ಮರೆತೇನಂದರ ಮರೆಯಲಿ ಹೆಂಗಾ

Posted on ಸೆಪ್ಟೆಂಬರ್ 20, 2011. Filed under: ಕನ್ನಡ ಸಾಹಿತ್ಯ | ಟ್ಯಾಗ್ ಗಳು:, , , , |


೧೯೮೯.ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ .ಎಂ.ಐ.ಸವದತ್ತಿ ಅವರು ಕುಲಪತಿ ಆಗಿದ್ದ ಕಾಲ.ನಾನು ಆಗ ಅಲ್ಲಿ ಕನ್ನಡ ವಿಭಾಗದ ಮುಖ್ಯಸ್ಥನಾಗಿದ್ದೆ.ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಂಗಕಲೆಗಳ ಅಧ್ಯಯನ ಕೇಂದ್ರ ಆಗಬೇಕು ಎಂಬ ಒತ್ತಾಸೆಯನ್ನು ಕೊಟ್ಟವರು ಆಗ ನಮ್ಮಲ್ಲಿ ಸೆನೆಟ್ ಸದಸ್ಯರಾಗಿದ್ದ ರಂಗಭೂಮಿ ನಿರ್ದೇಶಕ ಪ್ರೊ.ಉದ್ಯಾವರ ಮಾಧವಾಚಾರ್ಯ.ಕುಲಪತಿಗಳು ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಹೇಳಿದರು.ನಾನು ಬಿ.ವಿ.ಕಾರಂತ,ಕೆ.ವಿ.ಸುಬ್ಬಣ್ಣ ಮತ್ತು ಚಂದ್ರಶೇಖರ ಕಂಬಾರ ಅವರ ಹೆಸರುಗಳನ್ನು ಕೊಟ್ಟೆ .’ಇವರೆಲ್ಲಾ ನಮ್ಮ ಸಭೆಗಳಿಗೆ ಬರುತ್ತಾರಾ?’ಎನ್ನುವ ಸಂಶಯ ಕುಲಪತಿಗಳಿಗೆ ಇತ್ತು.’ನಾನು ಕರೆಸುತ್ತೇನೆ  ‘ಎಂದು ಅವರಿಗೆ ಭರವಸೆ ಕೊಟ್ಟೆ.ಕಾರಂತ,ಸುಬ್ಬಣ್ಣ,ಕಂಬಾರರನ್ನು ಫೋನಿನಲ್ಲಿ ಸಂಪರ್ಕಿಸಿದೆ.ಎಲ್ಲರೂ ಪ್ರೀತಿಯಿಂದ ಒಪ್ಪಿಕೊಂಡರು.ಅವರ ಅನುಕೂಲ ನೋಡಿಕೊಂಡು ಕೊಣಾಜೆಯಲ್ಲಿ ಒಂದು ದಿನ ಸಭೆ ಗೊತ್ತು ಮಾಡಿದೆ.ಸುಬ್ಬಣ್ಣ ಫೋನ್ ಮಾಡಿ  ಹೇಳಿದರು :’ಉಬ್ಬಸ ಜಾಸ್ತಿ ಆಗಿದೆ.ನನ್ನ ಸಲಹೆಗಳನ್ನು ಬರೆದು ಕಳುಹಿಸುತ್ತೇನೆ.’ಎಂದು.ಹಾಗೆಯೇ ಬರೆದೂ ಕಳುಹಿಸಿದರು.ಸಭೆಗೆ ಬಿ.ವಿ.ಕಾರಂತ,ಕಂಬಾರ,ಉದ್ಯಾವರ ಮಾಧವ ಆಚಾರ್ಯ  ಬಂದರು.ಇಡೀ ದಿನ ಸಮಾಲೋಚನೆ ನಡೆಯಿತು.ರಂಗಕಲೆಯ ಕೋರ್ಸ್ ಗಳ ರೂಪುರೇಷೆ ರೂಪು ತಾಳಿತು.ಕಾರಂತ ಮತ್ತು ಕಂಬಾರರು ಒಂದು ಬಯಲು ರಂಗಮಂದಿರ ಕ್ಯಾಂಪಸ್ ನಲ್ಲಿ ಆಗಬೇಕು ಎಂದರು.ನಾವು ಕ್ಯಾಂಪಸ್ಸಿನಲ್ಲಿ  ಸುತ್ತಾಡಿದೆವು.ಕೊನೆಗೆ ಮುರಕಲ್ಲಿನ ಒಂದು ತಿಟ್ಟನ್ನು ಅವರಿಬ್ಬರೂ ಆಯ್ಕೆ ಮಾಡಿದರು.ಅಲ್ಲಿ ಇಬ್ಬರೂ ಅತಿ ಸಂಭ್ರಮದಿಂದ ನಿಂತು ಕೂತು ಓಡಾಡಿ ,ಒಂದು ಮಾನಸಿಕ ರಂಗಭೂಮಿಯನ್ನೇ  ನಿರ್ಮಾಣಮಾಡಿದರು .ಆ ದಿನದ   ಸಭೆಯ ಕೆಲವು ಹಳೆಯ ಫೋಟೋಗಳನ್ನು ಇಲ್ಲಿ ಕೊಟ್ಟಿದ್ದೇನೆ.ನನ್ನ ಸಹಿತ ಫೋಟೋದಲ್ಲಿ ಇರುವವರನ್ನು ಗುರುತು ಹಿಡಿಯುವದು ಕಷ್ಟವಾಗಿದೆ! ನಮ್ಮ ವರದಿಯು ಹಣದ ಕೊರತೆಯ ಕಾರಣವಾಗಿ ಅನುಷ್ಠಾನ ಆಗಲಿಲ್ಲ.ಆದರೆ ಆ ದಿನದ ಲವಲವಿಕೆಯ ಸಂತಸದ ನೆನಪುಗಳನ್ನು ‘ಮರೆತೆನೆಂದರ  ಮರೆಯಲಿ ಹೆಂಗಾ !’

ಇನ್ನೊಂದು ಬಾರಿ ಕಂಬಾರರು ನಮ್ಮ ಕನ್ನಡ ವಿಭಾಗಕ್ಕೆ ಬಂದಿದ್ದಾಗ ಮಂಗಳೂರು ಆಕಾಶವಾಣಿಯವರು ಅವರ ಸಂದರ್ಶನ ಮಾಡಲು ನನ್ನನ್ನು ಹೇಳಿದರು .ಸಂದರ್ಶನದ ನಡುವೆ ನನಗೆ ಪ್ರಿಯವಾದ ಅವರ ‘ಮರತೆನೆಂದರ ಮರೆಯಲಿ ಹೆಂಗ ಮಾವೊತ್ಸೆತುಂಗ ‘ಕವನ ಹಾಡಲು ಹೇಳಿದೆ.ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಕತೆ.ತಮ್ಮ ಜನಪದ ಕಂಠದಿಂದ ಅದ್ಭುತವಾಗಿ  ಹಾಡಿದರು.ಈ ಕವನವನ್ನು ನಾನು ಮಂಗಳೂರು ವಿವಿಯ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕನಾಗಿದ್ದ ಸಂದರ್ಭದಲ್ಲಿ ತರಗತಿಯಲ್ಲಿ ಪ್ರತೀ ವರ್ಷ ಓದುತ್ತಿದ್ದೆ.ಸಾಹಿತ್ಯ ವಿಮರ್ಶೆಯ ತರಗತಿಯಲ್ಲಿ ಎಜ್ರಾ ಪೌಂಡ್ ನ ಲೊಗೊಪೋಯಿಯ ,ಮೆಲೊಪೋಯಿಯ ಮತ್ತು ಫೆನೋಪೋಯಿಯಗಳಿಗೆ ಕನ್ನಡದ ನಿದರ್ಶನ ಕೊಡುವಾಗ ಕಾವ್ಯದ ಗೇಯತೆಯ ಗುಣಕ್ಕೆ ಉದಾಹರಣೆಯಾಗಿ ಕಂಬಾರರ ‘ಮರತೆನೆಂದರ ಮರೆಯಲಿ ಹೆಂಗಾ’ ಕವನವನ್ನು ನರಸಣ್ಣರ (ಬುಡುಬುಡಿಕೆಯವರ) ಧಾಟಿಯಲ್ಲಿ ವಾಚಿಸುತ್ತಿದ್ದೆ.ಮೈ ಮರೆಸುವ ಗುಂಗು ಹಿಡಿಸುವ ಧಾಟಿ ಆ ಕವನದ ಅರ್ಥಕ್ಕೆ ಹೇಗೆ ಹೊಂದುತ್ತದೆ ಎನ್ನುವುದನ್ನು ವಿವರಿಸುತ್ತಿದ್ದೆ.ವಿದ್ಯಾರ್ಥಿಗಳು ಖುಷಿ ಪಡುತ್ತಿದ್ದರು.

೧೯೯೧.ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ಪ್ರಸಾರಾಂಗ’ವನ್ನು ಆರಂಭಿಸಬೇಕು ಎಂದು ಕುಲಪತಿ ಸವದತ್ತಿ ಅವರಿಗೆ ದುಂಬಾಲು ಬಿದ್ದಾಗ ಅದರ ಹೊಣೆಯನ್ನು ನನ್ನ ತಲೆಗೆ ಕಟ್ಟಿ ,ಅನುದಾನ ಇಲ್ಲದೆ ಆರಂಭಿಸಲು  ಹೇಳಿದರು.ಪ್ರಸಾರಾಂಗದ ಮೊದಲ ಉಪನ್ಯಾಸಗಳನ್ನು ಪುತ್ತೂರಿನಲ್ಲಿ ಏರ್ಪಾಡು ಮಾಡಿದೆ.ಮೊದಲ ಉಪನ್ಯಾಸ ಕೊಡಲು ಕಂಬಾರರನ್ನು ಕರೆದೆ.ಅವರು ಆಗತಾನೆ ‘ಕನ್ನಡ ವಿಶ್ವವಿದ್ಯಾಲಯ’ದ ವಿಶೇಷ ಅಧಿಕಾರಿ ಆಗಿದ್ದರು.ನನ್ನ ಒತ್ತಾಯಕ್ಕೆ ಮಣಿದು ಪುತ್ತೂರಿಗೆ ಬಂದರು.’ರಂಗಭೂಮಿ’ಯ ಬಗ್ಗೆ ಅವರ ಉಪನ್ಯಾಸ .ಕುಲಪತಿ ಸವದತ್ತಿ ಅವರದ್ದು ಕಂಬಾರರ  ಜೊತೆಗಿನ ಇನ್ನೊಂದು ಉಪನ್ಯಾಸ ,’ವಿಜ್ಞಾನ ಮತ್ತು ಸಾಹಿತ್ಯ’ದ ಬಗ್ಗೆ ಕನ್ನಡದಲ್ಲಿ.ಸ್ವಾಗತ ಭಾಷಣ ಮಾಡುತ್ತಾ ನಾನು’ವಿಶೇಷಾಧಿಕಾರಿ ಕಂಬಾರರು ಕನ್ನಡ ವಿಶ್ವವಿದ್ಯಾಲಯ’ದ ಕುಲಪತಿಗಳಾಗಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ನಿಜದ ರಂಗಭೂಮಿಯನ್ನು ಕಟ್ಟಬೇಕು’ಎಂದು ಹೇಳಿದೆ.ಕಾರ್ಯಕ್ರಮದ ಬಳಿಕ ಪುತ್ತೂರಿನ ಹೋಟೆಲ್ ಒಂದಕ್ಕೆ ಊಟಕ್ಕೆ ಹೋದೆವು.ಕಂಬಾರರು,ನಾನು,ಆಗ ನನ್ನ ಸಹೋದ್ಯೋಗಿಗಳಾಗಿದ್ದ ಅಧ್ಯಾಪಕ ಮಿತ್ರರು ಪುರುಷೋತ್ತಮ ಬಿಳಿಮಲೆ ಮತ್ತು ಚಿನ್ನಪ್ಪ ಗೌಡ ಇದ್ದರು.ಊಟದ ನಡುವೆ ಪೂರ್ತಿ ಕನ್ನಡ ವಿವಿಯನ್ನು ಕಟ್ಟುವ ಬೆಳೆಸುವ ಮಾತುಗಳದ್ದೆ ರಿಂಗಣ.ತಾವು ಕುಲಪತಿ ಆದ ಬಳಿಕ ನಾನು ಅಲ್ಲಿಗೆ ಪ್ರೊಫೆಸರ್ ಆಗಿ ಬರಬಹುದೇ ಎಂದು ಕೇಳಿದರು.ಬರಬೇಕು ಎನ್ನುವ ಒತ್ತಾಸೆ ಅವರ ಮಾತಿನಲ್ಲಿ ಇತ್ತು.ನಾನು’ ಒಲ್ಲೆ ‘ ಎಂದೆ.ನಾನು ನಡೆಸಬೇಕಾದ ಕನ್ನಡ ವಿಭಾಗ,ನಾನೇ ಹುಟ್ಟು ಹಾಕಿದ ಪ್ರಸಾರಾಂಗ,ತುಳು ಪೀಠ ,ಆರಂಭಿಸಬೇಕಾದ ಶಿವರಾಮ ಕಾರಂತ ಪೀಠ -ಇವನ್ನೆಲ್ಲಾ ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ‘ಬರಲು ಸಾಧ್ಯವಾಗುವುದಿಲ್ಲ ಎಂದೆ.ಮತ್ತೆ ಕಂಬಾರರು ಬಿಳಿಮಲೆ ಮತ್ತು ಚಿನ್ನಪ್ಪ ಗೌಡರನ್ನು ಅಲ್ಲಿಗೆ ಸೆಳೆಯಲು ಪ್ರಸ್ತಾವ ಮಾಡಿದರು.ಅವರಿಬ್ಬರೂ ಹೋದರೆ ನಾನು ಕನ್ನಡ ವಿಭಾಗ ನಡೆಸುವುದು ಬಹಳ ಕಷ್ಟ ಎಂದೆ.ಆದರೆ ಅದು ಅವರ ನಿರ್ಧಾರಕ್ಕೆ ಬಿಟ್ಟದ್ದು ಎಂದೂ ಹೇಳಿದೆ.ಆ ಕುರಿತು ಮಾತುಕತೆ ಅಲ್ಲಿಗೇ ನಿಂತಿತು.ಮುಂದೆ ಬಿಳಿಮಲೆ ಕನ್ನಡ ವಿಶ್ವವಿದ್ಯಾಲಯಕ್ಕೆ ಹೋದರು.ಕನ್ನಡ ವಿವಿಗೆ ಶೈಕ್ಷಣಿಕ ಸಾಂಸ್ಕೃತಿಕ ಘನತೆ ತಂದುಕೊಟ್ಟರು.ಮುಂದೆ ದೆಹಲಿಗೆ ಹೋಗಿ ಕನ್ನಡಕ್ಕೆ ರಾಷ್ಟ್ರೀಯ ಅನನ್ಯತೆಯ ಶಕ್ತಿ ತಂದುಕೊಟ್ಟರು.ಚಿನ್ನಪ್ಪ ಗೌಡರು ನನ್ನ ಜೊತೆಗೆಯೇ  ಮಂಗಳೂರು ವಿವಿಯಲ್ಲಿ ಉಳಿದರು.ಈಗ ಅಲ್ಲಿ ಕುಲಸಚಿವರಾಗಿದ್ದಾರೆ.

ಆ ಘಟನೆ ನಡೆದು ಹದಿಮೂರು ವರ್ಷಗಳ ಬಳಿಕ ನಾನೂ ಕನ್ನಡ ವಿಶ್ವವಿದ್ಯಾಲಯಕ್ಕೆ ಹೋದೆ -೨೦೦೪ರ ಸಪ್ಟಂಬರದಲ್ಲಿ. ೨೦೦೭ರ ಜೂನ್ ಕೊನೆಯ ವರೆಗೆ ಅಲ್ಲಿ ಇದ್ದೆ.ಆಗ ಕಂಬಾರರು ಅಲ್ಲಿ ವ್ಯಕ್ತಿಯಾಗಿ ಇರಲಿಲ್ಲ.ಆದರೆ ಅಲ್ಲಿನ ಕಟ್ಟಡ  ಜನರು ಪುಸ್ತಕಗಳು ವೇಷಭೂಷಣ ನುಡಿಹಬ್ಬ -ಎಲ್ಲೆಲ್ಲೂ ಕಂಬಾರರು ಕಾಣಿಸುತ್ತಿದ್ದರು.ನಾನು ಬೆಳಗ್ಗೆ ಕ್ಯಾಂಪಸ್ ನಲ್ಲಿ ವಾಕಿಂಗ್ ಹೋಗುತ್ತಿದ್ದಾಗ ನವಿಲುಗಳು ಹಿಂಡುಗಟ್ಟಿ ನನ್ನ ದಾರಿಗೆ ಅಡ್ಡವಾಗಿ ಬಂದು ಕುಣಿಯುತ್ತಿದ್ದುವು.ಆಗ ನನಗೆ ನೆನಪಾಗುತ್ತಿದ್ದದ್ದು ಕಂಬಾರರ ‘ನವಿಲೇ ನವಿಲೇ ‘ಕವನದ ಸಾಲುಗಳು :

‘ನವಿಲೇ ನವಿಲೇ ಚೆ೦ದೊಲ್ಳೆ  ನವಿಲೇ

ನಾದಗಳು ನುಡಿಯಾಗಲೇ

ಹಾಡಾದ ನುಡಿಯೊಳಗೆ ಬೆಳಕಾಡಿ ಹಾಡಿನ

ಆಚೆ ಸೀಮೆಯ ತೋರಲೇ ‘

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

One Response to “ಮರೆತೇನಂದರ ಮರೆಯಲಿ ಹೆಂಗಾ”

RSS Feed for ಬಿ ಎ ವಿವೇಕ ರೈ Comments RSS Feed

Sir, Wow, I can’t believe that you have such wonderful photos of olden days! Very nostalgic,
Thanks much for sharing with us


Where's The Comment Form?

Liked it here?
Why not try sites on the blogroll...

%d bloggers like this: