ಹಿಮಗೌರಿಯ ನೆನಪಿನಲ್ಲಿ ಕಾಡಿನ ನಡುವಿನ ಲೋಹ್ರ್ ನಲ್ಲಿ ಒಂದು ದಿನ

Posted on ಜುಲೈ 20, 2011. Filed under: Uncategorized |


ಕಳೆದ ಭಾನುವಾರ ,ಜುಲೈ ೧೭ರನ್ದು ಸಿನ್ಹ ದಂಪತಿಗಳ ಆಹ್ವಾನದಂತೆ ನಾನು ಮತ್ತು ಕೋಕಿಲ ವ್ಯೂರ್ತ್ಸ್ ಬುರ್ಗಿನಿಂದ ರೈಲಿನಲ್ಲಿ ಲೋಹ್ರ್ ಗೆ ಹೋಗಿದ್ದೆವು.ಸಿನ್ಹ ಅವರ ಪೂರ್ಣ ಹೆಸರು ನೀಲು ಸಿನ್ಹ.ಸುಮಾರು ಎಪ್ಪತ್ತು ವರ್ಷದ ಸಿನ್ಹರನ್ನು ನಾನು ಮೊದಲು ನೋಡಿದ್ದು ೨೦೦೯ರ  ಅಕ್ಟೋಬರದಲ್ಲಿ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದ ದೀಪಾವಳಿ ಆಚರಣೆಯಲ್ಲಿ.ಆ ದೀಪಾವಳಿಯ ಪೂಜೆ,ಅದರ ಮಹತ್ವದ ವಿವರಣೆ ಜರ್ಮನ್ ಭಾಷೆಯಲ್ಲಿ ,ಬಳಿಕ ಎಲ್ಲರೊಡನೆ ಸಂಭಾಷಣೆ -ಎಲ್ಲವೂ ಸಿನ್ಹ ಅವರದ್ದೇ .ಅವರ ಜೊತೆಯಲ್ಲಿ ಬಂದಿದ್ದ ದೊಡ್ಡ ಕುಟುಂಬ ನನ್ನ ಗಮನ ಸೆಳೆಯಿತು.ಜರ್ಮನ್ ಹೆಂಡತಿ ,ಮೂವರು ಮಕ್ಕಳು ಮತ್ತು ನಾಲ್ವರು ಮೊಮ್ಮಕ್ಕಳು -ಹೀಗೆ ತುಂಬು ಕುಟುಂಬ ಅವರದ್ದು.ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು -ಎಲ್ಲರೂ ಮದುವೆಯಾಗಿ ಬೇರೆ ಬೇರೆ ಕಡೆ ವಾಸವಾಗಿದ್ದವರು ಆ ದಿನ ದೀಪಾವಳಿಯಲ್ಲಿ ಅಲ್ಲಿ ಒಟ್ಟು ಸೇರಿದ್ದರು.ಮಕ್ಕಳ ಹೆಸರು ಕೇಳಿದಾಗ ಎಲ್ಲರಿಗೂ ಎರಡು ಹೆಸರುಗಳ ಜೋಡಿ ಇತ್ತು.ಮೊದಲ ಹೆಸರು ಭಾರತೀಯ ,ಎರಡನೆಯದು ಜರ್ಮನ್.ಮಕ್ಕಳು ಮೊಮ್ಮಕ್ಕಳಲ್ಲಿ ಕೆಲವರ ಮೈಬಣ್ಣ ಅಪ್ಪಟ ಭಾರತೀಯ ,ಇನ್ನು ಕೆಲವರದ್ದು ಜರ್ಮನಿನ ಹಿಮಬಿಳಿ. ಸಿನ್ಹ ಇಲ್ಲಿಯ ಇಂಡೋ ಜರ್ಮನ್ ಸಂಘದ ಸಕ್ರಿಯ ಹಿರಿಯ ಸದಸ್ಯ.ನಿಜವಾದ ಅರ್ಥದಲ್ಲಿ ಅವರ ಕುಟುಂಬವೇ ಒಂದು ಇಂಡೋ ಜರ್ಮನ್ ಸೊಸೈಟಿ ರೀತಿಯಲ್ಲಿ ಇದೆ.

ಸಿನ್ಹ ಮತ್ತು ಅವರ ಹೆಂಡತಿ ಬಾರ್ಬರ ಅವರನ್ನು ಆಮೇಲೆ ಸಾಕಷ್ಟು  ಬಾರಿ ನಾನು  ಭೇಟಿ ಆಗಿದ್ದೇನೆ,ಮಾತುಕತೆ ನಡೆಸಿದ್ದೇನೆ.ಭಾರತದ ಉತ್ತರಪ್ರದೇಶದ ಲಕ್ನೋ ದಲ್ಲಿ ಹುಟ್ಟಿ ಬೆಳೆದ ನೀಲು ಸಿನ್ಹ  ಭಾರತದಲ್ಲಿ  ಇಂಜಿನಿಯರಿಂಗ್ ಪದವಿ ಪಡೆದು ,ಮತ್ತೆ ಹೆಚ್ಚಿನ ಶಿಕ್ಷಣಕ್ಕಾಗಿ ಜರ್ಮನಿಗೆ ಬಂದದ್ದು ಸುಮಾರು ನಲುವತ್ತೈದು ವರ್ಷಗಳ ಹಿಂದೆ.ಇಲ್ಲಿ ಮತ್ತೆ ತಾಂತ್ರಿಕ ಶಿಕ್ಷಣದ ಪದವಿ ಪಡೆದು ,ಜರ್ಮನ್ ಕಂಪೆನಿಗಳಲ್ಲಿ  ಇಂಜಿನಿಯರ್ ಆಗಿ ಕೆಲಸ ಮಾಡಿದರು.ಆರಂಭದ ದಿನಗಳಲ್ಲೇ ಅವರು ಪ್ರೀತಿಸಿ ಮದುವೆ ಆದ  ಜರ್ಮನ್ ಹುಡುಗಿ ಬಾರ್ಬರ.ಸಿನ್ಹ ಅವರು ಜರ್ಮನಿಯ ಬ್ಹೊಶ್ ಕಂಪೆನಿಯಲ್ಲಿ ದೀರ್ಘ ಕಾಲ ಕೆಲಸಮಾಡಿ ಈಗ ನಿವೃತ್ತರಾಗಿದ್ದಾರೆ.ಆದರೆ ಈಗಲೂ ಆ ಕಂಪೆನಿಯವರು ಇವರನ್ನು ಸಲಹೆಗಾರರನ್ನಾಗಿ ಇಟ್ಟುಕೊಂಡಿರುವ ಕಾರಣ ,ವಾರದಲ್ಲಿ ಎರಡು ದಿನ ಬ್ಹೊಶ್ ಕಚೇರಿಗೆ ಹೋಗುತ್ತಾರೆ.ಬ್ಹೊಶ್ ಕಂಪೆನಿಯ ಮುಖ್ಯ ಕಚೇರಿ ಇರುವುದು ಒಂದು ಸಣ್ಣ ಪಟ್ಟಣ ಲೋಹ್ರ್ ನಲ್ಲಿ.ಸಿನ್ಹ ಕಳೆದ ಇಪ್ಪತ್ತೇಳು ವರ್ಷಗಳಿಂದ ಆ ಕಾರಣಕ್ಕಾಗಿಯೇ ಲೋಹ್ರ್ ನಲ್ಲಿ ಬೆಟ್ಟದ ತಪ್ಪಲಿನಲ್ಲಿ ಸುಂದರ ಮನೆಯೊಂದನ್ನು ಕಟ್ಟಿಕೊಂಡು ಪಟ್ಟಣದ ಒಳಗಿನ ಬೆಟ್ಟದ ಜೀವ ಆಗಿದ್ದಾರೆ.

ಲೋಹ್ರ್ -ಜರ್ಮನಿಯ ಬವೇರಿಯ ಪ್ರಾಂತ್ಯದ ಕೆಳಗಿನ ಫ್ರಾಂಕೊನಿಯ ಪ್ರದೇಶದ ಸ್ಪೆಸರ್ತ್ ಜಿಲ್ಲೆಯ ಒಂದು ಪುಟ್ಟ ಪಟ್ಟಣ.ಜನಸಂಖ್ಯೆ ೧೫೭೦೮ .ಲೋಹ್ರ್ ಹೊಳೆ ಮಾಯಿನ್ ನದಿಯೊಂದಿಗೆ ಕೂಡುವ ಸಂಗಮ ಲೋಹ್ರ್.ಸ್ಪೆಸ್ಸರ್ತ್ ಅರಣ್ಯದ  ಎರಡು  ದೊಡ್ಡ ಕಣಿವೆಗಳ ನಡುವೆ ಇರುವ ಲೋಹ್ರ್ -ತಿಳಿಮುಗಿಲ ತೊಟ್ಟಿಲಲಿ ,ಬನದ ಮಡಿಲಲ್ಲಿ ಮಲಗಿರುವ ಚಂದದ ಮುದ್ದುಮಗುವಿನಂತೆ ಕಾಣಿಸುತ್ತದೆ.ಲೋಹ್ರ್ ನ್ನು’ ಸ್ಪೆಸ್ಸರ್ತ್ ನ ಹೆಬ್ಬಾಗಿಲು’ ಎಂದು ಕರೆಯುತ್ತಾರೆ.ಕಡಿದಾದ ಮಾಯಿನ್ ನದಿ ಕಣಿವೆ -ನಿಸರ್ಗದ ರಹಸ್ಯದ ಕತೆಗಳನ್ನು ಪಿಸುಗುಟ್ಟಬಲ್ಲುದು.ಅದು ಹೇಳಿದ ಅಂತಹ ಒಂದು ಅದ್ಭುತ ಕತೆ -‘ ಹಿಮಗೌರಿ ಮತ್ತು ಏಳು ಜನ ಕುಳ್ಳರು ‘.

ಜಗತ್ತಿನ ಜನಪದ ಕತೆಗಳಲ್ಲಿ ಬಹಳ ಜನಪ್ರಿಯವಾದ ಒಂದು ಕತೆ ‘ Snow White and Seven Dwarfs’. ‘ಸ್ನೋ ವೈಟ್ ‘ ಕತೆ ಮೊದಲು ಸಂಗ್ರಹರೂಪದಲ್ಲಿ ಸಿಗುವುದು ಜರ್ಮನಿಯ ಗ್ರಿಮ್ ಸಹೋದರರಾದ ಜಾಕೊಬ್ ಗ್ರಿಮ್ (೧೭೮೫-೧೮೬೩) ಮತ್ತು ವಿಲ್ ಹೆಲ್ಮ್ ಗ್ರಿಮ್ ( ೧೭೮೬- ೧೮೫೯)  ಇವರು ಸಂಗ್ರಹಿಸಿ ಪ್ರಕಟಿಸಿದ ‘ Kinder-und Hausmarchen ‘(1812) [ Childern’s and Household Tales ] ಸಂಕಲನದಲ್ಲಿ.ಇದು ಜನಪದ ಕತೆಗಳ ಮೊತ್ತಮೊದಲ ಸಂಕಲನ. ‘ಸ್ನೋ ವೈಟ್ ‘ಕತೆಯ ಪಾಠಗಳು ಜಗತ್ತಿನಾದ್ಯಂತ ಸಿಗುತ್ತವೆ.ಅಂತಾರಾಷ್ಟ್ರೀಯ ಜನಪದ ಕತೆಗಳ ವರ್ಗಸೂಚಿ ,ಆರ್ನೆ -ಥಾಂಪ್ಸನ್ ನಲ್ಲಿ ,ವರ್ಗ ೭೦೯ -‘ಸ್ನೋ ವೈಟ್ ಮತ್ತು ಏಳು ಜನ ಕುಳ್ಳರು’ ಕತೆ .ಜರ್ಮನ್ ಜನಪದ ಕತಾ ಸಂಗ್ರಹದಲ್ಲಿ ಮೊದಲ ಬಾರಿ ಕಾಣಿಸಿಕೊಂಡ ಈ ಕತೆಯ ಐತಿಹಾಸಿಕ ಸಂಬಂಧವನ್ನು ಶೋಧಿಸುವ ಪ್ರಯತ್ನಗಳೂ ಜರ್ಮನಿಯಲ್ಲಿ ನಡೆದಿವೆ.ಅದರ ಫಲವಾಗಿಯೇ ,ಸ್ನೋ ವೈಟ್ ಕತೆಯು ಹುಟ್ಟಿದ ಸ್ಥಳ -‘ಲೋಹ್ರ್’ ಎಂದು ಅಭಿಪ್ರಾಯ ಪಡಲಾಗಿದೆ.ಮರಿಯಾ ಸೋಫಿಯ ಮಾರ್ಗರೆಥ ಕ್ಯಾಥರಿನ ಏರ್ತ್ಹಲ್ -ಇವಳು ಫಿಲಿಪ್ ಕ್ರಿಸ್ತೋಪ್ಹ್ ಏರ್ತ್ಹಲ್ ನ ಮಗಳು  .ಅವಳು ಲೋಹ್ರ್ ನಲ್ಲಿ ವಾಸವಾಗಿದ್ದಳು ಮತ್ತು ಅವಳು ಸ್ನೋ ವೈಟ್ ಳಂತೆ ಮಲತಾಯಿಯ ಹಿಂಸೆಗೆ ಒಳಗಾಗಿದ್ದಳು ಎನ್ನುವ ಕಥನ ಸಿಗುತ್ತದೆ.ಲೋಹ್ರ್ ಸುತ್ತಲಿನ ಕಾಡು ಮತ್ತು ಕಣಿವೆಯ ಪರಿಸರವು ಸ್ನೋ ವೈಟ್ ಕತೆಯ  ಆವರಣವನ್ನು ನೆನಪಿಸುತ್ತದೆ.ಹೀಗೆ ಈಗಿನ ಕೈಗಾರಿಕೆಗಳ ಕೇಂದ್ರ ಪುಟ್ಟ ಪಟ್ಟಣ ಲೋಹ್ರ್ – ಹಿಮಬಿಳಿಯ ಹುಡುಗಿ,ಮಲತಾಯಿ ,ಏಳು ಜನ ಕುಳ್ಳರು,ಮಾಯದ ಕನ್ನಡಿ ,ವಿಷದ ಸೇಬು,ಶವ ಪೆಟ್ಟಿಗೆ ,ಕಾಡಿನ ರಹಸ್ಯಗಳ ಸುತ್ತ ಅಸೂಯೆ, ಕರುಣೆ ಮತ್ತು ಪ್ರೇಮದ ಅದ್ಬುತ ಕತೆಯೊಂದನ್ನು ಬಿತ್ತರಿಸುತ್ತದೆ :

” ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬಳು ರಾಣಿ ಇದ್ದಳು.ಅವಳು ಒಂದು ದಿನ ತನ್ನ ಕಿಟಿಕಿಯ ಪಕ್ಕ ಕುಳಿತು ಸೂಜಿಯಲ್ಲಿ ಬಟ್ಟೆ ಹೊಲಿಯುತ್ತಿದ್ದಾಗ ,ಸೂಜಿ ಅವಳ ಬೆರಳಿಗೆ ತಾಗಿತು. ಅದರಿಂದ ಮೂರು ಹನಿ ರಕ್ತ ಕೆಳಗೆ ಕಿಟಿಕಿಯ ಬೀಟಿ ಮರದ ಚೌಕಟ್ಟಿನ  ಮೇಲೆ ಬಿದ್ದಿದ್ದ ಹಿಮದ ಮೇಲೆ ಬಿತ್ತು.ರಾಣಿಗೆ ಮಕ್ಕಳಿರಲಿಲ್ಲ.ಆಕೆ ಆಗ ಹಂಬಲಿಸಿದಳು :’ನನಗೆ ಈ ಹಿಮದಷ್ಟು ಬಿಳಿಯ ಮೈಬಣ್ಣ  ಇರುವ,ಈ ರಕ್ತದಷ್ಟು ಕೆಂಪು ಬಣ್ಣದ ತುಟಿ ಇರುವ ,ಈ ಬೀಟಿಮರದಷ್ಟು ಕಪ್ಪುಬಣ್ಣದ ಕೂದಲು ಇರುವ ಹೆಣ್ಣು ಮಗುವೊಂದು ಬೇಕು ‘.ಆ ರಾಣಿ ಗರ್ಭಿಣಿಯಾದಳು.ಒಂದು ಸುಂದರ ಹೆಣ್ಣು ಮಗುವೊಂದನ್ನು  ಹೆತ್ತಳು.ಹಿಮದಷ್ಟು ಬಿಳಿಯ ಮೈಬಣ್ಣ, ರಕ್ತದಷ್ಟು ಕೆಂಬಣ್ಣದ ತುಟಿ ,ಬೀಟಿಮರದಷ್ಟು ಕಪ್ಪುಬಣ್ಣದ ಹೊಳೆಯುವ ತಲೆಕೂದಲಿನ ಆ ಮಗುವಿಗೆ ‘ಹಿಮಗೌರಿ ‘(ಹಿಮಾನಿ ) ( ಸ್ನೋ ವೈಟ್ ) ಎಂದು ಹೆಸರಿಟ್ಟರು.ಮಗು ಹುಟ್ಟಿದ ಕೆಲವೇ ಸಮಯದಲ್ಲಿ ರಾಣಿ ನಿಧನಳಾದಳು.ರಾಜ ಮತ್ತೊಬ್ಬ ಸುಂದರಿಯನ್ನು ಮದುವೆಯಾದ.ಅವಳಲ್ಲಿ ಒಂದು ಅದ್ಭುತ ‘ಮಾಂತ್ರಿಕ ಕನ್ನಡಿ ‘ ಇತ್ತು.ಅದು ಜಗತ್ತಿನ ಯಾವ ರಹಸ್ಯವನ್ನಾದರೂ ಹೇಳುವ ಮಾಂತ್ರಿಕ ಶಕ್ತಿ ಹೊಂದಿತ್ತು.ರಾಜನ ಎರಡನೆಯ ಹೆಂಡತಿ ರಾಣಿಯು ಆ ಮಾಂತ್ರಿಕ ಕನ್ನಡಿಯಲ್ಲಿ ಒಂದು ದಿನ ಕೇಳಿದಳು :’ ಕನ್ನಡಿ ಕನ್ನಡಿ,ಜಗತ್ತಿನಲ್ಲಿ ಅತ್ಯಂತ ಸುಂದರಿ ಯಾರು?’ ಆ ಮಾಂತ್ರಿಕ ಕನ್ನಡಿ ಹೇಳಿತು :’ಜಗತ್ತಿನಲ್ಲಿ ಅತ್ಯಂತ ಸುಂದರಿ ಎಂದರೆ ನೀನೇ!’ ರಾಣಿ ತನ್ನ ಸೌಂದರ್ಯದ ಹೆಮ್ಮೆಯಿಂದ ಬೀಗಿಹೋದಳು. ಪುಟ್ಟ ಹುಡುಗಿ ಹಿಮಗೌರಿ  ಮುದ್ದುಮುದ್ದಾಗಿ ಬೆಳೆಯುತ್ತಿದ್ದಳು.ಅವಳಿಗೆ ಏಳು ವರ್ಷ ತುಂಬಿತು.

ಒಂದು ದಿನ ರಾಣಿ ಮತ್ತೊಮ್ಮೆ ತನ್ನ ಮಾಯದ ಕನ್ನಡಿಯಲ್ಲಿ ಕೇಳಿದಳು :’ಕನ್ನಡಿ ಕನ್ನಡಿ ,ಜಗತ್ತಿನಲ್ಲಿ ಈಗ ಅತ್ಯಂತ ಸುಂದರಿ ಯಾರು?’ ಮಾಯದ ಕನ್ನಡಿ ಹೇಳಿತು :’ರಾಣಿ ,ನೀನು ಅದ್ಭುತ ಸುಂದರಿ .ಆದರೆ ನಿನಗಿಂತ ಹೆಚ್ಚು ಸುಂದರಿ ಎಂದರೆ ಹಿಮಗೌರಿ  ಒಬ್ಬಳೇ ‘. ಈಗ ರಾಣಿಯ ಅಹಂಕಾರಕ್ಕೆ ಏಟು ಬಿತ್ತು.ಅವಳ ಅಸೂಯೆ ಅಧಿಕವಾಯಿತು.ಹೇಗಾದರೂ ಮಾಡಿ ತನ್ನ ಮಲಮಗಳು ಹಿಮಗೌರಿಯನ್ನು ಕೊಲ್ಲಬೇಕು ಎಂದು ರಾಣಿ ಕುತಂತ್ರ ಹೂಡಿದಳು .  ಅವಳು ಒಬ್ಬ ಬೇಟೆಗಾರನನ್ನು ಕರೆದು ,ಹೇಗಾದರೂ ಮಾಡಿ ಆ ಹುಡುಗಿ ಹಿಮಗೌರಿಯನ್ನು ಕಾಡಿನಲ್ಲಿ ಕೊಂದು ಬರಲು ಆಜ್ನೆಮಾಡಿದಳು.ಅವಳನ್ನು ಕೊಂದದ್ದಕ್ಕೆ ಪುರಾವೆ ತರಲು ಕಟ್ಟಪ್ಪಣೆ ಮಾಡಿದಳು.ಆ ಬೇಟೆಗಾರನು ಹಿಮಗೌರಿಯನ್ನು ಉಪಾಯದಿಂದ ಕಾಡಿಗೆ ಕರೆದುಕೊಂಡು ಬಂದನು.ಆದರೆ ಆ ಪುಟ್ಟ ಹುಡುಗಿಯನ್ನು ಕೊಲ್ಲಲು ಅವನಿಗೆ ಮನಸ್ಸು ಬರಲಿಲ್ಲ.ಆತ ಕನಿಕರ ತಾಳಿ  ಅವಳನ್ನು ಕಾಡಿನಲ್ಲಿ ಓಡಿಹೋಗಲು ಬಿಟ್ಟನು.ಅವಳನ್ನು ಕೊಂದದ್ದನ್ನು ರಾಣಿಗೆ ನಂಬಿಸಲು ಹಂದಿಯೊಂದರ ಪಕ್ಕೆಲುಬು ಮತ್ತು ಪಿತ್ತ ಕೋಶಗಳನ್ನು ಕೊಂಡುಹೋಗಿ ರಾಣಿಗೆ ಒಪ್ಪಿಸಿದನು.ಹಿಮಗೌರಿ  ಸತ್ತಿದ್ದಾಳೆ ಎಂದೇ ರಾಣಿ ನಂಬಿದಳು.ಈ ಕಡೆ ,ಪುಟ್ಟ  ಹುಡುಗಿ ಹಿಮಗೌರಿ  ಕಾಡಿನಲ್ಲಿ ಅಲೆಯುತ್ತಾ ಕಾಡಿನ ನಡುವೆ ಇರುವ ಸಣ್ಣ ಗುಡಿಸಲಿಗೆ ಬಂದಳು.ಅದೊಂದು ಕುಳ್ಳರ ಮನೆ.ಅಲ್ಲಿ ಏಳು ಕುಳ್ಳರು ವಾಸವಾಗಿದ್ದರು.ಹಿಮಗೌರಿಯನ್ನು ನೋಡಿ ಕನಿಕರ ತಾಳಿದ ಆ ಕುಳ್ಳರು ಅವಳಿಗೆ ಆಶ್ರಯ ಕೊಡಲು ಒಪ್ಪಿದರು.ಅವಳಿಗೆ ಅವರ ಮನೆಯನ್ನು ನೋಡಿಕೊಳ್ಳುವ ಕೆಲಸ.ಅವಳ ರಕ್ಷಣೆ ಮತ್ತು ಯೋಗಕ್ಷೇಮದ ಹೊಣೆ ಆ ಕುಳ್ಳರದು.ಅವರದು ಸದಾ ಕಾಡಿನಲ್ಲಿ ಸುತ್ತಾಡುವ ಸಂಚಾರದ ಬದುಕು.

ಕೆಲವು ಕಾಲ ಕಳೆಯಿತು.ಮಗದೊಮ್ಮೆ ರಾಣಿ ತನ್ನ ಮಾಂತ್ರಿಕ ಕನ್ನಡಿಯನ್ನು  ಹಿಡಿದುಕೊಂಡು ಮತ್ತೆ ಅದೇ ಪ್ರಶ್ನೆ ಕೇಳಿದಳು:’ ಜಗತ್ತಿನಲ್ಲಿ ಅತ್ಯಂತ ಸುಂದರಿ ಯಾರು?’ಎಂದು. ಆಗ ಮಾಯದ ಕನ್ನಡಿ ಹೇಳಿತು:’ ಅತಿ ಸುಂದರಿ ನೀನೇ.ಆದರೆ ನಿನಗಿಂತ ಹೆಚ್ಚು ಸುಂದರಿ ನಿನ್ನ ಮಲಮಗಳು ಹಿಮಗೌರಿ ‘ ಎಂದು. ಆಗ ರಾಣಿಗೆ  ಸಂಶಯ ಬಂತು ,ಹಿಮಗೌರಿ ಬದುಕಿದ್ದಾಳೆ ಎಂದು.ಅವಳು ಕಾಡಿನಲ್ಲಿ ಕುಳ್ಳರ ಗುಡಿಸಲಿನಲ್ಲಿ ಇರುವ ವಿಷಯ ತಿಳಿಯಿತು. ರಾಣಿ ವೇಷ ಪಲ್ಲಟಿಸಿ ,ಸಂಚಾರಿ ವ್ಯಾಪಾರಿಯ ವೇಷದಲ್ಲಿ ಕಾಡಿನಲ್ಲಿ ಹಿಮಗೌರಿ ಇರುವಲ್ಲಿಗೆ ಹೋದಳು.ಕುಳ್ಳರು ಇಲ್ಲದ ಸಮಯ ನೋಡಿ,ಹಿಮಗೌರಿಯನ್ನು  ಕಂಡು ,ಅವಳಿಗೆ ಕಸೂತಿಯ ಬಟ್ಟೆ ತೊಡಿಸಿದಳು.ಬಹಳ ಬಿಗಿಯಾದ ಆ ಬಟ್ಟೆ ಧರಿಸಿದ ಹಿಮಗೌರಿ ಉಸಿರುಕಟ್ಟಿ    ಮೂರ್ಛೆ ಹೋದಳು.ಕುಳ್ಳರು ಬಂದು ನೋಡುವಾಗ ,ಹಿಮಗೌರಿ  ಇನ್ನೇನು ಉಸಿರುಕಟ್ಟಿ ಪ್ರಾಣ ಬಿಡುವುದರಲ್ಲಿ  ಇದ್ದಳು.ಕುಳ್ಳರು ಅವಳ ಬಿಗಿ ಬಟ್ಟೆಯನ್ನು ಸಡಿಲಿಸಿದರು.ಅವಳು ಕಣ್ಣು ತೆರೆದು ಚೇತರಿಸಿಕೊಂಡಳು . ಹಿಮಗೌರಿ  ಜೀವಂತ ಇರುವ ವಿಷಯ ತಿಳಿದ ರಾಣಿ ಎರಡನೆಯ ಬಾರಿ ಮುದುಕಿಯೊಬ್ಬಳ ವೇಷ ಧರಿಸಿ ಕಾಡಿಗೆ ಬಂದಳು.ಕುಳ್ಳರು ಹೊರಗೆ ಹೋಗಿದ್ದ ಸಮಯ ನೋಡಿ,ಹಿಮಗೌರಿಯ ಬಳಿಗೆ ಬಂದಳು.ಮರುಳುಮಾತುಗಳಿಂದ ಅವಳನ್ನ ನಂಬಿಸಿ,ವಿಷದ ಬಾಚಣಿಗೆಯಿಂದ ಅವಳ ತಲೆಬಾಚಿದಳು.ಇನ್ನೇನು ವಿಷದಿಂದ ಹಿಮಗೌರಿ ಸತ್ತೇ ಹೋಗುತ್ತಿದ್ದಳು.ಅಷ್ಟರಲ್ಲಿ ಕುಳ್ಳರು ಬಂದು ತಮ್ಮಲ್ಲಿ ಇದ್ದ ವಿಷದ ಗಿಡಮೂಲಿಕೆ ಮದ್ದಿನಿಂದ ಅವಳನ್ನು ಪಾರುಮಾಡಿದರು.ಹಿಮಗೌರಿ ಇನ್ನೂ ಬದುಕಿ ಉಳಿದ ಸಂಗತಿ ತಿಳಿದ ರಾಣಿಯು ಮೂರನೆಯ ಬಾರಿ ಮತ್ತೆ ಪ್ರಯತ್ನ ನಡೆಸಿದಳು.ಈಬಾರಿ ರೈತನ ಹೆಂಡತಿಯ ವೇಷ ಧರಿಸಿ ,ವಿಷಹಾಕಿದ ಸೇಬುಹಣ್ಣನ್ನು ಹಿಡಿದುಕೊಂಡು ಕಾಡಿಗೆ ಹಿಮಗೌರಿ ಇದ್ದಲ್ಲಿಗೆ ,ಕುಳ್ಳರು ಇಲ್ಲದ ವೇಳೆ ಬಂದಳು . ಸೇಬುಹಣ್ಣನ್ನು ಅವಳಿಗೆ ತಿನ್ನಲು ಕೊಟ್ಟಳು.ಹಿಮಗೌರಿ ಸಂಶಯಪಟ್ಟು ಸೇಬುಹಣ್ಣು ತಿನ್ನಲು ಒಪ್ಪಲಿಲ್ಲ.ಆಗ ರೈತನ ಹೆಂಡತಿಯ ವೇಷದಲ್ಲಿದ್ದ ರಾಣಿಯು ಆ ಸೇಬನ್ನು ಕತ್ತರಿಸಿ ,ಅದರ ಬಿಳಿಯ ಅರ್ಧಭಾಗವನ್ನು ತಾನು ತಿಂದು ಅವಳಲ್ಲಿ  ವಿಶ್ವಾಸ ಮೂಡಿಸಿದಳು.ಬಳಿಕ ವಿಷ ಸೇರಿಸಿದ ಕೆಂಬಣ್ಣದ ಉಳಿದ ಅರ್ಧಭಾಗವನ್ನು ಹಿಮಗೌರಿಗೆ  ತಿನ್ನಲು ಕೊಟ್ಟಳು.ಕಪಟ ಅರಿಯದೆ ಹಿಮಗೌರಿ  ಆ ವಿಷದ ಸೇಬನ್ನು ತಿಂದಳು.ಕೂಡಲೇ ಗಾಢ ನಿದ್ರೆಯಲ್ಲಿ ಮುಳುಗಿದಳು.ಕುಳ್ಳರು ಬಂದು ನೋಡಿದಾಗ ಅವಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಳು.ಈ ಬಾರಿ ಎಲ್ಲ ಪ್ರಯತ್ನಗಳನ್ನು ಮಾಡಿಯೂ ಅವಳನ್ನು ಎಚ್ಚರಿಸಲು ಅವರಿಗೆ ಸಾಧ್ಯ ಆಗಲಿಲ್ಲ.ಅವಳು ಸತ್ತಿದ್ದಾಳೆ ಎಂದು ಭಾವಿಸಿ ಅವರು ಅವಳನ್ನು ಗಾಜಿನ ಒಂದು ಶವಪೆಟ್ಟಿಗೆಯಲ್ಲಿ ಇರಿಸಿದರು.

ಒಂದು ಊರಿನ ಒಬ್ಬ ರಾಜಕುಮಾರ ಒಂದು ದಿನ ಸಂಚರಿಸುತ್ತಾ ಆ ಕಾಡಿನ ದಾರಿಯಲ್ಲಿ ಬಂದ.ಅಲ್ಲಿ ಗಾಜಿನ ಶವಪೆಟ್ಟಿಗೆಯಲ್ಲಿ ಮಲಗಿದ್ದ ಹಿಮಗೌರಿಯನ್ನು  ಕಂಡ.ಅವಳ ಸೌಂದರ್ಯ ಅವನನ್ನು ಬಹಳವಾಗಿ ಆಕರ್ಷಿಸಿತು.ಅವನಿಗೆ ಅವಳಲ್ಲಿ ಪ್ರೇಮ ಮೊಳೆಯಿತು. ಆ ರಾಜಕುಮಾರ ಆ ಗಾಜಿನ ಶವಪೆಟ್ಟಿಗೆಯ ಸಹಿತ ಅವಳನ್ನು ತನ್ನ ಸೇವಕರ ಮೂಲಕ ತನ್ನ ಅರಮನೆಗೆ ಕೊಂಡೊಯ್ಯಲು ನಿರ್ಧರಿಸಿದ.ಸೇವಕರು ಗಾಜಿನ ಶವಪೆಟ್ಟಿಗೆಯನ್ನು ಹೊತ್ತರು.ಅದನ್ನು ಹೊತ್ತುಕೊಂಡು ಅವರು  ಕಾಡಲ್ಲಿ ಅಲೆಯುವಾಗ ಕುಲುಕಾಟದಲ್ಲಿ ಅವಳ ಗಂಟಲಿನಿಂದ  ಆ ವಿಷದ ಸೇಬು ಹೊರಕ್ಕೆ ಬಿತ್ತು.ಹಿಮಗೌರಿಗೆ  ಪ್ರಜ್ಞೆ ಬಂತು.ರಾಜಕುಮಾರ ಸಂತಸಗೊಂಡ.ಅವಳೊಡನೆ ಮದುವೆಯ ಸಿದ್ಧತೆಗಳು ಆದುವು.ಮದುವೆ ಸಂಭ್ರಮದಿಂದ  ಚೆನ್ನಾಗಿ ಆಯಿತು.

ರಾಣಿ ಮತ್ತೆ ತನ್ನ ಮಾಯದ ಕನ್ನಡಿಯಲ್ಲಿ ಕೇಳಿದಳು .ಹಿಮಗೌರಿ  ಬದುಕಿರುವ ಮತ್ತು ರಾಜಕುಮಾರನೊಡನೆ ಮದುವೆ ಆದ  ಕತೆ ಗೊತ್ತಾಯಿತು. ರಾಣಿಯ ದುಷ್ಕೃತ್ಯ ಗಳಿಗಾಗಿ ಅವಳಿಗೆ ಕಠಿಣ ಶಿಕ್ಷೆ ಕೊಡಲಾಯಿತು.ಕಾಯಿಸಿದ ಕಬ್ಬಿಣದ ಬೂಟ್ಸ್ ಗಳಲ್ಲಿ ಪಾದ ತೂರಿಸಿ ನರ್ತಿಸಲು ಅವಳಿಗೆ ಆಜ್ಞೆ ಮಾಡಲಾಯಿತು.ನಿರುಪಾಯಳಾಗಿ ಆಕೆ ಕಾದ ಕಬ್ಬಿಣದ ಬೂಟ್ಸ್  ಧರಿಸಿಕೊಂಡು ನರ್ತಿಸಬೇಕಾಯಿತು.ಕುಣಿಯುತ್ತಾ ಕುಣಿಯುತ್ತಾ ಆಕೆ ಸತ್ತುಹೋದಳು.”

ಈ ಜನಪದ ಕತೆಯನ್ನು ಆಧರಿಸಿ ಬಹುಬಗೆಯ ಸಾಹಿತ್ಯ ನಿರ್ಮಾಣ ಆಗಿದೆ.ಅನೇಕ ನಾಟಕಗಳು ರಚನೆಗೊಂಡು ರಂಗದಲ್ಲಿ ಪ್ರದರ್ಶನಗೊಳ್ಳುತ್ತಾ ಬಂದಿವೆ.ಸಿನೆಮಾಗಳು ,ಕಿರುಚಿತ್ರಗಳು ರೂಪುತಾಳಿ ,ಪ್ರದರ್ಶನಗಳ  ಮೂಲಕ ಜನಪ್ರಿಯ ಆಗಿವೆ.ಈ ಕತೆಯ ಸಂದೇಶಗಳನ್ನು ಭಿನ್ನ ಮಾಧ್ಯಮಗಳಲ್ಲಿ ಬಳಸಿಕೊಳ್ಳಲಾಗಿದೆ.ಎಲ್ಲ ಕಾಲ ಮತ್ತು ಎಲ್ಲ ದೇಶಗಳಿಗೆ ಅನ್ವಯ ಆಗುವ ಸೂಕ್ಷ್ಮ  ಎಳೆಗಳು ಇಲ್ಲಿ ಅಡಕವಾಗಿವೆ.

ಅಸೂಯೆ ಮತ್ತು  ಅಸಹನೆ  ಎಲ್ಲ ಕ್ಷೇತ್ರಗಳಲ್ಲೂ ಇಂದು ವಿಷದಂತೆ ಹರಡಿವೆ .ದ್ವೇಷದ ವಿಷದ ಬಾಚಣಿಗೆಯ ಮೂಲಕ  ನಮ್ಮ ತಲೆಯ ನರಮಂಡಲದ ನರನರಗಳಲ್ಲಿ ವಿಷ ಒಳ ಪ್ರವೇಶಿಸಿದೆ.ಬಹುಬಗೆಯ ನಿಯಂತ್ರಣಗಳ ಬಿಗಿ ಬಟ್ಟೆ ಧರಿಸಿಕೊಂಡು ನಾವು ಉಸಿರುಕಟ್ಟಿ ಸಾಯುತ್ತಿದ್ದೇವೆ.ಕಬ್ಬಿಣದ ಕುದಿಯುವ ಎಣ್ಣೆಯ ಬಾಣಲೆಯಲ್ಲಿ ಕೈಹಾಕಿ ನಮ್ಮ ಸತ್ಯವನ್ನು ಸಾಬೀತುಮಾಡಬೇಕಾದ ಮಧ್ಯಕಾಲೀನ ಆಣೆ-ಪ್ರಮಾಣಗಳ ಲೋಕಕ್ಕೆ ನಾವು ಮತ್ತೆ ಮರಳಿದ್ದೇವೆ.ಅಧಿಕಾರದ ,ಸಂಪತ್ತಿನ ,ಅಹಂಕಾರದ ಮಾಯದ ಕನ್ನಡಿಯಲ್ಲಿ ನಮ್ಮನ್ನು  ನೋಡಿಕೊಂಡು   ನಾವೇ ಸರ್ವಶೇಷ್ಟ ರೆಂದು ಸಾರಿಕೊಳ್ಳುವ ‘ ನಂಬರ್ ಒನ್’ ನ ಜೂಜಾಟದಲ್ಲಿ ನಾವು ಮೈ ಮರೆತಿದ್ದೇವೆ.’ಸತ್ತಂತಿಹರನು ಬಡಿದೆಚ್ಚರಿಸು ‘ ಎಂಬ ಕವಿವಾಣಿಗೆ ರಾಗತಾಳ ಜೋಡಿಸಿ ಆರ್ಕೆಸ್ಟ್ರಾ ದಲ್ಲಿ ನಾವು ಜೋರಾಗಿ  ಹಾಡುತ್ತೇವೆ.ಕುಳ್ಳರ ಬದಲು ಕಳ್ಳರು ನಮ್ಮ ಕಾಡುಗಳಲ್ಲಿ ಮನೆಮಾಡಿದ್ದಾರೆ.ನಮ್ಮ ಪಶ್ಚಿಮ ಘಟ್ಟದ ಕಾಡುಗಳನ್ನು ವಿಶ್ವಪರಂಪರೆಗೆ ಸೇರಿಸುವ ಬದಲು ಅದರ ಶವಪೆಟ್ಟಿಗೆಗೆ ಮೊಳೆ ಹೊಡೆಯುವ ಅವಸರದಲ್ಲಿ ಅವರು ಇದ್ದಾರೆ.

ಮೊನ್ನೆ  ಭಾನುವಾರ ನಾವು ಲೋಹ್ರ್ ಗೆ ಹೋದ ಬಳಿಕ ಅಲ್ಲಿ  ಇಡೀ ದಿನ ಜಿಟಿಜಿಟಿ ಮಳೆ ಬೀಳುತ್ತಿತ್ತು.ಸಂಜೆ  ಸಿನ್ಹ ಮತ್ತು ಬಾರ್ಬರರನ್ನು ಬೀಳ್ಕೊಂಡು ರೈಲು ಹತ್ತಿದಾಗ ಕವಿ ಕೆ.ಎಸ.ನರಸಿಂಹಸ್ವಾಮಿ ಅವರ ಕವನ ‘ರೈಲು ನಿಲ್ದಾಣದಲ್ಲಿ’ ನೆನಪಾಯಿತು.ಮತ್ತೆ ಮತ್ತೆ ನೆನಪಾದಳು -ಹಿಮಗೌರಿ .

.’ಎಲ್ಲಿದ್ದಿಯೇ ಹಿಮಗೌರಿ  ?’   ‘ ಇಲ್ಲೇ ಇದ್ದೇನಮ್ಮ! ‘

ಧ್ವನಿ ಅನುರಣನಗೊಳ್ಳುತ್ತಿದ್ದದ್ದು  ಲೋಹ್ರ್ ಕಣಿವೆಯ ಸುತ್ತಲಿನ ಸ್ಪೆಸ್ಸರ್ತ್ ಕಾಡಿನ ಮೂಲೆಮೂಲೆಗಳಿಂದ .

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: