ಆಫ್ರಿಕಾ ಆಫ್ರಿಕಾ -ಹಾಡು ಕುಣಿತ ನಾಡು ಕಲಿತ ಜಾತ್ರೆ

Posted on ಜೂನ್ 5, 2011. Filed under: Uncategorized |


ವ್ಯೂತ್ಸ್ ಬುರ್ಗ್ ನಗರದಲ್ಲಿ ಪ್ರತೀವರ್ಷ ‘ಆಫ್ರಿಕಾ ಫೆಸ್ಟಿವಲ್’ ದೊಡ್ಡ ಪ್ರಮಾಣದಲ್ಲಿ ವರ್ಣರಂಜಿತವಾಗಿ ಕಲಾತ್ಮಕವಾಗಿ ನಡೆಯುತ್ತದೆ.ಜಗತ್ತಿನಾದ್ಯಂತ ಹರಡಿಕೊಂಡಿರುವ ಆಫ್ರಿಕಾದ ಸಣ್ಣ ಪುಟ್ಟ ಕಪ್ಪು ದೇಶಗಳೆಲ್ಲ ಇಲ್ಲಿ ಒಟ್ಟಾಗುತ್ತವೆ.ತಮ್ಮ ವಿಶಿಷ್ಟ ಸಂಗೀತ ,ಹಾಡು,ವಾದ್ಯಗಳು,ಕುಣಿತ,ಬಹುಬಗೆಯ ಕಲಾವಸ್ತುಗಳು,ಅಪೂರ್ವ ಸೃಜನಶೀಲ ಕಲೆಗಳು,ದೇಸಿ ತಿಂಡಿತಿನಿಸುಗಳು,ಉಡುಗೆ ತೊಡುಗೆಗಳು ,ಸಾಹಿತ್ಯ ಇತ್ಯಾದಿ ಇತ್ಯಾದಿ ಎಲ್ಲ ಇಲ್ಲಿ ಜಾತ್ರೆಯ ಸಂಭ್ರಮದಲ್ಲಿ ಸೇರಿಹೋಗುತ್ತವೆ.

ಈವರ್ಷ ಇಲ್ಲಿ ‘ಆಫ್ರಿಕಾ ಜಾತ್ರೆ’ಜೂನ್ ಎರಡರಿಂದ ಐದರ ವರೆಗೆ ನಡೆಯುತ್ತಿದೆ.ನಗರದ ಮಾಯಿನ್ ನದಿಯ ದಂಡೆಯಲ್ಲಿ ವಿಶಾಲ ಮೈದಾನದಲ್ಲಿ ನೂರಾರು ಮಳಿಗೆಗಳ ಅನೇಕ ಆಫ್ರಿಕಾ ದೇಶಗಳ ಬಾವುಟಗಳ ರಾರಾಜಿಸುವಿಕೆಯಲ್ಲಿ ಸಾವಿರಾರು ಜನಸಾಗರದ ಜಾತ್ರೆ ನೋಡಿದಷ್ಟೂ ಮುಗಿಯುವುದಿಲ್ಲ.ನಿನ್ನೆ ಸಂಜೆ ಸುಮಾರು ಮೂರು ಗಂಟೆಯಷ್ಟು ಕಾಲ ,ನಾನು ಸುತ್ತಾಡಿ ,ಸಾಧ್ಯವಾದಷ್ಟು ಸಂಗತಿಗಳನ್ನು ಕ್ಯಾಮರದಲ್ಲಿ ಸೆರೆಹಿಡಿದು ,ಕೆಲವು ಫೋಟೋಗಳನ್ನು ಇಲ್ಲಿ ಪ್ರದರ್ಶಿಸಿದ್ದೇನೆ.

ಈ ವರ್ಷ ,ವ್ಯೂತ್ಸ್ ಬುರ್ಗ್ ‘ಆಫ್ರಿಕಾ ಜಾತ್ರೆ’ಯ ಕೇಂದ್ರ- ಕರೀಬಿಯನ್ ದ್ವೀಪಗಳು.ಅವುಗಳ ಸಾಂಸ್ಕೃತಿಕ ಚರಿತ್ರೆ,೧೬ನೆ ಶತಮಾನದಲ್ಲಿ ಗುಲಾಮರಾಗಿ ಅವರನ್ನು ವೆಸ್ಟ್ ಇಂಡೀಸಿಗೆ ತಂದ ಬಳಿಕದ ಬೆಳವಣಿಗೆ -ಎಲ್ಲ ಬಹುರೂಪಗಳಲ್ಲಿ ಈ ಜಾತ್ರೆಯಲ್ಲಿ ಕಾಣಿಸಿಕೊಂಡವು.ಕ್ಯೂಬಾ ಮತ್ತು ಜಮೈಕಾ ಗಳ ಅಪೂರ್ವ ಆಹಾರ ವಿಶೇಷವಾಗಿತ್ತು.ವೆಸ್ಟ್ ಇಂಡೀಸಿನ ಅತಿ ದಕ್ಷಿಣದ ದ್ವೀಪಗಳಾದ ಟ್ರಿನಿಡಾಡ್ ಮತ್ತು ತೊಬಾಗೊ ಗಳ ಸಂಗೀತ ತಂಡಗಳು ಆಫ್ರಿಕಾ ಜಾತ್ರೆಗೆ ರಂಗು ತಂದುವು.ಈ ಎರಡು ದ್ವೀಪಗಳ ಎಲ್ಲ ಮಾಹಿತಿ ,’ಬಿದಿರಿನ ಸಭಾಂಗಣ’ದಲ್ಲಿ ತುಂಬಾ ಅಚ್ಚುಕಟ್ಟಾಗಿತ್ತು. ಆಫ್ರಿಕಾ ಎಂದರೆ ಸಂಗೀತ.ಹಾಗಾಗಿ ಸಂಗೀತದ ಹೆಸರಾಂತ  ತಂಡಗಳು ಈ ಜಾತ್ರೆಯ ದೊಡ್ಡ ಆಕರ್ಷಣೆ.ಈಬಾರಿ ಕೆನ್ಯಾ,ಘಾನ ಮತ್ತು ಹೈತಿ ಗಳಿಂದ ಸಂಗೀತ ತಂಡಗಳು ಬಂದಿದ್ದವು. ‘ಕಾರ್ನಿವಾಲ್ ‘ ಎಂಬ ಸಾಂಸ್ಕೃತಿಕ ಸಂಗತಿ -ಕೆರಿಬಿಯನ್ ನ ಅನನ್ಯತೆ.ಅರುಬ ಮತ್ತು ಇತರ ದ್ವೀಪಗಳಿಂದ ಬಂದಿದ್ದ ಇಪ್ಪತೈದು ಸಂಗೀತಗಾರರು ಮತ್ತು ಕುಣಿಯುವವರ ತಂಡದ ಪ್ರದರ್ಶನಕ್ಕೆ  ಕಾಲಿಡಲು ತೆರಪಿಲ್ಲ.ತುದಿಗಾಲಲ್ಲಿ ನಿಂತುಕೊಂಡು ನಾನು ನೋಡಬೇಕಾಯಿತು.

‘ಆಫ್ರಿಕಾ ಜಾತ್ರೆ’ಯಲ್ಲಿ ಆಫ್ರೋ-ಕೊಲೊಂಬಿಯದ ಮಹಿಳೆಯರ ಅನನ್ಯ ಚಿತ್ರಗಳನ್ನು ಫೋಟೋ ಪ್ರದರ್ಶನದಲ್ಲಿ ಇಡಲಾಗಿತ್ತು.ಅಂಗೆಲೇ ಎತೌಂಡಿ ಎಸ್ಸಂಬ -ಇಂತಹ ಫೋಟೋ ಪುಸ್ತಕ ಮಾಡಿದ ಮೊದಲ ಆಫ್ರಿಕನ್ ಮಹಿಳೆ.ಅವಳ ಪ್ರದರ್ಶನದ ಹೆಸರು -‘I-DENTITY/EYE-DENTITY’. ಹೆಣ್ಣಿನ ಕಣ್ಣು ಮತ್ತು ಕೆಮರ ಕಣ್ಣು ಜೊತೆಯಾಗಿ, ಕಪ್ಪು ಮಹಿಳಾಲೋಕದ ಕತ್ತಲೆಯ ಮೇಲೆ ಬೆಳಕು ಚೆಲ್ಲಿತ್ತು.’ಮಾಲಿ’ದ್ವೀಪದ ಮಹಿಳೆಯರ  ಕೇಶ ಶೃಂಗಾರ ,ಅಪೂರ್ವ ಮತ್ತು ಆಕರ್ಷಕ.ಮಾಲಿಯ ಕಪ್ಪು ಹೆಂಗುಸರು ಜರ್ಮನಿಯ ಬಿಳಿಯ ಹೆಂಗುಸರಿಗೆ ಜಡೆಹಾಕಿ ಹೆಣೆಯುತ್ತಿದ್ದ ದೃಶ್ಯ ಮೋಜು ಮತ್ತು ಜನಾಕರ್ಷಣೆಯದ್ದು ಆಗಿತ್ತು.ಹೆಂಗುಸರ ತಲೆಕೂದಲನ್ನು ಬೇರೆ ಬೇರೆ ವಿನ್ಯಾಸಗಳಲ್ಲಿ ಜಡೆ ನೇಯ್ದು ಕಟ್ಟುವ ಮಾದರಿಗಳು  ಆ ಮಳಿಗೆಗಳಲ್ಲಿ ಇದ್ದುವು. ನಿಸರ್ಗದ ‘ಮಾವಿನ ಮಿಡಿ’ ಮಾದರಿಯಿಂದ ತೊಡಗಿ ,ಪಾಪ್ ಸಂಸ್ಕೃತಿಯ ‘ಶಕೀರ’ ವಿನ್ಯಾಸದ ವರೆಗೆ ಜಡೆ ಹೆಣಿಗೆಯ ಪ್ರದರ್ಶಿಕೆಗಳು ಅಲ್ಲಿ ಇದ್ದುವು.

ಮಕ್ಕಳ ಮೇಳದಲ್ಲಿ ಪುಟಾಣಿ ಗಳದ್ದೇ ಸ್ವಚ್ಚಂದ ಕಿನ್ನರ ಲೋಕ.ಸರ್ಕಸ್ ಟೆಂಟಿನಲ್ಲಿ  ಮಕ್ಕಳಿಗೆ  ಕತೆ ಹೇಳುವುದು,ಹಾಡು,ಕುಣಿತ,ಅಭಿನಯ ,ಆಟ -ಎಲ್ಲ ನಡೆದಿತ್ತು.ಸೆನಗಲ್ ನ ಲೇಖಕ ಹಾಗು ಸಂಗೀತಗಾರ ಇಬ್ರಾಹಿಮ ನ್ದಿಯಯೇ -ಮಕ್ಕಳನ್ನು ಸೆಳೆಯುವ ಕಿಂದರಿಜೋಗಿ ಆಗಿ ಅಲ್ಲಿದ್ದರು.

ಆಫ್ರಿಕಾದ ಕರೆಕುಶಲ ಕಲೆಗಳ ಮಳಿಗೆಗಳು ಎಲ್ಲಿ ನೋಡಿದರೂ ಎದುರಾಗುತ್ತಿದ್ದುವು.ಚರ್ಮ ವಾದ್ಯಗಳ ಬಹುರೂಪ ಬೆರಗು ಹುಟ್ಟಿಸುತ್ತಿತ್ತು.ಮರದ ಕೆತ್ತನೆಗಳು ಇನ್ನೊಂದು  ಆಕರ್ಷಣೆ.ಪೈಂಟಿಂಗ್ ಚಿತ್ರಗಳ ಮಳಿಗೆಯಿಂದ ಹೊರಬರಲು ಮನಸ್ಸಾಗಲಿಲ್ಲ.ಒಂದು ಸುಂದರ ಸೃಜನಶೀಲ ಪೈಂಟಿಂಗ್ ನ ಫೋಟೋ ಇಲ್ಲಿ ಕೊಟ್ಟಿದ್ದೇನೆ.ಬಟ್ಟೆಯ ಚಿತ್ತಾರ ಕಲೆಯ ವಸ್ತುಗಳು ಮಳಿಗೆಗಳ ತುಂಬೆಲ್ಲ ಕಣ್ಣಿಗೆ ರಾಚುತ್ತಿದ್ದವು.’ಆಫ್ರಿಕಾದಲ್ಲಿ ಮಾಡಿದ ಹತ್ತಿ’ ಎನ್ನುವುದು  ಒಂದು  ಸ್ವಯಂ ಸೇವಾ ಸಂಸ್ಥೆಯ ಹೆಸರು.ಸ್ವದೇಶಿ ಹತ್ತಿಯಿಂದ ಬಟ್ಟೆಗಳನ್ನು ದೇಸಿ ಮಾದರಿಯಲ್ಲಿ ತಯಾರಿಸಿ ,ಅದನ್ನು ಬಳಸಲು ಉತ್ತೇಜಿಸುವ ಕಾರ್ಯಕ್ರಮ ಇದು.’ಆಫ್ರಿಕಾ ಸಂತೆ’ ಯೊಳಗೆ ಹೊಕ್ಕರೆ ,ಚಕ್ರವ್ಯೂಹವನ್ನು ಹೊಕ್ಕ ಅಭಿಮನ್ಯವಿನಂತೆ ಹೊರಬರಲು ಸಾಧ್ಯ ಆಗುವುದಿಲ್ಲ.’ಬಜಾರ್’ ನಲ್ಲಿ ಆಫ್ರಿಕಾದ ಚರ್ಮ ವಾದ್ಯಗಳು,ಸಂಗೀತದ ಬಹುಬಗೆಯ ಸಾಧನಗಳು,ಬಟ್ಟೆಯ ನಾನಾನಮೂನೆಗಳು,ಆಭರಣಗಳು,ಶಿಲ್ಪಗಳು,ಮುಖವಾಡಗಳು,ಚಿತ್ರಗಳು,ಚಿತ್ತಾರಗಳು,ಮಣಿಸರಕುಗಳು,ಪುಸ್ತಕಗಳು,ಸಿಡಿಗಳು,ಆಟಿಕೆಗಳು ಇನ್ನೂ ಇನ್ನೂ ಏನೇನೂ -ಎಲ್ಲ ಆಫ್ರಿಕಾದ ದೂರ ದೂರದ ದ್ವೀಪಗಳು,ದ್ವೀಪದಂತಹ ದೇಶಗಳವು.ಟ್ರಿನಿಡಾಡ್ ನಲ್ಲಿ ೧೯೩೦ರಲ್ಲಿ ಹುಡುಕಿ ತೆಗೆದ ಸ್ಟೀಲ್ ಡ್ರಮ್ , ಆ ದೇಶದ ರಾಷ್ಟ್ರೀಯ ವಾದ್ಯವಾಗಿ ಜನಪ್ರಿಯ.ಅಂತಹ ಸ್ಟೀಲ್ ಡ್ರಮ್ ನ ಮರ್ಮರ  ಇಡೀ  ಜಾತ್ರೆಯಲ್ಲಿ ಅನುರಣಿಸುತ್ತಿತ್ತು.ಹವಾನಾ ಕ್ಲಬ್ ನಲ್ಲಿ ಕ್ಯೂಬಾ ದ ಸಂಗೀತ ಅಲ್ಲಿನ ಸಂಗೀತಗಾರ ಮಿರೆಯ ಕೋಬ ಕಂತೆರೋ ಸಹಿತ ಅನೇಕ ಯುವ ಗಾಯಕ ಗಾಯಕಿಯರ ಜೊತೆಗೆ ,ರಸಸಂಜೆಯ ಮೆರಗು ತಂದಿತ್ತು.

ತಿಂಡಿತಿನಿಸುಗಳ ಮಳೆಗೆಗಳಲ್ಲಿ ಆಫ್ರಿಕಾದ ಅನೇಕ ದೇಶಗಳ ಆಹಾರ ಮಳಿಗೆಗಳು ಘಮ ಘಮಿಸುತ್ತಿದ್ದುವು.ಹೆಸರು ಬಣ್ಣ ಪರಿಮಳ ರುಚಿ ಗೊತ್ತಿಲ್ಲದಿದ್ದರೂ ಬಿಳಿಯ ಜನರು ಕಪ್ಪು ತಿನಿಸುಗಳಿಗೆ ಮಾರುಹೋಗಿ ,ಪಂಚೇಂದ್ರಿಯಗಳ ಸುಖ ಅನುಭವಿಸುತ್ತಿದ್ದರು.ಇವುಗಳ ನಡುವೆಯೇ ಗಣೇಶನ ಬ್ಯಾನರಿನ ‘ಇಂಡಿಯನ್ ‘ ರೆಸ್ಟೋರೆಂಟ್ ಒಂದು ,ಕಪ್ಪು ಬಿಳಿಯವರನ್ನು ಒಟ್ಟಾಗಿ ಭೋಜನಕ್ಕೆ ಆಹ್ವಾನಿಸುತಿತ್ತು.

ಆಫ್ರಿಕನ್ ಸಾಹಿತ್ಯದ ಮೇರು ಲೇಖಕ ,ವೋಲೆ ಸೋಯಿಂಕಾ ಒಂದೆಡೆ ಹೀಗೆ ಹೇಳುತ್ತಾರೆ :” ಮನುಷ್ಯರ ಚೇತನವು ತನ್ನ ಋಣಾತ್ಮಕ ಹಂತಗಳನ್ನು ದಾಟಿಕೊಂಡು ಮುಂದೆ ಹೋಗುತ್ತದೆ.ನಮಗೆ ಸ್ಫೂರ್ತಿ ಕೊಡುವ ಚೇತನಗಳು ಎಲ್ಲಾ ತಮ್ಮ ಬದುಕಿನಲ್ಲಿ ಭಯಾನಕ ನಿರಾಶೆಯ ಕ್ಷಣಗಳನ್ನು ಗೆದ್ದವರು.ತಮ್ಮ ಅಹಂಕಾರದ ಚೂರುಗಳನ್ನು ಒಟ್ಟುಮಾಡಿ ,ಅದರ ಮೂಲಕದ ಬದುಕಿನಿಂದ ನಮಗೆ ಮಾದರಿಯಾಗಿ ಇರುವವರು.”

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಆಫ್ರಿಕಾ ಆಫ್ರಿಕಾ -ಹಾಡು ಕುಣಿತ ನಾಡು ಕಲಿತ ಜಾತ್ರೆ”

RSS Feed for ಬಿ ಎ ವಿವೇಕ ರೈ Comments RSS Feed

ಚೆನ್ನಾಗಿದೆ ಸರ್.. ನಿಮ್ಮ ಬ್ಲೋಗ್ ಒದುತ್ತಾ ಇರ್ತೇನೆ 🙂 ಖುಶಿ ಕೊಡುತ್ತೆ

ಈಶ್ವರ ಭಟ್,ತುಂಬಾ ಸಂತೋಷ.


Where's The Comment Form?

Liked it here?
Why not try sites on the blogroll...

%d bloggers like this: