ಬರ್ಲಿನ್ ನಲ್ಲಿ ಒಂದು ದಿನ -ಬ್ರೆಕ್ಟ್ ರಂಗಮಂದಿರದಲ್ಲಿ ಬ್ರೆಕ್ಟ್ ನೆನಪಿನ ಅಂಗಳದಲ್ಲಿ

Posted on ಜೂನ್ 21, 2011. Filed under: ರಂಗಭೂಮಿ, Uncategorized |


ಬರ್ಲಿನ್ ನಲ್ಲಿ ಇರುವ ಬ್ರೆಕ್ಟ್ ರಂಗಮಂದಿರವೆಂದೇ  ಪ್ರಸಿದ್ಧವಾಗಿರುವ ‘ಬರ್ಲಿನರ್ ಎನ್ ಸೇಮ್ಬ್ ಲ್’ ( ಜರ್ಮನ್ ಭಾಷೆಯಲ್ಲಿ ‘ಬೆರ್ಲಿನೆರ್  ಎನ್ಸೆಮ್ಬ್ಲೆ’) ಯನ್ನು ನಾನು ಮೊದಲು ನೋಡಿದ್ದು ೧೯೯೩ರ ಸಪ್ಟಂಬರದಲ್ಲಿ. ಪೀಟರ್ ಬ್ರೂಕ್ ನ ಫ್ರೆಂಚ್ ನಾಟಕ L’homme qui ವನ್ನು ಬರ್ಲಿನರ್ ಎನ್ ಸೇಮ್ಬ್ ಲ್ ನಲ್ಲಿ ಸಪ್ಟಂಬರ ೯ರ೦ದು .ಮತ್ತೆ ಮೊನ್ನೆ ಜೂನ್ ೧೩ರನ್ದು ಬರ್ಲಿನ್ ನಲ್ಲಿ ಇದ್ದಾಗ ನನ್ನ ಮೊದಲ ಭೇಟಿಯೇ ಬೆಳಗ್ಗೆ ‘ಬರ್ಲಿನರ್ ರಂಗಮಂದಿರ’ಕ್ಕೆ.ತಣ್ಣನೆಯ ಹವೆಯಲ್ಲಿ ಪ್ರಶಾಂತ ವಾತಾವರಣದಲ್ಲಿ ಸುಮಾರು ಹೊತ್ತು ರಂಗಮಂದಿರದ ಒಳಗೆ ಮತ್ತು ಹೊರಗೆ ಸುತ್ತಾಡಿದೆ. ಪ್ರದರ್ಶನ ಸಂಜೆ ಇರುವ ಕಾರಣ ,ಮಾಹಿತಿ ಕಚೇರಿಯಲ್ಲಿ ಇಬ್ಬರು  ಮತ್ತು ಟಿಕೆಟ್ ಕೊಡುವ ಒಬ್ಬಾಕೆ ಬಿಟ್ಟರೆ ಉಳಿದ ಕಡೆ ಎಲ್ಲಾ ನನಗೆ ಕಂಡದ್ದು ಬ್ರೆಕ್ಟ್.ನಾನು ಕನ್ನಡದಲ್ಲಿ ಓದಿದ ಮತ್ತು ರಂಗಭೂಮಿಯಲ್ಲಿ  ನೋಡಿದ ಅನೇಕ ಬ್ರೆಕ್ಟ್ ನಾಟಕಗಳು ನೆನಪಾದುವು.ಕಕೆಸಿಯನ್ ಚಾಕ್ ಸರ್ಕಲ್,ಗೆಲಿಲಿಯೋ,ತ್ರೀ ಪೆನ್ನಿ ಒಪೆರ (ಮೂರು ಕಾಸಿನ ಸಂಗೀತ ನಾಟಕ ),ಸೆಜುವಾನ್ ನಗರದ ಸಾದ್ವಿ,ತಾಯಿ ….ಹಿಟ್ಲರನ ನಾಜಿ ಆಡಳಿತದ ಅವಧಿಯಲ್ಲಿ ಜರ್ಮನಿಯ ಹೊರಗೆ ಇದ್ದುಕೊಂಡು ,ತನ್ನ ನಾಡಿನ ಬರ್ಬರತೆಯ ವಿರುದ್ಧ ಬರೆದ ಅನೇಕ ನಾಟಕಗಳ ಹಾಡುಗಳು ಮಾತುಗಳು ಹರಿಯುವ ನೀರಿನ ದಂಡೆಯಲ್ಲಿರುವ ‘ಬರ್ಲಿನರ್..’ಪರಿಸರದಲ್ಲಿ ಅನುರಣಿಸಿದವು.

ಆ ದಿನ ಸಂಜೆ ಅಲ್ಲಿ ಎರಡು ನಾಟಕಗಳ ಪ್ರದರ್ಶನಗಳು ಇದ್ದುವು.ಪ್ರಧಾನ ರಂಗಮಂದಿರದಲ್ಲಿ ತೋಮಸ್ ಬೆರ್ನ್ ಹರ್ದ್ ನ ‘EINFACH KOMPLIZIERT’  ಪಕ್ಕದ ಸಣ್ಣ ರಂಗಮಂದಿರದಲ್ಲಿ ‘ ANTONO/KARGE/BRECHT’. ಇದು ಬ್ರೆಕ್ಟ್ ನಾಟಕಗಳ ಹಾಡು ಮತ್ತು ಮಾತುಗಳ ತುಣುಕುಗಳ ಮೂಲಕ ಬ್ರೆಕ್ಟ್ ನಾಟಕಗಳ ಒಬ್ಬಳು ಪ್ರಸಿದ್ಧ ನಟಿ ಮತ್ತು ಒಬ್ಬ ಪ್ರಸಿದ್ಧ ನಟ ಅಭಿನಯಿಸುವ ಒಂದು ಪ್ರಯೋಗ.ಬ್ರೆಕ್ಟ್ ನ ಹೆಸರಿನ ಕಾರಣಕ್ಕಾಗಿ ನಾನು ಇದರ ಟಿಕೆಟ್ ಕೊಂಡುಕೊಂಡೆ ,ಆ ದಿನದ ಸಂಜೆಯ ಪ್ರದರ್ಶನಕ್ಕೆ.ಸಂಜೆ ಏಳು ಗಂಟೆಗೆ ಪ್ರದರ್ಶನ.ಮತ್ತೆ ಸಂಜೆ ಬಂದು ನಾಟಕ ನೋಡಿದೆ.ಆ ಪ್ರದರ್ಶನದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

‘ಬರ್ಲಿನರ್ ಎನ್ ಸೇಮ್ಬ್ ಲ್ ‘ವನ್ನು ಬೆರ್ತೊಲ್ತ್  ಬ್ರೆಕ್ಟ್ (೧೮೯೮-೧೯೫೬) ಮತ್ತು ಅವನ  ಕಲಾವಿದೆ ಹೆಂಡತಿ ಹೆಲೆನೆ ವೈಗೆಲ್  ೧೯೪೯ರಲ್ಲಿ ಸ್ಫಾಪಿಸಿದರು.ಬ್ರೆಕ್ಟ್ ನ ‘ಮದರ್ ಕರೆಜ್ ‘ನಾಟಕದ ಯಶಸ್ಸು ಇದರೊಂದಿಗೆ ಇತ್ತು.ನಾಜಿ ಆಡಳಿತ ಕೊನೆಗೊಂಡ ಬಳಿಕ ಜರ್ಮನಿಗೆ ಹಿಂದಿರುಗಿದ ಬ್ರೆಕ್ಟ್ ತನ್ನ ಕಂಪೆನಿಯನ್ನು ಆರಂಭದಲ್ಲಿ ವೊಲ್ಫ್ ಗ್ಯಾಂಗ್ ಲಾಂಗ್ ಹೊಫ್ಫ್ ನ ‘ದಾಯಿಶ್ಚ್ ಥಿಯೇಟರ್ ‘ ನಲ್ಲಿ ಸುರುಮಾಡಿದ.ಬಳಿಕ ೧೯೫೪ರಿಂದ  ಈಗ ಇರುವ ಸ್ಚಿಫ್ಫ್ ಬುಎರ್ ದಮ್ಮ್  ಥಿಯೇಟರ್ , ಅದರ ಶಾಶ್ವತ ಮನೆ ಆಯಿತು.ಎರಡನೆಯ ಮಹಾಯುದ್ಧದಲ್ಲಿ ಹೆಚ್ಚು ಹಾನಿಗೆ ಒಳಗಾಗದ ಈ ಕಲಾತ್ಮಕ ಕಟ್ಟಡದ ಥಿಯೇಟರ್ ನಲ್ಲಿ ೧೯೨೮ರಲ್ಲಿ ಬ್ರೆಕ್ಟ್ ನ ‘ತ್ರೀ ಪೆನ್ನಿ ಒಪೆರ’ ನಾಟಕ  ದೀರ್ಘ ಕಾಲ ಪ್ರದರ್ಶನ ಕಂಡು ಜನಪ್ರಿಯ ಆಗಿತ್ತು.ಈ ರಂಗಮಂದಿರದಲ್ಲಿ ಬ್ರೆಕ್ಟ್ ತನ್ನ ‘ಕಕೆಸಿಯನ್ ಚಾಕ್ ಸರ್ಕಲ್’ ನಾಟಕವನ್ನು ನಿರ್ದೇಶಿಸಿ ಪ್ರದರ್ಶಿಸಿದ.ಬಳಿಕ ಎರಿಕ್ ಎಂಗೆಲ್ ಜೊತೆಗೆ ‘ಗೆಲಿಲಿಯೋ’ ನಾಟಕ ನಿರ್ದೇಶಿಸಿದ. ಆ ವರೆಗೆ ರಂಗ ಪ್ರದರ್ಶನ ಕಾಣದಿದ್ದ ಬ್ರೆಕ್ಟಿನ  ನಾಟಕಗಳನ್ನು ನಿರ್ದೇಶಿಸಲು ತನ್ನ ವಿದ್ಯಾರ್ಥಿಗಳಾದ ಬೆನ್ನೊ ಬೆಸ್ಸೋನ್,ಎಗೊನ್ ಮೊಂಕ್,ಪೀಟರ್ ಪಲಿತ್ಸ್ಚ್  ಮತ್ತು ಮ್ಯಾನ್ ಫ್ರೆಡ್ ವೇಕ್ ವೆರ್ಥ್ ಅವರಿಗೆ ಅವಕಾಶ ಕಲ್ಪಿಸಿದ.ರಂಗ ಸಜ್ಜಿಕೆ ,ಪ್ರಸಾಧನ ,ಸಂಗೀತ -ಇವುಗಳಿಗೆ ಬ್ರೆಕ್ಟ್ ನ ಆಪ್ತ ಸಹಯೋಗಿಗಳಾಗಿದ್ದವರು-ಕಸ್ಪರ್ ನೆಹೆರ್,ಕಾರ್ಲ್ ವೊನ್ ಅಪ್ಪೆನ್,ಪೌಲ್ ದೆಸ್ಸವು ,ಹನ್ನ್ಸ್ ಐಸ್ಲೆರ್ ಮತ್ತು ಎಲಿಸಬೆಥ್ ಹೊವ್ಪ್ತ್ ಮ್ಯಾನ್ .

ಬ್ರೆಕ್ಟ್ ನ ಮರಣದ (೧೯೫೬)ದ ಬಳಿಕ ಅವನ ಹೆಂಡತಿ ಕಲಾವಿದೆ ಹೆಲೆನೆ ವೈಗೆಲ್ ಈ ರಂಗತಂಡದ ಕಲಾ ಮ್ಯಾನೇಜರ್ ಆದಳು.ಯುವ ನಿರ್ದೇಶಕರಾದ ಮನ್ಫ್ರೆದ್ ಕರ್ಗೆ ,ಮತಿಯಾಸ್ ಲಾಂಗ್ ಹೊಫ್ಫ್ ತಮ್ಮ ನಿರ್ದೇಶನದ ಬದುಕನ್ನು ಆರಂಭಿಸಿದ್ದು ಇಲ್ಲಿ.ಈ ಕಂಪನಿಯ ‘ಮದರ್’ ,’ಅರ್ತುರೋ ಉಯಿ …’ ಯಂತಹ ಪ್ರದರ್ಶನಗಳು ಇಲ್ಲಿ ತುಂಬಾ ಜನಪ್ರಿಯತೆ ಪಡೆದವು.ರುತ್  ಬೆರ್ಗ್ ಹೌಸ್ ಈ ಕಂಪೆನಿಯ ಕಲಾ ನಿರ್ದೇಶಕಿ ಆದಾಗ ,ರಾಜಕೀಯ ಮತ್ತು ಕಲಾತ್ಮಕ ಪುನಶ್ಚೇತನಕ್ಕೆ ಅವಕಾಶ ದೊರೆಯಿತು.ಜರ್ಮನ್ ಡೆಮೊಕ್ರೆಟಿಕ್ ರಿಪಬ್ಲಿಕ್ ನಿಷೇಧ ಹೇರಿದ್ದ ಹೈನರ್  ಮುಲ್ಲರ್ ನ ‘ಸಿಮೆಂಟ್’ ನಾಟಕವನ್ನು ರುತ್ ನಿರ್ದೆಶಿಸಿದಳು.ಆಡಳಿತಾರೂಡ ರಾಜಕೀಯವು ಆಕೆಯ ಸವಾಲು ಒಡ್ಡುವ ಪ್ರಯೋಗಾತ್ಮಕ ನಾಟಕ ಪ್ರದರ್ಶನಗಳನ್ನು ಒಪ್ಪಿಕೊಳ್ಳಲಿಲ್ಲ.ಹಾಗಾಗಿ ೧೯೭೭ರಲ್ಲಿ ಮನ್ ಫ್ರೆಡ್ ವೇಕ್ ವೆರ್ಥ್ಅನ್ನು   ನಿರ್ದೇಶಕ ಆಗಿ ಅವಳ ಸ್ಥಾನಕ್ಕೆ ತರಲಾಯಿತು.ಆದರೂ ಹೊಸ ನಾಟಕಗಳು ಈ ರಂಗಮಂದಿರದಲ್ಲಿ ಕಾಣಿಸಿ ಕೊಂಡವು.ಆಡಳಿತದ ಧೋರಣೆಗಳ ನಿರ್ಬಂಧಗಳ ಚೌಕಟ್ಟಿನಲ್ಲಿ ಹೆಣಗುತ್ತಿದ್ದ ರೆಪರ್ಟರಿಗೆ ಹೊಸ ಜೀವ ಬರಲಾರಂಭಿಸಿತು.

೧೯೯೨ರಲ್ಲಿ ಬರ್ಲಿನ್ ಗೋಡೆ ಬಿದ್ದು ,ಪೂರ್ವ ಮತ್ತು ಪಶ್ಚಿಮಗಳು ಒಂದಾಗಿ ಹೊಸ ಯುಗವೊಂದು ಜರ್ಮನಿಯಲ್ಲಿ ಆರಂಭವಾದಾಗ ,ಬರ್ಲಿನರ್ ರೆಪರ್ಟರಿಗೆ ಹೊಸ ಆಡಳಿತ ಮಂಡಳಿ ಬಂದಿತು.ಮಥಿಯಾಸ್ ಲಾಂಗ್ ಹೊಫ್ಫ್ ,ಫ್ರಿಟ್ಜ್  ಮರ್ಕುವರ್ದ್,ಹೈನೆರ್ ಮುಲ್ಲರ್ ,ಪೀಟರ್ ಪಲಿತ್ಸ್ ಶ್ಚ್ ಮತ್ತು ಪೀಟರ್ ಜ್ಯದೆಕ್ -ಇವರು ಹೊಸ ರೂಪ ಹೊಸ ಚಿಂತನೆಯನ್ನು ಕೊಟ್ಟರು.ಸರಕಾರದ ಅಧೀನ ಇದ್ದ ಕಂಪೆನಿಯು ಬದಲಾಗಿ , ನಗರ ಆಡಳಿತದಿಂದ ಸಬ್ಸಿಡಿ ಪಡೆಯುವ ಖಾಸಗಿ ನಿಯಮಿತ ಕಂಪೆನಿ ಆಯಿತು.ಹೈನೆರ್ ಮುಲ್ಲರ್ ನಿರ್ದೇಶಿಸಿದ ,ಬ್ರೆಕ್ಟ್ ನ ‘ಅರ್ತುರೋ  ಉಯಿ …’ಪ್ರದರ್ಶನವು ಬಹಳ ಯಶಸ್ವಿಯಾಗಿ ಜನಪ್ರಿಯತೆ ಗಳಿಸಿತು.

೧೯೯೯ರಲ್ಲಿ ಕ್ಲ್ವುಸ್ ಪೆಯ್ಮನ್ನ್  ಈ ‘ಬೆರ್ಲಿನರ್ ..’ಕಂಪೆನಿಯ ಕಲಾ ನಿರ್ದೇಶಕ ಆದಾಗ ಸಮಕಾಲೀನ ರಂಗಭೂಮಿಯ  ಮತ್ತು ಕ್ಲಾಸಿಕ್ ಗಳನ್ನು ಆಧುನಿಕ ದೃಷ್ಟಿ ಕೋನದಿಂದ ನಿರ್ದೇಶಿಸುವ ನಾಟಕಗಳು ಹೆಚ್ಚು ಕಾಣಿಸಿಕೊಂಡುವು.೨೦೦೦ದಲ್ಲಿ ಜಾರ್ಜ್ ತಬೊರಿಯ’ Brecht -Akte’ ಪ್ರದರ್ಶನದ ಮೂಲಕ ‘ಬರ್ಲಿನೆರ್ …’ಮತ್ತೆ  ತೆರೆದುಕೊಂಡಿತು.೨೦೦೨-೨೦೦೩ರಲ್ಲಿ ಕ್ಲವುಸ್ ಪೇಯ್ ಮನ್ ತಾನು ಕಲಾ ನಿರ್ದೇಶಕನಾದ ಬಳಿಕ ಮೊದಲ ಬಾರಿ ಬ್ರೆಕ್ಟ್ ನಾಟಕಗಳನ್ನು ನಿರ್ದೇಶಿಸಿದನು.-ಮದರ್,ಸೈಂಟ್ ಜೋನ್ ಆಫ್ ದ ಸ್ಟಾಕ್ ಯಾರ್ಡ್ಸ್.ಈಗ ಬರ್ಲಿನೆರ್ ..ನಲ್ಲಿ ಕೆಲಸಮಾಡುತ್ತಿರುವ ನಿರ್ದೇಶಕರು-ಲಿಯಂದೆರ್ ಹೌಸ್ ಮನ್ ,ಲುಕ್ ಬೋಂದಿ ,ವೆರ್ನೆರ್ ಸ್ಚ್ರೋಯೇತೆರ್ ,ಅಕಿಂ ಫ್ರೆಯೇರ್,ತೋಮಸ್ ಲಾಂಗ್ ಹೊಫ್ಫ್,ರೋಬೆರ್ತ್ ವಿಲ್ಸನ್,ಪೀಟರ್ ಜ್ಯದೆಕ್.

ಬ್ರೆಕ್ಟ್ ಮತ್ತೆ ಮತ್ತೆ ಕಾಲ ದೇಶಗಳನ್ನು ಮೀರಿ ,ತನ್ನ ನಾಟಕಗಳಿಂದ ನಮ್ಮನ್ನು ಕಾಡುತ್ತಾನೆ,ಗೇಲಿ ಮಾಡುತ್ತಾನೆ ,ನಮ್ಮ ನಡುವೆ ಈಗ ನಡೆಯುತ್ತಿರುವುದೆಲ್ಲವನ್ನು ತಾನು ಎಪ್ಪತ್ತು ಎಂಬತ್ತು ವರ್ಷಗಳ ಹಿಂದೆಯೇ ಕಂಡಿದ್ದೆ ಎಂದು ನಮಗೆ ಬೆರಗು ಭಯ ಹುಟ್ಟಿಸುತ್ತಾನೆ.’ಮೂರು ಕಾಸಿನ ಸಂಗೀತ ನಾಟಕ’ ನಮ್ಮಲ್ಲಿ ದಿನನಿತ್ಯ ಪ್ರದರ್ಶನ ಆಗುತ್ತಿರುವಾಗ ಬ್ರೆಕ್ಟ್ ಎಲ್ಲಿದ್ದಾನೆ -‘ಬರ್ಲಿನರ್ ….’ನಲ್ಲಿ ಮಾತ್ರವೇ ?

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: