ಹೆರ್ತ ಮುಲ್ಲರ್ :ನೊಬೆಲ್ ಪ್ರಶಸ್ತಿಯ ಜರ್ಮನ್ ಲೇಖಕಿಯ ಒಂದು ಕತೆ -‘ಬೀದಿ ಗುಡಿಸುವ ಜಾಡಮಾಲಿಗಳು ‘

Posted on ಜೂನ್ 27, 2011. Filed under: Uncategorized |


ಹೆರ್ತ ಮುಲ್ಲರ್ (ಜ.೧೯೫೩)ರೊಮಾನಿಯದಲ್ಲಿ ಜನಿಸಿದ ಜರ್ಮನ್ ಲೇಖಕಿ. ಕಾದಂಬರಿ,ಕತೆ,ಕವನ,ಪ್ರಬಂಧ -ಅವಳ ಸಾಹಿತ್ಯ ಬರವಣಿಗೆಯ ಪ್ರಮುಖ ಹೆಜ್ಜೆಗುರುತುಗಳು .ರೊಮಾನಿಯದಲ್ಲಿ ಜರ್ಮನ್ ಭಾಷೆಯ ‘ದ್ವೀಪ’ದಂತಿರುವ ಬನತ್ ಪ್ರದೇಶದಲ್ಲಿ ಜನಿಸಿದ ಮತ್ತು ಬೆಳೆದ ಹೆರ್ತ ,ಕಮ್ಯೂನಿಸ್ಟ್ ರೊಮಾನಿಯಾದ ನಿಕೊಲೆ ಚೋಚ್ಯು ನ ಆಡಳಿತದ ಬರ್ಬರತೆ ಮತ್ತು ಹಿಂಸೆಯನ್ನು ಕಂಡು ಅನುಭವಿಸಿ ,ಅದನ್ನು ವಿರೋಧಿಸಿ ಕೃತಿಗಳನ್ನು ರಚಿಸಿದಳು.ಅವಳ ಹೆಚ್ಚಿನ ಬರಹಗಳು ,ರೊಮಾನಿಯಾದ ಬನತ್ ನಲ್ಲಿನ ಜರ್ಮನ್ ಅಲ್ಪಸಂಖ್ಯಾತರ ದೃಷ್ಟಿ ಕೋನದ ಬಿಂಬಗಳಾಗಿವೆ. ಅವಳ ೨೦೦೯ರ ಒಂದು ಕಾದಂಬರಿ ‘ನಾನು ಪಡೆದಿರುವುದೆಲ್ಲ,ನಾನು ಕೊಂಡೊಯ್ಯುತ್ತೇನೆ ನನ್ನ ಜೊತೆಗೆ ‘.ಅದರಲ್ಲಿ ಆಕೆ ಸೋವಿಯೆಟ್ ಆಕ್ರಮಿತ ರೊಮಾನಿಯದಲ್ಲಿ ರೊಮಾನಿಯಾದ ಜರ್ಮನ್ ಅಲ್ಪಸಂಖ್ಯಾತರನ್ನು ಸ್ಟಾಲಿನ್ ಸೋವಿಯೆಟ್ ವಶದಲ್ಲಿ ಬಲವಂತದ ಕಾರ್ಮಿಕರನ್ನಾಗಿ ಪರಿವರ್ತಿಸಿದ ಹಿಂಸೆಯ ಕಥನವನ್ನು ಚಿತ್ರಿಸುತ್ತಾಳೆ. ಹೆರ್ತಳ ಸಾಹಿತ್ಯದಲ್ಲಿ ಹಿಂಸೆ,ಕ್ರೌರ್ಯ,ಅಮಾನುಷತೆಗಳ ಪರಿಣಾಮಗಳನ್ನು ಪರಿಣಾಮಕಾರಿ ಭಾಷೆಯಲ್ಲಿ ಪ್ರಕಟಿಸಲಾಗಿದೆ. ಅವಳ ಬರವಣಿಗೆಯು ಸಾಮಾನ್ಯ ಹಾಗೂ ಸರಳ ಎಂದು ಕಾಣಿಸುವ ವಿವರಗಳ ಮೂಲಕ ಬೆಳೆಯುತ್ತಾ ಹೋಗಿ,ಪಕ್ಕನೆ ಪಾತಾಳದಲ್ಲಿ ಇಳಿದಂತೆ ಭಾಸವಾಗುತ್ತದೆ. ಖಾಸಗಿ ಮತ್ತು ಸಾರ್ವಜನಿಕ ಬದುಕಿನಲ್ಲಿ ಶೋಷಣೆಗೆ ಒಳಗಾಗುವ ಹಿಂಸೆಯ ನೋಟಗಳು ಅನೇಕ ರೂಪಕಗಳ ಮೂಲಕ ಅವಳ ಸಾಹಿತ್ಯ ಕೃತಿಗಳಲ್ಲಿ ಕಾಣಿಸಿಕೊಳ್ಳುತ್ತವೆ.ವೈಯಕ್ತಿಕ ಬದುಕಿನಲ್ಲಿ ಅಂತರ್ಗತವಾಗಿರುವ ಹಿಂಸೆ ಮತ್ತು ಭ್ರಷ್ಟತೆಗಳೇ ದೇಶದಲ್ಲಿನ ಹಿಂಸೆ ಮತ್ತು ಭ್ರಷ್ಟತೆಗಳಿಗೆ ಮೂಲ ಎನ್ನುವುದನ್ನು ಆಕೆ ತನ್ನ ಕಥನಗಳಲ್ಲಿ ಪ್ರತಿಪಾದಿಸುತ್ತಾಳೆ. ಮನೆಯಲ್ಲಿ ತನ್ನ ಹೆತ್ತವರ ಮೌನವೇ ಸಮಾಜದ ಶೋಷಣೆಗೆ ಅವಕಾಶ ಮಾಡಿಕೊಡುತ್ತದೆ ಎನ್ನುವುದು ಅವಳ ವಾದ.
ಕಳೆದ ಮೂವತ್ತು ವರ್ಷಗಳಿಂದ ಮಹತ್ವದ ಜರ್ಮನ್ ಲೇಖಕಿ ಆಗಿರುವ ಹೆರ್ತ ಮುಲ್ಲರ್ ,೧೯೮೭ರಲ್ಲಿ ಪಶಿಮ ಬರ್ಲಿನ್ ಗೆ ವಲಸೆ ಬಂದಳು.ಪ್ರಕೃತ ಜರ್ಮನಿಯಲ್ಲಿ ವಾಸಿಸುತ್ತಿರುವ ಹೆರ್ತ ತನ್ನ ಸಾಹಿತ್ಯ ಕೃತಿಗಳಿಗೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬಹುಮಾನ ಮತ್ತು ಪ್ರಶಸ್ತಿಗಳನ್ನು ಪಡೆದಿದ್ದಾಳೆ.ಕ್ಲೈಸ್ಟ್ ಬಹುಮಾನ (೧೯೯೪),ಅರಿಸ್ತೈನ್ ಬಹುಮಾನ(೧೯೯೮),ಅಂತಾರಾಷ್ಟ್ರೀಯ ಇಂಪಕ್ ಡಬ್ಲಿನ್ ಸಾಹಿತ್ಯಕ ಪ್ರಶಸ್ತಿ (೧೯೯೮),ಫ್ರಾನ್ಜ್ ವೆರ್ಫೆಲ್ ಮಾನವ ಹಕ್ಕುಗಳ ಪ್ರಶಸ್ತಿ (೨೦೦೯).೨೦೦೯ರಲ್ಲಿ ಸಾಹಿತ್ಯದ ಅತ್ಯುನ್ನತ ಅಂತಾರಾಷ್ಟ್ರೀಯ ‘ನೊಬೆಲ್ ಪ್ರಶಸ್ತಿ’ಯ ಗೌರವವು ಹೆರ್ತ ಮುಲ್ಲರ್ ಗೆ
ಸಂದಿತು.ನೊಬೆಲ್ ಪ್ರಶಸ್ತಿ ಪ್ರದಾನದ ಸಂದರ್ಭದಲ್ಲಿ ಸ್ವೀಡಿಶ್ ಅಕಾಡೆಮಿಯು ಹೆರ್ತ ಮುಲ್ಲರ್ ನ್ನು ಬಣ್ಣಿಸಿದ ಮಾತು :”ಕಾವ್ಯದ ಏಕಾಗ್ರತೆ ಮತ್ತು ಗದ್ಯದ ನಿರ್ಭಿಡೆಯಿಂದ ‘ಇಲ್ಲದವದರ ಜಗತ್ತಿನ ನೋಟ’ವನ್ನು ಪ್ರತಿನಿಧಿಸಿದ ಹೆಣ್ಣು.”
ಹೆರ್ತ ಮುಲ್ಲರ್ ಳ ಮೊದಲ ಕೃತಿ ‘ Nadirs (Niederungen)-1982.ಕತೆಗಳ ಸಂಕಲನ.ಈ ಕತೆಗಳಲ್ಲಿ ಹೆಣ್ಣು ಮಗುವೊಂದರ ಮನಸ್ಸಿನಲ್ಲಿ ದಾಖಲಾದ ಶೋಷಣೆಯ ಭಯಾನಕ ನೆನಪುಗಳ ಚಿತ್ರಗಳನ್ನು ಕಾಣಬಹುದು.ಇವು ಬಹುಮಟ್ಟಿಗೆ ಹೆರ್ತ ಳ ಆತ್ಮಕಥನದ ತುಣುಕುಗಳು ಎಂದು ಭಾವಿಸಲಾಗಿದೆ.ಈ ಸಂಕಲನದ ಒಂದು ಕತೆಯನ್ನು ಕನ್ನಡಕ್ಕೆ ಅನುವಾದಿಸಿ ಕೊಡುತ್ತಿದ್ದೇನೆ: ‘ಬೀದಿ ಗುಡಿಸುವ ಜಾಡಮಾಲಿಗಳು’.

ಬೀದಿ ಗುಡಿಸುವ ಜಾಡಮಾಲಿಗಳು

ಆ ಪಟ್ಟಣ ಶೂನ್ಯದಲ್ಲಿ ಮುಳುಗಿಹೋಗಿದೆ.
ಕಾರಿನ ಬೆಳಕು ನನ್ನ ಕಣ್ಣುಗಳ ಮೇಲೆ ಹರಿಯುತ್ತಿದೆ.
ಆ ಡ್ರೈವರ್ ನನಗೆ ಹಿಡಿ ಶಾಪ ಹಾಕಿದ.ಕತ್ತಲೆಯಲ್ಲಿ ನನ್ನನ್ನು ಕಾಣಲಾಗುತ್ತಿಲ್ಲ ಎನ್ನುವುದು ಅವನ ಸಿಟ್ಟು.
ಬೀದಿ ಗುಡಿಸುವ ಜಾಡಮಾಲಿಗಳು ತಮ್ಮ ಕೆಲಸ ಸುರುಮಾಡಿದ್ದಾರೆ.
ಅವರು ಲೈಟಿನ ಬಲ್ಬುಗಳನ್ನು ಗುಡಿಸುತ್ತಾರೆ, ಅವರು ಬೀದಿಗಳನ್ನು ಪಟ್ಟಣದಿಂದ ಹೊರಗೆ ಗುಡಿಸಿಹಾಕುತಾರೆ ,ಅವರು ಬದುಕಿರುವವರನ್ನು ಮನೆಯಿಂದ ಹೊರಗೆ ಗುಡಿಸಿಹಾಕುತ್ತಾರೆ.ಅವರು ನನ್ನ ಯೋಚನೆಗಳನ್ನು ನನ್ನ ತಲೆಯೊಳಗಿಂದ ಹೊರಗೆ ಗುಡಿಸಿಹಾಕುತ್ತಾರೆ.ಅವರು ನನ್ನ ಒಂದು ಕಾಲಿನಿಂದ ಇನ್ನೊಂದು ಕಾಲಿನ ವರೆಗೆ ಗುಡಿಸುತ್ತಾರೆ,ಅವರು ನನ್ನ ಹೆಜ್ಜೆಗಳನ್ನು ನನ್ನ ನಡಿಗೆಯಿಂದ ಹೊರಗೆ ಗುಡಿಸಿಹಾಕುತ್ತಾರೆ.
ಈ ಬೀದಿ ಜಾಡಮಾಲಿಗಳು ತಮ್ಮ ಪೊರಕೆಯಿಂದ ನನ್ನನ್ನು ಓಡಿಸುತ್ತಾರೆ, ಜಿಗಿಯುವ ತಮ್ಮ ಸಣಕಲು ಪೊರಕೆಗಳಿಂದ ಅಟ್ಟುತ್ತಾರೆ. ನನ್ನ ಬೂಟ್ಸುಗಳು ಚೀರಿಡುತ್ತಾ ನನ್ನ ಮೈಯಿಂದ ಕಳಚಿಕೊಳ್ಳುತ್ತವೆ.
ನನ್ನ ಕಲ್ಪನೆಯ ಅಂಚಿನಲ್ಲಿ- ನಾನು ನಡೆಯುತ್ತೇನೆ ನನ್ನ ಹಿಂದೆಯೇ ,ನಾನು ನನ್ನಿಂದ ಬೇರೆಯಾಗುತ್ತೇನೆ.
ನನ್ನ ಬಳಿಯ ಈ ಪಾರ್ಕ್ ಬೊಗಳುತ್ತದೆ .ಅದರ ಬೆಂಚಿನಲ್ಲಿ ಚೆಲ್ಲಿದ ಮುತ್ತುಗಳನ್ನು ಗೂಗೆಗಳು ತಿನ್ನುತ್ತವೆ.ನನ್ನನ್ನು ಕಡೆಗಣಿಸುತ್ತವೆ ಈ ಗೂಗೆಗಳು.ಬಸವಳಿದ ,ಜರ್ಜರಿತ ಕನಸುಗಳು ಇಲ್ಲಿನ ಪೊದೆಗಳಲ್ಲಿ ಹೆದರಿ ಅವಿತುಕೊಳ್ಳುತ್ತವೆ.
ಆ ಪೊರಕೆಗಳು ನನ್ನ ಬೆನ್ನಿನ ಮೇಲೆ ಜಾಡಿಸುತ್ತವೆ -ನಾನು ಕತ್ತಲೆಯಲ್ಲಿ ಬಹಳ ಬಾಗಿಕೊಂಡಿದ್ದೇನೆ ಎನ್ನುವುದಕ್ಕಾಗಿ .
ಆ ಬೀದಿ ಜಾಡಮಾಲಿಗಳು ತಮ್ಮ ಪೊರಕೆಗಳಿಂದ ನಕ್ಷತ್ರಗಳನ್ನು ಗುಡಿಸಿ ರಾಶಿಹಾಕುತ್ತಾರೆ.ಅವನ್ನು ಮೊರಗಳಲ್ಲಿ ತುಂಬಿಸುತ್ತಾರೆ ,ಮತ್ತೆ ಚರಂಡಿಯಲ್ಲಿ ಖಾಲಿಮಾಡುತ್ತಾರೆ.
ಒಬ್ಬ ಜಾಡಮಾಲಿ ಇನ್ನೊಬ್ಬ ಜಾಡಮಾಲಿಯಲ್ಲಿ ಏನೋ ಹೇಳುತ್ತಾನೆ, ಮತ್ತೆ ಅವನು ಮತ್ತೊಬ್ಬನಲ್ಲಿ ,ಮತ್ತೆ ಆ ಮತ್ತೊಬ್ಬ ಮಗದೊಬ್ಬನಲ್ಲಿ ……..
ಈಗ ಎಲ್ಲಾ ಬೀದಿಗಳ ಎಲ್ಲಾ ಜಾಡಮಾಲಿಗಳು ಒಟ್ಟಿಗೆ ಮಾತಾಡತೊಡಗುತ್ತಾರೆ -ಎಲ್ಲೆಲ್ಲು ಗಲಿಬಿಲಿ.ನಾನು ಅವರ ಕೂಗಿನ ಒಳಗೆ ದಾರಿಮಾಡಿಕೊಂಡು ನಡೆಯುತ್ತೇನೆ,ಅವರ ಕೇಕೆಗಳ ನೊರೆಯ ಮೂಲಕ.ನಾನು ಬೇರೆಯಾಗುತ್ತೇನೆ ,ನಾನು ಅರ್ಥಗಳ ಆಳದೊಳಕ್ಕೆ ಬೀಳುತ್ತೇನೆ.
ನಾನು ದೊಪ್ಪ ದೊಪ್ಪನೆ ದಾಪುಗಾಲು ಹಾಕುತ್ತೇನೆ.ನಾನು ಕಾಲು ಕೀಳುತ್ತೇನೆ ನನ್ನ ನಡಿಗೆಯಿಂದ .
ಈ ಬೀದಿಯನ್ನು ಪೂರ್ತಿ ಗುಡಿಸಿಹಾಕಲಾಗಿದೆ.
ಪೊರಕೆಗಳು ನನ್ನ್ನ ಮೇಲೆ ಆಕ್ರಮಣ ಮಾಡುತ್ತವೆ .
ಎಲ್ಲವೂ ಜರಿದು ಬೀಳುತ್ತಿದೆ ಪ್ರಪಾತಕ್ಕೆ .
ಆ ಪಟ್ಟಣವೋ ಹೊಲಗಳ ಆಚೆ ಈಚೆ ಅಂಡಲೆಯುತ್ತಿದೆ -ಎಲ್ಲೋ ಒಂದಲ್ಲ ಒಂದು ಕಡೆಗೆ ಗುಳೆಹೋಗುತ್ತಿದೆ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Liked it here?
Why not try sites on the blogroll...

%d bloggers like this: