ಹೆಣ್ಣಿಗೊಂದು ಕೋಣೆ ,ಕೋಣೆಯೊಳಗೆ ಹೆಣ್ಣು :ಜರ್ಮನಿಯ ಮ್ಯೂಸಿಯಂ ನಲ್ಲಿ ಹೆಣ್ಣು

Posted on ಜುಲೈ 7, 2011. Filed under: ಜರ್ಮನಿ | ಟ್ಯಾಗ್ ಗಳು:, , , , |


ವ್ಯೂರ್ತ್ಸ್ ಬುರ್ಗ್ ವಿವಿ ಅತಿಥಿಗೃಹದ ವಿದೇಶಿ ವಿಜ್ಞಾನಿಗಳ ಕೂಟದ ಮಹಿಳೆಯರು -ಅಂಜೆಲಿಕಾ,ಡೋರಿಸ್,ಹೆಲ್ಲಿ-ಕಳೆದ ಶನಿವಾರ (ಜುಲೈ ೨ ) ನಮ್ಮನ್ನು ಪ್ರವಾಸಕ್ಕೆ ಕರೆದುಕೊಂಡು ಹೋದದ್ದು ,ಇಲ್ಲಿಂದ ಸುಮಾರು ೩೫ ಕಿಲೋಮೀಟರ್ ದೂರದಲ್ಲಿ ಮಾಯಿನ್ ನದಿಯ ಪಕ್ಕ ಇರುವ ಮೂರು ಹಳ್ಳಿಗಳಿಗೆ.ಒಕ್ಷೆನ್ ಫುರ್ತ್,ಮರ್ಕ್ತ್ ಬ್ರೈತ್ ಮತ್ತು ಮರ್ಕ್ತ್ ಸ್ತೆಫ್ತ್ .ಅಕ್ಕಪಕ್ಕ ಇರುವ ಈ ಮೂರು ಹಳ್ಳಿಗಳು ಕ್ರಮಾಗತವಾಗಿ ಒಂದರಿಂದ ಒಂದು ಚಿಕ್ಕದಾಗಿ ಇವೆ.ಒಕ್ಷೆನ್ ಫುರ್ತ್ ಸಣ್ಣ ಪೇಟೆಯ ಹಾಗೆ ಕಾಣಿಸಿದರೆ ,ಮರ್ಕ್ತ್ ಸ್ತೆಫ್ತ್ ಈಗಲೂ ಪೂರ್ತಿ ಹಳ್ಳಿಯಾಗಿಯೇ ಉಳಿದಿದೆ.ಇವುಗಳ ನಡುವಿನಲ್ಲಿ ಗಾತ್ರ ಮತ್ತು ಸ್ವರೂಪದ ದೃಷ್ಟಿಯಿಂದ ಮರ್ಕ್ತ್ ಬ್ರೈತ್ ಕಾಣಿಸುತ್ತದೆ.
ಮರ್ಕ್ತ್ ಬ್ರೈತ್ ಅಂದರೆ ‘ವಿಶಾಲ ಮಾರ್ಕೆಟ್ ‘ ಎಂದು ಅರ್ಥ.ಜರ್ಮನಿಯ ಬವೇರಿಯ ಪ್ರಾಂತದ ಕಿತ್ಜಿನ್ಗನ್ ಜಿಲ್ಲೆಯಲ್ಲಿ ಮಾಯಿನ್ ನದಿಯ ದಕ್ಷಿಣ ತುದಿಯಲ್ಲಿ ಇರುವ ಹಳ್ಳಿ -ಮರ್ಕ್ತ್ ಬ್ರೈತ್.ಈಗ ಸುಮಾರು ನಾಲ್ಕು ಸಾವಿರ ಜನವಸತಿ ಇರುವ ಪ್ರದೇಶ.ಒಂದು ಕಾಲಕ್ಕೆ ರೋಮನ್ ಚಕ್ರವರ್ತಿ ಆಗಸ್ತಸ್ ನ ಆಳ್ವಿಕೆಗೆ ಒಳಗಾದದ್ದು.೧೫೫೭ರಲ್ಲಿ ಈ ಪ್ರದೇಶವನ್ನು ಆಳಿದ ಫೆರ್ಡಿನಂದ್ ನು ಇಲ್ಲಿ ಸಂತೆ ನಡೆಸಲು ಅವಕಾಶ ಕಲ್ಪಿಸಿದನು.ಹಾಗಾಗಿಯೇ ಈ ಸ್ಥಳಕ್ಕೆ ‘ಮರ್ಕ್ತ್ ಬ್ರೈತ್’ ( ವಿಶಾಲ ಸಂತೆ ) ಎಂಬ ಹೆಸರು ಬಂತು.೧೭ ಮತ್ತು ೧೮ನೆಯ ಶತಮಾನದಲ್ಲಿ ಮರ್ಕ್ತ್ ಬ್ರೈತ್ ಒಂದು ಪ್ರಮುಖ ಮಾರ್ಕೆಟ್ ಕೇಂದ್ರವಾಗಿತ್ತು.ಜಲಮಾರ್ಗದಲ್ಲಿ ಇಲ್ಲಿನ ಮಾಯಿನ್ ನದಿಯಿಂದ ಯೂರೋಪಿನ ದನುಬೆ ನದಿಗೆ ಸಮೀಪದ ಜಲಮಾರ್ಗ ಇದ್ದುದು ಸರಕುಸಾಗಣೆಗೆ ತುಂಬಾ ಅನುಕೂಲ ಆಗಿತ್ತು.
ಮರ್ಕ್ತ್ ಬ್ರೈತ್ ನ ಮುಖ್ಯ ಆಕರ್ಷಣೆಯ ಸ್ಥಳ -Malerwinklhaus ಮ್ಯೂಸಿಯಂ.ಇಲ್ಲಿರುವುದು ಎಲ್ಲ ಹೆಂಗುಸರ ಕೋಣೆಗಳು ;೧೮೭೫-೧೯೨೫ ರ ಅವಧಿಯಲ್ಲಿ ಇಲ್ಲಿ ಜನಿಸಿದ ಹೆಣ್ಣುಮಕ್ಕಳ ಬದುಕಿನ ಹಂತಹಂತದ ಅಂತರ ಅಂತರದ ಕೋಣೆಗಳು.Virginia Woolf ಅವಳ ‘A Room of One’s Own ‘(1929) ಕೃತಿ ,ಸ್ತ್ರೀವಾದಿ ಚಿಂತನೆಯಲ್ಲಿ ಸಾಕಷ್ಟು ಚರ್ಚೆಗೆ ಒಳಗಾದದ್ದು.ಲೇಖಕಿಯರಿಗೆ ತಮ್ಮದೇ ಒಂದು’ ಕೋಣೆ’ ಮತ್ತು ಹಣ ಬೇಕು ಎನ್ನುವ ವರ್ಜಿನಿಯಳ ವಾದದ ವಿವರ ಇಲ್ಲಿ ಅಗತ್ಯ ಇಲ್ಲ.ಮರ್ಕ್ತ್ ಬ್ರೈತ್ ನ ಮ್ಯೂಸಿಯಂ ನ ‘ಮಹಿಳೆಯರ ಕೋಣೆಗಳು ‘ಹೇಳುವ ಕತೆಗಳೇ ಬೇರೆ.ಇಲ್ಲಿನ ಒಂದೊಂದು ಸಣ್ಣ ಕೋಣೆಯೂ ಪುಟ್ಟ ಹೆಣ್ಣು ಮಗುವಿಂದ ತೊಡಗಿ ,ಮದುವೆ ಆದ ಮತ್ತು ಆಗಲಾರದ ಹೆಣ್ಣುಗಳ ಸಹಿತ ಮುದುಕಿಯರ ವರೆಗೆ ೧೮ನೆಯ ಶತಮಾನದ ಕೊನೆಯ ಮತ್ತು ೧೯ನೆಯ ಶತಮಾನದ ಪೂರ್ವಾರ್ಧದ ಈ ಊರಿನ ಹೆಣ್ಣುಗಳ ಬದುಕಿನ ಪುಟಗಳ ಚಿತ್ರಗಳನ್ನು ತೆರೆದಿಡುತ್ತವೆ.ವಸ್ತುಗಳು,ಫೋಟೋಗಳು,ಮಾದರಿಗಳು ಇತ್ಯಾದಿ ಬೇರೆಬೇರೆ ಮಾಧ್ಯಮಗಳಲ್ಲಿ ಈ ಪ್ರದರ್ಶನಗಳು ಬಿಂಬಿತವಾಗಿವೆ.
ಬಾಲ್ಯಕ್ಕೆ ಸಂಬಂಧಿಸಿದ ಕೋಣೆಗಳಲ್ಲಿ ಹುಡುಗಿಯರಿಗಾಗಿಯೇ ಪ್ರತ್ಯೇಕವಾಗಿ ಇದ್ದ ಆಟಿಕೆಗಳನ್ನು ಪ್ರದರ್ಶಿಸಲಾಗಿದೆ.ಪುಟ್ಟ ಹುಡುಗಿಯರನ್ನು ‘ಗೃಹಿಣಿ’ ಮತ್ತು ‘ತಾಯಿ’ ಯರಾಗಿ ಸಿದ್ಧಪಡಿಸಲು ಮತ್ತು ಅದಕ್ಕೆ ಬೇಕಾದ ತರಬೇತಿ ಕೊಡಲು ಈ’ ಹುಡುಗಿಯರ ಆಟಿಕೆ ‘ಗಳನ್ನು ಬಳಸಲಾಗುತ್ತಿತ್ತು. ಆ ಕಾಲದಲ್ಲಿ ಹೆಂಗುಸರಿಗೆ ಶಿಕ್ಷಣದ ಮತ್ತು ಉದ್ಯೋಗದ ಅವಕಾಶಗಳು ತುಂಬಾ ಕಡಮೆ ಇದ್ದುವು.ಹುಡುಗಿಯರಿಗೆ ಮದುವೆ ಆಗುವುದೇ ಬದುಕಿನಲ್ಲಿ ಬಹಳ ಮುಖ್ಯವಾದ ಗುರಿ ಎನ್ನುವ ಭಾವನೆ ಪ್ರಭುತ್ವಾತ್ಮಕವಾಗಿತ್ತು.ಆದ್ದರಿಂದ ಹೆಚ್ಚಿನ ಹೆಣ್ಣು ಮಕ್ಕಳಿಗೆ ‘ಮದುವೆಯೇ ಸಾರ್ಥಕ ಬದುಕಿನ ಅವಕಾಶ ‘ಎಂಬ ಹಾಗೆ ಇತ್ತು.ಹುಡುಗಿಯೊಬ್ಬಳಿಗೆ ಒಳ್ಳೆಯ ಗಂಡ ಸಿಗಬೇಕಾದರೆ ,ಆಕೆಗಿರಬೇಕಾದ ಮುಖ್ಯ ಅರ್ಹತೆ ಎಂದರೆ -ಆಕೆಗೆ ಬಟ್ಟೆಗಳನ್ನು ಚೆನ್ನಾಗಿ ಹೊಲಿಯಲು ತಿಳಿದಿರಬೇಕು.ಆ ಕಾಲದಲ್ಲಿ ಶಾಲೆಗಳಲ್ಲಿ ಹುಡುಗಿಯರಿಗೆ ಕಲಿಸುತ್ತಿದ್ದದ್ದು ,ಹೇಗೆ ಸಮರ್ಥ’ ಹೊಲಿಗೆಯ ಹೆಂಗುಸು ‘ಆಗಿ ಕೆಲಸಮಾಡಬೇಕು ಎನ್ನುವುದನ್ನು.
ಹೆಣ್ಣೊಬ್ಬಳು ಒಮ್ಮೆ ‘ತನ್ನ ಬದುಕಿನ ಗುರಿ’ ಯನ್ನು ಸಾಧಿಸಿದ ಮೇಲೆ ,ಅಂದರೆ ಮದುವೆಯಾದ ಬಳಿಕ ,ಮುಂದೆ ಅವಳಿಗಾಗಿ ಕಾದಿತ್ತು -ಮನೆಕೆಲಸದ ಮಣಭಾರ.ಆಧುನಿಕ ಯಂತ್ರ ಸಾಧನಗಳು ಇಲ್ಲದ ಆ ಕಾಲದಲ್ಲಿ ಹೆಂಗುಸರು ಅಡುಗೆ ಮಾಡಲು,ಪಾತ್ರೆ ತೊಳೆಯಲು,ಬಟ್ಟೆ ಒಗೆಯಲು,ಕೋಣೆಗಳನ್ನು ಶುಚಿ ಮಾಡಲು ತಮ್ಮ ದೇಹವನ್ನೇ ಯಂತ್ರವನ್ನಾಗಿ ಬಳಸುತಿದ್ದ ಕ್ರಮಗಳ ಚಿತ್ರಗಳು ಮ್ಯೂಸಿಯಂ ನ ಕೋಣೆಗಳಲ್ಲಿ ಏದುಸಿರು ಬಿಡುತ್ತಿದ್ದುವು.ಮನೆಕೆಲಸದೊಂದಿಗೆ ಆ ಹೆಂಗುಸರಿಗೆ ಅನೇಕ ಮಕ್ಕಳನ್ನು ಸಾಕುವ ಹೊಣೆಗಾರಿಕೆ.ಇದರ ಜೊತೆಗೆ ತಮ್ಮ ಗಂಡಂದಿರ ಕೆಲಸಗಳಲ್ಲಿ ನೆರವಾಗುವುದು.ಆ ಕಾಲದಲ್ಲಿ ಗಂಡಂದಿರು ಹೆಚ್ಚಾಗಿ ರೈತರು,ಕರಕುಶಲ ಕರ್ಮಿಗಳು ,ಸಣ್ಣ ಅಂಗಡಿಯವರು ಆಗಿ ,ಬದುಕು ಸಾಗಿಸುತ್ತಿದ್ದರು.ಹೆಂಡತಿಯರು ಗಂಡಂದಿರ ಈ ಕೆಲಸಗಳಲ್ಲೂ ಸಹಾಯಕ್ಕೆ ಸೇರಿಕೊಳ್ಳುತ್ತಿದ್ದರು.ಅನೇಕ ಹೆಂಗುಸರು ಮಾರ್ಕೆಟ್ ನಲ್ಲಿ ಗಂಡಂದಿರೊಂದಿಗೆ ಬಟ್ಟೆ ಮತ್ತು ಮಸಾಲೆ ಪದಾರ್ಥಗಳನ್ನು ಮಾರುತ್ತಿದ್ದರು.ಮರ್ಕ್ತ್ ಬ್ರೈತ್ -ಮಸಾಲೆ ವಸ್ತುಗಳ ಒಂದು ಪ್ರಮುಖ ಮಾರ್ಕೆಟ್ ಆಗಿತ್ತು ಎನ್ನುವ ವಾಸನೆ ಆ ಮ್ಯೂಸಿಯಂ ನ ಬರಣಿಗಳ ಪ್ರದರ್ಶನದಲ್ಲಿ ಮೂಗಿಗೆ ಗರಂ ಆಗಿ ಬಡಿಯುತ್ತಿತ್ತು.
ಮದುವೆ ಆಗದ ಮತ್ತು ಆಗಲಾರದ ಹೆಣ್ಣುಗಳ ಬದುಕಿನ ಚಿತ್ರಗಳು ಆ ಮ್ಯೂಸಿಯಂನ ಇನ್ನೊಂದು ಕೋಣೆಯಲ್ಲಿ ಇದ್ದುವು.ಸನ್ಯಾಸಿನಿಯರು ಮತ್ತು ಅಧ್ಯಾಪಕಿಯರು ತಮ್ಮ ದೈನಂದಿನ ಮತ್ತು ವೃತ್ತಿಪರ ಬದುಕನ್ನು ನಡೆಸುತ್ತಿದ್ದ ಬಗೆಗಳು ಅಲ್ಲಿ ಅನಾವರಣಗೊಂಡಿದ್ದವು.ಇವರು ಒಂದು ಬಾರಿ ಮದುವೆಯಾಗಿಬಿಟ್ಟರೆ,ಮತ್ತೆ ತಮ್ಮ ಹಿಂದಿನ ಉದ್ಯೋಗ ಮಾಡುವಂತಿರಲಿಲ್ಲ.ಕೆಲವೇ ಮಂದಿಗೆ ಶೈಕ್ಷಣಿಕ ವಲಯದಲ್ಲಿ ಅವಕಾಶ ದೊರೆಯುತ್ತಿತ್ತು.
ಆ ಕಾಲದ ಒಂದು ದುರಂತವೆಂದರೆ ಗರ್ಭಿಣಿಯರ ಮತ್ತು ಶಿಶುಗಳ ಅಕಾಲಿಕ ಮರಣ.ಯುದ್ಧಗಳ ಕಾಲದಲ್ಲಿ ಅನೇಕ ಹೆಣ್ಣುಗಳು ವಿಧವೆಯರಾಗಿ ಪಡುತ್ತಿದ್ದ ಸಂಕಷ್ಟದ ಚಿತ್ರಗಳು ಆ ಪ್ರದರ್ಶನದಲ್ಲಿ ನರಳುತ್ತಿದ್ದುವು.
ಮಹಿಳೆಯರು ತಮ್ಮ ಮಾನಸಿಕ ನೋವುಗಳ ಪರಿಹಾರಕ್ಕಾಗಿ ಧರ್ಮದ ಮೇಲೆ ಹೆಚ್ಚು ಅವಲಂಬಿತರಾಗಿ ಇರುತ್ತಿದ್ದರು.ಹೆಣ್ಣು ಮತ್ತು ಧಾರ್ಮಿಕ ಬದುಕು ಅವಿನಾಭಾವ ಸಂಬಂಧವನ್ನು ಹೊಂದುವ ಅನಿವಾರ್ಯತೆ ಆಗ ನಿರ್ಮಾಣ ಆಗಿತ್ತು.ಕ್ಯಾಥೊಲಿಕ್,ಪ್ರೋಟೆಸ್ಟೆಂಟ್ ಮತ್ತು ಯಹೂದ್ಯ ಕುಟುಂಬಗಳು ಧಾರ್ಮಿಕ ಬದುಕಿನೊಂದಿಗೆ ಹೊಂದಿಕೊಂಡಿದ್ದ ವಿವರಗಳು ಅಲ್ಲಿ ಕಾಣಿಸಿದವು.
ಎಲ್ಲ ಬಡತನ ,ದುಡಿಮೆಗಳ ನಡುವೆಯೂ ಚೆಂದವಾಗಿ ಕಾಣಿಸಿಕೊಳ್ಳುವುದು ಹೆಣ್ಣಿಗೆ ಬಹಳ ಅಗತ್ಯ ಮತ್ತು ಮುಖ್ಯವಾಗಿತ್ತು.ಎಷ್ಟೇ ಹಣಕಾಸಿನ ಮುಗ್ಗಟ್ಟು ಇದ್ದರೂ ಅವರು ಸುಂದರವಾದ ಬಟ್ಟೆಧರಿಸಿಕೊಳ್ಳುತ್ತಿದ್ದರು ಮತ್ತು ತಲೆಯಲ್ಲಿ ಒಂದು ಹ್ಯಾಟ್ ಇಟ್ಟುಕೊಳ್ಳುತ್ತಿದ್ದರು.ಇಂತಹ ಹೆಚ್ಚಿನ ಬಟ್ಟೆಗಳನ್ನು ಹೆಂಗುಸರು ತಾವೇ ಹೊಲಿದುಕೊಳ್ಳುತ್ತಿದ್ದರು.’ಹೊಲಿಗೆಯ ಯಂತ್ರ’ ದ ಶೋಧನೆ ಅವರ ಬದುಕಿಗೆ ಸಂಜೀವಿನಿ ಆಗಿತ್ತು.ಬಡತನ ಮತ್ತು ಫ್ಯಾಶನ್ -ಒಟ್ಟಿಗೆ ಬದುಕುವ ಅನಿವಾರ್ಯ ಸನ್ನಿವೇಶ ,ಮಹಿಳಾ ಅಧ್ಯಯನದ ಒಂದು ಭಿನ್ನ ನೋಟವನ್ನು ಕೊಡಬಲ್ಲುದು. ಈ ಮ್ಯೂಸಿಯಂನಲ್ಲಿ ಇರುವ ಮಹಿಳೆಯರ ಉಡುಪುಗಳ ವೈವಿಧ್ಯ ಮತ್ತು ಬೆಳವಣಿಗೆಯ ಹಂತಗಳು ಶ್ರೇಣಿಕೃತ ಮಾದರಿಗಳ ಮಹತ್ವದ ಅಧ್ಯಯನಕ್ಕೆ ಅವಕಾಶ ಕಲ್ಪಿಸುತ್ತವೆ.ಮಹಿಳೆಯರ ಒಳ ಉಡುಪುಗಳ ವಿನ್ಯಾಸಗಳು ಗಂಡುಸರ ಮೆಚ್ಚುಗೆಗೆ ಅನುಸಾರವಾಗಿ ರೂಪುಗೊಂಡ ಸಂಕಥನ ಅಲ್ಲಿ ಬಿತ್ತರಗೊಳ್ಳುತ್ತದೆ.
೧೯೪೦ರ ವರೆಗಿನ ಕಾಲಘಟ್ಟದಲ್ಲಿನ ಕೆಲಸದ ಹೆಣ್ಣುಗಳ ಬದುಕಿನ ದಾರುಣತೆಯ ಪಳೆಯುಳಿಕೆಗಳು, ಅಲ್ಲಿನ ಅವರದ್ದೇ ಆದ ‘ಕೋಣೆ’ಗಳ ಒಳಗೆ ಪ್ರಯಾಸದಿಂದ ತೆವಳಿಕೊಂಡು ಅಡ್ಡಾಡಿದಾಗ ನಮ್ಮ ಕಾಲಿಗೆ ಎಡವುತ್ತವೆ.ಇಲ್ಲಿ ಕೂಡ ಹೆಣ್ಣುಗಳು ಹೊಲಿದ ಬಟ್ಟೆಗಳು ಮತ್ತು ಕಸೂತಿಗಳು ‘ಗೃಹಿಣಿಯರು ಸರಿಯಾಗಿ ವರ್ತಿಸಬೇಕು’ಎನ್ನುವ ಸಂದೇಶವನ್ನು ಸಾರುತ್ತವೆ.
ಮಕ್ಕಳ ಆಟಿಕೆಗಳ ದೊಡ್ಡ ಸಂಗ್ರಹವೊಂದು ಆ ಮ್ಯೂಸಿಯಂ ನ ಆಕರ್ಷಣೆಯ ಅಂಗಣ.೧೯೨೦ರ ಸುಮಾರಿನ ಈ ಸಂಗ್ರಹದಲ್ಲಿ ಮಕ್ಕಳ ಹಳೆಯಕಾಲದ ಬಗೆಬಗೆಯ ಆಟದ ಸಾಮಗ್ರಿಗಳಿವೆ.ಅವು ಗತಕಾಲದ ನೆನಪುಗಳೂ ಹೌದು ,ಈಗಿನ ಮಕ್ಕಳಿಗೆ ಹಳೆಯ ಆಟಗಳನ್ನು ಕಲಿಯಲು ಪ್ರೇರಣೆಗಳೂ ಹೌದು .
ಮ್ಯೂಸಿಯಂನಲ್ಲಿ ಹೆಂಗುಸರ ಕೆಲಸಗಳ ವಸ್ತುಗಳ ಪ್ರದರ್ಶನದಲ್ಲಿ ‘ಬೀಸುವ ಕಲ್ಲು’ ಒಂದನ್ನು ಕಂಡೆವು.ನಮ್ಮ ಊರಿನಲ್ಲಿ ಒಂದುಕಾಲದಲ್ಲಿ ನಮ್ಮ ಹೆಣ್ಣುಮಕ್ಕಳು ಬೀಸುತ್ತಿದ್ದ ,ಅದೇ ರೀತಿಯ ಬೀಸುಕಲ್ಲು.ನಾನೂ ಒಮ್ಮ ಅಲ್ಲಿನ ಬೀಸುವ ಕಲ್ಲಿನಲ್ಲಿ ಬೀಸುವ ಪ್ರಯತ್ನ ಮಾಡಿದೆ.ಆಗ ಕನ್ನಡದ ನಮ್ಮ ಹೆಣ್ಣುಮಕ್ಕಳ ಹಾಡು ನೆನಪಾಯಿತು :’ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಳ………..’.ಧಾನ್ಯ ,ಮಸಾಲೆ,ಬೀಸುವಕಲ್ಲು ಗಳ ಒಟ್ಟಿಗೆ ನಮ್ಮ ಎಲ್ಲ ಹೆಣ್ಣುಮಕ್ಕಳು ನೆನಪಾಗುತ್ತಾರೆ… ನಮ್ಮೆಲ್ಲರ ಅಜ್ಜಿ ,ಅಮ್ಮ,ಅಕ್ಕ, ತಂಗಿ ,ಹೆಂಡತಿ ,ಮಗಳು ,ಸೊಸೆ …….ಎಲ್ಲರೂ ಬೀಸಿಕೊಂಡು ಸಾಗಿ ಬರುತ್ತಿದ್ದಾರೆ ‘ಮರ್ಕ್ತ್ ಬ್ರೈತ್’ ಮ್ಸ್ಯೂಸಿಯಂ ನ ಕೋಣೆಗಳ ಮೂಲೆ ಮೂಲೆಗಳಿಂದ……………………..
( ಮ್ಯೂಸಿಯಂ ನಲ್ಲಿ ನಾನು ತೆಗೆದ ಫೋಟೋಗಳನ್ನು ಇನ್ನೊಮ್ಮೆ ಪ್ರತ್ಯೇಕವಾಗಿ ಬ್ಲಾಗಿನಲ್ಲಿ ಕೊಡುತ್ತೇನೆ.)

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: