ನನ್ನ ಮೊದಲ ಪಾಠಶಾಲೆ :ನೀರಿನಂತೆ ಹರಿಯಲು ಕಲಿಸಿದ ಪರಿಯಾಲ್ತಡ್ಕ

Posted on ಸೆಪ್ಟೆಂಬರ್ 9, 2011. Filed under: ನನ್ನ ಗುರುಗಳು | ಟ್ಯಾಗ್ ಗಳು:, , , , , |


ಪ್ರತೀ ವರ್ಷ ಶಿಕ್ಷಕರ ದಿನಾಚರಣೆ ಬಂದಾಗಲೂ ನನ್ನ ಕೆಲವು ಹಳೆಯ ವಿದ್ಯಾರ್ಥಿಗಳು ಸಂದೇಶ ಕಳುಹಿಸುತ್ತಾರೆ.ನಿವೃತ್ತಿ -ಪ್ರವೃತ್ತಿ ಗಳ ನಡುವೆ ಈಗಲೂ ಶಿಕ್ಷಕನಾಗಿ ಇರುವ ನಾನು ನನ್ನ ಮೊದಲ ಶಿಕ್ಷಣ ,ಪಾಠಶಾಲೆ ಮತ್ತು ಶಿಕ್ಷಕರನ್ನು ನೆನಪಿಸಿಕೊಳ್ಳುತ್ತೇನೆ.ಆ ಮೊದಲ ಪಾಠಶಾಲೆ ಇಲ್ಲದಿರುತ್ತಿದ್ದರೆ ನಾನು ಏನಾಗಿರುತ್ತಿದ್ದೆ ಎಂದು ಯೋಚಿಸಲೂ ಸಾಧ್ಯವಾಗದೆ ಮಂಕಾಗುತ್ತೇನೆ.ಅರುವತ್ತೈದು ವರ್ಷಗಳ ನನ್ನ ಬದುಕಿನ ಎಲ್ಲ ಮಜಲುಗಳಲ್ಲೂ ಮೊದಲನೆಯ ಈ ಮಜಲು ನೀರಿನ ಒಸರಿನ ಬತ್ತದ ಒಂದು ಊಟೆಯಂತೆ ನನಗೆ ಜೀವಜಲವನ್ನು ಕೊಟ್ಟಿದೆ.ಅದೇ ನನ್ನ ಮೊದಲ ಪಾಠಶಾಲೆ  ಪುಣಚ ಪರಿಯಾಲ್ತಡ್ಕ ಹೈಯರ್ ಎಲಿಮೆಂಟರಿ ಶಾಲೆ.

ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣದಲ್ಲಿ ಇದ್ದ ತಾಲೂಕು -ಪುತ್ತೂರು. ನಾನು ಹುಟ್ಟುವ ಕಾಲಕ್ಕೆ ಮಂಗಳೂರಿನಿಂದ ದಕ್ಷಿಣಕ್ಕೆ ಇದ್ದದ್ದು ಅದು ಒಂದೇ ತಾಲೂಕು.ಈಗಿನ ಬಂಟ್ವಾಳ, ಬೆಳ್ತಂಗಡಿ,ಸುಳ್ಯ -ಈ ಯಾವ ತಾಲೂಕುಗಳೂ ಆಗ  ಇರಲಿಲ್ಲ.ಪುತ್ತೂರು ತಾಲೂಕಿನ ಕೇಂದ್ರ ಪುತ್ತೂರು ಪೇಟೆ.( ‘ಪೇಟೆ’ ಎನ್ನುವ ಶಬ್ದ ಈಗ ವಿರಳವಾಗಿದೆ.ಆದರೆ ನಮಗೆ ಚಿಕ್ಕಂದಿಂದಲೂ ‘ಪೇಟೆ’ ಎಂದರೆ ಅದು ಪುತ್ತೂರು ಮಾತ್ರ.) ಪುತ್ತೂರು ಪೇಟೆಯಿಂದ ಸುಮಾರು ಆರು ಮೈಲು ದೂರದಲ್ಲಿ ಇದ್ದ ಹಳ್ಳಿ ‘ಪುಣಚಾ’. ಕಂದಾಯ ದಾಖಲೆಗಳಿಂದಾಗಿ ‘ಪುಣಚಾ ಗ್ರಾಮ’.ಅದರ ಕೇಂದ್ರ ಸ್ಥಳ ಪರಿಯಾಲ್ತಡ್ಕ. ಪರಿಯ +ಆಲ್+ಅಡ್ಕ. ‘ಆಲ್’ /’ಆಲ’   ಅಂದರೆ ‘ನೀರು’.’ ಪರಿ’ ಅಂದರೆ ‘ಪರಿಪ್ಪುನೆ’  ಅಂದರೆ  ‘ಹರಿಯುವುದು’ .’ಅಡ್ಕ’ ಅಂದರೆ ‘ಸಮತಟ್ಟಾದ ಪ್ರದೇಶ.’ ತುಳುನಾಡಿನಲ್ಲಿ ಪುತ್ತೂರು ಪರಿಸರದಲ್ಲಿ ‘ಅಡ್ಕ’ ಪದದಿಂದ ಕೊನೆಯಾಗುವ ಸ್ಥಳನಾಮಗಳು ಬಹಳ ಇವೆ : ಅಜ್ಜಿನಡ್ಕ,ಅಡ್ಯನಡ್ಕ,ಮಲೆತಡ್ಕ ,ಸಾಮೆತಡ್ಕ,ಉಕ್ಕಿನಡ್ಕ, ಇತ್ಯಾದಿ.ಹೀಗೆ ‘ಹರಿಯುವ ನೀರಿನ ಸಮತಟ್ಟು ಪ್ರದೇಶ’ ಎನ್ನುವ ಭೂಲಕ್ಷಣ ಉಳ್ಳ ಈ ಸ್ಥಳಕ್ಕೆ ‘ ಪರಿಯಾಲ್ತಡ್ಕ ‘ ಎಂಬ ಹೆಸರು ಬಂದಿರಬಹುದು.

ಪರಿಯಾಲ್ತಡ್ಕದ ಎತ್ತರದ ಪದವಿನಲ್ಲಿ ನಮ್ಮ ಶಾಲೆ -ಹೈಯರ್ ಎಲಿಮೆಂಟರಿ ಶಾಲೆ ಇದ್ದದ್ದು.ಅದು ಎಯಿಡೆಡ್ ಅಂದರೆ ಸರಕಾರದ ಸಣ್ಣ ಅನುದಾನ ದೊರೆಯುತ್ತಿದ್ದ ,ಎಂಟನೆ ತರಗತಿವರೆಗೆ ಕಲಿಯಲು ಅವಕಾಶ ಇದ್ದ ಖಾಸಗಿ  ಶಾಲೆ.ನಾನು ಓದುತ್ತಿದ್ದ ಕಾಲಕ್ಕೆ (೧೯೫೨-೧೯೬೦) ಅಲ್ಲಿ ಒಂದರಿಂದ ಎಂಟರವರೆಗೆ ಪ್ರಾಥಮಿಕ  ಮತ್ತು ಮಾಧ್ಯಮಿಕ ಶಿಕ್ಷಣದ ಅವಕಾಶ ಇತ್ತು.ಎಂಟನೆಯ ತರಗತಿಯ ಕೊನೆಗೆ ಪಬ್ಲಿಕ್ ಪರೀಕ್ಷೆ ಇತ್ತು.ಆಗ ನಮಗೆ ದೊರೆಯುತ್ತಿದ್ದ ಸರ್ಟಿಫಿಕೆಟ್ -ಇ ಎಸ ಎಲ್ ಸಿ (ಎಲಿಮೆಂಟರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೆಟ್ ).೧೯೫೨ರಲ್ಲಿ ಒಂದನೆಯ ತರಗತಿಗೆ ಆ ಶಾಲೆಗೆ  ಸೇರಿದ ನಾನು ಎಂಟನೆಯ ತರಗತಿ ಮುಗಿಸಿ ಇ ಎಸ ಎಲ್ ಸಿ ತೇರ್ಗಡೆ ಆದದ್ದು ೧೯೬೦ರಲ್ಲಿ.

ನಮ್ಮ ಶಾಲೆಯನ್ನು ನಡೆಸುತ್ತಿದ್ದವರು ಪುಣಚಾ ಗ್ರಾಮದ ಮಣಿಲ ಮನೆಯವರು.’ಮಣಿಲ’ ಮನೆ ಚಕ್ರಕೋಡಿ ಶಾಸ್ತ್ರಿಗಳ  ಮನೆತನದ ಒಂದು ಮುಖ್ಯ ಶಾಖೆ.ಪಂಚಾಗ,ಜ್ತ್ಯೋತಿಷ್ಯ, ಶಾಸ್ತ್ರ,ಸಾಹಿತ್ಯ ,ಯಕ್ಷಗಾನ,ಕೃಷಿ ಕ್ಷೇತ್ರಗಳ  ಜೊತೆಗೆ  ಎಲ್ಲ ಸೌಲಭ್ಯಗಳಿಂದ ವಂಚಿತವಾದ ಪುಣಚಾಕ್ಕೆ ಶಿಕ್ಷಣದ ಭಾಗ್ಯವನ್ನು ಒದಗಿಸಿದ ಪುಣ್ಯವನ್ನು ಕಟ್ಟಿಕೊಂಡ ಮನೆತನ ಅದು.ನಾನು ಓದುವ ಕಾಲದಲ್ಲೂ ರಸ್ತೆ ,ವಾಹನ,ವಿದ್ಯುತ್ ಸೌಕರ್ಯ ಇಲ್ಲದಿದ್ದ ಆ  ಹಳ್ಳಿಯ ಎಲ್ಲ ವರ್ಗ ಜಾತಿಗಳ ಮಕ್ಕಳಿಗೆ ವಿದ್ಯೆಯ ಮುಖ ತೋರಿಸಿದ ಸಾಹಸಿ ಕುಟುಂಬ ಮಣಿಲ ಶಾಸ್ತ್ರಿಗಳದ್ದು.ನನ್ನ ತಂದೆ ಓದಿದ್ದು ಇದೇ ಶಾಲೆಯಲ್ಲಿ.ನನ್ನ ಇಬ್ಬರು ಅಕ್ಕಂದಿರು ಮತ್ತು ನನ್ನ ತಮ್ಮ ಶಿಕ್ಷಣ ಪಡೆದದ್ದು ಈ ಶಾಲೆಯಲ್ಲಿ.ನಾನು ಬಹಳ ಬಾರಿ ಯೋಚಿಸುತ್ತೇನೆ -ಮಣಿಲ ಮನೆಯವರು ಪರಿಯಾಲ್ತ ಡ್ಕದಲ್ಲಿ ಈ ಶಾಲೆಯನ್ನು ಆರಂಭಿಸದೆ ಇರುತ್ತಿದ್ದರೆ  ನಾನು ಎಲ್ಲಿರುತ್ತಿದ್ದೆ ,ಏನಾಗಿ ಇರುತ್ತಿದ್ದೆ ಎನ್ನುವುದನ್ನು.ನಮ್ಮ ಕುಟುಂಬದ ಆಗಿನ ಆರ್ಥಿಕ ಸ್ಥಿತಿಯಲ್ಲಿ ಪುತ್ತೂರಿಗೆ ಹೋಗಿ ಶಿಕ್ಷಣ ಪಡೆಯುವ ಸಾಧ್ಯತೆ ನನಗೆ ಖಂಡಿತ ಇರಲಿಲ್ಲ.ಇದು ನನ್ನದು ಮಾತ್ರ ಅಲ್ಲ ,ಪುಣಚ ಮತ್ತು ಸುತ್ತುಮುತ್ತಲಿನ ಎಲ್ಲ ಬಡ ಕುಟುಂಬಗಳ ಕತೆಯೂ ಆಗಿತ್ತು.ನಮ್ಮೆಲ್ಲರ ಭಾಗ್ಯದ ಬಾಗಿಲು ತೆರೆದು ,ಚಿಕ್ಕ ಹಳ್ಳದಿಂದ ಕಣಿ ಹೊಳೆಗಳನ್ನು ಹಾದು ನದಿಗಳನ್ನು ದಾಟಿ ,ಸಮುದ್ರ ನೋಡಲು ಮತ್ತು ದಾಟಲು ಸಾಧ್ಯವಾದದ್ದು -ಹರಿಯುವ ಅಡ್ಕದಲ್ಲಿನ  ಪರಿಯಾಲ್ತಡ್ಕಶಾಲೆಯಿಂದ .( ಸಿ .ಎಂ .ಶಾಸ್ತ್ರಿ -ಮರಿಯಪ್ಪ ಶಾಸ್ತ್ರಿ ಅವರು ತಮ್ಮ ಮನೆ ಮತ್ತು ಸಂಸಾರದ ಬಗ್ಗೆ ‘ಮಣಿಲದ ಸಂಸಾರ-ಐದು ತಲೆಮಾರು ‘ ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿದ್ದಾರೆ.೨೦೦೩.)

ನಾನು ಈ ಶಾಲೆಯಲ್ಲಿ ಓದಿದ ಅವಧಿ ೧೯೫೨-೧೯೬೦ ರಲ್ಲಿ ಮಣಿಲದ ಮನೆಯ ಐದು ಮಂದಿ ಅಣ್ಣ ತಮ್ಮಂದಿರು ಆಗ ಅಲ್ಲಿ ಅಧ್ಯಾಪಕರಾಗಿದ್ದರು.ಈ ಐವರಲ್ಲಿ ಹಿರಿಯರಾದ ರಾಮಕೃಷ್ಣ ಶಾಸ್ತ್ರಿ ಅವರು ಹೆಡ್ ಮಾಸ್ತರು.ಅವರ ತಮ್ಮಂದಿರಾದ ಶಿವಶಂಕರ ಶಾಸ್ತ್ರಿ,ಮರಿಯಪ್ಪ ಶಾಸ್ತ್ರಿ,ವೆಂಕಟರಮಣ ಶಾಸ್ತ್ರಿ,ಪದ್ಮನಾಭ ಶಾಸ್ತ್ರಿ ಇತರ ಅಧ್ಯಾಪಕರು.ಮಣಿಲ    ಮನೆಯ ಬಂಧುಗಳಾದ ನೀರ್ಕಜೆಯ ಅಣ್ಣ ತಮ್ಮ ಸುಬ್ರಾಯ ಭಟ್ಟ ಮತ್ತು ರಾಮಕೃಷ್ಣ ಭಟ್ಟ -ಇನ್ನಿಬ್ಬರು ಅಧ್ಯಾಪಕರು.ಒಂದನೆಯ ತರಗತಿಗೆ ವಿಷ್ಣು ಶಿಬರೂರಾಯರು.ಅವರೊಬ್ಬರಿಗೆ ಮಾತ್ರ ಜುಟ್ಟು ಇದ್ದ ಕಾರಣ ಮಕ್ಕಳ ಪಾಲಿಗೆ ಅವರು ಜುಟ್ಟಿನ ಮಾಸ್ತರು.ಎರಡನೆಯ ತರಗತಿಗೆ ಗೋವಿಂದರಾಯರು.ಅವರದ್ದು ಬೋಳುಮಂಡೆ .ಅವರು ಬಾರಿಸುತ್ತಿದ್ದದ್ದು ಯಕ್ಷಗಾನ ಆಟ ಕೂಟಗಳಲ್ಲಿ ಚೆಂಡೆ ಮದ್ದಲೆ.ಹಾಗಾಗಿ ಅವರು ಮಕ್ಕಳ ಬಾಯಲ್ಲಿ ಚೆಂಡೆ ಮಾಸ್ತರು.ಅವರ ಪೆಟ್ಟು ಚೆಂಡೆಗೆ ಮಾತ್ರ ಅಲ್ಲ,ಮಕ್ಕಳಿಗೂ ಸಿಗುತ್ತಿದ್ದ ಕಾರಣ ಅದು ಅವರ ಅನ್ವರ್ಥ ನಾಮ.ಹೆಡ್ ಮಾಸ್ತರು ರಾಮಕೃಷ್ಣ ಶಾಸ್ತ್ರಿಗಳು ನಮಗೆ ಇಂಗ್ಲಿಷ್ ಮತ್ತು ಲೆಕ್ಕ (ಗಣಿತ)ಪಾಠ ಮಾಡುತ್ತಿದ್ದರು.ಆಗಿನ ಕಾಲಕ್ಕೆ ನಮಗಂತೂ ಹೆದರಿಕೆ ಬಹಳ ಇದ್ದದ್ದು ಅವರ ಬಗ್ಗೆ.ಕೋಪ ಜಾಸ್ತಿ ,ಪೆಟ್ಟು ಹೆಚ್ಚು, ಶಿಸ್ತು ಬಹಳ.ಅವರ ಇನ್ನೊಂದು ಮುಖ ಏನೆಂದರೆ  ಅವರು ಶಾಲೆಯ ಯಕ್ಷಗಾನದ ತಾಳಮದ್ದಲೆ ಮತ್ತು ಪ್ರದರ್ಶನದ ಕಾರ್ಯಕ್ರಮಗಳಲ್ಲಿ ಭಾಗವತರು.ಜಾಗಟೆ ಹಿಡಿದುಕೊಂಡು ಅವರು ಅದಕ್ಕೆ ಕೋಲಿನಲ್ಲಿ ಬಾರಿಸುತ್ತಿದ್ದರೆ,ನಮಗೆ ಅದನ್ನು ಕೇಳಲು ನೋಡಲು ಆನಂದ. ಆ ಪೆಟ್ಟು ಜಾಗಟೆಗೆ ,ನಮಗಲ್ಲ ಎನ್ನುವ ಸಮಾಧಾನ.ನನಗೆ ಕನ್ನಡ ಕಲಿಸಿದವರು ,ಸಾಹಿತ್ಯದ ಪ್ರೀತಿ ಮೂಡಿಸಿದವರು ಶಿವಶಂಕರ ಶಾಸ್ತ್ರಿಗಳು.ಹಸನ್ಮುಖ ,ಸ್ವಾರಸ್ಯವಾದ ಪಾಠ -ಈಗಲೂ ಕನ್ನಡದ ನನ್ನ ಬೆಳವಣಿಗೆಯಲ್ಲಿ ನಾನು ಮೊದಲು ನೆನಪಿಸಿಕೊಳ್ಳುವುದು ಮನೆಯ ಪಾಠ- ನನ್ನ ಅಪ್ಪ ಅಗ್ರಾಳ ಪುರಂದರ ರೈ ಅವರದ್ದು ,ಶಾಲೆಯ ಮೊದಲ ಪಾಠ- ಶಿವಶಂಕರ ಶಾಸ್ತ್ರಿಗಳದ್ದು.ಅವರು ಶಿವಶಂಕರ ಮಣಿಲ ಎಂಬ ಹೆಸರಿನಲ್ಲಿ ಲೇಖನ ಬರೆಯುತ್ತಿದ್ದರು.ಯಕ್ಷಗಾನದಲ್ಲಿ ಅರ್ಥ ಹೇಳುತ್ತಿದ್ದ ,ವೇಷ ಹಾಕುತ್ತಿದ್ದ ಅವರು ರಚಿಸಿದ ‘ಜಾಪಾನಿ ಕೃಷಿ ವಿಜಯ ‘ ಎನ್ನುವ ಯಕ್ಷಗಾನ ಪ್ರಸಂಗ ಪ್ರಕಟವಾಗಿ  ಜನಪ್ರಿಯ ಆಗಿತ್ತು.ಅದರ ಯಕ್ಷಗಾನ ಪ್ರದರ್ಶನದಲ್ಲಿ ಅವರು ಪಾತ್ರ ಕೂಡಾ ವಹಿಸಿದ್ದರು.ವೆಂಕಟರಮಣ ಶಾಸ್ತ್ರಿ ಅವರು ವೃತ್ತಿ ಮಾಸ್ತರು.ಶಾಲೆಯಲ್ಲಿ ಹೊಲಿಗೆ ಸಹಿತ ಅನೇಕ ಕರಕುಶಲ ಕಲೆಗಳನ್ನು ನಮಗೆ ಕಲಿಸುತ್ತಿದ್ದದ್ದು ಆ ವೃತ್ತಿ ಮಾಸ್ತರು.

ಶಾಲೆಯ ಒಂದು ಚಿಕ್ಕ ಕೋಣೆಯಲ್ಲಿ ಮಕ್ಕಳಿಗೆ ಪ್ರಾಯೋಗಿಕ ತರಬೇತಿಗೆ ಬೇಕಾದ ಸಾಮಗ್ರಿಗಳು ಇದ್ದುವು.ಮಕ್ಕಳಿಗೆ ಲೆಕ್ಕ ಮಾಡಲು ಕಲಿಸಲು ಹೊಂಗೆಕಾಯಿ ಬೀಜ ,ಮಂಜೊಟ್ಟಿ ಕಾಯಿ ಇವನ್ನು ಚೀಲಗಳಲ್ಲಿ ತುಂಬಿಸಿ ಇಡುತ್ತಿದ್ದರು.ಅಲ್ಲಿ ಹೊಯಿಗೆ,ಕಡ್ಡಿ -ಇವನ್ನು ರಾಶಿಹಾಕಿರುತ್ತಿದ್ದರು.ಒಂದು ಮತ್ತು ಎರಡನೆಯ ತರಗತಿಗಳ ಕೋಣೆಗಳ ಗೋಡೆಗಳಲ್ಲಿ ಪ್ರಾಣಿ ಪಕ್ಷಿ ಸರೀಸೃಪಗಳ ಚಿತ್ರಗಳನ್ನು ರಟ್ಟಿಗೆ ಅಂಟಿಸಿ ನೇತುಹಾಕುತ್ತಿದ್ದರು.ಮ್ಯಾಪ್ ಗಳು, ಗೋಳಗಳು ,ಆಟಿಕೆಗಳು ಅಲ್ಲಿ ನಮಗೆ ಹೊಸ ಪಾಠವನ್ನು ಕೊಡಲು ನೆರವಾಗುತ್ತಿದ್ದವು.

ಈ ಶಾಲೆಯಲ್ಲಿ ವಿದ್ಯೆಯ ಜೊತೆಗೆ  ಓದುವಿಕೆ ಸಾಹಿತ್ಯ ಕಲೆ ಕ್ರೀಡೆ ಮುಂತಾದ ಅನೇಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು.ಶಾಲೆಯಲ್ಲಿ ಒಂದು  ‘ಬಾಲಕ ವಾಚನಾಲಯ’ ಇತ್ತು.ಇದರಲ್ಲಿ ಮಕ್ಕಳ ಸಾಹಿತ್ಯದ ಆಗಿನ ಹೆಚ್ಚಿನ ಪುಸ್ತಕಗಳು ದೊರೆಯುತ್ತಿದ್ದುವು.ನಮಗೆ ವಾಚನಾಲಯದಲ್ಲಿ ಓದುವುದನ್ನು ಕಡ್ಡಾಯ  ಮಾಡಿದ್ದರು.ಮಂಗಳೂರಿನ ಬಾಲಸಾಹಿತ್ಯ ಮಂಡಳಿಯ ಎಲ್ಲ ಪುಸ್ತಕಗಳನ್ನು ಆ ಕಾಲದಲ್ಲೇ ಅಲ್ಲಿ ನಾನು ಓದಿ ಮುಗಿಸಿದ್ದೆ.ಪಂಜೆ ಮಂಗೇಶರಾಯರ ಕವನಗಳು ಕತೆಗಳು ನಮಗೆ ಬಹಳ ಪ್ರಿಯವಾಗಿದ್ದುವು.ಕೋಟಿ ಚೆನ್ನಯ,ಅಗೋಳಿ  ಮಂಜಣ್ಣ, ಗುಡು ಗುಡು ಗುಮ್ಮಟ ದೇವರು,ಕಾಗೆ ಸತ್ತು ಹೇನು ಬಡವಾಯಿತು,ಅರ್ಗಣೆ ಮುದ್ದೆ,ಕೋ ಕೋ ಕೋ ಕೋಳಿ -ಇವೆಲ್ಲ ಆಗ ಓದಿ ಮತ್ತೆ ಮತ್ತೆ ಮೆಲುಕು ಹಾಕಿದ ಕತೆ ಪುಸ್ತಕಗಳು.’ಚಂದಮಾಮ’ ಕತಾ ಸಂಚಿಕೆ ನಮ್ಮ ನಿಗದಿತ ಓದಿಗೆ ಸಿಗುತ್ತಿತ್ತು.ಅದರ ಒಂದು ವರ್ಷದ ಎಲ್ಲ ಸಂಚಿಕೆಗಳನ್ನು  ಬೈಂಡ್ ಮಾಡಿ ,ಒಂದೊಂದು ಸಂಪುಟಗಳನ್ನು ಒಟ್ಟುಮಾಡಿ  ಇಡುತ್ತಿದ್ದರು.ಕಾರಂತರ ಪುಸ್ತಕಗಳನ್ನು ನಾನು ಮೊದಲು ಓದಿದ್ದು ಇಲ್ಲಿಯೇ.

ನಮ್ಮ ಶಾಲೆಗೆ  ಸಾಹಿತಿಗಳನ್ನುಕಲಾವಿದರನ್ನು  ಕರೆಸಿ ಭಾಷಣ ಮಾಡಿಸುತ್ತಿದ್ದರು.ಶಿವರಾಮ ಕಾರಂತರ  ಭಾಷಣವನ್ನು ನಾನು ಮೊದಲು ಕೇಳಿದ್ದು ನಮ್ಮ ಈ ಶಾಲೆಯಲ್ಲಿಯೇ.ಆಗ ಕಾರಂತರು ಪುತ್ತೂರಿನ ಬಾಲವನದಲ್ಲಿ ವಾಸಿಸುತ್ತಿದ್ದರು.ನಮ್ಮ ಶಾಲೆಯಲ್ಲಿ ಯಕ್ಷಗಾನ ತಾಳಮದ್ದಲೆ ಮತ್ತು ಪ್ರದರ್ಶನಗಳು ಬಹಳ ನಡೆಯುತ್ತಿದ್ದವು.ನಮ್ಮ ಹೆಡ್ ಮಾಸ್ತರರು ಭಾಗವತರು.ಸ್ಥಳೀಯ ಕಲಾವಿದರಾಗಿ ಶಿವಶಂಕರ ಶಾಸ್ತ್ರಿ,ವೆಂಕಟರಮಣ ಶಾಸ್ತ್ರಿ,ಗುಂಡ್ಯಡ್ಕ ಮಹಾಬಲ ರೈ ,ಬಣ್ಣದ ವೇಷಕ್ಕೆ ಉಗ್ರಾಣಿ ಮಾಧವ ಹೆಚ್ಚಾಗಿ ಇರುತ್ತಿದ್ದರು.ಕೆಲವೊಮ್ಮೆ ಹೊರಗಿನಿಂದಲೂ ಪ್ರಸಿದ್ಧ ಯಕ್ಷಗಾನ ಕಲಾವಿದರು ನಮ್ಮ ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.ದೇರಾಜೆ ಸೀತಾರಾಮಯ್ಯ, ಪೆರ್ಲ ಕೃಷ್ಣ ಭಟ್ಟ,ಕುರಿಯ ವಿಠಲ ಶಾಸ್ತ್ರಿ,ಮುಳಿಯ ಮಹಾಬಲ ಭಟ್ಟ ,ಮಾಮ್ಬಾಡಿ ನಾರಾಯಣ ಭಾಗವತರು,ಪುತ್ತಿಗೆ  ಜೋಯಿಸರು   ಭಾಗವತರು  ಮುಂತಾದವರು -ಇವರನ್ನೆಲ್ಲ ನಾನು ಮೊದಲು ನೋಡಿದ್ದು ,ಅವರ ಮಾತುಗಳನ್ನು ಹಾಡುಗಾರಿಕೆಯನ್ನು  ಕೇಳಿದ್ದು ನನ್ನ ಈ ಮೊದಲ ಪಾಠಶಾಲೆಯಲ್ಲಿ.

ಶಾಲೆಯಲ್ಲಿ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರಕಟಿಸಲು ಸಾಕಷ್ಟು ಅವಕಾಶಗಳು ಇದ್ದುವು.ನನ್ನ ಮಾತಿನ ಉದ್ಯೋಗಕ್ಕೆ ನಾಂದಿ ಆದದ್ದು ಇಲ್ಲಿಯೇ.ಮಕ್ಕಳ ಚರ್ಚಾ ಸ್ಪರ್ಧೆ ಅಂತಹ ಒಂದು ಕಾರ್ಯಕ್ರಮ.ಅದರ ವಿಷಯಗಳೂ ವೈವಿಧ್ಯಮಯ – ಹಳ್ಳಿ ಮೇಲೋ  ಪೇಟೆ ಮೇಲೋ, ಚಿನ್ನ ಮೇಲೋ ಕಬ್ಬಿಣ ಮೇಲೋ ಇತ್ಯಾದಿ.ಶಾಲೆಯ ವಾರ್ಷಿಕೋತ್ಸವ ಎಂದರೆ ಅಲ್ಲಿ ಒಂದರಿಂದ ಎಂಟನೆಯ ತರಗತಿಯ ಪ್ರತಿ ಒಬ್ಬರಿಗೂ ಒಂದಲ್ಲ  ಒಂದು ರೀತಿಯ ಪಾತ್ರ ಇರುತ್ತಿತ್ತು.ಅಧ್ಯಾಪಕರಾದ ಮರಿಯಪ್ಪ ಶಾಸ್ತ್ರಿ,ಶಿವಶಂಕರ ಶಾಸ್ತ್ರಿ,ವೆಂಕಟರಮಣ ಶಾಸ್ತ್ರಿ ಗಳ ಮುಂದಾಳುತನದಲ್ಲಿ ಮಕ್ಕಳಿಂದ ನಾಟಕ ,ಏಕಪಾತ್ರಾಭಿನಯ ,ಹಾಡು ,ಕುಣಿತ,ಕತೆ ಹೇಳುವುದು -ಇಂತಹ ಬಗೆ ಬಗೆಯ ಕಾರ್ಯಕ್ರಮಗಳು ನಡೆಯುತ್ತಿದ್ದುವು.ಅಂತಹ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಿದ ನನಗೆ ಅದರ ಪ್ರಯೋಜನ ಮುಂದೆ ಬದುಕಿನ ಅನೇಕ ಸಂದರ್ಭಗಳಲ್ಲಿ ದೊರೆತಿದೆ.ನಾನು ಎಂಟನೆಯ ತರಗತಿಯಲ್ಲಿ ಭಾಗವಹಿಸಿದ ಒಂದು ನಾಟಕ ಮತ್ತು ಅದರ ಪಾತ್ರ ಈಗಲೂ ನೆನಪಿದೆ.ಅದು ಎಸ.ಆರ್.ಚಂದ್ರ ಅವರು ಬರೆದ ‘ಒಗ್ಗರಣೆ’ ಎಂಬ ವಿನೋದ ಪ್ರಬಂಧಗಳ ಸಂಕಲನದ ಒಂದು ಪ್ರಬಂಧದ ಆಧಾರದಲ್ಲಿ ರೂಪಿತವಾದ , ಸಾಹಿತ್ಯದ ಕುರಿತ ವಿದ್ವಾಂಸರ ಜಗಳದ ಒಂದು ನಾಟಕ ರೂಪ.ಆ ನಾಟಕ ರೂಪವನ್ನು ಸಿದ್ಧಪಡಿಸಿ , ನಮಗೆ ತರಬೇತು ಕೊಟ್ಟವರು ಶಿವಶಂಕರ ಶಾಸ್ತ್ರಿಯವರು  .ನನ್ನದು ಅದರಲ್ಲಿ ಸಾಂಪ್ರದಾಯಿಕ ಕವಿಪಂಡಿತರ   ಮಗ ನವ್ಯಕವಿಯ  ಪಾತ್ರ.ಅದು ಅರೆಬರೆ ಇಂಗ್ಲಿಶ್ ಕಲಿತ ಒಬ್ಬ ತರುಣ ಕವಿಯ  ವ್ಯಂಗ್ಯ ಪಾತ್ರ.ನಾನು ಸಾಹಿತ್ಯ ರಂಗಕ್ಕೆ ಬರುತ್ತೇನೆ ಎನ್ನುವ ಕಲ್ಪನೆಯೇ ಇಲ್ಲದ ಆ ಕಾಲದಲ್ಲಿ ನಾಟಕರಂಗದಲ್ಲಿ ನಾನು ನಿರ್ವಹಿಸಿದ ಸಾಹಿತಿಯ ಪಾತ್ರ !

ಶಾಲೆಯಲ್ಲಿ ನಾಟಕ ,ಯಕ್ಷಗಾನಗಳಂತೆ ಹರಿಕತೆಗಳೂ ನಡೆಯುತ್ತಿದ್ದುವು.ಆ ಕಾಲಕ್ಕೆ ಹರಿದಾಸರಾಗಿ ಪ್ರಸಿದ್ಧಿಗೆ ಬರುತ್ತಿದ್ದ ಶೇಣಿ ಗೋಪಾಲಕೃಷ್ಣ ಭಟ್ಟರ ಹರಿಕತೆಯನ್ನುನಾನು  ಮೊದಲು ಕೇಳಿದ್ದು ಇಲ್ಲಿ ವಿದ್ಯಾರ್ಥಿಯಾಗಿ.ಆಗ ಶೇಣಿಯವರು  ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶ ಮಾಡಿರಲಿಲ್ಲ.ಮಲ್ಪೆ ಶಂಕರನಾರಾಯಣ ಸಾಮಗರ ಹರಿಕತೆಯನ್ನೂ ಅದೇ ಅವಧಿಯಲ್ಲಿ ಆಲಿಸಿದ್ದು.

ಈಗಲೂ   ನನಗೆ  ಚೆನ್ನಾಗಿ ನೆನಪಿದೆ-ನನ್ನ ತರಗತಿಯಲ್ಲಿ ಇಬ್ಬರು ಇಬ್ರಾಯಿನೆಯರು,ಒಬ್ಬ ದನಿಯೆಲ್ ,ಒಬ್ಬ ಬಾಬು -ಹೀಗೆ ಅನೇಕ ಸಂಸ್ಕೃತಿಯ ಮಕ್ಕಳು ಇದ್ದರು. ನಾವು ಇವತ್ತು ಹೇಳುವ ಜಾತಿ ಧರ್ಮಗಳ ಭೇದ ಆ ಶಾಲೆಯಲ್ಲಿ ಇರಲಿಲ್ಲ.ದಲಿತ ಮಕ್ಕಳು ಎಲ್ಲರೊಡನೆ ಬೆರೆತು ಕಲಿಯುವ ಮುಕ್ತ ಅವಕಾಶ ಅಲ್ಲಿ  ಇತ್ತು.ಶಾಲೆಯ ಅಧ್ಯಾಪಕರು ಮತ್ತು ಆಡಳಿತ ವರ್ಗದವರು ಮಾತಾಡುವ ಭಾಷೆ ನಾವು ಶಾಲೆಯಲ್ಲಿ ಮಾತಾಡುವ ಕನ್ನಡಕ್ಕಿಂತ ಬೇರೆ ಆಗಿದ್ದುದರಿಂದ ಅದು’ ಅವರ ಭಾಷೆ ‘ ಎಂದು ಬೇರೆಯವರು ಹೇಳಿಯೇ  ನಮಗೆ ಗೊತ್ತಾದದ್ದು.ಅವರು ಹವೀಕ ಬ್ರಾಹ್ಮಣರು ( ಮುಂದೆ ಬರವಣಿಗೆಯಲ್ಲಿ’ ಹವ್ಯಕ ‘ಎನ್ನುವ ರೂಪ ಗೊತ್ತಾದದ್ದು ) ಎನ್ನುವ ಪ್ರಜ್ಞೆ ನಮಗೆ ಸ್ಪಷ್ಟವಾಗಿ ಇರಲಿಲ್ಲ.ಮಣಿಲದ ಮನೆಗೆ ನಮ್ಮನ್ನು  ವಿದ್ಯಾರ್ಥಿಗಳನ್ನು ಒಂದು ಬಾರಿ ಕರೆದುಕೊಂಡು ಹೋಗಿ ,ಅವರ ಅಡಕೆ ತೋಟದ ಕೃಷಿ ,ಅದರ ನೀರಾವರಿ ವ್ಯವಸ್ಥೆ  ತೋರಿಸಿ,ನಮಗೆಲ್ಲ ಅವರ ಮನೆಯಲ್ಲಿ ಲೋಟದಲ್ಲಿ ಒಳ್ಳೆಯ ಕಾಫಿ ಕೊಟ್ಟಿದ್ದರು. ನಾವು ಅಲ್ಲಿ  ಕುಡಿದ ಕಾಫಿಯ ಲೋಟಗಳನ್ನುನಾವು ಮಕ್ಕಳು ಯಾರೂ  ತೊಳೆಯಲಿಲ್ಲ. ನಾವು ಬೆಳಗ್ಗೆ ಮನೆಯಿಂದ ಶಾಲೆಗೆ ಬರುವಾಗ ಮಧ್ಯಾಹ್ನದ ಊಟಕ್ಕೆ ಬುತ್ತಿ ಕಟ್ಟಿಕೊಂಡು ಬರುತ್ತಿದ್ದೆವು.ಅದನ್ನು ಇಡುವುದಕ್ಕೆ ಬುತ್ತಿಯ ಒಂದು ಸಣ್ಣ ಕೋಣೆ ಇತ್ತು.ನಮ್ಮ ಬುತ್ತಿಯಲ್ಲಿ ಅನೇಕ ಬಾರಿ ಮೀನಿನ ಪದಾರ್ಥ ( ಬಂಗುಡೆ ,ಬೂತಾಯಿ ) ಇರುತ್ತಿತ್ತು.ಅದನ್ನು ತರುವುದಕ್ಕಾಗಲೀ ಇತರರ ಎದುರು ಉಣ್ಣುವುದಕ್ಕಾಗಲೀ  ಯಾವುದೇ ಕಟ್ಟುಪಾಡು ಇರಲಿಲ್ಲ.

ಪ್ರತಿಯೊಬ್ಬರಿಗೂ ಒಂದು ವ್ಯಕ್ತಿಗತ ಬದುಕು ಇರುತ್ತದೆ,ಒಂದು ಕೌಟುಂಬಿಕ ಜಗತ್ತು ಇರುತ್ತದೆ,ಒಂದು ಸಮುದಾಯದ ನಿಯಮಾವಳಿ ಇರುತ್ತದೆ, ಒಂದು ಸಂಸ್ಕೃತಿಯ ನೆಲೆ ಇರುತ್ತದೆ. ಆದರೆ ಅದು ಇನ್ನೊಬ್ಬರ ನಂಬಿಕೆ,ಸಂಸ್ಕೃತಿ  ಮತ್ತು ಲೋಕದೃಷ್ಟಿಯನ್ನು ಗೌರವಿಸುವ ಸಹನೆಯ ಪಾಠವನ್ನು ಕಲಿಸಿದಾಗ ,ಅದು ಮುಂದಿನ ಬದುಕಿನುದ್ದಕ್ಕೂ ನಮ್ಮನ್ನು ಕಾಪಾಡಿಕೊಂಡು ಬರುತ್ತದೆ.ಅದು ನಿರಂತರ ಹರಿಯುವ ನದಿಯಂತೆ  ;ಅದರ ನೀರು ಎಂದೂ ಜಡವಾಗುವುದಿಲ್ಲ ,ಕೊಳೆಯುವುದಿಲ್ಲ.ಅದು ಶುದ್ಧ ಮತ್ತು ಮುಕ್ತ.

ಪರಿಯಾಲ್ತಡ್ಕ ಹೈಯರ್ ಎಲಿಮೆಂಟರಿ ಶಾಲೆ ನನ್ನ ಪಾಲಿಗೆ ಅಂತಹ  ಶುದ್ಧ ನೀರು ಹರಿಸಿದ ನನ್ನ ಬದುಕಿನ  ಮೊದಲ ‘ ಅಡ್ಕ.’

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

6 Responses to “ನನ್ನ ಮೊದಲ ಪಾಠಶಾಲೆ :ನೀರಿನಂತೆ ಹರಿಯಲು ಕಲಿಸಿದ ಪರಿಯಾಲ್ತಡ್ಕ”

RSS Feed for ಬಿ ಎ ವಿವೇಕ ರೈ Comments RSS Feed

ಸರ್, ನಿಮ್ಮ ಶಾಲೆಯ ನೆನಪುಗಳನ್ನು ಓದುತ್ತಿರುವಾಗ ನನ್ನ ಮೊದಲ ಶಾಲೆ ನೆನಪಾಯಿತು.ಸುಬ್ರಹ್ಮಣ್ಯ ಸಮೀಪದ ಐನಕಿದು ಶಾಲೆಯ ನಮ್ಮ ಮೊದಲ ಮಾಸ್ತರು ಕುಶಾಲಪ್ಪ ಗೌಡರು-ಅವರು ಆ ಏಕೋಪಧ್ಯಾಯ ಶಾಲೆಯ ಮುಖ್ಯೋಪಧ್ಯಾಯರು-ಅವರ ನೆನಪಾಯಿತು. ದೊಡ್ಡ ಕಾಂಪೌಂಡಿನೊಳಗೆ ನಾವೇ ನೀರು ಹಾಕಿ ಬೆಳೆಸಿದ ತೆಂಗಿನ ಮರಗಳು ನೆನಪಾದವು

ನಿಮ್ಮ ನೆನಪುಗಳ ಪೆಟ್ಟಿಗೆಯಿಂದ ಹೊರ ಬಂದು ಮಾತಾಡಿದ ಪದಗಳು ಖುಷಿ ಕೊಟ್ಟಿತು.ನನ್ನ ಮಾತಿಷ್ಟೆ. ಯಾವತ್ತಿಗೂ ಮನುಷ್ಯ ತನ್ನ ಊರು ಮತ್ತು ಮನಸ್ಸನ್ನು ಖಾಲಿ ಬಿಡಬಾರದು. ನಿಮ್ಮ ಮಾತುಗಳು ಈ ವಾಕ್ಯವನ್ನು ಒಕ್ಕಣಿಸುವಂತೆ ಮಾಡಿತು.ಪ್ರತಿಯೊಂದು ವಾಕ್ಯವೂ ಕೂಡ ಆ ದಿನ ಮತ್ತು ಘಳಿಗೆಳನ್ನು ಅಚ್ಚಳಿಯದಂತೆ ಮುದ್ರೆಯೊತ್ತಿವೆ.

lekhana odutha odutha kelage aalakkilidante ‘muthu’ sikkithu. aa 5 saalugalulla muthina holapige kannu koraisi kannugalu thevadinda manjadavu.
– kallur nagesh

odi tumba tumba santasavaayitu. Nammalli ella ellavu kettadaagilla annisitu. vayktikavaagi makkala saahityada kuritu tamma andina anubhava upyuktavaayitu
Anand patil

ಆನಂದ ಪಾಟೀಲ್ ಅವರಿಗೆ ನಮಸ್ಕಾರ.ನಿಮ್ಮ ಕಾಳಜಿಗೆ ಧನ್ಯವಾದ.

SWAMIYAVARE NAMANA
NANNA MODALA SHALE- NANU ITTICHEGE ODIDE, URALLI KALITU MUMBAI YALLI NELESIDA KANNADIGA NANU
NANU KALITADDU, CHRISCHANARA ST THOMAS HIGHER PRIMARY SCHOOL ALANANAGAR MOODABIDRE ALLI.
NAMAGE PATA KALISIDDU ELLA SISTER NAVARU, SISTU, ACCHUKATTU, PARISHRAMA, VISHWASA ILLADE JEEVANADALLI YASASSU SADHYAVE? IDANNU KALISIDDU NANAGE SALEYA SISTER’S
NAMMA SALEYALLI SARVA JATIYA MAKKALU OTTIGE KULITU KALIYUTIFDDEVU, BESIGEYALLI MAVINA MARADA KELAGE KULITU KALITA NENAPU ENDU MAREYALU SADYAVE.
NANAGE INNU NENAPIDE, NAMMA SALEYA EDUGRGADE ACHARYARA MATHA ITTU, MATHA DA MANIGALU NAMMA SALEGE BARUTIDDARU. OMME ONDU CHISTENARA HUDUGA MATADA HUDUGANA TALEGUDALU HANGISIDAKKE AVARA MADHYE JAGALAVAGITTU, SHALEYA FATHER MATTU MATHADA PRAMUKARU IDANNU YAVUDE GADDALA AGADA RITIYALLI NIVARISIDDU INDINA DINALLI SADHYAVE………….?
EDUCATION IS TO LIBERATE US FROM ALL THE EVILS OF THE SOCIETY
IT IS PITY TO SEE THAT WE EDUCATED ARE ACTIVE IN RUINING SOCIETY AND ITS VALUES
WHO WILL LIBERATE US FROM SUCH PEOPLE .

NAVU KALITA SHALEYANNU, NAMAGE KALISIDA SISTER’S, TEACHERS & MASATARAANNU MAREYALU YARINDALU SADHYAVILLA…….IDU NIJA SWAMI NIJA


Where's The Comment Form?

Liked it here?
Why not try sites on the blogroll...

%d bloggers like this: