ಬರ್ಲಿನ್ ನೊಳಗೊಂದು ಸುತ್ತು:ಲೋಹಿಯಾ- ಕೆಲವು ಅಪೂರ್ವ ಚಿತ್ರಗಳು

Posted on ಜುಲೈ 5, 2011. Filed under: Uncategorized |


ನಮ್ಮ ದೇಶದ ಮಹತ್ವದ ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಜರ್ಮನಿಯ ಬರ್ಲಿನ್ ನ ಫ್ರೀದಿಶ್ ವಿಲ್ ಹೆಲ್ಮ್ ವಿಶ್ವವಿದ್ಯಾಲಯ (ಈಗಿನ ಹುಮ್ಬೋಲ್ತ್ ವಿಶ್ವವಿದ್ಯಾಲಯ )ದಲ್ಲಿ ಪಿಎಚ್.ಡಿ.ಸಂಶೋಧನಾ ವಿದ್ಯಾರ್ಥಿಯಾಗಿ ೧೯೨೯ರ ಅಕ್ಟೋಬರದಿಂದ ೧೯೩೩ರ ಮಾರ್ಚ್ ವರೆಗೆ ಇದ್ದರು.ಅವರು ‘ಭಾರತದಲ್ಲಿ ಉಪ್ಪಿನ ತೆರಿಗೆ’ ಎಂಬ ವಿಷಯದ ಬಗ್ಗೆ ಜರ್ಮನ್ ಭಾಷೆಯಲ್ಲಿ ಡಾಕ್ಟರೇಟ್ ಮಹಾಪ್ರಬಂಧವನ್ನು ಆ ವಿವಿಗೆ ಸಲ್ಲಿಸಿದರು.ಇದಕ್ಕೆ ಸಂಬಂಧಿಸಿದ ವಿವರಗಳನ್ನು ನನ್ನ ಲೇಖನ ‘ಬರ್ಲಿನ್ ನಲ್ಲಿ ಲೋಹಿಯಾ ‘ ದಲ್ಲಿ ಕೊಟ್ಟಿದ್ದೇನೆ.(ಪ್ರಕಟಿತ :’ಪ್ರಜಾವಾಣಿ ‘ಸಾಪ್ತಾಹಿಕ, ಮಾರ್ಚ್ ೨೭,೨೦೧೧ ಮತ್ತು ನನ್ನ ಪುಸ್ತಕ ‘ಬ್ಲಾಗಿಲನು ತೆರೆದು’,ಪ್ರಗತಿ ಗ್ರಾಫಿಕ್ಸ್ ,ಬೆಂಗಳೂರು,೨೦೧೧.)
ಕಳೆದ ತಿಂಗಳು ಜೂನ್ ೧೩ ಮತ್ತು ೧೪ರಂದು ಬರ್ಲಿನ್ ನಲ್ಲಿ ಇದ್ದ ಸಂದರ್ಭದಲ್ಲಿ ,ಲೋಹಿಯಾ ಸಂಬಂಧಿಸಿದಂತೆ ಹುಡುಕಾಟದ ತಿರುಗಾಟವನ್ನು ಮಾಡಿದೆ.ಒಂದು,ಲೋಹಿಯಾ ಅವರು ಬರ್ಲಿನ್ ನಲ್ಲಿ ವಾಸವಾಗಿದ್ದ ಮನೆಗಳನ್ನು ಶೋಧಿಸುವುದು.ಇನ್ನೊಂದು ಅವರ ಪಿ ಎಚ್.ಡಿ.ಗೆ ಸಂಬಂಧಿತ ಮೂಲ ದಾಖಲೆಗಳನ್ನು ನೋಡುವುದು ಮತ್ತು ಪ್ರತಿಮಾಡಿಕೊಳ್ಳುವುದು.ಹುಂಬೋಲ್ತ್ ವಿವಿ,ಬರ್ಲಿನ್ ನ ‘ಸಮಕಾಲೀನ ದಕ್ಷಿಣ ಏಷ್ಯ ಇತಿಹಾಸ ವಿಭಾಗ’ದ ಪ್ರಾಧ್ಯಾಪಕ ಜೋಕಿಮ್ ಓಯೇಸ್ತೆರ್ ಹೆಲ್ಡ್ ಅವರ ಒಂದು ಲೇಖನದಲ್ಲಿ ,ಲೋಹಿಯಾ ಅವರು ಬರ್ಲಿನ್ ನಲ್ಲಿ ವಾಸವಾಗಿದ್ದ ಎರಡು ಮನೆಗಳ ಉಲ್ಲೇಖಗಳು ಅಡಿ ಟಿಪ್ಪಣಿಯಲ್ಲಿ ದೊರಕಿದವು.ಆದರೆ ಅವನ್ನು ದಾಖಲೆಗಳ ಮೂಲಕ ಇನ್ನೊಮ್ಮೆ ಖಚಿತಪಡಿಸಿಕೊಳ್ಳಬೇಕಾಗಿತ್ತು.ಇದಕ್ಕಾಗಿ ನನಗೆ ಜರ್ಮನಿಯಲ್ಲಿ ಪರಿಚಯವಾಗಿದ್ದ ,ಬರ್ಲಿನ್ ನಲ್ಲಿ ವಾಸವಾಗಿರುವ ಪ್ರಾದ್ಯಾಪಕ ಡಾ.ಇಂಗೋ ಸ್ಟ್ರಾಹ್ ಅವರನ್ನು ಮುಂಚಿತವಾಗಿಯೇ ಸಂಪರ್ಕಿಸಿದ್ದೆ.ಡಾ.ಇಂಗೋ ಸ್ಟ್ರಾ ಹ್ ಬರ್ಲಿನ್ ನಲ್ಲಿ ಇಂಡಾಲಜಿ ಪ್ರಾಧ್ಯಾಪಕರಾಗಿ ಕೆಲಸಮಾಡಿದವರು.ಭಾರತ,ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನ ಗಳಲ್ಲಿ ಸಾಕಷ್ಟು ಕ್ಷೇತ್ರಕಾರ್ಯ ಮಾಡಿದವರು.ಗಾಂಧಾರ -ಸಂಸ್ಕೃತಿ ಬಗ್ಗೆ ಸಂಶೋಧನೆ ಮಾಡಿದವರು.ಈಗ ಬರ್ಲಿನಿನ ಇಂಡಾಲಜಿ ವಿಭಾಗ ಮುಚ್ಚಿದ ಕಾರಣ ,ಕಳೆದ ವರ್ಷದಿಂದ ನಮ್ಮಲ್ಲಿ ವ್ಯೂರ್ತ್ಸ್ ಬುರ್ಗ್ ವಿವಿಯ ಇಂಡಾಲಜಿ ವಿಭಾಗದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ವಾರದಲ್ಲಿ ಎರಡು ದಿನ ಬರ್ಲಿನ್ ನಿಂದ ಬಂದು ಪಾಠ ಮಾಡುತ್ತಿದ್ದಾರೆ.ನಾನು ಕೊಟ್ಟ ಮಾಹಿತಿಗಳನ್ನು ಆಧರಿಸಿ ,ಇಂಗೋ ಅವರು ಗೂಗಲ್ ಮ್ಯಾಪ್ ನ ನೆರವಿನಿಂದ ನಾವು ಹೋಗಬೇಕಾದ ಸ್ಥಳಗಳ ನಕ್ಷೆಗಳ ಪ್ರತಿಮಾಡಿಕೊಂಡು ಬಂದಿದ್ದರು.ನಮ್ಮ ಮುಂದೆ ಇದ್ದದ್ದು ಮೂರು ತಾಣಗಳು-ಒಂದು ,ಹುಮ್ಬೋಲ್ತ್ ವಿವಿಯ ಪತ್ರಾಗಾರ (Universitatsarchivs).ಇನ್ನೊಂದು ,ಲೋಹಿಯಾ ,ಜರ್ಮನ್ ಭಾಷೆಯನ್ನು ಕಲಿಯುವಾಗ ವಾಸವಾಗಿದ್ದ ಕೋಣೆ ಇದ್ದ ಕಟ್ಟಡ -Steglitz ,Lessingstrasse 5.ಮತ್ತೊಂದು ,ಲೋಹಿಯಾ ,ವಿದ್ಯಾರ್ಥಿಯಾಗಿ ಹೆಚ್ಚು ಕಾಲ ವಾಸಮಾಡಿದ ಸ್ಥಳ -Charlottenburg 9,Badenalle 1.
ಜೂನ್ ೧೪ರ ಬೆಳಗ್ಗೆ ೯ ಗಂಟೆಗೆ ಇಂಗೋ ಸ್ಟ್ರಾ ಹ್ ಜೊತೆಗೆ ನಾನು ಮತ್ತು ನನ್ನ ಹೆಂಡತಿ ಕೋಕಿಲ ,ಬರ್ಲಿನ್ ಮೈನ್ ರೈಲ್ವೆ ಸ್ಟೇಶನ್ ನಿಂದ ನಮ್ಮ ಪ್ರಯಾಣ ಆರಂಭಿಸಿದೆವು.ನಾವಿಬ್ಬರೂ ಬರ್ಲಿನ್ ಕಾರ್ಡ್ ಕೊಂಡದ್ದರಿಂದ ಮತ್ತೆ ಮತ್ತೆ ಟಿಕೆಟ್ ಕೊಳ್ಳುವ ಅಗತ್ಯ ಇರಲಿಲ್ಲ.ಎಸ-ಬಾನ್ ,ಯು-ಬಾನ್ ಇತ್ಯಾದಿ ಎಲ್ಲ ಸೇರಿ ,ಆದಿನ ಬೆಳಗ್ಗಿನಿದ ಸಂಜೆ ಏಳವರವರೆಗೆ ,ನಾವು ಒಟ್ಟು ಸುಮಾರು ಇಪ್ಪತ್ತು ಬಾರಿ ಅಷ್ಟೇ ಸಂಖ್ಯೆಯ ರೈಲುಗಳಲ್ಲಿ ಪ್ರಯಾಣ ಮಾಡಿದೆವು..ಒಂದು ಸ್ಟೇಶನ್ ನಿಂದ ಇನ್ನೊಂದಕ್ಕೆ ,ಅಲ್ಲಿಂದ ಮತ್ತೊಂದಕ್ಕೆ,ಸ್ಟೇಶನ್ ಬಿಟ್ಟು ಸ್ಥಳಗಳ ಹುಡುಕಾಟ -ಹೀಗೆ ಕಾಲ್ನಡಿಗೆಯೇ ಹದಿನೈದು ಕಿಲೋಮೀಟರ್ ಗಿಂತ ಹೆಚ್ಚು ಆಗಿತ್ತು.ರೇಲ್ವೆ ಸ್ಟೇಶನ್ ಗಳಲ್ಲಿ ಮೆಟ್ಟಲು ಹತ್ತುವ ಇಳಿಯುವ ,ಪ್ಲೇಟ್ ಫಾರ್ಮ್ ಬದಲಿಸುವ ,ಕಾತರದಿಂದ ಕಾಯುವ -ಇಂತಹ ಕೌತುಕದ ಅನುಭವಗಳು ನನಗೆ ಈ ಪ್ರಮಾಣದಲ್ಲಿ ಅದೇ ಹೊಸತು.ಇಂಗೋ ಅವರೇ ಹೇಳಿದಂತೆ ಬರ್ಲಿನ್ ನಲ್ಲಿ ಹುಟ್ಟಿ ಬೆಳೆದ ಅವರೇ ,ಬರ್ಲಿನ್ ನ ಈ ಪ್ರದೇಶಗಳನ್ನು ಅವರು ಕಂಡದ್ದು ಅದೇ ಮೊದಲನೆಯ ಬಾರಿ.
ನಾವು ಮೊದಲು ಶೋಧಿಸಿದ್ದು ಹುಂಬೋಲ್ತ್ ವಿಶ್ವವಿದ್ಯಾಲಯದ ಪತ್ರಾಗಾರವನ್ನು.ಅದು ವಿಶ್ವವಿದ್ಯಾಲಯ ಮತ್ತು ಅದರ ಗ್ರಂಥಾಲಯ -ಇವು ಎಲ್ಲವುಗಳಿಂದ ಬಹಳ ದೂರದಲ್ಲಿ ,ನಗರದ ಹೊರವಲಯದಲ್ಲಿ ಇದೆ.ನಕ್ಷೆಯನ್ನು ಕೈಯಲ್ಲಿ ಹಿಡಿದುಕೊಂಡು ಹುಡುಕುತ್ತಾ Eichborndamm 113 ರಲ್ಲಿ ಇರುವ ಪತ್ರಾಗಾರ ತಲಪಿದೆವು.ಅಲ್ಲಿ ತಮ್ಮ ಪರಿಚಯದ ಸಿಬ್ಬಂದಿ ಒಬ್ಬರಿಗೆ ,ಇಂಗೋ ಅವರು ಫೋನ್ ಮಾಡಿ ನಾವು ಬರುವ ವಿಷಯ ಮತ್ತು ಉದ್ದೇಶ ತಿಳಿಸಿದ್ದರಿಂದ ,ನಾವು ಅಲ್ಲಿ ಹೋದ ಸ್ವಲ್ಪ ಹೊತ್ತಿನಲ್ಲೇ ಒಂದು ಹಳೆಯ ಕಾಗದ ಪತ್ರಗಳ ಕಡತ ನಮಗೆ ನೋಡಲು ಸಿಕ್ಕಿತು.ಅದು ಲೋಹಿಯಾ ಪಿಎಚ್.ಡಿ.ಗೆ ಸಂಬಂಧಿಸಿದ ಕಾಗದಪತ್ರಗಳ ಮೂಲ ದಾಖಲೆಗಳ ಕಡತ.ಎಲ್ಲ ಜರ್ಮನ್ ಭಾಷೆಯಲ್ಲಿ.ಕುಳಿತುಕೊಂಡು ಒಂದು ಬಾರಿ ಎಲ್ಲವನ್ನೂ ಪರಿಶೀಲಿಸಿದೆ.ಜರ್ಮನ್ ಅನುವಾದಕ್ಕೆ ಇಂಗೋ ಸಹಾಯಮಾಡಿದರು.ಆ ಎಲ್ಲ ಕಾಗದಪತ್ರಗಳ ಪ್ರತಿ ಪಡೆಯುವದಕ್ಕೆ ಅಲ್ಲಿಯೇ ಅರ್ಜಿ ಸಲ್ಲಿಸಿದೆ.ಅವುಗಳ ಪ್ರತಿಗಳನ್ನು ಅಂಚೆ ಮೂಲಕ ನನಗೆ ಕಳುಹಿಸುವುದಾಗಿ ತಿಳಿಸಿದರು.ಆ ಕಡತಗಳಲ್ಲಿ ಲೋಹಿಯಾ ಅವರು ಜರ್ಮನ್ ಭಾಷೆಯಲ್ಲಿ ಬರೆದ ಅರ್ಜಿಯಲ್ಲಿ ಮತ್ತು ಅವರಿಗೆ ವಿವಿ ಕಳುಹಿಸಿದ ಒಂದು ಪತ್ರದಲ್ಲಿ ಲೋಹಿಯಾ ಅವರ ಬರ್ಲಿನ್ ವಿಳಾಸ ಸಿಕ್ಕಿತು.ಅದು ಅವರು ಪಿಎಚ್.ಡಿ.ವಿದ್ಯಾರ್ಥಿಯಾಗಿ ಹೆಚ್ಚು ಕಾಲ ಇದ್ದ ವಾಸದ ಸ್ಥಳ.ಅದು ಮುಂದಿನ ನಮ್ಮ ಶೋಧಕ್ಕೆ ಅನುಕೂಲ ಆಯಿತು.ಈ ವಿಳಾಸಕ್ಕೂ ಒಯೆಸ್ತೆರ್ ಹೆಲ್ಡ್ ಅವರ ಲೇಖನದ ಮಾಹಿತಿಗೂ ಮನೆ ಸಂಖ್ಯೆಯಲ್ಲಿ ಸಣ್ಣ ವ್ಯತ್ಯಾಸ ಇತ್ತು..ಆದರೆ ಲೋಹಿಯಾ ,ಜರ್ಮನ್ ಭಾಷೆ ಕಲಿಯುವಾಗ ಸ್ವಲ್ಪ ಕಾಲ ಇದ್ದ ನಿವಾಸದ ಉಲ್ಲೇಖ ಒಯೆಸ್ತೆರ್ ಹೆಲ್ಡ್ ಅವರ ಲೇಖನದಲ್ಲಿ ಮಾತ್ರ ಇದೆ, ಪತ್ರಾಗಾರದ ದಾಖಲೆಗಳಲ್ಲಿ ಇಲ್ಲ.
ನಮ್ಮ ಮುಂದಿನ ಪ್ರಯಾಣ -Steglitz ,Lessingstrasse 5.ಮತ್ತೆ ಕಾಲ್ನಡಿಗೆ ,ಕೆಲವು ರೈಲುಗಳು ,ಮತ್ತೆ ಕಾಲ್ನಡಿಗೆ,ಕೈಯಲ್ಲಿ ಅಮೂಲ್ಯವಾದ ಗೂಗಲ್ ಮ್ಯಾಪ್ .ಕೊನೆಗೂ Steglitz ನ Lessingstraase ಯ 5 ಸಂಖ್ಯೆಯ ಕಟ್ಟಡದ ಬಳಿ ಬಂದೆವು.ಅದೊಂದು ದೊಡ್ಡ ಕಟ್ಟಡ.ಈಗ ಸ್ಪೋರ್ಟ್ಸ್ಗ ಗೆ ಸಂಬಂಧಪಟ್ಟದ್ದು.ಆ ಕಟ್ಟಡದ ಒಂದು ಕೋಣೆಯಲ್ಲಿ ೧೯೨೯ರಲ್ಲಿ ಲೋಹಿಯಾ ಇದ್ದರು ಎನ್ನುವ ಮಾಹಿತಿ ನಮ್ಮಲ್ಲಿ ಇದ್ದದ್ದು.ಅದರ ಕೆಲವು ಫೋಟೋಗಳನ್ನು ತೆಗೆದುಕೊಂಡೆ.ನಾನು ಅಲ್ಲಿ ನಿಂತುಕೊಂಡು ಇದ್ದದ್ದನ್ನು ಇಂಗೋ ಫೋಟೋ ತೆಗೆದರು.ಮುಂದಿನ ಪ್ರಯಾಣ -ಲೋಹಿಯಾ ಅವರ ಅಧಿಕೃತ ವಿದ್ಯಾರ್ಥಿ ನಿವಾಸಕ್ಕೆ.ಮತ್ತೆ ಕೆಲವು ಎಸ-ಬಾನ್ ಗಳು ,ಯು-ಬಾನ್ ಗಳು.ಒಮ್ಮೆ ಇಳಿಯುವ ಸ್ಥಳ ಗೊತ್ತಾಗದೆ ಮುಂದೆ ಎಲ್ಲೋ ಹೋಗಿ ,ಮತ್ತೆ ಇನ್ನೊಂದು ರೈಲಿನಲ್ಲಿ ಮತ್ತೊಂದು ಊರಿಗೆ ಹೋಗಿ, ಬಳಿಕ ನಮ್ಮ ಮ್ಯಾಪ್ ಹಿಡಿದುಕೊಂಡು ಸ್ಟೇಶನ್ ನಿಂದ ಸ್ಟೇಶನ್ ಗೆ ಸಂಚಾರ.ಬರ್ಲಿನ್ ನ ಕೆಲವು ರೈಲ್ವೆ ಸ್ಟೇಶನ್ ಗಳಂತೂ ಎಲ್ಲೋ ಗುಡ್ಡದ ಬಳಿ ನಿರ್ಜನ ಪ್ರದೇಶಗಳಲ್ಲಿ ಅನಾಥವಾಗಿ ಇರುವ ದೃಶ್ಯಗಳನ್ನು ಕಂಡೆ.ಅಲ್ಲಿ ಸಿಬ್ಬಂದಿಯೇ ಇರುತ್ತಿರಲಿಲ್ಲ..ಕೊನೆಗೂ Charlottenburg 9 ಸಿಕ್ಕಿತು.ಅಲ್ಲಿ ಮತ್ತೆ Badenallee ಗೆ ಬಂದೆವು.ಜರ್ಮನ್ ಭಾಷೆಯಲ್ಲಿ ‘allee’ ಎಂದರೆ ಮರಗಳ ಜೊತೆಗೆ ಇರುವ ಬೀದಿ.ಅದು ‘strasse’ ಗಿಂತ ಭಿನ್ನ.Badenalle ಬೀದಿಯ ಒಂದನೆಯ ಸಂಖ್ಯೆಯ ಮನೆ -ಸಾಕಷ್ಟು ದೊಡ್ಡದು.ಅದರಲ್ಲಿ ಅನೇಕ ಕೋಣೆಗಳು ಇವೆ.ಅದರ ಒಂದು ಭಾಗದಲ್ಲಿ ಲೋಹಿಯಾ ವಿದ್ಯಾರ್ಥಿಯಾಗಿ ಇದ್ದಾಗ ವಾಸ ಆಗಿದ್ದಿರಬಹುದು.ಆ ಮನೆಯ ಮತ್ತು ಬೀದಿಯ ಕೆಲವು ಫೋಟೋ ತೆಗೆದುಕೊಂಡೆ.
ಇಡೀ ದಿನದ ಹುಡುಕಾಟ ಮತ್ತು ತಿರುಗಾಟ ಸಾರ್ಥಕ ಆದ ಸಂತೃಪ್ತಿ.ಇಂಗೋ ಸ್ಟ್ರಾಹ್ ಇಲ್ಲದಿರುತ್ತಿದ್ದರೆ ಇದು ಸಾಧ್ಯವೇ ಆಗುತ್ತಿರಲಿಲ್ಲ.ಎಂಬತ್ತು ವರ್ಷಗಳ ಅವಧಿಯಲ್ಲಿ ಜರ್ಮನಿಯಲ್ಲಿ ಮತ್ತು ಭಾರತದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಏರುಪೇರುಗಳು ಆಗಿವೆ.ಭೌತಿಕ ಮತ್ತು ಬೌದ್ಧಿಕ ನಾಶಗಳು ,ಪುನರುಜ್ಜೀವನಗಳು ಸಂಭವಿಸಿವೆ. .ಕೆಲವು ಕಾಗದ ಪತ್ರಗಳು,ಒಂದೆರಡು ವಾಸದ ಮನೆಗಳು -ಕೇವಲ ಪಳೆಯುಳಿಕೆಗಳು ಆಗಿ ಉಳಿದುಬಿಡಬಹುದು.ಆದರೆ ಅವು ಕಳೆದುಹೋದ ಅಥವಾ ಹೂತುಹೋದ ಬದುಕಿನ ಚಿಂತನೆಗಳನ್ನು ಮತ್ತೆ ನೆನಪಿಸಿ ಕಟ್ಟಿ ಕೊಡುವುದಾದರೆ ,ಅವು ನಮ್ಮ ಬೆಳಕಿನ ಬೀಜಗಳು ಆಗಬಹುದು.ಪತ್ರವೊಂದು ಪಂಥ ಆಗಬಹುದು;ಬೀದಿಯೊಂದು ಬದುಕಿನ ಹೆದ್ದಾರಿ ಆಗಬಹುದು.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

One Response to “ಬರ್ಲಿನ್ ನೊಳಗೊಂದು ಸುತ್ತು:ಲೋಹಿಯಾ- ಕೆಲವು ಅಪೂರ್ವ ಚಿತ್ರಗಳು”

RSS Feed for ಬಿ ಎ ವಿವೇಕ ರೈ Comments RSS Feed

Interesting and nostalgistic sir, When I was in Japan, my friend has taken me to Subhas Chandra Boss’s house, where’ Bos tea’ was served in memory of Netaji..


Where's The Comment Form?

Liked it here?
Why not try sites on the blogroll...

%d bloggers like this: