಾಗಿ ಓಡುತ್ತಿವೆ.

ಅಂತಿಮವಾಗಿ ಮನುಷ್ಯರ ಮಿದುಳನ್ನು ಕರಗಿಸುವುದು ಎಲ್ಲ ಸಮಸ್ಯೆಗಳಿಗೂ  ಒಂದು ಶಾಶ್ವತ ಪರಿಹಾರವನ್ನು ಕಾಣಿಸಬಹುದು ! ತಪ್ಪು ಮಾಡಿದವರ ಮಿದುಳನ್ನು ಶೋಧಿಸುವ ಅಪರಾಧಶಾಸ್ತ್ರದ ವಿಧಾನಗಳೆಲ್ಲ ವ್ಯರ್ಥವಾಗಿವೆ. ಜನರ ಮಿದುಳುಗಳೇ ಕರಗುವಂತೆ ಮಾಡಿದರೆ ಆಳುವವರಿಗೆ ಎಲ್ಲವೂ ಬಹಳ ನಿರಾಳ.ಮಿದುಳನ್ನು ತೊಳೆಯುವ ಕೆಲಸಗಳಂತೂ ಹೇಗೂ ನಡೆಯುತ್ತಿವೆ.ಇನ್ನು ಮಿದುಳನ್ನು ಕರಗಿಸಿ ಬಿಟ್ಟರೆ ಸಮಸ್ಯೆಗಳಿಗೆಲ್ಲ ಪರಿಹಾರ ಹುಡುಕುವ ಕಷ್ಟಗಳೇ ಇರುವುದಿಲ್ಲ ! ಮಿದುಳುಗಳೆಲ್ಲಾ ಕರಗಿ ಕರಗಿ ಹೊಳೆಯಾಗಿ ಹರಿಯುವ ಪ್ರವಾಹದ ಅಬ್ಬರದ ಭೋರ್ಗರೆತಕ್ಕೆ ಫಕ್ಕನೆ ಎಚ್ಚರವಾಯಿತು .

ಕುವೆಂಪು ಕವನ ‘ಕಲ್ಕಿ’ನೆನಪಾಯಿತು: ‘ಕನಸೊಡೆದೆದ್ದೆ ,ಇನ್ನೆಲ್ಲಿಯ ನಿದ್ದೆ.’

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

6 Responses to “ಕಪ್ಪುಲೋಕದ ಎರಡು ಚಿತ್ರಗಳು :ಕತ್ತೈಕೂತ್ತುವಿನ ಕುಣಿಯುವ ಮಕ್ಕಳು ಮತ್ತು ಕಚ್ಚಾತೈಲದಿಂದ ಕರಗುವ ಮಿದುಳುಗಳು”

RSS Feed for ಬಿ ಎ ವಿವೇಕ ರೈ Comments RSS Feed

‘ಮಿದುಳುಗಳೆಲ್ಲಾ ಕರಗಿ ಕರಗಿ ಹೊಳೆಯಾಗಿ ಹರಿಯುವ ಪ್ರವಾಹದ ಅಬ್ಬರದ ಭೋರ್ಗರೆತಕ್ಕೆ ಫಕ್ಕನೆ ಎಚ್ಚರವಾಯಿತು ‘ ಅಬ್ಬಾ.ಭಯಗೊಳಿಸುವ ಸಾಲುಗಳು..

ಪುರುಷೋತ್ತಮ್, ಭಯೋತ್ಪಾದನೆ ಈಗ ಒಳಗಿನಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ.ಪೈಪುಗಳು ಒಡೆಯುವುದೇ ಮಿದುಳುಗಳನ್ನು ಕರಗಿಸಲು .
ಧನ್ಯವಾದ

nimma abimaanada kalakali ge namaskaragalu…..
lokesh mosale
http://www.lokeshmosale.com
face book ; lokesh mosale

ಲೋಕೇಶ್,ನಿಮ್ಮ ನಿಸರ್ಗದ ಕಾಳಜಿ ,ಅದನ್ನು ಕಲೆಯಲ್ಲಿ ಬಿಂಬಿಸುವ ನಿಮ್ಮ ಬದ್ಧತೆ -ಅದು ನನಗೆ ತುಂಬಾ ಇಷ್ಟ.ಧನ್ಯವಾದ .

Gurugle thumba hrudyavaada barahavidu. buddhi-bhaavaglannu samaanavaagi thattuva matthu yochanege hacchuva keiasavannu e baraha maadutthade.

ಆನಂದ ,ನೀವೆಲ್ಲ ಯೋಚಿಸುವವರು ಓದಿದರೆ ಸಂತೋಷ.ಜೊತೆಗೆ ನಮ್ಮ ಪರಿಸರಕ್ಕೆ ಈ ಸಂದೇಶ ತಲಪಿದರೆ ತೃಪ್ತಿ.ಧನ್ಯವಾದ .


Where's The Comment Form?

Liked it here?
Why not try sites on the blogroll...

%d bloggers like this: