ಕನ್ನಡದ ಮಾನ ಎತ್ತರಿಸಿದ ಹಾಮಾನಾ

Posted on ಸೆಪ್ಟೆಂಬರ್ 29, 2011. Filed under: ಕನ್ನಡ ಸಾಹಿತ್ಯ | ಟ್ಯಾಗ್ ಗಳು:, , , , , , , |


ಮೊನ್ನೆ ಭಾನುವಾರ (ಸಪ್ಟಂಬರ ೨೫) ಬೆಂಗಳೂರಿನ ‘ಸಿರಿಸಂಪಿಗೆ’ಯಲ್ಲಿ ಚಂದ್ರಶೇಖರ ಕಂಬಾರರನ್ನು ಕಾಣಲು ಹೋದಾಗ ಅಲ್ಲಿ ಗೆಳೆಯ ಬರಗೂರು ರಾಮಚಂದ್ರಪ್ಪ ,ಹಿರಿಯ ಜಾನಪದ ಜೀವಿ ಗೊ.ರು.ಚನ್ನಬಸಪ್ಪ ಸಿಕ್ಕಿದರು.ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ಇಡೀ ಕನ್ನಡ ನಾಡಿನ ಜನರು ಸಂಭ್ರಮಿಸಿದ ಬಗೆಯ ಬಗ್ಗೆ ಮಾತಾಡಿಕೊಂಡೆವು.ಸೈದ್ಧಾಂತಿಕ ಮತ್ತು ವ್ಯಕ್ತಿಗತ ಭಿನ್ನತೆಗಳನ್ನು ಒಂದು ಕ್ಷಣ ಬದಿಗಿಟ್ಟು ಕನ್ನಡದ ಸಾಹಿತಿಗಳು ಮತ್ತು ಎಲ್ಲ ವರ್ಗದ ಕನ್ನಡಿಗರು ಸಂತೋಷ ಪ್ರಕಟಿಸಿದ ,ಮಾಧ್ಯಮಗಳು ವಿಭಿನ್ನ ಕಾರ್ಯಕ್ರಮಗಳ ಮೂಲಕ ಗೌರವ ಸೂಚಿಸಿದ ಸನ್ನಿವೇಶ ಕರ್ನಾಟಕದ ಸಾಂಸ್ಕೃತಿಕ ಜಗತ್ತಿನಲ್ಲಿ ಒಂದು ಆರೋಗ್ಯಕರ ಬೆಳವಣಿಗೆ.ಇದಕ್ಕೆ ಕಂಬಾರರ ಸಾಹಿತ್ಯ ಸಾಧನೆಗಳಷ್ಟೇ ಕನ್ನಡಿಗರ ಕನ್ನಡಪರ ಅಭಿಮಾನ ಮತ್ತು ಔದಾರ್ಯವೂ ಕಾರಣ.

ಕನ್ನಡಕ್ಕೆ ಎಂಟನೆಯ ಜ್ಞಾನಪೀಠ ಪ್ರಶಸ್ತಿ ಬಂದಿದೆ.ಇಂತಹ ಪ್ರಶಸ್ತಿ ಬರಬಹುದಾಗಿದ್ದ ಅನೇಕ ಸಾಹಿತಿಗಳು ನಮ್ಮನ್ನು ಅಗಲಿಹೋಗಿದ್ದಾರೆ.ಅರ್ಹರಾದ ಇನ್ನಷ್ಟು ಮಂದಿ ನಮ್ಮ ನಡುವೆ ಇದ್ದಾರೆ.ಆದರೆ ಇಂತಹ ರಾಷ್ಟ್ರೀಯ ಪ್ರಶಸ್ತಿ ಕನ್ನಡಕ್ಕೆ ದೊರೆಯಲು ಸಾಧ್ಯವಾಗುವ  ವಾತಾವರಣ ನಿರ್ಮಾಣದ ದೃಷ್ಟಿಯಿಂದ  ನಮ್ಮ ಕನ್ನಡ ಕೃತಿಗಳು ಎಷ್ಟು ಪ್ರಮಾಣದಲ್ಲಿ ಇಂಗ್ಲಿಷಿಗೆ ಭಾಷಾಂತರ ಆಗಿವೆ ಎನ್ನುವ ಪ್ರಶ್ನೆಗೆ ,ಎಷ್ಟು ಹೊರನಾಡಿನ ಸಾಹಿತಿಗಳ ವಿಮರ್ಶಕರ ಗಮನವನ್ನು ಸೆಳೆದಿವೆ ಎನ್ನುವ ಪ್ರಶ್ನೆಗೆ ನಿರಾಶಾದಾಯಕ ಉತ್ತರ ದೊರೆಯುತ್ತದೆ.ಕೇವಲ ಕನ್ನಡದ ಬಗೆಗಿನ ಉತ್ಸಾಹ  ಅಭಿಮಾನಗಳಿಂದಲೇ ಇದು ಸಾಧ್ಯ ಆಗುವುದಿಲ್ಲ.ರಾಷ್ಟ್ರೀಯ ಮಟ್ಟದಲ್ಲಿ ಸಮರ್ಪಕ  ಅನುವಾದಗಳ ಮೂಲಕ ಬೇರೆ ಭಾಷೆಗಳ ವಿಮರ್ಶಕರ ಗಮನ ಸೆಳೆಯುವ ಕೆಲಸವನ್ನು ಮಾಡುವುದು ಬಹಳ ಮುಖ್ಯವಾದ ಕೆಲಸ.ಈ ದೃಷ್ಟಿಯಲ್ಲಿ ನೋಡಿದರೆ ಭಾರತದ  ಅತಿ ಶ್ರೇಷ್ಠ ಲೇಖಕರಾದ ಕನ್ನಡದ ಕುವೆಂಪು,ಬೇಂದ್ರೆ,ಕಾರಂತ ಮತ್ತು ಮಾಸ್ತಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದದ್ದರ ಹಿಂದೆ ನಡೆದಿರಬಹುದಾದ ಕನ್ನಡಪರ  ಪರಿಶ್ರಮ ಬೆರಗು ಹುಟ್ಟಿಸುತ್ತದೆ.ಈ ಮಹಾನ್ ಸಾಹಿತಿಗಳು ಎಲ್ಲರೂ ಇಂಗ್ಲಿಶ್ ಜ್ಞಾನ ಇದ್ದರೂ ಕನ್ನಡಲ್ಲೇ ಬರೆದು ಕನ್ನಡದ ಅನನ್ಯತೆಯನ್ನು ಸಾಧಿಸಿದವರು.ಆ ಕಾಲಕ್ಕೆ ಇವರ ಕೃತಿಗಳು ವಿಶೇಷವಾಗಿ ಇಂಗ್ಲಿಷಿಗೆ ಅನುವಾದ ಆಗಿರಲಿಲ್ಲ.ಇಂತಹ ವೇಳೆಯಲ್ಲಿ ನಿಜವಾದ ಶ್ರೇಷ್ಠ ಕನ್ನಡ ಸಾಹಿತಿಗಳ ಪರವಾಗಿ ಅವರಿಗೆ ಗೊತ್ತಿಲ್ಲದೆಯೇ ರಾಷ್ಟ್ರ ಮಟ್ಟದಲ್ಲಿ ಸಕಾರಾತ್ಮಕ’ ಲಾಬಿ’ ಮಾಡಬೇಕಾಗುತ್ತದೆ.ಇಂತಹ ಸಾಹಿತಿಗಳ ವ್ಯಕ್ತಿ ವಿವರ ಮತ್ತು ಕೆಲವು ಮಹತ್ವದ ಕೃತಿಗಳ ಆಯ್ದ ಭಾಗಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿಸುವುದು,ಸಮಿತಿಯಲ್ಲಿ ಇರುವ ಇತರ ಭಾಷೆಯ ಸಾಹಿತಿಗಳ ಗಮನಕ್ಕೆ ತರುವುದು,ಅವರಿಗೆ ಮನವರಿಕೆ ಮಾಡಿಕೊಡುವುದು,ಕೊನೆಗೆ ಒಮ್ಮತ ಅಭಿಪ್ರಾಯಕ್ಕೆ ಪ್ರಯತ್ನಿಸುವುದು,ಆ ಭಾಷೆಯ ಉತ್ತಮ ಸಾಹಿತಿಗಳ ಅವಕಾಶಗಳು ಬಂದಾಗ ಅವರಿಗೆ ಬೆಂಬಲ ಕೊಡುವುದು-ಇವೆಲ್ಲವನ್ನೂ ಶೈಕ್ಷಣಿಕ ನೆಲೆಯಲ್ಲಿ ಮಾಡಿದಾಗ ಮಾತ್ರ ಎಲ್ಲ ಅರ್ಹತೆಗಳು ಇದ್ದಾಗಲೂ ಇಂತಹ ಪ್ರಶಸ್ತಿಗಳು ಕನ್ನಡಕ್ಕೆ ದೊರೆಯಲು ಸಾಧ್ಯ ಆಗುತ್ತದೆ.

ಕನ್ನಡಕ್ಕೆ ದೊರೆತ ಆರಂಭದ  ಜ್ಞಾನಪೀಠ ಪ್ರಶಸ್ತಿಗಳು -ಕುವೆಂಪು,ಬೇಂದ್ರೆ,ಕಾರಂತ,ಮಾಸ್ತಿ,ಗೋಕಾಕರದ್ದು.ಅನುಭಾವಿಗಳ ಹಾಗೆ ಬದುಕಿದ ಮತ್ತು ಬರೆದ ಇವರಿಗೆ ಜ್ಞಾನಪೀಠದಂತಹ ರಾಷ್ಟ್ರೀಯ ಪ್ರಶಸ್ತಿ ದೊರೆಯಲು ಪರಿಶ್ರಮ ಪಟ್ಟವರು ಮತ್ತು ಬಹುತೇಕ ಕಾರಣರಾದವರಲ್ಲಿ ಡಾ.ಹಾ.ಮಾ.ನಾಯಕರು ಅಗ್ರಗಣ್ಯರು.ಹಾ.ಮಾ.ನಾಯಕ (೧೨ ಸಪ್ಟಂಬರ ೧೯೩೧-೧೦ ನವಂಬರ ೨೦೦೦) ಅವರು ಬದುಕಿದ್ದರೆ ಈ ತಿಂಗಳಿಗೆ ಅವರಿಗೆ ಎಂಬತ್ತು ವರ್ಷ ಆಗುತ್ತಿತ್ತು.ಹಾಮಾನಾ ೧೯೭೪-೧೯೮೩ರ ಅವಧಿಯಲ್ಲಿ ಭಾರತೀಯ ಜ್ಞಾನಪೀಠ ಕನ್ನಡ ಸಲಹಾ ಸಮಿತಿಯ ಸದಸ್ಯ ಮತ್ತು ಸಂಚಾಲಕರಾಗಿದ್ದರು.ಅವರು ೧೯೮೪-೮೬ರ ಅವಧಿಯಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.ಬೇಂದ್ರೆ ,ಕಾರಂತ ಮತ್ತು ಮಾಸ್ತಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದದ್ದು ಈ ಅವಧಿಗಳಲ್ಲಿ.ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಭಾಷಾವಿಜ್ಞಾನದಲ್ಲಿ ಎಂ.ಎ.ಪದವಿ (೧೯೫೮),ಅಮೇರಿಕಾದ ಇಂಡಿಯಾನಾ ವಿಶ್ವವಿದ್ಯಾಲಯದಿಂದ  ಭಾಷಾವಿಜ್ನಾನದಲ್ಲಿ ಪಿಎಚ್.ಡಿ.ಪದವಿ (೧೯೬೪) ಪಡೆದಿದ್ದ ಹಾಮಾನಾ ಅವರಿಗೆ ಬೆಂಗಾಲಿ ಲೇಖಕರ ಸಹಿತ  ಭಾರತದ ಅನೇಕ ಭಾಷೆಗಳ ಹಿರಿಯ ಸಾಹಿತಿಗಳ ನೇರ ಸಂಪರ್ಕ ಇದ್ದಕಾರಣ ಆರಂಭದ  ಜ್ಞಾನಪೀಠ ಪ್ರಶಸ್ತಿಗಳನ್ನು  ಕನ್ನಡದ ಹಿರಿಯ ಸಾಧಕ ಸಾಹಿತಿಗಳು ಪಡೆಯಲು ಸಾಧ್ಯವಾಯಿತು.ಹೀಗೆ ಕನ್ನಡದ  ಮಾನವನ್ನು ಎತ್ತರಿಸುವ ಕೆಲಸವನ್ನು ತಮ್ಮ ಕಾಯಕ ಮತ್ತು ಬರಹಗಳಿಂದ ನಿರಂತರವಾಗಿ ಮಾಡಿದವರು ಹಾಮಾನಾ.

ಹಾಮಾನಾ ಅವರು ಕನ್ನಡದ ಪತ್ರಿಕೆಗಳಲ್ಲಿ ನಿರಂತರವಾಗಿ ಅಂಕಣಗಳನ್ನು ಬರೆದು ಕನ್ನಡ ,ಕರ್ನಾಟಕ ಮತ್ತು ಕನ್ನಡ ಸಂಸ್ಕೃತಿಯ ಬಗ್ಗೆ ಕನ್ನಡಿಗರಿಗೆ ಸಮರ್ಪಕ ಮಾಹಿತಿ ಮತ್ತು ಜ್ಞಾನವನ್ನು ಏಕಕಾಲಕ್ಕೆ ಕೊಡುತ್ತಲೇ ಸಾಂಸ್ಕೃತಿಕ ಕರ್ನಾಟಕವನ್ನು ಕಟ್ಟಲು ನೆರವಾದರು.’ಸ’ಕಾರದಿಂದ ಆರಂಭವಾಗುವ ಅವರ ಹೆಚ್ಚಿನ ಅಂಕಣಬರಹಗಳು ಶ್ರೀಸಾಮಾನ್ಯ ಕನ್ನಡಿಗರಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಪ್ರೀತಿಯನ್ನು ಬೆಳಸಿದವು.ಅಮೇರಿಕಾದ ಇಂಡಿಯಾನಾ ಮತ್ತು ಪೆನ್ಸಿಲ್ ವೇನಿಯಾ ವಿವಿಗಳಿಂದ ಭಾಷಾವಿಜ್ಞಾನ ಮತ್ತು ಜಾನಪದ ವಿಜ್ಞಾನ ತರಬೇತಿ ಪಡೆದ ಹಾಮಾನಾ ,ಆ ತಿಳುವಳಿಕೆಯನ್ನು ಕನ್ನಡ ಭಾಷೆ ಮತ್ತು ಜಾನಪದಗಳ ವೈಜ್ಞಾನಿಕ ಅಧ್ಯಯನಕ್ಕೆ ಧಾರೆ ಎರೆದರು.ಅವರ ‘ಜಾನಪದ ಸ್ವರೂಪ’ ಕಿರುಗ್ರಂಥ ಕನ್ನಡದಲ್ಲಿ ಜಾನಪದ ಅಧ್ಯಯನದ ಹೊಸ ದಿಕ್ಕಿನ ಬಾಗಿಲು ತೆರೆಯಿತು.ಈರೀತಿ ಕನ್ನಡದ ಮಾನವನ್ನು ಎತ್ತರಿಸಿದ ಮತ್ತು ಕನ್ನಡದ ಅಭಿಮಾನವನ್ನು ತಮ್ಮ ಬರಹಗಳ ಮೂಲಕ ಬೆಳೆಸಿದ ಹಾಮಾನಾ ಅವರ ಅಂಕಣ ಬರಹಗಳ ಸಂಕಲನ ‘ಸಂಪ್ರತಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ೧೯೮೯ರಲ್ಲಿ ಬಂದಾಗ ಕನ್ನಡ ಸಾಹಿತಿಗಳ ಒಂದು ಗುಂಪು ನಡೆಸಿದ ಅಸೂಯೆಯ ಸಾಹಿತ್ಯಕ ರಾಜಕೀಯ  ಈಗ ಇತಿಹಾಸಕ್ಕೆ ಸೇರಿದ್ದು.ಸಾಹಿತ್ಯದ ಶ್ರೇಷ್ಟತೆಯ ಕುರಿತು ಕನ್ನಡದ ಸಾಹಿತಿಗಳು  ಮತ್ತು ವಿಮರ್ಶಕರು ಅನ್ನಿಸಿಕೊಂಡವರು ಕೆಲವರು  ಅಂದು ನಡೆಸಿದ ಚರ್ಚೆಯು  ಸಾಹಿತ್ಯೇತರ ಉದ್ದೇಶಗಳನ್ನು ಹೊಂದಿತ್ತು ಎನ್ನುವುದು ಆ ಬಳಿಕ ಎಲ್ಲರಿಗೂ ಗೊತ್ತಾದ ಬಹಿರಂಗ ಸತ್ಯ.ಆ ಚರ್ಚೆಯಲ್ಲಿ ಪಾಲುಗೊಂಡ ಕೆಲವರು ಇಂದು ನಮ್ಮೊಂದಿಗಿಲ್ಲ.ಉಳಿದವರು ಸಾಕಷ್ಟು ಮಾಗಿದ್ದಾರೆ.ಇಂತಹ ಸಂದರ್ಭದಲ್ಲಿ ಗೆಳೆತನಕ್ಕಿಂತ ಹೆಚ್ಚಾಗಿ  ತನ್ನ ನಿಲುವಿನ ಬದ್ಧತೆಯನ್ನು  ತೋರಿ ಕೆ.ವಿ.ಸುಬ್ಬಣ್ಣ ಅವರು ಬರೆದ ‘ಶ್ರೇಷ್ಟತೆಯ ವ್ಯಸನ’ ಇಂದಿಗೂ ಒಂದು ಮಹತ್ವದ ಚಿಂತನೆಯ ಲೇಖನವಾಗಿ  ಉಳಿಯುತ್ತದೆ.ಆ ಬಳಿಕ ಕಾವೇರಿ ತುಂಗಭದ್ರಾ ಕೃಷ್ಣಾಗಳಲ್ಲಿ ಸಾಕಷ್ಟು ನೀರು ಹರಿದುಹೋಗಿದೆ.ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳನ್ನು ಅಂಕಣ ಬರಹಗಳ ಸಹಿತ ಚಿಂತನೆಯ ಲೇಖನಗಳಿಗೆ ನಮ್ಮ ಕನ್ನಡದ ಸಾಹಿತಿಗಳು ಪಡೆದುಕೊಂಡಿದ್ದಾರೆ.ಇಂತಹ ಕಾಲಘಟ್ಟದಲ್ಲಿ ನಮ್ಮೊಡನಿಲ್ಲದ ಹಾಮಾನಾ ನಮಗೆ ಮತ್ತೆ ಮತ್ತೆ ನೆನಪಾಗುತ್ತಾರೆ.

ಹಾಮಾನಾ ನನ್ನ ಪಿಎಚ್.ಡಿ.ಸಂಶೋಧನೆಯ ಮಾರ್ಗದರ್ಶಕರಾಗಿದ್ದರು: ‘ತುಳು ಜನಪದ ಸಾಹಿತ್ಯ’ -ಮೈಸೂರು ಬಿಶ್ವವಿದ್ಯಾನಿಲಯ .೧೯೮೧.ನನ್ನ ಥೀಸಿಸ್ ನ ಪ್ರಕಟಿತ ಗ್ರಂಥದ (ಕನ್ನಡ ಸಾಹಿತ್ಯ ಪರಿಷತ್ತು ,೧೯೮೫ ) ನನ್ನ ಮಾತಿನಲ್ಲಿ ಬರೆದ ಈ ಸಾಲುಗಳು ಈಗಲೂ ನನ್ನ ಪಾಲಿಗೆ ಜೀವಂತವಾಗಿವೆ :’ಯಾವ ಅಧಿಕಾರದಲ್ಲಿದ್ದರೂ ಮಾನವೀಯ ಸಂಬಂಧಗಳಿಗೆ ಎಳ್ಳಷ್ಟೂ ಕುಂದಾಗದಂತೆ ನಡೆದುಕೊಳ್ಳುವ ಡಾ.ಹಾ.ಮಾ.ನಾಯಕರ ವಿಶ್ವಾಸದ ಸುಖವನ್ನು ಬಹಳ ಅಮೂಲ್ಯವಾದುದೆಂದು ನಾನು ಎಲ್ಲ ಕಾಲಕ್ಕ್ಕೂ ತಿಳಿದಿದ್ದೇನೆ.ಬದುಕಿನ ಶಿಸ್ತು,ಅಚ್ಚುಕಟ್ಟು,ಮೌಲ್ಯಗಳ ಬಗೆಗಿನ ಪ್ರಾಮಾಣಿಕ ಕಾಳಜಿ ,ಒಳ್ಳೆಯ ಉದ್ದೇಶಕ್ಕಾಗಿ ಎಲ್ಲಾ ಅಡ್ಡಿಗಳನ್ನು ಎದುರಿಸುವ ಎದೆಗಾರಿಕೆ -ಇಂತಹ ಅನೇಕ ಅಂಶಗಳಲ್ಲಿ ಡಾ.ನಾಯಕರನ್ನು ಈ ನಿಬಂಧದ ವ್ಯಾಪ್ತಿಯ ಹೊರಗೂ ನನ್ನ ಮಾರ್ಗದರ್ಶಕರೆಂದು ನಾನು ತಿಳಿದಿದ್ದೇನೆ.”

ಹಾಮಾನಾ ಅವರನ್ನು ನಾನು ಮೊದಲು ನೋಡಿದ್ದು ೧೯೬೮ರಲ್ಲಿ ಮಂಗಳೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ನಾನು ಕನ್ನಡ ಎಂ ಎ ವಿದ್ಯಾರ್ಥಿಯಾಗಿದ್ದಾಗ.ನನ್ನ ಗುರುಗಳಾದ ಪ್ರೊ.ಎಸ.ವಿ.ಪರಮೇಶ್ವರ ಭಟ್ಟರು ಅವರನ್ನು ನಮ್ಮ ವಿಭಾಗಕ್ಕೆ ಮೊದಲ ಬಾರಿ ಕರೆಸಿದಾಗ.ಆಗ ಅವರು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದರು.ನಡೆನುಡಿಯಲ್ಲಿ ಹಿತಮಿತ ಗುಣ,ಸ್ಪಷ್ಟತೆ ,ಗಾಂಭೀರ್ಯ -ಅದು ಅವರ ಬಗೆಗಿನ ಆಕರ್ಷಣೆಯೂ ಹೌದು , ಭಯವೂ ಹೌದು.೧೯೬೯ರಲ್ಲಿ ಮಂಗಳೂರಿನಲ್ಲಿ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ನಡೆಯಿತು.ಆಗ ನಾನು ಎರಡನೆಯ ವರ್ಷದ ಎಂ ಎ ವಿದ್ಯಾರ್ಥಿ.ಸಿಂಪಿ ಲಿಂಗಣ್ಣ ಸಮ್ಮೇಳನಾಧ್ಯಕ್ಷರು.ಎಚ್.ಎಲ್.ನಾಗೇಗೌಡರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆಗಿ ಸಮ್ಮೇಳನದ ಜವಾಬ್ದಾರಿ ಹೊತ್ತವರು.ದೇಜಗೌ ,ಹಾಮಾನಾ,ಜೀಶಂಪ ಮೊದಲಾಗಿ ಕರ್ನಾಟಕದ ಜಾನಪದ ವಿದ್ವಾಂಸರೆಲ್ಲ ಒಟ್ಟು ಸೇರಿದ ಮಹಾಸಮ್ಮೇಳನ.ಗೊರು ಚನ್ನಬಸಪ್ಪ ಮತ್ತು ತರೀಕೆರೆಯ ಕೆ.ಆರ್.ಲಿಂಗಪ್ಪ ಕಾರ್ಯದರ್ಶಿಗಳು.ಇಡೀ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಲು ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.ಮೈಸೂರು ಕೇಂದ್ರದಿಂದ ತೀ ನಂ ಶಂಕರನಾರಾಯಣ ಮತ್ತು ಮಂಗಳೂರು ಕೇಂದ್ರದಿಂದ ನಾನು ಆಯ್ಕೆ ಆಗಿದ್ದೆವು.ನನ್ನ ಪ್ರಬಂಧದ ವಿಷಯ ‘ದಕ್ಷಿಣ ಕನ್ನಡದ ಕಲಾತ್ಮಕ ವಿನೋದಗಳು’.ನನ್ನ ಬದುಕಿನ ಮೊದಲನೆಯ ರಾಜ್ಯ ಮಟ್ಟದ ಸಮ್ಮೇಳನದ ಭಾಗವಹಿಸುವಿಕೆ ಅದು.ನನ್ನ ಪ್ರಬಂಧ ಮಂಡನೆಯ ಬಳಿಕ ಅನೇಕ ಹಿರಿಯರು ನನ್ನ ಬೆನ್ನು ತಟ್ಟಿದರು.ಹಾಮಾನಾ ನನ್ನಲ್ಲಿ ಬಂದು ಮೆಚ್ಚುಗೆಯ ಎರಡು ಮಾತು ಹೇಳಿದಾಗ ಪ್ರತಿಕ್ರಿಯೆ ಹೇಳಲು ನನಗೆ ಮಾತುಗಳು ಬರಲಿಲ್ಲ.

೧೯೭೦ ಎಪ್ರಿಲ್ .ನನ್ನ ಕನ್ನಡ ಎಂ ಎ ಅಂತಿಮ ಪರೀಕ್ಷೆಯ ಬಳಿಕ ಮೌಖಿಕ ಪರೀಕ್ಷೆ.ನಮ್ಮ ಪ್ರೊಫೆಸರ್ ಎಸ ವಿ ಪಿ ಅವರಲ್ಲದೆ ಹೊರಗಿನಿಂದ ನಾಲ್ಕು ಮಂದಿ ಪ್ರಾಧ್ಯಾಪಕರು ಪರೀಕ್ಷಕರಾಗಿ ಬಂದಿದ್ದರು.ಮೈಸೂರಿನಿಂದ ಹಾಮಾನಾ ಮತ್ತು ಎಚ್.ತಿಪ್ಪೇರುದ್ರ ಸ್ವಾಮಿ ,ಧಾರವಾಡದಿಂದ ಆರ್.ಸಿ.ಹಿರೇಮಠ,ಮದ್ರಾಸಿನಿಂದ ಎಂ.ಮರಿಯಪ್ಪ ಭಟ್ಟರು.(ಈಗ ಈ ಐದೂ ಮಂದಿ ಪ್ರಾಧ್ಯಾಪಕ ವಿದ್ವಾಂಸರು ನಮ್ಮ ನಡುವೆ ಇಲ್ಲ ಎನ್ನುವುದು ವಿಷಾದದ ಸಂಗತಿ.)ನನ್ನ ಸರದಿ ಬಂದಾಗ ಹಾಮಾನಾ ನನ್ನಲ್ಲಿ ಕೇಳಿದ ಒಂದು ಪ್ರಶ್ನೆ :’ರೈ ಪದದ ನಿಷ್ಪತ್ತಿ.’ ನನ್ನ ಪಾಠಗಳ ಬಗ್ಗೆ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದ ನನಗೆ ಈ ಪ್ರಶ್ನೆ ಅನಿರೀಕ್ಷಿತವಾಗಿತ್ತು.ಆದರೆ ಸಮಯ ಸ್ಪೂರ್ತಿಯಿಂದ ‘ರಾಯ ಪದದಿಂದ ರೈ  ಬಂದಿರಬಹುದು.ವಿಜಯನಗರ  ಅರಸರು ತುಳುವ ವಂಶದವರಾಗಿದ್ದರು ,ಅವರು ತುಳುನಾಡನ್ನು ಆಳಿರುವುದಕ್ಕೆ ಇತಿಹಾಸದಲ್ಲಿ ದಾಖಲೆಗಳಿವೆ.ಅವರ ಹೆಸರುಗಳ ಕೊನೆಯಲ್ಲಿ ರಾಯ ಇದೆ.ಕೃಷ್ಣದೇವರಾಯ ಇತ್ಯಾದಿ ‘ಎಂದೆ.’ಪ್ರತ್ಯೇಕ ತುಳುನಾಡು ಬೇಕು ಎನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?’-ಹಾಮಾನಾ ಅವರ ಮರುಪ್ರಶ್ನೆ.’ಕರ್ನಾಟಕದಿಂದ ಪ್ರತ್ಯೇಕಗೊಳ್ಳುವ  ತುಳುನಾಡು ಬೇಕಾಗಿಲ್ಲ.ಆದರೆ ತುಳು ಭಾಷೆ ಮತ್ತು ಸಾಹಿತ್ಯ ವಿಶಿಷ್ಟವಾಗಿ ಬೆಳೆಯಬೇಕು’-ನನ್ನ ಉತ್ತರ.ಎಲ್ಲರೂ ಒಪ್ಪಿಕೊಂಡಂತೆ ಭಾಸವಾಯಿತು.ನಾಯಕರೊಂದಿಗೆ ಎದುರಿನಲ್ಲಿ ಕುಳಿತು ಸ್ವಲ್ಪ ಧೈರ್ಯದಿಂದ ಮೊದಲು ಮಾತಾಡಿದ್ದು ಆಗಲೇ.

೧೯೭೦ ಜುಲೈ.ನನ್ನ ಕನ್ನಡ ಎಂ ಎ ಫಲಿತಾಂಶ ಪ್ರಕಟವಾಯಿತು.ಮಂಗಳೂರು ಕೇಂದ್ರಕ್ಕೆ ಮೊದಲನೆಯವನಾಗಿ ,ಮಂಗಳೂರು ಮತ್ತು ಮೈಸೂರು ಕೇಂದ್ರಗಳು ಸೇರಿ ಎರಡನೆಯವನಾಗಿ ಮೊದಲ ದರ್ಜೆಯಲ್ಲಿ ಉನ್ನತ ಶ್ರೇಣಿಯಲ್ಲಿ ನಾನು ಪಾಸಾಗಿದ್ದೆ.ಮುಂದೆ ಏನು ಮಾಡಬೇಕು ಎನ್ನುವ ಕಲ್ಪನೆ ಇರಲಿಲ್ಲ.ಕಾಲೇಜು ,ವಿಶ್ವವಿದ್ಯಾಲಯ ಸಂಸ್ಕೃತಿಗಳ ಹೊರಗೆ ಹಳ್ಳಿಯಲ್ಲಿ ಇದ್ದ ಕಾರಣ ಉದ್ಯೋಗದ ಅವಕಾಶಗಳು ಕ್ರಮಗಳು ಗೊತ್ತಿರಲಿಲ್ಲ.ಪುತ್ತೂರಿನ ಒಂದು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಹುದ್ದೆ ಖಾಲಿ ಇದೆ ಎಂದು ಕೇಳಿ,ಅರ್ಜಿ ಹಾಕಿಕೊಂಡು ಸಂದರ್ಶನಕ್ಕೆ ಹೋದೆ.ಆದರೆ ಆಯ್ಕೆ ಆಗಲಿಲ್ಲ.ಎಂ ಎ ಯಲ್ಲಿ ಉತ್ತಮ ಶ್ರೇಣಿ  ಇರುವ ಕಾರಣ ,ಕಾಲೇಜು ಉಪನ್ಯಾಸಕ ಹುದ್ದೆಗೆ ಅರ್ಹತೆ ಜಾಸ್ತಿ ಆಯಿತು ಎಂದು ಹೇಳಿದರು ಎಂದು ಆ ಮೇಲೆ ತಿಳಿಯಿತು.ಆವೇಳೆಗೆ ಮೈಸೂರು ವಿವಿಗೆ ಪ್ರೊ.ದೇ ಜವರೇ ಗೌಡರು ಕುಲಪತಿಗಳಾಗಿ ಬಂದಿದ್ದರು.ಹಾ ಮಾ ನಾಯಕರು ಅಲ್ಲಿ ಕನ್ನಡ  ಅಧ್ಯಯನ ಸಂಸ್ಥೆಯ ನಿರ್ದೇಶಕರಾದರು.ಒಂದು ದಿನ ಆಕಸ್ಮಿಕವಾಗಿ ನನಗೆ  ಒಂದು ಸಂದೇಶ ಬಂತು .ನಾನು ಮೈಸೂರಿನಲ್ಲಿ ಹಾ ಮಾ ನಾಯಕರನ್ನು ಹೋಗಿ ಕಾಣಬೇಕೆಂದು.ಯಾವುದಾದರೂ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಅಧ್ಯಾಪಕ ಕೆಲಸ ದೊರೆಯಬಹುದೇ ಎಂಬ ಆಸೆಯಿಂದ ನಾನು ಮೈಸೂರಿಗೆ ಹೊರಟೆ.ಇದು ೧೯೭೦ರ ಆಗಸ್ಟ್ ಆರಂಭದಲ್ಲಿ.ಆ ವೇಳೆಗೆ ಮೈಸೂರು ನನಗೆ  ಅಪರಿಚಿತ ಊರು.ಎರಡು ಬಾರಿ ಮಾತ್ರ ಮೈಸೂರು ನೋಡಿದ್ದೆ.ನಾನು ಮಂಗಳೂರಲ್ಲಿ ಎಂ ಎ ವಿದ್ಯಾರ್ಥಿ  ಆಗಿದ್ದಾಗ ೧೯೬೮ರಲ್ಲಿ ನಾಲ್ಕು ತಿಂಗಳ ಕಾಲ ನನ್ನ  ಅಧ್ಯಾಪಕರಾಗಿದ್ದ ರಾಮೇಗೌಡ (ರಾಗೌ ) ಅವರ ಮನೆಗೆ ಹೋದೆ.ಅಲ್ಲೇ ಉಳಿದುಕೊಂಡು ,ಮರುದಿನ ಬೆಳಗ್ಗೆ ರಾಗೌ ಜೊತೆಗೆ ಜಯಲಕ್ಷ್ಮಿಪುರಂನಲ್ಲಿ ಇರುವ ಹಾಮಾನಾ ಮನೆ ‘ಗೋಧೂಳಿ’ಗೆ ಹೋದೆ.ಹಾಮಾನಾ ನೇರವಾಗಿ ವಿಷಯ ಪ್ರಸ್ತಾವಿಸಿದರು.’ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಉಪನ್ಯಾಸಕ ಹುದ್ದೆಯೊಂದನ್ನು ಸೃಜಿಸುತ್ತಿದ್ದೇವೆ.ಈ ಕುರಿತು ಕುಲಪತಿ ದೇಜಗೌ ಜೊತೆ ಸಮಾಲೋಚಿಸಿದ್ದೇನೆ.ಆ ಪ್ರದೇಶದವರನ್ನೇ ಅಲ್ಲಿಗೆ ನೇಮಕಮಾಡಬೇಕು ಎನ್ನುವುದು ನಮ್ಮ ನಿಲುವು.ನೀವು ಅಲ್ಲಿನ ಮೊದಲ ತಂಡದಲ್ಲಿ ಮೊದಲ ಸ್ಥಾನ ಪಡೆದವರಾದ ಕಾರಣ ನಿಮ್ಮನ್ನು ಈಗ ಅಲ್ಲಿ ತಾತ್ಕಾಲಿಕ ನೆಲೆಯಲ್ಲಿ ಉಪನ್ಯಾಸಕರಾಗಿ ನೇಮಿಸುತ್ತೇವೆ.ಕುಲಪತಿಗಳು ಈ ಅಭಿಪ್ರಾಯವನ್ನು ಕೊಟ್ಟಿದ್ದಾರೆ.ಮುಂದೆ ನಿಮ್ಮ ಕೆಲಸದ ಪ್ರಗತಿ ನೋಡಿಕೊಂಡು ಖಾಯಂ ನೇಮಕಾತಿ ಮಾಡಿಕೊಳ್ಳಬಹುದು.ಆದರೆ ಖಾಯಂ ಆಗುತ್ತದೆ ಎನ್ನುವ ಭರವಸೆ ಇಲ್ಲ.’ ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ.ಅವರೇ ಒಂದು ಬಿಳಿಯ ಹಾಳೆ ಕೊಟ್ಟರು.ಅರ್ಜಿ ಹೇಗೆ ಬರೆಯಬೇಕು ಎಂದು ತಿಳಿಸಿದರು .ಅವರ ಎದುರೇ ಅರ್ಜಿ ಬರೆದು ಸಹಿ ಹಾಕಿ ,ಅಂಕ ಪಟ್ಟಿ ಸೇರಿಸಿ ,ಅವರ ಕೈಗೆ ಕೊಟ್ಟೆ.ಊರಿಗೆ ಹಿಂದಿರುಗಿದೆ.ಎರಡು ವಾರಗಳ ಬಳಿಕ ನೇಮಕಾತಿಯ ಆದೇಶ ಬಂತು.ಈಗ ನೆನಪಿಸಿಕೊಂಡರೂ ಕನಸಿನಂತೆ ಕಾಣುವ ಘಟನೆ.ಯಾವ ಸಂಪರ್ಕ ,ಕೋರಿಕೆ ,ಪ್ರಭಾವ ಇಲ್ಲದೆ ವಿಶ್ವವಿದ್ಯಾಲಯದಲ್ಲಿ ಕರೆದು ಕೆಲಸ ಕೊಟ್ಟ ಈ ಘಟನೆ ನನ್ನ ಮುಂದಿನ ಬದುಕಿನ ಗತಿಯನ್ನು ನಿರ್ಧರಿಸಿತು.ಜೊತೆಗೆ ನಾನು ಹೇಗೆ ಕೆಲಸಮಾಡಬೇಕು ಎನ್ನುವ ಪಾಠವನ್ನು ಕಲಿಸಿತು.

೧೯೭೦ರಿನ್ದ ಮಂಗಳೂರು ವಿಶ್ವವಿದ್ಯಾನಿಲಯ ಸ್ಥಾಪನೆ ಆದ ೧೯೮೦ರ ವರೆಗೆ ನಮ್ಮ ಸ್ನಾತಕೋತ್ತರ ಕನ್ನಡ ವಿಭಾಗ ಮೈಸೂರು ವಿವಿಯ ನೇರ ಆಡಳಿತದಲ್ಲಿದ್ದ ಕಾರಣ ,ಆ ಅವಧಿಯಲ್ಲಿ ಡಾ.ಹಾ ಮಾ ನಾಯಕರು ನಮ್ಮ ನಿರ್ದೇಶಕರು,ಅಧ್ಯಯನ  ಮಂಡಳಿಯ ಅಧ್ಯಕ್ಷರು.೧೯೭೫ರಲ್ಲಿ ಒಮ್ಮೆ ಮೈಸೂರಿಗೆ ನನ್ನನ್ನು ಬರಹೇಳಿ ,’ ಮಂಗಳೂರಿನ ಕನ್ನಡ ವಿಭಾಗದಲ್ಲಿ ತುಳು ಭಾಷೆ ,ಸಾಹಿತ್ಯ,ಇತಿಹಾಸವನ್ನು ಐಚ್ಚಿಕವಾಗಿ ಆರಂಭಿಸೋಣ,ಅದರ ಪಾಠಪಟ್ಟಿ ಸಿದ್ಧಪಡಿಸಿ ಕೊಡಿ ಎಂದರು .ಅದನ್ನು ಸಿದ್ಧಪಡಿಸಿ ಕೊಟ್ಟೆ.ತುಳುನಾಡಿನ ಇತಿಹಾಸ,ತುಳು ಭಾಷೆ ಸಾಹಿತ್ಯ ಮತ್ತು ಯಕ್ಷಗಾನ ಎನ್ನುವ ಮೂರು ಪತ್ರಿಕೆಗಳ ಪಾಠಪಟ್ಟಿ  ಸಿದ್ಧಪಡಿಸಿ ಕೊಟ್ಟೆ.ಅದಕ್ಕೆ  ಮೈಸೂರು ವಿವಿಯ ಅಧ್ಯಯನ ಮಂಡಳಿ ಮತ್ತು ಅಕಾಡೆಮಿಕ್ ಕೌನ್ಸಿಲ್ ಗಳಿಂದ ಅನುಮೋದನೆ ಮಾಡಿಸಿಕೊಂಡರು.ಹೀಗೆ ವಿಶ್ವವಿದ್ಯಾಲಯದ  ಎಂ ಎ ಪಾಠಪಟ್ಟಿಯಲ್ಲಿ ತುಳು ಭಾಷೆ ಸಾಹಿತ್ಯ ಜಾನಪದ ಮೊದಲ ಬಾರಿ ಸೇರ್ಪಡೆಯಾದದ್ದು ಹಾಮಾನಾ ಅವರ ಆಲೋಚನೆ ಮತ್ತು ಕಾರ್ಯಶಕ್ತಿಯಿಂದ ೧೯೭೫ರಲ್ಲಿ.ಇದರಿಂದಾಗಿ ಮುಂದೆ ಅನೇಕ ಮಂದಿ ಸಂಶೋಧಕರು ಈ ವಿಷಯಗಳಲ್ಲಿ ಹೆಚ್ಚಿನ ಅಧ್ಯಯನ  ನಡೆಸಲು ಅವಕಾಶ ಆಯಿತು.

ನಾನು ‘ತುಳು ಜನಪದ ಸಾಹಿತ್ಯ’ವನ್ನು ಕುರಿತು ಪಿಎಚ್.ಡಿ.ಪದವಿಗಾಗಿ ಸಂಶೋದನೆ ನಡೆಸಲು ಸೂಚಿಸಿದವರು ಹಾಮಾನಾ. ಈ ವಿಷಯಕ್ಕೆ ಅವರೇ ನನಗೆ ಮಾರ್ಗದರ್ಶಕರಾಗಬೇಕು ಎಂದು ನಾನು ಕೇಳಿಕೊಂಡಾಗ ಮೊದಲು ಒಪ್ಪಿಕೊಳ್ಳಲಿಲ್ಲ.ತುಳು ತನಗೆ ಗೊತ್ತಿಲ್ಲ ಎನ್ನುವ ಕಾರಣ ಹೇಳಿದರು.ಆದರೆ ಜಾನಪದದಲ್ಲಿ ಹೊಸ ಅಧ್ಯಯನ ವಿಧಾನಗಳನ್ನು ತಿಳಿದುಕೊಂಡಿದ್ದ ಕಾರಣ ನನ್ನ ಒತ್ತಾಸೆಗೆ ಕೊನೆಗೂ ಒಪ್ಪಿಕೊಂಡರು.ಓದಬೇಕಾದ ಇಂಗ್ಲಿಶ್ ಪುಸ್ತಕಗಳ ವಿವರ ಕೊಟ್ಟರು.ಕೆಲವನ್ನು ಅವರೇ ತರಿಸಿಕೊಟ್ಟರು.ವೈಯಕ್ತಿಕ ಕಾರಣಗಳಿಂದ ನನ್ನ ಸಂಶೋಧನೆಯ ಕೆಲಸ ನಿಧಾನವಾದಾಗ ನೋಂದಣಿ ರದ್ದು ಮಾಡುವ ನೋಟಿಸು ಕಳುಹಿಸಿದರು.ಮತ್ತೆ ಪ್ರತೀ ಅಧ್ಯಾಯವನ್ನು ಓದಿ,ಟಿಪ್ಪಣಿಗಳನ್ನು ಬರೆದು ,ಕೆಲವೆಡೆ ಹಸ್ತಪ್ರತಿಯಲ್ಲೇ ಮೆಚ್ಚುಗೆಯ ಮಾತುಗಳನ್ನು ಬರೆದರು.

೧೯೮೪ರಲ್ಲಿ ನಾನು ಕನ್ನಡ ವಿಭಾಗದ ಮುಖ್ಯಸ್ಥ ಆದ ಬಳಿಕ ಕರೆದಾಗಲೆಲ್ಲ ನಮ್ಮಲ್ಲಿಗೆ ಬಂದಿದ್ದಾರೆ.’ಕಡೆಂಗೋಡ್ಲು ಸಾಹಿತ್ಯ’ ಗ್ರಂಥದ ಬಿಡುಗಡೆಯನ್ನು ಮಾಡಿ (೧೯೮೭) ಹಿರಿಯ ತಲೆಮಾರಿನ ಕನ್ನಡ ಸಾಹಿತಿಗಳನ್ನು ನಾವು ಗೌರವದಿಂದ ನೆನೆಯಬೇಕಾದ ಪಾಠವನ್ನು ನನಗೆ ಕಲಿಸಿಕೊಟ್ಟಿದ್ದಾರೆ.ನಾನು ಪ್ರಸಾರಾಂಗದ ನಿರ್ದೇಶಕನಾಗಿ ಪ್ರಕಟಿಸಿದ ‘ಶಿವರಾಮ ಕಾರಂತರ ಲೇಖನಗಳು -ಸಂಪುಟ ೫ ಮತ್ತು ೬’-ಇದನ್ನು ಕಾರಂತರ  ಸಮ್ಮುಖದಲ್ಲಿ ೧೯೯೫ರಲ್ಲಿ ಬಿಡುಗಡೆ ಮಾಡಿದ ಕಾರ್ಯಕ್ರಮದ ಫೋಟೋಗಳನ್ನು ಕೆಳಗೆ ಬಲಗಡೆ ಕೊಟ್ಟಿದ್ದೇನೆ.ಅನೇಕ ಬಾರಿ ಮೈಸೂರಿನಿಂದ ಕಾರಿನಲ್ಲಿ ಮಂಗಳೂರು ವಿವಿಗೆ ಕಾರ್ಯಕ್ರಮಗಳಿಗೆ ಬಂದಾಗ ,ವಿವಿಯ ನಿಯಮಾನುಸಾರ ಕಿಲೋಮೀಟರ್ ಲೆಕ್ಕದಲ್ಲಿ ಪ್ರಯಾಣ ಭತ್ಯ ಕೊಡುವಾಗ ಅವರು ಬಾಡಿಗೆ ಕಾರಿನವನಿಗೆ ಕೊಡಬೇಕಾದಷ್ಟು ಹಣ ಸಿಗದ ಸಂದರ್ಭಗಳು ನನಗೆ ನೆನಪಾಗುತ್ತವೆ.ಅಂತಹ ಸಂದರ್ಭಗಳಲ್ಲಿ ನಾನು ಮುಜುಗರ ಮತ್ತು ಅಸಹಾಯಕತೆಯನ್ನು ಅನುಭವಿಸುತ್ತಿದ್ದಾಗ ಹಾಮಾನಾ ನನಗೆ ಸಮಾಧಾನ ಮಾಡುತ್ತಿದ್ದರು ;’ಇರಲಿ ಸ್ವಾಮಿ,ಕನ್ನಡದ ಕೆಲಸಕ್ಕಾಗಿ ನಾವು ಅಷ್ಟೂ ಖರ್ಚು ಮಾಡದಿದ್ದರೆ ಹೇಗೆ ?’ ನೈತಿಕತೆಯ ಅನೇಕ ಪಾಠಗಳನ್ನು ಆವರಿಂದ ನಾನು ಕಲಿತಿದ್ದೇನೆ.

ಹಾಮಾನಾ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿಯಾಗಿ ಎರಡು ವರ್ಷ ಕೆಲಸಮಾಡಿ,ತಾತ್ವಿಕ ಕಾರಣಗಳಿಗಾಗಿ ಆ ಹುದ್ದೆಗೆ ರಾಜೀನಾಮೆ ಕೊಟ್ಟರು.ಅನೈತಿಕ ರಾಜಕಾರಣಿಗಳ ಆಳುವವರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಅವರ ಆತ್ಮಸಾಕ್ಷಿ ಒಪ್ಪಲಿಲ್ಲ.ಆದರೆ ತಮ್ಮ ರಾಜೀನಾಮೆಯನ್ನು ಅವರು ತಮ್ಮ ಇಮೇಜ್ ಹೆಚ್ಚಿಕೊಳ್ಳಲು ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ.ಸಾರ್ವಜನಿಕವಾಗಿ ಅದನ್ನು ಚರ್ಚಿಸಲಿಲ್ಲ.ಆದರೆ ಒಂದು ನೈತಿಕ ದಿಟ್ಟ ನಿಲುವಿನ ಸಂದೇಶವನ್ನು ಆಳುವವರಿಗೆ ಮುಟ್ಟಿಸಿದರು.ಅವರ ಬದುಕಿನ ನಿಲುವುಗಳೆಲ್ಲವೂ ತಮ್ಮ ವ್ಯಕ್ತಿತ್ವದ ನೈತಿಕತೆಯ ಗಟ್ಟಿತನಕ್ಕೆ ಬಳಕೆಯಾದುವೆ ಹೊರತು ,ಪ್ರದರ್ಶನಕ್ಕೆ ಪ್ರಚಾರಕ್ಕೆ ಆಹಾರವಾಗಲೀಲ್ಲ.ದೇವರು ಧರ್ಮದ ಬಗೆಗಿನ ಅವರ ನಿರ್ಲಿಪ್ತ ಧೋರಣೆ,ಜಾತಿ ಸಂಘಟನೆಗಳಿಂದ ಸಂಪೂರ್ಣವಾಗಿ ದೂರ ಉಳಿಯುವ ನಿಲುವು- ಇಂತಹ ಹಲವು ವೈಚಾರಿಕ ಸ್ಪಷ್ಟತೆಗಳು ಹಾಮಾನಾರಲ್ಲಿ ಇದ್ದವು.ಆದರೆ ಅದನ್ನು ಪ್ರಚಾರಕ್ಕೆ ತಮ್ಮ ವೈಭವೀಕರಣಕ್ಕೆ  ಅವರು ಬಳಸಿಕೊಳ್ಳಲಿಲ್ಲ.

ಹಾಗಾಗಿಯೇ ಹಾಮಾನಾ ಅವರು ಮೈಸೂರು ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದಾಗ ನಡೆಸಿದ ಅನೇಕ ಯೋಜನೆಗಳು ಯಶಸ್ವಿಯಾಗಲು ಅವರು ಜಾತಿ ಪಂಥ ಪ್ರದೇಶಗಳ ಭೇದವಿಲ್ಲದೆ ,ಪ್ರಭಾವಗಳ ಮಾಲಿನ್ಯವಿಲ್ಲದೆ ಸಮರ್ಪಕವಾಗಿ ಪ್ರಾಮಾಣಿಕವಾಗಿ ಕೆಲಸಮಾಡುವವರನ್ನು ಶೋಧಿಸಿ ಆಯ್ಕೆಮಾಡಿ ಸರಿಯಾಗಿ ಬಳಸಿಕೊಂಡದ್ದು ಮುಖ್ಯ ಕಾರಣ.ಕನ್ನಡ ವಿಶ್ವಕೋಶ,ವಿಷಯ  ವಿಶ್ವಕೋಶ,ಕನ್ನಡ ಸಾಹಿತ್ಯ ಚರಿತ್ರೆ,ಕನ್ನಡ ಛಂದಸ್ಸಿನ ಚರಿತ್ರೆ,ಶಾಸನ ಸಂಪುಟಗಳು,ಜಾನಪದ ವಸ್ತುಸಂಗ್ರಹಾಲಯ -ಹೀಗೆ ಹಲವಾರು ಯೋಜನೆಗಳು ಅಲ್ಲಿ ಕಾರ್ಯರೂಪಕ್ಕೆ ಬಂದವು.ಸಾಮೂಹಿಕ ನಾಯಕತ್ವದಲ್ಲಿ ಅವರಿಗೆ  ವಿಶ್ವಾಸ ಇತ್ತು.ಅವರು ಕಾಯಕದ ಕರ್ಣಧಾರ ಆಗಿದ್ದರು.

ಹಾಮಾನಾ ಅವರನ್ನು ನಾನು ಆಹ್ವಾನಿಸಿದ ಒಂದು ಕಾರ್ಯಕ್ರಮ ‘ಕುಶಿ ಹರಿದಾಸ ಭಟ್ಟ ಅವರ ಸಂಸ್ಮರಣ’ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಕ್ಕೆ.ಅದು ನಡೆದದ್ದು ೧೩ ಅಕ್ಟೋಬರ ೨೦೦೦ ದಂದು.ನಮ್ಮೆಲ್ಲರ ಹಿತೈಷಿ ಹಿರಿಯರು ಕುಶಿಯವರು ಹಾಮಾನಾ ಅವರ ಆಪ್ತ ಸ್ನೇಹಿತರು.ಅದೊಂದು ಸಂತಾಪದ ಮತ್ತು ಮರುನೆನಕೆಯ ಕಾರ್ಯಕ್ರಮ.ಹಿರಿಯ ಸಾಹಿತಿ ಅಮೃತ ಸೋಮೇಶ್ವರ ಮತ್ತು ಉಡುಪಿಯ ಹೇರಂಜೆ ಕೃಷ್ಣ ಭಟ್ ಅತಿಥಿಗಳಾಗಿ ವೇದಿಕೆಯಲ್ಲಿ ಇದ್ದರು.ನಾಯಕರು ಕುಶಿ ಜೊತೆಗಿನ ತಮ್ಮ ಸುದೀರ್ಘ ಸ್ನೇಹದ ಅನೇಕ ಅಪೂರ್ವ ಸಂಗತಿಗಳನ್ನು ತೆರೆಯುತ್ತಾ ಆರ್ದ್ರರಾದರು.ಸಾವಿನ ಬಗ್ಗೆ ಮಾತಾಡಿದರು.ಎಂದಿನಂತೆಯ ಹಾಮಾನಾ ಅವರ  ಲವಲವಿಕೆ ,ನಗು ಉತ್ಸಾಹ ಆ ದಿನ ಇರಲಿಲ್ಲ.ಕುಶಿ ಅವರಿಗೆ ಗೌರವ ಡಾಕ್ಟರೇಟ್ ಕೊಡದೆ ಮಂಗಳೂರು ವಿವಿ ತಪ್ಪುಮಾಡಿದೆ ಎನ್ನುವುದನ್ನು ಕಟುವಾಗಿ ಹೇಳಿದರು.

ಇದು ನಮ್ಮ ಪಾಲಿಗೆ ಹಾಮಾನಾ ಅವರ ಕೊನೆಯ ದರ್ಶನ ಮತ್ತು ಕೊನೆಯ ಕಾರ್ಯಕ್ರಮ ಆಗುತ್ತದೆ ಎಂದು ನಾನು ಭಾವಿಸಿರಲಿಲ್ಲ.ಈ ಕಾರ್ಯಕ್ರಮ ನಡೆದು (೧೩ ಅಕ್ಟೋಬರ ೨೦೦0 ) ಒಂದು ತಿಂಗಳ ಒಳಗೆ ,೧೦ ನವಂಬರ ೨೦೦೦ ರಂದು ಅವರು ನಮ್ಮನ್ನು ಅಗಲಿದರು.ಕೆಳಗೆ ಎಡಗಡೆಯಲ್ಲಿ ಇರುವ ಫೋಟೋ -ಕುಶಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹಾಮಾನಾ ಮಾತಾಡುತ್ತಿರುವ ಒಂದು ಅಪೂರ್ವ ,ಆದರೆ ನಮಗೆ ವಿಷಾದದ ದಾಖಲೆಯ ಚಿತ್ರ.

ಹಾಮಾನಾ ಅವರಿಗೆ ಅರುವತ್ತು ವರ್ಷ ತುಂಬಿದಾಗ ಅವರ ಸ್ನೇಹಿತರು ಅಭಿಮಾನಿಗಳು ಹೊರತಂದ ಅಭಿನಂದನಗ್ರಂಥ -‘ಮಾನ’ :ಸಂ .ಎಸ.ಎಲ್.ಭೈರಪ್ಪ,ಜೆ.ಆರ್.ಲಕ್ಷ್ಮಣ ರಾವ್ ,ಪ್ರಧಾನ ಗುರುದತ್ತ-೧೯೯೨.ಅದರಲ್ಲಿ ಶಿವರಾಮ ಕಾರಂತರು ಬರೆದ ಕೆಲವು ಮಾತುಗಳು ಇಲ್ಲಿವೆ :

“ವಿಶಾಲ ಪರಿಶೀಲನೆಯಿಂದ ,ಆಗಾಗ ತಿಳಿದು ಬಂದುದನ್ನು ನಿರ್ದಾಕ್ಷಿಣ್ಯವಾಗಿ ಹೇಳುತ್ತಾ ಬಂದವರು ಡಾ.ಹಾ.ಮಾ.ನಾಯಕರು.ಅವರ ತಾಳ್ಮೆಯೂ ವಿಶೇಷ ,ಅಭಿರುಚಿಯೂ ವಿಶೇಷ; ಅವುಗಳ ಪ್ರಕಟಣೆಯೂ ಧಾರಾಳ…ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ -ಕನ್ನಡದಲ್ಲಿ -ಏನಾಗಿದೆ ,ಆಗುತ್ತಿದೆ ಎಂದು ಹೇಳಬಲ್ಲವರು ಇರುವುದಾದರೆ ಅದು ಹಾ.ಮಾ.ನಾಯಕರು.”-ಶಿವರಾಮ ಕಾರಂತ.

‘ಮಾನ’ ಅಭಿನಂದನ ಗ್ರಂಥದಲ್ಲಿ ಚಂದ್ರಶೇಖರ ಕಂಬಾರರು ಹಾಮಾನಾ ಬಗ್ಗೆ ಬರೆದ ಮಾತುಗಳು ,ಇಪ್ಪತ್ತು ವರ್ಷಗಳ ಹಿಂದಿನವು. ಆದರೆ ಅವು  ಕವಿ ನಾಟಕಕಾರ ಕಂಬಾರರ ಒಳನೋಟದ ವಿಮರ್ಶಾಸೂಕ್ಷ್ಮವನ್ನು  ಅನಾವರಣ ಮಾಡುತ್ತವೆ :

“ಕನ್ನಡಿಗರ ಬದುಕಿನ ಒಳಿತಿಗೆ ,ಮೌಲಿಕತೆಗೆ,ಸೃಜನಶೀಲತೆಗೆ ,ಅಭಿಮಾನಕ್ಕೆ ಯಾವೆಲ್ಲ ತಿಳುವಳಿಕೆ ಅಗತ್ಯವೆಂದು ,ಉಪಯುಕ್ತವೆಂದು ಅವರಂದುಕೊಂಡರೋ ಅದೆಲ್ಲದರ ಬಗ್ಗೆ ಬರೆದಿದ್ದಾರೆ ,ಬರೆಯುತ್ತ ಇದ್ದಾರೆ .ಈ ಎಲ್ಲ ಬರೆಹಗಳ ಹಿಂದೆ ಪ್ರಜ್ಞಾಪೂರ್ವಕವಾದ ,ಸುಸಂಸ್ಕೃತ ಮನಸ್ಸೊಂದು ಕಾಳಜಿಪೂರ್ವಕ ಆಯ್ಕೆಮಾಡುವುದನ್ನು,

ಜವಾಬ್ದಾರಿಯಿಂದ ನಿರೂಪಣೆಮಾಡುವುದನ್ನು ಕಾಣಬಹುದು. ..ಸಾಹಿತ್ಯ ನಮ್ಮ ಸಾಂಸ್ಕೃತಿಕ ಬದುಕಿನ ಒಂದು ಭಾಗ.ಅದನ್ನು ಬಿಟ್ಟರೆ ಅದಕ್ಕೆ ಪ್ರತ್ಯೇಕ ಅಸ್ತಿತ್ವ ಇರಬಾರದು ಎನ್ನುವ ಒಂದು ವಿವೇಕ ಮತ್ತು ನಂಬಿಕೆ ಈ ಬರಹಗಳ ಹಿನ್ನೆಲೆಗಿದೆ.ಅಂದರೆ ಹಾಮಾನಾ ಬದುಕು-ಬರೆಹಗಳ ನಡುವೆ ಬಿರುಕಿಲ್ಲ.ಅವರು ಬರೆದದ್ದನ್ನು ಬದುಕುತ್ತಾರೆ,ಬದುಕಿದ್ದನ್ನು ಬರೆಯುತ್ತಾರೆ .ಆದ್ದರಿಂದ ಅವರ ವ್ಯಕ್ತಿತ್ವವೇ ನಮಗೊಂದು ದೊಡ್ಡ ಮೌಲ್ಯವಾಗುತ್ತದೆ.”-ಚಂದ್ರಶೇಖರ ಕಂಬಾರ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

8 Responses to “ಕನ್ನಡದ ಮಾನ ಎತ್ತರಿಸಿದ ಹಾಮಾನಾ”

RSS Feed for ಬಿ ಎ ವಿವೇಕ ರೈ Comments RSS Feed

ಸರ್, ಹಾಮಾನಾ ಅವರ ಬಗ್ಗೆ ಮನಮುಟ್ಟುವಂತಹ ಲೇಖನ ಇದು. ಜೊತೆಗೆ ಮಾಹಿತಿಯುಕ್ತವಾಗಿದ್ದು, ಸಂಗ್ರಹಯೋಗ್ಯವೂ ಆಗಿದೆ. ಮೈಸೂರು ಪ್ರಸಾರಾಂಗದಲ್ಲಿ ಸದಸ್ಯರಾಗಿದ್ದುದರಿಂದ, ಅವರ ತಮ್ಮನ ಪುಸ್ತಕವೊಂದನ್ನು ಪ್ರಕಟಿಸಲು ವಿರೋದಿಸಿದ್ದರಂತೆ! ಆಗ ಕುವೆಂಪು ಅವರೇ, ನೀವು ಕೊಡುತ್ತಿರುವ ಕಾರಣ ಬಯಾಲಾಜಿಕಲ್; ಲಾಗಿಕಲ್ ಅಲ್ಲ! ಎಂದಿದ್ದರಂತೆ. ಕನ್ನಡವೇ ನನ್ನ ಮೊದಲ ಪ್ರೀತಿ, ಎರಡನೆಯ ಪ್ರೀತಿ, ಮೂರನೆಯ ಪ್ರೀತಿಯೂ ಹೌದು ಎನ್ನುವ ಹಾಮಾನಾ ತರಹದ ವ್ಯಕ್ತಿಗಳ ಸಂತತಿ ಸಾವಿರವಾಗಬೇಕಿದೆ.

ಸತ್ಯನಾರಾಯಣ ,ನೀವು ಹೇಳಿದ್ದು ಸರಿ.ಮೌಲ್ಯಗಳನ್ನು ವೈಯಕ್ತಿಕ ಬದುಕಿನಲ್ಲಿ ಹಾಮಾನಾ ಅವರಂತೆ ಅನುಸರಿಸಿದ ಸಾಹಿತಿಗಳು ಬಹಳ ವಿರಳ.

ಹಾ ಮಾ ನಾ ಕುರಿತ ಲೇಖನ ತುಂಬಾ ಮಾರ್ಮಿಕವಾಗಿದೆ. ಅವರ ಆನಂತರ ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆ ನಿರೀಕ್ಸಿಸಿದ ಮಟ್ಟಕ್ಕೆ ಏರಲೇ ಇಲ್ಲ.. ನೀವು ಅಂದದ್ದು ನಿಜ, ಮಾಸ್ತಿ, ಪುತಿನ, ಕೆ ಎಸ ನರಸಿಂಹ ಸ್ವಾಮಿ ಮೊದಲಾದವರ ಬಗ್ಗೆ ದೇಶಕ್ಕೆ ತಿಳಿದಿಲ್ಲ, ಈ ಕುರಿತು ಕರ್ನಾಟಕ ಅಧ್ಯಯನ ಕೇಂದ್ರವೊಂದನ್ನು ದೆಹಲಿಯಲ್ಲಿ ತೆರೆಯಲು ಸರಕಾರಕ್ಕೆ ನಾನೊಂದು ಪ್ರಸ್ತಾವ ಸಲ್ಲಿಸಿದ್ದೆ. ಅಗತ್ಯ ಆಗಬೇಕಾದದ್ದು ಎಂದರು, ಮತ್ತೇನು ಆಗಲೇ ಇಲ್ಲ. ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ನನ್ನಂತಹವರಿಗೆ ಅನೇಕ ಮಿತಿಗಳಿವೆ..ಯಾರಾದರು ಕೆಲಸ ಮಾಡದೇ ಹೋದರೆ ರಾಷ್ಟೀಯ ಮಟ್ಟದಲ್ಲಿ ಕರ್ನಾಟಕದ ದ್ವನಿ ಇನ್ನಷ್ಟು ದುರ್ಬಲವಾಗುತ್ತದೆ..

ಪುರುಷೋತ್ತಮ್,ಕನ್ನಡವನ್ನು ಕನ್ನಡ ಸಾಹಿತ್ಯವನ್ನು ಮತ್ತು ಸಾಹಿತಿಗಳನ್ನು ಕರ್ನಾಟಕದ ಹೊರಗೆ ಸಮರ್ಪಕವಾಗಿ ಪ್ರಕಟಿಸುವ ಕೆಲಸ ನಮ್ಮಲ್ಲಿ ಆಗಿಲ್ಲ.ನಮ್ಮ ಕನ್ನಡದ ಬಗೆಗಿನ ಅಭಿಮಾನ ಈ ದಿಕ್ಕಿನಲ್ಲಿ ವ್ಯವಸ್ಥಿತವಾಗಿ ಕೆಲಸ ಮಾಡದಿದ್ದರೆ ನೀವು ಹೇಳಿದಂತೆ ಕನ್ನಡ ಸಾಹಿತ್ಯ ವ್ತಕ್ತಿಗತ ಮಟ್ಟದಲ್ಲಿ ಮಾತ್ರ ಹೊರಗಡೆ ಬಿಂಬಿತವಾಗುತ್ತದೆ.

Sir,
Haamaanaa avara bagge neevu bareda lekhana nammannu naavu aathamavalokanakke hachuchuvanthe otthayisuttide. Doddavara bagge oduvagalella naveshtu sannavaru embudu thiliyuttade.
Thank you sir
ನಿತ್ಯಾನಂದ ಬಿ ಶೆಟ್ಟಿ

ನಿತ್ಯಾನಂದ,ಒಳ್ಳೆಯ ಸಾಹಿತ್ಯದಷ್ಟೇ ಒಳ್ಳೆಯ ಸಾಹಿತಿಗಳೂ ನಮಗೆ ಮುಖ್ಯ.

ಲೇಖನ ಮತ್ತೆ ಫೋಟೋಸ್ ಚೆನ್ನಾಗಿದೆ ಸರ್. ಹಾ ಮಾ ನ ಅವರ ಬಗ್ಗೆ ಅಭಿಮಾನ ಹೆಚ್ಚಾಯಿತು. ಒಳ್ಳೆ ಲೇಖನ .

ತುಂಬಾ ಸಂತೋಷ.ಧನ್ಯವಾದ.


Where's The Comment Form?

Liked it here?
Why not try sites on the blogroll...

%d bloggers like this: