‘ಚಿಲಿಯಲ್ಲಿ ಭೂಕಂಪ’ -ಹೀನ್ರಿಶ್ ಕ್ಲೆಯಿಸ್ಟ್ ಜರ್ಮನ್ ಕತೆ

Posted on ಆಗಷ್ಟ್ 5, 2011. Filed under: ಜರ್ಮನ್ ಕತೆ | ಟ್ಯಾಗ್ ಗಳು:, , , , , |


ಜರ್ಮನ್ ಕತೆಗಾರ ಕವಿ ಹೀನ್ರಿಶ್ ಕ್ಲೆಯಿಸ್ಟ್  (೧೭೭೭-೧೮೧೧ ) ನ ಪರಿಚಯವನ್ನು ನನ್ನ ಬ್ಲಾಗ್ ನ ‘ ಜರ್ಮನ್ ಕತೆಗಾರ ಹೀನ್ರಿಶ್ ಕ್ಲೆಯಿಸ್ಟ್ :ಕ್ರೂರ ದೇವರ ವಿರುದ್ಧ ದಂಗೆ’ ಎಂಬ ಲೇಖನದಲ್ಲಿ ಕೊಟ್ಟಿದ್ದೇನೆ. ಆತನ ಒಂದು ಮಹತ್ವದ ಕತೆಯನ್ನು ಕನ್ನಡಕ್ಕೆ ಅನುವಾದಿಸಿ ‘ಚಿಲಿಯಲ್ಲಿ ಭೂಕಂಪ’ ಎಂಬ ಹೆಸರಿನಲ್ಲಿ  ಇಲ್ಲಿ ಕೊಡುತ್ತಿದ್ದೇನೆ.ಧರ್ಮದ ಕಟ್ಟು ಕಟ್ಟಳೆಗಳ ಕ್ರೌರ್ಯ ಮತ್ತು ಭೂಕಂಪದ ಅನಾಹುತಗಳ ಮುಖಾಮುಖಿಯ ಮೂಲಕ ಭೂಕಂಪಕ್ಕಿಂತ ಧರ್ಮ ಹೇಗೆ ಕ್ರೂರ ಎನ್ನುವುದನ್ನು ಈ ಕತೆ ಹೇಳುತ್ತದೆ.

ಚಿಲಿಯಲ್ಲಿ ಭೂಕಂಪ

೧೬೪೭. ಚಿಲಿ ರಾಜ್ಯದ ರಾಜಧಾನಿ ಸಾಂಟಿಯಾಗೋದಲ್ಲಿ ಮಾರಿ ಭೂಕಂಪದ  ಆ ಕ್ಷಣ. ಸಾವಿರಾರು ಮಂದಿ ಜೀವ ಕಳೆದುಕೊಂಡ ದುರ್ಬರ ಕ್ಷಣ.ಆ ಕ್ಷಣದಲ್ಲಿಯೇ ಎರೋನಿಮೋ ರುಗೆರ ಎನ್ನುವ ಯುವಕ ,ಕ್ರಿಮಿನಲ್ ಅಪರಾಧದಲ್ಲಿ ಆಪಾದಿತನಾದವ  ಅಲ್ಲಿ ಜೈಲಿನಲ್ಲಿ ಒಂದು ಕಂಬದ ಬಳಿ ನಿಂತುಕೊಂಡಿದ್ದ .ಆತ ಆ ಜೈಲಿನಲ್ಲಿಯೇ  ನೇಣುಹಾಕಿಕೊಂಡು ಸಾಯಲು ನಿರ್ಧರಿಸಿದ್ದ.ಆತನನ್ನು ಒಂದು ವರ್ಷದ ಹಿಂದೆ ತನ್ನ ಮನೆಯಿಂದ ಹೊರಗಟ್ಟಿದ್ದು  ಆ ನಗರದ ಭಾರಿ ಶ್ರೀಮಂತ ಡಾನ್  ಎನ್ರಿಕೊ ಅಸ್ತೆರೋನ್ .ತನ್ನ ಮಗಳು ಡಾನ್ ಯೋಸೆಫಾಳಿಗೆ  ಟ್ಯೂಟರ್ ಆಗಿದ್ದ ಎರೋನಿಮೋ ಅವಳೊಂದಿಗೆ ಅತಿ ಸಲುಗೆಯಿಂದ ಇದ್ದ ಎನ್ನುವುದು ಆತನ ಮೇಲಿನ ಆಪಾದನೆ. ಯೋಸೆಫಾಳ ಪ್ರೀತಿಯ ಅಣ್ಣ ಈ ರಹಸ್ಯವನ್ನು ಗುಟ್ಟಿನಲ್ಲಿ ತಿಳಿದುಕೊಂಡು ಅಪ್ಪನಿಗೆ ತಿಳಿಸಿದ .ಅಪ್ಪ ಮಗಳನ್ನು ದಬಾಯಿಸಿ ಮನೆಯಿಂದ ದೂರ ಮಾಡಿ, ಬೆಟ್ಟದಲ್ಲಿರುವ ಕಾರ್ಮೆಲೈತ್ ಕಾನ್ವೆಂಟಿಗೆ ಕಳುಹಿಸಿಕೊಟ್ಟಿದ್ದ.

ಇಲ್ಲಿ ಎರೋನಿಮೋ ಮತ್ತೆ  ಯೋಸೆಫಾಳೊಂದಿಗೆ ಸಂಬಂಧ  ಬೆಳೆಸಿದ.ಕಾನ್ವೆಂಟಿನ ತೋಟದಲ್ಲಿ ಅವರ ಸರಸ ಸಲ್ಲಾಪ ಸಾಗಿತು.ಕಾರ್ಪಸ್ ಕ್ರಿಸ್ಟಿ ಔತಣದ ವೇಳೆ ,ನನ್ ಗಳ ಪವಿತ್ರ ಮೆರವಣಿಗೆಯ ಸನ್ನಿವೇಶದಲ್ಲಿ ಇನ್ನೇನು ಮೆರವಣಿಗೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ,ಗಂಟೆಗಳು ಮೊಳಗುತ್ತಿದ್ದಂತೆಯೇ ಬಡಪಾಯಿ ಯೋಸೆಫಾ ಕುಸಿದು ಬಿದ್ದಳು ಕೆಥದ್ರಲ್ ನ ಮೆಟ್ಟಿಲುಗಳ ಮೇಲೆ.ಅವಳನ್ನು ಹೆರಿಗೆಮನೆಗೆ ಸಾಗಿಸಲಾಯಿತು.

ಈ ಒಂದು ಘಟನೆ ಅಸಾಧ್ಯ ಕೋಲಾಹಲಕ್ಕೆ ಕಾರಣವಾಯಿತು. ಆ ‘ಪಾಪಿ ‘ ತರುಣಿಯನ್ನು ಅವಳ ದೈಹಿಕ ಸ್ಥಿತಿಗತಿ ನೋಡದೆ ಜೈಲಿಗೆ ಎಸೆಯಲಾಯಿತು.ಆರ್ಚ್ ಬಿಷಪ್ ಅವಳನ್ನು ಕಠಿಣ ಶಿಕ್ಷೆಗೆ ಒಳಪಡಿಸುವ ಆಜ್ಞೆ ಮಾಡಿದ. ಪಟ್ಟಣದೆಲ್ಲೆಡೆ  ಈ ಹಗರಣದ ಬಗ್ಗೆ ಕಟುವಾದ ಟೀಕೆ ಚರ್ಚೆ ನಡೆಯಿತು. ಈ ಘಟನೆ ನಡೆದ  ಕಾನ್ವೆಂಟ್ ಅವಳನ್ನು ಕಟು ಶಬ್ದಗಳಿಂದ ಟೀಕಿಸಿತು. ಅವಳು ಬೆಳೆದು ಬಂದ ಅಸ್ತೆರೋನ್ ಕುಟುಂಬವಾಗಲೀ  ಅವಳನ್ನು ಪ್ರೀತಿಯಿಂದ ಸಾಕಿದ ಹಿರಿಯರಾಗಲೀ  ಮೃದು ಸ್ವಭಾವದ ಅವಳ ಮೇಲೆ  ನಡೆಯುತ್ತಿದ್ದ ಕ್ರೌರ್ಯದ ಆಘಾತಕ್ಕೆ ಅಡ್ಡಿಪಡಿಸಲಿಲ್ಲ. ಧರ್ಮದ ಕಾನೂನಿನ ಕ್ರೌರ್ಯ ಎಲ್ಲರನ್ನೂ ಮೌನವಾಗಿಸಿತು.ವೈಸರಾಯಿಯು ಯೋಸೆಫಾಳಿಗೆ ಕೊಡುವ ಶಿಕ್ಷೆಯಲ್ಲಿ ಮಾಡಿದ ಬದಲಾವಣೆ ಎಂದರೆ ,ಅವಳನ್ನು ಕಂಬಕ್ಕೆ ಕಟ್ಟಿ ಸುಡುವುದರ  ಬದಲು ಅವಳ ತಲೆ ಕತ್ತರಿಸಿ ಕೊಲ್ಲುವುದು.

ಇಂತಹ ದೈವಿಕ ಶಾಪವನ್ನು ಜ್ಯಾರಿಗೊಳಿಸುವ ದೃಶ್ಯದ ಪೂರ್ವಭಾವಿ ಮೆರವಣಿಗೆಯನ್ನು ನೋಡಲು ನಗರದ ಕಾರ್ಮಿಕ ಹೆಣ್ಣುಮಕ್ಕಳು ಕಿಟಿಕಿಗಳ ಪಕ್ಕದಲ್ಲಿ ಕಾದುನಿಂತರು.

ಜೈಲಿನಲ್ಲಿ ಇದ್ದ ಎರೋನಿಮೋ ಈ ಸುದ್ದಿ ತಿಳಿದು ಅಲ್ಲೇ ಮೂರ್ಛೆಹೋಗಿ ಕುಸಿಯುವಂತಾದ.ಅವಳನ್ನು ಆ ಕಠಿಣ ಶಿಕ್ಷೆಯಿಂದ ಪಾರುಮಾಡುವ ಉಪಾಯಗಳು ಅವನ ಮನಸ್ಸಿನಲ್ಲಿ ಸುಳಿದಾಡಿದವು. ಅವನ ಯೋಚನೆಯ ರೆಕ್ಕೆಗಳು ಅವನನ್ನು ಎಲ್ಲೆಲ್ಲೋ  ಹಾರಾಡಿಸಿದರೂ ಕೊನೆಗೂ ಅವನಿಗೆ ಎದುರಾದದ್ದು ಅವನಿದ್ದ ಜೈಲಿನ ಗೋಡೆಗಳು ಮತ್ತು ಬಾಗಿಲುಗಳ ಬೋಲ್ಟುಗಳು.ಆತ ಅಲ್ಲಿ ಇದ್ದ ಪವಿತ್ರ ಮೇರಿಯ ಮೂರ್ತಿಯ ಮುಂದೆ ಪ್ರಾರ್ಥಿಸಿದ – ಅವಳೊಬ್ಬಳು ಮಾತ್ರ  ಯೋಸೆಫಾಳನ್ನು ಉಳಿಸಬಲ್ಲಳು  ಎಂದು .

ಕೊನೆಗೂ ಆ ಕರಾಳ ದಿನ ಬಂದೇ ಬಿಟ್ಟಿತು. ಅದರೊಂದಿಗೆ ಆತನ ಕರಾಳ ನಿರಾಶೆಯ ಕ್ಷಣ ಕೂಡಾ.ಯೋಸೆಫಾಳನ್ನು ವಧೆಮಾಡುವ  ಸ್ಥಳಕ್ಕೆ ಕೊಂಡೊಯ್ಯುವ ಗಂಟೆಗಳು ಬಾರಿಸಿದವು.ಜೈಲಿನೊಳಗೆ ಚಡಪಡಿಸುತ್ತಿದ್ದ ಎರೋನಿಮೋ  ತನ್ನ ಬದುಕನ್ನೇ ದ್ವೇಷಿಸಿ ತನ್ನ ಸಾವನ್ನು ಆಹ್ವಾನಿಸಲು ನಿರ್ಧರಿಸಿದ. ಜೈಲಿನ ಕೋಣೆಯೊಂದರಲ್ಲಿ  ಆಕಸ್ಮಿಕವಾಗಿ ದೊರೆತ ಹಗ್ಗದ ಸಹಾಯದಿಂದ ನೇಣು  ಹಾಕಿಕೊಳ್ಳಲು ಆತ ಸಿದ್ಧನಾದ.ಕಂಬಕ್ಕೆ ಒರಗಿ ನಿಂತುಕೊಂಡು ,ಹಗ್ಗವನ್ನು ಮೇಲಿನಿಂದ ಬಿಗಿಗೊಳಿಸುತ್ತಾ ಅದೇ ತನ್ನನ್ನು ಈ ಕೆಟ್ಟ ಜಗತ್ತಿನಿಂದ ಪಾರುಮಾಡುತ್ತದೆ ಎಂದು ಆಶಿಸುತ್ತಾ ಆ ಘಳಿಗೆಗಾಗಿ ಕಾಯುತ್ತಿದ್ದ.ಆ ವೇಳೆಗೆ ಅವನು ನೋಡುತ್ತಿದ್ದಂತೆಯೇ ಜೈಲಿನ ಕಬ್ಬಿಣದ ತೊಲೆ ಕೆಳಕ್ಕೆ

ಬೀಳುತ್ತಿರುವುದನ್ನು ಕಂಡ.ಏನೆಂದು ಗ್ರಹಿಸುವ ಮೊದಲೇ ಇಡೀ ನಗರದ ಬಹುಭಾಗ ಜಾರಿ ಕುಸಿಯುತ್ತಿದೆ ,ಅವಶೇಷಗಳ  ಅಡಿಯಲ್ಲಿ ಸಮಸ್ತ ಜೀವಿಗಳು ಹೂತುಹೊಗುತ್ತಿವೆ .ಎರೋನಿಮೋ ಭಯದಿಂದ ತತ್ತರಿಸುತ್ತಲೇ ಎದ್ದುನಿಂತ. ತನ್ನ ಮನಸ್ಸಿನಿಂದ ಎಲ್ಲ ಯೋಚನೆಗಳನ್ನು ಬಿಸಾಕಿ ಆ ಕಂಬವನ್ನು ಗಟ್ಟಿಯಾಗಿ ಅಪ್ಪಿಕೊಂಡ. ಕೆಲವೇ ಕ್ಷಣಗಳ ಹಿಂದೆ  ಯಾವ ಕಂಬಕ್ಕೆ ನೇಣು ಹಾಕಿಕೊಂಡು ಸಾಯಲು ಹೊರಟಿದ್ದನೋ ಈಗ ಅದೇ ಕಂಬವನ್ನು ಆತುಕೊಂಡು  ನಿಂತುಕೊಂಡಿದ್ದಾನೆ ಎರೋನಿಮೋ .ಆತನ ಕಾಲಿನ ಅಡಿಯ ಭೂಮಿ ಅದುರುತ್ತಿತ್ತು.ಜೈಲಿನ ಗೋಡೆಗಳು ಪುಡಿಪುಡಿಯಾಗಿ ಉದುರುತ್ತಿದ್ದುವು.ಎರೋನಿಮೋ ಗಡಗಡನೆ ನಡುಗುತ್ತಾ ತನ್ನ ಮೊಣಕಾಲುಗಳನ್ನು ಮಡಚುತ್ತಾ ಇಳಿಜಾರು ನೆಲದಲ್ಲಿ ಜಾರುತ್ತಾ ,ಜೈಲಿನ ಕಟ್ಟಡ ಎರಡು ಹೋಳಾಗಿ ಸೀಳಿಕೊಂಡ ಸಂದಿನ ಮೂಲಕ ಹೊರಕ್ಕೆ ಬಂದ.

ಎರೋನಿಮೋ  ಜೈಲಿನ ಕಟ್ಟಡದಿಂದ ಹೊರಬರುವಷ್ಟರಲ್ಲಿಯೇ  ಆಗಾಗಲೇ  ನೆಲ ಕಚ್ಚಿದ್ದ  ಆ  ಇಡೀ ಬೀದಿ ಎರಡನೆಯ ಕಂಪನದಿಂದ ಪುಡಿಪುಡಿಯಾಯಿತು. ಇಂತಹ ಸರ್ವನಾಶದಿಂದ  ತನ್ನನ್ನು ಹೇಗೆ ರಕ್ಷಿಸಿಕೊಳ್ಳುವುದು  ಎನ್ನುವ ಕಲ್ಪನೆಯೇ ಇಲ್ಲದೆ ಆತ ಛಿದ್ರ ಛಿದ್ರವಾಗಿ ಬಿದ್ದಿದ್ದ ಮರದ ತುಂಡುಗಳನ್ನು ಹಿಡಿದುಕೊಂಡು  ತೆವಳಿಕೊಂಡು ಮೇಲಕ್ಕೆ ಹತ್ತಿದ.ಸಾವು ಎಲ್ಲ ಕಡೆಗಳಿಂದಲೂ ಅವನ ಮೇಲೆ ಧಾಳಿಮಾಡಿ ಅವನನ್ನು  ಹತ್ತಿರದ ನಗರವೊಂದರ ಗೇಟಿನ ಕಡೆಗೆ ಎಳೆದೊಯ್ಯುತ್ತಿತ್ತು. ಅಲ್ಲಿ ಇನ್ನೊಂದು ಮನೆ ಉರುಳಿಬಿತ್ತು. ಅದರ ಹೊಡೆತದ ರಭಸ ಆತನನ್ನು ಪಕ್ಕದ ಬೀದಿಯೊಂದಕ್ಕೆ ಎಸೆಯಿತು. ಬೆಂಕಿಯ ಜ್ವಾಲೆಗಳು ಎಲ್ಲ ದಿಕ್ಕುಗಳಿಂದಲೂ ಉರಿಯತೊಡಗಿದವು.ಎಲ್ಲೆಡೆ  ಹೊಗೆಯ ಕಾರ್ಮೋಡಗಳು ಕವಿದವು. ಅದರಿಂದ ಘಾಸಿಗೊಂಡ ಅವನನ್ನು ಅಲ್ಲಿಂದ ಅದು ಇನ್ನೊಂದು ಬೀದಿಗೆ ಬೆನ್ನಟ್ಟಿತು. ಅಲ್ಲಿ ಮೇರೆ ಮೀರಿ ಉಕ್ಕಿ ಹರಿಯುತ್ತಿದ್ದ ನದಿಯೊಂದು ಭೋರ್ಗರೆಯುತ್ತಾ  ಅವನನ್ನು ಇನ್ನೊಂದು ಬೀದಿಗೆ ತಳ್ಳಿತು. ಮತ್ತೆ ಅಲ್ಲಿ ನೋಡಿದರೆ ಹೆಣಗಳದ್ದೇ  ರಾಶಿ ರಾಶಿ. ಅವಶೇಷಗಳ ಅಡಿಯಿಂದ  ಎಲ್ಲೆಲ್ಲೂ ಆರ್ತನಾದ. ಉರಿಯುತ್ತಿರುವ ಮನೆಯ ಚಾವಡಿಗಳಿಂದ  ಜನರ ರೋದನದ ಧ್ವನಿ. ಮನುಷ್ಯರು ಮತ್ತು ಪ್ರಾಣಿಗಳು ಸೆಣಸಾಡುತ್ತಿದ್ದದ್ದು    ಪ್ರವಾಹದ ಅಲೆಗಳೊಂದಿಗೆ.  ಧೈರ್ಯಶಾಲಿ ರಕ್ಷಕನೊಬ್ಬ ಸಹಾಯ ಹಸ್ತ  ಚಾಚಿದ.ಅಲ್ಲಿ ಇನ್ನೊಬ್ಬ ಸಾವಿನಷ್ಟೇ  ಬಿಳಿಚಿಕೊಂಡು ಸ್ವರ್ಗದೆಡೆಗೆ  ತನ್ನ ನಡುಗುವ ಕೈಗಳನ್ನು ಚಾಚುತ್ತಾ ನಿಂತಿದ್ದ.ಎರೋನಿಮೋ  ಗೇಟನ್ನು ತಲುಪಿ,ಅದರ ಆಕಡೆಗಿರುವ  ಬೆಟ್ಟವನ್ನು  ಏರುತ್ತಲೇ  ಮೂರ್ಛೆಹೋಗಿ ಭೂಮಿಗೆ ಕುಸಿದು ಬಿದ್ದ.

ಎರೋನಿಮೋ ಸುಮಾರು ಹದಿನೈದು ನಿಮಿಷಗಳ ಕಾಲ ಗಾಢವಾದ  ಅಪ್ರಜ್ಞಾವಸ್ಥೆಯಲ್ಲಿ  ಮಲಗಿದ್ದ. ಎಚ್ಚರವಾಗಿ ಅವನು ಕಣ್ಣು ತೆರೆದು ನೋಡಿದರೆ ,ಅವನ ಹಿಂದೆಯೇ ನಗರದ ಅರ್ಧಭಾಗ ಕುಸಿದು ನೆಲ ಕಚ್ಚಿದೆ. ಹಣೆಯ ಮೇಲೆ ಎದೆಯ ಮೇಲೆ ಕೈಯಿಂದ ಚಚ್ಚಿಕೊಂಡ. ಏನು ಮಾಡುವುದೆಂದು ತೋಚದೆ ಯೋಚಿಸುತ್ತಾ ಇರುವಾಗಲೇ ವರ್ಣಿಸಲಾಗದ ಶಾಂತಿ ಅವನನ್ನು ಆವರಿಸಿತು.ಸಮುದ್ರದ ಕಡೆಯಿಂದ ಬೀಸಿದ ಪಶ್ಚಿಮದ ಗಾಳಿ ಅವನ ಬದುಕಿಗೆ ಮರುಜೀವ ಕೊಟ್ಟಿತು.ಸಾಂತಿಯಾಗೋದ  ಅರಳುತ್ತಿದ್ದ ಪ್ರದೇಶವನ್ನು ಎಲ್ಲ ಕಡೆಯಿಂದಲೂ ದೃಷ್ಟಿ ಹಾಯಿಸಿ ನೋಡಿದ.ಎಲ್ಲೆಲ್ಲೂ ಕಾಣಿಸುತ್ತಿದ್ದ   ಕ್ಷೋಬೆಗೊಂಡ  ಜನಸಂದಣಿ  ಅವನ ಮನಸ್ಸನ್ನು ಕಲಕಿತು.ತನ್ನನ್ನು  ಅಷ್ಟು ಮಂದಿಯನ್ನು ಇಲ್ಲಿಯವರೆಗೆ ಕರೆದುಕೊಂಡು ತಂದದ್ದು ಯಾವುದು ? ಆತ ಒಮ್ಮೆ ಒಂದು ಸುತ್ತು ತಿರುಗಿ ನೋಡಿದಾಗ ತನ್ನ ಕಾಲ ಬುಡದಿಂದ ಕೆಳಗೆ ಇಡೀ ನಗರ ಭೂಕಂಪದ ಆ ಭಯಾನಕ ಕ್ಷಣದಿಂದ ಸಂಪೂರ್ಣ ನುಂಗಿಹೋಗಿತ್ತು .ಆತ  ತಲೆ ಬಾಗಿ ,ಭೂಮಿಗೆ ಹಣೆ ತಾಗಿಸಿ, ತನ್ನ ಪವಾಡ ಸದೃಶ ಪಾರಾಗುವಿಕೆಗಾಗಿ ದೇವರಿಗೆ ವಂದನೆ ಸಲ್ಲಿಸಿದ.ಆ ಭಯಾನಕ ನೆನಪು ಅವನ ಮನಸ್ಸಿನ ತುಂಬಾ ಹರಿದಾಡಿತು.ಬಹುರೂಪಿ ಬದುಕೊಂದು ತನಗೆ ಅನುಭವಿಸಲು ಉಳಿದುದಕ್ಕಾಗಿ ಆತ ಸಂತೋಷದ ಕಣ್ಣೀರು ಹರಿಸಿದ.

ತನ್ನ ಕೈಬೆರಳಲ್ಲಿರುವ  ಉಂಗುರ ನೋಡುತ್ತಲೇ ಎರೋನಿಮೊಗೆ ತತ್ಕ್ಷಣ ಮೊದಲು  ನೆನಪಾದದ್ದು ಯೋಸೆಫಾ , ಬಳಿಕ ತನ್ನ ಜೈಲು ,ಆಮೇಲೆ ಒಂದೇ ಸವನೆ ಬಾರಿಸುತ್ತಿದ್ದ ಗಂಟೆಗಳು  ,ಮತ್ತೆ  ಆ ಕಟ್ಟಡ ಕುಸಿದು ಬಿದ್ದ ಹಿಂದಿನ  ಗಳಿಗೆಗಳು. ಗಾಢವಾದ ದುಃಖ ಮತ್ತೆ ಅವನ ಹೃದಯವನ್ನು ಆವರಿಸಿತು. ತಾನು ಮಾಡಿದ ಪ್ರಾರ್ಥನೆಗಾಗಿ ಈಗ ಅವನಿಗೆ ವಿಷಾಧ  ಅನ್ನಿಸಿತು.ಎಲ್ಲವನ್ನೂ ಆಳುವ ,ಮೋಡಗಳ ಮೇಲ್ಗಡೆ ಇರುವ ಆ ಶಕ್ತಿಯ ಬಗ್ಗೆ ಆತ  ಸಿಟ್ಟುಗೊಂಡ. ಅಲ್ಲಿ ನೆರೆದಿದ್ದ ಜನರೊಂದಿಗೆ ಅವನು ಬೆರೆಯಲು ಆರಂಭಿಸಿದ. ಅವರೆಲ್ಲ ತಮ್ಮ ಸೊತ್ತುಗಳನ್ನು ಸಂರಕ್ಷಿಸುತ್ತಾ  ಒಟ್ಟುಗೂಡಿಸುತ್ತಾ ,ನಗರದ ಗೇಟುಗಳಿಂದ  ಹೊರನುಸುಳುತ್ತಿದ್ದರು.ಎರೋನಿಮೋ ಅವರಲ್ಲಿ ಸಿಕ್ಕವರಲ್ಲೆಲ್ಲ  ಯೋಸೆಫಾಳ  ಬಗ್ಗೆ ವಿಚಾರಿಸುತ್ತಾ ಬಂದ. ‘ಅಸ್ತೆರೋನ್ ನ ಮಗಳಿಗೆ ಶಿಕ್ಷೆಯನ್ನು ಜ್ಯಾರಿ ಮಾಡಲಾಯಿತೇ ‘ ಎಂದು ಯಾರನ್ನು ಕೇಳಿದರೂ ಯಾರಿಂದಲೂ ಸರಿಯಾದ ಉತ್ತರ ಅವನಿಗೆ ದೊರೆಯಲಿಲ್ಲ. ಮನೆಯ ಸಾಮಾನುಗಳ ದೊಡ್ಡ ಹೊರೆಯೊಂದನ್ನು ತನ್ನ ಹೆಗಲಲ್ಲಿ ಹೊತ್ತುಕೊಂಡು , ಪೂರ್ಣವಾಗಿ ಬಾಗಿಹೋಗಿದ್ದ ಹೆಂಗುಸೊಬ್ಬಳು ಎರಡು ಮಕ್ಕಳನ್ನು ಎದೆಯಲ್ಲಿ ಅಪ್ಪಿಕೊಂಡು ಕಾಲು ಹಾಕುತ್ತಿದ್ದಳು.ಆಕೆ ಮುಂದೆ ಸಾಗುತ್ತಿದ್ದಂತೆಯೇ  ತಾನು ಸ್ವತಃ ಅಲ್ಲಿ ಹಾಜರಿದ್ದೆ ಎನ್ನುವಷ್ಟರ ಮಟ್ಟಿಗೆ ,ಯೋಸೆಫಾಳ ತಲೆ ಕಡಿಯಲಾಯಿತೆಂದು ಹೇಳಿದಳು.ಇದನ್ನು ಕೇಳುತ್ತಲೇ ಎರೋನಿಮೋ ಹಿಂದಕ್ಕೆ ತಿರುಗಿದ.ಅವಳ ಮರಣದಂಡನೆಯ ಶಿಕ್ಷೆಯ ಅವಧಿ ಮೀರಿರುವ ಕಾರಣ ಅದು ನಿಜವೆಂದೇ ಆತ ನಂಬಿದ.ಒಂದು ಒಂಟಿ ಮರದ ಕೆಳಗೆ ಕುಳಿತುಕೊಂಡು  ರೋದಿಸಲು  ತೊಡಗಿದ, ಅಲ್ಲೇ ಮೈಮರೆತ.  ಭೂಕಂಪದಂತಹ  ಪ್ರಕೃತಿಯ  ಸರ್ವನಾಶದ ಆಘಾತ ತನ್ನ ಮೇಲೆ ಇನ್ನೊಮ್ಮೆ ಎರಗಬಾರದೇ  ಎಂದು ಕನವರಿಸಿದ .ತಾನು ಯಾಕೆ ಸಾವಿನಿಂದ ತಪ್ಪಿಸಿಕೊಂಡೆ, ತನ್ನ ಹೀನ ಆತ್ಮ ಯಾಕೆ ಆರೀತಿ ಬದುಕುವ ಆಸೆ ಮಾಡಿದ್ದು ,ಅದೇ ಸಾವು ಈ ಕ್ಷಣದಲ್ಲಿ ಮೋಕ್ಷವನ್ನು ಕೊಡುತ್ತದೆ -ಹೀಗೆಲ್ಲ ಆತ ಯೋಚಿಸುತ್ತಾ ಹೋದ. ಈಗ ಅವನು ಗಟ್ಟಿ ನಿರ್ಧಾರ ಮಾಡಿದ -ಅಲ್ಲಿನ ಓಕ್ ಮರಗಳು ಬೇರು ಕಿತ್ತುಕೊಂಡು ತನ್ನ  ಮೈಮೇಲೆ ಬಿದ್ದರೂ ತಾನು ಅಲ್ಲಿಂದ ಕದಲುವುದಿಲ್ಲ ಎಂದು.ಮರು ಕ್ಷಣದಲ್ಲೇ ದುಃಖದ ಕಣ್ಣೀರಿನ ನಡುವೆಯೇ ಮತ್ತೆ ಅವನಲ್ಲಿ ಆಶಾಭಾವನೆ ಮೊಳೆಯಿತು.ಆತ  ಅಳುವುದನ್ನು ನಿಲ್ಲಿಸಿದ.ಮತ್ತೆ ಕಾಲು ಎಳೆಯುತ್ತಾ ಪ್ರತಿಯೊಂದು ದಿಕ್ಕಿನ ಮೂಲೆ ಮೂಲೆಗಳನ್ನು ಶೋಧಿಸಲು ಸುರುಮಾಡಿದ.ಜನರು ನೆರೆದಿದ್ದ ಪ್ರತಿಯೊಂದು ಬೆಟ್ಟದ ತುದಿಯನ್ನು ಏರಿ ಹುಡುಕಿದ.ದಾರಿಯುದ್ದಕ್ಕೂ  ನ್ಯಾಯಾಲಯದ ಶಿಕ್ಷೆಯಿಂದ ತಲೆ ತಪ್ಪಿಸಿಕೊಂಡ ಜನರ ಮೇಲೆ ಕಣ್ಣಿಡುತ್ತಾ  ಬಂದ. ಗಾಳಿಯಲ್ಲಿ ಹೆಣ್ಣಿನ  ಯಾವುದಾದರೂ   ಒಂದು ಬಟ್ಟೆ ಪರಪರ ಸದ್ದು ಮಾಡಿದರೆ ನಡುಗುತ್ತಾ ಆ ಕಡೆಗೆ ಓಡುತ್ತಿದ್ದ. ಆದರೆ ಅದು ಯಾವುದೂ ಆತನ  ನಲ್ಲೆ  ಯೋಸೆಫಾ ಉಟ್ಟ ವಸ್ತ್ರ ಆಗಿರಲಿಲ್ಲ.  ಸೂರ್ಯ ನಿದಾನವಾಗಿ ಮುಳುಗುತ್ತಿದ್ದ, ಅದೇ ರೀತಿ ಎರೋನಿಮೋ ನ ಆಸೆಗಳು ಕೂಡಾ. ಅವನು ಒಂದು ಶಿಖರದ ಬದಿಯಲ್ಲಿ ನಿಂತುಕೊಂಡು ,ವಿಶಾಲವಾದ ಕಣಿವೆಯ ಕಡೆಗೆ ಕಣ್ಣು ಹಾಯಿಸಿದಾಗ ,ಅಲ್ಲಿ ಕೆಲವೇ ಮಂದಿ ಗುಂಪು ಸೇರಿದ್ದು ಕಂಡುಬಂತು. ಏನು ಮಾಡುವುದೆಂದು ತೋಚದೆ ಒಂದು ಗುಂಪಿನಿಂದ ಇನ್ನೊಂದು ಗುಂಪಿನ ಕಡೆಗೆ ಅಲೆದಾಡತೊಡಗಿದ. ಯಾವ ಭರವಸೆಯ ಸುಳುಹೂ ಇಲ್ಲ ಎಂದಾದ ಮೇಲೆ ಇನ್ನೇನು ಹೊರಡಬೇಕು  ಎನ್ನುವಷ್ಟರಲ್ಲಿ ನೀರಿನ ಸಣ್ಣ ಝರಿಯಲ್ಲಿ  ಮಗುವನ್ನು ತೊಳೆಯುತ್ತಿದ್ದ ಯುವತಿಯೊಬ್ಬಳನ್ನು ಕಂಡ .ಆ ದೃಶ್ಯವನ್ನು ಕಂಡೊಡನೆಯೇ ಅವನ ಎದೆ ಜೋರಾಗಿ ಬಡಿದುಕೊಳ್ಳಲು ತೊಡಗಿತು. ಅವನು ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ‘ ಓ, ದೇವರ ಪವಿತ್ರ ತಾಯಿ ‘ ಎಂದು  ಮೊರೆಯಿಡುತ್ತಾ  ಕಣ್ಣರಳಿಸಿ ನೋಡುತ್ತಾನೆ -ಹೌದು ಅವನು  ಗುರುತಿಸಿದ , ಅದು ಯೋಸೆಫಾ. ಅವನು ಹತ್ತಿರ ಬರುತ್ತಲೇ ಅವಳು ನಾಚಿಕೊಂಡಳು. ದೈವಿಕ ಪವಾಡದಿಂದ ಬದುಕುಳಿದ ಆ ಪ್ರಿಯ ಜೋಡಿ ಒಟ್ಟಾದದ್ದು ಅಗಲಿಕೆಯು  ಆಲಿಂಗನದ ಮೂಲಕ .

ಸಾವಿನ ದಾರಿಯಲ್ಲಿ ಯೋಸೆಫಾ  ಮರಣದಂಡನೆಯ ಸ್ಥಳಕ್ಕೆ ತುಂಬಾ ಹತ್ತಿರ ಬಂದಿದ್ದಳು. ಆ ವೇಳೆಗೆ ಆಕಸ್ಮಿಕವಾಗಿ  ಕಟ್ಟಡಗಳು ಕುಸಿಯತೊಡಗಿದವು.ಅವಳನ್ನು ವಧಾಸ್ಥಾನಕ್ಕೆ ಒಯ್ಯುತ್ತಿದ್ದ ಮೆರವಣಿಗೆ ಚಲ್ಲಾಪಿಲ್ಲಿಯಾಯಿತು.ಗಾಬರಿಗೊಂಡ ಅವಳು ಆ ನೂಕಾಟದಲ್ಲಿ  ದೂಡಲ್ಪಟ್ಟದ್ದು ನಗರದ ಹತ್ತಿರದ ಗೇಟಿನ ಬಳಿಗೆ.ತತ್ಕ್ಷಣ ಪ್ರಜ್ಞಾ ಸ್ಥಿತಿಗೆ ಬಂದ ಆಕೆ ನೆನಪಿಸಿಕೊಳ್ಳುತ್ತಾಳೆ  ತನ್ನ ಮಗು ಕಾನ್ವೆಂಟಿನಲ್ಲಿ ಇದೆ ಎಂದು. ಆಕೆ ತನ್ನ ಅಸಹಾಯಕ ಮಗುವನ್ನು ಹುಡುಕಲು ಕಾನ್ವೆಂಟಿಗೆ ಓಡುತ್ತಾಳೆ.ಅಲ್ಲಿ ಹೋಗಿ ನೋಡಿದರೆ ಇಡೀ ಕಾನ್ವೆಂಟ್  ಬೆಂಕಿಯಲ್ಲಿ ದಗದಗಿಸುತ್ತಿದೆ.

ಈ ದೃಶ್ಯವನ್ನು ಕಾಣುತ್ತಲೇ ತಲೆ ಸುತ್ತಿದಂತಾಗಿ  ಯೋಸೆಫಾ ಬೀದಿಯ ಮೂಲೆಯೊಂದರಲ್ಲಿ  ಮೂರ್ಛೆಹೋಗುವಂತಾದಳು . ಆ ಕ್ಷಣದಲ್ಲೇ  ಸಡಿಲವಾಗಿದ್ದ ತಳಪಾಯದ ಕಟ್ಟಡವು ಅವಳ ಹಿಂದಿನಿಂದಲೇ ಪುಡಿಪುಡಿಯಾಗಿ  ಕೆಳಕ್ಕೆ ಬಿತ್ತು. ಅದು ನೆಲಕ್ಕೆ ಅಪ್ಪಳಿಸುವ ರಭಸಕ್ಕೆ  ಆಕೆ ಕಕ್ಕಾಬಿಕ್ಕಿಯಾಗಿ ಹೊರಕ್ಕೆ ತಳ್ಳಲ್ಪಟ್ಟಳು . ತನ್ನ ಮಗುವಿನ ಮುಖ ನೋಡುತ್ತಲೇ ಅದಕ್ಕೆ ಮುತ್ತಿಟ್ಟು ಕಣ್ಣೀರನ್ನು  ಒರಸಿಕೊಂಡಳು. ತನ್ನ ಸುತ್ತುಮುತ್ತಲಿನ ಘೋರ ದೃಶ್ಯಗಳನ್ನು ನಿರ್ಲಕ್ಷಿಸಿ  ನಗರದ ಹೆಬ್ಬಾಗಿಲಿನ ಬಳಿಗೆ ಬಂದಳು. ಹೊರಗೆ ಬಂದು ಬಯಲಿನಲ್ಲಿ ನಿಂತು ನೋಡಿದಾಗ ,ಆಗ ತಾನೇ ಕವಚಿ ಬಿದ್ದ ಆ ಬೃಹತ್ ಕಟ್ಟಡದ ಒಳಗೆ ಉಳಿದ ಎಲ್ಲರೂ ಅಲ್ಲೇ ಕೊನೆಯುಸಿರೆಳೆದಿದ್ದಾರೆ  ಎಂದು ಗ್ರಹಿಸಲು ಅವಳಿಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ.

ಮಗುವನ್ನು ಎತ್ತಿಕೊಂಡು ಮುಂದೆ ಸಾಗಿ ಬೀದಿಗಳ ಕೂಡುಸ್ಥಳಕ್ಕೆ ಬಂದಾಗ ,ತನ್ನ ಪ್ರಿಯತಮ ಅಲ್ಲೆಲ್ಲಾದರೂ ಕಾಣಿಸಿಕೊಳ್ಳಬಹುದೇ ಎಂದು ಕಾತರದಿಂದ ಕಾದಳು ಯೋಸೆಫಾ. ಜನಸಾಗರ ಹೆಚ್ಚುತ್ತಾ ಮುಂದೆ ಮುಂದೆ ನುಗ್ಗಿದಂತೆ ,ಆಕೆಯೂ ಮುಂದಕ್ಕೆ ಮುಂದಕ್ಕೆ ಕಾಲೆಳೆಯುತ್ತಾ  ,ಮತ್ತೆ ಮತ್ತೆ ಹಿಂದಕ್ಕೆ ತಿರುಗಿ ತಿರುಗಿ ನೋಡುತ್ತಾ ,ಆತನಿಗಾಗಿ ಕಾಯುತ್ತಾ , ಕಣ್ಣೀರು ಸುರಿಸುತ್ತಾ , ಗತಿಸಿಹೋಗಿರಬಹುದಾದ ಆತನ  ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಲು ಕಣಿವೆಯೊಂದಕ್ಕೆ ಜಾರಿದಳು. ಆ ಕಣಿವೆಯಲ್ಲೇ  ಆಕೆ ಕಂಡದ್ದು ಅವಳ ಪ್ರಿಯತಮನನ್ನು ಎರೋನಿಮೋ ನನ್ನು.ಅವಳ ಪಾಲಿಗೆ ಆಗ ಆ ಕಣಿವೆಯೇ  ಈಡನ್ ತೋಟವಾಗಿತ್ತು. ತಲ್ಲಣ ಸಂಭ್ರಮಗಳ ಗದ್ಗದ ಕಂಠದಲ್ಲೇ  ಎರೋನಿಮೋ ನಿಗೆ ಸಕಲ ವೃತ್ತಾಂತವನ್ನು ಬಿತ್ತರಿಸಿದಳು  ಯೋಸೆಫಾ. ತಂದೆಯಾಗಿ ಮೊದಲಬಾರಿ ಮಗುವನ್ನು ಎತ್ತಿಕೊಂಡವನೇ  ಅದನ್ನು ಅತ್ಯುತ್ಸಾಹದಿಂದ ಅಪ್ಪಿಕೊಂಡನು ಎರೋನಿಮೋ.ಆತನ  ಅಪರಿಚಿತ  ಮುಖವನ್ನು ಕಂಡು ಅದು ಅಳತೊಡಗಿದಾಗ ಆತ ಅದರ ಮೈ ಮೇಲೆಲ್ಲಾ  ಮುತ್ತುಗಳ ಮಳೆಯನ್ನೇ ಕರೆದು ಅದು ಶಾಂತವಾಗುವಂತೆ  ಮಾಡಿದ.

ಅದೊಂದು ಪ್ರಶಾಂತವಾದ ಪರಿಸರ.ಆ ಹೊಳೆಯ ದಂಡೆಯಲ್ಲಿ ಹೊಳೆಯುವ  ಬೆಳದಿಂಗಳಲ್ಲಿ ನಿರಾಶ್ರಿತ ಜನ ಬಂದು ಬಂದು ಸೇರುತ್ತಿದ್ದರು. ಆ ಭಯಾನಕ ದಿನದ ಸಂಕಷ್ಟದ ಸರಮಾಲೆಯ ಬಳಿಕ ಹಾವಸೆ ಮತ್ತು ಎಲೆಗಳ ಗೊಂಚಲಿನ ಮೃದು ಹಾಸಿಗೆಗಳನ್ನು ಸಿದ್ಧಪಡಿಸುತ್ತಿದ್ದರು. ಒಬ್ಬೊಬ್ಬರೂ ತಮ್ಮ ತಮ್ಮ ಒಂದೊಂದು ವಿಧದ ಸಂಕಷ್ಟಗಳಿಗಾಗಿ ಗೋಳಿಡುತ್ತಿದ್ದರು. ಮನೆಯನ್ನು ಕಳೆದುಕೊಂಡವನೊಬ್ಬ , ಹೆಂಡತಿ ಮತ್ತು ಮಗುವನ್ನು ಕಳೆದುಕೊಂಡವ ಇನ್ನೊಬ್ಬ,  ತನ್ನ ಸರ್ವಸ್ವವನ್ನು ಕಳೆದುಕೊಂಡವ ಮತ್ತೊಬ್ಬ – ಹೀಗೆ ಗೋಳಾಟದ  ಆ ಆವರಣದಿಂದ  ಎರೋನಿಮಾ ಮತ್ತು ಯೋಸೆಫಾ ಮೆಲ್ಲನೆ ಆಚೆ ಕಡೆಗೆ ಚಲಿಸಿದರು. ಅಲ್ಲೊಂದು ದಾಳಿಂಬೆ ಮರ .ಅದರ ರೆಂಬೆ ಕೊಂಬೆಗಳಲ್ಲಿ  ಸುವಾಸನೆ ಭರಿತ ಹಣ್ಣುಗಳು ತೊನೆದಾಡುತ್ತಿದ್ದುವು. ಮರದ ತುತ್ತ ತುದಿಯಲ್ಲಿ ಬುಲ್ ಬುಲ್  ಹಕ್ಕಿಯೊಂದು ಇಂಪಾದ ಹಾಡನ್ನು ಹಾಡುತ್ತಿತ್ತು. ಎರೋನಿಮೋ ಆ ದಾಳಿಂಬೆ ಮರದ ಕೆಳಗೆ ಕಾಲು ಚಾಚಿದ.ಅವನ ತೊಡೆಯ ಮೇಲೆ ಯೋಸೆಫಾ, ಅವಳ ಮಡಿಲಲ್ಲಿ ಆ ಹಸುಳೆ ಫೆಲಿಪೆ ವಿಶ್ರಾಂತಿ ಪಡೆದರು. ಅವರೆಲ್ಲರ ಮೇಲೆ ಆ ಮರದ ನೆರಳು ಚಾಚಿಕೊಂಡಿತು.ಅವರು ನಿದ್ರಿಸುವ ಮೊದಲೇ ಚಂದ್ರ ತನ್ನ ಕಾಂತಿಯನ್ನು ಕುಗ್ಗಿಸಿದ. ಆದರೆ ಅವರಿಬ್ಬರ ಮಾತುಕತೆಯ ಓಟಕ್ಕೆ ಕೊನೆಯೇ ಇರಲಿಲ್ಲ- ಕಾನ್ವೆಂಟಿನ ತೋಟ ,ಜೈಲು ,ಅವನು ಅನುಭವಿಸಿದ ಸಂಕಷ್ಟಗಳು ……

ಭೂಕಂಪದ ಕಂಪನಗಳು ನಿಂತ ಬಳಿಕ ಅವರು ಲಾ ಕಾನ್ಸೆಪ್ಸಿಯೋನ್ ಗೆ ಹೋಗುವುದು ಎಂದು ನಿರ್ಧರಿಸಿದರು.ಅಲ್ಲಿ ಯೋಸೆಫಾಳ ಆತ್ಮೀಯ ಗೆಳತಿ ಇದ್ದಳು. ಅವಳಿಂದ ಸ್ವಲ್ಪ ಸಾಲ ಪಡೆದು, ಅಲ್ಲಿಂದ  ಸ್ಪೇನ್ ಗೆ ಹೋಗಿ ,ಅಲ್ಲೇ ತಮ್ಮ ಬದುಕಿನ ಕೊನೆಯ ವರೆಗೆ ವಾಸಿಸುವುದು ಎಂದು ನಿರ್ಧಾರ ಮಾಡಿದರು.ಹೀಗೆ ಮಾತಾಡುತ್ತಾ ಮಾತಾಡುತ್ತಾ ಕೊನೆಗೂ ಅವರಿಬ್ಬರೂ ನಿದ್ದೆ ಹೋದರು.

ಅವರಿಗೆ ಎಚ್ಚರವಾದಾಗ ಸೂರ್ಯ ಆಕಾಶದಲ್ಲಿ ಆಗಲೇ ಮೇಲೇರಿದ್ದ. ಸುತ್ತುಮುತ್ತೆಲ್ಲ ಅನೇಕ ನಿರಾಶ್ರಿತ ಕುಟುಂಬದವರು ಬೆಂಕಿ ಕಾಯಿಸಿ ಬೆಳಗ್ಗಿನ ತಿಂಡಿ ಮಾಡುವ  ಸಿದ್ಧತೆಯಲ್ಲಿ ಇದ್ದಾರೆ. ತಮ್ಮ ಕುಟುಂಬಕ್ಕೆ ತಿನ್ನಲು ಏನಾದರೂ ಹೇಗೆ ಪಡೆಯುವುದು ಎಂಬ ಚಿಂತೆಯಲ್ಲಿ ಇರುವಾಗಲೇ ಎರೋನಿಮೋ ಯೋಸೆಫಾ ಬಳಿಗೆ ಒಬ್ಬ ಯುವಕ ಬಂದ. ಆತನ ತೋಳಿನಲ್ಲಿ ಒಂದು ಪುಟ್ಟ ಮಗು. ಆ ಮಗುವನ್ನು ನೀವು ಸ್ವಲ್ಪ ಹೊತ್ತು ನೋಡಿ ಕೊಳ್ಳಬಹುದೇ ಎಂದು ಆ ಯುವಕ ಯೋಸೆಫಾ ಳಲ್ಲಿ ಕೇಳಿದ. ಆ ಮಗುವಿನ ತಾಯಿ ಗಾಯಗೊಂಡು ಮರದ ಕೆಳಗೆ ಮಲಗಿದ್ದಳು. ತನ್ನನ್ನು ಆ ಯುವಕ ಗುರುತಿಸಿದ್ದನ್ನು ಕಂಡು ಯೋಸೆಫಾ ನಿರಾಸಕ್ತಿ ತಾಳಿದಳು. ಆತ ಮತ್ತೆ  ಕೇಳಿಕೊಂಡ : ” ಸ್ವಲ್ಪ ಹೊತ್ತು ಮಾತ್ರ. ಯೋಸೆಫಾ, ಈ ದುರಂತ ಆದ ಬಳಿಕ ಮಗುವಿಗೆ ತಿನ್ನಲು ಏನೂ ಕೊಟ್ಟಿಲ್ಲ. ” ಯೋಸೆಫಾ ಒಪ್ಪಿಕೊಂಡಳು. ಆಕೆ ತನ್ನ ಮಗುವನ್ನು ಆ ಯುವಕನ ಕೈಗೆ ಕೊಟ್ಟು , ಆ ಅಪರಿಚಿತ ಮಗುವನ್ನು ಎತ್ತಿಕೊಂಡು ಎದೆಗೆ ಆನಿಸಿಕೊಂಡು ಮೊಲೆಯೂಡಿಸಿದಳು. ಆ ಯುವಕ ಡಾನ್ ಫೆರ್ನಂದೋ  ಅವಳ ಮಮತೆಗೆ ಧನ್ಯವಾದ ಹೇಳುತ್ತಾ ಅವರನ್ನು ತಾನು ತಯಾರಿಸಿದ ಬೆಳೆಗ್ಗಿನ ತಿಂಡಿಗೆ  ಆಹ್ವಾನಿಸಿದ. ಎರೋನಿಮೋ ಯೋಸೆಫಾ ಆ ಗುಂಪಿನೊಂದಿಗೆ ಸೇರಿಕೊಂಡರು.

ಡಾನ್ ಫೆರ್ನಂದೋ ನ ಹೆಂಡತಿ ಡಾನ್ ಎಲ್ವಿರ ಕಾಲಿಗೆಲ್ಲ ಗಾಯಗಳಾಗಿ ನೆಲದಲ್ಲಿ ಮಲಗಿಕೊಂಡಿದ್ದಳು. ತನ್ನ ಪುಟ್ಟ ಮಗುವನ್ನು ಯೋಸೆಫಾಳ ಎದೆಯಲ್ಲಿ ಕಂಡವಳೇ ಅವರನ್ನು ಪ್ರ್ರೀತಿಯಿಂದ ಬರಮಾಡಿಕೊಂಡಳು. ಎಲ್ವಿರ ಳ ತಂದೆ ಡಾನ್ ಪೆದ್ರೊ ನಿಗೆ ಹೆಗಲಲ್ಲಿ ಸಾಕಷ್ಟು ಗಾಯಗಳಾಗಿ ಇದ್ದು ,ಆತ  ಅವಳ ಕಡೆಗೆ ತಿರುಗಿ ಅಕ್ಕರೆಯಿಂದ ತಲೆಯಲ್ಲಾಡಿಸಿದ.

ಎರೋನಿಮೋ ಮತ್ತು ಯೋಸೆಫಾ ಅವರ ಮನಸ್ಸಿನಲ್ಲಿ ವಿಚಿತ್ರ ಯೋಚನೆಗಳು ಸುತ್ತಿ ಸುಳಿಯಲಾರಂಭಿಸಿದವು. ಇಲ್ಲಿ ತಮಗೆ ದೊರೆತ ಪ್ರೀತಿ, ಕರುಣೆ ಮತ್ತು ಆತ್ಮೀಯತೆಗಳನ್ನು ಕಂಡಾಗ ಹಿಂದಿನ ಘೋರ ಅನುಭವಗಳನ್ನು ಹೇಗೆ ಗ್ರಹಿಸಬೇಕೆಂದು ಅವರಿಗೆ ತೋಚಲಿಲ್ಲ. ಕಠಿಣ ಶಿಕ್ಷೆಗೆ ಒಳಗಾದ ಆ ಸ್ಥಳ, ಆ ಜೈಲು, ಅಲ್ಲಿನ ಗಂಟೆಗಳು – ಇವೆಲ್ಲ ಕನಸುಗಳಂತೆ ಅವರಿಗೆ ಕಾಣಿಸತೊಡಗಿದವು. ಆ ಭೂಕಂಪ ಭೂಮಿಯನ್ನು ಒಡೆದು ಜನರನ್ನು ಒಂದುಗೂಡಿಸುತ್ತಿತ್ತು .ಅವರ ನೆನಪುಗಳು  ಎಷ್ಟೇ ಹಿಂದಕ್ಕೆ ಓಡಿದರೂ ಅವು ಮತ್ತೆ ಮತ್ತೆ ಬಂದು ನಿಲ್ಲುತ್ತಿದ್ದದ್ದು ಭೂಕಂಪದ ಬುಡದಲ್ಲೇ. ಭೂಕಂಪದ ಮೊದಲ ಕಂಪನದ ಬಳಿಕ ಆ ಕಟ್ಟಡದಲ್ಲಿ ನಡೆದ ಘಟನೆಗಳ ಕುರಿತು ಅನೇಕ ಕತೆಗಳು ಹರಿದಾಡಿದವು. ಸಾರ್ವಜನಿಕವಾಗಿ ಗಂಡುಸರ ಎದುರೇ   ಗರ್ಭಿಣಿ ಹೆಂಗುಸರು ಮಕ್ಕಳನ್ನು ಹೆತ್ತದ್ದು , ಶಿಲುಬೆಯನ್ನು ಕೈಯಲ್ಲಿ ಹಿಡಿದುಕೊಂಡ ಪಾದ್ರಿಗಳು ಹಿಂದೆ ಮುಂದೆ ಓಡುತ್ತಾ ಜಗತ್ತಿನ ಕೊನೆಯಾಯಿತೆಂದು ಕೂಗಿಕೊಂಡದ್ದು, ವೈಸರಾಯಿಯ ಕಾವಲುಗಾರನು ಚರ್ಚಿನಲ್ಲಿ ಇದ್ದ ಜನರನ್ನು ಹೊರಗಟ್ಟುತ್ತಿದ್ದವನಿಗೆ  ಇನ್ನು ಮುಂದೆ ಅಲ್ಲಿ ವೈಸರಾಯಿಯೇ ಇಲ್ಲ ಎಂಬ ಭಯಾನಕ ಸತ್ಯ ಗೊತ್ತಾದದ್ದು, ಭೂಕಂಪದ ಅತ್ಯಂತ ದುರ್ಬರ ಕ್ಷಣದಲ್ಲಿಯೂ ಕೊಳ್ಳೆ ಹೊಡೆಯುವವರನ್ನು ತಡೆಯುವುದಕ್ಕಾಗಿ ವೈಸರಾಯಿಯು ನೇಣುಗಂಭವನ್ನು ನೆಟ್ಟದ್ದು, ಉರಿಯುತ್ತಿದ್ದ ಮನೆಯೊಂದರ ಹಿಂಬಾಗಿಲಿಂದ ತಪ್ಪಿಸಿಕೊಂಡು ಓಡುತ್ತಿದ್ದ ಮುಗ್ಧನೊಬ್ಬನನ್ನು ಅತ್ಯಾಸೆಯ ಮನೆಯೊಡೆಯನೊಬ್ಬನು ಕಟ್ಟಿಹಾಕಿದ್ದು  ….ಹೀಗೆ ಎಷ್ಟೋ  ಎಷ್ಟೋ ಕತೆಗಳು.

ಎಲ್ವಿರಾಳ ಗಾಯಗಳಿಗೆ ಯೋಸೆಫಾ ಆರೈಕೆ ಮಾಡುತ್ತಿದ್ದಾಗ ಈ ಎಲ್ಲ ಕತೆಗಳನ್ನು ಕಾತರ ಉದ್ವೇಗದಿಂದ  ಹೇಳಲಾಯಿತು. ಆ ಭಯಾನಕ ದಿನವನ್ನು ತಾನು ಹೇಗೆ ಕಳೆದೆ ಎಂದು ಯೋಸೆಫಾ ಹೇಳುತ್ತಿದ್ದಂತೆಯೇ ಆ ಹೆಂಗುಸಿನ ಕಣ್ಣಲ್ಲಿ ನೀರು ತುಂಬಿ ಬಂತು. ಆಕೆ ಯೋಸೆಫಾಳ ಕೈಯನ್ನು ಗಟ್ಟಿಯಾಗಿ ಅದುಮಿಕೊಂಡು ಹಿಡಿದು ಒಂದು ಕ್ಷಣ ಮೌನವಾದಳು. ಹಿಂದಿನ ದಿನದ ಸಂಗತಿಗಳು ವಿಚಿತ್ರ ಭಾವನೆಗಳಾಗಿ ಯೋಸೆಫಾಳ ಮನಸ್ಸನ್ನು  ಸಂಪೂರ್ಣವಾಗಿ ಆವರಿಸಿದ್ದುವು. ಜಗತ್ತಿನ ಎಲ್ಲ ದುಷ್ಟ ಮತ್ತು ಕೆಡುಕಿನ ಶಕ್ತಿಗಳ ನಡುವೆಯೂ  ಲೌಕಿಕ ಸಂಪತ್ತು ನಾಶವಾಗುತ್ತಿದ್ದರೂ ಮನುಷ್ಯರ ಹೃದಯದ ಅಪೂರ್ವ ಶಕ್ತಿಯೊಂದು ಸುಂದರವಾದ ಹೂವುಗಳಂತೆ ಅರಳುತ್ತಿರುತ್ತದೆ. ರಾಜರು ಮತ್ತು ಭಿಕ್ಷುಕರು, ಶ್ರೀಮಂತ ಮಹಿಳೆಯರು ಮತ್ತು ರೈತರ ಹೆಣ್ಣುಮಕ್ಕಳು, ಸರಕಾರೀ ಅಧಿಕಾರಿಗಳು ಮತ್ತು ಕಾರ್ಮಿಕರು ,ಪಾದ್ರಿಗಳು ಮತ್ತು ನನ್ ಗಳು -ಎಲ್ಲರೂ ಒಬ್ಬರು ಇನ್ನೊಬ್ಬರ ಬಗ್ಗೆ ಕರುಣೆ ತೋರುತ್ತಾ ,ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುತ್ತಾ ,ತಾವು ಉಳಿಸಿದ್ದನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳುತ್ತಾ ಇದ್ದ ಅಸಂಭಾವ್ಯ ವಿದ್ಯಮಾನಗಳು  -ಭೂಕಂಪದಂತಹ ಒಂದು ಅನಾಹುತವು ಬದುಕಿ ಉಳಿದವರೆಲ್ಲರನ್ನು ಒಂದೇ ಕುಟುಂಬದಂತೆ ಒಂದುಗೂಡಿಸಿದ ಕತೆಗಳು ನೂರಾರು ಅಲ್ಲೆಲ್ಲ ಹರಡಿದ್ದುವು.

ಎಲ್ಲರೂ ತಾವು ಬದುಕಿ ಉಳಿದ ಸಾಹಸದ ಗಾಥೆಗಳನ್ನು ಹೇಳುತ್ತಿದ್ದಾಗ ಸಮಾಜದಲ್ಲಿ ಆವರೆಗೆ ಗಮನಕ್ಕೆ ಬಾರದ ವ್ಯಕ್ತಿಗಳು ಅಚಾನಕ್ ಆಗಿ ರೋಮ್  ಇತಿಹಾಸದ ಸಾಹಸದ ಯೋಧರಂತೆ ಕಾಣಿಸಿಕೊಂಡಿದ್ದರು. ಭಯದ ಸೋಂಕಿಲ್ಲದ ನಿದರ್ಶನಗಳು, ಅಪಾಯವನ್ನು ಲೆಕ್ಕಿಸದ ಧೈರ್ಯದ ಪ್ರಸಂಗಗಳು, ಸ್ವಾರ್ಥರಹಿತ  ಸಂತ ಪ್ರವೃತ್ತಿಯ ಬಲಿದಾನ, ಎಡರುತೊಡರುಗಳನ್ನು ಲೆಕ್ಕಿಸದೆ ಬದುಕನ್ನು ಪಣವಾಗಿಡುವುದು – ಇವೆಲ್ಲವನ್ನೂ ಕಣ್ಣು ಮಿಟುಕಿಸುವಷ್ಟರಲ್ಲಿ ಆಗುಮಾಡುವ ಸಾಮರ್ಥ್ಯದ ಕಥನಗಳು. ಅಲ್ಲಿ ಸೇರಿದ್ದ ಪ್ರತಿಯೊಬ್ಬರೂ ಇಂತಹ ಸಾಹಸಗಾಥೆಯಲ್ಲಿ ಪಾಲುಗೊಂಡು ಬದುಕಿ ಉಳಿದುಬಂದವರು ಆದ ಕಾರಣ ಅವರೆಲ್ಲರ  ಹೃದಯಗಳಲ್ಲಿ ನೋವು ಮತ್ತು ಸಂತಸಗಳ ಭಾವಗಳ ಅಪೂರ್ವ ಬೆಸುಗೆ ಇತ್ತು . ದುರಂತದ ಗರ್ಭದ ಒಳಗಿನಿಂದಲೇ ಮಾನವೀಯತೆಯ ಶಿಶುವಿನ ಹುಟ್ಟು!

ಹೀಗೆ ಮೌನವಾಗಿಯೇ ಎಲ್ಲವನ್ನೂ ಮೆಲುಕುಹಾಕುತ್ತ  ಎರೋನಿಮೋ , ಯೋಸೆಫಾಳ ತೋಳನ್ನು ಹಿಡಿದುಕೊಂಡು ದಾಳಿಂಬೆ ಮರದ ನೆರಳಿಗೆ ಬಂದ. ಸದ್ಯದ  ಮನಸ್ಥಿತಿಯಲ್ಲಿ ಯುರೋಪಿಗೆ ಪ್ರಯಾಣಮಾಡುವ ಮನಸ್ಸಿಲ್ಲ ಎಂದು ಆಕೆಯಲ್ಲಿ ಹೇಳಿದ. ವೈಸರಾಯಿ ಬದುಕಿ ಉಳಿದಿದ್ದರೆ ಆತನಲ್ಲಿ ಮನವಿಮಾಡಿಕೊಂಡು ,ಅವಳೊಂದಿಗೆ ಚಿಲಿಯಲ್ಲಿಯೇ ಉಳಿಯುವ ತನ್ನ ಅಭಿಲಾಷೆಯನ್ನು ತೋಡಿಕೊಂಡ. ತನ್ನದೂ ಅದೇ ಬಯಕೆ ಎಂದಳು ಯೋಸೆಫಾ. ತನ್ನ ತಂದೆ ಬದುಕಿ ಉಳಿದಿದ್ದರೆ ಆತನನ್ನು ತಾನು ಸಮಾಧಾನ ಪಡಿಸಬಲ್ಲೆ ಎಂದಳು ಯೋಸೆಫಾ. ವೈಸರಾಯಿಗೆ ತಪ್ಪೊಪ್ಪಿಗೆ ಪತ್ರ ಬರೆದು ,ಶಿಕ್ಷೆಯಿಂದ ಪಾರಾಗುವ ಪ್ರಯತ್ನ ಮಾಡೋಣ ಎಂದಳು.

ಅಷ್ಟು ಹೊತ್ತಿಗಾಗಲೇ ಅಪರಾಹ್ನವಾಗಿತ್ತು. ಭೂಕಂಪದ ಕಂಪನಗಳು ಕೊನೆಗೂ ಸಂಪೂರ್ಣ ಸ್ಥಬ್ಧವಾದುವು. ಅಲೆದಾಡುತ್ತಿದ್ದ ನಿರಾಶ್ರಿತ ಜನರು ಶಾಂತವಾಗುತ್ತಾ ಬಂದರು. ಆ ವೇಳೆಗೆ ಒಂದು ವಿಶೇಷ ಸುದ್ದಿ ಅಲ್ಲಿಗೆ ಬಂದು ತಲಪಿತು. ಆ ಭೂಕಂಪದಲ್ಲಿ ನಾಶವಾಗದೇ ಉಳಿದ ಒಂದೇ ಒಂದು ಚರ್ಚ್ ,ಡೊಮಿನಿಕನ್ ಚರ್ಚಿನಲ್ಲಿ ವಿಧ್ಯುಕ್ತ ಶಾಂತಿ ಪ್ರಾರ್ಥನೆ ನಡೆಯುತ್ತದೆ ಎಂದು. ಇಂತಹ ಭೂಕಂಪದಂತಹ ಅನಾಹುತಗಳು ಮುಂದೆ ನಡೆಯದಂತೆ ಸಾಮೂಹಿಕ ಪ್ರಾರ್ಥನೆ ಎಂದು.

ನಿರಾಶ್ರಿತ ಜನರು  ಎಲ್ಲ ದಿಕ್ಕುಗಳಿಂದಲೂ ನಗರದ ಕಡೆಗೆ ಹರಿದು ಬರುತ್ತಿದ್ದರು. ಡಾನ್ ಫೆರ್ನಂದೋ ಗುಂಪಿನವರು ಎರೋನಿಮೋ ಯೋಸೆಫಾರಲ್ಲಿ ಕೇಳಿದರು: ” ನೀವೂ ಯಾಕೆ ಆ ಶಾಂತಿ ಆಚರಣೆ ಮತ್ತು ಮೆರವಣಿಗೆಯಲ್ಲಿ  ಸೇರಬಾರದು” ಎಂದು . ಎಲ್ವಿರ ,ಫೆರ್ನಂದೊನಲ್ಲಿ  ಆತನು ಆ ಗುಂಪನ್ನು ಮುನ್ನಡೆಸಲು ಹೇಳಿದಳು. ಯೋಸೆಫಾ ಅವರ ಪುಟ್ಟ ಮಗುವನ್ನು ಎತ್ತಿಕೊಂಡಳು. ಎರೋನಿಮೋ ತಮ್ಮ ಮಗು ಫೆಲಿಪೆಯನ್ನು ಹೊತ್ತುಕೊಂಡ .ಇನ್ನು ಅನೇಕರು ಆ ಗುಂಪನ್ನು ಸೇರಿಕೊಂಡರು. ನಿರಾಶ್ರಿತರ ಈ ಗುಂಪಿನ  ಮೆರವಣಿಗೆ ನಗರದ ಕಡೆಗೆ ಸಾಗಿತು.

ಡೊಮಿನಿಕನ್  ಚರ್ಚಿಗೆ ಇವರು ಬಂದಾಗ ದೊಡ್ಡ ಜನಸಂದಣಿ  ಅಲ್ಲಿ ನೆರೆದಿತ್ತು. ವಾದ್ಯ ಮೊಳಗುತ್ತಿತ್ತು. ಕ್ಯಾಂಡಲ್ ಗಳು  ಉರಿಯುತ್ತಿದ್ದುವು. ಎಲ್ಲೆಡೆಯೂ ಪ್ರಶಾಂತ ಮೌನ  ಆವರಿಸಿತ್ತು. ಪ್ರಾರ್ಥನೆಯ ಕಾರ್ಯಕ್ರಮ ಆರಂಭವಾಯಿತು. ಪಾದ್ರಿಯೊಬ್ಬ ವೇದಿಕೆಗೆ ಬಂದು ,ದೇವರ ದಯದಿಂದ ತಾವೆಲ್ಲ ಬದುಕಿ ಉಳಿದ ಬಗ್ಗೆ ಕೃತಜ್ಞತೆಯ ನುಡಿಗಳನ್ನು ಹೇಳಿದ. ದೇವರ ಆಣತಿಯಿಂದಲೇ ಇಂತಹ  ಅವಘಡ ಸಂಭವಿಸಿದ ಬಗ್ಗೆ  ಸಂದೇಶ ಬಿತ್ತರಿಸಿದ. ಚರ್ಚಿನ ಗೋಡೆಯಲ್ಲಿರುವ ಬಿರುಕೊಂದನ್ನು ತೋರಿಸಿ ,ಅದು ಆ ಭಯಾನಕ ದಿನದ ಬಳಿಕದ ಶಾಂತಿಯ ಮುನ್ಸೂಚನೆ ಎಂಬ ಭವಿಷ್ಯ ವಾಣಿ ನುಡಿದ. ದೇವರ ದಯೆಯಿಂದಾಗಿಯೇ  ಇಡೀ ನಗರ ಸಂಪೂರ್ಣವಾಗಿ ನಾಶವಾಗಲಿಲ್ಲ ಎಂದು ಸಾರಿದ. ಮುಂದುವರಿಸುತ್ತಾ ಆತ ಕಾರ್ಮೆಲೈತ್ ಕಾನ್ವೆಂಟಿನ ತೋಟದಲ್ಲಿ ನಡೆದ  ಘಟನೆಯನ್ನು ನೆನಪುಮಾಡಿಕೊಂಡು  ಆ ಇಬ್ಬರು ಪಾಪಿಗಳ ಆತ್ಮಗಳು ನರಕಕ್ಕೆ ಹೋಗಿವೆ ಎಂಬ ತೀರ್ಮಾನವನ್ನು ಹೇಳಿದ. ಈ ಮಾತನ್ನು ಕೇಳುತ್ತಲೇ ಡಾನ್ ಫೆರ್ನಂದೋ ಅಲ್ಲಿಂದ ತಪ್ಪಿಸಿಕೊಂಡು ಹೋಗುವ ಉಪಾಯ ಯೋಚಿಸಿದ. ಅದನ್ನು ಕಾರ್ಯರೂಪಕ್ಕೆ ತರುವ ಮೊದಲೇ ಪಾದ್ರಿಯ ಪ್ರವಚನವನ್ನು ಮಧ್ಯದಲ್ಲೇ ತಡೆದು ಧ್ವನಿಯೊಂದು ಕೂಗಿ ಹೇಳಿತು : ” ಸಾಂತಿಯಗೋದ ನಾಗರಿಕರೇ, ಅಲ್ಲೇ ನಿಲ್ಲಿರಿ. ಇಲ್ಲಿ ಇದ್ದಾರೆ ಆ ದೇವರಿಲ್ಲದ ಇಬ್ಬರು ಪಾಪಿಗಳು.” ಆ ಜನಸಂದಣಿ ಬೆಚ್ಚಿ ಬೀಳುವಷ್ಟರಲ್ಲಿಯೇ ಇನ್ನೊಂದು ಕ್ರೂರ ಧ್ವನಿ ಕೇಳಿತು,” ಎಲ್ಲಿ?” ಮೂರನೆಯ ವ್ಯಕ್ತಿಯೊಬ್ಬ ಹೇಳಿದ ,” ಇಲ್ಲಿ!”

ಆ ವ್ಯಕ್ತಿ ನೀಚತನ  ಮತ್ತು ಬರ್ಬರತೆಯಿಂದ  ಯೋಸೆಫಾಳ ತಲೆಕೂದಲನ್ನು ಹಿಡಿದು ಎಳೆಯುವಾಗ ಅವಳ ಕೈಯಲ್ಲಿದ್ದ  ಡಾನ್ ಫೆರ್ನಂದೋ ನ ಮಗು ನೆಲಕ್ಕೆ ಬೀಳುವುದರಲ್ಲಿ ಇತ್ತು. ” ನೀನೇನು  ಹುಚ್ಚನೇ ? ನಾನು ನಿಮಗೆಲ್ಲ ಪರಿಚಯದ  ಈ ನಗರದ ಕಮಾಂಡೆಂಟ್ ನ ಮಗ ಡಾನ್ ಫೆರ್ನಾಂಡೊ .” ಎಂದು ಹೇಳುತ್ತಾ ಯೋಸೆಫಾಳನ್ನು ಬಳಸಿಕೊಂಡು ನಿಂತನು ಡಾನ್ ಫೆರ್ನಂದೋ . ಆ ವೇಳೆಗೆ ಅಲ್ಲಿಗೆ ಬಂದ ಒಬ್ಬ ಸಮಗಾರ  ಕಿರಿಚಿಕೊಂಡ,” ಈ ಮಗುವಿನ ತಂದೆ ಯಾರು ? ” ಆ ಸಮಗಾರನಿಗೆ ಯೋಸೆಫಾಳ ಪರಿಚಯವಿತ್ತು. ಸಮಗಾರನಾಗಿ ಆತ ಅವಳ ಪಾದಗಳನ್ನು ಗುರುತಿಸಬಲ್ಲವನಾಗಿದ್ದ. ಡಾನ್ ಫೆರ್ನಂದೋ ನ ಮುಖ ಬಿಳಿಚಿಕೊಂಡಿತು. ಈ ಭಯಾನಕ ಸನ್ನಿವೇಶದಲ್ಲಿ ಯೋಸೆಫಾ ಕಿರಿಚಿಕೊಂಡಳು: ” ಇದು ನನ್ನ ಮಗ ಅಲ್ಲ. ಈ ತರುಣ ನಿಮಗೆಲ್ಲ ಪರಿಚಯ ಇರುವ ಈ ನಗರದ ಕಮಾಂಡೆಂಟ್ ನ ಮಗ ಡಾನ್ ಫೆರ್ನಂದೋ.” ಆಗ ಆ ಸಮಗಾರ ಪ್ರಶ್ನಿಸಿದ : ” ನಿಮ್ಮಲ್ಲಿ ನಾಗರಿಕರಿಗೆ ಈ ತರುಣ ಯಾರೆಂದು ಗೊತ್ತೇ ?” ಅಲ್ಲಿ ನೆರೆದಿದ್ದ ಅನೇಕರು ಆತನ ಮಾತನ್ನೇ ಪುನರುಚ್ಚರಿಸಿದರು: ” ಎರೋನಿಮೋನನ್ನು ಬಲ್ಲವರು ಮುಂದೆ ಬನ್ನಿ.” ಆ ವೇಳೆಗೆ ಈ ಗಲಾಟೆಯಿಂದ ಬೆದರಿದ ಮಗು ಯುಯನ್ ,ಯೋಸೆಫಾಳ ತೋಳಿನಿಂದ ಡಾನ್ ಫೆರ್ನಂದೋ ನ ತೋಳಿಗೆ ದಾಟಲು ಹೊರಳಾಡಿದ. ಆಗ  ದ್ವನಿಯೊಂದು ಕೂಗಿಕೊಂಡಿತು :” ಅವನೇ ಆ ಮಗುವಿನ ತಂದೆ.” ” ಅವನೇ ಯುರೋನಿಮೋ” ಇನ್ನೊಂದು ಧ್ವನಿ ಕಿರುಚಿಕೊಂಡಿತು. ಮೂರನೆಯ ಧ್ವನಿ ಆರ್ಭಟಿಸಿತು :” ಅವರು ಪಾಷಂಡಿಗಳು” . ಆಗ ಯೇಸುವಿನ ದೇವಾಲಯದ ಆ ಎಲ್ಲ ಕ್ರಿಶ್ಚಿಯನ್ನರು ಒಟ್ಟಾಗಿ ಬೊಬ್ಬಿಟ್ಟರು :” ಅವರಿಗೆ ಕಲ್ಲು ಎಸೆಯಿರಿ.” ಆಗ ಎರೋನಿಮೋ ದೊಡ್ಡ ಗಂಟಲಿನಲ್ಲಿ ಕೂಗಿ ಹೇಳಿದ : ” ತಡೆಯಿರಿ,ರಾಕ್ಷಸರೇ , ನೀವು ಎರೋನಿಮೋನಿಗಾಗಿ ಹುಡುಕುತ್ತೀರಾದರೆ ಅವನು ಇಲ್ಲಿದ್ದಾನೆ.ಆ ಮನುಷ್ಯನನ್ನು ಬಿಡುಗಡೆ ಮಾಡಿ.ಆತ ಮುಗ್ಧ.”

ಎರೋನಿಮೊನ ಮಾತುಗಳಿಂದ ಗಲಿಬಿಲಿಗೊಂಡ ಆ ಪ್ರಕ್ಷುಬ್ಧ ಜನಸಂದಣಿಗೆ ತನ್ನ ತಪ್ಪಿನ ಅರಿವಾಗಿ ಡಾನ್ ಫೆರ್ನಂದೊನನ್ನು ಬಿಡುಗಡೆ ಮಾಡಿತು. ಈಗ ಆ ಜನರ ಗಮನ ಯೋಸೆಫಾಳ ಕಡೆಗೆ ಹರಿಯಿತು. ” ಅವಳೇ ,ಅವಳೇ, ಅವಳನ್ನು ಕೊಲ್ಲಿರಿ ”  ಕಿರಿಚಿಕೊಂಡಿತು ಆ ಹುಚ್ಚು ಜನಸಮೂಹ. ಎರೋನಿಮೋ ಕೈಯಿಂದ ಮಗು ಫೆಲಿಪೆಯನ್ನು ಮತ್ತು ಮಗು ಯುಯನ್ ನನ್ನು ಡಾನ್ ಫೆರ್ನಂದೋ ಕೈಗೆ ಕೊಟ್ಟು ಯೋಸೆಫಾ ಹೇಳಿದಳು : ” ಇಲ್ಲಿಂದ ನಡೆ , ಡಾನ್ ಫೆರ್ನಂದೋ.ನಿನ್ನ ಇಬ್ಬರು ಮಕ್ಕಳನ್ನು ಕಾಪಾಡು. ನಮ್ಮನ್ನು ನಮ್ಮ ಅದೃಷ್ಟದ ಪಾಲಿಗೆ ಬಿಡು.”

ಡಾನ್ ಫೆರ್ನಂದೋ ಆ ಇಬ್ಬರು ಮಕ್ಕಳನ್ನು ಎತ್ತಿಕೊಂಡ.ಪಕ್ಕದಲ್ಲಿ ಇದ್ದ ಒಬ್ಬ ನೇವಲ್ ಅಧಿಕಾರಿಯಿಂದ ಖಡ್ಗವನ್ನು ತೆಗೆದುಕೊಂಡು ,ಎರೋನಿಮೋ ಯೋಸೆಫಾರನ್ನು ಹಿಂದಕ್ಕೆ ಇಟ್ಟುಕೊಂಡು ತನ್ನನ್ನು ಹಿಂಬಾಲಿಸಲು ಹೇಳಿದ. ಅವರು ಚರ್ಚಿನಿಂದ ಹೊರಬಂದರು. ಇನ್ನೇನು ಅವರು ಅಂಗಳದಲ್ಲಿ ಕಾಲಿಡಬೇಕು ಎನ್ನುವಷ್ಟರಲ್ಲಿ ಆ ಹುಚ್ಚು ಜನಸಂದಣಿಯಿಂದ ಧ್ವನಿಯೊಂದು ಕೂಗಿಕೊಂಡಿತು :” ನಾಗರಿಕರೇ, ಇವನೇ ಎರೋನಿಮೋ.ನಾನೇ ಅವನ ತಂದೆ.” ಹೀಗೆ ಹೇಳುತ್ತಲೇ ಎರೋನಿಮೊನ ತಲೆಗೆ ದೊಣ್ಣೆಯಿಂದ ಹೊಡೆದ.ಅದು  ಪಕ್ಕದಲ್ಲಿ ಇದ್ದ ದೋನ ಕೊನ್ಸ್ತನ್ಜ ಳಿಗೆ  ತಾಗಿತು.ಆಕೆ  ಕಿರುಚಿಕೊಂಡಳು: ” ಯೇಸು ಮೇರಿ!” ಎರಡನೆಯ ಹೊಡೆತವೊಂದು  ಅವಳನ್ನು ನೆಲಕ್ಕೆ ಉರುಳಿಸಿತು. ಆಗ ಮೂಲೆಯೊಂದರಿಂದ ಧ್ವನಿಯೊಂದು ಕೇಳಿಸಿತು,: ” ಪಿಶಾಚಿಗಳು, ಇವಳು ದೋನ ಕೊನ್ಸ್ತನ್ಜ.” ಆಗ ಸಮಗಾರನ ಮರು ಏಟು ,” ಮತ್ತೆ ಯಾಕೆ ಅವಳು ಸುಳ್ಳು ಹೇಳಿದ್ದು ?” ” ನಿಜವಾದ ಪಾಪಿಯನ್ನು ಹುಡುಕಿ. ಅವಳನ್ನು ಕೊಲ್ಲಿರಿ.” ದೋನ ಕೊನ್ಸ್ತನ್ಜ ಳ ಹೆಣವನ್ನು ಕಂಡ ಡಾನ್ ಫೆರ್ನಂದೋ ಸಿಟ್ಟಿನಿಂದ ತನ್ನ ಖಡ್ಗವನ್ನು ಸೆಳೆದ , ಆ ಕೊಲೆಗಡುಕನನ್ನು ಕತ್ತರಿಸಿ ಹಾಕಿದ .ಯೋಸೆಫಾ ಕೂಗಿ ಹೇಳಿದಳು :” ಬೀಳ್ಕೊಡುಗೆ ಡಾನ್ ಫೆರ್ನಂದೋ, ಮಕ್ಕಳಿಗೆ ಬೀಳ್ಕೊಡುಗೆ ! ರಕ್ತ ಪಿಪಾಸುಗಳೇ ,ನನ್ನನ್ನು ಕೊಲ್ಲಿರಿ.” ಈ ಜಗಳವನ್ನು ಕೊನೆಗಾಣಿಸಬೇಕೆಂದು  ಅವಳು ಮುಂದಕ್ಕೆ ಬಂದಳು.ಕಟುಕ ಪೆದ್ರಿಲ್ಲೋ ಅವಳ ತಲೆಗೆ ಹೊಡೆದು ಅವಳನ್ನು ನೆಲಕ್ಕೆ ಉರುಳಿಸಿದ. ತಲೆಯಿಂದ ಕಾಲಿನ ವರೆಗೆ ರಕ್ತ ಹರಿಯುತ್ತಿದ್ದ ಯೋಸೆಫಾಳನ್ನು ನೋಡುತ್ತಾ ಆ ಕ್ರೂರಿ ಗರ್ಜಿಸಿದ :’ ಆ ಬೇವಾರ್ಸಿ ಗಂಡನ ಜೊತೆಗೆ ಇವಳನ್ನೂ ನರಕಕ್ಕೆ ಕಳುಹಿಸಿರಿ.”

ಡಾನ್ ಫೆರ್ನಂದೋ , ಆ ದೇವರಂಥ ಮನುಷ್ಯ ,ಚರ್ಚಿನ ಗೋಡೆಗೆ ವಾಲುತ್ತ ನಡೆದ.ಆತನ ಎಡ ತೋಳಿನಲ್ಲಿ ಎರಡು ಹಸುಳೆಗಳನ್ನು ಆತುಕೊಂಡು   ,ಬಲದ ಕೈಯಲ್ಲಿ ಖಡ್ಗವನ್ನು ಎತ್ತಿಕೊಂಡು ಆತ ಮುಂದೆ ಸಾಗುತ್ತಿದ್ದ. ದಾರಿಯುದ್ದಕ್ಕೂ ಬಲದ ಕೈಯಲ್ಲಿ ಹಿಡಿದುಕೊಂಡ ಖಡ್ಗದಿಂದ ಒಬ್ಬೊಬ್ಬ ಕಟುಕನನ್ನು  ಕತ್ತರಿಸುತ್ತ ಮುನ್ನಡೆದ. ಸಿಂಹವು ಕೂಡಾ ತನ್ನ ಆತ್ಮ ರಕ್ಷಣೆಯ  ಹೋರಾಟದಲ್ಲಿ ಈರೀತಿ ಮಾಡಿರಲಾರದು. ಏಳು ಮಂದಿ ಕೊಲೆಗಡುಕರು ಅವನ ಕಾಲಬುಡದಲ್ಲೇ ಸತ್ತು ಬಿದ್ದರು. ಆ ಸೈತಾನ ಗುಂಪಿನ ನಾಯಕ ಗಾಯಗೊಂಡಿದ್ದ. ಆದರೆ ಕಟುಕ ಪೆದ್ರಿಲ್ಲೋ ಆ ಮಕ್ಕಳನ್ನು ಸಾಯಿಸದೆ ತನ್ನ ರಕ್ತದಾಹವನ್ನು ತಣಿಸದೆ ಸುಮ್ಮನಿರಲಾರದವನಾಗಿದ್ದ. ಪೆದ್ರಿಲ್ಲೋ ಆ ಹಸುಳೆಗಳಲ್ಲಿ  ಒಂದನ್ನು ಸೆಳೆದುಕೊಂಡು ಗರಗರನೆ ತಿರುಗಿಸಿ ನಿಷ್ಕರುಣೆಯಿಂದ ಚರ್ಚಿನ ಕಂಬಕ್ಕೆ ಅಪ್ಪಳಿಸಿದ.ಇಡೀ ಜನಸಮೂಹ ಈ ಅಮಾನುಷ ದೃಶ್ಯವನ್ನು  ಮೂಕವಾಗಿ ದಿಗ್ಭ್ರಮೆಯಿಂದ ನೋಡುತ್ತಾ ನಿಂತಿತ್ತು. ತನ್ನ ಕಾಲಬುಡದಲ್ಲೇ  ತನ್ನ ಮುದ್ದು ಮಗು ಯುಯನ್ ತಲೆಬುರುಡೆ ಒಡೆದು ರಕ್ತದ ಮಡುವಿನಲ್ಲಿ ಬಿದ್ದದ್ದನ್ನು ಕಂಡು ,ಡಾನ್ ಫೆರ್ನಂದೋ  ತನ್ನ ಕ್ರೋಧ ಮತ್ತು ನೋವಿನ ಕಣ್ಣುಗಳನ್ನು ತೆರೆದು ಮೇಲಕ್ಕೆ ತಲೆ ಎತ್ತಿ ,ಶಾಂತಿಯನ್ನು ಕೋರಿದ.

ಚರ್ಚಿನಲ್ಲಿ ರಾಶಿ ಬಿದ್ದಿದ್ದ ಹೆಣಗಳನ್ನು ಹೊರಕ್ಕೆ ಸಾಗಿಸಲಾಯಿತು. ಡಾನ್ ಫೆರ್ನಂದೋ ತನ್ನ ದುಃಖದ ಕಣ್ಣೀರನ್ನು ಬದುಕಿ ಉಳಿದ ಒಂದೇ ಮಗು ಫೆಲಿಪೆಯ ಮುಖದ ಮೇಲೆ ಸುರಿಸುತ್ತಾ , ಆತನನ್ನು ತನ್ನ ತೋಳ ತೊಟ್ಟಿಲಲ್ಲಿ ಆಡಿಸಿದ. ಕಣಿವೆಯಲ್ಲಿ ಬಿಟ್ಟು ಬಂದಿದ್ದ ತನ್ನ ಹೆಂಡತಿ ಎಲ್ವಿರ  , ಭೂಕಂಪದ ಗಾಯಗಳಿಂದ ಈಗಾಗಲೇ ಜರ್ಜರಿತಳಾದವಳು , ಈ ಎಲ್ಲ ದುರಂತದ ಸಂಕಷ್ಟಗಳಿಗೆ ಹೇಗೆ ಸ್ಪಂದಿಸುತ್ತಾಳೆ ಎನ್ನುವ ಆತಂಕ  ಆತನಲ್ಲಿ ಇತ್ತು. ಆದರೆ ಅದಕ್ಕಿಂತ ಮೊದಲೇ ಆಕೆ ದಾರಿಹೋಕನಿಂದ ನಡೆದ ದುರ್ಘಟನೆಗಳ ಮಾಹಿತಿ ಪಡೆದಿದ್ದಳು. ತನ್ನ ಮಗುವನ್ನು ಕಳೆದುಕೊಂಡ ಆ ಹೆತ್ತ ತಾಯಿಯ ದುಃಖ  ಹೇಳತೀರದು. ಅವಳು ಒಂದೇ ಸವನೆ ಅಳುತ್ತಿದ್ದಳು. ಡಾನ್  ಫೆರ್ನಂದೋ ಅಲ್ಲಿಗೆ ಬಂದ , ಹಸುಳೆ ಫೆಲಿಪೆಯನ್ನು ಎತ್ತಿಕೊಂಡು. ಫೆರ್ನಂದೋ ಮತ್ತು ಎಲ್ವಿರ , ಆ ಅಪರಿಚಿತ  ಪುಟ್ಟ ಮಗುವನ್ನು ತಮ್ಮ ಮಗನೆಂದೇ ಸ್ವೀಕರಿಸಿದರು. ಮಗು ಫೆಲಿಪೆಯೊಂದಿಗೆ ಕಳೆದುಕೊಂಡ ತಮ್ಮ ಮಗು ಯುಯನ್ ನನ್ನು ಹೋಲಿಸುತ್ತಾ , ಆ ಎರಡು ಮಕ್ಕಳನ್ನು ಪಡೆದ ಬಗೆಗಳನ್ನು ನೆನಪಿಸಿಕೊಳ್ಳುತ್ತಾ ,ಡಾನ್ ಫೆರ್ನಂದೋ ಸಮಾಧಾನದ ಧನ್ಯತೆಯ ಮಂದಹಾಸ ಬೀರಿದ.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “‘ಚಿಲಿಯಲ್ಲಿ ಭೂಕಂಪ’ -ಹೀನ್ರಿಶ್ ಕ್ಲೆಯಿಸ್ಟ್ ಜರ್ಮನ್ ಕತೆ”

RSS Feed for ಬಿ ಎ ವಿವೇಕ ರೈ Comments RSS Feed

ನಮಸ್ಕಾರ, ಮೊದಲನೆಯ ಕಂತನ್ನೂ ಓದಿ ಮುಗಿಸಿದೆ.

‘ದೇಶ ಸುತ್ತು ಕೋಶ ಓದು’ ಎನ್ನುವುದು ಇಂತಹ ಅನುಭವಗಳ ಪರಿಚಯ ಮಾಡಿಕೊಳ್ಳಲು.

ಒಳ್ಳೆಯ ಕಥೆ. ಧನ್ಯವಾದಗಲು.

ಅಂದಹಾಗೆ ಪ್ರಸ್ತುತ ಸಂರ್ಭದಲ್ಲಿ ಭಾರತದಲ್ಲಿ ನಡೆಯುವ ಚಳುವಳಿಗೆ ಪೂರಕವಾಗಿರುವ ನಿಮ್ಮ ತಂದೆಯವರ ಬರಹವನ್ನೂ ಓದಿದೆ.

ಇಂದಿರಾ ಹೆಗ್ಸೆ ಅವರಿಗೆ ನಮಸ್ಕಾರ.
ಇಂದಿನ ಚಳುವಳಿಗೆ ಅನ್ವಯ ಆಗುವುದಕ್ಕಿಂತ ಹೆಚ್ಚಾಗಿ , ವ್ಯಕ್ತಿಗತವಾಗಿ ನಮ್ಮ ನಮ್ಮ ಪ್ರಾಮಾಣಿಕತೆಯನ್ನು ಪ್ರಶ್ನಿಸಲು ಅವಕಾಶ ಕಲ್ಪಿಸುತ್ತದೆ.ನಾವು ನೈತಿಕವಾಗಿ ಸರಿ ಇಲ್ಲದಿದ್ದರೆ ನಮ್ಮ ಚಳುವಳಿಗಳು ಕೇವಲ ಪ್ರದರ್ಶನಗಳಾಗುತ್ತವೆ.


Where's The Comment Form?

Liked it here?
Why not try sites on the blogroll...

%d bloggers like this: