ಅಥೆನ್ಸಿನ ಅರ್ಥವಂತ ಮತ್ತು ಮನಮೋಹಕ ಬಜೆಟ್ :ಮತ್ತೆ ಓದಿದ ಲೇಖನ

Posted on ಆಗಷ್ಟ್ 29, 2011. Filed under: ಅರ್ಥಶಾಸ್ತ್ರ, Uncategorized | ಟ್ಯಾಗ್ ಗಳು:, , , , |


ಈದಿನದ ‘ಪ್ರಜಾವಾಣಿ’ಯಲ್ಲಿ ದಿನೇಶ್ ಅಮೀನ್ ಮಟ್ಟು ಅವರ ಅಂಕಣ ಬರಹ  ‘ಮಾಡಿದ್ದನ್ನು ಉಣ್ಣಲೇ  ಬೇಕಲ್ಲವೇ ಪ್ರಧಾನಿಗಳೇ ?’  ಓದಿದೆ.ನನಗೆ ಕೂಡಲೇ ನೆನಪಾದದ್ದು ಹದಿನೇಳು ವರ್ಷಗಳ ಹಿಂದೆ ನಾನು ಬರೆದ ಒಂದು ಅಂಕಣ ಬರಹ.ಮಂಗಳೂರಿನಿಂದ ಪ್ರಕಟವಾಗುತ್ತಿದ್ದ  ‘ಮುಂಗಾರು’ ಕನ್ನಡ ದಿನಪತ್ರಿಕೆಗೆ ಎರಡು ವಾರಕ್ಕೊಮ್ಮೆ ನಾನು ಬರೆಯುತ್ತಿದ್ದ ಅಂಕಣ ‘ಗಿಳಿಸೂವೆ.’ (ಈ ಅಂಕಣ ಬರಹಗಳ ಸಂಕಲನ ‘ಗಿಳಿಸೂವೆ’ ಹೆಸರಿನಲ್ಲಿ ಪ್ರಕಟವಾಗಿದೆ;ಅಕ್ಕೆಸಿರಿ ಸಾಂಸ್ಕೃತಿಕ ಕೇಂದ್ರ ,ಮಂಗಳೂರು, ೧೯೯೫ ಮತ್ತು ‘ರಂಗದೊಳಗಣ ಬಹಿರಂಗ ‘ಪ್ರ.ನಾಕುತಂತಿ ಪ್ರಕಾಶನ, ಬೆಂಗಳೂರು,2009) ಆ ಅಂಕಣದಲ್ಲಿ ೧೯೯೪ರ ಮಾರ್ಚ್ ೬ರನ್ದು ಪ್ರಕಟವಾದ ನನ್ನ ಲೇಖನ ‘ಅಥೆನ್ಸಿನ ಅರ್ಥವಂತ ಮತ್ತು ಮನಮೋಹಕ ಬಜೆಟ್.’ ಹದಿನೇಳು ವರ್ಷಗಳ ಹಿಂದೆ ನಾನು ಬರೆದ ಈ ಲೇಖನವನ್ನು ಮತ್ತೆ ಓದಿದಾಗ ,ಅದನ್ನು ಯಾವುದೇ ಬದಲಾವಣೆ ಇಲ್ಲದೆಯೇ ಯಧಾವತ್ತಾಗಿ ಕೊಡಬೇಕು ಅನ್ನಿಸಿತು.ಅದರ ಪೂರ್ಣ ಪಾಠ ಇಲ್ಲಿದೆ:

‘ಫೆಬ್ರವರಿ ತಿಂಗಳ (೧೯೯೪) ಉತ್ತರಾರ್ಧದಲ್ಲಿ ‘ಅರ್ಥ’ಕ್ಕೆ ಸಂಬಂಧಿಸಿದ ಎರಡು ಪ್ರದರ್ಶನಗಳನ್ನು ನೋಡುವ ಅವಕಾಶ ದೊರೆಯಿತು.ಮೊದಲನೆಯದು ಫೆಬ್ರವರಿ ೧೯ರ ಸಂಜೆ ಮಂಗಳೂರಿನ ಪುರಭವನದಲ್ಲಿ ಹೆಗ್ಗೋಡಿನ ನೀನಾಸಂ ತಂಡದವರು ಪ್ರದರ್ಶಿಸಿದ ‘ಅಥೆನ್ಸಿನ ಅರ್ಥವಂತ’ ಎಂಬ ನಾಟಕ. ಎರಡನೆಯದು ಫೆಬ್ರವರಿ ೨೮ರ ಸಂಜೆ ಪಾರ್ಲಿಮೆಂಟಿನಲ್ಲಿ ಭಾರತದ ಅರ್ಥಸಚಿವ ಡಾ.ಮನಮೋಹನ ಸಿಂಗ್ ಮಂಡಿಸಿದ ೧೯೯೪-೯೫ರ ಬಜೆಟ್ ನ ದೂರದರ್ಶನದ ನೇರ ಪ್ರಸಾರ.ಈ ಎರಡೂ ಪ್ರದರ್ಶನಗಳು ‘ಅರ್ಥ’ಕ್ಕೆ ಸಂಬಂಧಪಟ್ಟವು ಅಷ್ಟೇ ಆಗಿರದೆ , ‘ಅರ್ಥ’ದ ಅರ್ಥವಂತಿಕೆಯ ವಿಮರ್ಶೆಗೆ ಅನುವುಮಾಡಿಕೊಡುವ ಸಾಮಗ್ರಿಗಳೂ ಆಗಿವೆ.’ಅಥೆನ್ಸಿನ ಅರ್ಥವಂತ’ ನಾಟಕವನ್ನು ನೋಡಿದ ಹಿನ್ನೆಲೆಯು ಮನಮೋಹನ ಸಿಂಗರ ಬಜೆಟನ್ನು ಅರ್ಥಮಾಡಿಕೊಳ್ಳಲು ನನಗೆ  ಹೆಚ್ಚು ಪ್ರಯೋಜನಕಾರಿಯಾಗಿದೆ.

ಷೇಕ್ಸ್ ಪಿಯರ್ ನ ‘Timon of Athens’ ನಾಟಕವನ್ನು ಕೆ.ವಿ.ಸುಬ್ಬಣ್ಣನವರು ‘ಅಥೆನ್ಸಿನ ಅರ್ಥವಂತ’  ಎಂಬ ಹೆಸರಿನಲ್ಲಿ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದು, ಚಿದಂಬರ ರಾವ್ ಜಂಬೆ ಅವರ ನಿರ್ದೇಶನದಲ್ಲಿ ಅದು ನೀನಾಸಂ ಪ್ರದರ್ಶನವಾಗಿ ಪರಿಣಾಮಕಾರಿಯಾಗಿ ಮೂಡಿಬಂದಿದೆ.(ಅಥೆನ್ಸಿನ ಅರ್ಥವಂತ :ಅನುವಾದ:ಕೆ.ವಿ.ಸುಬ್ಬಣ್ಣ .ಪ್ರ:ಅಕ್ಷರ ಪ್ರಕಾಶನ,ಸಾಗರ,೧೯೯೪.)ಶ್ರೀಮಂತ ತೈಮೊನ್ ನ ದುಂದುವೆಚ್ಚದ ಜಗತ್ತು ಮತ್ತು ಹಣದ ಕಾರಣಕ್ಕಾಗಿ ಅವನ ಸುತ್ತ ಇರುವ ಡೋಂಗಿ ಸ್ನೇಹಿತರು,ಹೊಗಳುಭಟ ರಾಜರು,ಕವಿಗಳು,ಚಿತ್ರಗಾರರು,ವ್ಯಾಪಾರಿಗಳು ಮುಂತಾದವರು ಸೃಷ್ಟಿಸುವ ಭ್ರಮಾಧೀನ ವೈಭವದ ಪ್ರಪಂಚ-ಇವು ಕೊನೆಗೆ ಬಂದು ತಲಪುವುದು ಎಲ್ಲವನ್ನೂ ಕಳೆದುಕೊಂಡು ತೈಮೊನ್ ಭಿಕಾರಿಯಾಗುವ ಸ್ಥಿತಿಗೆ ,ತನ್ನ ಗೋರಿಯನ್ನು ತಾನೇ ನಿರ್ಮಿಸಿಕೊಳ್ಳುವ ಸ್ಥಿತಿಗೆ.ಸಾಲದ ಹಣವನ್ನು ಮಿತಿಮೀರಿ ಬಳಸಿ , ಕೊನೆಗೆ ಅದನ್ನು ಮರುಪಾವತಿ ಮಾಡಲಾರದೆ ಅಥೆನ್ಸ್ ನ್ನು ಕಳೆದುಕೊಳ್ಳುವ ಸ್ಥಿತಿಗೆ ತೈಮೊನ್ ತಲಪಿದಾಗ , ಅವನ ಜೊತೆಗೆ ಕುಡಿದ ಉಂಡ ಲೋಲುಪತೆಯ ಸುಖ ಅನುಭವಿಸಿದ ಜನರು ಯಾರೂ ಅವನ ನೆರವಿಗೆ ಬರುವುದಿಲ್ಲ. ಹಣದ ಹುಚ್ಚು ಹೊಳೆಯ ಪ್ರವಾಹದಲ್ಲಿ ಮುಳುಗಿದ ದುರಂತದ ಸಂದರ್ಭದಲ್ಲಿ ಕೊನೆಗೆ ತೈಮೊನ್ ಪ್ರಜ್ಞಾವಂತನಾಗುತ್ತಾನೆ, ದಾರ್ಶನಿಕನಾಗುತ್ತಾನೆ.ಚಿನ್ನದ,ಹಣದ ,ಸಂಪತ್ತಿನ ಆರಾಧನೆಯನ್ನೇ ಮೌಲ್ಯವಾಗಿ ಪರಿಗಣಿಸುವ ಸಮಾಜವನ್ನು ಧಿಕ್ಕರಿಸುತ್ತಾನೆ.ಹಣದ ಮೇಲಿನ ಅತಿ ವ್ಯಾಮೋಹವು ಮನುಷ್ಯ ಸಂಬಂಧಗಳನ್ನು ನಾಶಮಾಡಿ ಅಧಃಪತನಕ್ಕೆ ಹೇಗೆ ತಳ್ಳುತ್ತದೆ ಎಂಬುದನ್ನು ತಡವಾಗಿ ಅರ್ಥಮಾಡಿಕೊಳ್ಳುತ್ತಾನೆ.ಆದರೆ ಕುರುಡು ಕಾಂಚಾಣ ಕುಣಿಯುವ ಜಗತ್ತಿನ ನಯವಂಚಕತನದ ಆಘಾತದಿಂದ ಚೇತರಿಸಿಕೊಳ್ಳಲಾರದೆ ಸಾವನ್ನಪ್ಪುತ್ತಾನೆ.ಬೇಂದ್ರೆಯವರ  ‘ಕುರುಡು ಕಾಂಚಾಣ’ ಕವನದ ಸಾಲುಗಳು ಈ ನಾಟಕ ನೋಡಿದ ಬಳಿಕ ಇನ್ನೂ ಚೆನ್ನಾಗಿ ಅರ್ಥವಾಗುತ್ತವೆ. ನಾಟಕದಲ್ಲಿ ಎಲ್ಲವನ್ನೂ ಕಳೆದುಕೊಂಡ ಬಳಿಕ ತೈಮೊನ್ ಕಂಡುಕೊಳ್ಳುವ ಸತ್ಯ ‘ಕುರುಡು ಕಾಂಚಾಣ’ ಕವನದ ಸಾಲುಗಳಿಗಿಂತ ಬಹಳ ಭಿನ್ನವಾಗಿಲ್ಲ.

ಚಿನ್ನದ ಕುರಿತು ತೈಮೊನ್ ನ ವ್ಯಾಖ್ಯಾನ ಹೀಗಿದೆ :

‘ ಈ ಹಳದಿ ಹೊಳಪು  ಗುಲಾಮ  ಪಾಪದ

ನಂಟು ನೆಯ್ಯುತ್ತಾನೆ . ಧರ್ಮದ ಗಂಟುಗಳನ್ನು ಛಿದ್ರ

ಗೊಳಿಸುತ್ತಾನೆ .ಶಪಿತರನ್ನು ಆಶೀರ್ವದಿಸುತ್ತಾನೆ . ಹೇಡಿಗಳನ್ನು

ಆರಾಧಿಸುತ್ತಾನೆ . ಕಳ್ಳರನ್ನು ಗಾದಿಯ ಮೇಲೆ

ಹತ್ತಿ ಕೂಡಿಸಿ  ಭಳಿರೆ ಪರಾಕು ಬಿರುದು ಹಾಡುತ್ತಾನೆ.

ಶಾಸಕರನ್ನು ಕೆಳಕ್ಕೆಳೆದು ಆಮೇಲೆ ಶನಿಗಳನ್ನೆತ್ತಿ

ಶಾಸಕರ ಮಾಡುತ್ತಾನೆ. ಪ್ರಾಯ ಕಳೆದ ಮುದಿ ವಿಧವೆ

ರೋಗಗ್ರಸ್ಥ  ಬೀಭತ್ಸ ಹೆಣ್ಣು  ವಸಂತಪರಿಮಳದ ಹುಣ್ಣಿಮೆ

ಯಂತೆ ಆಪ್ಯಾಯಮಾನರಾಗುತ್ತಾರೆ  ಇವನ ಕೃಪೆಯಿಂದ.’

ಅಲ್ಸಿಬಿಯಾದೇಶ್  ಚಿನ್ನ ಕೊಡಲು ಬಂದಾಗ ತೈಮೊನ್ ಅದನ್ನು ನಿರಾಕರಿಸುತ್ತಾನೆ : ” ಇಟ್ಟುಕೋ  ನೀನೆ.ನಾ ತಿನ್ನಲಾರೆ ಅದನ್ನು” ಎನ್ನುತ್ತಾನೆ. ಅಪೆಮಂತೂಸ್ ನು ತೈಮೊನ್ ನಲ್ಲಿ ‘ ಚಿನ್ನವು ಇಲ್ಲಿ ಉಪಯೋಗಕ್ಕೆ ಬಾರದು ‘, ಎಂದು ಹೇಳಿದಾಗ, ಅದಕ್ಕೆ ತೈಮೊನ್ ನ ಉತ್ತರ :” ಚಿನ್ನವು ಇಲ್ಲಿ ಮಾತ್ರವೇ ಶ್ರೇಷ್ಠವಾಗಿರುತ್ತದೆ , ಸತ್ಯವಾಗಿರುತ್ತದೆ .ಯಾಕೆಂದರೆ ಅದಿಲ್ಲಿ ನಿದ್ರಿಸುತ್ತದೆ . ಕೂಲಿ ತೊತ್ತಾಗಿ ಹಿಂಸಿಸುವುದಿಲ್ಲ.”

ಶ್ರೀಮಂತಿಕೆ ಇದ್ದಾಗ ಕೊಬ್ಬಿ , ಜನರ ಭಟ್ಟಂಗಿತನಕ್ಕೆ ಮರುಳಾಗಿ , ದುಂದುವೆಚ್ಚ ಮಾಡಿದ ತೈಮೊನ್ , ಎಲ್ಲ ಸಂಪತ್ತನ್ನೂ ಕಳಕೊಂಡು ,ನೆರವು ಪಡೆದವರೆಲ್ಲರೂ ವಂಚಕರಾದಾಗ , ಮನುಷ್ಯ ಕುಲದ ಬಗ್ಗೆ ಸಂಪೂರ್ಣ ವಿಶ್ವಾಸವನ್ನೇ ಕಳೆದುಕೊಳ್ಳುತ್ತಾನೆ. ಈ ಎರಡು ಅತಿರೇಕದ  ಸ್ಥಿತಿಗಳ ಕುರಿತು ತತ್ವಜ್ಞಾನಿ ಅಪೆಮಂತೂಸ್  ಕೊಡುವ ಪ್ರತಿಕ್ರಿಯೆ  ಮನನೀಯವಾಗಿದೆ :

” ಆಗ ಆ ಕಾಲದಲ್ಲೇ  ನೀನು ಹಣ್ಣನ್ನು ದ್ವೇಷಿಸಿದ್ದರೆ

ಈಗ ನಿನ್ನ ಈ ಹುಣ್ಣನ್ನು ತಾಳಿಕೊಳ್ಳುತ್ತಿದ್ದೆ . ಇರಲಿ ,

ತನ್ನದೆಲ್ಲ ಸೂರೆಹೋದ ಮೇಲೂ ಜನರ ಮೆಚ್ಚಾಗಿ ಉಳಿಯುವ

ಯಾವನಾದರೂ ಮನುಷ್ಯನ  ಕಂಡಿದ್ದೀಯಾ ?”

ಹಣದುಬ್ಬರದ ಸುಳ್ಳುಪ್ರಪಂಚದಲ್ಲಿ  ಮನುಷ್ಯರು ತಮ್ಮ ಮಾನಸಿಕ ಆರೋಗ್ಯವನ್ನು ಕಳೆದುಕೊಂಡು ಹುಚ್ಚರಾಗುತ್ತಾರೆ. ಪ್ರಾಥಮಿಕ ಅಗತ್ಯಗಳನ್ನು ಮೀರಿದ ಸಂಪತ್ತಿನ ಬಳಕೆಯ ಅರ್ಥಪ್ರಪಂಚವು ಸ್ವಾರ್ಥಪ್ರಪಂಚವನ್ನು ನಿರ್ಮಿಸುತ್ತದೆ. ತೈಮೊನ್ ಕೊನೆಗೂ ಕಂಡುಕೊಳ್ಳುವ ಸತ್ಯವೆಂದರೆ :

” ಥತ್ ,ಸಾಕಾಯ್ತು . ತಲೆಚಿಟ್ಟು ಹಿಡಿದಿದೆ ಈ ಸುಳ್ಳು ಪ್ರಪಂಚ .

ಇಲ್ಲಿದ್ದುಕೊಳ್ಳುವ ಆಸೆ ಇಂಗಿತು ಪೂರ್ತಾ. ಆಯ್ತು

ನಿನ್ನ ಗೋರಿಯನೀಗ  ತಯ್ಯಾರಿಸಿಕೋ  ತೈಮೊನ್ ”

ತನ್ನ ಗೋರಿಯನ್ನು ತಾನೇ ಕಟ್ಟಿಕೊಳ್ಳುವ ತೈಮೊನ್ ನ ಮಾತುಗಳು ನಮ್ಮ ದೇಶದಲ್ಲಿ ನಮ್ಮ ಪರಿಸರದಲ್ಲಿ ಮತ್ತೆ ಮತ್ತೆ ಅನುರಣಿಸುತ್ತವೆ.

ನಮ್ಮ ಅರ್ಥಸಚಿವ ಡಾ. ಮನಮೋಹನ ಸಿಂಗ್ ರ ಈ ವರ್ಷದ ಬಜೆಟ್ ನ ಎಲ್ಲ ಆರ್ಥಿಕ ಸೂಕ್ಸ್ಮಗಳನ್ನು ವಿಶ್ಲೇಷಿಸುವ  ಅರ್ಥಶಾಸ್ತ್ರದ ಜಾಣ್ಮೆ  ನನ್ನದಲ್ಲ. ಕಳೆದ ವರ್ಷಗಳಲ್ಲಿ ಅವರು ಮಂಡಿಸಿದ ಬಜೆಟ್ ಗಳು ನಮ್ಮ ದೇಶದಲ್ಲಿ ಆರ್ಥಿಕ ಸ್ಥಿರತೆಯನ್ನು ತಂದುಕೊಡಲು ನೆರವಾಗಿವೆ ಎಂಬ ಅರ್ಥಶಾಸ್ತ್ರಜ್ಞರ  ವಿಶ್ಲೇಷಣೆಗಳನ್ನು ಮೊದಲಲ್ಲಿ  ನಾನೂ ನಂಬಿ , ಪರೋಕ್ಷವಾಗಿ ಮೆಚ್ಚಿಕೊಂಡಿದ್ದೆ.  ಅವರು ಪ್ರತಿಪಾದಿಸಿದ ಆರ್ಥಿಕ ಉದಾರೀಕರಣದ ತತ್ವವು ನಮ್ಮ ದೇಶವನ್ನು ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬಲ್ಲುದು ಎನ್ನುವ ವಿವರಣೆಗಳಿಗೆ ಮಾರುಹೋಗಿದ್ದೆ. ವ್ಯಕ್ತಿಯಾಗಿ ಅವರ ಪ್ರಾಮಾಣಿಕತೆ , ಆರ್ಥಿಕ ಶಿಸ್ತಿನ ತತ್ವನಿಷ್ಠೆಗಳನ್ನು ಗೌರವಿಸುವಾಗಲೂ ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಉದಾರೀಕರಣದಿಂದ ನಮ್ಮ ಪರಿಸರದಲ್ಲಿ ಆಗುತ್ತಿರುವ ಅತಿ ಕ್ಷಿಪ್ರವಾದ ಬೃಹತ್ ಪರಿಣಾಮಗಳನ್ನು ಕಾಣಲು ತೊಡಗಿದಾಗ , ಈ ಧೋರಣೆಯು ಆತಂಕವನ್ನು ಉಂಟುಮಾಡುತ್ತಿದೆ. ‘ ಆರ್ಥಿಕ ಉದಾರೀಕರಣ ‘ ಎನ್ನುವ ಹೆಸರಿನಲ್ಲಿ ಹಣದ ಚಲಾವಣೆ ಹೆಚ್ಚಿನ ಪ್ರಮಾಣದಲ್ಲಿ ಆಗಲು ಅವಕಾಶ ಕಲ್ಪಿಸಲಾಗಿದೆ. ಸಾಲ ಪಡೆಯಲು ಹೆಚ್ಚು ಹೆಚ್ಚು ಪ್ರೋತ್ಸಾಹ ಕೊಡಲಾಗುತ್ತಿದೆ.ಯಂತ್ರೋಪಕರಣಗಳು, ಅಲಂಕಾರ ಸಾಧನಗಳು ,ಭೋಗ ವಸ್ತಗಳು,ಹೆಚ್ಚು ಹೆಚ್ಚು ಆಮದಾಗಲು ಉತ್ತೇಜನ ಕಲ್ಪಿಸಿ , ಜನರು ಇವನ್ನು ಹೆಚ್ಚು ಹೆಚ್ಚು ಕೊಳ್ಳಲು ಉದ್ದೀಪನ ನೀಡಲಾಗುತ್ತಿದೆ. ‘ ಸಾಲ ಮಾಡಿಯಾದರೂ ತುಪ್ಪ ತಿನ್ನು’  ಎನ್ನುವುದು ಈಗಿನ ಒಂದು ಪ್ರಭುತ್ವಾತ್ಮಕ ತಾತ್ವಿಕತೆ.  ಈಗ ಹಿಂದೆಂದಿಗಿಂತಲೂ ಹೆಚ್ಚು ‘ತುಪ್ಪ’  ತಿನ್ನಬಹುದು. ಏಕೆಂದರೆ ‘ತುಪ್ಪ’ ಎಲ್ಲ ಕಡೆಯೂ ಧಾರಾಳವಾಗಿ ಸಿಗುತ್ತದೆ ಮತ್ತು ‘ತುಪ್ಪ’ ಕೊಳ್ಳಲು ಕಡಿಮೆ ಬಡ್ಡಿಯಲ್ಲಿ ‘ಸಾಲ’ವೂ ಸಿಗುತ್ತದೆ. ಹೆಚ್ಚು ‘ತುಪ್ಪ’ ತಿಂದು  ಕೊಬ್ಬು ಹೆಚ್ಚಾಗಿ ಕಾಯಿಲೆ ಬಂದರೆ ಅದಕ್ಕೆ ಸರಿಯಾದ ಚಿಕಿತ್ಸೆ ನಡೆಸಲು ಹೆಚ್ಚಿನ ಸೌಲಭ್ಯಗಳುಳ್ಳ ಆಸ್ಪತ್ರೆಗಳು  ಸಿಗುತ್ತವೆ.ಇವುಗಳಿಗೆ ಪೂರಕವಾಗಿ ಔಷಧದ ಅಂಗಡಿಗಳು ಎಲ್ಲ ಕಡೆಯೂ ಕಾಣಸಿಗುತ್ತವೆ. ಈ ಔಷಧಿಗಳನ್ನು ಕೊಳ್ಳಲು ಮತ್ತು ಆಸ್ಪತ್ರೆ ಖರ್ಚಿಗಾಗಿ ವೈದ್ಯಕೀಯ ಸೌಲಭ್ಯದ ಸಾಲವೂ ಸಿಗುತ್ತದೆ. ಹೀಗಾಗಿ ‘ ತುಪ್ಪ’ ತಿಂದು ‘ಮಾತ್ರೆ’ಗಳನ್ನು ನುಂಗಲು ಈಗ ಹಿಂದೆಂದಿಗಿಂತಲೂ ಹೆಚ್ಚು ಸೌಕರ್ಯಗಳಿವೆ. , ಅನುಕೂಲಗಳಿವೆ.ಜನರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಲು ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಸಾಕಷ್ಟು ಜಾಹೀರಾತುಗಳು ಸಿಗುತ್ತವೆ.

‘ಹಣದುಬ್ಬರ’ ಎನ್ನುವುದು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಗತಿಯ ಲಕ್ಷಣ ಎಂದು ಕೆಲವು ಅರ್ಥಶಾಸ್ತಜ್ಞರು ವಾದಿಸುತ್ತಾರೆ. ಕಳೆದ ವಾರ ದೂರದರ್ಶನದ ಸಂದರ್ಶನ ಒಂದರಲ್ಲಿ ಪ್ರೊ.ಬ್ರಹ್ಮಾನಂದರು ಈ ವಾದವನ್ನು ಸಂಪೂರ್ಣವಾಗಿ ಅಲ್ಲಗಳೆದು, ಇದು ಹಳೆಯ ಅರ್ಥಶಾಸ್ತಜ್ನರ ಹಳೆಯ ಒಂದು ತತ್ವ ಎಂದು ಹೇಳಿದರು .ಶೇಕಡಾ ಹತ್ತರಷ್ಟು ಹಣದುಬ್ಬರ ಆದರೂ ವಸ್ತುಗಳ ಬೆಲೆಗಳು ವಿಪರೀತವಾಗಿ ಏರಿ , ಜನಸಾಮಾನ್ಯರಿಗೆ ಬಹಳ ಸಂಕಷ್ಟವಾಗಬಹುದು ಎಂಬ ಎಚ್ಚರಿಕೆಯನ್ನು ಅವರು ಕೊಟ್ಟರು. ಹೆಚ್ಚು ಹಣ ಚಲಾವಣೆ ಆಗುತ್ತಿರುವಂತೆ ತೋರಿಸಿ , ಜೀವನಾವಶ್ಯಕ ವಸ್ತುಗಳ ಬೆಲೆಗಳನ್ನು ರೂಪಾಯಿಯ ಕೊಳ್ಳುವ ಶಕ್ತಿಗಿಂತ ಹೆಚ್ಚು ಏರಲು ಅವಕಾಶ ಕಲ್ಪಿಸಿ ,ತೀರಾ ಅವಶ್ಯವಲ್ಲದ ವಸ್ತುಗಳನ್ನು ಕೊಳ್ಳಲು ಜಾಹೀರಾತುಗಳ ಪ್ರಲೋಭನೆಗಳ ಮೂಲಕ ಉತ್ತೇಜನಗೊಳಿಸಿ , ಇದಕ್ಕೆ ಬೆಂಬಲವೆಂಬ ಹೆಸರಿನಲ್ಲಿ ಸಾಲ ಸೌಲಭ್ಯಗಳನ್ನು ವಿಶೇಷವಾಗಿ ಕಲ್ಪಿಸಿ, ಜನರೆಲ್ಲರೂ ‘ಅಥೆನ್ಸಿನ ತೈಮೊನ್ ‘ನಂತೆ ಆಗಲು ಆರ್ಥಿಕ ಉದಾರೀಕರಣವು ಒತ್ತಾಸೆಯನ್ನು ಕೊಡುತ್ತದೆ.

ಬ್ಯಾಂಕ್ ಗಳು ‘ಬಂಪರ್ ಕೊಳ್ಳುವ ಯೋಜನೆ’ಗಳ ಮೂಲಕ ಈಗ ಗ್ರಾಹಕರನ್ನು ಆಕರ್ಷಿಸುವ ಸ್ಪರ್ಧೆಯಲ್ಲಿ ತೊಡಗಿವೆ.ವಸ್ತುಗಳು ನಿಮಗೆ ಅಗತ್ಯ ಇಲ್ಲದಿದ್ದರೂ ಸಬ್ಸಿಡಿ ಸಂಸೃತಿ ,ಸಾಲ ಸಂಸ್ಕೃತಿ, ದರ ಇಳಿತಾಯದ ಯೋಜನೆ, ಬಂಪರ್ ಕೊಳ್ಳುವ ಯೋಜನೆ -ಇವೆಲ್ಲವೂ ವಸ್ತುಗಳನ್ನು ಹೆಚ್ಚು ಹೆಚ್ಚು ಕೊಂಡುಕೊಳ್ಳಲು ಪ್ರಚೋದನೆ ಕೊಡುತ್ತವೆ.ಹೀಗಾಗಿ ಈಗ ಹಣ ಧಾರಾಳವಾಗಿ ಮುಕ್ತವಾಗಿ ಚಲಾವಣೆಗೊಳ್ಳುತ್ತದೆ.ಹಣವನ್ನು ಖರ್ಚುಮಾಡಲು ಎಲ್ಲ ರೀತಿಯ ಪ್ರೋತ್ಸಾಹ ಸಿಗುತ್ತದೆ. ಇದರಿಂದಾಗಿ ಜನರು ತಮ್ಮ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳ ಗ್ರಾಹಕರಾಗುತ್ತಿದ್ದಾರೆ. ಆಹಾರ ಬಟ್ಟೆ ವಸತಿಯಂತಹ ಮನುಷ್ಯರ ಮೂಲಭೂತ ಅವಶ್ಯಕತೆಗಳು ಈಗ ಅಧಿಕ ಹಣವಿನಿಯೋಗದ  ಜನಪ್ರಿಯ ಕ್ಷೇತ್ರಗಳು.ಹೋಟೆಲ್ ಗಳು, ಬಾರ್-ರೆಸ್ಟೋರೆಂಟ್ ಗಳು, ಮದ್ಯದಂಗಡಿಗಳು, ಬಟ್ಟೆ ಅಂಗಡಿಗಳು ,ಮನೆಗಳ ಅಲಂಕಾರ ಸಾಮಗ್ರಿಗಳ ಅಂಗಡಿಗಳು, ಬ್ಯೂಟಿ ಪಾರ್ಲರ್ ಗಳು, ಇತ್ಯಾದಿ ಯಾವ ನಗರದಲ್ಲಿ ನೋಡಿದರೂ ಇಂತಹ ಅನೇಕ ಸ್ಥಳಗಳು ಸದಾ ಗ್ರಾಹಕರಿಂದ ತುಂಬಿರುತ್ತವೆ. ಅದೇ ರೀತಿ ಔಷಧದ ಅಂಗಡಿಗಳು,ಆಸ್ಪತ್ರೆಗಳು ಕೂಡಾ ಯಾವಾಗಲೂ ತುಂಬಿ ತುಳುಕುತ್ತಿರುತ್ತವೆ. ಹಸಿವು ಇಲ್ಲದಿದ್ದರೂ ತಿನ್ನುವ, ಬಾಯಾರಿಕೆ ಆಗದಿದ್ದರೂ ಕುಡಿಯುವ ಪ್ರವೃತ್ತಿ ಹೆಚ್ಚಾಗಲು , ಹಣವನ್ನು ಖರ್ಚು ಮಾಡುವ ಧೋರಣೆಗೆ ಪರೋಕ್ಷವಾಗಿ ಸಿಕ್ಕಿರುವ ಬೆಂಬಲ ಕಾರಣ.ಇದು ಆರ್ಥಿಕ ಉದಾರೀಕರಣದಿಂದ ಬಂದದ್ದು.ನಾಲ್ಕು ಬಟ್ಟೆಗಳು ಸಾಕಾಗುವ ಸ್ಥಿತಿಯಲ್ಲಿ ನಲುವತ್ತು ಬಟ್ಟೆಗಳನ್ನು ಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ.ಚಿಕ್ಕ ಕುಟುಂಬವೊಂದು ಇದ್ದರೂ ಅರಮನೆಯಂತಹ ವೈಭವೋಪೇತ ಸೌಧಗಳನ್ನು ನಿರ್ಮಿಸುವುದು ಆದುನಿಕ ಸಮಾಜದ ಪ್ರವೃತ್ತಿಯೆಂದು ಭಾವಿಸಲಾಗುತ್ತಿದೆ.

ಲೌಕಿಕ ಬದುಕಿನ ಲೋಲುಪ ಪ್ರವೃತ್ತಿಯ ಬಗ್ಗೆ ತಿರಸ್ಕಾರವನ್ನು ಪ್ರಕಟಿಸಬೇಕಾದ ಧಾರ್ಮಿಕ ಸಂಸ್ಥೆಗಳು ಮತ್ತು ಮಠಗಳು ಚಿನ್ನದ ,ಬೆಳ್ಳಿಯ , ಸಂಪತ್ತಿನ ಕ್ರೋಡೀಕರಣ ಮತ್ತು ಪ್ರದರ್ಶನವನ್ನು ತಮ್ಮ ಹೆಮ್ಮೆಯೆಂದು ಕೊಂಡಾಡಲು ಆರಂಭಿಸಿವೆ. ಚಿನ್ನದ ಕಿರೀಟ, ಬೆಳ್ಳಿಯ ರಥ ,ಅಮೃತಶಿಲೆಯ ದೇವಾಲಯಗಳು ,ಬಾಜಾ ಭಜನ್ತ್ರಿಯ ಮೆರವಣಿಗೆಗಳು -ದೇವಾಲಯಗಳ ಮಠಗಳ ಸಂಸ್ಕೃತಿಯಾಗುತ್ತಿವೆ. ಭೂತದ ಗುಡಿಗಳು ಮತ್ತು ಉತ್ಸವಗಳು ದೊಡ್ಡ ಮೊತ್ತದ ಹಣದ ಪ್ರವಹಣದಿಂದಾಗಿ ವ್ಯಾಪಾರೀ ಸಂಸ್ಕೃತಿಯ ಅಸಹ್ಯ ಪ್ರದರ್ಶನದ ರೂಪಗಳಾಗುತ್ತಿವೆ.ಧನವಂತರು ಇಂತಹ ಉತ್ಸವಗಳಿಗಾಗಿ ಖರ್ಚು ಮಾಡುತ್ತಿರುವ ಲಕ್ಷ ಲಕ್ಷಗಳು ದೈವಭಕ್ತಿಯ ಅತ್ಯುನ್ನತ ಅಭಿವ್ಯಕ್ತಿಗಳು ಎನ್ನುವ ಗೌರವಕ್ಕೆ ಪಾತ್ರವಾಗುತ್ತಿವೆ.ತಮ್ಮ ದುಡಿಮೆಯ ಸಂಪತ್ತನ್ನು ತಮ್ಮ ಆತ್ಮತೃಪ್ತಿಗಾಗಿ ಖರ್ಚುಮಾಡುತ್ತಿದ್ದೇವೆ ಎಂದು ಯಾರಾದರೂ ಹೇಳಿದರೆ ,ಇಂತಹ ಸಂಪತ್ತಿನ ಪ್ರದರ್ಶನ ಯಾಕೆ ಎನ್ನುವುದು ‘ಅರ್ಥವಾಗದ ‘ಸಂಗತಿ. ತೈಮೊನ್ ತನ್ನ ಪ್ರಜೆಗಳಿಗಾಗಿ ,ಸೈನ್ಯಕ್ಕಾಗಿ,ಕವಿ ಕಲಾವಿದರಿಗಾಗಿ, ಸ್ನೇಹಿತರಿಗಾಗಿ ಖರ್ಚುಮಾಡಿದ ರೀತಿಗಿಂತ ಇಂತಹ ಖರ್ಚುಗಳು ರಾಚನಿಕವಾಗಿ ಭಿನ್ನ ಎಂದು ಅನ್ನಿಸುವುದಿಲ್ಲ.

ತೈಮೊನ್ ನಂತಹ ಶ್ರೀಮಂತನೊಬ್ಬನಿಗೆ ಮಾತ್ರ ಇಂತಹ ದುರಂತ ಸಂಭವಿಸುತ್ತದೆ ಎನ್ನುವುದು ನನ್ನ ಆತಂಕಕ್ಕೆ ಕಾರಣವಲ್ಲ. ತೈಮೊನ್ ನ ಸಂಸ್ಕೃತಿ ಪ್ರಭುತ್ವಾತ್ಮಕವಾಗಿರುವಾಗಲೇ ,ಲಕ್ಷಾಂತರ ಮಂದಿ  ಜನಸಾಮಾನ್ಯರು ಆ ರೀತಿ ಬದುಕಲಾರದೆ ,ಆದರೆ ಬದುಕಲು ಆಸೆಪಟ್ಟು ಅಂತಹ ವ್ಯವಸ್ಥೆಯ ಬಲಿಪಶುಗಳಾಗುತ್ತಾರೆ.ಹಣದುಬ್ಬರವನ್ನು ಅರ್ಥಶಾಸ್ತ್ರಜ್ಞರು ದೇಶದ ಅರ್ಥವ್ಯವಸ್ಥೆಯ ಪ್ರಗತಿಯ ಲಕ್ಷಣ ಎಂದು ಎಷ್ಟೇ ಹೇಳಿದರೂ , ನಿಜಬದುಕಿನಲ್ಲಿ ದಿನದ ಖರ್ಚಿಗೆ ಬೇಕಾದ ವಸ್ತುಗಳನ್ನು ತಮ್ಮ ಮಿತ ಆದಾಯದಲ್ಲಿ ಕೊಂಡುಕೊಳ್ಳಲಾರದೆ ಜನರು ದಿನದಿನವೂ ಸಂಕಟಪಡುತ್ತಿದ್ದಾರೆ.ಇವರ ಪಾಲಿಗೆ ವಸ್ತುಗಳ ಬೆಲೆಯೇರಿಕೆ ಒಂದು ಆಘಾತವಾದರೆ , ಅನೇಕರು ಸ್ವಚ್ಚಂದವಾಗಿ ಮಿತಿಮೀರಿ ಇಂತಹ ವಸ್ತುಗಳನ್ನು  ಕೊಳ್ಳುತ್ತಿರುವ ಪರಿಸರದಲ್ಲಿ ತಾವು ಬದುಕಬೇಕಾಗಿಬಂದಿರುವುದು  ಇನ್ನೊಂದು ಆಘಾತ.ಇಂತಹ  ಕುಟುಂಬಗಳ ಮಕ್ಕಳಿಗೆ ಅವಮಾನದ , ಹೆಂಗುಸರಿಗೆ ಮೂಕ ಅತೃಪ್ತಿಯ , ಗಂಡುಸರಿಗೆ ಅಸಹನೆಯ ಇಂತಹ ಪರಿಸರ ಹೀಗೆಯೇ ಮುಂದುವರಿದರೆ , ನಮ್ಮ ದೇಶವು ತೈಮೊನ್ ನ ದುರಂತದ ಬಳಿಕದ ‘ಅಥೆನ್ಸ್’ ಆಗಬಹುದೇ ಎನ್ನುವ ಭಯ ನಮ್ಮನ್ನು ಕಾಡುತ್ತದೆ .ಆರ್ಥಿಕ ಉದಾರೀಕರಣದ ‘ಮನಮೋಹಕ’  ಹೊರಕವಚದ  , ಮನಮೋಹನ ಸಿಂಗ್ ಅವರ ಈ ಬಜೆಟ್ ಪ್ರತಿಪಾದಿಸುವ ‘ಅರ್ಥ’ದ ಅರ್ಥವನ್ನು ಮರುವಿಮರ್ಶೆ ಮಾಡುವುದು ಇಂದಿನ ಜರೂರಿನ ಅಗತ್ಯ.’

(೬.೩.೧೯೯೪ )

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

One Response to “ಅಥೆನ್ಸಿನ ಅರ್ಥವಂತ ಮತ್ತು ಮನಮೋಹಕ ಬಜೆಟ್ :ಮತ್ತೆ ಓದಿದ ಲೇಖನ”

RSS Feed for ಬಿ ಎ ವಿವೇಕ ರೈ Comments RSS Feed

ಹೋ ಔದು ಸಾರ್ ನಾನು ಆ ಬರಹ ಓದಿದ್ದೆ. ಚೆನ್ನಾಗಿದೆ. ಗಿಳಿಸೂವೆಯ ಬರಹಗಳು ತುಂಬಾ ಸೂಕ್ಷ್ಮವಾಗಿವೆ. ಆ ಪುಸ್ತಕ ಲಬ್ಯವಿದ್ದಂತಿಲ್ಲ. ಸಾರ್ ಸಾದ್ಯವಾದರೆ ಮರುಮುದ್ರಣ ಮಾಡಿಸಿ.


Where's The Comment Form?

Liked it here?
Why not try sites on the blogroll...

%d bloggers like this: