ಮಾಯಿನ್ ನದಿಯ ದಂಡೆಯಲ್ಲಿ ಬಾಟಲಿ ಹೆಕ್ಕುವ ಎಮ್ಲಿನ್

Posted on ಜುಲೈ 27, 2011. Filed under: Uncategorized |


ವ್ಯೂರ್ತ್ಸ್ ಬುರ್ಗ್ ನಗರದ ನಡುವೆ ಹರಿಯುವ ಮಾಯಿನ್ ನದಿಯ ದಂಡೆಯಲ್ಲಿ ವಿಹಾರಕ್ಕೆ ನಡೆದಾಡುವುದು ಕಳೆದ ಸುಮಾರು ಎರಡು ವರ್ಷಗಳಿಂದ ನನಗೆ ನೆಚ್ಚಿನ ಹವ್ಯಾಸ. ಹವೆ ಚೆನ್ನಾಗಿದ್ದರೆ ಸಂಜೆ ಆಯಿತೆಂದರೆ ಮಕ್ಕಳಿಂದ ತೊಡಗಿ  ಮುದುಕರ ವರೆಗೆ ಎಲ್ಲ ವಯಸ್ಸು ವರ್ಗ ಅಭಿರುಚಿಯವರು ಅಲ್ಲಿ ಸುತ್ತಾಡುತ್ತಾರೆ. ಮಾಯಿನ್ ನದಿಗೆ ಅಡ್ಡಲಾಗಿ ಇರುವ ,ನಗರದ ಎರಡು ಪಕ್ಕಗಳನ್ನು ಜೋಡಿಸುವ ಐದು ಸೇತುವೆಗಳು ಇವೆ  . ಇವುಗಳಲ್ಲಿ ಅತಿ ಹಳೆಯದು ಮತ್ತು ಪ್ರವಾಸಿಗಳ ಆಕರ್ಷಣೆಯದ್ದು -‘ ಹಳೆಯ ಮಾಯಿನ್ ಸೇತುವೆ’ ( Alte Main Brucke ).  ಅದರ ಬಳಿಕ  ಮುಂದೆ ಇರುವ ಇನ್ನೊಂದು ಸೇತುವೆ -‘ ಶಾಂತಿ  ಸೇತುವೆ ‘ ( Friedensbrucke ).  ಈ ‘ಹಳೆ ಮಾಯಿನ್ ಸೇತುವೆ ‘ ಮತ್ತು ‘ಶಾಂತಿ ಸೇತುವೆ’ಗಳ ನಡುವಿನ ಮಾಯಿನ್ ನದಿ ದಂಡೆಯ ಪ್ರದೇಶ ,ಅಗಲ ಕಿರಿದಾದ ಮತ್ತು ಸಣ್ಣ  ಪಾರ್ಕ್ ರೀತಿಯ ವಿಹಾರ ತಾಣ. ಇದರಲ್ಲಿ’ Mainkai ” ಮತ್ತು  ‘Kranenkai’ ಸೇರಿವೆ. ಜರ್ಮನ್ ಭಾಷೆಯಲ್ಲಿ  ‘Kai’ ಅಂದರೆ ನದಿಯ ಬದಿಯಲ್ಲಿ ಕಲ್ಲಿನಿಂದ ನಿರ್ಮಿಸಿದ ದಂಡೆ.  ‘ Kranen’ ಅಂದರೆ ‘ಕ್ರೇನ್’. ಇಲ್ಲಿ ವಿಹಾರದ ಸಣ್ಣ ಹಡಗುಗಳು ಬಂದು ತಂಗುತ್ತವೆ .ಇದರ ಪಕ್ಕದಲ್ಲಿ ಹಳೆಯ ಕ್ರೇನ್ ಒಂದರ ಅವಶೇಷ ಇದೆ. ಈ ದಂಡೆಯನ್ನು ‘ಮಾಯಿನ್ -ಕ್ರೇನ್ ದಂಡೆ’ಎಂದು ಕರೆಯಬಹುದು.

ಈ ಮಾಯಿನ್-ಕ್ರೇನ್ ದಂಡೆಯ ಬದಿಯಲ್ಲಿ ಕುಳಿತುಕೊಳ್ಳಲು  ಕೆಲವು ಬೆಂಚುಗಳು ಇವೆ. ಸಂಜೆಯ ವೇಳೆಗೆ ಇಲ್ಲಿಗೆ ಬರುವವರಲ್ಲಿ ಯುವಕ ಯುವತಿಯರ ಸಂಖ್ಯೆ ಜಾಸ್ತಿ. ಕೆಲವು ಮುದುಕರು ಮಧ್ಯ ವಯಸ್ಕರು ಏಕಾಂಗಿಗಳು ಬಂದು ಕುಳಿತು ಕೊಳ್ಳುವುದುಂಟು. ಇಲ್ಲಿಗೆ ಬರುವ ಬಹಳ ಮಂದಿ ವಿರಾಮವಾಗಿ ಕುಳಿತುಕೊಂಡು ಬಾಟಲಿಗಳಿಂದ ಬೀರ್ ಕುಡಿಯುತ್ತಾರೆ. ಬೀರ್ ಬಾಟಲಿಗಳ ದೊಡ್ಡ ಕೇಸ್ ಗಳನ್ನು ಹೊತ್ತುಕೊಂಡು ತಂದು ಬೀರ್ ಕುಡಿಯುತ್ತಾ ಹೊತ್ತು ಕಳೆಯುತ್ತಾರೆ. ಮೋಜಿಗಾಗಿ,ಚಟಕ್ಕಾಗಿ ,ನೋವು ಮರೆಯಲು,ಏಕಾಂಗಿಯಾಗಿ ಧ್ಯಾನಿಸಲು- ಹೀಗೆ ಹತ್ತು ಹಲವು ಬಗೆಯ ಪ್ರವೃತ್ತಿಯವರು ಇಲ್ಲಿ ಸೇರಿದಾಗ ಬೀರ್ ಬಾಟಲಿಗಳ ಕಣಕಣ ಸದ್ದು ಅತ್ತಲಿಂದ ಇತ್ತಲಿಂದ ರಿಂಗಣಿಸುತ್ತಿರುತ್ತದೆ  .ಇಲ್ಲಿಗೆ ಬರುವ ಇನ್ನೊಂದು ವರ್ಗವೆಂದರೆ -ಈ ಬೀರ್ ಬಾಟಲಿಗಳನ್ನು ಹೆಕ್ಕುವವರು. ಹರಕು ಬಟ್ಟೆಯ ,ಮಾಸಿದ ದೇಹದ ,ಜೋಳಿಗೆ ಚೀಲ ಹೊತ್ತ ನಡುವಯಸ್ಸಿನ ಮತ್ತು ವಯಸ್ಸು ಮೀರಿದ ಜನ – ಅವರೇ ಬಾಟಲಿ ಹೆಕ್ಕುವ ಮಂದಿ.

ಬಹಳ ದಿನಗಳಿಂದ ಇಲ್ಲಿ ನಾನು ಕಾಣುತ್ತಿರುವ ಒಬ್ಬಳು ಹೆಂಗಸು ಎಮ್ಲಿನ್.  ಅವಳ ಪೂರ್ಣ ಹೆಸರು ಎಮ್ಮಲಿನ್ . ಅವಳಿಗೆ ಸುಮಾರು ಎಪ್ಪತ್ತು ವರ್ಷ ದಾಟಿರಬಹುದು.ಮುಖದ ಮೇಲಿನ ನೆರಿಗೆಗಳು ,ಎಳೆದುಕೊಂಡು ಹೋಗುವ ಕಾಲುಗಳು,ಬಾಗಿದ ಬೆನ್ನು -ಹೇಳುತ್ತಿವೆ  ವಯಸ್ಸು ಇನ್ನೂ ಸ್ವಲ್ಪ ಜಾಸ್ತಿ ಆಗಿರಬಹುದು ಎಂದು. ಎಮ್ಲಿನ್ ಆಸೆಗಣ್ಣುಗಳಿಂದ ನೋಡುವುದು ಬಾಟಲಿಗಳನ್ನು ಎತ್ತಿ ಎತ್ತಿ ಬೀರ್ ಕುಡಿಯುವ ಬೀರ್ ಬಲರನ್ನು. ಆದರೆ ಬೀರ್ ಕುಡಿಯುವ ಆಸೆ ಅವಳಿಗೆ ಇಲ್ಲವೇ ಇಲ್ಲ.  ಅವಳದ್ದು ಬೀರಿನ ಖಾಲಿ ಬಾಟಲಿ ಪಡೆಯುವ ಕಾತರ. ತನ್ನ ಹಾಗೆ ಖಾಲಿ ಬಾಟಲಿ ಹೆಕ್ಕುವ ಬೇರೆ ಮಂದಿ ಬರುವ ಮೊದಲೇ ಅದನ್ನು ಬಾಚಿಕೊಳ್ಳುವ  ತವಕ ತಲ್ಲಣ. ಎಮ್ಲಿನ್  ತರುಣ ತರುಣಿಯರ ಒಂದು ಗುಂಪಿನ ಬಳಿ ಹೋಗಿ ನಿಲ್ಲುತ್ತಾಳೆ. ಅವರ ಮಾತು ನಗು ಕೇಕೆ ಎಲ್ಲ  ಮಾಯಿನ್ ನದಿಯ ಅಲೆಗಳ ಜೊತೆಗೆ ತೇಲುತ್ತಿರುತ್ತದೆ. ‘ಕುಡಿದು ಆಯಿತೇ? ಬಾಟಲಿ ಇದೆಯೇ ? -‘ಎಮ್ಲಿನ್ ಳದು ಗಂಟಲಿನ ಒಳಗಿನಿಂದ ಹೊರಡುವ  ದೈನ್ಯದ ಕ್ಷೀಣ ದ್ವನಿ. ಅವರಲ್ಲಿ ಯಾವಳೋ ಒಬ್ಬಳು ಕೇಳಿಸಿಕೊಳ್ಳುತ್ತಾಳೆ. ನಾಲ್ಕೋ ಐದೋ ಬಾಟಲಿ ಕೆಳಗೆ ಬಿದ್ದಿವೆ.ಅದನ್ನು ತೋರಿಸಿ ‘ಯಾ ‘ಎನ್ನುತ್ತಾಳೆ. ಎಮ್ಲಿನ್ ಳ ಕಣ್ಣಲ್ಲಿ ಸಂಜೆಯ ಸೂರ್ಯನ ಕಿರಣದ ಹೊಳಪು. ಬಾಗಿ ಕುಳಿತುಕೊಂಡು ಆ ಖಾಲಿ ಬಾಟಲಿಗಳನ್ನು ಆತುರ ಆತುರವಾಗಿ ಹೆಕ್ಕಿಕೊಂಡು ತನ್ನ ಗೋಣಿ ಚೀಲದಲ್ಲಿ ತುಂಬಿಸುತ್ತಾಳೆ. ಅಲ್ಲಿಂದ ಮುಂದೆ ಹೋದರೆ ಅಲ್ಲಿ ಬೆಂಚಿನಲ್ಲಿ ಒಬ್ಬನೇ  ಕುಳಿತು ಕೊಂಡವನೊಬ್ಬ ಬೀರ್ ಬಾಟಲಿಗಳ ರಾಶಿ ಹಾಕಿಕೊಂಡು ,ಕಿವಿಗೆ ಯೀರ್ ಫೋನ್ ಅಂಟಿಸಿಕೊಂಡು ,ತಲೆ ಅಲ್ಲಾಡಿಸುತ್ತಾ   ಬೀರ್ ಬಾಟಲಿಯನ್ನು ಮೇಲೆತ್ತಿಕೊಂಡು  ಕುಡಿಯುತ್ತಿದ್ದಾನೆ.ಎಮ್ಲಿನ್ ಅವನ ಹತ್ತಿರ ಹೋಗಿ ಖಾಲಿ ಬಾಟಲಿ ಇದೆಯೇ ಎಂದು ಕೇಳಿದರೆ ಅವನಿಗೆ ಕೇಳಿಸುವುದು ಅವನದ್ದೇ ಮಾಯಾ ಜಗತ್ತಿನ ಸಂಗೀತ.ಅಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಬಾಟಲಿಗಳನ್ನು ಹೆಕ್ಕೋಣ ವೆಂದರೆ ಆತ ಬಾಟಲಿಗಳಲ್ಲಿ ಅರ್ಧ ಕುಡಿದು,ಹಾಗೆಯೇ ಬಿಟ್ಟು ಮತ್ತೆ ಬೇರೆ ಬಾಟಲಿ ತೆರೆದು ,ಕುಡಿಯುತ್ತಿದ್ದ.ಅರ್ಧ ಕುಡಿದು  ಚೆಲ್ಲಿದ  ಬಾಟಲಿಗಳೇ  ಅಲ್ಲಿ ಸಾಕಷ್ಟು ಇದ್ದುವು. ಅವನ್ನು ಹೇಗೆ ಹೆಕ್ಕುವುದು? ಅವನನ್ನು ಕೇಳದೆ ಅವನ್ನು  ಮುಟ್ಟುವಂತಿಲ್ಲ.ಅವನೋ ಎಲ್ಲ ರೀತಿಯಲ್ಲೂ ಅರೆ ಪ್ರಜ್ಞಾವಸ್ಥೆಯಲ್ಲೇ  ಇದ್ದಾನೆ. ಕೊನೆಗೂ  ಎಮ್ಲಿನ್ ಳನ್ನು ನೋಡಿ ,ಬಾಟಲಿ ತೆಗೆದುಕೊಳ್ಳಲು ಹೇಳಿದ ; ಮತ್ತೆ ತನ್ನ ಕುಡಿತ ಮತ್ತು ಹಾಡಿನ ಗುಂಗಿನಲ್ಲಿ  ಮುಳುಗಿದ. ಎಮ್ಲಿನ್ ಅ ಬಾಟಲಿಗಳನ್ನು ಎತ್ತಿಕೊಂಡಳು.ಅವಳು ಕುಡಿತ ಬಿಟ್ಟು ವರ್ಷಗಳೇ ಸಂದಿವೆ. ಬಾಟಲಿಗಳಲ್ಲಿ ಅರ್ಧ ತುಂಬಿದ್ದ ಬೀರನ್ನು ಪಕ್ಕದಲ್ಲಿದ್ದ ಕಸದ ತೊಟ್ಟಿಗೆ ಚೆಲ್ಲಿದಳು. ಖಾಲಿ ಬಾಟಲಿಗಳನ್ನು ತನ್ನ ಗೋಣಿ ಚೀಲಕ್ಕೆ ತುಂಬಿದಳು.

ಅಷ್ಟರಲ್ಲಿ ಮೂವರು ಸುಂದರ ಯುವತಿಯರು  ಅಲ್ಲಿ ಕಾಣಿಸಿಕೊಂಡರು. ಎಲ್ಲರದ್ದು ಯುನಿಫಾರ್ಮ್ ಡ್ರೆಸ್. ಬಿಳಿ ಪ್ಯಾಂಟ್ ಮತ್ತು ಬಿಳಿ ಬನಿಯನ್. ಬನಿಯನಿನ ಎದೆಯಲ್ಲಿ JIM BEAM ಎಂಬ ಮುದ್ರೆಯ ಅಚ್ಚು ಇತ್ತು. ಎಲ್ಲರ ಹೆಗಲಿನಲ್ಲಿ ಕೆಂಪು ಬಣ್ಣದ ಒಂದೊಂದು  ಸಣ್ಣ ಬ್ಯಾಗ್ . ಎಮ್ಲಿನ್ ಳ ಮುಖ ಅರಳಿತು.ಈ ಯುವತಿಯರಿಂದ   ಕೆಲವಾದರೂ ಬಾಟಲಿ ಸಿಗಬಹುದು ಎನ್ನುವ ಬಯಕೆ ಅವಳದ್ದು. ಆ ಮೂವರು ಮಹಾಶ್ವೇತೆಯರು ಅಲ್ಲಿ ಕುಳಿತವರ ಬಳಿ ಹೋಗಿ ಏನೋ ಪಿಸುಗುಟ್ಟಿದರು. ಕೆಲವು ತರುಣರು ತಲೆ ಅಲ್ಲಾಡಿಸಿದರು. ಆಗ ಈ ತರುಣಿಯರು ತಮ್ಮ ಕೆಂಪು ಬ್ಯಾಗ್ ತೆರೆದು ಅದರಿಂದ ಬೀರ್ ನ  ಟಿನ್ ಗಳನ್ನು ತೆಗೆದುಕೊಟ್ಟರು. ಅವರಿಂದ ಹಣ ಪಡೆದರು.ಅವರು  ಟಿನ್  ಬೀರ್ ಕಂಪೆನಿಯ ಮಾರಾಟದ ಹುಡುಗಿಯರು. ಎಮ್ಲಿನ್ ನೋಡುತ್ತಾಳೆ – ಅವೆಲ್ಲ  ಬೀರ್ ನ ಟಿನ್ ಗಳು. ಅಲ್ಲಿ ಬಾಟಲಿ ಇಲ್ಲ . ಅವರು ಎಷ್ಟು ಬೀರ್ ಕುಡಿದರೂ ಅವಳಿಗೆ ಖಾಲಿ ಬಾಟಲಿ ಸಿಗುವುದಿಲ್ಲ. ಕಂಪೆನಿಯವರಿಗೆ ಭರ್ಜರಿ ವ್ಯಾಪಾರ .ಎಮ್ಲಿನ್ ಮುಖ ಕಂದಿತು. ಮಾಯಿನ್ ನದಿಯ ನೀರಿನಲ್ಲಿ ಬಾತುಕೋಳಿಯೊಂದು   ಒಂಟಿಯಾಗಿ ತೇಲುತ್ತಾ ಮುಳುಗುತ್ತಾ ಇತ್ತು. ಸೂರ್ಯ ಆಯಾಸಗೊಂಡು ಮನೆಗೆ ತೆರಳಿದ ಎನ್ನುವುದಕ್ಕೆ  ಸಾಕ್ಷಿಯಾಗಿ  ಮಾಯಿನ್ ನದಿಯ ಅಲೆಗಳು ಕೆಂಬಣ್ಣದ ತೆರೆ ಎಳೆದವು. ಎಮ್ಲಿನ್ ನಿದಾನವಾಗಿ ಬಾಟಲಿ ಹೊರೆ ಹೊರುತ್ತಾ ಅಲ್ಲಿಂದ ಹೊರಟಳು.ನಾನೂ ಅಲ್ಲಿಂದ ಹೊರಟೆ.

ಅತಿಥಿಗೃಹಕ್ಕೆ ಹೋಗುವ ಮೊದಲು ಕುಡಿಯುವ ನೀರು ಕೊಳ್ಳಲೆಂದು ನನ್ನ ಎಂದಿನ  ಸೂಪರ್ ಮಾರ್ಕೆಟ್ ‘ತೆಗುತ್ ‘ಗೆ ಹೋದರೆ, ಅಲ್ಲಿ  ಮತ್ತೆ ಎಮ್ಲಿನ್ ಇದ್ದಾಳೆ. ಖಾಲಿ ಬಾಟಲಿಗಳ ಗೋಣಿ ಚೀಲದ ಹೊರೆ ಹೊತ್ತುಕೊಂಡು ,ಖಾಲಿ ಬಾಟಲಿಗಳನ್ನು ತುಂಬಿಸುವ ಯಂತ್ರದ ಬಳಿಗೆ ಸಾಗುತಿದ್ದಾಳೆ.ಈ ದಿನದ ಅವಳ ಸಂಪಾದನೆಯ ಎಲ್ಲ ಖಾಲಿ ಬಾಟಲಿಗಳಿಗೆ ಎಷ್ಟು ಸಿಗಬಹುದು ಎಂದು ಲೆಕ್ಕಹಾಕುತ್ತಿದ್ದಾಳೆ.ಬಾಯಿಯಲ್ಲಿ ಮಣಮಣ ಕೇಳಿಸುತ್ತಿದೆ.ಬೀರಿನ ಒಂದು ಚಿಕ್ಕ ಬಾಟಲಿಗೆ ಹತ್ತು  ಸೆಂಟ್ಸ್ ಆದರೆ ,ಈ ದಿನ ಒಟ್ಟು ಎಷ್ಟು ಯೂರೋ ಎಷ್ಟು ಸೆಂಟ್ಸ್  ಸಿಗಬಹುದು ? ಆ  ಯಂತ್ರವನ್ನೇ ಕೇಳಬೇಕು. ಅವಳ ಪಾಲಿಗೆ ಅದೊಂದು ಕಾಮಧೇನು .  ಬಾಟಲಿ ನುಂಗುವ ಆ ಕಾಮಧೇನುವಿನ ಬಳಿಗೆ ಹೋದವಳೇ ಎಮ್ಲಿನ್ ,ಗೋಣಿಚೀಲದಿಂದ ಒಂದು ಬಾಟಲಿ ತೆಗೆದು ,ಅದರ ಬಾಯಿಯೊಳಗೆ ತುರುಕಿಸಿದಳು. ಅದಕ್ಕೆ ಅದು ಪಥ್ಯವಾಗಲಿಲ್ಲವೋ ಏನೋ ಹಾಗೆಯೇ   ಹೊರಕ್ಕೆ ಬಂತು.ಅವಳು ಆ ಬಾಟಲಿಯನ್ನು  ಮತ್ತೆ ಮತ್ತೆ ಒಳಕ್ಕೆ ತೂರಿದಳು . ಅದು ಮತ್ತೆ ಮತ್ತೆ ಹೊರಕ್ಕೆ ತಳ್ಳುತಿತ್ತು. ಅವಳು ಆತಂಕ ಉದ್ವೇಗದಿಂದ ತಲೆ ಎತ್ತಿ ಮೇಲೆ ನೋಡಿದರೆ ,ರಟ್ಟಿನ ತುಂಡಿನಲ್ಲಿ ಒಂದು ಬರಹ ನೇತಾಡುತ್ತಿತ್ತು-‘ ಈ ಯಂತ್ರ ಹಾಳಾಗಿದೆ.ನಾಳೆ ಬನ್ನಿ.’  ಆಗ ರಾತ್ರಿ ಗಂಟೆ ಎಂಟು. ಇಲ್ಲಿ ಎಲ್ಲ ಸೂಪರ್ ಮಾರ್ಕೆಟ್ ಗಳು ಮುಚ್ಚುವುದು ರಾತ್ರಿ ಎಂಟು ಗಂಟೆಗೆ.ಹಾಗಾಗಿ ಎಮ್ಲಿನ್ ಆ ಖಾಲಿ ಬಾಟಲಿಗಳ ಹೊರೆ ಹೊತ್ತುಕೊಂಡು ಬೇರೆ  ಸೂಪರ್ ಮಾರ್ಕೆಟ್ ಗಳಿಗೆ ಈಗ ಹೋಗುವ ಹಾಗಿಲ್ಲ.              ಅಂದ ಹಾಗೆ ‘ ಎಮ್ಲಿನ್ ‘ ಅಥವಾ ‘ಎಮ್ಮಲಿನ್ ‘ ಎನ್ನವ ಹೆಸರಿಗೆ  ಜರ್ಮನ್ ಭಾಷೆಯಲ್ಲಿ ‘ಕೆಲಸ ‘ ಎಂದು ಅರ್ಥ.

ಇಲ್ಲಿ ಕೊಟ್ಟಿರುವ ಚಿತ್ರಗಳು ನಾನು ನಿನ್ನೆ ಸಂಜೆ ( ಜುಲೈ ೨೬ ) ‘ಮಾಯಿನ್ -ಕ್ರೇನ್ ದಂಡೆ’ಯಲ್ಲಿ ತೆಗೆದವು. ಇದರಲ್ಲಿ ಎಮ್ಲಿನ್ ಇಲ್ಲ. ನಿನ್ನೆ ಅವಳು ಬಂದಿರಲಿಲ್ಲ.ಎಮ್ಲಿನ್ ಎಲ್ಲಿ ಇದ್ದಾಳೆ ಎನ್ನುವುದು ನಮ್ಮ ಒಳಗಿನ ಪ್ರಶ್ನೆ. ಎರಡು ಪಾರಿವಾಳಗಳು ಮಾಯಿನ್ ನದಿಯ ದಂಡೆಯಲ್ಲಿ ಕುಳಿತಿವೆ. ಅವು ಹೇಗೆ ಕುಳಿತಿವೆ ಗಮನಿಸಿ. ಎರಡು ಬಾತುಕೋಳಿಗಳು ಮಾಯಿನ್ ನದಿಯ ನೀರಿನ ಒಳಗೆ ಈಜುತ್ತಿವೆ .ಒಟ್ಟಿಗೆ ಈಜಬೇಕಾದ ಅವು ಬೇರೆ ಬೇರೆಯಾಗಿ ಈಜುತ್ತಿವೆ.ಒಂದು ಬಾತುಕೋಳಿ ಮಾತ್ರ ಎಮ್ಲಿನ್ ಳಂತೆ ಒಂಟಿಯಾಗಿಯೇ ಈಜುತ್ತಿದೆ. ಒಂಟಿಯಾಗಿ ಇರುವ ಇಬ್ಬರು ವ್ಯಕ್ತಿಗಳ  ಚಿತ್ರಗಳು ಇಲ್ಲಿವೆ .ಈ ಚಿತ್ರಗಳಿಗೂ   ಈ ಬರಹಕ್ಕೂ ನೇರ ಸಂಬಂಧ ಇಲ್ಲ. ಆದರೆ ಈ ಬರಹವನ್ನು   ಇಲ್ಲಿನ ಸಂದರ್ಭದ ಆಚೆಯೂ ನೋಡಬಹುದಾದರೆ ಇಲ್ಲಿ ಯಾವುದೂ ಅಪ್ರಸ್ತುತ ಅಲ್ಲ. ಮಾಯಿನ್ ನದಿ,ಪಾರಿವಾಳಗಳು ,ಬಾತುಕೋಳಿಗಳು, ಜೊತೆಗಾರರು,ಒಬ್ಬಂಟಿಗಳು,ಬಾಟಲಿ ಬೀರ್ ,ಟಿನ್ ಬೀರ್ ,ಹಳೆಯ ಸೇತುವೆ ,ಶಾಂತಿ ಸೇತುವೆ,ಯೂರೋ ಮತ್ತು ಸೆಂಟ್ -ಹೀಗೆ ಇನ್ನು ಅನೇಕವು ಈ ಚಿತ್ರಗಳ ಒಳಗೆ ಮತ್ತು ಹೊರಗೆ ಇವೆ.                                                                                                                                    ಚಿತ್ರಗಳನ್ನು ದೊಡ್ಡಪ್ರಮಾಣದಲ್ಲಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

2 Responses to “ಮಾಯಿನ್ ನದಿಯ ದಂಡೆಯಲ್ಲಿ ಬಾಟಲಿ ಹೆಕ್ಕುವ ಎಮ್ಲಿನ್”

RSS Feed for ಬಿ ಎ ವಿವೇಕ ರೈ Comments RSS Feed

ee lekhana oduthiddanthe eneno haleya nenapugalu sulidadatodagithu.tumba apthavada lekhana. emlin antahavaroo alliddareye? neevobba adbutha photographer. ee pradeshadalli neevu spoorthigondaddu nimma photodalli gothaguthade.anda hage emlinladoo photo iruthiddare chennagiruthithu.

ನಾಗೇಶ್,ಥ್ಯಾಂಕ್ಸ್.ನಿಮ್ಮ ಕಾಳಜಿ ಅಪೂರ್ವ.


Where's The Comment Form?

Liked it here?
Why not try sites on the blogroll...

%d bloggers like this: