‘ಸುಜನಾ’:ಕನ್ನಡ ಸಾಹಿತ್ಯ -ಸಂಸ್ಕೃತಿ ಲೋಕದ ‘ಮೇರು ಸಜ್ಜನ ‘

Posted on ಮೇ 18, 2011. Filed under: Uncategorized |


‘ಸುಜನಾ ‘ನಿಧನದ ಸುದ್ದಿಯನ್ನು ಈಗ ತಾನೆ ಕನ್ನಡ ಇ-ಪತ್ರಿಕೆಗಳಲ್ಲಿ ಓದಿದೆ. ಎಸ್.ನಾರಾಯಣ ಶೆಟ್ಟಿ ಎನ್ನುವುದು ಅವರ ದಾಖಲೆಗಳಲ್ಲಿನ ಹೆಸರು ಮಾತ್ರ. ಆದರೆ ಕನ್ನಡ ವಿದ್ಯಾರ್ಥಿಗಳ ಓದುಗರ ಆತ್ಮೀಯರ ಪಾಲಿಗೆ ಅವರು ಎಲ್ಲ ಅರ್ಥದಲ್ಲೂ ಸುಜನಾ. ಅವರು ಕವಿ ಅಷ್ಟೇ ಅಲ್ಲ, ನಿಜವಾದ ಅರ್ಥದಲ್ಲಿ ಕವಿಹೃದಯದವರು ಆಗಿದ್ದರು. ‘ಹೃದಯ ಸಂವಾದ’ಅವರ ವಿಮರ್ಶೆಯ ಲೇಖನಗಳ ಒಂದು ಸಂಕಲನ. ನಾನು ಕಾಲೇಜು ವಿದ್ಯಾರ್ಥಿಯಾಗಿ ಇರುವಾಗಲೇ ಓದಿ ,ಬಹಳವಾಗಿ ಇಷ್ಟಪಟ್ಟ ,ಅಪೂರ್ವ ಸಾಹಿತ್ಯಕ ಒಳನೋಟ ಉಳ್ಳ ಬರಹಗಳ ಪುಸ್ತಕ. ಕನ್ನಡದಲ್ಲೇ ಒಂದು ಅಪೂರ್ವ ವಿಮರ್ಶಾ ಗ್ರಂಥ. ಸುಜನಾ ‘ನಾಣ್ಯಯಾತ್ರೆ, ಮಂಗಳಾರತಿ , ಸೊನ್ನೆ ಎರಡರ ನಡುವೆ ಮುಂತಾದ ಕವನಸಂಕಲನಗಳ ಜೊತೆಗೆ , ‘ಚಿಲಿಪಿಲಿ’ಎಂಬ ಮಕ್ಕಳ ಸಂಕಲನವನ್ನೂ ಕನ್ನಡಕ್ಕೆ ಕೊಟ್ಟಿದ್ದಾರೆ.

ಅವರದು ಮಗುವಿನ ಮುಗ್ಧ ಮನಸ್ಸು. ಅವರ ಸಂಪರ್ಕಕ್ಕೆ ಬಂದ ಯಾರೇ ಆದರೂ ಸಜ್ಜನಿಕೆ, ಪ್ರೀತಿ, ಆತ್ಮೀಯತೆ , ಭಾವುಕತೆಗಳ ಸಿಂಚನದಿಂದ ಹೊರಗೆ ಬರಲು ಸಾಧ್ಯ ಆಗುತ್ತಿರಲಿಲ್ಲ. ಕುವೆಂಪು ಅವರ ಪರಮ ಅಭಿಮಾನಿ ಆಗಿದ್ದ ಸುಜನಾ ಕುವೆಂಪು ಸಾಹಿತ್ಯದ ಬಗ್ಗೆ , ವಿಶೇಷವಾಗಿ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದ ಬಗ್ಗೆ ಮಾಡಿದ ಅನೇಕ ಉಪನ್ಯಾಸಗಳನ್ನು ೩೫-೪೦ ವರ್ಷಗಳ ಹಿಂದೆ ಕೇಳುವ ಸದವಕಾಶ ನನಗೆ ದೊರೆತಿತ್ತು. ಮಂಗಳೂರಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ೧೯೭೦-೧೯೭೫ರ ಅವಧಿಯಲ್ಲಿ ನಾನು ಕೇಳಿದ ಸುಜನಾ ಮಾತುಗಳು ಇಂದಿಗೂ ಒಂದು ಅಪೂರ್ವ ಸಾಹಿತ್ಯ ಗುಂಗನ್ನು ನನಗೆ ತಂದುಕೊಡುತ್ತವೆ. ಕುವೆಂಪು ಅಭಿಮಾನಿ ಮತ್ತು ಕುವೆಂಪು ಸಾಹಿತ್ಯದ ಒಳನೋಟದ ವಿಮರ್ಶಕ ಆಗಿಯೂ , ಕುವೆಂಪು ಹೆಸರನ್ನು ಸ್ವಂತ ಪ್ರಯೋಜನಕ್ಕೆ ಬಳಸಿಕೊಳ್ಳದ ಅನುಭಾವಿ ‘ಸುಜನಾ’. ಸದಾ ಅಂತರ್ಮುಖಿ ಆಗಿದ್ದ ಸುಜನಾ ಸೃಜಿಸಿದ ‘ಯುಗಸಂಧ್ಯಾ’ ಅವರ ಬದುಕಿನ ಸಂಧ್ಯೆಯಲ್ಲಿನ ಒಂದು ದಾರ್ಶನಿಕ ಮಹಾಕಾವ್ಯ. ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತದ್ದು ಕನ್ನಡಕ್ಕೆ ಸಂದ ಅರ್ಹ ಗೌರವ. ಬದುಕಿನಲ್ಲಿ ಸಾಕಷ್ಟು ಕಷ್ಟ ನೋವುಗಳನ್ನು ಉಂಡ ಸುಜನಾ , ‘ಎಜಾಕ್ಸ್ ‘ನಾಟಕವನ್ನು ಕನ್ನಡಕ್ಕೆ ತಂದದ್ದು ಆಕಸ್ಮಿಕವೇನಲ್ಲ.

ಸುಮಾರು ೮೧ ವರ್ಷ ಬದುಕು ಸಾಗಿಸಿದ ‘ಸುಜನಾ’ ಕೊನೆಯ ವರ್ಷಗಳಲ್ಲಿ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. ನೆನಪುಗಳು ಮಾಸಿಹೊಗಿದ್ದುವು. ಆದರೆ ಸಜ್ಜನಿಕೆ ಸರಳತೆ ಮರೆಯಾಗಿರಲಿಲ್ಲ.೨೦೦೯ರಲ್ಲಿ ನಾನು ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದಾಗ , ಆ ವರ್ಷದ ಘಟಿಕೋತ್ಸವದಲ್ಲಿ ‘ಸುಜನಾ ‘ಅವರಿಗೆ ಗೌರವ ಡಾಕ್ಟರೇಟ್ ಕೊಡಲು ನಿರ್ಧರಿಸಿ ,ಅವರ ಒಪ್ಪಿಗೆ ಪಡೆಯಲು ಅವರ ಮನೆಗೆ ಹೋದೆ. ಸ್ವಲ್ಪ ಹೊತ್ತಿನಲ್ಲಿ ಹೊರಗೆ ಬಂದರು. ನನ್ನ ಹೆಸರು , ಹಿಂದಿನ ಸಂಬಂಧಗಳು, ಎಲ್ಲ ಹೇಳಿದೆ. ಕೂಡಲೇ ಗುರುತು ಹಿಡಿದು, ನನ್ನ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ನಮಸ್ಕರಿಸಿದರು. ನಾನು ಬಂದ ಉದ್ದೇಶವನ್ನು ಹೇಳಿದೆ. ಒಂದು ಕ್ಷಣ ಧ್ಯಾನಸ್ಥರಾದ ಸುಜನಾ ‘ಬೇಡ,ನನಗೆ ಈಗ ಈ ಡಾಕ್ಟರೇಟ್ ನಿಂದ ಏನಾಗಬೇಕು. ನನಗೆ ಗುರುವಿನ ಕೃಪೆ ಸಾಕು ಎಂದರು.’  ನನ್ನ ಅವರ ಭೇಟಿಯ ಹಿಂದಿನ ನೆನಪುಗಳನ್ನು ಹೇಳುತ್ತಾ , ನನಗಾಗಿ ಕನ್ನಡಕ್ಕಾಗಿ, ನಮ್ಮ ವಿವಿಯ ಗೌರವಕಾಗಿ ದಯವಿಟ್ಟು ಒಪ್ಪಿಕೊಳ್ಳಿ’ ಎಂದು ಬಿನ್ನವಿಸಿದೆ. ತಲೆ ಅಲ್ಲಾಡಿಸಿ ‘ಆಯಿತು’ ಎಂದರು. ಅನಾರೋಗ್ಯ ಇದ್ದರೂ ಘಟಿಕೋತ್ಸವಕ್ಕೆ ಬಂದರು. ನಮಗೆ ಆಶ್ಚರ್ಯ ಆಗುವ ಹಾಗೆ , ಕಾರ್ಯಕ್ರಮದ ಕೊನೆಯವರೆಗೂ ಇದ್ದರು. ರಾಜ್ಯಪಾಲ , ವಿವಿಯ ಕುಲಾಧಿಪತಿ ರಾಮೇಶ್ವರ ಟಾಕೂರ್ ರಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು. ಫೋಟೋಗಳಿಗೆ ಅವಕಾಶ ಕಲ್ಪಿಸಿದರು. ಜಸ್ಟಿಸ್ ಸಂತೋಷ ಹೆಗ್ಡೆ , ರಂಗ ಕಲಾವಿದೆ ಜಯಶ್ರೀ ಅವರ ಜೊತೆಗೆ ‘ಸುಜನಾ’ ಸುಜನರ ಹಿರಿಯರಾಗಿ ಕಾಣಿಸಿಕೊಂಡರು.

ಜಾತಿ .ಗುಂಪು,ಅಧಿಕಾರ ,ಹಣ -ಯಾವುದೂ ಇಲ್ಲದ ‘ಸುಜನಾ’ , ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಮತ್ತು ಕರ್ನಾಟಕದ ಸಂಸ್ಕೃತಿಯ ಲೋಕದಲ್ಲಿ ಪರಂಪರೆಯ ಹೃದಯಸಂವಾದದಲ್ಲಿ ಸೊನ್ನೆ ಎರಡರ ನಡುವೆ ಸದಾ ಉಳಿಯುವ ಅಪೂರ್ವ ಚೇತನ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

2 Responses to “‘ಸುಜನಾ’:ಕನ್ನಡ ಸಾಹಿತ್ಯ -ಸಂಸ್ಕೃತಿ ಲೋಕದ ‘ಮೇರು ಸಜ್ಜನ ‘”

RSS Feed for ಬಿ ಎ ವಿವೇಕ ರೈ Comments RSS Feed

ನಾನು ಕೂಡ ಸುಜನಾ ಅವರ ಅನೇಕ ಭಾಷಣಗಳನ್ನು ಕೇಳಿದ್ದೆ, ಅವರ ವಿಮರ್ಶಾ ಕೃತಿಗಳನ್ನು ಪರಾಮರ್ಶೆ ಮಾಡಿದ್ದೆ. ರಾಮಯಣ ದರ್ಶನಂ ಬಗೆಗೆ ನಮ್ಮಲ್ಲಿ ಗೌರವ ಉಂಟು ಮೂಡಿದ್ದೆ ಅವರು. ನವೋದಯ ಕಾಲದ ಅತ್ಯುತ್ತಮ ಗುಣಗಳನ್ನು ಒಳ ಗೊಂಡಿದ್ದ ಅವರ ನಿಧನದ ಸುದ್ಧಿ ಕೇಳಿ ಕಸಿವಿಸಿ ಉಂಟಾದದ್ದು ನಿಜ. ಅನೇಕ ನೆನಪುಗಳನ್ನು ಮುನ್ನೆಲೆಗೆ ತಂದ ನಿಮಗೆ ಕೃತಜ್ನತೆಗಳು. ಪು. ಬಿಳಿಮಲೆ

Shri Sujana, was a teacher to both my parents. My late father had heighst regards for this great teacher and author. He was a simple man but of high values. Kannada literary world is poorer without him. For a while he served as a Registrar for Mysore University. A great soul. I had the opportunity to meet him and take his blessings while I lived in Mysore. Hampapur Sunderraj Giridhara


Where's The Comment Form?

Liked it here?
Why not try sites on the blogroll...

%d bloggers like this: