ಹರ್ಮನ್ ಮೊಗ್ಲಿಂಗ್ :ನೆಕ್ಕರ್ ನಿಂದ ನೇತ್ರಾವತಿಗೆ

Posted on ಸೆಪ್ಟೆಂಬರ್ 14, 2011. Filed under: ಜರ್ಮನಿ | ಟ್ಯಾಗ್ ಗಳು:, , , , , , |


ಹರ್ಮನ್‌ ಮೊಗ್ಲಿಂಗ್‌ (೨೯  ಮೇ ೧೮೧೧ -೧೦  ಮೇ ೧೮೮೧ ) ಹುಟ್ಟಿ ಇನ್ನೂರು ವರ್ಷಗಳು ಸಂದುವು. ಮೊಗ್ಲಿಂಗ್‌ನ ಇನ್ನೂರನೆಯ ಜನ್ಮದಿನಾಚರಣೆಯನ್ನು ಈ ವರ್ಷ ಜರ್ಮನಿಯಲ್ಲಿ ಕಳೆದ ಮೇ ೨೯ರಿಂದ ಆರು ದಿನಗಳ ಕಾಲ ಮೊಗ್ಲಿಂಗ್‌ ಹುಟ್ಟಿದ, ಬೆಳೆದ ಮತ್ತು ಕೊನೆಯ ದಿನಗಳನ್ನು ಕಳೆದ ಸ್ಥಳಗಳ ಪರಿಸರಗಳಲ್ಲಿ ಸ್ತುತ್‌ ಗಾರ್ತ್‌, ಎಸ್ಲಿಂಗನ್, ತ್ಯೂಬಿಂಗನ್‌,ಬ್ರಾಕೆನ್ ಹಯಿಮ್ ಗಳಲ್ಲಿ  ಆಲ್ಬ್ರೆಶ್ತ್  ಫ್ರೆನ್ಜ ಅವರ ಆಸಕ್ತಿಯಿಂದ ಪುಸ್ತಕ ಪ್ರಕಟಣೆ, ವಿಚಾರ ಸಂಕಿರಣ ಮತ್ತು ಮೊಗ್ಲಿಂಗ್‌ ಸ್ಥಳಗಳ ಸಂದರ್ಶನಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮತ್ತೆ ಮೊಗ್ಲಿಂಗ್‌ ಅವರ ಕರ್ಮಭೂಮಿ ಮಂಗಳೂರಿನಲ್ಲಿ ಆಗಸ್ಟ್  ೧೮  ಮತ್ತು ೧೯ ರಂದು ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಆಶ್ರಯದಲ್ಲಿ ಮೊಗ್ಲಿಂಗ್‌-೨೦೦ ನ್ನು ಹೊಸ ಶೋಧಗಳ ಹಿನ್ನೆಲೆಯಲ್ಲಿ  ವಿಚಾರಸಂಕಿರಣದ ಮೂಲಕ ನೆನಪಿಸಿಕೊಳ್ಳಲಾಯಿತು. ಮೇ ಕೊನೆಯ ವಾರದಲ್ಲಿ ಜರ್ಮನಿಯಲ್ಲಿ ಮತ್ತು ಆಗಸ್ಟ್ ೧೮ ಮತ್ತು ೧೯ರನ್ದು  ಮಂಗಳೂರಲ್ಲಿ ಇದ್ದ ಕಾರಣ, ಮೊಗ್ಲಿಂಗ್‌ -೨೦೦  ನ್ನು ನೆಕ್ಕರ್‌ ಮತ್ತು ನೇತ್ರಾವತಿ ನದಿಗಳ ಇನ್ನೂರು ವರ್ಷಗಳ ಹರಿಯುವಿಕೆಯ ಮೂಲಕ ನೋಡುವ ಅವಕಾಶ  ನನಗೆ ದೊರೆಯಿತು.

ಮೊಗ್ಲಿಂಗ್‌ ಜನಿಸಿದ್ದು ಜರ್ಮನಿಯ ದಕ್ಷಿಣ ಭಾಗದ ಪ್ರಾಂತ್ಯ ವ್ಯೂರ್ತೆಮ್ ಬುರ್ಗ್ ನ  ಸ್ತುತ್‌ಗಾರ್ತ್‌ ಸಮೀಪದ ಗೂಗ್ಲಿಂಗನ್‌ ನಲ್ಲಿ  ೧೮೧೧ರ ಮೇ ೨೯ರಂದು.  ಗುಂದರ್ತ್‌ ಬರೆದ ಮೊಗ್ಲಿಂಗ್‌ ಜೀವನಚರಿತ್ರೆಯಲ್ಲಿ ಮತ್ತು ಇತರ ಬರಹಗಳಲ್ಲಿ ಕೂಡಾ ಮೊಗ್ಲಿಂಗ್‌ ಹುಟ್ಟಿದ್ದು ಬ್ರಾಕೆನ್‌ ಹಯಿಮ್ ನಲ್ಲಿ  ಎಂದು ದಾಖಲೆ ಆಗಿದೆ. ಆದರೆ, ಮೊಗ್ಲಿಂಗ್‌ ಹುಟ್ಟಿದ ಅಧಿಕೃತ ದಾಖಲೆಗಳ ಕಡತಗಳನ್ನು ಅಲ್ಲಿನ ಚರ್ಚಿನ ಸಂಗ್ರಹದಲ್ಲಿ  ಪರಿಶೀಲಿಸಿದಾಗ , ಹುಟ್ಟಿದ ಸ್ಥಳ ಬ್ರಾಕೆನ್‌  ಹಯಿಮ್  ಅಲ್ಲ, ಅದು  ಗೂಗ್ಲಿಂಗನ್‌ ಎನ್ನುವುದು ಸ್ಪಷ್ಟವಾಗಿದೆ. ತ್ಸಬೇರ್‌ ಎಂಬ ಸಣ್ಣ ಹೊಳೆಯ ಬದಿಯಲ್ಲಿ ಇರುವ ಚಿಕ್ಕ ಹಳ್ಳಿ ಗ್ಯೂಗ್ಲಿಂಗನ್‌.ಮೊಗ್ಲಿಂಗ್‌ನ ತಂದೆ ಲ್ಯಾಟಿನ್‌ ಶಾಲೆಯಲ್ಲಿ ಅಧ್ಯಾಪಕ ಆಗಿದ್ದರು. ಅವರು  ವರ್ಗಾವಣೆ ಆಗಿ ೧೮೧೧ರ ಆಗಸ್ಟ್ ನಲ್ಲಿ  ಸಮೀಪದ ಬ್ರಾಕೆನ್‌ ಹಯಿಮ್ ಗೆ  ಬಂದರು. ಅದೂ ತ್ಸಬೇರ್‌ ಹೊಳೆಯ ಪಕ್ಕದಲ್ಲಿ ಇರುವ ಊರು. ತ್ಸಬೇರ್‌ ಹೊಳೆ ಮುಂದಕ್ಕೆ ಹರಿದು ನೆಕ್ಕರ್‌ ನದಿಯನ್ನು ಸೇರುತ್ತದೆ.

ಮೊಗ್ಲಿಂಗ್‌ ಕುಟುಂಬ ೧೮೧೯ರಲ್ಲಿ ಬ್ರಾಕೆನ್‌ ಹಯಿಮ್ ನಿಂದ ಓಹ್ರಿನ್ಗೆನ್ ಗೆ  ಬರುತ್ತದೆ. ಅಲ್ಲಿ ೧೮೧೯ರಿಂದ ೧೮೨೫ ರವರೆಗೆ ಮೊಗ್ಲಿಂಗ್‌ ತಂದೆ ಲ್ಯಾಟಿನ್‌ ಶಾಲೆಯಲ್ಲಿ ಅಧ್ಯಾಪಕ ಆಗಿ, ಪ್ರಿನ್ಸಿಪಾಲ್ ಆಗಿ ಕೆಲಸಮಾಡುತ್ತಾರೆ.

ಇಲ್ಲೆಲ್ಲ  ಬಾಲಕ ಮೊಗ್ಲಿಂಗ್‌ನ ಶಿಕ್ಷಣ ತಂದೆಯ ಶಾಲೆಯಲ್ಲಿಯೇ. ಅಲ್ಲಿಂದ ಮುಂದೆ ಮೊಗ್ಲಿಂಗ್‌ ತಂದೆ ವರ್ಗಾವಣೆ ಆಗಿ ಬಂದದ್ದು ಬ್ಲೌ ಬ್ಯೂರೆನ್‌ಗೆ, ೧೮೨೫ರಲ್ಲಿ . ಅದೇ ವರ್ಷ ಇಲ್ಲಿಯೇ  ಮೊಗ್ಲಿಂಗ್‌ ಸೆಮಿನರಿ ಶಿಕ್ಷಣಕ್ಕೆ ಸೇರಿದ್ದು . ಅದು ನಾಲ್ಕು ವರ್ಷಗಳ ಸೆಮಿನರಿ ಶಿಕ್ಷಣ. ಮೊಗ್ಲಿಂಗ್‌ಗೆ ಹೆಚ್ಚು ಆಸಕ್ತಿ ಇದ್ದದ್ದು ಸಾಹಿತ್ಯದಲ್ಲಿ.ಅವರು ಅಧ್ಯಯನ ಮಾಡಿದ್ದು ಫ್ರೀದ್ರಿಶ್‌ ಶಿಲ್ಲರ್‌ನ ಕವನ ಮತ್ತು ನಾಟಕಗಳನ್ನು, ಗಯತೆಯ ಕವನಗಳನ್ನು, ಗ್ರೀಕ್‌ ಕವಿಗಳನ್ನು, ಹೋಮರ್‌  ಸೋಫೋಕ್ಲಿಸ್‌ ಹೊರೇಸ್‌  ವರ್ಜಿಲ್  ಅವರ ಸಾಹಿತ್ಯ ಕೃತಿಗಳನ್ನು .

ಉನ್ನತ ಶಿಕ್ಷಣಕ್ಕಾಗಿ ಮೊಗ್ಲಿಂಗ್‌ ಮುಂದೆ ಚಲಿಸಿದ್ದು ನೆಕ್ಕರ್‌ ನದಿಯ ತೀರದ ತ್ಯೂಬಿಂಗನ್‌ಗೆ ೧೮೨೯ರಲ್ಲಿ . ತ್ಯೂಬಿಂಗನ್‌ ವಿಶ್ವವಿದ್ಯಾಲಯ (ಸ್ಥಾಪನೆ: ೧೪೭೭ ) ಆ ಕಾಲದ ಬೌದ್ಧಿಕ ಚಿಂತನೆಯ ಮುಖ್ಯ ಕೇಂದ್ರವಾಗಿತ್ತು. ತ್ಯೂಬಿಂಗನ್‌ ವಿವಿಯ ಪ್ರೊಟೆಸ್ಟೆಂಟ್ ಸೆಮಿನರಿಯಲ್ಲಿ  ಮೊಗ್ಲಿಂಗ್‌ ೧೮೨೯ ರಿಂದ ೧೮೩೫ ರವರೆಗೆ ಸೆಮಿನರಿ ಶಿಕ್ಷಣ ಪಡೆದರು. ಮೊಗ್ಲಿಂಗ್‌ ಅವರಿಗೆ ಪ್ರೊಟೆಸ್ಟೆಂಟ್   ಥಿಯಾಲಜಿಗಿಂತ ಹೆಚ್ಚು ಆಸಕ್ತಿ ಇದ್ದದ್ದು ಸಾಹಿತ್ಯ ಮತ್ತು ಸೌಂದರ್ಯಶಾಸ್ತ್ರದಲ್ಲಿ. ಜರ್ಮನ್‌ ತತ್ವಜ್ಞಾನಿ ಹೆಗೆಲ್ ನ ತತ್ವಜ್ಞಾನ ಮತ್ತು ಗಯತೆಯ ಸಾಹಿತ್ಯ -ಮೊಗ್ಲಿಂಗ್‌ಮೇಲೆ ವಿಶೇಷ ಪ್ರಭಾವ ಬೀರಿದವು.

ಮೊಗ್ಲಿಂಗ್‌ ಮುಂದಿನ ತರಬೇತಿ ಮತ್ತು ಉದ್ಯೋಗಕ್ಕಾಗಿ ಪ್ರಯಾಣ ಬೆಳೆಸಿದ್ದು ಬಾಸೆಲ್‌ಗೆ. ಜರ್ಮನಿ, ಸ್ವಿಸರ್ಲೆಂಡ್‌, ಫ್ರಾನ್ಸ್‌ ದೇಶಗಳ ಗಡಿಯಲ್ಲಿ ಸ್ವಿಸರ್ಲೆಂಡಿನಲ್ಲಿ ಇರುವ ಬಾಸೆಲ್ ಮಿಶನ್‌ ಸಂಸ್ಥೆಯನ್ನು ಮೊಗ್ಲಿಂಗ್‌ ಸೇರಿದ್ದು ೧೮೩೫ ರ ಜೂನಿನಲ್ಲಿ. ತ್ಯೂಬಿಂಗನ್‌ ವಿವಿಯ ಪದವೀಧರ , ಉತ್ಸಾಹದ ಬುಗ್ಗೆ , ಸ್ವಾತಂತ್ರ್ಯದ  ಕನಸುಗಾರ ಮೊಗ್ಲಿಂಗ್‌ಗೆ ಬಾಸೆಲ್ ಮಿಶನ್  ಸಂಸ್ಕೃತಿಗೆ ಒಗ್ಗಿಕೊಳ್ಳಲು ಬಹಳ ಕಷ್ಟವಾಯಿತು. ಆದರೆ ತನ್ನ ಮಿಶನ್‌ ಪ್ರವಚನಗಳ ಜೊತೆಗೆ ಮೊಗ್ಲಿಂಗ್‌ ಇಂಗ್ಲಿಶ್‌ ಮತ್ತು ಸಂಸ್ಕೃತ ಅಧ್ಯಯನವನ್ನು ಆಸಕ್ತಿಯಿಂದ ನಡೆಸಿದರು. ೧೮೩೬ ರ ಜನವರಿ ೬ ರಂದು ತ್ಯೂಬಿಂಗನ್‌ನ ಕಾಲೇಜು ಚರ್ಚ್‌ನಲ್ಲಿ ಮೊಗ್ಲಿಂಗಿಗೆ ದೀಕ್ಷೆ ಕೊಡಲಾಯಿತು. ಬಳಿಕ ಅವರನ್ನು   ಬಾಸೆಲ್ ಮಿಶನ್  ಸಂಸ್ಥೆಯ ಮೂಲಕ ಭಾರತಕ್ಕೆ ಕಳುಹಿಸಲು ನಿರ್ಧರಿಸಲಾಯಿತು. ಆಗ ಅವರಿಗೆ  ಕೊಟ್ಟ ಸೂಚನೆ ಈ ರೀತಿ ಇತ್ತು : “ಈಗ ಹೋಗುವ ಸೋದರರಿಗೆ ನಿರ್ದಿಷ್ಟ ಸಂಬಳ ಇಲ್ಲ. ಆದರೆ, ಎಲ್ಲರೂ ಒಟ್ಟಿಗೆ ಜಂಟಿ ವೆಚ್ಚದಲ್ಲಿ ಜೀವನ ಸಾಗಿಸಬೇಕು. ಈಗ ಹೋಗುವ ಮಂಗಳೂರಿನಲ್ಲಿ ಕೂಡಾ ಹೀಗೆಯೇ  ಜೀವನ ನಡೆಸಬೇಕು.ಶಿಕ್ಷಕರ ಕಾಲೇಜು ನಡೆಸಲು ಬಂದರು ಪಟ್ಟಣ ಮಂಗಳೂರಿಗಿಂತಲೂ ಧಾರವಾಡ ಹೆಚ್ಚು ಯೋಗ್ಯ.ಆದರೆ ,ಮಿಶನರಿಗಳು ಮಂಗಳೂರಲ್ಲಿ ಭಾಷೆಗಳ ಅಭ್ಯಾಸ ನಡೆಸಬಹುದು.”

ಜರ್ಮನಿಯಿಂದ ಕೊಲನ್‌ ಮೂಲಕ ಲಂಡನ್‌ ಬಂದರಿಗೆ ಬಂದ ಮೊಗ್ಲಿಂಗ್‌ ೧೮೩೬ರಲ್ಲಿ ಮಾರ್ಚ್‌ನಿಂದ ಜುಲೈ ಆರಂಭದವರೆಗೆ ಲಂಡನ್‌ನಲ್ಲಿ ಇದ್ದು ಅನುಭವ ಪಡೆದು ,ಜುಲೈ ೩ ರಂದು ಲಂಡನ್‌ ಬಂದರಿನಿಂದ ‘ಗಿಲ್ಮೋರ್‌ ‘ಎಂಬ ಸ್ಟೀಮರ್‌ನಲ್ಲಿ ಹೊರಟು  ಹಿಂದೂ ಮಹಾಸಾಗರವನ್ನು ದಾಟಿಕೊಂಡು ಅರೇಬಿಯನ್‌ ಸಮುದ್ರಕ್ಕೆ ಬಂದು ಬೊಂಬಾಯಿ ಬಂದರಿಗೆ ತಲಪಲು ನಾಲ್ಕು ತಿಂಗಳು ಹಿಡಿಯಿತು. ಅಂತೂ ಕೊನೆಗೂ ಭಾರತದ ನೆಲದಲ್ಲಿ ಬೊಂಬಾಯಿಯಲ್ಲಿ ಮೊಗ್ಲಿಂಗ್‌ ಕಾಲೂರಿದ್ದು ೧೯೩೬ ರ ನ. ೮ ರಂದು. .ಬೊಂಬಾಯಿಯಿಂದ ಹೊರಟ ಮೊಗ್ಲಿಂಗ್‌ ಮಂಗಳೂರು ಬಂದರನ್ನು ಸೇರಿದ್ದು ೧೮೩೬ ರ ದಶಂಬರ ಆರರಂದು. ಅಲ್ಲಿ ತಾನು ಕಂಡ ಮೂರು ಧರ್ಮಗಳ ಸ್ಮಶಾನಗಳ ಚಿತ್ರಣವನ್ನು ಅವರು ಹೀಗೆ ಕೊಡುತ್ತಾರೆ:’ ಸಮುದ್ರ ಕಿನಾರೆಯಲ್ಲಿ ಪಟ್ಟಣದ  ವಾಯವ್ಯ ದಿಕ್ಕಿನಲ್ಲಿ ಸಮಾಧಿ ಸ್ಥಳಗಳಿವೆ.ಒಂದು ಸಣ್ಣ ಗುಡ್ಡದ ತುದಿಯಲ್ಲಿ ಸುಂದರವಾದ ತೆಂಗಿನ ತೋಪಿನ ಬದಿಯಲ್ಲಿ ಮುಸ್ಲಿಮರ ಗೋರಿಗಳಿವೆ. ಅದರ ಇಳಿಜಾರಿನಲ್ಲಿ ಸಮುದ್ರದ ಕಡೆಗೆ ಇರುವ ಸ್ಥಳದಲ್ಲಿ ಹಿಂದೂಗಳ ಸ್ಮಶಾನ ಇದೆ. ಪಟ್ಟಣದ ಸಮೀಪ ಒಂದು ಆವರಣ ಗೋಡೆ ಇರುವ ಸ್ಥಳದಲ್ಲಿ ವಿದೇಶಿಯರು ,ಅರಬರು, ಪರ್ಶಿಯನರು ಇವರ ಸಮಾಧಿ ಸ್ಥಳ ಇದೆ.’  ಬೇರೆ ಬೇರೆ ಧರ್ಮಗಳ ಶವಸಂಸ್ಕಾರಗಳ ಸಹಜ ಚಿತ್ರಣ ಇಲ್ಲಿ ದೊರೆಯುತ್ತದೆ.ಮೊಗ್ಲಿಂಗ್‌ ಸಹಿತ ಎಲ್ಲ ಮಿಷನರಿಗಳ ವರದಿಗಳು, ದಿನಚರಿಗಳು, ಪತ್ರಗಳು ಎಲ್ಲವೂ ಜರ್ಮನ್‌ ಭಾಷೆಯಲ್ಲಿ ಇವೆ. ಇತ್ತೀಚಿಗೆ ಇವನ್ನು ಇಂಗ್ಲಿಷಿಗೆ ಅನುವಾದ ಮಾಡುವ ಕಾರ್ಯ ಆರಂಭವಾಗಿದೆ. ಜರ್ಮನಿಯಲ್ಲಿ ಇರುವ ಗುಂದರ್ತ್‌ ಸೊಸೈಟಿಯ ಆಲ್ಬ್ರೆಶ್ತ್ ಫ್ರೆನ್ಜ್  ಮತ್ತು ಅವರ ಹೆಂಡತಿ ಗೆತ್ರುದ್‌ ಫ್ರೆನ್ಜ್  , ಬಾಸೆಲ್  ಮಿಶನ್‌  ಪತ್ರಾಗಾರದಲ್ಲಿ ಬಹಳ ಕಾಲ ನಿರ್ದೇಶಕರಾಗಿ ಈಗ ನಿವೃತ್ತರಾಗಿರುವ ಪೌಲ್  ಜೆಂಕಿನ್ಸ್‌ ಮತ್ತು ಅವರ ಹೆಂಡತಿ ಜೆನ್ನಿಫೆರ್‌ ಇಂತಹ ಅನುವಾದದ ಕಾರ್ಯವನ್ನು ಮೊಗ್ಲಿಂಗ್‌ ೨೦೦ ರ ನೆನಪಿನಲ್ಲಿ ಮಿಷನರಿ ಅರ್ಪಣಾ ಭಾವದಿಂದ ಮಾಡಲು ಆರಂಭಿಸಿದ್ದಾರೆ. ಇದರಿಂದಾಗಿ ಕರ್ನಾಟಕದ ಹತ್ತೂಂಬತ್ತನೆಯ ಶತಮಾನದ ಸಾಮಾಜಿಕ, ಧಾರ್ಮಿಕ , ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಚರಿತ್ರೆಯನ್ನು ಮತ್ತೆ ಕಟ್ಟಲು ಸಾಧ್ಯವಾಗುತ್ತದೆ. ಮೊಗ್ಲಿಂಗ್‌ ಮತ್ತು ಅವರ ಸಮಕಾಲೀನ ಹಾಗೂ ಸಹವರ್ತಿ ಗಾಡ್‌ ಫ್ರೆಡ್‌ ವೈಗ್ಲೆ (೧೮೧೬ – ೧೮೫೫ ) ಅವರ ಜಂಟಿ ಪ್ರವಾಸದ ವಿವರಗಳು ಅನೇಕ ಅಪೂರ್ವ ಮಾಹಿತಿಗಳನ್ನು ಕೊಡುತ್ತವೆ. ೧೮೪೧ ರಲ್ಲಿ ಮೊಗ್ಲಿಂಗ್‌ ಮತ್ತು ವೈಗ್ಲೆ ಜೊತೆಯಾಗಿ ಮಂಗಳೂರಿನಿಂದ ನವಂಬರ ೧೮ ರಂದು ಹೊರಟು, ಫರಂಗಿಪೇಟೆ, ತುಂಬೆ, ಪಾಣೆಮಂಗಳೂರು, ಬಂಟ್ವಾಳ, ಕಾರಿಂಜ, ಕಾವಳ , ಪಡೂರು, ವೇಣೂರು, ಜಮಲಾಬಾದ್‌ , ಧರ್ಮಸ್ಥಳ, ಕೊಕ್ಕಡ, ಕಡಬ, ಸುಬ್ರಹ್ಮಣ್ಯ, ಬಿಸ್ಲೆ ಘಾಟ್ , ಕಂದ್ರಪಾಡಿ, ಮತ್ತೆ ಅಲ್ಲಿಂದ ಮಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ಈ ಪ್ರಯಾಣದ ದಿನಚರಿಯಲ್ಲಿ ಭೂಪ್ರದೇಶ, ಧಾರ್ಮಿಕ ಸಂಗತಿಗಳು, ಸಸ್ಯಗಳ ವಿವರಗಳು, ಜನರ ಸ್ವಭಾವ- ಹೀಗೆ ಅನೇಕ ಸಂಗತಿಗಳು ಅನಾವರಣಗೊಳ್ಳುತ್ತವೆ.

ಹಾಗೆಯೇ ಮೊಗ್ಲಿಂಗ್‌ ಅವರ ಧಾರವಾಡ -ಹುಬ್ಬಳ್ಳಿ ಪ್ರಯಾಣ ಮತ್ತು ಭೇಟಿಯ ವಿವರಗಳ ದಾಖಲೆಗಳು ದೊರೆಯುತ್ತವೆ.ಮೊಗ್ಲಿಂಗ್  ೧೮೩೮ ರ ಜೂನ್‌ ೨೭ ರಂದು ಹುಬ್ಬಳ್ಳಿಯಿಂದ ಮತ್ತು ಜೂನ್‌ ೩೦ ರಂದು ಧಾರವಾಡದಿಂದ ಬರೆದ ಎರಡು ಪತ್ರಗಳು ಬಹಳ ವಿಶಿಷ್ಟವಾಗಿವೆ. ಮೊಗ್ಲಿಂಗ್‌ ಹುಬ್ಬಳ್ಳಿಯ ದೊಡ್ಡ ಮಠದಲ್ಲಿ ಲಿಂಗಾಯತ ಸ್ವಾಮಿಗಳೊಂದಿಗೆ ನಡೆಸಿದ ಸೌಹಾರ್ದಯುತ ಅಂತರ್‌ ಧರ್ಮೀಯ ಚಿಂತನೆಯ ಸಂವಾದ ಮಹತ್ವದ್ದು. ಮೊಗ್ಲಿಂಗ್‌ ಪ್ರತಿಪಾದಿಸುತ್ತಿದ್ದ ಪ್ರೊಟೆಸ್ಟೆಂಟ್  ಪಂಥ ಮತ್ತು ವೈದಿಕ ಧರ್ಮಕ್ಕೆ ಪ್ರತಿರೋಧವಾಗಿ ಬಂದ ಲಿಂಗಾಯತ ಧರ್ಮಗಳ ಸಾಮ್ಯದ ಕಾರಣಕ್ಕಾಗಿ ಈ ಸಂವಾದಕ್ಕೆ ಸಾಂಸ್ಕೃತಿಕ ಆಯಾಮವಿದೆ.

ಮೊಗ್ಲಿಂಗ್‌ ಕನ್ನಡ ಪ್ರಾಚೀನ ಕಾವ್ಯಗಳನ್ನು ಸಂಪಾದಿಸಿ ಬಿಬ್ಲಿಯೋಥಿಕಾ ಕರ್ನಾಟಕಾ ಎಂಬ ಹೆಸರಿನಲ್ಲಿ ಮೊತ್ತಮೊದಲ ಬಾರಿ ಪ್ರಕಟಿಸಿದ್ದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ  ಒಂದು ಮುಖ್ಯ ಮೈಲಿಗಲ್ಲು.ಆದರೆ ಅದರ ಪ್ರಕಟಣೆಗೆ ಹಣ ಇಲ್ಲದೆ ಮೊಗ್ಲಿಂಗ್‌ ಪಟ್ಟ ಪಾಡು ವಿಶೇಷವಾಗಿ ಎಲ್ಲೂ ದಾಖಲಾಗಿಲ್ಲ. ಬಾಸೆಲ್  ಮಿಶನ್‌ ಸಂಸ್ಥೆಯು ಮೊಗ್ಲಿಂಗ್‌ ಅವರ ಕನ್ನಡ ಸಾಹಿತ್ಯದ ಶೋಧ, ಸಂಪಾದನೆ ಮತ್ತು ಪ್ರಕಟಣೆಗೆ ವಿರೋಧ ವ್ಯಕ್ತಪಡಿಸಿತ್ತು.ಅವರ ಸಹ ಮಿಶನರಿಗಳು ಈ ಯೋಜನೆಯನ್ನು ವಿರೋಧಿಸಿದರು. ಕೊನೆಗೆ ಅದು ಪ್ರಕಟಣೆ ಅಲ್ಲ, ಕೇವಲ ಖಾಸಗಿ ಬಳಕೆಗೆ ಎಂದು ಹೇಳಲಾಯಿತು. ಅದನ್ನು ಮಿಶನ್‌ ಪ್ರಸ್‌ ಮೂಲಕ ಪ್ರಕಟಿಸುವ ಅಗತ್ಯ ಇದೆಯೇ ಎಂದು ಕೇಳಲಾಯಿತು. ೧೮೪೮ ರ ಆಗಸ್ಟ್‌ನ ಒಂದು ಪತ್ರದಲ್ಲಿ  ಈ ಮಾಲೆಯ ಕಲ್ಲಚ್ಚಿನ ಮುದ್ರಣಕ್ಕೆ ಕಸಮಜೊರ್‌ ಒಪ್ಪಿಕೊಂಡಿದ್ದರು ಎನ್ನುವ ಮಾಹಿತಿ ಸಿಗುತ್ತದೆ. ಛಲ ಬಿಡದ ಮೊಗ್ಲಿಂಗ್‌ ಈ ಕುರಿತು ಒಂದೆಡೆ ಹೀಗೆ ಬರೆಯುತ್ತಾರೆ :’ ಕನ್ನಡದ ಬೌದ್ಧಿಕ ಪ್ರಪಂಚವನ್ನು ಧೂಳು ಹಿಡಿದ  ಜೀರ್ಣವಾದ ತಾಳೆಗರಿಗಳಿಂದ ಪಡೆಯುವುದು ಎಂತಹ ಸಂತಸದ ವಿಷಯ.ಕನ್ನಡ ಜೈಮಿನಿ ಭಾರತದ ಸಂಪಾದನೆಯನ್ನು ಹದಿನಾಲ್ಕು ದಿನಗಳಲ್ಲಿ ಮುಗಿಸುತ್ತೇನೆ. ಭಾರತ ಕತೆಯ ಅಶ್ವಮೇಧದ ವರ್ಣನೆಯನ್ನು ೩೨  ಸಂಧಿಗಳಲ್ಲಿ ವರ್ಣಿಸಿರುವುದು ಸೊಗಸಾಗಿದೆ.’

ಆದರೆ ಮೊಗ್ಲಿಂಗ್‌ ಅವರ ಬಿಬ್ಲಿಯೋಥಿಕಾ ಕರ್ನಾಟಕಾ ಸಂಪಾದನೆಗೆ ಬಾಸೆಲಿನ ಮಿಶನ್‌ ಸಮಿತಿಯಿಂದ ಆಗಲೀ  ಮಂಗಳೂರಿನಲ್ಲಿ ಇದ್ದ ಅವರ  ಸಹೋದ್ಯೋಗಿಗಳಿಂದ ಆಗಲೀ ನೆರವು ದೊರೆಯಲಿಲ್ಲ. ಆ ವೇಳೆಗೆ ದುರದೃಷ್ಟಕ್ಕೆ ಈ ಪ್ರಕಟಣೆಗೆ ಸಹಾಯ ಮಾಡುವ ಭರವಸೆ ಕೊಟ್ಟಿದ್ದ ಕಸಮಜೊರ್‌ ೧೮೪೯ ರ ಮೇಯಲ್ಲಿ ನಿಧನರಾದರು. ಕೊನೆಗೆ ಮೊಗ್ಲಿಂಗ್‌ ಲಂಡನಿನಲ್ಲಿ ಇದ್ದ ಈಸ್ಟ್  ಇಂಡಿಯ ಕಂಪೆನಿಗೆ ಮನವಿ ಸಲ್ಲಿಸಿದರು.ಅಲ್ಲಿಯೂ ಅವರ ಬೇಡಿಕೆಯನ್ನು ತಳ್ಳಿಹಾಕಲಾಯಿತು. ಆದರೆ, ಆ ಕಂಪೆನಿಯ ಉನ್ನತ ಅಧಿಕಾರಿ ಸರ್‌ ವಾಲ್ಟರ್‌ ಸ್ಕಾಟ್‌ ತನ್ನ ಸ್ವಂತ ಹಣದಿಂದ ಈ ಸಂಪುಟಗಳ ವೆಚ್ಚವನ್ನು ಭರಿಸಿದ. ಬಿಬ್ಲಿಯೋಥಿಕಾ  ಕರ್ನಾಟಕ ದಲ್ಲಿ ಆರು ಸಂಪುಟಗಳು ಕಲ್ಲಚ್ಚಿನ ಮುದ್ರಣದಲ್ಲಿ ಪ್ರಕಟವಾದುವು. ಲಕ್ಷ್ಮೀಶನ  ಜೈಮಿನಿ ಭಾರತ(೧೮೪೮ ), ದಾಸರ ಪದಗಳು (೧೮೫೦ ), ಕನಕದಾಸರ (ಹರಿ)ಭಕ್ತಿಸಾರ (೧೮೫೦ ), ಭೀಮಕವಿಯ ಬಸವ ಪುರಾಣ (೧೮೫೦ ), ಕುಮಾರವ್ಯಾಸನ ಕನ್ನಡ ಭಾರತ (೧೮೫೧ ),ವಿರೂಪಾಕ್ಷ ಪಂಡಿತನ ಚನ್ನಬಸವಪುರಾಣ (೧೮೫೧ ), ಕನ್ನಡ ಗಾದೆಗಳು (೧೮೫೨ ). ಈ ಪ್ರಕಟಣೆಗೆ ಸಂಬಂಧಪಟ್ಟಂತೆ ಮೊಗ್ಲಿಂಗ್‌ ೧೮೫೩ರಲ್ಲಿ ಬಾರ್ತ್‌ ಅವರಿಗೆ ಈ ರೀತಿ ಬರೆಯುತ್ತಾರೆ : “ಈ ಕೆಲಸವನ್ನು ಇಷ್ಟು ದೂರ ತಂದು ಮುಟ್ಟಿಸಿದ್ದಕ್ಕೆ ನಾನು  ಸಂತೋಷಪಡುತ್ತೇನೆ. ಮುಂದೆ ಜನಿಸಲಿರುವ ಜನರ ಕೃತಜ್ಞತೆಯನ್ನು ನಾನು ಗಳಿಸುತ್ತೇನೆ ಎಂಬ ನಂಬಿಕೆ ನನ್ನದು”  ಕನ್ನಡ ಜನರು ಈ ಮಾತನ್ನು ಮತ್ತೆ ಮತ್ತೆ ನೆನೆಯಬೇಕು. ವಿಶೇಷವೆಂದರೆ, ಜರ್ಮನಿಯ ತ್ಯೂಬಿಂಗನ್‌ ವಿಶ್ವವಿದ್ಯಾಲಯವು ಮೊಗ್ಲಿಂಗ್‌ ಅವರ ಈ ಸಾಧನೆಗಾಗಿ ಅವರಿಗೆ ಡಾಕ್ಟರೇಟ್ ಪದವಿಯನ್ನು  ಕೊಟ್ಟದ್ದು  ೧೮೫೮ರ ಜುಲೈ  ೧೯ ರಂದು. ತನ್ನ ಹಳೆಯ ವಿದ್ಯಾರ್ಥಿ ಮೊಗ್ಲಿಂಗ್‌ಗೆ ಕೊಡಮಾಡಿದ ಈ ಗೌರವ ಪದವಿ ಕನ್ನಡದ ಮೊತ್ತಮೊದಲ ಡಾಕ್ಟರೇಟ್‌ ಕೂಡಾ ಹೌದು. ಪ್ರಕಟಣೆಗಾಗಿ  ಒದ್ದಾಡಿದ ಸನ್ನಿವೇಶ ಒಂದು ಕಡೆಯಾದರೆ , ಪ್ರಕಟಣೆಗೆ ದೊರೆತ ಗೌರವ ಇನ್ನೊಂದು ಕಡೆ. ನಾನು ೧೯೯೩ರಲ್ಲಿ ಮೂರು ತಿಂಗಳ ಕಾಲ ಜರ್ಮನಿಯ ತ್ಯೂಬಿಂಗನ್‌ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿ ಇದ್ದ ಸಂದರ್ಭದಲ್ಲಿ ಮೊಗ್ಲಿಂಗ್‌ ಅವರ ಕನ್ನಡದ ಹಸ್ತಪ್ರತಿಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಅವಕಾಶ ದೊರೆಯಿತು. ಕನ್ನಡ- ತುಳು- ಕೊಡವ ಭಾಷೆಗಳನ್ನು ಕಲಿಯಲು ಅವರು ಮಾಡಿಕೊಂಡ ಟಿಪ್ಪಣಿಗಳು ಅಲ್ಲಿನ ಗ್ರಂಥಾಲಯದಲ್ಲಿ ಇವೆ.(ವಿವರಗಳಿಗೆ ಇದೆ ಬ್ಲಾಗ್ ನಲ್ಲಿ ಇರುವ ನನ್ನ ಬರಹ ನೋಡಿರಿ :’ತ್ಯೂಬಿಂಗನ್ ಕನ್ನಡ ಹಸ್ತ ಪ್ರತಿಗಳು :ಶಬ್ದಮಣಿ ಮತ್ತು ಕಾವ್ಯಗನಿ’)

ಕನ್ನಡದ ಮೊದಲ ಪತ್ರಿಕೆ’ ಮಂಗಳೂರು ಸಮಾಚಾರ ‘ವನ್ನು ೧೮೪೩ ರ ಜುಲೈ ಒಂದರಂದು ಆರಂಭಿಸಿ, ಮತ್ತೆ ಬಳ್ಳಾರಿಯಲ್ಲಿ ಅದನ್ನು ‘ಕನ್ನಡ ಸಮಾಚಾರ’ ಆಗಿ ಪರಿವರ್ತಿಸಿ ಮೊಗ್ಲಿಂಗ್‌ ಮಾಡಿದ ಸಾಹಸ ಈಗ ಇತಿಹಾಸ.

ಬಡ ಮಕ್ಕಳಿಗಾಗಿ ಶಾಲೆಗಳನ್ನು ತೆರೆದದ್ದು, ಕೊಡಗಿನಲ್ಲಿ ಮಾಡಿದ ಶಿಕ್ಷಣ ಕ್ರಾಂತಿ , ದಲಿತ ಮಕ್ಕಳಿಗೆ ವಿದ್ಯೆಯ ಮುಖ ತೋರಿಸಿದ್ದು -ಇವು ಮೊಗ್ಲಿಂಗ್ ಅವರ ಕೆಲವು ಹೆಜ್ಜೆಗಳು. ಕೊಡಗಿನ ಕಾವೇರಿ ನದಿಯ ತಟದಲ್ಲಿ ಆನಂದಪುರ ಒಂದರ ನಿರ್ಮಾಣದ ಸಾಹಸ- ಇಂತಹ ಸಾಧನೆಗಳು  ಅನೇಕ. ಮೊಗ್ಲಿಂಗ್‌ ಅವರ  ಉತ್ತರಕರ್ನಾಟಕದ ಪ್ರಯಾಣದ ವಿವರಗಳು ಕೃಷ್ಣಾ , ಮಲಪ್ರಭಾ ಮತ್ತು ಘಟಪ್ರಭಾ ನದಿಗಳ ಹರಿವು, ಹರಹು ಉಳ್ಳವುಗಳು.

ಮಂಗಳೂರು, ಮಡಿಕೇರಿಗಳಲ್ಲಿ ವಾಸವಾಗಿದ್ದುಕೊಂಡು, ಯುರೋಪಿಗೆ ೧೮೪೬  ಮತ್ತು ೧೮೫೮ರಲ್ಲಿ ಹೋಗಿ ಮತ್ತೆ ಮಂಗಳೂರಿಗೆ ಬಂದು ತನ್ನ ಕಾಯಕ ಮುಂದುವರೆಸಿದ ಮೊಗ್ಲಿಂಗ್‌ ಕೊನೆಯದಾಗಿ ಮಂಗಳೂರು ಬಿಟ್ಟದ್ದು ೧೮೬೦ರ ದಶಂಬರ ಏಳರಂದು.

ಜರ್ಮನಿಗೆ ಬಂದ ಮೊಗ್ಲಿಂಗ್‌ ಮೊದಲು ನೆಲೆಯೂರಿದ್ದು ಫ್ರಾಂಕ್‌ ಫಾರ್ತ್ ನಲ್ಲಿ. ಅದು ಮಾಯಿನ್   ನದಿಯ ದಂಡೆಯಲ್ಲಿ ಇರುವ ಕಾರಣ ಅದಕ್ಕೆ ಫ್ರಾಂಕ್‌ಫಾರ್ತ್‌ ಮಾಯಿನ್‌ ಎಂದು ಕರೆಯುತ್ತಾರೆ. ಮೊಗ್ಲಿಂಗ್‌ ತನ್ನ ಕೊನೆಯ ದಿನಗಳನ್ನು ಕಳೆದದ್ದು ಸ್ತುತ್  ಗಾರ್ತ್‌ ಬಳಿಯ ಎಸ್ಲಿಂಗನ್ ನಲ್ಲಿ . ಅವರು ವಾಸವಾಗಿದ್ದ ಮನೆ  ಈಗಲೂ ಅಲ್ಲಿ ಇದೆ. ಮೊಗ್ಲಿಂಗ್‌ ನಿಧನವಾದದ್ದು ಎಸ್ಲಿಂಗನ್ ನಲ್ಲಿ , ೧೮೮೧  ಮೇ ಹತ್ತರಂದು.

ಅವರ ಸಮಾಧಿ ಅಲ್ಲಿನ ನಗರದ ಸಮಾಧಿ ಸ್ಥಳದಲ್ಲಿ ಇದೆ. ಕಳೆದ ಮೇ ೩೦ ರಂದು ಈ ಎರಡು ಸ್ಮಾರಕಗಳನ್ನು  ಸಂದರ್ಶಿಸಿ ಚಿತ್ರ ತೆಗೆಯಲು ನನಗೆ  ಸಾಧ್ಯವಾಯಿತು. ಎಸ್ಲಿಂಗನ್ ನ   ಪಕ್ಕದಲ್ಲಿ ನೆಕ್ಕರ್‌ ನದಿ ಹರಿಯುವ ಕಾರಣ ಈ ಊರನ್ನು ನೆಕ್ಕರ್‌ ಎಸ್ಲಿಂಗನ್ ಎಂದು ಕರೆಯುತ್ತಾರೆ.ಜರ್ಮನಿಯಲ್ಲಿ ಊರುಗಳನ್ನು ಅಲ್ಲಿ ಇರುವ ನದಿಗಳ ಹೆಸರುಗಳ ಜೊತೆಗೆ ಜೋಡಿಸಿ ಗುರುತಿಸುವ ವಿಶಿಷ್ಟ ಕ್ರಮ ಇದೆ.

ಹೀಗೆ ನೋಡುತ್ತಾ ಹೋದರೆ ನೆಕ್ಕರ್‌ ನದಿಯ ಕೈಯ ಹಾಗೆ ಇರುವ  ತ್ಸಬೆರ್‌ ಹೊಳೆಯ ಬದಿಯ ಗೂಗ್ಲಿಂಗನ್‌ನಲ್ಲಿ ಜನಿಸಿದ ಹರ್ಮನ್‌ ಮೊಗ್ಲಿಂಗ್‌, ಕೊನೆಗೆ ಬಂದು ಸೇರಿದ್ದು ಅದೇ ನೆಕ್ಕರ್‌ ನದಿಯ ತೀರದ ಎಸ್ಲಿಂಗನ್ ಗೆ . ಈ ಹೊಳೆ ಮತ್ತು ನದಿಗಳ ಹರಿವಿನ ನಡುವೆ ಮೊಗ್ಲಿಂಗ್‌ ಸಾಗಿದ ಮಹಾಯಾನ ಅನೇಕ ನದಿಗಳನ್ನು ಸಮುದ್ರಗಳನ್ನು ಕಂಡದ್ದು ಮತ್ತು ದಾಟಿದ್ದು. ತ್ಯೂಬಿಂಗನ್‌ನ ನೆಕ್ಕರ್‌, ಇಂಗ್ಲಿಶ್‌ ಕಡಲು, ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರ, ನೇತ್ರಾವತಿ, ಕಾವೇರಿ , ಕೃಷ್ಣಾ , ತುಂಗಭದ್ರಾ- ಇಂತಹ ಎಲ್ಲ ಬಗೆಯ ನದಿ ನದ ಸಮುದ್ರಗಳ  ಮೂಲಕ ಒಂದು ಸಾರ್ಥಕ ಶಾಂತಸಾಗರವನ್ನು ಅವರ ಬದುಕು  ಅರಸಿತು.  ಈ ಯಾನಗಾಥೆಯಲ್ಲಿ ನೆಕ್ಕರ್‌ ಮತ್ತು ನೇತ್ರಾವತಿ ಎರಡು ಮುಖ್ಯ ತೀರಗಳು. ಜರ್ಮನ್‌ ಮತ್ತು ಕನ್ನಡ ಭಾಷೆಗಳು ಬೇರೆ ಬೇರೆಯಾಗಿ ಹರಿಯುವವುಗಳು. ಮೊಗ್ಲಿಂಗ್‌ ಮೂಲಕ ಒಂದಾಗುವ ಅವಕಾಶವನ್ನು ಅವು  ಪಡೆದುವು. ಕನ್ನಡದ ದಾಸರ ಪದಗಳನ್ನು ಮೊಗ್ಲಿಂಗ್‌ ಜರ್ಮನ್‌ ಭಾಷೆಗೆ ಅನುವಾದ ಮಾಡಿದರು. ಇದು ಮೊತ್ತಮೊದಲ ಕನ್ನಡ-ಜರ್ಮನ್‌ ಭಾಷಾ  ಅನುಸಂಧಾನ.ಮೊಗ್ಲಿಂಗ್‌ ಅವರಿಗೆ ಪ್ರಿಯವಾಗಿದ್ದ ಒಂದು ಕೀರ್ತನೆ : ‘ಕಲ್ಲುಸಕ್ಕರೆ ಕೊಳ್ಳಿರೋ’. ಮೊಗ್ಲಿಂಗ್‌ ೨೦೦ ರ ವೇಳೆಗೆ ಕನ್ನಡ ಮತ್ತು ಜರ್ಮನ್‌ ಭಾಷೆಗಳು  ಮತ್ತು ದೇಶಗಳು ‘ಕಲ್ಲುಸಕ್ಕರೆ’ಯ ರೂಪಕವನ್ನು ಮತ್ತೆ ಹೊಸದಾಗಿ ಕಟ್ಟಬಹುದು ಮತ್ತು ಸಾರ್ಥಕಗೊಳಿಸಬಹುದು.

ಪ್ರಕಟಿತ @ಉದಯವಾಣಿ *ಸಾಪ್ತಾಹಿಕ ಸಂಪದ * ೨೮ ಆಗಸ್ಟ್ ೨೦೧೧

ಫೋಟೋಗಳು ೩೦ ಮೇ ೨೦೧೧ ರಂದು ಎಸ್ಲಿಂಗನ್ ನಲ್ಲಿ ನಾನು ತೆಗೆದದ್ದು.ಎಡದಲ್ಲಿ -ಮೊಗ್ಲಿಂಗ್ ತಮ್ಮ ಕೊನೆಯ ವರ್ಷಗಳಲ್ಲಿ ವಾಸವಾಗಿದ್ದ ಮನೆಯ ಕಟ್ಟಡ.

ಬಲಗಡೆಯದ್ದು-ಮೊಗ್ಲಿಂಗ್ ಸಮಾಧಿ ,ಎಸ್ಲಿಂಗನ್ ನ ಸಮಾಧಿಸ್ಥಳದಲ್ಲಿ.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: