ಎಂಕು ಪಣಂಬೂರಿಗೆ ,ಕುಟ್ಟಿ ಕುಂದಾಪುರಕ್ಕೆ …….ನಾವು ಎಲ್ಲಿಗೆ ?

Posted on ಸೆಪ್ಟೆಂಬರ್ 4, 2011. Filed under: ಜಾನಪದ | ಟ್ಯಾಗ್ ಗಳು:, , , , , , , |


ನಿನ್ನೆಯ ದಿನ ನನ್ನ ಬ್ಲಾಗಿನ ಬರಹ ‘ಕಾಫ್ಕ ಪಣಂಬೂರಿಗೆ ಬಂದ ಹಾಗೆ ‘ ಇದರ ಆರಂಭದಲ್ಲಿ ನಾನು ಉಲ್ಲೇಖಿಸಿದ ‘ಎಂಕು ಪಣಂಬೂರಿಗೆ ಹೋದ ಹಾಗೆ ‘ ಎಂಬ ಗಾದೆಗೆ ಪೂರಕವಾಗಿ  ಫೇಸ್ ಬುಕ್ ನಲ್ಲಿ ಇಬ್ಬರು ಸ್ನೇಹಿತರು ಶಶಿಧರ್ ಹೆಮ್ಮಾಡಿ ಮತ್ತು ಮಹಾಬಲ ಸೀತಲ್ ಭಾವಿ ಟಿಪ್ಪಣಿ ಬರೆದಿದ್ದಾರೆ. ಶಶಿಧರ್ ಹೆಮ್ಮಾಡಿ ಹೀಗೆ ಬರೆದಿದ್ದಾರೆ :” ಇದೇ ರೀತಿ ಕುಂದಾಪ್ರ ಕನ್ನಡದಲ್ಲಿ ಒಂದು ಗಾದೆ ಇದೆ.ಕುಟ್ಟಿ ಕುಂದಾಪುರಕ್ಕೆ ಹೋದ ಹಾಗೆ ಅಂತ.ಕುಟ್ಟಿ ಒಂದು ಮನೆಯಲ್ಲಿ ಆಳಾಗಿ ಕೆಲಸ ಮಾಡ್ತಿದ್ದ.ಮನೆ ಯಜಮಾನ ಮತ್ತು ಅವನ ಹೆಂಡತಿ ರಾತ್ರಿ ಮಾತಾಡ್ತಾ ಇರುವಾಗ ,ನಾಳೆ ಕುಟ್ಟಿಯನ್ನು ಕುಂದಾಪುರಕ್ಕೆ ಕಳುಹಿಸಬೇಕು ಅಂದ್ರಂತೆ. ಕುಟ್ಟಿ ಇದನ್ನು ರಾತ್ರಿ ಕೇಳಿಸ್ಕೊಂಡಿದ್ದ. ಬೆಳಿಗ್ಗೆ ಎದ್ದು ಸೀದಾ ಕುಂದಾಪುರಕ್ಕೆ ಬಂದೆ ಬಿಟ್ಟ ಅಂತೆ.ಯಾಕೆ ಏನು ಅವನಿಗೆ  ಗೊತ್ತಿಲ್ಲ.” ಮಹಾಬಲ ಸೀತಲ್ ಭಾವಿ ಅವರು ಇಂತಹ ಗಾದೆಯ ಪ್ರಾದೇಶಿಕ ಅವತರಣಿಕೆಗಳ ಬಗ್ಗೆ ಪ್ರಸ್ತಾವಿಸಿ ,”ನಮ್ಮೂರು ಕಡೆ, ಅಂದ್ರೆ ಶಿರಶಿ ಸಿದ್ದಾಪುರ ಕಡೆ ‘ತಿಪ್ಪಣ್ಣ ನಾಯ್ಕ ಕರೂರಿಗೆ ಹೋದ ಹಾಗೆ ‘ ಎಂಬ ಗಾದೆ ಇದೆ” ಎಂದು ತಿಳಿಸಿದ್ದಾರೆ.ಇಬ್ಬರು ಗೆಳೆಯರಿಗೆ ಮಾಹಿತಿಗಾಗಿ ಧನ್ಯವಾದಗಳು.

ತುಳುವಿನಲ್ಲಿ ಒಂದು ಕಾಲಕ್ಕೆ ಜನಪ್ರಿಯವಾಗಿದ್ದ ಗಾದೆ ‘ಎಂಕು ಪಣಂಬೂರುಗ್ ಪೋಯಿಲೆಕೋ ‘ ( ಎಂಕು  ಪಣಂಬೂರಿಗೆ ಹೋದ ಹಾಗೆ ).ಈ ಗಾದೆಯ ಹಿನ್ನೆಲೆಯಲ್ಲಿ ಒಂದು ಕತೆ /ಐತಿಹ್ಯವು  ಮೌಖಿಕ ಪರಂಪರೆಯಲ್ಲಿ ಪ್ರಚಲಿತವಾಗಿದೆ.” ಒಂದು ಮನೆಯಲ್ಲಿ ಎಂಕು ಎಂಬ ಒಬ್ಬ ಕೆಲಸದವನಿದ್ದ. ಒಂದು ದಿನ ಆ ಮನೆಯ ಒಡೆಯನು ತನ್ನ ಪತ್ನಿಯಲ್ಲಿ ‘ನಾಳೆ ಎಂಕುವನ್ನು ಪಣಂಬೂರಿಗೆ ಕಳುಹಿಸಬೇಕು ‘ ಎಂದು ಹೇಳಿದ . ಈ ಮಾತನ್ನು ಕೇಳಿಸಿಕೊಂಡ ಎಂಕು ಮರುದಿನ ಮುಂಜಾನೆಯ ಹೊತ್ತಿಗೆ ಯಾರಿಗೂ ಹೇಳದೆ ಪಣಂಬೂರಿಗೆ ಹೋಗಿ ,ಹಾಗೆಯೇ ಹಿಂದಕ್ಕೆ ಬಂದ. ಬಂದವನೇ ಒಡೆಯನಲ್ಲಿ ‘ನಾನು ಪಣಂಬೂರಿಗೆ ಹೋಗಿ ಬಂದೆ ‘ ಎಂದ.ಒಡೆಯನಿಗೆ ವಿಷಯ ಅರ್ಥವಾಯಿತು. ಅಂದಿನಿಂದ ಗೊತ್ತುಗುರಿ ಇಲ್ಲದೆ , ನಿಷ್ಪ್ರಯೋಜಕವಾಗಿ  ಒಂದು ಕಡೆಗೆ ಯಾರಾದರೂ ಹೋಗಿಬರುವುದಕ್ಕೆ ‘ಎಂಕು ಪಣಂಬೂರಿಗೆ ಹೋದ ಹಾಗೆ ‘ ಎಂಬ ಗಾದೆಮಾತು ಬಳಕೆಯಾಯಿತು.

ಇದಕ್ಕೆ ಸ್ವಲ್ಪಮಟ್ಟಿಗೆ ಸಂವಾದಿಯಾದ ಇನ್ನೊಂದು ತುಳು ಗಾದೆ ಇದೆ  : ‘ ಎಕ್ಕಲೆ ಬೊಂಬಾಯಿಗ್ ಪೋಯಿಲೆಕೋ ‘ ( ಜಿರಳೆ ಬೊಂಬಾಯಿಗೆ ಹೋದ ಹಾಗೆ ).ಈ ಗಾದೆಗೂ ಹಿನ್ನೆಲೆಯಾಗಿ ಒಂದು ಕತೆ ಹೇಳುತ್ತಾರೆ : ” ಮಂಗಳೂರು ಕಡೆಯಿಂದ ಬೊಂಬಾಯಿಗೆ ಹಡಗಿನಲ್ಲೋ ಲಾರಿಯಲ್ಲೋ ಗೋಣಿ ಚೀಲಗಳಲ್ಲಿ ತುಂಬಿ ಸಾಮಾನು ಕಳುಹಿಸಿದರಂತೆ.ಅಂತಹ ಒಂದು ಗೋಣಿ ಚೀಲದಲ್ಲಿ ಒಂದು ಜಿರಳೆ ಸೇರಿಕೊಂಡಿತ್ತಂತೆ.ಬೊಂಬಾಯಿಯಲ್ಲಿ ಸಾಮಾನು ಖಾಲಿ ಮಾಡಿ ಖಾಲಿ ಗೋಣಿಚೀಲಗಳನ್ನು ಹಿಂದಕ್ಕೆ ಕಳುಹಿಸಿದಾಗ ಆ ಜಿರಳೆ  ಕೂಡಾ ಆ ಗೋಣಿಚೀಲದಲ್ಲಿ ಊರಿಗೆ ಹಿಂದಕ್ಕೆ  ಬಂದಂತೆ.ಊರಿಗೆ ಬಂದ ಬಳಿಕ ಆ ಜಿರಳೆ ತನ್ನ ಬಂಧು-ಮಿತ್ರ  ಜಿರಳೆಗಳಲ್ಲಿ ತನ್ನ ಹೆಮ್ಮೆಯನ್ನು ಹೇಳಿಕೊಂಡಿತಂತೆ ‘ ನಾನು ಬೊಂಬಾಯಿಗೆ ಹೋಗಿ ಬಂದೆ ‘ಎಂದು.”ಏನೊಂದೂ ಸಾಧನೆ ಇಲ್ಲದೆ ಯಾರಾದರೂ  ಒಂದು ಕಡೆಗೆ ಹೋಗಿ ಬರುವುದಕ್ಕೆ ವ್ಯಂಗ್ಯವಾಗಿ ಈ ಗಾದೆಯನ್ನು ಬಳಸುತ್ತಾರೆ.

ಮೇಲೆ ಉಲ್ಲೇಖಿಸಿದ ಗಾದೆಗಳಿಗೆ ಸಂವಾದಿಯಾದ ,ಪೂರಕವಾದ ಅಥವಾ ಭಿನ್ನ ಅರ್ಥ  ಕೊಡುವ ಗಾದೆಗಳಿದ್ದರೆ ,ಪ್ರತಿಕ್ರಿಯೆ ರೂಪದಲ್ಲಿ ಈ ಬ್ಲಾಗಿನಲ್ಲಿ ಹಂಚಿಕೊಳ್ಳಿರಿ.

‘ಎಂಕು ಪಣಂಬೂರಿಗೆ ‘ ‘ಕುಟ್ಟಿ ಕುಂದಾಪುರಕ್ಕೆ  ‘ …..ಇಂತಹ ಗಾದೆಗಳಲ್ಲಿ ಆಳುಗಳ ದಡ್ಡತನವೇ ಹಾಸ್ಯದ ವಸ್ತು. ಅಂತಹ ನಿದರ್ಶನಗಳು ನಿಜ ಬದುಕಿನಲ್ಲಿ ಸಾಕಷ್ಟು ದೊರೆಯುತ್ತವೆ. ಇಂತಹ ಗಾದೆಗಳು ಆಳುಗಳ ಬಗ್ಗೆ ಒಡೆಯರ ದೃಷ್ಟಿಕೋನದಿಂದ ಹುಟ್ಟಿದವುಗಳು  ಕಟ್ಟಿದವುಗಳು. ಒಡೆಯರ ದಡ್ಡತನದ ಬಗ್ಗೆ ಆಳುಗಳು ಕಟ್ಟಿದ ಗಾದೆಗಳು ನಿಮ್ಮಲ್ಲಿ ಇದ್ದರೆ ಅವನ್ನೂ ಇಲ್ಲಿ ಹಂಚಿ ಕೊಳ್ಳಬಹುದು. ಗಾದೆಗಳು ನಿರ್ದಿಷ್ಟವಾದ  ವರ್ಗ ,ಜಾತಿ,ಲಿಂಗ ,ಪ್ರದೇಶ,ಸಂಸ್ಕೃತಿಗಳ ಉತ್ಪನ್ನಗಳು. ಹಾಗಾಗಿ ಇವತ್ತು ಜಾತಿಗಳನ್ನು ತಮಾಷೆ ಮಾಡುವ ಟೀಕೆ ಮಾಡುವ ಅನ್ನಿಸುವ  ಗಾದೆಗಳು ಕೂಡಾ ಎಲ್ಲ ಭಾಷೆಗಳಲ್ಲೂ ಪರಂಪರಾಗತವಾಗಿ ಜನಪದದಲ್ಲಿ ಪ್ರಚಲಿತವಾಗಿದ್ದವು.ಒಂದು ಜಾತಿಯು ಇನ್ನೊಂದು ಜಾತಿಯನ್ನು ತನ್ನ ಪೂರ್ವಗ್ರಹಗಳಿಂದಲೇ ನೋಡಿ ,ಅವುಗಳಿಗೆ ಗಾದೆಗಳ ಅಭಿವ್ಯಕ್ತಿಯ ರೂಪವನ್ನು ಕೊಡುತ್ತಿತ್ತು.ಕೆಲವೊಮ್ಮೆ ಸ್ವವಿಮರ್ಶೆಯ ರೀತಿಯಲ್ಲೂ ಇವು ಕಾಣಿಸುತ್ತಿದ್ದವು.

ಉದ್ದೇಶರಹಿತವಾಗಿ ನಾವು ಮಾಡುವ ಅನೇಕ  ಕೆಲಸಗಳು ದಡ್ಡತನದವು ಎಂದು ಬಹಳ ಬಾರಿ  ಪರಿಗಣಿತವಾಗುವುದಿಲ್ಲ. ಇದಕ್ಕೆ ನಮ್ಮ ಅಂತಸ್ತು ,ಸ್ಥಾನಮಾನ ಕಾರಣ.ಆಳುಗಳು ಎಲ್ಲ  ದಡ್ಡರು  ಮತ್ತು ಒಡೆಯರು /ಆಳುವವರು ಮಾತ್ರ  ಬುದ್ಧಿವಂತರು ಎನ್ನುವ ನಮ್ಮ ಪೂರ್ವಗ್ರಹಗಳು ನಮ್ಮ ಧೋರಣೆಗಳನ್ನು ರೂಪಿಸುತ್ತವೆ. ನಮ್ಮನ್ನು ಆಳುವವರು ಅನೇಕ ಬಾರಿ ತಮ್ಮ ತಮ್ಮ ‘ಪಣಂಬೂರು ‘ಗಳಿಗೆ ಹೋಗಿ ,ಏನೂ ಕೆಲಸ ಮಾಡದೆ ಹಿಂದಕ್ಕೆ ಬಂದರೂ ನಾವು ಅವರನ್ನು ‘ಎಂಕು ‘ ‘ಕುಟ್ಟಿ’ ಎಂದು ಕರೆಯುವುದಿಲ್ಲ.

ಪ್ರಯಾಣ ಮತ್ತು ತಿರುಗಾಟ ಎನ್ನುವ ಪರಿಕಲ್ಪನೆಗಳಿಗೆ ಸಂಬಂಧಿಸಿದಂತೆ ಅವುಗಳನ್ನು ಮಾಡುವವರಿಗೆ ಉದ್ದೇಶ ಮತ್ತು ಗುರಿ -ಇವನ್ನು ಅನುಸರಿಸಿ ಭಿನ್ನ ಭಿನ್ನ ಹೆಸರುಗಳಿವೆ.ಪ್ರಯಾಣಿಕ, ಸಂಚಾರಿ,ತಿರುಗುಳಿ,ಅಲೆಮಾರಿ, ಉಂಡಾಡಿ,ಪ್ರವಾಸಿ,ಯಾತ್ರಿಕ,ರಾಯಭಾರಿ,ಸಂದೇಶವಾಹಕ,ರಾಜತಾಂತ್ರಿಕ ಇತ್ಯಾದಿ.ಎಲ್ಲ ಸಂದರ್ಭಗಳಲ್ಲಿ  ಇವರೆಲ್ಲರಿಗೆ  ಒಂದು ಅಥವಾ ಒಂದೇ ಗುರಿ ಇರುವುದಿಲ್ಲ ,ಕೆಲವೊಮ್ಮೆ ಇರಬೇಕಾಗಿಲ್ಲ.

ಧರ್ಮ ಮತ್ತು ರಾಜಕೀಯ -ಈ ಕ್ಷೇತ್ರಗಳಿಗೆ ಹೋಗುವವರು ಒಂದು ಕಾಲಕ್ಕೆ ‘ಯಾತ್ರಿಕರು ‘ಆಗಿದ್ದರು.ಈಗ ಅವರು ‘ಪ್ರವಾಸಿ’ ‘ಸಂಚಾರಿ’ ‘ಅಲೆಮಾರಿ’ ಆಗಿ ಬದಲಾಗಿದ್ದಾರೆ .

ಈ ಪರಿಕಲ್ಪನೆಗಳಿಗೆ ಸಂಬಂಧಿಸಿದ ಒಂದು ಒಳ್ಳೆಯ ಲೇಖನ :’From Pilgrim to Tourist or a Short History of Identity’ -Zygmunt Bauman.

ಈಗ ನಾವು ನಮಗೇ ಕೇಳಿಕೊಳ್ಳಬಹುದಾದ ಪ್ರಶ್ನೆ :’ನಾವು ಹೊರಟಿದ್ದೀಗ ಎಲ್ಲಿಗೆ ?’

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

3 Responses to “ಎಂಕು ಪಣಂಬೂರಿಗೆ ,ಕುಟ್ಟಿ ಕುಂದಾಪುರಕ್ಕೆ …….ನಾವು ಎಲ್ಲಿಗೆ ?”

RSS Feed for ಬಿ ಎ ವಿವೇಕ ರೈ Comments RSS Feed

ನನ್ನಜ್ಜಿಯ ಬಾಯಲ್ಲಿ ಕೇಳಿಬರುತ್ತಿದ್ದ ಮಾತುಗಳಿವು….ತು೦ಬಾ ಕುತೂಹಲಕರವಾಗಿತ್ತು ನಿಮ್ಮ ಬರಹ….
ಇದನ್ನ ನೆನಪಿಸುತ್ತಿದ್ದ೦ತೆ “ಕೆಬಿ ತಿರ್ಗಾ೦ಡ ಉಳ್ಳಾಲ ತೋಜೊಡು”….ಅ೦ತ ಕೆಲವೊಮ್ಮೆ ನನ್ನಜ್ಜಿ ಬೈಯುತ್ತಿದ್ದುದು ನೆನಪಿದೆ….ಇದು ಹೇಗೆ ಹುಟ್ಟಿತೋ ತಿಳಿಯದು….ಇದಕ್ಕೂ ಏನಾದರೂ ಹಿನ್ನಲೆ…ಕಥೆ ಇದೆಯೇ….!!

ನಮಸ್ಕಾರ ವಿವೇಕ್ ರಾಲ್ರೇ,

ಎಂಕು ಪಣಂಬೂರು ಪೋತಿ ಲೆಕ್ಕಂತಿನ ಕೆಲವು ಗಾದೆಲೆನ ಮಿತ್ತ ಡಾ. ವಾಮನ ನಂದಾವರೆರ್ ಬರೆತಿ ಬೂಕುನು ತುಳು ಸಾಹಿತ್ಯ ಻ಕಾಡೆಮಿ ಪ್ರಕಟ ಮಲ್ಡ್ಂಡ್ ಇಂದ್ ನೆನಪು.

nice article / write-up. keep it up.


Where's The Comment Form?

Liked it here?
Why not try sites on the blogroll...

%d bloggers like this: