ವ್ಯೂತ್ಸ್ ಬುರ್ಗ್ ವಸಂತೋತ್ಸವ :ಇನ್ನಷ್ಟು ಸಂಗತಿಗಳು ,ಮತ್ತಷ್ಟು ಚಿತ್ರಗಳು

Posted on ಮೇ 28, 2011. Filed under: Uncategorized |


ವ್ಯೂತ್ಸ್ ಬುರ್ಗ್ ವಸಂತೋತ್ಸವ ಉದ್ಘಾಟನೆ ಮಾಡಿದ ನಗರದ ಮೇಯರ್ ಗೆಯಾರ್ಗ್ ರೊಸೆನ್ ತಾಲ್ ಸಂಪ್ರದಾಯದಂತೆ ಸ್ಕಾಟಿಷ್ ಮೆರವಣಿಗೆಯಲ್ಲಿ ಬಂದರು.ನೇರವಾಗಿ ವೇದಿಕೆ ಏರಿ ತಮ್ಮ ಚುಟುಕು ಭಾಷಣ ಸುರು ಮಾಡಿದರು.ಸ್ವಾಗತ ,ಹಾರ,ನಿರ್ವಹಣೆ ,ಅಧ್ಯಕ್ಷತೆ ,ವೇದಿಕೆಯಲ್ಲಿ ಆಸನ -ಯಾವುದೂ ಇಲ್ಲ.ನಿಂತುಕೊಂಡು ಐದು ನಿಮಿಷ ಮಾತಾಡಿದರು.ಇಂತಹ ಅಂತಾರಾಷ್ಟ್ರೀಯ ವಸಂತೋತ್ಸವ ವ್ಯೂತ್ಸ್ ಬುರ್ಗ್ ನಗರವನ್ನು ಹೇಗೆ ಬಹು ಸಂಸ್ಕೃತಿಗಳ ಸುಂದರ ನಗರವಾಗಿಸುತ್ತದೆ ಎನ್ನುತ್ತಾ ಕಲಾವಿದರನ್ನು ಅಭಿನಂದಿಸಿದರು.ಬಳಿಕ ಸಾಮಾನ್ಯರಂತೆ ಬಂದು ಸಭಿಕರ ನಡುವೆ ನಿಂತುಕೊಂಡು ಸುಮಾರು ಅರ್ಧ ಗಂಟೆ ಕಲಾ ಕಾರ್ಯಕ್ರಮಗಳನ್ನು ವೀಕ್ಷಿಸಿದರು.ಸಭಿಕರಿಗಾಗಿ ಹಾಕಿದ್ದ ಕೆಲವೇ ಬೆಂಚುಗಳಲ್ಲಿ ಮುಂದಿನ ಬೆಂಚಿನಲ್ಲಿ ನಾನು ಕುಳಿತುಕೊಂಡಿದ್ದೆ,ಆಗಾಗ ಫೋಟೋ ತೆಗೆಯುತ್ತಿದ್ದೆ.ಮೇಯರ್ ನಿಂತುಕೊಂಡೇ ಬಹಳ ಹೊತ್ತು ಕಾರ್ಯಕ್ರಮ ನೋಡುತ್ತಿದ್ದುದನ್ನು ಕಂಡು ನನಗೆ  ಮುಜಗರ ಆಯಿತು.ಯಾರೂ ಎದ್ದುನಿಂತು ಅವರನ್ನು ಆಹ್ವಾನಿಸಲಿಲ್ಲ.ಅವರಾದರೋ ಯಾವ ನಿರೀಕ್ಷೆಯೂ ಇಲ್ಲದೆ ,ನಿರಾಳವಾಗಿ ನೋಡುತ್ತಿದ್ದರು.ಬಳಿಕ ಎಲ್ಲ ಮಳಿಗೆಗಳಿಗೆ ಭೇಟಿಕೊಟ್ಟು ,ಅಲ್ಲಿ  ಇದ್ದವರನ್ನು ಮಾತಾಡಿಸುತ್ತಾ ಒಬ್ಬಂಟಿಯಾಗಿ ಸುತ್ತಾಡುತ್ತಿದ್ದರು.ಹಿಂಬಾಲಕರೂ   ಇಲ್ಲ, ಮುಂಬಾಲಕರೂ     ಇರಲಿಲ್ಲ.ಎಲ್ಲರನ್ನೂ ಮಾತಾಡಿಸುತ್ತಾ ,ನಮ್ಮ ಇಂಡೋ ಜರ್ಮನ್ ಸಂಘದ ಮಳಿಗೆಗೆ ಬಂದರು.ಅನ್ನ ಮತ್ತು ಕೆಲವು ಪದಾರ್ಥ ತೆಗೆದುಕೊಂಡರು.ಬೇಡ ಎಂದರೂ ಅದರ ಹಣ ಕೊಟ್ಟರು.ತಟ್ಟೆ ತುಂಬಿಸಿಕೊಂಡು ಹೊರಗೆ ಬಂದಾಗ ನಾನು ಮಾತಾಡಿಸಿದೆ.ಪರಿಚಯ ಮಾಡಿಕೊಂಡು ಭಾರತದಿಂದ ನಾನು ಬಂದ ಉದ್ದೇಶ ಹೇಳಿದೆ.ಕರ್ನಾಟಕದ ಬಗ್ಗೆ ತಿಳಿಸಿದೆ.ಭಾರತದ ಬಗ್ಗೆ ತುಂಬಾ ಮೆಚ್ಚುಗೆ ಮತ್ತು ಗೌರವದಿಂದ ಮಾತಾಡಿದರು.ನನ್ನ ಎದುರೇ ನಮ್ಮ ಅಡುಗೆಯ ರುಚಿ ನೋಡಿ ಖುಷಿಪಟ್ಟರು.ನನ್ನ ಜೊತೆಗೆ ಫೋಟೋ ತೆಗೆಸಿಕೊಳ್ಳುವಾಗಲೂ ನಮ್ಮ ಭಾರತೀಯ ಆಹಾರದ ತಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡಿದ್ದರು.ಮೇಯರ್ ಹೊರಗೆ ಹೋಗುವಾಗ ನಾನು ಗಮನಿಸುತ್ತಾ ಇದ್ದೆ.ಪಾರ್ಕಿನಿಂದ ಸಾಕಷ್ಟು ದೂರ ಪಾರ್ಕ್ ಮಾಡಿದ್ದ ತಮ್ಮ ಕಾರಿನ ಬಳಿಗೆ ಒಬ್ಬರೇ ನಡೆದುಕೊಂಡು ಹೋಗಿ ,ತಮ್ಮ ಕಾರನ್ನು ತಾವೇ ಡ್ರೈವ್ ಮಾಡುತ್ತಾ ಹೋದರು.ಕಾರಲ್ಲಿ ಕಚೇರಿ ಸಿಬ್ಬಂದಿ ಆಗಲೀ,ಸುರಕ್ಷತೆಯವರಾಗಲೀ ಯಾರೂ ಇರಲಿಲ್ಲ.

ವ್ಯೂತ್ಸ್ ಬುರ್ಗ್ ನಗರದಲ್ಲಿ ಎರಡು ಚಳಿಗಾಲಗಳನ್ನು ಮತ್ತು ಒಂದು ಬೇಸಗೆಕಾಲವನ್ನು ಕಳೆದು ,ಎರಡನೆಯ ಬೇಸಗೆಯ ಋತುವಿನಲ್ಲಿ ಈಗ ಇಲ್ಲಿ ನಾನು ಇದ್ದೇನೆ.ಮೈನಸ್ ಇಪ್ಪತೈದು ಡಿಗ್ರಿ ಛಳಿಯ ಹಿಮದ ರಾಶಿಯಲ್ಲಿ ಮುಳುಗಿದ್ದ ಈ ನಗರವನ್ನು ಕಂಡಿದ್ದೇನೆ.ವಿದ್ಯುತ್ ಮತ್ತು ನೀರು ಇಲ್ಲದ ಒಂದು ನಿಮಿಷದ ಅನುಭವದ ಭಾಗ್ಯ ಇಲ್ಲಿ ನನಗೆ ದೊರೆತಿಲ್ಲ.ಹಿಮದ ಪಾತದ ದಿನಗಳಲ್ಲೂ ಬೆಳಗಾದರೆ ಮಾರ್ಗಗಳ ,ಕಾಲುದಾರಿಗಳ ಹಿಮವನ್ನು ಕರಗಿಸುವ ಮತ್ತು ತೆಗೆದು ಸಾಗಿಸುವ ಸಾಹಸವನ್ನು ಕಣ್ಣಾರೆ ಕಂಡಿದ್ದೇನೆ.ನಗರದ ಸುಮಾರು ಅರ್ಧದಷ್ಟು ಭಾಗ ಸಸ್ಯಗಳ ಉದ್ಯಾನ ಮತ್ತು ಅರಣ್ಯದ ದಟ್ಟಣೆಯಿಂದ ಸದಾ ಶುಚಿಯಾಗಿ ಇರುವುದನ್ನು ಅನುಭವಿಸಿದ್ದೇನೆ.ಎಂತಹ ಹವೆಯಲ್ಲೂ ನಿಮಿಷ ತಡಮಾಡದೆ ಸಂಚರಿಸುವ ಟ್ರಾಮ್ ಮತ್ತು ಬಸ್ಸುಗಳಲ್ಲಿ ಓಡಾಡಿದ್ದೇನೆ.ಎಂತಹ ಅಪರ ರಾತ್ರಿಯಲ್ಲೂ ಅಪಾಯ ಇಲ್ಲದೆ ಸಂಚರಿಸಬಲ್ಲ  ಜರ್ಮನಿಯ ಅಪೂರ್ವ ನಗರ ಇದು ಎನ್ನುವುದನ್ನು ಮನಗಂಡಿದ್ದೇನೆ.ನಾಟಕ,ಒಪೆರ ,ಸಂಗೀತಕ್ಕಾಗಿ ಒಳ್ಳೆಯ ಥಿಯೇಟರ್ ಒದಗಿಸಿ ,ಸದಾ ಕಲಾಸಕ್ತರಿಗೆ ತೃಪ್ತಿ ಕೊಡುವ ಅವಕಾಶವನ್ನು ಈ ಪುಟ್ಟ ನಗರ ಕೊಡುತ್ತಿದೆ.

ಕಳೆದ ಎರಡು ದಿನಗಳಿಂದ ಇಲ್ಲಿನ ಪತ್ರಿಕೆಗಳಲ್ಲಿ ,ಟಿವಿಗಳಲ್ಲಿ ಒಂದು ಪ್ರಮುಖ ಸುದ್ದಿ ಎಂದರೆ -ಟೊಮೇಟೊ ಮತ್ತು ಸೌತೆಕಾಯಿಯನ್ನು ಬೇಯಿಸದೆ ಹಸಿಯಾಗಿ ತಿನ್ನಬೇಡಿ ,ಎನ್ನುವುದು.ಸ್ಪೇನ್ ನಿಂದ ಬಂದ ಈ ತರಕಾರಿಗಳಲ್ಲಿ  ರೋಗಾಣುಗಳು ಸೇರಿಕೊಂಡು ಅಪಾಯ ಮಾಡಬಲ್ಲವು ಎನ್ನುವ ಸುದ್ದಿ ಈಗ ಈ ನಗರದಲ್ಲಿ ಎಲ್ಲರಿಗೂ ಗೊತ್ತಾಗಿದೆ.ಇಲ್ಲಿನ ಸ್ಥಳೀಯ ಮಾಧ್ಯಮಗಳಲ್ಲಿ ರಾಜಕೀಯದ  ಸುದ್ದಿಯೇ ಇಲ್ಲ.ಜನರ ಅಗತ್ಯ,ಸಮಸ್ಯೆ ,ಎಚ್ಚರ -ಇಷ್ಟೇ ಮುಖ್ಯ.ನಗರದ ಆಡಳಿತವೊಂದು ಜನರಿಗಾಗಿ ಹೇಗೆ ಕೆಲಸಮಾಡುತ್ತದೆ ಎನ್ನುವುದನ್ನು ದಿನದ ಕ್ಷಣ ಕ್ಷಣವೂ ಕಾಣಬಹುದು.ಮೇಯರ್ ತಮ್ಮ ಭಾಷಣದಲ್ಲಿ ತಮ್ಮ ಆಡಳಿತದ ಸಾಧನೆಯ ಬಗ್ಗೆ ಒಂದೇ ಒಂದು ಮಾತನ್ನು ಆಡಲಿಲ್ಲ.

ವಸಂತೋತ್ಸವದಲ್ಲಿ ಮುಖ್ಯ ವೇದಿಕೆಯಲ್ಲಿ ಅನೇಕ ಕಲಾ ಕಾರ್ಯಕ್ರಮಗಳು ನಡೆಯುತ್ತಿದ್ದುವು.ನನ್ನ ಕನ್ನಡ ವಿದ್ಯಾರ್ಥಿ -ಜರ್ಮನ್ ತರುಣ ಮಿಗುವೆಲ್ ಕೊಲೋಮೋ ಇದ್ದ ಚರ್ಮವಾದ್ಯ ವಾದನದ ಪ್ರದರ್ಶನ ಅದ್ಭುತವಾಗಿತ್ತು.ಎಲ್ಲ ಮಳಿಗೆಗಳಲ್ಲೂ ತಮ್ಮ ದೇಶಗಳ ಕಲಾವಸ್ತುಗಳ ಪ್ರದರ್ಶನ ಕೂಡಾ ಇತ್ತು.ಚೀನಾದ ಮಳಿಗೆ ಈ ದೃಷ್ಟಿಯಿಂದ ಗಮನ ಸೆಳೆಯಿತು.ನನ್ನ ಹಳೆಯ ಸಂಬಂಧದ ನೆನಪಿನಲ್ಲಿ ಫಿನ್ಲೆಂಡ್ ನ ಮಳಿಗೆಗೂ ಭೇಟಿ ಕೊಟ್ಟೆ.’ ದಂಕೆ ಶೋನ್ ‘ ಎಂದು ಇಲ್ಲಿ ಹೇಳಿ ಅಭ್ಯಾಸ ಆಗಿ ,ಫಿನ್ಲೆಂಡ್ ಮಳಿಗೆಯಲ್ಲಿ ‘ಕೀತೊಸ್ ‘(ಧನ್ಯವಾದ ) ಎಂದಾಗ ಮತ್ತೆ ಸರೋವರಗಳ ನಾಡು ನೆನಪಾಯಿತು.

‘ವಸಂತ ಬಂದ ಋತುಗಳ ರಾಜ ‘ ಎಂಬ ಹಾಡು ಮತ್ತೆ ಮತ್ತೆ ಹೇಳಲು ಸಾಧ್ಯ ಆಗುವುದು ,ನಗರವೊಂದು ನಿಜವಾದ ಅರ್ಥದಲ್ಲಿ ಜನರಿಗೆ ನೆಮ್ಮದಿ ,ಶಾಂತಿ,ಸಂತೋಷ ,ಸ್ವಾತಂತ್ರ್ಯ ಮತ್ತು ಸೃಜನಶೀಲತೆ -ಇವನ್ನು ಒಟ್ಟಿಗೆ ಕೊಟ್ಟಾಗ :ವಸಂತಕಾಲದಲ್ಲಿ ಮರಗಿಡಗಳು ಒಟ್ಟಿಗೆ ಚಿಗುರಿದಂತೆ ,ಬಗೆಬಗೆಯ ಹೂಗಳು ಸಾಮೂಹಿಕವಾಗಿ ಅರಳಿದಂತೆ.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ವ್ಯೂತ್ಸ್ ಬುರ್ಗ್ ವಸಂತೋತ್ಸವ :ಇನ್ನಷ್ಟು ಸಂಗತಿಗಳು ,ಮತ್ತಷ್ಟು ಚಿತ್ರಗಳು”

RSS Feed for ಬಿ ಎ ವಿವೇಕ ರೈ Comments RSS Feed


Where's The Comment Form?

Liked it here?
Why not try sites on the blogroll...

%d bloggers like this: