ತೆಂಕಣ ಗಾಳಿಯಾಟ ,ಕಾರ್ಗಾಲದ ವೈಭವ ,ಮುಂಗಾರಿನ ಹಿಂದೆ ಮತ್ತು ಮುಂದೆ

Posted on ಜೂನ್ 3, 2011. Filed under: Uncategorized |


ಪಂಜೆ ಮಂಗೇಶರಾಯರ  ‘ ತೆಂಕಣ  ಗಾಳಿಯಾಟ ‘                                ಕಡೆಂಗೋಡ್ಲು  ಶಂಕರ ಭಟ್ಟರ ‘ ಕಾರ್ಗಾಲದ  ವೈಭವ

ಬರಲಿದೆ  ಆಹಾಹಾ ದೂರದಿ ಬರಲಿದೆ –                                                                                  ಪಡುವಣ  ತೀರದ

ಬುಸುಗುಟ್ಟುವ ಪಾತಾಳದ  ಹಾವೋ  ?                                                                                  ಕನ್ನಡ  ನಾಡಿನ

ಹಸಿವಿನ ಭೂತವು ಕೂಯುವ ಕೂವೋ ?                                                                        ಕಾರ್ಗಾಲದ  ವೈಭವವೇನು ?

ಹೊಸತಿದು ಕಾಲನ ಕೋಣನ -ಓವೋ !                                                                                 ಚೆಲ್ಲಿದರನಿತೂ

ಉಸುರಿನ ಸುಯ್ಯೋ ?-ಸೂಸೂಕರಿಸುತ ,                                                                              ತೀರದ  ನೀರಿನ

ಬರುವುದು ಬರಬರ ಭರದಲಿ  ಬರುವುದು –                                                                      ಜಡ ದೇಹದ  ಕರ್ಮುಗಿಲೇನು ?

ಬೊಬ್ಬೆಯ ಹಬ್ಬಿಸಿ ಒಂದೇ ಬಾರಿಗೆ                                                                                          ಕೆರೆಗಳನುಕ್ಕಿಸಿ

ಉಬ್ಬರ ಎಬ್ಬಿಸಿ  ಕಡಲಿನ ನೀರಿಗೆ                                                                                           ತೊರೆಗಳ  ಸೊಕ್ಕಿಸಿ

ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ                                                                        ಗುಡ್ಡವ  ಬೆಟ್ಟವ  ಕೊರೆಕೊರೆದು

ಅಬ್ಬರದಲಿ  ಭೋರ್ ಭೋರನೆ ಗುಮ್ಮಿಸಿ ,                                                                                 ಕಡಲಿನ  ತೆರೆಗಳ

ಬರುತದೆ  ಮೈತೋರದೆ ಬರುತದೆ ಅದೆ-                                                                                   ರಿಂಗಣಗುಣಿಯಿಸಿ

ನಡು ಮುರಿಯುತ ನಗನಾವೆಗೆ ,ಕೂವೆಗೆ                                                                       ಮೊರೆ ಮೊರೆವುದದೋ ಸರಿ ಸುರಿದು

ಉಡಿಸಿದ ಹಾಯಿಯ ಹರಿಯುತ ಬಿರಿಯುತ ,                                                                              ಕುದುರೆಮೊಗದ  ಕಡಿ

ಹಡಗನು ಕೀಲಿಸಿ, ತುಮರನು ತೇಲಿಸಿ ,                                                                                     ವಾಣದ ತೆರದಲಿ

ದಡದಲಿ  ಝಾಡಿಸಿ , ದೋಣಿಯನಾಡಿಸಿ ,                                                                      ಮಿಂಚುಗಳವು  ಥಳಥಳಿಸುವುವು.

ಇದೆ! ಇದೆ! ಬರುತಿದೆ ! ಇದೆ! ಇದೆ ! ಬರುತಿದೆ –                                                                          ಗೊರಸಿನ  ಘಟ್ಟನೆ

ಹಕ್ಕಿಯ ಕಣ್ಣಿಗೆ ಧೂಳಿನ ಕಾಡಿಗೆ                                                                                            ಯಂತಿರೆ ಥಟ್ಟನೆ

ಇಕ್ಕುತ, ಹೊಲದೆತ್ತಿಗೆ  ದನಕಾಡಿಗೆ                                                                            ಗುಡುಗುಗಳವು  ಗುಡುಗಾಡಿಪುವು.

ಫಕ್ಕನೆ  ಹಟ್ಟಿಗೆ ಅಟ್ಟಿಸಿ ,ಕಾಡಿಗೆ                                                                                                   ಆವೇಶದ  ವೇ

ಸಿಕ್ಕಿದ ಕಿಚ್ಚನು ಊದಲು ಹಾರುತ ,                                                                                           ಷದ ಬಿರುಸುಟ್ಟುರೆ

ಬರುತಿದೆ ! ಇದೆ ! ಇದೆ! ಇದೆ !ಇದೆ !  ಬರುತಿದೆ!                                                         ಊರೂರಲಿ  ಹಾರೋಡುವುದು

ಸಡಲಿಸಿ ಮಡದಿಯರುಡಿಯನು  ಮುಡಿಯನು ,                                                                            ಮರಗಳ ಕೀಳುತ

ಬಡ ಮುದುಕರ ಕೊಡೆಗರಿ  ಹರಿದಾಡಿಸಿ                                                                                       ಬಂಡೆಯ ಹೋಳುತ

ಹುಡುಗರ  ತಲೆತಲೆ ಟೊಪ್ಪಿಯ  ಆಟವ                                                                     ಜಗಜಟ್ಟಿಯ  ತೆರನಾಡುವುದು

ದಡಬಡನಾಡಿಸಿ , ಮನೆ ಮನೆ ತೋಟವ                                                                                     ಹಗಲಿರುಳೆನ್ನದೆ

ಅಡಿಮೇಲಾಗಿಸಿ , ತೆಂಗನು  ಲಾಗಿಸಿ ,                                                                               ಹೊಡೆಯುವ ಜಡಿಮಳೆ

ಅಡಕೆಯ ಬಾಗಿಸಿ, ಪನೆ ಇಬ್ಬಾಗಿಸಿ,                                                                         ಬಡಿ ಕೋಲ್ಮಿಂಚಿನ  ಲಾಗುಗಳು .

ಬುಡದೂಟಾಡಿಸಿ , ತಲೆ  ತಾಟಾಡಿಸಿ,                                                                                       ಮನೆಗಳ ಮನಗಳ

ಗುಡಿಸಲ  ಮಾಡನು  ಹುಲುಹುಲು ಮಾಡಿಸಿ ,                                                                            ಒಳಗೂ  ಹೊರಗೂ

ಬಂತೈ ! ಬಂತೈ! ಇದೆ! ಇದೆ! ಬಂತೈ !-                                                                      ಜಿನುಗುತಿರುವ  ಹನಿಸೋನೆಗಳು .

ಗಿಡ ಗಿಡದಿಂ  ಚೆಲುಗೊಂಚಲು  ಮಿಂಚಲು-                                                                                ಮುಗಿಲಿನ  ಹುಬ್ಬಿನ

ಮಿಡಿಯನು ಹಣ್ಣನು ,ಉದುರಿಸಿ ಕೆದರಿಸಿ ,                                                                                ಗಂಟಿಕ್ಕುತ  ಬಿರು

ಎಡದಲಿ  ಬಲದಲಿ  ಕೆಲದಲಿ  ನೆಲದಲಿ ,                                                                      ದನಿಯಲಿ  ಬೆದರಿಸುತಿಹನಲ್ಲ

ಪಡುವಣ  ಮೋಡವ ಬೆಟ್ಟಕೆ  ಗಟ್ಟಕೆ                                                                                          ನಲ್ಲನೆನುತೆ  ಆ

ಹೊಡೆದಟ್ಟುತ , ಕೋಲ್ ಮಿಂಚನು  ಮಿರುಗಿಸಿ,                                                                           ಗಸವೆಣ್ಕೂಗುತೆ

ಗುಡುಗನು ಗುಡುಗಿಸಿ,  ನೆಲವನು  ನಡುಗಿಸಿ ,                                                                ಸುರಿಸಿದ  ಕಣ್ಣೀರ್ವೊನಲೆಲ್ಲ.

ಸಿಡಿಲನು  ತಾಳೆಗೆ  ಬಾಳೆಗೆ ಎರಗಿಸಿ ,

ಜಡಿಮಳೆ  ಸುರಿವೋಲ್ ,ಬಿರುಮಳೆ  ಬರುವೋಲ್

ಕುಡಿ ನೀರನು ಒಣಗಿದ ನೆಲಕೆರೆವೋಲ್

ಬಂತೈ  ಬೀಸುತ ! ಬೀಸುತ  ಬಂತೈ !

ತೆಂಕಣ ಗಾಳಿಯು  ಕೊಂಕಣ  ಸೀಮೆಗೆ

ಬಂತೈ ! ಬಂತೈ ! ಬಂತೈ ! ಬಂತೈ !

ಮೊನ್ನೆ ಇಲ್ಲಿ ವ್ಯೂತ್ಸ್ ಬುರ್ಗಿನಲ್ಲಿ ಬೇಸಗೆಯ ನಡುವೆ ಇಡೀ ದಿನ ಮಳೆ. ಅದೇ ದಿನ ನಮ್ಮ ಊರಿನಲ್ಲಿ ಮಂಗಳೂರಿನಲ್ಲಿ ಮಳೆಗಾಲ ಆರಂಭದ ಲಕ್ಷಣಗಳು ಕಾಣಿಸಿದವು ಎಂದು ಓದಿ , ‘ಬರುತಿದೆ’ ಎಂದು ಹಿಗ್ಗಿದೆ.ಮತ್ತೆ ಇವತ್ತು ಇ-ಪತ್ರಿಕೆ ಓದಿದರೆ ನಿನ್ನೆ ಕರ್ನಾಟಕದ ಕರಾವಳಿಗೆ ಮುಂಗಾರು ರಂಗಪ್ರವೇಶ ಮಾಡಿದೆ ಎಂದು ಇದೆ.ನಾನು ಶಾಲೆಯಲ್ಲಿ ಓದಿದ ಪದ್ಯ ,ಪಂಜೆ ಮಂಗೇಶರಾಯರ ‘ತೆಂಕಣ ಗಾಳಿಯಾಟ’ ನೆನಪಾಯಿತು.-‘ಬಂತೈ ! ಬಂತೈ! ಬಂತೈ ! ಬಂತೈ!’ ಬಹಳ ವರ್ಷಗಳ ಬಳಿಕ ಈ ಪದ್ಯವನ್ನು ಕನ್ನಡ ಎಂ ಎ ತರಗತಿಗಳಲ್ಲಿ ಸಾಹಿತ್ಯ ವಿಮರ್ಶೆಯ ಪಾಠದಲ್ಲಿ ನಿದರ್ಶನಕ್ಕೆ ಬಳಸುತ್ತಿದ್ದೆ.ಎಜ್ರಾ ಪೌಂಡ್ ನ ಫೆನೊಪೊಯಿಯ  ,ಮೆಲೋಪೋಯಿಯ ,ಲೋಗೊಪೋಯಿಯ ಗಳ ವಿವರಣೆಯಲ್ಲಿ ಪದಗಳ ವಿನ್ಯಾಸ ಮತ್ತು ಅರ್ಥ ಸಂಬಂಧದ ಚರ್ಚೆಗೆ ಪಂಜೆಯವರ ಈ ಕವನ ನನ್ನ ಮೆಚ್ಚಿನ ಉದಾಹರಣೆಯಾಗಿತ್ತು. ಕಾರಣ, ಇದರಲ್ಲಿನ ವಿವರಗಳು ನನ್ನ ಬಾಲ್ಯದ ಅನುಭವದ ಗರ್ಭದಲ್ಲಿ ಸೇರಿಹೋಗಿದ್ದವು.

ಕಡೆಂಗೋಡ್ಲು ಶಂಕರ ಭಟ್ಟರ ‘ಕಾರ್ಗಾಲದ ವೈಭವ’ ಕವನವನ್ನು ನಾನು ಮೊದಲು ಓದಿದ್ದು  ಹೈಸ್ಕೂಲು ವಿದ್ಯಾರ್ಥಿ ಆಗಿದ್ದಾಗ, ನಮ್ಮ ಪಾಠದಲ್ಲಿ .ಪುತ್ತೂರಿನ ಬೋರ್ಡ್ ಹೈಸ್ಕೂಲಿನಲ್ಲಿ ೧೯೬೨ರಲ್ಲಿ ನಮ್ಮ ಕನ್ನಡ ಪಂಡಿತರು  ಬಿ.ಎಲ್.ಏನ್.ಭಟ್ಟರು  ‘ಕಾರ್ಗಾಲದ ವೈಭವ’ ವನ್ನು ಪಾಠ ಮಾಡುವಾಗ ಹೊರಗೆ ಜಡಿಮಳೆ ,ಗುಡುಗು ಸಿಡಿಲು.ನಮಗೆ ಶಬ್ದಗಳ ಅರ್ಥಕ್ಕಿಂತ ಸಿಡಿಲು ನಮ್ಮನ್ನು ಹೊಡೆಯುತ್ತದೆಯೋ  ಎಂಬ ಭಯ ! ‘ಕವನದ ಓದು ಅನುಭವಗಮ್ಯ ಮತ್ತು ಅರ್ಥಗಮ್ಯ ‘ ಎನ್ನುವ ವಿಮರ್ಶೆಯ ಮಾತುಗಳು ಬಹಳ ವರ್ಷಗಳ ಅರ್ಥ ಆದದ್ದು ಈ ಸನ್ನಿವೇಶದ ಮಾನಸಿಕ ಪಾತಳಿಯಿಂದಲೇ.

ದಕ್ಷಿಣ ಕನ್ನಡ ಜಿಲ್ಲೆಯ ಪುಣಚ ಎಂಬ  ಹಳ್ಳಿಯ ಸಣ್ಣ ಕೃಷಿ ಕುಟುಂಬದಲ್ಲಿ ನನ್ನ ಮೊದಲ ಸುಮಾರು ಇಪ್ಪತ್ತು ವರ್ಷಗಳನ್ನು ಕಳೆದ ನನಗೆ ‘ಮಳೆಗಾಲ’ ದ ಆರಂಭ ಆತಂಕ,ಭಯ ,ಸಂಭ್ರಮ ,ಉಲ್ಲಾಸ ,ಕುತೂಹಲ ಎಲ್ಲವನ್ನೂ ತರುತ್ತಿದ್ದ ದಿನಗಳು ನೆನಪಾಗುತ್ತವೆ.ಜೋರಾಗಿ ಬೀಸುವ ಗಾಳಿಯ ಅಬ್ಬರ,ಮಿಂಚು ಗುಡುಗುಗಳ ಆರ್ಭಟ -ಆತಂಕ ಭಯದ ವಾತಾವರಣವನ್ನು ನಿರ್ಮಾಣ ಮಾಡುತ್ತಿತ್ತು.ಜೊತೆಗೆಯೇ ಬಿರುಗಾಳಿಯ ರಭಸಕ್ಕೆ  ತಟಪಟನೆ ಬೀಳುತ್ತಿದ್ದ ಮಾವಿನ ಹಣ್ಣು ,ನೇರಳೆ ಹಣ್ಣು ,ಗೇರು ಹಣ್ಣುಗಳನ್ನು ಹೆಕ್ಕಲು ಓಡುವ ಆತುರ ಮತ್ತು ಸಂಭ್ರಮ – ಸಾಹಸದ ರಣಾಂಗಣವನ್ನು ನೆನಪಿಸುತ್ತಿತ್ತು.ಹಾಗೆಯೇ ಮಳೆ ಹನಿಕಡಿಯದೆ ಸುರಿಯುತ್ತಿರುವಾಗ ಅದರಲ್ಲಿ ನೆನೆದುಕೊಂಡು ನೀರಾಟವಾಡುವ  ಹುಡುಗಾಟಿಕೆ -ಸ್ವಾತಂತ್ರ್ಯದ ಸುಖವನ್ನು ಕೊಡುತ್ತಿತ್ತು.ಕಣಿಗಳಲ್ಲಿ ಹರಿದು ಹೋಗುತ್ತಿರುವ ಕಲೆಂಕು ನೀರಿನಲ್ಲಿ ಕಾಗದದ ದೋಣಿಗಳನ್ನು ,ಮನೆಯ ಸಣ್ಣ ಪುಟ್ಟ ವಸ್ತುಗಳನ್ನು ತೇಲಲು ಬಿಟ್ಟು ,ತೇಲಿಸೋ  ಇಲ್ಲ ಮುಳುಗಿಸೋ ಎಂದು ಕಾದುನೋಡುವ ಮೋಜು -ಸ್ವಚಂದ ಮನೋರಂಜನೆಯ ಲೋಕವಾಗಿತ್ತು.ಇನ್ನೂ ಇಂತಹ ಅನೇಕ ಸುಖ ಸಂಕಷ್ಟಗಳು.

ಆದರೆ ಹಿರಿಯರಿಗೆ ಕೃಷಿಕರಿಗೆ ಅದೊಂದು ಯುದ್ಧಕಾಲದ ಸಿದ್ಧತೆ.ಭತ್ತ – ಅಡಕೆ  ಕೃಷಿಯವರಿಗೆ ಮಳೆಗಾಲ ಆರಂಭಕ್ಕೆ ಮೊದಲು ಮುಗಿಸಲೇ ಬೇಕಾದ ನೂರಾರು ಕರ್ತವ್ಯಗಳು.ಗದ್ದೆಯನ್ನು ಉಳಲು ಮಾಡಿಕೊಳ್ಳಬೇಕಾದ ಪೂರ್ವ ತಯಾರಿಗಳು,ಸೊಪ್ಪು ಕಡಿದು ರಾಶಿ ಹಾಕಿ ಇಡುವುದು,ಗೊಬ್ಬರ ಸಂಗ್ರಹಿಸುವುದು,ಸುಡುಮಣ್ಣು ಸುಟ್ಟು ರಾಶಿ ಹಾಕುವುದು.ಬೀಜ ನೆನೆಹಾಕಿ ಕಟ್ಟಿ ಇಡುವುದು,ಅಡಕೆಗೆ ಮೈಲುತುತ್ತು ಸಿಂಪಡಿಸುವುದು,ಗಿಡಗಳ ಬುಡ ಬಿಡಿಸುವುದು,ಬುಡಕ್ಕೆ ಸೊಪ್ಪು- ಗೊಬ್ಬರ ಹಾಕುವುದು ಇತ್ಯಾದಿ ಇತ್ಯಾದಿ.ಮುಳಿಹುಲ್ಲಿನ ಮನೆಯವರು ಮನೆಗಳ ಮಾಡಿಗೆ ಮುಳಿಹುಲ್ಲು  ಹಾಕಿ ನೀರು ಸೋರದಂತೆ ಮಾಡುವುದು (ತುಳುವಿನಲ್ಲಿ ‘ಬೇಪುನೆ’),ಮನೆಯ ಸುತ್ತುಮುತ್ತು ಕಣಿ ಸರಿಪಡಿಸಿ ,ಮಳೆಯ ನೀರು ಸರಾಗವಾಗಿ ಹರಿದುಹೋಗಲು ಅವಕಾಶ ಕಲ್ಪಿಸುವುದು. ಹೆಂಗುಸರಿಗೆ ನಾಲ್ಕು ತಿಂಗಳ ಮಳೆಗಾಲದ ಅವಧಿಗೆ ಆಹಾರ ದಾಸ್ತಾನಿನ ದೊಡ್ಡ ಜವಾಬ್ದಾರಿ.ಹಪ್ಪಳ,ಸಂಡಿಗೆ ,ಬಾಳಕ,ಮಾಂಬಳ,ಉಪ್ಪಿನಕಾಯಿ ,ಒಣಮೀನು- ಹೀಗೆ ಈಗಿನ ಪ್ರಿಸರ್ವೇಟಿವ್ ಗಿಂತ ಶುಚಿಯಾಗಿ ಅಚ್ಚುಕಟ್ಟಾಗಿ ಆಹಾರ ಪದಾರ್ಥಗಳ ಸಿದ್ಧತೆ ಮತ್ತು ದಾಸ್ತಾನು.ದೊಡ್ಡವರಿಗೆ ಮಕ್ಕಳಿಗೆ ಮಳೆಯಿಂದ ರಕ್ಷಣೆಗಾಗಿ ಕೆಡೆ೦ಜೋಲು ,ಪನೋಲಿ (ಗೊರಬು),ಕೊಡೆಗಳ ಸಿದ್ಧತೆ ,ಹೆಚ್ಚಾಗಿ ರಿಪೇರಿ. ಮೊದಲ ತರಗತಿಯಲ್ಲಿ ಒಂದು ಕೊಡೆ ತೆಗೆದುಕೊಂಡರೆ ಅದು ಐದರಿಂದ ಹತ್ತು ವರ್ಷದ ವರೆಗೆ ರಿಪೇರಿಮಾಡಿಸಿಕೊಳ್ಳುತ್ತ  ಬಳಕೆಯಾಗುತ್ತಿತ್ತು.

ಕರ್ನಾಟಕದ ಕರಾವಳಿಗೆ ಮುಂಗಾರು ಯಾವಾಗ ಬರುತ್ತದೆ ಎನ್ನುವುದನ್ನು ಹವಾಮಾನ ತಜ್ಞರಿಗಿಂತ ಕರಾರುವಾಕ್ಕಾಗಿ ನಮ್ಮ ಹಳ್ಳಿಗಳ ಕೃಷಿಕರು ಹೇಳುತ್ತಿದ್ದ ಕಾಲವೊಂದಿತ್ತು.ಕೇರಳಕ್ಕೆ ಯಾವಾಗ ಮುಂಗಾರು ಬಡಿಯುತ್ತದೆ ,ಮಂಗಳೂರಿಗೆ ಯಾವಾಗ ಅದರ ರಂಗಪ್ರವೇಶ -ಎಲ್ಲವೂ ಸ್ಪಷ್ಟವಾಗಿದ್ದ ಕಾಲ ಈಗ ಬದಲಾಗಿದೆ.ಜೂನ್ ನಾಲ್ಕರಿಂದ ಆರರ ಒಳಗೆ ಮಂಗಳೂರಲ್ಲಿ ಜಡಿಮಳೆ ಸುರಿಯುತ್ತಿದ್ದ ದಿನಗಳು ಹವಾಮಾನದ ಇತಿಹಾಸಕ್ಕೆ ಸೇರಿಹೋಗಿವೆ.ಪರಿಸರದ  ಮೇಲೆ ನಾವು ಮಾಡಿದ ಅತಿಕ್ರಮಣ ಅಕಾಲಿಕ ಅತಿವೃಷ್ಟಿ ಮತ್ತು ಅನಾವೃಷ್ಟಿಗಳ  ಮಾಯಾ ರಾಕ್ಷಸರನ್ನು ಸೃಷ್ಟಿಮಾಡಿವೆ. ಹಾಗಾಗಿ ಹವಾಮಾನ ಇಲಾಖೆಯವರ ಮುನ್ಸೂಚನೆಗೂ ನಮ್ಮ ಜ್ಯೋತಿಷಿಗಳು ಹೇಳುವ ಭವಿಷ್ಯಕ್ಕೂ ಹೆಚ್ಚು ವ್ಯತ್ಯಾಸ ಉಳಿದಿಲ್ಲ.

ಮುಂಗಾರು ಮಳೆಯು ಆಧುನಿಕ ತಂತ್ರಜ್ಞಾನವನ್ನು ಅಣಕಿಸುತ್ತದೆ.ಉಪಗ್ರಹ ಉಡಾವಣೆಗಳ ಹೆಮ್ಮೆ ಕೊಚ್ಚಿಕೊಳ್ಳುವ ನಾವು ,ನಮ್ಮ ಮನೆಮಾರುಗಳನ್ನು ಹೊಲ ನೆಲಗಳನ್ನು ಮುಳುಗಿಸುವ ಕೊಚ್ಚಿಕೊಂಡು ಹೋಗುವ ನೆರೆ ಪ್ರವಾಹಗಳ ಮುಂದೆ ನಿಸ್ಸಹಾಯಕರಾಗುತ್ತೇವೆ..ಸಾಂಕ್ರಾಮಿಕ ಕಾಯಿಲೆಗಳು ಬಂದಾಗ ಆರ್ತನಾದ ಮಾಡುತ್ತೇವೆ.ನಮ್ಮ ನಗರಗಳು ಮಹಾನಗರಗಳಂತೂ ಚರಂಡಿಗಳನ್ನು ತಿಂದುಹಾಕಿರುವ ಕಾರಣ ,ಜನರು ಕೆಸರುನೀರು ಕುಡಿಯುವ ,ಕೃತಕ ನೆರೆಯಲ್ಲಿ ಮುಳುಗುವ ತೇಲುವ ಬವಣೆಗಳು ದಿನನಿತ್ಯದ ಸಾಮಾನ್ಯ ಸುದ್ದಿಗಳಾಗುತ್ತವೆ.

ಕರಾವಳಿಯ ಮುಂಗಾರುವನ್ನು ಬೆನ್ನಟ್ಟಿಕೊಂಡು ಕೊಂಡು ಹೋಗಿ ,ಜನರ ಆತಂಕ,ಕಾಯುವಿಕೆ,ಸಿದ್ಧತೆಗಳು,ಪ್ರತಿಕ್ರಿಯೆಗಳು ,ಬಗೆ ಬಗೆಯ ಬದುಕಿನ ಕ್ರಮಗಳು -ಇವನ್ನೆಲ್ಲ ಅನುಭವಿಸಿ ದಾಖಲಿಸಿ ಬರೆದ ಅದ್ಭುತ ಸಂಕಥನದ ಪುಸ್ತಕ  ಅಲೆಕ್ಸಾಂಡರ್  ಫ್ರೇಟರ್ ನ ‘ ಚೇಸಿಂಗ್  ದ  ಮಾನ್ಸೂನ್ ‘. ಕೇರಳದ ತಿರುವನಂತಪುರದಿಂದ ಹೊರಟು ಕೊಚ್ಚಿ, ಮಲಬಾರ್ ,ಕರಾವಳಿ ಕರ್ನಾಟಕ,ಗೋವ ದ ವರೆಗೆ ,ಮತ್ತೆ ಅಲ್ಲಿಂದ ಉತ್ತರ ಡೆಲ್ಲಿಗೆ -ಹೀಗೆ ಎರಡು  ತಿಂಗಳ ಕಾಲ ಮುಂಗಾರುವಿನ ಹಿಂದೆ ಮತ್ತು ಮುಂದೆ ಆತ ಪಡೆದ ಅನುಭವಗಳು ಒಂದು ಚಾರಿತ್ರಿಕ ಸಾಂಸ್ಕೃತಿಕ ದಾಖಲೆಯಾಗಿ ಇಂದು ಬಹಳ ಅಮೂಲ್ಯವಾಗಿವೆ.ಆಧುನಿಕತೆ ಮತ್ತು ತಂತ್ರಜ್ಞಾನದ ಇಂದಿನ ಯುಗದೊಂದಿಗೆ ಅಂದಿನ ಸನ್ನಿವೇಶಗಳನ್ನು ಹೋಲಿಸಬಹುದು.

ಜರ್ಮನ್ ಕವಿ ರೈನರ್  ಮರಿಯ ರಿಲ್ಕೆ ಯ ಜರ್ಮನ್ ಕವನವೊಂದನ್ನು ‘ ಬೇಸಿಗೆ ಮಳೆಯ ಮೊದಲು ‘ ಎಂಬ ಹೆಸರಿನಲ್ಲಿ ಕನ್ನಡಕ್ಕೆ ರೂಪಾಂತರಿಸಿ ಕೊಡುತ್ತಿದ್ದೇನೆ:

ಪಾರ್ಕಿನ ಹಸುರಿಂದ ಒಂದೇ ಊರಿಗೆ

ಸೆಳೆಯಲಾಗಿದೆ  ಏನೋ

ಹೇಳಲಾಗದು ಏನೂ

ಕಿಟಿಕಿಯ ಬಳಿಬಳಿಗೆ ಅದೋ  ಬರುತಿದೆ

ಸದ್ದಿಲ್ಲ  ಇಲ್ಲಿ

ತೋಪಿನೊಳಗಲ್ಲಿ

ಕಿರ್ರೀ  ಕಿರ್ರೀ ಹಠ ಹಿಡಿದ ಹಕ್ಕಿಯ ಕೂಗು

ಜಿರ್ರೀ  ಜಿರ್ರೀ ಅಬ್ಬಾ ಜೋರು ಜೋರು

ಸಂತನ ನೆನಪು

ಧ್ಯಾನದ ಒನಪು

ಎಲ್ಲವೂ ಒಂದೇ ಧ್ವನಿ , ಗಾಢ ಗೂಢ

ಸುರಿವ ಈ ಮಳೆಯಲ್ಲಿ

ಕೇಳಿಸುತಿದೆ ಆ  ರಾಗದಲ್ಲಿ

ದೊಡ್ಡ ಗೋಡೆಗಳ ಭಿತ್ತಿ ಚಿತ್ರಗಳು

ಕೇಳಲು ಬಿಡುತ್ತಿಲ್ಲ

ನಮ್ಮ ಮಾತನ್ನು

ಹಿಂಜರಿಯುತಿವೆ  ಯಾಕೋ ಏನೋ

ಮುಸುಕು ಪರದೆಯ ಮೇಲೆ

ಸಂಜೆಬೆಳಕಿನ ಮಬ್ಬುಮಾಲೆ

ಅಬ್ಬಾ ,ಮಗುವಿನಂತೆ ಎಲ್ಲ

ಉಹುಹುಹು  ನಡುಗದವರೇ ಇಲ್ಲ.

ಕರಾವಳಿಯಲ್ಲಿ ಬೇಸಗೆ ಮಳೆ ಬಂದಿಲ್ಲ .ಮುಂಗಾರುಮಳೆ ಬರುತದೆ ,ಬರುತಿದೆ ,ಬಂತೈ .ಈಗಿನ ಮಕ್ಕಳು ,’ಮುಂಗಾರು ಮಳೆ ‘ಎಂದೊಡನೆಯೇ ,’ಅನಿಸುತಿದೆ ಯಾಕೋ ‘ ಎಂದು ಗುನುಗುನುಸಿಯಾರು. ಅರುವತ್ತು ಮುಂಗಾರು ಮಳೆ ಕಂಡವರು,ಅದರಲ್ಲಿ  ನೆನೆದವರು ‘ಹನಿಸುತಿದೆ ಸಾಕೋ ‘ಎಂದು ಮಣಮಣಿಸಿಯಾರು !

‘ಅಬ್ಬಾ ,ಮಗುವಿನಂತೆ ಎಲ್ಲ

ಉಹುಹುಹು  ನಡುಗದವರೇ ಇಲ್ಲ ‘

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

One Response to “ತೆಂಕಣ ಗಾಳಿಯಾಟ ,ಕಾರ್ಗಾಲದ ವೈಭವ ,ಮುಂಗಾರಿನ ಹಿಂದೆ ಮತ್ತು ಮುಂದೆ”

RSS Feed for ಬಿ ಎ ವಿವೇಕ ರೈ Comments RSS Feed

ತಂಬಾ ನೆನಪುಗಳು.. ಪಂಜೆಯವರ ಹಾಡು ನಮಗೆ ಶಾಲೆಯಲ್ಲಿ ಇತ್ತು. ಆ ಹಾಡಲ್ಲಿ ಒಂದೊಂದು ಶಬ್ಧ ಕೂಡ ಮುಂಗಾರಿನ ಶುರುವಿನ ಮಳೆಯ ನೆನಪುಗಳು …


Where's The Comment Form?

Liked it here?
Why not try sites on the blogroll...

%d bloggers like this: