ಮರ್ಕ್ತ್ ಸ್ತೆಫ್ತ್ :ಜರ್ಮನಿಯ ಅತಿ ಹಳೆಯ ಬಂದರಿನ ಹಳ್ಳಿಯ ಚಿತ್ರಗಳು

Posted on ಜುಲೈ 10, 2011. Filed under: Uncategorized |


ಜರ್ಮನಿಯ ಬವೇರಿಯ ಪ್ರಾಂತ್ಯದ ಕಿತ್ಜಿನ್ಗನ್ ಜಿಲ್ಲೆಯಲ್ಲಿ  ಕಿತ್ಜಿನ್ಗನ್  ಪಟ್ಟಣದಿಂದ ಎಂಟು ಕಿಲೋಮೀಟರ್  ದೂರದಲ್ಲಿ ಇರುವ ಒಂದು ಹಳ್ಳಿ ‘ಮರ್ಕ್ತ್ ಸ್ತೆಫ್ತ್’. ವ್ಯೂರ್ತ್ಸ್ ಬುರ್ಗ್ ನಿಂದ ಸುಮಾರು ಇಪ್ಪತ್ತೈದು ಕಿಮೀ ಅಂತರದಲ್ಲಿದೆ.ಮಾಯಿನ್ ನದಿಯ ಎಡದಂಡೆಯಲ್ಲಿ  ಇರುವ ‘ಮರ್ಕ್ತ್ ಸ್ತೆಫ್ತ್’ ಜರ್ಮನಿಯ ಅತಿ ಹಳೆಯ ಬಂದರು ಆಗಿತ್ತು ಎಂದು ಹೇಳುತ್ತಾರೆ.ಅದು ಬಂದರು ಆಗಿದ್ದ ಗುರುತುಗಳು ಈಗಲೂ ಆಲ್ಲಿ ಇವೆ.ಹಡಗುಗಳನ್ನು ಕಟ್ಟಿ ಹಾಕುತ್ತಿದ್ದ ಸಂಕೋಲೆಗಳು ಅಲ್ಲಿ ಗತಕಾಲದ ಜಲಸಾಗಣೆಯ ನೆನಪನ್ನು ಸಾರುತ್ತವೆ.

ಈ ಬಂದರಿನ ಮೂಲಕ ಈ ಊರಿನ ಜನರನ್ನು ಕೂಲಿಯಾಳುಗಳಾಗಿ ಅಮೆರಿಕಕ್ಕೆ ಹಡಗುಗಳಲ್ಲಿ ಸಾಗಿಸುತ್ತಿದ್ದ ಕಥನಗಳು ಇಲ್ಲಿನ ಜನರ ನೆನಪುಗಳ ದಾಖಲೆಗಳ ಮೂಲಕ ಹರಿದು ಬಂದಿವೆ.’ ಮರ್ಕ್ತ್ ‘ ಎಂದರೆ ‘ಮಾರ್ಕೆಟ್’ (ಸಂತೆ). ಅದು ಮನುಷ್ಯರ ಮಾರಾಟದ ಸಂತೆಯೂ ಆಗಿದ್ದ ಹಾಗೆ ಕಾಣಿಸುತ್ತದೆ.ಬಡತನ ಈ ಹಳ್ಳಿಯನ್ನು ಹಿಂದಿನಿಂದಲೂ ಕಾಡಿರಬೇಕು.ಈಗಲೂ ಜರ್ಮನಿಯ ದೊಡ್ಡ ಪಟ್ಟಣಗಳನ್ನು ನೋಡಿದವರಿಗೆ,ಜರ್ಮನಿಯ ಆರ್ಥಿಕ ಅಭಿವೃದ್ಧಿಯ ಬಗ್ಗೆ ಕೇಳಿದವರಿಗೆ,ನೋಡಿದವರಿಗೆ ,’ಮರ್ಕ್ತ್ ಫೆಸ್ಟ್’ಕಂಡಾಗ ಆಶ್ಚರ್ಯ ಆಗಬಹುದು.ಜುಲೈ ಎರಡರಂದು ನಾನು ಈ ಹಳ್ಳಿಯಲ್ಲಿ  ತಿರುಗಾಡಿದೆ,ನಮ್ಮ ಅತಿಥಿಗೃಹದ ಪ್ರವಾಸಿತಂಡದ ಜೊತೆಗೆ. ಈ ಬಾರಿ ನಾನು ಜರ್ಮನಿಯಲ್ಲಿ ಕೆಲವೇ ದಿನಗಳ ಹಿಂದೆ ಕಂಡಿದ್ದ ಬರ್ಲಿನ್, ಹಂಬುರ್ಗ್, ಫ್ರಾಂಕ್ ಫುರ್ತ್ ನಗರಗಳ ಕಲ್ಪನೆಯೊಂದಿಗೆ  ಮರ್ಕ್ತ್ ಫೆಸ್ಟ್ ನ ಓಣಿಗಳಲ್ಲಿ ಅಡ್ಡಾಡಿದಾಗ ನನ್ನ ಕಣ್ಣಿಗೆ ಕಂಡದ್ದು ಅಪ್ಪಟ ಹಳ್ಳಿಯ ಮನೆಗಳು.ಸುಣ್ಣಬಣ್ಣ ಕಾಣದೆ ಅನೇಕ ವರ್ಷಗಳೇ ಸಂದಿವೆ.ಅತಿ ಹಳೆಯ ಮನೆಯೊಂದನ್ನು ನೋಡಿದೆ.ಅದರ ಚಿತ್ರ ಕೂಡ ಇಲ್ಲಿದೆ.

ಜರ್ಮನಿಯ ಸಣ್ಣ ಪಟ್ಟಣಗಳಲ್ಲೂ  ಚರ್ಚ್ ಒಂದು ಇರುತ್ತದೆ ,ಚೆನ್ನಾಗಿ ಕಲಾತ್ಮಕವಾಗಿ ಇರುತ್ತದೆ.ಮತ್ತೆ ಸಮಾಧಿ ಸ್ಥಳ -ಸೆಮಿತರಿ-ಪ್ರತ್ಯೇಕವಾಗಿ ಇರುತ್ತದೆ.ಆದರೆ ಮರ್ಕ್ತ್ ಫೆಸ್ಟ್ ನಲ್ಲಿ ನಾನು ಕಂಡ ಅಪೂರ್ವ ಸ್ಥಳ ಎಂದರೆ ,ಅಲ್ಲಿ ಪ್ರತ್ಯೇಕ ಚರ್ಚ್ ಕಟ್ಟಡ ಇಲ್ಲ. ಸಮಾಧಿ ಸ್ಥಳದಲ್ಲಿ ಕೆಲವು ಬೆಂಚ್ ಇಟ್ಟಿದ್ದಾರೆ.ಅಲ್ಲಿ ಸಣ್ಣ ಜಗಲಿಯಲ್ಲಿ ಪ್ರಾರ್ಥನೆ ಮಾಡುತ್ತಾರೆ.ಅದರ ಸಣ್ಣ ಬಯಲು ಅಂಗಳದಲ್ಲಿ ಸಮಾಧಿಗಳು.ಅದರ ಒಂದು ಚಿತ್ರ ಇಲ್ಲಿ ಕೊಟ್ಟಿದ್ದೇನೆ.

ಮರ್ಕ್ತ್ ಫೆಸ್ಟ್ ಊರಿನ ಜನಸಂಖ್ಯೆ ಒಟ್ಟು ೧೭೮೭ (ದಶಂಬರ ೨೦೧೦ರ ಗಣತಿಯಂತೆ ).ಈಗಲೂ ಹೆಚ್ಚಿನವರು ಕರಕುಶಲಗಾರರು.ಬಡಗಿಯೊಬ್ಬ ಕೆಲಸಮಾಡುತ್ತಿದ್ದ ದೃಶ್ಯ ಕಣ್ಣಿಗೆ ಬಿತ್ತು.ಅದನ್ನು ಸೆರೆಹಿಡಿದು ಇಲ್ಲಿ ಕೊಟ್ಟಿದ್ದೇನೆ.

ಮರ್ಕ್ತ್ ಫೆಸ್ಟ್ ನಲ್ಲಿ ಹುಟ್ಟಿದ ಆಲ್ಬರ್ಟ್ ಕೆಸ್ಸೆಲ್ ರಿಂಗ್  (೧೮೮೫-೧೯೬೦)  ಮುಂದೆ ಜರ್ಮನಿಯ ಮಿಲಿಟರಿಯಲ್ಲಿ ಜನರಲ್ ಆದ.ಎರಡನೆಯ ಜಾಗತಿಕ ಮಹಾಯುದ್ಧದಲ್ಲಿ  ಆತ ಜನರಲ್ ಆಗಿ ಪ್ರಸಿದ್ಧ ಮತ್ತು ಕುಪ್ರಸಿದ್ಧ ಆದ. ಆತನ ಮಿಲಿಟರಿ  ಹತ್ಯಾಕಾಂಡಕ್ಕಾಗಿ ಯುದ್ಧದ ಬಳಿಕ ಆತನಿಗೆ ಜರ್ಮನಿಯಲ್ಲಿ ವಿಚಾರಣೆ ನಡೆಸಿ ಮರಣದಂಡನೆಯ  ಶಿಕ್ಷೆ  ವಿಧಿಸಲಾಯಿತು .ಬಳಿಕ ಆತನ ಆರೋಗ್ಯದ ಕಾರಣಕ್ಕಾಗಿ ಅದನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಯಿತು.ಜೈಲಿನಲ್ಲಿ ಇದ್ದಾಗಲೇ ಆಲ್ಬರ್ಟ್ ತನ್ನ ನೆನಪುಗಳ ಆಧಾರದಲ್ಲಿ ಒಂದು ಪುಸ್ತಕ ಬರೆದ -‘Soldat bis zum letzten Tag’ (1953).ಅದು ಮುಂದೆ ಇಂಗ್ಲಿಶ್ ನಲ್ಲೂ ಪ್ರಕಟವಾಯಿತು- ‘A Soldier in the Last Day’. ಅಲ್ಬರ್ಟ್ ತನ್ನ ಅನುಭವ ಕಥನದ ಇನ್ನೊಂದು ಪುಸ್ತಕ ಬರೆದ :’Gedanken zum Zweiten Weltkrieg ‘ ( Thoughts on the Second World War) ( 1955).

ಹೀಗೆ ಮರ್ಕ್ತ್ ಫೆಸ್ಟ್  ಹಳೆಯ ನೆನಪುಗಳ ವಿಭಿನ್ನ ಚಿತ್ರಗಳನ್ನು ಒಟ್ಟಿಗೆ ಕೊಡುತ್ತದೆ: ಅಲ್ಲಿ ಮಾಯಿನ್  ನದಿಯ ದಂಡೆಯ ಹಡಗಿನ ಲಂಗರಿನ ಸಂಕೋಲೆ ಅಲ್ಲಿನ ಬಡ ಗುಲಾಮರ ಬಂಧನದ ಕತೆ ಹೇಳುತ್ತದೆ.ಬೀದಿಬದಿಯ ಮನೆಗಳ ಗೋಡೆ ಕಿಟಿಕಿಗಳು ತಮ್ಮ ಕಷ್ಟ ಹೇಳಿಕೊಳ್ಳುತ್ತವೆ.ಅಲ್ಲಿ ಹುಟ್ಟಿದ ಮಿಲಿಟರಿ ಜನರಲ್ ಆಲ್ಬರ್ಟ್ ನ ಆತ್ಮಕಥನ ತನ್ನ ಕಾರ್ಯಾಚರಣೆಯನ್ನು ಸಮರ್ಥಿಸುವಾಗಲೇ ಯುದ್ಧಗಳು ಉಂಟುಮಾಡುವ ಕ್ರೌರ್ಯಗಳ ಗಾಥೆಯನ್ನು ಬಿತ್ತರಿಸುತ್ತದೆ.ಸಮಾಧಿಯೊಳಗೆ ಚರ್ಚೋ -ಚರ್ಚಿನೊಳಗೆ ಸಮಾಧಿಯೋ ಎನ್ನುವ ತಾತ್ವಿಕ ಚಿಂತನೆಯು ಆರ್ಥಿಕ ಮಿತಿಯ ಕಾರಣಕ್ಕಾಗಿ ವಾಸ್ತವವಾಗುವ ‘ಧಾರ್ಮಿಕ ವ್ಯಂಗ್ಯ’ ವು ಹಳ್ಳಿಯ  ಬದುಕಿನ ಲೋಕದೃಷ್ಟಿಯನ್ನು ಕಾಣಿಸುತ್ತದೆ. ಇವೆಲ್ಲವುಗಳ ನಡುವೆ ಅಲ್ಲಿನ ಬಡಗಿಯೊಬ್ಬ ತನ್ನ ನಿತ್ಯಕಾಯಕದಲ್ಲಿ ತೊಡಗಿದ್ದಾನೆ – ‘ ಎನ್ನ  ಕೈ ಕಾಲೇ ಸಮಾಧಿ ,ದೇಹವೇ ಪ್ರಾರ್ಥನೆಯ ಮಂಟಪವಯ್ಯಾ …….’

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: