ತಪ್ಪು ಮತ್ತು ಅಪರಾಧ :ಮಂಜುಗಡ್ಡೆಯ ಮೇಲೆ ಕುಣಿಯುವುದು

Posted on ಜುಲೈ 23, 2011. Filed under: Uncategorized |


Ferdinand von Schirach  ಜರ್ಮನಿಯ ಒಬ್ಬ ಪ್ರಸಿದ್ಧ ಕ್ರಿಮಿನಲ್ ಲಾಯರ್.೧೯೬೪ರಲ್ಲಿ  ಮ್ಯೂನಿಕ್ ನಲ್ಲಿ ಜನಿಸಿದ ಶಿರಹ್ ೧೯೯೪ರಿನ್ದ  ಬೆರ್ಲಿನ್ ನಲ್ಲಿ ಕ್ರಿಮಿನಲ್ ಲಾಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ .ಅವನ ಕಕ್ಷಿದಾರರಲ್ಲಿ  ಪೊಲಿಟ್ ಬ್ಯೂರೋದ ಸದಸ್ಯನಾಗಿದ್ದ ಗ್ಯೂನ್ತರ್  ಶಬೋವ್ಸ್ಕಿ ,ಹಿಂದಿನ ಪೂರ್ವ ಜರ್ಮನಿಯ  ಪತ್ತೇದಾರ  ನೋರ್ಬರ್ತ್ ಯುರೆತ್ಸ್ಕೋ ಮತ್ತು  ಭೂಗತ ಲೋಕದ ಬಹಳ ಮಂದಿ ಇದ್ದಾರೆ. ಶಿರಹ್  ಕ್ರಿಮಿನಲ್ ಲಾಯರ್ ಆಗಿ ತಾನು ಪಡೆದ ಅನುಭವಗಳನ್ನು , ಅಪರಾಧದ ಮೊಕದ್ದಮೆಗಳನ್ನು ಕತೆಗಳ ರೂಪದಲ್ಲಿ ಬರೆದಿದ್ದಾನೆ.ಅಂತಹ  ಅನುಭವ ಕಥನಗಳ ಕತಾಸಂಗ್ರಹ ‘ Verbrechen ‘  ಜರ್ಮನ್ ಭಾಷೆಯಲ್ಲಿ ೨೦೦೯ರಲ್ಲಿ ಪ್ರಕಟವಾಯಿತು.(Paper Verlag GmbH,Munich) . ಈ ಪುಸ್ತಕದ ಇಂಗ್ಲಿಶ್ ಅನುವಾದ ‘ Crime ‘ ( Translated by Carol Brown Janeway. Published in 2011, Alfred A. Knopf ,NewYork).

ತನ್ನ ಕತಾಸಂಕಲನದ ಮುನ್ನುಡಿಯಲ್ಲಿ ‘ ತಪ್ಪು’ ಎನ್ನುವ ಶೀರ್ಷಿಕೆಯಲ್ಲಿ  ಶಿರಹ್  ಕೆಲವು ಮಾರ್ಮಿಕ ಮಾತುಗಳನ್ನು ಹೇಳಿದ್ದಾನೆ. ” ಕ್ರಿಮಿನಲ್ ಮೊಕದ್ದಮೆಗಳ ಕುರಿತು ನಾನು ಇಲ್ಲಿ ಬರೆದಿದ್ದೇನೆ.ನಾನು ಈವರೆಗೆ ಏಳು ನೂರಕ್ಕಿಂತ ಹೆಚ್ಚು ಕ್ರಿಮಿನಲ್ ಮೊಕದ್ದಮೆಗಳನ್ನು ನಿರ್ವಹಿಸಿದ್ದೇನೆ.ಆದರೆ ನನಗೆ  ನಿಜವಾದ ಆಸಕ್ತಿ ಇರುವುದು ಅಪರಾಧಿ ಮನುಷ್ಯರ ಸೋಲುಗಳು, ತಪ್ಪುಗಳು ಮತ್ತು ಅವರು  ನಡೆದುಕೊಳ್ಳುವ ಘನತೆಯ ರೀತಿಗಳ ಬಗ್ಗೆ . ನನಗೊಬ್ಬ ಮಾವ  ಇದ್ದರು.ಅವರು ನ್ಯಾಯಾಧೀಶರ ಪೀಠದ ಮುಖ್ಯ ನ್ಯಾಯಾಧೀಶರಾಗಿದ್ದರು. ಆ ನ್ಯಾಯಾಲಯಗಳು ಘೋರ ಅಪರಾಧಗಳ ವಿಚಾರಣೆ ನಡೆಸುವವುಗಳು.ಅವುಗಳಲ್ಲಿ  ಹೆಚ್ಚಿನವು ಕೊಲೆ ಮತ್ತು ದರೋಡೆಯ ಪ್ರಕರಣಗಳು. ನಮ್ಮ ಮಾವ ನಾವು ಹುಡುಗರಾಗಿದ್ದಾಗ ನಮಗೆ ಈ ಕ್ರಿಮಿನಲ್ ಮೊಕದ್ದಮೆಗಳ ಕತೆಗಳನ್ನು ಹೇಳುತ್ತಿದ್ದರು. ಪ್ರತಿ ಬಾರಿಯೂ ಅವರು ಕತೆ ಆರಂಭಮಾಡುತ್ತಿದ್ದದ್ದು ಈ ಮಾತಿನಿಂದ : ‘ ಹೆಚ್ಚಿನ ಸಂಗತಿಗಳು ಬಹಳ ಸಂಕೀರ್ಣವಾದುವು . ತಪ್ಪು -ಎನ್ನುವುದು ಯಾವಾಗಲೂ  ಕೆಲವು ಸಮಸ್ಯೆಗಳನ್ನು ಮಂಡಿಸುತ್ತದೆ.’ ಅವರು ಹೇಳುತ್ತಿದ್ದುದು ಸರಿ ಎಂದು ಈಗ ಅನ್ನಿಸುತ್ತಿದೆ.ನಾವು ಸಂಗತಿಗಳ ಬೆನ್ನುಹತ್ತುತ್ತೇವೆ ; ಆದರೆ ಅವು ನಮಗಿಂತ ವೇಗವಾಗಿ ಓಡುತ್ತವೆ.ಕೊನೆಯಲ್ಲಿ ನಾವು ಅವುಗಳನ್ನು ಹಿಡಿಯಲು ಆಗುವುದೇ ಇಲ್ಲ. ನಾನು ಯಾರ ಪರವಾಗಿ ವಾದಿಸಿದ್ದೇನೆಯೋ ಅವರ ಕತೆಗಳನ್ನು ಇಲ್ಲಿ ಹೇಳಿದ್ದೇನೆ .ಅವರೆಲ್ಲಾ  ಕೊಲೆಗಡುಕರು, ಡ್ರಗ್  ಕಳ್ಳದಂಧೆಯವರು , ಬ್ಯಾಂಕ್  ದರೋಡೆಕೋರರು, ಸೂಳೆಯರು.ಅವರಿಗೆಲ್ಲಾ ಅವರದ್ದೇ ಆದ ಕತೆಗಳು ಇವೆ. ಅವರೆಲ್ಲಾ ನಮಗಿಂತ ಭಿನ್ನರಲ್ಲ. ನಾವೆಲ್ಲರೂ ನಮ್ಮ ನಮ್ಮ ಬದುಕಿನಲ್ಲಿ  ಮಂಜುಗಡ್ಡೆಯ ತೆಳು ಪದರದ ಮೇಲೆ ಕುಣಿಯುತ್ತೇವೆ.ಆ ಪದರದ ಕೆಳಗೆ ತುಂಬಾ ತಣ್ಣಗೆ ಇರುತ್ತದೆ.ಅದರ ಒಳಗೆ ಇಳಿದರೆ ಸಾವು ಖಂಡಿತ. ಆ ಮಂಜುಗಡ್ಡೆಯು  ಕೆಲವು ಜನರ  ಭಾರವನ್ನು ತಾಳಿಕೊಳ್ಳಲಾರದು ; ಅಂಥವರು ಕೆಳಕ್ಕೆ ಕುಸಿಯುತ್ತಾರೆ. ಆದರೆ ನಾವು ಅದೃಷ್ಟವಂತರಾದರೆ ನಾವು ಕೆಳಕ್ಕೆ ಕುಸಿಯುವುದೇ ಇಲ್ಲ. ನಾವು ಕುಣಿಯುತ್ತಲೇ ಇರುತ್ತೇವೆ. ಹೌದು ,ನಾವು  ಅದೃಷ್ಟವಂತರಾದರೆ ಮಾತ್ರ .”

‘ಅದೃಷ್ಟವಂತರು ‘ ಎನ್ನುವುದು ಕೂಡಾ ನಮಗೆ ಇರುವ ಅವಕಾಶಗಳಿಗೆ ಸಂಬಂಧಪಟ್ಟದ್ದು. ಹಣ ಮತ್ತು ಅಧಿಕಾರಗಳು ಅನೇಕರಿಗೆ ‘ ಅದೃಷ್ಟ’ ವನ್ನು ತಂದುಕೊಡುತ್ತವೆ.ಅಂಥವರು  ಯಾವ  ‘ತಪ್ಪು’ ಮಾಡಿದರೂ ಅವರು ‘ ಅಪರಾಧಿ ‘ ಎನ್ನಿಸುವುದೇ ಇಲ್ಲ. ಅವರು ಮಂಜುಗಡ್ಡೆಯ ತೆಳುವಾದ ಪದರದ ಮೇಲೆ ಎಷ್ಟು ಕುಣಿದರೂ ಅವರು ಕೆಳಕ್ಕೆ ಕುಸಿಯದಂತೆ ಎತ್ತಿ ಹಿಡಿಯುವುದು ಅವರ ಹಣ ಮತ್ತು ಅಧಿಕಾರ.’ ಕಾನೂನು ‘ ಮತ್ತು ‘ ನ್ಯಾಯ’ ಗಳು ಅವರನ್ನು ಕೆಳಕ್ಕೆ ಬೀಳಲು ಬಿಡುವುದಿಲ್ಲ. ‘ತಪ್ಪು’ ಮಾಡಿದವರನ್ನು ಎಲ್ಲ ರೀತಿಗಳಲ್ಲಿ ರಕ್ಷಿಸುವ ವ್ಯವಸ್ಥೆಯ ಶಕ್ತಿಯ ಮುಂದೆ ‘ಅಪರಾಧಿ’ ಎನ್ನಿಸಿಕೊಂಡವರು  ‘ಆಪಾದಿತರು ‘ ಆಗಿ , ಕೊನೆಗೆ ‘ಸಂಭಾವಿತರು’ ಎನ್ನಿಸಿಕೊಳ್ಳುತ್ತಾರೆ. ಆದರೆ ‘ಕೇವಲ ತಪ್ಪಿತಸ್ಥರು ‘ ಅಪರಾಧಿಗಳಾಗಿ ಜೈಲು ಸೇರುತ್ತಾರೆ. ಫೆರ್ಡಿನಾಂಡ್ ಶಿರಹ್  ಅನುಭವ ಕಥನದ  ಕೊಲೆಗಾರರು ,ದರೋಡೆಕಾರರು,ವ್ಯಭಿಚಾರಿ ಹೆಣ್ಣುಗಳು ಇಂತಹ  ‘ ಕೇವಲ ತಪ್ಪಿತಸ್ಥರು  ‘.

‘ ಫಾಹ್ನೆರ್ ‘ ತುಂಬಾ ಸಜ್ಜನ,ಪರೋಪಕಾರಿ ಡಾಕ್ಟರ್. ಆತ ತನ್ನ ಹೆಂಡತಿಯ ತಲೆಬುರುಡೆಯನ್ನು ಸುತ್ತಿಗೆಯಿಂದ ಹೊಡೆದು ಆಕೆಯನ್ನು  ಕೊಲ್ಲುತ್ತಾನೆ.ಅಂತಹ ಒಳ್ಳೆಯ ಡಾಕ್ಟರ್ ಹೀಗೆ ತಪ್ಪು ಮಾಡಿದ್ದು ಅವನನ್ನು ಬಲ್ಲ ಸ್ಥಳೀಯರಿಗೆ ಆಘಾತದ ಸಂಗತಿ.’ ಸಮ್ಮರ್ ಟೈಮ್ ‘ ಕತೆಯ ಅಬ್ಬಾಸ್ -ಪ್ಯಾಲಸ್ತೈನ್ ನಿರಾಶ್ರಿತನಾಗಿ ಅಪರಾಧ ಜಗತ್ತಿಗೆ ನೂಕಲ್ಪಟ್ಟವನು. ಆತ ತನ್ನ ಸುಂದರ ವಿದ್ಯಾರ್ಥಿನಿ ಸ್ತೆಫಾನಿಯನ್ನು ಪ್ರೀತಿಸಿ ಅವಳ ಸಹವಾಸದಿಂದ ಒಳ್ಳೆಯ ಮನುಷ್ಯನಾದ.ಆದರೆ ಅವಳು ಶ್ರೀಮಂತನೊಬ್ಬನೊಡನೆ  ಹೋಟೆಲ್ ಕೋಣೆಯೊಂದರಲ್ಲಿ  ಇದ್ದಾಗ  ಕೊಲೆಯಾಗುತ್ತಾಳೆ.ಆ ಕೊಲೆಯ ಆಪಾದನೆ ಅಬ್ಬಾಸ್ ಮೇಲೆ ಬಿದ್ದು,ಆತ ಅಪರಾಧಿ ಎನ್ನಿಸಿಕೊಳ್ಳುತ್ತಾನೆ. ‘ಲವ್’ ಕತೆಯಲ್ಲಿ ತನ್ನ ಪ್ರೇಯಸಿಯೊಡನೆ ತರುಣನೊಬ್ಬನು   ಹೊಂದುವ ಅತಿರೇಕದ   ಪ್ರಣಯವು ನಿಯಂತ್ರಣವಿಲ್ಲದ ನಡವಳಿಕೆಯಾಗಿ ಅಪರಾಧ ಎನ್ನಿಸುತ್ತದೆ.                                                                                                                                       ‘ ದಿ ತ್ಹೊರ್ನ್ ‘ ಕತೆಯಲ್ಲಿನ  ಫೆಲ್ಡ್ ಮಯೆರ್ ಅನೇಕ ಕೆಲಸಗಳನ್ನು ಒಂದರ ಬಳಿಕ ಮಾಡುತ್ತಾ ಬದುಕು ಸಾಗಿಸಿದವನು.ಅಂಚೆಯವನು ,ಹೋಟೆಲ್ ಮಾಣಿ,ಫೋಟೋಗ್ರಾಫರ್ ,ಪಿಜ್ಜಾ ತಯಾರಿಸುವವನು,ಕಮ್ಮಾರ -ಹೀಗೆ ಬೇರೆ ಬೇರೆ ಉದ್ಯೋಗ ಮಾಡಿಕೊಂಡು ಬಂದು ಕೊನೆಗೆ ಹಳೆಯ ವಸ್ತುಗಳ ಒಂದು ಮ್ಯೂಸಿಯಂನಲ್ಲಿ  ಕಾವಲುಗಾರ ಆಗಿ ಕೆಲಸಕ್ಕೆ ಸೇರುತ್ತಾನೆ.ಆ ಮ್ಯೂಸಿಯಂನ ಒಂದು ವಿಗ್ರಹವನ್ನು ಕಂಡು ಅದರಲ್ಲಿ ಆಸಕ್ತಿ ತಾಳುತ್ತಾನೆ.ಅದು ಕ್ಲಾಸಿಕಲ್  ಕಲೆಯ  ಒಂದು ಮಾದರಿ.ಒಬ್ಬ ಬತ್ತಲೆ ಹುಡುಗ ಒಂದು ಕೊರಕಲು ಬಂಡೆಯ ಮೇಲೆ ಕುಳಿತಿದ್ದಾನೆ.ಅವನ ಎಡದ ಕಾಲು ಬಾಗಿ  ಅವನ ಬಲದ ತೊಡೆಯ ಮೇಲೆ ನಿಂತಿದೆ.ಅವನು   ಎಡಕೈಯಿಂದ  ತನ್ನ ಎಡದ ಮೊಣಕಾಲನ್ನು ಹಿಡಿದುಕೊಂಡಿದ್ದಾನೆ.ಅವನ ಬಲದ ಕೈಯು ಆತನ ಬಲಪಾದದ  ಅಡಿಯ ಮುಳ್ಳನ್ನು ಕೀಳುತ್ತಿದೆ. ಆ ಮ್ಯೂಸಿಯಂನಲ್ಲಿ ಇದ್ದ ಈ ವಿಗ್ರಹವು ಗ್ರೀಕ್ ಮೂಲ ವಿಗ್ರಹದ ರೋಮನ್ ಪ್ರತಿ. ಫೆಲ್ಡ್ ಮಯೆರ್ ಈ ವಿಗ್ರಹದಲ್ಲಿ ಆಸಕ್ತಿಯನ್ನು ತಾಳಿದ .ಮುಳ್ಳು ತೆಗೆಯಲು ಪ್ರಯಾಸ ಪಡುವ ಹುಡುಗನ ಕಷ್ಟ ಅವನನ್ನು ಬಹಳವಾಗಿ ಕಾಡಿತು.ಅದು ಅವನ ಗೀಳು ಆಯಿತು.ತಾನೇ ಆ ಮುಳ್ಳು ತೆಗೆಯುವ  ಸಾಹಸಕ್ಕೆ ಕೈ ಹಾಕಿದ .ಕಲಾಕೃತಿಯ ಕಲ್ಪನೆ ನಿಜದ ಬದುಕಿನೊಂದಿಗೆ ತಾಕಲಾಟ ನಡೆಸಿತು.ಫ್ಯಾಂಟಸಿ ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸ ಆತನ ಪಾಲಿಗೆ ಇಲ್ಲವಾಯಿತು. ಹುಡುಗನ ಕಾಲಿನ  ಮುಳ್ಳು ತೆಗೆಯುವ ಆತನ ಭ್ರಮೆಯ ಪ್ರಯತ್ನದಲ್ಲಿ ವಿಗ್ರಹ ಒಡೆಯಿತು.ಆತ ಅಪರಾಧಿ ಎನ್ನಿಸಿಕೊಂಡ .ಪೋಲಿಸ್   ವಿಚಾರಣೆ ನಡೆಯಿತು. ಕೋರ್ಟ್ ಶಿಕ್ಷೆ  ಆಗುವುದರಲ್ಲಿ ಇತ್ತು.ಕೊನೆಗೆ ಮ್ಯೂಸಿಯಂನವರು ಅವನ ಬಗ್ಗೆ  ಕರುಣೆ ತಾಳಿದರು.ಆ ವಿಗ್ರಹವು ಯಾವುದೋ ಆಕಸ್ಮಿಕ ಅವಘಡದಿಂದ ಹಾಳಾದದ್ದು ಎಂದು ಹೇಳಿದರು.ಫೆಲ್ಡ್ ಮಯೆರ್  ಶಿಕ್ಷೆಯಿಂದ ಪಾರಾದ.ಮುರಿದ ವಿಗ್ರಹಗಳ ಭಾಗಗಳನ್ನು ಜೋಡಿಸುವ ಕೆಲಸಕ್ಕೆ ಆ  ಮ್ಯೂಸಿಯಂಗೆ ಒಬ್ಬಳ ನೇಮಕ ಆಯಿತು.ಅವಳು ಆ  ಹುಡುಗನ ವಿಗ್ರಹದ ಚೂರುಗಳನ್ನು ಕಲೆಹಾಕಿ ಜೋಡಿಸುವ ಕೆಲಸ ಸುರುಮಾಡಿದಳು.ಅದನ್ನು ಮುಗಿಸಲು  ಅನೇಕ ವರ್ಷಗಳೇ ಬೇಕಾಗಬಹುದು ಎಂದು ಮನಸ್ಸಿನಲ್ಲೇ ಸಂತಸಪಟ್ಟಳು.ಅದು ಅವಳಿಗೆ ಅಷ್ಟರ ವರೆಗೆ ಒಂದು ಕೆಲಸದ ಆಸರೆಯನ್ನು ಕೊಡುತ್ತದೆ ಎನ್ನುವ ಆಸೆ  ಅವಳದ್ದು.ಅಲ್ಲೇ ಪಕ್ಕದ ಮೇಜಿನ ಮೇಲೆ ಕ್ಯೋಟೋದಿಂದ ತಂದ ,ಮರದಿಂದ ಮಾಡಿದ ಒಂದು  ಬುದ್ಧನ ತಲೆ ಇತ್ತು. ಅದು ತುಂಬಾ ಹಳೆಯದು ; ಅದರ ಹಣೆಯಲ್ಲಿ ಒಂದು ಬಿರುಕು ಬಿಟ್ಟಿತ್ತು.       ಆ ಬುದ್ಧ ನಗುತ್ತಿದ್ದ.

ಬುದ್ಧ  ಯಾರನ್ನು ಕಂಡ ನಗುತ್ತಿದ್ದಾನೆ ?  ‘ತಪ್ಪು’ ಮಾಡಿದವರನ್ನೋ ,  ‘ಅಪರಾಧಿ’ಗಳನ್ನೋ ?

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Liked it here?
Why not try sites on the blogroll...

%d bloggers like this: