ಅಂತೋಣಿ /ಕರ್ಗೆ/ಬ್ರೆಕ್ಟ್ :ಹಾಡು ,ಮಾತು ,ಕತೆ -ನಾಟಕದ ಒಳಗೆ ಮತ್ತು ….

Posted on ಜೂನ್ 25, 2011. Filed under: Uncategorized |


ಜೂನ್ ೧೩ರನ್ದು ಬ್ರೆಕ್ಟ್ ರಂಗಮಂದಿರ ‘ಬರ್ಲಿನರ್ –‘ನಲ್ಲಿ ನಾನು ನೋಡಿದ ಪ್ರದರ್ಶನ ‘ಅಂತೋಣಿ/ಕರ್ಗೆ/ಬ್ರೆಕ್ಟ್ ‘.ಜರ್ಮನಿಯ ಪ್ರಸಿದ್ಧ ಇಬ್ಬರು ನಿರ್ದೇಶಕ ನಟ ನಾಟಕಕಾರರು -ಕಾರ್ಮೆಲ್ ಮಯ ಅಂತೋಣಿ ಮತ್ತು ಮ್ಯಾನ್ ಫ್ರೆಡ್ ಕರ್ಗೆ -ಎಪ್ಪತ್ತೈದು ನಿಮಿಷಗಳ ಕಾಲ ,ಬ್ರೆಕ್ಟ್ ನ ಬೇರೆ ಬೇರೆ ನಾಟಕಗಳ ಹಾಡುಗಳು, ಮಾತುಗಳು,ಕತೆಗಳು,ಕಥನಗಳು,ಪಾತ್ರಗಳು,ಆಶಯಗಳು -ಇವನ್ನು ರಂಗದಲ್ಲಿ ಅನಾವರಣ ಮಾಡಿದರು.ಸಂಗೀತದ ಪಿಯಾನೋದ ಮೂಲಕ ಒಂದು ಪಾತ್ರವಾಗಿಯೂ ಮೂವರಲ್ಲಿ ಒಬ್ಬನಾಗಿ ರಂಗದ ಮೇಲೆಯೇ ಕಾಣಿಸಿಕೊಂಡು ಮೇಳವಾದದ್ದು ಅಲ್ಫೋನ್ಸ್ ನವಚ್ಕಿ .
ಕಾರ್ಮೆಲ್ ಮಯ ಅಂತೋಣಿ-ಪ್ರಸಿದ್ಧ ಜರ್ಮನ್ ನಟಿ(ಜ.೧೯೪೫).ಪೊಟ್ಸ್ ಡಮ್ ನ ಫಿಲಂಸ್ ಮತ್ತು ಟೆಲಿವಿಶನ್ ಅಕಾಡೆಮಿ’ಕೊನ್ರಾದ್ ವೊಲ್ಫ್ ‘ನಲ್ಲಿ ಪ್ರವೇಶ ಪರೀಕ್ಷೆ ಮುಗಿಸಿದ ವಿದ್ಯಾರ್ಥಿನಿ ಮಯ ,ತನ್ನ ಪದವಿಯ ಬಳಿಕ ಪೊಟ್ಸ್ ಡಮ್ ನ ಹಂಸ್ -ಹತ್ತೋ ಥಿಯೇಟರ್ ನ್ನು ಸೇರಿದಳು.೧೯೬೪ರಲ್ಲಿ ತನ್ನ ೧೮ನೆಯ ವಯಸ್ಸಿನಲ್ಲಿ ಬ್ರೆಕ್ಟ್ ನ ‘ಕಕೆಶಿಯನ್ ಚಾಕ್ ಸರ್ಕಲ್’ ನಾಟಕದಲ್ಲಿ ‘ಗ್ರುಷ’ ಪಾತ್ರ ವಹಿಸಿದಳು.ಬಳಿಕ ಆಕೆ ಬರ್ಲಿನ್ ಗೆ ಬಂದಳು.೧೯೭೬ರಲ್ಲಿ ಬೆರ್ಲಿನೆರ್ ಎನ್ಸೆಮ್ಲೇ (ಬ್ರೆಕ್ಟ್ ರೆಪರ್ಟರಿ) ಯ ಸದಸ್ಯಳಾದಳು.ಅಲ್ಲಿ ಆಕೆ ಬ್ರೆಕ್ಟ್ ನ ಅನೇಕ ನಾಟಕಗಳಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯಳಾದಳು.-ಪುಂಟಿಲ,ಮದರ್ ಕರೆಜ್,ತ್ರೀ ಪೆನ್ನಿ ಒಪೆರ,ಅಂತಿಗೊನೆ,ಬಾಲ್,ದಿ ಮದರ್ ಇತ್ಯಾದಿ .ತನ್ನ ವಿಶಿಷ್ಟ ಧ್ವನಿಯಿಂದ ಮಾತು ಮತ್ತು ಹಾಡುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿದ ಅಂತೋಣಿ ಮಯ ,ಅನೇಕ ಸಿನೆಮಾಗಳಲ್ಲಿ ,ಟೆಲಿವಿಶನ್ ಹಾಗೂ ರೇಡಿಯೋ ನಾಟಕಗಳಲ್ಲಿ ತನ್ನ ಧ್ವನಿ ಮತ್ತು ನಟನೆಯಿಂದ ಪ್ರಸಿದ್ಧಳಾದಳು.ಪೊಟ್ಸ್ ಡಮ್ ನ ಸ್ಕೂಲ್ ಆಫ್ ಫಿಲಂಸ್ ಅಂಡ್ ಟೆಲಿವಿಶನ್ ನಲ್ಲಿ ಪ್ರಾಧ್ಯಾಪಕಿ ಆಗಿ ಕೆಲಸಮಾಡಿದ ಮಯ ಈಗ ಇರುವುದು ಬರ್ಲಿನ್ ನಲ್ಲಿ.
ಮ್ಯಾನ್ ಫ್ರೆಡ್ ಕರ್ಗೆ (ಜ.೧೯೩೮) ಪ್ರಸಿದ್ಧ ಜರ್ಮನ್ ನಟ ,ನಿರ್ದೇಶಕ ಮತ್ತು ನಾಟಕಕಾರ.ಬೆರ್ಲಿನೆರ್..ನ ನಾಟಕ ಶಾಲೆಯಲ್ಲಿ ಪದವಿ ಪಡೆದವನು.೧೯೬೦ರಲ್ಲಿ ಕರ್ಗೆ ನಿರ್ಮಾಣ ಮಾಡಿದ ನಾಟಕ ‘ಮನುಷ್ಯನಿಗೆ ಮನುಷ್ಯನೇ ಸಾಟಿ’.೧೯೬೫ರಲ್ಲಿ ಶೇಕ್ಸ್ ಪಿಯರ್ ನ ಒಥೆಲ್ಲೊ ನಾಟಕದಲ್ಲಿ ನಟನಾಗಿ ಹೆಸರು ಮಾಡಿದ ಕರ್ಗೆ ,ಮುಂದೆ ಹಂಬುರ್ಗ್ ,ವಿಯೆನ್ನಾ ಗಳಲ್ಲಿ ಸಂಚರಿಸಿ ,೧೯೯೨ರಲ್ಲಿ ಮತ್ತೆ ಬರ್ಲಿನೆರ್ ಗೆ ಹಿಂದಿರುಗಿದ.ಅನೇಕ ನಾಟಕಗಳನ್ನು ಬರೆದ ,ನಿರ್ದೇಶಿಸಿದ ,ಅಭಿನಯಿಸಿದ.ಈ ಪ್ರದರ್ಶನದ ಬಗ್ಗೆ ಕರ್ಗೆ ಹೇಳಿಕೊಂಡದ್ದು ಹೀಗೆ:” ಬ್ರೆಕ್ಟ್ ನ ಅನೇಕ ನಾಟಕಗಳಲ್ಲಿ ಯುವಕನಾಗಿದ್ದಾಗಲೇ ನಾನು ಪಾತ್ರ ವಹಿಸಿದ್ದೆ.ಹೆಲೆನೆ ವೈಗ್ಲೆ (ಬ್ರೆಕ್ಟ್ ನ ಹೆಂಡತಿ ,ನಿರ್ದೇಶಕಿ ) ಸಂಭಾಷಣೆ ಗಳನ್ನು ಹೇಳುವುದರ ಬಗ್ಗೆ ತುಂಬಾ ಕಟ್ಟುನಿಟ್ಟು.ನಾಟಕದ ಕಾವ್ಯಾತ್ಮಕ ಪಾಠಗಳು ಅದರ ಓದುವಿಕೆಯಲ್ಲಿ ಜೀವ ತಾಳುತ್ತವೆ.ಇವು ಬ್ರೆಕ್ಟ್ ನ ಶಬ್ದಗಳು,ನನ್ನವಲ್ಲ.”
ಅಂತೋಣಿ ಮಯ ಮತ್ತು ಮ್ಯಾನ್ ಫ್ರೆಡ್ ಕರ್ಗೆ -ಬ್ರೆಕ್ಟ್ ನಾಟಕಗಳ ಭಾಗಗಳ ಹಾಡು ಮತ್ತು ಸಂಭಾಷಣೆಗಳ ಮೂಲಕ ‘ಬ್ರೆಕ್ಟ್ ಸಂಜೆ’ಯನ್ನು ಜೀವಂತವಾಗಿಸಿದರು.ಅನೇಕ ಪಾತ್ರಗಳ ಮರುಹುಟ್ಟು, ಅನೇಕ ಘಟನೆಗಳ ಮರುಜೀವ ,ಅನೇಕ ವಿಭಿನ್ನ ಸನ್ನಿವೇಶಗಳ ಮುಖಾಮುಖಿ -ಹಾಡು ಮತ್ತು ಮಾತುಗಳ ರೂಪದಲ್ಲಿ ಇಂದಿನ ಜಾಗತೀಕರಣದ ಸಂಗತಿಗಳ ಜೊತೆಗೆ ಹೊಸ ಅರ್ಥಗಳನ್ನು ಸ್ಫೋಟಿಸಿದವು.
ಈ ನಾಟಕದ ಆರಂಭದಲ್ಲಿ ಮಯ ಮತ್ತು ಕರ್ಗೆ ತಮ್ಮ ಹಳೆಯ ನೆನಪುಗಳ ಮೂಲಕ ಸಂಭಾಷಣೆಯನ್ನು ಆರಂಭಿಸುತ್ತಾರೆ.ತಮ್ಮ ಮೊತ್ತ ಮೊದಲ ಭೇಟಿ,ಬಳಿಕದ ರಂಗಭೂಮಿಯ ಸಂಪರ್ಕಗಳು ಮತ್ತು ನಾಟಕದ ಸನ್ನಿವೇಶಗಳನ್ನು ತಮ್ಮ ಜೊತೆಗೆ ಸಂಬಂಧ ಕಲ್ಪಿಸಿ ಮಾತಾಡುತ್ತಾರೆ.ಬ್ರೆಕ್ಟ್ ಸತ್ತು ಐವತ್ತು ವರ್ಷ ಆದ ನೆನಪಿಗೆ (೨೦೦೬ರಲ್ಲಿ) ಹಾಡು ಮತ್ತು ಕವನಗಳ ಒಂದು ಸಂಜೆಯನ್ನಾಗಿಸುವ ನಿರ್ಧಾರ ಮಾಡುತ್ತಾರೆ.ಕರ್ಗೆ ಹೇಳುತ್ತಾನೆ ;”ನಿನ್ನ ಹಳೆಯ ನೀಲಿ ದಿರಿಸನ್ನು ಹೊರತೆಗೆ”.ಅದಕ್ಕೆ ಅಂತೋಣಿ ಮಯ ಪ್ರತಿಕ್ರಿಯೆ:”ಅದನ್ನು ತಿಗಣೆ ಗಳು ತಿಂದು ಹಾಕಿವೆ.” ಕರ್ಗೆ :”ನಾಚಿಕೆಗೇಡು !” ಅಂತೋಣಿ ಮಯ :”ಹೌದು,ನಿಜವಾಗಿ ನಾಚಿಕೆಗೇಡು !”
ಬ್ರೆಕ್ಟ್ ಒಂದು ಕಡೆ ಹೇಳಿದ ಮಾತು:”ಜಗತ್ತನ್ನು ಬದಲಾಯಿಸು,ಅದಕ್ಕೆ ಬದಲಾವಣೆಯ ಅಗತ್ಯ ಇದೆ.”
ಜಾಗತೀಕರಣ ಅನೇಕ ನೆಲೆಗಳಲ್ಲಿ ಜರ್ಮನಿಯ ಸಹಿತ ಯೂರೋಪಿನ ದೇಶಗಳನ್ನೂ ಕಾಡುತ್ತಿದೆ.ಅರ್ಥಿಕ ರಂಗದಲ್ಲಿ ಸಾಕಷ್ಟು ಏರುಪೇರುಗಳು ಆಗಿವೆ.ಉದ್ಯೋಗದ ಅವಕಾಶಗಳು ಕಡಿತ ಆಗಿವೆ.ನಿರುದ್ಯೋಗ ಹೆಚ್ಚಾಗುತ್ತಿದೆ.ಯುವಪೀಳಿಗೆಯಲ್ಲಿ ಹತಾಶೆಯ ಪ್ರಮಾಣ ಅಧಿಕವಾಗಿದೆ.ವಿದ್ಯಾರ್ಥಿಗಳು ಜ್ಞಾನ ಮತ್ತು ಉದ್ಯೋಗಗಳ ಕೊಂಡಿಯನ್ನು ಜೋಡಿಸುವ ಕಷ್ಟದಲ್ಲಿದ್ದಾರೆ.ನಗರಗಳಲ್ಲಿ ಗಗನಚುಂಬಿ ಕಟ್ಟಡಗಳು ಏಳುತ್ತಿದ್ದರೆ,ಸಣ್ಣ ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚುತ್ತಿದ್ದಾರೆ.’ಮಾರ್ಕ್ ‘ಬದಲು ‘ಯೂರೋ’,’ಪೆನ್ನಿ’ ಬದಲು ‘ಸೆಂಟ್ ‘ಬಂದಿದೆ.ಆದರೆ ‘ತ್ರೀ ಪೆನ್ನಿ ಒಪೆರ’ ಮಾತ್ರ ನಿರಂತರ ನಡೆಯುತ್ತಿದೆ,ಅದರ ಹಾಡುಗಳು ಮತ್ತು ,ಮಾತುಗಳು ರಂಗದ ಒಳಗೆ ಮತ್ತು ಹೊರಗೆ -ಅಂದು ಮತ್ತು ಇಂದು ಕೇಳಿಸುತ್ತಿದೆ.’ಕುರುಡು ಕಾಂಚಾಣಾ ಕುಣಿಯುತ್ತಲಿದೆ…………’

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: