ಡಾ.ಜೇಮ್ಸ್ ಒಲೋಪದೆ ತೋರಿಸಿದ ‘ನೈಜೀರಿಯ ‘

Posted on ಮೇ 9, 2011. Filed under: Uncategorized |


ಜರ್ಮನಿಯ ವ್ಯೂತ್ಸ್ ಬುರ್ಗ್ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಒಂದು ‘ಅತಿಥಿ ಸಂಪ್ರದಾಯ’ಇದೆ. ವ್ಯೂತ್ಸ್ ಬುರ್ಗ್ ವಿವಿಯ ನಿವೃತ್ತ ಪ್ರಾಧ್ಯಾಪಕರು, ಅವರ ಪತ್ನಿಯರು, ನಿವೃತ್ತ ಸಿಬ್ಬಂದಿಯವರು ಒಂದು ಕೂಟ ರಚಿಸಿಕೊಂಡಿದ್ದಾರೆ. ಈಗ ಈ ಕೂಟದಲ್ಲಿ ಇರುವವರು ಎಲ್ಲ ಹೆಂಗುಸರು. ಡಾ.ಅಂಗೆಲಿಕ,ಡೋರಿಸ್, ಬ್ರಿಗಿತ್ತೆ,ಉರ್ಸೂಲ, ಡಾ.ಮೋನಿಕ, ಡಾ.ಹೆಲ್ಲಿ, ಲೋತ್ತೆ,ಗುದೆನ್, ಇಂಗೆ-ಇದೊಂದು ಸೌಹಾರ್ದ ಸಂಘ.ಇಲ್ಲಿನ ವಿವಿಗೆ ಅಧ್ಯಾಪನಕ್ಕೆ ,ಸಂಶೋಧನೆಗೆ ಬೇರೆ ಬೇರೆ ದೇಶಗಳಿಂದ ಬರುವ ವಿದ್ವಾಂಸರು ವಿಜ್ಞಾನಿಗಳು ಸಂಶೋಧನಾ ವಿದ್ಯಾರ್ಥಿಗಳು -ಎಲ್ಲರನ್ನು ಒಂದೆಡೆ ಸೇರಿಸಿ ಸಾಂಸ್ಕೃತಿಕ ವಿನಿಮಯದ ಕೆಲಸವನ್ನು ಪ್ರೀತಿಯಿಂದ ನಡೆಸುವ ಕಾಯಕ ಇವರದು. ಕೆಲವೊಮ್ಮೆ ಸಮೀಪದ ಶೈಕ್ಷಣಿಕ ಸಾಂಸ್ಕೃತಿಕ ಸ್ಥಳಗಳಿಗೆ ಪ್ರವಾಸ ಕೊಂಡೊಯ್ಯುತ್ತಾರೆ. ಇದರ ಖರ್ಚು ವೆಚ್ಚ ಎಲ್ಲವನ್ನೂ ಈ ಕೂಟದ ಮಹಿಳೆಯರು ತಮ್ಮ ಕೈಯಿಂದಲೇ ಹಾಕುತ್ತಾರೆ. ಇದು ಅನುದಾನ,ಬಜೆಟ್ ಇಲ್ಲದ ಸ್ವಯಂ ಪ್ರೀತಿಯ ಕೆಲಸ.

ಅತಿಥಿ ಗೃಹದಲ್ಲಿ ನಡೆಯುವ ಸಾಮಾಜಿಕ ಕೂಟಗಳಲ್ಲಿ ತಿಂಡಿ ಪಾನೀಯಗಳ ವ್ಯವಸ್ಥೆಯೊಂದಿಗೆ , ಒಬ್ಬ ಅತಿಥಿಯಿಂದ ತನ್ನ ದೇಶದ ಬಗ್ಗೆ ಉಪನ್ಯಾಸ, ಚಿತ್ರ ಪ್ರದರ್ಶನ ಇರುತ್ತದೆ. ಕಳೆದ ಅಕ್ಟೋಬರ ೨೦೦೯ರಿನ್ದ ಇಂತಹ ಅನೇಕ ಕೂಟಗಳಲ್ಲಿ ಪ್ರವಾಸಗಳಲ್ಲಿ ಪಾಲುಗೊಂಡು ಹೊಸ ಜಗತ್ತಿಗೆ ತೆರೆದುಕೊಂಡಿದ್ದೇನೆ. ಮೊನ್ನೆ ಮೇ ಎರಡರಂದು ಸಂಜೆ ಇಲ್ಲಿಗೆ ಬಂದ ಬಳಿಕ , ಮೊನ್ನೆ ಬುಧವಾರ , ಮೇ ನಾಲ್ಕರಂದು ಈ ಬಾರಿಯ ಮೊದಲ ಕೂಟಕ್ಕೆ ನಾನು ಮತ್ತು ಕೋಕಿಲ ಹೋದೆವು.

ಈ ಬಾರಿಯ ವಿಷಯ ಮಂಡನೆ ತನ್ನ ದೇಶದ ಬಗ್ಗೆ -ನೈಜೀರಿಯದ ಡಾಕ್ಟರ್ ಜೇಮ್ಸ್ ಒಲೋಪದೆ ಅವರದ್ದ್ದು. ವ್ಯೂತ್ಸ್ ಬುರ್ಗ್ ವಿವಿಯ ಆಸ್ಪತ್ರೆಯಲ್ಲಿ ಹುಮ್ಬೋಲ್ತ್ ಸಂಶೋಧನಾ ವೇತನದಲ್ಲಿ ಕೆನ್ಸರ್ ಬಗ್ಗೆ ಸಂಶೋಧನೆ ಮಾಡುತ್ತಿರುವ ಜೇಮ್ಸ್ ಪ್ರದರ್ಶಿಕೆಗಳ ಮೂಲಕ ತಮ್ಮ ಸ್ವದೇಶ ‘ನೈಜೀರಿಯ’ವನ್ನು ಅನಾವರಣ ಮಾಡಿದರು. ಅಲ್ಲಿ ಮಾಹಿತಿ ರೂಪದ ಪರಿಚಯ ಸಾಕಷ್ಟಿತ್ತು. ಜೊತೆಗೆ ತನ್ನ ದೇಶದ ವ್ಯವಸ್ಥೆಯನ್ನು ವಿಮರ್ಶಾತ್ಮಕವಾಗಿ ಅನಾವರಣ ಮಾಡಿದರು. ಅನೇಕ ದೇಶಗಳ ತಜ್ಞರ ಮುಂದೆ ಕೇವಲ ತನ್ನ ದೇಶದ ಗುಣಗಾನವಷ್ಟನ್ನೆ ಮಾಡಲಿಲ್ಲ. ತನ್ನ ದೇಶದ ರಾಜಕೀಯದ ಹೊಲಸನ್ನು ಬಯಲು ಮಾಡಿದರು. ಮಿತಿ ಮೀರಿದ ಭ್ರಷ್ಟಾಚಾರವನ್ನು ವಿವರವಾಗಿ ಬಿಡಿಸಿಟ್ಟರು. ಚುನಾವಣೆಗಳ ಅಕ್ರಮವನ್ನು ವಿವರಿಸಿದರು. ತೈಲದ ಉತ್ಪಾದನೆಯು ಆರ್ಥಿಕವಾಗಿ ದೇಶಕ್ಕೆ ಸಹಕಾರಿ ಆಗಿದ್ದರೂ, ಅದರಿಂದಾಗಿ ಇಡೀ ದೇಶದ ಕೃಷಿ ವ್ಯವಸ್ಥೆ ನಾಶವಾಗಿ ಬಡವರು ಇನ್ನಷ್ಟು ಬಡವರಾದ ದಾರುಣ ಕತೆಗಳನ್ನು ಬಿತ್ತರಿಸಿದರು.

ಸುಮಾರು ಸಮಪಾಲು ಕ್ರೈಸ್ತ ಮತ್ತು ಮುಸ್ಲಿಂ ಧರ್ಮದವರು ಇದ್ದರೂ ಅತಿ ಕಡಮೆ ಪ್ರಮಾಣದಲ್ಲಿ ಮತೀಯ ಘರ್ಷಣೆ ನಡೆದ ಸಾಮರಸ್ಯದ ಮುಖವನ್ನು ತೋರಿಸಿಕೊಟ್ಟರು. ಸುಖ ಸಂತೃಪ್ತಿ ಮನೋಧರ್ಮದ ಜನರ ಜೀವನ ಧೋರಣೆಯ ಬಗ್ಗೆ ಮೆಚ್ಚುಗೆ ಹೇಳಲು ಮರೆಯಲಿಲ್ಲ. ಜನರು ಸರಳ ಅರ್ಥದಲ್ಲಿ ಧಾರ್ಮಿಕರಾಗಿ , ಆದರೆ ಕೋಮುವಾದಿಗಳು ಆಗದೆ ಸಾಮಾಜಿಕ ಸಂಬಂಧಗಳ ಮೂಲಕ ಬದುಕುವ ಕ್ರಮವನ್ನು ವಿವರಿಸಿದರು. ಜೊತೆಗೆಯೇ, ಅಧಿಕಾರಸ್ಥರಲ್ಲಿ ಹಣದ ಲೋಭ, ಭ್ರಷ್ಟಾಚಾರ ತಾಂಡವ ಆಡುತ್ತಿರುವುದನ್ನು ನೇರವಾಗಿ ಹೇಳಿಕೊಂಡರು. ಕಡಮೆ ಸಾಕ್ಷರತೆ, ಶಿಕ್ಷಣ ವಂಚಿತ ಬದುಕು, ಉನ್ನತ ಶಿಕ್ಷಣದ ಕಡಮೆ ಅವಕಾಶಗಳು – ಇವನ್ನು ಕಾರಣ ಸಹಿತ ವಿಶ್ಲೇಷಿಸಿದರು. ಕೊಲೆ ರಾಜಕೀಯ ಮಾಡುತ್ತಾ ಅಧಿಕಾರ ಪಡೆದ ಅನೇಕ ಖಳ ಅಧ್ಯಕ್ಷರ ಕತೆ ಹೇಳಿದರು.

ಈಗ ನೈಜೀರಿಯಾದ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭ ಆದ ಸಂಕಥನವನ್ನು ಹೇಳುತ್ತಾ , ಯುವ ಸಮುದಾಯ ಭ್ರಷ್ಟತೆ ಮತ್ತು ಹಿಂಸೆಯ ರಾಜಕೀಯದ ವಿರುದ್ಧ ಹೋರಾಡುತ್ತಾ , ‘ಒಬ್ಬರಿಗೆ ಒಂದೇ ಓಟು’ ಎಂದು ಘೋಷಿಸಿ, ಪ್ರಾಣಿ ಶಾಸ್ತ್ರದಲ್ಲಿ  ಪಿಎಚ್ ಡಿ ಮಾಡಿರುವ , ವಿದ್ಯಾವಂತ ,ಸುಸಂಸ್ಕೃತ  ತರುಣ ಗುಡ್ ಲಕ್  ಜೊನಾಥನ್ ನನ್ನು ಚುನಾವಣೆಯಲ್ಲಿ ಅಧ್ಯಕ್ಷ ಆಗಿ ಆಯ್ಕೆಮಾಡಿ ಹೊಸ ಯುಗ ಆರಂಭ ಮಾಡಿದ ಆಂದೋಲನದ ನವ ಮನ್ವಂತರದ ಆಶಯದೊಂದಿಗೆ  ಜೇಮ್ಸ್ ತಮ್ಮ ಉಪನ್ಯಾಸ ಮುಗಿಸಿದರು. ಜೇಮ್ಸ್ ಅವರ ಮಾತುಗಳ ಉದ್ದಕ್ಕೂ ಉತ್ಸಾಹ, ನೋವು, ಸಿಟ್ಟು, ವಿಷಾದ, ನಿರಾಶೆ, ಕೊನೆಗೆ ಹೊಸ ದೇಶದ ಕನಸು -ಇದ್ದುವು.

ತಮ್ಮ ಮಂಡನೆಯ ನಡುವೆ ಜೇಮ್ಸ್ ತಮ್ಮ ದೇಶದಿಂದ ಶ್ರೀಮಂತರು ತಮ್ಮ ರೋಗಗಳ ಚಿಕಿತ್ಸೆಗಾಗಿ ಅಮೇರಿಕ, ಇಂಗ್ಲೆಂಡ್ ಮತ್ತೆ ಭಾರತಕ್ಕೂ ಹೋಗುತ್ತಾರೆ ಎಂದು ನನ್ನನ್ನು ನೋಡುತ್ತಾ ಹೇಳಿದರು. ಹೊರಡುವಾಗ ಜೇಮ್ಸ್ ರನ್ನು ಅಭಿನಂದಿಸುತ್ತಾ ನಾನು ಹೇಳಿದೆ, ‘ನಮ್ಮ ರಾಜಕಾರಣಿಗಳನ್ನು ನಿಮ್ಮ ಅಧ್ಯಕ್ಷ ಡಾ. ಗುಡ್ ಲಕ್ ಜೊನಾಥನ್ ರಿಂದ ಕಲಿತುಕೊಳ್ಳಲು ನೈಜೀರಿಯಕ್ಕೆ ಕಳುಹಿಸಿಕೊಡಬೇಕು’ ಎಂದು.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಡಾ.ಜೇಮ್ಸ್ ಒಲೋಪದೆ ತೋರಿಸಿದ ‘ನೈಜೀರಿಯ ‘”

RSS Feed for ಬಿ ಎ ವಿವೇಕ ರೈ Comments RSS Feed

ಒಂದು ಸರಳ ಬರಹ. ಒಂದು ದೇಶದ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ವಿಷಯಗಳ ಬಗ್ಗೆ ಕುತೂಹಲ ಹುಟ್ಟಿಸುವಂತಿದೆ. ಇನ್ನಷ್ಟು ವಿವರಗಳು, ಚಿತ್ರಗಳು ಇರಬಾರದೆ ಎನ್ನಿಸುತ್ತಿದೆ. ಅಂತರ್ಜಾಲದಲ್ಲಿ ಬೇಕಾದಷ್ಟು ಮಾಹಿತಿ ಸಿಗಬಹುದಾದರೂ, ಕನ್ನಡದಲ್ಲಿ ಅದೂ ಸರಳಭಾಷೆಯಲ್ಲಿ ಸಿಗುವುದಿಲ್ಲ. ಧನ್ಯವಾದಗಳು ಸರ್.

ತುಂಬಾ ಸಂತೋಷ.ಸರಳವಾಗಿಯೇ ಗಹನ ವಿಷಯಗಳನ್ನು ಹೇಳುವುದು ಇಂದಿನ ಅಗತ್ಯ.


Where's The Comment Form?

Liked it here?
Why not try sites on the blogroll...

%d bloggers like this: