ಕಾಫ್ಕ ಪಣಂಬೂರಿಗೆ ಬಂದ ಹಾಗೆ

Posted on ಸೆಪ್ಟೆಂಬರ್ 3, 2011. Filed under: ಅಭಿವೃದ್ಧಿಯ ಮಂತ್ರ | ಟ್ಯಾಗ್ ಗಳು:, , , , |


ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಮುಂಗಾರು’ ಕನ್ನಡ ದಿನಪತ್ರಿಕೆಯ ‘ಗಿಳಿಸೂವೆ ‘ ಎಂಬ ಹೆಸರಿನ ನನ್ನ  ಅಂಕಣದಲ್ಲಿ ಹದಿನೇಳು ವರ್ಷಗಳ ಹಿಂದೆ ,೨೯.೫.೧೯೯೪ರನ್ದು ಪ್ರಕಟವಾದ   ಲೇಖನ -‘ ಕಾಫ್ಕ ಪಣಂಬೂರಿಗೆ ಬಂದ ಹಾಗೆ’. ತುಳುವಿನಲ್ಲಿ ಜನಪ್ರಿಯ ಆಗಿರುವ ಒಂದು ಗಾದೆ :’ಎಂಕು ಪಣಂಬೂರುಗ್ ಪೋಯಿ ಲೆಕ್ಕೋ ‘( ಎಂಕು ಪಣಂಬೂರಿಗೆ ಹೋದ ಹಾಗೆ). ಆ ಗಾದೆಯ ಸನ್ನಿವೇಶ ,ವ್ಯಂಗ್ಯ ಬೇರೆ.ಅದರ ಧಾಟಿಯಲ್ಲಿ ವಿಷಾದ ವ್ಯಂಗ್ಯದ ಹೇಳಿಕೆಯಾಗಿ ಈ ಲೇಖನ ಬರೆದಿದ್ದೆ.ಈ ಹದಿನೇಳು ವರ್ಷಗಳಲ್ಲಿ ಪಣಂಬೂರು ಸಂಪೂರ್ಣ ಬದಲಾಗಿದೆ.ಅದರ ಪರಿಸರದ ಹಳ್ಳಿಗಳೆಲ್ಲ ಕಣ್ಮರೆಯಾಗಿವೆ. ಮತ್ತೆ ಕರಾವಳಿಯಲ್ಲಿ ಆಗಿರುವ ‘ಅಭಿವೃದ್ಧಿ’ ಯಿಂದ ಜನರ ಬದುಕಿನ ಮೇಲಾಗಿರುವ ದಾರುಣ ಪರಿಣಾಮಗಳು ಬಹುಬಗೆಯವು. ನನ್ನ ಈ ಬ್ಲಾಗ್ ನಲ್ಲಿ  ‘ನಂದಿಕೂರಿನಲ್ಲಿ ಕಂಡ ಸಂಕಷ್ಟ ‘ ಎಂಬ  ಲೇಖನ ( ಮೇ ೭, ೨೦೧೧ )ಮತ್ತು ನಾನು ತೆಗೆದ ಚಿತ್ರಗಳನ್ನು’ನಂದಿಕೂರಿಗೆ ಭೇಟಿ ಕೊಟ್ಟಾಗ ಕಂಡ ನೋಟ ‘(ಮೇ ೮, ೨೦೧೧ )ದಲ್ಲಿ   ಕೊಟ್ಟಿದ್ದೇನೆ.ಅದರ ಪರಿಣಾಮ ಏನಾಗಿದೆ ಎಂದು ಗೊತ್ತಿಲ್ಲ.

ಇತ್ತೀಚಿಗೆ ಸೃಜನಶೀಲ ಚಿಂತಕ  ಬಿ.ಸುರೇಶ ಅವರ  ನಿರ್ದೇಶನದ ‘ಪುಟ್ಟಕ್ಕನ ಹೈವೇ’ ಸಿನೆಮಾವನ್ನು ಉದಯ ಟಿವಿಯಲ್ಲಿ ನೋಡಿದೆ. ಈ ಬಾರಿ  ಊರಿಗೆ ಬಂದ ಬಳಿಕ ನಾನು  ನೋಡಲು ಬಯಸಿದ್ದ ಸಿನೆಮಾ ಅದು.ಅಭಿವೃದ್ಧಿಗೆ ಇತ್ತೀಚೆಗಿನ ವರ್ಷಗಳ ಹೊಸ  ಸೇರ್ಪಡೆ ‘ಹೈವೇಗಳು ‘ಕೂಡಾ.ತುಂಬಾ ಮಾರ್ಮಿಕವಾದ,ನಮ್ಮನ್ನು ಬಹಳವಾಗಿ ಕಾಡುವ ಅಲುಗಾಡಿಸುವ ಚಿತ್ರ ಅದು.ಹೊಸ ಹೈವೇಗಳಲ್ಲಿ ಹೊಸ ಕಾರುಗಳಲ್ಲಿ ಓಡಾಡುವವರು ಅದರ ಅಡಿಯಲ್ಲಿ ಹೂತುಹೋದ ಪುಟ್ಟಕ್ಕರನ್ನು ,ಭೂಮಿಯೊಂದಿಗೆ ದೇಹವನ್ನೂ ಮಾರಿಕೊಂಡು ಬದುಕಬೇಕಾದ ದಾರುಣ ಸ್ಥಿತಿಗೆ ನೂಕಲ್ಪಟ್ಟ ಪುಟ್ಟಕ್ಕಳ ಹೆಣ್ಣು ಸಂತಾನವನ್ನು ಒಂದು ಕ್ಷಣ ನೆನಪು ಮಾಡಿಕೊಂಡರೂ ಸಾಕು  -ನಮ್ಮ ‘ಅಭಿವೃದ್ಧಿ’ಯ ಮಂತ್ರಗಳು ಸೂತಕದ ಆಚರಣೆಯ ಸ್ತ್ರೋತ್ರಗಳು ಎಂದು ತಿಳಿದುಕೊಳ್ಳಲು.

ಆದರೂ ಮತ್ತೆ ಈಗಿನ ಬೇರೆ ಬೇರೆ  ಸನ್ನಿವೇಶಗಳಿಗೆ ಅನ್ವಯ ಆಗಬಹುದು ಎನ್ನುವ ಉದ್ದೇಶದಿಂದ ನನ್ನ ಆ ಹಳೆಯ  ಲೇಖನವನ್ನು ಇಲ್ಲಿ ಯಥಾವತ್ತಾಗಿ ಕೊಡುತ್ತಿದ್ದೇನೆ.

**************************************************************************************************

” ಒಂದು ದಿನ ಬೆಳಿಗ್ಗೆ ಸಂಸ ಅನಿಷ್ಟ ಕನಸುಗಳಿಂದ  ಎಚ್ಚೆತ್ತುಕೊಂಡಾಗ ಹಾಸಿಗೆಯಲ್ಲಿ ತಾನೊಂದು ದೈತ್ಯಾಕಾರದ ಹುಳುವಾಗಿ ಪರಿವರ್ತನೆಗೊಂಡದ್ದು ವ್ಯಕ್ತವಾಯಿತು.ಕಬ್ಬಿಣದ ತಗಡಿನಂತೆ ಗಟ್ಟಿಯಾದ ತನ್ನ ಬೆನ್ನಿನ ಮೇಲೆ ಮಲಗಿದ್ದ ಅವನು ತಲೆಯನ್ನು ಸ್ವಲ್ಪ ಮೇಲೆತ್ತಿ ನೋಡಲು ಕಮಾನು ಕಮಾನಾಗಿ ಭಾಗಗೊಂಡ ಕಂದು ಬಣ್ಣದ ದೊಡ್ಡ ಗೋಲಾಕಾರದ ಹೊಟ್ಟೆ ಕಣ್ಣಿಗೆ ಬಿತ್ತು. ಆ ಹೊಟ್ಟೆಯ ಮೇಲೆ ನಿಲ್ಲಲಾರದೆ ಹೊದಿಕೆ ಇನ್ನೇನು ಜಾರಿ ಕೆಳಗೆ ಬೀಳುವುದರಲ್ಲಿತ್ತು. ಅವನ ಅಸಂಖ್ಯಾತವಾದ  ಕಾಲುಗಳು ಶರೀರದ ಒಟ್ಟು ಗಾತ್ರ  ಹೋಲಿಸಿದಾಗ ಕರುಣಾಜನಕವಾಗಿ ಕಾಣಿಸುವ ಪುಟ್ಟ ಪುಟ್ಟ ಕಾಲುಗಳು -ಅವನ ಕಣ್ಮುಂದೆ ಅಸಹಾಯಕವಾಗಿ ಲಿವಿ ಲಿವಿ ಒದ್ದಾಡಿದವು. ಏನಾಯಿತು ನನಗೆ ? ಸಂಸ ಯೋಚಿಸಿದ ,ಇದೇನು ಕನಸಲ್ಲ.”

ಫ್ರಾನ್ಜ್ ಕಾಫ್ಕಾನ ( ಕನ್ನಡ ಅನುವಾದ : ಗಿರಿಯವರ ‘ರೂಪಾಂತರ ‘,೧೯೭೮ .) ಕಾದಂಬರಿಯ ಆರಂಭದ  ಈ ಸಾಲುಗಳು ನೆನಪಾದದ್ದು ಮೇ ೧೭ರ (೧೯೯೪ ) ‘ ಮುಂಗಾರು’ವಿನ ‘ ದಕ್ಷಿಣ ಕನ್ನಡದಲ್ಲಿ ಕವಿಯುತ್ತಿರುವ  ಕೈಗಾರೀಕರಣ ‘ ಲೇಖನವನ್ನು ಓದಿದಾಗ. ಪಣಂಬೂರು  ಸುರತ್ಕಲ್  ಪರಿಸರದಲ್ಲಿ ಈಗಾಗಲೇ ತಲೆ ಎತ್ತಿರುವ ,ತಲೆ ಎತ್ತುತ್ತಿರುವ ,ತಲೆ ಎತ್ತಲು ಸಿದ್ಧವಾಗುತ್ತಿರುವ ಬೃಹತ್ ಕೈಗಾರಿಕೆಗಳ ಪರಿಣಾಮಗಳನ್ನು ಲೇಖಕರು ಬಹುಬಗೆಗಳಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಒಂದು ‘ಭೌಗೋಳಿಕ  ಪ್ರದೇಶ’ ಎನ್ನುವುದು ಒಂದು ‘ಸಾಂಸ್ಕೃತಿಕ  ಪ್ರದೇಶ ‘ ಕೂಡಾ ಆಗಿರುತ್ತದೆ. ಇಂತಹ ಸಾಂಸ್ಕೃತಿಕ ಪ್ರದೇಶವು ಕೇವಲ ವಿಸ್ತೀರ್ಣಗಳ ಮಾನದಂಡದ ಭೂಪ್ರದೇಶ ಮಾತ್ರ ಆಗಿರದೆ , ಒಂದು ನಿರ್ದಿಷ್ಟ ಸ್ವರೂಪದ ಜೈವಿಕ ಪರಿಸರವನ್ನು ಹೊಂದಿರುತ್ತದೆ. ಹೀಗೆ ಜೈವಿಕ  ಪರಿಸರ ಮತ್ತು ಸಾಂಸ್ಕೃತಿಕ ಪರಿಸರಗಳು ಒಂದರೊಡನೊಂದು ಸೇರಿಕೊಂಡು ಸಮತೋಲನದ ವ್ಯವಸ್ಥೆಯೊಂದನ್ನು ರೂಪಿಸಿರುತ್ತವೆ. ಇಂತಹ ಸಮತೋಲನವು ಜೀವಿಪರಿಸ್ಥಿತಿಶಾಸ್ತ್ರದ ತತ್ವಕ್ಕೆ ಸಂಬಂಧಪಟ್ಟ ಸಮತೋಲನವೂ ಆಗಿರುತ್ತದೆ.ಜೀವಿ ಪರಿಸ್ಥಿತಿ ಶಾಸ್ತ್ರದ ದೃಷ್ಟಿಯಿಂದ ಒಂದು ಪರಿಸರದ ಸಮತೋಲನವನ್ನು ಅವಲೋಕಿಸುವಾಗ ಮನುಷ್ಯ ಮತ್ತು ನಿಸರ್ಗದ ನಡುವಿನ ಸಂಬಂಧ, ಮನುಷ್ಯ ಮತ್ತು ಮನುಷ್ಯರ ನಡುವಿನ ಸಂಬಂಧ ಎರಡೂ ಇರುತ್ತವೆ. ಒಂದು ನಿರ್ದಿಷ್ಟ ಜೈವಿಕ ಪರಿಸರದಲ್ಲಿ ಹುಟ್ಟಿ ಬೆಳೆದು ,ಬಹಳ ದೀರ್ಘ ಕಾಲ ಆ ಪರಿಸರದ ಅವಿಭಾಜ್ಯ ಅಂಗವಾಗಿ ಕ್ರಿಯಾಶೀಲರಾಗಿದ್ದ ಜನರನ್ನು ಸ್ಥಳಾಂತರಗೊಳಿಸಿದಾಗ ತಮ್ಮ ಸಾಂಸ್ಕೃತಿಕ ಬೇರುಗಳನ್ನು ಅವರು ಕಳೆದುಕೊಂಡು , ಹೊಸ ಸ್ಥಳದಲ್ಲಿ ಬೇರೆಯೇ ಜೀವಿಗಳ ಹಾಗೆ ಪರಕೀಯ ಬದುಕನ್ನು ಯಾತನೆಯಿಂದ ನಡೆಸಬೇಕಾಗುತ್ತದೆ.ಈ ದೃಷ್ಟಿಯಲ್ಲಿ ಇಂತಹ ಜನರು ಕಾಫ್ಕಾನ ‘ರೂಪಾಂತರ’ ಕಾದಂಬರಿಯ ಸಂಸ ದೈತ್ಯಾಕಾರದ ಹುಳುವಾಗಿ ಅಸಹಾಯಕವಾಗಿ ಒದ್ದಾಡಿದಂತೆ ನೋವನ್ನು ಅನುಭವಿಸಬೇಕಾಗುತ್ತದೆ.

ಕಳೆದುಹೋದ ಭೂಮಿಗೆ ಬದಲಿ ಭೂಮಿ ಎನ್ನುವುದು ಗಣಿತದ  ಲೆಕ್ಕಾಚಾರದಲ್ಲಿ ಸರಿ ಎನ್ನಿಸಬಹುದಾದರೂ ಸಾಂಸ್ಕೃತಿಕ ಸಮತೋಲನದ ದೃಷ್ಟಿಯಿಂದ ಅಪಾಯಕಾರಿಯೇ ಆಗುತ್ತದೆ.ತಮ್ಮ ಬದುಕಿನ ಬಹುಪಾಲು ಭಾಗವನ್ನು ಒಂದು ಸಾಂಸ್ಕೃತಿಕ ಪರಿಸರದಲ್ಲಿ ಕಳೆದವರು ಬದಲಿಯಾಗಿ ದೊರೆತ ಪರಿಹಾರಧನದಿಂದಲೋ ತುಂಡುಭೂಮಿಯಿಂದಲೋ ತಮ್ಮ ಮೊದಲಿನ ಮನುಷ್ಯರೂಪವನ್ನು ಪಡೆಯಲಾರರು. ಕಾಫ್ಕಾನ ಕಾದಂಬರಿಯ ಸಂಸ ದೈತ್ಯಾಕಾರದ ಹುಳುವಾಗಿ ರೂಪಾಂತರಗೊಂಡ ಬಳಿಕ ತನ್ನ ಸಮಸ್ತ ಚಟುವಟಿಕೆಗಳನ್ನು ತನ್ನ ಒಂದು ಕೋಣೆಗೇ ಸೀಮಿತಗೊಳಿಸಬೇಕಾಯಿತು. ತನ್ನ ಮನೆಯ ಒಳಗೆಲ್ಲ ಅಡ್ಡಾಡಲು ಸ್ವಾತಂತ್ರ್ಯವಿದ್ದ , ಮನೆಯ ಹೊರಗೆ ತಿರುಗಾಡಲು ಅನುಕೂಲವಿದ್ದ ಆತ ಈಗ ಒಂದು ಚಿಕ್ಕ ಕೋಣೆಯೊಳಗೆ ಹುಳುವಿನ ಹಾಗೆ ಹರಿದಾಡಬೇಕಾಯಿತು. ಇದಕ್ಕೆ ಅನುಗುಣವಾಗಿಯೇ ಅವನ ಆಹಾರ ವ್ಯವಸ್ಥೆ ಬದಲಾಯಿತು. ಮನುಷ್ಯ ರೂಪದಲ್ಲಿದ್ದಾಗ ತಿನ್ನಲಾಗದೇ ಹೊರಚೆಲ್ಲುತ್ತಿದ್ದ  ಪದಾರ್ಥಗಳು  ಈಗ ಹುಳುವಿನ ರೂಪದ ಆತನ ಆಹಾರವಾಗುತ್ತವೆ.

ಸಣ್ಣ ಪ್ರಮಾಣದ ಗದ್ದೆ ತೋಟದಂತಹ ಕೃಷಿಭೂಮಿಯನ್ನು ಕಳೆದುಕೊಂಡು ,ಬೆಟ್ಟದ ಮೇಲೊಂದು ಖಾಲಿ ಜಾಗವನ್ನು ಪಡೆದಾಗ ಹಸುರಿನ ಜೊತೆಗೆ ಬೆಳೆದ ಮನಸ್ಸು ನಿರ್ಜೀವ ಪರಿಸರವೊಂದನ್ನು ಒಪ್ಪಿಕೊಳ್ಳುವುದು ಕಷ್ಟ . ತಮ್ಮ ಮೂಲ ಪರಿಸರದಲ್ಲಿ ಇದ್ದ ಅಡ್ಡಾಡುವ ಸ್ಥಳಗಳು ಅಥವಾ ‘ ಬೈಲುಗಳು ‘ ಅವರ ಬದುಕಿನ ಶ್ವಾಸಕೋಶಗಳಾಗಿರುತ್ತವೆ. ನಿರಾಳವಾಗಿ ನಡೆದಾಡುವ , ಗಾಳಿ ಹೀರುವ, ತಮ್ಮ ಖಾಲಿ ವೇಳೆಯನ್ನು ತುಂಬುವ ಅವಕಾಶವಿದ್ದ ಈ ‘ ಬೈಲು’ಗಳನ್ನು ಕಳೆದುಕೊಂಡು , ಖಾಲಿಸ್ಥಳಗಳ ‘ಬಯಲು’ಗಳಿಗೆ  ಬಂದಾಗ ,ಆ ಜನರಿಗಾಗುವ ಅನುಭವವು  ಕಾಫ್ಕಾನ  ಕಾದಂಬರಿಯಲ್ಲಿ ರೂಪಾಂತರಗೊಂಡ ಸಂಸನಿಗಾದ ಅನುಭವಕ್ಕಿಂತ ಬೇರೆಯಾಗಿರಲು ಸಾಧ್ಯವಿಲ್ಲ.  ನಾವು ಇರುವ ಪರಿಸರಗಳೇ ನಮ್ಮ ಜೀವನದೃಷ್ಟಿಯನ್ನು ರೂಪಿಸುತ್ತವೆ. ನೆರಳಿನಲ್ಲಿ  ಇರುವವರ ಜೀವನದೃಷ್ಟಿಯು  ಸುಡುಬಿಸಿಲಿಗೆ ಬಂದಾಗ ಬೇರೆಯೇ ಆಗಿಬಿಡುತ್ತದೆ.

ಸ್ಥಳಾಂತರ ತರುವ ಇನ್ನೊಂದು ಸಮಸ್ಯೆ ಎಂದರೆ -ಮನುಷ್ಯ ಸಂಬಂಧಗಳಲ್ಲಿ ಆಗುವ ಏರಿಳಿತ. ಕಾಫ್ಕಾನ ‘ರೂಪಾಂತರ’ ಕಾದಂಬರಿಯ ಸಂಸ ಒಬ್ಬನೇ ದುಡಿದು ತನ್ನ ಕುಟುಂಬವನ್ನು ಸಾಕುತ್ತಿದ್ದವನು-ಅಪ್ಪ, ಅಮ್ಮ ಮತ್ತು ತಂಗಿಯನ್ನು. ಈಗ ಅವನೇ   ದೈತ್ಯಹುಳುವಾಗಿ ರೂಪಾಂತರಗೊಂಡಾಗ ಮತ್ತು ಅದರ ಪರಿಣಾಮವಾಗಿ ದುಡಿದು ಮನೆಯವರನ್ನು ಸಾಕಲು ಅಸಮರ್ಥನಾದಾಗ  ಆತನ ಕುರಿತು ಮನೆಯವರ ನಿಲುವುಗಳು ಬದಲಾಗುತ್ತವೆ.ಅನುಕಂಪೆ, ಜುಗುಪ್ಸೆ, ಅಸಹನೆ, ಸಿಟ್ಟು, ದುಃಖ -ಹೀಗೆ ಭಾವನೆಗಳು ತಾತ್ಕಾಲಿಕವಾಗಿ ಬರುತ್ತಾ ಹೋಗುತ್ತಾ ಅವರೆಲ್ಲರನ್ನು ನಿಷ್ಕ್ರಿಯರನ್ನಾಗಿ ಮಾಡುತ್ತವೆ.ಭೂಮಿ ಕಳಕೊಂಡವರಿಗೆ ಕೊಡುವ ಪರಿಹಾರದ ಹಣ ಎಂಬುದು ಸಾಂಸ್ಕೃತಿಕ ಶೂನ್ಯವನ್ನು ತುಂಬಲಾರದು. ಈ ಹಣದ ಮೊತ್ತವೇ ಒಂದು ಕುಟುಂಬದ ಸದಸ್ಯರ ನಡುವೆ ಪರಸ್ಪರ ಅವಿಶ್ವಾಸವನ್ನು , ಆಂತರಿಕ ಸಂಘರ್ಷವನ್ನು , ಮಾನಸಿಕ ವೈಷಮ್ಯಗಳನ್ನು ತಂದುಹಾಕಬಹುದು. ಏಕೆಂದರೆ ಈ ಹಣಕ್ಕೆ ಯಾವುದೇ ಸಾಂಸ್ಕೃತಿಕ ಪರಿಸರ ಇಲ್ಲ, ಬದಲಾಗಿ ವ್ಯಾವಹಾರಿಕ ಉದ್ದೇಶ ಮಾತ್ರ ಇರುತ್ತದೆ.

ಹೊಸದಾಗಿ ತಲೆಎತ್ತುವ ಕೈಗಾರಿಕೆಗಳು ನಿರಾಶ್ರಿತರಿಗೆ ಕೊಡುವ ನೌಕರಿ ಎನ್ನುವುದು ಅನೇಕ ಬಾರಿ ಯಾಂತ್ರಿಕ ಅನಿವಾರ್ಯತೆ ಆಗಬಹುದು – ‘ರೂಪಾಂತರ’ ಕಾದಂಬರಿಯ ಸಂಸನ ಅಪ್ಪ ಮಾಡುವ ಜವಾನನ ಕೆಲಸದಂತೆ. ತಮ್ಮ ಮನಸ್ಸಿಗೆ ಒಗ್ಗದ , ಆದರೆ ಜೀವನೋಪಾಯಕ್ಕಾಗಿ ಯಾಂತ್ರಿಕವಾಗಿ ಮಾಡಬೇಕಾದ ಕೆಲಸ ಎನ್ನುವುದು ಮನುಷ್ಯರ ಎಲ್ಲಾ  ಚಟುವಟಿಕೆಗಳನ್ನೂ ಕುಗ್ಗಿಸಿ ,ಅವರು ಹುಳುಗಳಂತೆ ನರಳುವಂತೆ ಮಾಡುತ್ತದೆ.ಔದ್ಯಮೀಕರಣ ಎನ್ನುವುದು ಮನುಷ್ಯರನ್ನು ಮನುಷ್ಯರಿಂದ ದೂರ ಮಾಡುತ್ತಲೇ ಅದರ ನಡುವೆಯೇ ಬದುಕಬೇಕಾದ ಅನಿವಾರ್ಯತೆಯನ್ನು ಉಂಟುಮಾಡುತ್ತದೆ. ಇಂತಹ ಸಂದಿಗ್ಧತೆ -ಅನಿವಾರ್ಯತೆ ಮನುಷ್ಯರ ಮೂಲಸ್ಥಿತಿಗಳಲ್ಲಿ ಒಂದು.ಆದರೆ ಔದ್ಯಮೀಕರಣದ

ಪೂರ್ಣಪ್ರಮಾಣದ ಬದಲಾವಣೆಯಿಂದ ನಿರ್ಮಾಣವಾಗುವ ಪರಿಸರವು ನಾವು ಮನುಷ್ಯರು ಎಂಬ ಅರಿವನ್ನು ತೊಡೆದುಹಾಕದೆ ,ನಮ್ಮನ್ನು ಹುಳುಗಳನ್ನಾಗಿ ಪರಿವರ್ತಿಸುವ ಸಾಧ್ಯತೆಗಳನ್ನು ಹೊಂದಿವೆ. ಕಾಫ್ಕಾನ ಕಾದಂಬರಿಯ ಸಂಸ , ಹುಳುವಿನ ರೂಪವನ್ನು ಹೊಂದಿಯೂ ಮನುಷ್ಯ ಸಂವೇದನೆಯನ್ನು ಉಳ್ಳವನಾಗಿ ಇದ್ದುದು ಅವನ ದುರಂತ.ಅದು ಅಭಿವೃದ್ಧಿಯ ಹೆಸರಿನಲ್ಲಿ ಕೈಗಾರೀಕರಣ ಸೃಷ್ಟಿ ಮಾಡುವ ಆಧುನಿಕ ಜೀವಿಗಳ ತೊಳಲಾಟ.

ಆಧುನಿಕತೆಯ ಬುಲ್ಡೋಜರ್ ನ ಅಡಿಯಲ್ಲಿ ಬಿದ್ದು ನಲುಗುವ , ಒದ್ದಾಡುವ ಜೀವಿಗಳ ಸಂವೇದನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಆದಾಗ ಮಾತ್ರ ಅಭಿವೃದ್ಧಿ ಮತ್ತು ಸಂಸ್ಕೃತಿಗಳ ನಡುವಿನ ಸಂವಾದವನ್ನು ನಡೆಸಲು ಸಾಧ್ಯ. ವ್ಯಕ್ತಿಗಳಿಗೆ ಸಂವೇದನೆಗಳೇ ಬೇಕಾಗಿಲ್ಲ , ವ್ಯಕ್ತಿಗಳ ಹಿತಗಳೆಲ್ಲವೂ ಸಮಾಜ ಎಂದು ಕರೆಯಲಾಗುವ ‘ಸಮುದಾಯ ‘ ಒಂದರ ಹಿತಕ್ಕೆ ವಿಧೇಯವಾಗಿರಬೇಕು , ಇಂತಹ ಸಮುದಾಯದ ಹಿತವು ದೇಶದ ಪ್ರಗತಿಗೆ ಪೂರಕವಾಗಿರಬೇಕು, ಇಂತಹ ಪ್ರಗತಿಯು ಕೈಗಾರೀಕರಣದಿಂದ ಮಾತ್ರ ಸಾಧ್ಯ ಎನ್ನುವ ವಾದಸರಣಿಯಲ್ಲಿ ಮನುಷ್ಯರ ಸಂವೇದನೆಯ ಸೂಕ್ಷ್ಮಗಳಿಗೆ ಸ್ಥಾನ ಇರುವುದಿಲ್ಲ. ಆದರೆ ಈ ಎಲ್ಲಾ ವಾದ ತರ್ಕಗಳನ್ನು ಬದಿಗಿರಿಸಿ , ಸ್ಥಳಾಂತರಗೊಂಡು ,ಬೆಟ್ಟದ ಮೇಲೆ ತಗಡಿನ ಮಾಡಿನ ಮನೆಗಳಲ್ಲಿ ಬೇಯುವ ಮತ್ತು ನೋಯುವ ಜನರ ಸಂವೇದನೆಗಳನ್ನು ಅರ್ಥಮಾಡಿಕೊಂಡಾಗ , ಪಣಂಬೂರು ಪರಿಸರದಲ್ಲಿ ಕಾಫ್ಕಾನ ಸಾಹಿತ್ಯವು ದೃಶ್ಯರೂಪದಲ್ಲಿ  ಪ್ರಯೋಗವಾಗುತ್ತಿದೆ ಅನ್ನಿಸುತ್ತಿದೆ.

೨೯.೫.೧೯೯೪

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Liked it here?
Why not try sites on the blogroll...

%d bloggers like this: