‘ಕೋಟಿ ಚೆನ್ನಯ’ ತುಳು ಸಿನೆಮಾದ ಜನಪ್ರಿಯ ಹಾಡು: ‘ಎಕ್ಕ ಸಕ್ಕ ‘

Posted on ಆಗಷ್ಟ್ 11, 2011. Filed under: Uncategorized | ಟ್ಯಾಗ್ ಗಳು:, , , , , |


ಸಿನೆಮಾ: ಕೋಟಿ ಚೆನ್ನಯ

ಭಾಷೆ :ತುಳು

ವರ್ಷ :೧೯೭೧

ನಿರ್ದೇಶಕ :ವಿಶುಕುಮಾರ್

ಸಂಗೀತ ನಿರ್ದೇಶಕ :ವಿಜಯ ಭಾಸ್ಕರ್

ಹಾಡು :ಎಕ್ಕ ಸಕ್ಕ

ಹಾಡಿದವರು:ಎಸ.ಜಾನಕಿ

******************

ಎಕ್ಕ ಸಕ್ಕ  ಎಕ್ಕ ಸಕ್ಕ  ಎಕ್ಕ ಸಕ್ಕಲಾ

ಅಕ್ಕಾ ಪಂಡ್ದ್  ಲೆಪ್ಪುನಕುಲ್ ಬತ್ತೆರಿತ್ತೆಲಾ

ಓ  ರಾಮಾ        ಓ  ದೂಮಾ

ರಾಮ  ದೂಮ  ಚೋಮಾ  ಅವುಲು  ಏರ್ ಉಲ್ಲೆರುಯಾ

ಮಲ್ಲ  ಮಲ್ಲ  ಬೊಂಡಾ  ದೆತ್ತ್ ದ್  ಕೆತ್ತ್ ದ್  ಕೊರ್ಲೆಯಾ

ಮಂಡೆ  ನಿಲಿಕೆ  ನೀರ್  ಕೂಟುದ್ ಬೆಂದ್ರ್  ಕಾಯ್ಪೊಡು

ಕೋಟಿ ಚೆನ್ನಯ  ಎಣ್ಣೆ  ಪಾಡ್ ದ್  ಪೊರ್ಲ್ ಮೀಯೊಡ್

ಎಕ್ಕ ಸಕ್ಕ  ಎಕ್ಕ ಸಕ್ಕ  ಎಕ್ಕ ಸಕ್ಕಲಾ

ಅಕ್ಕಾ ಪಂಡ್ ದ್  ಲೆಪ್ಪುನಕುಲು ಬತ್ತೆರಿತ್ತೆಲಾ

ಓ ಗಂಗೇ      ಓ  ಗೌರೀ

ಗಂಗೆ  ಗೌರಿ  ಕಾಳಿ   ಬೊಳ್ಳಿ  ಇಂಚಿ ಬಲೇದೆ

ಚೊಂಬು ಮುಟ್ಟ  ಮಂದ  ಪೇರ್  ಕೊರೊಡ್  ಶಾರದೇ

ಓಲೋ  ಇತ್ತಿ  ನೆಲ್ಲಿಕಾಯಿ  ಉಪ್ಪು  ಸೇರಿಲೆಕೋ

ಬದ್ ಕ್   ಪನ್ಪಿ  ಉಜ್ಜಾಲ್ ಡ್  ನಮೋ  ಕುಲ್ಲ್ ಲೆಕೋ

ಎಕ್ಕ ಸಕ್ಕ   ಎಕ್ಕ ಸಕ್ಕ  ಎಕ್ಕ ಸಕ್ಕಲಾ

ಅಕ್ಕ ಪಂಡ್ ದ್   ಲೆಪ್ಪುನಕುಲು  ಬತ್ತೆರಿತ್ತೆಲಾ

ಗೆಳೆಯರಾದ ಸಾಹಿತಿ ನಾಟಕಕಾರ ವಿಶುಕುಮಾರ್ ಅವರ ಕೋರಿಕೆಯಂತೆ  ಅವರ ನಿರ್ದೇಶನದ  ‘ಕೋಟಿ ಚೆನ್ನಯ ‘ ತುಳು ಸಿನೆಮಾಕ್ಕಾಗಿ ನಾನು ಬರೆದ ಹಾಡು ‘ಎಕ್ಕ ಸಕ್ಕ’. ಸುಮಾರು ನಲುವತ್ತು ವರ್ಷಗಳ ಬಳಿಕ ಕೂಡಾ ಈಗಲೂ ತುಳು ಮಾತಾಡುವವರಲ್ಲಿ ತುಂಬಾ ಜನಪ್ರಿಯವಾದ ಈ ಹಾಡು ನಾನು ರಚಿಸಿದ ಒಂದೇ ಒಂದು  ಸಿನೆಮಾ ಪದ್ಯ. ಎಸ.ಜಾನಕಿ ಅವರ ಹಾಡುಗಾರಿಕೆ ಮತ್ತು ವಿಜಯಭಾಸ್ಕರ್ ಅವರ ಸಂಗೀತ ನಿರ್ದೇಶನ  ಈ ಹಾಡಿನ  ಜನಪ್ರಿಯತೆಗೆ ಹೆಚ್ಚು ಸಹಾಯ ಮಾಡಿವೆ. ಈ ಸಿನೆಮಾವನ್ನು ನೋಡದ ಈಗಿನ ಮಕ್ಕಳು ಮತ್ತು ಯುವಪೀಳಿಗೆ  ಕೂಡಾ ಇದರ  ತುಳು ದೇಸಿ ಶಬ್ದಗಳ ಸೊಗಸು  ಮತ್ತು ಕುಣಿತದ ಲಯಕ್ಕೆ ಮಾರುಹೋಗುತ್ತಾರೆ .ಸಿನೆಮಾ ನೋಡಿದವರಂತೂ  ಈ ಎಲ್ಲ ಆಕರ್ಷಣೆಗಳೊಂದಿಗೆ,ಈ ಹಾಡಿನ ಸಂದರ್ಭದಲ್ಲಿ  ,ಕಿನ್ನಿದಾರು ಪಾತ್ರ  ಮಾಡಿದ  ಮಿನುಗು ತಾರೆ ಕಲ್ಪನಾ ಅವರು ಕುಣಿದು ಅಭಿನಯಿಸಿದ ದೃಶ್ಯವನ್ನು ನೆನಪಿಸಿಕೊಳ್ಳುತ್ತಾರೆ. ಅವಳಿ ವೀರರಾದ ಕೋಟಿ ಮತ್ತು ಚೆನ್ನಯರು ತಾವು ಆವರೆಗೆ ಕಾಣದೇ  ಇದ್ದ  ತಮ್ಮ ಅಕ್ಕ ಕಿನ್ನಿದಾರುವಿನ ಮನೆಗೆ ಬರುವುದು, ತಮ್ಮ ಪರಿಚಯವನ್ನು ಅಕ್ಕನಲ್ಲಿ ಹೇಳುವುದು ,ಆಗ ಅಕ್ಕ ಕಿನ್ನಿದಾರು ಸಂಭ್ರಮದಿಂದ ತಮ್ಮಂದಿರನ್ನು ತುಳು ದೇಸಿ ರೀತಿಯಲ್ಲಿ ಸತ್ಕರಿಸುವುದು ಇಲ್ಲಿನ ಸನ್ನಿವೇಶ .

ತುಳುವಿನಲ್ಲಿ ‘ಎಕ್ಕಸಕ್ಕ’ ಅಂದರೆ  ‘ಆಧಿಕ್ಯ; ಹೆಚ್ಚು; ಅತಿರೇಕ; ವಿಪರೀತ ‘ ಎನ್ನುವ ಅರ್ಥಗಳು ಇವೆ. ‘ ಆಯೆ ಎಕ್ಕಸಕ್ಕ ತಿನ್ಪೆ ‘  ಅಂದರೆ  ‘ಅವನು ವಿಪರೀತ ತಿನ್ನುತ್ತಾನೆ.’ ಎಂದು ಅರ್ಥ. ‘ಆಳ್ ಎಕ್ಕಸಕ್ಕ ಪಾತೆರುಬಲ್ ‘ ಅಂದರೆ  ‘ಅವಳು ಸಿಕ್ಕಾಬಟ್ಟೆ (=ತುಂಬಾ) ಮಾತಾಡುತ್ತಾಳೆ.’  ಎನ್ನುವ ಅರ್ಥ. ಈ ಹಾಡಿನಲ್ಲಿ ತಮ್ಮಂದಿರನ್ನು ಮೊದಲಬಾರಿ ಆಕಸ್ಮಿಕವಾಗಿ ಕಂಡಾಗ ಅಕ್ಕನಿಗೆ ಆದ ಅತಿಯಾದ ಸಂತೋಷ ಮತ್ತು ಅವರನ್ನು ಸತ್ಕರಿಸುವ ಅವಳ ಸಂಭ್ರಮ ಮತ್ತು ಸಡಗರವನ್ನು  ‘ಎಕ್ಕಸಕ್ಕ’  ಎಂಬ ನುಡಿಗಟ್ಟು ಮತ್ತು ಈ  ಹಾಡಿನ ಪಲ್ಲವಿ ಧ್ವನಿಸುತ್ತದೆ.

‘ಎಕ್ಕಸಕ್ಕ’ ಎಂಬ ಶಬ್ದವು  ಕನ್ನಡದಲ್ಲಿ ಪಂಪನ  ಭಾರತದಲ್ಲಿ ಕೂಡಾ  ಪ್ರಯೋಗವಾಗಿದೆ.’ವಿಕ್ರಮಾರ್ಜುನ ವಿಜಯ’ದ ೧೧ನೆ ಆಶ್ವಾಸದ ೧೩೭ನೆ ಪದ್ಯದ ಬಳಿಕದ ಗದ್ಯ. ದ್ರೋಣನು ದುರ್ಯೋಧನನಿಗೆ ಹೇಳುವ ಮಾತು  :” ಎಂಬುದುಂ ದ್ರೋಣಾಚಾರ್ಯಂ ಮುಗುಳ್ನಗೆ ನಕ್ಕು ವಿಕ್ರಮಾರ್ಜುನನನಿಳಿಸಿ ನುಡಿವ ನಿನ್ನ ಎಣಗೋಣ೦ಗಳುಂ ಎಕ್ಕಸಕ್ಕತನ೦ಗಳುಂ ಎತ್ತವೋದುವು”

ನಾನು ಈ ಹಾಡನ್ನು ರಚಿಸಿದ ಸನ್ನಿವೇಶ ಬಹಳ ಆಕಸ್ಮಿಕವಾದುದು, ವಿಚಿತ್ರವಾದುದು.ಗೆಳೆಯ ವಿಶುಕುಮಾರ್ ಅವರು ನನ್ನನ್ನು ಮತ್ತು ಸಾಹಿತಿ ಅಮೃತ ಸೋಮೇಶ್ವರರನ್ನು ಮಂಗಳೂರಿನಲ್ಲಿ ಭೇಟಿಯಾಗಿ , ತಮ್ಮ ‘ಕೋಟಿ ಚೆನ್ನಯ’ ತುಳು ಸಿನೆಮಾದ ಹಾಡುಗಳ ಸನ್ನಿವೇಶಗಳ ವಿವರಣೆ ಕೊಟ್ಟರು.ನನಗೆ ಅವರು ಸೂಚಿಸಿದ್ದು -ಅಕ್ಕ ಕಿನ್ನಿದಾರುವಿನ ಮನೆಗೆ ತಮ್ಮಂದಿರಾದ ಕೋಟಿ-ಚೆನ್ನಯರು ಮೊದಲಬಾರಿ ಬರುವುದು ಮತ್ತು ಅದಕ್ಕೆ ಅವಳ ಸಂಭ್ರಮದ ಪ್ರತಿಕ್ರಿಯೆ.ಸಿನೆಮಾಕ್ಕೆ ಆ ವರೆಗೆ ಪದ್ಯ ಬರೆಯದ ನನಗೆ ಹೇಗೆ ಶಬ್ದ ಮತ್ತು ಲಯವನ್ನು ಈ ಸನ್ನಿವೇಶಕ್ಕೆ ಹೊಂದಿಸುವುದು ಎಂದು ಹೊಳೆಯಲಿಲ್ಲ.ಆಗ ನನ್ನ ಮನೆ ಇದ್ದದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಆರು ಮೈಲು ದೂರದ ಪುಣಚಾ ಗ್ರಾಮದ ಮಲ್ಲಿಪ್ಪಾಡಿಯಲ್ಲಿ.ಮನೆಗೆ ಬಂದವನೇ ಹಾಡು ಬರೆಯುವ ಗುಂಗಿನಲ್ಲಿ ಇದ್ದೆ.೧೯೭೧ -ನಾನು ಕನ್ನಡ ಎಂ ಎ ಮುಗಿಸಿ ,ಮಂಗಳೂರಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದಲ್ಲಿ ಉಪನ್ಯಾಸಕನಾಗಿ ಸೇರಿದ ಮೊದಲನೆಯ ವರ್ಷ ಅದು.ಆಗಾಗಲೇ ತುಳು ಗಾದೆಗಳು ,ತುಳು ಒಗಟುಗಳು ಸಂಗ್ರಹಮಾಡಿ ಪುಸ್ತಕಗಳನ್ನು ಪ್ರಕಟಿಸಿದ್ದೆ.ತುಳು ಕಬಿತಗಳ ಸಂಗ್ರಹ ಮಾಡುತ್ತಿದ್ದೆ.ಹಳ್ಳಿಯಲ್ಲಿ ಇದ್ದ ನಮ್ಮ ಮನೆಯ ಹತ್ತಿರದ ಗುಡ್ಡೆಯ ಬಳಿಗೆ  ಬಂದಾಗ ಅಲ್ಲಿ ಕೆಲಸಮಾಡುತ್ತಿದ್ದ ಹೆಂಗುಸೊಬ್ಬಳು ತನ್ನ ಮಗನಿಗೆ ಗದರಿಸಿ ಹೊಡೆಯುತ್ತಿದ್ದಳು.’ಏತು ತಿನ್ಪಿನೆಂಬಾ ಈ ಇಂಚ ಎಕ್ಕಸಕ್ಕ.ಒರಿನಕುಲೆಗ್ ದಾಲಾ ಒರಿಪ್ಪದುಜ.(ಎಷ್ಟು ತಿನ್ನುವುದು ನೀನು ಹೀಗೆ  ವಿಪರೀತ.ಉಳಿದವರಿಗೆ ಏನೂ ಉಳಿಸಿಲ್ಲ.) ‘ ಹೀಗೆ ಹೇಳುತ್ತಾ ಆಕೆ ಒಂದು ಕೋಲಿನಲ್ಲಿ ಮಗನಿಗೆ ಹೊಡೆದಳು.ಆ ಹುಡುಗ ತಾಯಿಯ ಪೆಟ್ಟು ತಪ್ಪಿಸಿಕೊಳ್ಳುತ್ತಾ ‘ಎಕ್ಕಸಕ್ಕ ಎಕ್ಕಸಕ್ಕ ‘ಎಂದು ಕುಣಿದುಕೊಂಡು ಹಾರಾಡುತ್ತಾ ಓಡುತ್ತಿದ್ದ.ಆ  ‘ಎಕ್ಕಸಕ್ಕ ‘ ಎಂಬ ಶಬ್ದ ಮತ್ತು ಲಯ ,ಅದಕ್ಕೆ ಸರಿಯಾಗಿ ಆ ಹುಡುಗನ ಲಯಬದ್ಧ ಜಿಗಿತ ನನಗೆ ‘ಆರ್ಕಿಮಿಡೀಸ್ ‘ನ  ಹೊಳಹನ್ನು ಕೊಟ್ಟಿತು. ಕನ್ನಡ ಎಂ ಎ ವಿದ್ಯಾರ್ಥಿಗಳಿಗೆ ಆಗತಾನೆ ‘ಪಂಪಭಾರತ’ ಕಾವ್ಯ ಪಾಠ ಮಾಡುತ್ತಿದ್ದೆ.ಅದರಲ್ಲಿ  ದ್ರೋಣನು ದುರ್ಯೋಧನನನ್ನು  ಮೂದಲಿಸುವಾಗ ‘ಎಕ್ಕಸಕ್ಕತನ’ ಎನ್ನುವ  ಪದ ಪ್ರಯೋಗವನ್ನು  ಗಮನಿಸಿದ್ದೆ. ಮನೆಗೆ ಬಂದವನೇ ಕಾಗದ ಪೆನ್ ತೆಗೆದುಕೊಂಡು ಕವನ ಬರೆಯಲು ಸುರುಮಾಡಿದೆ -‘ ಎಕ್ಕ ಸಕ್ಕ ಎಕ್ಕಸಕ್ಕ ಎಕ್ಕಸಕ್ಕಲಾ ‘ .ಕನ್ನಡದಲ್ಲಿ ಮೂರು ಮಾತ್ರೆಗಳ ‘ಉತ್ಸಾಹಲಯ ‘ಅದು. ಸಂತಸ ಸಂಭ್ರಮಗಳಿಗೆ ತುಂಬಾ ಅನುಕೂಲಕರ ಲಯ ಇದು. ಮುಂದೆ ಹಳ್ಳಿಯಲ್ಲಿ ನಮ್ಮ ಮನೆಯ ಸುತ್ತುಮುತ್ತಲಿನ ತಾರೆ ,ಬೊಂಡ, ಕಿದೆ ,ಪೆತ್ತ ,ಪೇರ್ , ಬಯಿ,  ಮಂಡೆ ,ಬೆಂದ್ರ್,ರಾಮ,ದೂಮ ,ಚೋಮ,ಗಂಗೆ ,ಗೌರಿ,ಬೊಳ್ಳಿ ,ಕಾಳಿ -ಎಲ್ಲವೂ ಎಲ್ಲರೂ ಸೇರಿಕೊಂಡಾಗ ನನ್ನ ಪಾಡೆಲ್ಲವೂ ಒಂದು ಹಾಡು ಆಯಿತು.ಅಲ್ಲಮನ ವಚನದ ‘ಬೆಟ್ಟದ ನೆಲ್ಲಿಕಾಯಿ ,ಸಮುದ್ರದೊಳಗಣ ಉಪ್ಪು’  ಎಂಬ ರೂಪಕವು ಹಾಡಿಗೆ ತಾತ್ವಿಕ ಅಂತ್ಯ ಕೊಡಲು ನೆರವಾಯಿತು.

‘ಕೋಟಿಚೆನ್ನಯ’ ಸಿನೆಮಾದ ಈ ಹಾಡಿನ ಸನ್ನಿವೇಶದ ವೀಡಿಯೋ ಸಂಪರ್ಕವನ್ನು ಯು -ಟ್ಯೂಬ್ ನಲ್ಲಿ ಪಡೆಯಬಹುದು.ಈ ಹಾಡಿನ ಮೂಲ ಧ್ವನಿಯನ್ನು ಎಂ ಪಿ ೩ರಲ್ಲಿ ಕೇಳಬಹುದು.

ಈ ಹಾಡನ್ನು ‘ಕೋಟಿ ಚೆನ್ನಯ ‘ಸಿನೆಮಾದಲ್ಲಿ ಹಾಡಿದ ಗಾಯಕಿ ಎಸ.ಜಾನಕಿ ಅವರನ್ನು ಎರಡು ವರ್ಷಗಳ ಹಿಂದೆ ,೨೦೦೯ರಲ್ಲಿ ಮೈಸೂರಲ್ಲಿ ಆಕಸ್ಮಿಕವಾಗಿ ಭೇಟಿ ಆಗುವ ಅವಕಾಶ ದೊರೆಯಿತು.ನಾನು ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಆಗಿದ್ದೆ.ಆ ವರ್ಷ ಪಕ್ಕದ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಗಾಯಕಿ ಎಸ.ಜಾನಕಿ ಅವರಿಗೆ ಗೌರವ ಡಾಕ್ಟರೇಟ್  ಪದವಿ ಕೊಟ್ಟಿದ್ದರು. ಕಾರ್ಯಕ್ರಮದ ಬಳಿಕ ನನ್ನನ್ನು ಎಸ.ಜಾನಕಿ ಅವರಿಗೆ ಕುಲಪತಿ ಎಂದು ಪರಿಚಯ ಮಾಡಿಕೊಟ್ಟರು. ಆದರೆ ನಾನು ಅವರಲ್ಲಿ ನನ್ನ ‘ಎಕ್ಕಸಕ್ಕ’ ಪದ್ಯವನ್ನು ಅವರು ಅದ್ಭುತವಾಗಿ ಹಾಡಿ ಜನಪ್ರಿಯಗೊಳಿಸಿದ್ದನ್ನು ಪ್ರಸ್ತಾವಿಸಿದೆ.ಕೂಡಲೇ ಅವರು ಸಂಭ್ರಮದಿಂದ ನನ್ನ ಕೈಗಳನ್ನು ಹಿಡಿದುಕೊಂಡು ,ನನಗೆ ಬೆರಗಾಗುವಂತೆ ‘ಎಕ್ಕಸಕ್ಕ ‘ಹಾಡಿನ ಪಲ್ಲವಿಯನ್ನು ಗುನುಗುನಿಸಿದರು. ನಲುವತ್ತು ವರ್ಷಗಳ ಹಿಂದಿನ ಅದೇ ಧಾಟಿ ,ಅದೇ  ಧ್ವನಿ.ಅವರ ದೇಹ ಮಾಗಿತ್ತು,ತಲೆಕೂದಲು ಬೆಳ್ಳಗಾಗಿತ್ತು.ಆದರೆ ಕಂಠ  ‘ಕಿನ್ನಿದಾರು’ ವಿನದು!

ಈ ಹಾಡನ್ನು ಬೇರೆ ಗಾಯಕಿಯರು ಹಾಡಿದ ಧ್ವನಿಸುರುಳಿಗಳು ಈಗ ಸಾಕಷ್ಟು ಮಾರುಕಟ್ಟೆಗೆ ಬಂದಿವೆ, ಇಂಟರ್ ನೆಟ್ ನಲ್ಲಿ ದೊರೆಯುತ್ತವೆ.ಇತ್ತೀಚಿಗೆ ತುಳುವರಾದ ಬಾಲಿವುಡ್ ನಟಿ ಐಶ್ವರ್ಯ ರೈ ನೃತ್ಯಕ್ಕೆ ಈ ಹಾಡನ್ನು ಮಿಶ್ರಮಾಡಿದ ದೃಶ್ಯ ಮುದ್ರಿಕೆಯನ್ನು ಇಂಟರ್ ನೆಟ್ ನಲ್ಲಿ ಅವಲೋಕಿಸಿದೆ.

ಶಾಲೆ ಕಾಲೇಜು ಸಂಘ ಕೂಟಗಳ ಕಾರ್ಯಕ್ರಮಗಳಲ್ಲಿ ಕುಣಿತಕ್ಕೆ ಈ ಹಾಡು ದೇಶ ವಿದೇಶಗಳಲ್ಲಿ ‘ ಎಕ್ಕಸಕ್ಕ’ ಬಳಕೆಯಾಗಿದೆ!

ಒಂದರ್ಥದಲ್ಲಿ ಈ ಪದ್ಯವು  ಹಾಡು,ಕುಣಿತ ಮತ್ತು ಅಂತರ್ಜಾಲದ ತಾಣಗಳಲ್ಲಿ   ‘ಎಕ್ಕಸಕ್ಕ’ ಬಳಕೆ ಮತ್ತು ಬೆರಕೆ  ಆಗಿಬಿಟ್ಟಿದೆ!

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: