ಮೊಗ್ಲಿಂಗ್ ೨೦೦- ನೋಡಿ ನಿರ್ಮಲ ಜಲ ಸಮೀಪದಿ ಮಾಡಿಕೊಂಡರು ಪರ್ಣಶಾಲೆಯ

Posted on ಮೇ 31, 2011. Filed under: Uncategorized | ಟ್ಯಾಗ್ ಗಳು:, , , , |


ಹರ್ಮನ್ ಮೊಗ್ಲಿಂಗ್ (೨೯ ಮೇ ೧೮೧೧ -೧೦ ಮೇ ೧೮೮೧ ) ಜನಿಸಿ ಮೊನ್ನೆ ಭಾನುವಾರ ,ಮೇ ೨೯ಕ್ಕೆ ಇನ್ನೂರು ವರ್ಷಗಳು ಸಂದುವು.

ಕನ್ನಡದ ಮೊತ್ತಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ ‘(೧ ಜುಲೈ ೧೮೪೩ ) ಆರಂಭಿಸಿದ ಮೊಗ್ಲಿಂಗ್ ,ಕನ್ನಡದ ಅನೇಕ ಪ್ರಥಮಗಳನ್ನು ಸಾಧಿಸಿದ ಆದ್ಯರು.

ಕರ್ನಾಟಕಕ್ಕೆ ಬಂದು ( ೧೮೩೬)  ಕನ್ನಡ ಕಲಿತು, ಪ್ರಾಚೀನ ಕನ್ನಡ ಕಾವ್ಯಗಳ ಹಸ್ತಪ್ರತಿಗಳನ್ನು ಸಂಪಾದಿಸಿ ,ಮೊತ್ತಮೊದಲ ಬಾರಿ ಅವುಗಳಿಗೆ ಪ್ರಕಟಣೆಯ ಭಾಗ್ಯವನ್ನು ತೋರಿಸಿದವರು.ಈ ಉದ್ದೇಶಕ್ಕಾಗಿಯೇ ‘ಬಿಬ್ಲಿಯೋಥಿಕಾ ಕರ್ನಾಟಿಕಾ ‘ ಎಂಬ ಪ್ರಕಟಣೆಯ ಮಾಲೆಯನ್ನು ಆರಂಭಿಸಿದವರು.ಈ ಸರಣಿಯಲ್ಲಿ ,ಲಕ್ಷ್ಮೀಶನ ‘ಜೈಮಿನಿ ಭಾರತ'((೧೮೪೮),’ದಾಸರ ಪದಗಳು’ (೧೮೫೦ ),ಕನಕದಾಸರ ‘ ( ಹರಿ )ಭಕ್ತಿಸಾರ’ (೧೮೫೦) ,ಭೀಮಕವಿಯ  ‘ಬಸವಪುರಾಣ’  ( ೧೮೫೦ ),ಕುಮಾರವ್ಯಾಸನ ‘ಕನ್ನಡ ಭಾರತ ‘(೧೮೫೧),ವಿರೂಪಾಕ್ಷ ಪಂಡಿತನ  ‘ ಚನ್ನಬಸವ  ಪುರಾಣ ‘(೧೮೫೧),’ಕನ್ನಡ ಗಾದೆಗಳು ‘ (೧೮೫೨ ) ಗ್ರಂಥಗಳನ್ನು ಹೊರತಂದರು.

ಪುರಂದರ ದಾಸರ ಮತ್ತು ಕನಕದಾಸರ ೨೪ ಹಾಡುಗಳನ್ನು ಜರ್ಮನ್ ಭಾಷೆಗೆ ಅನುವಾದ ಮಾಡಿದರು .ಜೈಮಿನಿ ಭಾರತದ ೬೭ ಪದ್ಯಗಳನ್ನು ಜರ್ಮನ್ ಭಾಷೆಗೆ ತರ್ಜುಮೆ ಮಾಡಿದ ಮೊಗ್ಲಿಂಗ್ ಅವರು ಕನ್ನಡ ಸಾಹಿತ್ಯವನ್ನು ಜರ್ಮನ್ ಭಾಷೆಗೆ ಅನುವಾದ ಮಾಡಿದ ಆದ್ಯರು.

ಜರ್ಮನಿಯ ತ್ಯೂಬಿಂಗನ್ ವಿಶ್ವವಿದ್ಯಾಲಯವು ಕನ್ನಡ ಕಾವ್ಯಗಳ ಸಂಪಾದನೆಗಾಗಿ ,’ಬಿಬ್ಲಿಯೋಥಿಕಾ ಕರ್ನಾಟಿಕಾ ‘ಕ್ಕಾಗಿ ಮೊಗ್ಲಿಂಗ್ ಅವರಿಗೆ ೧೯ ಜುಲೈ ೧೮೫೮ ರಂದು ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟು ಗೌರವಿಸಿತು.ಕನ್ನಡ ಭಾಷೆ -ಸಾಹಿತ್ಯದ ಅಧ್ಯಯನಕ್ಕಾಗಿ ಕೊಡಮಾಡಿದ ಮೊದಲನೆಯ ಡಾಕ್ಟರೇಟ್, ಮೊಗ್ಲಿಂಗ್  ಅವರದ್ದು.

ತನ್ನ ಕಿರಿಯ ಸಮಕಾಲೀನರಾದ ಫೆರ್ಡಿನಾಂಡ್ ಕಿಟ್ಟೆಲ್ ಅವರಿಗೆ ಕನ್ನಡ -ಕನ್ನಡ -ಇಂಗ್ಲಿಶ್ ನಿಘಂಟು ರಚಿಸಲು ಪ್ರೆಅರಣೆ ಕೊಟ್ಟು ,ಅವಕಾಶ ಕಲ್ಪಿಸಿದವರು ಮೊಗ್ಲಿಂಗ್.

ಹರ್ಮನ್ ಮೊಗ್ಲಿಂಗ್ ಜನಿಸಿದ್ದು ಜರ್ಮನಿಯ ಬಾದೆನ್-ವ್ಯೂರ್ತೆಮ್ ಬೆರ್ಗ್ ರಾಜ್ಯದ ಬ್ರಾಕೆನ್ ಹೆಯಿಮ್ ನ  ಗ್ಯೂಗ್ಲಿಂಗೆನ್ ನಲ್ಲಿ  ,೨೯ ಮೇ ೧೮೧೧ರನ್ದು.ಉನ್ನತ ಶಿಕ್ಷಣಕ್ಕೆ ಸೇರಿದ್ದು ಸಮೀಪದ ತ್ಯೂಬಿಂಗನ್ ವಿಶ್ವವಿದ್ಯಾಲಯವನ್ನು.ಪ್ರೊಟೆಸ್ಟೆಂಟ್ ಥಿಯಾಲಜಿ ಮುಖ್ಯ ವಿಷಯ ಆಗಿದ್ದರೂ ,ಮೊಗ್ಲಿಂಗ್ ಗೆ ಆಸಕ್ತಿ ಇದ್ದದ್ದು ಸಾಹಿತ್ಯ ಮತ್ತು ಸೌಂದರ್ಯ ಶಾಸ್ತ್ರದಲ್ಲಿ.ತಂದೆಯ ಪ್ರೇರಣೆಯಿಂದ ಮೊಗ್ಲಿಂಗ್ ,ಬಾಸೆಲ್ ಮಿಶನ್ ಹೌಸ್ ಸೇರಿದ್ದು -೯ ಜೂನ್ ೧೮೩೫ರಲ್ಲಿ.ಮಿಶನರಿಯಾಗಿ  ಮಂಗಳೂರು ತಲಪಿದ್ದು ೬ ದಶಂಬರ ೧೮೩೬  ರಂದು.ಮಂಗಳೂರು ಬಲ್ಮ ಟದಲ್ಲಿ ನೆಲೆಯೂರಿದ್ದು.ಧಾರವಾಡ (೧೮೩೭) ,ಕೊಡಗು -ಮಡಿಕೇರಿ ವಾಸ -ಪ್ರವಾಸ (೧೮೪೪,೧೮೫೪),’ಬಿಬ್ಲಿಯೋಥಿಕಾ ಕರ್ನಾಟಿಕಾ’ ದ ಕೆಲಸ (೧೮೪೮-೧೮೫೩).ಈ ನಡುವೆ ಯುರೋಪಿಗೆ ಪ್ರಯಾಣಗಳು -೧೮೪೬,೧೮೫೮, ಅಂತಿಮವಾಗಿ ಕರ್ನಾಟಕದಿಂದ ಮತ್ತೆ ಜರ್ಮನಿಗೆ ಹೊರಟದ್ದು -ಮಂಗಳೂರಿನಿಂದ ೭ ದಶಂಬರ ೧೮೬೦ರನ್ದು.

ತನ್ನ  ಊರು  ಎಸ್ಲಿನ್ಗನ್ ನಲ್ಲಿ ಕೊನೆಯ  ದಿನಗಳನ್ನು ಕಳೆದ  ಮೊಗ್ಲಿಂಗ್ ನಿಧನ ಆದದ್ದು ನ್ಯುಮೋನಿಯಾದಿಂದ ೧೮೮೧ರ ಮೇ ಹತ್ತರಂದು.ಅವರ ಸಂಸ್ಕಾರ ನಡೆದದ್ದು ಎಸ್ಲಿಂಗನಿನ  ಏದರ್ ಶಾಲ್ದೆನ್  ಹೊಫ್  ಸಮಾಧಿ ಸ್ಥಳದಲ್ಲಿ ೧೮೮೧ರ ಮೇ ಹದಿಮೂರರಂದು.

ಆಲ್ಬೇಶ್ತ್  ಪ್ರೆನ್ಜ್ (ಜನನ ೧೯೩೭ ) ಜರ್ಮನಿಯ ಸ್ತುತ್ ಗಾರ್ತ್ ನಲ್ಲಿ ವಾಸವಾಗಿದ್ದು ಹೆರ್ಮನ್ ಗುಂದರ್ತ್ ಹೆಸರಿನಲ್ಲಿ ಒಂದು ಪ್ರತಿಷ್ಠಾನ ಸ್ಥಾಪಿಸಿಕೊಂಡು ,ಮಲೆಯಾಳಂ ಭಾಷೆ-ಸಾಹಿತ್ಯದಲ್ಲಿ ಕೆಲಸ ಮಾಡಿದ ಬಾಸೆಲ್ ಮಿಷನರಿ ಗುಂದರ್ತ್ ಅವರ  ಸಮಗ್ರ ಸಾಹಿತ್ಯದ ಸಂಪಾದನೆ ಮತ್ತು ಪ್ರಕಟಣೆ  ಮಾಡಿದ್ದಾರೆ.ಗುಂದರ್ತ್ ಅವರ ಸಮಕಾಲೀನ ಮತ್ತು ಸಹವರ್ತಿ ಆಗಿದ್ದ ಮೊಗ್ಲಿಂಗ್ ಅವರ ಜೀವನಚರಿತ್ರೆಯನ್ನು ಜರ್ಮನ್ ಭಾಷೆಯಲ್ಲಿ ಇರುವ ಅಪೂರ್ವ ದಾಖಲೆಗಳು ಮತ್ತು ಪತ್ರಗಳ ನೆರವಿನಿಂದ ರಚಿಸಿದ್ದಾರೆ .ಮೊಗ್ಲಿಂಗ್ ಬಗ್ಗೆ ಗುಂದರ್ತ್ ಬರೆದ ವಿವರಗಳ ಜೀವನಚರಿತ್ರೆಯನ್ನು ಜರ್ಮನ್ ಭಾಷೆಯಲ್ಲಿ ಪ್ರಕಟಿಸಿದ್ದಾರೆ .ಅದನ್ನು ಇಂಗ್ಲಿಷಿಗೂ ಅನುವಾದ ಮಾಡಿಸಿದ್ದಾರೆ.ಈಗ ಮೊಗ್ಲಿಂಗ್ ಅವರ ಇನ್ನೂರನೆಯ ಜನ್ಮ ದಿನಾಚರಣೆಯನ್ನು ಸ್ತುರ್ತ್ ಗಾರ್ತ್ , ಎಸ್ಲಿನ್ಗನ್  ,ತ್ಯೂಬಿಂಗನ್ ಗಳಲ್ಲಿ ಮೊನ್ನೆ ಭಾನುವಾರ ಮೇ ೨೯ ರಿಂದ ಆರು ದಿನಗಳ ಕಾಲ ,ಪುಸ್ತಕ ಪ್ರಕಟಣೆ ,ವಿಚಾರ ಸಂಕಿರಣ ಮತ್ತು ಸಂದರ್ಶನಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿರುವ ಪ್ರೇರಕ ಮತ್ತು ಚಾಲಕ ಶಕ್ತಿ  ಎಪ್ಪತ್ತ ನಾಲ್ಕು ವಯಸ್ಸಿನ ,ಕಳೆದ ವರ್ಷ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿರುವ ಆಲ್ಬೇಶ್ತ್ ಫ್ರೆನ್ಜ್ ಮತ್ತು ಅವರ ಕಾಯಕ ಜೀವಿ ಪತ್ನಿ ಗೆತ್ರುದ್ ಫ್ರೆನ್ಜ್.

ಮೊನ್ನೆ ಭಾನುವಾರ ಮೇ ೨೯ ರಂದು ನಾನು ಪ್ರೊ.ಬ್ರೂಕ್ನರ್ ಮತ್ತು ಕೋಕಿಲ ಜೊತೆಗೆ ಸ್ತುತ್ ಗಾರ್ತ್ ಗೆ ಹೋದೆ.ನಾವು ಲಿನ್ದೆನ್ ಮ್ಯೂಸಿಯಂ ಸಭಾಂಗಣ ತಲಪಿದಾಗ ಕತ್ರಿನ್ ಬಿಂದೆರ್ ಅರದಾಳ ಹಚ್ಚಿ  ,ಪಗಡಿ ಕಟ್ತುತಿದ್ದಳು.ಅವಳ ಗಂಡ ಪ್ರೊ.ಜೆನ್ಸ್ ಬಿಂದೆರ್ ಅವಳಿಗೆ ಭುಜಕೀರ್ತಿ ಕಟ್ಟುತ್ತಿದ್ದ.ಅವಳ ಮಕ್ಕಳು ಉಷಾ ಮತ್ತು ಎಮ್ಮಿ ಯಶೋಧರ ,ಅಮ್ಮನನ್ನು ಬೆರಗು ಕಣ್ಣುಗಳಿಂದ ನೋಡುತ್ತಿದ್ದರು.ಜರ್ಮನ್ ಹುಡುಗಿ (ಎರಡು ಮಕ್ಕಳ ತಾಯಿ ಆದರೂ ,ವಿದ್ಯಾರ್ಥಿ ದೆಸೆಯ ಪರಿಚಯದ ಸಲುಗೆಯಿಂದ ಏಕವಚನ ಬಳಸುತ್ತಿದ್ದೇನೆ.)ಕತ್ರಿನ್ ,ತ್ಯೂಬಿನ್ಗನ್ ವಿಶ್ವವಿದ್ಯಾಲಯದಲ್ಲಿ ಇಂಡಾಲಜಿ ಎಂ ಎ ಮಾಡುವಾಗಲೇ ಯಕ್ಷಗಾನದ ಬಗ್ಗೆ ಮಾಸ್ತರ್ ಥೀಸಿಸ್ ಬರೆದವಳು.ಬಳಿಕ ಮಂಗಳೂರು-ಉದುಪಿಗಳಿಗೆ ಬಂದು ಯಕ್ಷಗಾನ ಕಲಾವಿದರನ್ನು ವಿದ್ವಾಂಸರನ್ನು ಸಂದರ್ಶಿಸಿ ಯಕ್ಷಗಾನದ ಸಮಗ್ರ ಅನುಭವ ಪಡೆದವಳು.ಉಡುಪಿಯಲ್ಲಿ ಸಾಕಷ್ಟು ಕಾಲ ನೆಲೆ ನಿಂತು ,ಯಕ್ಷಗಾನ ಕೇಂದ್ರದಲ್ಲಿ ಪರಂಪರಾಗತ ಯಕ್ಷಗಾನದ ಕುಣಿತ ,ಅಭಿನಯ ಮತ್ತು ರಂಗಕಲೆಯನ್ನು ಕರಗತ ಮಾಡಿಕೊಂಡವಳು.ಗುರು ಸಂಜೀವ ಸುವರ್ಣರ ಗರಡಿಯಲ್ಲಿ ಗೆಜ್ಜೆ ಕಟ್ಟಿ ಬಣ್ಣ ಹಚ್ಚಿ  ಧಿಂಗಣ ಕುಣಿದವಳು.ಕನ್ನಡ ಕಲಿತು ಪ್ರಸಂಗಗಳನ್ನು ಓದಿ ಅರ್ಥಮಾಡಿಕೊಂಡು,ಜರ್ಮನ್ ಮತ್ತು ಇಂಗ್ಲಿಶ್ ಭಾಷೆಗೆ ಅನುವಾದ ಮಾಡಿದವಳು.ಮತ್ತೆ ಯಕ್ಷಗಾನದ ಬಗ್ಗೆ ಪ್ರೊ.ಬ್ರೂಕ್ನರ್ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ  ಪಿ ಎಚ್ ಡಿ ಪಡೆದವಳು.ಅವಕಾಶ ದೊರೆತಾಗಲೆಲ್ಲ ಜರ್ಮನಿಯಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕತೆ ಮತ್ತು ಪ್ರದರ್ಶನ ಕೊಡುತ್ತಾ ಬಂದಿದ್ದಾಳೆ.

ಮೊನ್ನೆ ಭಾನುವಾರ ,ಕತ್ರಿನ್ ಅಭಿನಯಿಸಿದ ಸನ್ನಿವೇಶಗಳು-ಗಣಪತಿ ಸ್ತುತಿ ,ಬಾಲಗೋಪಾಲರ  ಕುಣಿತ ,ಕೃಷ್ಣನ ಒಡ್ಡೋಲಗ,ತೆರೆ ಕುಣಿತದ ಮೂಲಕ ರಾಜ ವೇಷದ ಒಡ್ಡೋಲಗ ಮತ್ತು ಕೊನೆಯಲ್ಲಿ ‘ಪಂಚವಟಿ ‘ ಪ್ರಸಂಗ’ ದ ‘ನೋಡಿ ನಿರ್ಮಲ ಜಲ ಸಮೀಪದಿ….. ‘ಹಾಡಿಗೆ ಕುಣಿತ ಮತ್ತು ಅಭಿನಯ.ಪ್ರದರ್ಶನ ಅಚ್ಚುಕಟ್ಟು ಆಗಿತ್ತು.ಎಲ್ಲ ಸನ್ನಿವೇಶಗಳಲ್ಲೂ ಭಾವಾಭಿನಯ ಸಮರ್ಪಕ ಹಾಗೂ ಆಕರ್ಷಕವಾಗಿತ್ತು.ಜರ್ಮನರ ಜೊತೆಗೆ ಕರ್ನಾಟಕದಿಂದ ಬಂದಿದ್ದ ಬಿಜಾಪುರದ ಮಹಿಳಾ ವಿವಿಯ ಮತ್ತು ಮಂಗಳೂರಿನ ಪ್ರಾಧ್ಯಾಪಕ ಸ್ನೇಹಿತರೆಲ್ಲರ ಜೋರಾದ ಕೈಚಪ್ಪಾಳೆ ಮಂಗಳಪದದ ಕೆಲಸವನ್ನುಸಮರ್ಥವಾಗಿ  ನಿರ್ವಹಿಸಿತು.

ಮರುದಿನ ಎಸ್ಲಿಂಗನಿಗೆ ಹೋಗಿ, ಮೊಗ್ಲಿಂಗ್ ವಾಸವಾಗಿದ್ದ ಮನೆ ಮತ್ತು ಮೊಗ್ಲಿಂಗ್ ಸಮಾಧಿ ಸಂದರ್ಶಿಸಿದೆವು.ಆ ಎರಡು ಸ್ಮಾರಕಗಳ ಫೋಟೋ ತೆಗೆದೆ.ಅಲ್ಲೇ ಸಮೀಪ ನೆಕ್ಕರ್ ನದಿ ಹರಿಯುತ್ತದೆ.ಅದೇ ನೆಕ್ಕರ್ ನದಿಯು ಮೊಗ್ಲಿಂಗ್ ಶಿಕ್ಷಣ ಪಡೆದ ತ್ಯೂಬಿನ್ಗನ್ ನಲ್ಲಿಯೂ ಮುಂದುವರಿಯುತ್ತದೆ.ಮತ್ತೆ ಮೊಗ್ಲಿಂಗ್ ಕನ್ನಡದ ಕೆಲಸ ಮಾಡಿದ ಮಂಗಳೂರಿನಲ್ಲಿ ನೇತ್ರಾವತಿ ನದಿ.ಮತ್ತೆ ಮೊಗ್ಲಿಂಗ್ ವಾಸಮಾಡಿದ ಕೊಡಗಿನ ಮಡಿಕೇರಿಯಲ್ಲಿ ಕಾವೇರಿ ನದಿ.ಹೀಗೆ ನೆಕ್ಕರ್,ನೇತ್ರಾವತಿ,ಕಾವೇರಿ ,ಮತ್ತೆ ನೆಕ್ಕರ್ -ಎಲ್ಲ ಕಡೆಯೂ ಮೊಗ್ಲಿಂಗ್ ‘ನೋಡಿ ನಿರ್ಮಲ ಜಲ ಸಮೀಪದಿ ಮಾಡಿಕೊಂಡರು ಪರ್ಣಶಾಲೆಯ………’

ಮೊಗ್ಲಿಂಗ್ ಸಮಾಧಿ ಎಸ್ಲಿಂಗನ್,ಜರ್ಮನಿ (ಫೋಟೋ ೩೦ ಮೇ ೨೦೧೧)

ಮೊಗ್ಲಿಂಗ್ ವಾಸ ಮಾಡಿದ ಮನೆ -ಎಸ್ಲಿಂಗನ್ ,ಜರ್ಮನಿ (ಫೋಟೋ ೩೦ ಮೇ ೨೦೧೧ )

ಡಾ. ಕತ್ರಿನ್ ಬಿಂದರ್ ಯಕ್ಷಗಾನ ಪ್ರದರ್ಶನ -ಸ್ತುತ್ತ್ ಗಾರ್ತ್ ,ಜರ್ಮನಿ (ಪೋಟೋಗಳು ೨೯ ಮೇ ೨೦೧೧ )

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

7 Responses to “ಮೊಗ್ಲಿಂಗ್ ೨೦೦- ನೋಡಿ ನಿರ್ಮಲ ಜಲ ಸಮೀಪದಿ ಮಾಡಿಕೊಂಡರು ಪರ್ಣಶಾಲೆಯ”

RSS Feed for ಬಿ ಎ ವಿವೇಕ ರೈ Comments RSS Feed

ಒಂದು ಕಾರ್ಯಕ್ರವನ್ನು ಕೇವಲ ವರದಿಯಂತೆ ಚಿತ್ರಿಸದೆ ತುಂಬಾ ಜನರಿಗೆ ಗೊತ್ತಿಲ್ಲದಂತಹ ಮೌಲಿಕ ವಿವರಗಳನ್ನು ನೀಡಿ ಚಿತ್ರಿಸುವುದು ನಿಮ್ಮ ಗರಿಮೆ ಸರ್. ವಿಧನ್ಯವಾದಗಳು.

ಜಯಲಕ್ಷ್ಮಿ,ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ .

Sir, Thanks for the tribute, What an achievement during those days!

ಪುರುಷೋತ್ತಮ್ ,ಇಂದಿನ ಅನುಕೂಲಗಳು ಇಲ್ಲದ ಸಂದರ್ಭದಲ್ಲಿ ಅವರ ಸಾಧನೆ ಒಂದು ಆದರ್ಶ.

ಸರ್, ಪತ್ರಿಕೋದ್ಯಮ ಹಾಗೂ ಯಕ್ಷಗಾನಗಳೆರಡರ ಶ್ರದ್ಧೆಯ ವಿದ್ಯಾರ್ಥಿಯಾಗಿ ನಿಮ್ಮ ಬರಹ ಬಹುವಾಗಿ ಹಿಡಿಸಿತು. ಮೊಗ್ಲಿಂಗ್ ಬಗ್ಗೆ ಹೆಚ್ಚು ವಿವರಗಳು ಗೊತ್ತಾದವು. ಕತ್ರಿನ್ ಬಿಂದೆರ್ ಬಗ್ಗೆ ಓದಿ ರೋಮಾಂಚನವಾಯ್ತು. ಬಿಡುವಾದಾಗ ದಯವಿಟ್ಟು ಈ ಲಿಂಕ್ ಗಳನ್ನೂ ಗಮನಿಸುವಿರಾ?
http://sibanthi.blogspot.com/2011/05/blog-post_26.html
http://www.deccanherald.com/content/48838/for-whom-bells-toll.html

ಪದ್ಮನಾಭ ,ನಮಸ್ಕಾರ.ನಿಮ್ಮ ಪ್ರತಿಕ್ರಿಯೆ ಸಂತೋಷ ಕೊಟ್ಟಿತು.ನಿಮ್ಮ ಬ್ಲಾಗ್ -ಬರಹಗಳನ್ನು ಖಂಡಿತ ಓದುತ್ತೇನೆ.

ಪ್ರೀತಿಯ ಸರ್, ನಮಸ್ತೆ. ನಿಮ್ಮ ಬರೆಹ ಭಾವಪೂರ್ಣ, ಅರ್ಥಪೂರ್ಣ ನುಡಿ ನಮನ ಮೊಗ್ಲಿಂಗ್ ಮಹಾಶಯರಿಗೆ.


Where's The Comment Form?

Liked it here?
Why not try sites on the blogroll...

%d bloggers like this: